ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 36

ಹೊರೆ ಹೊತ್ಕೊಳ್ಳಿ ಭಾರ ಬಿಸಾಕಿ

ಹೊರೆ ಹೊತ್ಕೊಳ್ಳಿ ಭಾರ ಬಿಸಾಕಿ

“ಭಾರವಾದ ಎಲ್ಲವನ್ನ . . . ತೆಗೆದುಹಾಕೋಣ. ನಾವು ಓಡಬೇಕಾದ ಓಟವನ್ನ ತಾಳ್ಮೆಯಿಂದ ಓಡೋಣ.”—ಇಬ್ರಿ. 12:1.

ಗೀತೆ 38 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

ಈ ಲೇಖನದಲ್ಲಿ ಏನಿದೆ? a

1. ಜೀವದ ಓಟವನ್ನ ಓಡಿ ಗೆಲ್ಲಬೇಕಂದ್ರೆ ಏನು ಮಾಡಬೇಕಂತ ಇಬ್ರಿಯ 12:1 ಹೇಳುತ್ತೆ?

 ಕ್ರೈಸ್ತರಾಗಿ ನಾವು ಮಾಡ್ತಿರೋ ಜೀವನವನ್ನ ಬೈಬಲ್‌ ಒಂದು ಓಟಕ್ಕೆ ಹೋಲಿಸುತ್ತೆ. ಈ ಓಟದಲ್ಲಿ ಗುರಿ ಮುಟ್ಟಿದ್ರೆ ನಮಗೆ ಶಾಶ್ವತ ಜೀವ ಸಿಗುತ್ತೆ. (2 ತಿಮೊ. 4:7, 8) ಆ ಗುರಿ ತುಂಬ ಹತ್ರ ಇರೋದ್ರಿಂದ ನಿಲ್ಲಿಸದೆ ಓಡಬೇಕು. ಈ ಜೀವದ ಓಟವನ್ನ ಅಪೊಸ್ತಲ ಪೌಲ ಓಡಿ ಗೆದ್ದಿದ್ದಾನೆ. ನಾವು ಗೆಲ್ಲಬೇಕಂದ್ರೆ ಏನು ಮಾಡಬೇಕು ಅಂತಾನೂ ಹೇಳಿದ್ದಾನೆ. ಅದೇನಂದ್ರೆ ‘ನಾವು ಭಾರವಾದ ಎಲ್ಲವನ್ನ ತೆಗೆದುಹಾಕಬೇಕು ಮತ್ತು ಓಡಬೇಕಾದ ಓಟವನ್ನ ತಾಳ್ಮೆಯಿಂದ ಓಡಬೇಕು.’ಇಬ್ರಿಯ 12:1 ಓದಿ.

2. ‘ಭಾರವಾದ ಎಲ್ಲವನ್ನ ತೆಗೆದುಹಾಕಬೇಕು’ ಅನ್ನೋದ್ರ ಅರ್ಥ ಏನು?

2 ‘ಭಾರವಾದ ಎಲ್ಲವನ್ನ ತೆಗೆದುಹಾಕಬೇಕು’ ಅಂತ ಪೌಲ ಹೇಳಿದಾಗ ನಾವು ಯಾವ ಹೊರೆಯನ್ನೂ ಹೊತ್ಕೊಬಾರದು ಅಂತಾನಾ? ಇಲ್ಲ, ಅದ್ರ ಅರ್ಥ ಹಾಗಲ್ಲ. ಪೌಲ ಇಲ್ಲಿ ಏನು ಹೇಳ್ತಿದ್ದಾನೆ ಅಂದ್ರೆ ಬೇಡದಿರೋ ಭಾರನ ಬಿಸಾಕಿ ಓಡೋಕೆ ಹೇಳ್ತಿದ್ದಾನೆ. ಇಲ್ಲಾಂದ್ರೆ ನಾವು ಸ್ವಲ್ಪ ದೂರ ಓಡಿ ಸುಸ್ತಾಗಿಬಿಡ್ತೀವಿ. ಹಾಗಾಗಿ ಬೇಡದಿರೋ ಭಾರ ಯಾವುದು ಅಂತ ಗುರುತಿಸಿ ಅದನ್ನೆಲ್ಲ ಬಿಸಾಕಬೇಕು. ಆಗ ನಮಗೆ ತಾಳ್ಮೆಯಿಂದ ಓಡಕ್ಕಾಗುತ್ತೆ. ಹಾಗಂತ ನಾವು ಹೊತ್ಕೊಳ್ಳಬೇಕಾದ ಹೊರೆಯನ್ನೂ ಬಿಸಾಕಬೇಕು ಅಂತಲ್ಲ. ಅದನ್ನ ಬಿಸಾಕಿದ್ರೆ ನಾವು ಓಡೋ ಅರ್ಹತೆನೇ ಕಳ್ಕೊಂಡುಬಿಡ್ತೀವಿ. (2 ತಿಮೊ. 2:5) ಹಾಗಾದ್ರೆ ಯಾವುದು ಆ ಹೊರೆಗಳು?

3. (ಎ) ಗಲಾತ್ಯ 6:5ರಲ್ಲಿ ಹೇಳಿರೋ ತರ ನಾವು ಯಾವುದನ್ನ ಹೊರಬೇಕು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ ಮತ್ತು ಯಾಕೆ?

3 ಗಲಾತ್ಯ 6:5 ಓದಿ. ಪೌಲ ಇಲ್ಲಿ ನಾವು ಯಾವುದನ್ನ ಹೊರಬೇಕು ಅಂತ ಹೇಳ್ತಿದ್ದಾನೆ? “ಪ್ರತಿಯೊಬ್ಬನು ತನ್ನ ಹೊರೆಯನ್ನ ತಾನೇ ಹೊತ್ಕೊಬೇಕು” ಅಂತ ಹೇಳ್ತಿದ್ದಾನೆ. ಅಂದ್ರೆ, ನಮಗೊಂದು ಜವಾಬ್ದಾರಿ ಇದ್ರೆ ಅದನ್ನ ನಾವೇ ಹೊರಬೇಕು. ಆ ಜವಾಬ್ದಾರಿನ ಬೇರೆಯವರು ನಮಗೋಸ್ಕರ ಹೊರಬೇಕು ಅಂತ ಅಂದ್ಕೊಬಾರದು. ಈ ಲೇಖನದಲ್ಲಿ, ನಾವು ಹೊರಬೇಕಾಗಿರೋ ಹೊರೆ ಯಾವುದು? ಅದನ್ನ ಹೊರೋದು ಹೇಗೆ? ಬೇಡದಿರೋ ಭಾರ ಯಾವುದು? ಅದನ್ನ ಬಿಸಾಕೋದು ಹೇಗೆ? ಅಂತ ತಿಳ್ಕೊಳ್ಳೋಣ. ಇದ್ರಿಂದ ನಾವು ಜೀವದ ಓಟವನ್ನ ಚೆನ್ನಾಗಿ ಓಡಕ್ಕಾಗುತ್ತೆ.

