ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಾತಿಗೆ ನೀವು ಬೆಲೆಕೊಡುತ್ತೀರಾ?

ಯೆಹೋವನ ಮಾತಿಗೆ ನೀವು ಬೆಲೆಕೊಡುತ್ತೀರಾ?

ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿಸಿಕೊಂಡಾಗ ಅದು ನಿಜವಾಗಿ ಆಗಿರುವಂತೆ, ದೇವರ ವಾಕ್ಯವೆಂದು ಎಣಿಸಿ ಸ್ವೀಕರಿಸಿದಿರಿ.’—1 ಥೆಸ. 2:13.

ಗೀತೆಗಳು: 114, 113

1-3. (ಎ) ಯುವೊದ್ಯ ಮತ್ತು ಸಂತುಕೆಯ ಮಧ್ಯೆ ಏನಾಗಿರಬಹುದು? (ಬಿ) ಇಂಥ ಸಮಸ್ಯೆಗಳು ಬರದಂತೆ ಹೇಗೆ ನೋಡಿಕೊಳ್ಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

ಯೆಹೋವನ ಮಾತು ಬೈಬಲಿನಲ್ಲಿದೆ. ಆದ್ದರಿಂದ ನಾವು ಬೈಬಲಿಗೆ ತುಂಬ ಗೌರವ ಕೊಡುತ್ತೇವೆ. ಏನಾದರೂ ಸಮಸ್ಯೆ ಎದುರಾದರೆ ಅದನ್ನು ಪರಿಹರಿಸಲು ಬೇಕಾದ ಉಪಾಯ ಬೈಬಲಲ್ಲಿದೆ. ನಾವೇನಾದರೂ ತಪ್ಪು ಮಾಡಿದ್ರೆ ಅದು ನಮ್ಮನ್ನು ತಿದ್ದುತ್ತೆ. ಹಾಗಾದರೆ, ದೇವರ ವಾಕ್ಯದಿಂದ ಕೆಲವು ಸಲಹೆ-ಸೂಚನೆಗಳು ಸಿಕ್ಕಿದಾಗ ನಾವೇನು ಮಾಡಬೇಕು? ಮೊದಲನೇ ಶತಮಾನದಲ್ಲಿದ್ದ ಅಭಿಷಿಕ್ತ ಸ್ತ್ರೀಯರಾದ ಯುವೊದ್ಯ ಮತ್ತು ಸಂತುಕೆಯ ಉದಾಹರಣೆ ತೆಗೆದುಕೊಳ್ಳಿ. ಏನೋ ಕಾರಣಕ್ಕೆ ಅವರಿಬ್ಬರ ಮಧ್ಯೆ ಜಗಳ ಆಗಿತ್ತು.

2 ಒಂದುವೇಳೆ ಯುವೊದ್ಯ ಕೆಲವು ಸಹೋದರ ಸಹೋದರಿಯರನ್ನು ತನ್ನ ಮನೆಗೆ ಊಟಕ್ಕೆ ಕರೆದಿರಬಹುದು. ಆದರೆ ಸಂತುಕೆಯನ್ನು ಕರೆದಿರಲಿಕ್ಕಿಲ್ಲ. ಆಮೇಲೆ ಅವಳ ಮನೆಗೆ ಹೋಗಿ ಬಂದವರು ತುಂಬ ಆನಂದಿಸಿದ್ವಿ ಅಂತ ಮಾತಾಡಿಕೊಂಡಾಗ ಸಂತುಕೆಗೆ ಸಿಟ್ಟು ಬಂದಿರಬಹುದು. ‘ಯುವೊದ್ಯ ಹೀಗೆ ಮಾಡ್ತಾಳೆ ಅಂತ ನಾನ್‌ ನೆನಸಿರಲಿಲ್ಲ. ನಾವು ಒಂದೇ ತಾಯಿ ಮಕ್ಕಳಂತೆ ಇದ್ವಿ’ ಎಂದು ಗೊಣಗಿರಬಹುದು. ಅವಳಿಗೆ ತನ್ನನ್ನು ಕಂಡ್ರೆ ಆಗಲ್ಲ, ಅದಕ್ಕೆ ಹೀಗೆ ಮಾಡಿರಬೇಕು ಅಂತ ನೆನಸಿರಬಹುದು. ‘ಅವಳಿಗೆ ಮಾಡ್ತೀನಿರು’ ಅಂದುಕೊಂಡು ಯುವೊದ್ಯಳ ಮನೆಗೆ ಹೋಗಿದ್ದ ಅದೇ ವ್ಯಕ್ತಿಗಳನ್ನು ತನ್ನ ಮನೆಗೆ ಊಟಕ್ಕೆ ಕರೆದು ಯುವೊದ್ಯಳನ್ನು ಕರೆಯದೆ ಬಿಟ್ಟಿರಬಹುದು. ಇದು ಇಡೀ ಸಭೆಯ ಶಾಂತಿಯನ್ನು ಕೆಡಿಸಿರಬಹುದು. ಪೌಲ ಈ ಸಹೋದರಿಯರಿಗೆ ಬುದ್ಧಿಹೇಳಿ ಸಮಾಧಾನ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿದನು ಎಂದು ಬೈಬಲ್‌ ಹೇಳುತ್ತದೆ. ಈ ಸಹೋದರಿಯರು ಅವನ ಮಾತಿಗೆ ಕಿವಿಗೊಟ್ಟು ಸಂತೋಷದಿಂದ ತಮ್ಮ ಸೇವೆಯನ್ನು ಮುಂದುವರಿಸಿದರೆಂದು ತೋರುತ್ತದೆ.—ಫಿಲಿ. 4:2, 3.

