ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 17

ದೇವರ ಸಹಾಯದಿಂದ ದೆವ್ವಗಳನ್ನು ಎದುರಿಸಿ

ದೇವರ ಸಹಾಯದಿಂದ ದೆವ್ವಗಳನ್ನು ಎದುರಿಸಿ

‘ನಮಗಿರುವ ಹೋರಾಟ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧ.’—ಎಫೆ. 6:12.

ಗೀತೆ 33 ಅವರಿಗೆ ಹೆದರಬೇಡಿ!

ಕಿರುನೋಟ *

1. ಎಫೆಸ 6:10-13​ರಲ್ಲಿ ತಿಳಿಸಿರುವಂತೆ, ಯೆಹೋವನಿಗೆ ನಮ್ಮ ಮೇಲೆ ಕಾಳಜಿ ಇದೆ ಎಂದು ತೋರಿಸಲು ಆತನು ಏನು ಮಾಡುತ್ತಾನೆ? ವಿವರಿಸಿ.

ಯೆಹೋವನಿಗೆ ತನ್ನ ಸೇವಕರಾದ ನಮ್ಮ ಮೇಲೆ ತುಂಬ ಕಾಳಜಿ ಇದೆ. ಆದ್ದರಿಂದ ನಮ್ಮ ಶತ್ರುಗಳನ್ನು ಎದುರಿಸಲು ಆತನು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಶತ್ರುಗಳಲ್ಲಿ ಮುಖ್ಯವಾಗಿರುವುದು ಸೈತಾನ ಮತ್ತು ದೆವ್ವಗಳು. ಈ ಶತ್ರುಗಳ ಬಗ್ಗೆ ಎಚ್ಚರ ವಹಿಸಿ ಎಂದು ಯೆಹೋವನು ಹೇಳಿದ್ದಾನೆ ಮತ್ತು ಅವುಗಳನ್ನು ಎದುರಿಸಲು ಬೇಕಾದ ಸಹಾಯವನ್ನು ಕೊಡುತ್ತಾನೆ. (ಎಫೆಸ 6:10-13 ಓದಿ.) ನಾವು ಯೆಹೋವನ ಸಹಾಯವನ್ನು ಸ್ವೀಕರಿಸಿ ಆತನ ಮೇಲೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಾದರೆ ಸೈತಾನನನ್ನು ಎದುರಿಸಿ ಗೆಲ್ಲಬಹುದು. ಅಪೊಸ್ತಲ ಪೌಲನಿಗೆ ಈ ವಿಷಯದಲ್ಲಿ ಯೆಹೋವನ ಮೇಲೆ ತುಂಬ ನಂಬಿಕೆ ಇತ್ತು. ಆದ್ದರಿಂದ ಆತನು “ದೇವರು ನಮ್ಮ ಪಕ್ಷದಲ್ಲಿರುವುದಾದರೆ ನಮ್ಮನ್ನು ಎದುರಿಸುವವರು ಯಾರು?” ಎಂದನು. ಇದೇ ನಂಬಿಕೆ ನಮಗೂ ಇರಲು ಸಾಧ್ಯ.—ರೋಮ. 8:31.

2. ಈ ಲೇಖನದಲ್ಲಿ ನಾವು ಯಾವುದರ ಬಗ್ಗೆ ಚರ್ಚೆ ಮಾಡಲಿದ್ದೇವೆ?

