ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ

ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ

“ದೇವರದನ್ನು ದೇವರಿಗೆ ಕೊಡಿರಿ.”—ಮತ್ತಾ. 22:21.

ಗೀತೆಗಳು: 33, 137

1. ನಾವು ದೇವರಿಗೂ ಮಾನವ ಸರ್ಕಾರಗಳಿಗೂ ವಿಧೇಯರಾಗಿರಲು ಹೇಗೆ ಸಾಧ್ಯ?

ನಾವು ಮಾನವ ಸರ್ಕಾರಗಳಿಗೆ ವಿಧೇಯರಾಗಬೇಕು ಎಂದು ಬೈಬಲ್‌ ಕಲಿಸುತ್ತದೆ. ಆದರೆ ಯಾವಾಗಲೂ ದೇವರಿಗೆ ವಿಧೇಯರಾಗಬೇಕು ಎಂದೂ ಅದು ಹೇಳುತ್ತದೆ. (ಅ. ಕಾ. 5:29; ತೀತ 3:1) ಇದು ಹೇಗೆ ಸಾಧ್ಯ? ಯೇಸು ಕೊಟ್ಟ ಒಂದು ತತ್ವವು ನಾವು ಯಾವ ಸನ್ನಿವೇಶದಲ್ಲಿ ಯಾರಿಗೆ ವಿಧೇಯರಾಗಬೇಕು ಎಂದು ತಿಳಿಯಲು ಸಹಾಯಮಾಡುತ್ತದೆ. “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ” ಎಂದು ಆತನು ಹೇಳಿದನು. [1] (ಮತ್ತಾ. 22:21) ನಾವು “ಕೈಸರನದನ್ನು ಕೈಸರನಿಗೆ” ಕೊಡುವುದು ಹೇಗೆ? ಸರ್ಕಾರದ ನಿಯಮಗಳನ್ನು ಪಾಲಿಸುವ, ಸರ್ಕಾರಿ ಅಧಿಕಾರಿಗಳಿಗೆ ಗೌರವ ಕೊಡುವ, ತೆರಿಗೆ ಕಟ್ಟುವ ಮೂಲಕ. (ರೋಮ. 13:7) ಆದರೆ ಮಾಡಬಾರದೆಂದು ದೇವರು ಹೇಳಿರುವ ವಿಷಯಗಳನ್ನು ಮಾಡುವಂತೆ ಸರ್ಕಾರವು ಹೇಳುವಲ್ಲಿ ನಾವದನ್ನು ಗೌರವಪೂರ್ವಕವಾಗಿ ನಿರಾಕರಿಸುತ್ತೇವೆ.

2. ಲೋಕದ ರಾಜಕೀಯ ವಿಷಯಗಳಲ್ಲಿ ನಾವು ಯಾವುದೇ ಪಕ್ಷವಹಿಸುವುದಿಲ್ಲ ಎಂದು ಹೇಗೆ ತೋರಿಸುತ್ತೇವೆ?

2 “ದೇವರದನ್ನು ದೇವರಿಗೆ” ಕೊಡುವುದು ಹೇಗೆ? ಈ ಲೋಕದ ರಾಜಕೀಯ ವಿಷಯಗಳಲ್ಲಿ ಯಾವುದೇ ಪಕ್ಷವಹಿಸದಿರುವ ಮೂಲಕ. ಇಂಥ ವಿಷಯಗಳಲ್ಲಿ ನಾವು ತಟಸ್ಥರು. (ಯೆಶಾ. 2:4) ಮಾನವ ಸರ್ಕಾರಗಳು ಆಳ್ವಿಕೆ ನಡೆಸುವಂತೆ ಯೆಹೋವನು ಅನುಮತಿಸಿದ್ದಾನೆ. ಹಾಗಾಗಿ ನಾವು ಸರ್ಕಾರಗಳನ್ನು ವಿರೋಧಿಸುವುದಿಲ್ಲ. ಅದೇ ಸಮಯದಲ್ಲಿ ಯಾವುದೇ ದೇಶಾಭಿಮಾನ, ದೇಶಭಕ್ತಿಯ ಚಟುವಟಿಕೆಗಳಲ್ಲಿ ಒಳಗೂಡುವುದೂ ಇಲ್ಲ. (ರೋಮ. 13:1, 2) ಒಂದು ಸರ್ಕಾರವನ್ನು ಬೀಳಿಸಿ ಇನ್ನೊಂದನ್ನು ತರಲು ಅಥವಾ ರಾಜಕೀಯ ಧುರೀಣರನ್ನು ಪ್ರಭಾವಿಸಲು ನಾವು ಪ್ರಯತ್ನಿಸುವುದಿಲ್ಲ. ಅಷ್ಟೇ ಅಲ್ಲ, ರಾಜಕೀಯ ಚುನಾವಣೆಗಳಲ್ಲಿ ಮತ ಚಲಾಯಿಸುವುದಿಲ್ಲ. ರಾಜಕಾರಣಿಗಳಾಗುವುದೂ ಇಲ್ಲ.

3. ನಾವು ಯಾಕೆ ತಟಸ್ಥರಾಗಿ ಉಳಿಯಬೇಕು?

3 ನಾವೇಕೆ ತಟಸ್ಥರಾಗಿ ಇರಬೇಕೆಂದು ದೇವರು ಹೇಳಿರುವುದಕ್ಕೆ ಅನೇಕ ಕಾರಣಗಳಿವೆ. ಒಂದು ಕಾರಣ, ಯೇಸುವನ್ನು ನಾವು ಅನುಕರಿಸುವುದೇ. ಯೇಸು ‘ಲೋಕದ ಭಾಗವಾಗಿರಲಿಲ್ಲ.’ ರಾಜಕೀಯದಲ್ಲಾಗಲಿ ಯುದ್ಧಗಳಲ್ಲಾಗಲಿ ಆತನು ಭಾಗವಹಿಸಲಿಲ್ಲ. (ಯೋಹಾ. 6:15; 17:16) ಇನ್ನೊಂದು ಕಾರಣ, ನಾವು ದೇವರ ಸರ್ಕಾರವನ್ನು ಬೆಂಬಲಿಸುತ್ತೇವೆ. ಮಾನವ ಸರ್ಕಾರಗಳನ್ನಲ್ಲ. ಹಾಗಾಗಿಯೇ ಮಾನವರ ಎಲ್ಲ ಕಷ್ಟಗಳನ್ನು ದೇವರ ರಾಜ್ಯ ಮಾತ್ರ ತೆಗೆದುಹಾಕಬಲ್ಲದೆಂದು ಶುದ್ಧ ಮನಸ್ಸಾಕ್ಷಿಯಿಂದ ಸಾರುತ್ತೇವೆ. ಅಷ್ಟಲ್ಲದೆ, ತಟಸ್ಥರಾಗಿರುವ ಕಾರಣ ನಾವು ಭೂಮಿಯ ಎಲ್ಲೆಡೆ ಇದ್ದರೂ ನಮ್ಮ ಮಧ್ಯೆ ಒಗ್ಗಟ್ಟು ಇದೆ. ಆದರೆ ಸುಳ್ಳು ಧರ್ಮಗಳು ರಾಜಕೀಯದಲ್ಲಿ ಕೈಹಾಕುತ್ತಿರುವುದರಿಂದ ಆ ಧರ್ಮಗಳಲ್ಲಿ ಒಗ್ಗಟ್ಟಿಲ್ಲ.—1 ಪೇತ್ರ 2:17.

