ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ?

ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ?

“ನೀನೇನೇ ಮಾಡಿದರೂ ಅದನ್ನು ಯೆಹೋವನಿಗೆ ವಹಿಸಿಬಿಡು. ಆಗ ನಿನ್ನ ಯೋಜನೆಗಳು ಸಫಲವಾಗುವವು.”—ಜ್ಞಾನೋ. 16:3, ನೂತನ ಲೋಕ ಭಾಷಾಂತರ.

ಗೀತೆಗಳು: 89, 24

1-3. (ಎ) ಇಂದು ಯುವಜನರು ಯಾವ ಸನ್ನಿವೇಶದಲ್ಲಿದ್ದಾರೆ? ಒಂದು ಉದಾಹರಣೆ ಕೊಡಿ. (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಈ ಸನ್ನಿವೇಶವನ್ನು ನಿಭಾಯಿಸಲು ಯುವ ಕ್ರೈಸ್ತರಿಗೆ ಯಾವುದು ಸಹಾಯ ಮಾಡುತ್ತದೆ?

ನೀವು ಒಂದು ವಿಶೇಷ ಕಾರ್ಯಕ್ರಮಕ್ಕಾಗಿ ತುಂಬ ದೂರ ಪ್ರಯಾಣ ಮಾಡಲಿಕ್ಕಿದೆ ಎಂದು ನೆನಸಿ. ನೀವು ಆ ಸ್ಥಳಕ್ಕೆ ಬಸ್ಸಿನಲ್ಲಿ ಹೋಗಲು ತೀರ್ಮಾನಿಸುತ್ತೀರಿ. ಬಸ್‌ ನಿಲ್ದಾಣಕ್ಕೆ ಹೋದರೆ ಅಲ್ಲಿ ಗಿಜಿಗುಟ್ಟುತ್ತಿರುವ ಜನರನ್ನು ಮತ್ತು ಸಾಲುಸಾಲಾಗಿ ನಿಂತಿರುವ ಬಸ್ಸುಗಳನ್ನು ನೋಡಿ ನಿಮಗೆ ಸ್ವಲ್ಪ ಗಲಿಬಿಲಿ ಆಗುತ್ತದೆ. ಆದರೆ ಎಲ್ಲಿಗೆ ಹೋಗಬೇಕು, ಅದಕ್ಕಾಗಿ ಯಾವ ಬಸ್ಸನ್ನು ಹತ್ತಬೇಕೆಂದು ನಿಮಗೆ ಗೊತ್ತಿರುವುದರಿಂದ ಅಷ್ಟು ಚಿಂತೆ ಆಗಲ್ಲ. ನಿಮ್ಮ ಕಣ್ಣಿಗೆ ಬೀಳುವ ಯಾವುದೋ ಒಂದು ಬಸ್ಸನ್ನೂ ಹತ್ತುವುದಿಲ್ಲ. ಯಾಕೆಂದರೆ ಅದು ನಿಮ್ಮನ್ನು ಎಲ್ಲಿಗೋ ಕರಕೊಂಡು ಹೋಗಿಬಿಡುತ್ತೆ ಎಂದು ನಿಮಗೆ ಗೊತ್ತು.

2 ಜೀವನ ಒಂದು ಪ್ರಯಾಣ ಇದ್ದ ಹಾಗೆ. ಯುವಜನರಾದ ನೀವು ಬಸ್‌ ನಿಲ್ದಾಣದಲ್ಲಿರುವ ಪ್ರಯಾಣಿಕರ ತರ ಇದ್ದೀರಿ. ಜೀವನದಲ್ಲಿ ಕೆಲವೊಮ್ಮೆ ಎಷ್ಟೊಂದು ಆಯ್ಕೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ ಎಂದರೆ ಅದರಿಂದ ನಿಮಗೆ ಸ್ವಲ್ಪ ಗಲಿಬಿಲಿ ಆಗಬಹುದು. ಆದರೆ ಜೀವನದಲ್ಲಿ ಯಾವ ದಾರಿ ಹಿಡಿಯಬೇಕೆಂದು ನಿಮಗೆ ಚೆನ್ನಾಗಿ ಗೊತ್ತಿದ್ದರೆ ಸರಿಯಾದ ಆಯ್ಕೆ ಮಾಡುವುದು ಸುಲಭ. ನೀವು ಯಾವ ದಾರಿ ಹಿಡಿಯಬೇಕು?

3 ಈ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ. ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ನಡೆಯುವುದನ್ನು ನಿಮ್ಮ ಜೀವನದ ಗುರಿಯಾಗಿ ಮಾಡಿಕೊಳ್ಳಲು ನಿಮಗೆ ಪ್ರೋತ್ಸಾಹ ಸಹ ಸಿಗಲಿದೆ. ನೀವು ಜೀವನದಲ್ಲಿ ಎಲ್ಲ ತೀರ್ಮಾನಗಳನ್ನು ಯೆಹೋವನು ಕೊಡುವ ಸಲಹೆಯಂತೆ ಮಾಡುವಾಗ ಆತನಿಗೆ ಸಂತೋಷವಾಗುತ್ತದೆ. ಉದಾಹರಣೆಗೆ, ಏನು ಓದಬೇಕು, ಯಾವ ಕೆಲಸ ಮಾಡಬೇಕು, ಮದುವೆ ಮಾಡಿಕೊಳ್ಳಬೇಕಾ, ಮಕ್ಕಳು ಬೇಕಾ ಎಂಬ ವಿಷಯಗಳಲ್ಲಿ ಯೆಹೋವನು ಯಾವ ಸಲಹೆ ಕೊಡುತ್ತಾನೆ ಎನ್ನುವುದಕ್ಕೆ ನೀವು ಗಮನ ಕೊಡಬೇಕು. ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಯೆಹೋವನ ಹತ್ತಿರಕ್ಕೆ ಬರಲು ಈ ಗುರಿಗಳು ನಿಮಗೆ ಸಹಾಯ ಮಾಡುತ್ತವೆ. ಯೆಹೋವನ ಸೇವೆ ಮಾಡುವುದರ ಮೇಲೆ ನಿಮ್ಮ ಮನಸ್ಸಿದ್ದರೆ, ಆತನು ನಿಮ್ಮನ್ನು ಆಶೀರ್ವದಿಸುವನು ಮತ್ತು ಯಶಸ್ಸು ಪಡೆಯಲು ಸಹಾಯ ಮಾಡುವನು. ಜ್ಞಾನೋಕ್ತಿ 16:3 ಇದನ್ನೇ ಹೇಳುತ್ತದೆ: “ನೀನೇನೇ ಮಾಡಿದರೂ ಅದನ್ನು ಯೆಹೋವನಿಗೆ ವಹಿಸಿಬಿಡು. ಆಗ ನಿನ್ನ ಯೋಜನೆಗಳು ಸಫಲವಾಗುವವು.”—ನೂತನ ಲೋಕ ಭಾಷಾಂತರ.

