ಅಧ್ಯಯನ ಲೇಖನ 15
ಗೀತೆ 63 ಸದಾ ನಿಷ್ಠರು
ಯೆಹೋವನ ಸಂಘಟನೆ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳಿ
“ಮುಂದೆ ನಿಂತು ನಿಮ್ಮನ್ನ ನಡಿಸುವವ್ರನ್ನ ನೆನಪಿಸ್ಕೊಳ್ಳಿ. ಇವರು ಪವಿತ್ರ ಗ್ರಂಥವನ್ನ ನಿಮಗೆ ಹೇಳ್ಕೊಟ್ರು.”—ಇಬ್ರಿ. 13:7.
ಈ ಲೇಖನದಲ್ಲಿ ಏನಿದೆ?
ಯೆಹೋವನ ಸಂಘಟನೆ ಮೇಲೆ ನಂಬಿಕೆ ಇಡೋಕೆ, ಸಂಘಟನೆ ಕೊಡೋ ನಿರ್ದೇಶನ ಪಾಲಿಸೋಕೆ ಏನು ಮಾಡಬೇಕು ಅಂತ ನೋಡೋಣ.
1. ಒಂದನೇ ಶತಮಾನದಲ್ಲಿ ಯೆಹೋವನ ಜನ್ರು ಹೇಗೆ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಇದ್ರು?
ಯೆಹೋವ ತನ್ನ ಜನ್ರಿಗೆ ಯಾವುದಾದ್ರೂ ಕೆಲಸ ಕೊಟ್ರೆ ಅದನ್ನ ಅವರು ಅಚ್ಚುಕಟ್ಟಾಗಿ ಮಾಡಬೇಕಂತ ಆತನು ಬಯಸ್ತಾನೆ. (1 ಕೊರಿಂ. 14:33) ಉದಾಹರಣೆಗೆ, ನಾವು ಲೋಕದಲ್ಲಿರೋ ಜನ್ರಿಗೆ ಸಿಹಿಸುದ್ದಿ ಸಾರಬೇಕು ಅನ್ನೋದು ಆತನ ಆಸೆ. (ಮತ್ತಾ. 24:14) ಅದಕ್ಕೇ ಆತನು ಆ ಕೆಲಸ ನೋಡ್ಕೊಳ್ಳೋ ಜವಾಬ್ದಾರಿಯನ್ನ ಯೇಸುಗೆ ವಹಿಸ್ಕೊಟ್ಟಿದ್ದಾನೆ. ಯೇಸು ಇದನ್ನ ವ್ಯವಸ್ಥಿತವಾಗಿ ನಡಿಯೋ ಹಾಗೆ ನೋಡ್ಕೊಳ್ತಿದ್ದಾನೆ. ಅದನ್ನ ಹೇಗೆ ಹೇಳಬಹುದು? ಒಂದನೇ ಶತಮಾನದಲ್ಲಿ ಸಭೆಗಳು ಶುರು ಆದಾಗ ಅಲ್ಲಿರೋ ಸಹೋದರ ಸಹೋದರಿಯರಿಗೆ ನಿರ್ದೇಶನ ಕೊಡೋಕೆ, ಅವ್ರನ್ನ ಮುಂದೆ ನಿಂತು ನಡಿಸೋಕೆ ಯೇಸು ಹಿರಿಯರನ್ನ ನೇಮಿಸಿದನು. (ಅ. ಕಾ. 14:23) ಅಷ್ಟೇ ಅಲ್ಲ, ಆತನು ಯೆರೂಸಲೇಮಲ್ಲಿ ಹಿರಿಯ ಮಂಡಲಿಯನ್ನ ಶುರುಮಾಡಿದನು. ಆ ಮಂಡಲಿಯಲ್ಲಿ ಕೆಲವು ಅಪೊಸ್ತಲರು ಮತ್ತು ಹಿರಿಯರಿದ್ರು. ಅವರು ಸಭೆಗಳಿಗೆ ನಿರ್ದೇಶನ ಕೊಡ್ತಿದ್ರು. ಸಹೋದರ ಸಹೋದರಿಯರು ಅದನ್ನ ಪಾಲಿಸಬೇಕಿತ್ತು. (ಅ. ಕಾ. 15:2; 16:4) ಇದ್ರಿಂದ ಏನಾಯ್ತು? “ಸಭೆಯಲ್ಲಿದ್ದ ಸಹೋದರರ ನಂಬಿಕೆ ಹೆಚ್ಚಾಯ್ತು. ಶಿಷ್ಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಾ ಹೋಯ್ತು.”—ಅ. ಕಾ. 16:5.
2. 1919ರಿಂದ ಯೆಹೋವ ತನ್ನ ಜನ್ರನ್ನ ಹೇಗೆ ನೋಡ್ಕೊಳ್ತಿದ್ದಾನೆ?
2 ಈಗ್ಲೂ ಯೆಹೋವ ತನ್ನ ಜನ್ರನ್ನ ವ್ಯವಸ್ಥಿತವಾಗೇ ನಡಿಸ್ತಿದ್ದಾನೆ. 1919ರಲ್ಲಿ ಯೇಸು ಅಭಿಷಿಕ್ತರ ಒಂದು ಚಿಕ್ಕ ಗುಂಪನ್ನ ಆಡಳಿತ ಮಂಡಲಿಯಾಗಿ ನೇಮಿಸಿದನು. ಇವರು ಸಿಹಿಸುದ್ದಿ ಸಾರೋ ಕೆಲಸನ ಚೆನ್ನಾಗಿ ನೋಡ್ಕೊಳ್ತಿದ್ದಾರೆ. ಯೆಹೋವನ ಜನ್ರಿಗೆ ತಕ್ಕ ಸಮಯಕ್ಕೆ ಬೈಬಲಿಂದ ನಿರ್ದೇಶನಗಳನ್ನೂ ಕೊಡ್ತಿದ್ದಾರೆ. a (ಲೂಕ 12:42) ಇವರು ಮಾಡ್ತಿರೋ ಕೆಲಸನ ಯೆಹೋವನ ಆಶೀರ್ವದಿಸ್ತಿದ್ದಾನೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ.—ಯೆಶಾ. 60:22; 65:13, 14.
