‘ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ!’
“ನಿಮ್ಮ ಚಿಂತೆಯನ್ನೆಲ್ಲಾ [ಯೆಹೋವನ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.
1, 2. (ಎ) ಚಿಂತೆ ಎಲ್ಲೆಲ್ಲೂ ಇರಲು ಕಾರಣ ಏನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
ಇಂದು ಸೈತಾನ ‘ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಿದ್ದಾನೆ.’ (1 ಪೇತ್ರ 5:8; ಪ್ರಕ. 12:17) ಇದರ ಫಲಿತಾಂಶ? ಎಲ್ಲೆಲ್ಲೂ ಚಿಂತೆ, ಒತ್ತಡ! ಇದು ದೇವ ಜನರಿಗೂ ತಪ್ಪಿದ್ದಲ್ಲ. ಹಿಂದಿನ ಕಾಲದ ದೇವರ ಸೇವಕರಿಗೂ ಚಿಂತೆ ಇತ್ತು. ಕೆಲವೊಮ್ಮೆ ಚಿಂತೆ ದಾವೀದನನ್ನು ಕಿತ್ತು ತಿನ್ನುತ್ತಿತ್ತು ಎಂದು ಬೈಬಲ್ ಹೇಳುತ್ತದೆ. (ಕೀರ್ತ. 13:2) ಅಪೊಸ್ತಲ ಪೌಲನಿಗೆ “ಎಲ್ಲ ಸಭೆಗಳ ಕುರಿತಾದ ಚಿಂತೆ” ಕಾಡುತ್ತಿತ್ತು. (2 ಕೊರಿಂ. 11:28) ಚಿಂತೆಗಳ ಸುಳಿಯಲ್ಲಿ ನಾವು ಸಿಕ್ಕಿಕೊಂಡಾಗ ಏನು ಮಾಡಬೇಕು?
2 ಹಿಂದಿನ ಕಾಲದ ತನ್ನ ಸೇವಕರು ಚಿಂತೆಯಿಂದ ಮುಕ್ತರಾಗಲು ಯೆಹೋವನು ಸಹಾಯ ಮಾಡಿದನು. ಇಂದು ಸಹ ಅದೇ ರೀತಿ ನಮಗೂ ಸಹಾಯ ಮಾಡುತ್ತಾನೆ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂದು ಬೈಬಲೇ ಹೇಳುತ್ತದೆ. (1 ಪೇತ್ರ 5:7) ಆದರೆ ನಿಮ್ಮ ಚಿಂತೆಯನ್ನು ಯೆಹೋವ ದೇವರ ಮೇಲೆ ಹಾಕುವುದು ಹೇಗೆ? (1) ಪ್ರಾರ್ಥನೆ ಮಾಡಿ, (2) ದೇವರ ವಾಕ್ಯವನ್ನು ಓದಿ, ಧ್ಯಾನ ಮಾಡಿ, (3) ಪವಿತ್ರಾತ್ಮ ಕೊಡು ಎಂದು ಯೆಹೋವನನ್ನು ಬೇಡಿ, (4) ನಿಮ್ಮ ಭಾವನೆಯನ್ನು ಅರ್ಥಮಾಡಿಕೊಳ್ಳುವವರ ಹತ್ತಿರ ಮಾತಾಡಿ. ಈ ನಾಲ್ಕು ಅಂಶಗಳನ್ನು ಈ ಲೇಖನದಲ್ಲಿ ನಾವು ಚರ್ಚಿಸಲಿದ್ದೇವೆ. ಇದರಲ್ಲಿ ಪ್ರತಿಯೊಂದು ಅಂಶವನ್ನು ಚರ್ಚಿಸುವಾಗ ನೀವು ಯಾವ ಅಂಶದಲ್ಲಿ ಪ್ರಗತಿಮಾಡಬೇಕು ಎಂದು ಗಮನಿಸಿ.
“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು”
3. ನಮ್ಮ “ಚಿಂತಾಭಾರವನ್ನು ಯೆಹೋವನ ಮೇಲೆ” ಹಾಕುವುದು ಹೇಗೆ?
3 ಚಿಂತೆ ಬೆನ್ನು ಹತ್ತಿದಾಗ ನಾವು ಮಾಡಬೇಕಾದ ಮೊದಲನೇ ವಿಷಯ ಪ್ರಾರ್ಥನೆ. ನಿಮಗೆ ಹೇಗನಿಸುತ್ತಿದೆ, ಏನಾಗುತ್ತಿದೆ ಅನ್ನುವುದನ್ನೆಲ್ಲಾ ತನಗೆ ಹೇಳಬೇಕೆಂದು ಯೆಹೋವ ದೇವರು ಬಯಸುತ್ತಾನೆ. ಕೀರ್ತನೆಗಾರನಾದ ದಾವೀದನಿಗೆ ಚಿಂತೆ ಕಾಡಿದಾಗ “ದೇವರೇ, ನನ್ನ ಮೊರೆಯನ್ನು ಲಾಲಿಸು” ಎಂದು ಬೇಡಿದನು. ಮುಂದೆ ಅದೇ ಕೀರ್ತನೆಯಲ್ಲಿ ಅವನಂದದ್ದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.” (ಕೀರ್ತ. 55:1, 22) ಸಮಸ್ಯೆಯಿಂದ ಹೊರಗೆ ಬರಲು ನಿಮ್ಮ ಕೈಲಾದ ಎಲ್ಲವನ್ನು ಮಾಡಿ. ಸಮಸ್ಯೆ ಬಗ್ಗೆನೇ ಚಿಂತಿಸುತ್ತಾ ಇರುವ ಬದಲು ಯೆಹೋವನಿಗೆ ಪ್ರಾರ್ಥಿಸಿ. ಆದರೆ ಪ್ರಾರ್ಥನೆ ನಿಜಕ್ಕೂ ನಮಗೆ ಸಹಾಯ ಮಾಡುತ್ತಾ? ಚಿಂತೆಗಳ ಅಲೆಯಲ್ಲಿ ಕೊಚ್ಚಿಹೋಗದೆ ಇರಲು ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?—ಕೀರ್ತ. 94:18, 19.
