ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ!

ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ!

“ಜನರು ಸ್ವೇಚ್ಛೆಯಿಂದ ಸೈನ್ಯದಲ್ಲಿ ಸೇರಿದ್ದಾರೆ, ಯೆಹೋವನನ್ನು ಕೊಂಡಾಡಿರಿ.”—ನ್ಯಾಯ. 5:2.

ಗೀತೆಗಳು: 150, 10

1, 2. (ಎ) ದೇವರಿಗೆ ನಮ್ಮ ಸೇವೆಯ ಬಗ್ಗೆ ಹೇಗನಿಸುತ್ತದೆಂದು ಎಲೀಫಜ ಮತ್ತು ಬಿಲ್ದದ ಹೇಳಿದರು? (ಬಿ) ಯೆಹೋವನು ಇದರ ಬಗ್ಗೆ ಏನು ಹೇಳಿದನು?

ದೇವರ ಸೇವಕನಾದ ಯೋಬನೊಟ್ಟಿಗೆ ಮಾತಾಡಲು ಮೂವರು ಪುರುಷರು ಬಂದರು. ಅವರಲ್ಲೊಬ್ಬ ತೇಮಾನ್ಯನಾದ ಎಲೀಫಜ. ಅವನು ಯೋಬನಿಗೆ ಈ ಪ್ರಶ್ನೆಗಳನ್ನು ಕೇಳಿದ: “ಮನುಷ್ಯಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? . . . ನೀನು ನೀತಿವಂತನಾಗಿರುವದು ಸರ್ವಶಕ್ತನಿಗೆ ಸುಖವೋ? ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?” (ಯೋಬ 22:1-3) ಯೆಹೋವನಿಗೆ ಯಾವ ಪ್ರಯೋಜನವೂ ಇಲ್ಲ, ಲಾಭವೂ ಇಲ್ಲ ಎಂಬ ವಿಚಾರ ಎಲೀಫಜನ ಮನಸ್ಸಿನಲ್ಲಿತ್ತು. ಎರಡನೆಯವ ಶೂಹ್ಯನಾದ ಬಿಲ್ದದ. ಇವನು ತನ್ನ ಅಭಿಪ್ರಾಯ ಸೇರಿಸುತ್ತಾ ಮನುಷ್ಯರು ದೇವರ ದೃಷ್ಟಿಯಲ್ಲಿ ನೀತಿವಂತರಾಗಲು ಸಾಧ್ಯವೇ ಇಲ್ಲ ಎಂದ.—ಯೋಬ 25:4 ಓದಿ.

2 ಯೆಹೋವನ ಸೇವೆಯನ್ನು ನಿಷ್ಠೆಯಿಂದ ಮಾಡಿದರೂ ವ್ಯರ್ಥ ಎಂಬ ಅಭಿಪ್ರಾಯವನ್ನು ಇವರು ಯೋಬನಲ್ಲಿ ಮೂಡಿಸಲು ಪ್ರಯತ್ನಿಸಿದರು. ದೇವರ ದೃಷ್ಟಿಯಲ್ಲಿ ಮನುಷ್ಯರು ಹುಳ, ಕ್ರಿಮಿಯಂತಿದ್ದಾರೆ ಎಂದು ಯೋಬನನ್ನು ನಂಬಿಸಲು ಯತ್ನಿಸಿದರು. (ಯೋಬ 4:19; 25:6) ಅವರು ಹೀಗೆ ಹೇಳಿದ್ದು ತುಂಬ ದೀನರಾಗಿದ್ದ ಕಾರಣದಿಂದಲಾ? (ಯೋಬ 22:29) ಯೆಹೋವನು ಎಲ್ಲರಿಗಿಂತಲೂ ಮಹೋನ್ನತ, ಆತನಿಗೆ ಹೋಲಿಸಿದರೆ ನಾವು ಏನೂ ಅಲ್ಲ ನಿಜ. ಒಂದು ಬೆಟ್ಟದ ಮೇಲೆ ನಿಂತರೆ ಅಥವಾ ವಿಮಾನದ ಕಿಟಿಕಿಯಿಂದ ನೋಡಿದರೆ ಮನುಷ್ಯರು ಎಷ್ಟು ಚಿಕ್ಕವರು, ಲೆಕ್ಕಕ್ಕೆ ಬಾರದವರು ಎಂದು ಗೊತ್ತಾಗುತ್ತದೆ. ಆದರೆ ಯೆಹೋವನಿಗೆ ನಾವು ಆತನ ರಾಜ್ಯಕ್ಕಾಗಿ ಪಡುವ ಪ್ರಯಾಸದ ಬಗ್ಗೆ ಇದೇ ಅಭಿಪ್ರಾಯ ಇದೆಯಾ? ಇಲ್ಲ! ಎಲೀಫಜ, ಬಿಲ್ದದ ಮತ್ತು ಮೂರನೇ ವ್ಯಕ್ತಿಯಾದ ಚೋಫರ ಹೇಳಿದ್ದು ನಿಜವಲ್ಲ ಎಂದು ಯೆಹೋವನೇ ಹೇಳಿದನು. ತಾನು ಯೋಬನನ್ನು ಮೆಚ್ಚುತ್ತೇನೆಂದು ಹೇಳಿ, ಅವನನ್ನು “ನನ್ನ ದಾಸ” ಎಂದೂ ಕರೆದನು. (ಯೋಬ 42:7, 8) ಹೀಗೆ ಅಪರಿಪೂರ್ಣ ಮಾನವರಿಂದ ‘ದೇವರಿಗೆ ಪ್ರಯೋಜನವಿದೆ,’ ಅವರು ನಿಷ್ಪ್ರಯೋಜಕರಲ್ಲ ಎನ್ನುವುದು ಸ್ಪಷ್ಟ.

“ಆತನಿಗೇನು ಕೊಟ್ಟಂತಾಯಿತು?”

3. (ಎ) ನಾವು ಯೆಹೋವನ ಸೇವೆಯಲ್ಲಿ ಪಡುವ ಪ್ರಯಾಸದ ಬಗ್ಗೆ ಎಲೀಹು ಏನು ಹೇಳಿದನು? (ಬಿ) ಅವನ ಮಾತಿನ ಅರ್ಥವೇನಾಗಿತ್ತು?