3 ಇಂದು ನಮಗೆ ಕೂಡ ಒಬ್ಬ ಸಹೋದರ ಅಥವಾ ಸಹೋದರಿಯೊಂದಿಗೆ ಏನಾದರೂ ಮನಸ್ತಾಪ ಆಗಿಬಿಡಬಹುದು. ಆದರೆ ಬೈಬಲು ಹೇಳುವಂತೆ ಮಾಡಿದರೆ ಇಂಥ ಸಮಸ್ಯೆಗಳನ್ನು ಸರಿ ಮಾಡಬಹುದು, ಸಮಸ್ಯೆಗಳು ಬರದ ಹಾಗೆ ಕೂಡ ನೋಡಿಕೊಳ್ಳಬಹುದು. ಬೈಬಲಿನ ಸಲಹೆಯನ್ನು ಪಾಲಿಸುವಾಗ ನಾವು ದೇವರ ಮಾತಿಗೆ ನಿಜಕ್ಕೂ ಬೆಲೆಕೊಡುತ್ತೇವೆ ಎಂದು ತೋರಿಸಿಕೊಡುತ್ತೇವೆ.—ಕೀರ್ತ. 27:11.

ನಮ್ಮ ಕೋಪತಾಪವನ್ನು ನಿಯಂತ್ರಿಸುವಂತೆ ಬೈಬಲ್‌ ಹೇಳುತ್ತದೆ

4, 5. ನಮ್ಮ ಕೋಪತಾಪವನ್ನು ನಿಯಂತ್ರಿಸುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

4 ಕೋಪತಾಪವನ್ನು ನಿಯಂತ್ರಿಸುವುದು ಅಷ್ಟು ಸುಲಭ ಅಲ್ಲ. ಯಾರಾದರೂ ನಮ್ಮ ಮನಸ್ಸಿಗೆ ನೋವಾಗುವ ತರ ಮಾತಾಡಿಬಿಟ್ಟರೆ ಅಥವಾ ನ್ಯಾಯವಾಗಿ ನಡಕೊಂಡಿಲ್ಲವಾದರೆ ನಮಗೆ ತುಂಬ ಬೇಸರವಾಗಬಹುದು, ಸಿಟ್ಟುಬರಬಹುದು. ನಮ್ಮ ಸಂಸ್ಕೃತಿ, ಮೈಬಣ್ಣ, ಹೊರತೋರಿಕೆಯ ಬಗ್ಗೆ ಏನಾದರೂ ಹೇಳಿಬಿಟ್ಟರೆ ಪಿತ್ತ ನಿತ್ತಿಗೇರಬಹುದು. ಇದನ್ನು ನಮ್ಮ ಒಬ್ಬ ಸಹೋದರ ಅಥವಾ ಸಹೋದರಿನೇ ಮಾಡಿದರೆ ತುಂಬ ಕಷ್ಟ ಆಗಬಹುದು. ಇಂಥ ಸಮಯದಲ್ಲಿ ದೇವರು ಕೊಡುವ ಯಾವ ಸಲಹೆ ನಮಗೆ ಸಹಾಯ ಮಾಡುತ್ತದೆ?

5 ನಾವು ನಮ್ಮ ಕೋಪತಾಪವನ್ನು ನಿಯಂತ್ರಿಸದೆ ಹೋದರೆ ಏನಾಗುತ್ತೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ನಮಗೆ ಕೋಪ ಬಂದರೆ ಹಿಂದೆ ಮುಂದೆ ಯೋಚಿಸದೆ ಏನಾದರೂ ಹೇಳಿಬಿಡಬಹುದು ಅಥವಾ ಮಾಡಿಬಿಡಬಹುದು. ಆಮೇಲೆ ‘ಛೇ, ಯಾಕಪ್ಪಾ ಹೀಗ್‌ ಮಾಡ್ದೆ’ ಅಂತ ಬೇಸರ ಮಾಡಿಕೊಳ್ಳಬಹುದು. ಆದ್ದರಿಂದ ನಮ್ಮ ಕೋಪಕ್ಕೆ ಕಡಿವಾಣ ಹಾಕುವಂತೆ ಯೆಹೋವನು ಹೇಳುತ್ತಾನೆ. ಮುಟ್ಟಿದರೆ ಮುನಿ ಅನ್ನುವ ತರ ನಾವು ಇರಬಾರದು. ಬೈಬಲಿನ ಸಲಹೆಯನ್ನು ಪಾಲಿಸಿದರೆ ಎಷ್ಟೋ ಸಮಸ್ಯೆಗಳನ್ನು ತಪ್ಪಿಸಬಹುದಲ್ಲಾ? (ಜ್ಞಾನೋಕ್ತಿ 16:32; ಪ್ರಸಂಗಿ 7:9 ಓದಿ.) ಬೇರೆಯವರನ್ನು ಕ್ಷಮಿಸಬೇಕೆಂದು ಸಹ ಬೈಬಲ್‌ ಹೇಳುತ್ತದೆ. ಇಲ್ಲಾಂದ್ರೆ ಯೆಹೋವನು ನಮ್ಮನ್ನು ಕ್ಷಮಿಸಲ್ಲ ಎಂದು ಯೇಸು ಹೇಳಿದ್ದಾನೆ. (ಮತ್ತಾ. 6:14, 15) ನೀವು ಹೆಚ್ಚು ತಾಳ್ಮೆ ತೋರಿಸುತ್ತಾ ಬೇರೆಯವರನ್ನು ಕ್ಷಮಿಸುವ ವಿಷಯದಲ್ಲಿ ಪ್ರಗತಿ ಮಾಡಬೇಕಾಗಿದೆಯಾ?

6. ನಮ್ಮ ಕೋಪತಾಪಕ್ಕೆ ಕಡಿವಾಣ ಹಾಕದೆ ಹೋದರೆ ಏನಾಗಬಹುದು?

