ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಅಪಾತ್ರ ದಯೆಯಿಂದಾಗಿ ಬಿಡುಗಡೆ ಹೊಂದಿದ್ದೇವೆ

ದೇವರ ಅಪಾತ್ರ ದಯೆಯಿಂದಾಗಿ ಬಿಡುಗಡೆ ಹೊಂದಿದ್ದೇವೆ

“ನೀವು . . . ದೇವರ ಅಪಾತ್ರ ದಯೆಯ ಕೆಳಗಿರುವುದರಿಂದ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸಬಾರದು.”—ರೋಮ. 6:14.

ಗೀತೆಗಳು: 2, 61

1, 2. ರೋಮನ್ನರಿಗೆ 5:12 ನಮಗೆ ಯಾವೆಲ್ಲಾ ವಿಧಗಳಲ್ಲಿ ಸಹಾಯ ಮಾಡುತ್ತದೆ?

“ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ರೋಮನ್ನರಿಗೆ 5:12 ಹೇಳುತ್ತದೆ. ನಮಗೆ ತುಂಬ ಚೆನ್ನಾಗಿ ಗೊತ್ತಿರುವ ವಚನ ಇದು. ಜನರಿಗೆ ಬೈಬಲ್‌ ಬಗ್ಗೆ ಕಲಿಸುವಾಗಲೂ ತುಂಬ ಸಾರಿ ಇದನ್ನು ಉಪಯೋಗಿಸುತ್ತೇವೆ.

2 ಈ ವಚನವನ್ನು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮತ್ತು ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕಗಳಲ್ಲಿ ಅನೇಕ ಸಲ ಬಳಸಲಾಗಿದೆ. ಈ ಪುಸ್ತಕಗಳಲ್ಲಿರುವ 3, 5, 6⁠ನೇ ಅಧ್ಯಾಯಗಳನ್ನು ನಮ್ಮ ಮಕ್ಕಳೊಂದಿಗೆ ಮತ್ತು ಬೇರೆಯವರೊಂದಿಗೆ ಅಧ್ಯಯನ ಮಾಡುವಾಗ ನಾವು ರೋಮನ್ನರಿಗೆ 5:12⁠ನ್ನು ಓದಿರುತ್ತೇವೆ. ಈಗ ಭೂಮಿ ಯಾಕೆ ಪರದೈಸ್‌ ಆಗಿಲ್ಲ, ನಮಗೆ ಯೇಸುವಿನ ಬಲಿದಾನ ಯಾಕೆ ಬೇಕಿತ್ತು, ನಾವು ಯಾಕೆ ಸಾಯುತ್ತೇವೆ ಎಂಬ ವಿಷಯಗಳನ್ನು ವಿವರಿಸಲು ಈ ವಚನ ಸಹಾಯಮಾಡುತ್ತದೆ. ಆದರೆ ಈ ವಚನ ಯೆಹೋವನೊಂದಿಗೆ ನಮಗಿರುವ ಸಂಬಂಧವನ್ನು ಬಲಪಡಿಸಲು ಸಹಾಯಮಾಡುತ್ತದೆ ಅಂತ ಗೊತ್ತಿತ್ತಾ? ಆತನಿಗೆ ಇಷ್ಟವಾಗುವ ವಿಷಯಗಳನ್ನು ಮಾಡುತ್ತಾ ಇರಲು ಮತ್ತು ಆತನು ವಾಗ್ದಾನ ಮಾಡಿರುವ ವಿಷಯಗಳನ್ನು ಎದುರುನೋಡಲು ಇದು ಸಹಾಯಮಾಡುತ್ತದೆ.

3. ನಮ್ಮ ಪರಿಸ್ಥಿತಿ ಏನಂತ ಸ್ವಲ್ಪ ವಿವರಿಸುತ್ತೀರಾ?

3 ಆದರೆ ಒಂದು ವಿಷಯ ಅಂತೂ ನಿಜ, ನಾವೆಲ್ಲರೂ ಪಾಪಿಗಳು. ದಿನಾ ನಮ್ಮಿಂದ ಏನಾದರೊಂದು ತಪ್ಪು ಆಗಿಬಿಡುತ್ತದೆ. ಆದರೆ ಯೆಹೋವನು ಕರುಣಾಮಯಿ. ನಾವು ಅಪರಿಪೂರ್ಣರು ಅಂತ ಆತನಿಗೆ ಗೊತ್ತು. ನಾವು ತಪ್ಪು ಮಾಡಿದರೆ ಒಬ್ಬ ಪ್ರೀತಿಯ ತಂದೆಯಂತೆ ಆತನು ಕ್ಷಮಿಸಲು ಸಿದ್ಧನಾಗಿದ್ದಾನೆ. (ಕೀರ್ತ. 103:13, 14) ಅಷ್ಟೇ ಅಲ್ಲ, ಯೇಸು ಹೇಳಿದಂತೆ ನಾವು ‘ನಮ್ಮ ಪಾಪಗಳನ್ನು ಕ್ಷಮಿಸಪ್ಪಾ’ ಎಂದು ದೇವರನ್ನು ಬೇಡಿಕೊಳ್ಳುತ್ತೇವೆ. (ಲೂಕ 11:2-4) ಹೀಗಿರುವಾಗ ನಾವು ಹಿಂದೆ ಮಾಡಿದ ತಪ್ಪುಗಳನ್ನು ಬಗ್ಗೆ ಯೋಚಿಸಿ ಕೊರಗುವ ಅಗತ್ಯವಿಲ್ಲ. ಯಾಕೆಂದರೆ ಯೆಹೋವನು ನಮ್ಮನ್ನು ಖಂಡಿತ ಕ್ಷಮಿಸಿದ್ದಾನೆ. ಈಗ ನಾವು ಯೆಹೋವನು ನಮ್ಮನ್ನು ಕ್ಷಮಿಸಲು ಕಾರಣವೇನು ಅಂತ ನೋಡೋಣ.