4. ಚಿಂತೆ ನಮ್ಮನ್ನು ಕಾಡುವಾಗ ಪ್ರಾರ್ಥನೆ ಮಾಡುವುದು ತುಂಬ ಮುಖ್ಯ ಯಾಕೆ?
4 ಫಿಲಿಪ್ಪಿ 4:6, 7 ಓದಿ. ನಾವು ಮನಸ್ಸುಬಿಚ್ಚಿ ಎಲ್ಲವನ್ನೂ ಯೆಹೋವನಿಗೆ ಹೇಳುವಾಗ ಆತನು ಹೇಗೆ ಸ್ಪಂದಿಸುತ್ತಾನೆ? ನಾವು ಎಡೆಬಿಡದೆ ಪ್ರಾರ್ಥಿಸಿದರೆ ಯೆಹೋವನು ನಮಗೆ ಮನಶ್ಶಾಂತಿ ಕೊಟ್ಟು ಬೇಡದಿರುವ ಯೋಚನೆ, ಭಾವನೆಗಳನ್ನು ದೂರ ಮಾಡಲು ಸಹಾಯ ಮಾಡುತ್ತಾನೆ. ಆಗ ಭಯ, ತಳಮಳದಿಂದ ಕೂಡಿರುವ ನಮ್ಮ ಮನಸ್ಸು ಪ್ರಶಾಂತವಾಗುತ್ತದೆ. ಇಂಥ ಮನಶ್ಶಾಂತಿಯನ್ನು ನಮ್ಮಲ್ಲಿ ಅನೇಕರು ಅನುಭವಿಸಿದ್ದೇವೆ. ಆ ಅನುಭವ ನಿಮಗೂ ಆಗಿರಬಹುದು. ಸಮಸ್ಯೆ ಎಂಥದ್ದೇ ಆಗಿರಲಿ, ಅದರಿಂದ ಹೊರಗೆ ಬರಲು “ದೇವಶಾಂತಿ” ನಿಮಗೆ ಸಹಾಯ ಮಾಡುತ್ತದೆ! ಆದ್ದರಿಂದ ಯೆಹೋವನ ಈ ಆಶ್ವಾಸನೆಯನ್ನು ಯಾವತ್ತೂ ಮರೆಯಬೇಡಿ: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.”—ಯೆಶಾ. 41:10.
ದೇವರ ವಾಕ್ಯದಿಂದ ಸಿಗುವ ಮನಶ್ಶಾಂತಿ
5. ಮನಶ್ಶಾಂತಿ ಪಡೆಯಲು ದೇವರ ವಾಕ್ಯ ಹೇಗೆ ಸಹಾಯ ಮಾಡುತ್ತದೆ?
5 ನಾವು ಮನಶ್ಶಾಂತಿ ಪಡೆಯಲು ದೇವರ ವಾಕ್ಯದ ಅಧ್ಯಯನ ಮಾಡಬೇಕು ಮತ್ತು ಧ್ಯಾನ ಕೂಡ ಮಾಡಬೇಕು. ಇದು ಚಿಂತೆಯನ್ನು ದೇವರ ಮೇಲೆ ಹಾಕುವ ಎರಡನೇ ವಿಧ. ಇದು ಯಾಕೆ ಪ್ರಾಮುಖ್ಯ? ಬೈಬಲು ದೇವರಿಂದ ಬಂದಿರುವ ಗ್ರಂಥ. ಅದರಲ್ಲಿ ಆತನ ಪ್ರಾಯೋಗಿಕವಾದ ಅನೇಕ ಸಲಹೆಗಳು, ಸೂಚನೆಗಳಿವೆ. ಯಾವುದೋ ಚಿಂತೆ ನಿಮ್ಮನ್ನು ಕಾಡುವಾಗ ಅದನ್ನು ನಿಭಾಯಿಸಲು ಬೈಬಲು ಯಾವ ಸಲಹೆ ಕೊಡುತ್ತದೆ ಎಂದು ಯೋಚಿಸಿ ನೋಡಿ. ಆತನ ಸಲಹೆ ನಿಮ್ಮನ್ನು ಹೇಗೆ ಬಲಪಡಿಸುತ್ತದೆ ಎಂದು ಯೋಚಿಸಿ. ಇದರಿಂದ ನೀವು ಚಿಂತೆಯನ್ನು ಕಡಿಮೆ ಮಾಡಬಹುದು, ಹೊಡೆದೋಡಿಸಬಹುದು, ದೂರ ಇಡಬಹುದು. ತನ್ನ ವಾಕ್ಯವನ್ನು ಓದುವುದರಿಂದ ‘ಸ್ಥಿರಚಿತ್ತತೆ ಮತ್ತು ಧೈರ್ಯ’ ಸಿಗುತ್ತದೆ ಎಂದು ಯೆಹೋವನು ಹೇಳಿದ್ದಾನೆ. ಆಗ ‘ಭಯ ಕಳವಳಕ್ಕೆ’ ಜಾಗ ಇರಲ್ಲ.—ಯೆಹೋ. 1:7-9.