6 ನಾವು ನಮ್ಮ ಕೋಪತಾಪವನ್ನು ನಿಯಂತ್ರಿಸದೆ ಹೋದರೆ ನಮಗೆ ನೋವು ಮಾಡಿದ ವ್ಯಕ್ತಿಯನ್ನು ದ್ವೇಷಿಸಲು ಆರಂಭಿಸಬಹುದು. ಇದರ ಬಗ್ಗೆ ಸಭೆಯಲ್ಲಿ ಮಾತಾಡಿ ಬೇರೆಯವರ ತಲೆಯನ್ನೂ ಕೆಡಿಸಬಹುದು. ಬೂದಿ ಮುಚ್ಚಿದ ಕೆಂಡದ ತರ ಕೋಪವನ್ನು ಮನಸ್ಸಿನಲ್ಲೇ ಇಟ್ಟುಕೊಂಡರೂ ಬೇರೆಯವರಿಗೆ ಗೊತ್ತಾಗಿಬಿಡುತ್ತದೆ. ಆಗ ನಮ್ಮ ಸಹೋದರ ಸಹೋದರಿಯರು ನಮ್ಮಿಂದ ದೂರ ಆಗಬಹುದು. (ಜ್ಞಾನೋ. 26:24-26) ಹಿರಿಯರು, ನಮ್ಮಲ್ಲಿ ಕೋಪ ಕ್ರೋಧವನ್ನು ಇಟ್ಟುಕೊಳ್ಳುವುದು ಸರಿಯಲ್ಲ, ನಾವು ಬೇರೆಯವರನ್ನು ಕ್ಷಮಿಸಲು ಪ್ರಯತ್ನಿಸಬೇಕೆಂದು ಬೈಬಲಿನಿಂದ ಸಲಹೆ ಕೊಡಬಹುದು. (ಯಾಜ. 19:17, 18; ರೋಮ. 3:11-18) ಇಂಥ ಸನ್ನಿವೇಶದಲ್ಲಿ ನಾವು ದೇವರ ವಾಕ್ಯ ಹೇಳುವಂತೆ ಮಾಡುತ್ತೇವಾ?

ಯೆಹೋವನೇ ನಮಗೆ ದಾರಿದೀಪ

7, 8. (ಎ) ಯೆಹೋವನು ತನ್ನ ಜನರನ್ನು ಹೇಗೆ ಮಾರ್ಗದರ್ಶಿಸುತ್ತಾನೆ? (ಬಿ) ಬೈಬಲು ಯಾವ ಕೆಲವು ಸಲಹೆ-ಸೂಚನೆಗಳನ್ನು ಕೊಡುತ್ತದೆ ಮತ್ತು ಅವುಗಳನ್ನು ನಾವು ಏಕೆ ಪಾಲಿಸಬೇಕು?

7 ಯೆಹೋವನು ಇಂದು ಭೂಮಿಯ ಮೇಲಿರುವ ತನ್ನ ಜನರಿಗೆ ಕಲಿಸಿ ಮಾರ್ಗದರ್ಶಿಸುತ್ತಾನೆ. ಹೇಗೆ? ಕ್ರಿಸ್ತನನ್ನು ‘ಸಭೆಯ ಶಿರಸ್ಸಾಗಿ’ ನೇಮಿಸಿದ್ದಾನೆ. ಯೆಹೋವನ ಜನರಿಗೆ ಬೇಕಾದ ಮಾರ್ಗದರ್ಶನವನ್ನು ಕೊಟ್ಟು ಮುನ್ನಡೆಸಲು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಕ್ರಿಸ್ತನು ನೇಮಿಸಿದ್ದಾನೆ. (ಎಫೆ. 5:23; ಮತ್ತಾ. 24:45-47) ಮೊದಲನೇ ಶತಮಾನದಲ್ಲಿದ್ದ ಆಡಳಿತ ಮಂಡಲಿಗೆ ಬೈಬಲಿನ ಮೇಲೆ ಆಳವಾದ ಗೌರವ ಇದ್ದಂತೆ ಇವರಿಗೂ ಇದೆ. ಏಕೆಂದರೆ ಅದರಲ್ಲಿ ದೇವರು ಹೇಳಿರುವ ಮಾತುಗಳಿವೆ. (1 ಥೆಸಲೊನೀಕ 2:13 ಓದಿ.) ಬೈಬಲು ನಮ್ಮ ಪ್ರಯೋಜನಕ್ಕಾಗಿ ಯಾವ ಕೆಲವು ಸಲಹೆ-ಸೂಚನೆಗಳನ್ನು ಕೊಟ್ಟಿದೆ?

8 ನಾವು ಕೂಟಗಳಿಗೆ ಕ್ರಮವಾಗಿ ಹೋಗಬೇಕೆಂದು ಬೈಬಲ್‌ ಹೇಳುತ್ತದೆ. (ಇಬ್ರಿ. 10:24, 25) ನಾವು ನಂಬುವ ಬೈಬಲ್‌ ಬೋಧನೆಗಳು ಸಹ ಒಂದೇ ಆಗಿರಬೇಕೆಂದು ಅದು ಹೇಳುತ್ತದೆ. (1 ಕೊರಿಂ. 1:10) ‘ಮೊದಲು [ದೇವರ] ರಾಜ್ಯವನ್ನು ಹುಡುಕಬೇಕೆಂದು’ ಉತ್ತೇಜಿಸುತ್ತದೆ. (ಮತ್ತಾ. 6:33) ಮನೆಮನೆಯಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿಯೂ ಸಾರುವಂತೆ, ಜನ ಸಿಕ್ಕಿದ ಕಡೆಯಲ್ಲೆಲ್ಲಾ ಸತ್ಯದ ಕುರಿತು ಮಾತಾಡುವಂತೆ ಹೇಳುತ್ತದೆ. (ಮತ್ತಾ. 28:19, 20; ಅ. ಕಾ. 5:42; 17:17; 20:20) ಸಭೆಯ ಶುದ್ಧತೆ ಕಾಪಾಡಿಕೊಳ್ಳಿರಿ ಎಂದು ಹಿರಿಯರಿಗೆ ನಿರ್ದೇಶನ ಕೊಟ್ಟಿದೆ. (1 ಕೊರಿಂ. 5:1-5, 13; 1 ತಿಮೊ. 5:19-21) ನಾವು ನಮ್ಮ ದೇಹವನ್ನು ಶುದ್ಧವಾಗಿಡಬೇಕು ಮತ್ತು ಯೆಹೋವನು ದ್ವೇಷಿಸುವಂಥ ಆಲೋಚನೆಗಳನ್ನೂ ದುರಭ್ಯಾಸಗಳನ್ನೂ ಬಿಟ್ಟುಬಿಡಬೇಕೆಂದು ಹೇಳಿದೆ.—2 ಕೊರಿಂ. 7:1.

9. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಯೇಸು ನಮಗೆ ಯಾರ ಮೂಲಕ ಸಹಾಯ ಮಾಡುತ್ತಿದ್ದಾನೆ?

9 ಬೈಬಲ್‌ ಬಗ್ಗೆ ನಮಗೆ ಯಾರೂ ಕಲಿಸಬೇಕಾಗಿಲ್ಲ ಎಂದು ಕೆಲವರು ನೆನಸುತ್ತಾರೆ. ಆದರೆ 1919⁠ರಿಂದ, ಬೈಬಲು ಏನು ಬೋಧಿಸುತ್ತದದು ದೇವಜನರಿಗೆ ಅರ್ಥಮಾಡಿಸಲು ಮತ್ತು ಅದರಲ್ಲಿರುವ ವಿಷಯಗಳನ್ನು ಪಾಲಿಸಲು ಸಹಾಯಮಾಡಲಿಕ್ಕಾಗಿ ಯೇಸು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಉಪಯೋಗಿಸುತ್ತಿದ್ದಾನೆ. ಬೈಬಲ್‌ ಕೊಡುವ ಸಲಹೆಯಂತೆ ನಡೆದರೆ ಸಭೆ ಶುದ್ಧವಾಗಿರುತ್ತದೆ, ಶಾಂತಿಯಿಂದಿರುತ್ತದೆ, ಐಕ್ಯವಾಗಿರುತ್ತದೆ. ‘ನಂಬಿಗಸ್ತ ಆಳು ಕೊಡುವ ನಿರ್ದೇಶನಗಳನ್ನು ಪಾಲಿಸುವ ಮೂಲಕ ಯೇಸುವಿಗೆ ನಿಷ್ಠೆ ತೋರಿಸುತ್ತಿದ್ದೇನಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು.

ವೇಗವಾಗಿ ಚಲಿಸುತ್ತಿರುವ ಯೆಹೋವನ ರಥ

10. ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವನ್ನು ಯೆಹೆಜ್ಕೇಲನ ಪುಸ್ತಕ ಹೇಗೆ ವರ್ಣಿಸುತ್ತದೆ?

10 ಸ್ವರ್ಗದಲ್ಲಿರುವ ಯೆಹೋವನ ಸೇವಕರು ಸಹ ಸಂಘಟಿತರಾಗಿದ್ದಾರೆ ಎಂದು ಬೈಬಲಿನಿಂದ ಗೊತ್ತಾಗುತ್ತದೆ. ಉದಾಹರಣೆಗೆ ಯೆಹೆಜ್ಕೇಲನಿಗೆ ಕೊಡಲಾದ ದರ್ಶನವನ್ನು ಪರಿಗಣಿಸಿ. ಅದರಲ್ಲಿ ಯೆಹೋವನು ಒಂದು ರಥವನ್ನು ನಡೆಸುತ್ತಿರುವುದಾಗಿ ತೋರಿಸಲಾಗಿದೆ. ಆ ರಥ ಒಂದೇ ಕ್ಷಣದಲ್ಲಿ ಯಾವ ಕಡೆಗೆ ಬೇಕಾದರೂ ತಿರುಗಬಲ್ಲದು. (ಯೆಹೆ. 1:4-28) ಆ ರಥ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವನ್ನು ಸೂಚಿಸುತ್ತದೆ. ಇದು ಯೆಹೋವನು ಕೊಡುವ ಯಾವುದೇ ನಿರ್ದೇಶನವನ್ನು ತಕ್ಷಣ ಪಾಲಿಸುತ್ತದೆ ಮತ್ತು ಭೂಮಿಯಲ್ಲಿರುವ ದೇವರ ಸೇವಕರನ್ನೂ ಮಾರ್ಗದರ್ಶಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಸಂಘಟನೆಯಲ್ಲಾಗಿರುವ ಅನೇಕ ಬದಲಾವಣೆಗಳ ಬಗ್ಗೆ ಯೋಚಿಸಿ. ಇಂಥ ಬದಲಾವಣೆಗಳನ್ನು ತರುವಂತೆ ಮಾಡುವವನು ಯೆಹೋವನು ಅನ್ನುವುದನ್ನು ಮರೆಯಬೇಡಿ. ತುಂಬ ಬೇಗನೆ ಯೇಸು ಮತ್ತು ದೇವದೂತರು ಈ ದುಷ್ಟ ಲೋಕವನ್ನು ನಾಶಮಾಡುವರು. ಆಗ ಯೆಹೋವನ ಹೆಸರಿಗೆ ತರಲಾದ ಕಳಂಕ ಹೋಗಿ ಆತನು ಆಳುವ ವಿಧವೇ ಸರಿಯಾದದ್ದು ಎಂದು ರುಜುವಾಗುವುದು.

ಕಟ್ಟಡ ನಿರ್ಮಾಣ ಕೆಲಸದಲ್ಲಿ ಬೆವರು ಸುರಿಸಿ ದುಡಿಯುವ ಸ್ವಯಂ ಸೇವಕರಿಗೆ ತುಂಬ ಧನ್ಯವಾದ! (ಪ್ಯಾರ 11 ನೋಡಿ)

11, 12. ಈ ಕಡೇ ದಿನಗಳಲ್ಲಿ ಯೆಹೋವನ ಸಂಘಟನೆ ಏನು ಮಾಡುತ್ತಿದೆ?