3 ಎಲೀಹು ಎಂಬ ಯುವಕನು ಈ ಮೂವರು ಪುರುಷರು ಮತ್ತು ಯೋಬನ ಮಧ್ಯೆ ನಡೆಯುತ್ತಿದ್ದ ಸಂಭಾಷಣೆಗೆ ಕಿವಿಗೊಡುತ್ತಾ ಇದ್ದನು. ಅವರ ಸಂಭಾಷಣೆ ಮುಗಿದ ನಂತರ ಯೆಹೋವನ ಬಗ್ಗೆ ಎಲೀಹು ಯೋಬನಿಗೆ ಈ ಪ್ರಶ್ನೆಗಳನ್ನು ಕೇಳಿದನು: “ನೀನು ನೀತಿವಂತನಾಗಿದ್ದರೆ ಆತನಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಆತನಿಗೆ ಲಾಭವೇನು?” (ಯೋಬ 35:7) ಎಲೀಹು ಸಹ ನಾವು ದೇವರ ಸೇವೆಯಲ್ಲಿ ಪಡುವ ಪ್ರಯಾಸ ವ್ಯರ್ಥವೆಂದು ಹೇಳುತ್ತಿದ್ದಾನಾ? ಇಲ್ಲ. ಹಾಗಿರುತ್ತಿದ್ದರೆ ಆ ಮೂವರನ್ನು ತಿದ್ದಿದಂತೆ ಯೆಹೋವನು ಎಲೀಹುವನ್ನು ತಿದ್ದುತ್ತಿದ್ದನು. ಅವನು ಹೇಳುತ್ತಿದ್ದ ವಿಷಯವೇ ಬೇರೆ. ಅವನು ಏನು ಹೇಳುತ್ತಿದ್ದಾನೆಂದರೆ, ಯೆಹೋವನಿಗೆ ನಮ್ಮ ಆರಾಧನೆಯ ಅಗತ್ಯವಿಲ್ಲ. ನಾವು ಮಾಡುವ ಯಾವುದೇ ವಿಷಯದಿಂದ ಆತನು ಹೆಚ್ಚು ಶ್ರೀಮಂತನು, ಬಲಿಷ್ಠನು ಆಗುವುದಿಲ್ಲ. ಆತನು ಸಂಪೂರ್ಣನು, ಆತನಿಗೆ ಯಾವುದರ ಕೊರತೆಯೂ ಇಲ್ಲ. ನಿಜವೇನೆಂದರೆ, ನಮಗೆ ಒಳ್ಳೇ ಗುಣಗಳನ್ನು, ಸಾಮರ್ಥ್ಯಗಳನ್ನು ಕೊಡುವವನು ಆತನೇ. ನಾವದನ್ನು ಹೇಗೆ ಬಳಸುತ್ತೇವೆಂದು ಆತನು ಗಮನಿಸುತ್ತಾನೆ.

4. ನಾವು ಬೇರೆಯವರಿಗೆ ದಯೆ ತೋರಿಸುವಾಗ ಯೆಹೋವನಿಗೆ ಹೇಗನಿಸುತ್ತದೆ?

4 ಯೆಹೋವನ ಆರಾಧಕರಿಗೆ ನಾವು ನಿಷ್ಠಾವಂತ ಪ್ರೀತಿಯನ್ನು ಕ್ರಿಯೆಗಳಲ್ಲಿ ತೋರಿಸುವಾಗ ಯೆಹೋವನು ಅದನ್ನು ನಾವು ಆತನಿಗೇ ತೋರಿಸಿದಂತೆ ಎಣಿಸುತ್ತಾನೆ. “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು” ಎನ್ನುತ್ತದೆ ಜ್ಞಾನೋಕ್ತಿ 19:17. ನಾವು ಇತರರಿಗೆ ಕರುಣೆ ತೋರಿಸುವ ಪ್ರತಿಯೊಂದು ಸಂದರ್ಭವನ್ನು ಯೆಹೋವನು ಗಮನಿಸುತ್ತಾನೆ. ಎಲ್ಲವನ್ನೂ ಆತನೇ ಸೃಷ್ಟಿಮಾಡಿದ್ದರೂ ನಾವು ಇತರರಿಗೆ ದಯೆ ತೋರಿಸುವಾಗ ಅದನ್ನು ಆತನಿಗೇ ಕೊಟ್ಟ ಸಾಲವೆಂದು ಎಣಿಸುತ್ತಾನೆ. ಆ ಸಾಲವನ್ನು ಆತನು ನಮಗೆ ಅನುಗ್ರಹ, ಆಶೀರ್ವಾದಗಳನ್ನು ಕೊಟ್ಟು ತೀರಿಸುತ್ತಾನೆ. ಈ ಮಾತು ನಿಜವೆಂದು ಆತನ ಮಗನಾದ ಯೇಸುವೇ ದೃಢೀಕರಿಸಿದ್ದಾನೆ.—ಲೂಕ 14:13, 14 ಓದಿ.

5. ನಾವೀಗ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

5 ಪುರಾತನ ಸಮಯದಲ್ಲಿ ಯೆಹೋವನು ಪ್ರವಾದಿ ಯೆಶಾಯನಿಗೆ ತನ್ನ ಪ್ರತಿನಿಧಿಯಾಗಿ ಜನರೊಟ್ಟಿಗೆ ಮಾತಾಡುವ ವಿಶೇಷ ಅವಕಾಶವನ್ನು ಕೊಟ್ಟನು. (ಯೆಶಾ. 6:8-10) ಯೆಶಾಯನು ಅದನ್ನು ಸಂತೋಷದಿಂದ ಸ್ವೀಕರಿಸುತ್ತಾ “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಅಂದನು. ಇಂದು ಕೂಡ ಯೆಹೋವನು ನಂಬಿಗಸ್ತ ಮಾನವರಿಗೆ ತನ್ನ ಕೆಲಸದಲ್ಲಿ ಪಾಲ್ಗೊಳ್ಳುವ ಅವಕಾಶ ಕೊಡುತ್ತಿದ್ದಾನೆ. ಸಾವಿರಾರು ಮಂದಿ ಯೆಶಾಯನ ಮನೋಭಾವವನ್ನೇ ತೋರಿಸುತ್ತಾರೆ. ಬೇರೆಬೇರೆ ವಿಧಗಳಲ್ಲಿ, ಸ್ಥಳಗಳಲ್ಲಿ, ಕಷ್ಟಕರ ಪರಿಸ್ಥಿತಿಗಳಲ್ಲಿ, ಸವಾಲುಗಳ ಮಧ್ಯೆಯೂ ಯೆಹೋವನ ಸೇವೆ ಮಾಡುವ ನೇಮಕಗಳನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದಾರೆ. ಆದರೆ ಯಾರಾದರೂ ಹೀಗೆ ಯೋಚಿಸಬಹುದು: ‘ಯೆಹೋವನ ಸೇವೆಯನ್ನು ಸ್ವಇಚ್ಛೆಯಿಂದ ಮಾಡಲು ನನಗಿಷ್ಟ. ಆದರೆ ನಾನು ಪಡುವ ಪ್ರಯಾಸದಿಂದ ಏನಾದರೂ ಪ್ರಯೋಜನ ಇದೆಯಾ? ನಾನು ಮಾಡಲಿ ಮಾಡದೇ ಇರಲಿ ಯೆಹೋವನಂತೂ ತನ್ನ ಕೆಲಸವನ್ನು ಪೂರೈಸುತ್ತಾನಲ್ಲವಾ?’ ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು, ಹಿಂದಿನ ಕಾಲದಲ್ಲಿದ್ದ ದೇವರ ಸೇವಕರಾದ ದೆಬೋರ ಮತ್ತು ಬಾರಾಕನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಚರ್ಚಿಸೋಣ.

