ಅಧ್ಯಯನ ಲೇಖನ 33
ದಾನಿಯೇಲನ ತರ ಇರಿ!
“ನೀನು ತುಂಬ ಅಮೂಲ್ಯ.”—ದಾನಿ. 9:23.
ಗೀತೆ 137 ಕೊಡು ನಮಗೆ ಧೈರ್ಯ
ಈ ಲೇಖನದಲ್ಲಿ ಏನಿದೆ? a
1. ಬಾಬೆಲಿನ ಅಧಿಕಾರಿಗಳಿಗೆ ದಾನಿಯೇಲನನ್ನ ನೋಡಿದಾಗ ಯಾಕೆ ಇಷ್ಟ ಆಯ್ತು?
ಪ್ರವಾದಿ ದಾನಿಯೇಲನನ್ನ ಬಾಬೆಲಿನವರು ಯೆರೂಸಲೇಮಿನಿಂದ ಕೈದಿಯಾಗಿ ಕರ್ಕೊಂಡು ಬಂದ್ರು. ಆಗ ದಾನಿಯೇಲ ಚಿಕ್ಕವನಾಗಿದ್ದ. ಆದ್ರೂ ಅಲ್ಲಿನ ಅಧಿಕಾರಿಗಳಿಗೆ ದಾನಿಯೇಲನನ್ನ ನೋಡಿದಾಗ ತುಂಬ ಇಷ್ಟ ಆಯ್ತು. ಯಾಕಂದ್ರೆ ದಾನಿಯೇಲನಲ್ಲಿ ‘ಯಾವ ಕುಂದುಕೊರತೆನೂ’ ಇರಲಿಲ್ಲ. ನೋಡೋಕೆ ತುಂಬಾ ಚೆನ್ನಾಗಿದ್ದ. ಅಷ್ಟೇ ಅಲ್ಲ, ಅವನು ಒಂದು ದೊಡ್ಡ ಮನೆತನದಿಂದ ಬಂದಿದ್ದ. (1 ಸಮು. 16:7) ಇದನ್ನೆಲ್ಲ ನೋಡಿ ಬಾಬೆಲಿನವರು ಅವನಿಗೆ ಆಸ್ಥಾನದಲ್ಲಿ ಕೆಲಸ ಮಾಡೋಕೆ ಬೇಕಾದ ತರಬೇತಿ ಕೊಟ್ರು.—ದಾನಿ. 1:3, 4, 6.
2. ದಾನಿಯೇಲನ ಬಗ್ಗೆ ಯೆಹೋವ ದೇವರಿಗೆ ಹೇಗನಿಸ್ತು? (ಯೆಹೆಜ್ಕೇಲ 14:14)
2 ಯೆಹೋವ ದೇವರು ದಾನಿಯೇಲನ ಅಂದಚಂದ ನೋಡಿ, ಆಸ್ಥಾನದಲ್ಲಿ ಇದ್ದ ಸ್ಥಾನಮಾನ ನೋಡಿ ಅವನನ್ನ ಇಷ್ಟಪಡಲಿಲ್ಲ. ಬದಲಿಗೆ ಅವನ ಮನಸ್ಸನ್ನ ನೋಡಿ ಇಷ್ಟಪಟ್ಟನು. ದಾನಿಯೇಲ ಯಾವಾಗ್ಲೂ ಯೆಹೋವನಿಗೆ ಇಷ್ಟ ಆಗೋ ತರ ಇರೋಕೆ ಪ್ರಯತ್ನ ಮಾಡ್ತಿದ್ದ. ಅದಕ್ಕೆ, ತುಂಬ ವರ್ಷ ಸೇವೆ ಮಾಡಿ ತನ್ನ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿದ್ದ ನೋಹ ಮತ್ತು ಯೋಬನಂಥ ವ್ಯಕ್ತಿಗಳ ಜೊತೆ ಯೆಹೋವ ದೇವರು ದಾನಿಯೇಲನ ಹೆಸ್ರನ್ನೂ ಸೇರಿಸಿದನು. ಆಗ ದಾನಿಯೇಲನಿಗೆ 19-20 ವರ್ಷ ಇದ್ದಿರಬೇಕು ಅಷ್ಟೆ. (ಆದಿ. 5:32; 6:9, 10; ಯೋಬ 42:16, 17; ಯೆಹೆಜ್ಕೇಲ 14:14 ಓದಿ.) ಅವತ್ತಿಂದ ಹಿಡಿದು ಅವನು ಸಾಯೋ ತನಕನೂ ಯೆಹೋವ ಅವನ ಜೊತೆನೇ ಇದ್ದನು, ಅವನನ್ನ ಪ್ರೀತಿಸಿದನು.—ದಾನಿ. 10:11, 19.
3. ಈ ಲೇಖನದಲ್ಲಿ ನಾವೇನು ಕಲಿತೀವಿ?
3 ದಾನಿಯೇಲನಲ್ಲಿದ್ದ 2 ಗುಣಗಳು ಯೆಹೋವ ದೇವರಿಗೆ ತುಂಬ ಇಷ್ಟ ಆಯ್ತು. ಅದು ಯಾವುದು ಮತ್ತು ಅದನ್ನ ಅವನು ಹೇಗೆ ತೋರಿಸಿದ ಅಂತ ನಾವು ಮೊದ್ಲು ನೋಡೋಣ. ಆಮೇಲೆ ಅವನಿಗೆ ಆ ಗುಣಗಳನ್ನ ಬೆಳೆಸ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು ಅಂತ ನೋಡೋಣ. ಕೊನೇಲಿ, ನಾವು ಆ ಗುಣಗಳನ್ನ ಹೇಗೆ ತೋರಿಸಬಹುದು ಅಂತ ನೋಡೋಣ. ಈ ಲೇಖನ ಮಕ್ಕಳಿಗೋಸ್ಕರ ಇರೋದಾದ್ರೂ ನಾವೆಲ್ರೂ ದಾನಿಯೇಲನ ಉದಾಹರಣೆಯಿಂದ ಕಲಿಬಹುದು.
ದಾನಿಯೇಲ ಚಿಕ್ಕವನಾಗಿದ್ರೂ ಧೈರ್ಯ ತೋರಿಸಿದ
4. ದಾನಿಯೇಲ ಹೇಗೆ ಧೈರ್ಯ ತೋರಿಸಿದ? ಉದಾಹರಣೆ ಕೊಡಿ.
