ಪ್ರೋತ್ಸಾಹದ ಚಿಲುಮೆಯಾಗಿರುವ ಯೆಹೋವನನ್ನು ಅನುಕರಿಸಿ
‘ದೇವರಿಗೆ ಸ್ತೋತ್ರವಾಗಲಿ. ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು [ಪ್ರೋತ್ಸಾಹಿಸುತ್ತಾನೆ].’—2 ಕೊರಿಂ. 1:3, 4.
1. ಆದಾಮಹವ್ವರು ದಂಗೆಯೆದ್ದಾಗ ಯೆಹೋವನು ಮಾನವಕುಲಕ್ಕೆ ಹೇಗೆ ಪ್ರೋತ್ಸಾಹ ಕೊಟ್ಟನು?
ಯೆಹೋವನು ಪ್ರೋತ್ಸಾಹದ ಚಿಲುಮೆಯಾಗಿದ್ದಾನೆ. ಮಾನವರು ಪಾಪ ಮಾಡಿ ಅಪರಿಪೂರ್ಣರಾದ ಮೇಲೂ ಆತನು ಪ್ರೋತ್ಸಾಹ ಕೊಡುವುದನ್ನು ನಿಲ್ಲಿಸಲಿಲ್ಲ. ಆದಾಮಹವ್ವರು ತನ್ನ ವಿರುದ್ಧ ದಂಗೆಯೆದ್ದ ಕೂಡಲೇ ಒಂದು ಪ್ರವಾದನೆಯನ್ನು ನುಡಿದನು. ಈ ಪ್ರವಾದನೆ ಆದಿಕಾಂಡ 3:15ರಲ್ಲಿದೆ. ಪಿಶಾಚನಾದ ಸೈತಾನ ಮತ್ತು ಅವನ ಎಲ್ಲ ಕೆಟ್ಟ ವಿಷಯಗಳು ನಾಶವಾಗಲಿದೆ ಎಂದು ದೇವರು ಅಲ್ಲಿ ವಾಗ್ದಾನ ಮಾಡಿದ್ದಾನೆ. (1 ಯೋಹಾ. 3:8; ಪ್ರಕ. 12:9) ಆದಾಮನ ಸಂತತಿಯವರು ಈ ಪ್ರವಾದನೆಯನ್ನು ಅರ್ಥಮಾಡಿಕೊಂಡಾಗ ಅವರಿಗೆ ಧೈರ್ಯ ಮತ್ತು ನಿರೀಕ್ಷೆ ಸಿಗಲಿತ್ತು.
ಯೆಹೋವನು ಹಿಂದಿನ ಕಾಲದ ತನ್ನ ಸೇವಕರನ್ನು ಪ್ರೋತ್ಸಾಹಿಸಿದನು
2. ಯೆಹೋವ ದೇವರು ನೋಹನನ್ನು ಹೇಗೆ ಪ್ರೋತ್ಸಾಹಿಸಿದನು?
2 ಯೆಹೋವ ದೇವರು ತನ್ನ ಸೇವಕನಾದ ನೋಹನನ್ನು ಪ್ರೋತ್ಸಾಹಿಸಿದನು. ಹಿಂಸೆ, ಅನೈತಿಕತೆ ತುಂಬಿತುಳುಕುತ್ತಿದ್ದ ಲೋಕದಲ್ಲಿ ನೋಹ ಮತ್ತು ಅವನ ಕುಟುಂಬ ಮಾತ್ರ ಯೆಹೋವನನ್ನು ಆರಾಧಿಸುತ್ತಿತ್ತು. ಆಗಿನ ಜನರನ್ನು ನೋಡಿದಾಗ ನೋಹನಿಗೆ ಖಂಡಿತ ನಿರುತ್ಸಾಹ ಆಗಿರಬೇಕು. (ಆದಿ. 6:4, 5, 11; ಯೂದ 6) ಆದರೆ ನೋಹನಿಗೆ ಯೆಹೋವನು ತನ್ನನ್ನು ಆರಾಧಿಸುತ್ತಾ ಇರಲು ಮತ್ತು ಸರಿಯಾದ ವಿಷಯಗಳನ್ನು ಮಾಡಲು ಬೇಕಾದ ಧೈರ್ಯವನ್ನು ಕೊಟ್ಟನು. (ಆದಿ. 6:9) ಆ ಕೆಟ್ಟ ಜನರನ್ನು ನಾಶಮಾಡುತ್ತೇನೆ ಎಂದು ಅವನಿಗೆ ಹೇಳಿದನು. ಅಷ್ಟೇ ಅಲ್ಲ, ನೋಹ ಮತ್ತವನ ಕುಟುಂಬ ನಾಶನದಿಂದ ಪಾರಾಗಬೇಕೆಂದರೆ ಏನು ಮಾಡಬೇಕು ಎಂದೂ ದೇವರು ತಿಳಿಸಿದನು. (ಆದಿ. 6:13-18) ಹೀಗೆ ತಾನು ಪ್ರೋತ್ಸಾಹದ ಚಿಲುಮೆಯಾಗಿದ್ದೇನೆ ಎಂದು ದೇವರು ನೋಹನಿಗೆ ತೋರಿಸಿಕೊಟ್ಟನು.
