ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ”

“ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ”

“ಜನರಿಗಾಗಿ ಉತ್ತೇಜನದ ಮಾತೇನಾದರೂ ನಿಮ್ಮಲ್ಲಿ ಇದ್ದರೆ ಅದನ್ನು ತಿಳಿಸಿರಿ.”—ಅ. ಕಾ. 13:15.

ಗೀತೆಗಳು: 121, 45

1, 2. ಉತ್ತೇಜನ ಕೊಡುವುದು ಯಾಕೆ ಪ್ರಾಮುಖ್ಯ?

“ನನ್ನ ಅಪ್ಪ-ಅಮ್ಮ ನನ್ನನ್ನು ಬೈಯುತ್ತಾ ಇರ್ತಾರೆ, ಒಂದು ಒಳ್ಳೇ ಮಾತು ಹೇಳಲ್ಲ. ‘ನಿನಗೆ ದೇಹ ಮಾತ್ರ ಬೆಳೆದಿದೆ, ಆದ್ರೆ ಬುದ್ಧಿ ಬೆಳೆದಿಲ್ಲ. ನೀನು ಯಾವತ್ತೂ ಬುದ್ಧಿ ಕಲಿಯಲ್ಲ’ ಅಂತೆಲ್ಲಾ ಅವರು ಹೇಳಿದಾಗ ತುಂಬ ಬೇಜಾರಾಗುತ್ತೆ. ಎಷ್ಟೋ ಸಾರಿ ಅತ್ತಿದ್ದೀನಿ. ಅವರತ್ರ ಮಾತಾಡೋಕೆ ಇಷ್ಟ ಆಗಲ್ಲ. ನಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ನನಗನಿಸುತ್ತೆ” ಎಂದು ಹೇಳುತ್ತಾಳೆ 18 ವರ್ಷದ ಕ್ರಿಸ್ಟಿನಾ. [1] (ಟಿಪ್ಪಣಿ ನೋಡಿ.) ಉತ್ತೇಜನ ಸಿಗದಿದ್ದರೆ ಯಾಕಪ್ಪಾ ಈ ಜೀವನ ಅಂತ ಅನಿಸಿಬಿಡುತ್ತೆ!

2 ಆದರೆ ಪ್ರೋತ್ಸಾಹಿಸುವುದರಿಂದ ಒಬ್ಬರ ಬದುಕು ಹೇಗೆ ಬದಲಾಗುತ್ತದೆ ಅಂತ ನೋಡಿ. ರಾಬಿನ್‌ ಹೇಳುತ್ತಾರೆ: “ನಾನು ಪ್ರಯೋಜನಕ್ಕೆ ಬಾರದವನು ಅನ್ನೋ ಭಾವನೆ ತುಂಬ ವರ್ಷಗಳಿಂದ ನನ್ನನ್ನ ಕಿತ್ತು ತಿನ್ನುತ್ತಾ ಇತ್ತು. ಆದರೆ ಒಂದಿನ ಒಬ್ಬ ಹಿರಿಯರ ಜೊತೆ ಸೇವೆಗೆ ಹೋದಾಗ ಅವರು ನಾನು ಬೇಜಾರಾಗಿರೋದನ್ನು ಗಮನಿಸಿದರು. ನನ್ನ ಕಷ್ಟ ಹೇಳಿಕೊಂಡಾಗ ತಾಳ್ಮೆಯಿಂದ ಕೇಳಿಸಿಕೊಂಡರು. ಆಮೇಲೆ ನಾನು ಮಾಡುತ್ತಿರೋ ಒಳ್ಳೇ ವಿಷಯಗಳನ್ನು ನನಗೆ ನೆನಪಿಸಿದರು. ‘ನಾವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು’ ಎಂಬ ಯೇಸುವಿನ ಮಾತನ್ನು ನನಗೆ ಜ್ಞಾಪಿಸಿದರು. ಆಗಾಗ ಆ ವಚನನಾ ನೆನಪುಮಾಡಿಕೊಳ್ಳುತ್ತಾ ಇರ್ತೀನಿ. ಆಗ ನನ್ನ ಮನಸ್ಸು ಹಗುರ ಆಗುತ್ತೆ. ಆ ಹಿರಿಯರ ಮಾತು ನನ್ನ ಬದುಕನ್ನೇ ಬದಲಾಯಿಸಿತು.”—ಮತ್ತಾ. 10:31.

3. (ಎ) ಉತ್ತೇಜನ ಕೊಡುವುದರ ಬಗ್ಗೆ ಅಪೊಸ್ತಲ ಪೌಲ ಏನು ಹೇಳಿದನು? (ಬಿ) ಈ ಲೇಖನದಲ್ಲಿ ನಾವು ಏನನ್ನು ನೋಡಲಿದ್ದೇವೆ?

3 ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು ಅಂತ ಬೈಬಲ್‌ ಹೇಳುತ್ತದೆ. “ಸಹೋದರರೇ, ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಒಬ್ಬನಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ. ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ . . . ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ” ಎಂದು ಅಪೊಸ್ತಲ ಪೌಲ ಇಬ್ರಿಯ ಕ್ರೈಸ್ತರಿಗೆ ಬರೆದನು. (ಇಬ್ರಿ. 3:12, 13, ಪವಿತ್ರ ಗ್ರಂಥ ಭಾಷಾಂತರ) ನಮ್ಮನ್ನು ಯಾರಾದರೂ ಪ್ರೋತ್ಸಾಹಿಸಿದರೆ ನಮಗೆ ತುಂಬ ಖುಷಿ ಆಗುತ್ತೆ. ನಮ್ಮ ಸಹೋದರ ಸಹೋದರಿಯರನ್ನು ಉತ್ತೇಜಿಸಲು ಯಾವ ಕಾರಣಗಳಿವೆ? ಯೆಹೋವ, ಯೇಸು ಮತ್ತು ಪೌಲ ಉತ್ತೇಜನ ಕೊಡುವ ವಿಷಯದಲ್ಲಿ ಯಾವ ಮಾದರಿ ಇಟ್ಟಿದ್ದಾರೆ? ಬೇರೆಯವರಿಗೆ ಹೇಗೆ ಉತ್ತೇಜನ ಕೊಡಬಹುದು? ಬನ್ನಿ ನೋಡೋಣ.

