ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ

ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ

“ಎಲ್ಲಿ ಯೆಹೋವನ ಆತ್ಮವಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ.” —2 ಕೊರಿಂ. 3:17.

ಗೀತೆಗಳು: 11, 137

1, 2. (ಎ) ಅಪೊಸ್ತಲ ಪೌಲನ ದಿನಗಳಲ್ಲಿ ದಾಸತ್ವ ಮತ್ತು ಸ್ವಾತಂತ್ರ್ಯದ ಬಗ್ಗೆ ಯಾಕೆ ಜನರು ಹೆಚ್ಚಾಗಿ ಮಾತಾಡುತ್ತಿದ್ದರು? (ಬಿ) ನಿಜ ಸ್ವಾತಂತ್ರ್ಯ ಯಾರಿಂದ ಸಿಗುತ್ತದೆ ಎಂದು ಪೌಲನು ಹೇಳಿದನು?

ಆರಂಭದ ಕ್ರೈಸ್ತರು ರೋಮನ್‌ ಸಾಮ್ರಾಜ್ಯದಲ್ಲಿದ್ದರು. ಆ ಸಾಮ್ರಾಜ್ಯದಲ್ಲಿದ್ದ ಜನರಿಗೆ ತಮ್ಮ ನೀತಿ-ನಿಯಮ, ನ್ಯಾಯಾಂಗ ವ್ಯವಸ್ಥೆ ಮತ್ತು ಸ್ವಾತಂತ್ರ್ಯದ ಬಗ್ಗೆ ತುಂಬ ಹೆಮ್ಮೆ ಇತ್ತು. ಆದರೆ ಆ ಬಲಿಷ್ಠ ಸಾಮ್ರಾಜ್ಯಕ್ಕಿದ್ದ ಶಕ್ತಿ ಮತ್ತು ಕೀರ್ತಿಯು ಹೆಚ್ಚಿನಾಂಶ ಅಲ್ಲಿನ ಗುಲಾಮರು ಮಾಡುತ್ತಿದ್ದ ಕೆಲಸದಿಂದ ಸಿಕ್ಕಿತ್ತು. ಒಂದು ಸಮಯದಲ್ಲಿ, ರೋಮನ್‌ ಸಾಮ್ರಾಜ್ಯದಲ್ಲಿದ್ದ 3​ರಲ್ಲಿ ಒಬ್ಬ ವ್ಯಕ್ತಿ ಗುಲಾಮನಾಗಿದ್ದ. ಅಲ್ಲಿನ ಸಾಮಾನ್ಯ ಜನರು, ಅಷ್ಟೇಕೆ ಕ್ರೈಸ್ತರು ಕೂಡ ಯಾವಾಗಲೂ ಎರಡು ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಅದರಲ್ಲಿ ಒಂದು ದಾಸತ್ವ, ಇನ್ನೊಂದು ಸ್ವಾತಂತ್ರ್ಯ. ಇದು ಯಾವಾಗಲೂ ಅವರ ಚರ್ಚಾ ವಿಷಯವಾಗಿತ್ತು.

2 ಅಪೊಸ್ತಲ ಪೌಲನು ಅನೇಕವೇಳೆ ತನ್ನ ಪತ್ರಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಬರೆದನು. ಆದರೆ ಆಗಿನ ಸಮಯದಲ್ಲಿದ್ದ ಜನರಂತೆ ಅವನು ಸಮಾಜವನ್ನು ಸುಧಾರಣೆ ಮಾಡುವುದರ ಬಗ್ಗೆ ಮಾತಾಡುತ್ತಿರಲಿಲ್ಲ. ಬದಲಿಗೆ ಪೌಲನು ಮತ್ತು ಆತನ ಕ್ರೈಸ್ತ ಸಹೋದರರು ಇತರರಿಗೆ ದೇವರ ರಾಜ್ಯದ ಬಗ್ಗೆ ಸುವಾರ್ತೆ ಸಾರಲು ಮತ್ತು ಯೇಸು ಕ್ರಿಸ್ತನ ವಿಮೋಚನಾ ಮೌಲ್ಯವು ಎಷ್ಟು ಅಮೂಲ್ಯವಾಗಿದೆ ಎಂದು ತಿಳಿಸಲು ಹಗಲೂರಾತ್ರಿ ಶ್ರಮಿಸಿದರು. ಪೌಲನು ತನ್ನ ಜೊತೆ ಕ್ರೈಸ್ತರಿಗೆ ನಿಜ ಸ್ವಾತಂತ್ರ್ಯ ಯಾರಿಂದ ಸಿಗುತ್ತದೆ ಎಂದು ಹೇಳಿದನು. “ಯೆಹೋವನು ಆತ್ಮಸ್ವರೂಪಿಯಾಗಿದ್ದಾನೆ; ಎಲ್ಲಿ ಯೆಹೋವನ ಆತ್ಮವಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ” ಎಂದು ಆತನು ಬರೆದಿದ್ದಾನೆ.—2 ಕೊರಿಂ. 3:17.

3, 4. (ಎ) 2 ಕೊರಿಂಥ 3:17​ರ ಮುಂಚಿನ ವಚನಗಳಲ್ಲಿ ಪೌಲನು ಯಾವುದರ ಬಗ್ಗೆ ಮಾತಾಡಿದನು? (ಬಿ) ಯೆಹೋವನಿಂದ ಸಿಗುವ ಸ್ವಾತಂತ್ರ್ಯವನ್ನು ಪಡೆಯಲು ನಾವೇನು ಮಾಡಬೇಕು?

