ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 34

ಬೈಬಲಿನಲ್ಲಿರೋ ಭವಿಷ್ಯವಾಣಿಗಳಿಂದ ಕಲಿಯೋ ಪಾಠಗಳು

ಬೈಬಲಿನಲ್ಲಿರೋ ಭವಿಷ್ಯವಾಣಿಗಳಿಂದ ಕಲಿಯೋ ಪಾಠಗಳು

“ತಿಳುವಳಿಕೆ ಇರುವವರು ಅರ್ಥ ಮಾಡ್ಕೊಳ್ತಾರೆ.”—ದಾನಿ. 12:10.

ಗೀತೆ 37 ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ

ಈ ಲೇಖನದಲ್ಲಿ ಏನಿದೆ? a

1. ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಇಷ್ಟಪಟ್ಟು ಅಧ್ಯಯನ ಮಾಡಬೇಕಂದ್ರೆ ನೀವೇನು ತಿಳ್ಕೊಬೇಕು?

 “ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಓದಿ ಅಧ್ಯಯನ ಮಾಡೋದಂದ್ರೆ ನಂಗೆ ತುಂಬ ಇಷ್ಟ” ಅಂತ ಬೆನ್‌ ಅನ್ನೋ ಯುವ ಸಹೋದರ ಹೇಳ್ತಾನೆ. ನಿಮಗೂ ಹಾಗೇ ಅನಿಸುತ್ತಾ? ಅಥವಾ ಈ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋದು ತುಂಬ ಕಷ್ಟ ಅಂತ ಅನಿಸುತ್ತಾ? ತುಂಬ ಬೋರ್‌ ಆಗುತ್ತಾ? ಯೆಹೋವ ತನ್ನ ವಾಕ್ಯದಲ್ಲಿ ಈ ಭವಿಷ್ಯವಾಣಿಗಳನ್ನ ಯಾಕೆ ಸೇರಿಸಿದ್ದಾನೆ ಅಂತ ತಿಳ್ಕೊಂಡ್ರೆ ನಿಮಗೂ ಅದನ್ನ ಅಧ್ಯಯನ ಮಾಡೋಕೆ ಇಷ್ಟ ಆಗುತ್ತೆ.

2. ಈ ಲೇಖನದಲ್ಲಿ ನಾವೇನು ಕಲಿತೀವಿ?

2 ನಾವು ಈ ಲೇಖನದಲ್ಲಿ ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಯಾಕೆ ಅಧ್ಯಯನ ಮಾಡಬೇಕು ಅನ್ನೋದನ್ನ ಅಷ್ಟೇ ಅಲ್ಲ, ಹೇಗೆ ಅಧ್ಯಯನ ಮಾಡಬೇಕು ಅಂತಾನೂ ಕಲಿಯೋಣ. ಆಮೇಲೆ ದಾನಿಯೇಲ ಪುಸ್ತಕದಲ್ಲಿರೋ ಎರಡು ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಣ. ಅದನ್ನ ಅರ್ಥ ಮಾಡ್ಕೊಳ್ಳೋದ್ರಿಂದ ಈಗ ನಮಗೆ ಹೇಗೆ ಪ್ರಯೋಜನ ಆಗುತ್ತೆ ಅಂತನೂ ನೋಡೋಣ.

ಭವಿಷ್ಯವಾಣಿಗಳನ್ನ ಯಾಕೆ ಅಧ್ಯಯನ ಮಾಡಬೇಕು?

3. ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ನಾವು ಏನು ಮಾಡಬೇಕು?

3 ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಯೆಹೋವ ದೇವರ ಸಹಾಯ ಬೇಕು. ಒಂದು ಉದಾಹರಣೆ ನೋಡಿ. ನಿಮಗೆ ಗೊತ್ತಿಲ್ಲದಿರೋ ಜಾಗಕ್ಕೆ ಹೋಗ್ತಾ ಇದ್ದೀರ ಅಂತ ಅಂದ್ಕೊಳ್ಳಿ. ನಿಮ್ಮ ಜೊತೆ ನಿಮ್ಮ ಫ್ರೆಂಡೂ ಇದ್ದಾರೆ. ಅವ್ರಿಗೆ ಆ ಜಾಗದ ಬಗ್ಗೆ ಚೆನ್ನಾಗಿ ಗೊತ್ತು. ಯಾವ ದಾರಿ ಎಲ್ಲಿಗೆ ಹೋಗುತ್ತೆ ಅಂತಾನೂ ಅವ್ರಿಗೆ ಗೊತ್ತು. ಆಗ ನಿಮಗೆ ‘ಇವರು ನನ್ನ ಜೊತೆ ಬಂದಿದ್ದು ಒಳ್ಳೇದಾಯ್ತಪ್ಪಾ’ ಅಂತ ಅನಿಸುತ್ತೆ ಅಲ್ವಾ? ಯೆಹೋವ ದೇವರು ಈ ಫ್ರೆಂಡ್‌ ತರಾನೇ ಇದ್ದಾನೆ. ನಾವು ಯಾವ ಸಮಯದಲ್ಲಿ ಜೀವಿಸ್ತಾ ಇದ್ದೀವಿ, ಮುಂದೆ ಏನಾಗುತ್ತೆ ಅಂತ ನಮಗಿಂತ ಚೆನ್ನಾಗಿ ಆತನಿಗೆ ಗೊತ್ತು. ಹಾಗಾಗಿ ಭವಿಷ್ಯವಾಣಿಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ದೀನತೆಯಿಂದ ಆತನ ಸಹಾಯ ಕೇಳಬೇಕು.—ದಾನಿ. 2:28; 2 ಪೇತ್ರ 1:19, 20.

ಭವಿಷ್ಯವಾಣಿಗಳನ್ನ ಅಧ್ಯಯನ ಮಾಡೋದ್ರಿಂದ ಮುಂದೆ ನಡೆಯೋ ಘಟನೆಗಳಿಗೆ ಈಗಿಂದಾನೇ ತಯಾರಾಗೋಕೆ ಆಗುತ್ತೆ (ಪ್ಯಾರ 4 ನೋಡಿ)

4. ಯೆಹೋವ ಯಾಕೆ ತನ್ನ ವಾಕ್ಯದಲ್ಲಿ ಭವಿಷ್ಯವಾಣಿಗಳನ್ನ ಬರೆಸಿಟ್ಟಿದ್ದಾನೆ? (ಯೆರೆಮೀಯ 29:11) (ಚಿತ್ರನೂ ನೋಡಿ.)