2 ನಾವು ಸತ್ಯ ಕ್ರೈಸ್ತರಾಗಿರುವುದರಿಂದ ಸೈತಾನ ಮತ್ತು ದೆವ್ವಗಳ ಬಗ್ಗೆ ಕೇಳಿಸಿಕೊಳ್ಳುವ ಕುತೂಹಲ ನಮಗಿಲ್ಲ. ನಾವು ಯೆಹೋವನ ಮೇಲೆ ಮತ್ತು ಆತನ ಸೇವೆಯ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. (ಕೀರ್ತ. 25:5) ಆದರೂ ಸೈತಾನ ಹೇಗೆ ಕೆಲಸ ಮಾಡುತ್ತಾನೆ ಅಂತ ನಾವು ತಿಳುಕೊಳ್ಳುವುದು ಮುಖ್ಯ. ಯಾಕೆ? ಇಲ್ಲಾ ಅಂದರೆ ಸೈತಾನ ನಮ್ಮನ್ನು ಸುಲಭವಾಗಿ ಏಮಾರಿಸಿಬಿಡುತ್ತಾನೆ. (2 ಕೊರಿಂ. 2:11) ಈ ಲೇಖನದಲ್ಲಿ, ಸೈತಾನ ಮತ್ತು ದೆವ್ವಗಳು ಜನರನ್ನು ಮೋಸ ಮಾಡಲು ಬಳಸುವ ಒಂದು ಪ್ರಧಾನ ವಿಧದ ಬಗ್ಗೆ ಮಾತಾಡಲಿದ್ದೇವೆ. ನಾವು ಅವುಗಳನ್ನು ಹೇಗೆ ಎದುರಿಸಿ ಗೆಲ್ಲಬಹುದು ಎಂದು ಸಹ ನೋಡಲಿದ್ದೇವೆ.

ದೆವ್ವಗಳು ದಾರಿತಪ್ಪಿಸುವ ವಿಧ

3-4. (ಎ) ಮಾಟಮಂತ್ರ ಅಂದರೆ ಏನು? (ಬಿ) ಮಾಟಮಂತ್ರದಲ್ಲಿ ಎಷ್ಟು ಜನ ನಂಬಿಕೆ ಇಟ್ಟಿದ್ದಾರೆ?

3 ಸೈತಾನ ಮತ್ತು ದೆವ್ವಗಳು ಮುಖ್ಯವಾಗಿ ಮಾಟಮಂತ್ರದ ಮೂಲಕ ಜನರಿಗೆ ಮೋಸ ಮಾಡಲು ಪ್ರಯತ್ನಿಸುತ್ತವೆ. ಮಾಟಮಂತ್ರ ಮಾಡುವವರು ತಮ್ಮಲ್ಲಿ ಅತಿಮಾನುಷ ಶಕ್ತಿ ಇದೆ ಮತ್ತು ಸಾಮಾನ್ಯವಾಗಿ ಬೇರೆಯವರಿಗೆ ಗೊತ್ತಿಲ್ಲದ ವಿಷಯಗಳು ತಮಗೆ ತಿಳಿದಿದೆ ಎಂದು ಹೇಳಿಕೊಳ್ಳುತ್ತಾರೆ. ಉದಾಹರಣೆಗೆ, ಕಣಿ ಮತ್ತು ಜ್ಯೋತಿಷ್ಯದ ಮೂಲಕ ತಮ್ಮಿಂದ ಭವಿಷ್ಯದಲ್ಲಿ ಏನಾಗುತ್ತೆ ಅಂತ ಹೇಳಕ್ಕಾಗುತ್ತೆ ಎಂದು ಅವರು ಹೇಳುತ್ತಾರೆ. ಇನ್ನು ಕೆಲವು ಮಾಂತ್ರಿಕರು ಸತ್ತವರ ಜೊತೆ ಮಾತಾಡುತ್ತಿರುವ ತರ ನಟಿಸುತ್ತಾರೆ. ವಾಮಾಚಾರ ಅಥವಾ ಮಂತ್ರತಂತ್ರದ ಮೂಲಕ ವಶೀಕರಣ ಮಾಡುತ್ತಾರೆ. *