ದೇವರು ಭಯ ತೆಗೆದು, ಧೈರ್ಯ ತುಂಬಿಸುತ್ತಾನೆ

6. ಇಸ್ರಾಯೇಲ್ಯರನ್ನು ಯಾಬೀನನ ಸೈನ್ಯ ಸುಲಭವಾಗಿ ಸೋಲಿಸುತ್ತದೆ ಎಂಬಂತೆ ಕಾಣುತ್ತಿತ್ತು ಏಕೆ?

6 ಬಾರಾಕನು ಇಸ್ರಾಯೇಲ್ಯ ಯೋಧ ಮತ್ತು ದೆಬೋರಳು ಪ್ರವಾದಿನಿ. ಕಾನಾನ್ಯ ರಾಜನಾದ ಯಾಬೀನನು 20 ವರ್ಷಗಳಿಂದ ಇಸ್ರಾಯೇಲ್ಯರನ್ನು “ಬಲವಾಗಿ ಬಾಧಿಸುತ್ತಿ”ದ್ದನು. ಅವನ ಸೈನ್ಯ ಎಷ್ಟು ಕ್ರೂರವಾಗಿತ್ತೆಂದರೆ ಕೋಟೆಗಳ ಹೊರಗೆ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲ್ಯರು ತಮ್ಮ ಮನೆಯಿಂದ ಹೊರಗೆ ಬರಲೂ ಹೆದರುತ್ತಿದ್ದರು. ಯಾಬೀನನ ಸೈನ್ಯದಲ್ಲಿ 900 ಕಬ್ಬಿಣದ ರಥಗಳಿದ್ದವು. * ಆದರೆ ಇಸ್ರಾಯೇಲ್ಯರಿಗೆ ಯುದ್ಧಮಾಡಲು ಸರಿಯಾದ ಆಯುಧಗಳಿರಲಿಲ್ಲ, ರಕ್ಷಾಕವಚವೂ ಇರಲಿಲ್ಲ.—ನ್ಯಾಯ. 4:1-3, 13; 5:6-8.

7, 8. (ಎ) ಯೆಹೋವನು ಬಾರಾಕನಿಗೆ ಮೊದಲು ಕೊಟ್ಟ ಅಪ್ಪಣೆ ಏನು? (ಬಿ) ಇಸ್ರಾಯೇಲ್ಯರು ಯಾಬೀನನ ಸೈನ್ಯವನ್ನು ಹೇಗೆ ಸೋಲಿಸಿದರು? (ಲೇಖನದ ಆರಂಭದ ಚಿತ್ರ ನೋಡಿ.)

7 ಯಾಬೀನನ ಸೈನ್ಯಕ್ಕೆ ಹೋಲಿಸಿದರೆ ಇಸ್ರಾಯೇಲ್ಯರ ಸೈನ್ಯ ತುಂಬ ಬಲಹೀನ, ಸುಲಭವಾಗಿ ಜಯಿಸಬಹುದು ಎಂಬಂತೆ ಕಾಣುತ್ತಿತ್ತು. ಆದರೆ ಯೆಹೋವನು ಬಾರಾಕನಿಗೆ ದೆಬೋರಳ ಮೂಲಕ ಈ ಅಪ್ಪಣೆ ಕೊಟ್ಟನು: “ಎದ್ದು ನಫ್ತಾಲಿ ಜೆಬುಲೂನ್‌ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್‌ ಬೆಟ್ಟಕ್ಕೆ ಹೋಗು; ನಾನು ಯಾಬೀನನ ಸೇನಾಪತಿಯಾದ ಸೀಸೆರನನ್ನೂ ಅವನ ಸೈನ್ಯರಥಗಳನ್ನೂ ನಿನ್ನ ಬಳಿಗೆ ಕೀಷೋನ್‌ ಹಳ್ಳಕ್ಕೆ ಎಳೆದುಕೊಂಡು ಬಂದು ನಿನ್ನ ಕೈಗೆ ಒಪ್ಪಿಸುವೆನು.”—ನ್ಯಾಯ. 4:4-7.

8 ಈ ಸುದ್ದಿ ಹಬ್ಬಿದಾಗ ಸ್ವಇಚ್ಛೆಯಿಂದ ಹೋರಾಡಲು ಜನರು ಮುಂದೆಬಂದರು. 10,000 ಪುರುಷರು ತಾಬೋರ್‌ ಬೆಟ್ಟದಲ್ಲಿ ಸೇರಿಬಂದರು. ನಂತರ ಬಾರಾಕನು ಈ ಪುರುಷರೊಂದಿಗೆ ಶತ್ರು ಸೈನ್ಯದ ವಿರುದ್ಧ ಹೋರಾಡಲು ತಾನಾಕ್‌ ಎಂಬಲ್ಲಿಗೆ ಹೋದನು. (ನ್ಯಾಯಸ್ಥಾಪಕರು 4:14-16 ಓದಿ.) ಯೆಹೋವನು ಇಸ್ರಾಯೇಲ್ಯರಿಗೆ ಸಹಾಯಮಾಡಿದನಾ? ಹೌದು. ಇದ್ದಕ್ಕಿದ್ದಂತೆ ಜೋರಾಗಿ ಮಳೆಸುರಿಯಿತು. ಒಣನೆಲವಾಗಿದ್ದ ಆ ರಣರಂಗವು ಕೆಸರುಕೆಸರಾಯಿತು. ಇದರಿಂದ ಇಸ್ರಾಯೇಲ್ಯರಿಗೆ ಪ್ರಯೋಜನವಾಯಿತು. ಬಾರಾಕನು ಸೀಸೆರನ ಸೈನ್ಯವನ್ನು 24 ಕಿ.ಮೀ. ದೂರದ ವರೆಗೆ ಅಂದರೆ ಹರೋಷೆತ್‌ ಎಂಬ ಸ್ಥಳದ ವರೆಗೆ ಅಟ್ಟಿಸಿಕೊಂಡು ಹೋದನು. ಈ ದಾರಿಯಲ್ಲಿ ಒಂದು ಕಡೆ ಸೀಸೆರನ ರಥ ಕೆಸರಿನಲ್ಲಿ ಸಿಕ್ಕಿಬಿತ್ತು. ಹಾಗಾಗಿ ಅವನು ಅದರಿಂದ ಇಳಿದು ಚಾನನ್ನೀಮ್‌ ಎಂಬಲ್ಲಿಗೆ ಓಡಿಹೋದನು. ಅಲ್ಲಿ ಅವನು ಅಡಗಿಕೊಳ್ಳಲೆಂದು ಯಾಯೇಲ ಎಂಬ ಸ್ತ್ರೀಯ ಗುಡಾರದೊಳಗೆ ಹೋದನು. ಅವನು ಎಷ್ಟು ದಣಿದುಹೋಗಿದ್ದನೆಂದರೆ ಕೂಡಲೇ ಗಾಢ ನಿದ್ದೆಗೆ ಜಾರಿದನು. ಆಗ ಯಾಯೇಲಳು ಧೈರ್ಯಮಾಡಿ ಅವನನ್ನು ಕೊಂದುಬಿಟ್ಟಳು. (ನ್ಯಾಯ. 4:17-21) ಹೀಗೆ ಯೆಹೋವನು ಇಸ್ರಾಯೇಲ್ಯರಿಗೆ ಶತ್ರುಗಳ ಮೇಲೆ ಜಯ ಕೊಟ್ಟನು! *