6. ಯೇಸುವಿನ ಮಾತುಗಳು ನಿಮಗೆ ಹೇಗೆ ಸಹಾಯ ಮಾಡುತ್ತವೆ?
6 ಮನಸ್ಸಿಗೆ ಮುದ ನೀಡುವ ಮಾತುಗಳನ್ನು ಯೇಸು ಹೇಳಿದ್ದಾನೆ. ಅವುಗಳನ್ನು ಬೈಬಲಿನಲ್ಲಿ ದಾಖಲಿಸಲಾಗಿದೆ. ಜನರಿಗೆ ಅದರಲ್ಲೂ ಜೀವನದ ಒತ್ತಡದಿಂದ ಕುಗ್ಗಿ ಹೋದವರಿಗಂತೂ ಆತನ ಮಾತನ್ನು ಕೇಳುವುದೆಂದರೆ ತುಂಬ ಇಷ್ಟ. ಯಾಕೆಂದರೆ ಅದರಿಂದ ಸಾಂತ್ವನ, ಚೈತನ್ಯ ಸಿಗುತ್ತಿತ್ತು. (ಮತ್ತಾಯ 11:28-30 ಓದಿ.) ಜನರ ಮೇಲೆ ಯೇಸುವಿಗೆ ತುಂಬ ಕಾಳಜಿ ಇತ್ತು. ಅವನು ಅವರ ಭಾವನೆಗಳಿಗೆ ಬೆಲೆಕೊಡುತ್ತಿದ್ದನು. (ಮಾರ್ಕ 6:30-32) ಯೇಸು ತನ್ನ ಅಪೊಸ್ತಲರಿಗೆ ಸಹಾಯ ಮಾಡುತ್ತೇನೆ ಎಂದು ಮಾತುಕೊಟ್ಟನು. ನಮಗೂ ಸಹಾಯ ಮಾಡುತ್ತಾನೆ. ನಾವು ಯೇಸುವಿನೊಟ್ಟಿಗೆ ಇದ್ದರೆ ಮಾತ್ರ ಈ ಸಹಾಯ ಸಿಗುತ್ತದೆ ಅಂತ ಅರ್ಥವಲ್ಲ. ಯೇಸು ರಾಜನಾಗಿ ಸ್ವರ್ಗದಲ್ಲಿ ಇದ್ದರೂ ನಮ್ಮನ್ನು ಪ್ರೀತಿಸುತ್ತಾನೆ. ಚಿಂತೆಯಿಂದ ಕಂಗಾಲಾದಾಗ ಅವನು ನಿಮ್ಮನ್ನು ನೋಡುತ್ತಿದ್ದಾನೆ, ಸರಿಯಾದ ಸಮಯದಲ್ಲಿ ಸಹಾಯ ಮಾಡುತ್ತಾನೆ ಎಂಬ ಭರವಸೆ ನಿಮಗಿರಲಿ. ಯೇಸುವಿನ ಮಾತುಗಳು ನಮ್ಮಲ್ಲಿ ನಿರೀಕ್ಷೆ ಮತ್ತು ಧೈರ್ಯ ತುಂಬುತ್ತವೆ. ಆಗ ಚಿಂತೆಯ ಬಿಗಿಮುಷ್ಟಿಯಿಂದ ಹೊರಗೆ ಬರಲು ಸಾಧ್ಯವಾಗುತ್ತದೆ.—ಇಬ್ರಿ. 2:17, 18; 4:16.
ದೇವರಾತ್ಮದ ಸಹಾಯದಿಂದ ಸಿಗುವ ಸೊಗಸಾದ ಗುಣಗಳು
7. ಪವಿತ್ರಾತ್ಮ ನಮಗೆ ಹೇಗೆ ಸಹಾಯ ಮಾಡುತ್ತದೆ?