ನಮ್ಮೆಲ್ಲರಿಗೂ ಪ್ರೋತ್ಸಾಹ ಬೇಕೇ ಬೇಕು

4. (ಎ) ಪ್ರೋತ್ಸಾಹ ಯಾರಿಗೆಲ್ಲಾ ಬೇಕು? (ಬಿ) ಆದರೆ ಇಂದು ಅನೇಕರು ಬೇರೆಯವರನ್ನು ಉತ್ತೇಜಿಸುವುದಿಲ್ಲ ಯಾಕೆ?

4 ನಮ್ಮೆಲ್ಲರಿಗೆ ಪ್ರೋತ್ಸಾಹ ಬೇಕು. ಅದರಲ್ಲೂ ಹೆತ್ತವರು ಮಕ್ಕಳನ್ನು ಉತ್ತೇಜಿಸುವುದು ತುಂಬ ಮುಖ್ಯ. “ಗಿಡಗಳಿಗೆ ನೀರು ಎಷ್ಟು ಮುಖ್ಯನೋ ಮಕ್ಕಳಿಗೆ ಪ್ರೋತ್ಸಾಹ ಅಷ್ಟೇ ಮುಖ್ಯ. ಯಾರಾದರೂ ತಮ್ಮ ಬಗ್ಗೆ ಒಳ್ಳೆದೇನಾದರೂ ಹೇಳಿದರೆ ತಮಗೂ ಬೆಲೆ ಇದೆ, ತಾವು ಕೆಲಸಕ್ಕೆ ಬಾರದವರಲ್ಲ ಅಂತ ಮಕ್ಕಳಿಗೆ ಅನಿಸುತ್ತೆ” ಎಂದು ಹೇಳುತ್ತಾರೆ ಶಿಕ್ಷಕ ತಿಮೊಥಿ ಈವನ್ಸ್‌. ಆದರೆ ನಾವು ಜೀವಿಸುತ್ತಾ ಇರುವ ಈ ‘ಕಡೇ ದಿವಸಗಳಲ್ಲಿ ಜನರು ಸ್ವಾರ್ಥಿಗಳೂ ಸ್ವಾಭಾವಿಕ ಮಮತೆ ಇಲ್ಲದವರೂ ಆಗಿದ್ದಾರೆ.’ (2 ತಿಮೊ. 3:1-5) ‘ನಮ್ಮ ಹೆತ್ತವರು ನಮ್ಮನ್ನು ಪ್ರೋತ್ಸಾಹಿಸುತ್ತಿರಲಿಲ್ಲ’ ಎಂದು ಹೇಳಿ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುವುದೇ ಇಲ್ಲ. ಮಕ್ಕಳಿಗೆ ಮಾತ್ರ ಅಲ್ಲ, ದೊಡ್ಡವರಿಗೂ ಪ್ರೋತ್ಸಾಹ ಬೇಕು. ಆದರೆ ಅವರಿಗೆ ಪ್ರೋತ್ಸಾಹ ಸಿಗುವುದು ಅಪರೂಪ. ಉದಾಹರಣೆಗೆ, ಕೆಲಸದ ಸ್ಥಳದಲ್ಲಿ ‘ಕತ್ತೆ ತರ ದುಡಿದರೂ ಯಾರೂ ಮೆಚ್ಚಲ್ಲ ಎಂದು ತುಂಬ ಜನ ಹೇಳುತ್ತಾರೆ.

5. ನಾವು ಬೇರೆಯವರಿಗೆ ಹೇಗೆ ಉತ್ತೇಜನ ಕೊಡಬಹುದು?

5 ಕೊಟ್ಟ ಕೆಲಸವನ್ನು ಯಾರಾದರೂ ಚೆನ್ನಾಗಿ ಮಾಡಿದರೆ ಅವರನ್ನು ಮನಸಾರೆ ಹೊಗಳಿ. ಅವರಲ್ಲಿರುವ ಯಾವ ಗುಣ ನಿಮಗೆ ತುಂಬ ಇಷ್ಟ ಅಂತ ಅವರಿಗೆ ಹೇಳಿ ಅಥವಾ ಅವರು ಕುಗ್ಗಿಹೋಗಿರುವಾಗ ಸಂತೈಸಿ. (1 ಥೆಸ. 5:14) ನಾವು ಸಹೋದರ ಸಹೋದರಿಯರ ಜೊತೆ ಇರುವಾಗ ಅವರನ್ನು ಉತ್ತೇಜಿಸಲು ಬೇಕಾದಷ್ಟು ಅವಕಾಶ ಸಿಗುತ್ತೆ. (ಪ್ರಸಂಗಿ 4: 9, 10 ಓದಿ.) ‘ನಾನು ಬೇರೆಯವರಲ್ಲಿರುವ ಒಳ್ಳೇ ವಿಷಯಗಳನ್ನು ನೋಡಿ ಅವರನ್ನು ಪ್ರಶಂಸಿಸುತ್ತೇನಾ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” ಎಂದು ಬೈಬಲ್‌ ಹೇಳುತ್ತದೆ.—ಜ್ಞಾನೋ. 15:23.

6. (ಎ) ಸೈತಾನ ನಮ್ಮನ್ನು ಯಾಕೆ ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಾನೆ? (ಬಿ) ಅವನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದ ಒಬ್ಬರ ಉದಾಹರಣೆ ಕೊಡಿ.