ಯೆಹೋವನು ನಮ್ಮನ್ನು ಕ್ಷಮಿಸಲು ಕಾರಣ

4, 5. (ಎ) ಪಾಪಿಗಳಾಗಿರುವ ನಮ್ಮನ್ನು ಕ್ಷಮಿಸಲು ದೇವರಿಗೆ ಯಾವ ಕಾರಣ ಇದೆ? (ಬಿ) “ಅಪಾತ್ರ ದಯೆ” ಅಂದರೆ ಏನು?

4 ಯೆಹೋವನು ನಮ್ಮನ್ನು ಕ್ಷಮಿಸಲು ಕಾರಣ ಏನೆಂದು ಅರ್ಥಮಾಡಿಕೊಳ್ಳಲು ರೋಮನ್ನರಿಗೆ ಪುಸ್ತಕ ಸಹಾಯ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ 6⁠ನೇ ಅಧ್ಯಾಯ ತುಂಬ ಸಹಾಯಕರ. 3⁠ನೇ ಅಧ್ಯಾಯದಲ್ಲಿ ಪೌಲನು ಹೇಳುವುದು: “ಎಲ್ಲರೂ ಪಾಪಮಾಡಿದ್ದಾರೆ . . . ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಹೊಂದುವ ಮೂಲಕ ಅವರು ದೇವರ ಅಪಾತ್ರ ದಯೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡುವುದು ಆತನ ಉಚಿತ ವರವಾಗಿದೆ.” (ರೋಮ. 3:23, 24) ಇಲ್ಲಿ “ಅಪಾತ್ರ ದಯೆ” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದದ ಅರ್ಥವೇನು? ಅದರರ್ಥ ಯಾವ ಪ್ರಯೋಜನವನ್ನೂ ಎದುರುನೋಡದೆ ತೋರಿಸಲಾಗುವ ಅಪಾರ ದಯೆ. ನಾವದಕ್ಕೆ ಅರ್ಹರಲ್ಲದಿದ್ದರೂ ಸಿಗುವ ದಯೆ ಎಂದು ಅರ್ಥ.

5 ಬೈಬಲಿನಲ್ಲಿ ಈ ಗ್ರೀಕ್‌ ಪದವನ್ನು, ಯೆಹೋವ ಮತ್ತು ಯೇಸು ಮಾನವಕುಲವನ್ನು ಪಾಪ ಮತ್ತು ಮರಣದಿಂದ ರಕ್ಷಿಸಲು ಏನು ಮಾಡಿದ್ದಾರೋ ಅದಕ್ಕೆ ಸೂಚಿಸಲು ಹೆಚ್ಚಾಗಿ ಬಳಸಲಾಗಿದೆ ಎಂದು ಒಬ್ಬ ವಿದ್ವಾಂಸರು ಹೇಳಿದ್ದಾರೆ. ಆದ್ದರಿಂದ ನೂತನ ಲೋಕ ಭಾಷಾಂತರ ಆ ಗ್ರೀಕ್‌ ಪದವನ್ನು “ಅಪಾತ್ರ ದಯೆ” ಎಂದು ಭಾಷಾಂತರಿಸಿದೆ. ದೇವರು ಹೇಗೆ ಅಪಾತ್ರ ದಯೆಯನ್ನು ತೋರಿಸಿದ್ದಾನೆ? ಅದರಿಂದ ನಮಗೆ ಈಗ ಏನು ಪ್ರಯೋಜನ ಮತ್ತು ಮುಂದಕ್ಕೆ ಯಾವ ಪ್ರಯೋಜನ ಸಿಗುತ್ತದೆ?

6. ದೇವರ ಅಪಾತ್ರ ದಯೆಯಿಂದ ಯಾರಿಗೆ ಪ್ರಯೋಜನ ಸಿಗುತ್ತದೆ ಮತ್ತು ಹೇಗೆ?

6 ಆದಾಮ ಪಾಪ ಮಾಡಿದ್ದರಿಂದ ಪಾಪ ಮತ್ತು ಮರಣ ನಮ್ಮೆಲ್ಲರಿಗೂ ಬಂತು. ಆದ್ದರಿಂದಲೇ ಬೈಬಲು ‘ಒಬ್ಬ ಮನುಷ್ಯನ ಅಪರಾಧದಿಂದ ಮರಣವು ಅರಸನಂತೆ ಆಳ್ವಿಕೆ ನಡೆಸಿದೆ’ ಎಂದು ಹೇಳುತ್ತದೆ. ಆದರೆ ಯೆಹೋವನು ತುಂಬ ಅಪಾತ್ರ ದಯೆಯನ್ನು ತೋರಿಸಿ “ಯೇಸು ಕ್ರಿಸ್ತನೆಂಬ ಒಬ್ಬ ವ್ಯಕ್ತಿಯ” ಮೂಲಕ ಮಾನವರೆಲ್ಲರನ್ನು ರಕ್ಷಿಸಲು ಬೇಕಾದ ಏರ್ಪಾಡು ಮಾಡಿದನು. (ರೋಮ. 5:12, 15, 17) “ಒಬ್ಬ ವ್ಯಕ್ತಿಯ ವಿಧೇಯತೆಯಿಂದ ಅನೇಕರು ನೀತಿವಂತರಾಗಿ ಪರಿಗಣಿಸಲ್ಪಡುವರು.” ಅವರು “ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವನ್ನು” ಪಡೆಯುವರು.—ರೋಮ. 5:19, 21.