7 ನಾವು ಪವಿತ್ರಾತ್ಮಕ್ಕಾಗಿ ಬೇಡಿದರೆ ಯೆಹೋವನು ಅದನ್ನು ಖಂಡಿತ ಕೊಡುತ್ತಾನೆ ಎಂದು ಯೇಸು ಮಾತುಕೊಟ್ಟನು. (ಲೂಕ 11:10-13) ಈ ಮೂರನೇ ವಿಧ ಚಿಂತೆಗೆ ವಿದಾಯ ಹೇಳಲು ಹೇಗೆ ಸಹಾಯ ಮಾಡುತ್ತದೆ? ಪವಿತ್ರಾತ್ಮ ಅಥವಾ ದೇವರ ಕಾರ್ಯಕಾರಿ ಶಕ್ತಿ ದೇವರಲ್ಲಿರುವ ಗುಣಗಳನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. (ಕೊಲೊ. 3:10) ಈ ಗುಣಗಳನ್ನು “ಪವಿತ್ರಾತ್ಮದಿಂದ ಉಂಟಾಗುವ ಫಲ” ಎಂದು ಬೈಬಲಿನಲ್ಲಿ ಕರೆಯಲಾಗಿದೆ. (ಗಲಾತ್ಯ 5:22, 23 ಓದಿ.) ನಾವು ಈ ಗುಣಗಳನ್ನು ಬೆಳೆಸಿಕೊಂಡಾಗ ಬೇರೆಯವರೊಟ್ಟಿಗೆ ನಮ್ಮ ಸಂಬಂಧ ಚೆನ್ನಾಗಿರುತ್ತದೆ. ಮನಸ್ತಾಪ, ಜಗಳದಂಥ ಚಿಂತೆಗೀಡು ಮಾಡುವ ಸನ್ನಿವೇಶವನ್ನು ನಾವು ದೂರವಿಡುತ್ತೇವೆ. ಪವಿತ್ರಾತ್ಮದ ಫಲ ನಮಗೆ ಸಹಾಯ ಮಾಡುವ ಕೆಲವು ವಿಧಗಳನ್ನು ಈಗ ನೋಡೋಣ.
8-12. ಪವಿತ್ರಾತ್ಮದ ಫಲ ನಿಮಗೆ ಹೇಗೆ ಸಹಾಯ ಮಾಡುತ್ತದೆ?
8 “ಪ್ರೀತಿ, ಆನಂದ, ಶಾಂತಿ.” ನಾವು ಬೇರೆಯವರಿಗೆ ಗೌರವ ಕೊಟ್ಟರೆ ಚಿಂತೆಯನ್ನು ಕಡಿಮೆ ಮಾಡಬಹುದು. ಹೇಗೆ? ನಾವು ಬೇರೆಯವರಿಗೆ ಪ್ರೀತಿ, ಮಮತೆ, ಗೌರವ ತೋರಿಸಿದರೆ ನಮ್ಮ ಮಧ್ಯೆ ಶಾಂತಿ ಇರುತ್ತದೆ. ಆಗ ಕೋಪ, ಒತ್ತಡ, ಕಿರಿಕಿರಿ ತರುವ ಸನ್ನಿವೇಶ ತೀರಾ ಕಡಿಮೆ.—ರೋಮ. 12:10.
9 “ದೀರ್ಘ ಸಹನೆ, ದಯೆ, ಒಳ್ಳೇತನ.” “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ . . . ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ” ಎನ್ನುತ್ತದೆ ಬೈಬಲ್. (ಎಫೆ. 4:32) ನಾವು ಈ ಬುದ್ಧಿವಾದವನ್ನು ಅನ್ವಯಿಸಿದರೆ ಬೇರೆಯವರೊಟ್ಟಿಗೆ ಶಾಂತಿಯಿಂದ ಇರುತ್ತೇವೆ. ಜಗಳ, ಮನಸ್ತಾಪ ಇಲ್ಲದೆ ಆರಾಮವಾಗಿರುತ್ತೇವೆ. ಅಪರಿಪೂರ್ಣತೆಯಿಂದ ಆಗುವ ತಪ್ಪುಗಳನ್ನು ಕ್ಷಮಿಸಿಬಿಡುತ್ತೇವೆ.
10 “ನಂಬಿಕೆ.” ನಮ್ಮ ಹತ್ತಿರ ಹಣ ಇಲ್ಲ, ಮನೆ ಇಲ್ಲ, ಅದಿಲ್ಲ ಇದಿಲ್ಲ ಎಂಬ ಚಿಂತೆ ನಮ್ಮನ್ನು ಕಾಡಬಹುದು. (ಜ್ಞಾನೋ. 18:11) ಇಂಥ ಚಿಂತೆಯನ್ನು ಹೇಗೆ ದೂರವಿಡಬಹುದು? ‘ನಿಮಗಿರುವವುಗಳಲ್ಲಿಯೇ ತೃಪ್ತರಾಗಿರಿ’ ಎಂಬ ಪೌಲನ ಬುದ್ಧಿವಾದವನ್ನು ನಾವು ಪಾಲಿಸಬೇಕು. ಯೆಹೋವನಲ್ಲಿ ಅಚಲ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಆಗ ನಮಗೆ ಬೇಕಾಗಿರುವುದನ್ನು ಆತನು ಕೊಟ್ಟೇ ಕೊಡುತ್ತಾನೆ ಅನ್ನುವ ಭರವಸೆ ನಮಗಿರುತ್ತದೆ. “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ಆತನೇ ಮಾತುಕೊಟ್ಟಿದ್ದಾನೆ. ಆದ್ದರಿಂದ “ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಎಂದು ಹೇಳುವುದರಲ್ಲಿ ನಾವು ಪೌಲನೊಟ್ಟಿಗೆ ಧ್ವನಿಗೂಡಿಸಬಹುದು.—ಇಬ್ರಿ. 13:5, 6.
