ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ

ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ

‘ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುವವರನ್ನು ಅನುಕರಿಸಿ.’—ಇಬ್ರಿ. 6:12.

ಗೀತೆಗಳು: 86, 54

1, 2. ಯೆಪ್ತಾಹ ಮತ್ತು ಅವನ ಮಗಳು ಯಾವ ಕಷ್ಟದ ಸನ್ನಿವೇಶವನ್ನು ಎದುರಿಸಿದರು?

ಯುವತಿಯೊಬ್ಬಳು ತನ್ನ ತಂದೆಯನ್ನು ಎದುರುಗೊಳ್ಳಲು ಮನೆಯೊಳಗಿಂದ ಓಡೋಡಿ ಬರುತ್ತಾಳೆ. ಯುದ್ಧವನ್ನು ಜಯಿಸಿ ತಂದೆ ಸುರಕ್ಷಿತವಾಗಿ ಹಿಂದೆ ಬರುವುದನ್ನು ನೋಡಿ ಅವಳಿಗೆ ಖುಷಿಯೋ ಖುಷಿ. ವಿಜಯಿಯಾಗಿ ಬಂದ ತಂದೆಯನ್ನು ಅವಳು ಹಾಡುತ್ತಾ ಕುಣಿಯುತ್ತಾ ಸ್ವಾಗತಿಸುತ್ತಾಳೆ. ಆದರೆ ಅವನ ವರ್ತನೆಯಿಂದ ಅವಳಿಗೆ ಆಶ್ಚರ್ಯವಾಗುತ್ತದೆ. ಏಕೆಂದರೆ ಮಗಳನ್ನು ನೋಡುತ್ತಲೇ ತಂದೆಯು ತನ್ನ ಬಟ್ಟೆಯನ್ನು ಹರಿದುಕೊಂಡು “ಅಯ್ಯೋ ನನ್ನ ಮಗಳೇ, ಮಗಳೇ, ನೀನು ನನ್ನನ್ನು ಕುಗ್ಗಿಸೇ ಬಿಟ್ಟಿಯಲ್ಲಾ” ಎಂದು ಕೂಗಿಕೊಳ್ಳುತ್ತಾನೆ. ನಂತರ ತಾನು ಯೆಹೋವನಿಗೆ ಮಾಡಿದ ಹರಕೆಯನ್ನು ಅವಳಿಗೆ ತಿಳಿಸುತ್ತಾನೆ. ಆ ಹರಕೆಯು ಅವಳ ಇಡೀ ಜೀವನವನ್ನೇ ಬದಲಾಯಿಸಲಿಕ್ಕಿತ್ತು. ಆ ಹರಕೆಗನುಸಾರ ಅವಳು ಯಾವತ್ತೂ ಮದುವೆ ಆಗುವಂತಿರಲಿಲ್ಲ. ಮಕ್ಕಳನ್ನು ಹೆತ್ತು ಸಂಸಾರ ಮಾಡುವಂತಿರಲಿಲ್ಲ. ಆದರೆ ಆ ಕ್ಷಣವೇ ಅವಳು ಕೊಟ್ಟ ಉತ್ತರ ಅತಿ ಸುಂದರ. ಯೆಹೋವನಿಗೆ ಮಾಡಿದ ಹರಕೆಯನ್ನು ತೀರಿಸುವಂತೆ ತಂದೆಯನ್ನು ಅವಳು ಪ್ರೋತ್ಸಾಹಿಸುತ್ತಾಳೆ. ಇದು, ಯೆಹೋವನು ಅವಳಿಂದ ಏನನ್ನು ಅಪೇಕ್ಷಿಸಿದನೋ ಅದು ಅವಳ ಒಳ್ಳೇದಕ್ಕಾಗಿಯೇ ಎಂಬ ಪೂರ್ಣ ನಂಬಿಕೆ ಅವಳಿಗಿತ್ತೆಂದು ತೋರಿಸುತ್ತದೆ. (ನ್ಯಾಯ. 11:34-37) ಮಗಳ ನಂಬಿಕೆಯನ್ನು ನೋಡಿ ತಂದೆ ತುಂಬ ಹೆಮ್ಮೆಪಡುತ್ತಾನೆ. ಅವಳಲ್ಲಿದ್ದ ಸಿದ್ಧಮನಸ್ಸು ಯೆಹೋವನಿಗೆ ಸಂತೋಷ ತರುತ್ತದೆಂದು ಅವನಿಗೆ ಗೊತ್ತಿದೆ.

2 ಯೆಪ್ತಾಹ ಮತ್ತು ಅವನ ಮಗಳಿಗೆ ಯೆಹೋವನಲ್ಲಿ ಹಾಗೂ ಆತನ ಕಾರ್ಯಗಳಲ್ಲಿ ಪೂರ್ಣ ಭರವಸೆಯಿತ್ತು. ಆದ್ದರಿಂದ ಕಷ್ಟದ ಸನ್ನಿವೇಶದಲ್ಲೂ ಅವರು ಆತನಿಗೆ ನಂಬಿಗಸ್ತರಾಗಿದ್ದರು. ಯೆಹೋವನ ಮೆಚ್ಚಿಕೆ ಗಳಿಸುವುದು ಅವರಿಗೆ ಮುಖ್ಯವಾಗಿತ್ತು. ಅದಕ್ಕಾಗಿ ಯಾವುದೇ ತ್ಯಾಗಮಾಡಲು ಸಿದ್ಧರಿದ್ದರು.