6 “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ” ಎಂದು ಜ್ಞಾನೋಕ್ತಿ 24:10 ಹೇಳುತ್ತೆ. ನಮ್ಮನ್ನು ಹೇಗಾದರೂ ನಿರುತ್ಸಾಹಗೊಳಿಸಿದರೆ ಯೆಹೋವನಿಂದ ನಮ್ಮನ್ನು ದೂರಮಾಡುವುದು ಅಷ್ಟೇನು ಕಷ್ಟ ಅಲ್ಲ ಎಂದು ಸೈತಾನನಿಗೆ ಗೊತ್ತು. ಅವನು ಯೋಬನಿಗೆ ತುಂಬ ಕಷ್ಟ ಕೊಡುವ ಮೂಲಕ ನಿರುತ್ಸಾಹಗೊಳಿಸಲು ಪ್ರಯತ್ನಿಸಿದ. ಆದರೆ ಯೋಬ ಯೆಹೋವನಿಗೆ ನಿಷ್ಠನಾಗಿ ಉಳಿದಿದ್ದರಿಂದ ಸೈತಾನನ ಪ್ರಯತ್ನ ಮಣ್ಣು ಮುಕ್ಕಿತು. (ಯೋಬ 2:3; 22:3; 27:5) ನಾವು ಕೂಡ ಅವನ ವಿರುದ್ಧ ಹೋರಾಡಿ ಅವನಿಗೆ ಸೋಲುಣಿಸಬಹುದು. ನಮ್ಮ ಕುಟುಂಬದವರನ್ನು, ಸಹೋದರರನ್ನು ಉತ್ತೇಜಿಸುತ್ತಾ ಇರುವ ಮೂಲಕ ಅವರು ಸಂತೋಷವಾಗಿರಲು ಮತ್ತು ಯೆಹೋವನಿಗೆ ಇನ್ನಷ್ಟು ಹತ್ತಿರವಾಗಲು ಸಹಾಯಮಾಡುತ್ತೇವೆ.

ನಾವು ಅನುಕರಿಸಬೇಕಾದ ಮಾದರಿಗಳು

7, 8. (ಎ) ಯೆಹೋವನು ಜನರನ್ನು ಹೇಗೆ ಪ್ರೋತ್ಸಾಹಿಸಿದನು? (ಬಿ) ಯೆಹೋವನ ಮಾದರಿಯನ್ನು ಹೆತ್ತವರು ಹೇಗೆ ಅನುಕರಿಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

7 ಯೆಹೋವನು ಜನರನ್ನು ಪ್ರೋತ್ಸಾಹಿಸುತ್ತಾನೆ. “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂದು ಕೀರ್ತನೆಗಾರ ಬರೆದನು. (ಕೀರ್ತ. 34:18) ಪ್ರವಾದಿ ಯೆರೆಮೀಯನು ಭಯಪಟ್ಟಾಗ, ನಿರುತ್ತೇಜನಗೊಂಡಾಗ ಯೆಹೋವನು ಸಹಾಯ ಮಾಡುತ್ತೇನೆ ಎಂದು ಮಾತುಕೊಟ್ಟನು. (ಯೆರೆ. 1:6-10) ವೃದ್ಧ ಪ್ರವಾದಿ ದಾನಿಯೇಲನನ್ನು ಬಲಪಡಿಸಲು ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದನು. ಆ ದೇವದೂತನು ದಾನಿಯೇಲನನ್ನು “ಅತಿಪ್ರಿಯನೇ” ಎಂದು ಕರೆದನು. (ದಾನಿ. 10:8, 11, 18, 19) ನಿಮ್ಮ ಸಭೆಯಲ್ಲಿರುವ ಪಯನೀಯರರನ್ನು, ಹಿಂದೆ ಮಾಡುತ್ತಿದ್ದಷ್ಟು ಸೇವೆಯನ್ನು ಈಗ ಮಾಡಲು ಆಗದ ವೃದ್ಧರನ್ನು ಯೆಹೋವನಂತೆ ನೀವು ಪ್ರೋತ್ಸಾಹಿಸುತ್ತೀರಾ?

8 ಯೆಹೋವ ಮತ್ತು ಯೇಸು ಕೋಟ್ಯಾಂತರ ವರ್ಷ ಜೊತೆಗಿದ್ದರು. ಅಷ್ಟು ವರ್ಷ ಯೆಹೋವನು ತನ್ನ ಮಗನನ್ನು ಪ್ರೋತ್ಸಾಹಿಸಿರುತ್ತಾನೆ. ಯೇಸು ಭೂಮಿಗೆ ಬಂದ ಮೇಲೂ ಅವನಿಗೆ ಪ್ರೋತ್ಸಾಹ ಬೇಕಿದೆ ಎಂದು ಯೆಹೋವನಿಗೆ ಗೊತ್ತಿತ್ತು. ಯೇಸು ಸಾರುವ ಕೆಲಸದ ಆರಂಭದಲ್ಲಿ ಮತ್ತು ಭೂಜೀವಿತದ ಕೊನೆಯಲ್ಲಿ ಯೆಹೋವನು ಸ್ವರ್ಗದಿಂದ ಮಾತಾಡಿದ್ದನ್ನು ಕೇಳಿಸಿಕೊಂಡನು. ಆ ಎರಡೂ ಸಂದರ್ಭದಲ್ಲಿ “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಯೆಹೋವನು ಹೇಳಿದನು. (ಮತ್ತಾ. 3:17; 17:5) ಇದನ್ನು ಕೇಳಿಸಿಕೊಂಡಾಗ ತನ್ನ ತಂದೆ ತನ್ನನ್ನು ಪ್ರೀತಿಸುತ್ತಾನೆ ಮತ್ತು ತನ್ನ ಬಗ್ಗೆ ಹೆಮ್ಮೆ ಪಡುತ್ತಾನೆ ಎಂದು ಯೇಸುವಿಗೆ ಗೊತ್ತಾಗಿ ಖಂಡಿತ ಪ್ರೋತ್ಸಾಹ ಸಿಕ್ಕಿರುತ್ತದೆ. ಯೇಸು ತಾನು ಸಾಯುವ ಹಿಂದಿನ ರಾತ್ರಿ ತುಂಬ ಚಿಂತಿತನಾಗಿದ್ದನು. ಅವನನ್ನು ಬಲಪಡಿಸಿ ಸಂತೈಸಲು ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದನು. ಆಗ ಅವನಿಗೆ ಪ್ರೋತ್ಸಾಹ ಸಿಕ್ಕಿತು. (ಲೂಕ 22:43) ಹೆತ್ತವರೇ, ನಿಮ್ಮ ಮಕ್ಕಳನ್ನು ಯಾವಾಗಲೂ ಪ್ರೋತ್ಸಾಹಿಸುತ್ತಾ ಇರುವ ಮೂಲಕ ನೀವು ಯೆಹೋವನನ್ನು ಅನುಕರಿಸಬಹುದು. ಮಕ್ಕಳು ಏನಾದರೂ ಚೆನ್ನಾಗಿ ಮಾಡಿದಾಗ ಅವರ ಬೆನ್ನು ತಟ್ಟಿ ‘ಶಭಾಷ್‌’ ಅನ್ನಿ. ಶಾಲೆಯಲ್ಲಿ ಒತ್ತಡ ಬಂದಾಗ ಅದನ್ನು ನಿಭಾಯಿಸಲು ಸಹಾಯಮಾಡಿ, ಅವರಲ್ಲಿ ಧೈರ್ಯ ತುಂಬಿಸಿ.