4 ಧೈರ್ಯಶಾಲಿಗಳಿಗೂ ಕೆಲವೊಮ್ಮೆ ಭಯ ಆಗುತ್ತೆ. ಆದ್ರೆ ಅವ್ರಿಗೆ ಭಯ ಇದ್ರೂ ಸರಿಯಾಗಿ ಇರೋದನ್ನೇ ಮಾಡ್ತಾರೆ. ದಾನಿಯೇಲ ಕೂಡ ಎರಡು ಸಂದರ್ಭದಲ್ಲಿ ಧೈರ್ಯ ತೋರಿಸಿದ. ಬಾಬೆಲಿನವರು ಯೆರೂಸಲೇಮನ್ನ ನಾಶ ಮಾಡಿ 2 ವರ್ಷ ಆಗಿತ್ತು. ಆಗ ರಾಜ ನೆಬೂಕದ್ನೆಚ್ಚರನಿಗೆ ಒಂದು ಕನಸು ಬಿತ್ತು. ಆ ಕನಸಲ್ಲಿ ಅವನು ದೊಡ್ಡ ಮೂರ್ತಿಯನ್ನ ನೋಡಿದ. ಆ ಕನಸನ್ನ ವಿವರಿಸೋಕೆ ತನ್ನ ಆಸ್ಥಾನದಲ್ಲಿದ್ದ ವಿವೇಕಿಗಳಿಗೆ ಹೇಳಿದ. ಅವರು ವಿವರಿಸದೇ ಹೋದ್ರೆ ಅವ್ರನ್ನ ತುಂಡುತುಂಡು ಮಾಡಿಬಿಡ್ತೀನಿ ಅಂತ ಹೇಳಿದ. (ದಾನಿ. 2:3-5) ದಾನಿಯೇಲ ತಕ್ಷಣ ಏನಾದ್ರೂ ಮಾಡಬೇಕಿತ್ತು. ಇಲ್ಲಾಂದ್ರೆ ತುಂಬ ಜನ ಜೀವ ಕಳ್ಕೊಳ್ತಿದ್ರು. ಅದಕ್ಕೆ ಅವನು “ರಾಜನ ಹತ್ರ ಹೋಗಿ ಕನಸಿನ ಅರ್ಥ ಹೇಳೋಕೆ ಸ್ವಲ್ಪ ಸಮಯ ಕೊಡು ಅಂತ ಕೇಳಿದ.” (ದಾನಿ. 2:16) ಇಲ್ಲಿ ವರೆಗೂ ದಾನಿಯೇಲ ಯಾವ ಕನಸಿನ ಅರ್ಥನೂ ಹೇಳಿರಲಿಲ್ಲ. ಅಂಥದ್ರಲ್ಲಿ ರಾಜನ ಹತ್ರ ಹೋಗಿ ಕೇಳಿದ್ದಾನೆ ಅಂದ್ರೆ ಅವನಿಗೆ ತುಂಬ ಧೈರ್ಯ ಇತ್ತು ಮತ್ತು ಯೆಹೋವನ ಮೇಲೆ ನಂಬಿಕೆ ಇತ್ತು ಅಂತ ಗೊತ್ತಾಗುತ್ತೆ. ಅವನು ತನ್ನ ಸ್ನೇಹಿತರಾದ ಶದ್ರಕ್, ಮೇಶಕ್, ಅಬೇದ್‌ನೆಗೋ b ಹತ್ರ ‘ಸ್ವರ್ಗದ ದೇವರು ನಮಗೆ ಕರುಣೆ ತೋರಿಸಿ ಈ ಗುಟ್ಟನ್ನ ತಿಳಿಸೋಕೆ’ ಪ್ರಾರ್ಥನೆ ಮಾಡಿ ಅಂತ ಹೇಳಿದ. (ದಾನಿ. 2:18) ಆ ಪ್ರಾರ್ಥನೆಗಳಿಗೆ ಯೆಹೋವ ಉತ್ರ ಕೊಟ್ಟನು. ದಾನಿಯೇಲ ಯೆಹೋವನ ಸಹಾಯದಿಂದ ನೆಬೂಕದ್ನೆಚ್ಚರನ ಕನಸಿನ ಅರ್ಥ ಹೇಳಿದ. ಹೀಗೆ ದಾನಿಯೇಲ ಮತ್ತು ಆತನ ಸ್ನೇಹಿತರ ಜೀವ ಉಳೀತು.
5. ದಾನಿಯೇಲ ಇನ್ನೊಂದು ಸಲ ಹೇಗೆ ಧೈರ್ಯ ತೋರಿಸಿದ?
5 ದೊಡ್ಡ ಮೂರ್ತಿಯ ಕನಸಿನ ಅರ್ಥವನ್ನ ಹೇಳಿ ಸ್ವಲ್ಪ ಸಮಯ ಆದ್ಮೇಲೆ ಏನಾಯ್ತು ನೋಡಿ. ರಾಜ ನೆಬೂಕದ್ನೆಚ್ಚರನಿಗೆ ಒಂದು ದೊಡ್ಡ ಮರದ ಕನಸು ಬಿತ್ತು. ಆ ಕನಸು ತುಂಬ ವಿಚಿತ್ರವಾಗಿತ್ತು. ರಾಜ ಹುಚ್ಚನ ತರ ಆಗ್ತಾನೆ ಮತ್ತು ಸ್ವಲ್ಪ ಸಮಯಕ್ಕೆ ಅಧಿಕಾರ ಕಳ್ಕೊಳ್ತಾನೆ ಅನ್ನೋದು ಆ ಕನಸಿನ ಅರ್ಥ ಆಗಿತ್ತು. (ದಾನಿ. 4:25) ಇದನ್ನ ದಾನಿಯೇಲ ಹೇಳಿದ್ರೆ ‘ಉಪ್ಪು ತಿಂದ ಮನೆಗೆ ದ್ರೋಹ ಮಾಡ್ತಿದ್ದಾನೆ’ ಅಂತ ಅಂದ್ಕೊಂಡು ರಾಜ ಅವನನ್ನ ಕೊಂದುಹಾಕಬಹುದಿತ್ತು. ಇದು ದಾನಿಯೇಲನಿಗೆ ಗೊತ್ತಿದ್ರೂ ಅವನು ಧೈರ್ಯದಿಂದ ಆ ಕನಸಿನ ಅರ್ಥ ಹೇಳಿದ.
6. ದಾನಿಯೇಲನಿಗೆ ಧೈರ್ಯವಾಗಿ ಇರೋಕೆ ಯಾವುದು ಸಹಾಯ ಮಾಡಿರಬೇಕು?
6 ದಾನಿಯೇಲನಿಗೆ ಧೈರ್ಯವಾಗಿ ಇರೋಕೆ ಯಾವ ವಿಷ್ಯ ಸಹಾಯ ಮಾಡಿರಬೇಕು? ಅವನು ಚಿಕ್ಕವನಾಗಿದ್ದಾಗ ಅವನ ಅಪ್ಪಅಮ್ಮನನ್ನ ನೋಡಿ ತುಂಬ ವಿಷ್ಯ ಕಲ್ತಿರುತ್ತಾನೆ. ಅವರಿಬ್ರೂ ಯೆಹೋವ ದೇವರು ಕೊಟ್ಟ ಆಜ್ಞೆಗಳನ್ನ ಪಾಲಿಸ್ತಾ ಇದ್ರು. ದೇವರ ನಿಯಮಗಳ ಬಗ್ಗೆ ದಾನಿಯೇಲನಿಗೂ ಹೇಳ್ಕೊಟ್ರು. (ಧರ್ಮೋ. 6:6-9) ದೇವರು ಇಸ್ರಾಯೇಲ್ಯರಿಗೆ ಕೊಟ್ಟ 10 ಆಜ್ಞೆಗಳ ಬಗ್ಗೆ ಮಾತ್ರ ಅಲ್ಲ ದಾನಿಯೇಲನಿಗೆ ಅದ್ರ ಚಿಕ್ಕಚಿಕ್ಕ ವಿವರಗಳೂ ಗೊತ್ತಿತ್ತು. ಉದಾಹರಣೆಗೆ ಒಬ್ಬ ಇಸ್ರಾಯೇಲ್ಯ ಏನು ತಿನ್ನಬೇಕು, ಏನು ತಿನ್ನಬಾರದು ಅನ್ನೋದ್ರ ಬಗ್ಗೆ ಅವನು ತಿಳ್ಕೊಂಡಿದ್ದ. c (ಯಾಜ. 11:4-8; ದಾನಿ. 1:8, 11-13) ದೇವಜನ್ರ ಇತಿಹಾಸದ ಬಗ್ಗೆನೂ ಅವನು ತಿಳ್ಕೊಂಡಿದ್ದ. ದೇವರ ಮಾತನ್ನ ಕೇಳದೆ ಹೋಗಿದ್ರಿಂದ ಅವ್ರಿಗೆ ಏನಾಯ್ತು ಅಂತ ದಾನಿಯೇಲನಿಗೆ ಚೆನ್ನಾಗಿ ಗೊತ್ತಿತ್ತು. (ದಾನಿ. 9:10, 11) ಅವನಿಗೆ ತನ್ನ ಜೀವನದಲ್ಲಿ ನಡೆದ ಘಟನೆಗಳಿಂದ ಯೆಹೋವ ಮತ್ತು ಆತನ ದೂತರು ಯಾವಾಗ್ಲೂ ತನಗೆ ಸಹಾಯ ಮಾಡ್ತಾರೆ ಅನ್ನೋ ನಂಬಿಕೆ ಇತ್ತು.—ದಾನಿ. 2:19-24; 10:12, 18, 19.