3. ಯೆಪ್ತಾಹ ಮತ್ತು ಅವನ ಮಗಳ ಮಾದರಿ ನಮಗೆ ಇಂದು ಹೇಗೆ ಸಹಾಯಮಾಡುತ್ತದೆ?

3 ಯೆಹೋವನಿಗೆ ನಂಬಿಗಸ್ತರಾಗಿರಲು ಕೆಲವೊಮ್ಮೆ ನಮಗೆ ತುಂಬ ಕಷ್ಟವಾಗಬಹುದು. “ನಂಬಿಕೆಗಾಗಿ . . . ಕಠಿನ ಹೋರಾಟ” ಮಾಡಬೇಕಾಗುತ್ತದೆ. (ಯೂದ 3) ಹೀಗೆ ಮಾಡಲು ಯೆಪ್ತಾಹ ಮತ್ತು ಅವನ ಮಗಳ ಮಾದರಿಯು ನಮಗೆ ಸಹಾಯಮಾಡುತ್ತದೆ. ಅವರು ತಮ್ಮ ಜೀವನದಲ್ಲಿ ಕಷ್ಟದ ಸನ್ನಿವೇಶಗಳನ್ನು ತಾಳಿಕೊಂಡರು. ಆದರೂ ನಂಬಿಗಸ್ತರಾಗಿ ಉಳಿದರು. ಹೇಗೆಂದು ನೋಡೋಣ.

ಲೋಕದ ಪ್ರಭಾವದ ಎದುರಲ್ಲೂ ನಂಬಿಗಸ್ತರಾಗಿ ಉಳಿಯಿರಿ

4, 5. (ಎ) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಇನ್ನೇನು ಪ್ರವೇಶಿಸಲಿದ್ದಾಗ ಯೆಹೋವನು ಅವರಿಗೆ ಯಾವ ಆಜ್ಞೆ ಕೊಟ್ಟಿದ್ದನು? (ಬಿ) ಕೀರ್ತನೆ 106ಕ್ಕನುಸಾರ ಇಸ್ರಾಯೇಲ್ಯರ ಅವಿಧೇಯತೆಯ ಕಾರಣ ಅವರಿಗೆ ಏನು ಸಂಭವಿಸಿತು?

4 ಯೆಪ್ತಾಹ ಮತ್ತು ಅವನ ಮಗಳು ದಿನದಿನವೂ ತಮ್ಮ ಸುತ್ತಮುತ್ತ ನಡೆಯುತ್ತಿದ್ದ ಕೆಟ್ಟ ವಿಷಯಗಳನ್ನು ನೋಡುತ್ತಿದ್ದರು. ಇಸ್ರಾಯೇಲ್ಯರು ಯೆಹೋವನಿಗೆ ಅವಿಧೇಯತೆ ತೋರಿಸಿದ್ದರಿಂದಲೇ ಹೀಗೆಲ್ಲ ಆಗುತ್ತಿದೆಯೆಂದು ಅವರಿಗೆ ಗೊತ್ತಿತ್ತು. ಸುಮಾರು 300 ವರ್ಷಗಳ ಮೊದಲೇ ಯೆಹೋವನು ಇಸ್ರಾಯೇಲ್ಯರಿಗೆ ವಾಗ್ದತ್ತ ದೇಶದಲ್ಲಿನ ಎಲ್ಲ ಸುಳ್ಳು ಆರಾಧಕರನ್ನು ಕೊಂದುಬಿಡುವಂತೆ ಆಜ್ಞಾಪಿಸಿದ್ದನು. ಆದರೆ ಅವರು ಹಾಗೆ ಮಾಡಿರಲಿಲ್ಲ. (ಧರ್ಮೋ. 7:1-4) ಹೆಚ್ಚಿನ ಇಸ್ರಾಯೇಲ್ಯರು ಕಾನಾನ್ಯರನ್ನು ಅನುಕರಿಸಿ ಸುಳ್ಳು ದೇವತೆಗಳನ್ನು ಆರಾಧಿಸಲು, ಅನೈತಿಕ ಜೀವನವನ್ನು ನಡೆಸಲು ಆರಂಭಿಸಿದ್ದರು.ಕೀರ್ತನೆ 106:34-39 ಓದಿ.

5 ಈ ಅವಿಧೇಯತೆಯ ಕಾರಣ ಯೆಹೋವನು ಇಸ್ರಾಯೇಲ್ಯರನ್ನು ಶತ್ರುಗಳಿಂದ ರಕ್ಷಿಸಲಿಲ್ಲ. (ನ್ಯಾಯ. 2:1-3, 11-15; ಕೀರ್ತ. 106:40-43) ದೇವಭಕ್ತ ಕುಟುಂಬಗಳಿಗೆ ಆ ಸಂಕಷ್ಟದ ದಿನಗಳಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ತುಂಬ ಕಷ್ಟವಾಗಿದ್ದಿರಬೇಕು. ಹಾಗಿದ್ದರೂ ಯೆಪ್ತಾಹ, ಅವನ ಮಗಳು ಹಾಗೂ ಎಲ್ಕಾನ, ಹನ್ನ, ಸಮುವೇಲ ಮುಂತಾದವರು ನಂಬಿಗಸ್ತರಾಗಿ ಉಳಿದರೆಂದು ಬೈಬಲ್‌ ಹೇಳುತ್ತದೆ. ಯೆಹೋವನನ್ನು ಸಂತೋಷಪಡಿಸಲು ಅವರು ದೃಢನಿರ್ಧಾರ ಮಾಡಿದ್ದರು.—1 ಸಮು. 1:20-28; 2:26.