9. ಯೇಸು ತನ್ನ ಅಪೊಸ್ತಲರ ಜೊತೆ ನಡಕೊಂಡ ರೀತಿಯಿಂದ ನಾವೇನು ಕಲಿಯಬಹುದು?

9 ಯೇಸು ಕೂಡ ಉತ್ತೇಜಿಸುವುದರಲ್ಲಿ ಒಳ್ಳೇ ಮಾದರಿ. ತಾನು ಸಾಯುವ ಹಿಂದಿನ ರಾತ್ರಿ ಶಿಷ್ಯರ ಪಾದಗಳನ್ನು ತೊಳೆದು ದೀನತೆ ಎಷ್ಟು ಮುಖ್ಯ ಎಂದು ಕಲಿಸಿದನು. ಆದರೆ ಅವರಲ್ಲಿ ಅಹಂಕಾರ ಇತ್ತು ಮತ್ತು ತಮ್ಮಲ್ಲಿ ಯಾರು ದೊಡ್ಡವರು ಎಂದು ಕಿತ್ತಾಡಿದರು. ‘ಯಾರು ಯೇಸುವನ್ನು ಬಿಟ್ಟುಹೋದರೂ ನಾನು ಮಾತ್ರ ಬಿಟ್ಟುಹೋಗುವುದೇ ಇಲ್ಲ’ ಎಂದು ಪೇತ್ರ ಎದೆ ತಟ್ಟಿ ಹೇಳಿದ. (ಲೂಕ 22:24, 33, 34) ಆದರೂ ಯೇಸು ಅವರ ತಪ್ಪುಗಳನ್ನು ಎತ್ತಿ ಆಡಲಿಲ್ಲ. ಕಷ್ಟದ ಸಮಯದಲ್ಲೂ ಅವರು ತನ್ನೊಟ್ಟಿಗೆ ನಿಷ್ಠೆಯಿಂದ ಇದ್ದದ್ದಕ್ಕಾಗಿ ಪ್ರಶಂಸಿಸಿದನು. ಶಿಷ್ಯರು ತಾನು ಮಾಡಿದ್ದಕ್ಕಿಂತ ಹೆಚ್ಚಿನ ಸೇವೆಯನ್ನು ಮಾಡುತ್ತಾರೆ ಎಂದು ಹೇಳಿದನು ಮತ್ತು ತನ್ನ ತಂದೆ ಅವರನ್ನು ಪ್ರೀತಿಸುತ್ತಾನೆ ಎಂಬ ಭರವಸೆಯನ್ನು ಕೊಟ್ಟನು. (ಲೂಕ 22:28; ಯೋಹಾ. 14:12; 16:27) ನಾವು ಹೀಗೆ ಕೇಳಿಕೊಳ್ಳೋಣ: ‘ಯೇಸುವಿನಂತೆ ನಾನು ಬೇರೆಯವರ ತಪ್ಪುಗಳ ಮೇಲೆ ಗಮನಕೊಡದೆ ಅವರಲ್ಲಿರುವ ಒಳ್ಳೇ ಗುಣಗಳನ್ನು ನೋಡಿ ಅವರನ್ನು ಪ್ರಶಂಸಿಸುತ್ತೇನಾ?’

10, 11. (ಎ) ಪೌಲ ಸಹೋದರರನ್ನು ಹೇಗೆ ಪ್ರೋತ್ಸಾಹಿಸಿದನು? (ಬಿ) ಅದನ್ನು ಎಂಥ ಪರಿಸ್ಥಿತಿಯಲ್ಲೂ ಮಾಡಿದನು?

10 ಅಪೊಸ್ತಲ ಪೌಲ ಸಹೋದರರ ಬಗ್ಗೆ ಯಾವಾಗಲೂ ಒಳ್ಳೇದನ್ನೇ ಮಾತಾಡಿದನು. ಅವರಲ್ಲಿ ಕೆಲವರೊಟ್ಟಿಗೆ ತುಂಬ ವರ್ಷ ಮಿಷನರಿ ಸೇವೆ ಮಾಡಿದ್ದರಿಂದ ಅವರ ಬಗ್ಗೆ, ಅವರ ಕುಂದುಕೊರತೆಗಳ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಪೌಲ ಅವರ ಬಲಹೀನತೆಗಳನ್ನು ಎತ್ತಿ ಆಡದೇ ಅವರಲ್ಲಿರುವ ಒಳ್ಳೇ ವಿಷಯಗಳಿಗಾಗಿ ಅವರನ್ನು ಹೊಗಳಿದನು. ಉದಾಹರಣೆಗೆ, ಪೌಲನು ತಿಮೊಥಿ ಬಗ್ಗೆ ಮಾತಾಡುವಾಗ “ಅವನು ಕರ್ತನಲ್ಲಿ ನನಗೆ ಪ್ರಿಯನೂ ನಂಬಿಗಸ್ತನೂ ಆದ ಮಗನಾಗಿದ್ದಾನೆ” ಎಂದು ಹೇಳಿದನು. ಬೇರೆಯವರ ಬಗ್ಗೆ ತುಂಬ ಕಾಳಜಿ ವಹಿಸುತ್ತಾನೆ ಎಂದು ಸಹ ಹೇಳಿದನು. (1 ಕೊರಿಂ. 4:17; ಫಿಲಿ. 2:19, 20) ತೀತನ ಬಗ್ಗೆ ಮಾತಾಡುವಾಗ “ಅವನು ನನ್ನೊಂದಿಗೆ ಪಾಲುಗಾರನೂ ನಿಮ್ಮ ಹಿತಾಸಕ್ತಿಗಾಗಿರುವ ಜೊತೆ ಕೆಲಸಗಾರನೂ ಆಗಿದ್ದಾನೆ” ಎಂದು ಪೌಲ ಹೇಳಿದನು. (2 ಕೊರಿಂ. 8: 23) ತಿಮೊಥಿಗೆ ಮತ್ತು ತೀತನಿಗೆ ಪೌಲನು ತಮ್ಮ ಬಗ್ಗೆ ಹೇಳಿರುವ ವಿಷಯ ಗೊತ್ತಾದಾಗ ಖಂಡಿತ ಪ್ರೋತ್ಸಾಹ ಸಿಕ್ಕಿರುತ್ತದೆ.