11 “ಸೌಮ್ಯಭಾವ, ಸ್ವನಿಯಂತ್ರಣ.” ಈ ಗುಣಗಳನ್ನು ತೋರಿಸುವುದು ತುಂಬ ಮುಖ್ಯ. ಯಾಕೆಂದರೆ ನಮ್ಮಲ್ಲಿ ಈ ಗುಣಗಳಿದ್ದರೆ ಚಿಂತೆಯ ಕೂಪಕ್ಕೆ ತಳ್ಳುವಂಥ ಯಾವುದೇ ವಿಷಯದ ಬಗ್ಗೆ ನಾವು ಮಾತಾಡಲ್ಲ ಅಥವಾ ಅಂಥ ವಿಷಯವನ್ನು ಮಾಡಲ್ಲ. ‘ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳಿಂದ’ ದೂರವಿರುತ್ತೇವೆ.—ಎಫೆ. 4:31.
12 ‘ದೇವರ ಪ್ರಬಲವಾದ ಹಸ್ತದಲ್ಲಿ’ ನಂಬಿಕೆ ಇಡಲು ಮತ್ತು ‘ನಮ್ಮ ಚಿಂತೆಯನ್ನು ಆತನ ಮೇಲೆ ಹಾಕಲು’ ನಮಗೆ ದೀನತೆ ಬೇಕು. (1 ಪೇತ್ರ 5:6, 7) ನಾವು ದೀನರಾಗಿದ್ದರೆ ಯೆಹೋವನು ನಮಗೆ ಸಹಾಯಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ. ನಮ್ಮಿಂದ ಏನು ಮಾಡಕ್ಕಾಗುತ್ತೆ, ಏನು ಮಾಡಕ್ಕಾಗಲ್ಲ ಎಂದು ಅರ್ಥಮಾಡಿಕೊಂಡಾಗ ನಾವು ನಮ್ಮ ಮೇಲಲ್ಲ, ಯೆಹೋವನ ಮೇಲೆ ಆತುಕೊಳ್ಳುತ್ತೇವೆ. ಆಗ ಚಿಂತೆ ಕಡಿಮೆಯಾಗುತ್ತದೆ.—ಮೀಕ 6:8.
ಯಾವತ್ತೂ ಚಿಂತೆ ಮಾಡಬೇಡಿ
13. “ಎಂದೂ ಚಿಂತೆಮಾಡಬೇಡಿ” ಎಂಬ ಯೇಸುವಿನ ಮಾತಿನ ಅರ್ಥವೇನು?
13 “ಎಂದೂ ಚಿಂತೆಮಾಡಬೇಡಿ” ಎಂದು ಯೇಸು ಮತ್ತಾಯ 6:34ರಲ್ಲಿ ಬುದ್ಧಿವಾದ ಕೊಟ್ಟಿದ್ದಾನೆ. (ಓದಿ) ‘ಇದೆಲ್ಲಾ ಆಗೋ ಮಾತಲ್ಲ’ ಎಂದು ನಮಗೆ ಅನಿಸಬಹುದು. ಈ ಲೇಖನದ ಆರಂಭದಲ್ಲಿ ನೋಡಿದಂತೆ ದಾವೀದ ಮತ್ತು ಪೌಲನಿಗೂ ಚಿಂತೆ ಇತ್ತು. ಹಾಗಾದರೆ ಯೇಸುವಿನ ಮಾತಿನ ಅರ್ಥವೇನು? ಯೇಸು ಇಲ್ಲಿ, ಯೆಹೋವನನ್ನು ಆರಾಧಿಸುವವರು ಚಿಂತೆಯನ್ನೇ ಮಾಡಲ್ಲ ಎಂದು ಹೇಳುತ್ತಿಲ್ಲ. ಬದಲಿಗೆ, ಅನಾವಶ್ಯಕ ಅಥವಾ ಅತಿರೇಕವಾದ ಚಿಂತೆಯಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ಶಿಷ್ಯರಿಗೆ ತಿಳಿಹೇಳುತ್ತಿದ್ದನು. ಪ್ರತಿದಿನಕ್ಕೆ ಅದರದೇ ಆದ ಚಿಂತೆ, ರಗಳೆ ಇರುತ್ತದೆ. ಅದರ ಮಧ್ಯೆ ನಾವು ಆಗಿಹೋಗಿರುವ ವಿಷಯದ ಬಗ್ಗೆ ಅಥವಾ ಮುಂದೆ ಆಗಬಹುದಾದ ವಿಷಯದ ಬಗ್ಗೆ ಯೋಚಿಸಿ ಇನ್ನಷ್ಟು ಚಿಂತೆಯನ್ನು ಸೇರಿಸಬಾರದು. ಯೇಸುವಿನ ಈ ಸಲಹೆ ಚಿಂತೆಯಿಂದ ಹೊರಗೆ ಬರಲು ನಿಮಗೆ ಹೇಗೆ ಸಹಾಯ ಮಾಡುತ್ತದೆ?