7. ದಾನಿಯೇಲ ಧೈರ್ಯ ಬೆಳೆಸ್ಕೊಳ್ಳೋಕೆ ಇನ್ನೂ ಏನೆಲ್ಲ ಮಾಡಿದ? (ಚಿತ್ರನೂ ನೋಡಿ.)
7 ಯೆರೆಮೀಯ ಮತ್ತು ಇನ್ನೂ ಬೇರೆ ಪ್ರವಾದಿಗಳು ಬರೆದಿದ್ದ ಭವಿಷ್ಯವಾಣಿಗಳನ್ನ ದಾನಿಯೇಲ ಚೆನ್ನಾಗಿ ಓದಿ ಅರ್ಥ ಮಾಡ್ಕೊಂಡಿದ್ದ. ಇದ್ರಿಂದಾನೇ ಅವನಿಗೆ ಯೆಹೂದ್ಯರು ಬಾಬೆಲಿಂದ ಆದಷ್ಟು ಬೇಗ ಬಿಡುಗಡೆ ಆಗ್ತಾರೆ ಅಂತ ಗೊತ್ತಾಯ್ತು. (ದಾನಿ. 9:2) ಆ ಭವಿಷ್ಯವಾಣಿ ನಿಜ ಆಗಿದ್ದನ್ನ ದಾನಿಯೇಲ ಕಣ್ಣಾರೆ ನೋಡಿದಾಗ ಅವನಿಗೆ ಯೆಹೋವನ ಮೇಲಿದ್ದ ನಂಬಿಕೆ ಇನ್ನೂ ಜಾಸ್ತಿ ಆಯ್ತು. ದೇವರ ಮೇಲೆ ನಂಬಿಕೆ ಇದ್ರೆ ಯಾರಿಗೇ ಆಗಲಿ ಖಂಡಿತ ಧೈರ್ಯ ತೋರಿಸೋಕೆ ಆಗುತ್ತೆ. (ರೋಮನ್ನರಿಗೆ 8:31, 32, 37-39 ಹೋಲಿಸಿ.) ಎಲ್ಲಕ್ಕಿಂತ ಹೆಚ್ಚಾಗಿ ದಾನಿಯೇಲ ಯೆಹೋವನಿಗೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ದ. (ದಾನಿ. 6:10) ತನ್ನ ತಪ್ಪುಗಳನ್ನ, ತನಗೆ ಏನು ಅನಿಸ್ತಿದೆ ಅನ್ನೋದನ್ನ ಯೆಹೋವನ ಹತ್ರ ಹೇಳ್ಕೊಳ್ತಾ ಇದ್ದ. ಆತನ ಹತ್ರ ಸಹಾಯ ಕೇಳ್ತಿದ್ದ. (ದಾನಿ. 9:4, 5, 19) ದಾನಿಯೇಲ ನಮ್ಮ ತರಾನೇ ಮನುಷ್ಯನಾಗಿದ್ದ. ಅವನಿಗೂ ಹುಟ್ತಾನೇ ಧೈರ್ಯ ಬಂದುಬಿಡಲಿಲ್ಲ. ಅದನ್ನ ಅವನು ಬೆಳೆಸ್ಕೊಂಡ. ಹೇಗೆ? ಅವನು ಭವಿಷ್ಯವಾಣಿಗಳನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದ, ಪ್ರಾರ್ಥನೆ ಮಾಡ್ತಿದ್ದ, ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದ.
8. ನಾವು ಧೈರ್ಯ ಬೆಳೆಸ್ಕೊಳ್ಳೋದು ಹೇಗೆ?
8 ನಮ್ಮ ಅಪ್ಪಅಮ್ಮ ಧೈರ್ಯವಾಗಿ ಇದ್ದಾರೆ ಅಂದತಕ್ಷಣ ನಮಗೂ ಆ ಧೈರ್ಯ ತನ್ನಿಂದ ತಾನೇ ಬಂದುಬಿಡಲ್ಲ. ಅದನ್ನ ನಾವು ಬೆಳೆಸ್ಕೊಬೇಕು. ಹೇಗೆ? ಧೈರ್ಯ ಅನ್ನೋದು ಒಂದು ಕೌಶಲ ಇದ್ದ ಹಾಗೆ. ಒಬ್ಬ ವ್ಯಕ್ತಿ ಒಂದು ಕೌಶಲವನ್ನ ಕಲಿಬೇಕಂದ್ರೆ ಟೀಚರ್ ಹೇಳ್ಕೊಡೋ ವಿಷ್ಯವನ್ನ ಸೂಕ್ಷ್ಮವಾಗಿ ಗಮನಿಸ್ತಾನೆ. ಟೀಚರ್ ತರಾನೇ ಮಾಡೋಕೆ ಪ್ರಯತ್ನ ಮಾಡ್ತಾನೆ. ಆಗ ಆ ಕೌಶಲವನ್ನ ಬೆಳೆಸ್ಕೊಳ್ಳೋಕೆ ಆಗುತ್ತೆ. ಅದೇ ತರ ನಾವು ಕೂಡ ದೇವಜನ್ರು ಹೇಗೆಲ್ಲ ಧೈರ್ಯ ತೋರಿಸಿದ್ದಾರೆ ಅಂತ ತಿಳ್ಕೊಬೇಕು. ಅವ್ರ ತರಾನೇ ನಾವೂ ಧೈರ್ಯ ತೋರಿಸಬೇಕು. ಹಾಗಾದ್ರೆ ನಾವು ದಾನಿಯೇಲನ ತರ ಏನು ಮಾಡಬೇಕು? ದೇವರ ವಾಕ್ಯವನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಬೇಕು. ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ದೇವರಿಗೆ ಹೇಳ್ಕೊಳ್ತಾ ಆತನಿಗೆ ಹತ್ರ ಆಗಬೇಕು. ಆತನು ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ಪೂರ್ತಿಯಾಗಿ ನಂಬಬೇಕು. ಹೀಗೆ ಮಾಡಿದಾಗ ಎಂಥ ಪರಿಸ್ಥಿತಿ ಬಂದ್ರೂ ನಾವು ಧೈರ್ಯ ಕಳ್ಕೊಳ್ಳಲ್ಲ.