ಹೊರಲೇಬೇಕಾದ ಹೊರೆ

ಹೊತ್ಕೊಳ್ಳಬೇಕಾದ ಹೊರೆ: ಸಮರ್ಪಣೆ ಮಾಡ್ಕೊಂಡಾಗ ಕೊಟ್ಟ ಮಾತು, ಕುಟುಂಬದ ಜವಾಬ್ದಾರಿಗಳು, ನಮ್ಮ ತೀರ್ಮಾನಗಳಿಗೆ ನಾವೇ ಜವಾಬ್ದಾರರು ಅಂತ ಒಪ್ಕೊಳ್ಳೋದು (ಪ್ಯಾರ 4-9 ನೋಡಿ)

4. ನಾವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಾಗ ಕೊಟ್ಟಿರೋ ಮಾತನ್ನ ಉಳಿಸ್ಕೊಳ್ಳೋದು ಯಾಕೆ ಭಾರ ಅಲ್ಲ? (ಚಿತ್ರನೂ ನೋಡಿ.)

4 ನಾವು ಸಮರ್ಪಣೆ ಮಾಡ್ಕೊಂಡಾಗ ಕೊಟ್ಟ ಮಾತು. ನಾವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಾಗ ‘ನಿನ್ನನ್ನೇ ಆರಾಧಿಸ್ತೀವಿ, ನಿನ್ನ ಇಷ್ಟಾನೇ ಮಾಡ್ತೀವಿ’ ಅಂತ ಮಾತು ಕೊಟ್ವಿ. ಅದ್ರ ಪ್ರಕಾರ ಜೀವನ ಮಾಡ್ತಾ ಆ ಮಾತನ್ನ ಉಳಿಸ್ಕೊಬೇಕು. ಇದು ಒಂದು ದೊಡ್ಡ ಜವಾಬ್ದಾರಿ. ಆದ್ರೆ ಭಾರ ಅಲ್ಲ. ಯಾಕಂದ್ರೆ ಯೆಹೋವ ನಮ್ಮನ್ನ ಸೃಷ್ಟಿ ಮಾಡಿರೋ ರೀತಿಯಿಂದ ಇದು ಗೊತ್ತಾಗುತ್ತೆ. (ಪ್ರಕ. 4:11) ಆತನ ಬಗ್ಗೆ ತಿಳ್ಕೊಬೇಕು, ಆತನನ್ನ ಆರಾಧನೆ ಮಾಡಬೇಕು ಅನ್ನೋ ಆಸೆಯನ್ನ ಆತನು ನಮ್ಮಲ್ಲಿ ಇಟ್ಟಿದ್ದಾನೆ. ಅದಕ್ಕೆ ನಾವು ಆತನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಳ್ಳೋಕೆ ಆಗಿದೆ. ಆತನ ಸೇವೆ ಮಾಡಿದಾಗ ನಮಗೆ ಖುಷಿ ಸಿಕ್ತಿದೆ. (ಕೀರ್ತ. 40:8) ಅಷ್ಟೇ ಅಲ್ಲ ದೇವರಿಗೆ ಏನಿಷ್ಟನೋ ಅದೇ ತರ ನಡ್ಕೊಂಡ್ರೆ, ಆತನ ಮಗನ ಮಾತನ್ನ ಕೇಳಿದ್ರೆ ಜೀವದ ಓಟ ಓಡೋಕೆ “ಹೊಸಬಲ” ಸಿಗುತ್ತೆ.—ಮತ್ತಾ. 11:28-30.

(ಪ್ಯಾರ 4-5 ನೋಡಿ)

5. ನಾವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಾಗ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಏನು ಮಾಡಬೇಕು? (1 ಯೋಹಾನ 5:3)

5 ಈ ಹೊರೆಯನ್ನ ಹೊತ್ಕೊಳ್ಳೋದು ಹೇಗೆ? ಇದಕ್ಕೆ ಎರಡು ವಿಷ್ಯ ಮಾಡಬೇಕು. ಒಂದು, ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಬೇಕು. ಆತನು ಇಲ್ಲಿ ತನಕ ನಮಗೆ ಏನೆಲ್ಲಾ ಒಳ್ಳೇದು ಮಾಡಿದ್ದಾನೋ ಅದ್ರ ಬಗ್ಗೆ ಮತ್ತು ಮುಂದೆ ಕೊಡೋ ಆಶೀರ್ವಾದಗಳ ಬಗ್ಗೆ ಯೋಚ್ನೆ ಮಾಡಬೇಕು. ಆಗ ನಮಗೆ ಆತನ ಮೇಲಿರೋ ಪ್ರೀತಿ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ ಆತನ ಮಾತು ಕೇಳೋಕೆ ಇನ್ನೂ ಸುಲಭ ಆಗುತ್ತೆ. (1 ಯೋಹಾನ 5:3 ಓದಿ.) ಎರಡು, ಯೇಸು ಕ್ರಿಸ್ತ ಏನು ಮಾಡಿದ್ನೋ ಅದನ್ನ ಮಾಡಬೇಕು. ಸಹಾಯ ಮಾಡಪ್ಪಾ ಅಂತ ಆತನು ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದನು. ಜೊತೆಗೆ, ಮುಂದೆ ಸಿಗೋ ಬಹುಮಾನದ ಮೇಲೆ ಮನಸ್ಸಿಟ್ಟನು. ಇದ್ರಿಂದ ಯೇಸುಗೆ ಯೆಹೋವ ಇಷ್ಟ ಪಡೋ ತರಾನೇ ಜೀವನ ಮಾಡಕ್ಕಾಯ್ತು. (ಇಬ್ರಿ. 5:7; 12:2) ಅದೇ ತರ ನಾವೂ ಪ್ರಾರ್ಥನೆ ಮಾಡಬೇಕು. ಜೊತೆಗೆ, ನಮಗೆ ಮುಂದೆ ಯೆಹೋವ ಶಾಶ್ವತ ಜೀವ ಕೊಟ್ಟೇ ಕೊಡ್ತಾನೆ ಅನ್ನೋದನ್ನ ಮನಸ್ಸಲ್ಲಿ ಇಡಬೇಕು. ಇದನ್ನೆಲ್ಲ ಮಾಡಿದ್ರೆ ನಾವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಾಗ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಆಗುತ್ತೆ.