11 ಅಪೊಸ್ತಲ ಪೌಲ ಮತ್ತು ಬಾರ್ನಬ ಸಹೋದರರನ್ನು ಪ್ರೋತ್ಸಾಹಿಸಲು ತಮ್ಮ ಪ್ರಾಣವನ್ನೇ ಅಪಾಯಕ್ಕೊಡ್ಡಿದರು. ಹೇಗೆಂದರೆ, ಲುಸ್ತ್ರದ ಜನರು ತಮ್ಮನ್ನು ಮುಗಿಸಿಬಿಡಬೇಕೆಂದಿದ್ದಾರೆ ಎಂದು ಪೌಲ ಮತ್ತು ಬಾರ್ನಬರಿಗೆ ಗೊತ್ತಿತ್ತು. ಆದರೂ ಹೊಸ ಶಿಷ್ಯರನ್ನು ಪ್ರೋತ್ಸಾಹಿಸಲು ಮತ್ತು ಯೆಹೋವನಿಗೆ ನಂಬಿಗಸ್ತರಾಗಿರಲು ಸಹಾಯಮಾಡಲು ಅಲ್ಲಿಗೆ ಹೋದರು. (ಅ. ಕಾ. 14:19-22) ಎಫೆಸಕ್ಕೆ ಬಂದಾಗ ಜನರ ಗುಂಪು ಪೌಲನ ವಿರುದ್ಧ ಸಿಡಿದೆದ್ದರೂ ಅವನು ಅಲ್ಲೇ ಇದ್ದು ಸಹೋದರರನ್ನು ಉತ್ತೇಜಿಸಿದನು. “ಪೌಲನು ಶಿಷ್ಯರನ್ನು ಕರೆಸಿ ಅವರನ್ನು ಉತ್ತೇಜಿಸಿ ಅವರಿಗೆ ವಿದಾಯ ಹೇಳಿ ಮಕೆದೋನ್ಯಕ್ಕೆ ಹೊರಟನು. ಆ ಪ್ರದೇಶದಾದ್ಯಂತ ಸಂಚರಿಸಿ ಅಲ್ಲಿದ್ದವರನ್ನು ಅನೇಕ ಮಾತುಗಳಿಂದ ಉತ್ತೇಜಿಸಿದ ಮೇಲೆ ಗ್ರೀಸ್‌ದೇಶಕ್ಕೆ ಬಂದನು” ಎನ್ನುತ್ತದೆ ಅಪೊಸ್ತಲರ ಕಾರ್ಯಗಳು 20:1, 2.

ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ

12. ಕೂಟಕ್ಕೆ ಹೋಗುವುದು ತುಂಬ ಒಳ್ಳೇದು ಯಾಕೆ?

12 ಯೆಹೋವನು ನಮಗೆ ಒಳ್ಳೇದನ್ನೇ ಬಯಸುತ್ತಾನೆ. ಅದಕ್ಕೆ ತಪ್ಪದೆ ಕೂಟಗಳಿಗೆ ಹೋಗಲು ಹೇಳಿದ್ದಾನೆ. ಕೂಟದಲ್ಲಿ ನಾವು ಯೆಹೋವನ ಬಗ್ಗೆ ಕಲಿಯುತ್ತೇವೆ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ. (1 ಕೊರಿಂ. 14:31; ಇಬ್ರಿಯ 10:24, 25 ಓದಿ.) ಈ ಲೇಖನದ ಆರಂಭದಲ್ಲಿ ತಿಳಿಸಲಾದ ಕ್ರಿಸ್ಟಿನಾ ಕೂಟಗಳ ಬಗ್ಗೆ ಏನು ಹೇಳುತ್ತಾಳೆ ಎಂದು ಕೇಳಿ: “ಕೂಟದಲ್ಲಿ ಸಿಗುವ ಪ್ರೀತಿ ಮತ್ತು ಪ್ರೋತ್ಸಾಹ ನನಗೆ ತುಂಬ ಇಷ್ಟ. ಕೆಲವು ಸಲ ತುಂಬ ಬೇಜಾರಾಗಿರುತ್ತೆ. ಆದರೆ ಕೂಟಕ್ಕೆ ಹೋದಾಗ ಸಹೋದರಿಯರು ನನ್ನತ್ರ ಬಂದು ಮಾತಾಡುತ್ತಾರೆ, ನನ್ನ ತಬ್ಬಿಕೊಂಡು ತುಂಬ ಚೆನ್ನಾಗಿ ಕಾಣಿಸ್ತಿದ್ದೀನಿ ಅಂತ ಹೇಳ್ತಾರೆ. ‘ನೀನಂದ್ರೆ ನಮಗೆ ತುಂಬ ಇಷ್ಟ, ನಿನ್ನ ಪ್ರಗತಿ ನೋಡುವಾಗ ತುಂಬ ಖುಷಿ ಆಗುತ್ತೆ’ ಎಂದೆಲ್ಲಾ ಹೇಳೋದನ್ನು ಕೇಳುವಾಗ ನನ್ನ ಬೇಜಾರೆಲ್ಲಾ ಮಾಯ ಆಗಿಬಿಡುತ್ತೆ.” ಇತರರನ್ನು ಪ್ರೋತ್ಸಾಹಿಸುವುದು ತುಂಬ ಮುಖ್ಯ ಎಂದು ಈ ಅನುಭವ ತೋರಿಸುತ್ತಲ್ವಾ?—ರೋಮ. 1:11, 12.