4. (ಎ) ತಟಸ್ಥರಾಗಿರುವುದು ಇನ್ನೂ ಹೆಚ್ಚು ಕಷ್ಟವಾಗಲಿದೆ ಎಂದು ನಮಗೆ ಹೇಗೆ ಗೊತ್ತು? (ಬಿ) ತಟಸ್ಥರಾಗಿ ಉಳಿಯಲು ನಾವು ಈಗಲೇ ಯಾಕೆ ತಯಾರಾಗಬೇಕು?

4 ನಾವಿರುವ ಸ್ಥಳದಲ್ಲಿ ರಾಜಕೀಯ ಪರಿಸ್ಥಿತಿ ಶಾಂತವಾಗಿರಬಹುದು. ಯಾವುದೇ ಪಕ್ಷವಹಿಸುವಂತೆ ಯಾರೂ ನಮ್ಮನ್ನು ಒತ್ತಾಯಿಸಲಿಕ್ಕಿಲ್ಲ. ಆದರೆ ನೆನಪಿಡಿ, ಸೈತಾನನ ಲೋಕದ ಅಂತ್ಯ ಹತ್ತಿರವಾಗುತ್ತಿರುವಾಗ ನಮಗೆ ತಟಸ್ಥರಾಗಿ ಉಳಿಯುವುದು ಇನ್ನೂ ಕಷ್ಟವಾಗಲಿದೆ. ಇವತ್ತೇ ಜನರು “ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ” “ಹಟಮಾರಿಗಳೂ” ಆಗಿರುವಾಗ ಮುಂದೆ ಇನ್ನೂ ಜಾಸ್ತಿ ಒಡಕು ಉಂಟಾಗುವುದರಲ್ಲಿ ಅನುಮಾನವಿಲ್ಲ. (2 ತಿಮೊ. 3:3, 4) ಕೆಲವು ಪ್ರದೇಶಗಳಲ್ಲಿ ರಾಜಕೀಯ ಪರಿಸ್ಥಿತಿ ಥಟ್ಟನೆ ತಲೆಕೆಳಗಾಗಿರುವ ಕಾರಣ ಅಲ್ಲಿನ ಸಹೋದರರು ತುಂಬ ತೊಂದರೆಗೆ ಒಳಗಾಗಿದ್ದಾರೆ. ಹಾಗಾಗಿ ಕಷ್ಟದ ಸನ್ನಿವೇಶಗಳಲ್ಲೂ ತಟಸ್ಥರಾಗಿ ಉಳಿಯಲು ಈಗಲೇ ನಮ್ಮನ್ನು ನಾವು ತಯಾರಿಗೊಳಿಸಬೇಕು. ಇದಕ್ಕೆ ಸಹಾಯಮಾಡುವ ನಾಲ್ಕು ವಿಷಯಗಳನ್ನು ನಾವೀಗ ನೋಡೋಣ.

ಯೆಹೋವನ ನೋಟ ನಿಮಗಿರಲಿ

5. ಮಾನವ ಸರ್ಕಾರಗಳ ಬಗ್ಗೆ ಯೆಹೋವನ ನೋಟವೇನು?

5 ತಟಸ್ಥರಾಗಿ ಉಳಿಯಲು ತಯಾರಾಗುವ ಮೊದಲನೇ ವಿಧ ಯಾವುದೆಂದರೆ ಮಾನವ ಸರ್ಕಾರಗಳ ಬಗ್ಗೆ ಯೆಹೋವನಿಗಿರುವ ನೋಟ ನಮಗಿರುವುದೇ. ಯೆಹೋವನು ಮಾನವರನ್ನು ಸೃಷ್ಟಿಸಿದಾಗ ಅವರಿಗೆ ಇತರ ಮಾನವರ ಮೇಲೆ ಆಳ್ವಿಕೆ ನಡೆಸುವ ಹಕ್ಕನ್ನು ಕೊಡಲಿಲ್ಲ. (ಯೆರೆ. 10:23) ಆತನ ದೃಷ್ಟಿಯಲ್ಲಿ ಮನುಷ್ಯರೆಲ್ಲರು ಒಂದೇ ಕುಟುಂಬವಾಗಿದ್ದಾರೆ. ಆದರೆ ಮಾನವ ಸರ್ಕಾರಗಳು ದೇಶಾಭಿಮಾನವನ್ನು ಮೂಡಿಸಿ ಆ ಕುಟುಂಬದಲ್ಲಿ ಒಡಕನ್ನು ಉಂಟುಮಾಡಿವೆ. ಕೆಲವು ಸರ್ಕಾರಗಳು ಒಳ್ಳೇದೆಂದು ತೋರಿದರೂ ಅವುಗಳಿಗೆ ಸಹ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಆಗುವುದಿಲ್ಲ. ಅಲ್ಲದೆ, ಮಾನವ ಸರ್ಕಾರಗಳೆಲ್ಲವು ತಮ್ಮನ್ನು ದೇವರ ಸರ್ಕಾರದ ಶತ್ರುಗಳಾಗಿ ಮಾಡಿಕೊಂಡಿವೆ. 1914⁠ರಿಂದ ಆಳುತ್ತಿರುವ ದೇವರ ಸರ್ಕಾರವು ಬೇಗನೆ ಎಲ್ಲ ಮಾನವ ಸರ್ಕಾರಗಳನ್ನು ನಾಶಮಾಡಲಿದೆ.ಕೀರ್ತನೆ 2:2, 7-9 ಓದಿ.