3-4. (ಎ) ನಾವು ವ್ಯವಸ್ಥಿತವಾಗಿ ಇರೋದ್ರಿಂದ ಏನೆಲ್ಲಾ ಪ್ರಯೋಜನ ಆಗ್ತಿದೆ? ಉದಾಹರಣೆ ಕೊಡಿ. (ಬಿ) ನಾವು ಈ ಲೇಖನದಲ್ಲಿ ಏನು ಕಲಿತೀವಿ?
3 ನಾವು ಅಚ್ಚುಕಟ್ಟಾಗಿ ಇಲ್ಲದೆ ಹೋಗಿದ್ರೆ ಯೇಸು ಹೇಳಿದ ಕೆಲಸ ಮಾಡಿ ಮುಗಿಸೋಕೆ ಆಗ್ತಿರಲಿಲ್ಲ. (ಮತ್ತಾ. 28:19, 20) ಉದಾಹರಣೆಗೆ, ಸಿಹಿಸುದ್ದಿ ಸಾರೋಕೆ ನಮಗೆ ಟೆರಿಟೊರಿ ಕೊಟ್ಟಿಲ್ಲ ಅಂದಿದ್ರೆ ಎಲ್ಲಿ ಬೇಕೋ ಅಲ್ಲಿ ಹೋಗಿ ನಾವು ಸಾರ್ತಿದ್ವಿ. ಇದ್ರಿಂದ ಒಂದೇ ಟೆರಿಟೊರಿಗೆ ತುಂಬ ಪ್ರಚಾರಕರು ಮತ್ತೆಮತ್ತೆ ಹೋಗಿಬಿಡಬಹುದು. ಇನ್ನು ಕೆಲವು ಟೆರಿಟೊರಿಗೆ ಯಾರೂ ಹೋಗದೆ ಇದ್ದುಬಿಡಬಹುದು. ನಾವು ಒಂದುವೇಳೆ ವ್ಯವಸ್ಥಿತವಾಗಿ ಕೆಲಸ ಮಾಡಿಲ್ಲಾಂದ್ರೆ ಇನ್ನೂ ಏನೆಲ್ಲ ಆಗಬಹುದು ಅಂತ ಸ್ವಲ್ಪ ಯೋಚಿಸಿ.
4 ಯೇಸು ಭೂಮಿಲಿದ್ದಾಗ ತನ್ನ ಶಿಷ್ಯರನ್ನ ಹೇಗೆ ನೋಡ್ಕೊಳ್ತಿದ್ದನೋ ಅದೇ ತರ ಇವತ್ತೂ ತನ್ನ ಜನ್ರನ್ನ ವ್ಯವಸ್ಥಿತವಾಗಿ ನೋಡ್ಕೊಳ್ತಿದ್ದಾನೆ. ಹಾಗಾಗಿ ಈ ಲೇಖನದಲ್ಲಿ ಯೇಸು ಹೇಗೆ ಅಚ್ಚುಕಟ್ಟಾಗಿ ಕೆಲಸ ಮಾಡಿದನು, ಅದೇ ತರ ನಮ್ಮ ಸಂಘಟನೆ ಹೇಗೆ ಅಚ್ಚುಕಟ್ಟಾಗಿ ಕೆಲಸ ಮಾಡ್ತಿದೆ ಅಂತ ತಿಳ್ಕೊಳ್ಳೋಣ. ಅಷ್ಟೇ ಅಲ್ಲ, ನಮಗೆ ಯೆಹೋವನ ಸಂಘಟನೆ ಮೇಲೆ ನಂಬಿಕೆ ಇದೆ ಅಂತ ನಾವು ಹೇಗೆ ತೋರಿಸಬಹುದು ಅಂತನೂ ನೋಡೋಣ.
ಯೇಸು ಮಾಡಿದ ತರಾನೇ ಇವತ್ತು ನಮ್ಮ ಸಂಘಟನೆ ಕೆಲಸ ಮಾಡ್ತಿದೆ
5. ಯೇಸು ತರಾನೇ ಇವತ್ತು ನಮ್ಮ ಸಂಘಟನೆ ಏನು ಮಾಡ್ತಿದೆ? (ಯೋಹಾನ 8:28)
5 ಯೇಸು ತಾನು ಏನು ಮಾಡಬೇಕು, ಏನು ಮಾತಾಡಬೇಕು ಅಂತ ಯೆಹೋವನಿಂದ ಕಲಿತನು. ಯೇಸು ತರಾನೇ ಇವತ್ತು ಯೆಹೋವನ ಸಂಘಟನೆ ಸರಿ ಯಾವುದು ತಪ್ಪು ಯಾವುದು ಅಂತ ನಮಗೆ ತಿಳಿಸೋಕೆ ಮತ್ತು ನಿರ್ದೇಶನಗಳನ್ನ ಕೊಡೋಕೆ ಬೈಬಲನ್ನ ಉಪಯೋಗಿಸ್ತಾ ಇದೆ. (ಯೋಹಾನ 8:28 ಓದಿ; 2 ತಿಮೊ. 3:16, 17) ಅಷ್ಟೇ ಅಲ್ಲ, ಪ್ರತಿದಿನ ದೇವರ ವಾಕ್ಯ ಓದೋಕೆ, ಅದ್ರಲ್ಲಿರೋ ತತ್ವಗಳನ್ನ ಪಾಲಿಸೋಕೂ ನಮಗೆ ಪ್ರೋತ್ಸಾಹ ಕೊಡ್ತಿದೆ. ಸಂಘಟನೆ ಕೊಡೋ ಈ ನಿರ್ದೇಶನ ಪಾಲಿಸೋದ್ರಿಂದ ನಮಗೆ ಏನು ಪ್ರಯೋಜನ ಆಗುತ್ತೆ?
