ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೀರಾ?

ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೀರಾ?

ಮಾನವ ಮೆದುಳಿಗಿರುವ ಸಾಮರ್ಥ್ಯ ಅಪಾರ. ಬರೀ ಒಂದೂವರೆ ಕೆ.ಜಿ. ತೂಕ ಮಾತ್ರ ಇದ್ದರೂ ಅದನ್ನು ಇದು ವರೆಗೂ ಕಂಡುಹಿಡಿದಿರುವ ಸೃಷ್ಟಿಯಲ್ಲೇ ಅತಿ ಜಟಿಲವಾದದ್ದು ಎಂದು ಕರೆಯಲಾಗಿದೆ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಮಾನವ ಮೆದುಳಿನ ಬಗ್ಗೆ ಹೆಚ್ಚು ತಿಳುಕೊಂಡಂತೆ ಯೆಹೋವನ ಒಂದೊಂದು ಸೃಷ್ಟಿ ಎಷ್ಟು ‘ಅದ್ಭುತವಾಗಿದೆ’ ಎಂದು ನಮಗೆ ಗೊತ್ತಾಗುತ್ತದೆ. (ಕೀರ್ತ. 139:14) ನಮ್ಮ ಮೆದುಳಿಗಿರುವ ಒಂದು ಸಾಮರ್ಥ್ಯದ ಬಗ್ಗೆ ಈ ಲೇಖನದಲ್ಲಿ ತಿಳಿಯಲಿದ್ದೇವೆ. ಅದು ಕಲ್ಪನಾಶಕ್ತಿ.

ಕಲ್ಪನಾಶಕ್ತಿ ಅಂದರೇನು? ಒಂದು ಶಬ್ದಕೋಶ ಅದನ್ನು ಹೀಗೆ ವಿವರಿಸುತ್ತದೆ: “ಇದುವರೆಗೂ ನೋಡಿರದ, ಅನುಭವಿಸಿರದ ಆಸಕ್ತಿಕರ ವಿಷಯಗಳ ಬಗ್ಗೆ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ನಮಗಿರುವ ಸಾಮರ್ಥ್ಯ.” ಹಾಗಾದರೆ ನೀವು ನಿಮ್ಮ ಕಲ್ಪನಾಶಕ್ತಿಯನ್ನು ಆಗಾಗ ಉಪಯೋಗಿಸುತ್ತಾ ಇರುತ್ತೀರೆಂದು ಆಯಿತಲ್ವಾ? ಉದಾಹರಣೆಗೆ: ನೀವು ಯಾವತ್ತೂ ಹೋಗಿರದ ಸ್ಥಳದ ಬಗ್ಗೆ ಓದುವಾಗ ಅಥವಾ ಕೇಳುವಾಗ ಆ ಸ್ಥಳ ಹೀಗೀಗೆ ಇರಬಹುದು ಎಂದು ನಿಮ್ಮ ಮನಸ್ಸಲ್ಲಿ ಚಿತ್ರ ಮೂಡುವುದಿಲ್ವಾ? ನಾವು ನೋಡಿರದ, ಕೇಳಿರದ, ಸವಿದಿಲ್ಲದ, ಮುಟ್ಟಿರದ, ಮೂಸಿರದ ವಿಷಯಗಳ ಬಗ್ಗೆ ಯೋಚಿಸುವಾಗ ನಮ್ಮ ಕಲ್ಪನಾಶಕ್ತಿ ಕೆಲಸಮಾಡುತ್ತದೆ.