6. ಸರ್ಕಾರಿ ಅಧಿಕಾರಿಗಳನ್ನು ನಾವು ಹೇಗೆ ಕಾಣಬೇಕು?

6 ಆದರೂ ಇಂದು ಮಾನವ ಸರ್ಕಾರಗಳು ಆಳುವಂತೆ ದೇವರು ಅನುಮತಿಸಿರುವುದು ಯಾಕೆಂದರೆ ಅವು ತಕ್ಕಮಟ್ಟಿಗೆ ಶಾಂತಿ, ಶಿಸ್ತು, ಕ್ರಮ ಕಾಪಾಡುತ್ತವೆ. ಇದರಿಂದ ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ನಮಗೆ ಸಾಧ್ಯವಾಗುತ್ತದೆ. (ರೋಮ. 13:3, 4) ದೇವರು ನಮಗೆ ಸರ್ಕಾರಿ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವಂತೆ ಸಹ ಹೇಳಿದ್ದಾನೆ, ಏಕೆಂದರೆ ನಾವು ಆತನನ್ನು ಶಾಂತಿಯಿಂದ ಆರಾಧಿಸಲಿಕ್ಕಾಗಿಯೇ. (1 ತಿಮೊ. 2:1, 2) ನಮ್ಮನ್ನು ಯಾರಾದರೂ ದುರುಪಚರಿಸಿದಾಗ ಸರ್ಕಾರಿ ಅಧಿಕಾರಿಗಳ ಹತ್ತಿರ ಸಹಾಯ ಕೋರಬಹುದು. ಪೌಲನು ಅದನ್ನೇ ಮಾಡಿದನಲ್ಲಾ. (ಅ. ಕಾ. 25:11) ಸೈತಾನನು ಮಾನವ ಸರ್ಕಾರಗಳನ್ನು ನಿಯಂತ್ರಿಸುತ್ತಾನೆ ಎಂದು ಬೈಬಲ್‌ ಹೇಳುತ್ತದಾದರೂ ಅವನು ಒಬ್ಬೊಬ್ಬ ಸರ್ಕಾರಿ ಅಧಿಕಾರಿಯನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದ್ದಾನೆಂದು ಹೇಳುವುದಿಲ್ಲ. (ಲೂಕ 4:5, 6) ಆದುದರಿಂದ ಒಬ್ಬ ನಿರ್ದಿಷ್ಟ ಅಧಿಕಾರಿಯು ಸೈತಾನನ ಅಂಕೆಯಲ್ಲಿದ್ದಾನೆ ಎಂಬ ಕಲ್ಪನೆ ಇತರರಲ್ಲಿ ಬರುವಂತೆ ನಾವು ಮಾಡಬಾರದು. ಯಾರನ್ನೂ ಹೀನೈಸಿ ಮಾತನಾಡಬಾರದು ಎಂದು ಬೈಬಲ್‌ ಕಲಿಸುತ್ತದೆ.—ತೀತ 3:1, 2.

7. ಎಂಥ ಭಾವನೆ ನಮ್ಮಲ್ಲಿ ಇರಬಾರದು?

7 ನಾವು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಬೆಂಬಲ ಕೊಡದೆ ಇರುವ ಮೂಲಕ ದೇವರಿಗೆ ವಿಧೇಯರಾಗುತ್ತೇವೆ. ಅವರ ಅಭಿಪ್ರಾಯ, ಯೋಜನೆಗಳಿಂದ ನಮಗೆ ಪ್ರಯೋಜನವಾದರೂ ಸರಿ. ಕೆಲವೊಮ್ಮೆ ಇದನ್ನು ಮಾಡುವುದು ಸುಲಭವಲ್ಲ. ಉದಾಹರಣೆಗೆ ನೆನಸಿ, ಒಂದು ಸರ್ಕಾರ ಜನರ ಮೇಲೆ ದಬ್ಬಾಳಿಕೆ ಮಾಡಿ ತುಂಬ ಕಷ್ಟ ಕೊಟ್ಟಿದೆ. ಯೆಹೋವನ ಸಾಕ್ಷಿಗಳಿಗೆ ಕೂಡ ಕಷ್ಟ ಕೊಟ್ಟಿದೆ. ಜನರು ಆ ಸರ್ಕಾರದ ವಿರುದ್ಧ ದಂಗೆಯೇಳುತ್ತಿದ್ದಾರೆ. ನೀವು ಅವರ ಜೊತೆ ಸೇರಲಿಕ್ಕಿಲ್ಲ ನಿಜ. ಆದರೆ ಅವರು ಮಾಡುತ್ತಿರುವುದು ಸರಿ, ಅವರು ಹೇಗಾದರೂ ಗೆಲ್ಲಬೇಕು ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತೀರಾ? (ಎಫೆ. 2:2) ತಟಸ್ಥರಾಗಿ ಉಳಿಯಬೇಕಾದರೆ, ‘ಈ ಪಕ್ಷಕ್ಕಿಂತ ಆ ಪಕ್ಷ ಒಳ್ಳೇದು’ ಎಂಬ ಭಾವನೆ ಸಹ ನಮ್ಮಲ್ಲಿ ಇರಬಾರದು. ನಮ್ಮ ಮಾತು, ಕ್ರಿಯೆ ಸಹ ನಾವು ತಟಸ್ಥರು ಎಂದು ತೋರಿಸಬೇಕು.

‘ಜಾಗರೂಕರೂ ನಿಷ್ಕಪಟಿಗಳೂ’ ಆಗಿರ್ರಿ

8. ತಟಸ್ಥರಾಗಿರಲು ಕಷ್ಟವಾಗುವಾಗ ನಾವು ‘ಜಾಗರೂಕರೂ’ ಅದೇ ಸಮಯದಲ್ಲಿ ‘ನಿಷ್ಕಪಟಿಗಳೂ’ ಆಗಿರುವುದು ಹೇಗೆ?