11 ಈ ಕಡೇ ದಿನಗಳಲ್ಲಿ ಯೆಹೋವನ ಸಂಘಟನೆ ಏನೆಲ್ಲಾ ಮಾಡಿದೆ ನೋಡಿ. ಕಟ್ಟಡ ನಿರ್ಮಾಣ. ಅಮೆರಿಕದ ನ್ಯೂಯಾರ್ಕ್‌ನ ವಾರ್ವಿಕ್‌ನಲ್ಲಿ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯವನ್ನು ಕಟ್ಟಲು ಶಕ್ತಿಮೀರಿ ದುಡಿದ ನೂರಾರು ಸಹೋದರ ಸಹೋದರಿಯರ ಬಗ್ಗೆ ಯೋಚಿಸಿ. ಲೋಕದ ಬೇರೆ ಕಡೆಗಳಲ್ಲಿ ಸಾವಿರಾರು ಸ್ವಯಂ ಸೇವಕರು ರಾಜ್ಯ ಸಭಾಗೃಹಗಳನ್ನು ಮತ್ತು ಶಾಖಾ ಕಚೇರಿಗಳನ್ನು ಕಟ್ಟುತ್ತಿದ್ದಾರೆ. ಈ ಸ್ವಯಂ ಸೇವಕರಿಗೆ ಬೇಕಾದ ನಿರ್ದೇಶನಗಳನ್ನು ಲೋಕವ್ಯಾಪಕ ಕಟ್ಟಡ ವಿನ್ಯಾಸ/ನಿರ್ಮಾಣ ಇಲಾಖೆಯ ಸಹೋದರರು ಕೊಡುತ್ತಾರೆ. ಈ ಕಟ್ಟಡಗಳನ್ನು ಕಟ್ಟಲು ಬೆವರು ಸುರಿಸಿ ಕೆಲಸ ಮಾಡುವ ಎಲ್ಲರಿಗೂ ತುಂಬ ಧನ್ಯವಾದ! ಇದಕ್ಕಾಗಿ ಕಾಣಿಕೆ ಕೊಟ್ಟ ನಿಮ್ಮೆಲ್ಲರಿಗೂ ಸಹ ಧನ್ಯವಾದ! ತನ್ನ ಜನರು ತೋರಿಸುವ ನಿಷ್ಠೆ, ದೀನತೆಯನ್ನು ಯೆಹೋವನು ತುಂಬ ಮೆಚ್ಚುತ್ತಾನೆ.—ಲೂಕ 21:1-4.

12 ಶಿಕ್ಷಣ. ತನ್ನ ಜನರಿಗೆ ತರಬೇತಿ ಕೊಡುವುದೆಂದರೆ ಯೆಹೋವನಿಗೆ ತುಂಬ ಇಷ್ಟ. (ಯೆಶಾ. 2:2, 3) ಇದಕ್ಕಾಗಿ ಎಷ್ಟೋ ಶಾಲೆಗಳನ್ನು ಆರಂಭಿಸಲಾಗಿದೆ. ಪಯನೀಯರ್‌ ಸೇವಾ ಶಾಲೆ, ರಾಜ್ಯ ಪ್ರಚಾರಕರ ಶಾಲೆ, ಗಿಲ್ಯಡ್‌ ಶಾಲೆ, ಬೆತೆಲಿನ ಹೊಸ ಸದಸ್ಯರಿಗಾಗಿ ಶಾಲೆ, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಗಾಗಿ ಶಾಲೆ, ಸಭಾ ಹಿರಿಯರಿಗಾಗಿ ಶಾಲೆ, ರಾಜ್ಯ ಶುಶ್ರೂಷಾ ಶಾಲೆ, ಶಾಖಾ ಸಮಿತಿಯ ಸದಸ್ಯರು ಮತ್ತು ಅವರ ಪತ್ನಿಯರಿಗಾಗಿ ಶಾಲೆ ಇತ್ಯಾದಿ. ನಮ್ಮ jw.org ವೆಬ್‌ಸೈಟಿನಲ್ಲಿ ಬೈಬಲ್‌ ಮತ್ತು ಬೈಬಲ್‌ ಸಾಹಿತ್ಯ ಅನೇಕ ಭಾಷೆಗಳಲ್ಲಿ ಸಿಗುತ್ತದೆ. ಮಕ್ಕಳು ಮತ್ತು ಕುಟುಂಬಗಳಿಗೆಂದೇ ಒಂದು ವಿಶೇಷ ವಿಭಾಗ ಸಹ ಇದೆ. ನ್ಯೂಸ್‌ಗೆಂದು ಒಂದು ಪ್ರತ್ಯೇಕ ವಿಭಾಗ ಇದೆ. (ಇಂಗ್ಲಿಷ್‌ನಲ್ಲಿ ಲಭ್ಯ.) ನೀವು ಸೇವೆಯಲ್ಲಿ ಮತ್ತು ಕುಟುಂಬ ಆರಾಧನೆಯಲ್ಲಿ jw.org ಬಳಸುತ್ತಿದ್ದೀರಾ?

ಯೆಹೋವನ ಮಾತಿಗೆ ಬೆಲೆಕೊಟ್ಟು ಆತನ ಸಂಘಟನೆಗೆ ಬೆಂಬಲ ಕೊಡಿ

13. ಯೆಹೋವನ ಜನರಿಗೆ ಯಾವ ಜವಾಬ್ದಾರಿ ಇದೆ?