ಯೆಹೋವನು ನಮ್ಮನ್ನು ತನ್ನ ಸ್ವರೂಪದಲ್ಲಿ ರೂಪಿಸಿ ರಚಿಸಿದ್ದಾನೆ ಎಂದು ಬೈಬಲ್‌ ಹೇಳುತ್ತದೆ. (ಆದಿ. 1:26, 27) ಹಾಗಾದರೆ ಯೆಹೋವನಲ್ಲೂ ಕಲ್ಪನಾಶಕ್ತಿ ಇದೆ ಎಂದಾಯಿತು. ಈ ಸಾಮರ್ಥ್ಯವನ್ನು ಆತನು ನಮಗೂ ಕೊಟ್ಟಿರುವುದರಿಂದ ಅದನ್ನು ಆತನು ಬಯಸುವ ರೀತಿಯಲ್ಲಿ ಉಪಯೋಗಿಸಬೇಕೆಂದು ಇಷ್ಟಪಡುತ್ತಾನೆ. (ಪ್ರಸಂ. 3:11) ಹಾಗಾದರೆ ಈ ಕಲ್ಪನಾಶಕ್ತಿಯನ್ನು ಯೆಹೋವನು ಬಯಸುವ ರೀತಿಯಲ್ಲಿ ಬಳಸುವುದು ಹೇಗೆ ಮತ್ತು ಅದನ್ನು ಯಾವ ರೀತಿಯಲ್ಲಿ ಬಳಸಬಾರದು ಎಂದು ಈಗ ನೋಡೋಣ.

ಕಲ್ಪನಾಶಕ್ತಿಯ ತಪ್ಪಾದ ಬಳಕೆ

(1) ತಪ್ಪಾದ ಸಮಯದಲ್ಲಿ ತಪ್ಪಾದ ವಿಷಯಗಳ ಬಗ್ಗೆ ಹಗಲುಗನಸು ಕಾಣುವುದು.

ಹಗಲುಗನಸು ಕಾಣಬಹುದು, ಅದರಿಂದ ಕೆಲವು ಪ್ರಯೋಜನಗಳಿವೆ ಎಂಬ ಪುರಾವೆ ಇದೆ. ಆದರೆ “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು” ಎಂದು ಪ್ರಸಂಗಿ 3:1 ಹೇಳುತ್ತದೆ. ಕೆಲವೊಮ್ಮೆ ನಾವು ತಪ್ಪಾದ ಸಮಯದಲ್ಲಿ ತಪ್ಪಾದ ವಿಷಯಗಳ ಬಗ್ಗೆ ಹಗಲುಗನಸು ಕಾಣುತ್ತಾ ಇರಬಹುದು. ಉದಾಹರಣೆಗೆ: ಕೂಟಗಳಲ್ಲಿರುವಾಗ ಅಥವಾ ವೈಯಕ್ತಿಕ ಅಧ್ಯಯನ ಮಾಡುತ್ತಿರುವಾಗ ನಮ್ಮ ಮನಸ್ಸು ಎಲ್ಲೋ ಅಲೆದಾಡುತ್ತಿದ್ದರೆ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸಿದಂತೆ ಆಗುತ್ತದಾ? ತಪ್ಪಾದ ವಿಷಯಗಳನ್ನು ಯೋಚಿಸುವುದರ ಬಗ್ಗೆ ಯೇಸು ಸಹ ಎಚ್ಚರಿಕೆ ಕೊಟ್ಟಿದ್ದಾನೆ. ಅನೈತಿಕ ವಿಷಯಗಳ ಬಗ್ಗೆ ಯೋಚಿಸುತ್ತಿರುವುದು ತಪ್ಪು ಎಂದು ಆತನು ಹೇಳಿದ್ದಾನೆ. (ಮತ್ತಾ. 5:28) ನಾವು ಮನಸ್ಸಲ್ಲಿ ಚಿತ್ರಿಸಿಕೊಳ್ಳುವ ಕೆಲವು ವಿಷಯಗಳು ಯೆಹೋವನಿಗೆ ಅಸಹ್ಯವಾಗಿರಬಹುದು. ಅನೈತಿಕ ವಿಷಯಗಳ ಬಗ್ಗೆ ಯೋಚಿಸುತ್ತಾ ಇದ್ದರೆ ಒಂದು ದಿನ ನಾವು ಆ ತಪ್ಪನ್ನು ಮಾಡಿಯೇ ಬಿಡುತ್ತೇವೆ. ನಿಮ್ಮ ಕಲ್ಪನಾಶಕ್ತಿಯನ್ನು ತಪ್ಪಾದ ರೀತಿಯಲ್ಲಿ ಬಳಸಿ ಯೆಹೋವನೊಂದಿಗಿರುವ ನಿಮ್ಮ ಸಂಬಂಧವನ್ನು ಕಳೆದುಕೊಳ್ಳಬೇಡಿ.