3. ಯೆಹೋವನು ಯೆಹೋಶುವನನ್ನು ಹೇಗೆ ಪ್ರೋತ್ಸಾಹಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)
3 ಯೆಹೋವನು ತನ್ನ ಸೇವಕನಾದ ಯೆಹೋಶುವನನ್ನೂ ಪ್ರೋತ್ಸಾಹಿಸಿದನು. ಒಂದು ದೊಡ್ಡ ಜವಾಬ್ದಾರಿ ಅವನ ಹೆಗಲೇರಿತು. ಅವನು ನಾಯಕನಾಗಿ ದೇವಜನರನ್ನು ವಾಗ್ದತ್ತ ದೇಶಕ್ಕೆ ಕರೆದುಕೊಂಡು ಹೋಗಬೇಕಿತ್ತು ಮತ್ತು ಆ ದೇಶದಲ್ಲಿ ನೆಲೆಸಿದ್ದ ಜನಾಂಗಗಳ ಬಲಿಷ್ಠ ಸೈನ್ಯಗಳನ್ನು ಸೋಲಿಸಬೇಕಿತ್ತು. ಇದನ್ನು ನೆನಸಿ ಯೆಹೋಶುವನಿಗೆ ಖಂಡಿತ ಭಯ ಆಗಿರುತ್ತದೆ ಎಂದು ಯೆಹೋವನಿಗೆ ಗೊತ್ತಿತ್ತು. ಆದ್ದರಿಂದ ಆತನು ಮೋಶೆಗೆ ಹೀಗೆ ಹೇಳಿದನು: ‘ಯೆಹೋಶುವನೇ ಈ ಜನರ ನಾಯಕನಾಗಿ ಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಧೀನಪಡಿಸುವನು. ಅವನಿಗೇ ಈ ಅಧಿಕಾರವನ್ನು ಕೊಡಬೇಕು; ಅವನು ದೃಢನಾಗುವಂತೆ ಅವನನ್ನು ಧೈರ್ಯಪಡಿಸಬೇಕು.’ (ಧರ್ಮೋ. 3:28) ನಂತರ ಯೆಹೋವನೇ ಯೆಹೋಶುವನಿಗೆ, “ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ” ಎಂದು ಹೇಳಿ ಪ್ರೋತ್ಸಾಹಿಸಿದನು. (ಯೆಹೋ. 1:1, 9) ಇದನ್ನು ಕೇಳಿಸಿಕೊಂಡಾಗ ಯೆಹೋಶುವನಿಗೆ ಹೇಗನಿಸಿರಬೇಕು?
4, 5. (ಎ) ಹಿಂದಿನ ಕಾಲದಲ್ಲಿ ಯೆಹೋವನು ತನ್ನ ಜನರನ್ನು ಹೇಗೆ ಪ್ರೋತ್ಸಾಹಿಸಿದನು? (ಬಿ) ತನ್ನ ಮಗನಿಗೆ ಯೆಹೋವ ದೇವರು ಹೇಗೆ ಪ್ರೋತ್ಸಾಹ ನೀಡಿದನು?
4 ಯೆಹೋವನು ಒಬ್ಬೊಬ್ಬ ವ್ಯಕ್ತಿಗೆ ಮಾತ್ರವಲ್ಲ ತಾನು ಆರಿಸಿಕೊಂಡಿದ್ದ ಇಡೀ ಜನಾಂಗಕ್ಕೂ ಪ್ರೋತ್ಸಾಹದ ಚಿಲುಮೆಯಾಗಿದ್ದನು. ಉದಾಹರಣೆಗೆ, ಯೆಹೂದ್ಯರು ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದಾಗ ಅವರಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಯೆಹೋವನಿಗೆ ಗೊತ್ತಿತ್ತು. ಆದ್ದರಿಂದ ಭರವಸೆ ನೀಡುವಂಥ ಪ್ರವಾದನೆಯನ್ನು ನುಡಿದನು: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.” (ಯೆಶಾ. 41:10) ಸಮಯಾನಂತರ ಆರಂಭದಲ್ಲಿದ್ದ ಕ್ರೈಸ್ತರಿಗೂ ಯೆಹೋವನು ಪ್ರೋತ್ಸಾಹ ನೀಡಿದನು. ಅದೇ ರೀತಿ ಇಂದು ನಮ್ಮನ್ನು ಕೂಡ ಪ್ರೋತ್ಸಾಹಿಸುತ್ತಿದ್ದಾನೆ.—2 ಕೊರಿಂಥ 1:3, 4 ಓದಿ.
5 ಯೆಹೋವನು ತನ್ನ ಮಗನಿಗೂ ಪ್ರೋತ್ಸಾಹ ನೀಡಿದನು. ಯೇಸುವಿಗೆ ದೀಕ್ಷಾಸ್ನಾನವಾದಾಗ ಸ್ವರ್ಗದಿಂದ ಯೆಹೋವನು ಈ ಮಾತುಗಳನ್ನು ಹೇಳಿದನು: “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ.” (ಮತ್ತಾ. 3:17) ಭೂಮಿಯಲ್ಲಿ ಸೇವೆ ಮಾಡುತ್ತಿದ್ದಾಗ ಯೇಸುವಿಗೆ ಈ ಮಾತುಗಳು ಎಷ್ಟು ಬಲ ಕೊಟ್ಟಿರಬೇಕೆಂದು ಯೋಚಿಸಿ ನೋಡಿ.
ಯೇಸು ಕೊಟ್ಟ ಪ್ರೋತ್ಸಾಹ
6. ಯೇಸು ಹೇಳಿದ ತಲಾಂತುಗಳ ಸಾಮ್ಯ ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ?