6. ಬೈಬಲನ್ನ ಚೆನ್ನಾಗಿ ಅರ್ಥಮಾಡ್ಕೊಂಡ್ರೆ ಏನು ಪ್ರಯೋಜನ ಆಗುತ್ತೆ?
6 ನಾವು ಬೈಬಲ್ ಓದೋದ್ರ ಜೊತೆ ನಮ್ಮ ಸಂಘಟನೆ ಕೊಡೋ ಪುಸ್ತಕ-ಪತ್ರಿಕೆಗಳನ್ನೂ ಓದಬೇಕು. ಆಗ ಬೈಬಲಲ್ಲಿ ಇರೋದನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳೋಕೆ ಆಗುತ್ತೆ. ಉದಾಹರಣೆಗೆ ಸಂಘಟನೆ ಕೆಲವು ನಿರ್ದೇಶನ ಕೊಡುವಾಗ ಅದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳ್ಕೊಬೇಕು. ಆಗ ಆ ಸಲಹೆಗಳನ್ನ ಸಂಘಟನೆ ಬೈಬಲಿಂದನೇ ಕೊಟ್ಟಿದೆ ಅಂತ ಗೊತ್ತಾಗುತ್ತೆ. ನಮಗೆ ಸಂಘಟನೆ ಮೇಲಿರೋ ನಂಬಿಕೆನೂ ಜಾಸ್ತಿ ಆಗುತ್ತೆ.—ರೋಮ. 12:2.
7. (ಎ) ಯೇಸು ಏನನ್ನ ಸಾರಿದನು? (ಬಿ) ಯೇಸು ತರಾನೇ ಇವತ್ತು ಯೆಹೋವನ ಜನ್ರು ಏನು ಮಾಡ್ತಿದ್ದಾರೆ?
7 ಯೇಸು “ದೇವರ ಆಳ್ವಿಕೆಯ ಸಿಹಿಸುದ್ದಿನ” ಸಾರಿದನು. (ಲೂಕ 4:43, 44) ಅಷ್ಟೇ ಅಲ್ಲ, ತನ್ನ ಶಿಷ್ಯರಿಗೂ ಸಾರೋಕೆ ಆಜ್ಞೆ ಕೊಟ್ಟನು. (ಲೂಕ 9:1, 2; 10:8, 9) ಹಾಗಾಗಿ ಯೆಹೋವನ ಸಂಘಟನೆಯಲ್ಲಿ ಇರೋರು ಸಿಹಿಸುದ್ದಿ ಸಾರ್ತಾರೆ. ಅವರು ಎಲ್ಲೇ ಇದ್ರೂ ಎಷ್ಟೇ ಜವಾಬ್ದಾರಿಗಳಿದ್ರೂ ಈ ಕೆಲಸ ಮಾಡ್ತಾರೆ.
8. ನಮ್ಮೆಲ್ರಿಗೂ ಯಾವ ಸುಯೋಗ ಇದೆ?
8 ದೇವರ ಆಳ್ವಿಕೆಯ ಸಿಹಿಸುದ್ದಿ ಸಾರೋ ಅವಕಾಶ ನಮಗೆ ಸಿಕ್ಕಿರೋದು ಒಂದು ದೊಡ್ಡ ಸುಯೋಗ ಅಂತನೇ ಹೇಳಬಹುದು. ಆದ್ರೆ ಈ ಸುಯೋಗ ಎಲ್ರಿಗೂ ಸಿಗಲ್ಲ. ಯೇಸು ಭೂಮಿಲಿದ್ದಾಗ ತನ್ನ ಬಗ್ಗೆ ಮಾತಾಡೋಕೆ ಕೆಟ್ಟ ದೇವದೂತರಿಗೆ ಬಿಡಲಿಲ್ಲ. (ಲೂಕ 4:41) ಇದ್ರಿಂದ ಏನು ಗೊತ್ತಾಗುತ್ತೆ? ಒಬ್ಬ ವ್ಯಕ್ತಿ ಯೆಹೋವನ ಜನ್ರ ಜೊತೆ ಸೇರಿ ಸಿಹಿಸುದ್ದಿ ಸಾರಬೇಕಂದ್ರೆ ಅವನು ಯೆಹೋವನಿಗೆ ಇಷ್ಟ ಆಗೋ ತರ ಜೀವಿಸಬೇಕು. ನಮ್ಮ ಪರಿಸ್ಥಿತಿ ಹೇಗೇ ಇದ್ರೂ ಜನ್ರಿಗೆ ಯೆಹೋವನ ಬಗ್ಗೆ ಹೇಳುವಾಗ ಸಾರೋ ಕೆಲಸ ನಮಗೆ ಎಷ್ಟು ಇಷ್ಟ ಅಂತ ತೋರಿಸ್ತೀವಿ. ಹಾಗಾದ್ರೆ ನಮ್ಮ ಗುರಿ ಏನಾಗಿರಬೇಕು? ಯೇಸು ತರ ಜನ್ರ ಮನಸ್ಸಲ್ಲಿ ದೇವರ ಆಳ್ವಿಕೆಯ ಸಂದೇಶ ಅನ್ನೋ ಬೀಜ ಬಿತ್ತಿ, ನೀರು ಹಾಕೋದಾಗಿರಬೇಕು.—ಮತ್ತಾ. 13:3, 23; 1 ಕೊರಿಂ. 3:6.
9. ದೇವರ ಹೆಸ್ರನ್ನ ಜನ್ರಿಗೆ ತಿಳಿಸೋಕೆ ನಮ್ಮ ಸಂಘಟನೆ ಏನೆಲ್ಲಾ ಮಾಡ್ತಿದೆ?