ಸ್ವಇಚ್ಛೆಯಿಂದ ಸೇವೆಮಾಡುವ ಬಗ್ಗೆ ಬೇರೆಬೇರೆ ಮನೋಭಾವ

9. ಸೀಸೆರನೊಟ್ಟಿಗಿನ ಯುದ್ಧದ ಬಗ್ಗೆ ನ್ಯಾಯಸ್ಥಾಪಕರು 5:20, 21 ರಿಂದ ಏನು ಕಲಿಯುತ್ತೇವೆ?

9 ನ್ಯಾಯಸ್ಥಾಪಕರು 4ನೇ ಅಧ್ಯಾಯದಲ್ಲಿ ವರ್ಣಿಸಲಾದ ಘಟನೆಗಳ ಬಗ್ಗೆ ಹೆಚ್ಚಿನ ವಿವರಗಳು 5ನೇ ಅಧ್ಯಾಯದಲ್ಲಿವೆ. ನ್ಯಾಯಸ್ಥಾಪಕರು 5:20, 21 ಹೀಗನ್ನುತ್ತದೆ: “ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು. ಪೂರ್ವಪ್ರಸಿದ್ಧವಾದ ಕೀಷೋನ್‌ ಹೊಳೆಯು ಶತ್ರುಗಳನ್ನು ಬಡಕೊಂಡು ಹೋಯಿತು.” ಇದರರ್ಥ ಆ ಯುದ್ಧದ ಸಮಯದಲ್ಲಿ ದೇವದೂತರು ಇಸ್ರಾಯೇಲ್ಯರಿಗೆ ಸಹಾಯ ಮಾಡಿದರು ಅಥವಾ ಉಲ್ಕೆಗಳ ಸುರಿಮಳೆ ಆಯಿತು ಎಂದಾ? ಬೈಬಲ್‌ ಹೇಳುವುದಿಲ್ಲ. ಆದರೆ ಯೆಹೋವನೇ ಧಾರಾಕಾರ ಮಳೆ ಸುರಿಯುವಂತೆ ಮಾಡಿ ಸಹಾಯ ಮಾಡಿದನೆಂದು ನೆನಸುವುದು ಸಮಂಜಸ. ಏಕೆಂದರೆ ಆ 900 ಯುದ್ಧರಥಗಳು ಚಲಿಸದ ಹಾಗೆ ಮಾಡಲು ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯಕ್ಕೆ ಆ ಮಳೆ ಬಿತ್ತು. ಇಸ್ರಾಯೇಲಿನ ವಿಜಯಕ್ಕೆ ಕಾರಣನು ಯೆಹೋವನೆಂದು ನ್ಯಾಯಸ್ಥಾಪಕರು 4:14, 15 ರಲ್ಲಿ ಮೂರು ಸಲ ಹೇಳಲಾಗಿದೆ. ಮುಂದೆಬಂದ 10,000 ಸ್ವಯಂಸೇವಕರಲ್ಲಿ ಯಾರೂ ಆ ವಿಜಯಕ್ಕಾಗಿ ತಾವು ಕಾರಣರೆಂದು ಹೇಳಿಕೊಳ್ಳಲು ಸಾಧ್ಯವಿರಲಿಲ್ಲ.

10, 11. ಮೇರೋಜ್‌ ಊರನ್ನು ಏಕೆ ಶಪಿಸಲಾಯಿತು?

10 ಈಗ ನಾವು ಒಂದು ಸ್ವಾರಸ್ಯಕರ ವಿಷಯ ಚರ್ಚಿಸೋಣ. ಇಸ್ರಾಯೇಲ್ಯರಿಗೆ ಜಯ ಸಿಕ್ಕಿದ ನಂತರ ದೆಬೋರ ಮತ್ತು ಬಾರಾಕ ಯೆಹೋವನನ್ನು ಸ್ತುತಿಸುತ್ತಾ ಗೀತೆ ಹಾಡಿದರು. ಅದರಲ್ಲಿ ಹೀಗೆ ಹಾಡಿದರು: “ಮೇರೋಜ್‌ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ. ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ; ಯುದ್ಧವೀರರ ಜೊತೆಯಲ್ಲಿ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ; ಅವರನ್ನು ಶಪಿಸೇ ಶಪಿಸಿರಿ.”—ನ್ಯಾಯ. 5:23.