4 ಅಪ್ಪಅಮ್ಮಂದಿರಿಗೆ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅನ್ನೋ ಆಸೆ ಇರುತ್ತೆ. ಯೆಹೋವ ದೇವರೂ ತನ್ನೆಲ್ಲಾ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂತ ಇಷ್ಟಪಡ್ತಾನೆ. (ಯೆರೆಮೀಯ 29:11 ಓದಿ.) ಆದ್ರೆ ಅಪ್ಪಅಮ್ಮಂದಿರಿಗೆ ಇಲ್ಲದಿರೋ ಒಂದು ಸಾಮರ್ಥ್ಯ ಯೆಹೋವನಿಗೆ ಇದೆ. ಅದೇನಂದ್ರೆ ಮುಂದೆ ಏನೇನಾಗುತ್ತೆ ಅಂತ ಆತನಿಗೆ ಸ್ಪಷ್ಟವಾಗಿ ಗೊತ್ತು. ನಾವು ಅದ್ರ ಬಗ್ಗೆ ತಿಳ್ಕೊಬೇಕು ಅಂತಾನೇ ಅದನ್ನೆಲ್ಲ ಬೈಬಲಲ್ಲಿ ಎಷ್ಟೋ ವರ್ಷಗಳ ಮುಂಚೆನೇ ಬರೆಸಿಟ್ಟಿದ್ದಾನೆ. (ಯೆಶಾ. 46:10) ನಾವು ಆ ಭವಿಷ್ಯವಾಣಿಗಳನ್ನ ನಮ್ಮ ಪ್ರೀತಿಯ ಅಪ್ಪ ಯೆಹೋವ ಕೊಟ್ಟಿರೋ ಗಿಫ್ಟ್‌ ತರ ನೋಡಬೇಕು. ಆದ್ರೆ ಬೈಬಲಲ್ಲಿ ಇರೋದೆಲ್ಲ ನಿಜ ಆಗೇ ಆಗುತ್ತೆ ಅಂತ ನಾವು ಹೇಗೆ ಹೇಳಕ್ಕಾಗುತ್ತೆ?

5. ಮ್ಯಾಕ್ಸ್‌ನ ಅನುಭವದಿಂದ ಅವನ ವಯಸ್ಸಿನ ಮಕ್ಕಳು ಏನು ಕಲಿಬಹುದು?

5 ಸ್ಕೂಲಲ್ಲಿ ಎಷ್ಟೋ ಮಕ್ಕಳು ಬೈಬಲಲ್ಲಿ ಇರೋದೆಲ್ಲ ಸತ್ಯ ಅಂತ ನಂಬಲ್ಲ. ಹಾಗಾಗಿ ಅವರು ಹೇಳೋದನ್ನ ಕೇಳಿ ಅಥವಾ ಅವರು ಮಾಡೋದನ್ನ ನೋಡಿ ನಮ್ಮ ಮಕ್ಕಳಿಗೂ ಕೆಲವೊಮ್ಮೆ ಸಂಶಯ ಬಂದುಬಿಡುತ್ತೆ. ಮ್ಯಾಕ್ಸ್‌ ಅನ್ನೋ ಯುವ ಸಹೋದರ ಏನು ಹೇಳ್ತಾನೆ ನೋಡಿ. “ನಾನು ಸ್ಕೂಲಿಗೆ ಹೋಗ್ತಿದ್ದಾಗ ‘ಅಪ್ಪಅಮ್ಮ ಕಲಿಸ್ತಿರೋದು ನಿಜನಾ? ಇದೇ ಸತ್ಯ ಧರ್ಮನಾ? ಬೈಬಲನ್ನ ನಿಜವಾಗ್ಲೂ ದೇವರೇ ಬರೆಸಿರೋದಾ?’ ಅನ್ನೋ ಸಂಶಯ ಬಂತು. ಆ ಸಂಶಯಗಳನ್ನ ನಾನು ಅಪ್ಪಅಮ್ಮ ಹತ್ರ ಹೇಳಿದಾಗ ಅವ್ರಿಗೆ ಸ್ವಲ್ಪ ಟೆನ್ಶನ್‌ ಆಯ್ತು. ಆದ್ರೂ ಅವರು ಸಮಾಧಾನವಾಗಿ ನಂಗೆ ಉತ್ರ ಕೊಟ್ರು.” ಮ್ಯಾಕ್ಸ್‌ನ ಅಪ್ಪಅಮ್ಮ ಅವನಿಗೆ ಬೈಬಲಿಂದಾನೇ ಉತ್ರ ಕೊಟ್ರು. ಜೊತೆಗೆ ಅವನೂ ಒಂದು ಕೆಲಸ ಮಾಡಿದ. ಅದೇನು ಅಂತ ಅವನೇ ಹೇಳ್ತಾನೆ: “ನಾನು ಬೈಬಲಲ್ಲಿರೋ ಭವಿಷ್ಯವಾಣಿಗಳ ಬಗ್ಗೆ ಚೆನ್ನಾಗಿ ಓದಿ ಅಧ್ಯಯನ ಮಾಡಿದೆ. ಅದನ್ನ ನನ್ನ ಸ್ನೇಹಿತರ ಹತ್ರ ಚರ್ಚೆನೂ ಮಾಡಿದೆ. ಇದ್ರಿಂದ, ಬೈಬಲನ್ನ ನಿಜವಾಗ್ಲೂ ದೇವರೇ ಬರೆಸಿರೋದು ಅಂತ ನಂಗೆ ಗ್ಯಾರಂಟಿ ಆಯ್ತು.”

6. ನಿಮಗೆ ಸಂಶಯ ಇದ್ರೆ ಏನು ಮಾಡಬೇಕು ಮತ್ತು ಯಾಕೆ?