6 ಯೇಸು ತನ್ನ ತಂದೆಯ ಮಾದರಿಯನ್ನು ಅನುಕರಿಸಿದನು. ಆತನು ತಲಾಂತುಗಳ ಸಾಮ್ಯ ಹೇಳಿದಾಗ ದೇವರಿಗೆ ನಂಬಿಗಸ್ತರಾಗಿರಲು ಬೇರೆಯವರಿಗೆ ಉತ್ತೇಜನ ಸಿಕ್ಕಿತು. ಆ ಸಾಮ್ಯದಲ್ಲಿ ಯಜಮಾನನು ತನಗೆ ನಂಬಿಗಸ್ತನಾಗಿದ್ದ ಒಬ್ಬೊಬ್ಬ ಆಳಿಗೂ ಹೀಗೆ ಹೇಳಿದನು: “ಭೇಷ್, ನಂಬಿಗಸ್ತನಾದ ಒಳ್ಳೇ ಆಳು ನೀನು! ನೀನು ಸ್ವಲ್ಪ ವಿಷಯಗಳಲ್ಲಿ ನಂಬಿಗಸ್ತನಾಗಿದ್ದೀ. ನಾನು ನಿನ್ನನ್ನು ಅನೇಕ ವಿಷಯಗಳ ಮೇಲೆ ನೇಮಿಸುವೆನು. ನಿನ್ನ ಯಜಮಾನನ ಸಂತೋಷದಲ್ಲಿ ಸೇರು.” (ಮತ್ತಾ. 25:21, 23) ಯೆಹೋವನಿಗೆ ನಂಬಿಗಸ್ತರಾಗಿದ್ದು ಸೇವೆಮಾಡುತ್ತಾ ಇರಲು ಈ ಮಾತುಗಳು ಪ್ರೋತ್ಸಾಹ ನೀಡುತ್ತವೆ.
7. (ಎ) ಯೇಸು ತನ್ನ ಅಪೊಸ್ತಲರನ್ನು ಹೇಗೆ ಪ್ರೋತ್ಸಾಹಿಸಿದನು? (ಬಿ) ಪೇತ್ರನನ್ನು ಹೇಗೆ ಪ್ರೋತ್ಸಾಹಿಸಿದನು?
7 ಶಿಷ್ಯರು ತಮ್ಮಲ್ಲಿ ಯಾರು ದೊಡ್ಡವರು ಎಂದು ಪದೇಪದೇ ವಾದಮಾಡಿದರೂ ಯೇಸು ಅವರೊಂದಿಗೆ ಯಾವಾಗಲೂ ತಾಳ್ಮೆಯಿಂದ ನಡೆದುಕೊಂಡನು. ಬೇರೆಯವರು ನಮ್ಮ ಸೇವೆ ಮಾಡಬೇಕು ಎಂದು ನೆನಸಬಾರದು, ದೀನರಾಗಿದ್ದು ನಾವೇ ಬೇರೆಯವರ ಸೇವೆಮಾಡಬೇಕು ಎಂದು ಶಿಷ್ಯರನ್ನು ಪ್ರೋತ್ಸಾಹಿಸಿದನು. (ಲೂಕ 22:24-26) ಪೇತ್ರನು ಅನೇಕ ಸಾರಿ ತಪ್ಪು ಮಾಡಿ ಯೇಸುವನ್ನು ನಿರಾಶೆಪಡಿಸಿದನು. (ಮತ್ತಾ. 16:21-23; 26:31-35, 75) ಆದರೆ ಯೇಸು ಅವನನ್ನು ತಿರಸ್ಕರಿಸಲಿಲ್ಲ. ಬದಲಿಗೆ ಅವನನ್ನು ಪ್ರೋತ್ಸಾಹಿಸಿದನು ಮತ್ತು ಬೇರೆಯವರನ್ನು ಬಲಪಡಿಸುವ ನೇಮಕವನ್ನೂ ಅವನಿಗೆ ಕೊಟ್ಟನು.—ಯೋಹಾ. 21:16.
ಹಿಂದಿನ ಕಾಲದಲ್ಲಿ ನೀಡಲಾದ ಪ್ರೋತ್ಸಾಹ
8. ಹಿಜ್ಕೀಯನು ತನ್ನ ಸೇನಾಪತಿಗಳನ್ನು ಮತ್ತು ಯೆಹೂದದ ಜನರನ್ನು ಹೇಗೆ ಪ್ರೋತ್ಸಾಹಿಸಿದನು?
8 ಯೇಸು ಭೂಮಿಗೆ ಬಂದು ಎಲ್ಲರಿಗೋಸ್ಕರ ಮಾದರಿ ಇಟ್ಟ ಸಮಯಕ್ಕೆ ಮುಂಚಿನ ಕಾಲದಲ್ಲಿ ಜೀವಿಸಿದ್ದ ಯೆಹೋವನ ಸೇವಕರಿಗೂ ಬೇರೆಯವರನ್ನು ಪ್ರೋತ್ಸಾಹಿಸುವುದು ತುಂಬ ಮುಖ್ಯ ಎಂದು ಗೊತ್ತಿತ್ತು. ಹಿಜ್ಕೀಯನ ಉದಾಹರಣೆ ನೋಡಿ. ಅಶ್ಶೂರ್ಯದವರು ಯೆರೂಸಲೇಮಿನ ಮೇಲೆ ಇನ್ನೇನು ಆಕ್ರಮಣ ಮಾಡಲಿದ್ದಾಗ ಹಿಜ್ಕೀಯನು ತನ್ನ ಸೇನಾಪತಿಗಳನ್ನೂ ಜನರನ್ನೂ ಕರೆಸಿ ಧೈರ್ಯ ತುಂಬಿದನು. ಅವರು “ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು.”—2 ಪೂರ್ವಕಾಲವೃತ್ತಾಂತ 32:6-8 ಓದಿ.