ಆಧ್ಯಾತ್ಮಿಕ ಗುರಿಗಳನ್ನು ಯಾಕೆ ಇಡಬೇಕು?

4. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

4 ಆಧ್ಯಾತ್ಮಿಕ ಗುರಿಗಳನ್ನು ಇಡುವುದು ಒಳ್ಳೇದು. ಯಾಕೆ? ಅದಕ್ಕಿರುವ ಮೂರು ಕಾರಣಗಳನ್ನು ನೋಡೋಣ. ಆಧ್ಯಾತ್ಮಿಕ ಗುರಿಗಳನ್ನು ಇಟ್ಟು ಅವನ್ನು ಸಾಧಿಸಲು ಪ್ರಯತ್ನಿಸಿದರೆ ನೀವು ಯೆಹೋವನಿಗೆ ಇನ್ನೂ ಆಪ್ತ ಸ್ನೇಹಿತರಾಗಬಹುದು ಎಂದು ಅರ್ಥಮಾಡಿಕೊಳ್ಳಲು ಮೊದಲ ಎರಡು ಕಾರಣಗಳು ಸಹಾಯ ಮಾಡುತ್ತವೆ. ಚಿಕ್ಕ ವಯಸ್ಸಿನಲ್ಲೇ ಈ ಗುರಿಗಳನ್ನು ಇಡುವುದು ಯಾಕೆ ಒಳ್ಳೇದು ಎಂದು ಅರ್ಥಮಾಡಿಕೊಳ್ಳಲು ಮೂರನೇ ಕಾರಣ ಸಹಾಯ ಮಾಡುತ್ತದೆ.

5. ಆಧ್ಯಾತ್ಮಿಕ ಗುರಿಗಳನ್ನು ಇಡಲು ಮುಖ್ಯ ಕಾರಣ ಏನು?

5 ಆಧ್ಯಾತ್ಮಿಕ ಗುರಿಗಳನ್ನಿಡಲು ಮುಖ್ಯ ಕಾರಣ ಏನು? ಯೆಹೋವನು ನಮಗೆ ತೋರಿಸಿರುವ ಪ್ರೀತಿ ಮತ್ತು ಆತನು ನಮಗೋಸ್ಕರ ಮಾಡಿರುವ ವಿಷಯಗಳಿಗಾಗಿ ನಾವು ಕೃತಜ್ಞತೆ ಹೇಳಲು ಬಯಸುವುದೇ ಇದಕ್ಕೆ ಮುಖ್ಯ ಕಾರಣ. ಒಬ್ಬ ಕೀರ್ತನೆಗಾರನು ಹೀಗೆ ಹೇಳಿದ್ದಾನೆ: ‘ಯೆಹೋವನೇ, ನಿನಗೆ ಕೃತಜ್ಞತೆ ಹೇಳುವುದು ಯುಕ್ತವಾಗಿದೆ. ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದೀ; ನಿನ್ನ ಕೆಲಸಗಳಿಂದಾಗಿ ಉತ್ಸಾಹಧ್ವನಿಮಾಡುತ್ತೇನೆ.’ (ಕೀರ್ತ. 92:1, 4) ಯೆಹೋವನು ನಿಮಗೆ ಏನೆಲ್ಲಾ ಕೊಟ್ಟಿದ್ದಾನೆಂದು ಯೋಚಿಸಿ. ಆತನು ನಿಮಗೆ ಜೀವ, ನಂಬಿಕೆ, ಬೈಬಲ್‌, ಸಭೆ, ಪರದೈಸಿನಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಕೊಟ್ಟಿದ್ದಾನೆ. ನೀವು ಆಧ್ಯಾತ್ಮಿಕ ಗುರಿಗಳನ್ನು ಇಡುವಾಗ, ‘ಯೆಹೋವನೇ, ನೀನು ನನಗಾಗಿ ಇಷ್ಟೆಲ್ಲಾ ಮಾಡಿರುವುದಕ್ಕೆ ಧನ್ಯವಾದ ಅಪ್ಪಾ’ ಎಂದು ಹೇಳಿದಂತಿರುತ್ತದೆ. ಯೆಹೋವನಿಗೆ ಹತ್ತಿರವಾಗಲು ಇದು ನಿಮಗೆ ಸಹಾಯ ಮಾಡುತ್ತದೆ.

6. (ಎ) ಆಧ್ಯಾತ್ಮಿಕ ಗುರಿಗಳನ್ನಿಟ್ಟರೆ ಯೆಹೋವನ ಜೊತೆ ನಿಮಗಿರುವ ಸಂಬಂಧ ಹೇಗಿರುತ್ತದೆ? (ಬಿ) ನೀವು ಚಿಕ್ಕವರಿರುವಾಗಲೇ ಯಾವ ಕೆಲವು ಗುರಿಗಳನ್ನು ಇಡಬಹುದು?