6. (ಎ) ಇಂದು ಲೋಕದಲ್ಲಿ ಯಾವ ಕೆಟ್ಟ ಪ್ರಭಾವ ಇದೆ? (ಬಿ) ನಾವೇನು ಮಾಡಬೇಕು?

6 ನಮ್ಮ ಸಮಯದಲ್ಲಿ ಜನರ ಯೋಚನೆ, ನಡತೆ ಆ ಕಾನಾನ್ಯರಂತಿದೆ. ಸೆಕ್ಸ್‌, ಹಿಂಸಾಚಾರ, ಹಣದಲ್ಲಿ ಅವರ ಇಡೀ ಜೀವನ ಮುಳುಗಿದೆ. ಆದರೆ ಯೆಹೋವನು ನಮಗೆ ಸ್ಪಷ್ಟ ಎಚ್ಚರಿಕೆಗಳನ್ನು ಕೊಟ್ಟಿದ್ದಾನೆ. ಆತನು ಇಸ್ರಾಯೇಲ್ಯರನ್ನು ಹೇಗೆ ಕೆಟ್ಟ ಪ್ರಭಾವಗಳಿಂದ ರಕ್ಷಿಸಲು ಬಯಸಿದನೋ ಹಾಗೆಯೇ ನಮ್ಮನ್ನೂ ರಕ್ಷಿಸಲು ಬಯಸುತ್ತಾನೆ. ಇಸ್ರಾಯೇಲ್ಯರ ತಪ್ಪುಗಳಿಂದ ನಾವು ಬುದ್ಧಿಕಲಿಯುತ್ತೇವಾ? (1 ಕೊರಿಂ. 10:6-11) ಲೋಕದ ಯೋಚನಾ ರೀತಿ ನಮ್ಮನ್ನು ತಟ್ಟದಂತೆ ನಮ್ಮ ಕೈಲಾದದ್ದೆಲ್ಲ ಮಾಡಬೇಕು. (ರೋಮ. 12:2) ನಂಬಿಗಸ್ತಿಕೆಯಿಂದ ಅಂಥ ಪ್ರಯತ್ನವನ್ನು ಮಾಡೋಣ.

ಇತರರು ಮನನೋಯಿಸಿದರೂ ಯೆಪ್ತಾಹ ನಂಬಿಗಸ್ತನಾಗಿದ್ದನು

7. (ಎ) ಯೆಪ್ತಾಹನ ಸ್ವಂತ ಜನರು ಅವನಿಗೆ ಏನು ಮಾಡಿದರು? (ಬಿ) ಅವನು ಹೇಗೆ ಪ್ರತಿಕ್ರಿಯಿಸಿದನು?

7 ಯೆಪ್ತಾಹನ ದಿನಗಳಲ್ಲಿ ಇಸ್ರಾಯೇಲ್ಯರ ಮೇಲೆ ಫಿಲಿಷ್ಟಿಯರು ಮತ್ತು ಅಮ್ಮೋನಿಯರು ದಬ್ಬಾಳಿಕೆ ನಡೆಸುತ್ತಿದ್ದರು. ಇಸ್ರಾಯೇಲ್ಯರು ಯೆಹೋವನಿಗೆ ಅವಿಧೇಯರಾದ ಕಾರಣದಿಂದಲೇ ಹಾಗಾಯಿತು. (ನ್ಯಾಯ. 10:7, 8) ಶತ್ರು ಜನಾಂಗಗಳ ಕಾಟ ಮಾತ್ರವಲ್ಲದೆ ಯೆಪ್ತಾಹನಿಗೆ ಬೇರೆ ಕಷ್ಟಗಳು ಸಹ ಇದ್ದವು. ಅವನ ಸ್ವಂತ ಸಹೋದರರಿಂದ ಮತ್ತು ಇಸ್ರಾಯೇಲಿನ ನಾಯಕರಿಂದ ಅವನಿಗೆ ಕಷ್ಟಗಳು ಬಂದವು. ಅವನ ಸಹೋದರರು ಅವನನ್ನು ದ್ವೇಷಿಸಿದರು, ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದಕಾರಣ ಯೆಪ್ತಾಹನಿಗೆ ನ್ಯಾಯವಾಗಿ ಸೇರಿದ್ದ ಆಸ್ತಿಯನ್ನು ಕಿತ್ತುಕೊಂಡು ಅವನನ್ನು ಹೊರಗೆ ಹಾಕಿದರು. (ನ್ಯಾಯ. 11:1-3) ಆದರೆ ಅವರ ಈ ಕ್ರೂರ ವರ್ತನೆಯು ತನ್ನನ್ನು ಪ್ರಭಾವಿಸುವಂತೆ ಯೆಪ್ತಾಹನು ಬಿಡಲಿಲ್ಲ. ಅದು ನಮಗೆ ಹೇಗೆ ಗೊತ್ತು? ಇಸ್ರಾಯೇಲಿನ ಹಿರೀಪುರುಷರು ಅವನ ಸಹಾಯ ಬೇಡಿ ಬಂದಾಗ ಅವನು ಸಹಾಯಮಾಡಿದನು. (ನ್ಯಾಯ. 11:4-11) ಅಂಥ ಪ್ರತಿಕ್ರಿಯೆಯನ್ನು ತೋರಿಸಲು ಯೆಪ್ತಾಹನನ್ನು ಪ್ರಚೋದಿಸಿದ್ದು ಯಾವುದು?