(2) ಚೆನ್ನಾಗಿ ದುಡ್ಡುಮಾಡಿಕೊಂಡರೆ ಏನು ತೊಂದರೆ ಆಗಲ್ಲ ಎಂದು ನೆನಸುವುದು.

ನಮ್ಮೆಲ್ಲರಿಗೂ ದುಡ್ಡು ಬೇಕು ನಿಜ. ದುಡ್ಡಿಲ್ಲದೇ ಜೀವನ ಮಾಡಕ್ಕಾಗಲ್ಲ. ಆದರೆ ಅದೇ ಸರ್ವಸ್ವ ಅಂದುಕೊಳ್ಳುವುದು ಮೂರ್ಖತನ. ಅದರಿಂದ ನಿಜ ಸಂತೋಷ, ಭದ್ರತೆ ಸಿಗುವುದಿಲ್ಲ. “ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದೂ ಎತ್ತರವಾದ ಗೋಡೆಯೆಂದೂ ಭಾವಿಸಿಕೊಳ್ಳುತ್ತಾನೆ” ಎಂದು ವಿವೇಕಿ ಸೊಲೊಮೋನ ಹೇಳಿದನು. (ಜ್ಞಾನೋ. 18:11) ಈ ಮಾತು ಸತ್ಯ ಅನ್ನೋದಕ್ಕೆ ಫಿಲಿಪೀನ್ಸ್‌ನಲ್ಲಿ ನಡೆದ ಘಟನೆ ಸಾಕ್ಷಿ. ಸೆಪ್ಟೆಂಬರ್‌ 2009⁠ರಲ್ಲಿ ಆ ದೇಶದ ರಾಜಧಾನಿಯಲ್ಲಿ ಧಾರಾಕಾರವಾಗಿ ಮಳೆ ಸುರಿದು 80 ಪ್ರತಿಶತಕ್ಕಿಂತ ಹೆಚ್ಚು ಜಾಗ ನೀರಲ್ಲಿ ಮುಳುಗಿಹೋಯಿತು. ತುಂಬ ದುಡ್ಡಿದ್ದವರು ಬಚಾವಾದರಾ? ಅಲ್ಲಿನ ಒಬ್ಬ ಶ್ರೀಮಂತ ಹೀಗಂದನು: “ಆ ಮಳೆ ಯಾರನ್ನೂ ಬಿಡಲಿಲ್ಲ. ಅದರಿಂದ ಬಡವರು ಶ್ರೀಮಂತರು ಅಂತಿಲ್ಲದೆ ಎಲ್ಲರಿಗೂ ತುಂಬ ಕಷ್ಟವಾಯಿತು.” ಚೆನ್ನಾಗಿ ದುಡ್ಡು ಮಾಡಿಟ್ಟುಕೊಂಡರೆ ನಮಗೇನು ತೊಂದರೆ ಆಗಲ್ಲ ಎಂದು ಕೆಲವರು ಅಂದುಕೊಳ್ಳಬಹುದು. ಆದರೆ ಅದು ಸತ್ಯ ಅಲ್ಲವೇ ಅಲ್ಲ.

(3) ಯಾವತ್ತೂ ನಡೆಯದಿರುವ ವಿಷಯಗಳ ಬಗ್ಗೆ ಅನಾವಶ್ಯಕವಾಗಿ ಚಿಂತಿಸುವುದು.