13 ಯೆಹೋವನ ಸಂಘಟನೆಯ ಸದಸ್ಯರಾಗಿರುವುದು ಎಂಥಾ ಸುಯೋಗ! ಆತನು ನಮ್ಮಿಂದ ಏನು ಬಯಸುತ್ತಾನೆ ಎಂದು ತಿಳಿದುಕೊಳ್ಳುವುದರಲ್ಲಿ ಎಷ್ಟೊಂದು ಸಂತೋಷ! ಇದನ್ನು ನಾವು ತಿಳಿದುಕೊಂಡಿರುವುದರಿಂದ, ಆತನ ಮಾತಿಗೆ ಕಿವಿಗೊಟ್ಟು ಯಾವುದು ಸರಿಯೋ ಅದನ್ನು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಎಷ್ಟೋ ಜನರಿಗೆ ಕೆಟ್ಟ ವಿಷಯಗಳೇ ಇಷ್ಟವಾಗುತ್ತದೆ. ಆದರೆ ನಾವು ಯೆಹೋವನಂತಿದ್ದು “ಕೆಟ್ಟತನವನ್ನು ಹಗೆ” ಮಾಡಬೇಕು. (ಕೀರ್ತ. 97:10) “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ನೆನಸುವವರ ತರ ನಾವಿರಬಾರದು. (ಯೆಶಾ. 5:20) ಯೆಹೋವನಿಗೆ ಏನಿಷ್ಟಾನೋ ಅದನ್ನು ನಾವೂ ಇಷ್ಟಪಡುತ್ತೇವೆ. ಎಲ್ಲಾ ವಿಷಯಗಳಲ್ಲಿ ಶುದ್ಧವಾಗಿರಲು ಪ್ರಯತ್ನಿಸುತ್ತೇವೆ. (1 ಕೊರಿಂ. 6:9-11) ಬೈಬಲಿನಲ್ಲಿ ಯೆಹೋವನು ಹೇಳಿರುವುದೆಲ್ಲಾ ನಮ್ಮ ಒಳ್ಳೇದಕ್ಕೆ. ನಮಗೆ ಆತನ ಮೇಲೆ ಪ್ರೀತಿ ಇರುವುದರಿಂದ ಆತನ ಮಾತಿಗೆ ಬೆಲೆಕೊಡುತ್ತೇವೆ. ಮನೆಯಲ್ಲಿ, ಸಭೆಯಲ್ಲಿ, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಎಲ್ಲಾ ಕಡೆಗಳಲ್ಲಿ ದೇವರು ಹೇಳಿದಂತೆಯೇ ನಡಕೊಳ್ಳುತ್ತೇವೆ. (ಜ್ಞಾನೋ. 15:3) ನಾವು ಯೆಹೋವನ ಮಾತಿನಂತೆ ನಡೆಯುವ ಜನ ಎಂದು ತೋರಿಸುವ ಕೆಲವು ಕ್ಷೇತ್ರಗಳ ಬಗ್ಗೆ ಈಗ ನೋಡೋಣ.

14. ಯೆಹೋವನ ಮಾತಿಗೆ ಬೆಲೆಕೊಡುತ್ತೇವೆಂದು ಹೆತ್ತವರು ಹೇಗೆ ತೋರಿಸಬಹುದು?

14 ಮಕ್ಕಳ ತರಬೇತಿ. ಮಕ್ಕಳಿಗೆ ಹೇಗೆ ತರಬೇತಿ ಕೊಡಬೇಕೆಂಬುದರ ಬಗ್ಗೆ ಯೆಹೋವನು ಬೈಬಲಿನಲ್ಲಿ ಕೆಲವು ಸಲಹೆಗಳನ್ನು ಕೊಟ್ಟಿದ್ದಾನೆ. ಮಕ್ಕಳಿಗೆ ತರಬೇತಿ ಕೊಡುವ ವಿಷಯದಲ್ಲಿ ಲೋಕದ ಜನರಿಗಿರುವ ಅಭಿಪ್ರಾಯಾನೇ ಬೇರೆ. (ಎಫೆ. 2:2) ‘ತಾಯಿಯೇ ಮೊದಲ ಗುರು’ ಅಂತ ಹೇಳಿ ಕೆಲವು ತಂದೆಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಾರೆ. ಆದರೆ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸುವ ಜವಾಬ್ದಾರಿ ತಂದೆಯದು ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. (ಎಫೆ. 6:4) ತಮ್ಮ ಮಕ್ಕಳು ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಬೇಕೆಂದು ಯೆಹೋವನ ಮೇಲೆ ಪ್ರೀತಿಯಿರುವ ತಂದೆ-ತಾಯಿ ಬಯಸುತ್ತಾರೆ. ಸಮುವೇಲನು ಬಾಲಕನಾಗಿದ್ದಾಗ ಯೆಹೋವನೊಂದಿಗೆ ಎಂಥ ಆಪ್ತ ಸಂಬಂಧ ಹೊಂದಿದ್ದನೋ ಅಂಥ ಸಂಬಂಧ ನಿಮ್ಮ ಮಕ್ಕಳಿಗೂ ಇರಬೇಕು.—1 ಸಮು. 3:19.

15. ಜೀವನದಲ್ಲಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಿಕ್ಕಿರುವಾಗ ಯೆಹೋವನು ಅದರ ಬಗ್ಗೆ ಏನು ನೆನಸುತ್ತಾನೆಂದು ಯೋಚಿಸಬೇಕು ಯಾಕೆ?