8, 9. (ಎ) ಧರ್ಮಶಾಸ್ತ್ರದ ಯಾವ ತತ್ವಗಳು ಯೆಪ್ತಾಹನಿಗೆ ಸಹಾಯಮಾಡಿರಬೇಕು? (ಬಿ) ಯೆಪ್ತಾಹನಿಗೆ ಯಾವುದು ಹೆಚ್ಚು ಮುಖ್ಯವಾಗಿತ್ತು?

8 ಯೆಪ್ತಾಹನು ಯುದ್ಧ ವೀರನಾಗಿದ್ದನು. ಅವನಿಗೆ ಇಸ್ರಾಯೇಲ್ಯರ ಇತಿಹಾಸ ಮತ್ತು ಮೋಶೆಯ ಧರ್ಮಶಾಸ್ತ್ರ ಚೆನ್ನಾಗಿ ತಿಳಿದಿತ್ತು. ಯೆಹೋವನು ತನ್ನ ಜನರನ್ನು ಉಪಚರಿಸಿದ ರೀತಿಯಿಂದ ಆತನ ದೃಷ್ಟಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಯೆಪ್ತಾಹ ಕಲಿತಿದ್ದನು. (ನ್ಯಾಯ. 11:12-27) ತನ್ನ ಜೀವನದಲ್ಲಿ ನಿರ್ಣಯಗಳನ್ನು ಮಾಡುವಾಗ ಯೆಪ್ತಾಹ ಆ ಜ್ಞಾನವನ್ನು ಬಳಸಿದನು. ಯೆಹೋವನು ಕೋಪ, ಸೇಡು ಇವನ್ನು ದ್ವೇಷಿಸುತ್ತಾನೆ ಮತ್ತು ತನ್ನ ಜನರು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಬಯಸುತ್ತಾನೆ ಎಂಬುದು ಯೆಪ್ತಾಹನಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲದೆ ಬೇರೆಯವರನ್ನು, ತನ್ನನ್ನು ದ್ವೇಷಿಸುವವರನ್ನು ಸಹ ಹೇಗೆ ಉಪಚರಿಸಬೇಕೆಂದು ಧರ್ಮಶಾಸ್ತ್ರ ಅವನಿಗೆ ಕಲಿಸಿತ್ತು.ವಿಮೋಚನಕಾಂಡ 23:5; ಯಾಜಕಕಾಂಡ 19:17, 18 ಓದಿ.

9 ಯೋಸೇಫನ ಉದಾಹರಣೆ ಸಹ ಯೆಪ್ತಾಹನಿಗೆ ಸಹಾಯ ಮಾಡಿರಬೇಕು. ಯೋಸೇಫನ ಸಹೋದರರು ಅವನನ್ನು ದ್ವೇಷಿಸಿದರೂ ಅವನು ಹೇಗೆ ಕರುಣೆ ತೋರಿಸಿದನೆಂದು ಯೆಪ್ತಾಹನಿಗೆ ಗೊತ್ತಿದ್ದಿರಬೇಕು. (ಆದಿ. 37:4; 45:4, 5) ಈ ಮಾದರಿಯ ಕುರಿತು ಯೆಪ್ತಾಹ ಯೋಚಿಸಿರಬಹುದು. ಆದ್ದರಿಂದಲೇ ತನ್ನ ಸ್ವಂತ ಸಹೋದರರು ಮಾಡಿದ ವಿಷಯ ಯೆಪ್ತಾಹನ ಮನನೋಯಿಸಿತ್ತಾದರೂ ಅವನು ಯೆಹೋವನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಪ್ರತಿಕ್ರಿಯಿಸಿದನು. ತನಗಾದ ನೋವಿಗಿಂತ ಯೆಹೋವನ ನಾಮಕ್ಕಾಗಿ, ಆತನ ಜನರಿಗಾಗಿ ಹೋರಾಡುವುದು ಯೆಪ್ತಾಹನಿಗೆ ಹೆಚ್ಚು ಮುಖ್ಯವಾಗಿತ್ತು. (ನ್ಯಾಯ. 11:9) ಯೆಹೋವನಿಗೆ ನಂಬಿಗಸ್ತನಾಗಿರಲು ದೃಢನಿರ್ಧಾರ ಮಾಡಿದ್ದನು. ಇದರಿಂದ ಅವನಿಗೆ ಮಾತ್ರವಲ್ಲ ಇಸ್ರಾಯೇಲ್ಯರಿಗೂ ಆಶೀರ್ವಾದ ಸಿಕ್ಕಿತು.—ಇಬ್ರಿ. 11:32, 33.

10. ನಿಜ ಕ್ರೈಸ್ತರಾಗಿ ನಡೆದುಕೊಳ್ಳಲು ಬೈಬಲ್‌ ತತ್ವಗಳು ನಮಗೆ ಹೇಗೆ ಸಹಾಯಮಾಡುತ್ತವೆ?