6 ಆಧ್ಯಾತ್ಮಿಕ ಗುರಿಗಳನ್ನು ಇಡಲು ಎರಡನೇ ಕಾರಣ ಏನು? ಈ ಗುರಿಗಳನ್ನು ಸಾಧಿಸಲು ನೀವು ಪ್ರಯತ್ನಿಸುವಾಗ ಯೆಹೋವನಿಗೆ ಇಷ್ಟವಾದ ಕೆಲಸವನ್ನು ಮಾಡುತ್ತೀರಿ ಮತ್ತು ಇದು ನಿಮ್ಮನ್ನು ಆತನಿಗೆ ಇನ್ನಷ್ಟು ಹತ್ತಿರ ತರುತ್ತದೆ. ಅಪೊಸ್ತಲ ಪೌಲನು ಈ ಮಾತು ಕೊಟ್ಟನು: “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.” (ಇಬ್ರಿ. 6:10) ನೀವು ತುಂಬ ಚಿಕ್ಕ ವಯಸ್ಸಲ್ಲೂ ಗುರಿಗಳನ್ನು ಇಡಬಹುದು. ಕ್ರಿಸ್ಟೀನಾ ಉದಾಹರಣೆ ನೋಡಿ. ಅವಳಿಗೆ 10 ವರ್ಷ ಇದ್ದಾಗ ನಂಬಿಗಸ್ತ ಸಾಕ್ಷಿಗಳ ಜೀವನ ಕಥೆಗಳನ್ನು ತಪ್ಪದೆ ಓದಬೇಕೆಂದು ತೀರ್ಮಾನಿಸಿದಳು. ಟೋಬಿ 12 ವರ್ಷದವನಿದ್ದಾಗ ದೀಕ್ಷಾಸ್ನಾನ ತೆಗೆದುಕೊಳ್ಳುವುದಕ್ಕೆ ಮುಂಚೆ ಇಡೀ ಬೈಬಲನ್ನು ಓದಿ ಮುಗಿಸಬೇಕೆಂಬ ಗುರಿ ಇಟ್ಟನು. ಮಾಕ್ಸಿಮ್‌ಗೆ 11 ವರ್ಷ ಇದ್ದಾಗ ಮತ್ತು ಅವನ ತಂಗಿ ನೊಯಿಮಿಗೆ 10 ವರ್ಷ ಇದ್ದಾಗ ದೀಕ್ಷಾಸ್ನಾನ ಪಡಕೊಂಡರು. ಇವರಿಬ್ಬರೂ ಬೆತೆಲ್‌ನಲ್ಲಿ ಸೇವೆ ಮಾಡುವ ಗುರಿ ಇಟ್ಟರು. ಆ ಗುರಿ ತಮ್ಮ ಕಣ್ಮುಂದೆ ಇರಬೇಕೆಂಬ ಕಾರಣಕ್ಕೆ ಒಂದು ಬೆತೆಲ್‌ ಅರ್ಜಿಯನ್ನು ತಮ್ಮ ಮನೆಯ ಗೋಡೆಯ ಮೇಲೆ ಹಾಕಿದರು. ನಿಮ್ಮ ಬಗ್ಗೆ ಏನು? ನೀವು ಯಾವ ಗುರಿಗಳನ್ನು ಇಟ್ಟು ಅದನ್ನು ಸಾಧಿಸಲು ಪ್ರಯತ್ನಿಸಬಹುದು ಎಂದು ನೆನಸುತ್ತೀರಿ?—ಫಿಲಿಪ್ಪಿ 1:10, 11 ಓದಿ.

7, 8. (ಎ) ಗುರಿಗಳನ್ನು ಇಡುವುದರಿಂದ ನಿರ್ಣಯಗಳನ್ನು ಮಾಡುವುದು ಹೇಗೆ ಸುಲಭವಾಗುತ್ತದೆ? (ಬಿ) ವಿಶ್ವವಿದ್ಯಾಲಯಕ್ಕೆ ಹೋಗಬಾರದೆಂದು ಹದಿವಯಸ್ಸಿನ ಒಬ್ಬ ಸಹೋದರಿ ತೀರ್ಮಾನಿಸಿದ್ದೇಕೆ?

7 ನೀವು ಚಿಕ್ಕವರಿರುವಾಗಲೇ ಗುರಿಗಳನ್ನು ಇಡುವುದು ಯಾಕೆ ಒಳ್ಳೇದು ಎನ್ನುವುದಕ್ಕೆ ಮೂರನೇ ಕಾರಣ ಏನು? ಹದಿಪ್ರಾಯದಲ್ಲಿ ನೀವು ಅನೇಕ ನಿರ್ಣಯಗಳನ್ನು ಮಾಡಬೇಕಿರುತ್ತದೆ. ಉದಾಹರಣೆಗೆ, ನೀವು ಏನು ಓದುವಿರಿ, ಯಾವ ಕೆಲಸ ಮಾಡುವಿರಿ ಎಂದು ನಿರ್ಣಯಿಸಬೇಕಾಗಿರುತ್ತದೆ. ಇದು ಒಂದು ಪ್ರಯಾಣ ಮಾಡುತ್ತಿರುವಾಗ ಕೆಲವು ಮುಖ್ಯ ತಿರುವುಗಳ ಹತ್ತಿರ ಬಂದಂತೆ ಇರುತ್ತದೆ. ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಗೊತ್ತಿದ್ದರೆ ಯಾವ ಕಡೆ ತಿರುಗಬೇಕು ಎಂದು ತೀರ್ಮಾನಿಸುವುದು ಕಷ್ಟವಲ್ಲ. ಅದೇ ರೀತಿ, ನಿಮಗೆ ನಿಮ್ಮ ಗುರಿಗಳು ಏನೆಂದು ಗೊತ್ತಿದ್ದರೆ ಬುದ್ಧಿವಂತಿಕೆಯ ತೀರ್ಮಾನಗಳನ್ನು ಮಾಡುತ್ತೀರಿ. ಜ್ಞಾನೋಕ್ತಿ 21:5 ಹೀಗೆ ಹೇಳುತ್ತದೆ: “ಶ್ರದ್ಧೆಯಿಂದ ಯೋಜನೆ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ.” (ನೂತನ ಲೋಕ ಭಾಷಾಂತರ) ಒಳ್ಳೇ ಗುರಿಗಳನ್ನು ಇಟ್ಟು ಅದಕ್ಕಾಗಿ ನಿಮ್ಮ ಜೀವನದಲ್ಲಿ ಎಷ್ಟು ಬೇಗ ಯೋಜನೆಗಳನ್ನು ಮಾಡುತ್ತೀರೋ ಅಷ್ಟು ಬೇಗ ಯಶಸ್ಸು ಸಿಗುತ್ತದೆ. ಡಾಮಾರಿಸ್‌ ಎಂಬವರು ಹದಿಪ್ರಾಯದಲ್ಲಿ ಒಂದು ಮುಖ್ಯ ನಿರ್ಣಯ ಮಾಡಬೇಕಿತ್ತು. ಆಗ ಅವರೇನು ಮಾಡಿದರು ನೋಡೋಣ.