3 ಪೌಲನು ಕೊರಿಂಥದವರಿಗೆ ಬರೆದ ಎರಡನೆಯ ಪತ್ರದಲ್ಲಿ, ಮೋಶೆ ಯೆಹೋವನ ದೇವದೂತನೊಟ್ಟಿಗೆ ಮಾತಾಡಿ ಸೀನಾಯಿ ಬೆಟ್ಟದಿಂದ ಕೆಳಗಿಳಿದು ಬಂದಾಗ ಏನಾಯಿತೆಂದು ತಿಳಿಸಿದನು. ಮೋಶೆಯ ಮುಖವು ಪ್ರಕಾಶಮಾನವಾಗಿತ್ತು! ಇಸ್ರಾಯೇಲ್ಯರು ಆತನನ್ನು ನೋಡಿದಾಗ ಭಯಪಟ್ಟರು. ಹಾಗಾಗಿ ಆತನು ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು. (ವಿಮೋ. 34:29, 30, 33; 2 ಕೊರಿಂ. 3:7, 13) ಇದರ ಬಗ್ಗೆ ಮಾತಾಡುತ್ತಾ ಪೌಲನು ಹೇಳಿದ್ದು: “ಆದರೆ ಯೆಹೋವನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆದುಹಾಕಲ್ಪಡುತ್ತದೆ.” (2 ಕೊರಿಂ. 3:16) ಪೌಲನ ಮಾತಿನ ಅರ್ಥವೇನಾಗಿತ್ತು?

4 ಹಿಂದಿನ ಲೇಖನದಲ್ಲಿ ಕಲಿತಂತೆ ಎಲ್ಲದರ ಸೃಷ್ಟಿಕರ್ತನಾಗಿರುವ ಯೆಹೋವನೊಬ್ಬನಿಗೆ ಮಾತ್ರ ಸಂಪೂರ್ಣವಾದ, ಯಾವುದೇ ಮಿತಿ-ಮೇರೆಗಳಿಲ್ಲದ ಸ್ವಾತಂತ್ರ್ಯವಿದೆ. ಹಾಗಾಗಿ, ಎಲ್ಲಿ ಯೆಹೋವನು ಇದ್ದಾನೋ ಮತ್ತು “ಎಲ್ಲಿ ಯೆಹೋವನ ಆತ್ಮವಿದೆಯೋ” ಅಲ್ಲಿ ಸ್ವಾತಂತ್ರ್ಯವಿರುತ್ತದೆ. ನಮಗೆ ಆ ಸ್ವಾತಂತ್ರ್ಯ ಬೇಕೆಂದರೆ ನಾವು ಯೆಹೋವನ ಕಡೆಗೆ ತಿರುಗಬೇಕೆಂದು ಪೌಲನು ಹೇಳಿದನು. ಅದರರ್ಥ ಯೆಹೋವನೊಟ್ಟಿಗೆ ನಮಗೆ ಆಪ್ತ ಸಂಬಂಧವಿರಬೇಕು. ಅರಣ್ಯದಲ್ಲಿದ್ದ ಇಸ್ರಾಯೇಲ್ಯರಿಗೆ ಮಾನವ ದೃಷ್ಟಿಕೋನವಿತ್ತೇ ಹೊರತು ಯೆಹೋವನ ದೃಷ್ಟಿಕೋನವಿರಲಿಲ್ಲ. ಅವರು ತಮ್ಮ ಮನಸ್ಸನ್ನು ಮತ್ತು ಹೃದಯವನ್ನು ಮುಸುಕಿನಿಂದ ಮರೆಮಾಡಿಕೊಂಡಿರುವ ರೀತಿಯಲ್ಲಿದ್ದರು. ಅವರು ಐಗುಪ್ತದ ದಾಸತ್ವದಿಂದ ಸಿಕ್ಕಿದ ಸ್ವಾತಂತ್ರ್ಯವನ್ನು ತಮ್ಮ ಸ್ವಂತ ಬಯಕೆಗಳನ್ನು ತೃಪ್ತಿಪಡಿಸುವುದಕ್ಕಾಗಿ ಉಪಯೋಗಿಸಲು ಬಯಸಿದರು.—ಇಬ್ರಿ. 3:8-10.

5. (ಎ) ಯೆಹೋವನ ಆತ್ಮ ಯಾವ ರೀತಿಯ ಸ್ವಾತಂತ್ರ್ಯವನ್ನು ಕೊಡುತ್ತದೆ? (ಬಿ) ಒಬ್ಬ ವ್ಯಕ್ತಿ ಗುಲಾಮನಾಗಿದ್ದರೂ ಅಥವಾ ಜೈಲಿನಲ್ಲಿದ್ದರೂ ಹೇಗೆ ಯೆಹೋವನು ಕೊಡುವಂಥ ಸ್ವಾತಂತ್ರ್ಯವನ್ನು ಆನಂದಿಸಬಹುದು? (ಸಿ) ಯಾವ ಪ್ರಶ್ನೆಗಳಿಗೆ ನಾವು ಉತ್ತರ ತಿಳಿಯಲಿದ್ದೇವೆ?