10 ಯೆಪ್ತಾಹನ ಮಾದರಿಯಿಂದ ನಾವೇನು ಕಲಿಯುತ್ತೇವೆ? ಕ್ರೈಸ್ತ ಸಹೋದರರು ನಮ್ಮ ಮನನೋಯಿಸಿದರೆ, ನಮ್ಮೊಂದಿಗೆ ಒಳ್ಳೇ ರೀತಿ ನಡೆದುಕೊಳ್ಳದಿದ್ದರೆ ನಮಗೆ ದುಃಖ ಬೇಸರ ಆಗಬಹುದು. ಆದರೂ ನಾವು ಯೆಹೋವನ ಸೇವೆಯನ್ನು ಬಿಟ್ಟುಬಿಡಬಾರದು. ಕ್ರೈಸ್ತ ಕೂಟಗಳಿಗೆ ಹೋಗುವುದನ್ನು, ಸಹೋದರರೊಂದಿಗೆ ಸಹವಾಸ ಮಾಡುವುದನ್ನು ಎಂದಿಗೂ ನಿಲ್ಲಿಸಬಾರದು. ಯೆಪ್ತಾಹನನ್ನು ಅನುಕರಿಸುತ್ತಾ ಯೆಹೋವನಿಗೆ ವಿಧೇಯರಾಗಿರೋಣ. ಇದು ನಮಗೆ ಕಷ್ಟದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯಮಾಡುವುದು. ಆಗ ನಾವು ಸಹ ಇತರರಿಗೆ ಒಳ್ಳೇ ಮಾದರಿಯಾಗಿ ಇರುವೆವು.—ರೋಮ. 12:20, 21; ಕೊಲೊ. 3:13.

ಸಂತೋಷದಿಂದ ಮಾಡುವ ತ್ಯಾಗಗಳು ನಮ್ಮ ನಂಬಿಕೆಯನ್ನು ತೋರಿಸುತ್ತವೆ

11, 12. (ಎ) ಯೆಪ್ತಾಹ ಯಾವ ಹರಕೆಯನ್ನು ಮಾಡಿದನು? (ಬಿ) ಈ ಹರಕೆಯನ್ನು ಹೇಗೆ ತೀರಿಸಬೇಕಿತ್ತು?

11 ಇಸ್ರಾಯೇಲ್ಯರನ್ನು ಅಮ್ಮೋನಿಯರಿಂದ ಬಿಡಿಸಲು ದೇವರ ಸಹಾಯ ಬೇಕೆಂದು ಯೆಪ್ತಾಹನಿಗೆ ಗೊತ್ತಿತ್ತು. ಯೆಹೋವನು ಜಯವನ್ನು ಕೊಟ್ಟರೆ ಯುದ್ಧದಿಂದ ಮರಳಿ ಬಂದಾಗ ತನ್ನನ್ನು ಎದುರುಗೊಳ್ಳಲು ಮನೆಯಿಂದ ಬರುವ ಮೊದಲ ವ್ಯಕ್ತಿಯನ್ನು ‘ಹೋಮವಾಗಿ’ ಅರ್ಪಿಸುವೆನೆಂದು ಅವನು ಹರಕೆ ಹೊತ್ತನು. (ನ್ಯಾಯ. 11:30, 31) ಹೋಮ ಎಂದರೇನು?

12 ಅದು ಮನುಷ್ಯ ಬಲಿಯಲ್ಲ. ಏಕೆಂದರೆ ಅದನ್ನು ಯೆಹೋವನು ದ್ವೇಷಿಸುತ್ತಾನೆ. ಆದ್ದರಿಂದ ಮನುಷ್ಯ ಬಲಿಯ ಕುರಿತು ಯೆಪ್ತಾಹ ಯೋಚಿಸಿರಲಿಕ್ಕಿಲ್ಲ. (ಧರ್ಮೋ. 18:9, 10) ಹೋಮಕ್ಕೆ ಸರ್ವಾಂಗಹೋಮ ಎಂಬ ಹೆಸರೂ ಬೈಬಲಿನಲ್ಲಿದೆ. ಇದು ಯೆಹೋವನಿಗೆ ಸಂಪೂರ್ಣವಾಗಿ ಕೊಡುವ ಒಂದು ವಿಶೇಷ ಅರ್ಪಣೆಯಾಗಿತ್ತು. ಹಾಗಾದರೆ ಯೆಪ್ತಾಹ ಹರಕೆಯಲ್ಲಿ ಹೇಳಿದ ಮಾತಿನ ಅರ್ಥವೇನು? ಆ ವ್ಯಕ್ತಿಯನ್ನು ಅವನ ಜೀವಮಾನವಿಡೀ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ಕೊಡುತ್ತೇನೆಂದೇ. ಯೆಪ್ತಾಹ ಬೇಡಿದಂತೆ ಯೆಹೋವನು ಅವನಿಗೆ ವಿಜಯವನ್ನು ಕೊಟ್ಟನು. (ನ್ಯಾಯ. 11:32, 33) ಆದರೆ ಯೆಪ್ತಾಹ ಯಾರನ್ನು ಹೋಮವಾಗಿ ಅರ್ಪಿಸಲಿದ್ದನು?

13, 14. ನ್ಯಾಯಸ್ಥಾಪಕರು 11:35⁠ರಲ್ಲಿರುವ ಯೆಪ್ತಾಹನ ಮಾತುಗಳು ಅವನ ನಂಬಿಕೆಯ ಕುರಿತು ಏನನ್ನು ತಿಳಿಸುತ್ತವೆ?

13 ಈ ಲೇಖನದ ಆರಂಭದಲ್ಲಿ ತಿಳಿಸಲಾದ ದೃಶ್ಯವನ್ನು ನೆನಪಿಸಿಕೊಳ್ಳಿ. ಯೆಪ್ತಾಹನು ಯುದ್ಧ ಮುಗಿಸಿ ಮನೆಗೆ ಬಂದಾಗ ಅವನನ್ನು ಎದುರುಗೊಳ್ಳಲು ಮೊದಲು ಓಡಿಬಂದದ್ದು ಅವನ ಕಣ್ಮಣಿಯಂತಿದ್ದ ಒಬ್ಬಳೇ ಮಗಳು! ಯೆಪ್ತಾಹ ಏನು ಮಾಡಿದ? ಹರಕೆ ಮಾಡಿದಂತೆ ಮಗಳನ್ನು ಜೀವಮಾನವಿಡೀ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ಕಳುಹಿಸಿಕೊಟ್ಟನಾ?