8 ಡಾಮಾರಿಸ್‌ ಕಾಲೇಜಿನಲ್ಲಿ ಒಳ್ಳೇ ಅಂಕ ಪಡೆದಿದ್ದರು. ಇದರಿಂದಾಗಿ ವಕೀಲ ವೃತ್ತಿಗಾಗಿ ಓದಲು ಅವರಿಗೆ ಸ್ಕಾಲರ್‌ಷಿಪ್‌ ಸಿಗುತ್ತಿತ್ತು. ಆದರೂ ಅವರು ಒಂದು ಬ್ಯಾಂಕ್‌ನಲ್ಲಿ ಕೆಲಸ ಮಾಡಲು ತೀರ್ಮಾನಿಸಿದರು. ಯಾಕೆ? ತುಂಬ ಚಿಕ್ಕ ವಯಸ್ಸಿನಲ್ಲೇ ಅವರು ಪಯನೀಯರ್‌ ಆಗಬೇಕೆಂದು ನಿರ್ಣಯಿಸಿದ್ದರು. “ಇದನ್ನು ಮಾಡಲು ನಾನು ಪಾರ್ಟ್‌ ಟೈಮ್‌ ಕೆಲಸ ಮಾಡಬೇಕಿತ್ತು. ನಾನು ವಿಶ್ವವಿದ್ಯಾಲಯದಲ್ಲಿ ಓದಿ ಲಾಯರ್‌ ಆಗಿದ್ದರೆ ತುಂಬ ದುಡ್ಡು ಸಂಪಾದನೆ ಮಾಡಬಹುದಿತ್ತು. ಆದರೆ ಇದರಲ್ಲಿ ಪಾರ್ಟ್‌ ಟೈಮ್‌ ಕೆಲಸ ಸಿಗುವುದು ತುಂಬ ಕಷ್ಟ” ಎಂದವರು ಹೇಳುತ್ತಾರೆ. ಡಾಮಾರಿಸ್‌ 20 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಹದಿಪ್ರಾಯದಲ್ಲೇ ಅವರಿಟ್ಟ ಗುರಿ ಮತ್ತು ಮಾಡಿದ ನಿರ್ಣಯ ಸರಿಯಾಗಿತ್ತು ಎಂದು ಅವರಿಗೆ ಅನಿಸುತ್ತದಾ? ಹೌದು. ಅವರು ಕೆಲಸ ಮಾಡುವ ಬ್ಯಾಂಕ್‌ಗೆ ಅನೇಕ ವಕೀಲರು ಬಂದುಹೋಗುತ್ತಾರಂತೆ. ಅವರಲ್ಲಿ ಹೆಚ್ಚಿನವರಿಗೆ ತಮ್ಮ ಕೆಲಸದಿಂದ ಸಂತೋಷ ಸಿಕ್ಕಿಲ್ಲ ಮತ್ತು ವಿಶ್ವವಿದ್ಯಾಲಯದಲ್ಲಿ ಓದಿದ್ದರೆ ತಾನೂ ಅವರ ತರನೇ ಆಗುತ್ತಿದ್ದೆ ಎಂದು ಡಾಮಾರಿಸ್‌ ಹೇಳುತ್ತಾರೆ. ಇಷ್ಟೆಲ್ಲಾ ವರ್ಷ ಪಯನೀಯರ್‌ ಸೇವೆ ಮಾಡಿದ್ದರಿಂದ ತಾನು ತುಂಬ ಸಂತೋಷವಾಗಿದ್ದೇನೆ, ಆ ವಕೀಲರ ಪರಿಸ್ಥಿತಿ ತನಗೆ ಬಂದಿಲ್ಲ ಎಂದು ಖುಷಿಪಡುತ್ತಾರೆ.

9. ನಮಗೆ ಯಾಕೆ ನಮ್ಮ ಯುವಜನರ ಬಗ್ಗೆ ತುಂಬ ಹೆಮ್ಮೆ ಅನಿಸುತ್ತದೆ?

9 ಲೋಕವ್ಯಾಪಕವಾಗಿರುವ ನಮ್ಮ ಸಾವಿರಾರು ಯುವ ಸಹೋದರ ಸಹೋದರಿಯರನ್ನು ನಾವು ಮೆಚ್ಚಲೇಬೇಕು. ಯಾಕೆಂದರೆ ಅವರು ತಮ್ಮ ಜೀವನದಲ್ಲಿ ಯೆಹೋವನೊಟ್ಟಿಗಿರುವ ಸ್ನೇಹವನ್ನು ಮತ್ತು ತಮ್ಮ ಆಧ್ಯಾತ್ಮಿಕ ಗುರಿಗಳನ್ನು ಯಾವಾಗಲೂ ಕಣ್ಮುಂದೆ ಇಟ್ಟುಕೊಂಡಿದ್ದಾರೆ. ಜೀವನವನ್ನು ಪೂರ್ತಿ ಆನಂದಿಸುತ್ತಾರೆ ಮತ್ತು ಅದೇ ಸಮಯದಲ್ಲಿ ಎಲ್ಲಾ ವಿಷಯದಲ್ಲೂ ಯೆಹೋವನ ಮಾರ್ಗದರ್ಶನೆಯನ್ನು ಪಾಲಿಸಲು ಕಲಿಯುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ಕುಟುಂಬ ಜೀವನ ಯಾವುದೇ ಇದ್ದರೂ ದೇವರು ಅದರ ಬಗ್ಗೆ ಏನು ಹೇಳುತ್ತಾನೆಂದು ನೋಡುತ್ತಾರೆ. “ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂದು ಸೊಲೊಮೋನನು ಹೇಳುತ್ತಾನೆ. (ಜ್ಞಾನೋ. 3:5, 6) ಯುವಜನರೇ, ಯೆಹೋವನು ನಿಮ್ಮನ್ನು ತುಂಬ ಪ್ರೀತಿಸುತ್ತಾನೆ. ಆತನ ಕಣ್ಮಣಿಗಳು ನೀವು! ಆತನು ನಿಮ್ಮನ್ನು ಸಂರಕ್ಷಿಸಿ, ಮಾರ್ಗದರ್ಶಿಸಿ, ಆಶೀರ್ವದಿಸುತ್ತಾನೆ.

ಯೆಹೋವನ ಬಗ್ಗೆ ಬೇರೆಯವರೊಂದಿಗೆ ಮಾತಾಡಲು ಒಳ್ಳೇ ತಯಾರಿ ಮಾಡಿ

10. (ಎ) ಸಾರುವ ಕೆಲಸ ಯಾಕೆ ನಮಗೆ ಅತಿ ಪ್ರಾಮುಖ್ಯವಾದ ವಿಷಯವಾಗಿರಬೇಕು? (ಬಿ) ನೀವು ಚೆನ್ನಾಗಿ ಸಾಕ್ಷಿ ಕೊಡಲು ಹೇಗೆ ಕಲಿಯಬಹುದು?