7. ಯೆಹೋವ ಮತ್ತು ಯೇಸು ಮಾಡಿದ ತ್ಯಾಗ ಅಪಾತ್ರವೂ ದಯಾಭರಿತವೂ ಆಗಿದೆ ಅಂತ ಯಾಕೆ ಹೇಳಬಹುದು?

7 ನಿಜ ಹೇಳಬೇಕಾದರೆ ನಮ್ಮನ್ನು ರಕ್ಷಿಸಲಿಕ್ಕಾಗಿ ತನ್ನ ಒಬ್ಬನೇ ಮಗನನ್ನು ಯೆಹೋವನು ಕೊಡಲೇಬೇಕು ಅಂತೇನಿರಲಿಲ್ಲ. ಆದರೆ ನಮ್ಮನ್ನು ಪಾಪ ಮರಣದಿಂದ ಬಿಡಿಸಲಿಕ್ಕಾಗಿ ತನ್ನ ಮಗನನ್ನು ಕೊಟ್ಟು ನಮ್ಮ ಮೇಲೆ ಅಪಾರವಾದ ದಯೆಯನ್ನು ತೋರಿಸಿದ್ದಾನೆ. ಇಷ್ಟು ದೊಡ್ಡ ತ್ಯಾಗವನ್ನು ಅವರು ನಮಗೋಸ್ಕರ ಮಾಡಲು ನಾವು ಅರ್ಹರಾಗಿರಲಿಲ್ಲ. ಆದರೆ ನಮ್ಮ ಪಾಪ ಕ್ಷಮೆಗಾಗಿ ಮತ್ತು ನಾವು ನಿತ್ಯಜೀವ ಪಡೆಯಲಿಕ್ಕಾಗಿ ದೇವರು ಮತ್ತು ಯೇಸು ಮಾಡಿದ ಮಹಾ ತ್ಯಾಗವನ್ನು ನಾವು ಮಾನ್ಯಮಾಡುವುದಿಲ್ಲವೇ? ಇದನ್ನು ಎಷ್ಟು ಮಾನ್ಯಮಾಡುತ್ತೇವೆಂದು ನಾವು ಜೀವಿಸುವ ವಿಧದಿಂದ ತೋರಿಸೋಣ.

ದೇವರ ಅಪಾತ್ರ ದಯೆಗೆ ನಾವು ಆಭಾರಿ

8. ಯಾವ ಮನೋಭಾವ ನಮ್ಮಲ್ಲಿ ಬರದಂತೆ ನೋಡಿಕೊಳ್ಳಬೇಕು?

8 ನಾವು ಮಾಡುವ ಗಂಭೀರ ಪಾಪಗಳನ್ನು ಸಹ ದೇವರು ಕ್ಷಮಿಸಲು ಸಿದ್ಧನಿದ್ದಾನೆ ಎಂದು ನಮಗೆ ಗೊತ್ತು. ಆದರೆ ಏನಾದರೂ ತಪ್ಪು ಮಾಡಿಬಿಟ್ಟು ‘ಯೆಹೋವನು ಹೇಗೂ ಕ್ಷಮಿಸಿಬಿಡುತ್ತಾನೆ’ ಎಂದು ಯೋಚಿಸುವುದು ಸರಿಯಲ್ಲ. ದೇವರ ಅಪಾತ್ರ ದಯೆಯನ್ನು ಅಲಕ್ಷ್ಯ ಭಾವದಿಂದ ನೋಡಬಾರದು. ಒಂದನೇ ಶತಮಾನದಲ್ಲಿ ಅಪೊಸ್ತಲರು ಬದುಕಿದ್ದಾಗಲೇ ಕೆಲವು ಕ್ರೈಸ್ತರು ಇಂಥ ಮನೋಭಾವ ಬೆಳೆಸಿಕೊಂಡಿದ್ದರು. (ಯೂದ 4 ಓದಿ.) ಇಂದು ಬೇರೆಯವರ ಪ್ರಭಾವಕ್ಕೆ ಒಳಗಾಗಿ ನಮ್ಮಲ್ಲೂ ಅಂಥ ಮನೋಭಾವ ಬಂದುಬಿಡಬಹುದು. ಹಾಗಾಗಿ ನಾವು ಈ ವಿಷಯದಲ್ಲಿ ಜಾಗ್ರತೆ ವಹಿಸಬೇಕು.

9, 10. ಪೌಲ ಮತ್ತು ಬೇರೆ ಕ್ರೈಸ್ತರು ಪಾಪ ಮತ್ತು ಮರಣದಿಂದ ಹೇಗೆ ಬಿಡುಗಡೆ ಹೊಂದಿದರು?

9 ‘ಪಾಪ ಮಾಡಿದರೂ ಹೋಗ್ಲಿ ಪಾಪ ಅಂತ ದೇವರು ಬಿಟ್ಟುಬಿಡುತ್ತಾನೆ’ ಅಂತ ಯೋಚಿಸಬಾರದು ಎಂದು ಪೌಲನು ಆಗಿನ ಕ್ರೈಸ್ತರಿಗೆ ಹೇಳಿದನು. ಅವರು “ಪಾಪದ ಪಾಲಿಗೆ ಸತ್ತಿರುವುದರಿಂದ” ಹಾಗೆ ಯೋಚಿಸುವುದು ತಪ್ಪೆಂದು ಹೇಳಿದನು. (ರೋಮನ್ನರಿಗೆ 6:1, 2 ಓದಿ.) ಪೌಲ ಈ ಮಾತನ್ನು ಹೇಳಿದಾಗ ಅವರಿನ್ನು ಬದುಕಿದ್ದರು. ಹಾಗಾದರೆ ಅವರು ‘ಪಾಪದ ಪಾಲಿಗೆ ಸತ್ತುಹೋದರು’ ಎಂದು ಹೇಗೆ ಹೇಳಬಹುದು?