11 ಮೇರೋಜ್‌ ಊರಿಗೆ ಹಾಕಲಾದ ಶಾಪ ಪೂರ್ತಿಯಾಗಿ ನೆರವೇರಿತೆಂದು ತೋರುತ್ತದೆ. ಏಕೆಂದರೆ ಆ ಊರಿನ ಯಾವ ಕುರುಹೂ ಉಳಿದಿಲ್ಲ. ಆ ಊರಿನ ಜನರು ಬಹುಶಃ ಬಾರಾಕನೊಂದಿಗೆ ಯುದ್ಧಕ್ಕೆ ಹೋಗಲು ಸ್ವಇಚ್ಛೆಯಿಂದ ಮುಂದೆಬರದೆ ಇದ್ದದರಿಂದ ಆ ಶಾಪ ಕೊಡಲಾಯಿತು. ಕಾನಾನ್ಯರ ವಿರುದ್ಧ ಹೋರಾಡಲು 10,000 ಮಂದಿ ಮುಂದೆಬಂದ ಸುದ್ದಿ ಮೇರೋಜ್‌ ಊರಿನವರಿಗೆ ಖಂಡಿತ ಸಿಕ್ಕಿರಬೇಕು. ಆದರೂ ಜೊತೆ ಸೇರಲಿಲ್ಲ. ಅಥವಾ ಅವರಿಗಿದ್ದ ಇನ್ನೊಂದು ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಸೀಸೆರನು ಬಾರಾಕನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಈ ಊರನ್ನು ದಾಟಿ ಓಡಿರಬೇಕು. ಆಗ ಆ ಊರಿನವರು ಅವನನ್ನು ಹಿಡಿದುಕೊಡಲು ಅವಕಾಶವಿದ್ದರೂ ಹಿಡಿಯಲಿಲ್ಲ. ಕ್ರೂರಿಯಾದ ಆ ಯುದ್ಧವೀರನು ತಮ್ಮ ಊರಿನ ಬೀದಿಗಳಲ್ಲಿ ಜೀವಭಯದಿಂದ ಓಡುತ್ತಿರುವುದನ್ನು ಅವರೆಲ್ಲರೂ ನೋಡುತ್ತಾ ಇರುವ ದೃಶ್ಯವನ್ನು ಸ್ವಲ್ಪ ಚಿತ್ರಿಸಿಕೊಳ್ಳಿ! ಅವರು ಅವನನ್ನು ಹಿಡಿದುಕೊಟ್ಟಿದ್ದರೆ ಯೆಹೋವನ ಉದ್ದೇಶವನ್ನು ಬೆಂಬಲಿಸಲು ಒಂದು ಒಳ್ಳೇ ಕೆಲಸ ಮಾಡಿದಂತಾಗುತ್ತಿತ್ತು. ಹಾಗೆ ಮಾಡಿದ್ದರೆ ಆತನು ಖಂಡಿತ ಅವರಿಗೆ ಪ್ರತಿಫಲ ಕೊಡುತ್ತಿದ್ದನು. ಯೆಹೋವನಿಗಾಗಿ ಏನಾದರೊಂದು ಕೆಲಸಮಾಡುವ ಆ ಅವಕಾಶ ಕೈಜಾರಿ ಹೋಗುವಂತೆ ಬಿಟ್ಟರು. ಧೈರ್ಯದಿಂದ ಹೆಜ್ಜೆ ತೆಗೆದುಕೊಂಡ ಯಾಯೇಲಳಂತೆ ಈ ಜನರು ಇರಲಿಲ್ಲ. ಅವರ ಮನೋಭಾವವೇ ಬೇರೆಯಾಗಿತ್ತು!—ನ್ಯಾಯ. 5:24-27.

12. (ಎ) ನ್ಯಾಯಸ್ಥಾಪಕರು 5:9, 10 ರಲ್ಲಿ ಜನರಿಗಿದ್ದ ಯಾವ ಮನೋಭಾವಗಳು ತೋರಿಬರುತ್ತವೆ? (ಬಿ) ಇದು ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?

12 ಆ 10,000 ಸ್ವಯಂಸೇವಕರ ಮನೋಭಾವ ಮತ್ತು ಸ್ವಇಚ್ಛೆಯಿಂದ ಮುಂದೆ ಬರದೇ ಇದ್ದವರ ಮನೋಭಾವದಲ್ಲಿದ್ದ ವ್ಯತ್ಯಾಸ ನಮಗೆ ನ್ಯಾಯಸ್ಥಾಪಕರು 5:9, 10 ರಲ್ಲಿ ಕಂಡುಬರುತ್ತದೆ. ದೆಬೋರ ಮತ್ತು ಬಾರಾಕ ‘ಇಸ್ರಾಯೇಲ್‌ ನಾಯಕರನ್ನು, ಸ್ವೇಚ್ಛೆಯಿಂದ ಸೈನ್ಯದಲ್ಲಿ ಸೇರಿದ ಜನರನ್ನು’ ಹೊಗಳಿದರು. ಸ್ವಇಚ್ಛೆಯಿಂದ ಮುಂದೆ ಬಂದವರ ಮನೋಭಾವವೇ ಭಿನ್ನವಾಗಿತ್ತು. ಬೇರೆ ಜನರು “ಬಿಳೀ ಕತ್ತೆಗಳ ಮೇಲೆ ಸವಾರಿಮಾಡುವ”ವರಾಗಿದ್ದರು ಅಂದರೆ ತಮಗೆ ಸ್ವಯಂಸೇವೆಮಾಡಲು ಆಗುವುದಿಲ್ಲವೆಂದು ಅಹಂಕಾರದಿಂದ ನೆನಸುತ್ತಿದ್ದರು. ಅವರು “ರತ್ನಗಂಬಳಿಗಳ ಮೇಲೆ ಕೂತುಕೊಳ್ಳು”ವವರಾಗಿದ್ದರು ಅಂದರೆ ಐಷಾರಾಮದ ಜೀವನ ನಡೆಸಲು ಇಷ್ಟಪಡುತ್ತಿದ್ದರು. ಅವರು “ಪ್ರಯಾಣಿಕರು” ಅಥವಾ “ಮಾರ್ಗದಲ್ಲಿ ನಡೆಯುವವರಾಗಿದ್ದರು” (ಪವಿತ್ರ ಗ್ರಂಥ ಭಾಷಾಂತರ) ಅಂದರೆ ಸುಲಭವಾದ ಮಾರ್ಗವನ್ನು ಇಷ್ಟಪಡುತ್ತಿದ್ದರು. ಇವರಿಗೆ ತದ್ವಿರುದ್ಧವಾಗಿ ಬಾರಾಕನೊಂದಿಗೆ ಹೋದ ಸ್ವಯಂಸೇವಕರು ತಾಬೋರ್‌ ಬೆಟ್ಟದ ಬಂಡೆಪ್ರದೇಶದಲ್ಲಿ ಮತ್ತು ಕೀಷೋನಿನ ಕೆಸರುತುಂಬಿದ ಕಣಿವೆಯಲ್ಲಿ ಯುದ್ಧಕ್ಕೆ ಹೋಗಲು ಸಿದ್ಧರಾಗಿದ್ದರು. ಆರಾಮದಾಯಕ ಜೀವನ ನಡೆಸುತ್ತಿದ್ದವರು ಯೆಹೋವನ ಕೆಲಸಕ್ಕಾಗಿ ಸ್ವಇಚ್ಛೆಯಿಂದ ಮುಂದೆ ಬರದೇ ಹೋದದ್ದರಿಂದ ಎಂಥ ಸುವರ್ಣ ಅವಕಾಶಗಳನ್ನು ಕಳೆದುಕೊಂಡರೆಂದು ಯೋಚಿಸಬೇಕಿತ್ತು. ಇಂದು ನಾವು ಸಹ ದೇವರ ಸೇವೆ ಮಾಡುವುದರ ಕಡೆಗೆ ನಮಗಿರುವ ಮನೋಭಾವವನ್ನು ಪರೀಕ್ಷಿಸಿಕೊಳ್ಳಬೇಕು.