6 ‘ಬೈಬಲಲ್ಲಿ ಇರೋದು ನಿಜವಾಗ್ಲೂ ಸತ್ಯನಾ’ ಅಂತ ಮ್ಯಾಕ್ಸ್‌ ತರ ನಿಮಗೂ ಸಂಶಯ ಬಂದಿದ್ಯಾ? ಹಾಗೇನಾದ್ರೂ ಸಂಶಯ ಬಂದಿದ್ರೆ ಅದೇನೂ ತಪ್ಪಲ್ಲ. ಆದ್ರೆ ಅದನ್ನ ಹಾಗೇ ಬಿಟ್ಟುಬಿಡಬಾರದು. ಬೈಬಲಲ್ಲಿ ಇರೋದು ನಿಜವಾಗ್ಲೂ ಸತ್ಯನಾ ಅಲ್ವಾ ಅಂತ ತಿಳ್ಕೊಬೇಕು. ಯಾಕಂದ್ರೆ ಸಂಶಯ ಅನ್ನೋದು “ತುಕ್ಕು” ಹಿಡಿದ ಹಾಗೆ. ಅದನ್ನ ಹಾಗೇ ಬಿಟ್ಟುಬಿಟ್ರೆ ಬೆಲೆಬಾಳೋ ವಸ್ತು ಹಾಳಾಗಿ ಹೋಗುತ್ತೆ. ಹಾಗಾಗಿ ನಿಮ್ಮ ನಂಬಿಕೆಗೆ ಹಿಡಿದಿರೋ ತುಕ್ಕನ್ನ ನೀವು ತೆಗೆದುಹಾಕಬೇಕು. ‘ನಾನು ಬೈಬಲಲ್ಲಿ ಹೇಳಿರೋ ವಿಷ್ಯಗಳನ್ನ ನಂಬ್ತೀನಾ’ ಅಂತ ಕೇಳ್ಕೊಳ್ಳಿ. ಆಗ ನಿಮಗೆ ಸಂಶಯ ಇದೆ ಅಂತ ಗೊತ್ತಾದ್ರೆ ಈಗಾಗ್ಲೇ ಬೈಬಲಲ್ಲಿ ಹೇಳಿರೋ ಭವಿಷ್ಯವಾಣಿಗಳು ನಿಜ ಆಗಿರೋದರ ಬಗ್ಗೆ ಅಧ್ಯಯನ ಮಾಡಿ. ಹೇಗೆ ಅಧ್ಯಯನ ಮಾಡಬೇಕು ಅಂತ ಈಗ ನೋಡೋಣ.

ಭವಿಷ್ಯವಾಣಿಗಳನ್ನ ಅಧ್ಯಯನ ಮಾಡೋದು ಹೇಗೆ?

ದಾನಿಯೇಲನ ತರ ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಬೇಕಂದ್ರೆ ಭವಿಷ್ಯವಾಣಿಗಳನ್ನ ದೀನತೆಯಿಂದ, ಚೆನ್ನಾಗಿ, ಸರಿಯಾದ ಉದ್ದೇಶದಿಂದ ಅಧ್ಯಯನ ಮಾಡಬೇಕು (ಪ್ಯಾರ 7 ನೋಡಿ)

7. ದಾನಿಯೇಲ ಹೇಗೆ ಭವಿಷ್ಯವಾಣಿಗಳನ್ನ ಅಧ್ಯಯನ ಮಾಡ್ತಿದ್ದ? (ದಾನಿಯೇಲ 12:10) (ಚಿತ್ರನೂ ನೋಡಿ.)

7 ಭವಿಷ್ಯವಾಣಿಗಳ ಬಗ್ಗೆ ಹೇಗೆ ಅಧ್ಯಯನ ಮಾಡಬೇಕು ಅಂತ ದಾನಿಯೇಲನಿಂದ ಕಲಿಬಹುದು. ಅವನು ಸರಿಯಾದ ಉದ್ದೇಶದಿಂದ ಅಧ್ಯಯನ ಮಾಡ್ತಿದ್ದ. ಅಂದ್ರೆ ಸತ್ಯ ಏನಂತ ತಿಳ್ಕೊಬೇಕು ಅಂತ ಓದ್ತಿದ್ದ. ಅದನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ದೀನತೆಯಿಂದ ಬೇಡ್ಕೊಂಡ. (ದಾನಿ. 2:18) ಯಾಕಂದ್ರೆ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಂಡವ್ರಿಗೆ, ಆತನ ಮಾತನ್ನ ಕೇಳುವವ್ರಿಗೆ ಆತನು ಸಹಾಯ ಮಾಡ್ತಾನೆ ಅಂತ ಅವನಿಗೆ ಗೊತ್ತಿತ್ತು. (ದಾನಿ. 2:27, 28; ದಾನಿಯೇಲ 12:10 ಓದಿ.) ಅಷ್ಟೇ ಅಲ್ಲ ಅವನು ಒಂಚೂರೂ ಬಿಡದೆ ಎಲ್ಲಾ ಮಾಹಿತಿಯನ್ನ ತಿಳ್ಕೊಳ್ತಿದ್ದ. ಅವನ ಹತ್ರ ಇದ್ದ ಸುರುಳಿಗಳನ್ನೆಲ್ಲ ಓದಿ ಅಧ್ಯಯನ ಮಾಡ್ತಿದ್ದ. (ಯೆರೆ. 25:11, 12; ದಾನಿ. 9:2) ದಾನಿಯೇಲನ ತರ ನಾವೂ ಏನು ಮಾಡಬೇಕು?

8. (ಎ) ಕೆಲವರು ಯಾವ ಉದ್ದೇಶದಿಂದ ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅಧ್ಯಯನ ಮಾಡ್ತಾರೆ? (ಬಿ) ಆದ್ರೆ ನಮ್ಮ ಉದ್ದೇಶ ಏನಾಗಿರಬೇಕು?

8 ನೀವು ಯಾವ ಉದ್ದೇಶದಿಂದ ಅಧ್ಯಯನ ಮಾಡ್ತಿದ್ದೀರ ಅಂತ ಯೋಚ್ನೆ ಮಾಡಿ. ಬೈಬಲಲ್ಲಿ ಇರೋದು ಸತ್ಯನಾ ಅಂತ ತಿಳ್ಕೊಳ್ಳೋ ಆಸೆಯಿಂದ ಭವಿಷ್ಯವಾಣಿಗಳನ್ನ ಅಧ್ಯಯನ ಮಾಡ್ತಾ ಇದ್ದೀರಾ? ಹಾಗಿದ್ರೆ ಯೆಹೋವ ನಿಮಗೆ ಸಹಾಯ ಮಾಡೇ ಮಾಡ್ತಾನೆ. (ಯೋಹಾ. 4:23, 24; 14:16, 17) ಆದ್ರೆ ಕೆಲವರು ಬೈಬಲನ್ನ ದೇವರು ಬರೆಸಿಲ್ಲ ಅಂತ ಸಾಬೀತು ಮಾಡೋಕೆ ಓದ್ತಾರೆ. ಹೀಗೆ ಸಾಬೀತು ಮಾಡಿದ್ರೆ ತಮಗಿಷ್ಟ ಬಂದ ಹಾಗೆ ಜೀವನ ಮಾಡಬಹುದು ಅಂತ ಅವರು ಅಂದ್ಕೊಂಡಿದ್ದಾರೆ. ಆದ್ರೆ ನಾವು ಆ ಉದ್ದೇಶದಿಂದ ಅಧ್ಯಯನ ಮಾಡಬಾರದು. ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ಇನ್ನೊಂದು ಗುಣನೂ ಬೇಕು. ಅದೇನು?

9. ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ದೀನತೆ ಯಾಕೆ ಬೇಕು?

9 ದೀನರಾಗಿರಿ. ದೀನರಿಗೆ ಸಹಾಯ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಯಾಕೋ. 4:6) ಹಾಗಾಗಿ ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ನಾವು ಅರ್ಥ ಮಾಡ್ಕೊಳ್ಳೋಕೆ ಯೆಹೋವ ದೇವರ ಹತ್ರ ದೀನತೆಯಿಂದ ಸಹಾಯ ಕೇಳಬೇಕು. ಅಷ್ಟೇ ಅಲ್ಲ ನಮಗೆ ಬೇಕಾದ ಆಹಾರನ ತಕ್ಕ ಸಮಯಕ್ಕೆ ಕೊಡೋಕೆ ದೇವರು ಒಂದು ಗುಂಪನ್ನ ನೇಮಿಸಿದ್ದಾನೆ. (ಲೂಕ 12:42) ಆತನು ಎಲ್ಲಾನೂ ಅಚ್ಚುಕಟ್ಟಾಗಿ ಮಾಡೋ ದೇವರಾಗಿ ಇರೋದ್ರಿಂದ ಆ ಗುಂಪಿನಿಂದ ಮಾತ್ರನೇ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ಬೇಕಾದ ಸಹಾಯ ಕೊಡ್ತಾನೆ. ಹಾಗಾಗಿ ನಾವು ಆ ಗುಂಪಿನಿಂದ ಸಹಾಯ ಪಡ್ಕೊಬೇಕು.—1 ಕೊರಿಂ. 14:33; ಎಫೆ. 4:4-6.

10. ಎಸ್ತೆರ್‌ ಅನುಭವದಿಂದ ನೀವೇನು ಕಲಿತ್ರಿ?

10 ಚೆನ್ನಾಗಿ ಸಂಶೋಧನೆ ಮಾಡಿ. ನಿಮಗಿಷ್ಟ ಇರೋ ಒಂದು ಭವಿಷ್ಯವಾಣಿಯನ್ನ ಆರಿಸ್ಕೊಂಡು ಅದ್ರ ಬಗ್ಗೆ ಅಧ್ಯಯನ ಮಾಡಿ. ಸಹೋದರಿ ಎಸ್ತೆರ್‌ ಕೂಡ ಇದನ್ನೇ ಮಾಡಿದಳು. ಮೆಸ್ಸೀಯ ಹುಟ್ತಾನೆ ಅನ್ನೋದ್ರ ಬಗ್ಗೆ ಇರೋ ಭವಿಷ್ಯವಾಣಿಗಳನ್ನ ತಿಳ್ಕೊಬೇಕು ಅಂತ ಅವಳು ಅಂದ್ಕೊಂಡಳು. ಅವಳು ಏನು ಹೇಳ್ತಾಳಂದ್ರೆ “ನನಗೆ 15 ವರ್ಷ ಇದ್ದಾಗ, ಈ ಎಲ್ಲಾ ಭವಿಷ್ಯವಾಣಿಗಳನ್ನ ಯೇಸು ಹುಟ್ಟೋ ಮುಂಚೆನೇ ಬರೆದಿದ್ರಾ ಅಂತ ಸಂಶೋಧನೆ ಮಾಡೋಕೆ ಶುರುಮಾಡಿದೆ.” ಮೃತಸಮುದ್ರದ ಸುರುಳಿಗಳ ಬಗ್ಗೆ ಅವಳು ಓದಿದ್ರಿಂದ ತುಂಬ ಸಹಾಯ ಆಯ್ತು. ಅವಳು ಹೇಳೋದು, “ಅದ್ರಲ್ಲಿ ಕೆಲವು ಸುರುಳಿಗಳನ್ನ ಬರೆದಾಗ ಯೇಸು ಇನ್ನೂ ಹುಟ್ಟಿರಲಿಲ್ಲ. ಹಾಗಿದ್ರೆ ಆ ಭವಿಷ್ಯವಾಣಿಗಳನ್ನ ದೇವರೇ ಬರೆಸಿರಬೇಕಲ್ವಾ!” ಇದನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಅವಳು ಏನು ಮಾಡಿದಳು? “ನಾನು ಅದನ್ನ ತುಂಬ ಸಲ ಓದಿದೆ” ಅಂತ ಎಸ್ತೆರ್‌ ಹೇಳ್ತಾಳೆ. ಈ ತರ ಅವಳು ಎಷ್ಟೋ ಭವಿಷ್ಯವಾಣಿಗಳನ್ನ ಓದಿ ಅಧ್ಯಯನ ಮಾಡಿದಳು. ಇಷ್ಟು ಶ್ರಮ ಹಾಕಿ ಓದಿದ್ರಿಂದ ಅವಳಿಗೆ ಪ್ರಯೋಜನ ಆಯ್ತು. “ಇದ್ರಿಂದ ನಮಗೆ ಬೈಬಲಲ್ಲಿ ಇರೋದೆಲ್ಲ ಸತ್ಯ ಅಂತ ಗೊತ್ತಾಯ್ತು. ನನಗೀಗ ಅದ್ರಲ್ಲಿ ಯಾವ ಸಂಶಯನೂ ಇಲ್ಲ” ಅಂತ ಎಸ್ತೆರ್‌ ಹೇಳ್ತಾಳೆ.

11. ಬೈಬಲಲ್ಲಿ ಇರೋದೆಲ್ಲ ಸತ್ಯ ಅಂತ ನಾವೇ ಅಧ್ಯಯನ ಮಾಡಿ ಅರ್ಥ ಮಾಡ್ಕೊಳ್ಳೋದ್ರಿಂದ ಯಾವ ಪ್ರಯೋಜನ ಇದೆ?