9 ಯೇಸು ದೇವರ ಹೆಸ್ರನ್ನ ಜನ್ರಿಗೆ ತಿಳಿಸಿದನು. ಅದಕ್ಕೇ ಆತನು ಯೆಹೋವನಿಗೆ ಪ್ರಾರ್ಥನೆ ಮಾಡುವಾಗ “ನಾನು ನಿನ್ನ ಹೆಸ್ರನ್ನ [ಶಿಷ್ಯರಿಗೆ] ಚೆನ್ನಾಗಿ ಹೇಳ್ಕೊಟ್ಟಿದ್ದೀನಿ” ಅಂದನು. (ಯೋಹಾ. 17:26) ಯೇಸು ತರಾನೇ ಇವತ್ತು ನಮ್ಮ ಸಂಘಟನೆ ಯೆಹೋವನ ಹೆಸ್ರನ್ನ ಜನ್ರಿಗೆ ತಿಳಿಸೋಕೆ ತುಂಬ ಪ್ರಯತ್ನ ಮಾಡ್ತಿದೆ. ಉದಾಹರಣೆಗೆ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಲ್ಲಿ ಯೆಹೋವ ದೇವರ ಹೆಸ್ರು ಎಲ್ಲೆಲ್ಲಿ ಬರಬೇಕೋ ಅಲ್ಲೆಲ್ಲಾ ಹಾಕಿದೆ. ಈ ಬೈಬಲ್ ಅಥವಾ ಅದ್ರಲ್ಲಿರೋ ಕೆಲವು ಪುಸ್ತಕಗಳು 270ಕ್ಕೂ ಹೆಚ್ಚು ಭಾಷೆಗಳಲ್ಲಿದೆ. ಪರಿಶಿಷ್ಟ ಎ4 ಮತ್ತು ಎ5ರಲ್ಲಿ ಈ ಬೈಬಲಲ್ಲಿ ಯೆಹೋವ ದೇವರ ಹೆಸ್ರನ್ನ ಯಾಕೆ ಬಳಸಲಾಗಿದೆ ಅಂತ ವಿವರವಾಗಿ ತಿಳಿಸಲಾಗಿದೆ. ಅಷ್ಟೇ ಅಲ್ಲ ನೀವು ಸ್ಟಡಿ ಬೈಬಲಿನ ಪರಿಶಿಷ್ಟ ಸಿ ನೋಡೋದಾದ್ರೆ ಕ್ರೈಸ್ತ ಗ್ರೀಕ್ ಪುಸ್ತಕಗಳಲ್ಲಿ ಯೆಹೋವ ದೇವರ ಹೆಸ್ರು 237 ಸಲ ಬರಲೇಬೇಕು ಅನ್ನೋದಕ್ಕೆ ಆಧಾರಗಳನ್ನ ಕೊಡಲಾಗಿದೆ.
10. ಮಯಾನ್ಮಾರ್‌ನಲ್ಲಿರೋ ಸ್ತ್ರೀಯ ಅನುಭವದಿಂದ ನೀವೇನು ಕಲಿತ್ರಿ?
10 ಯೇಸು ತರ ನಾವೂ ಇವತ್ತು ಎಲ್ಲಾ ಜನ್ರಿಗೆ ದೇವರ ಹೆಸ್ರನ್ನ ತಿಳಿಸೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. ಮಯಾನ್ಮಾರ್‌ನಲ್ಲಿರೋ 67 ವರ್ಷದ ಒಬ್ಬ ಸ್ತ್ರೀ ಯೆಹೋವನ ಹೆಸ್ರನ್ನ ಕೇಳಿ ಅತ್ತುಬಿಟ್ರು. “ನನ್ನ ಜೀವನದಲ್ಲಿ ಇದೇ ಮೊದಲ ಸಲ ದೇವರ ಹೆಸರು ಯೆಹೋವ ಅಂತ ಕೇಳಿದ್ದು . . . ನಾನು ಇದುವರೆಗೂ ಕಲಿತಿರದ ಪ್ರಾಮುಖ್ಯ ವಿಷಯವನ್ನು ನನಗೆ ಹೇಳಿಕೊಟ್ಟಿದ್ದೀಯ” ಅಂತ ಅವರು ಒಬ್ಬ ಸಹೋದರಿ ಹತ್ರ ಹೇಳಿದ್ರು. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವನ ಹೆಸ್ರಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತಾಗುತ್ತೆ.
ಯೆಹೋವನ ಸಂಘಟನೆ ಮೇಲೆ ನಂಬಿಕೆ ಇದೆ ಅಂತ ಯಾವಾಗ್ಲೂ ತೋರಿಸೋಣ
11. ಯೆಹೋವನ ಸಂಘಟನೆ ಮೇಲೆ ನಂಬಿಕೆ ಇದೆ ಅಂತ ಹಿರಿಯರು ಹೇಗೆ ತೋರಿಸಬಹುದು? (ಚಿತ್ರನೂ ನೋಡಿ.)
11 ಯೆಹೋವನ ಸಂಘಟನೆ ಮೇಲೆ ನಂಬಿಕೆ ಇದೆ ಅಂತ ಹಿರಿಯರು ಹೇಗೆ ತೋರಿಸಬಹುದು? ಅವ್ರಿಗೆ ನಿರ್ದೇಶನಗಳು ಸಿಕ್ಕಾಗ ಚೆನ್ನಾಗಿ ಓದಿ, ಅರ್ಥ ಮಾಡ್ಕೊಬೇಕು. ಅದನ್ನ ಪಾಲಿಸೋಕೆ ಅವ್ರಿಂದ ಆಗೋದನ್ನೆಲ್ಲ ಮಾಡಬೇಕು. ಉದಾಹರಣೆಗೆ, ಅವ್ರಿಗೆ ಕೂಟಗಳನ್ನ ಹೇಗೆ ನಡೆಸಬೇಕು, ಅಲ್ಲಿ ಪ್ರಾರ್ಥನೆ ಹೇಗೆ ಮಾಡಬೇಕು ಅಂತ ನಿರ್ದೇಶನ ಸಿಗುತ್ತೆ. ಆದ್ರೆ ಅದ್ರ ಜೊತೆಗೆ ಕ್ರಿಸ್ತನ ಕುರಿಗಳನ್ನ ಹೇಗೆ ನೋಡ್ಕೊಬೇಕು ಅನ್ನೋ ನಿರ್ದೇಶನನೂ ಸಿಗುತ್ತೆ. ಅದನ್ನ ಹಿರಿಯರು ಪಾಲಿಸಬೇಕು. ಆಗ ಸಭೆಲಿ ಇರೋರಿಗೆ ಹಿರಿಯರು ತಮ್ಮನ್ನ ಪ್ರೀತಿಸ್ತಾರೆ, ತಮಗೆ ಕಾಳಜಿ ತೋರಿಸ್ತಾರೆ ಅಂತ ಗೊತ್ತಾಗುತ್ತೆ.