13. ರೂಬೇನ್‌, ದಾನ್‌, ಆಶೇರ್‌ ಕುಲಗಳವರ ಮನೋಭಾವವು ಜೆಬುಲೂನ್‌ ಮತ್ತು ನಫ್ತಾಲಿ ಕುಲಗಳವರ ಮನೋಭಾವಕ್ಕಿಂತ ಹೇಗೆ ಭಿನ್ನವಾಗಿತ್ತು?

13 ಆ 10,000 ಸ್ವಯಂಸೇವಕರಿಗೆ ಯೆಹೋವನು ಪರಮಾಧಿಕಾರಿ ಪ್ರಭುವಾಗಿ ಹೇಗೆ ಕ್ರಿಯೆಗೈಯುತ್ತಾನೆಂದು ಕಣ್ಣಾರೆ ನೋಡುವ ಅವಕಾಶ ಸಿಕ್ಕಿತು. ಅವರು ಕಂಡ “ಯೆಹೋವನ ನೀತಿಸಾಧನೆಯ” ಬಗ್ಗೆ ಬೇರೆಯವರಿಗೆ ಹೇಳಬಹುದಿತ್ತು. (ನ್ಯಾಯ. 5:11) ಅವರಿಗೆ ತದ್ವಿರುದ್ಧವಾಗಿ ರೂಬೇನ್‌, ದಾನ್‌, ಆಶೇರ್‌ ಕುಲಗಳವರು ಬರೀ ತಮ್ಮ ಸ್ವಂತ ಐಶ್ವರ್ಯ ಅಂದರೆ ತಮ್ಮ ಮಂದೆಗಳು, ಹಡಗುಗಳು, ರೇವುಗಳ ಬಗ್ಗೆಯೇ ಹೆಚ್ಚು ಯೋಚಿಸಿಕೊಂಡಿದ್ದರು. ಯೆಹೋವನ ಕೆಲಸದ ಬಗ್ಗೆ ಅವರಿಗೆ ಅಷ್ಟು ಚಿಂತೆ ಇರಲಿಲ್ಲ. (ನ್ಯಾಯ. 5:15-17) ಆದರೆ ಎಲ್ಲ ಕುಲಗಳವರು ಹಾಗಿರಲಿಲ್ಲ. ಜೆಬುಲೂನ್‌ ಮತ್ತು ನಫ್ತಾಲಿ ಕುಲಗಳವರು ದೆಬೋರ ಮತ್ತು ಬಾರಾಕನನ್ನು ಬೆಂಬಲಿಸಲಿಕ್ಕಾಗಿ “ತಮ್ಮ ಜೀವವನ್ನು ಮರಣಾಪತ್ತಿಗೊಪ್ಪಿಸಿದರು.” (ನ್ಯಾಯ. 5:18) ಹೀಗೆ ಈ ಜನರಿಗೆ ಸ್ವಇಚ್ಛೆಯಿಂದ ಸೇವೆಮಾಡುವುದರ ಬಗ್ಗೆ ಇದ್ದ ಬೇರೆಬೇರೆ ಮನೋಭಾವದಿಂದ ನಾವೊಂದು ಮುಖ್ಯ ಪಾಠ ಕಲಿಯಬಹುದು.

“ಯೆಹೋವನನ್ನು ಕೊಂಡಾಡಿರಿ”

14. ನಾವಿಂದು ಯೆಹೋವನ ಆಳ್ವಿಕೆಯನ್ನು ಬೆಂಬಲಿಸುತ್ತೇವೆಂದು ಹೇಗೆ ತೋರಿಸುತ್ತೇವೆ?

14 ಇಂದು ಯೆಹೋವನ ಆಳ್ವಿಕೆಯನ್ನು ಬೆಂಬಲಿಸಲು ನಾವು ನಿಜವಾದ ಒಂದು ಯುದ್ಧದಲ್ಲಿ ಹೋರಾಡುವುದಿಲ್ಲ. ಬದಲಿಗೆ ಸಾರುವ ಕೆಲಸವನ್ನು ಧೈರ್ಯದಿಂದ, ಹುರುಪಿನಿಂದ ಮಾಡುವ ಮೂಲಕ ನಮ್ಮ ಬೆಂಬಲ ತೋರಿಸುತ್ತೇವೆ. ಹಿಂದೆಂದಿಗಿಂತಲೂ ಈಗ ಯೆಹೋವನ ಕೆಲಸಕ್ಕಾಗಿ ಹೆಚ್ಚು ಸ್ವಯಂಸೇವಕರ ಅಗತ್ಯವಿದೆ. ಸಾವಿರಾರು ಸಹೋದರ ಸಹೋದರಿಯರು ಪೂರ್ಣ ಸಮಯದ ಬೇರೆಬೇರೆ ವಿಧದ ಸೇವೆಗಾಗಿ ಮುಂದೆ ಬರುತ್ತಿದ್ದಾರೆ. ಅನೇಕರು ಪಯನೀಯರ್‌ ಸೇವೆಯಲ್ಲಿದ್ದಾರೆ, ಬೆತೆಲಿನಲ್ಲಿ ಅಥವಾ ರಾಜ್ಯ ಸಭಾಗೃಹ ನಿರ್ಮಾಣದಲ್ಲಿ ಕೆಲಸಮಾಡುತ್ತಿದ್ದಾರೆ. ಅಷ್ಟುಮಾತ್ರವಲ್ಲ ದೊಡ್ಡವರೂ ಚಿಕ್ಕವರೂ ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ಸ್ವಯಂಸೇವಕರಾಗಿ ಸಹಾಯಮಾಡುತ್ತಾರೆ. ಕೆಲವು ಹಿರಿಯರು ಅಧಿವೇಶನಗಳನ್ನು ಸಂಘಟಿಸುವುದರಲ್ಲಿ ಮತ್ತು ಆಸ್ಪತ್ರೆ ಸಂಪರ್ಕ ಸಮಿತಿಗಳಲ್ಲಿ ಶ್ರಮಪಟ್ಟು ಕೆಲಸಮಾಡುತ್ತಾರೆ. ಅಗತ್ಯವಿರುವ ಯಾವುದೇ ವಿಧದಲ್ಲಿ ಸೇವೆಮಾಡಲು ನಾವು ತೋರಿಸುವ ಸಿದ್ಧಮನಸ್ಸನ್ನು ಯೆಹೋವನು ಮೆಚ್ಚುತ್ತಾನೆ. ನಮ್ಮ ಕೆಲಸವನ್ನು ಆತನು ಯಾವತ್ತೂ ಮರೆಯುವುದಿಲ್ಲ.—ಇಬ್ರಿ. 6:10.