6. ನಾವು ಯಾಕೆ ಕುಟುಂಬದ ಜವಾಬ್ದಾರಿಗಳಿಂದ ಕೈ ತೊಳ್ಕೊಬಾರದು? (ಚಿತ್ರನೂ ನೋಡಿ.)

6 ಕುಟುಂಬದ ಜವಾಬ್ದಾರಿಗಳು. ನಾವು ನಮ್ಮ ಕುಟುಂಬಕ್ಕಿಂತ ಯೆಹೋವನನ್ನ ಜಾಸ್ತಿ ಪ್ರೀತಿಸಬೇಕು. ಇದರರ್ಥ ನಾವು ಕುಟುಂಬದ ಜವಾಬ್ದಾರಿಗಳಿಂದ ಕೈ ತೊಳ್ಕೊಬೇಕು ಅಂತಲ್ಲ. (ಮತ್ತಾ. 10:37) ಯೆಹೋವ ಮತ್ತು ಯೇಸು ನಮ್ಮ ಪ್ರೀತಿಯನ್ನ ಸ್ವೀಕರಿಸಬೇಕಂದ್ರೆ ನಾವು ಕುಟುಂಬದ ಜವಾಬ್ದಾರಿಯನ್ನ ಮಾಡ್ಲೇಬೇಕು. (1 ತಿಮೊ. 5:4, 8) ಇದ್ರಿಂದ ನಾವು ಸಂತೋಷವಾಗಿ ಇರ್ತೀವಿ. ಸ್ವಲ್ಪ ಯೋಚ್ನೆ ಮಾಡಿ. ಗಂಡ-ಹೆಂಡ್ತಿ ಒಬ್ರಿಗೊಬ್ರು ಪ್ರೀತಿ-ಗೌರವ ತೋರಿಸಿದಾಗ, ಅಪ್ಪಅಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿ ಕೊಟ್ಟಾಗ, ಮಕ್ಕಳು ಅಪ್ಪಅಮ್ಮನ ಮಾತು ಕೇಳಿದಾಗ ಕುಟುಂಬದಲ್ಲಿ ಸಂತೋಷ ಇರುತ್ತೆ ತಾನೇ?—ಎಫೆ. 5:33; 6:1, 4.

(ಪ್ಯಾರ 6-7 ನೋಡಿ)

7. ಕುಟುಂಬದಲ್ಲಿ ನಿಮಗಿರೋ ಜವಾಬ್ದಾರಿಯನ್ನ ನಿಭಾಯಿಸೋಕೆ ನೀವೇನು ಮಾಡಬೇಕು?

7 ಈ ಹೊರೆಯನ್ನ ಹೊತ್ಕೊಳ್ಳೋದು ಹೇಗೆ? ಕುಟುಂಬದಲ್ಲಿ ಅಪ್ಪಅಮ್ಮಗೆ, ಮಕ್ಕಳಿಗೆ ಸಲಹೆ ಬೇಕು ಅಂದಾಗ ಕೆಲವರು ತಮಗೆ ಏನು ಸರಿ ಅನಿಸುತ್ತೋ ಅದನ್ನ ಮಾಡ್ತಾರೆ. ಇನ್ನು ಕೆಲವರು ಸಂಸ್ಕೃತಿ ಏನು ಹೇಳುತ್ತೋ ಅದನ್ನ ಮಾಡೋಣ ಅಂದ್ಕೊಳ್ತಾರೆ. ಇನ್ನು ಕೆಲವರು ಸಲಹೆಗಾರರ ಹತ್ರ ಹೋಗ್ತಾರೆ. (ಜ್ಞಾನೋ. 24:3, 4) ನಾವು ಇದನ್ನೆಲ್ಲ ಮಾಡೋ ಬದ್ಲು ಬೈಬಲಲ್ಲಿ, ಬೈಬಲ್‌ ಆಧಾರಿತ ಪುಸ್ತಕ-ಪತ್ರಿಕೆಗಳಲ್ಲಿ ಯಾವ ಸಲಹೆ ಇದೆ ಅಂತ ನೋಡಬೇಕು. ಯಾಕಂದ್ರೆ ದೇವರಿಗೆ ಏನಿಷ್ಟ, ಏನಿಷ್ಟ ಆಗಲ್ಲ ಅನ್ನೋದನ್ನ ಸರಿಯಾಗಿ ತಿಳ್ಕೊಂಡು ಪಾಲಿಸೋಕೆ ಇದು ನಮಗೆ ಸಹಾಯ ಮಾಡುತ್ತೆ. ಉದಾಹರಣೆಗೆ “ಸುಖೀ ಸಂಸಾರಕ್ಕೆ ಸಲಹೆಗಳು” ಅನ್ನೋ ಲೇಖನ ಸರಣಿ ನೋಡಿ. ಇದ್ರಲ್ಲಿ ದಂಪತಿಗಳಿಗೆ, ಅಪ್ಪಅಮ್ಮಂದಿರಿಗೆ, ಯುವ ಜನ್ರಿಗೆ ಬೇಕಾದ ಲೇಖನಗಳಿವೆ. ಅವ್ರಿಗೆ ಬರೋ ಸಮಸ್ಯೆಗಳನ್ನ ಹೇಗೆ ನಿಭಾಯಿಸೋದು ಅನ್ನೋದಕ್ಕೆ ಇದ್ರಲ್ಲಿ ಸಲಹೆಗಳು ಸಿಗುತ್ತೆ. b ನಿಮ್ಮ ಮನೆಯಲ್ಲಿ ಎಲ್ರೂ ಈ ಸಲಹೆಗಳನ್ನ ಪಾಲಿಸಿಲ್ಲಾಂದ್ರೂ ನೀವು ಪಾಲಿಸಿ. ಆಗ ನಿಮ್ಮ ಕುಟುಂಬಕ್ಕೆ ಪ್ರಯೋಜನನೂ ಆಗುತ್ತೆ. ಯೆಹೋವನ ಆಶೀರ್ವಾದನೂ ನಿಮ್ಮ ಮೇಲಿರುತ್ತೆ.—1 ಪೇತ್ರ 3:1, 2.

8. ನಾವು ತಗೊಳ್ಳೋ ತೀರ್ಮಾನಗಳಿಂದ ಏನಾಗಬಹುದು?