10 ನಿಮ್ಮ ಜೀವನದಲ್ಲಿ ಯೆಹೋವನಿಗೆ ಮೆಚ್ಚಿಕೆಯಾದ ವಿಷಯಗಳನ್ನು ನೀವು ಮಾಡಲು ಬಯಸುವುದಾದರೆ, ನೀವು ಬೇರೆಯವರೊಂದಿಗೆ ಆತನ ಕುರಿತು ಮಾತಾಡುತ್ತೀರಿ. “ಸುವಾರ್ತೆಯು ಮೊದಲು ಸಾರಲ್ಪಡಬೇಕು” ಎಂದು ಯೇಸು ಕ್ರಿಸ್ತನು ಹೇಳಿದನು. (ಮಾರ್ಕ 13:10) ಆದ್ದರಿಂದ ಸಾರುವ ಕೆಲಸವನ್ನು ತುಂಬ ತುರ್ತಿನಿಂದ ಮಾಡಬೇಕು. ಇದು ನಮಗೆ ಅತಿ ಪ್ರಾಮುಖ್ಯವಾದ ವಿಷಯವಾಗಿರಬೇಕು. ನೀವು ಸಾರುವ ಕೆಲಸವನ್ನು ಹೆಚ್ಚು ಮಾಡುವ ಗುರಿ ಇಡಬಹುದಾ? ಪಯನೀಯರ್‌ ಸೇವೆ ಮಾಡಲಿಕ್ಕಾಗುತ್ತದಾ? ಆದರೆ ನಿಮಗೆ ಸಾರುವ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದರೆ ಆಗೇನು? ನೀವು ಚೆನ್ನಾಗಿ ಸಾಕ್ಷಿ ಕೊಡಲು ಹೇಗೆ ಕಲಿಯಬಹುದು? ಎರಡು ವಿಷಯಗಳು ಸಹಾಯ ಮಾಡುತ್ತವೆ: ಒಳ್ಳೇ ತಯಾರಿ ಮಾಡಿ ಮತ್ತು ಯೆಹೋವನ ಬಗ್ಗೆ ನಿಮಗೇನು ಗೊತ್ತೋ ಅದನ್ನು ಬೇರೆಯವರಿಗೆ ಹೇಳುವುದನ್ನು ಬಿಟ್ಟುಬಿಡಬೇಡಿ. ಆಗ ನೀವು ಸಾರುವ ಕೆಲಸವನ್ನು ಎಷ್ಟು ಆನಂದಿಸುತ್ತೀರಿ ಎಂದು ನೋಡಿ ನಿಮಗೇ ಆಶ್ಚರ್ಯ ಆಗಬಹುದು.

ಯೆಹೋವನ ಬಗ್ಗೆ ಮಾತಾಡಲು ನೀವು ಹೇಗೆ ತಯಾರಿ ಮಾಡುತ್ತೀರಿ? (ಪ್ಯಾರ 11, 12 ನೋಡಿ)

11, 12. (ಎ) ಯೆಹೋವನ ಬಗ್ಗೆ ಬೇರೆಯವರೊಂದಿಗೆ ಮಾತಾಡಲು ನೀವು ಹೇಗೆ ತಯಾರಿ ಮಾಡಬಹುದು? (ಬಿ) ಯೆಹೋವನ ಬಗ್ಗೆ ಶಾಲೆಯಲ್ಲಿ ಮಾತಾಡಲು ಸಿಕ್ಕಿದ ಅವಕಾಶವನ್ನು ಒಬ್ಬ ಯುವ ಸಹೋದರ ಹೇಗೆ ಉಪಯೋಗಿಸಿಕೊಂಡ?

11 ಹೇಗೆ ತಯಾರಿ ಮಾಡಬಹುದು? ನಿಮ್ಮ ಜೊತೆ ಓದುವ ಮಕ್ಕಳು ಸಾಮಾನ್ಯವಾಗಿ ಕೇಳುವ ಪ್ರಶ್ನೆಯೊಂದನ್ನು ಆರಿಸಿಕೊಳ್ಳಿ. ಆ ಪ್ರಶ್ನೆಗೆ ಹೇಗೆ ಉತ್ತರ ಕೊಡಬಹುದು ಎಂದು ತಯಾರಿ ಮಾಡಿ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡಲು ಯುವಜನರಿಗೆ ಸಹಾಯ ಮಾಡುವಂಥ ಮಾಹಿತಿ ನಮ್ಮ ವೆಬ್‌ಸೈಟ್‌ನಲ್ಲಿ ಮತ್ತು ಬೇರೆ ಪ್ರಕಾಶನಗಳಲ್ಲಿದೆ. ಉದಾಹರಣೆಗೆ, “ನೀನ್ಯಾಕೆ ವಿಕಾಸವಾದವನ್ನು ನಂಬಲ್ಲ?” ಅನ್ನುವ ಪ್ರಶ್ನೆಯನ್ನು ತೆಗೆದುಕೊಳ್ಳಿ. ಈ ಪ್ರಶ್ನೆಗೆ ಉತ್ತರವನ್ನು ತಯಾರಿ ಮಾಡಲು ಯುವಜನರ 10 ಪ್ರಶ್ನೆಗಳಿಗೆ ಉತ್ತರ ಎಂಬ ಕಿರುಹೊತ್ತಗೆಯಲ್ಲಿರುವ “ನಾನು ವಿಕಾಸವಾದವನ್ನು ನಂಬಬೇಕಾ?” ಎಂಬ ಲೇಖನ ಸಹಾಯ ಮಾಡುತ್ತದೆ.—1 ಪೇತ್ರ 3:15 ಓದಿ.

12 ನಮ್ಮ ವೆಬ್‌ಸೈಟನ್ನು ಅವರೇ ನೋಡಬಹುದೆಂದು ನಿಮ್ಮ ಜೊತೆಯಲ್ಲಿ ಓದುತ್ತಿರುವ ಮಕ್ಕಳಿಗೆ ಹೇಳಿ. ಲುಕಾ ಇದನ್ನೇ ಮಾಡಿದನು. ಅವನ ತರಗತಿಯಲ್ಲಿ ಬೇರೆ ಬೇರೆ ಧರ್ಮಗಳ ಬಗ್ಗೆ ಪಾಠ ನಡೆಯುತ್ತಾ ಇತ್ತು. ಪಠ್ಯಪುಸ್ತಕದಲ್ಲಿ ಯೆಹೋವನ ಸಾಕ್ಷಿಗಳ ಬಗ್ಗೆ ಕೊಟ್ಟಿರುವ ವಿಷಯಗಳು ಸರಿ ಇರಲಿಲ್ಲ ಅಂತ ಲುಕಾಗೆ ಗೊತ್ತಾಯಿತು. ಸ್ವಲ್ಪ ಭಯವಾದರೂ ಲುಕಾ ಅದರಲ್ಲಿರುವ ವಿಷಯಗಳು ಯಾಕೆ ತಪ್ಪಾಗಿವೆ ಎಂದು ಇಡೀ ತರಗತಿಗೆ ಹೇಳಬಹುದಾ ಎಂದು ತನ್ನ ಶಿಕ್ಷಕಿಗೆ ಕೇಳಿದನು. ಶಿಕ್ಷಕಿ ಒಪ್ಪಿಕೊಂಡರು. ಲುಕಾ ಇಡೀ ತರಗತಿಗೆ ನಮ್ಮ ವೆಬ್‌ಸೈಟನ್ನು ತೋರಿಸಿದನು. ನಂತರ ಕೈಮಾಡದೆ ರ್ಯಾಗಿಂಗನ್ನು ಜಯಿಸಿ ಎಂಬ ವಿಡಿಯೋವನ್ನು ಎಲ್ಲರೂ ಮನೆಯಲ್ಲಿ ನೋಡಿ ಬರಬೇಕೆಂದು ಶಿಕ್ಷಕಿ ಹೇಳಿದರು. ಶಾಲೆಯಲ್ಲಿ ಯೆಹೋವನ ಬಗ್ಗೆ ಮಾತಾಡಿದ್ದರಿಂದ ಲುಕಾಗೆ ಎಷ್ಟು ಸಂತೋಷವಾಗಿರಬೇಕು ಅಲ್ಲವೆ?