14. ದಾವೀದನಂತೆ ನೀವು ಹೇಗೆ ಚಿಂತೆಯಿಂದ ಹೊರಗೆ ಬರಬಹುದು?
14 ಕೆಲವರು ಹಿಂದೆ ಮಾಡಿದ ತಪ್ಪಿನ ಬಗ್ಗೆ ಯೋಚಿಸುತ್ತಾ ಚಿಂತೆಯಲ್ಲಿ ಮುಳುಗಿ ಹೋಗುತ್ತಾರೆ. ತಪ್ಪು ಮಾಡಿ ಅನೇಕ ವರ್ಷಗಳು ಕಳೆದಿದ್ದರೂ ಅವರ ಮನಸ್ಸು ಇನ್ನೂ ಚುಚ್ಚುತ್ತಾ ಇರುತ್ತದೆ. ರಾಜ ದಾವೀದನು ಕೂಡ ತನ್ನ ತಪ್ಪಿನ ಬಗ್ಗೆ ಯೋಚಿಸುತ್ತಾ ಜೀವನದಲ್ಲಿ ಜಿಗುಪ್ಸೆಗೊಂಡಿದ್ದನು. “ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ” ಎಂದು ಅವನೇ ಒಪ್ಪಿಕೊಂಡನು. (ಕೀರ್ತ. 38:3, 4, 8, 18) ಇಂಥ ಸಮಯದಲ್ಲಿ ದಾವೀದ ಒಂದು ಒಳ್ಳೆ ಕೆಲಸ ಮಾಡಿದನು. ಅದೇನೆಂದರೆ ಯೆಹೋವನು ಕರುಣಾಮಯಿ, ತನ್ನನ್ನು ಖಂಡಿತ ಕ್ಷಮಿಸುತ್ತಾನೆ ಎಂದು ಭರವಸೆ ಇಟ್ಟನು. “ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು” ಎಂದು ದೃಢಭರವಸೆಯಿಂದ ಹೇಳಿದನು.—ಕೀರ್ತನೆ 32:1-3, 5 ಓದಿ.
15. (ಎ) ದಾವೀದನಿಂದ ಬೇರೇನು ಕಲಿಯಬಹುದು? (ಬಿ) ಚಿಂತೆಯಿಂದ ಮುಕ್ತರಾಗಲು ನೀವೇನು ಮಾಡಬಹುದು? (“ ಚಿಂತೆಯನ್ನು ಕಡಿಮೆಮಾಡಲು ಕೆಲವು ಪ್ರಾಯೋಗಿಕ ಹೆಜ್ಜೆಗಳು” ಎಂಬ ಚೌಕ ನೋಡಿ.)
15 ಇವತ್ತಿನ ಬಗ್ಗೆ ಚಿಂತೆ ಮಾಡುವುದು ಕೂಡ ಕೆಲವೊಮ್ಮೆ ನಮ್ಮ ತಲೆ ಬಿಸಿ ಮಾಡುತ್ತೆ. ದಾವೀದ 55ನೇ ಕೀರ್ತನೆ ಬರೆಯುವಾಗ ಸಾವು ಅವನನ್ನು ಅಟ್ಟಿಸಿಕೊಂಡು ಬರುತ್ತಿದ್ದದ್ದರಿಂದ ಭಯ ಮತ್ತು ಚಿಂತೆ ಅವನನ್ನು ಆವರಿಸಿತ್ತು. (ಕೀರ್ತ. 55:2-5) ಆದರೆ ಆ ಚಿಂತೆ ಯೆಹೋವನ ಮೇಲಿದ್ದ ಭರವಸೆಯನ್ನು ಕಡಿಮೆಮಾಡಲು ಅವನು ಬಿಡಲಿಲ್ಲ. ಸಹಾಯ ಮಾಡಪ್ಪಾ ಎಂದು ಯೆಹೋವನನ್ನು ಬೇಡಿಕೊಂಡ. ಅಷ್ಟಕ್ಕೆ ಬಿಡದೆ, ಸಾವಿಂದ ಬಚಾವಾಗಲು ತನ್ನ ಕೈಯಲ್ಲಿ ಏನಾಗುತ್ತೋ ಅದನ್ನು ಮಾಡಿದ. (2 ಸಮು. 15:30-34) ದಾವೀದನಿಂದ ಕಲಿಯುವ ಪಾಠ, ಚಿಂತೆಯಲ್ಲಿ ಹೂತುಹೋಗುವ ಮುಂಚೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಕೈಯಲ್ಲಿ ಏನಾಗುತ್ತೋ ಅದನ್ನು ಮಾಡಿ. ಉಳಿದದ್ದನ್ನು ಯೆಹೋವನಿಗೆ ಬಿಡಿ. ಆತನು ನಿಮಗೋಸ್ಕರ ಏನಾದರೂ ಮಾಡೇ ಮಾಡುತ್ತಾನೆ.
16. ದೇವರ ಹೆಸರಿನ ಅರ್ಥ ಆತನ ಮೇಲೆ ನಿಮಗಿರುವ ಭರವಸೆಯನ್ನು ಹೇಗೆ ಹೆಚ್ಚಿಸುತ್ತದೆ?