11 ಈಗಾಗ್ಲೇ ನಿಜ ಆಗಿರೋ ಭವಿಷ್ಯವಾಣಿಗಳ ಬಗ್ಗೆ ನಾವು ಅಧ್ಯಯನ ಮಾಡೋದ್ರಿಂದ ತುಂಬ ಒಳ್ಳೇದಾಗುತ್ತೆ. ಯೆಹೋವ ದೇವರ ಮೇಲೆ, ಆತನು ನಮ್ಮನ್ನ ಸರಿಯಾದ ದಾರಿಯಲ್ಲಿ ನಡೆಸ್ತಾ ಇದ್ದಾನೆ ಅನ್ನೋ ವಿಷ್ಯದ ಬಗ್ಗೆ ನಮಗೆ ಪೂರ್ತಿ ನಂಬಿಕೆ ಬರುತ್ತೆ. ನಮಗೆ ಈಗ ಎಷ್ಟೇ ಕಷ್ಟ ಬಂದ್ರೂ ನಮ್ಮ ಭವಿಷ್ಯ ತುಂಬ ಚೆನ್ನಾಗಿರುತ್ತೆ ಅನ್ನೋ ಗ್ಯಾರಂಟಿ ಇರುತ್ತೆ. ನಾವೀಗ, ದಾನಿಯೇಲ ಬರೆದಿರೋ ಎರಡು ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಣ. ಅದೀಗ ನಿಜ ಆಗ್ತಿದೆ. ಆ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋದ್ರಿಂದ ಈಗ ನಾವು ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಆಗುತ್ತೆ.

ಕಬ್ಬಿಣ ಮತ್ತು ಜೇಡಿಮಣ್ಣಿನ ಪಾದ

12. “ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣ” ಆಗಿರೋ ಪಾದ ಮತ್ತು ಬೆರಳುಗಳು ಏನನ್ನ ಸೂಚಿಸುತ್ತೆ? (ದಾನಿಯೇಲ 2:41-43)

12 ದಾನಿಯೇಲ 2:41-43 ಓದಿ. ರಾಜ ನೆಬೂಕದ್ನೆಚ್ಚರ ನೋಡಿದ ದೊಡ್ಡ ಮೂರ್ತಿಯ ಪಾದ ಮತ್ತು ಬೆರಳುಗಳು “ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣ” ಆಗಿತ್ತು. ಈ ಭವಿಷ್ಯವಾಣಿಯನ್ನ ದಾನಿಯೇಲ ಪುಸ್ತಕ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ಬೇರೆ ಭವಿಷ್ಯವಾಣಿಗಳ ಜೊತೆ ಹೋಲಿಸಿ ನೋಡಿದಾಗ ಈ ಪಾದ ಶಕ್ತಿಶಾಲಿ ಆಗಿರೋ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯನ್ನ ಸೂಚಿಸುತ್ತೆ ಅಂತ ಗೊತ್ತಾಗುತ್ತೆ. ಈ ಲೋಕಶಕ್ತಿಯ “ಒಂದು ಭಾಗ ಗಟ್ಟಿಯಾಗಿರುತ್ತೆ, ಇನ್ನೊಂದು ಭಾಗ ನಾಜೂಕಾಗಿ ಇರುತ್ತೆ” ಅಂತ ದಾನಿಯೇಲ ಹೇಳಿದ. ಯಾಕಂದ್ರೆ ಕಬ್ಬಿಣದ ತರ ಬಲಶಾಲಿಯಾಗಿರೋ ಲೋಕಶಕ್ತಿ ಜೊತೆ ಜೇಡಿಮಣ್ಣನ್ನ ಸೂಚಿಸೋ ಜನ್ರು ಬೆರೆಯದೇ ಇರೋದ್ರಿಂದ ಅದನ್ನ ಬಲಹೀನ ಮಾಡ್ತಿದ್ದಾರೆ. b

13. ಈ ಭವಿಷ್ಯವಾಣಿಯನ್ನ ಅರ್ಥ ಮಾಡ್ಕೊಂಡಿದ್ರಿಂದ ಯಾವ ಮುಖ್ಯವಾದ ವಿಷ್ಯ ನಮಗೆ ಗೊತ್ತಾಗುತ್ತೆ?

13 ದೊಡ್ಡ ಮೂರ್ತಿಯ ಕನಸಿನ ಅರ್ಥನ ದಾನಿಯೇಲ ವಿವರಿಸಿದ್ರಿಂದ ನಮಗೆ ತುಂಬ ವಿಷ್ಯ ಗೊತ್ತಾಗುತ್ತೆ. ಅದ್ರಲ್ಲೂ ಅದ್ರ ಪಾದದಿಂದ ನಮಗೆ ಏನು ಗೊತ್ತಾಗುತ್ತೆ? ಒಂದು, ಅಮೆರಿಕ ಮತ್ತು ಬ್ರಿಟನ್‌ ಕೆಲವು ವಿಷ್ಯಗಳಲ್ಲಿ ತಮಗೆ ತುಂಬ ಶಕ್ತಿ ಇದೆ ಅಂತ ತೋರಿಸ್ಕೊಟ್ಟಿವೆ. ಉದಾಹರಣೆಗೆ, ಒಂದನೇ ಮತ್ತು ಎರಡನೇ ಮಹಾ ಯುದ್ಧಗಳನ್ನ ಗೆದ್ದಿರೋ ದೇಶಗಳಲ್ಲಿ ಈ ಎರಡು ದೇಶಗಳೂ ಇತ್ತು. ಈ ಲೋಕಶಕ್ತಿಯ ಒಂದು ಭಾಗ ನಾಜೂಕಾಗಿದೆ, ಇನ್ಮುಂದೆನೂ ನಾಜೂಕಾಗಿ ಇರುತ್ತೆ. ಯಾಕಂದ್ರೆ ಆ ದೇಶಗಳಲ್ಲಿರೋ ಜನ್ರು ಒಳಗೊಳಗೇ ಕಚ್ಚಾಡ್ತಾ ಇದ್ದಾರೆ. ಸರ್ಕಾರದ ವಿರುದ್ಧ ಆಗಾಗ ದಂಗೆ ಏಳ್ತಿದ್ದಾರೆ. ಎರಡು, ಈ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿನೇ ಕೊನೇ ಲೋಕಶಕ್ತಿ ಆಗಿರುತ್ತೆ. ಈಗ್ಲೂ ಕೆಲವೊಮ್ಮೆ ಬೇರೆ ದೇಶಗಳು ಈ ಲೋಕಶಕ್ತಿಯ ವಿರುದ್ಧ ಸವಾಲು ಹಾಕಿದ್ರೂ ಅದ್ರ ಜಾಗನ ಅವು ತಗೊಳ್ಳೋಕೆ ಆಗಲ್ಲ. ಯಾಕಂದ್ರೆ ದೇವರ ಆಳ್ವಿಕೆ ಅನ್ನೋ “ಕಲ್ಲು” ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯ ಪಾದಕ್ಕೆ ಹೊಡೆದು ಅದನ್ನ ಪುಡಿಪುಡಿ ಮಾಡುತ್ತೆ ಅಂತ ನಮಗೆ ಗೊತ್ತು. ಹೀಗೆ ದೇವರ ಆಳ್ವಿಕೆ ಎಲ್ಲಾ ಮಾನವ ಸರ್ಕಾರಗಳಿಗೆ ಅಂತ್ಯ ತರುತ್ತೆ.—ದಾನಿ. 2:34, 35, 44, 45.