9. ಧೈರ್ಯ ತೋರಿಸೋದ್ರಿಂದ ಯಾವ ಪ್ರಯೋಜನ ಇದೆ?
9 ನಾವು ಧೈರ್ಯ ತೋರಿಸೋದ್ರಿಂದ ತುಂಬ ಪ್ರಯೋಜನ ಇದೆ. ಜರ್ಮನಿಯಲ್ಲಿರೋ ಬೆನ್ ಅನ್ನೋ ಯುವ ಸಹೋದರನ ಅನುಭವ ನೋಡಿ. ಅವನ ಸ್ಕೂಲಲ್ಲಿ ‘ದೇವರೇ ಎಲ್ಲಾನೂ ಸೃಷ್ಟಿ ಮಾಡಿದ್ದು’ ಅಂತ ಯಾರೂ ನಂಬ್ತಾ ಇರಲಿಲ್ಲ. ಅದು ಬೈಬಲಲ್ಲಿರೋ ಒಂದು ಕಟ್ಟುಕಥೆ ಅಂತ ಅವರು ಹೇಳ್ತಿದ್ರು. ಆದ್ರೆ ಬೆನ್ ಎಲ್ಲಾನೂ ದೇವರೇ ಸೃಷ್ಟಿ ಮಾಡಿದ್ದು ಅಂತ ನಂಬ್ತಿದ್ದ. ಅವನು ಯಾಕೆ ಹಾಗೆ ನಂಬ್ತಾನೆ ಅಂತ ಎಲ್ರ ಮುಂದೆ ವಿವರಿಸೋಕೆ ಅವನ ಟೀಚರ್ ಅವನಿಗೊಂದು ಅವಕಾಶ ಕೊಟ್ರು. ಅವನು ಧೈರ್ಯವಾಗಿ ವಿವರಿಸಿದ. ಆಗ ಏನಾಯ್ತು? “ನಾನು ಹೇಳೋದನ್ನ ಟೀಚರ್ ಗಮನ ಕೊಟ್ಟು ಕೇಳಿಸ್ಕೊಳ್ತಾ ಇದ್ರು. ಅಷ್ಟೇ ಅಲ್ಲ ನಾನು ಬಳಸಿದ ಪ್ರಕಾಶನವನ್ನ ಜೆ಼ರಾಕ್ಸ್ ಮಾಡಿ ಎಲ್ಲಾ ಮಕ್ಕಳಿಗೂ ಒಂದೊಂದು ಕಾಪಿ ಕೊಟ್ರು. ನನ್ನ ಕ್ಲಾಸ್‌ಮೇಟ್ಸ್ ಕೂಡ ನಾನು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಂಡ್ರು. ನಾನು ಹೇಳಿದ್ದು ಇಷ್ಟ ಆಯ್ತು ಅಂತಾನೂ ಹೇಳಿದ್ರು” ಅಂತ ಬೆನ್ ಹೇಳ್ತಾನೆ. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ನಾವು ಧೈರ್ಯ ತೋರಿಸಿದ್ರೆ ಬೇರೆಯವರು ನಮಗೆ ಗೌರವ ಕೊಡ್ತಾರೆ. ಅಷ್ಟೇ ಅಲ್ಲ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಬಗ್ಗೆ ಕಲಿಯೋಕೆ ಆಸೆ ಪಡ್ತಾರೆ. ಹಾಗಾಗಿ ಮಕ್ಕಳೇ, ನೀವೂ ಧೈರ್ಯ ಬೆಳೆಸ್ಕೊಳ್ತೀರಾ?
ದಾನಿಯೇಲನ ತರ ನಿಯತ್ತಾಗಿರಿ
10. ನಿಷ್ಠೆ ಅಂದ್ರೇನು?
10 ಬೈಬಲಲ್ಲಿರೋ ನಿಷ್ಠೆ ಅಥವಾ ಶಾಶ್ವತ ಪ್ರೀತಿ ಅನ್ನೋ ಪದಕ್ಕೆ ಒಬ್ರನ್ನೊಬ್ರು ಬಿಟ್ಟಿರೋಕೆ ಆಗದೇ ಇರುವಂಥ ಪ್ರೀತಿ ಅನ್ನೋ ಅರ್ಥ ಇದೆ. ಯೆಹೋವ ದೇವರು ತನ್ನ ಜನ್ರಿಗೆ ತೋರಿಸೋ ಪ್ರೀತಿ ಬಗ್ಗೆ ಮಾತಾಡುವಾಗ ಈ ಪದವನ್ನ ಬೈಬಲಲ್ಲಿ ಬಳಸಲಾಗಿದೆ. ಯೆಹೋವನ ಜನ್ರು ಒಬ್ರಿಗೊಬ್ರು ತೋರಿಸೋ ಪ್ರೀತಿ ಬಗ್ಗೆ ಹೇಳುವಾಗ್ಲೂ ಈ ಪದ ಬಳಸಲಾಗಿದೆ. (2 ಸಮು. 9:6, 7) ಸಮಯ ಹೋದ ಹಾಗೆ ನಾವೂ ಈ ನಿಷ್ಠೆಯನ್ನ ಜಾಸ್ತಿ ತೋರಿಸ್ತಾ ಹೋಗ್ತೀವಿ. ದಾನಿಯೇಲ ಕೂಡ ಅದನ್ನೇ ಮಾಡಿದ. ಹೇಗೆ ಅಂತ ನೋಡೋಣ.
11. ದಾನಿಯೇಲನಿಗೆ ತುಂಬ ವಯಸ್ಸಾಗಿದ್ದಾಗ್ಲೂ ಯೆಹೋವನಿಗೆ ನಿಯತ್ತಾಗಿ ಇದ್ದೀನಿ ಅಂತ ಹೇಗೆ ತೋರಿಸ್ಕೊಟ್ಟ? (ಮುಖಪುಟ ಚಿತ್ರ ನೋಡಿ.)