13. ಏನೇ ಕಷ್ಟ ಬಂದರೂ ನಾವು ಯಾಕೆ ನಮ್ಮ ಗುರಿಗಳನ್ನು ಬಿಟ್ಟುಬಿಡಬಾರದು?

13 ಏನೇ ಕಷ್ಟ ಬಂದರೂ ಉತ್ಸಾಹ ಕಳಕೊಳ್ಳದೆ ನಿಮ್ಮ ಗುರಿಗಳ ಮೇಲೆ ಮನಸ್ಸಿಡಿ. (2 ತಿಮೊ. 4:2) ಕ್ಯಾತರೀನ ಇದನ್ನೇ ಮಾಡಿದಳು. ಅವಳಿಗೆ 17 ವರ್ಷ ಇದ್ದಾಗ ತನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಸುವಾರ್ತೆ ಸಾರಬೇಕೆಂಬ ಗುರಿ ಇಟ್ಟಳು. ಅವರಲ್ಲಿ ಒಬ್ಬನು ಅವಳನ್ನು ತುಂಬ ಸಲ ಅವಮಾನ ಮಾಡಿದ. ಆದರೂ ಅವಳು ತನ್ನ ಗುರಿಯನ್ನು ಕೈಬಿಡಲಿಲ್ಲ. ಅವಳ ಒಳ್ಳೇ ನಡತೆ ಅವಳ ಜೊತೆ ಕೆಲಸ ಮಾಡುತ್ತಿದ್ದ ಹಾನ್ಸ್‌ ಎಂಬ ಇನ್ನೊಬ್ಬ ವ್ಯಕ್ತಿಯ ಮೇಲೆ ಒಳ್ಳೇ ಪ್ರಭಾವ ಬೀರಿತು. ಅವನು ನಮ್ಮ ಪ್ರಕಾಶನಗಳನ್ನು ಓದಲಾರಂಭಿಸಿದ, ಬೈಬಲ್‌ ಅಧ್ಯಯನ ತೆಗೆದುಕೊಂಡ ಮತ್ತು ದೀಕ್ಷಾಸ್ನಾನ ಪಡೆದ. ಆದರೆ ಇಷ್ಟರಲ್ಲಾಗಲೇ ಕ್ಯಾತರೀನ ಬೇರೆ ಕಡೆ ಹೋಗಿದ್ದರಿಂದ ಅವಳಿಗೆ ಇದೆಲ್ಲಾ ಗೊತ್ತಾಗಲಿಲ್ಲ. 13 ವರ್ಷಗಳಾದ ಮೇಲೆ ಅವಳು ತನ್ನ ಕುಟುಂಬದೊಟ್ಟಿಗೆ ಕೂಟಕ್ಕೆ ಹೋಗಿದ್ದಾಗ ಅವತ್ತು ಸಾರ್ವಜನಿಕ ಭಾಷಣ ಕೊಡಲು ಬಂದಿದ್ದ ಸಹೋದರನು ಹಾನ್ಸ್‌ ಎಂದು ಗೊತ್ತಾಯಿತು. ಆಗ ಅವಳಿಗೆ ತುಂಬ ಆಶ್ಚರ್ಯ ಆಯಿತು. ತನ್ನ ಜೊತೆ ಕೆಲಸ ಮಾಡುವವರಿಗೆ ಸುವಾರ್ತೆ ಸಾರಬೇಕೆಂಬ ತನ್ನ ಗುರಿಯನ್ನು ಬಿಡದೇ ಇದ್ದದರಿಂದ ಅವಳು ತುಂಬ ಸಂತೋಷಪಟ್ಟಳು.

ನಿಮ್ಮ ಗುರಿಗಳು ಸದಾ ಕಣ್ಮುಂದೆ ಇರಲಿ

14, 15. (ಎ) ಬೇರೆಯವರು ಏನು ಮಾಡುತ್ತಾರೋ ಅದನ್ನು ನೀವೂ ಮಾಡುವಂತೆ ಅವರು ಒತ್ತಾಯಿಸಿದಾಗ ನೀವು ಯಾವುದನ್ನು ಮನಸ್ಸಿನಲ್ಲಿ ಇಡಬೇಕು? (ಬಿ) ಬೇರೆಯವರು ಒತ್ತಡ ಹಾಕಿದಾಗ ನೀವು ಹೇಗೆ ದೃಢವಾಗಿ ನಿಲ್ಲಬಹುದು?

14 ನಿಮ್ಮ ಜೀವನದಲ್ಲಿ ಯೆಹೋವನಿಗೆ ಇಷ್ಟವಾಗುವ ವಿಷಯಗಳನ್ನು ಮಾಡುವುದರ ಮೇಲೆ ಮನಸ್ಸನ್ನಿಡುವಂತೆ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಇಡುವಂತೆ ಈ ಲೇಖನ ಇಷ್ಟರ ತನಕ ಪ್ರೋತ್ಸಾಹಿಸಿತು. ಆದರೆ ನಿಮ್ಮ ವಯಸ್ಸಿನ ಹೆಚ್ಚಿನ ಮಕ್ಕಳಿಗೆ ಮೋಜುಮಸ್ತಿ ಮಾಡುವುದೆಂದರೆ ತುಂಬ ಇಷ್ಟ. ನೀವೂ ಅವರ ಜೊತೆ ಸೇರಿಕೊಳ್ಳುವಂತೆ ಅವರು ನಿಮ್ಮನ್ನು ಕರೆಯಬಹುದು. ನಿಮಗೆ ನಿಮ್ಮ ಗುರಿಗಳನ್ನು ಸಾಧಿಸುವುದು ಎಷ್ಟು ಮುಖ್ಯ ಎಂದು ಇವತ್ತಲ್ಲ ನಾಳೆ ಬೇರೆಯವರಿಗೆ ತೋರಿಸಬೇಕಾಗುತ್ತದೆ. ಬೇರೆಯವರಿಂದಾಗಿ ನಿಮ್ಮ ಗುರಿಗಳನ್ನು ನೀವು ದೂರ ಮಾಡಿಕೊಳ್ಳಬೇಡಿ. ಲೇಖನದ ಆರಂಭದಲ್ಲಿ ತಿಳಿಸಿದಂತೆ, ನೀವು ಬಸ್‌ ನಿಲ್ದಾಣಕ್ಕೆ ಹೋಗಿರುವಾಗ ಯಾವುದೋ ಒಂದು ಬಸ್ಸಿನಲ್ಲಿ ಜನ ಮಜಾ ಮಾಡುತ್ತಿದ್ದಾರೆ ಅನ್ನುವುದನ್ನು ನೋಡಿ ಅದರಲ್ಲಿ ಹತ್ತಿಕೊಂಡು ಹೋಗುತ್ತೀರಾ? ಖಂಡಿತ ಇಲ್ಲ, ಅಲ್ವಾ?