14. ಕಬ್ಬಿಣ ಮತ್ತು ಜೇಡಿಮಣ್ಣಿನ ಪಾದದ ಬಗ್ಗೆ ಇರೋ ಭವಿಷ್ಯವಾಣಿಯನ್ನ ಅರ್ಥ ಮಾಡ್ಕೊಳ್ಳೋದ್ರಿಂದ ನಮ್ಮ ಜೀವನದಲ್ಲಿ ಹೇಗೆ ಸರಿಯಾದ ತೀರ್ಮಾನಗಳನ್ನ ಮಾಡಕ್ಕಾಗುತ್ತೆ?

14 ಕಬ್ಬಿಣ ಮತ್ತು ಜೇಡಿಮಣ್ಣಿನ ಪಾದದ ಬಗ್ಗೆ ದಾನಿಯೇಲ ಹೇಳಿದ ಭವಿಷ್ಯವಾಣಿ ನಿಜ ಅಂತ ನಂಬ್ತೀರಾ? ಒಂದುವೇಳೆ ನಂಬೋದಾದ್ರೆ ಅದನ್ನ ನೀವು ಜೀವನದಲ್ಲಿ ತೋರಿಸ್ತೀರ. ಹೇಗೆ? ಆದಷ್ಟು ಬೇಗ ನಾಶ ಆಗೋ ಲೋಕದಲ್ಲಿ ಹಣ ಆಗಲಿ, ವಸ್ತುಗಳನ್ನಾಗಲಿ ಕೂಡಿಸೋಕೆ ಹೋಗಲ್ಲ. (ಲೂಕ 12:16-21; 1 ಯೋಹಾ. 2:15-17) ಜನ್ರಿಗೆ ಸಿಹಿಸುದ್ದಿ ಸಾರೋಕೆ, ಅವ್ರಿಗೆ ಕಲಿಸೋಕೆ ಜಾಸ್ತಿ ಗಮನ ಕೊಡ್ತೀರ. (ಮತ್ತಾ. 6:33; 28:18-20) ಹಾಗಾಗಿ ಹೀಗೆ ಕೇಳ್ಕೊಳ್ಳಿ: ‘ಜೀವನದಲ್ಲಿ ನಾನು ಮಾಡೋ ತೀರ್ಮಾನಗಳಿಂದ ಏನು ಗೊತ್ತಾಗುತ್ತೆ? ದೇವರ ಆಳ್ವಿಕೆ ಎಲ್ಲಾ ಮಾನವ ಸರ್ಕಾರಗಳನ್ನ ನಾಶ ಮಾಡುತ್ತೆ ಅಂತ ನಾನು ನಂಬ್ತೀನಿ ಅನ್ನೋದನ್ನ ತೋರಿಸ್ಕೊಡುತ್ತಾ?’

“ಉತ್ತರ ರಾಜ” ಮತ್ತು “ದಕ್ಷಿಣ ರಾಜ”

15. ಇವತ್ತು “ಉತ್ತರ ರಾಜ” ಮತ್ತು “ದಕ್ಷಿಣ ರಾಜ” ಯಾರು? (ದಾನಿಯೇಲ 11:40)

15 ದಾನಿಯೇಲ 11:40 ಓದಿ. ದಾನಿಯೇಲ 11​ನೇ ಅಧ್ಯಾಯದಲ್ಲಿ ಅಧಿಕಾರಕ್ಕೋಸ್ಕರ ಯಾವಾಗ್ಲೂ ಹೋರಾಡ್ತಿರೋ ಎರಡು ರಾಜರ ಬಗ್ಗೆ ಅಂದ್ರೆ ಎರಡು ರಾಜಕೀಯ ಶಕ್ತಿಗಳ ಬಗ್ಗೆ ಹೇಳುತ್ತೆ. ಈ ಇಬ್ರು ರಾಜರು ಯಾರು? ಬೈಬಲಲ್ಲಿರೋ ಬೇರೆ ಭವಿಷ್ಯವಾಣಿಗಳನ್ನ ಹೋಲಿಸಿ ನೋಡಿದಾಗ “ಉತ್ತರದ ರಾಜ” ರಷ್ಯಾ ಮತ್ತು ಅದ್ರ ಜೊತೆ ಕೈಜೋಡಿಸಿರೋ ದೇಶಗಳು ಅಂತ ಗೊತ್ತಾಗುತ್ತೆ. “ದಕ್ಷಿಣದ ರಾಜ” ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ಅಂತ ಗೊತ್ತಾಗುತ್ತೆ. c

“ಉತ್ತರ ರಾಜ” ಮತ್ತು “ದಕ್ಷಿಣ ರಾಜ” ಕೊಡ್ತಿರೋ ಹಿಂಸೆ ಬೈಬಲಲ್ಲಿ ಹೇಳಿರೋ ಭವಿಷ್ಯವಾಣಿಗಳ ನೆರವೇರಿಕೆ ಅಂತ ಅರ್ಥ ಮಾಡ್ಕೊಂಡ್ರೆ ನಮ್ಮ ನಂಬಿಕೆ ಬಲ ಆಗುತ್ತೆ ಮತ್ತು ನಾವು ಅವ್ರಿಗೆ ಹೆದರಲ್ಲ (ಪ್ಯಾರ 16-18 ನೋಡಿ)

16. “ಉತ್ತರ ರಾಜ” ದೇವಜನ್ರಿಗೆ ಏನು ಮಾಡ್ತಿದ್ದಾನೆ?