8 ತಟಸ್ಥರಾಗಿ ಉಳಿಯುವ ಎರಡನೇ ವಿಧ, “ಹಾವುಗಳಂತೆ ಜಾಗರೂಕರೂ, ಆದರೆ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರುವ ಮೂಲಕವೇ. (ಮತ್ತಾಯ 10:16, 17 ಓದಿ.) ನಾವು ‘ಜಾಗರೂಕರು’ ಆಗಿರುವುದು ಹೇಗೆ? ಮುಂದೆ ಬರುವ ಕಷ್ಟಗಳ ಬಗ್ಗೆ ಮೊದಲೇ ಯೋಚಿಸುವ ಮೂಲಕ. ‘ನಿಷ್ಕಪಟಿಗಳು’ ಆಗಿರುವುದು ಹೇಗೆ? ಆ ಕಷ್ಟದ ಸನ್ನಿವೇಶಗಳಲ್ಲಿ ತಟಸ್ಥರಾಗಿ ಉಳಿಯುವ ಮೂಲಕ. ನಾವೀಗ ಕೆಲವು ಸನ್ನಿವೇಶಗಳನ್ನು ಗಮನಿಸೋಣ. ಆ ಸನ್ನಿವೇಶಗಳಲ್ಲಿ ತಟಸ್ಥರಾಗಿರುವುದು ಹೇಗೆಂದು ಕಲಿಯೋಣ.

9. ಇತರರೊಂದಿಗೆ ಮಾತಾಡುತ್ತಿರುವಾಗ ನಾವು ಯಾವುದರ ಬಗ್ಗೆ ಜಾಗ್ರತೆ ವಹಿಸಬೇಕು?

9 ನಮ್ಮ ಮಾತು. ಜನರು ರಾಜಕೀಯ ವಿಷಯಗಳನ್ನು ಮಾತನಾಡಲು ಶುರುಮಾಡುವಾಗ ನಾವು ತುಂಬ ಜಾಗರೂಕರಾಗಿರಬೇಕು. ಉದಾಹರಣೆಗೆ, ಈ ಸನ್ನಿವೇಶದ ಬಗ್ಗೆ ಯೋಚಿಸಿ. ದೇವರ ರಾಜ್ಯದ ಕುರಿತು ಇತರರಿಗೆ ತಿಳಿಸುತ್ತಿರುವಾಗ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಅಥವಾ ನಾಯಕನ ಯೋಜನೆ, ಅಭಿಪ್ರಾಯಗಳನ್ನು ನೀವು ಮೆಚ್ಚುತ್ತೀರಿ ಎಂದಾಗಲಿ ಮೆಚ್ಚುವುದಿಲ್ಲ ಎಂದಾಗಲಿ ಹೇಳಬೇಡಿ. ಕಷ್ಟಗಳನ್ನು ಬಗೆಹರಿಸಲು ಮಾನವ ಸರ್ಕಾರಗಳು ಮಾಡಿರುವ ಯೋಜನೆಗಳ ಬಗ್ಗೆ ಮಾತನಾಡದೆ ದೇವರ ರಾಜ್ಯ ಆ ಕಷ್ಟಗಳನ್ನು ಹೇಗೆ ಶಾಶ್ವತವಾಗಿ ತೆಗೆದುಹಾಕಲಿದೆ ಎಂದು ಬೈಬಲಿನಿಂದ ತೋರಿಸಿ. ಒಂದುವೇಳೆ ಗರ್ಭಪಾತ, ಸಮಲಿಂಗ ವಿವಾಹ ಮುಂತಾದ ವಿಷಯಗಳ ಬಗ್ಗೆ ಜನರು ವಾದಕ್ಕಿಳಿದರೆ ಅದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ, ನೀವದನ್ನು ಹೇಗೆ ಅನ್ವಯಿಸಲು ಪ್ರಯತ್ನಿಸುತ್ತೀರಿ ಎಂದು ತಿಳಿಸಿ. ಯಾರಾದರೂ ‘ಆ ನಿಯಮ ತೆಗೆದುಹಾಕಿ ಬೇರೆ ನಿಯಮ ತರಬೇಕು’ ಎಂದು ಹೇಳಿದರೆ ನಾವಾಗ ‘ಹೌದು ಹೌದು ನೀವು ಹೇಳೋದು ಸರಿ’ ಎಂದಾಗಲಿ ‘ಇಲ್ಲ, ಹಾಗಲ್ಲ ಹೀಗೆ’ ಎಂದಾಗಲಿ ಹೇಳಬಾರದು. ನಮ್ಮ ಯೋಚನೆಯನ್ನು ಅವರು ಒಪ್ಪಿಕೊಳ್ಳುವಂತೆ ಸಹ ಒತ್ತಾಯಿಸಬಾರದು.

10. ವಾರ್ತಾಮಾಧ್ಯಮದಲ್ಲಿ ನಾವು ಓದುವ ಅಥವಾ ವೀಕ್ಷಿಸುವ ವಿಷಯಗಳ ಬಗ್ಗೆ ನಾವು ಹೇಗೆ ತಟಸ್ಥರಾಗಿ ಉಳಿಯಬಹುದು?

10 ವಾರ್ತಾಮಾಧ್ಯಮ. ಕೆಲವು ವಾರ್ತಾಮಾಧ್ಯಮಗಳು ನಡೆದ ಘಟನೆಯ ಬಗ್ಗೆ ಬಣ್ಣಹಚ್ಚಿ ಪಕ್ಷವಹಿಸಿ ಮಾತಾಡುತ್ತವೆ. ವಾರ್ತಾಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿರುವ ದೇಶಗಳಲ್ಲಂತೂ ಇದು ಸತ್ಯ. ವಾರ್ತಾ ಸಂಸ್ಥೆಗಳು ಅಥವಾ ವರದಿಗಾರರು ಬೇರೆ ಬೇರೆ ಪಕ್ಷವಹಿಸಿದರೂ ಅವರ ಯೋಚನೆ ನಮ್ಮಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಹೀಗೆ ಕೇಳಿಕೊಳ್ಳಿ: ‘ಈ ವರದಿಗಾರ ಹೇಳೋದು ನನಗ್ಯಾಕೆ ಇಷ್ಟ? ಅವನು ಹೇಳುವ ರಾಜಕೀಯ ವಿಚಾರ ನಾನು ಒಪ್ಪುವುದರಿಂದನಾ?’ ತಟಸ್ಥರಾಗಿರಬೇಕಾದರೆ ಪಕ್ಷವಹಿಸಿ ಮಾತಾಡುವ ವರದಿಗಳನ್ನು ವೀಕ್ಷಿಸಬೇಡಿ, ಓದಬೇಡಿ. ಪಕ್ಷವಹಿಸದ ವರದಿಗಳನ್ನು ಕಂಡುಹಿಡಿಯಿರಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಕೇಳಿಸಿಕೊಳ್ಳುವ ವಿಷಯ ಬೈಬಲಿನ ‘ಸ್ವಸ್ಥಕರವಾದ ಮಾತುಗಳ ನಮೂನೆಗೆ’ ಅನುಸಾರವಾಗಿ ಇದೆಯಾ ಎಂದು ಹೋಲಿಸಿ ನೋಡಿ.—2 ತಿಮೊ. 1:13.

