ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಮುಟ್ಟಿದ ಮಾತು!

ಮನಮುಟ್ಟಿದ ಮಾತು!

ಯೇಸು ಕೆಲವೊಮ್ಮೆ ಹೆಂಗಸರನ್ನು “ಸ್ತ್ರೀಯೇ” ಎಂದು ಕರೆದನು. ಉದಾಹರಣೆಗೆ, 18 ವರ್ಷಗಳಿಂದ ನಡು ಸಂಪೂರ್ಣವಾಗಿ ಬಗ್ಗಿಹೋಗಿದ್ದ ಒಬ್ಬಳನ್ನು ವಾಸಿಮಾಡುವಾಗ ಯೇಸು ಆಕೆಗೆ “ಸ್ತ್ರೀಯೇ, ನೀನು ನಿನ್ನ ಅಸ್ವಸ್ಥತೆಯಿಂದ ಮುಕ್ತಳಾಗಿದ್ದೀ” ಅಂದನು. (ಲೂಕ 13:10-13) ಬೈಬಲ್‌ ಕಾಲದಲ್ಲಿ ಕೆಲವೊಮ್ಮೆ ಹೆಂಗಸರನ್ನು ಹೀಗೆ ಕರೆಯುತ್ತಿದ್ದರು ಮತ್ತು ಇದು ಅಗೌರವವನ್ನು ಸೂಚಿಸುತ್ತಿರಲಿಲ್ಲ. ಯೇಸು ಒಮ್ಮೆ ತನ್ನ ತಾಯಿಯನ್ನು ಸಹ ಹೀಗೆ ಕರೆದನು. (ಯೋಹಾ. 19:26; 20:13) ಆದರೆ ಗೌರವಕ್ಕಿಂತ ಹೆಚ್ಚನ್ನು ಸೂಚಿಸುವ ಇನ್ನೊಂದು ಪದವನ್ನು ಬಳಸಲಾಗುತ್ತಿತ್ತು.

ಬೈಬಲು ಕೆಲವು ಕಡೆ ಸ್ತ್ರೀಯರ ಬಗ್ಗೆ ಮಾತಾಡುವಾಗ “ಮಗಳೇ” ಎಂಬ ದಯೆಯಿಂದ ಕೂಡಿದ ಕೋಮಲವಾದ ಪದವನ್ನು ಬಳಸಿದೆ. ಆ ಪದವನ್ನೇ 12 ವರ್ಷದಿಂದ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಸ್ತ್ರೀಯೊಟ್ಟಿಗೆ ಮಾತಾಡುವಾಗ ಯೇಸು ಬಳಸಿದನು. ಧರ್ಮಶಾಸ್ತ್ರದ ಪ್ರಕಾರ ಆಕೆ ಅಶುದ್ಧಳಾಗಿದ್ದಳು. ಆದ್ದರಿಂದ ಜನರ ಮಧ್ಯೆ ಬರುವ ಹಾಗಿರಲಿಲ್ಲ. ಆಕೆ ಯೇಸುವನ್ನು ಮುಟ್ಟಿದ್ದು ಸಹ ತಪ್ಪಾಗಿತ್ತು. (ಯಾಜ. 15:19-27) ಆದರೆ ಆಕೆಗೆ ಬೇರೆ ದಾರಿಯಿರಲಿಲ್ಲ. “ಅವಳು ಅನೇಕ ವೈದ್ಯರ ಚಿಕಿತ್ಸೆಯಿಂದ ಬಹು ಕಷ್ಟವನ್ನು ಅನುಭವಿಸಿ ತನ್ನಲ್ಲಿದ್ದದ್ದೆಲ್ಲವನ್ನು ಖರ್ಚುಮಾಡಿದರೂ ಸ್ವಲ್ಪವೂ ಪ್ರಯೋಜನವಾಗದೆ ಆ ರೋಗವು ಇನ್ನೂ ಹೆಚ್ಚಾಗಿತ್ತು.”—ಮಾರ್ಕ 5:25, 26.

ಆಕೆ ಯಾರಿಗೂ ಗೊತ್ತಾಗದ ಹಾಗೆ ಗುಂಪಿನ ಜೊತೆ ಹೆಜ್ಜೆ ಹಾಕುತ್ತಾ ಯೇಸುವಿನ ಹಿಂದಿನಿಂದ ಬಂದು ಅವನ ಬಟ್ಟೆಯ ತುದಿಯನ್ನು ಮುಟ್ಟಿದಳು. ಅದೇ ಕ್ಷಣದಲ್ಲಿ ರಕ್ತಸ್ರಾವ ನಿಂತುಹೋಯಿತು! ಯಾರಾದರೂ ನೋಡುವ ಮುಂಚೆ ಹೊರಟು ಹೋಗಲು ಪ್ರಯತ್ನಿಸುತ್ತಿದ್ದಾಗಲೇ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು. (ಲೂಕ 8:45-47) ಇದನ್ನು ಕೇಳಿಸಿಕೊಂಡ ಆ ಸ್ತ್ರೀ ಭಯದಿಂದ ನಡುಗುತ್ತಾ ಆತನ ಮುಂದೆ ಅಡ್ಡಬಿದ್ದು “ನಡೆದ ಸಂಗತಿಯನ್ನೆಲ್ಲಾ ಹೇಳಿದಳು.”—ಮಾರ್ಕ 5:33.