13. ತುಂಬ ವರ್ಷಗಳಿಂದ ಯೆಹೋವನ ಸೇವೆಮಾಡುವವರಿಗೂ ಪ್ರೋತ್ಸಾಹ ಬೇಕು ಯಾಕೆ?

13 ತುಂಬ ವರ್ಷಗಳಿಂದ ಸೇವೆ ಮಾಡುತ್ತಿರುವವರಿಗೂ ಪ್ರೋತ್ಸಾಹ ಬೇಕು. ಯೆಹೋಶುವನನ್ನೇ ತೆಗೆದುಕೊಳ್ಳಿ. ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ತುಂಬ ಹತ್ತಿರ ಬಂದಿದ್ದಾಗ ಅವರನ್ನು ನಡೆಸಲು ಯೆಹೋವನು ಯೆಹೋಶುವನನ್ನು ಆರಿಸಿದನು. ಯೆಹೋಶುವನು ತುಂಬ ವರ್ಷಗಳಿಂದ ದೇವರ ಸೇವೆ ಮಾಡುತ್ತಿದ್ದನು. ಆದರೂ ಯೆಹೋವನು ಮೋಶೆಗೆ ಅವನನ್ನು ಪ್ರೋತ್ಸಾಹಿಸಲು ಹೇಳಿದನು. ಆತನು ಹೇಳಿದ್ದು: “ಯೆಹೋಶುವನನ್ನು ಪ್ರೋತ್ಸಾಹಿಸು. ಅವನಿಗೆ ವಿಷಯಗಳನ್ನೆಲ್ಲಾ ತಿಳಿಯ ಪಡಿಸು. ಅವನು ಜನರನ್ನು . . . ನಡೆಸಬೇಕು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಅವನು ಅವರಿಗೆ ಸಹಾಯಮಾಡುವನು. ಆದುದರಿಂದ ಅವನನ್ನು ಬಲಪಡಿಸು.” (ಧರ್ಮೋ. 3:27, 28, ಪರಿಶುದ್ಧ ಬೈಬಲ್‌ ಭಾಷಾಂತರ [2]) ಯೆಹೋಶುವನಿಗೆ ಪ್ರೋತ್ಸಾಹ ಬೇಕಿತ್ತು. ಯಾಕೆಂದರೆ ಇಸ್ರಾಯೇಲ್ಯರು ಮುಂದೆ ಅನೇಕ ಯುದ್ಧಗಳನ್ನು ಮಾಡಲಿದ್ದರು. ಅಷ್ಟೇ ಅಲ್ಲ, ಒಂದು ಯುದ್ಧದಲ್ಲಿ ಸೋಲಿನ ನೋವನ್ನು ಕೂಡ ಅನುಭವಿಸಲಿದ್ದರು. (ಯೆಹೋ. 7:1-9) ಇಂದು ದೇವಜನರನ್ನು ಚೆನ್ನಾಗಿ ನೋಡಿಕೊಳ್ಳಲು ತಮ್ಮ ಜೀವನವನ್ನೇ ಸವೆಸುತ್ತಿರುವ ಹಿರಿಯರನ್ನು ಮತ್ತು ಸಂಚರಣ ಮೇಲ್ವಿಚಾರಕರನ್ನು ನಾವು ಪ್ರೋತ್ಸಾಹಿಸಬೇಕು. (1 ಥೆಸಲೋನಿಕ 5:12, 13 ಓದಿ.) ಒಬ್ಬ ಸಂಚರಣ ಮೇಲ್ವಿಚಾರಕ ಹೇಳಿದ್ದು: “ಕೆಲವೊಮ್ಮೆ ಸಹೋದರರು ನಮ್ಮ ಭೇಟಿಯನ್ನು ಎಷ್ಟು ಆನಂದಿಸಿದರು ಅಂತ ಒಂದು ಕಾರ್ಡಲ್ಲಿ ಬರೆದು ಕೊಡುತ್ತಾರೆ. ಮನಸ್ಸು ಭಾರ ಅನಿಸಿದಾಗ ನಮಗೆ ಸಿಕ್ಕಿದ ಕಾರ್ಡಗಳನ್ನು ತೆಗೆದು ಓದ್ತೀವಿ. ಆಗ ನಮಗೆ ತುಂಬ ಪ್ರೋತ್ಸಾಹ ಸಿಗುತ್ತೆ.”

ನಾವು ಮಕ್ಕಳನ್ನು ಪ್ರೀತಿಯಿಂದ ಪ್ರೋತ್ಸಾಹಿಸಿದರೆ ಅವರು ಯೆಹೋವನಿಗೆ ಆಪ್ತರಾಗುತ್ತಾರೆ (ಪ್ಯಾರ 14 ನೋಡಿ)

14. ಬೇರೆಯವರಿಗೆ ಬುದ್ಧಿವಾದ ಕೊಡುವಾಗ ಅವರನ್ನು ಪ್ರಶಂಸಿಸುವುದು ಮುಖ್ಯ ಎಂದು ಯಾವ ಉದಾಹರಣೆಗಳು ತೋರಿಸುತ್ತವೆ?