12. (ಎ) ಮುಂದೆ ನಿಂತು ನಡಿಸುವವ್ರ ಮಾತನ್ನ ನಾವು ಯಾಕೆ ಕೇಳಬೇಕು? (ಇಬ್ರಿಯ 13:7, 17) (ಬಿ) ಅವ್ರಲ್ಲಿರೋ ಒಳ್ಳೇ ಗುಣಗಳಿಗೆ ನಾವ್ಯಾಕೆ ಗಮನ ಕೊಡಬೇಕು?
12 ಹಿರಿಯರು ನಿರ್ದೇಶನ ಕೊಟ್ಟಾಗ ನಾವು ಅದನ್ನ ಮನಸಾರೆ ಪಾಲಿಸಬೇಕು. ಹೀಗೆ ಮಾಡಿದ್ರೆ ಅವ್ರಿಗೆ ಮುಂದೆ ನಿಂತು ನಮ್ಮನ್ನ ನಡೆಸೋಕೆ ಸುಲಭ ಆಗುತ್ತೆ. ಅಷ್ಟೇ ಅಲ್ಲ, ಹಿರಿಯರ ಮಾತು ಕೇಳಬೇಕು ಅವ್ರಿಗೆ ಅಧೀನತೆ ತೋರಿಸಬೇಕು ಅಂತ ಬೈಬಲೂ ನಮಗೆ ಪ್ರೋತ್ಸಾಹ ಕೊಡುತ್ತೆ. (ಇಬ್ರಿಯ 13:7, 17 ಓದಿ.) ಆದ್ರೆ ಕೆಲವೊಂದು ಸಲ ಅವ್ರ ಮಾತು ಕೇಳೋಕೆ ನಮಗೆ ಕಷ್ಟ ಆಗಬಹುದು. ಯಾಕಂದ್ರೆ ಅವರೂ ಅಪರಿಪೂರ್ಣರು, ಅವ್ರಿಂದನೂ ಕೆಲವೊಮ್ಮೆ ತಪ್ಪುಗಳು ಆಗಿಬಿಡುತ್ತೆ. ಆಗ ನಾವು ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡೋ ಬದ್ಲು ತಪ್ಪುಗಳಿಗೇ ಗಮನ ಕೊಟ್ಟುಬಿಡಬಹುದು. ನಾವು ಹೀಗೆ ಮಾಡಿದ್ರೆ ನಮ್ಮ ನಂಬಿಕೆನ ಹಾಳು ಮಾಡೋಕೆ ನಮ್ಮ ಶತ್ರುಗಳಿಗೆ ಅವಕಾಶ ಕೊಟ್ಟ ಹಾಗಿರುತ್ತೆ. ಅದು ಹೇಗೆ? ಹಿರಿಯರ ಬಗ್ಗೆ ನಾವು ತಪ್ಪಾಗಿ ಯೋಚಿಸ್ತಾ ಇದ್ರೆ ಈ ಸಂಘಟನೆನ ಯೆಹೋವನೇ ನಡಿಸ್ತಿದ್ದಾನಾ ಅನ್ನೋ ಸಂಶಯ ನಮಗೆ ಬಂದುಬಿಡಬಹುದು. ಕೊನೆಗೆ, ಯೆಹೋವನ ಸಂಘಟನೆ ಮೇಲಿರೋ ನಂಬಿಕೆನೇ ಕಳ್ಕೊಂಡುಬಿಡಬಹುದು. ನಮ್ಮ ವೈರಿಗಳಿಗೆ ಬೇಕಾಗಿರೋದು ಇದೇನೇ. ಆದ್ರೆ ಅವರು ಅಂದ್ಕೊಂಡಿದ್ದು ಆಗಬಾರದಂದ್ರೆ ನಾವೇನು ಮಾಡಬೇಕು? ಅವರು ಹರಡಿಸೋ ಸುಳ್ಳುಸುದ್ದಿಗಳನ್ನ ಕಂಡುಹಿಡಿದು ಅದ್ರಿಂದ ದೂರ ಇರಬೇಕು. ಅದಕ್ಕೆ ನಾವೇನು ಮಾಡಬೇಕು ಅಂತ ನೋಡೋಣ.
ನಿಮ್ಮ ನಂಬಿಕೆನ ಬೇರೆಯವರು ಹಾಳುಮಾಡೋಕೆ ಬಿಟ್ಟುಕೊಡಬೇಡಿ
13. ಸಂಘಟನೆ ಕಲಿಸೋ ಒಳ್ಳೇ ವಿಷ್ಯಗಳು ಜನ್ರ ಕಣ್ಣಿಗೆ ತಪ್ಪಾಗಿ ಕಾಣೋ ತರ ಮಾಡೋಕೆ ವೈರಿಗಳು ಏನು ಮಾಡ್ತಿದ್ದಾರೆ?