5 ಯೆಹೋವನ ಆತ್ಮದಿಂದ ಸಿಗುವ ಸ್ವಾತಂತ್ರ್ಯವು ಗುಲಾಮಗಿರಿಯಿಂದ ಸಿಗುವ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದ್ದಾಗಿದೆ. ಅಷ್ಟು ಸ್ವಾತಂತ್ರ್ಯವನ್ನು ಯಾವ ಮನುಷ್ಯನಿಂದಲೂ ಕೊಡಲು ಸಾಧ್ಯವಿಲ್ಲ. ಯೆಹೋವನಿಂದ ಸಿಗುವ ಸ್ವಾತಂತ್ರ್ಯ ಪಾಪದ ಮತ್ತು ಮರಣದ ದಾಸತ್ವದಿಂದ ಹಾಗೂ ಸುಳ್ಳಾರಾಧನೆ ಮತ್ತು ಅದರ ಸಂಪ್ರದಾಯಗಳ ದಾಸತ್ವದಿಂದ ನಮ್ಮನ್ನು ಬಿಡಿಸುತ್ತದೆ. (ರೋಮ. 6:23; 8:2) ಎಂಥ ಅದ್ಭುತವಾದ ಸ್ವಾತಂತ್ರ್ಯವಿದು! ಈ ಸ್ವಾತಂತ್ರ್ಯವನ್ನು ಗುಲಾಮರಾಗಿರುವವರು ಅಥವಾ ಜೈಲಿನಲ್ಲಿರುವವರು ಕೂಡ ಆನಂದಿಸಬಹುದು. (ಆದಿ. 39:20-23)ಸಹೋದರಿ ನ್ಯಾನ್ಸಿ ಯುಎನ್‌ ಮತ್ತು ಸಹೋದರ ಹೆರಾಲ್ಡ್‌ ಕಿಂಗ್‌ ತೋರಿಸಿದ ನಂಬಿಕೆಯಿಂದಾಗಿ ಅನೇಕ ವರ್ಷ ಜೈಲಿನಲ್ಲಿ ಇರಬೇಕಾಯಿತು. ಆದರೂ ಅವರಿಗೆ ಅಲ್ಲಿ ಸಹ ದೇವರು ಕೊಡುವ ಸ್ವಾತಂತ್ರ್ಯವಿತ್ತು. ಅವರು ಹಂಚಿಕೊಂಡ ತಮ್ಮ ಅನುಭವಗಳನ್ನು ನೀವು JW ಪ್ರಸಾರದಲ್ಲಿ ನೋಡಬಹುದು. (ಸಂದರ್ಶನಗಳು ಮತ್ತು ಅನುಭವಗಳು > ಕಷ್ಟಗಳನ್ನು ತಾಳಿಕೊಂಡವರು ವಿಭಾಗ ನೋಡಿ.) ಈಗ ನಾವು ಎರಡು ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯ ತುಂಬ ಅಮೂಲ್ಯವಾಗಿದೆ ಎಂದು ನಾವು ಹೇಗೆ ತೋರಿಸಿಕೊಡಬಹುದು? ನಮಗಿರುವ ಸ್ವಾತಂತ್ರ್ಯವನ್ನು ನಾವು ಹೇಗೆ ಬುದ್ಧಿವಂತಿಕೆಯಿಂದ ಉಪಯೋಗಿಸಬಹುದು?

ದೇವರು ಕೊಡುವ ಸ್ವಾತಂತ್ರ್ಯ ತುಂಬ ಅಮೂಲ್ಯ

6. ಯೆಹೋವನು ಕೊಟ್ಟ ಸ್ವಾತಂತ್ರ್ಯಕ್ಕೆ ಇಸ್ರಾಯೇಲ್ಯರು ಕೃತಜ್ಞತೆ ತೋರಿಸಿದರಾ? ವಿವರಿಸಿ.

6 ನಮಗೆ ಯಾರಾದರೂ ಒಂದು ಅಮೂಲ್ಯ ಉಡುಗೊರೆ ಕೊಟ್ಟರೆ ನಾವು ಅವರಿಗೆ ತುಂಬ ಕೃತಜ್ಞರಾಗಿರುತ್ತೇವೆ. ಆದರೆ ಇಸ್ರಾಯೇಲ್ಯರು ಯೆಹೋವನು ಕೊಟ್ಟ ಸ್ವಾತಂತ್ರ್ಯಕ್ಕೆ ಕೃತಜ್ಞತೆ ತೋರಿಸಲಿಲ್ಲ. ಐಗುಪ್ತದಿಂದ ಅವರನ್ನು ಯೆಹೋವನು ಬಿಡುಗಡೆ ಮಾಡಿ ಕೆಲವೇ ತಿಂಗಳುಗಳಾಗಿತ್ತು. ಅಷ್ಟರಲ್ಲೇ ಅವರು ಐಗುಪ್ತದಲ್ಲಿ ಏನು ತಿನ್ನುತ್ತಿದ್ದರೊ ಕುಡಿಯುತ್ತಿದ್ದರೊ ಅದಕ್ಕಾಗಿ ಹಾತೊರೆಯಲು ಆರಂಭಿಸಿದರು. ಯೆಹೋವನು ಕೊಡುತ್ತಿದ್ದ ಮನ್ನ ಅವರಿಗೆ ಬೇಡವಾಯಿತು. ಐಗುಪ್ತಕ್ಕೆ ವಾಪಸ್‌ ಹೋಗಲು ಬಯಸಿದರು! ಯೆಹೋವನನ್ನು ಆರಾಧಿಸಲು ಅವರಿಗಿದ್ದ ಸ್ವಾತಂತ್ರ್ಯಕ್ಕಿಂತ ಅವರು ಐಗುಪ್ತದಲ್ಲಿ ತಿನ್ನುತ್ತಿದ್ದ ‘ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿಯೇ’ ಮುಖ್ಯವಾಗಿತ್ತು. ಸಹಜವಾಗಿಯೇ ಯೆಹೋವನಿಗೆ ಅವರ ಮೇಲೆ ತುಂಬ ಕೋಪ ಬಂತು. (ಅರ. 11:5, 6, 10; 14:3, 4) ಇದರಿಂದ ನಾವೊಂದು ಪ್ರಾಮುಖ್ಯ ಪಾಠ ಕಲಿಯಬಹುದು.

7. ಪೌಲನು 2 ಕೊರಿಂಥ 6:1​ರಲ್ಲಿ ಕೊಟ್ಟಂಥ ಸಲಹೆಯನ್ನು ಸ್ವತಃ ಹೇಗೆ ಅನ್ವಯಿಸಿಕೊಂಡನು ಮತ್ತು ನಾವು ಅದನ್ನು ಹೇಗೆ ಅನ್ವಯಿಸಿಕೊಳ್ಳಬಹುದು?