10 ಯೇಸುವಿನ ಬಲಿದಾನದ ಮೂಲಕ ದೇವರು ಒಂದನೇ ಶತಮಾನದಲ್ಲಿದ್ದ ಪೌಲ ಮತ್ತು ಬೇರೆ ಕ್ರೈಸ್ತರ ಪಾಪಗಳನ್ನು ಕ್ಷಮಿಸಿದ್ದನು. ಅವರು ತನ್ನ ಪುತ್ರರಾಗುವಂತೆ ಯೆಹೋವನು ಪವಿತ್ರಾತ್ಮದಿಂದ ಅಭಿಷೇಕಿಸಿದನು. ಅವರು ಕೊನೆಯ ತನಕ ನಂಬಿಗಸ್ತರಾಗಿದ್ದರೆ ಸ್ವರ್ಗದಲ್ಲಿ ಯೇಸುವಿನೊಂದಿಗೆ ಆಳ್ವಿಕೆ ನಡೆಸುವರು. ಆದರೆ ಅವರಿನ್ನೂ ಭೂಮಿಯ ಮೇಲೆಯೇ ಇದ್ದಾಗ ಪೌಲ ಅವರು ‘ಪಾಪದ ಪಾಲಿಗೆ ಸತ್ತುಹೋಗಿದ್ದರು’ ಎಂದು ಹೇಳಿದನು. ಯಾಕೆ? ಯಾಕೆಂದರೆ, ಅವರ ಜೀವನ ರೀತಿ ಸಂಪೂರ್ಣವಾಗಿ ಬದಲಾಗಿತ್ತು. ಇದನ್ನು ಅರ್ಥಮಾಡಿಕೊಳ್ಳಲು ಪೌಲನು ಒಂದು ಹೋಲಿಕೆಯನ್ನು ಮಾಡುತ್ತಾನೆ. ಅವನು ಯೇಸುವಿನ ಬಗ್ಗೆ ಮಾತಾಡುತ್ತಾ, ಅವನು ಸತ್ತ ಮೇಲೆ ಆತ್ಮಜೀವಿಯಾಗಿ ಎಬ್ಬಿಸಲ್ಪಟ್ಟನು. ಇದಾದ ನಂತರ ಮರಣಕ್ಕೆ ಯೇಸುವಿನ ಮೇಲೆ ಅಧಿಕಾರ ಇರಲಿಲ್ಲ. ಇದೇ ರೀತಿಯಲ್ಲಿ ಕ್ರೈಸ್ತರು ಸಹ ಒಂದರ್ಥದಲ್ಲಿ ಸತ್ತರು. ಅವರು ಕ್ರೈಸ್ತರಾದ ಮೇಲೆ ಅವರ ಜೀವನ ಸಂಪೂರ್ಣವಾಗಿ ಬದಲಾಗಿತ್ತು. ಅವರಿನ್ನು ಮುಂದೆ ಪಾಪ ತಮ್ಮ ಮೇಲೆ ಅಧಿಕಾರ ನಡೆಸುವಂತೆ ಬಿಡಲಿಲ್ಲ. ದೇವರು ಬಯಸುವ ತರ ಬದುಕಲು ಆಸೆಪಟ್ಟರು. ಹೀಗೆ ಅವರು ‘ಪಾಪದ ಪಾಲಿಗೆ ಸತ್ತುಹೋಗಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸಲಿದ್ದರು.’—ರೋಮ. 6:9, 11.

11. ಇಂದು ಕ್ರೈಸ್ತರು ಹೇಗೆ ‘ಪಾಪದ ಪಾಲಿಗೆ ಸತ್ತುಹೋಗಿದ್ದಾರೆ’?

11 ನಮ್ಮ ಕುರಿತು ಏನು? ನಾವು ‘ಪಾಪದ ಪಾಲಿಗೆ ಸತ್ತುಹೋಗಿದ್ದೇವೆ’ ಎಂದು ಹೇಗೆ ಹೇಳಬಹುದು? ಸತ್ಯ ಕಲಿಯುವ ಮುಂಚೆ ನಾವು ಅನೇಕ ತಪ್ಪುಗಳನ್ನು ಮಾಡಿರಬಹುದು. ಆಗ ನಾವು ನಮ್ಮನ್ನು “ಅಶುದ್ಧತೆಗೂ ಅಧರ್ಮಕ್ಕೂ ದಾಸರನ್ನಾಗಿ ಒಪ್ಪಿಸಿಕೊಟ್ಟಂತೆಯೇ” ಇತ್ತು. ಅಂದರೆ ನಾವು ‘ಪಾಪಕ್ಕೆ ದಾಸರಾಗಿದ್ವಿ’ ಅಂತ ಅರ್ಥ. (ರೋಮ. 6:19, 20) ಆದರೆ ಸತ್ಯ ಕಲಿತಾಗ ಬೇಕಾದ ಬದಲಾವಣೆಗಳನ್ನು ಮಾಡಿಕೊಂಡು ಸಮರ್ಪಣೆ ಮಾಡಿಕೊಂಡೆವು. ‘ಏನೇ ಆದರೂ ಯೆಹೋವನು ಹೇಳಿದಂತೆ ನಡಕೊಳ್ಳುತ್ತೇನೆ, ಆತನಿಗೆ ಮೆಚ್ಚಿಕೆಯಾಗುವ ವಿಧದಲ್ಲಿ ಜೀವಿಸುತ್ತೇನೆ’ ಎಂದು ತೀರ್ಮಾನಿಸಿದೆವು. ಹೀಗೆ ‘ಪಾಪದಿಂದ ಬಿಡುಗಡೆಮಾಡಲ್ಪಟ್ಟದ್ದರಿಂದ ನೀತಿಗೆ ದಾಸರಾದ್ವಿ.’—ರೋಮ. 6:17, 18.