ಅತಿಯಾಗಿ ‘ಚಿಂತೆಮಾಡುವ’ ಆವಶ್ಯಕತೆ ಇಲ್ಲ ಎಂದು ಯೇಸು ಹೇಳಿದನು. (ಮತ್ತಾ. 6:34) ತುಂಬ ಚಿಂತೆಮಾಡುವ ವ್ಯಕ್ತಿ 24 ಗಂಟೆ ಯೋಚಿಸುತ್ತಾ ಇರುತ್ತಾನೆ. ಆದರೆ ಇನ್ನೂ ನಡೆದಿರದ, ಯಾವತ್ತೂ ನಡೆಯದ ವಿಷಯಗಳ ಬಗ್ಗೆ ಯೋಚಿಸುತ್ತಾ ಇದ್ದರೆ ಜೀವಾನೇ ಹಿಂಡಿ ಹಿಪ್ಪೆಮಾಡಿದಂತೆ ಆಗಬಹುದು. ಈ ರೀತಿಯ ಅನಾವಶ್ಯಕ ಚಿಂತೆಯಿಂದ ನಮಗೆ ನಿರುತ್ತೇಜನ ಆಗಬಹುದು, ಖಿನ್ನತೆ ಕಾಯಿಲೆನೂ ಬರಬಹುದು. (ಜ್ಞಾನೋ. 12:25) ಚಿಂತೆ ಚಿತೆ ಸುಡುತ್ತೆ ಅನ್ನುವುದನ್ನು ಮನಸ್ಸಲ್ಲಿಟ್ಟು ನಾಳೆಯ ಬಗ್ಗೆ ತುಂಬ ಚಿಂತೆ ಮಾಡದೇ ಇವತ್ತು ಏನು ಬರುತ್ತದೋ ಅದನ್ನು ಧೈರ್ಯದಿಂದ ಎದುರಿಸೋಣ. ಯೇಸು ಸಹ ಇದನ್ನೇ ಮಾಡಿ ಅಂದನು.

ಕಲ್ಪನಾಶಕ್ತಿಯ ಸರಿಯಾದ ಬಳಕೆ

(1) ಅಪಾಯವನ್ನು ಕಂಡು ಅಡಗಿಕೊಳ್ಳಲು ಬಳಸಿ.

ಮುಂದಾಲೋಚನೆ ಮಾಡುವುದು ಬುದ್ಧಿವಂತರ ಲಕ್ಷಣ ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 22:3) ಏನಾದರೂ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಅದರ ಸಾಧಕ-ಬಾಧಕಗಳ ಬಗ್ಗೆ ಯೋಚಿಸಬೇಕು. ನಿಮಗೆ ಒಬ್ಬರು ಪಾರ್ಟಿಗೆ ಕರೆದಿದ್ದಾರೆ ಎಂದು ನೆನಸಿ. ಪಾರ್ಟಿಗೆ ಹೋಗಬೇಕಾ ಬೇಡವಾ ಎಂದು ಹೇಗೆ ನಿರ್ಧರಿಸುತ್ತೀರಿ? ಅದಕ್ಕೆ ಯಾರೆಲ್ಲ ಬರುತ್ತಾರೆ, ಎಲ್ಲಿ, ಯಾವಾಗ ಪಾರ್ಟಿ ನಡೆಯುತ್ತದೆ ಎಂದು ಮೊದಲು ತಿಳಿದುಕೊಳ್ಳಿ. ಆಮೇಲೆ, ಪಾರ್ಟಿಯಲ್ಲಿ ಏನೆಲ್ಲ ನಡೆಯಬಹುದು? ಬೈಬಲ್‌ ಮೂಲತತ್ವಗಳಿಗೆ ವಿರುದ್ಧವಾದ ಯಾವ ವಿಷಯವೂ ಅಲ್ಲಿ ನಡೆಯಲ್ಲ ಅನ್ನೋ ಗ್ಯಾರಂಟಿ ಇದೆಯಾ? ಎಂದು ಯೋಚಿಸಿ. ಹೀಗೆ ಮಾಡುವಾಗ ಇಡೀ ಪಾರ್ಟಿ ನಿಮ್ಮ ಕಣ್ಮುಂದೆ ಹಾದುಹೋದಂತೆ ಇರುತ್ತದೆ. ಈ ರೀತಿ ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸಿದರೆ ತಪ್ಪಿಗೆ ನಡೆಸುವ ಸನ್ನಿವೇಶಗಳಿಂದ ದೂರವಿರಬಹುದು.

(2) ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂದು ಮೊದಲೇ ಯೋಚಿಸಿ.