16 ‘ಉತ್ತರದ ರಾಜನ’ ಕೈ ಕೆಳಗಿರೋ ದೇವಜನ್ರು ಇವತ್ತು ತುಂಬ ಹಿಂಸೆ ಅನುಭವಿಸ್ತಾ ಇದ್ದಾರೆ. ಅವರು ತಮ್ಮ ನಂಬಿಕೆಗೋಸ್ಕರ ಹೊಡೆತ ತಿಂದಿದ್ದಾರೆ, ಜೈಲಲ್ಲಿದ್ದಾರೆ. ಹೀಗೆ ಹಿಂಸೆ ಕೊಟ್ರೆ ಅವರು ತಮ್ಮ ನಂಬಿಕೆ ಕಳ್ಕೊಳ್ತಾರೆ ಅಂತ “ಉತ್ತರ ರಾಜ” ಅಂದ್ಕೊಂಡಿದ್ದಾನೆ. ಆದ್ರೆ ಅದ್ರಿಂದ ಅವರ ನಂಬಿಕೆ ಇನ್ನೂ ಜಾಸ್ತಿ ಆಗ್ತಾ ಇದೆ. ಯಾಕೆ? ಯಾಕಂದ್ರೆ ಅಲ್ಲಿರೋ ಸಹೋದರರಿಗೆ ಈ ಹಿಂಸೆಯೆಲ್ಲಾ ದಾನಿಯೇಲ ಬರೆದಿರೋ ಭವಿಷ್ಯವಾಣಿಯ ನೆರವೇರಿಕೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತು. d (ದಾನಿ. 11:41) ನಾವು ಕೂಡ ಇದ್ರ ಬಗ್ಗೆ ತಿಳ್ಕೊಂಡಿರೋದ್ರಿಂದ ಏನೇ ಆದ್ರೂ ನಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡ್ಕೊಂಡು ಇರ್ತೀವಿ. ಯೆಹೋವ ದೇವರನ್ನ ಬಿಟ್ಟು ನಾವು ಯಾವತ್ತೂ ದೂರ ಹೋಗಲ್ಲ.

17. ‘ದಕ್ಷಿಣ ರಾಜನ’ ಕೈ ಕೆಳಗಿರೋ ದೇವಜನ್ರಿಗೆ ಯಾವ ಪರೀಕ್ಷೆಗಳು ಬಂದಿದೆ?

17 “ದಕ್ಷಿಣ ರಾಜ” ಕೂಡ ಹಿಂದೆ ಯೆಹೋವನ ಜನ್ರಿಗೆ ತುಂಬ ಹಿಂಸೆ ಕೊಟ್ಟಿದ್ದಾನೆ. ಒಂದನೇ ಮತ್ತು ಎರಡನೇ ಮಹಾ ಯುದ್ಧದ ಸಮಯದಲ್ಲಿ ಯುದ್ಧಕ್ಕೆ ಹೋಗದೇ ಇದ್ದ ನಮ್ಮ ಸಹೋದರರನ್ನ ಜೈಲಿಗೆ ಹಾಕಿದ್ದಾನೆ. ಧ್ವಜಕ್ಕೆ ಸೆಲ್ಯೂಟ್‌ ಮಾಡದೇ ಇದ್ದ ನಮ್ಮ ಮಕ್ಕಳನ್ನ ಶಾಲೆಯಿಂದ ಹೊರಗೆ ಹಾಕಿದ್ದಾನೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ರಾಜನ ಕೈ ಕೆಳಗಿರೋ ದೇವಜನ್ರಿಗೆ ಬೇರೆ ರೀತಿಯಲ್ಲಿ ಪರೀಕ್ಷೆಗಳು ಬಂದಿದೆ. ಉದಾಹರಣೆಗೆ, ಚುನಾವಣೆ ನಡೀವಾಗ ಒಬ್ಬ ಕ್ರೈಸ್ತ ವೋಟ್‌ ಹಾಕದೇ ಇರಬಹುದು. ಆದ್ರೆ ‘ಈ ಪಕ್ಷ ಗೆದ್ರೆ ಚೆನ್ನಾಗಿರುತ್ತೆ ಅಥವಾ ಈ ವ್ಯಕ್ತಿ ಗೆದ್ರೆ ಚೆನ್ನಾಗಿರುತ್ತೆ’ ಅಂತ ಅವನು ಅಂದ್ಕೊಳ್ಳಬಹುದು. ಆಗ ಅವನು ಮನಸ್ಸಲ್ಲೇ ಒಂದು ರಾಜಕೀಯ ಪಕ್ಷದ ಪರವಹಿಸಿದ ಹಾಗೆ ಆಗಿಬಿಡುತ್ತೆ. ಹಾಗಾಗಿ ನಮ್ಮ ಮನಸ್ಸಲ್ಲೂ, ಯೋಚ್ನೆಯಲ್ಲೂ ಪಕ್ಷ ವಹಿಸದೆ ಇರೋದು ಎಷ್ಟು ಮುಖ್ಯ ಅಲ್ವಾ?—ಯೋಹಾ. 15:18, 19; 18:36.

18. “ಉತ್ತರ ರಾಜ” ಮತ್ತು ‘ದಕ್ಷಿಣ ರಾಜನ’ ನಡುವೆ ಘರ್ಷಣೆ ನಡಿಯೋದನ್ನ ನೋಡುವಾಗ ನಾವು ಹೆದರಬೇಕಾ? (ಚಿತ್ರನೂ ನೋಡಿ.)

18 “ದಕ್ಷಿಣ ರಾಜ” ‘ಉತ್ತರ ರಾಜನ’ ಜೊತೆ ‘ಕೊಂಬುಗಳನ್ನ ಸಿಕ್ಕಿಸೋದನ್ನ’ ಅಂದ್ರೆ ‘ಕಾಳಗ ಮಾಡೋದನ್ನ’ ನೋಡುವಾಗ ಬೈಬಲಲ್ಲಿರೋ ಭವಿಷ್ಯವಾಣಿಗಳ ಮೇಲೆ ನಂಬಿಕೆ ಇಲ್ಲದಿರೋ ಜನ್ರಿಗೆ ತುಂಬ ಭಯ ಆಗುತ್ತೆ. (ದಾನಿ. 11:40, ಪಾದಟಿಪ್ಪಣಿ) ಯಾಕಂದ್ರೆ ಆ ಇಬ್ರು ರಾಜರ ಹತ್ರನೂ ನ್ಯೂಕ್ಲಿಯರ್‌ ಬಾಂಬ್‌ಗಳಿವೆ. ಆದ್ರೆ ಅವರು ಆ ಬಾಂಬ್‌ಗಳನ್ನ ಉಪಯೋಗಿಸೋಕೆ ಯೆಹೋವ ದೇವರು ಬಿಡಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು. (ಯೆಶಾ. 45:18) ಹಾಗಾಗಿ “ಉತ್ತರ ರಾಜ” ಮತ್ತು ‘ದಕ್ಷಿಣ ರಾಜನ’ ನಡುವೆ ಇರೋ ಘರ್ಷಣೆ ನಮ್ಮನ್ನ ಹೆದರಿಸಲ್ಲ. ನಮ್ಮ ನಂಬಿಕೆಯನ್ನ ಇನ್ನೂ ಜಾಸ್ತಿ ಮಾಡುತ್ತೆ. ಅಷ್ಟೇ ಅಲ್ಲ, ಈ ಲೋಕದ ಅಂತ್ಯ ಹತ್ರ ಇದೆ ಅನ್ನೋದನ್ನ ನೆನಪಿಸುತ್ತೆ.