8 ನಾವು ಮಾಡೋ ತೀರ್ಮಾನಗಳಿಗೆ ನಾವೇ ಜವಾಬ್ದಾರರು. ಯೆಹೋವ ನಮಗೆ ತೀರ್ಮಾನ ತಗೊಳ್ಳೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ನಾವು ಒಳ್ಳೇ ತೀರ್ಮಾನಗಳನ್ನ ಮಾಡಿ ಚೆನ್ನಾಗಿ ಇರಬೇಕು ಅಂತ ಆತನು ಬಯಸ್ತಾನೆ. ಆದ್ರೆ ನಾವು ತಪ್ಪಾದ ತೀರ್ಮಾನ ಮಾಡಿದಾಗ ಅದ್ರಿಂದ ಏನಾದ್ರೂ ಕೆಟ್ಟದಾದ್ರೆ ಅದನ್ನ ಯೆಹೋವ ತಡಿಯಲ್ಲ. (ಗಲಾ. 6:7, 8) ಅದಕ್ಕೆ ನಾವು ತಪ್ಪಾದ ತೀರ್ಮಾನ ಮಾಡಿದಾಗ, ಯೋಚ್ನೆ ಮಾಡದೆ ಮಾತಾಡಿಬಿಟ್ಟಾಗ ಅಥವಾ ದುಡುಕಿ ಏನಾದ್ರೂ ಮಾಡಿದಾಗ ಅದಕ್ಕೆ ನಾವೇ ಜವಾಬ್ದಾರರು ಅಂತ ಒಪ್ಕೊಳ್ತೀವಿ. ನಮ್ಮಿಂದ ಏನಾದ್ರೂ ದೊಡ್ಡ ತಪ್ಪಾಗಿದ್ರೆ ‘ನಾನ್‌ ಹೀಗೆ ಮಾಡಬಾರದಿತ್ತು’ ಅಂತ ಮನಸ್ಸು ಚುಚ್ತಾ ಇರಬಹುದು. ಇದು ಒಂದು ರೀತಿಯಲ್ಲಿ ಒಳ್ಳೇದೇ. ಯಾಕಂದ್ರೆ ಆಗ್ಲೇ ನಾವು ನಮ್ಮ ತಪ್ಪನ್ನ ಒಪ್ಕೊಂಡು, ಅದನ್ನ ತಿದ್ಕೊಂಡು ಆ ತಪ್ಪನ್ನ ಮತ್ತೆ ಮಾಡದೇ ಇರ್ತೀವಿ. ಇದು ನಮಗೆ ಜೀವದ ಓಟವನ್ನ ಓಡ್ತಾ ಇರೋಕೆ ಸಹಾಯ ಮಾಡುತ್ತೆ.

(ಪ್ಯಾರ 8-9 ನೋಡಿ)

9. ನಾವು ತಪ್ಪಾದ ತೀರ್ಮಾನಗಳನ್ನ ಮಾಡಿದ್ರೆ ಏನು ಮಾಡಬೇಕು? (ಚಿತ್ರನೂ ನೋಡಿ.)

9 ಈ ಹೊರೆಯನ್ನ ಹೊತ್ಕೊಳ್ಳೋದು ಹೇಗೆ? ಒಂದು ತಪ್ಪಾದ ತೀರ್ಮಾನ ತಗೊಂಡ ಮೇಲೆ ಅದನ್ನ ಹಿಂದೆ ಹೋಗಿ ಸರಿ ಮಾಡಕ್ಕಾಗದೇ ಇರಬಹುದು. ಹಾಗಾಗಿ ಅದನ್ನ ಒಪ್ಕೊಳ್ಳಿ. ‘ನಾನು ಮಾಡಿದ್ದೇ ಸರಿ’ ಅಂತ ಸಮರ್ಥಿಸಿಕೊಳ್ಳೋಕೆ ಹೋಗಬೇಡಿ. ಹಾಗಂತ ಇದಕ್ಕೆಲ್ಲ ನಾನೇ ಕಾರಣ ಅಂತ ಕೊರಗ್ತಾನೂ ಇರಬೇಡಿ. ಬೇರೆಯವ್ರ ತಲೆ ಮೇಲೂ ಹಾಕಬೇಡಿ. ಅದ್ರ ಬದ್ಲು ನಿಮ್ಮ ತಪ್ಪನ್ನ ಒಪ್ಕೊಂಡು ಈಗ ಏನು ಮಾಡಕ್ಕಾಗುತ್ತೋ ಅದನ್ನ ಮಾಡಿ. ಮನಸ್ಸು ಚುಚ್ತಾ ಇದ್ರೆ ಯೆಹೋವ ದೇವರ ಹತ್ರ ತಪ್ಪನ್ನ ಒಪ್ಕೊಂಡು, ಕ್ಷಮೆ ಕೇಳಿ. (ಕೀರ್ತ. 25:11; 51:3, 4) ಬೇರೆಯವ್ರ ಮನಸ್ಸನ್ನ ನೋವು ಮಾಡಿರೋದಾದ್ರೆ ಅವ್ರ ಹತ್ರಾನೂ ಕ್ಷಮೆ ಕೇಳಿ. ಅಗತ್ಯ ಬಿದ್ರೆ ಹಿರಿಯರ ಸಹಾಯನೂ ಪಡ್ಕೊಳ್ಳಿ. (ಯಾಕೋ. 5:14, 15) ನೀವು ಮಾಡಿರೋ ತಪ್ಪಿಂದ ಪಾಠ ಕಲಿತು ಅದನ್ನ ಮತ್ತೆ ಮಾಡೋಕೆ ಹೋಗಬೇಡಿ. ಇದನ್ನೆಲ್ಲ ಮಾಡಿದಾಗ ಯೆಹೋವ ನಿಮಗೆ ಕರುಣೆ ತೋರಿಸ್ತಾನೆ. ನಿಮಗೆ ಬೇಕಾದ ಸಹಾಯವನ್ನ ಕೊಟ್ಟೇ ಕೊಡ್ತಾನೆ.—ಕೀರ್ತ. 103:8-13.