15 ಬೇರೆಯವರು ಏನು ಮಾಡುತ್ತಾರೋ ಅದನ್ನು ನೀವೂ ಮಾಡುವಂತೆ ಅವರು ಒತ್ತಾಯಿಸಿದಾಗ ನೀವೇನು ಮಾಡಬಹುದು? ಒತ್ತಡವನ್ನು ನಿಭಾಯಿಸಲು ಕಷ್ಟವಾಗುವ ಸನ್ನಿವೇಶಗಳಿಂದ ದೂರ ಇರಿ. (ಜ್ಞಾನೋ. 22:3) ತಪ್ಪಾದ ವಿಷಯಗಳನ್ನು ಮಾಡುವುದರಿಂದ ಏನೆಲ್ಲಾ ನೋವು ಅನುಭವಿಸಬೇಕಾಗುತ್ತದೆ ಎಂದು ಯೋಚಿಸಿ. (ಗಲಾ. 6:7) ನಿಮಗೆ ಒಳ್ಳೇ ಸಲಹೆ ಕೊಡುವವರು ಬೇಕು ಅನ್ನುವುದನ್ನು ದೀನತೆಯಿಂದ ಒಪ್ಪಿಕೊಳ್ಳಿ. ನಿಮ್ಮ ಹೆತ್ತವರು ಮತ್ತು ಸಭೆಯಲ್ಲಿರುವ ಅನುಭವಸ್ಥ ಸಹೋದರ ಸಹೋದರಿಯರು ಕೊಡುವ ಸಲಹೆಗಳನ್ನು ಸ್ವೀಕರಿಸಿ.—1 ಪೇತ್ರ 5:5, 6 ಓದಿ.

16. ದೀನರಾಗಿರುವುದು ಮುಖ್ಯ ಎಂದು ಕ್ರಿಸ್ಟೋಫ್‌ನ ಉದಾಹರಣೆ ಹೇಗೆ ತೋರಿಸಿಕೊಡುತ್ತದೆ?

16 ಒಳ್ಳೇ ಸಲಹೆಗೆ ಕಿವಿಗೊಡಲು ಕ್ರಿಸ್ಟೋಫ್‌ ಎಂಬ ಸಹೋದರನಿಗೆ ದೀನತೆ ಸಹಾಯ ಮಾಡಿತು. ದೀಕ್ಷಾಸ್ನಾನ ಪಡೆದುಕೊಂಡ ಮೇಲೆ ಅವನು ಒಂದು ಫಿಟ್‌ನೆಸ್‌ ಸೆಂಟರ್‌ಗೆ ಹೋಗಲು ಆರಂಭಿಸಿದನು. ಅಲ್ಲಿಗೆ ಬರುತ್ತಿದ್ದ ಬೇರೆ ಯುವಕರು ತಮ್ಮ ಸ್ಪೋರ್ಟ್ಸ್‌ ಕ್ಲಬ್‌ಗೆ ಸೇರಿಕೊಳ್ಳುವಂತೆ ಅವನಿಗೆ ಹೇಳಿದರು. ಕ್ರಿಸ್ಟೋಫ್‌ ಇದರ ಬಗ್ಗೆ ಒಬ್ಬ ಹಿರಿಯರ ಹತ್ತಿರ ಮಾತಾಡಿದನು. ಆ ಹಿರಿಯ ಇದರಲ್ಲಿರುವ ಕೆಲವು ಅಪಾಯಗಳ ಬಗ್ಗೆ ಯೋಚಿಸುವಂತೆ ಹೇಳಿದರು, ಅಲ್ಲಿ ತುಂಬ ಪೈಪೋಟಿ ಇರಬಹುದೆಂದು ಹೇಳಿದರು. ಆದರೂ ಕ್ರಿಸ್ಟೋಫ್‌ ಸ್ಪೋರ್ಟ್ಸ್‌ ಕ್ಲಬ್‌ಗೆ ಸೇರಲು ತೀರ್ಮಾನಿಸಿದನು. ಆದರೆ ಸ್ವಲ್ಪ ಸಮಯ ಆದ ಮೇಲೆ ಅಲ್ಲಿನ ಕ್ರೀಡೆ ತುಂಬ ಕ್ರೂರವಾಗಿದೆ, ಅಪಾಯಕರವೂ ಆಗಿದೆ ಎಂದು ಗಮನಿಸಿದನು. ಪುನಃ ಹಿರಿಯರ ಹತ್ತಿರ ಮಾತಾಡಿದಾಗ ಅವರು ಅವನಿಗೆ ಬೈಬಲಿನಿಂದ ಸಲಹೆ ಕೊಟ್ಟರು. “ಯೆಹೋವನು ನನಗೆ ಒಳ್ಳೇ ಸಲಹೆಗಾರರನ್ನು ಕೊಟ್ಟನು. ನಾನು ತಕ್ಷಣ ಸಲಹೆಯನ್ನು ಪಾಲಿಸದಿದ್ದರೂ ನಂತರ ಆತನ ಮಾತಿನಂತೆ ನಡೆದೆ” ಎನ್ನುತ್ತಾನೆ ಕ್ರಿಸ್ಟೋಫ್‌. ಒಳ್ಳೇ ಸಲಹೆ ಸಿಕ್ಕಿದಾಗ ಅದನ್ನು ಸ್ವೀಕರಿಸುವಷ್ಟು ದೀನತೆ ನಿಮಗಿದೆಯಾ?

17, 18. (ಎ) ಇಂದು ಯುವಜನರು ಹೇಗಿರಬೇಕೆಂದು ಯೆಹೋವನು ಬಯಸುತ್ತಾನೆ? (ಬಿ) ನೀವು ಮಾಡಿದ ಆಯ್ಕೆಗಳನ್ನು ನೆನಸಿ ದೊಡ್ಡವರಾದ ಮೇಲೆ ವಿಷಾದಪಡಬಾರದಾದರೆ ಏನು ಮಾಡಬೇಕು? ಒಂದು ಅನುಭವ ಹೇಳಿ.