“ಒಂದು ಸಮಸ್ಯೆಯನ್ನು ಎದುರಿಸಿ ಅದನ್ನು ನಿಭಾಯಿಸಲು ಬೇಕಾದ ಸಾಮರ್ಥ್ಯವನ್ನು” ಕಲ್ಪನಾಶಕ್ತಿ ಕೊಡುತ್ತದೆ ಎಂದು ಮೊದಲೇ ತಿಳಿಸಿದ ಆ ಶಬ್ದಕೋಶ ಹೇಳುತ್ತದೆ. ಸಭೆಯಲ್ಲಿ ಒಬ್ಬರೊಂದಿಗೆ ನಿಮಗೆ ಮನಸ್ತಾಪ ಆಗಿದೆ ಎಂದು ನೆನಸಿ. ನೀವೇನು ಮಾಡುತ್ತೀರಿ? ಈ ವಿಷಯಗಳ ಕುರಿತು ಯೋಚಿಸುವುದು ಒಳ್ಳೇದು: ಆ ವ್ಯಕ್ತಿಯ ಸ್ವಭಾವ ಎಂಥದ್ದು? ಸಮಸ್ಯೆ ಬಗ್ಗೆ ಅವರ ಹತ್ತಿರ ಯಾವಾಗ ಮಾತಾಡಲಿ? ಹೇಗೆ ಮಾತಾಡಲಿ? ಯಾವ ಸ್ವರದಲ್ಲಿ ಮಾತಾಡಲಿ? ಇಂಥ ವಿಷಯಗಳ ಬಗ್ಗೆ ಮೊದಲೇ ಯೋಚಿಸುವಾಗ ಸಮಸ್ಯೆಯನ್ನು ಒಳ್ಳೇ ರೀತಿಯಲ್ಲಿ ನಿಭಾಯಿಸಲು ಆಗುತ್ತದೆ ಅಷ್ಟುಮಾತ್ರವಲ್ಲ ಅವರ ಮನಸ್ಸನ್ನು ನೋಯಿಸದೆ ಮಾತಾಡಲು ಆಗುತ್ತದೆ. (ಜ್ಞಾನೋ. 15:28) ನಮ್ಮ ಕಲ್ಪನಾಶಕ್ತಿಯನ್ನು ಹೀಗೆ ಬಳಸಿದರೆ ಸಭೆಯಲ್ಲಿ ಸಮಸ್ಯೆ ಇರಲ್ಲ, ಶಾಂತಿ ಇರುತ್ತದೆ.

(3) ನಿಮ್ಮ ವೈಯಕ್ತಿಕ ಬೈಬಲ್‌ ಓದುವಿಕೆ ಮತ್ತು ಅಧ್ಯಯನ ರೂಢಿಗಳನ್ನು ಉತ್ತಮಗೊಳಿಸಲು ಬಳಸಿ.