14 ಒಂದು ಸಲ ಪೌಲ ಕೊರಿಂಥದಲ್ಲಿದ್ದ ಸಹೋದರರಿಗೆ ಬುದ್ಧಿವಾದ ಕೊಟ್ಟನು. ಅವರು ತಿದ್ದಿಕೊಂಡಾಗ ಪೌಲ ಅವರನ್ನು ಪ್ರಶಂಸಿಸಿದನು. (2 ಕೊರಿಂ. 7:8-11) ಇನ್ನು ಮುಂದೆ ಆ ತಪ್ಪನ್ನು ಮಾಡದೇ ಇರಲು ಅವನ ಮಾತುಗಳು ಅವರನ್ನು ಉತ್ತೇಜಿಸಿರುತ್ತೆ. ಹೆತ್ತವರು ಮತ್ತು ಹಿರಿಯರು ಪೌಲನ ಮಾದರಿಯನ್ನು ಅನುಕರಿಸಬೇಕು. ಇಬ್ಬರು ಮಕ್ಕಳ ತಂದೆ ಆಂದ್ರೆಯಾಸ್‌ ಹೀಗೆ ಹೇಳುತ್ತಾರೆ: “ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರೆ ಅವರು ಯೆಹೋವನಿಗೆ ಹತ್ತಿರವಾಗುತ್ತಾರೆ ಮತ್ತು ಪ್ರೌಢ ವ್ಯಕ್ತಿಗಳಾಗುತ್ತಾರೆ. ನಾವು ಕೊಡೋ ಶಿಸ್ತನ್ನು ಕೂಡ ಅವರು ಸಂತೋಷದಿಂದ ಸ್ವೀಕರಿಸುತ್ತಾರೆ. ಮಕ್ಕಳಿಗೆ ಪ್ರೋತ್ಸಾಹ ಕೊಡ್ತಾ ಇದ್ರೆ ನಾವಿದ್ರೂ ಇಲ್ಲದಿದ್ರೂ ಅವರು ಸರಿಯಾಗಿರೋದನ್ನೇ ಮಾಡ್ತಾರೆ.”

ಹೇಗೆ ಪ್ರೋತ್ಸಾಹಿಸಬೇಕು?

15. ಬೇರೆಯವರನ್ನು ಪ್ರೋತ್ಸಾಹಿಸುವ ಒಂದು ವಿಧ ಯಾವುದು?

15 ಸಹೋದರ ಸಹೋದರಿಯರಲ್ಲಿರುವ ಒಳ್ಳೇ ಗುಣಗಳನ್ನು, ಅವರು ಯೆಹೋವನಿಗಾಗಿ ಮಾಡುವ ಎಲ್ಲಾ ವಿಷಯಗಳನ್ನು ನೀವು ಮಾನ್ಯಮಾಡುತ್ತೀರಿ ಎಂದು ಹೇಳಿ. (2 ಪೂರ್ವ. 16:9; ಯೋಬ 1:8) ಹೀಗೆ ನಾವು ಯೆಹೋವ ಮತ್ತು ಯೇಸುವನ್ನು ಅನುಕರಿಸುತ್ತೇವೆ. ಅವರಿಬ್ಬರೂ ನಾವು ಮಾಡುವ ಚಿಕ್ಕಪುಟ್ಟ ಕೆಲಸವನ್ನು ಕೂಡ ಮಾನ್ಯಮಾಡುತ್ತಾರೆ. (ಲೂಕ 21:1-4; 2 ಕೊರಿಂಥ 8:12 ಓದಿ.) ಸಭೆಯಲ್ಲಿರುವ ಕೆಲವು ವೃದ್ಧ ಸಹೋದರ ಸಹೋದರಿಯರಿಗೆ ತಪ್ಪದೆ ಕೂಟಕ್ಕೆ ಬರಲು ಮತ್ತು ಸೇವೆಗೆ ಹೋಗಲು ಕಷ್ಟ ಆಗುತ್ತದೆ. ಆದರೂ ಅವರು ಮಾಡುತ್ತಿರುವ ಪ್ರಯತ್ನಕ್ಕೆ ನಾವು ಅವರನ್ನು ಪ್ರಶಂಸಿಸಿ ಪ್ರೋತ್ಸಾಹಿಸುತ್ತೇವಾ?

16. ಬೇರೆಯವರನ್ನು ನಾವು ಯಾವಾಗ ಪ್ರೋತ್ಸಾಹಿಸಬೇಕು?

16 ಸಂದರ್ಭ ಸಿಕ್ಕಿದಾಗೆಲ್ಲ ಪ್ರೋತ್ಸಾಹಿಸಿ. ಕೊಟ್ಟ ಕೆಲಸವನ್ನು ಯಾರಾದರೂ ಚೆನ್ನಾಗಿ ಮಾಡಿದಾಗ ಅವರನ್ನು ಪ್ರಶಂಸಿಸಲು ಮರೆಯಬೇಡಿ. ಪೌಲ ಮತ್ತು ಬಾರ್ನಬ ಪಿಸಿದ್ಯದಲ್ಲಿದ್ದ ಅಂತಿಯೋಕ್ಯಕ್ಕೆ ಬಂದಾಗ ಸಭಾಮಂದಿರದ ಸಭಾಪತಿಗಳು ಅವರಿಗೆ “ಸಹೋದರರೇ, ಜನರಿಗಾಗಿ ಉತ್ತೇಜನದ ಮಾತೇನಾದರೂ ನಿಮ್ಮಲ್ಲಿ ಇದ್ದರೆ ಅದನ್ನು ತಿಳಿಸಿರಿ” ಎಂದು ಹೇಳಿದರು. ಪೌಲ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿದನು. (ಅ. ಕಾ. 13:13-16, 42-44) ನಾವು ಬೇರೆಯವರನ್ನು ಪ್ರೋತ್ಸಾಹಿಸಿದರೆ ಅವರೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ.—ಲೂಕ 6:38.

17. ಇತರರನ್ನು ಉತ್ತೇಜಿಸುವಾಗ ಏನು ಮಾಡಬೇಕು?