12. ನಾವು ಯಾವ ನಿರ್ಧಾರ ತೆಗೆದುಕೊಳ್ಳಬೇಕು?

12 ನಾವು ನೀತಿಗೆ ದಾಸರಾದ ಮೇಲೂ ಪಾಪಕ್ಕೆ ಬಲಿಬೀಳುವ ಸಾಧ್ಯತೆ ಇದೆ. ಆದ್ದರಿಂದ ನಾವು ತಪ್ಪಾದ ಆಸೆಗಳಿಗೆ ಮಣಿಯಬೇಕಾ ಅಥವಾ ಅಂಥ ಆಸೆಗಳನ್ನು ನಿಯಂತ್ರಿಸಬೇಕಾ ಅನ್ನೋ ನಿರ್ಧಾರವನ್ನು ಮಾಡಬೇಕು. ‘ತಪ್ಪಾದ ಆಸೆ ಮೊಳಕೆ ಒಡೆಯುವಾಗಲೇ ಅದನ್ನು ಚಿವುಟಿ ಹಾಕುತ್ತೇನಾ ಅಥವಾ ಅದು ದೊಡ್ಡ ಮರವಾಗಿ ತಪ್ಪಿಗೆ ನಡೆಸಲು ಬಿಡುತ್ತೇನಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ಈ ಸಂಬಂಧದಲ್ಲಿ ಪೌಲನು ಕೊಡುವ ಬುದ್ಧಿವಾದ ಏನೆಂದರೆ: “ನೀವು ನಿಮ್ಮ ಮರ್ತ್ಯ ದೇಹಗಳ ಆಶೆಗಳಿಗೆ ವಿಧೇಯರಾಗುವ ಮೂಲಕ ಪಾಪವು ನಿಮ್ಮ ಮೇಲೆ ಅರಸನಂತೆ ಆಳ್ವಿಕೆ ನಡೆಸುವುದನ್ನು ಮುಂದುವರಿಸಲು ಬಿಡಬೇಡಿರಿ.” (ರೋಮ. 6:12) ದೇವರು ನಮಗೆ ತೋರಿಸಿದ ಅಪಾತ್ರ ದಯೆಗೆ ನಾವು ಆಭಾರಿಯಾಗಿದ್ದರೆ ಆತನಿಗೆ ಮೆಚ್ಚಿಕೆಯಾದ ವಿಷಯವನ್ನು ಮಾಡಲು ಸಕಲ ಪ್ರಯತ್ನ ಮಾಡುತ್ತೇವೆ.

ನೀವು ಪಾಪವನ್ನು ಜಯಿಸಬಲ್ಲಿರಿ

13. ಯಾವುದು ಸರಿಯೋ ಅದನ್ನು ನಮ್ಮಿಂದ ಮಾಡಲು ಆಗುತ್ತದೆ ಎಂದು ಹೇಗೆ ಖಂಡಿತವಾಗಿ ಹೇಳಬಹುದು?

13 ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರು ಸತ್ಯ ಕಲಿಯುವ ಮುಂಚೆ ನಾಚಿಕೆಪಡಬೇಕಾದ ವಿಷಯಗಳನ್ನು ಮಾಡುತ್ತಿದ್ದರು. (ರೋಮ. 6:21) ಕೊರಿಂಥ ಸಭೆಯಲ್ಲಿದ್ದವರ ಬಗ್ಗೆ ಹೇಳಬೇಕಾದರೆ, ಅವರಲ್ಲಿ ಕೆಲವರು ಕಳ್ಳರು, ಸಲಿಂಗ ಕಾಮಿಗಳು, ವ್ಯಭಿಚಾರಿಗಳು, ವಿಗ್ರಹಾರಾಧಕರು, ಕುಡುಕರು ಆಗಿದ್ದರು. ಆದರೆ ಯೆಹೋವನ ಬಗ್ಗೆ ತಿಳಿದುಕೊಂಡು ಆತನ ಮೇಲೆ ಪ್ರೀತಿ ಬೆಳೆಸಿಕೊಂಡಾಗ ಬದಲಾದರು. (1 ಕೊರಿಂ. 6:9-11) ರೋಮ್‌ನಲ್ಲಿದ್ದ ಕ್ರೈಸ್ತರು ಸಹ ಇಂಥ ಬದಲಾವಣೆಗಳನ್ನು ಮಾಡಬೇಕಿತ್ತು. ಆದ್ದರಿಂದ “ನಿಮ್ಮ ಅಂಗಗಳನ್ನು ಅನೀತಿಯ ಆಯುಧಗಳಾಗಿರಲಿಕ್ಕಾಗಿ ಅವುಗಳನ್ನು ಪಾಪಕ್ಕೆ ಒಪ್ಪಿಸುತ್ತಾ ಇರಬೇಡಿ; ಅದಕ್ಕೆ ಬದಲಾಗಿ ಸತ್ತವರೊಳಗಿಂದ ಜೀವಿತರಾದವರಂತೆ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಡಿರಿ ಮತ್ತು ನಿಮ್ಮ ಅಂಗಗಳನ್ನು ಸಹ ನೀತಿಯ ಆಯುಧಗಳಾಗಿರಲಿಕ್ಕಾಗಿ ದೇವರಿಗೆ ಒಪ್ಪಿಸಿಕೊಡಿರಿ” ಎಂದು ಪೌಲ ಹೇಳಿದನು. (ರೋಮ. 6:13) ಯಾವುದು ಸರಿಯೋ ಅದನ್ನು ಅವರಿಂದ ಮಾಡಲು ಆಗುತ್ತದೆ ಮತ್ತು ಬೇಕಾದ ಬದಲಾವಣೆಗಳನ್ನು ಮಾಡಿದರೆ ಅವರಿಗೆ ದೇವರ ಅಪಾತ್ರ ದಯೆ ಸಿಗುತ್ತದೆ ಎಂದು ಪೌಲನಿಗೆ ಚೆನ್ನಾಗಿ ಗೊತ್ತಿತ್ತು.