13 ದೇವರ ವೈರಿಗಳು ಸಂಘಟನೆ ಕಲಿಸ್ತಿರೋ ಒಳ್ಳೇ ವಿಷ್ಯಗಳನ್ನ ಜನ್ರ ಕಣ್ಣಿಗೆ ತಪ್ಪಾಗಿ ಕಾಣೋ ತರ ಮಾಡ್ತಿದ್ದಾರೆ. ಉದಾಹರಣೆಗೆ, ನಾವು ಶುದ್ಧವಾಗಿ ಇರಬೇಕು, ನಮ್ಮ ನಡತೆ ಪವಿತ್ರವಾಗಿ ಇರಬೇಕು, ನಾವು ಯೆಹೋವನಿಗೆ ಇಷ್ಟ ಆಗೋ ತರ ಆರಾಧನೆ ಮಾಡಬೇಕು ಅಂತ ಯೆಹೋವ ಬಯಸ್ತಾನೆ. ಅಷ್ಟೇ ಅಲ್ಲ, ಸಭೆಲಿ ಯಾರಾದ್ರೂ ಒಬ್ರು ದೊಡ್ಡ ತಪ್ಪನ್ನ ಮಾಡಿ ಪಶ್ಚಾತ್ತಾಪಪಡದೇ ಇದ್ರೆ ಅಥವಾ ಮತ್ತೆಮತ್ತೆ ಅದೇ ತಪ್ಪನ್ನ ಮಾಡಿದ್ರೆ ಅವ್ರನ್ನ ಸಭೆಯಿಂದ ಹೊರಗೆ ಹಾಕಬೇಕು ಅಂತನೂ ಆತನು ಬಯಸ್ತಾನೆ. (1 ಕೊರಿಂ. 5:11-13; 6:9, 10) ಇದನ್ನೆಲ್ಲ ನಾವು ಬೈಬಲಿಂದ ಕಲಿತು ಅದನ್ನ ಪಾಲಿಸ್ತಾ ಇದ್ದೀವಿ. ಆದ್ರೆ ನಮ್ಮ ವೈರಿಗಳಿಗೆ ನಾವು ಇದನ್ನೆಲ್ಲ ಮಾಡೋದು ಇಷ್ಟ ಇಲ್ಲ. ಅದಕ್ಕೇ ನಾವು ಜನ್ರನ್ನ ಪ್ರೀತಿಸಲ್ಲ, ತುಂಬ ಕಟ್ಟುನಿಟ್ಟು ಮಾಡ್ತೀವಿ, ಜನ್ರಿಗೆ ಇಷ್ಟ ಆಗೋ ತರ ಬದುಕೋಕೆ ಬಿಡಲ್ಲ ಅಂತ ನಮ್ಮ ಮೇಲೆ ಸುಳ್ಳು ಅಪವಾದ ಹಾಕ್ತಾ ಇದ್ದಾರೆ.
14. ನಮ್ಮ ಸಂಘಟನೆ ಬಗ್ಗೆ ಸುಳ್ಳುಸುದ್ದಿ ಹಬ್ಬಿಸೋರ ಹಿಂದೆ ಯಾರ ಕೈವಾಡ ಇದೆ?
14 ಈ ಸುಳ್ಳುಸುದ್ದಿ ಹಿಂದೆ ಯಾರ ಕೈವಾಡ ಇದೆ ಅಂತ ಕಂಡುಹಿಡಿರಿ. ಇದ್ರ ಹಿಂದೆ ಇರೋದು ಸೈತಾನನೇ. ಯಾಕಂದ್ರೆ “ಸುಳ್ಳನ್ನ ಹುಟ್ಟಿಸಿದವನೇ ಅವನು.” (ಯೋಹಾ. 8:44; ಆದಿ. 3:1-5) ಹಾಗಾಗಿ ಸೈತಾನ ತನ್ನ ಜನ್ರನ್ನ ಬಳಸಿ ಯೆಹೋವನ ಸಂಘಟನೆ ಬಗ್ಗೆ ಸುಳ್ಳು ಹಬ್ಬಿಸ್ತಾನೆ ಅಂತ ನಾವು ತಿಳ್ಕೊಂಡಿರಬೇಕು. ಅವನು ಒಂದನೇ ಶತಮಾನದಲ್ಲೂ ಇದನ್ನೇ ಮಾಡಿದ.
15. ಯೇಸು ಮತ್ತು ಆತನ ಶಿಷ್ಯರಿಗೆ ಒಂದನೇ ಶತಮಾನದಲ್ಲಿದ್ದ ಪುರೋಹಿತರು ಮತ್ತು ಪಂಡಿತರು ಏನು ಮಾಡಿದ್ರು?
15 ಒಂದನೇ ಶತಮಾನದಲ್ಲಿ ಏನಾಯ್ತು ನೋಡಿ. ಯೇಸು ಪರಿಪೂರ್ಣನಾಗಿದ್ರೂ, ಎಷ್ಟೋ ಅದ್ಭುತಗಳನ್ನ ಮಾಡಿದ್ರೂ ಸೈತಾನ ತನ್ನ ಜನ್ರನ್ನ ಬಳಸಿ ಯೇಸು ಬಗ್ಗೆ ಸುಳ್ಳು ಹಬ್ಬಿಸಿದ. ಉದಾಹರಣೆಗೆ ಯೇಸು ಕೆಟ್ಟ ದೇವದೂತರನ್ನ ಬಿಡಿಸಿದಾಗ ಅಲ್ಲಿದ್ದ ಪಂಡಿತರು “ಇವನು ಸೈತಾನನ ಸಹಾಯದಿಂದನೇ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದಾನೆ” ಅಂತ ಹೇಳಿದ್ರು. (ಮಾರ್ಕ 3:22) ಯೇಸುನ ವಿಚಾರಣೆ ಮಾಡ್ತಿದ್ದಾಗ ಅಲ್ಲಿದ್ದ ಪುರೋಹಿತರು ಅವನ ಮೇಲೆ ಸುಳ್ಳಾರೋಪ ಹಾಕಿದ್ರು. ಅವನನ್ನ ಕೊಲ್ಲಿಸಬೇಕು ಅಂತ ಜನ್ರ ಕೈಯಲ್ಲಿ ಹೇಳಿಸಿದ್ರು. (ಮತ್ತಾ. 27:20) ಸ್ವಲ್ಪ ಸಮಯ ಆದ್ಮೇಲೆ ಯೇಸುವಿನ ಶಿಷ್ಯರು ಸಿಹಿಸುದ್ದಿ ಸಾರೋಕೆ ಶುರು ಮಾಡಿದ್ರು. ಆಗ ಅವ್ರನ್ನ ವಿರೋಧಿಸ್ತಿದ್ದ ಜನ್ರು ಅವ್ರಿಗೆ ಹಿಂಸೆ ಕೊಡೋಕೆ “ಬೇರೆ ಜನ್ರ ಮನಸ್ಸಲ್ಲಿ ವಿಷಬೀಜ ಬಿತ್ತಿದ್ರು.” (ಅ. ಕಾ. 14:2, 19) “ಕ್ರೈಸ್ತರು ಸಾರ್ತಿದ್ದ ಸಿಹಿಸುದ್ದಿಯನ್ನ ಯೆಹೂದ್ಯರು ಕೇಳ್ತಾನೇ ಇರ್ಲಿಲ್ಲ. ಅವರು ಅಷ್ಟಕ್ಕೆ ಸುಮ್ಮನೆ ಆಗದೇ ಆ ಕ್ರೈಸ್ತರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿ ಜನ್ರ ಮನಸ್ಸಲ್ಲಿ ದ್ವೇಷ ಬೆಳಿಯೋ ತರ ಮಾಡಿದ್ರು” ಅಂತ ಅಪೊಸ್ತಲರ ಕಾರ್ಯ 14:2ರ ಬಗ್ಗೆ ಒಂದು ಕಾವಲಿನಬುರುಜು ಹೇಳುತ್ತೆ.