11 ದಾನಿಯೇಲನಿಗೆ ಜೀವನಪೂರ್ತಿ ತುಂಬ ಕಷ್ಟಗಳು ಬಂತು. ಆಗೆಲ್ಲ ಅವನು ಯೆಹೋವನಿಗೆ ನಿಯತ್ತಾಗಿ ಇದ್ದೀನಿ ಅಂತ ತೋರಿಸ್ಕೊಟ್ಟ. ಇಂಥ ಒಂದು ಕಷ್ಟದ ಸನ್ನಿವೇಶ ಅವನಿಗೆ ತುಂಬ ವಯಸ್ಸಾಗಿದ್ದಾಗ್ಲೂ ಬಂತು. ಆಗ ಅವನಿಗೆ 90ಕ್ಕಿಂತ ಜಾಸ್ತಿ ವರ್ಷ ಆಗಿತ್ತು. ಆ ಸಮಯದಲ್ಲಿ ಬಾಬೆಲನ್ನ ಮೇದ್ಯರು ಮತ್ತು ಪರ್ಶಿಯನ್ನರು ವಶ ಮಾಡ್ಕೊಂಡಿದ್ರು. ಅದನ್ನ ರಾಜ ದಾರ್ಯಾವೆಷ ಆಳ್ತಿದ್ದ. ಆಸ್ಥಾನದಲ್ಲಿದ್ದ ಅಧಿಕಾರಿಗಳಿಗೆ ದಾನಿಯೇಲನನ್ನ ಕಂಡ್ರೆ ಸ್ವಲ್ಪನೂ ಇಷ್ಟ ಆಗ್ತಿರಲಿಲ್ಲ. ಯೆಹೋವನ ಮೇಲಂತೂ ಒಂಚೂರೂ ಗೌರವ ಇರಲಿಲ್ಲ. ಅದಕ್ಕೆ ಅವರು ದಾನಿಯೇಲನನ್ನ ಸಾಯಿಸೋಕೆ ಒಂದು ಸಂಚು ಮಾಡಿದ್ರು. 30 ದಿನಗಳ ತನಕ ತಮ್ಮ ದೇವರುಗಳನ್ನ ಯಾರೂ ಆರಾಧನೆ ಮಾಡಬಾರದು ಅಂತ ರಾಜ ಆಜ್ಞೆ ಕೊಡೋ ತರ ಅವರು ಮಾಡಿಬಿಟ್ರು. ಆ ಆಜ್ಞೆ ಮೀರಿದವ್ರನ್ನ ಸಿಂಹದ ಗುಂಡಿಗೆ ಹಾಕಿಬಿಡ್ತೀನಿ ಅಂತಾನೂ ರಾಜ ಹೇಳಿಬಿಟ್ಟ. ದಾನಿಯೇಲ ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಬೇರೆ ಜನ್ರ ತರ ರಾಜನ ಮಾತು ಕೇಳಿದ್ನಾ? ಇಲ್ಲ, ಅವನು ಯೆಹೋವ ದೇವರಿಗೆ ಪ್ರಾರ್ಥನೆ ಮಾಡೋದನ್ನ ಮುಂದುವರಿಸಿದ. ಅದಕ್ಕೆ ಅವನನ್ನ ಸಿಂಹದ ಗುಂಡಿಗೆ ಹಾಕಿಬಿಟ್ರು. ಆದ್ರೆ ಯೆಹೋವ ದೇವರು ಅವನನ್ನ ಕಾಪಾಡಿದನು. ನಿಯತ್ತಾಗಿ ಇದ್ದಿದ್ದಕ್ಕೆ ಅವನ ಜೀವ ಉಳಿಸಿದನು. (ದಾನಿ. 6:12-15, 20-22) ನಾವು ಕೂಡ ದಾನಿಯೇಲನ ತರ ಏನೇ ಕಷ್ಟ ಬಂದ್ರೂ ಯೆಹೋವನಿಗೆ ನಿಯತ್ತಾಗಿ ಇರಬೇಕು. ಅದಕ್ಕೋಸ್ಕರ ನಾವು ಏನು ಮಾಡಬೇಕು?
12. ಎಂಥ ಕಷ್ಟ ಬಂದ್ರೂ ದಾನಿಯೇಲ ಯಾಕೆ ಯೆಹೋವನಿಗೆ ನಿಯತ್ತಾಗಿದ್ದ?
12 ನಮಗೆ ಯೆಹೋವನ ಮೇಲೆ ತುಂಬ ಪ್ರೀತಿ ಇದ್ರೆನೇ ನಾವು ಆತನಿಗೆ ನಿಯತ್ತಾಗಿ ಇರೋಕೆ ಆಗೋದು. ದಾನಿಯೇಲನಿಗೂ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅದಕ್ಕೆ ಅವನು ಎಂಥ ಕಷ್ಟ ಬಂದ್ರೂ ಯೆಹೋವನಿಗೆ ನಿಯತ್ತಾಗಿದ್ದ. ಈ ಪ್ರೀತಿನ ದಾನಿಯೇಲ ಹೇಗೆ ಬೆಳೆಸ್ಕೊಂಡ? ಅವನು ಯೆಹೋವನ ಗುಣಗಳೇನು, ಆತನು ಅದನ್ನ ಹೇಗೆಲ್ಲ ತೋರಿಸಿದ್ದಾನೆ ಅನ್ನೋದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿದ. (ದಾನಿ. 9:4) ಅಷ್ಟೇ ಅಲ್ಲ ತನಗೆ, ತನ್ನ ಜನ್ರಿಗೆ ಯೆಹೋವ ಏನೆಲ್ಲಾ ಒಳ್ಳೇದು ಮಾಡಿದ್ದಾನೆ ಅಂತಾನೂ ಆಗಾಗ ನೆನಪಿಸ್ಕೊಳ್ತಾ ಇದ್ದ. ಇಷ್ಟೆಲ್ಲಾ ಒಳ್ಳೇದು ಮಾಡಿರೋ ದೇವರಿಗೆ ನಿಯತ್ತಾಗಿ ಇರಬೇಕು ಅಂತ ದಾನಿಯೇಲ ತೀರ್ಮಾನ ಮಾಡ್ಕೊಂಡಿದ್ದ.—ದಾನಿ. 2:20-23; 9:15, 16.
13. (ಎ) ನಮ್ಮ ಮಕ್ಕಳಿಗೆ ಎಂಥ ಪರೀಕ್ಷೆಗಳು ಬರುತ್ತೆ? ಒಂದು ಉದಾಹರಣೆ ಕೊಡಿ. (ಚಿತ್ರನೂ ನೋಡಿ.) (ಬಿ) ಯೆಹೋವನ ಸಾಕ್ಷಿಗಳು ಸಲಿಂಗಿಗಳನ್ನ ಬೆಂಬಲಿಸ್ತಾರಾ ಅಂತ ಯಾರಾದ್ರೂ ಬಂದು ನಿಮ್ಮ ಹತ್ರ ಕೇಳಿದ್ರೆ ಈ ವಿಡಿಯೋದಲ್ಲಿ ಇರೋ ತರ ಏನಂತ ಉತ್ರ ಕೊಡ್ತೀರ?