7 ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಕೊಟ್ಟಿರುವ ಸ್ವಾತಂತ್ರ್ಯವನ್ನು ತಿರಸ್ಕರಿಸಬೇಡಿ ಎಂದು ಪೌಲನು ಎಲ್ಲ ಕ್ರೈಸ್ತರಲ್ಲಿ ವಿನಂತಿಸಿದನು. (2 ಕೊರಿಂಥ 6:1 ಓದಿ.) ಪೌಲನೂ ಅಪರಿಪೂರ್ಣನಾಗಿದ್ದನು, ಪಾಪ ಮತ್ತು ಮರಣದ ದಾಸತ್ವದ ಕೆಳಗಿದ್ದನು. ದುರವಸ್ಥೆಯಲ್ಲಿ ಬಿದ್ದಿದ್ದೇನೆಂದು ಅವನು ಹೇಳಿದನು. ಆದರೂ ಅವನು, ‘ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದನು. ಯಾಕೆ ಆ ರೀತಿ ಹೇಳಿದನು? ತನ್ನ ಜೊತೆ ಕ್ರೈಸ್ತರಿಗೆ ಪೌಲನು ವಿವರಿಸುವುದು: “ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಜೀವವನ್ನು ಕೊಡುವಂಥ ಆ ಪವಿತ್ರಾತ್ಮದ ನಿಯಮವು ನಿಮ್ಮನ್ನು ಪಾಪ ಮತ್ತು ಮರಣದ ನಿಯಮದಿಂದ ಬಿಡಿಸಿದೆ.” (ರೋಮ. 7:24, 25; 8:2) ಪೌಲನಂತೆ ನಾವು ಸಹ ಯೆಹೋವನು ನಮ್ಮನ್ನು ಪಾಪ ಮತ್ತು ಮರಣದ ದಾಸತ್ವದಿಂದ ಬಿಡಿಸಿರುವುದನ್ನು ಮರೆಯಬಾರದು. ವಿಮೋಚನಾ ಮೌಲ್ಯದಿಂದಾಗಿ ಇಂದು ನಾವು ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಸೇವೆ ಮಾಡಲು ಸಾಧ್ಯವಾಗುತ್ತಿದೆ ಮತ್ತು ಇದು ನಮಗೆ ನಿಜ ಸಂತೋಷ ಕೊಡುತ್ತಿದೆ.—ಕೀರ್ತ. 40:8.

ಆಯ್ಕೆ ಮಾಡಲು ನಿಮಗಿರುವ ಸ್ವಾತಂತ್ರ್ಯವನ್ನು ಯೆಹೋವನಿಗೆ ಏನಿಷ್ಟಾನೋ ಅದನ್ನು ಮಾಡಲು ಉಪಯೋಗಿಸುತ್ತಿದ್ದೀರಾ ಅಥವಾ ನಿಮಗೆ ಏನಿಷ್ಟಾನೋ ಅದನ್ನು ಮಾಡಲು ಉಪಯೋಗಿಸುತ್ತಿದ್ದೀರಾ? (ಪ್ಯಾರ 8-10 ನೋಡಿ)

8, 9. (ಎ) ನಮಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸುವ ವಿಷಯದಲ್ಲಿ ಅಪೊಸ್ತಲ ಪೇತ್ರನು ಯಾವ ಎಚ್ಚರಿಕೆ ಕೊಟ್ಟಿದ್ದಾನೆ? (ಬಿ) ತನಗಿರುವ ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿ ಹೇಗೆ ತಪ್ಪಾಗಿ ಉಪಯೋಗಿಸಬಹುದು?

8 ದೇವರು ನಮಗೆ ಕೊಟ್ಟಿರುವ ಸ್ವಾತಂತ್ರ್ಯಕ್ಕಾಗಿ ನಾವು ಬರೀ ಕೃತಜ್ಞತೆ ಹೇಳಿದರೆ ಸಾಲದು. ಬದಲಿಗೆ ಆ ಸ್ವಾತಂತ್ರ್ಯವನ್ನು ತಪ್ಪಾದ ರೀತಿಯಲ್ಲಿ ಬಳಸದಂತೆ ಎಚ್ಚರವಾಗಿರಬೇಕು. ತಪ್ಪಾದ ವಿಷಯಗಳನ್ನು ಮಾಡುವುದಕ್ಕೆ ನಮಗಿರುವ ಸ್ವಾತಂತ್ರ್ಯವನ್ನು ನೆಪಮಾಡಿಕೊಳ್ಳಬಾರದು ಎಂದು ಅಪೊಸ್ತಲ ಪೇತ್ರನು ಎಚ್ಚರಿಕೆ ಕೊಟ್ಟಿದ್ದಾನೆ. (1 ಪೇತ್ರ 2:16 ಓದಿ.) ಈ ಎಚ್ಚರಿಕೆ ಅರಣ್ಯದಲ್ಲಿದ್ದ ಇಸ್ರಾಯೇಲ್ಯರಿಗೆ ಏನಾಯಿತು ಎನ್ನುವುದನ್ನು ನೆನಪಿಸುತ್ತದೆ. ಇಂದು ನಮಗೂ ಈ ಎಚ್ಚರಿಕೆ ತುಂಬ ಅಗತ್ಯ. ಸೈತಾನ ಮತ್ತು ಅವನ ಲೋಕ ನಮ್ಮಲ್ಲಿ ಆಸೆ ಹುಟ್ಟಿಸುವಂಥ ಅನೇಕ ಉಡುಪು, ಆಹಾರ, ಪಾನೀಯ ಮತ್ತು ಮನರಂಜನೆಯನ್ನು ಕಣ್ಣ ಮುಂದೆ ತರುತ್ತದೆ. ಚಾಣಾಕ್ಷ ಜಾಹೀರಾತುದಾರರು ಸುಂದರವಾಗಿರುವ ಜನರನ್ನು ಉಪಯೋಗಿಸಿ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಎಷ್ಟರ ಮಟ್ಟಿಗೆಂದರೆ ಅವರು ತೋರಿಸುವ ವಸ್ತುಗಳು ನಮಗೆ ಅವಶ್ಯಕತೆ ಇಲ್ಲದಿದ್ದರೂ ನಾವು ಅದನ್ನು ಖರೀದಿ ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತಾರೆ. ನಮಗಿರುವ ಸ್ವಾತಂತ್ರ್ಯವನ್ನು ತಪ್ಪಾದ ರೀತಿಯಲ್ಲಿ ಉಪಯೋಗಿಸಲು ಈ ಲೋಕ ತುಂಬಾನೇ ಕುಮ್ಮಕ್ಕು ಕೊಡುತ್ತಿದೆ!