11. ಹಣ ಆಸ್ತಿಪಾಸ್ತಿ ನಮಗೆ ತುಂಬ ಮುಖ್ಯವಾಗಿಬಿಟ್ಟರೆ ತಟಸ್ಥರಾಗಿ ಉಳಿಯುವುದು ಯಾಕೆ ಕಷ್ಟವಾಗಬಹುದು?

11 ಹಣ ಆಸ್ತಿಪಾಸ್ತಿ. ನಮ್ಮಲ್ಲಿರುವ ಹಣ, ಸ್ವತ್ತು ಎಲ್ಲಕ್ಕಿಂತ ಮುಖ್ಯವಾಗಿಬಿಟ್ಟರೆ ತಟಸ್ಥರಾಗಿ ಉಳಿಯಲಿಕ್ಕೆ ತುಂಬ ಕಷ್ಟ. ಮಲಾವಿ ದೇಶದಲ್ಲಾದ ಘಟನೆಯನ್ನು ಗಮನಿಸಿ. 1970⁠ರ ನಂತರ ಅಲ್ಲಿನ ಅನೇಕ ಸಾಕ್ಷಿಗಳು ಒಂದು ರಾಜಕೀಯ ಗುಂಪನ್ನು ಸೇರಲು ನಿರಾಕರಿಸಿದ್ದರಿಂದ ತಮ್ಮೆಲ್ಲ ಸ್ವತ್ತನ್ನು ಕಳೆದುಕೊಂಡರು. ಆದರೆ ಕೆಲವರಿಗೆ ತಮ್ಮ ಆರಾಮದ ಜೀವನವನ್ನು ತ್ಯಜಿಸಲು ಆಗಲಿಲ್ಲ. ರೂತ್‌ ಎಂಬ ಸಹೋದರಿ ಹೀಗೆ ಜ್ಞಾಪಿಸಿಕೊಳ್ಳುತ್ತಾಳೆ: “ನಮ್ಮ ಜೊತೆ ಗಡೀಪಾರಾದವರಲ್ಲಿ ಕೆಲವರು ನಂತರ ರಾಜಿಮಾಡಿಕೊಂಡು ಆ ರಾಜಕೀಯ ಪಕ್ಷ ಸೇರಿದರು ಮತ್ತು ಮನೆಗೆ ಹಿಂತಿರುಗಿದರು. ಯಾಕೆಂದರೆ ಅವರಿಗೆ ನಿರಾಶ್ರಿತರ ಶಿಬಿರದಲ್ಲಿ ಸುಖಸೌಕರ್ಯಗಳಿಲ್ಲದೆ ಜೀವಿಸುವುದು ಕಷ್ಟವಾಯಿತು.” ಆದರೆ ದೇವಜನರಲ್ಲಿ ಹೆಚ್ಚಿನವರು ಹಾಗಿಲ್ಲ. ಅವರು ತಮ್ಮ ಹಣ ಆಸ್ತಿಪಾಸ್ತಿ ಎಲ್ಲವನ್ನು ಕಳೆದುಕೊಂಡರೂ ತಟಸ್ಥರಾಗಿ ಉಳಿಯುತ್ತಾರೆ.—ಇಬ್ರಿ. 10:34.

12, 13. (ಎ) ಮಾನವರೆಲ್ಲರನ್ನು ಯೆಹೋವನು ಹೇಗೆ ಕಾಣುತ್ತಾನೆ? (ಬಿ) ನಮ್ಮ ದೇಶದ ಬಗ್ಗೆ ಅತಿಯಾದ ಹೆಮ್ಮೆ ನಮ್ಮಲ್ಲಿ ಬೆಳೆಯಲು ಶುರುವಾಗಿದೆಯಾ ಎಂದು ತಿಳಿಯುವುದು ಹೇಗೆ?

12 ಹೆಮ್ಮೆ. ಜನರು ತಮ್ಮ ಜಾತಿ, ಕುಲ, ಸಂಸ್ಕೃತಿ, ಊರು ಅಥವಾ ದೇಶದ ಬಗ್ಗೆ ಹೆಮ್ಮೆಪಡುವುದು, ಕೊಚ್ಚಿಕೊಳ್ಳುವುದು ಸಾಮಾನ್ಯ. ಆದರೆ ಒಬ್ಬನು ಇನ್ನೊಬ್ಬನಿಗಿಂತ ಅಥವಾ ಒಂದು ಜನಸಮುದಾಯ ಇನ್ನೊಂದಕ್ಕಿಂತ ಶ್ರೇಷ್ಠ ಎಂದು ಯೆಹೋವನು ನೆನಸುವುದಿಲ್ಲ. ಆತನ ದೃಷ್ಟಿಯಲ್ಲಿ ನಾವೆಲ್ಲರೂ ಸರಿಸಮಾನ. ಯೆಹೋವನು ನಮ್ಮೆಲ್ಲರನ್ನು ವಿಧವಿಧವಾಗಿ ಮಾಡಿದ್ದಾನೆ ನಿಜ. ಇಂಥ ವೈವಿಧ್ಯವನ್ನು ನಾವು ಇಷ್ಟಪಡುತ್ತೇವೆ, ಆನಂದಿಸುತ್ತೇವೆ. ನಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡಬೇಕೆಂದು ಯೆಹೋವನು ಹೇಳುವುದಿಲ್ಲ. ಅದೇ ಸಮಯದಲ್ಲಿ ನಾವು ಇತರರಿಗಿಂತ ಶ್ರೇಷ್ಠರು ಎಂದು ಯೋಚಿಸುವುದೂ ಆತನಿಗೆ ಇಷ್ಟವಿಲ್ಲ.—ರೋಮ. 10:12.