9. ಪ್ರೋತ್ಸಾಹ ಕೊಡುವುದರ ಬಗ್ಗೆ ನಾವು ಯೋಬನಿಂದ ಏನು ಕಲಿಯಬಹುದು?
9 ಪ್ರೋತ್ಸಾಹದ ಮಾತುಗಳನ್ನು ಆಡುವುದರ ಬಗ್ಗೆ ಯೋಬನಿಂದಲೂ ನಾವು ಒಳ್ಳೇ ಪಾಠ ಕಲಿಯಬಹುದು. ತನಗೇ ಪ್ರೋತ್ಸಾಹ ಬೇಕಿದ್ದ ಸಮಯದಲ್ಲಿ ಅವನು ಬೇರೆಯವರಿಗೆ ಹೇಗೆ ಪ್ರೋತ್ಸಾಹ ಕೊಡುವುದೆಂದು ತೋರಿಸಿಕೊಟ್ಟನು. ಅವನಿಗೆ ಸಮಾಧಾನ ಹೇಳಲು ಬಂದ ಪುರುಷರಿಗೆ ಅವನು ಹೇಳಿದ ಮಾತುಗಳನ್ನು ನೋಡಿ. ತಾನಿರುವ ದುರವಸ್ಥೆಯಲ್ಲಿ ಒಂದುವೇಳೆ ಆ ತನ್ನ ಸ್ನೇಹಿತರು ಇದ್ದಿದ್ದರೆ ಅವರಿಗೆ ನೋವು ತರುವ ಮಾತುಗಳನ್ನು ಆಡುತ್ತಿರಲಿಲ್ಲ, ಬದಲಿಗೆ ಅವರನ್ನು ಬಲಪಡಿಸುವ ಮತ್ತು ಮನಸ್ಸನ್ನು ಹಗುರಗೊಳಿಸುವ ಮಾತುಗಳನ್ನು ಆಡುತ್ತಿದ್ದೆ ಎಂದು ಅವನು ಹೇಳಿದನು. (ಯೋಬ 16:1-5) ಕೊನೆಗೆ ಯೋಬನು ಎಲೀಹುವಿನಿಂದ ಮತ್ತು ಯೆಹೋವನಿಂದ ಪ್ರೋತ್ಸಾಹ ಪಡೆದುಕೊಂಡನು.—ಯೋಬ 33:24, 25; 36:1, 11; 42:7, 10.
10, 11. (ಎ) ಯೆಪ್ತಾಹನ ಮಗಳಿಗೆ ಯಾಕೆ ಪ್ರೋತ್ಸಾಹ ಬೇಕಿತ್ತು? (ಬಿ) ಇಂದು ನಾವು ಯಾರನ್ನು ಪ್ರೋತ್ಸಾಹಿಸಬೇಕು?
10 ಯೆಪ್ತಾಹನ ಮಗಳಿಗೂ ಪ್ರೋತ್ಸಾಹ ಬೇಕಿತ್ತು. ನ್ಯಾಯಸ್ಥಾಪಕನಾಗಿದ್ದ ಅವಳ ತಂದೆ ಯೆಪ್ತಾಹನು ಅಮ್ಮೋನಿಯರ ವಿರುದ್ಧ ಯುದ್ಧ ಮಾಡಬೇಕಿತ್ತು. ಆಗ ಅವನು ಯೆಹೋವನಿಗೆ ಒಂದು ಮಾತು ಕೊಟ್ಟನು. ಅದೇನೆಂದರೆ ಯುದ್ಧದಲ್ಲಿ ಜಯ ಪಡೆಯಲು ಯೆಹೋವನು ಸಹಾಯ ಮಾಡಿದರೆ, ತಾನು ಹಿಂದಿರುಗುವಾಗ ತನ್ನ ಮನೆಯಿಂದ ಯಾರು ಮೊದಲು ಬರುತ್ತಾರೋ ಅವರನ್ನು ದೇವಗುಡಾರದಲ್ಲಿ ಸೇವೆಮಾಡಲು ಕಳುಹಿಸಿಕೊಡುತ್ತೇನೆಂದು ಮಾತು ಕೊಟ್ಟನು. ಯುದ್ಧದಲ್ಲಿ ಇಸ್ರಾಯೇಲ್ಯರು ಜಯಗಳಿಸಿದರು. ಯೆಪ್ತಾಹ ಆ ಸಂತೋಷದಲ್ಲಿ ಮನೆಗೆ ಬಂದಾಗ ಅವನನ್ನು ಮೊದಲು ಸ್ವಾಗತಿಸಲು ಬಂದದ್ದು ಯಾರು ಗೊತ್ತಾ? ಅವನ ಮಗಳು, ಅವನ ಒಬ್ಬಳೇ ಮಗಳು! ಯೆಪ್ತಾಹನ ಹೃದಯ ಒಡೆದೇ ಹೋಯಿತು. ಆದರೂ ಅವನು ದೇವರಿಗೆ ಮಾತು ಕೊಟ್ಟಂತೆ ಮಗಳನ್ನು ಜೀವನಪೂರ್ತಿ ದೇವಗುಡಾರದಲ್ಲಿ ಸೇವೆ ಮಾಡುವುದಕ್ಕೆ ಕಳುಹಿಸಿಕೊಟ್ಟನು.—ನ್ಯಾಯ. 11:30-35.