14, 15. ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

14 ಇಂದು ಸಹ ಇದು ಸತ್ಯ. ಕೆಲವರು ಸತ್ಯಕ್ಕೆ ಬರುವ ಮುಂಚೆ ಕೊರಿಂಥದವರಂತೆ ಇದ್ದಿರಬಹುದು. ಆದರೆ ಯೆಹೋವನ ಬಗ್ಗೆ ತಿಳಿದುಕೊಂಡ ಮೇಲೆ ಬದಲಾಗಿದ್ದಾರೆ, ‘ಶುದ್ಧೀಕರಿಸಲ್ಪಟ್ಟಿದ್ದಾರೆ.’ ಯೆಹೋವನಿಗೆ ಇಷ್ಟವಾದದ್ದನ್ನು ಮಾಡಲು ನಾವೆಲ್ಲರೂ ಒಂದಲ್ಲಾ ಒಂದು ಬದಲಾವಣೆ ಮಾಡಿದ್ದೇವೆ. ದೇವರು ತೋರಿಸಿದ ಅಪಾತ್ರ ದಯೆಯನ್ನು ನಾವು ತುಂಬ ಮಾನ್ಯಮಾಡುತ್ತೇವೆ ಎಂದು ಸತ್ಯ ಕಲಿತ ನಂತರವೂ ತೋರಿಸಲು ಬಯಸುತ್ತೇವೆ. ಆದ್ದರಿಂದ ನಮ್ಮಲ್ಲಿರುವ ತಪ್ಪಾದ ಆಸೆಗಳನ್ನು ಕಿತ್ತೆಸೆದು ನಮ್ಮ ಇಡೀ ಜೀವನವನ್ನು ಯೆಹೋವನ ಸೇವೆಯಲ್ಲಿ ಉಪಯೋಗಿಸಲು ತೀರ್ಮಾನ ಮಾಡಿಕೊಂಡಿದ್ದೇವೆ.

15 ಕೊರಿಂಥ ಸಭೆಯಲ್ಲಿದ್ದ ಕೆಲವರು ಮಾಡುತ್ತಿದ್ದ ಗಂಭೀರ ತಪ್ಪುಗಳನ್ನು ನಾವು ಮಾಡುವುದಿಲ್ಲ. ಯಾಕೆಂದರೆ ನಾವು ಅಂಥ ಪಾಪಗಳನ್ನು ಮಾಡುತ್ತಾ ಇದ್ದರೆ ದೇವರು ನಮ್ಮನ್ನು ಕ್ಷಮಿಸಲ್ಲ ಎಂದು ನಮಗೆ ಗೊತ್ತು. ಆದರೆ ಜನ ಯಾವುದನ್ನು ಚಿಕ್ಕಪುಟ್ಟ ತಪ್ಪು ಅಂತ ನೆನಸುತ್ತಾರೋ ಅದರ ಬಗ್ಗೆ ಏನು? ನಾವು ಎಲ್ಲಾ ವಿಷಯಗಳಲ್ಲಿ ಯೆಹೋವನಿಗೆ ವಿಧೇಯರಾಗಿರಲು ಬಯಸುತ್ತೇವಾ?—ರೋಮ. 6:14, 17.

16. ನಾವು ಚಿಕ್ಕಪುಟ್ಟ ತಪ್ಪುಗಳನ್ನು ಸಹ ಮಾಡಬಾರದೆಂದು ಪೌಲನ ಉದಾಹರಣೆ ಹೇಗೆ ತೋರಿಸುತ್ತದೆ?

16 ಅಪೊಸ್ತಲ ಪೌಲನ ಉದಾಹರಣೆ ತೆಗೆದುಕೊಳ್ಳಿ. “ನಾನು ಏನು ಮಾಡುತ್ತಿದ್ದೇನೆ ಎಂಬುದು ನನಗೆ ತಿಳಿಯದು. ನಾನು ಏನು ಬಯಸುತ್ತೇನೋ ಅದನ್ನು ಮಾಡದೆ, ಏನನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ” ಎಂದು ಹೇಳಿದ್ದಾನೆ. (ರೋಮ. 7:14, 15) 1 ಕೊರಿಂಥ 6:9-11⁠ರಲ್ಲಿ ತಿಳಿಸಲಾಗಿರುವ ದೊಡ್ಡ ಪಾಪಗಳನ್ನು ಅವನು ಮಾಡುತ್ತಿರಲಿಲ್ಲವಾದರೂ ಬೇರೆ ತಪ್ಪುಗಳನ್ನು ಮಾಡುತ್ತೇನೆ ಎಂದು ಒಪ್ಪಿಕೊಂಡ. (ರೋಮನ್ನರಿಗೆ 7:21-23 ಓದಿ.) ಯೆಹೋವನಿಗೆ ಇಷ್ಟವಾದದ್ದನ್ನು ಮಾಡುವ ಕಡುಬಯಕೆ ಅವನಲ್ಲಿತ್ತು. ಆದ್ದರಿಂದ ತಪ್ಪಾದ ವಿಷಯಗಳಿಂದ ದೂರವಿರಲು ದೊಡ್ಡ ಹೋರಾಟವನ್ನೇ ಮಾಡಿದ. ನಾವು ಸಹ ಅವನಂತೆಯೇ ಇದ್ದು ಯಾವಾಗಲೂ ಯೆಹೋವನಿಗೆ ಇಷ್ಟವಾದದ್ದನ್ನೇ ಮಾಡುತ್ತಿರಬೇಕು.