15 ಮುಖ್ಯ ನಿರ್ಧಾರಗಳು. ನಾವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ, ಇದರ ಬಗ್ಗೆ ಯೆಹೋವನು ಏನು ನೆನಸುತ್ತಾನೆ ಎಂದು ಯೋಚಿಸಬೇಕು. ಬೈಬಲು ಮತ್ತು ಸಂಘಟನೆ ಕೊಡುವ ಸಹಾಯ ಸಹ ನಮಗಿದೆ. ಬೇರೆ ದೇಶಕ್ಕೆ ಹೋಗಿ ಕೆಲಸಮಾಡುತ್ತಿರುವ ಕೆಲವು ದಂಪತಿಗಳು ಅವರಿಗೊಂದು ಮಗು ಹುಟ್ಟಿದಾಗ ಅದನ್ನು ಸ್ವದೇಶಕ್ಕೆ ಕಳುಹಿಸಿ ಸಂಬಂಧಿಕರ ಮನೆಯಲ್ಲಿ ಬೆಳೆಸಲು ತೀರ್ಮಾನ ಮಾಡಿದ್ದಾರೆ. ಹೀಗೆ ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡಿ ಹೆಚ್ಚು ದುಡ್ಡು ಮಾಡಲು ಪ್ರಯತ್ನಿಸುತ್ತಾರೆ. ಇದು ಅವರ ವೈಯಕ್ತಿಕ ವಿಷಯವಾದರೂ, ‘ಇದರ ಬಗ್ಗೆ ಯೆಹೋವನು ಏನು ನೆನಸುತ್ತಾನೆ’ ಎಂದು ಯೋಚಿಸಬೇಕಲ್ವಾ? (ರೋಮನ್ನರಿಗೆ 14:12 ಓದಿ.) ನಮ್ಮ ಕುಟುಂಬ ಮತ್ತು ಕೆಲಸಕ್ಕೆ ಸಂಬಂಧಪಟ್ಟ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಇದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ಯೋಚಿಸುವುದು ಒಳ್ಳೇದು. ನಮ್ಮ ಪರಿಸ್ಥಿತಿ ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟಂತಿದೆ. ಆದ್ದರಿಂದ ನಮಗೆ ಯೆಹೋವನ ಸಹಾಯ ಬೇಕೇಬೇಕು.—ಯೆರೆ. 10:23.

16. (ಎ) ಒಬ್ಬ ತಾಯಿ ಯಾವ ನಿರ್ಧಾರ ತೆಗೆದುಕೊಳ್ಳಬೇಕಿತ್ತು? (ಬಿ) ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಅವಳಿಗೆ ಯಾವುದು ಸಹಾಯಮಾಡಿತು?

16 ಒಂದು ದಂಪತಿ ವಿದೇಶಕ್ಕೆ ಹೋದ ಮೇಲೆ ಅವರಿಗೆ ಒಂದು ಮಗುವಾಯಿತು. ಆ ಮಗುವನ್ನು ಅವನ ಅಜ್ಜ-ಅಜ್ಜಿ ಮನೆಗೆ ಕಳುಹಿಸಬೇಕೆಂದು ಅವರು ಯೋಚಿಸಿದರು. ಆದರೆ ಅದೇ ಸಮಯಕ್ಕೆ ಅವರಿಗೆ ಯೆಹೋವನ ಸಾಕ್ಷಿಗಳ ಪರಿಚಯವಾಗಿ ಪತ್ನಿ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಳು. ಬೈಬಲ್‌ ಅಧ್ಯಯನ ಮಾಡುತ್ತಿರುವಾಗ, ಮಗನಿಗೆ ಯೆಹೋವನ ಬಗ್ಗೆ ಕಲಿಸುವುದು ತನ್ನ ಜವಾಬ್ದಾರಿ ಅಂತ ಅರ್ಥಮಾಡಿಕೊಂಡಳು. (ಕೀರ್ತ. 127:3; ಜ್ಞಾನೋ. 22:6) ಸರಿಯಾದದ್ದನ್ನು ಮಾಡಲು ಸಹಾಯ ಕೊಡಪ್ಪಾ ಎಂದು ಯೆಹೋವನನ್ನು ಬೇಡಿಕೊಂಡಳು. (ಕೀರ್ತ. 62:7, 8) ಈ ಸಮಸ್ಯೆಯ ಬಗ್ಗೆ ತನ್ನೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದ ಸಹೋದರಿಯೊಂದಿಗೆ ಮತ್ತು ಸಭೆಯಲ್ಲಿರುವ ಬೇರೆಯವರೊಂದಿಗೂ ಮಾತಾಡಿದಳು. ಮಗುವನ್ನು ಅವನ ಅಜ್ಜ-ಅಜ್ಜಿ ಮನೆಗೆ ಕಳುಹಿಸಿಬಿಡು ಎಂದು ಅವಳ ಸ್ನೇಹಿತರು ಮತ್ತು ಸಂಬಂಧಿಕರು ಹೇಳುತ್ತಾ ಇದ್ದರೂ ಅವಳು ಅದಕ್ಕೆ ಒಪ್ಪದೆ ಸರಿಯಾದ ತೀರ್ಮಾನ ತೆಗೆದುಕೊಂಡಳು. ಸಹೋದರ ಸಹೋದರಿಯರು ಮಗುವನ್ನು ನೋಡಿಕೊಳ್ಳಲು ತನ್ನ ಪತ್ನಿಗೆ ಸಹಾಯ ಮಾಡಿದ್ದನ್ನು ಗಂಡ ಗಮನಿಸಿ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡ. ಕೂಟಗಳಿಗೂ ಹೋಗಲು ಆರಂಭಿಸಿದ. ಯೆಹೋವನು ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟದ್ದನ್ನು ನೋಡಿದಾಗ ತಾಯಿಗೆ ತುಂಬ ಖುಷಿಯಾಯಿತು!

17. ಬೈಬಲ್‌ ಅಧ್ಯಯನ ಮಾಡುವ ವಿಷಯದಲ್ಲಿ ಯಾವ ಮಾರ್ಗದರ್ಶನವನ್ನು ಪಾಲಿಸಬೇಕು?