11 ಕೊಟ್ಟ ಮಾತಿನಂತೆ ನಡೆಯಲು ಯೆಪ್ತಾಹನಿಗೆ ಎಷ್ಟು ಕಷ್ಟವಾಗಿರುತ್ತೋ ಅವನ ಮಗಳಿಗೆ ಅದಕ್ಕಿಂತ ಹೆಚ್ಚು ಕಷ್ಟವಾಗಿರಬೇಕು. ಆದರೂ ತಂದೆ ಕೊಟ್ಟ ಹರಕೆಯನ್ನು ತೀರಿಸಲು ಅವಳು ಸಿದ್ಧಳಾದಳು. (ನ್ಯಾಯ. 11:36, 37) ಇದನ್ನು ನೆರವೇರಿಸಲು ಅವಳು ಮದುವೆಯಾಗಬಾರದಿತ್ತು, ಮಕ್ಕಳು ಮಾಡಿಕೊಳ್ಳಬಾರದಿತ್ತು. ಅವರ ವಂಶ ಅಲ್ಲಿಗೇ ನಿಂತುಹೋಗಲಿತ್ತು. ಆದ್ದರಿಂದ ಅವಳಿಗೆ ತುಂಬ ಸಾಂತ್ವನ, ಪ್ರೋತ್ಸಾಹ ಬೇಕಾಗಿತ್ತು. ಹಾಗಾಗಿ ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿ ವರ್ಷ ನಾಲ್ಕು ದಿನ ಯೆಪ್ತಾಹನ ಮಗಳನ್ನು ಭೇಟಿಮಾಡಿ ಶ್ಲಾಘಿಸುತ್ತಿದ್ದರು. ಇದು ಅವರಲ್ಲಿ ಒಂದು ಪದ್ಧತಿಯೇ ಆಗಿಬಿಟ್ಟಿತು ಎಂದು ಬೈಬಲ್ ಹೇಳುತ್ತದೆ. (ನ್ಯಾಯ. 11:39, 40) ಯೆಪ್ತಾಹನ ಮಗಳಂತೆ ಇಂದು ಯೆಹೋವನ ಸೇವೆಯನ್ನು ಹೆಚ್ಚು ಮಾಡಲಿಕ್ಕಾಗಿ ಮದುವೆಯಾಗದೆ ಇರುವ ಎಷ್ಟೋ ಸಹೋದರ ಸಹೋದರಿಯರು ಇದ್ದಾರೆ. ಅಂಥವರನ್ನು ನಾವು ಪ್ರಶಂಸಿಸುತ್ತೇವಾ, ಪ್ರೋತ್ಸಾಹಿಸುತ್ತೇವಾ?—1 ಕೊರಿಂ. 7:32-35.
ಅಪೊಸ್ತಲರು ಸಹೋದರರನ್ನು ಪ್ರೋತ್ಸಾಹಿಸಿದರು
12, 13. ಪೇತ್ರನು ಹೇಗೆ ‘ಸಹೋದರರನ್ನು ಬಲಪಡಿಸಿದನು’?
12 ಯೇಸು ತಾನು ಸಾಯಲಿಕ್ಕಿದ್ದ ಹಿಂದಿನ ರಾತ್ರಿ ಅಪೊಸ್ತಲ ಪೇತ್ರನಿಗೆ ಹೀಗೆ ಹೇಳಿದನು: “ಸೀಮೋನನೇ, ಸೀಮೋನನೇ, ಇಗೋ ಸೈತಾನನು ನಿಮ್ಮನ್ನು ಗೋದಿಯಂತೆ ತೂರಲು ಒತ್ತಾಯಿಸಿದ್ದಾನೆ. ಆದರೆ ನಿನ್ನ ನಂಬಿಕೆಯು ಮುರಿದುಬೀಳದಂತೆ ನಾನು ನಿನಗೋಸ್ಕರ ಯಾಚಿಸಿದ್ದೇನೆ; ನೀನು ತಿರುಗಿ ಬಂದ ಮೇಲೆ ನಿನ್ನ ಸಹೋದರರನ್ನು ಬಲಪಡಿಸು.”—ಲೂಕ 22:31, 32.
ಗಲಾ. 2:9) ಪಂಚಾಶತ್ತಮದಂದು ಮತ್ತು ಅದರ ನಂತರವೂ ಪೇತ್ರ ತುಂಬ ಧೈರ್ಯ ತೋರಿಸುತ್ತಾ ಕ್ರಿಯೆಗೈದಿದ್ದನು. ಹೀಗೆ ಸಹೋದರರನ್ನು ಪ್ರೋತ್ಸಾಹಿಸಿದನು. ತುಂಬ ವರ್ಷ ಸೇವೆ ಮಾಡಿದ ಮೇಲೆ ಆತನು ಈ ಮಾತುಗಳನ್ನು ಹೇಳಿದನು: “ಇದೇ ನಿಜವಾದ ದೇವರ ಅಪಾತ್ರ ದಯೆಯಾಗಿದೆ ಎಂಬ ಉತ್ತೇಜನ ಮತ್ತು ಶ್ರದ್ಧಾಪೂರ್ವಕವಾದ ಸಾಕ್ಷಿನೀಡಲು ಕೆಲವೇ ಮಾತುಗಳನ್ನು ನಿಮಗೆ ಬರೆದಿದ್ದೇನೆ. ಇದರಲ್ಲಿ ಸ್ಥಿರವಾಗಿ ನಿಲ್ಲಿರಿ.” (1 ಪೇತ್ರ 5:12) ಪೇತ್ರನು ಬರೆದ ಪತ್ರಗಳು ಅಂದಿನ ಕ್ರೈಸ್ತರಿಗೆ ತುಂಬ ಪ್ರೋತ್ಸಾಹ ನೀಡಿದ್ದವು. ಯೆಹೋವನು ಮಾಡಿರುವ ವಾಗ್ದಾನಗಳು ಸಂಪೂರ್ಣವಾಗಿ ನೆರವೇರುವ ಸಮಯಕ್ಕಾಗಿ ಕಾಯುತ್ತಿರುವ ನಮ್ಮನ್ನೂ ಅವು ಪ್ರೋತ್ಸಾಹಿಸುತ್ತವೆ.—2 ಪೇತ್ರ 3:13.