ಪ್ರತಿ ದಿನ ಬೈಬಲ್‌ ಓದುವುದು ಪ್ರಾಮುಖ್ಯ. ಆದರೆ ಓದಿದರೆ ಮಾತ್ರ ಸಾಕಾಗಲ್ಲ. ‘ಇದರಿಂದ ನಾನೇನು ಕಲಿತೆ, ನಾನೇನು ಬದಲಾವಣೆ ಮಾಡಿಕೊಳ್ಳಬೇಕು’ ಎಂದೂ ಯೋಚಿಸಬೇಕು. ನಾವು ಬೈಬಲನ್ನು ಓದುವಾಗ ಯೆಹೋವನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆತನು ಜನರೊಂದಿಗೆ ಹೀಗೆ ಯಾಕೆ ವ್ಯವಹರಿಸಿದ, ಹಾಗೆ ಯಾಕೆ ಮಾಡಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಇಲ್ಲೇ ನಮ್ಮ ಕಲ್ಪನಾಶಕ್ತಿ ನಮ್ಮ ನೆರವಿಗೆ ಬರುವುದು. ಹೇಗೆ ಅಂತೀರಾ? ಅವರ ನಂಬಿಕೆಯನ್ನು ಅನುಕರಿಸಿ ಪುಸ್ತಕ ಓದ್ತಿದ್ದೀರಿ ಎಂದು ನೆನಸಿ. ಅಲ್ಲಿ ಕೊಡಲಾಗಿರುವ ಒಬ್ಬೊಬ್ಬ ವ್ಯಕ್ತಿಯ ಬಗ್ಗೆ, ಘಟನೆಯ ಬಗ್ಗೆ ಓದುವಾಗ ನಮ್ಮ ಕಲ್ಪನಾಶಕ್ತಿ ನಮ್ಮನ್ನು ಅಲ್ಲಿಗೇ ಕರೆದುಕೊಂಡು ಹೋಗುತ್ತದೆ. ಆಗ ಆ ಘಟನೆ ನಮ್ಮ ಕಣ್ಮುಂದೆ ನಡೆಯುತ್ತಿರುವಂತೆ, ಸುತ್ತಮುತ್ತಲಿನ ಸದ್ದು-ಗದ್ದಲ ಕೇಳಿಸುತ್ತಿರುವಂತೆ, ಪರಿಮಳವನ್ನು ಆನಂದಿಸುತ್ತಿರುವಂತೆ ಅನಿಸುತ್ತದೆ. ಘಟನೆಯಲ್ಲಿ ಬರುವ ವ್ಯಕ್ತಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹ ಸಾಧ್ಯವಾಗುತ್ತದೆ. ಹೀಗೆ ನಮಗೆ ಈಗಾಗಲೇ ಚೆನ್ನಾಗಿ ಗೊತ್ತಿದ್ದ ಬೈಬಲ್‌ ವೃತ್ತಾಂತಗಳಿಂದಲೂ ಎಷ್ಟೋ ವಿಷಯಗಳನ್ನು ಕಲಿಯಲು ಆಗುತ್ತದೆ. ನಾವು ವೈಯಕ್ತಿಕವಾಗಿ ಬೈಬಲನ್ನು ಓದಿ ಅಧ್ಯಯನ ಮಾಡುವಾಗ ನಮ್ಮ ಕಲ್ಪನಾಶಕ್ತಿಯನ್ನು ಈ ರೀತಿ ಬಳಸಿದರೆ ತುಂಬ ಪ್ರಯೋಜನ ಸಿಗುತ್ತದೆ.

(4) ಸಹಾನುಭೂತಿ ಬೆಳೆಸಿಕೊಂಡು ತೋರಿಸಲು ಬಳಸಿ.

ಸಹಾನುಭೂತಿ ಒಂದು ಸುಂದರ ಗುಣ. ಈ ಗುಣ ಇದ್ದರೆ, ಇನ್ನೊಬ್ಬರಿಗೆ ಆಗುವ ನೋವು ನಮಗೇ ಆದಂತೆ ಅನಿಸುತ್ತದೆ. ಯೆಹೋವ ಮತ್ತು ಯೇಸು ಈ ಗುಣವನ್ನು ತೋರಿಸುವುದರಿಂದ ನಾವು ಸಹ ತೋರಿಸಬೇಕು. (ವಿಮೋ. 3:7; ಕೀರ್ತ. 72:13) ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು ಹೇಗೆ? ಒಂದು ಪ್ರಮುಖ ವಿಧ, ನಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸುವ ಮೂಲಕ. ನಮ್ಮ ಸಹೋದರ ಅಥವಾ ಸಹೋದರಿ ಅನುಭವಿಸುತ್ತಿರುವ ಒಂದು ಕಾಯಿಲೆಯನ್ನೋ ಕಷ್ಟವನ್ನೋ ನಾವು ಇದುವರೆಗೂ ಅನುಭವಿಸಿರಲಿಕ್ಕಿಲ್ಲ. ಆದರೂ ‘ನಾನು ಈ ಸನ್ನಿವೇಶದಲ್ಲಿದ್ದರೆ ನನಗೆ ಹೇಗನಿಸುತ್ತಿತ್ತು? ನನಗೆ ಏನು ಸಹಾಯ ಬೇಕಾಗುತ್ತಿತ್ತು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ನಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸಿ ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಪ್ರಯತ್ನಿಸುವಾಗ ನಮ್ಮಲ್ಲಿ ಸಹಾನುಭೂತಿ ಬೆಳೆಯುತ್ತದೆ. ನಮ್ಮಲ್ಲಿ ಈ ಗುಣ ಇದ್ದರೆ ತುಂಬ ಪ್ರಯೋಜನ ಸಿಗುತ್ತದೆ. ನಮ್ಮ ಸೇವೆಯನ್ನೂ ಆನಂದಿಸುತ್ತೇವೆ ಮತ್ತು ಇತರರೊಂದಿಗೆ ನಮ್ಮ ಸಂಬಂಧವೂ ಒಳ್ಳೇದಿರುತ್ತದೆ.