17. ನೀವು ಯಾಕೆ ಪ್ರಾಮಾಣಿಕರಾಗಿರಲು ಬಯಸುತ್ತೀರಿ?

17 ಇದಕ್ಕೊಂದು ಉದಾಹರಣೆ. ಯೆಹೋವನ ಆರಾಧಕರಾಗಿರುವ ನಾವು ಪ್ರಾಮಾಣಿಕರಾಗಿರಬೇಕೆಂದು ನಮಗೆ ಗೊತ್ತು. (ಜ್ಞಾನೋಕ್ತಿ 14:5; ಎಫೆಸ 4:25 ಓದಿ.) ‘ಸುಳ್ಳಿಗೆ ತಂದೆಯಾಗಿರುವ’ ಸೈತಾನನಂತೆ ನಾವಿರಲು ಬಯಸುವುದಿಲ್ಲ. ಸುಳ್ಳು ಹೇಳಿದ್ದರಿಂದ ಅನನೀಯ ಮತ್ತು ಸಪ್ಫೈರಳ ಗತಿ ಏನಾಯಿತೆಂದು ಸಹ ನಮಗೆ ಗೊತ್ತು. (ಯೋಹಾ. 8:44; ಅ. ಕಾ. 5:1-11) ಆದ್ದರಿಂದ ಒಬ್ಬ ಪ್ರಾಮಾಣಿಕ ವ್ಯಕ್ತಿ ಸುಳ್ಳು ಹೇಳಲ್ಲ. ಆದರೆ ನಾವು ದೇವರ ಅಪಾತ್ರ ದಯೆಯನ್ನು ನಿಜಕ್ಕೂ ಮಾನ್ಯಮಾಡುತ್ತೇವಾದರೆ ಬೇರೆ ವಿಧಗಳಲ್ಲೂ ಪ್ರಾಮಾಣಿಕರಾಗಿರುತ್ತೇವೆ.

18, 19. ಸುಳ್ಳು ಹೇಳದೇನೇ ಅಪ್ರಾಮಾಣಿಕರಾಗಲು ಸಾಧ್ಯನಾ? ವಿವರಿಸಿ.

18 ಒಬ್ಬ ವ್ಯಕ್ತಿ ಸುಳ್ಳು ಹೇಳದಿದ್ದರೂ ಅಪ್ರಾಮಾಣಿಕನಾಗಲು ಸಾಧ್ಯ. ಆಶ್ಚರ್ಯ ಆಗುತ್ತಾ? ಯೆಹೋವನು ಇಸ್ರಾಯೇಲ್ಯರಿಗೆ “[ನೀವು] ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು” ಎಂದು ಹೇಳಿದ್ದನು. ಅವರು ಯಾಕೆ ಇದನ್ನೆಲ್ಲಾ ಮಾಡಬಾರದಿತ್ತು? ಯೆಹೋವನು ಹೇಳಿದ್ದು: “ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” (ಯಾಜ. 19:2, 11) ನಾವು ಸುಳ್ಳು ಹೇಳದೇನೇ ಸತ್ಯವಲ್ಲದ ವಿಷಯವನ್ನು ಬೇರೆಯವರು ನಂಬುವಂತೆ ಮಾಡಿದರೆ ಅದು ಅಪ್ರಾಮಾಣಿಕತೆ!

ನೀವು ಸುಳ್ಳು ಹೇಳಲ್ಲ, ಮೋಸ ಮಾಡಲ್ಲ ಎಂದು ತೀರ್ಮಾನ ಮಾಡಿಕೊಂಡಿದ್ದೀರಾ? (ಪ್ಯಾರ 19 ನೋಡಿ)

19 ಒಬ್ಬ ವ್ಯಕ್ತಿ ತನ್ನ ಧಣಿಗೆ ‘ನಾನಿವತ್ತು ಸ್ವಲ್ಪ ಬೇಗ ಹೋಗ್ಬಹುದಾ, ಹಾಸ್ಪಿಟಲ್‌ಗೆ ಹೋಗಬೇಕು’ ಅಂತ ಹೇಳುತ್ತಾನೆ. ಆದರೆ ಇದು ನಿಜವಾದ ಕಾರಣ ಅಲ್ಲ. ಅವನು ಹಾಸ್ಪಿಟಲ್‌ಗೇನೋ ಹೋಗುತ್ತಾನೆ ಆದರೆ ಅದು ಕೆಲವು ನಿಮಿಷದ ಕೆಲಸ. ಅಲ್ಲಿಗೆ ಹೋಗಿ ಮಾತ್ರೆನೋ, ತನ್ನ ರಿಪೋರ್ಟನ್ನೋ ತರಬೇಕು. ಅವನು ಬೇಗ ಹೋಗುತ್ತಿರುವುದು ಊರಿಗೆ ಹೋಗಲಿಕ್ಕೆ. ಇವನನ್ನು ಪ್ರಾಮಾಣಿಕ ವ್ಯಕ್ತಿ ಎಂದು ಹೇಳಕ್ಕಾಗುತ್ತಾ ಅಥವಾ ಇವನು ಮೋಸಮಾಡುತ್ತಿದ್ದಾನಾ? ಸತ್ಯವಲ್ಲದ ವಿಷಯವನ್ನು ಬೇರೆಯವರು ನಂಬುವಂತೆ ಮಾಡಿದ. ಕೆಲವೊಮ್ಮೆ ಜನರು ತಮಗೆ ಏನು ಬೇಕೋ ಅದನ್ನು ಪಡೆಯಲು ಅಥವಾ ದಂಡನೆಯಿಂದ ತಪ್ಪಿಸಿಕೊಳ್ಳಲು ಬೇರೆಯವರಿಗೆ ಮೋಸ ಮಾಡುತ್ತಾರೆ. ಆದರೆ “ಮೋಸಮಾಡಬಾರದು” ಎಂಬ ಯೆಹೋವನ ಮಾತನ್ನು ನಾವು ಪಾಲಿಸುತ್ತೇವೆ. ಆತನು ಯಾವುದು ಪವಿತ್ರ, ಯಾವುದು ಸರಿ ಎಂದು ಹೇಳುತ್ತಾನೋ ಅದನ್ನು ಮಾಡಲು ಬಯಸುತ್ತೇವೆ.—ರೋಮ. 6:19.