16 ‘ನಾಳೆ ಏನಾಗುತ್ತೋ’ ಎಂಬ ಚಿಂತೆ ಕ್ರೈಸ್ತರಿಗೂ ಇರಬಹುದು. ಆದರೆ ನಾವು ನಾಳೆ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಯಾಕೆಂದರೆ ಕೆಲವೊಮ್ಮೆ ಪರಿಸ್ಥಿತಿ ನಾವು ನೆನಸಿದಷ್ಟು ಕೆಟ್ಟದಾಗಿರಲಿಕ್ಕಿಲ್ಲ. ಯೆಹೋವನಿಗೆ ನಿಯಂತ್ರಿಸಲು ಆಗದ ಸನ್ನಿವೇಶವೇ ಇಲ್ಲ ಎನ್ನುವುದನ್ನು ಮರೆಯಬೇಡಿ. ಈ ಮಾತಿಗೆ ಆತನ ಹೆಸರೇ ಸಾಕ್ಷಿ. “ಆತನು ಆಗುವಂತೆ ಮಾಡುತ್ತಾನೆ” ಎಂಬುದು ಆತನ ಹೆಸರಿನ ಅರ್ಥ. (ವಿಮೋ. 3:14) ಆದ್ದರಿಂದ ನೀವು ಭವಿಷ್ಯದ ಬಗ್ಗೆ ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ. ಮನುಷ್ಯರಿಗಾಗಿರುವ ಆತನ ಉದ್ದೇಶವನ್ನು ಖಂಡಿತ ನೆರವೇರಿಸುತ್ತಾನೆ. ಯೆಹೋವನು ತನ್ನ ನಂಬಿಗಸ್ತರನ್ನು ಆಶೀರ್ವದಿಸುತ್ತಾನೆ ಮತ್ತು ಹಿಂದಿನ, ಇವತ್ತಿನ, ನಾಳೆಯ ಚಿಂತೆಗೆ ಅಂತ್ಯ ಹಾಡಲು ಸಹಾಯ ಮಾಡುತ್ತಾನೆ ಎಂಬ ಭರವಸೆ ನಿಮಗಿರಲಿ.
ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಹತ್ತಿರ ಮಾತಾಡಿ
17, 18. ಮುಕ್ತವಾದ ಮಾತುಕತೆ ಚಿಂತೆಯಿಂದ ಹೊರಗೆ ಬರಲು ಹೇಗೆ ಸಹಾಯ ಮಾಡುತ್ತದೆ?
17 ಚಿಂತೆಯನ್ನು ಕಡಿಮೆ ಮಾಡುವ ನಾಲ್ಕನೇ ವಿಧ ಯಾವುದೆಂದರೆ ನಿಮ್ಮ ಭಾವನೆಯನ್ನು ಅರ್ಥಮಾಡಿಕೊಳ್ಳುವವರ ಹತ್ತಿರ ಮನಸ್ಸು ಬಿಚ್ಚಿ ಮಾತಾಡಿ. ಅವರು ನಿಮ್ಮ ಬಾಳ ಸಂಗಾತಿ ಆಗಿರಬಹುದು, ಆಪ್ತ ಸ್ನೇಹಿತನಾಗಿರಬಹುದು, ಸಭಾ ಹಿರಿಯನಾಗಿರಬಹುದು. ಅವರು ನಿಮ್ಮ ಸನ್ನಿವೇಶವನ್ನು ಅರ್ಥಮಾಡಿಕೊಂಡು ಸಹಾಯ ಮಾಡುತ್ತಾರೆ. ಬೈಬಲ್ ಹೀಗನ್ನುತ್ತದೆ; “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” (ಜ್ಞಾನೋ. 12:25) “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು” ಎಂದೂ ಅದು ಹೇಳುತ್ತದೆ.—ಜ್ಞಾನೋ. 15:22.
18 ಚಿಂತೆಯಿಂದ ಹೊರಗೆ ಬರಲು ಕೂಟಗಳೂ ಸಹಾಯ ಮಾಡುತ್ತವೆ. ಪ್ರತಿವಾರ ಕೂಟಕ್ಕೆ ಹೋದಾಗ ಸಹೋದರ ಸಹೋದರಿಯರೊಟ್ಟಿಗೆ ಸಮಯ ಕಳೆಯಿರಿ. ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ, ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. (ಇಬ್ರಿ. 10:24, 25) ಹೀಗೆ “ಉತ್ತೇಜನವನ್ನು ಪರಸ್ಪರ ವಿನಿಮಯ” ಮಾಡಿಕೊಂಡರೆ ನಿಮ್ಮ ನಂಬಿಕೆ ಬಲಗೊಳ್ಳುತ್ತದೆ, ಯಾವುದೇ ಚಿಂತೆಯಿಂದ ಹೊರ ಬರಲು ಸುಲಭ ಆಗುತ್ತದೆ.—ರೋಮ. 1:12.
ದೇವರ ಜೊತೆ ಸಂಬಂಧ ಚಿಂತೆಗಿಲ್ಲ ಅನುಬಂಧ
19. ದೇವರೊಟ್ಟಿಗೆ ಒಳ್ಳೇ ಸಂಬಂಧ ಇದ್ದರೆ ಚಿಂತೆಯನ್ನು ನಿಭಾಯಿಸಲು ನಿಮಗೆ ಹೇಗೆ ಸಹಾಯವಾಗುತ್ತದೆ?