17 ಮಾರ್ಗದರ್ಶನಕ್ಕೆ ಮಾನ್ಯತೆ. ನಾವು ದೇವರ ಮಾತಿಗೆ ಬೆಲೆಕೊಡುವುದಾದರೆ ಆತನ ಸಂಘಟನೆ ಕೊಡುವ ಮಾರ್ಗದರ್ಶನದಂತೆ ನಡೆಯುತ್ತೇವೆ. ನೀವು ಒಬ್ಬರೊಟ್ಟಿಗೆ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಿಂದ ಅಧ್ಯಯನ ಮಾಡಲು ಆರಂಭಿಸಿದ್ದೀರಿ ಎಂದಿಟ್ಟುಕೊಳ್ಳಿ. ಪ್ರತಿ ಸಾರಿ ಅಧ್ಯಯನ ಮುಗಿಸಿದ ಮೇಲೆ ವಿದ್ಯಾರ್ಥಿಗೆ ಯೆಹೋವನ ಸಂಘಟನೆಯ ಬಗ್ಗೆ ತಿಳಿಸಬೇಕು ಎಂಬ ಮಾರ್ಗದರ್ಶನ ನಮಗೆ ಸಿಕ್ಕಿದೆ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ಅಥವಾ ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಎಂಬ ಕಿರುಹೊತ್ತಗೆಯನ್ನು ಬಳಸಿ ಸಂಘಟನೆಯ ಬಗ್ಗೆ ತಿಳಿಸಬಹುದು. ಬೈಬಲ್‌ ಬೋಧಿಸುತ್ತದೆ ಪುಸ್ತಕ ಮುಗಿದ ಮೇಲೆ ವಿದ್ಯಾರ್ಥಿ ‘ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡಲು’ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿಪುಸ್ತಕದಿಂದ ಅಧ್ಯಯನ ಮಾಡಬೇಕು. ಎರಡನೇ ಪುಸ್ತಕದಲ್ಲಿ ಅಧ್ಯಯನ ಆರಂಭಿಸುವಷ್ಟರಲ್ಲಿ ಅವನಿಗೆ ದೀಕ್ಷಾಸ್ನಾನ ಆಗಿದ್ದರೂ ಇದನ್ನು ಮಾಡಬೇಕು. (ಕೊಲೊ. 2:7) ಯೆಹೋವನ ಸಂಘಟನೆ ಕೊಟ್ಟ ಈ ಮಾರ್ಗದರ್ಶನದಂತೆ ನೀವು ಬೈಬಲ್‌ ಅಧ್ಯಯನ ಮಾಡುತ್ತಿದ್ದೀರಾ?

18, 19. ನಾವು ಯೆಹೋವನಿಗೆ ಧನ್ಯವಾದ ಹೇಳಲು ಯಾವ ಕಾರಣಗಳಿವೆ?

18 ನಾವು ಎಷ್ಟೋ ವಿಷಯಗಳಿಗೆ ಯೆಹೋವನಿಗೆ ಧನ್ಯವಾದ ಹೇಳಬೇಕಿದೆ. ಆತನಿಂದಾಗಿಯೇ “ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ.” (ಅ. ಕಾ. 17:27, 28) ಆತನು ನಮಗೆ ತನ್ನ ಸ್ವಂತ ಮಾತು ದಾಖಲಾಗಿರುವ ಬೈಬಲನ್ನು ಕೊಟ್ಟಿದ್ದಾನೆ. ಥೆಸಲೊನೀಕದಲ್ಲಿದ್ದ ಕ್ರೈಸ್ತರಂತೆ ನಮಗೆ ಬೈಬಲಿನ ಮೇಲೆ ತುಂಬ ಗೌರವ ಇದೆ. ಏಕೆಂದರೆ ಯೆಹೋವನು ನಮಗೆ ಹೇಳಲು ಬಯಸುವ ಎಲ್ಲವೂ ಅದರಲ್ಲಿದೆ.—1 ಥೆಸ. 2:13.

19 ಯೆಹೋವನ ಸಮೀಪಕ್ಕೆ ಬರಲು ಬೈಬಲ್‌ ನಮಗೆ ಸಹಾಯಮಾಡಿದೆ ಮತ್ತು ದೇವರೂ ನಮ್ಮ ಸಮೀಪಕ್ಕೆ ಬಂದಿದ್ದಾನೆ. (ಯಾಕೋ. 4:8) ನಮ್ಮ ಸ್ವರ್ಗೀಯ ತಂದೆ ನಮ್ಮನ್ನು ಆತನ ಸಂಘಟನೆಯ ಸದಸ್ಯರಾಗಿ ಸ್ವೀಕರಿಸಿರುವುದಕ್ಕೆ ನಾವು ಚಿರಋಣಿ! “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು” ಎಂದು ಕೀರ್ತನೆಗಾರನೊಂದಿಗೆ ಸೇರಿ ನಾವೂ ಹಾಡಬೇಕು ಅಂತ ಅನಿಸುತ್ತದಲ್ವಾ? (ಕೀರ್ತ. 136:1) “ಆತನ ಕೃಪೆಯು ಶಾಶ್ವತವಾದದ್ದು” ಎಂಬ ಮಾತನ್ನು ಕೀರ್ತನೆಗಾರನು 136⁠ನೇ ಕೀರ್ತನೆಯೊಂದರಲ್ಲೇ 26 ಸಾರಿ ಹೇಳಿದ್ದಾನೆ. ಹೌದು, ನಾವು ಯೆಹೋವನ ಮಾತಿಗೆ ಬೆಲೆಕೊಟ್ಟು ಆತನ ಸಂಘಟನೆ ಕೊಡುವ ಮಾರ್ಗದರ್ಶನದಂತೆ ನಡೆದರೆ ಆತನು ನಮಗೆ ನಿತ್ಯಜೀವ ಕೊಡುತ್ತಾನೆ ಮತ್ತು ಆತನ ಕೃಪೆ ನಮ್ಮ ಮೇಲೆ ಶಾಶ್ವತವಾಗಿರುತ್ತದೆ.