13 ನಮ್ಮ ದೇಶ ಅಥವಾ ಜನಾಂಗ ಬೇರೆ ಎಲ್ಲವುಗಳಿಗಿಂತ ಶ್ರೇಷ್ಠ ಎನ್ನುವಷ್ಟರ ಮಟ್ಟಿಗೆ ನಾವೆಂದೂ ಹೆಮ್ಮೆಪಡಬಾರದು. ಇಂಥ ಭಾವನೆ ನಮ್ಮಲ್ಲಿದ್ದರೆ ತಟಸ್ಥರಾಗಿ ಉಳಿಯಲು ತುಂಬ ಕಷ್ಟವಾಗಬಹುದು. ಒಂದನೇ ಶತಮಾನದಲ್ಲಿ ಹೀಗೆಯೇ ಆಯಿತು. ಕೆಲವು ಹೀಬ್ರು ಭಾಷೆಯ ಸಹೋದರರು ಗ್ರೀಕ್‌ ಭಾಷೆಯ ವಿಧವೆಯರನ್ನು ಸರಿಯಾಗಿ ಉಪಚರಿಸಲಿಲ್ಲ. (ಅ. ಕಾ. 6:1) ಅಂಥ ಹೆಮ್ಮೆ ನಮ್ಮಲ್ಲಿ ಬೆಳೆಯಲು ಶುರುವಾಗಿದೆಯಾ ಎಂದು ತಿಳಿಯುವುದು ಹೇಗೆ? ಒಂದುವೇಳೆ ಬೇರೆ ಪ್ರದೇಶದ ಸಹೋದರ ಅಥವಾ ಸಹೋದರಿ ನಿಮಗೆ ಸಲಹೆ ಕೊಟ್ಟರೆ ಹೇಗನಿಸುತ್ತದೆ? ಆಗ ಕೂಡಲೇ ನೀವು ಮನಸ್ಸಲ್ಲಿ, ‘ಇಲ್ಲಿನವರಿಗೆ ಏನೂ ಗೊತ್ತಿಲ್ಲ ಅಂತನಾ? ಏನು ಮಾಡಬೇಕಂತ ನಿಮಗಿಂತ ಚೆನ್ನಾಗಿ ನಮಗೆ ಗೊತ್ತು’ ಎಂದು ನೆನಸಿ ಅವರ ಸಲಹೆಯನ್ನು ತಳ್ಳಿಬಿಡುತ್ತೀರಾ? ಹಾಗಾದರೆ ಈ ಪ್ರಾಮುಖ್ಯ ಬುದ್ಧಿಮಾತನ್ನು ನೆನಪಿಡಿ: “ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.”—ಫಿಲಿ. 2:3.

ಯೆಹೋವನು ಸಹಾಯ ಕೊಡುವನು

14. (ಎ) ಪ್ರಾರ್ಥನೆ ನಮಗೆ ಹೇಗೆ ಸಹಾಯಮಾಡುತ್ತದೆ? (ಬಿ) ಯಾವ ಬೈಬಲ್‌ ಉದಾಹರಣೆ ಇದನ್ನು ರುಜುಪಡಿಸುತ್ತದೆ?

14 ತಟಸ್ಥರಾಗಿ ಉಳಿಯುವ ಮೂರನೇ ವಿಧ, ನಾವು ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವುದೇ ಆಗಿದೆ. ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿರಿ. ಆಗ ನಿಮಗೆ ಬೇಕಾದ ತಾಳ್ಮೆ ಮತ್ತು ಸ್ವನಿಯಂತ್ರಣ ಸಿಗುವುದು. ಈ ಗುಣಗಳು ನಿಮ್ಮಲ್ಲಿದ್ದರೆ ಸರ್ಕಾರವು ಅನ್ಯಾಯವಾಗಿ ವರ್ತಿಸಿದರೆ, ಅಪ್ರಾಮಾಣಿಕ ವಿಷಯವನ್ನು ನಡೆಸಿದರೆ ನೀವು ಹತಾಶರಾಗುವುದಿಲ್ಲ. ತಟಸ್ಥರಾಗಿರಲು ನಿಮಗೆ ಕಷ್ಟವನ್ನಾಗಿ ಮಾಡುವ ಸನ್ನಿವೇಶಗಳನ್ನು ಗುರುತಿಸಲು ವಿವೇಕಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಆ ಸನ್ನಿವೇಶದಲ್ಲಿ ಸರಿಯಾದದ್ದನ್ನೇ ಮಾಡಲು ಸಹಾಯಕ್ಕಾಗಿ ಆತನನ್ನು ಬೇಡಿಕೊಳ್ಳಿ. (ಯಾಕೋ. 1:5) ಯೆಹೋವನಿಗೆ ನಿಷ್ಠರಾಗಿ ಇರುವ ಕಾರಣ ನಿಮ್ಮನ್ನು ಸೆರೆಮನೆಗೆ ಹಾಕಬಹುದು ಅಥವಾ ಶಿಕ್ಷೆಗೆ ಗುರಿಮಾಡಬಹುದು. ಆಗ ನೀವು ಧೈರ್ಯಕ್ಕಾಗಿ ಪ್ರಾರ್ಥಿಸಿ. ಇದರಿಂದ ಯಾಕೆ ತಟಸ್ಥರಾಗಿದ್ದೀರಿ ಎಂದು ಇತರರಿಗೆ ಸ್ಪಷ್ಟವಾಗಿ ವಿವರಿಸಲು ಶಕ್ತರಾಗುವಿರಿ. ತಾಳಿಕೊಳ್ಳಲು ಬೇಕಾದ ಸಹಾಯವನ್ನು ಯೆಹೋವನು ಕೊಟ್ಟೇ ಕೊಡುತ್ತಾನೆ ಎಂಬ ಭರವಸೆ ನಿಮಗಿರಲಿ.ಅ. ಕಾರ್ಯಗಳು 4:27-31 ಓದಿ.

15. ತಟಸ್ಥರಾಗಿ ಉಳಿಯಲು ಬೈಬಲ್‌ ನಮಗೆ ಹೇಗೆ ಸಹಾಯಮಾಡುತ್ತದೆ? (“ಬೈಬಲ್‌ ಅವರ ದೃಢನಿಶ್ಚಯವನ್ನು ಇನ್ನೂ ಬಲಗೊಳಿಸಿತು” ಚೌಕ ಸಹ ನೋಡಿ.)