ಬಿಸಾಕಬೇಕಾಗಿರೋ ಭಾರ

10. ನಮ್ಮಿಂದ ಆಗದೇ ಇರೋದನ್ನ ಮಾಡೋದು ಯಾಕೆ ಒಂದು ಭಾರದ ತರ ಇದೆ? (ಗಲಾತ್ಯ 6:4)

10 ನಿಮ್ಮಿಂದ ಆಗದೆ ಇರೋದನ್ನ ಮಾಡ್ಲೇಬೇಕು ಅಂತ ಅಂದ್ಕೊಬೇಡಿ. ನಾವು ನಮ್ಮನ್ನ ಬೇರೆಯವ್ರ ಜೊತೆ ಹೋಲಿಸ್ಕೊಂಡ್ರೆ ಅವರು ಮಾಡೋದನ್ನೇ ನಾವೂ ಮಾಡಬೇಕು ಅಂತ ಅನಿಸಿಬಿಡುತ್ತೆ. ಇದು ಒಂಥರ ನಮ್ಮ ಮೇಲೆ ನಾವೇ ಭಾರ ಹಾಕೊಂಡ ಹಾಗೆ. (ಗಲಾತ್ಯ 6:4 ಓದಿ.) ಈ ತರ ನಮ್ಮನ್ನ ಬೇರೆಯವ್ರ ಜೊತೆ ಹೋಲಿಸ್ಕೊಳ್ತಾನೇ ಇದ್ರೆ ಬೇರೆಯವ್ರ ಮೇಲೆ ಹೊಟ್ಟೆಕಿಚ್ಚು ಪಡ್ತೀವಿ. ಅವ್ರ ಜೊತೆ ಪೈಪೋಟಿಗೆ ಇಳಿದುಬಿಡ್ತೀವಿ. (ಗಲಾ. 5:26) ಬೇರೆಯವರು ಸಾಧಿಸಿದ್ದನ್ನೇ ನಾವೂ ಸಾಧಿಸಬೇಕು ಅಂತ ಅಂದ್ಕೊಂಡ್ರೆ ನಮ್ಮ ಸನ್ನಿವೇಶವನ್ನ, ಸಾಮರ್ಥ್ಯವನ್ನ ಮರೆತುಬಿಡ್ತೀವಿ. ಅದು ಹೇಗಿರುತ್ತಂದ್ರೆ, ಬಿಸಾಕಬೇಕಾಗಿರೋ ಭಾರನ ಹೊತ್ಕೊಂಡು ಓಡೋಕೆ ಪ್ರಯತ್ನ ಮಾಡಿದ ಹಾಗೆ ಇರುತ್ತೆ. ಇದ್ರಿಂದ ನಮಗೇ ಹಾನಿ ಜಾಸ್ತಿ. ನಾವೆಷ್ಟೇ ಪ್ರಯತ್ನ ಮಾಡಿದ್ರೂ ಅಂದ್ಕೊಂಡಿದ್ದನ್ನ ಮಾಡಕ್ಕಾಗದೆ ಇದ್ದಾಗ ತುಂಬ ಕುಗ್ಗಿಹೋಗ್ತೀವಿ. ಅದಕ್ಕೆ ಬೈಬಲ್‌ “ಅಂದ್ಕೊಂಡಿದ್ದು ಆಗೋಕೆ ತಡ ಆದಾಗ ಬೇಜಾರಾಗುತ್ತೆ” ಅಂತ ಹೇಳುತ್ತೆ. (ಜ್ಞಾನೋ. 13:12) ಅಷ್ಟೇ ಅಲ್ಲ, ಇದು ನಮ್ಮ ಶಕ್ತಿಯೆನ್ನೆಲ್ಲಾ ಹೀರಿಬಿಡುತ್ತೆ. ನಮ್ಮ ಜೀವದ ಓಟ ಇನ್ನೂ ನಿಧಾನ ಆಗುತ್ತೆ.—ಜ್ಞಾನೋ. 24:10.

11. ನಿಮ್ಮಿಂದ ಆಗದೆ ಇರೋದನ್ನ ಮಾಡಬೇಕು ಅನ್ನೋ ಭಾರವನ್ನ ಬಿಸಾಕೋದು ಹೇಗೆ?

11 ಈ ಭಾರವನ್ನ ಬಿಸಾಕೋದು ಹೇಗೆ? ನಿಮ್ಮಿಂದ ಆಗದೆ ಇರೋದನ್ನ ಮಾಡೋಕೆ ಹೋಗಬೇಡಿ. ಯಾಕಂದ್ರೆ ಯೆಹೋವ ದೇವರು ಅದನ್ನ ಕೇಳಲ್ಲ. (2 ಕೊರಿಂ. 8:12) ಅಷ್ಟೇ ಅಲ್ಲ ನೀವೇನು ಮಾಡ್ತಾ ಇದ್ದೀರ, ಬೇರೆಯವರು ಏನು ಮಾಡ್ತಿದ್ದಾರೆ ಅಂತ ಹೋಲಿಸಿ ನೋಡಲ್ಲ. (ಮತ್ತಾ. 25:20-23) ಅದ್ರ ಬದ್ಲು ನೀವು ಮಾಡೋ ಪೂರ್ಣ ಪ್ರಾಣದ ಸೇವೆಯನ್ನ, ನಿಮ್ಮಲ್ಲಿರೋ ನಂಬಿಕೆಯನ್ನ, ನೀವು ತೋರಿಸೋ ತಾಳ್ಮೆಯನ್ನ ಆತನು ಅಮೂಲ್ಯವಾಗಿ ನೋಡ್ತಾನೆ. ಹಾಗಾಗಿ ನಿಮ್ಮ ಇತಿಮಿತಿಯನ್ನ ಮನಸ್ಸಲ್ಲಿಡಿ. ನಿಮ್ಮ ವಯಸ್ಸು, ಆರೋಗ್ಯ, ಸನ್ನಿವೇಶಕ್ಕೆ ತಕ್ಕ ಹಾಗೆ ಏನು ಮಾಡಕ್ಕಾಗುತ್ತೋ ಅದನ್ನ ಮಾಡಿ. ಬರ್ಜಿಲೈ ತರ ಒಂದು ನೇಮಕ ಸಿಕ್ಕಿದಾಗ ಅದನ್ನ ಮಾಡೋಕೆ ಆಗಿಲ್ಲಾಂದ್ರೆ ಬಿಟ್ಕೊಡಿ. (2 ಸಮು. 19:35, 36) ಮೋಶೆ ತರ ಬೇರೆಯವ್ರ ಸಹಾಯ ಕೇಳಿ, ಕೆಲವು ಜವಾಬ್ದಾರಿಗಳನ್ನ ಬೇರೆಯವ್ರಿಗೆ ವಹಿಸ್ಕೊಡಿ. (ವಿಮೋ. 18:21, 22) ಈ ರೀತಿ ನಿಮ್ಮ ಇತಿಮಿತಿ ಏನು, ನಿಮ್ಮಿಂದ ಏನು ಮಾಡೋಕೆ ಆಗುತ್ತೆ ಅನ್ನೋದನ್ನ ಅರ್ಥ ಮಾಡ್ಕೊಂಡ್ರೆ ಜೀವದ ಓಟವನ್ನ ಸುಸ್ತಾಗದೆ ಓಡೋಕೆ ಆಗುತ್ತೆ.