ಒಂದು ನಿರ್ಣಯ ಮಾಡುವ ಮುಂಚೆ, ನಿಮ್ಮ ಕುಟುಂಬ ಮತ್ತು ಸಭೆಯ ಮೇಲೆ ಯಾವ ಪರಿಣಾಮ ಆಗಬಹುದು ಎಂದು ಯೋಚಿಸಿ (ಪ್ಯಾರ 15 ನೋಡಿ)

15. ಯೆಹೋವನ ಕೆಲಸದಲ್ಲಿ ನಮ್ಮ ಉತ್ಸಾಹ ಕಡಿಮೆಯಾಗದಂತೆ ನಾವೇನು ಮಾಡಬೇಕು?

15 ಸ್ವಇಚ್ಛೆಯಿಂದ ಮುಂದೆಬಂದು ಸೇವೆಮಾಡುವುದರ ಬಗ್ಗೆ ನಮ್ಮ ಮನೋಭಾವ ಏನಾಗಿದೆಯೆಂದು ನಾವು ಪರಿಶೀಲಿಸಬೇಕು. ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ಯೆಹೋವನ ಕೆಲಸವನ್ನು ಅಲ್ಪಸ್ವಲ್ಪ ಮಾಡುತ್ತೇನೆ, ಜಾಸ್ತಿ ಮಾಡಲಿಕ್ಕೆ ಬೇರೆಯವರಿದ್ದಾರಲ್ಲ ಅಂತ ನೆನಸುತ್ತೇನಾ? ಯೆಹೋವನ ಸೇವೆಮಾಡುವುದಕ್ಕಿಂತ ಭೌತಿಕ ವಿಷಯಗಳನ್ನು ಪಡೆಯುವುದರ ಬಗ್ಗೆಯೇ ಹೆಚ್ಚು ಯೋಚಿಸುತ್ತೇನಾ? ಅಥವಾ ಬಾರಾಕ, ದೆಬೋರ, ಯಾಯೇಲ ಮತ್ತು ಆ 10,000 ಸ್ವಯಂಸೇವಕರ ನಂಬಿಕೆ, ಧೈರ್ಯವನ್ನು ಅನುಕರಿಸುತ್ತಾ ನನ್ನ ಹತ್ತಿರ ಏನಿದೆಯೊ ಅದನ್ನು ಯೆಹೋವನ ಸೇವೆಗಾಗಿ ಬಳಸುತ್ತಿದ್ದೇನಾ? ಹೆಚ್ಚು ಹಣ ಮಾಡಿ, ನನ್ನ ಜೀವನವನ್ನು ಹೆಚ್ಚು ಸುಖಕರ ಮಾಡಲಿಕ್ಕಾಗಿ ಇನ್ನೊಂದು ನಗರ ಅಥವಾ ದೇಶಕ್ಕೆ ಹೋಗಿ ನೆಲೆಸುವ ಆಲೋಚನೆ ನನಗಿದೆಯಾ? ಇದು ನನ್ನ ಕುಟುಂಬ ಹಾಗೂ ಸಭೆಯ ಮೇಲೆ ಬೀರಲಿರುವ ಪರಿಣಾಮದ ಬಗ್ಗೆ ಪ್ರಾರ್ಥನೆಮಾಡಿ ಯೋಚಿಸಿದ್ದೇನಾ?’ *

16. ಯೆಹೋವನ ಹತ್ತಿರ ಎಲ್ಲವೂ ಇದೆಯಾದರೂ ನಾವಾತನಿಗೆ ಏನು ಕೊಡಬಲ್ಲೆವು?

16 ಯೆಹೋವನು ನಮಗೆ ತನ್ನ ಆಳ್ವಿಕೆಯನ್ನು ಬೆಂಬಲಿಸಲು ಕೊಟ್ಟಿರುವ ಅವಕಾಶ ಆತನು ನಮಗೆ ಕೊಟ್ಟಿರುವ ದೊಡ್ಡ ಗೌರವ. ಸೈತಾನನಾದರೊ ಆದಾಮಹವ್ವರ ಸಮಯದಿಂದ ಹಿಡಿದು ಮನುಷ್ಯರು ತನ್ನ ಪಕ್ಷವಹಿಸಿ ಯೆಹೋವನ ವಿರುದ್ಧ ನಿಲ್ಲಬೇಕೆಂದು ಬಯಸಿದ್ದಾನೆ. ಆದರೆ ನಾವು ಯೆಹೋವನ ಆಳ್ವಿಕೆಯನ್ನು ಬೆಂಬಲಿಸುವಾಗ ಯಾರ ಪಕ್ಷದಲ್ಲಿದ್ದೇವೆಂದು ಸೈತಾನನಿಗೆ ಸ್ಪಷ್ಟವಾಗಿ ತೋರಿಸುತ್ತೇವೆ. ನಂಬಿಕೆ ಹಾಗೂ ನಿಷ್ಠೆಯಿಂದ ಪ್ರೇರಿತರಾಗಿ ನಾವು ಆತನ ಸೇವೆಯನ್ನು ಸ್ವಇಚ್ಛೆಯಿಂದ ಮಾಡುತ್ತೇವೆ. ಇದು ಆತನಿಗೆ ತುಂಬ ಸಂತೋಷ ತರುತ್ತದೆ. (ಜ್ಞಾನೋ. 23:15, 16) ನಾವು ತೋರಿಸುವ ಬೆಂಬಲ ಮತ್ತು ವಿಧೇಯತೆಯಿಂದಾಗಿ ಯೆಹೋವನು ಸೈತಾನನ ದೂಷಣೆಗಳಿಗೆ ಉತ್ತರ ಕೊಡಲಿಕ್ಕಾಗುತ್ತದೆ. (ಜ್ಞಾನೋ. 27:11) ಹೀಗೆ ನಾವು ಯೆಹೋವನಿಗೆ ಒಂದು ಅಮೂಲ್ಯ ವಿಷಯವನ್ನು ಕೊಡುತ್ತೇವೆ. ಅದೇ ನಮ್ಮ ವಿಧೇಯತೆ. ಇದು ಆತನಿಗೆ ತುಂಬ ಆನಂದ ತರುತ್ತದೆ.