13 ಆರಂಭದಲ್ಲಿದ್ದ ಕ್ರೈಸ್ತ ಸಭೆಯಲ್ಲಿ ಮುಂದಾಳತ್ವ ವಹಿಸಿದವರಲ್ಲಿ ಪೇತ್ರನು ಒಬ್ಬನಾಗಿದ್ದನು. (14, 15. ಅಪೊಸ್ತಲ ಯೋಹಾನನು ಬರೆದ ಬೈಬಲ್ ಪುಸ್ತಕಗಳು ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತವೆ?
14 ಆರಂಭದಲ್ಲಿದ್ದ ಕ್ರೈಸ್ತ ಸಭೆಯಲ್ಲಿ ಮುಂದಾಳತ್ವ ವಹಿಸಿದ ಇನ್ನೊಬ್ಬ ವ್ಯಕ್ತಿ ಅಪೊಸ್ತಲ ಯೋಹಾನ. ಯೇಸು ಈ ಭೂಮಿಗೆ ಬಂದು ಮಾಡಿದ ಸೇವೆಯ ಬಗ್ಗೆ ಯೋಹಾನನು ಬರೆದಿರುವ ಸುವಾರ್ತಾ ಪುಸ್ತಕ ತುಂಬ ಆಸಕ್ತಿಕರವಾಗಿದೆ. ಈ ಪುಸ್ತಕ ಅಂದಿನಿಂದ ಇಂದಿನವರೆಗೂ ನೂರಾರು ವರ್ಷ ಕ್ರೈಸ್ತರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಉದಾಹರಣೆಗೆ, ತನ್ನ ಶಿಷ್ಯರನ್ನು ಪ್ರೀತಿ ಎಂಬ ಗುಣ ಗುರುತಿಸುತ್ತದೆ ಎಂದು ಯೇಸು ಹೇಳಿದ ಮಾತನ್ನು ನಾವು ಯೋಹಾನನು ಬರೆದ ಪುಸ್ತಕದಲ್ಲಿ ಮಾತ್ರ ನೋಡುತ್ತೇವೆ.—ಯೋಹಾನ 13:34, 35 ಓದಿ.
15 ಯೋಹಾನನು ಬರೆದ ಮೂರು ಪತ್ರಗಳಲ್ಲಿಯೂ ಅಮೂಲ್ಯ ಸತ್ಯಗಳಿವೆ. ನಾವು ತಪ್ಪು ಮಾಡಿ ನಿರುತ್ಸಾಹಗೊಂಡಿರುವಾಗ ಯೇಸುವಿನ ವಿಮೋಚನಾ ಮೌಲ್ಯ “ನಮ್ಮನ್ನು ಎಲ್ಲ ಪಾಪದಿಂದ ಶುದ್ಧೀಕರಿಸುತ್ತದೆ” ಎನ್ನುವುದನ್ನು ಓದಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. (1 ಯೋಹಾ. 1:7) ಒಂದುವೇಳೆ ಮನಸ್ಸು ಇನ್ನೂ ಚುಚ್ಚುತ್ತಿದ್ದರೆ “ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ” ಎನ್ನುವ ಮಾತು ಸಾಂತ್ವನ ಕೊಡುತ್ತದೆ. (1 ಯೋಹಾ. 3:20) “ದೇವರು ಪ್ರೀತಿಯಾಗಿದ್ದಾನೆ” ಎಂದು ಬೈಬಲಿನಲ್ಲಿ ಬರೆದಿರುವುದು ಯೋಹಾನನು ಮಾತ್ರ. (1 ಯೋಹಾ. 4:8, 16) ಆತನ ಎರಡನೇ ಮತ್ತು ಮೂರನೇ ಪತ್ರಗಳು “ಸತ್ಯದಲ್ಲಿ ನಡೆಯುತ್ತಾ” ಇರುವ ಕ್ರೈಸ್ತರನ್ನು ಶ್ಲಾಘಿಸುತ್ತವೆ.—2 ಯೋಹಾ. 4; 3 ಯೋಹಾ. 3, 4.
16, 17. ಆರಂಭದಲ್ಲಿದ್ದ ಕ್ರೈಸ್ತರನ್ನು ಪೌಲನು ಹೇಗೆ ಪ್ರೋತ್ಸಾಹಿಸಿದನು?