(5) ಹೊಸ ಲೋಕದಲ್ಲಿ ಜೀವನ ಹೇಗಿರುವುದೆಂದು ಚಿತ್ರಿಸಿಕೊಳ್ಳಿ.

ದೇವರು ತರಲಿರುವ ಹೊಸ ಲೋಕದಲ್ಲಿ ಜೀವನ ಹೇಗಿರುತ್ತದೆಂದು ಚಿತ್ರಿಸಿಕೊಳ್ಳಲು ಬೈಬಲ್‌ ನಮಗೆ ಸಹಾಯಮಾಡುತ್ತದೆ. (ಯೆಶಾ. 35:5-7; 65:21-25; ಪ್ರಕ. 21:3, 4) ನಮ್ಮ ಪ್ರಕಾಶನಗಳು ಈ ವಚನಗಳಿಗೆ ಜೀವ ತುಂಬಿ ಚಿತ್ರಗಳ ರೂಪದಲ್ಲಿ ನಮ್ಮ ಕಣ್ಮುಂದೆ ತರುತ್ತವೆ. ಚಿತ್ರಗಳು ನಮ್ಮ ಕಲ್ಪನಾಶಕ್ತಿಯನ್ನು ಬಡಿದೆಬ್ಬಿಸಿ ನಾವು ಈಗಾಗಲೇ ಹೊಸ ಲೋಕದಲ್ಲಿದ್ದೇವೆ ಎಂದು ಅನಿಸುವಂತೆ ಮಾಡುತ್ತವೆ. ಕಲ್ಪನಾಶಕ್ತಿಗೆ ಎಷ್ಟು ಶಕ್ತಿ ಇದೆ ಎಂದು ಅದನ್ನು ನಮಗೆ ಕೊಟ್ಟಿರುವ ಯೆಹೋವನಿಗೆ ಗೊತ್ತು. ನಾವು ಈ ಸಾಮರ್ಥ್ಯವನ್ನು ಬಳಸಿ ಹೊಸ ಲೋಕದ ಆಶೀರ್ವಾದಗಳ ಬಗ್ಗೆ ಯೋಚಿಸುವಾಗ ನಮ್ಮ ನಂಬಿಕೆ ಹೆಚ್ಚಾಗುತ್ತದೆ, ಈಗ ಕಷ್ಟಗಳನ್ನು ಅನುಭವಿಸುತ್ತಿದ್ದರೂ ನಂಬಿಗಸ್ತರಾಗಿ ಉಳಿಯಲು ಶಕ್ತಿ ಸಿಗುತ್ತದೆ.

ಯೆಹೋವನು ತುಂಬ ಪ್ರೀತಿಯಿಂದ ನಮಗೆ ಈ ಕಲ್ಪನಾಶಕ್ತಿ ಎಂಬ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ನಾವು ಆತನ ಸೇವೆಯನ್ನು ಒಳ್ಳೇ ರೀತಿಯಲ್ಲಿ ಮಾಡಲು ಈ ಸಾಮರ್ಥ್ಯ ನಮಗೆ ಸಹಾಯಮಾಡುತ್ತದೆ. ಈ ಕಲ್ಪನಾಶಕ್ತಿಯನ್ನು ಯಾವಾಗಲೂ ಸರಿಯಾಗಿ ಬಳಸುವ ಮೂಲಕ ಈ ಅದ್ಭುತ ಉಡುಗೊರೆಯನ್ನು ಕೊಟ್ಟ ಯೆಹೋವನ ಮನಸ್ಸಿಗೆ ಸಂತೋಷ ತರೋಣ.