20, 21. ದೇವರ ಅಪಾತ್ರ ದಯೆಯನ್ನು ನಾವು ಮಾನ್ಯಮಾಡುವವರಾದರೆ ಯಾವ ವಿಷಯಗಳಿಂದ ದೂರವಿರುತ್ತೇವೆ?

20 ವ್ಯಭಿಚಾರ, ಕುಡಿಕತನದಂಥ ಗಂಭೀರ ಪಾಪಗಳಿಂದ ನಾವು ದೂರ ಇರುತ್ತೇವೆ ನಿಜ. ಆದರೆ ಇದು ಸಾಕಾಗಲ್ಲ. ಯೆಹೋವನಿಗೆ ಇಷ್ಟವಾಗದ ಎಲ್ಲಾ ವಿಷಯಗಳಿಂದ ದೂರವಿರಬೇಕು. ನಾವು ಲೈಂಗಿಕ ಅನೈಕತೆಯಿಂದ ದೂರವಿರುವುದು ಮಾತ್ರವಲ್ಲ, ಅನೈತಿಕ ಮನೋರಂಜನೆಯಿಂದಲೂ ದೂರವಿರಬೇಕು. ಕುಡಿಕತನದಿಂದ ದೂರವಿರುವುದು ಮಾತ್ರವಲ್ಲ, ಅಮಲೇರುವ ಮಟ್ಟಿಗೂ ಕುಡಿಯಬಾರದು. ಇಂಥ ಪ್ರಲೋಭನೆಗಳನ್ನು ಎದುರಿಸುವುದು ಕಷ್ಟವಾದರೂ ಖಂಡಿತ ಜಯಿಸಬಹುದು.

21 ಪೌಲನಿಟ್ಟ ಅದೇ ಗುರಿಯನ್ನು ನಾವೂ ಇಡೋಣ. ‘ನಾವು ನಮ್ಮ ಮರ್ತ್ಯ ದೇಹಗಳ ಆಶೆಗಳಿಗೆ ವಿಧೇಯರಾಗುವ ಮೂಲಕ ಪಾಪವು ನಮ್ಮ ಮೇಲೆ ಅರಸನಂತೆ ಆಳ್ವಿಕೆ ನಡೆಸುವುದನ್ನು ಮುಂದುವರಿಸಲು ಬಿಡಲ್ಲ.’ (ರೋಮ. 6:12; 7:18-20) ‘ಇನ್ನು ಮುಂದೆ ನಾನು ತಪ್ಪೇ ಮಾಡಲ್ಲ’ ಎಂದು ಯಾರೂ ಹೇಳಕ್ಕಾಗಲ್ಲ. ಆದರೆ ಎಲ್ಲಾ ರೀತಿಯ ಪಾಪದಿಂದ ದೂರವಿರಲು ಹೋರಾಡುವಾಗ ಯೆಹೋವ ಮತ್ತು ಯೇಸು ತೋರಿಸಿದ ಅಪಾತ್ರ ದಯೆಯನ್ನು ನಾವು ನಿಜಕ್ಕೂ ಮಾನ್ಯಮಾಡುತ್ತೇವೆಂದು ತೋರಿಸುತ್ತೇವೆ.

22. ನಾವು ಯೆಹೋವನ ಅಪಾತ್ರ ದಯೆಯನ್ನು ನಿಜಕ್ಕೂ ಮಾನ್ಯಮಾಡುವುದಾದರೆ ನಮಗೆ ಯಾವ ಆಶೀರ್ವಾದ ಸಿಗುತ್ತದೆ?

22 ಯೆಹೋವನು ನಮ್ಮ ತಪ್ಪು-ಪಾಪಗಳನ್ನು ಕ್ಷಮಿಸಿದ್ದಾನೆ, ಮುಂದೆಯೂ ಕ್ಷಮಿಸುತ್ತಾನೆ. ಆತನ ಅಪಾತ್ರ ದಯೆ ಇಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತು? ಆದ್ದರಿಂದ ಜನ ಒಂದು ವಿಷಯವನ್ನು ತಪ್ಪಲ್ಲ ಅಂತ ನೆನಸಿದರೂ ಯೆಹೋವನು ಅದನ್ನು ತಪ್ಪು ಅಂತ ಹೇಳುವುದಾದರೆ ಅದರಿಂದ ದೂರ ಇರೋಣ. ಆಗ ನಮಗೆ ಯಾವ ಆಶೀರ್ವಾದ ಸಿಗುತ್ತದೆ? ಪೌಲನ ಮಾತುಗಳನ್ನು ಗಮನಿಸಿ: “ಈಗ ನೀವು ಪಾಪದಿಂದ ಬಿಡುಗಡೆಮಾಡಲ್ಪಟ್ಟು ದೇವರಿಗೆ ದಾಸರಾಗಿರುವುದರಿಂದ ನೀವು ಪವಿತ್ರತೆಯ ರೂಪದಲ್ಲಿ ಫಲವನ್ನು ಪಡೆಯುತ್ತಿದ್ದೀರಿ ಮತ್ತು ಕೊನೆಯ ಪರಿಣಾಮವು ನಿತ್ಯಜೀವವಾಗಿರುತ್ತದೆ.”—ರೋಮ. 6:22.