17 ಕಾರಣ ಕೊಡಿ. ಯೇಸು ಥುವತೈರದ ಸಹೋದರರನ್ನು ಪ್ರಶಂಸಿಸಿದಾಗ ಅವರು ಯಾವ ಒಳ್ಳೇ ಕೆಲಸವನ್ನು ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಿದನು. (ಪ್ರಕಟನೆ 2:18, 19 ಓದಿ.) ಯೇಸುವನ್ನು ನಾವು ಹೇಗೆ ಅನುಕರಿಸಬಹುದು? ಉದಾಹರಣೆಗೆ, ಕಷ್ಟ ಇದ್ದರೂ ಒಂಟಿ ತಾಯಿ ತನ್ನ ಮಕ್ಕಳನ್ನು ಒಳ್ಳೇ ರೀತಿ ಬೆಳೆಸಿರುವುದಕ್ಕಾಗಿ ಅವರನ್ನು ಪ್ರಶಂಸಿಸಬಹುದು. ನಿಮಗೆ ಮಕ್ಕಳಿರುವುದಾದರೆ ಅವರು ಯೆಹೋವನ ಸೇವೆಮಾಡಲು ಮಾಡುತ್ತಿರುವ ಪ್ರಯತ್ನಕ್ಕೆ ಅವರನ್ನು ಪ್ರಶಂಸಿಸಬಹುದು. ಏನೋ ಹೊಗಳಬೇಕಲ್ಲ ಎಂದು ಹೊಗಳಬೇಡಿ. ನೀವು ಅವರಲ್ಲಿ ಏನು ಗಮನಿಸಿದಿರಿ, ಯಾಕೆ ಹೊಗಳುತ್ತಿದ್ದೀರಿ ಎಂದು ಅವರಿಗೆ ಹೇಳಿ. ಹೀಗೆ ಇತರರನ್ನು ಉತ್ತೇಜಿಸುವಾಗ ಕಾರಣ ಹೇಳಿದರೆ ನಾವು ಹೇಳುತ್ತಿರುವುದು ನಿಜ ಎಂದು ಅವರಿಗೆ ಗೊತ್ತಾಗುತ್ತದೆ.

18, 19. ಯೆಹೋವನಿಗೆ ಹತ್ತಿರವಾಗಲು ಒಬ್ಬರಿಗೊಬ್ಬರು ಹೇಗೆ ಸಹಾಯಮಾಡಬಹುದು?

18 ಯೆಹೋಶುವನನ್ನು ಉತ್ತೇಜಿಸಿ ಬಲಪಡಿಸುವಂತೆ ಯೆಹೋವನು ಮೋಶೆಗೆ ಹೇಳಿದನು. ಯೆಹೋವನು ಇವತ್ತು ನಮ್ಮ ಹತ್ತಿರ ನೇರವಾಗಿ ಮಾತಾಡಿ ‘ಈ ವ್ಯಕ್ತಿಯನ್ನು ಉತ್ತೇಜಿಸು’ ಎಂದು ಹೇಳಲ್ಲ ನಿಜ. ಆದರೆ ಇತರರನ್ನು ಉತ್ತೇಜಿಸಲು ನಾವು ಪ್ರಯತ್ನ ಮಾಡಿದರೆ ಯೆಹೋವನಿಗೆ ಖಂಡಿತ ಖುಷಿ ಆಗುತ್ತೆ. (ಜ್ಞಾನೋ. 19:17; ಇಬ್ರಿ. 12:12) ಉದಾಹರಣೆಗೆ, ಒಬ್ಬ ಸಹೋದರನು ಕೊಟ್ಟ ಭಾಷಣದಲ್ಲಿ ಯಾವ ಅಂಶ ನಿಮಗೆ ತುಂಬ ಹಿಡಿಸಿತು ಎಂದು ಅವರಿಗೆ ಹೇಳಿ. ನಿಮಗಿರುವ ಯಾವುದೋ ಸಮಸ್ಯೆಯನ್ನು ನಿಭಾಯಿಸಲು ಅಥವಾ ಒಂದು ವಚನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆ ಭಾಷಣ ಸಹಾಯಮಾಡಿರಬಹುದು. ಅದನ್ನು ಅವರಿಗೆ ಹೇಳಿ. ಭಾಷಣ ಕೊಟ್ಟ ಸಹೋದರನಿಗೆ ಒಬ್ಬ ಸಹೋದರಿ ಬರೆದ ಪತ್ರದಲ್ಲಿ ಹೀಗೆ ಹೇಳಿದಳು: “ನೀವು ಭಾಷಣ ಕೊಡುವಾಗ ನಿಮ್ಮ ಮಾತಲ್ಲಿ ದಯೆ, ಕಾಳಜಿ ಎದ್ದು ಕಾಣುತ್ತಿತ್ತು. ಆಗ ಯೆಹೋವನೇ ನನ್ನತ್ರ ಮಾತಾಡುತ್ತಿದ್ದಾನೆ ಅಂತ ಅನಿಸ್ತು. ನೀವು ನನ್ನ ಹತ್ರ ಮಾತಾಡುವಾಗ ನನ್ನನ್ನ ಉತ್ತೇಜಿಸುತ್ತೀರ. ಕೆಲವೇ ನಿಮಿಷ ಮಾತಾಡಿದರೂ ನನ್ನ ಮನಸ್ಸಿನ ನೋವನ್ನು ಅರ್ಥಮಾಡಿಕೊಳ್ಳುತ್ತೀರ.”

19 “ನೀವು ಈಗ ಮಾಡುತ್ತಿರುವಂತೆಯೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ” ಎಂಬ ಪೌಲನ ಸಲಹೆಯನ್ನು ಪಾಲಿಸಿದರೆ ನಾವು ಯೆಹೋವನಿಗೆ ಹತ್ತಿರವಾಗಲು ಒಬ್ಬರಿಗೊಬ್ಬರು ಸಹಾಯಮಾಡುತ್ತೇವೆ. (1 ಥೆಸ. 5:11, ಪವಿತ್ರ ಗ್ರಂಥ ಭಾಷಾಂತರ) ನಾವು ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿದರೆ ಯೆಹೋವನು ತುಂಬ ಖುಷಿ ಪಡುತ್ತಾನೆ.

^ [1] (ಪ್ಯಾರ 1) ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ [2] (ಪ್ಯಾರ 13) Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.