16. ಸುಳ್ಳುಸುದ್ದಿ ನಮ್ಮ ಕಿವಿಗೆ ಬಿದ್ದಾಗ ಏನನ್ನ ನೆನಪಿಟ್ಕೊಬೇಕು?
16 ಸುಳ್ಳುಸುದ್ದಿ ಹಬ್ಬಿಸೋ ಕೆಟ್ಟ ಚಾಳಿಯನ್ನ ಸೈತಾನ ಇನ್ನೂ ಬಿಟ್ಟಿಲ್ಲ. ಈಗ್ಲೂ ಅವನು “ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.” (ಪ್ರಕ. 12:9) ಹಾಗಾಗಿ ಅವನು ನಮ್ಮ ಸಂಘಟನೆ ಬಗ್ಗೆ, ಮುಂದೆ ನಿಂತು ನಡೆಸ್ತಿರೋ ಸಹೋದರರ ಬಗ್ಗೆ ಸುಳ್ಳುಸುದ್ದಿಗಳನ್ನ ಹಬ್ಬಿಸ್ತಾನೆ. ಆಗ ಯೆಹೋವನ ಶತ್ರುಗಳು ಯೇಸುಗೆ ಮತ್ತು ಆತನ ಶಿಷ್ಯರಿಗೆ ಏನು ಮಾಡಿದ್ರು ಅಂತ ನಾವು ನೆನಪಿಸ್ಕೊಬೇಕು. ನಮ್ಮ ಕಾಲದಲ್ಲಿ ಈ ತರ ಆಗುತ್ತೆ ಅಂತ ಯೇಸು ಮುಂಚೆನೇ ಹೇಳಿದ್ದನು. (ಮತ್ತಾ. 5:11, 12) ಹಾಗಾಗಿ ಈ ಸುಳ್ಳುಸುದ್ದಿ ಹಿಂದೆ ಯಾರಿದ್ದಾರೆ ಅಂತ ಕಂಡುಹಿಡಿದು ನಮ್ಮನ್ನ ನಾವು ಕಾಪಾಡ್ಕೊಬೇಕು. ಆಗ ಸೈತಾನ ಹಾಕಿರೋ ಸುಳ್ಳುಸುದ್ದಿ ಅನ್ನೋ ಬಲೆಯಲ್ಲಿ ನಾವು ಸಿಕ್ಕಿಹಾಕೊಳಲ್ಲ.
17. ಸುಳ್ಳು ಕಥೆಗಳಿಂದ ನಮ್ಮ ನಂಬಿಕೆ ಹಾಳಾಗಬಾರದಂದ್ರೆ ನಾವೇನು ಮಾಡಬೇಕು? (2 ತಿಮೊತಿ 1:13) (“ ಸುಳ್ಳು ಕಥೆಗಳು ನಮ್ಮ ಕಿವಿಗೆ ಬಿದ್ದಾಗ ಏನು ಮಾಡಬೇಕು?”ಅನ್ನೋ ಚೌಕ ನೋಡಿ.)
17 ಸುಳ್ಳು ಕಥೆಗಳಿಗೆ ಗಮನ ಕೊಡಬೇಡಿ. ಸುಳ್ಳು ಕಥೆಗಳು ನಮ್ಮ ಕಿವಿಗೆ ಬಿದ್ದಾಗ ನಾವೇನು ಮಾಡಬೇಕು ಅಂತ ಅಪೊಸ್ತಲ ಪೌಲ ಸ್ಪಷ್ಟವಾಗಿ ನಿರ್ದೇಶನ ಕೊಟ್ಟಿದ್ದಾನೆ. ಅವನು ತಿಮೊತಿಗೆ “ಸುಳ್ಳು ಕಥೆಗಳಿಗೆ . . . ಗಮನ ಕೊಡಬಾರದು ಅಂತ ಸ್ವಲ್ಪ ಜನ್ರಿಗೆ ನೀನು ಆಜ್ಞೆ ಕೊಡಬೇಕು” ಅಂತ ಹೇಳಿದ. ಅಷ್ಟೇ ಅಲ್ಲ, “ದೇವರ ಮೇಲೆ ತಪ್ಪುಹೊರಿಸೋ . . . ಕಟ್ಟುಕಥೆಗಳನ್ನ ಕೇಳಿಸ್ಕೊಬೇಡ” ಅಂತನೂ ಹೇಳಿದ. (1 ತಿಮೊ. 1:3, 4; 4:7) ಒಂದು ಚಿಕ್ಕ ಮಗು ಕೆಳಗೆ ಬಿದ್ದಿರೋ ವಸ್ತುನ ತೆಗೆದು ಬಾಯಿಗೆ ಹಾಕೊಳ್ಳುತ್ತೆ, ಅದಕ್ಕೆ ಏನೂ ಗೊತ್ತಿರಲ್ಲ. ಆದ್ರೆ ದೊಡ್ಡವರು ಹಾಗೆ ಮಾಡಲ್ಲ ಅಲ್ವಾ? ಯಾಕಂದ್ರೆ ಅದ್ರಿಂದ ಆರೋಗ್ಯ ಹಾಳಾಗುತ್ತೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತಿರುತ್ತೆ. ಅದೇ ತರ ನಾವೂ ಸುಳ್ಳುಸುದ್ದಿಗಳನ್ನ ಕೇಳಿಸ್ಕೊಳ್ಳಲ್ಲ. ಯಾಕಂದ್ರೆ ಅದ್ರ ಹಿಂದೆ ಯಾರಿದ್ದಾರೆ ಅಂತ ನಮಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವು ಬರೀ ಸತ್ಯವಾಗಿರೋದನ್ನ ಮತ್ತು ‘ಒಳ್ಳೇ ಮಾತುಗಳನ್ನಷ್ಟೇ’ ಕೇಳಿಸ್ಕೊಳ್ತೀವಿ.—2 ತಿಮೊತಿ 1:13 ಓದಿ.