ಅ. ಕಾ. 8:14; 15:2) ಯೂದಾಯದಲ್ಲಿದ್ದ ಸಹೋದರ ಸಹೋದರಿಯರು ದೇವರು ಒಬ್ಬನೇ ಎಂದು ನಂಬುತ್ತಿದ್ದವರಿಗೆ ಕ್ರಿಸ್ತನ ಬಗ್ಗೆ ಸಾರುತ್ತಿದ್ದರು. ಆದರೆ ಅನೇಕ ದೇವರುಗಳನ್ನು ಆರಾಧಿಸುತ್ತಿದ್ದ ಗ್ರೀಕರಿಗೆ, ರೋಮನ್ನರಿಗೆ ಮತ್ತು ಇನ್ನೂ ಬೇರೆ ಜನರಿಗೆ ಸಾರುವಂತೆ ಪವಿತ್ರಾತ್ಮವು ಪೌಲನನ್ನು ಕಳುಹಿಸಿತು.—ಗಲಾ. 2:7-9; 1 ತಿಮೊ. 2:7.
16 ಸಹೋದರರಿಗೆ ಪ್ರೋತ್ಸಾಹ ನೀಡುವುದರಲ್ಲಿ ಅಪೊಸ್ತಲ ಪೌಲ ಅತ್ಯುತ್ತಮ ಮಾದರಿ ಇಟ್ಟನು. ಯೇಸು ತೀರಿಕೊಂಡ ಸ್ವಲ್ಪ ಸಮಯದ ನಂತರ ಅಪೊಸ್ತಲರಲ್ಲಿ ಹೆಚ್ಚಿನವರು ಯೆರೂಸಲೇಮಿನಲ್ಲೇ ಉಳಿದರು. ಆಡಳಿತ ಮಂಡಲಿಯೂ ಅಲ್ಲೇ ಇತ್ತು. (17 ಈಗ ಟರ್ಕಿ ಇರುವ ಪ್ರದೇಶಕ್ಕೆ, ಗ್ರೀಸ್‌ಗೆ ಮತ್ತು ಇಟಲಿಗೆ ಪೌಲನು ಪ್ರಯಾಣಿಸಿದನು. ಅಲ್ಲಿ ವಾಸಿಸುತ್ತಿದ್ದ ಯೆಹೂದ್ಯರಲ್ಲದ ಜನರಿಗೆ ಸುವಾರ್ತೆ ಸಾರಿ ಆ ಸ್ಥಳಗಳಲ್ಲಿ ಕ್ರೈಸ್ತ ಸಭೆಗಳನ್ನು ಸ್ಥಾಪಿಸಿದನು. ಹೊಸದಾಗಿ ಕ್ರೈಸ್ತರಾದವರು ಹಿಂಸೆ ಎದುರಿಸಬೇಕಾಗಿತ್ತು. ಅವರ ಊರಿನ ಜನರೇ ಅವರನ್ನು ಹಿಂಸಿಸಿದರು. ಹಾಗಾಗಿ ಅವರಿಗೆ ಪ್ರೋತ್ಸಾಹ ಬೇಕಿತ್ತು. (1 ಥೆಸ. 2:14) ಸುಮಾರು ಕ್ರಿ.ಶ. 50ರಲ್ಲಿ ಪೌಲನು ಥೆಸಲೊನೀಕದಲ್ಲಿ ಸ್ಥಾಪನೆಯಾಗಿದ್ದ ಹೊಸ ಸಭೆಯನ್ನು ಪ್ರೋತ್ಸಾಹಿಸಲು ಒಂದು ಪತ್ರ ಬರೆದನು. ಅದರಲ್ಲಿ ಅವನು, “ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮೆಲ್ಲರ ಕುರಿತು ತಿಳಿಸುವಾಗ ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನಿಮ್ಮ ನಂಬಿಗಸ್ತ ಕ್ರಿಯೆಯನ್ನು, ನಿಮ್ಮ ಪ್ರೀತಿಪೂರ್ವಕ ಪ್ರಯಾಸವನ್ನು ಮತ್ತು . . . ನಿಮ್ಮ ತಾಳ್ಮೆಯನ್ನು ನಾವು . . . ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ” ಎಂದು ಬರೆದನು. (1 ಥೆಸ. 1:2, 3) ಅಷ್ಟೇ ಅಲ್ಲ ಒಬ್ಬರನ್ನೊಬ್ಬರು ಬಲಪಡಿಸಿ ಪ್ರೋತ್ಸಾಹಿಸುವಂತೆ ಹೇಳುತ್ತಾ, “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ” ಎಂದು ಬರೆದನು.—1 ಥೆಸ. 5:11.
ಆಡಳಿತ ಮಂಡಲಿ ಪ್ರೋತ್ಸಾಹ ನೀಡುತ್ತದೆ
18. ಒಂದನೇ ಶತಮಾನದಲ್ಲಿದ್ದ ಆಡಳಿತ ಮಂಡಲಿ ಫಿಲಿಪ್ಪನನ್ನು ಹೇಗೆ ಪ್ರೋತ್ಸಾಹಿಸಿತು?