9 ನಮ್ಮ ಜೀವನದ ಕೆಲವೊಂದು ಪ್ರಾಮುಖ್ಯ ವಿಷಯಗಳನ್ನು ಅಂದರೆ ನಮ್ಮ ಶಿಕ್ಷಣ, ಉದ್ಯೋಗ ಅಥವಾ ಜೀವನವೃತ್ತಿಯನ್ನು ಆಯ್ಕೆ ಮಾಡುವಾಗಲೂ ಪೇತ್ರನ ಸಲಹೆ ಅನ್ವಯವಾಗುತ್ತದೆ. ಉದಾಹರಣೆಗೆ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸೀಟು ಸಿಗಬೇಕೆಂದರೆ ಹೆಚ್ಚು ಪರಿಶ್ರಮ ಪಡಬೇಕು ಎನ್ನುವ ಒತ್ತಡಕ್ಕೆ ಇಂದಿನ ಯುವಜನರು ಸಿಲುಕಿದ್ದಾರೆ. ಉನ್ನತ ಶಿಕ್ಷಣ ಪಡೆದರೆ ಒಳ್ಳೇ ಕೆಲಸ ಸಿಗುತ್ತೆ, ತುಂಬ ದುಡ್ಡು ಮಾಡಬಹುದು, ಸಮಾಜದಲ್ಲಿ ಒಳ್ಳೇ ಸ್ಥಾನ-ಮಾನ ಇರುತ್ತೆ ಎಂದು ಅನೇಕ ಜನರು ಅವರಿಗೆ ಹೇಳುತ್ತಾರೆ. ಪ್ರೌಢ ಶಾಲೆಯ ಶಿಕ್ಷಣ ಪಡೆದಿರುವವರಿಗಿಂತ ವಿಶ್ವವಿದ್ಯಾಲಯದ ಶಿಕ್ಷಣ ಪಡೆದಿರುವವರೇ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ ಎಂದು ತೋರುವ ಮಾಹಿತಿಯನ್ನೂ ಯುವಜನರಿಗೆ ತೋರಿಸುತ್ತಿರಬಹುದು. ತಮ್ಮ ಜೀವನವನ್ನು ಪ್ರಭಾವಿಸುವಂಥ ನಿರ್ಧಾರಗಳನ್ನು ಮಾಡುವಾಗ ಯುವಜನರಿಗೆ ಉನ್ನತ ಶಿಕ್ಷಣ ಮಾಡಿದರೆ ಚೆನ್ನಾಗಿರುತ್ತದೆ ಎಂದನಿಸಬಹುದು. ಆದರೆ ಅವರು ಮತ್ತು ಅವರ ಹೆತ್ತವರು ಏನನ್ನು ಮನಸ್ಸಲ್ಲಿಡಬೇಕು?

10. ವೈಯಕ್ತಿಕ ವಿಷಯಗಳಲ್ಲಿ ಆಯ್ಕೆ ಮಾಡಲಿಕ್ಕಿರುವಾಗ ನಾವು ಏನನ್ನು ಮನಸ್ಸಲ್ಲಿಡಬೇಕು?

10 ‘ಇದೆಲ್ಲ ನಮ್ಮ ಸ್ವಂತ ವಿಚಾರ, ನಮ್ಮ ಮನಸ್ಸಾಕ್ಷಿ ಚುಚ್ಚುತ್ತಿಲ್ಲ ಅಂದಮೇಲೆ ನಮಗೆ ಇಷ್ಟವಿರುವುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ’ ಎಂದು ಕೆಲವರಿಗೆ ಅನಿಸಬಹುದು. ಅವರು ಪೌಲನು ಹೇಳಿದಂತೆ, “ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಯಿಂದ ನನ್ನ ಸ್ವಾತಂತ್ರ್ಯಕ್ಕೆ ಏಕೆ ತೀರ್ಪಾಗಬೇಕು?” ಎಂದು ಸಹ ಯೋಚಿಸಬಹುದು. (1 ಕೊರಿಂ. 10:29) ಶಿಕ್ಷಣ ಮತ್ತು ಜೀವನವೃತ್ತಿಯ ವಿಷಯದಲ್ಲಿ ನಮ್ಮ ಸ್ವಂತ ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯ ನಮಗಿದ್ದರೂ ಆ ಸ್ವಾತಂತ್ರ್ಯಕ್ಕೆ ಮಿತಿಗಳಿವೆ ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳಿಂದಾಗುವ ಪರಿಣಾಮಗಳನ್ನು ನಾವು ಎದುರಿಸಬೇಕು ಅನ್ನುವುದನ್ನು ಮರೆಯಬಾರದು. ಹಾಗಾಗಿಯೇ ಪೌಲನು “ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಎಲ್ಲವೂ ಭಕ್ತಿವೃದ್ಧಿಮಾಡುವುದಿಲ್ಲ” ಎಂದು ಹೇಳಿದನು. (1 ಕೊರಿಂ. 10:23) ವೈಯಕ್ತಿಕ ವಿಷಯಗಳಲ್ಲಿ ನಮಗೆ ಇಷ್ಟವಾಗುವುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿದ್ದರೂ, ನಮಗೇನು ಬೇಕು ಅನ್ನುವುದು ಅತಿ ಪ್ರಾಮುಖ್ಯವಾದ ವಿಷಯವಲ್ಲ.

ನಮ್ಮ ಸ್ವಾತಂತ್ರ್ಯವನ್ನು ಯೆಹೋವನ ಸೇವೆ ಮಾಡಲು ಉಪಯೋಗಿಸೋಣ

11. ಯೆಹೋವನು ನಮಗೆ ಯಾವ ಕಾರಣಕ್ಕಾಗಿ ಸ್ವಾತಂತ್ರ್ಯ ಕೊಟ್ಟಿದ್ದಾನೆ?

11 ನಮಗಿರುವ ಸ್ವಾತಂತ್ರ್ಯವನ್ನು ತಪ್ಪಾಗಿ ಉಪಯೋಗಿಸಬಾರದು ಎಂದು ಎಚ್ಚರಿಸಿದ ಪೇತ್ರನು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕೆಂದು ಹೇಳಿದನು. ಅಂದರೆ ನಾವು ‘ದೇವರ ದಾಸರಾಗಿರಬೇಕು’ ಎಂದು ಹೇಳಿದನು. ನಾವು ಜೀವನಪೂರ್ತಿ ತನ್ನ ಸೇವೆ ಮಾಡಬೇಕೆಂದು ಯೆಹೋವನು ಯೇಸುವಿನ ಮೂಲಕ ಪಾಪ ಮತ್ತು ಮರಣದಿಂದ ನಮ್ಮನ್ನು ಬಿಡಿಸಿದ್ದಾನೆ.

