ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ದೇವರಿಂದ ಅಭಿಷಿಕ್ತ ಕ್ರೈಸ್ತರು ಪಡೆಯುವ “ಗುರುತು” ಮತ್ತು “ಮುದ್ರೆ” ಯಾವುದು?—2 ಕೊರಿಂ. 1:21, 22.

ಹಿಂದಿನ ಕಾಲದಲ್ಲಿ ಒಂದು ಪತ್ರವನ್ನು ಪ್ರಮಾಣೀಕರಿಸಲು ಮುದ್ರೆಯುಂಗುರವನ್ನು ಜೇಡಿಮಣ್ಣು ಅಥವಾ ಮೇಣದ ಮೇಲೆ ಒತ್ತಲಾಗುತ್ತಿತ್ತು

ಗುರುತು: ಒಂದು ಪರಾಮರ್ಶ ಕೃತಿಯ ಪ್ರಕಾರ 2 ಕೊರಿಂಥ 1:22⁠ರಲ್ಲಿ ಗ್ರೀಕ್‌ ಭಾಷೆಯಿಂದ ಅನುವಾದವಾಗಿರುವ “ಗುರುತು” ಎಂಬ ಪದಕ್ಕೆ “ಕಾನೂನು ಹಾಗೂ ವಾಣಿಜ್ಯಕ್ಕೆ” ಸಂಬಂಧಪಟ್ಟ ಅರ್ಥ ಇದೆ. ಒಂದು ವಸ್ತುವನ್ನು ಖರೀದಿಸುವಾಗ ಅದಕ್ಕೆ ಕೊಡಲಾಗುವ ಮೊದಲನೇ ಕಂತು, ಮುಂಗಡ ಹಣವನ್ನು ಇದು ಸೂಚಿಸುತ್ತದೆ. ಹೀಗೆ ಕೊಂಡುಕೊಳ್ಳಲಾಗುವ ವಸ್ತುವಿನ ಮೇಲೆ ಒಬ್ಬನಿಗೆ ನ್ಯಾಯಬದ್ಧ ಹಕ್ಕು ಬರುತ್ತದೆ ಮತ್ತು ಇದು ಒಂದು ಒಪ್ಪಂದವನ್ನು ಊರ್ಜಿತಗೊಳಿಸುತ್ತದೆ. ಒಬ್ಬ ಕ್ರೈಸ್ತನು ಪವಿತ್ರಾತ್ಮದಿಂದ ಅಭಿಷೇಕ ಹೊಂದುವಾಗ ಈ ಗುರುತು ಅವನಿಗೆ ಸಿಗುತ್ತದೆ. ಇದು ಮುಂದೆ ಸಿಗಲಿರುವ ಬಹುಮಾನಕ್ಕೆ ಮೊದಲನೇ ಕಂತು ಕೊಟ್ಟಂತೆ. ಅವನು ಸ್ವರ್ಗದಲ್ಲಿ ಅಮರತ್ವವನ್ನು ಪಡೆಯುವಾಗ ಪೂರ್ಣ ಪಾವತಿ ಆದಂತೆ. ಅಂದರೆ 2 ಕೊರಿಂಥ 5:1-5⁠ರಲ್ಲಿ ಹೇಳುವ ಪ್ರಕಾರ ಒಬ್ಬ ಅಭಿಷಿಕ್ತನಿಗೆ ಸ್ವರ್ಗದಲ್ಲಿ ಅಳಿವಿಲ್ಲದ ಜೀವನ ಸಿಗುತ್ತದೆ.—1 ಕೊರಿಂ. 15:48-54.

ಆಧುನಿಕ ಗ್ರೀಕ್‌ನಲ್ಲಿ ಈ ಪದಕ್ಕೆ ಸಂಬಂಧಪಟ್ಟ ಇನ್ನೊಂದು ಪದವನ್ನು ನಿಶ್ಚಿತಾರ್ಥದ ಸಮಯದಲ್ಲಿ ಹಾಕಲಾಗುವ ಉಂಗುರಕ್ಕೆ ಬಳಸಲಾಗುತ್ತದೆ. ಮುಂದೆ ಕ್ರಿಸ್ತನ ಹೆಂಡತಿ ಆಗಲಿರುವವರ ಕುರಿತು ಮಾತಾಡುತ್ತಾ ಒಂದು ನಿಶ್ಚಿತಾರ್ಥದ ಬಗ್ಗೆ ಹೇಳುವುದು ಸೂಕ್ತವಾಗಿದೆ.—2 ಕೊರಿಂ. 11:2; ಪ್ರಕ. 21:2, 9.

ಮುದ್ರೆ: ಹಿಂದಿನ ಕಾಲದಲ್ಲಿ ಮುದ್ರೆ ಒಡೆತನ, ಒಪ್ಪಂದವನ್ನು ದೃಢೀಕರಿಸುತ್ತಿತ್ತು ಮತ್ತು ಒಂದು ಪತ್ರವನ್ನು ಪ್ರಮಾಣೀಕರಿಸಲು ಸಹಿಯಾಗಿ ಬಳಸಲಾಗುತ್ತಿತ್ತು. ಅಭಿಷಿಕ್ತರ ವಿಷಯದಲ್ಲಿ ನೋಡುವುದಾದರೆ ದೇವರ ಸ್ವತ್ತಾಗಿ ಪವಿತ್ರಾತ್ಮದ ಮೂಲಕ ಅವರಿಗೆ ಸಾಂಕೇತಿಕವಾಗಿ “ಮುದ್ರೆ” ಹಾಕಲಾಗುತ್ತದೆ. (ಎಫೆ. 1:13, 14) ಒಬ್ಬ ಅಭಿಷಿಕ್ತನು ಸಾಯುವ ವರೆಗೆ ಅಥವಾ ಮಹಾ ಸಂಕಟ ಶುರುವಾಗುವ ಸ್ವಲ್ಪ ಸಮಯಕ್ಕೆ ಮುಂಚಿನ ವರೆಗೆ ನಂಬಿಗಸ್ತನಾಗಿದ್ದರೆ ಮಾತ್ರ ಈ ಮುದ್ರೆ ಕಾಯಂ ಆಗುತ್ತದೆ.—ಎಫೆ. 4:30; ಪ್ರಕ. 7:2-4.