18. ನಮಗೆ ಯೆಹೋವನ ಸಂಘಟನೆ ಮೇಲೆ ನಂಬಿಕೆ ಇದೆ ಅಂತ ಹೇಗೆ ತೋರಿಸಬಹುದು?
18 ಇವತ್ತು ನಮ್ಮ ಸಂಘಟನೆ ಯಾವ ಮೂರು ವಿಷ್ಯದಲ್ಲಿ ಯೇಸು ತರ ಕೆಲಸ ಮಾಡ್ತಾ ಇದೆ ಅಂತ ಈ ಲೇಖನದಲ್ಲಿ ನೋಡಿದ್ವಿ. ಆದ್ರೆ ಇದಷ್ಟೇ ಅಲ್ಲ, ಇನ್ನೂ ತುಂಬ ವಿಷ್ಯಗಳನ್ನ ಯೇಸು ತರಾನೇ ಮಾಡ್ತಾ ಇದೆ. ಅದು ಯಾವುದು ಅಂತ ನೀವು ಬೈಬಲ್ ಅಧ್ಯಯನ ಮಾಡುವಾಗ ಗಮನಿಸಿ. ಸಂಘಟನೆ ಮೇಲೆ ನಂಬಿಕೆ ಇಡೋಕೆ ಸಹೋದರ ಸಹೋದರಿಯರಿಗೆ ಸಹಾಯ ಮಾಡಿ. ಅಷ್ಟೇ ಅಲ್ಲ, ನೀವೂ ನಿಯತ್ತಿಂದ ಯೆಹೋವನ ಸೇವೆ ಮಾಡ್ತಾ ಇರಿ. ಸಂಘಟನೆ ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ಇರಿ. ಆಗ ಯೆಹೋವ ಈ ಸಂಘಟನೆನ ನಡಿಸ್ತಿದ್ದಾನೆ ಅನ್ನೋ ನಂಬಿಕೆ ನಿಮಗಿದೆ ಅಂತ ತೋರಿಸ್ತೀರ. (ಕೀರ್ತ. 37:28) ನಮ್ಮೆಲ್ರಿಗೂ ಯೆಹೋವನನ್ನ ಪ್ರೀತಿಸೋ, ಆತನಿಗೆ ನಿಯತ್ತಿಂದ ಸೇವೆ ಮಾಡೋ ಸಹೋದರ ಸಹೋದರಿಯರ ಜೊತೆ ಇರೋಕೆ ಒಂದು ದೊಡ್ಡ ಅವಕಾಶ ಸಿಕ್ಕಿದೆ. ಆ ಸುಯೋಗಕ್ಕೆ ನಾವು ಋಣಿಗಳಾಗಿ ಇರೋಣ!
ನೀವೇನು ಹೇಳ್ತೀರಾ?
-
ಇವತ್ತು ಯೆಹೋವನ ಜನ್ರು ಯೇಸು ತರ ಏನೆಲ್ಲಾ ಮಾಡ್ತಿದ್ದಾರೆ?
-
ಯೆಹೋವನ ಸಂಘಟನೆ ಮೇಲೆ ನಂಬಿಕೆ ಇದೆ ಅಂತ ನಾವು ಹೇಗೆ ತೋರಿಸ್ತಾ ಇರಬಹುದು?
-
ಸುಳ್ಳುಸುದ್ದಿ ನಮ್ಮ ಕಿವಿಗೆ ಬಿದ್ದಾಗ ನಾವೇನು ಮಾಡಬೇಕು?
ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು
a ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ! ಪುಸ್ತಕದ ಪುಟ 102-103ರಲ್ಲಿರೋ “1919ರಲ್ಲೇ ಯಾಕೆ?” ಅನ್ನೋ ಚೌಕ ನೋಡಿ.
b ಚಿತ್ರ ವಿವರಣೆ: ಸಾರ್ವಜನಿಕ ಸಾಕ್ಷಿಕಾರ್ಯಕ್ಕೆ ಏನೆಲ್ಲಾ ಏರ್ಪಾಡು ಮಾಡಬೇಕು ಅಂತ ಹಿರಿಯರು ಒಬ್ರಿಗೊಬ್ರು ಮಾತಾಡ್ತಿದ್ದಾರೆ. ಆಮೇಲೆ ಅವರು ಹೇಳಿದ ತರಾನೇ ಒಂದು ಗುಂಪಿನ ಮೇಲ್ವಿಚಾರಕ ಪ್ರಚಾರಕರಿಗೆ ನಿರ್ದೇಶನ ಕೊಡ್ತಿದ್ದಾನೆ. ಗೋಡೆಗೆ ಬೆನ್ನು ಹಾಕಿ ನಿಂತ್ಕೊಬೇಕು ಅಂತ ಅವ್ರಿಗೆ ಹೇಳ್ತಿದ್ದಾನೆ.