12. ನೋಹ ಮತ್ತವನ ಕುಟುಂಬದವರು ನಮಗೆ ಯಾವ ಮಾದರಿ ಇಟ್ಟಿದ್ದಾರೆ?

12 ಯೆಹೋವನ ಸೇವೆಗಾಗಿ ನಮ್ಮ ಸಮಯ ಮತ್ತು ಶಕ್ತಿಯನ್ನು ಬಳಸುವ ಮೂಲಕ ನಮಗಿರುವ ಸ್ವಾತಂತ್ರ್ಯವನ್ನು ನಾವು ಉತ್ತಮವಾಗಿ ಉಪಯೋಗಿಸಬೇಕು. ಹೀಗೆ ಮಾಡಿದರೆ ಲೌಕಿಕ ಗುರಿಗಳು ಮತ್ತು ವೈಯಕ್ತಿಕ ಬಯಕೆಗಳು ನಮ್ಮ ಜೀವನದಲ್ಲಿ ಪ್ರಾಮುಖ್ಯವಾದ ವಿಷಯವಾಗಿರುವುದಿಲ್ಲ. (ಗಲಾ. 5:16) ನೋಹ ಮತ್ತವನ ಕುಟುಂಬದವರು ಏನು ಮಾಡಿದರೆಂದು ಗಮನಿಸಿ. ಅವರು ಹಿಂಸಾತ್ಮಕವಾದ ಮತ್ತು ಅನೈತಿಕತೆಯಿಂದ ತುಂಬಿದ್ದ ಲೋಕದಲ್ಲಿ ಜೀವಿಸಿದರು. ಆದರೆ ಅವರು ಸುತ್ತಮುತ್ತ ಇದ್ದ ಜನರು ಏನು ಬಯಸುತ್ತಾರೆ, ಏನು ಮಾಡುತ್ತಿದ್ದಾರೆ ಅನ್ನುವುದರ ಕಡೆಗೆ ತಿರುಗಿಯೂ ನೋಡಲಿಲ್ಲ. ಯೆಹೋವನು ಕೊಟ್ಟಂಥ ಕೆಲಸವನ್ನು ಮಾಡುವುದರಲ್ಲಿ ಮಗ್ನರಾಗಿದ್ದರು. ನಾವೆಯನ್ನು ಕಟ್ಟಿದರು, ತಮಗೋಸ್ಕರ ಮತ್ತು ಪ್ರಾಣಿಗಳಿಗೋಸ್ಕರ ಆಹಾರವನ್ನು ಶೇಖರಿಸಿಟ್ಟರು ಹಾಗೂ ಜನರಿಗೆ ಜಲಪ್ರಳಯದ ಬಗ್ಗೆ ಎಚ್ಚರಿಕೆಯನ್ನೂ ಕೊಟ್ಟರು. “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು” ಎಂದು ಬೈಬಲ್‌ ಹೇಳುತ್ತದೆ. (ಆದಿ. 6:22) ಫಲಿತಾಂಶ? ಆ ಲೋಕ ನಾಶವಾದಾಗ ನೋಹ ಮತ್ತವನ ಕುಟುಂಬ ಮಾತ್ರ ಪಾರಾಯಿತು.—ಇಬ್ರಿ. 11:7.

13. ಯೆಹೋವನು ನಮಗೆ ಯಾವ ಆಜ್ಞೆ ಕೊಟ್ಟಿದ್ದಾನೆ?

13 ಇಂದು ಯೆಹೋವ ದೇವರು ನಮಗೆ ಯಾವ ಕೆಲಸ ಕೊಟ್ಟಿದ್ದಾನೆ? ಆತನು ಯೇಸು ಕ್ರಿಸ್ತನಿಗೆ ಸಾರಬೇಕೆಂಬ ಆಜ್ಞೆ ಕೊಟ್ಟಿದ್ದನು ಮತ್ತು ಯೇಸು ಈ ಕೆಲಸವನ್ನು ನಮಗೆ ವಹಿಸಿಕೊಟ್ಟಿದ್ದಾನೆ. (ಲೂಕ 4:18, 19 ಓದಿ.) ಇಂದು ಸೈತಾನನು ಜನರ ಮನಸ್ಸನ್ನು ಕುರುಡುಮಾಡಿದ್ದಾನೆ. ಹಾಗಾಗಿಯೇ ಜನರಿಗೆ ತಾವು ಸುಳ್ಳು ಧರ್ಮಕ್ಕೆ, ಹಣ-ಐಶ್ವರ್ಯಕ್ಕೆ ಮತ್ತು ರಾಜಕೀಯ ವ್ಯವಸ್ಥೆಗೆ ದಾಸರಾಗಿದ್ದೇವೆ ಅನ್ನುವುದು ಅರ್ಥ ಆಗುತ್ತಿಲ್ಲ. (2 ಕೊರಿಂ. 4:4) ಅಂಥವರಿಗೆ ಸ್ವಾತಂತ್ರ್ಯದ ದೇವರಾಗಿರುವ ಯೆಹೋವನ ಬಗ್ಗೆ ಕಲಿಸಲು ಮತ್ತು ಆತನನ್ನು ಆರಾಧಿಸಲು ಸಹಾಯ ಮಾಡುವ ಸುಯೋಗ ಯೇಸುವಿನಂತೆ ನಮಗೂ ಇದೆ. (ಮತ್ತಾ. 28:19, 20) ಆದರೆ ಬೇರೆಯವರಿಗೆ ಸುವಾರ್ತೆ ಸಾರುವುದು ಅಷ್ಟು ಸುಲಭವಲ್ಲ. ಕೆಲವೊಂದು ಸ್ಥಳಗಳಲ್ಲಿ ಜನರಿಗೆ ದೇವರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವುದಿಲ್ಲ ಮತ್ತು ನಾವು ಸುವಾರ್ತೆ ಸಾರಿದಾಗ ಕೆಲವರಿಗೆ ಕೋಪವೂ ಬರಬಹುದು. ಆದರೂ ಯೆಹೋವನು ನಮಗೆ ಸಾರಬೇಕೆಂದು ಆಜ್ಞೆಯನ್ನು ಕೊಟ್ಟಿರುವುದರಿಂದ ನಮ್ಮನ್ನು ನಾವೇ ಹೀಗೆ ಕೇಳಿಕೊಳ್ಳೋಣ: ‘ನಾನು ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ನನ್ನ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಲಿ?’

14, 15. ಯೆಹೋವನ ಜನರಲ್ಲಿ ಅನೇಕರು ಏನು ಮಾಡಲು ನಿರ್ಣಯಿಸಿದ್ದಾರೆ? (ಲೇಖನದ ಆರಂಭದ ಚಿತ್ರ ನೋಡಿ.)

14 ಯೆಹೋವನ ಜನರಲ್ಲಿ ಅನೇಕರು ಈ ವ್ಯವಸ್ಥೆಯ ಅಂತ್ಯ ತುಂಬ ಹತ್ತಿರದಲ್ಲಿದೆ ಎಂದು ಮನಗಂಡಿದ್ದಾರೆ ಮತ್ತು ತಮ್ಮ ಜೀವನವನ್ನು ಸರಳೀಕರಿಸಿ ಪಯನೀಯರ್‌ ಸೇವೆ ಆರಂಭಿಸಿದ್ದಾರೆ. ಇದು ಉತ್ತೇಜನ ಕೊಡುವಂಥ ವಿಷಯವಾಗಿದೆ. (1 ಕೊರಿಂ. 9:19, 23) ಕೆಲವರು ತಾವಿರುವ ಸ್ಥಳಗಳಲ್ಲಿಯೇ ಪಯನೀಯರ್‌ ಸೇವೆ ಮಾಡಿದರೆ, ಇನ್ನು ಕೆಲವು ಪಯನೀಯರರು ಸಹಾಯದ ಅಗತ್ಯವಿರುವ ಸಭೆಗಳಿಗೆ ಸ್ಥಳಾಂತರಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ 2,50,000ಕ್ಕಿಂತ ಹೆಚ್ಚು ಪ್ರಚಾರಕರು ಪಯನೀಯರ್‌ ಸೇವೆ ಆರಂಭಿಸಿದ್ದಾರೆ ಮತ್ತು ಈಗ 11,00,000ದಷ್ಟು ರೆಗ್ಯುಲರ್‌ ಪಯನೀಯರರು ಇದ್ದಾರೆ. ಅವರು ಯೆಹೋವನ ಸೇವೆಗಾಗಿ ತಮ್ಮ ಸ್ವಾತಂತ್ರ್ಯವನ್ನು ಈ ರೀತಿಯಲ್ಲಿ ಉಪಯೋಗಿಸುತ್ತಿರುವುದನ್ನು ನೋಡುವಾಗ ತುಂಬ ಸಂತೋಷವಾಗುತ್ತದೆ!—ಕೀರ್ತ. 110:3.

15 ತಮ್ಮ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ಅವರಿಗೆ ಯಾವುದು ಸಹಾಯ ಮಾಡಿತು? ಜಾನ್‌ ಮತ್ತು ಜೂಡಿತ್‌ ಉದಾಹರಣೆ ಪರಿಗಣಿಸಿ. 1977​ರಲ್ಲಿ ಪಯನೀಯರ್‌ ಸೇವಾ ಶಾಲೆ ಆರಂಭವಾದಾಗ ಅದಕ್ಕೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ಉತ್ತೇಜಿಸಲಾಯಿತು ಎಂದವರು ವಿವರಿಸುತ್ತಾರೆ. ಈ ಗುರಿಯನ್ನು ಮುಟ್ಟಲು ಜಾನ್‌ ಮತ್ತು ಜೂಡಿತ್‌ ತಮ್ಮ ಜೀವನವನ್ನು ಸರಳವಾಗಿ ಇಡಬೇಕಿತ್ತು. ಈ ಕಾರಣದಿಂದ ಜಾನ್‌ ತಮ್ಮ ಉದ್ಯೋಗವನ್ನು ಆಗಾಗ ಬದಲಾಯಿಸಿದರು. ಸ್ವಲ್ಪ ಸಮಯದ ನಂತರ ಅವರಿಬ್ಬರು ಸುವಾರ್ತೆ ಸಾರಲಿಕ್ಕಾಗಿ ಬೇರೆ ದೇಶಕ್ಕೆ ಹೋದರು. ಹೊಸ ಭಾಷೆಯನ್ನು ಕಲಿಯಲು ಮತ್ತು ಹೊಸ ಸಂಸ್ಕೃತಿ, ಹವಾಮಾನಕ್ಕೆ ಹೊಂದಿಕೊಳ್ಳುವಂಥ ಕೆಲವೊಂದು ಸವಾಲುಗಳನ್ನು ಜಯಿಸಲು ಅವರಿಗೆ ಯಾವುದು ಸಹಾಯ ಮಾಡಿತು? ಅವರು ಯೆಹೋವನಿಗೆ ಪ್ರಾರ್ಥನೆ ಮಾಡಿದರು ಮತ್ತು ಸಹಾಯಕ್ಕಾಗಿ ಆತನನ್ನು ಅವಲಂಬಿಸಿದ್ದರು. ಈ ದಂಪತಿ ಕಳೆದ 30 ವರ್ಷಗಳಿಂದ ಅನೇಕ ದೇಶಗಳಲ್ಲಿ ಸೇವೆ ಮಾಡಿದ್ದಾರೆ. ಈ ಎಲ್ಲ ವರ್ಷಗಳಲ್ಲಿ ಯೆಹೋವನನ್ನು ಈ ರೀತಿ ಸೇವೆ ಮಾಡಿದ್ದರ ಬಗ್ಗೆ ಅವರಿಗೆ ಹೇಗನಿಸುತ್ತದೆ? ಜಾನ್‌ ಹೇಳುವುದು: “ನಾನು ಹಿಂದೆಂದೂ ಮಾಡಿರದಂಥ ಒಂದು ಅತ್ಯುತ್ತಮವಾದ ಕೆಲಸದಲ್ಲಿ ಮುಳುಗಿಹೋಗಿದ್ದೆ ಅಂತ ಅನಿಸುತ್ತದೆ. ಯೆಹೋವನು ಇನ್ನೂ ಹೆಚ್ಚು ನೈಜವಾಗಿದ್ದಾನೆ, ಒಬ್ಬ ಪ್ರೀತಿಯ ತಂದೆಯಂತೆ ಆಗಿದ್ದಾನೆ. ‘ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು’ ಎಂಬ ಯಾಕೋಬ 4:8​ರಲ್ಲಿರುವ ಮಾತನ್ನು ನಾನು ಈಗ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ನನ್ನ ಜೀವನಕ್ಕೆ ಒಂದು ಉದ್ದೇಶ ಇರಬೇಕು, ಅದರಿಂದ ನನಗೆ ಸಂತೃಪ್ತಿ ಸಿಗಬೇಕು ಅಂತ ನೆನಸುತ್ತಿದ್ದೆ. ಅದೀಗ ನನಗೆ ಸಿಕ್ಕಿದೆ.”

16. ಸಾವಿರಾರು ಮಂದಿ ತಮ್ಮ ಸ್ವಾತಂತ್ರ್ಯವನ್ನು ಹೇಗೆ ಬುದ್ಧಿವಂತಿಕೆಯಿಂದ ಉಪಯೋಗಿಸಿದರು?

16 ಜಾನ್‌ ಮತ್ತು ಜೂಡಿತ್‌ರಂತೆ ಕೆಲವರು ತುಂಬ ವರ್ಷಗಳು ಪಯನೀಯರ್‌ ಸೇವೆ ಮಾಡುತ್ತಾರೆ. ಇನ್ನು ಕೆಲವರು ಜೀವನದಲ್ಲಿ ತಾವು ಎದುರಿಸುವ ಸನ್ನಿವೇಶಗಳಿಂದಾಗಿ ಸ್ವಲ್ಪ ಸಮಯ ಮಾತ್ರ ಪಯನೀಯರ್‌ ಸೇವೆ ಮಾಡಲು ಸಾಧ್ಯವಾಗುತ್ತದೆ. ಲೋಕವ್ಯಾಪಕವಾಗಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕೆಲಸದಲ್ಲಿ ಅನೇಕ ಸಹೋದರ ಸಹೋದರಿಯರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಉದಾಹರಣೆಗೆ, ಅಮೆರಿಕದ ನ್ಯೂಯಾರ್ಕ್‌ ನಗರದ ವಾರ್ವಿಕ್‌ನಲ್ಲಿ ಮುಖ್ಯ ಕಾರ್ಯಾಲಯವನ್ನು ನಿರ್ಮಾಣ ಮಾಡುವ ಕೆಲಸಕ್ಕಾಗಿ ಸುಮಾರು 27,000 ಸಹೋದರ ಸಹೋದರಿಯರು ಮುಂದೆ ಬಂದರು. ಕೆಲವರು ಎರಡು ವಾರಗಳು, ಇನ್ನು ಕೆಲವರು ಕೆಲವು ತಿಂಗಳುಗಳು ಮತ್ತು ಇನ್ನು ಕೆಲವರು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿದರು. ಅವರಲ್ಲಿ ಅನೇಕ ಸಹೋದರ ಸಹೋದರಿಯರು ವಾರ್ವಿಕ್‌ನಲ್ಲಿ ಕೆಲಸ ಮಾಡಲು ಅನೇಕ ತ್ಯಾಗಗಳನ್ನು ಮಾಡಿದರು. ಸ್ವಾತಂತ್ರ್ಯದ ದೇವರಾಗಿರುವ ಯೆಹೋವನನ್ನು ಸ್ತುತಿಸುವುದರಲ್ಲಿ ಮತ್ತು ಗೌರವಿಸುವುದರಲ್ಲಿ ತಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುತ್ತಿರುವ ಇವರು ಉತ್ತಮ ಉದಾಹರಣೆಯಾಗಿದ್ದಾರೆ.

17. ನಮಗಿರುವ ಸ್ವಾತಂತ್ರ್ಯವನ್ನು ನಾವು ಈಗ ಬುದ್ಧಿವಂತಿಕೆಯಿಂದ ಉಪಯೋಗಿಸಿದರೆ ಏನನ್ನು ಎದುರುನೋಡಬಹುದು?

17 ಯೆಹೋವ ದೇವರ ಬಗ್ಗೆ ತಿಳಿದುಕೊಂಡಿರುವುದಕ್ಕೆ ಮತ್ತು ಆತನನ್ನು ಆರಾಧಿಸುವುದರಿಂದ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ನಾವು ತುಂಬ ಕೃತಜ್ಞರಾಗಿರಬೇಕು. ನಾವು ಯಾವ ಆಯ್ಕೆ ಮಾಡುತ್ತೇವೋ ಅದರಿಂದ ನಮಗಿರುವ ಈ ಸ್ವಾತಂತ್ರ್ಯ ತುಂಬ ಅಮೂಲ್ಯ ಎಂದು ತೋರಿಸೋಣ. ಆದರೆ ಈ ಸ್ವಾತಂತ್ರ್ಯವನ್ನು ತಪ್ಪಾಗಿ ಉಪಯೋಗಿಸುವ ಬದಲು ನಮ್ಮಿಂದಾದಷ್ಟು ಯೆಹೋವನ ಸೇವೆ ಮಾಡಲು ಉಪಯೋಗಿಸೋಣ. ಆಗ ಮಾತ್ರ “ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಹೊಂದುವುದು ಎಂದು ಯೆಹೋವನು ಕೊಟ್ಟಿರುವ ವಾಗ್ದಾನದ ನೆರವೇರಿಕೆಗಾಗಿ ನಾವು ಸಂತೋಷದಿಂದ ಎದುರುನೋಡಬಹುದು.—ರೋಮ. 8:21.