15 ನಮ್ಮನ್ನು ಬಲಪಡಿಸಲು ಯೆಹೋವನು ಬೈಬಲನ್ನು ಕೊಟ್ಟಿದ್ದಾನೆ. ಹಾಗಾಗಿ ತಟಸ್ಥರಾಗಿ ಉಳಿಯಲು ಸಹಾಯಮಾಡುವ ವಚನಗಳನ್ನು ಧ್ಯಾನಿಸಿ. ಆ ವಚನಗಳನ್ನು ಬಾಯಿಪಾಠ ಮಾಡಲು ಪ್ರಯತ್ನಿಸಿ. ನಿಮ್ಮ ಕೈಯಲ್ಲಿ ಬೈಬಲೇ ಇಲ್ಲದಿರುವ ಸಮಯ ಎಂದಾದರೂ ಬಂದರೆ ಆ ವಚನಗಳು ನಿಮಗೆ ಸಹಾಯಕಾರಿ. ಭವಿಷ್ಯದ ಬಗ್ಗೆ ನಿಮ್ಮ ನಿರೀಕ್ಷೆಯನ್ನು ಸಹ ಬೈಬಲ್‌ ಬಲಪಡಿಸುತ್ತದೆ. ಕಷ್ಟಗಳನ್ನು ತಾಳಲು ಈ ನಿರೀಕ್ಷೆ ತುಂಬ ಮುಖ್ಯ. (ರೋಮ. 8:25) ಹೊಸ ಲೋಕದಲ್ಲಿ ನೀವು ಆನಂದಿಸಲು ಇಷ್ಟಪಡುವ ವಿಷಯವನ್ನು ತಿಳಿಸುವ ವಚನಗಳನ್ನು ಆರಿಸಿಕೊಳ್ಳಿ ಮತ್ತು ಅದನ್ನು ಆನಂದಿಸುತ್ತಿರುವುದನ್ನು ಚಿತ್ರಿಸಿಕೊಳ್ಳಿ.

ಯೆಹೋವನ ನಂಬಿಗಸ್ತ ಸೇವಕರಿಂದ ಕಲಿಯಿರಿ

16, 17. ತಟಸ್ಥರಾಗಿ ಉಳಿದ ದೇವರ ನಂಬಿಗಸ್ತ ಸೇವಕರ ಮಾದರಿಗಳಿಂದ ನಾವೇನು ಕಲಿಯುತ್ತೇವೆ? (ಲೇಖನದ ಆರಂಭದ ಚಿತ್ರ ನೋಡಿ.)

16 ನಾವು ತಟಸ್ಥರಾಗಿ ಉಳಿಯುವ ನಾಲ್ಕನೇ ವಿಧ ಯೆಹೋವನ ನಂಬಿಗಸ್ತ ಸೇವಕರ ಮಾದರಿಗಳ ಬಗ್ಗೆ ಯೋಚಿಸುವುದೇ ಆಗಿದೆ. ಬೈಬಲ್‌ ಸಮಯಗಳಲ್ಲಿದ್ದ ಅನೇಕರು ಧೈರ್ಯವಂತರಾಗಿದ್ದರು. ಇದರಿಂದಾಗಿ ತಟಸ್ಥರಾಗಿ ಉಳಿಯಲು ವಿವೇಕದ ನಿರ್ಣಯವನ್ನು ಮಾಡಿದರು. ಉದಾಹರಣೆಗೆ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಬಗ್ಗೆ ಯೋಚಿಸಿ. ಬಾಬೆಲ್‌ ಸರ್ಕಾರವನ್ನು ಸೂಚಿಸುವ ಪ್ರತಿಮೆಯನ್ನು ಅವರು ಆರಾಧಿಸಲು ಧೈರ್ಯದಿಂದ ನಿರಾಕರಿಸಿದರು. (ದಾನಿಯೇಲ 3:16-18 ಓದಿ.) ಈ ಬೈಬಲ್‌ ವೃತ್ತಾಂತದಿಂದ ಕಲಿತು ಇಂದು ಅನೇಕ ಸಾಕ್ಷಿಗಳು ತಾವು ವಾಸಿಸುವ ದೇಶದ ಧ್ವಜವನ್ನು ಆರಾಧಿಸಲು ಧೈರ್ಯದಿಂದ ನಿರಾಕರಿಸಿದ್ದಾರೆ. ಜನರ ಮಧ್ಯೆ ಒಡಕನ್ನು ಉಂಟುಮಾಡುವ ರಾಜಕೀಯ ಅಥವಾ ಸಾಮಾಜಿಕ ಹೋರಾಟಗಳಲ್ಲಿ ಯೇಸು ಸೇರಲಿಲ್ಲ. ತನ್ನ ಒಳ್ಳೇ ಮಾದರಿಯಿಂದ ಶಿಷ್ಯರಿಗೆ ಸಹಾಯವಾಗುತ್ತದೆಂದು ಆತನಿಗೆ ಗೊತ್ತಿತ್ತು. ಆದ್ದರಿಂದಲೇ ಆತನು ಹೇಳಿದ್ದು: “ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾ. 16:33.

17 ನಮ್ಮ ಸಮಯದಲ್ಲೂ ಅನೇಕ ಸಾಕ್ಷಿಗಳು ತಟಸ್ಥರಾಗಿ ಉಳಿದಿದ್ದಾರೆ. ಯೆಹೋವನಿಗೆ ನಂಬಿಗಸ್ತರಾಗಿದ್ದ ಕಾರಣ ಕೆಲವರಿಗೆ ಚಿತ್ರಹಿಂಸೆ ಕೊಡಲಾಯಿತು, ಕೆಲವರನ್ನು ಸೆರೆಮನೆಗೆ ಹಾಕಲಾಯಿತು, ಕೊಲ್ಲಲಾಯಿತು ಸಹ. ಅವರ ಮಾದರಿಗಳು ನಮ್ಮಲ್ಲಿ ಧೈರ್ಯ ತುಂಬುತ್ತವೆ. ಟರ್ಕಿ ದೇಶದ ಒಬ್ಬ ಸಹೋದರನು ಹೇಳಿದ್ದು: “ಹಿಟ್ಲರನ ಸೇನೆಗೆ ಸೇರಲು ನಿರಾಕರಿಸಿದ ಕಾರಣ ಯುವ ಸಹೋದರ ಫ್ರಾಂಜ್‌ ರೈಟರ್‌ನ ಶಿರಚ್ಛೇದನ ಮಾಡಲಾಯಿತು. ಯೆಹೋವನಲ್ಲಿ ಅಪಾರ ನಂಬಿಕೆ, ಭರವಸೆ ಅವನಲ್ಲಿತ್ತೆಂದು ಅವನು ಸಾಯುವ ಮುಂಚಿನ ರಾತ್ರಿ ತನ್ನ ತಾಯಿಗೆ ಬರೆದ ಪತ್ರದಿಂದ ಗೊತ್ತಾಗುತ್ತದೆ. ನನಗೆ ಅಂಥ ಕಷ್ಟಪರೀಕ್ಷೆ ಬಂದಾಗ ಅವನ ಮಾದರಿಯನ್ನೇ ಅನುಸರಿಸಬೇಕೆಂಬ ಆಸೆ.” [2]