13 ದಾನಿಯೇಲನ ತರ ನಮ್ಮ ಮಕ್ಕಳಿಗೂ ತುಂಬ ಪರೀಕ್ಷೆಗಳು ಬರುತ್ತೆ. ಅವ್ರ ಸುತ್ತಮುತ್ತ ಯೆಹೋವನನ್ನ, ಆತನ ನೀತಿನಿಯಮಗಳನ್ನ ಗೌರವಿಸದೇ ಇರೋ ಜನ್ರೇ ಇದ್ದಾರೆ. ಇಂಥವ್ರಿಗೆ ದೇವರನ್ನ ಪ್ರೀತಿಸೋರನ್ನ ಕಂಡ್ರೆ ಆಗಲ್ಲ. ದೇವರಿಗೆ ಇಷ್ಟ ಇಲ್ಲದಿರೋ ಕೆಲಸಗಳನ್ನ ಮಾಡೋಕೆ ಇವರು ನಮ್ಮ ಮಕ್ಕಳಿಗೆ ಒತ್ತಾಯ ಮಾಡ್ತಾರೆ. ಆಸ್ಟ್ರೇಲಿಯದಲ್ಲಿರೋ ಗ್ರೆಹಮ್ ಅನ್ನೋ ಒಬ್ಬ ಯುವ ಸಹೋದರನ ಉದಾಹರಣೆ ನೋಡಿ. ಗ್ರೆಹಮ್ ಹೈಸ್ಕೂಲಲ್ಲಿ ಇದ್ದಾಗ ಅವನ ಟೀಚರ್ ಇಡೀ ಕ್ಲಾಸಿಗೆ “ನಿಮ್ಮ ಸ್ನೇಹಿತ ನಿಮ್ಮ ಹತ್ರ ಬಂದು ‘ನಾನು ಸಲಿಂಗಿ’ ಅಂತ ಹೇಳಿದ್ರೆ ನಿಮ್ಮಲ್ಲಿ ಎಷ್ಟು ಜನ ಅವನ ಪರ ನಿಲ್ತೀರ, ಅವರು ಒಂದು ಕಡೆ ಬನ್ನಿ. ಯಾರೆಲ್ಲ ಅವನ ಪರವಹಿಸಲ್ವೋ ಅವರು ಒಂದು ಕಡೆ ನಿಲ್ಲಿ” ಅಂದ್ರು. ಆಗ ಗ್ರೆಹಮ್ ಏನು ಮಾಡಿದ? “ನಾನು ಮತ್ತು ಯೆಹೋವನ ಸಾಕ್ಷಿ ಆಗಿದ್ದ ನನ್ನ ಇನ್ನೊಬ್ಬ ಕ್ಲಾಸ್‌ಮೇಟ್ ಬಿಟ್ಟು ಉಳಿದವ್ರೆಲ್ಲ ಆ ಸ್ನೇಹಿತನ ಪರವಹಿಸ್ತೀವಿ ಅಂತ ಹೇಳಿ ಒಂದು ಕಡೆ ನಿಂತ್ರು. ಇದಾದ ಮೇಲೆ ಕ್ಲಾಸ್ ಮುಗಿಯೋ ತನಕ ಒಂದು ಗಂಟೆ ಪೂರ್ತಿ ಟೀಚರ್ ಮತ್ತೆ ಮಕ್ಕಳೆಲ್ಲ ಸೇರಿ ನಮಗೆ ತುಂಬ ಅವಮಾನ ಮಾಡಿದ್ರು. ನಮ್ಮನ್ನ ಕೀಳಾಗಿ ನೋಡಿದ್ರು. ನಾನೇನು ನಂಬ್ತೀನಿ ಅನ್ನೋದ್ರ ಬಗ್ಗೆ ಅವ್ರಿಗೆ ಹೇಳೋಕೆ ತುಂಬ ಪ್ರಯತ್ನಪಟ್ಟೆ. ಆದ್ರೆ ನಾನು ಹೇಳಿದ್ದೊಂದು ಮಾತನ್ನೂ ಅವರು ಕೇಳಲಿಲ್ಲ” ಅಂತ ಗ್ರೆಹಮ್ ಹೇಳ್ತಾನೆ. ಯೆಹೋವನಿಗೆ ನಿಯತ್ತಾಗಿ ಇರೋಕೆ ಅವನಿಗೆ ಇದೊಂದು ದೊಡ್ಡ ಪರೀಕ್ಷೆ ಆಗಿತ್ತು. ಆದ್ರೂ ಅವನು ಯೆಹೋವನ ಪರ ನಿಂತಿದ್ರಿಂದ ಅವನಿಗೆ ಹೇಗನಿಸ್ತು? “ಅವರು ಹಾಗೆಲ್ಲ ಹೇಳಿದ್ರಿಂದ ನನ್ನ ಮನಸ್ಸಿಗೆ ಬೇಜಾರಾಯ್ತು. ಆದ್ರೂ ನಾನು ಯೆಹೋವನ ಪರವಾಗಿ ನಿಂತು ಆತನ ನೀತಿನಿಯಮಗಳನ್ನ ಬಿಟ್ಕೊಡಲಿಲ್ಲ ಅಂತ ತುಂಬ ಖುಷಿನೂ ಆಯ್ತು.” d
14. ಯೆಹೋವನಿಗೆ ನಾವು ಯಾವಾಗ್ಲೂ ನಿಯತ್ತಾಗಿ ಇರೋಕೆ ಏನು ಮಾಡಬೇಕು?
14 ನಾವು ಯೆಹೋವನಿಗೆ ನಿಯತ್ತಾಗಿ ಇರಬೇಕಂದ್ರೆ ದಾನಿಯೇಲನ ತರ ಯೆಹೋವನನ್ನ ತುಂಬ ಪ್ರೀತಿಸಬೇಕು. ಅದಕ್ಕೆ ನಾವು ಯೆಹೋವನ ಗುಣಗಳ ಬಗ್ಗೆ ಕಲಿಬೇಕು. (ರೋಮ. 1:20) ಆ ಗುಣಗಳು ಆತನು ಮಾಡಿರೋ ಸೃಷ್ಟಿಯಿಂದ ನಮಗೆ ಗೊತ್ತಾಗುತ್ತೆ. ಅದಕ್ಕೆ “ವಿಕಾಸವೇ? ವಿನ್ಯಾಸವೇ?” ಅನ್ನೋ ಸರಣಿ ಲೇಖನಗಳನ್ನ ಮತ್ತು ವಿಡಿಯೋಗಳನ್ನ ನೋಡಬಹುದು. ಜೀವವು ಸೃಷ್ಟಿಸಲ್ಪಟ್ಟಿತೋ? (ಇಂಗ್ಲಿಷ್) ಮತ್ತು ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಬ್ರೋಷರ್‌ಗಳನ್ನೂ ಓದಬಹುದು. ಆಗ ಯೆಹೋವನ ಮೇಲಿರೋ ಪ್ರೀತಿ, ಗೌರವ ಇನ್ನೂ ಜಾಸ್ತಿ ಆಗುತ್ತೆ. ಈ ಬ್ರೋಷರ್‌ಗಳ ಬಗ್ಗೆ ಡೆನ್ಮಾರ್ಕ್‌ನಲ್ಲಿರೋ ಎಸ್ತೆರ್ ಅನ್ನೋ ಯುವ ಸಹೋದರಿ ಏನು ಹೇಳ್ತಾಳೆ ನೋಡಿ. “ಈ ಬ್ರೋಷರ್‌ಗಳು ಸಕ್ಕತ್ತಾಗಿದೆ. ‘ಇದ್ರಲ್ಲಿ ಇರೋದೆಲ್ಲ ಸರಿ, ಇದನ್ನ ನಂಬಿ’ ಅಂತ ಇದ್ರಲ್ಲಿ ಎಲ್ಲೂ ಹೇಳಿಲ್ಲ. ಸತ್ಯ ಏನಿದ್ಯೋ ಅದನ್ನ ಕಣ್ಮುಂದೆ ತಂದಿಡುತ್ತೆ ಅಷ್ಟೇ. ನಾವು ಅದನ್ನ ಓದಿ, ಯೋಚ್ನೆ ಮಾಡಿ ಸರಿಯಾದ ತೀರ್ಮಾನ ಮಾಡಬೇಕು.” ಬೆನ್ ಏನು ಹೇಳ್ತಾನಂದ್ರೆ “ಇದನ್ನ ಓದಿದಾಗ ಯೆಹೋವ ದೇವ್ರೇ ಎಲ್ಲವನ್ನೂ ಸೃಷ್ಟಿ ಮಾಡಿದ್ದು ಅನ್ನೋ ನಂಬಿಕೆ ಇನ್ನೂ ಜಾಸ್ತಿ ಆಯ್ತು. ಈಗ ಈ ವಿಷ್ಯದಲ್ಲಿ ನನಗೆ ಯಾವ ಸಂಶಯನೂ ಇಲ್ಲ.” ನೀವೂ ಇದನ್ನ ಓದಿದ್ರೆ “ಯೆಹೋವನೇ, ನಮ್ಮ ದೇವರೇ, ಗೌರವ, ಘನತೆ, ಶಕ್ತಿಯನ್ನ ಪಡ್ಕೊಳ್ಳೋಕೆ ನೀನೇ ಯೋಗ್ಯ. ಯಾಕಂದ್ರೆ ನೀನೇ ಎಲ್ಲವನ್ನೂ ಸೃಷ್ಟಿ ಮಾಡಿದ್ದೀಯ” ಅಂತ ಒಪ್ಕೊಳ್ತೀರ.—ಪ್ರಕ. 4:11. e
15. ಯೆಹೋವನ ಜೊತೆ ನಿಮ್ಮ ಫ್ರೆಂಡ್‌ಶಿಪನ್ನ ಗಟ್ಟಿ ಮಾಡ್ಕೊಳ್ಳೋದು ಹೇಗೆ?