ತುಂಬ ಹೆದರಿದ್ದ ಆಕೆಯನ್ನು ಆರಾಮವಾಗಿರಿಸಲು ಯೇಸು ದಯೆಯಿಂದ “ಮಗಳೇ ಧೈರ್ಯವಾಗಿರು!” ಅಂದನು. (ಮತ್ತಾ. 9:22) ದಯೆ ಮತ್ತು ಕೋಮಲತೆಯನ್ನು ಸೂಚಿಸಲು “ಮಗಳೇ” ಎಂಬ ಪದವನ್ನು ಹೀಬ್ರು ಮತ್ತು ಗ್ರೀಕ್‌ನಲ್ಲಿ ಬಳಸುತ್ತಿದ್ದರು ಎಂದು ಬೈಬಲಿನ ವಿದ್ವಾಂಸರು ಹೇಳುತ್ತಾರೆ. ಯೇಸು ಆಕೆಯಲ್ಲಿ ಧೈರ್ಯ ತುಂಬಲು “ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು” ಎಂದು ಹೇಳಿದನು.—ಮಾರ್ಕ 5:34.

ಇಸ್ರಾಯೇಲಿನಲ್ಲಿದ್ದ ಬೋವಜನೆಂಬ ಶ್ರೀಮಂತನು ಮೊವಾಬ್ಯ ಸ್ತ್ರೀಯಾದ ರೂತಳನ್ನು “ಮಗಳೇ” ಎಂದು ಕರೆದನು. ಅವಳಲ್ಲೂ ಭಯ, ತಳಮಳ ಇತ್ತು. ಯಾಕೆಂದರೆ ಅವಳು ತನಗೆ ಪರಿಚಯ ಇಲ್ಲದ ಬೋವಜನ ಹೊಲದಲ್ಲಿ ಹಕ್ಕಲಾಯುತ್ತಿದ್ದಳು. ಬೋವಜ ಅವಳಿಗೆ “ನನ್ನ ಮಗಳೇ, ಕೇಳು” ಅನ್ನುತ್ತಾ ತನ್ನ ಹೊಲದಲ್ಲೇ ಹಕ್ಕಲಾಯುವುದನ್ನು ಮುಂದುವರಿಸಲು ಹೇಳಿದನು. ರೂತಳು ಅವನ ಮುಂದೆ ಅಡ್ಡಬಿದ್ದು, ಬೇರೆ ದೇಶದವಳಾದ ತನ್ನ ಮೇಲೆ ಇಷ್ಟೊಂದು ದಯೆ ತೋರಿಸಲು ಕಾರಣ ಏನೆಂದು ಕೇಳಿದಾಗ ಬೋವಜನು ಹೇಳಿದ್ದು: “ನೀನು ಅತ್ತೆಯನ್ನು [ವಿಧವೆಯಾದ ನೊವೊಮಿಯನ್ನು] ಪ್ರೀತಿಸಿ . . . ಬಂದಿರುವಿಯೆಂಬದು ನನಗೆ ಚೆನ್ನಾಗಿ ಗೊತ್ತಾಗಿದೆ. ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ.”—ರೂತ. 2:8-12.

ಯೇಸು ಮತ್ತು ಬೋವಜ ಹಿರಿಯರಿಗೆ ಎಂಥ ಉತ್ತಮ ಮಾದರಿ! ಕೆಲವೊಮ್ಮೆ ಸಭೆಯಲ್ಲಿರುವ ಸಹೋದರಿಯರಿಗೆ ಹಿರಿಯರು ಆಧ್ಯಾತ್ಮಿಕ ಸಹಾಯ ಮತ್ತು ಪ್ರೋತ್ಸಾಹ ಕೊಡಬೇಕಾದ ಸನ್ನಿವೇಶ ಬರಬಹುದು. ಆಗ ಹಿರಿಯರು ಮಾರ್ಗದರ್ಶನೆಗಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾರೆ. ಸಹೋದರಿಯರು ಹೇಳುವುದನ್ನು ಚೆನ್ನಾಗಿ ಕೇಳಿಸಿಕೊಂಡ ಮೇಲೆ ದೇವರ ವಾಕ್ಯವನ್ನು ಬಳಸಿ ಅವರಿಗೆ ಧೈರ್ಯ ಮತ್ತು ಸಾಂತ್ವನ ಕೊಡುತ್ತಾರೆ.—ರೋಮ. 15:4.