14 ಪುನಃ ಒಮ್ಮೆ ಧರ್ಮಶಾಸ್ತ್ರದ ತತ್ವಗಳು ಯೆಪ್ತಾಹನಿಗೆ ಸರಿಯಾದ ನಿರ್ಣಯ ಮಾಡಲು ಸಹಾಯ ಮಾಡಿರಬೇಕು. ವಿಮೋಚನಕಾಂಡ 23:19⁠ರಲ್ಲಿರುವ ಮಾತುಗಳು ಅವನ ನೆನಪಿಗೆ ಬಂದಿರಬಹುದು. ದೇವಜನರು ಯೆಹೋವನಿಗೆ ಉತ್ಕೃಷ್ಟವಾದದ್ದನ್ನೇ ಸಂತೋಷದಿಂದ ಕೊಡಬೇಕೆಂದು ಆ ವಚನ ಹೇಳುತ್ತದೆ. ಮಾತ್ರವಲ್ಲ ಯಾರಾದರೂ ಯೆಹೋವನಿಗೆ ಹರಕೆಮಾಡಿದರೆ ‘ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನಡೆಯಬೇಕು’ ಎಂದೂ ಧರ್ಮಶಾಸ್ತ್ರ ಹೇಳಿತ್ತು. (ಅರ. 30:2) ಇದರರ್ಥ ಯೆಪ್ತಾಹನು ಬಹುಶಃ ತನ್ನ ಕಾಲದಲ್ಲಿ ಜೀವಿಸುತ್ತಿದ್ದ ಹನ್ನಳಂತೆ ಕೊಟ್ಟ ಮಾತನ್ನು ಪಾಲಿಸಬೇಕಿತ್ತು. ಇದರಿಂದ ಮಗಳ ಮೇಲೆ ಮತ್ತು ತನ್ನ ಮೇಲೆ ಆಗುವ ಪರಿಣಾಮದ ಬಗ್ಗೆ ಗೊತ್ತಿದ್ದರೂ ಅವನದನ್ನು ನಡೆಸಿಕೊಡಬೇಕಿತ್ತು. ದೇವದರ್ಶನದ ಗುಡಾರದಲ್ಲಿ ಸೇವೆಮಾಡುವುದರಿಂದ ಅವನ ಮಗಳಿಗೆ ಮಕ್ಕಳು ಇರುತ್ತಿರಲಿಲ್ಲ. ಹಾಗಾಗಿ ಯೆಪ್ತಾಹನ ವಂಶ ಬೆಳೆಸಲು, ಆಸ್ತಿಗೆ ವಾರಸುದಾರನಾಗಲು ಯಾರೂ ಇರುತ್ತಿರಲಿಲ್ಲ. (ನ್ಯಾಯ. 11:34) ಹೀಗಿದ್ದರೂ ಯೆಪ್ತಾಹನು ನಂಬಿಕೆಯಿಂದ ಹೇಳಿದ್ದು: “ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆನು.” (ನ್ಯಾಯ. 11:35) ಯೆಹೋವನು ಯೆಪ್ತಾಹನ ಮಹಾ ತ್ಯಾಗವನ್ನು ಸ್ವೀಕರಿಸಿ ಆಶೀರ್ವದಿಸಿದನು. ಯೆಪ್ತಾಹನ ಜಾಗದಲ್ಲಿ ನೀವು ಇದ್ದಿದ್ದರೆ ಅಷ್ಟು ನಂಬಿಗಸ್ತಿಕೆ ತೋರಿಸುತ್ತಿದ್ದಿರಾ?

15. (ಎ) ನಮ್ಮಲ್ಲಿ ಹೆಚ್ಚಿನವರು ಯಾವ ಹರಕೆ ಮಾಡಿದ್ದೇವೆ? (ಬಿ) ನಾವು ನಮ್ಮ ನಂಬಿಗಸ್ತಿಕೆಯನ್ನು ಹೇಗೆ ರುಜುಪಡಿಸಬಹುದು?