15 ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋಕೆ ಇನ್ನೊಂದು ವಿಷ್ಯನೂ ಮಾಡಬೇಕು. ಯೇಸು ಬಗ್ಗೆ ಚೆನ್ನಾಗಿ ತಿಳ್ಕೊಬೇಕು. ಜರ್ಮನಿಯಲ್ಲಿರೋ ಯುವ ಸಹೋದರಿ ಸಮೀರಾ ಏನು ಹೇಳ್ತಾಳೆ ನೋಡಿ. “ನಾನು ಯೇಸು ಬಗ್ಗೆ ತಿಳ್ಕೊಂಡಾಗ ಯೆಹೋವನ ಬಗ್ಗೆ ಇನ್ನೂ ಜಾಸ್ತಿ ಗೊತ್ತಾಯ್ತು.” ಅವಳು ಚಿಕ್ಕವಳಿದ್ದಾಗ ಯೆಹೋವ ದೇವರಿಗೂ ಮನಸ್ಸಿದೆ, ಆತನಿಗೂ ಭಾವನೆಗಳಿವೆ ಅಂತ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಯ್ತು. ಆದ್ರೆ ಯೇಸುನ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗ್ತಿರಲಿಲ್ಲ. ಯಾಕಂದ್ರೆ “ಯೇಸುಗೆ ಮಕ್ಕಳಂದ್ರೆ ತುಂಬ ಇಷ್ಟ. ಮಕ್ಕಳು ಅವನ ಹತ್ರ ಹೋಗೋಕೆ ಭಯನೇ ಪಡ್ತಿರಲಿಲ್ಲ. ಅದಕ್ಕೆ ಯೇಸು ಅಂದ್ರೆ ನಂಗೆ ತುಂಬ ಇಷ್ಟ” ಅಂತ ಸಮೀರಾ ಹೇಳ್ತಾಳೆ. ಹಾಗಾಗಿ ಅವಳು ಯೇಸು ಬಗ್ಗೆ ಜಾಸ್ತಿ ತಿಳ್ಕೊಂಡಳು. ಇದ್ರಿಂದ ಯೆಹೋವನಿಗೆ ತುಂಬ ಹತ್ರ ಆದಳು. ಯಾಕೆ? “ಯೆಹೋವ ಮತ್ತು ಯೇಸು ಇಬ್ರಲ್ಲೂ ಒಂದೇ ತರದ ಗುಣಗಳಿವೆ. ಯೆಹೋವ ಹೇಗೆ ನಡ್ಕೊಳ್ತಾರೋ ಯೇಸುನೂ ಅದೇ ತರ ನಡ್ಕೊಳ್ತಾನೆ. ನಾವು ಯೇಸು ಬಗ್ಗೆ ತಿಳ್ಕೊಂಡ್ರೆ ಯೆಹೋವ ದೇವರ ಬಗ್ಗೆನೂ ತಿಳ್ಕೊಳ್ಳೋಕೆ ಆಗುತ್ತೆ. ಯೇಸುನ ಭೂಮಿಗೆ ಕಳಿಸಿದ್ದಕ್ಕೆ ಇದೂ ಒಂದು ಕಾರಣ ಅಲ್ವಾ?” ಅಂತ ಸಮೀರಾ ಹೇಳ್ತಾಳೆ. (ಯೋಹಾ. 14:9) ಹಾಗಾಗಿ ಯೆಹೋವನ ಜೊತೆ ಇರೋ ನಿಮ್ಮ ಫ್ರೆಂಡ್‌ಶಿಪ್ ಇನ್ನೂ ಗಟ್ಟಿ ಆಗಬೇಕಂದ್ರೆ ಯೇಸು ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. ಆಗ ನಿಮಗೆ ಯೆಹೋವನ ಮೇಲೆ ಪ್ರೀತಿ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ ಯೆಹೋವನಿಗೆ ನೀವು ಯಾವಾಗ್ಲೂ ನಿಯತ್ತಾಗಿ ಇರ್ತೀರ.
16. ನಾವು ನಿಯತ್ತಾಗಿ ಇರೋದ್ರಿಂದ ಏನೆಲ್ಲಾ ಪ್ರಯೋಜನ ಇದೆ? (ಕೀರ್ತನೆ 18:25; ಮೀಕ 6:8)
16 ನಿಯತ್ತಾಗಿ ಇರೋದ್ರಿಂದ ನಮಗೆ ಏನೆಲ್ಲಾ ಪ್ರಯೋಜನ ಇದೆ? ನಮಗೆ ಒಳ್ಳೇ ಫ್ರೆಂಡ್ಸ್ ಇರ್ತಾರೆ. ಅವರೂ ನಮಗೆ ನಿಯತ್ತಾಗಿ ಇರ್ತಾರೆ. (ರೂತ್ 1:14-17) ಅಷ್ಟೇ ಅಲ್ಲ ನಾವು ಯೆಹೋವನಿಗೆ ನಿಯತ್ತಾಗಿ ಇದ್ರೆ ನಮ್ಮ ಮನಸ್ಸಿಗೆ ನೆಮ್ಮದಿನೂ ಇರುತ್ತೆ. ಯಾಕಂದ್ರೆ ‘ನಿಷ್ಠಾವಂತನಿಗೆ ನಿಷ್ಠಾವಂತನಾಗಿ ಇರ್ತಿನಿ’ ಅಂತ ಯೆಹೋವನೇ ಮಾತು ಕೊಟ್ಟಿದ್ದಾನೆ. (ಕೀರ್ತನೆ 18:25; ಮೀಕ 6:8 ಓದಿ.) ಇಡೀ ಜಗತ್ತಲ್ಲೇ ಶಕ್ತಿಶಾಲಿ ಆಗಿರೋ ದೇವರು ನಮ್ಮ ಜೊತೆ ಫ್ರೆಂಡ್ ಆಗೋಕೆ ರೆಡಿ ಇದ್ದಾನಂದ್ರೆ ಅದು ಚಿಕ್ಕ ವಿಷ್ಯ ಏನಲ್ಲ! ನಮಗೆ ಏನೇ ಕಷ್ಟ ಬಂದ್ರೂ ಯಾರೇ ವಿರೋಧ ಮಾಡಿದ್ರೂ ಸಾವೇ ಬಂದ್ರೂ ಆ ಸ್ನೇಹನ ಮುರಿಯೋಕೆ ಆಗಲ್ಲ. (ದಾನಿ. 12:13; ಲೂಕ 20:37, 38; ರೋಮ. 8:38, 39) ಹಾಗಾಗಿ ನಾವು ದಾನಿಯೇಲನ ತರ ಯಾವಾಗ್ಲೂ ನಿಯತ್ತಾಗಿ ಇರೋಣ.