19 ಕೆನಡದ ಒಬ್ಬ ಹಿರಿಯನಿಗೆ ಚಿಂತೆಯನ್ನು ಯೆಹೋವನ ಮೇಲೆ ಹಾಕುವುದು ಎಷ್ಟು ಮುಖ್ಯ ಎಂದು ಅರ್ಥ ಆಯಿತು. ಶಾಲೆಯಲ್ಲಿ ಶಿಕ್ಷಕರಾಗಿ ಮತ್ತು ಸಲಹೆಗಾರರಾಗಿ ಕೆಲಸಮಾಡುತ್ತಿದ್ದ ಅವರಿಗೆ ಕೆಲಸದಲ್ಲಿ ತುಂಬ ಒತ್ತಡ ಇತ್ತು. ಇದರ ಜೊತೆಗೆ ಅವರಿಗಿದ್ದ ಕಾಯಿಲೆ ಅವರ ಚಿಂತೆಯನ್ನು ಹೆಚ್ಚು ಮಾಡುತ್ತಿತ್ತು. ಇಂಥ ಚಿಂತೆಗಳನ್ನು ನಿಭಾಯಿಸಲು ಅವರಿಗೆ ಯಾವುದು ಸಹಾಯ ಮಾಡಿತು? ಅವರೇ ಹೇಳುವುದು: “ಯೆಹೋವನೊಟ್ಟಿಗೆ ನನ್ನ ಸಂಬಂಧವನ್ನು ಬಲಗೊಳಿಸಿದ್ದು ನನಗೆ ತುಂಬ ಸಹಾಯಮಾಡಿತು. ಅಂಥ ಕಷ್ಟಕರ ಸಮಯದಲ್ಲಿ ಸ್ನೇಹಿತರು ಕೂಡ ನನಗೆ ಬೆನ್ನೆಲುಬಾಗಿ ನಿಂತರು. ನನ್ನ ಹೆಂಡತಿ ಹತ್ತಿರ ಮನಸ್ಸು ಬಿಚ್ಚಿ ಮಾತಾಡುತ್ತಿದ್ದೆ. ಬೇರೆ ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕ ಸಹ ಸನ್ನಿವೇಶವನ್ನು ಯೆಹೋವನು ನೋಡುವಂತೆ ನೋಡಲು ನನಗೆ ಸಹಾಯ ಮಾಡಿದರು. ಡಾಕ್ಟರು ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಬೇಕಾದ ಸಲಹೆಯನ್ನು ಕೊಟ್ಟರು. ಇದರಿಂದ ನಾನು ಕೆಲಸಕಾರ್ಯವನ್ನು ಹೊಂದಿಸಿಕೊಂಡು ವ್ಯಾಯಾಮ, ವಿಶ್ರಾಂತಿಗಾಗಿ ಸಮಯ ಮಾಡಿಕೊಂಡೆ. ಕ್ರಮೇಣ ಭಾವನೆಗಳನ್ನು ನಿಯಂತ್ರಿಸಲು ಕಲಿತೆ. ನನ್ನಿಂದ ನಿಯಂತ್ರಿಸಲು ಆಗದಿರುವ ಸನ್ನಿವೇಶ ಬಂದಾಗ ಯೆಹೋವನ ಮೇಲೆ ಆತುಕೊಳ್ಳುತ್ತೇನೆ.”
20. (ಎ) ನಮ್ಮ ಚಿಂತೆಯನ್ನು ಯೆಹೋವನ ಮೇಲೆ ಹಾಕುವುದು ಹೇಗೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ನೋಡುತ್ತೇವೆ?
20 ಈ ಲೇಖನದಲ್ಲಿ ನಾವು ಚಿಂತೆಯನ್ನು ಯೆಹೋವನ ಮೇಲೆ ಹಾಕಲು ಪ್ರಾರ್ಥನೆ ತುಂಬ ಮುಖ್ಯ ಮತ್ತು ಬೈಬಲನ್ನು ಓದಿ ಧ್ಯಾನಿಸುವುದು ಸಹ ತುಂಬ ಮುಖ್ಯ ಎಂದು ಕಲಿತೆವು. ಜೊತೆಗೆ ಪವಿತ್ರಾತ್ಮಕ್ಕಾಗಿ ಬೇಡುವುದು, ನಮ್ಮನ್ನು ಅರ್ಥಮಾಡಿಕೊಳ್ಳುವವರ ಹತ್ತಿರ ಮಾತಾಡುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಕೂಡ ತುಂಬ ಮುಖ್ಯ ಎಂದು ಕಲಿತೆವು. ಮುಂದಿನ ಲೇಖನದಲ್ಲಿ, ಯೆಹೋವ ದೇವರು ನಮಗೆ ಪ್ರತಿಫಲ ಕೊಡುತ್ತಾನೆ ಎಂದು ನಂಬುವುದರಿಂದ ನಮಗೆ ಹೇಗೆ ಸಹಾಯವಾಗುತ್ತದೆ ಎಂದು ನೋಡೋಣ.—ಇಬ್ರಿ. 11:6.