18, 19. (ಎ) ನೀವು ತಟಸ್ಥರಾಗಿ ಉಳಿಯಲು ಸಭೆಯಲ್ಲಿರುವವರು ನಿಮಗೆ ಹೇಗೆ ನೆರವು ನೀಡಬಹುದು? (ಬಿ) ನಿಮ್ಮ ದೃಢನಿರ್ಧಾರ ಏನಾಗಿದೆ?

18 ನಿಮ್ಮ ಸಭೆಯಲ್ಲಿರುವ ಸಹೋದರ ಸಹೋದರಿಯರು ಸಹ ನೀವು ತಟಸ್ಥರಾಗಿ ಉಳಿಯಲು ಸಹಾಯಮಾಡಬಲ್ಲರು. ನೀವು ಕಷ್ಟದ ಸನ್ನಿವೇಶದಲ್ಲಿದ್ದರೆ ಹಿರಿಯರಿಗೆ ತಿಳಿಸಿ. ಅವರು ನಿಮಗೆ ಬೈಬಲಿನಿಂದ ಒಳ್ಳೆಯ ಸಲಹೆಯನ್ನು ನೀಡಬಲ್ಲರು. ಸಭೆಯಲ್ಲಿ ನಿಮ್ಮ ಪರಿಸ್ಥಿತಿ ಬಗ್ಗೆ ಗೊತ್ತಿರುವ ಸಹೋದರ ಸಹೋದರಿಯರು ಕೂಡ ನಿಮ್ಮನ್ನು ಉತ್ತೇಜಿಸಬಹುದು. ನಿಮಗಾಗಿ ಪ್ರಾರ್ಥಿಸುವಂತೆ ಅವರಿಗೆ ಕೇಳಿಕೊಳ್ಳಿ. ನಾವು ಸಹ ನಮ್ಮ ಸಹೋದರರನ್ನು ಬೆಂಬಲಿಸಬೇಕು ಮತ್ತು ಅವರಿಗಾಗಿ ಪ್ರಾರ್ಥಿಸಬೇಕು. (ಮತ್ತಾ. 7:12) ಸೆರೆಮನೆಯಲ್ಲಿರುವ ಸಹೋದರರ ಪಟ್ಟಿ jw.org ವೆಬ್‌ಸೈಟ್‌ನಲ್ಲಿದೆ. (‘ನ್ಯೂಸ್‌ರೂಮ್‌’ ವಿಭಾಗದಲ್ಲಿ ‘ಲೀಗಲ್‌ ಡೆವೆಲಪ್‌ಮೆಂಟ್ಸ್‌’ ಒತ್ತಿ. ಅಲ್ಲಿ “Jehovah’s Witnesses Imprisoned for Their Faith—By Location” ಎಂಬ ಲೇಖನದಲ್ಲಿ ಆ ಪಟ್ಟಿ ಇದೆ.) ಪಟ್ಟಿಯಲ್ಲಿರುವ ಕೆಲವರ ಹೆಸರುಗಳನ್ನು ಆರಿಸಿ. ಅವರ ಹೆಸರು ಹೇಳಿ ಪ್ರಾರ್ಥಿಸಿ. ಅವರು ಧೈರ್ಯವಾಗಿದ್ದು ನಿಷ್ಠರಾಗಿ ಉಳಿಯಲು ಸಹಾಯಮಾಡುವಂತೆ ಯೆಹೋವನಿಗೆ ಕೇಳಿಕೊಳ್ಳಿ.—ಎಫೆ. 6:19, 20.

19 ನಾವು ಅಂತ್ಯಕ್ಕೆ ಹತ್ತಿರವಾಗುವಾಗ ಸರ್ಕಾರಗಳು ತಮ್ಮ ಪಕ್ಷವಹಿಸುವಂತೆ ನಮ್ಮ ಮೇಲೆ ಹೆಚ್ಚೆಚ್ಚು ಒತ್ತಡಹಾಕುತ್ತವೆ. ಆದ್ದರಿಂದಲೇ ಈ ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಲು ಇವತ್ತಿನಿಂದಲೇ ತಯಾರಾಗುವುದು ತುಂಬ ಪ್ರಾಮುಖ್ಯ!

^ [1] (ಪ್ಯಾರ 1) “ಕೈಸರ” ಎಂದು ಯೇಸು ಹೇಳಿದಾಗ ಆತನು ಸರ್ಕಾರವನ್ನು ಸೂಚಿಸಿ ಮಾತಾಡುತ್ತಿದ್ದನು. ಯಾಕೆಂದರೆ ಆ ಸಮಯದಲ್ಲಿ ಕೈಸರನು ಆಳುತ್ತಿದ್ದನು ಮತ್ತು ಅವನು ಅತ್ಯುನ್ನತ ಮಾನವ ಅಧಿಕಾರಿಯಾಗಿದ್ದನು.

^ [2] (ಪ್ಯಾರ 17) ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಪುಸ್ತಕದ ಪುಟ 662 ಮತ್ತು ದೇವರ ರಾಜ್ಯ ಈಗ ಆಳುತ್ತಿದೆ! (ಇಂಗ್ಲಿಷ್‌) ಪುಸ್ತಕದ ಪುಟ 150⁠ರಲ್ಲಿರುವ “ದೇವರ ಘನತೆಗಾಗಿ ಸತ್ತನು” ಚೌಕ ನೋಡಿ.