18 ಒಂದನೇ ಶತಮಾನದಲ್ಲಿ, ಸಭೆಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದವರನ್ನೂ ಸೇರಿಸಿ ಎಲ್ಲ ಕ್ರೈಸ್ತರಿಗೂ ಯೆಹೋವನು ಆಡಳಿತ ಮಂಡಲಿಯ ಮೂಲಕ ಪ್ರೋತ್ಸಾಹ ಕೊಟ್ಟನು. ಫಿಲಿಪ್ಪನು ಸಮಾರ್ಯದವರಿಗೆ ಕ್ರಿಸ್ತನ ಬಗ್ಗೆ ಸಾರಿದಾಗ ಆಡಳಿತ ಮಂಡಲಿ ಅವನನ್ನು ಬೆಂಬಲಿಸಿತು. ಹೇಗೆಂದರೆ, ಆಡಳಿತ ಮಂಡಲಿಯ ಸದಸ್ಯರಾದ ಪೇತ್ರ ಯೋಹಾನರನ್ನು ಹೊಸದಾಗಿ ಕ್ರೈಸ್ತರಾದ ಸಮಾರ್ಯದವರು ಪವಿತ್ರಾತ್ಮವನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಲಿಕ್ಕಾಗಿ ಕಳುಹಿಸಿಕೊಟ್ಟಿತು. (ಅ. ಕಾ. 8:5, 14-17) ಇದರಿಂದ ಫಿಲಿಪ್ಪನಿಗೆ ಮತ್ತು ಆ ಹೊಸ ಸಹೋದರ ಸಹೋದರಿಯರಿಗೆ ತುಂಬ ಪ್ರೋತ್ಸಾಹ ಸಿಕ್ಕಿತು.
19. ಆಡಳಿತ ಮಂಡಲಿಯ ಪತ್ರ ಓದಿದಾಗ ಆರಂಭದಲ್ಲಿದ್ದ ಕ್ರೈಸ್ತರಿಗೆ ಹೇಗನಿಸಿತು?
19 ಮುಂದೆ ಆಡಳಿತ ಮಂಡಲಿ ಒಂದು ಮುಖ್ಯವಾದ ತೀರ್ಮಾನ ಮಾಡಬೇಕಿತ್ತು. ಯೆಹೂದ್ಯರಲ್ಲದ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಸುನ್ನತಿ ಮಾಡಿಸಿಕೊಳ್ಳಬೇಕಾ ಎಂಬ ದೊಡ್ಡ ಪ್ರಶ್ನೆ ಅವರ ಮುಂದಿತ್ತು. (ಅ. ಕಾ. 15:1, 2) ಆಡಳಿತ ಮಂಡಲಿ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ ಶಾಸ್ತ್ರವಚನಗಳ ಆಧರಿತವಾಗಿ ಚರ್ಚಿಸಿದ ಮೇಲೆ ಸುನ್ನತಿ ಮಾಡಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಂತು. ಆಮೇಲೆ ಈ ತೀರ್ಮಾನವನ್ನೂ ಅದಕ್ಕಿರುವ ಕಾರಣಗಳನ್ನೂ ಪತ್ರದಲ್ಲಿ ಬರೆದು ಸಭೆಗಳಿಗೆ ತಲಪಿಸುವಂತೆ ಸಹೋದರರ ಕೈಗೊಪ್ಪಿಸಿತು. ಸಹೋದರ ಸಹೋದರಿಯರು ಅದನ್ನು ಓದಿದಾಗ ಅದರಿಂದ ಸಿಕ್ಕಿದ “ಉತ್ತೇಜನಕ್ಕಾಗಿ ಸಂತೋಷಪಟ್ಟರು.”—ಅ. ಕಾ. 15:27-32.
20. (ಎ) ಇಂದು ನಮ್ಮೆಲ್ಲರನ್ನು ಆಡಳಿತ ಮಂಡಲಿ ಹೇಗೆ ಪ್ರೋತ್ಸಾಹಿಸುತ್ತದೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಯನ್ನು ಚರ್ಚಿಸಲಿದ್ದೇವೆ?
20 ಇಂದು ಬೆತೆಲಿನಲ್ಲಿ ಸೇವೆ ಮಾಡುವವರನ್ನು, ಇತರ ವಿಶೇಷ ಪೂರ್ಣ ಸಮಯದ ಸೇವಕರನ್ನು ಮತ್ತು ನಮ್ಮೆಲ್ಲರನ್ನೂ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಪ್ರೋತ್ಸಾಹಿಸುತ್ತದೆ. ಹೀಗೆ ಪ್ರೋತ್ಸಾಹ ಪಡೆದಾಗ ಒಂದನೇ ಶತಮಾನದಲ್ಲಿದ್ದ ಸಹೋದರರಂತೆ ನಾವು ಕೂಡ ಸಂತೋಷಪಡುತ್ತೇವೆ. ಅಷ್ಟೇ ಅಲ್ಲ, ಸತ್ಯವನ್ನು ಬಿಟ್ಟುಹೋದವರು ಪುನಃ ಯೆಹೋವನ ಹತ್ತಿರ ಬರುವಂತೆ ಪ್ರೋತ್ಸಾಹಿಸಲು ಆಡಳಿತ ಮಂಡಲಿ 2015ರಲ್ಲಿ ಮರಳಿ ಬನ್ನಿ ಯೆಹೋವನ ಬಳಿ ಎಂಬ ಕಿರುಹೊತ್ತಗೆ ಬಿಡುಗಡೆ ಮಾಡಿತು. ಮುಂದಿನ ಲೇಖನದಲ್ಲಿ, ಮುಂದಾಳತ್ವ ವಹಿಸುವ ಸಹೋದರರು ಮಾತ್ರ ಬೇರೆಯವರನ್ನು ಪ್ರೋತ್ಸಾಹಿಸಬೇಕಾ ಅಥವಾ ನಮ್ಮೆಲ್ಲರಿಗೂ ಆ ಜವಾಬ್ದಾರಿ ಇದೆಯಾ? ಎಂಬ ವಿಷಯವನ್ನು ಚರ್ಚಿಸಲಿದ್ದೇವೆ.