ದಾನಿಯೇಲನಿಂದ ಕಲೀತಾ ಇರಿ
17-18. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?
17 ದಾನಿಯೇಲನ 2 ಗುಣಗಳ ಬಗ್ಗೆ ನಾವು ಈ ಲೇಖನದಲ್ಲಿ ಕಲಿತ್ವಿ. ಆದ್ರೆ ಅವನಿಂದ ಕಲಿಯೋಕೆ ಇನ್ನೂ ತುಂಬ ಇದೆ. ಉದಾಹರಣೆಗೆ ಯೆಹೋವ ದೇವರು ದಾನಿಯೇಲನಿಗೆ ಕೆಲವು ದರ್ಶನಗಳನ್ನ ತೋರಿಸಿದನು, ಕನಸು ಬೀಳೋ ಹಾಗೆ ಮಾಡಿದನು. ಭವಿಷ್ಯವಾಣಿಗಳ ಅರ್ಥ ಬಿಡಿಸೋ ಶಕ್ತಿಯನ್ನೂ ಕೊಟ್ಟನು. ಕೆಲವು ಭವಿಷ್ಯವಾಣಿಗಳು ಈಗಾಗ್ಲೇ ನಿಜ ಆಗಿದೆ. ಇನ್ನು ಕೆಲವು ಭವಿಷ್ಯವಾಣಿಗಳಲ್ಲಿ ಮುಂದೆ ನಡೆಯೋ ವಿಷ್ಯಗಳ ಬಗ್ಗೆ ಇದೆ. ಅದು ನಮ್ಮೆಲ್ರಿಗೂ ಸಂಬಂಧಪಟ್ಟಿದೆ.
18 ಅಂಥ 2 ಭವಿಷ್ಯವಾಣಿಗಳ ಬಗ್ಗೆ ಮುಂದಿನ ಲೇಖನದಲ್ಲಿ ನೋಡೋಣ. ಇದನ್ನ ಅರ್ಥ ಮಾಡ್ಕೊಳ್ಳೋದ್ರಿಂದ ನಾವು ಚಿಕ್ಕವರು ಆಗಿರಲಿ ದೊಡ್ಡವರು ಆಗಿರಲಿ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಈಗ ಅದು ಸಹಾಯ ಮಾಡುತ್ತೆ. ಭವಿಷ್ಯವಾಣಿಗಳು ಮುಂದೆ ಬರೋ ಕಷ್ಟಗಳನ್ನ ಧೈರ್ಯವಾಗಿ ಎದುರಿಸೋಕೆ, ನಿಯತ್ತಾಗಿ ಇರೋಕೆ ಈಗಿಂದಾನೇ ನಮ್ಮನ್ನ ತಯಾರು ಮಾಡುತ್ತೆ.
ಗೀತೆ 54 ನಮಗೆ ನಂಬಿಕೆ ಇರತಕ್ಕದ್ದು
a ನಮ್ಮ ಮಕ್ಕಳಿಗೆ ಯೆಹೋವನೇ ಎಲ್ಲಾನೂ ಸೃಷ್ಟಿ ಮಾಡಿರೋದು ಅಂತ ಚೆನ್ನಾಗಿ ಗೊತ್ತು. ಅದನ್ನ ನಂಬೋದ್ರಿಂದ ಅವ್ರ ಕ್ಲಾಸ್‌ಮೇಟ್ಸು ಆಡ್ಕೊಂಡು ನಗ್ತಾರೆ. ದೇವರ ನೀತಿನಿಯಮಗಳನ್ನ ಪಾಲಿಸೋದ್ರಿಂದ ಅವ್ರನ್ನ ದಡ್ಡರು, ಬುದ್ಧಿ ಇಲ್ಲದವರು ಅಂತ ಅಂದ್ಕೊಳ್ತಾರೆ. ಅಂಥ ಸಂದರ್ಭಗಳಲ್ಲಿ ಮಕ್ಕಳು ದಾನಿಯೇಲನ ತರ ಧೈರ್ಯ ತೋರಿಸ್ತಾರೆ. ಯೆಹೋವನಿಗೆ ನಿಯತ್ತಾಗಿ ಇರ್ತಾರೆ. ಹಾಗಾಗಿ ಅವರು ನಿಜವಾಗ್ಲೂ ಬುದ್ಧಿವಂತರು.
b ಈ ಹೆಸ್ರನ್ನ ಅವ್ರಿಗೆ ಬಾಬೆಲಿನವರು ಇಟ್ರು.
c ಬಾಬೆಲಿನವರು ಕೊಟ್ಟ ಆಹಾರವನ್ನ ತಿನ್ನದೇ ಇರೋಕೆ ದಾನಿಯೇಲನಿಗೆ ಮೂರು ಕಾರಣ ಇದ್ದಿರಬಹುದು. (1) ತಿನ್ನಬಾರದು ಅಂತ ನಿಯಮ ಪುಸ್ತಕದಲ್ಲಿ ಹೇಳಿದ್ದ ಮಾಂಸವನ್ನ ತಿನ್ನೋಕೆ ದಾನಿಯೇಲನಿಗೆ ಕೊಟ್ಟಿರಬಹುದು. (ಧರ್ಮೋ. 14:7, 8) (2) ಮಾಂಸದಿಂದ ರಕ್ತವನ್ನ ತೆಗೀದೆ ಇದ್ದಿರಬಹುದು. (ಯಾಜ. 17:10-12) (3) ಬಾಬೆಲಿನವರು ಸುಳ್ಳು ದೇವರುಗಳಿಗೆ ಪ್ರಾಣಿಗಳನ್ನ ಬಲಿ ಕೊಡ್ತಿದ್ರು. ಆ ಮಾಂಸವನ್ನ ತಿಂದ್ರೆ ಆ ದೇವರುಗಳನ್ನ ಆರಾಧಿಸಿದ ಹಾಗೆ ಆಗುತ್ತೆ ಅಂತ ಯೋಚಿಸಿರಬಹುದು.—ಯಾಜಕಕಾಂಡ 7:15 ಮತ್ತು 1 ಕೊರಿಂಥ 10:18, 21, 22 ಹೋಲಿಸಿ.
d jw.orgನಲ್ಲಿ “ನಿಜವಾದ ನೀತಿಯಿಂದಾಗಿ ಶಾಂತಿ ಸಿಗುತ್ತೆ” ಅನ್ನೋ ವಿಡಿಯೋ ನೋಡಿ.
e ಯೆಹೋವನ ಮೇಲಿರೋ ಪ್ರೀತಿಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಯೆಹೋವನ ಸಮೀಪಕ್ಕೆ ಬನ್ನಿರಿ ಅನ್ನೋ ಪುಸ್ತಕನ ಓದಿ ಅಧ್ಯಯನ ಮಾಡಿ. ಆಗ ಯೆಹೋವನ ಗುಣಗಳ ಬಗ್ಗೆ ಇನ್ನೂ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ.