ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೇಮಿತ ಪುರುಷರೇ—ತಿಮೊಥೆಯನಿಂದ ಕಲಿಯಿರಿ

ನೇಮಿತ ಪುರುಷರೇ—ತಿಮೊಥೆಯನಿಂದ ಕಲಿಯಿರಿ

ಕಳೆದ ವರ್ಷ ಲೋಕವ್ಯಾಪಕವಾಗಿ ಸಾವಿರಾರು ಸಹೋದರರು ಹಿರಿಯರಾಗಿ, ಸಹಾಯಕ ಸೇವಕರಾಗಿ ನೇಮಕಗೊಂಡರು. ಇಂಥ ಪ್ರಿಯ ಸಹೋದರರಲ್ಲಿ ನೀವೂ ಒಬ್ಬರಾಗಿದ್ದರೆ, ನಿಮಗೆ ಈ ಸುಯೋಗ ಸಿಕ್ಕಿದ್ದರಿಂದ ತುಂಬ ಸಂತೋಷವಾಗಿರುತ್ತದೆ.

ಆದರೂ ಒಳಗೊಳಗೆ ಸ್ವಲ್ಪ ಭಯನೂ ಇರಬಹುದು. ಜೇಸನ್‌ ಎಂಬ ಯುವ ಹಿರಿಯ ಹೇಳುವುದು: “ಹಿರಿಯನಾದಾಗ ‘ಈ ಎಲ್ಲಾ ಜವಾಬ್ದಾರಿಗಳನ್ನು ಹೇಗಪ್ಪಾ ನಿಭಾಯಿಸೋದು’ ಅಂತ ಭಯ ಆಯಿತು.” ಯೆಹೋವನಿಂದ ಹೊಸ ನೇಮಕಗಳು ಸಿಕ್ಕಿದಾಗ ಮೋಶೆಗೆ ಮತ್ತು ಯೆರೆಮೀಯನಿಗೆ ಸಹ ತಾವು ಅಸಮರ್ಥರು ಎಂದು ಅನಿಸಿತ್ತು. (ವಿಮೋ. 4:10; ಯೆರೆ. 1:6) ನಿಮಗೂ ಹೀಗನಿಸಿದರೆ ಆ ಭಾವನೆ ಬಿಟ್ಟು ಪ್ರಗತಿ ಮಾಡುತ್ತಾ ಹೋಗುವುದು ಹೇಗೆ? ತಿಮೊಥೆಯನ ಉದಾಹರಣೆ ನೋಡಿ.—ಅ. ಕಾ. 16:1-3.

ತಿಮೊಥೆಯನ ಮಾದರಿಯನ್ನು ಅನುಕರಿಸಿ

ಅಪೊಸ್ತಲ ಪೌಲನು ತಿಮೊಥೆಯನನ್ನು ತನ್ನ ಸಂಚರಣ ಸಂಗಡಿಗನಾಗಲು ಕರೆದಾಗ ತಿಮೊಥೆಯನಿಗೆ ಹೆಚ್ಚುಕಡಿಮೆ 20 ವಯಸ್ಸು ಆಗಿರಬಹುದು. ಯುವ ತಿಮೊಥೆಯನಿಗೆ ಆರಂಭದಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದಿರಬಹುದು ಮತ್ತು ತನ್ನ ಈ ಹೊಸ ನೇಮಕದಲ್ಲಿ ಏನು ಮಾಡಬೇಕಾಗಿ ಬಂದರೂ ಸ್ವಲ್ಪ ಹಿಂಜರಿದಿರಬಹುದು. (1 ತಿಮೊ. 4:11, 12; 2 ತಿಮೊ. 1:1, 2, 7) ಆದರೆ ಒಂದು ದಶಕದ ನಂತರ ಪೌಲನು ಫಿಲಿಪ್ಪಿಯಲ್ಲಿದ್ದ ಸಭೆಗೆ ಹೀಗೆ ಬರೆದನು: “ಕರ್ತನಾದ ಯೇಸುವಿನ ಚಿತ್ತವಿರುವುದಾದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ; . . . ಅವನ ಹಾಗೆ . . . ಯಥಾರ್ಥವಾಗಿ ಚಿಂತಿಸುವ ಮನೋಭಾವವನ್ನು ತೋರಿಸುವವರು ನನ್ನ ಬಳಿ ಬೇರೆ ಯಾರೂ ಇಲ್ಲ.”—ಫಿಲಿ. 2:19, 20.

ತಿಮೊಥೆಯನು ಇಷ್ಟು ಒಳ್ಳೇ ಹಿರಿಯನಾಗಲು ಯಾವುದು ಸಹಾಯ ಮಾಡಿತು? ಅವನ ಮಾದರಿಯಿಂದ ನೀವು ಕಲಿಯಬಹುದಾದ ಆರು ಪಾಠಗಳನ್ನು ಪರಿಗಣಿಸಿರಿ.

1. ಅವನಿಗೆ ಸಹೋದರರ ಮೇಲೆ ಕಾಳಜಿ ಇತ್ತು. ಪೌಲನು ಫಿಲಿಪ್ಪಿಯಲ್ಲಿದ್ದ ಸಹೋದರರಿಗೆ ತಿಮೊಥೆಯನ ಬಗ್ಗೆ ಹೀಗಂದನು: ‘ಅವನು ನಿಮಗೆ ಸಂಬಂಧಿಸಿದ ವಿಷಯಗಳ ಕುರಿತು ಯಥಾರ್ಥವಾಗಿ ಚಿಂತಿಸುತ್ತಾನೆ.’ (ಫಿಲಿ. 2:20) ಹೌದು, ತಿಮೊಥೆಯನಿಗೆ ಸಹೋದರರ ಮೇಲೆ ಕಾಳಜಿ ಇತ್ತು. ಅವರು ಆಧ್ಯಾತ್ಮಿಕವಾಗಿ ಚೆನ್ನಾಗಿರಬೇಕೆಂದು ಅವನು ಬಯಸಿದನು. ಅವರಿಗೆ ಸಹಾಯ ಮಾಡಲು ಸಿದ್ಧನಿದ್ದನು.

ಒಬ್ಬ ಬಸ್‌ ಚಾಲಕನ ಉದಾಹರಣೆ ತೆಗೆದುಕೊಳ್ಳಿ. ಒಂದುವೇಳೆ ಚಾಲಕನು ಪ್ರಯಾಣಿಕರನ್ನು ಬಸ್ಸಿನಲ್ಲಿ ಹತ್ತಿಸಿಕೊಳ್ಳುವುದಕ್ಕಿಂತ ಪ್ರತಿ ಬಸ್‌ ನಿಲ್ದಾಣಕ್ಕೆ ಸಮಯಕ್ಕೆ ಹೋಗಿ ಮುಟ್ಟುವುದೇ ಮುಖ್ಯ ಎಂದು ನೆನಸುವುದಾದರೆ ಏನಾಗುವುದು? 20 ವರ್ಷಗಳಿಂದ ಹಿರಿಯರಾಗಿ ಉತ್ತಮ ಸೇವೆ ಮಾಡಿರುವ ವಿಲ್ಯಮ್‌ ಎಂಬ ಸಹೋದರ ಹೊಸದಾಗಿ ನೇಮಕಗೊಳ್ಳುವ ಪುರುಷರಿಗೆ ಹೀಗೆ ಹೇಳುತ್ತಾರೆ: “ಸಹೋದರರ ಮೇಲೆ ಪ್ರೀತಿ ಇರಲಿ. ಅವರ ಅಗತ್ಯಗಳೇನು ಅನ್ನುವುದರ ಮೇಲೆ ನಿಮ್ಮ ಗಮನ ಇರಲಿ. ಬರೀ ರೂಲ್ಸ್‌ ಬಗ್ಗೆ ಮಾತಾಡಬೇಡಿ.”

2. ಅವನು ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಟ್ಟನು. ತಿಮೊಥೆಯನಲ್ಲಿ ಮತ್ತು ಬೇರೆಯವರಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತಾ ಪೌಲನು, “ಬೇರೆಲ್ಲರೂ ಕ್ರಿಸ್ತ ಯೇಸುವಿನ ಅಭಿರುಚಿಗಳ ಮೇಲೆ ಅಲ್ಲ, ತಮ್ಮ ಸ್ವಂತ ಅಭಿರುಚಿಗಳ ಮೇಲೆ ಮನಸ್ಸಿಟ್ಟವರಾಗಿದ್ದಾರೆ” ಎಂದನು. (ಫಿಲಿ. 2:21) ಪೌಲನು ಈ ವಿಷಯವನ್ನು ರೋಮ್‌ನಲ್ಲಿದ್ದಾಗ ಬರೆದನು. ಅಲ್ಲಿದ್ದ ಸಹೋದರರು ವೈಯಕ್ತಿಕ ವಿಚಾರಗಳಲ್ಲೇ ಮುಳುಗಿಹೋಗಿದ್ದರು. ಆಧ್ಯಾತ್ಮಿಕ ವಿಷಯಗಳಲ್ಲಿ ತಲ್ಲೀನರಾಗುತ್ತಿರಲಿಲ್ಲ. ಆದರೆ ತಿಮೊಥೆಯನು ಸುವಾರ್ತೆಗೋಸ್ಕರ ಏನಾದರೂ ಮಾಡುವ ಅವಕಾಶ ಸಿಕ್ಕಿದಾಗ ಯೆಶಾಯನಂತೆ “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂಬ ಮನೋಭಾವ ತೋರಿಸುತ್ತಿದ್ದನು.—ಯೆಶಾ. 6:8.

ವೈಯಕ್ತಿಕ ಜವಾಬ್ದಾರಿಗಳನ್ನೂ ಆಧ್ಯಾತ್ಮಿಕ ಜವಾಬ್ದಾರಿಗಳನ್ನೂ ನೀವು ಹೇಗೆ ಒಟ್ಟಿಗೆ ನಿಭಾಯಿಸಬಹುದು? ಮೊದಲು, ಯಾವುದಕ್ಕೆ ಆದ್ಯತೆ ಕೊಡಬೇಕೆಂದು ತೀರ್ಮಾನಿಸಿ. ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’ ಎಂದು ಪೌಲನು ಉತ್ತೇಜಿಸುತ್ತಾನೆ. (ಫಿಲಿ. 1:10) ಯೆಹೋವನು ಯಾವುದಕ್ಕೆ ಮೊದಲ ಸ್ಥಾನ ಕೊಡುತ್ತಾನೋ ಅದೇ ವಿಷಯಕ್ಕೆ ನೀವೂ ಮೊದಲ ಸ್ಥಾನ ಕೊಡಿ. ಎರಡನೇದು, ಸರಳೀಕರಿಸಿ. ನಿಮ್ಮ ಸಮಯ, ಶಕ್ತಿಯನ್ನು ಪೋಲು ಮಾಡುವಂಥ ವಿಷಯಗಳನ್ನು ಬಿಟ್ಟುಬಿಡಿ. “ಯೌವನ ಸಹಜವಾದ ಇಚ್ಛೆಗಳನ್ನು ಬಿಟ್ಟು ಓಡಿಹೋಗು; . . . ನೀತಿ, ನಂಬಿಕೆ, ಪ್ರೀತಿ ಮತ್ತು ಶಾಂತಿ ಇವುಗಳನ್ನು ಬೆನ್ನಟ್ಟು” ಎಂದು ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸಿದನು.—2 ತಿಮೊ. 2:22.

3. ಅವನು ಪವಿತ್ರ ಸೇವೆಯಲ್ಲಿ ತುಂಬ ಶ್ರಮ ಹಾಕಿದನು. ಪೌಲನು ಫಿಲಿಪ್ಪಿಯಲ್ಲಿದ್ದವರಿಗೆ, “ತಿಮೊಥೆಯನು ತನ್ನ ಕುರಿತು ಕೊಟ್ಟ ರುಜುವಾತು ನಿಮಗೆ ಗೊತ್ತುಂಟು; ಮಗನು ತಂದೆಯೊಂದಿಗೆ ಹೇಗೋ ಹಾಗೆಯೇ ಅವನು ಸುವಾರ್ತೆಯ ಅಭಿವೃದ್ಧಿಗಾಗಿ ನನ್ನೊಂದಿಗೆ ಕಷ್ಟಪಟ್ಟು ಕೆಲಸಮಾಡಿದನು” ಎಂದು ಜ್ಞಾಪಿಸಿದನು. (ಫಿಲಿ. 2:22) ತಿಮೊಥೆಯನು ಸೋಮಾರಿ ಆಗಿರಲಿಲ್ಲ. ಪೌಲನ ಜೊತೆ ತುಂಬ ಕಷ್ಟಪಟ್ಟು ಕೆಲಸ ಮಾಡಿದ್ದನು. ಇದರಿಂದ ಅವರ ಮಧ್ಯೆ ಆಪ್ತ ಸಂಬಂಧ ಬೆಳೆಯಿತು.

ದೇವರ ಸಂಘಟನೆಯಲ್ಲಿ ಇಂದು ತುಂಬ ಕೆಲಸ ಇದೆ. ಈ ಕೆಲಸದಲ್ಲಿ ನಿಮಗೆ ನಿಜ ಸಂತೃಪ್ತಿ ಸಿಗುತ್ತದೆ ಮತ್ತು ನೀವು ಸಭೆಯವರೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ “ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವ” ಗುರಿ ನಿಮ್ಮ ಕಣ್ಮುಂದೆ ಇರಲಿ.—1 ಕೊರಿಂ. 15:58.

4. ಅವನು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕಿದನು. ಪೌಲನು ತಿಮೊಥೆಯನಿಗೆ, “ನೀನಾದರೋ ನನ್ನ ಬೋಧನೆಯನ್ನೂ ನನ್ನ ಜೀವನ ರೀತಿಯನ್ನೂ ನನ್ನ ಉದ್ದೇಶವನ್ನೂ ನನ್ನ ನಂಬಿಕೆಯನ್ನೂ ನನ್ನ ದೀರ್ಘ ಸಹನೆಯನ್ನೂ ನನ್ನ ಪ್ರೀತಿಯನ್ನೂ ನನ್ನ ತಾಳ್ಮೆಯನ್ನೂ ನಿಕಟವಾಗಿ ಅನುಸರಿಸಿದ್ದೀ” ಎಂದನು. (2 ತಿಮೊ. 3:10) ತಿಮೊಥೆಯನು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕಿದ್ದರಿಂದ ಹೆಚ್ಚಿನ ಜವಾಬ್ದಾರಿಗಳನ್ನು ಪಡೆಯಲು ಅರ್ಹನಾದನು.—1 ಕೊರಿಂ. 4:17.

ನಿಮಗೆ ಒಬ್ಬ ಆಧ್ಯಾತ್ಮಿಕ ಮಾರ್ಗದರ್ಶಿ ಇದ್ದಾರಾ? ಇಲ್ಲವಾದರೆ ನೀವ್ಯಾಕೆ ಒಬ್ಬರನ್ನು ಆರಿಸಿಕೊಳ್ಳಬಾರದು? ಅನೇಕ ವರ್ಷಗಳಿಂದ ಹಿರಿಯನಾಗಿರುವ ಟಾಮ್‌ ಹೇಳುವುದು: “ತುಂಬ ಅನುಭವ ಇದ್ದ ಒಬ್ಬ ಹಿರಿಯ ನನ್ನಲ್ಲಿ ಆಸಕ್ತಿ ತೋರಿಸುತ್ತಾ ಒಳ್ಳೆ ತರಬೇತಿ ಕೊಟ್ಟರು. ನಾನು ಯಾವಾಗಲೂ ಅವರ ಸಲಹೆ ಪಡೆದು ಅದರಂತೆ ಮಾಡುತ್ತಿದ್ದೆ. ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ಬೇಗ ಬೆಳೆಯಿತು.”

5. ತನ್ನನ್ನೇ ತರಬೇತಿಗೊಳಿಸುತ್ತಾ ಇದ್ದನು. ಪೌಲನು ತಿಮೊಥೆಯನಿಗೆ, “ದೇವಭಕ್ತಿಯನ್ನು ನಿನ್ನ ಗುರಿಯನ್ನಾಗಿ ಮಾಡಿಕೊಂಡು ನಿನ್ನನ್ನು ತರಬೇತುಗೊಳಿಸಿಕೊ” ಎಂದು ಪ್ರೋತ್ಸಾಹಿಸಿದನು. (1 ತಿಮೊ. 4:7) ಒಬ್ಬ ಕ್ರೀಡಾಪಟುವಿಗೆ ಒಬ್ಬ ಕೋಚ್‌ ಇರಬಹುದು. ಆದರೆ ಆ ಪಟು ಸ್ವತಃ ತರಬೇತಿ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಬೇಕು. ಪೌಲನು ತಿಮೊಥೆಯನಿಗೆ ಈ ಉತ್ತೇಜನ ಕೊಟ್ಟನು: “ಸಾರ್ವಜನಿಕ ವಾಚನದಲ್ಲಿಯೂ ಬುದ್ಧಿಹೇಳುವುದರಲ್ಲಿಯೂ ಬೋಧಿಸುವುದರಲ್ಲಿಯೂ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು. . . . ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:13-15.

ನೀವು ಸಹ ನಿಮ್ಮ ಸಾಮರ್ಥ್ಯಗಳನ್ನು ಉತ್ತಮಗೊಳಿಸುತ್ತಾ ಇರಬೇಕು. ನಿಮ್ಮ ಆಧ್ಯಾತ್ಮಿಕತೆ ನಿಂತ ನೀರಿನಂತೆ ಆಗಬಾರದು. ಸಂಘನೆಯಿಂದ ಬರುವ ನಿರ್ದೇಶನಗಳನ್ನು ತಕ್ಷಣವೇ ಓದಿ ಅರ್ಥಮಾಡಿಕೊಳ್ಳಿ. ಅತಿಯಾದ ಆತ್ಮವಿಶ್ವಾಸ ಬೇಡ. ‘ನನಗೆ ತುಂಬ ಅನುಭವ ಇದೆ, ಸಂಶೋಧನೆ ಮಾಡದೇನೇ ಯಾವುದೇ ಸನ್ನಿವೇಶವನ್ನ ನಿಭಾಯಿಸಬಲ್ಲೆ’ ಎಂದು ನೆನಸಬೇಡಿ. ತಿಮೊಥೆಯನನ್ನು ಅನುಕರಿಸುತ್ತಾ ‘ನಿಮ್ಮ ವಿಷಯದಲ್ಲಿಯೂ ನಿಮ್ಮ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವರಾಗಿರಿ.’—1 ತಿಮೊ. 4:16.

6. ಅವನು ಪವಿತ್ರಾತ್ಮದ ಮೇಲೆ ಹೊಂದಿಕೊಂಡಿದ್ದನು. ತಿಮೊಥೆಯನು ಮಾಡುತ್ತಿದ್ದ ಸೇವೆಯ ಬಗ್ಗೆ ಪೌಲನು ಅವನಿಗೆ, “ನಿನ್ನ ವಶಕ್ಕೆ ಕೊಡಲ್ಪಟ್ಟಿರುವ ಈ ಶ್ರೇಷ್ಠ ಹೊಣೆಗಾರಿಕೆಯನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮದ ಮೂಲಕ ಕಾಪಾಡು” ಎಂದು ನೆನಪಿಸಿದನು. (2 ತಿಮೊ. 1:14) ಇದನ್ನು ಮಾಡಲು ತಿಮೊಥೆಯನು ಪವಿತ್ರಾತ್ಮದ ಮೇಲೆ ಹೊಂದಿಕೊಳ್ಳಬೇಕಿತ್ತು.

ಅನೇಕ ದಶಕಗಳಿಂದ ಹಿರಿಯರಾಗಿರುವ ಡಾನಲ್ಡ್‌ ಹೇಳುವುದು: “ನೇಮಿತ ಪುರುಷರು ದೇವರೊಂದಿಗಿರುವ ಸಂಬಂಧವನ್ನು ಮಾನ್ಯಮಾಡಬೇಕು. ಹೀಗೆ ಮಾಡುವವರು ‘ಹೆಚ್ಚುಹೆಚ್ಚಾಗಿ ಬಲಹೊಂದುವರು.’ ಅವರು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ ಅದರ ಫಲವನ್ನು ಬೆಳೆಸಿಕೊಂಡರೆ ಸಭೆಗೆ ದೊಡ್ಡ ಆಶೀರ್ವಾದವಾಗಿರುವರು.”—ಕೀರ್ತ. 84:7; 1 ಪೇತ್ರ 4:11.

ನಿಮ್ಮ ಸೇವಾ ಸುಯೋಗವನ್ನು ಮಾನ್ಯಮಾಡಿ

ಹೊಸದಾಗಿ ನೇಮಕಗೊಂಡಿರುವ ಇಷ್ಟೊಂದು ಸಹೋದರರು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಿರುವುದನ್ನು ನೋಡಿ ತುಂಬ ಸಂತೋಷವಾಗುತ್ತದೆ. ಆರಂಭದಲ್ಲಿ ತಿಳಿಸಲಾದ ಜೇಸನ್‌ ಹೇಳುವುದು: “ನಾನು ಹಿರಿಯನಾಗಿ ಸೇವೆ ಮಾಡಿರುವ ಇಷ್ಟೆಲ್ಲಾ ವರ್ಷದಲ್ಲಿ ತುಂಬ ವಿಷಯ ಕಲಿತಿದ್ದೇನೆ. ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಈಗ ನಾನು ನನ್ನ ನೇಮಕದಲ್ಲಿ ತುಂಬ ಆನಂದಿಸುತ್ತೇನೆ ಮತ್ತು ಇದೊಂದು ದೊಡ್ಡ ಸುಯೋಗ ಎಂದು ನೆನಸುತ್ತೇನೆ!”

ನೀವು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಾ ಇರುವಿರಾ? ತಿಮೊಥೆಯನನ್ನು ಮಾದರಿ ಮಾಡಿಕೊಳ್ಳಿ. ಆಗ ನೀವು ಸಹ ದೇವಜನರಿಗೆ ಆಶೀರ್ವಾದವಾಗಿರುವಿರಿ.