12. ಬೇರೆಯವರು ಮಾಡಿರೋ ತಪ್ಪು ತೀರ್ಮಾನಗಳಿಗೆ ನಾವು ಜವಾಬ್ದಾರರಾ? ವಿವರಿಸಿ.

12 ಬೇರೆಯವರು ಮಾಡಿರೋ ತಪ್ಪು ತೀರ್ಮಾನಗಳಿಗೆ ನೀವು ಜವಾಬ್ದಾರರು ಅಂತ ಅಂದ್ಕೊಬೇಡಿ. ಬೇರೆಯವರಿಗೋಸ್ಕರ ನಾವು ತೀರ್ಮಾನಗಳನ್ನ ಮಾಡಕ್ಕಾಗಲ್ಲ. ಜೊತೆಗೆ, ಬೇರೆಯವರು ತಪ್ಪು ತೀರ್ಮಾನ ಮಾಡಿದಾಗ ಅದ್ರಿಂದ ಆಗೋ ಕೆಟ್ಟ ಪರಿಣಾಮಗಳನ್ನ ತಡಿಯೋಕೂ ನಮ್ಮಿಂದ ಆಗಲ್ಲ. ಉದಾಹರಣೆಗೆ ಮಗ ಅಥವಾ ಮಗಳು ‘ಇನ್ಮುಂದೆ ನಾನು ಯೆಹೋವ ದೇವರ ಆರಾಧನೆ ಮಾಡಲ್ಲ’ ಅಂತ ತೀರ್ಮಾನ ತಗೊಬಹುದು. ಆಗ ಅಪ್ಪಅಮ್ಮನ ಹೃದಯನೇ ಒಡೆದು ಹೋಗುತ್ತೆ. ಮಕ್ಕಳು ಮಾಡಿರೋ ತೀರ್ಮಾನಕ್ಕೆ ನಾವು ಕಾರಣ ಅಂತ ಅಪ್ಪಅಮ್ಮ ಅಂದ್ಕೊಂಡ್ರೆ ಇದು ದೊಡ್ಡ ಭಾರ ಆಗಿರುತ್ತೆ. ಈ ಭಾರವನ್ನ ಅವರು ಹೊತ್ಕೊಬೇಕು ಅಂತ ಯೆಹೋವ ದೇವರು ಇಷ್ಟಪಡಲ್ಲ.—ರೋಮ. 14:12.

13. ಮಕ್ಕಳು ತಪ್ಪು ತೀರ್ಮಾನ ತಗೊಂಡಾಗ ಅಪ್ಪಅಮ್ಮ ಏನು ಮಾಡಬೇಕು?

13 ಈ ಭಾರವನ್ನ ಬಿಸಾಕೋದು ಹೇಗೆ? ಯೆಹೋವ ದೇವರು ಪ್ರತಿಯೊಬ್ರಿಗೂ ತೀರ್ಮಾನ ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ನಿಮ್ಮ ಮಕ್ಕಳಿಗೂ ಕೊಟ್ಟಿದ್ದಾನೆ. ಅವರು ಯೆಹೋವ ದೇವರನ್ನ ಆರಾಧನೆ ಮಾಡಬೇಕಾ ಬೇಡ್ವಾ ಅಂತ ಅವರೂ ತೀರ್ಮಾನ ಮಾಡಬೇಕಾಗುತ್ತೆ. ಹಾಗಾಗಿ ನೀವು ಅಪರಿಪೂರ್ಣ ಹೆತ್ತವರಾಗಿ ಇರೋದ್ರಿಂದ ನಿಮ್ಮಿಂದ ಎಷ್ಟಾಗುತ್ತೋ ಅಷ್ಟನ್ನೇ ಮಾಡಕ್ಕಾಗೋದು ಅಂತ ಯೆಹೋವ ದೇವರು ಅರ್ಥ ಮಾಡ್ಕೊಳ್ತಾನೆ. ನಿಮ್ಮ ಮಕ್ಕಳು ತಗೊಂಡಿರೋ ತೀರ್ಮಾನಕ್ಕೆ ಅವ್ರೇ ಜವಾಬ್ದಾರಿ, ನೀವಲ್ಲ ಅನ್ನೋದನ್ನ ನೆನಪಲ್ಲಿಡಿ. (ಜ್ಞಾನೋ. 20:11) ಆದ್ರೂ ನಿಮ್ಮ ಮಕ್ಕಳನ್ನ ಸರಿಯಾಗಿ ಬೆಳೆಸಿಲ್ಲ ಅಂತ ನಿಮ್ಮ ಮನಸ್ಸು ಕೊರೀತಾ ಇದ್ಯಾ? ಹಾಗಿದ್ರೆ ನಿಮಗೆ ಏನು ಅನಿಸ್ತಿದ್ಯೋ ಅದನ್ನ ಯೆಹೋವನ ಹತ್ರ ಹೇಳ್ಕೊಳ್ಳಿ. ನಿಮ್ಮಿಂದ ಏನಾದ್ರೂ ತಪ್ಪಾಗಿದ್ರೆ ಆತನ ಹತ್ರ ಕ್ಷಮೆ ಕೇಳಿ. ಆಗಿರೋದನ್ನ ನಿಮಗೆ ಹಿಂದೆ ಹೋಗಿ ಬದಲಾಯಿಸೋಕೆ ಆಗಲ್ಲ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ ಮಕ್ಕಳು ತಗೊಂಡಿರೋ ತಪ್ಪು ತೀರ್ಮಾನಗಳಿಂದ ಕೆಟ್ಟ ಪರಿಣಾಮ ಅನುಭವಿಸುವಾಗ ನೀವು ಅವ್ರನ್ನ ಕಾಪಾಡಬೇಕು ಅಂತಾನೂ ಯೆಹೋವ ಬಯಸಲ್ಲ. ನಿಮ್ಮ ಮಗ ಅಥವಾ ಮಗಳು ಯೆಹೋವನ ಹತ್ರ ವಾಪಸ್‌ ಬರೋಕೆ ಹೆಜ್ಜೆ ತಗೊಂಡ್ರೆ ಅವ್ರನ್ನ ಸೇರಿಸ್ಕೊಳ್ಳೋಕೆ ಯೆಹೋವ ದೇವರು ಕಾಯ್ತಾ ಇರ್ತಾನೆ.—ಲೂಕ 15:18-20.