15 ಯೆಹೋವನಿಗೆ ನಾವು ನಮ್ಮ ಜೀವನವನ್ನು ಸಮರ್ಪಿಸಿದಾಗ ‘ಏನೇ ಆದರೂ ನಿನ್ನ ಚಿತ್ತ ಮಾಡ್ತೇವೆ’ ಎಂದು ಹರಕೆ ಮಾಡಿದೆವು ಅಂದರೆ ಮಾತುಕೊಟ್ಟೆವು. ಆ ಮಾತಿನ ಪ್ರಕಾರ ನಡೆಯುವುದು ಕೆಲವೊಮ್ಮೆ ಕಷ್ಟವಾಗಬಹುದೆಂದು ನಮಗೆ ಆಗಲೇ ಗೊತ್ತಿತ್ತು. ಆದರೆ ನೆನಸಿ, ನಮಗೆ ಇಷ್ಟವಾಗದ ಒಂದು ವಿಷಯವನ್ನು ಮಾಡಲು ಈಗ ಹೇಳಲಾಗುತ್ತದೆ. ನಮ್ಮ ಪ್ರತಿಕ್ರಿಯೆ ಏನು? ನಮ್ಮ ಮನಸ್ಸಿನ ಭಾವನೆಗಳನ್ನು ಮೆಟ್ಟಿನಿಂತು ಮನಃಪೂರ್ವಕವಾಗಿ ಯೆಹೋವನಿಗೆ ವಿಧೇಯರಾಗುತ್ತೇವಾ? ಹಾಗೆ ಮಾಡಿದರೆ ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂದು ತೋರಿಸಿಕೊಡುತ್ತೇವೆ. ತ್ಯಾಗಗಳನ್ನು ಮಾಡುವಾಗ ನಮಗೆ ಮನಸ್ಸಿಗೆ ನೋವಾಗಬಹುದು. ಆದರೆ ಆ ತ್ಯಾಗಗಳಿಗಾಗಿ ಯೆಹೋವನು ಕೊಡುವ ಆಶೀರ್ವಾದಗಳು ಯಾವಾಗಲೂ ಎಷ್ಟೋ ಹೆಚ್ಚಿರುತ್ತವೆ. (ಮಲಾ. 3:10) ಯೆಪ್ತಾಹನ ಮಗಳ ವಿಷಯದಲ್ಲೇನು? ತಂದೆಯ ಹರಕೆಯ ಬಗ್ಗೆ ಗೊತ್ತಾದಾಗ ಅವಳು ಏನಂದಳು?

ಯೆಪ್ತಾಹ ಮತ್ತು ಅವನ ಮಗಳಲ್ಲಿದ್ದಂಥ ನಂಬಿಕೆಯನ್ನು ನಾವು ಹೇಗೆ ತೋರಿಸಬಹುದು? (ಪ್ಯಾರ 16, 17 ನೋಡಿ)

16. ಯೆಪ್ತಾಹನ ಮಗಳು ತನ್ನ ತಂದೆಯ ಹರಕೆಗೆ ಹೇಗೆ ಪ್ರತಿಕ್ರಿಯಿಸಿದಳು? (ಲೇಖನದ ಆರಂಭದ ಚಿತ್ರ ನೋಡಿ.)

16 ಯೆಪ್ತಾಹನ ಹರಕೆಯು ಹನ್ನಳ ಹರಕೆಗಿಂತ ಬೇರೆಯಾಗಿತ್ತು. ಅವಳು ತನ್ನ ಮಗ ಸಮುವೇಲನನ್ನು ದೇವದರ್ಶನದ ಗುಡಾರದಲ್ಲಿ ನಾಜೀರನಾಗಿ ಸೇವೆಮಾಡಲು ಕೊಡುವೆನೆಂದು ಹರಕೆಹೊತ್ತಳು. (1 ಸಮು. 1:11) ಒಬ್ಬ ನಾಜೀರನು ಮದುವೆಯಾಗಿ ಸಂಸಾರ ನಡೆಸಬಹುದಿತ್ತು. ಆದರೆ ಯೆಪ್ತಾಹನು ತನ್ನ ಮಗಳನ್ನು ಸರ್ವಾಂಗಹೋಮವಾಗಿ ಕೊಟ್ಟನು. ಇದರರ್ಥ ಅವಳಿಗೆ ಪತ್ನಿಯಾಗುವ, ತಾಯಿಯಾಗುವ ಸಂತೋಷ ಯಾವತ್ತೂ ಸಿಗುವಂತಿರಲಿಲ್ಲ. (ನ್ಯಾಯ. 11:37-40) ಯೋಚಿಸಿ, ಅವಳಿಗೆ ಇಡೀ ದೇಶದಲ್ಲೇ ತುಂಬ ಗುಣವಂತ ವರ ಸಿಗುತ್ತಿದ್ದ. ಏಕೆಂದರೆ ಅವಳ ತಂದೆ ಇಸ್ರಾಯೇಲಿನ ನಾಯಕನಾಗಿದ್ದ. ಆದರೆ ಈಗ ಅವಳು ದೇವದರ್ಶನ ಗುಡಾರದಲ್ಲಿ ಸೇವಕಿಯಾಗಬೇಕಿತ್ತು. ತಂದೆಯ ಮಾತಿಗೆ ಆ ಯುವತಿ ಏನಂದಳು? ಯೆಹೋವನ ಸೇವೆಯೇ ಅವಳಿಗೆ ಮುಖ್ಯವಾಗಿತ್ತು. ಆದ್ದರಿಂದ ಅವಳು ತಂದೆಗೆ “ನಿನ್ನ ಬಾಯಿಂದ ಹೊರಟದ್ದನ್ನೇ ನೆರವೇರಿಸು” ಎಂದು ಹೇಳಿದಳು. (ನ್ಯಾಯ. 11:36) ಯೆಹೋವನ ಸೇವೆ ಮಾಡಲಿಕ್ಕಾಗಿ ಮದುವೆಯಾಗುವ, ಮಕ್ಕಳನ್ನು ಪಡೆಯುವ ಸಹಜ ಆಸೆಗಳನ್ನು ತ್ಯಾಗಮಾಡಿದಳು. ಅವಳ ಸ್ವತ್ಯಾಗದ ಗುಣವನ್ನು ನಾವು ಹೇಗೆ ಅನುಕರಿಸಬಹುದು?

17. (ಎ) ಯೆಪ್ತಾಹ ಮತ್ತು ಅವನ ಮಗಳ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಹುದು? (ಬಿ) ಇಬ್ರಿಯ 6:10-12⁠ರ ಮಾತುಗಳು ಸ್ವತ್ಯಾಗ ಮಾಡುವಂತೆ ನಿಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತವೆ?