ಭವಿಷ್ಯವಾಣಿಗಳಿಗೆ ಗಮನ ಕೊಡ್ತಾ ಇರಿ

19. ಬೈಬಲಲ್ಲಿರೋ ಭವಿಷ್ಯವಾಣಿಗಳ ಬಗ್ಗೆ ನಾವು ಏನನ್ನ ನೆನಪಿಡಬೇಕು?

19 ಪ್ರವಾದಿ ದಾನಿಯೇಲನಿಗೆ ಅವನು ಬರೆದ ಎಲ್ಲಾ ಭವಿಷ್ಯವಾಣಿಗಳೂ ಅರ್ಥ ಆಗಲಿಲ್ಲ. ನಮಗೂ ಕೂಡ ಕೆಲವು ಭವಿಷ್ಯವಾಣಿಗಳು ಹೇಗೆ ನಿಜ ಆಗುತ್ತೆ ಅಂತ ಗೊತ್ತಿಲ್ಲ. (ದಾನಿ. 12:8, 9) ಹಾಗಂತ ಆ ಭವಿಷ್ಯವಾಣಿಗಳು ನಿಜ ಆಗಲ್ಲ ಅಂತ ನಾವು ಅಂದ್ಕೊಬಾರದು. ಈ ಮುಂಚೆ ಯೆಹೋವ ದೇವರು ತನ್ನ ಜನ್ರಿಗೆ ಭವಿಷ್ಯವಾಣಿಗಳ ಅರ್ಥವನ್ನ ಸರಿಯಾದ ಸಮಯಕ್ಕೆ ತಿಳಿಸಿದ್ದಾನೆ. ನಮಗೂ ಸರಿಯಾದ ಸಮಯಕ್ಕೆ ತಿಳಿಸ್ತಾನೆ ಅಂತ ನಾವು ನಂಬಬೇಕು.—ಆಮೋ. 3:7.

20. (ಎ) ಮುಂದೆ ಯಾವ ರೋಮಾಂಚಕ ಭವಿಷ್ಯವಾಣಿಗಳು ನಿಜ ಆಗುತ್ತೆ? (ಬಿ) ಅಲ್ಲಿ ತನಕ ನಾವೇನು ಮಾಡಬೇಕು?

20 ಆದಷ್ಟು ಬೇಗ “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆ ನಮಗೆ ಕೇಳಿಸುತ್ತೆ. (1 ಥೆಸ. 5:3) ಆಗ ಈ ಲೋಕದ ರಾಜಕೀಯ ಶಕ್ತಿಗಳು ಸುಳ್ಳು ಧರ್ಮಗಳ ಮೇಲೆ ದಾಳಿ ಮಾಡಿ ಅದನ್ನೆಲ್ಲ ತೆಗೆದುಹಾಕಿಬಿಡುತ್ತೆ. (ಪ್ರಕ. 17:16, 17) ಆಮೇಲೆ ದೇವಜನ್ರ ಮೇಲೆ ದಾಳಿ ಮಾಡುತ್ತೆ. (ಯೆಹೆ. 38:18, 19) ಇದೆಲ್ಲ ಆದ್ಮೇಲೆ ಕೊನೇ ಕದನವಾದ ಅರ್ಮಗೆದೋನ್‌ ಶುರು ಆಗುತ್ತೆ. (ಪ್ರಕ. 16:14, 16) ಅಲ್ಲಿ ತನಕ ಈ ಭವಿಷ್ಯವಾಣಿಗಳಿಗೆ ನಾವು ಗಮನ ಕೊಡ್ತಾ ಇರೋಣ. ಅದನ್ನ ಅರ್ಥ ಮಾಡ್ಕೊಳ್ಳೋಕೆ ಬೇರೆಯವ್ರಿಗೂ ಸಹಾಯ ಮಾಡೋಣ. ಹೀಗೆ ಯೆಹೋವನಿಗೆ ಋಣಿಗಳಾಗಿ ಇರೋಣ.

ಗೀತೆ 116 ಬೆಳಕು ಹೆಚ್ಚುತ್ತದೆ

a ಲೋಕದ ಪರಿಸ್ಥಿತಿ ಎಷ್ಟೇ ಹಾಳಾದ್ರೂ ‘ಮುಂದೆ ಎಲ್ಲಾ ಸರಿಹೋಗುತ್ತೆ’ ಅನ್ನೋ ನಂಬಿಕೆ ನಮಗೆ ಇರಬೇಕು. ಆ ನಂಬಿಕೆ ನಮಗೆ ಬರಬೇಕಂದ್ರೆ ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಚೆನ್ನಾಗಿ ಓದಿ ಅಧ್ಯಯನ ಮಾಡಬೇಕು. ಈ ಭವಿಷ್ಯವಾಣಿಗಳನ್ನ ನಾವ್ಯಾಕೆ ಚೆನ್ನಾಗಿ ತಿಳ್ಕೊಂಡಿರಬೇಕು ಅಂತ ಈ ಲೇಖನದಲ್ಲಿ ನೋಡೋಣ. ದಾನಿಯೇಲ ಹೇಳಿದ ಎರಡು ಭವಿಷ್ಯವಾಣಿಗಳ ಬಗ್ಗೆ ತಿಳ್ಕೊಳ್ಳೋದ್ರಿಂದ ನಮ್ಮೆಲ್ರಿಗೂ ಹೇಗೆ ಪ್ರಯೋಜನ ಆಗುತ್ತೆ ಅನ್ನೋದನ್ನೂ ನೋಡೋಣ.

b ಜೂನ್‌ 15, 2012ರ ಕಾವಲಿನಬುರುಜುವಿನಲ್ಲಿರೋ “‘ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು’ ಯೆಹೋವನು ಪ್ರಕಟಿಸಿದ್ದಾನೆ” ಅನ್ನೋ ಲೇಖನದ ಪ್ಯಾರ 7-9 ನೋಡಿ.

c ಮೇ 2020ರ ಕಾವಲಿನಬುರುಜುವಿನಲ್ಲಿರೋ “ಈಗ ‘ಉತ್ತರ ರಾಜ’ ಯಾರು?” ಅನ್ನೋ ಲೇಖನದ ಪ್ಯಾರ 3-4 ನೋಡಿ.

d ಮೇ 2020ರ ಕಾವಲಿನಬುರುಜುವಿನಲ್ಲಿರೋ “ಈಗ ‘ಉತ್ತರ ರಾಜ’ ಯಾರು?” ಅನ್ನೋ ಲೇಖನದ ಪ್ಯಾರ 7-9 ನೋಡಿ.