14. ತುಂಬ ಸಮಯದಿಂದ ಮನಸ್ಸು ಚುಚ್ತಾ ಇರೋದಾದ್ರೆ ಆ ಭಾರವನ್ನ ನಾವು ಯಾಕೆ ಬಿಸಾಕಬೇಕು?

14 ತುಂಬಾ ಸಮಯದ ತನಕ ಮನಸ್ಸು ಚುಚ್ತಾ ಇರೋಕೆ ಬಿಡಬೇಡಿ. ಪಾಪ ಮಾಡಿದ ಮೇಲೆ ಹೀಗೆ ಅನಿಸೋದು ಸಹಜ. ಆದ್ರೆ ತುಂಬಾ ಸಮಯದ ತನಕ ಚುಚ್ತಾ ಇದ್ರೆ ಅದೊಂದು ಭಾರ ಆಗಿಬಿಡುತ್ತೆ. ಆ ಭಾರವನ್ನ ನಾವು ಬಿಸಾಕಬೇಕು. ಒಂದು ತಪ್ಪು ಮಾಡಿದ್ರೆ ಅದನ್ನ ಒಪ್ಕೊಂಡು, ಪಶ್ಚಾತ್ತಾಪಪಟ್ಟು, ಅದನ್ನ ಮತ್ತೆ ಮಾಡದೆ ಇರೋಕೆ ಎಲ್ಲಾ ಪ್ರಯತ್ನ ಮಾಡಿದಾಗ ಯೆಹೋವ ನಮ್ಮನ್ನ ಖಂಡಿತ ಕ್ಷಮಿಸಿರ್ತಾನೆ. (ಅ. ಕಾ. 3:19) ಈ ಎಲ್ಲಾ ಹೆಜ್ಜೆಗಳನ್ನ ತಗೊಂಡ ಮೇಲೂ ಮನಸ್ಸು ಚುಚ್ತಾ ಇರಬೇಕು ಅಂತ ಯೆಹೋವ ಇಷ್ಟಪಡಲ್ಲ. ಆ ತರ ಚುಚ್ತಾ ಇದ್ರೆ ಅದು ಎಂಥಾ ಅನಾಹುತಕ್ಕೆ ನಡೆಸುತ್ತೆ ಅಂತ ಆತನಿಗೆ ಚೆನ್ನಾಗಿ ಗೊತ್ತು. (ಕೀರ್ತ. 31:10) ಹಾಗಾಗಿ ನಾವು ಮಾಡಿದ ಪಾಪದ ಬಗ್ಗೆನೇ ಯೋಚ್ನೆ ಮಾಡ್ತಾ ದುಃಖದಲ್ಲಿ ಮುಳುಗಿಹೋದ್ರೆ ನಮ್ಮ ಓಟವನ್ನ ನಿಲ್ಲಿಸಿಬಿಡ್ತೀವಿ.—2 ಕೊರಿಂ. 2:7.

ನೀವು ಮನಸಾರೆ ಪಶ್ಚಾತ್ತಾಪ ಪಟ್ಟಮೇಲೆ ಯೆಹೋವನೇ ನಿಮ್ಮ ತಪ್ಪಿನ ಬಗ್ಗೆ ಯೋಚ್ನೆ ಮಾಡ್ತಿಲ್ಲ, ನೀವ್ಯಾಕೆ ಯೋಚ್ನೆ ಮಾಡ್ತೀರ? (ಪ್ಯಾರ 15 ನೋಡಿ)

15. ಮನಸ್ಸು ಇನ್ನೂ ಚುಚ್ತಾ ಇರೋದಾದ್ರೆ ಏನು ಮಾಡಬೇಕು? (1 ಯೋಹಾನ 3:19, 20) (ಚಿತ್ರನೂ ನೋಡಿ.)

15 ಈ ಭಾರವನ್ನ ಬಿಸಾಕೋದು ಹೇಗೆ? ನಿಮ್ಮ ಮನಸ್ಸು ತುಂಬ ಚುಚ್ತಾ ಇದ್ರೆ ಯೆಹೋವ ನಿಜವಾಗ್ಲೂ ಕ್ಷಮಿಸ್ತಾನೆ ಅನ್ನೋದನ್ನ ನೆನಪಿಸ್ಕೊಳ್ಳಿ. (ಕೀರ್ತ. 130:4) ಮನಸಾರೆ ಪಶ್ಚಾತ್ತಾಪ ಪಡುವವರ ಪಾಪಗಳನ್ನ “ಇನ್ನು ಯಾವತ್ತೂ ನೆನಪಿಸ್ಕೊಳ್ಳಲ್ಲ” ಅಂತ ಆತನೇ ಮಾತು ಕೊಟ್ಟಿದ್ದಾನೆ. (ಯೆರೆ. 31:34) ನಮ್ಮ ತಪ್ಪನ್ನ ದೇವರು ಒಂದು ಸಲ ಕ್ಷಮಿಸಿದ ಮೇಲೆ ಮತ್ತೆ ಅದನ್ನ ಕೆದಕಲ್ಲ. ಹಾಗಾಗಿ ‘ಯೆಹೋವ ನನ್ನನ್ನ ಇನ್ನೂ ಕ್ಷಮಿಸಿಲ್ಲ. ಅದಕ್ಕೆ ನಾನು ಮಾಡಿದ ತಪ್ಪಿನ ಕೆಟ್ಟ ಪರಿಣಾಮಗಳನ್ನ ಇನ್ನೂ ಅನುಭವಿಸ್ತಾ ಇದ್ದೀನಿ’ ಅಂತ ಅಂದ್ಕೊಬೇಡಿ. ನಡೆದು ಹೋಗಿರೋ ವಿಷ್ಯದ ಬಗ್ಗೆನೇ ಯೋಚ್ನೆ ಮಾಡ್ತಾ ಕೊರಗ್ತಾ ಇರಬೇಡಿ. ಹಾಗೇನಾದ್ರೂ ಮಾಡಿದ್ರೆ ಯೆಹೋವನ ಸೇವೆಯಲ್ಲಿ ಏನು ಮಾಡಬೇಕು ಅಂತ ಅಂದ್ಕೊಂಡಿದ್ದೀರೋ ಅದನ್ನ ಮಾಡಕ್ಕಾಗಲ್ಲ. ಯೆಹೋವ ದೇವರೇ ನಿಮ್ಮ ತಪ್ಪಿನ ಬಗ್ಗೆ ಯೋಚ್ನೆ ಮಾಡ್ತಾ ಇರಲ್ಲ ಅಂದ್ಮೇಲೆ ನೀವು ಯೋಚ್ನೆ ಮಾಡ್ತಾ ಇರೋದು ಸರಿನಾ?1 ಯೋಹಾನ 3:19, 20 ಓದಿ.