17 “ಯೌವನಸ್ಥನೇ [ಅಥವಾ ಯೌವನಸ್ಥಳೇ], ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ” ಎಂದು ಬೈಬಲ್‌ ಹೇಳುತ್ತದೆ. (ಪ್ರಸಂ. 11:9) ಯುವಪ್ರಾಯದಲ್ಲಿ ನೀವು ಖುಷಿಯಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ನೀವು ಸಂತೋಷವಾಗಿರಲು ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇರಬೇಕು ಮತ್ತು ನೀವೇನೇ ಯೋಜನೆ ಮಾಡಿದರೂ, ತೀರ್ಮಾನ ತೆಗೆದುಕೊಂಡರೂ ಅದನ್ನು ಯೆಹೋವನ ಬುದ್ಧಿವಾದಕ್ಕನುಸಾರ ಮಾಡಬೇಕೆಂದು ಈ ಲೇಖನದಲ್ಲಿ ಕಲಿತಿರಿ. ಜೀವನದಲ್ಲಿ ಇದನ್ನು ಎಷ್ಟು ಬೇಗ ಮಾಡುತ್ತೀರೋ ಅಷ್ಟು ಬೇಗ ನಿಮಗೆ ಯೆಹೋವನ ಮಾರ್ಗದರ್ಶನೆ, ಸಂರಕ್ಷಣೆ ಮತ್ತು ಆಶೀರ್ವಾದ ಸಿಗುತ್ತದೆ. ಆತನು ತನ್ನ ವಾಕ್ಯದಲ್ಲಿ ನಿಮಗೆ ಕೊಡುವ ಒಳ್ಳೇ ಸಲಹೆಗಳ ಬಗ್ಗೆ ಯೋಚಿಸಿ. “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ಸಲಹೆಯನ್ನು ಸ್ವೀಕರಿಸಿ.—ಪ್ರಸಂ. 12:1.

18 ಯುವಜನರು ಬೇಗ ಬೆಳೆದು ದೊಡ್ಡವರಾಗಿಬಿಡುತ್ತಾರೆ. ಹೆಚ್ಚಿನವರು ತಪ್ಪಾದ ಗುರಿಗಳನ್ನು ಇಟ್ಟದ್ದಕ್ಕಾಗಿ ಅಥವಾ ಚಿಕ್ಕ ವಯಸ್ಸಲ್ಲೇ ಯಾವ ಗುರಿನೂ ಇಡದಿದ್ದಕ್ಕಾಗಿ ದೊಡ್ಡವರಾದ ಮೇಲೆ ತುಂಬ ದುಃಖಪಡುತ್ತಾರೆ. ಆದರೆ ನೀವು ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಕಣ್ಮುಂದೆ ಇಟ್ಟುಕೊಂಡರೆ, ನೀವು ಮಾಡಿದ ತೀರ್ಮಾನಗಳಿಗಾಗಿ ದೊಡ್ಡವರಾದ ಮೇಲೆ ಸಂತೋಷಪಡುವಿರಿ. ಇದು ಮೀರ್ಯಾನಾ ಅವರ ಅನುಭವ ಆಗಿತ್ತು. ಅವರು ಹದಿಪ್ರಾಯದಲ್ಲಿ ಆಟೋಟಗಳನ್ನು ಚೆನ್ನಾಗಿ ಆಡುತ್ತಿದ್ದರು. ಅವರನ್ನು ಒಲಿಂಪಿಕ್‌ ಕ್ರೀಡೆಯಲ್ಲಿ ಭಾಗವಹಿಸುವಂತೆ ಸಹ ಕರೆಯಲಾಯಿತು. ಆದರೆ ಅವರು ಯೆಹೋವನನ್ನು ಪೂರ್ಣ ಸಮಯ ಸೇವೆ ಮಾಡುವ ಆಯ್ಕೆ ಮಾಡಿದರು. 30 ವರ್ಷಗಳಾದ ಮೇಲೂ ತನ್ನ ಗಂಡನ ಜೊತೆ ಇನ್ನೂ ಪೂರ್ಣ ಸಮಯದ ಸೇವೆಯಲ್ಲಿದ್ದಾರೆ. ಯಾರಿಗೆ ಹಣ, ಆಸ್ತಿ, ಅಂತಸ್ತು, ಅಧಿಕಾರ ಬೇಕೋ ಅವರು ನಿಜಕ್ಕೂ ಸಂತೋಷವಾಗಿರಲ್ಲ. ಜೀವನದಲ್ಲಿ ದೇವರ ಸೇವೆ ಮಾಡುವುದು ಮತ್ತು ಜನರಿಗೆ ಆತನ ಬಗ್ಗೆ ಹೇಳಿಕೊಡುವುದೇ ಅತ್ಯುತ್ತಮ ಗುರಿಯಾಗಿದೆ ಎಂದು ಮೀರ್ಯಾನಾ ಹೇಳುತ್ತಾರೆ.

19. ಯುವಪ್ರಾಯದಲ್ಲಿ ಆಧ್ಯಾತ್ಮಿಕ ಗುರಿಗಳ ಮೇಲೆ ಮನಸ್ಸಿಟ್ಟರೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ?

19 ಯುವಜನರೇ, ನಿಮ್ಮನ್ನು ಶ್ಲಾಘಿಸಲೇಬೇಕು. ಯಾಕೆಂದರೆ ನಿಮಗೆ ಎಷ್ಟೇ ಕಷ್ಟಗಳು ಬಂದರೂ ನೀವು ಯೆಹೋವನ ಸೇವೆಯ ಮೇಲೆ ಗಮನವಿಟ್ಟಿದ್ದೀರಿ. ಆಧ್ಯಾತ್ಮಿಕ ಗುರಿಗಳನ್ನು ಇಟ್ಟಿದ್ದೀರಿ. ಸಾರುವ ಕೆಲಸಕ್ಕೆ ನಿಮ್ಮ ಜೀವನದಲ್ಲಿ ತುಂಬ ಮಹತ್ವ ಕೊಡುತ್ತೀರಿ. ನಿಮ್ಮ ಗುರಿಗಳನ್ನು ಮರೆತುಹೋಗುವಂತೆ ಮಾಡಲು ಈ ಲೋಕ ಪ್ರಯತ್ನಿಸುವಾಗ ನೀವು ಬಿಟ್ಟುಕೊಡುವುದಿಲ್ಲ. ನೀವು ಪಡುವ ಪ್ರಯಾಸ ವ್ಯರ್ಥವಾಗುವುದಿಲ್ಲ. ನಿಮ್ಮನ್ನು ಪ್ರೀತಿಸಿ ಬೆಂಬಲಿಸುವ ಸಹೋದರ ಸಹೋದರಿಯರು ನಿಮಗಿದ್ದಾರೆ. ಆದ್ದರಿಂದ ‘ನೀವೇನೇ ಮಾಡಿದರೂ ಅದನ್ನು ಯೆಹೋವನಿಗೆ ವಹಿಸಿಬಿಡಿ. ಆಗ ನಿಮ್ಮ ಯೋಜನೆಗಳು ಸಫಲವಾಗುವವು.’