17. ನ್ಯಾಯಸ್ಥಾಪಕರು 5:31 ಭವಿಷ್ಯದಲ್ಲಿ ಹೇಗೆ ನಿಜವಾಗಲಿದೆ?

17 ಈ ಭೂಮಿಯಲ್ಲಿ, ಯೆಹೋವನ ಆಳ್ವಿಕೆಯನ್ನು ಮಾತ್ರ ಇಷ್ಟಪಡುವ ಜನರಿರುವ ಸಮಯ ಬೇಗನೆ ಬರಲಿದೆ. ಆ ಸಮಯಕ್ಕಾಗಿ ಎಷ್ಟು ಕಾತುರದಿಂದ ಕಾಯುತ್ತಿದ್ದೇವಲ್ಲಾ! ದೆಬೋರ ಮತ್ತು ಬಾರಾಕನು ಹಾಡಿದಂತೆ “ಯೆಹೋವನ ಎಲ್ಲಾ ಶತ್ರುಗಳೂ . . . ನಾಶವಾಗಲಿ; ಆತನ ಭಕ್ತರು ಪ್ರತಾಪದಿಂದ ಉದಯಿಸುವ ಸೂರ್ಯನಂತಿರಲಿ” ಎಂದು ನಮಗೂ ಅನಿಸುತ್ತದೆ. (ನ್ಯಾಯ. 5:31) ಯೆಹೋವನು ಸೈತಾನನ ದುಷ್ಟ ಲೋಕವನ್ನು ಅಂತ್ಯಮಾಡುವಾಗ ಇದು ಆಗಲಿದೆ. ಅರ್ಮಗೆದೋನ್‌ ಯುದ್ಧ ಶುರುವಾಗುವಾಗ, ಅದರಲ್ಲಿ ಶತ್ರುಗಳನ್ನು ನಾಶಮಾಡಲು ಯೆಹೋವನಿಗೆ ಮಾನವ ಸ್ವಯಂಸೇವಕರ ಅಗತ್ಯವಿಲ್ಲ. ನಾವು “ಸುಮ್ಮನೆ ನಿಂತುಕೊಂಡು” ‘ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು’ ನೋಡುವೆವು. (2 ಪೂರ್ವ. 20:17) ಅಲ್ಲಿಯ ವರೆಗೆ ಧೈರ್ಯದಿಂದ, ಹುರುಪಿನಿಂದ ಯೆಹೋವನ ಆಳ್ವಿಕೆಯನ್ನು ಬೆಂಬಲಿಸುವ ಅವಕಾಶಗಳು ನಮಗೆ ಸಿಗುತ್ತಾ ಇರುತ್ತವೆ.

18. ನಿಮ್ಮ ಸ್ವಇಚ್ಛೆಯ ಸೇವೆಯಿಂದ ಇತರರಿಗೆ ಹೇಗೆ ಪ್ರಯೋಜನವಾಗಲಿದೆ?

18 ದೆಬೋರ ಮತ್ತು ಬಾರಾಕ ತಮ್ಮ ವಿಜಯ ಗೀತೆಯ ಆರಂಭದಲ್ಲೇ ಯೆಹೋವನನ್ನು ಕೊಂಡಾಡಿದರು, ಮನುಷ್ಯರನ್ನಲ್ಲ. “ಜನರು ಸ್ವೇಚ್ಛೆಯಿಂದ ಸೈನ್ಯದಲ್ಲಿ ಸೇರಿದ್ದಾರೆ, ಯೆಹೋವನನ್ನು ಕೊಂಡಾಡಿರಿ” ಎಂದು ಅವರು ಹಾಡಿದರು. (ನ್ಯಾಯ. 5:1, 2) ಹಾಗೆಯೇ ನಾವು ಕೂಡ ಅಗತ್ಯಬೀಳುವ ಯಾವುದೇ ವಿಧದಲ್ಲಿ ಯೆಹೋವನ ಸೇವೆಮಾಡುವಾಗ ಬೇರೆಯವರಿಗೂ ‘ಯೆಹೋವನನ್ನು ಕೊಂಡಾಡಲು’ ಪ್ರೋತ್ಸಾಹ ಸಿಗಲಿದೆ.

^ ಪ್ಯಾರ. 6 ಈ ರಥಗಳ ಚಕ್ರಗಳಿಗೆ ಹರಿತವಾದ, ಉದ್ದವಾದ, ಕೆಲವೊಮ್ಮೆ ಬಾಗಿದ ಕಬ್ಬಿಣದ ಕತ್ತಿಗಳನ್ನು ಜೋಡಿಸಲಾಗಿತ್ತು. ರಥದ ಎರಡು ಚಕ್ರಗಳನ್ನು ಜೋಡಿಸುವ ಕಂಬಿಯಿಂದ (ಆ್ಯಕ್ಸಲ್‌) ಎರಡು ಬದಿಯಲ್ಲಿ ಈ ಕತ್ತಿಗಳು ಹೊರಚಾಚುತ್ತಿರಬಹುದು. ಇದರಿಂದ ಆ ರಥಗಳು, ವಿನಾಶಕಾರಿಯಾದ ಚಲಿಸುವ ಯಂತ್ರಗಳಾಗಿದ್ದವು.

^ ಪ್ಯಾರ. 8 ಈ ರೋಮಾಂಚಕ ಘಟನೆಗಳ ಬಗ್ಗೆ ಹೆಚ್ಚನ್ನು 2003, ನವೆಂಬರ್‌ 15ರಕಾವಲಿನಬುರುಜು ವಿನ “ನಂಬಿಕೆಯಿಂದಲೇ ಬಾರಾಕನು ಒಂದು ಪರಾಕ್ರಮಿ ಸೇನೆಯನ್ನು ಸಂಹರಿಸಿದನು” ಲೇಖನದಲ್ಲಿ ಓದಿ.

^ ಪ್ಯಾರ. 15 2015, ಅಕ್ಟೋಬರ್‌ 1ರ ಕಾವಲಿನಬುರುಜುವಿನಲ್ಲಿ “‘ಹಣ ಇಲ್ವಲ್ಲಾ!’ ಎಂಬ ಚಿಂತೆ” ಲೇಖನ ನೋಡಿ.