ಜೀವದ ಓಟದಲ್ಲಿ ಗೆಲ್ಲಿ!

16. ಜೀವದ ಓಟದಲ್ಲಿ ಓಡ್ತಾ ಇರುವವ್ರಿಗೆ ಏನು ಗೊತ್ತಿರಬೇಕು?

16 ನಾವು ‘ಜೀವದ ಓಟವನ್ನ ಗೆಲ್ಲೋ ತರ ಓಡಬೇಕು.’ (1 ಕೊರಿಂ. 9:24) ಆ ರೀತಿ ಓಡಬೇಕಂದ್ರೆ ನಾವು ಹೊತ್ಕೊಳ್ಳಬೇಕಾದ ಹೊರೆ ಯಾವುದು, ಬಿಸಾಕಬೇಕಾಗಿರೋ ಭಾರ ಯಾವುದು ಅಂತ ನಮಗೆ ಚೆನ್ನಾಗಿ ಗೊತ್ತಿರಬೇಕು. ಅದ್ರಲ್ಲಿ ಕೆಲವನ್ನ ಈ ಲೇಖನದಲ್ಲಿ ನೋಡಿದ್ವಿ. ಇದಷ್ಟೇ ಅಲ್ಲ ಇನ್ನೂ ಕೆಲವು ಭಾರ ಇರಬಹುದು. ಉದಾಹರಣೆಗೆ “ಮಿತಿಮೀರಿ ತಿನ್ನೋದ್ರಲ್ಲಿ, ವಿಪರೀತ ಕುಡಿಯೋದ್ರಲ್ಲಿ ಮತ್ತು ಜೀವನದ ಚಿಂತೆಗಳಲ್ಲೇ ಹೃದಯ ಭಾರ ಮಾಡ್ಕೊಳ್ಳಬೇಡಿ” ಅಂತ ಯೇಸು ಹೇಳಿದ್ದಾನೆ. (ಲೂಕ 21:34, ಪಾದಟಿಪ್ಪಣಿ) ಬೈಬಲಲ್ಲಿ ಇನ್ನೂ ಕೆಲವು ವಚನಗಳನ್ನ ಓದುವಾಗ ನಾವು ಬಿಸಾಕಬೇಕಾಗಿರೋ ಭಾರ ಯಾವುದು ಅಂತ ಗೊತ್ತಾಗುತ್ತೆ. ಅದನ್ನ ಬಿಸಾಕಿದ್ರೆ ಜೀವದ ಓಟವನ್ನ ಓಡೋಕೆ ಸುಲಭ ಆಗುತ್ತೆ.

17. ಜೀವದ ಓಟವನ್ನ ಗೆದ್ದೇ ಗೆಲ್ತೀವಿ ಅಂತ ನಾವು ಹೇಗೆ ಗ್ಯಾರಂಟಿಯಾಗಿ ಹೇಳಬಹುದು?

17 ನಾವು ಜೀವದ ಓಟನ ಗೆದ್ದೇ ಗೆಲ್ತೀವಿ. ಯಾಕಂದ್ರೆ ಆ ಓಟವನ್ನ ಓಡೋಕೆ ಯೆಹೋವ ನಮಗೆ ಶಕ್ತಿ ಕೊಡ್ತಾನೆ. (ಯೆಶಾ. 40:29-31) ಹಾಗಾಗಿ ಓಟ ನಿಧಾನ ಆಗೋಕೆ ಬಿಡಬಾರದು. ಅಪೊಸ್ತಲ ಪೌಲನ ತರ ಓಡೋಣ. ಅವನ ಮುಂದೆ ಇದ್ದ ಬಹುಮಾನವನ್ನ ಪಡಿಯೋಕೆ ಶ್ರಮ ಹಾಕಿ ಓಡಿದ. (ಫಿಲಿ. 3:13, 14) ನಮಗೋಸ್ಕರ ಬೇರೆಯವರು ಓಡಕ್ಕಾಗಲ್ಲ. ಅದಕ್ಕೆ ಪೌಲನ ತರ ನಾವು ಕೂಡ ಓಡೋಕೆ ನಮ್ಮ ಪ್ರಯತ್ನನೆಲ್ಲ ಹಾಕೋಣ. ಹೊತ್ಕೊಳ್ಳಬೇಕಾದ ಹೊರೆಯನ್ನ ಹೊತ್ಕೊಂಡು, ಬೇಡವಾದ ಭಾರವನ್ನ ಬಿಸಾಕಿ ಓಡೋಣ. ಯೆಹೋವ ನಮ್ಮ ಜೊತೆ ಇದ್ರೆ ಜೀವದ ಓಟವನ್ನ ತಾಳ್ಮೆಯಿಂದ ಓಡಿ ಗೆದ್ದೇ ಗೆಲ್ತೀವಿ!—ಕೀರ್ತ. 68:19.

ಗೀತೆ 45 ಮುನ್ನಡೆ!

a ಕ್ರೈಸ್ತರಾದ ನಾವು ಜೀವದ ಓಟವನ್ನ ಓಡ್ತಾ ಇದ್ದೀವಿ. ಓಟಗಾರರ ತರ ನಾವೂ ಕೆಲವೊಂದು ಹೊರೆಗಳನ್ನ ಹೊತ್ಕೊಬೇಕಾಗುತ್ತೆ. ಉದಾಹರಣೆಗೆ, ಯೆಹೋವನಿಗೆ ನಾವು ಸಮರ್ಪಣೆ ಮಾಡ್ಕೊಂಡಾಗ ಕೊಟ್ಟಿರೋ ಮಾತು, ಕುಟುಂಬದ ಜವಾಬ್ದಾರಿಗಳು ಮತ್ತು ನಾವು ತಗೊಂಡಿರೋ ತೀರ್ಮಾನಗಳಿಂದ ಆಗೋ ಕೆಟ್ಟ ಪರಿಣಾಮಗಳು. ಆದ್ರೆ ಕೆಲವೊಂದು ಭಾರ ನಮ್ಮ ಓಟನ ನಿಧಾನ ಮಾಡಿಬಿಡುತ್ತೆ. ಬೇಡದಿರೋ ಆ ಭಾರ ಯಾವುದು? ಬನ್ನಿ ನೋಡೋಣ.