17 ಸಾವಿರಾರು ಕ್ರೈಸ್ತ ಯುವಕ ಯುವತಿಯರು ಸದ್ಯಕ್ಕೆ ಮದುವೆಯಾಗದೆ ಉಳಿಯುತ್ತಾರೆ ಅಥವಾ ಇನ್ನೂ ಕೆಲವರು ಮದುವೆಯಾದರೂ ಮಕ್ಕಳಿಲ್ಲದೆ ಇರುತ್ತಾರೆ. ಅವರು ಈ ತ್ಯಾಗವನ್ನು ಸಂತೋಷದಿಂದ ಮಾಡುತ್ತಿದ್ದಾರೆ. ಕಾರಣ? ಯೆಹೋವನ ಸೇವೆ ಮಾಡಲು ಹೆಚ್ಚು ಗಮನಕೊಡಲಿಕ್ಕಾಗಿಯೇ. ನಮ್ಮ ಅನೇಕ ವೃದ್ಧರು ಸಹ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಸಮಯ ಕಳೆದು ಆನಂದಿಸುವುದನ್ನು ತ್ಯಾಗಮಾಡಿ ತಮ್ಮ ಸಮಯ, ಶಕ್ತಿಯನ್ನು ಯೆಹೋವನ ಸೇವೆಗಾಗಿ ಕೊಡುತ್ತಾರೆ. ಅವರಲ್ಲಿ ಕೆಲವರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಾರೆ ಅಥವಾ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಿ ಹೆಚ್ಚು ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆಮಾಡುತ್ತಾರೆ. ಇತರರು ಯೋಜನೆಗಳನ್ನು ಮಾಡಿ ಸ್ಮರಣೆಯ ಸಮಯದಲ್ಲಿ ಸೇವೆಯನ್ನು ಹೆಚ್ಚಿಸುತ್ತಾರೆ. ಈ ನಂಬಿಗಸ್ತರು ಮಾಡುವ ಪ್ರೀತಿಯ ತ್ಯಾಗಗಳನ್ನು ಯೆಹೋವನು ಎಂದೂ ಮರೆಯುವುದಿಲ್ಲ. (ಇಬ್ರಿಯ 6:10-12 ಓದಿ.) ನಿಮ್ಮ ಬಗ್ಗೆ ಏನು? ಯೆಹೋವನ ಸೇವೆಯನ್ನು ಇನ್ನೂ ಹೆಚ್ಚು ಮಾಡಲು ತ್ಯಾಗಗಳನ್ನು ಮಾಡುವಿರಾ?

ನಾವೇನು ಪಾಠ ಕಲಿತೆವು?

18, 19. (ಎ) ಯೆಪ್ತಾಹ ಮತ್ತು ಅವನ ಮಗಳ ಕುರಿತ ಬೈಬಲ್‌ ವೃತ್ತಾಂತದಿಂದ ನಾವೇನು ಕಲಿತೆವು? (ಬಿ) ನಾವು ಹೇಗೆ ಅವರನ್ನು ಅನುಕರಿಸಬಹುದು?

18 ಯೆಪ್ತಾಹನಿಗೆ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲು ಯಾವ ವಿಷಯಗಳು ಸಹಾಯಮಾಡಿದವು? ತನ್ನ ಜೀವನದ ಆಯ್ಕೆಗಳನ್ನು ಯೆಹೋವನೇ ಮಾರ್ಗದರ್ಶಿಸುವಂತೆ ಅವನು ಬಿಟ್ಟನು. ತನ್ನ ಸುತ್ತಮುತ್ತಲಿನ ಜನರ ಪ್ರಭಾವಕ್ಕೆ ಅವನು ಒಳಗಾಗಲಿಲ್ಲ. ಬೇರೆಯವರು ತನ್ನ ಮನನೋಯಿಸಿದರೂ ಯೆಪ್ತಾಹ ಮಾತ್ರ ದೇವರಿಗೆ ನಂಬಿಗಸ್ತಿಕೆ ತೋರಿಸುವುದನ್ನು ಬಿಟ್ಟುಬಿಡಲಿಲ್ಲ. ಅವನು ಸಂತೋಷದಿಂದ ತ್ಯಾಗಗಳನ್ನು ಮಾಡಿದ್ದಕ್ಕಾಗಿ ಯೆಹೋವನು ಅವನನ್ನು, ಅವನ ಮಗಳನ್ನು ಆಶೀರ್ವದಿಸಿದನು. ಸತ್ಯಾರಾಧನೆಯ ಅಭಿವೃದ್ಧಿಗಾಗಿ ಅವರಿಬ್ಬರನ್ನು ಉಪಯೋಗಿಸಿದನು. ಇತರರು ದೇವರ ಮಟ್ಟಗಳಿಗೆ ವಿಧೇಯರಾಗದಿದ್ದರೂ ಯೆಪ್ತಾಹ ಮತ್ತು ಅವನ ಮಗಳು ವಿಧೇಯರಾದರು.

19 ‘ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುವವರನ್ನು ಅನುಕರಿಸಿ’ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 6:12) ಹಾಗಾಗಿ ನಾವು ಯೆಪ್ತಾಹ ಮತ್ತು ಅವನ ಮಗಳನ್ನು ಅನುಕರಿಸೋಣ. ನಂಬಿಗಸ್ತರಾಗಿ ಉಳಿದರೆ ಯೆಹೋವನು ನಮ್ಮನ್ನು ಆಶೀರ್ವದಿಸುವನು.