4 ಮಾಟಮಂತ್ರದಲ್ಲಿ ಎಷ್ಟು ಜನ ನಂಬಿಕೆ ಇಟ್ಟಿದ್ದಾರೆ ಎಂದು ನಿಮಗೆ ಗೊತ್ತಾ? ಲ್ಯಾಟಿನ್‌ ಅಮೆರಿಕ ಮತ್ತು ಕೆರೀಬಿಯನ್‌ ಸಮುದ್ರದಲ್ಲಿ ಇರುವ 18 ದೇಶ-ದ್ವೀಪಗಳಲ್ಲಿ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಮೂವರಲ್ಲಿ ಒಬ್ಬ ವ್ಯಕ್ತಿ ಇಂದ್ರಜಾಲ, ವಾಮಾಚಾರ ಮತ್ತು ಪ್ರೇತವಿದ್ಯೆಯಲ್ಲಿ ನಂಬಿಕೆ ಇಟ್ಟಿದ್ದಾನೆ. ಅಷ್ಟೇ ಅಲ್ಲ, ದೆವ್ವಗಳ ಜೊತೆ ಮಾತಾಡಬಹುದು ಎಂದು ಕೂಡ ಹೆಚ್ಚುಕಡಿಮೆ ಇಷ್ಟೇ ಜನ ನಂಬುತ್ತಾರೆ. ಆಫ್ರಿಕದ 18 ದೇಶಗಳಲ್ಲಿ ಇನ್ನೊಂದು ಸಮೀಕ್ಷೆಯನ್ನು ನಡೆಸಲಾಯಿತು. ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕಿಂತ ಹೆಚ್ಚು ಮಂದಿ ವಾಮಾಚಾರದಲ್ಲಿ ನಂಬಿಕೆ ಇಟ್ಟಿದ್ದಾರೆ. ನಾವು ಲೋಕದ ಯಾವುದೇ ಭಾಗದಲ್ಲಿರಲಿ ಮಾಟಮಂತ್ರದ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಯಾಕೆಂದರೆ ಸೈತಾನನು “ಇಡೀ ನಿವಾಸಿತ ಭೂಮಿಯನ್ನು” ದಾರಿತಪ್ಪಿಸಲು ಪಣತೊಟ್ಟಿದ್ದಾನೆ.—ಪ್ರಕ. 12:9.

5. ಯೆಹೋವನಿಗೆ ಮಾಟಮಂತ್ರದ ಬಗ್ಗೆ ಹೇಗನಿಸುತ್ತದೆ?

5 ಯೆಹೋವನು ‘ಸತ್ಯದ ದೇವರು.’ (ಕೀರ್ತ. 31:5, ಪವಿತ್ರ ಗ್ರಂಥ ಭಾಷಾಂತರ) ಮಾಟಮಂತ್ರದ ಬಗ್ಗೆ ಆತನಿಗೆ ಹೇಗನಿಸುತ್ತೆ? ಆತನದನ್ನು ದ್ವೇಷಿಸುತ್ತಾನೆ. ಆದ್ದರಿಂದ ಆತನು ಇಸ್ರಾಯೇಲ್ಯರಿಗೆ, “ಮಕ್ಕಳನ್ನು ಆಹುತಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ” ಎಂದನು. (ಧರ್ಮೋ. 18:10-12) ಕ್ರೈಸ್ತರು ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದ ಕೆಳಗಿಲ್ಲ. ಆದರೂ ಆತನಿಗೆ ಮಾಟಮಂತ್ರದ ಬಗ್ಗೆ ಇರುವ ಭಾವನೆಗಳು ಬದಲಾಗಿಲ್ಲ.—ಮಲಾ. 3:6.

6. (ಎ) ಜನರಿಗೆ ಕೇಡು ಮಾಡಲು ಸೈತಾನನು ಮಾಟಮಂತ್ರವನ್ನು ಹೇಗೆ ಬಳಸುತ್ತಾನೆ? (ಬಿ) ಪ್ರಸಂಗಿ 9:5​ರ ಪ್ರಕಾರ, ಸತ್ತವರ ಸ್ಥಿತಿ ಏನು?

6 ಯೆಹೋವನು ಮಾಟಮಂತ್ರದ ಕಡೆ ತಲೆನೂ ಹಾಕಬೇಡಿ ಅಂತಿದ್ದಾನೆ. ಯಾಕೆಂದರೆ ಸೈತಾನನು ಇದನ್ನು ಬಳಸಿ ಜನರಿಗೆ ಕೇಡು ಮಾಡುತ್ತಾನೆ ಎಂದು ಯೆಹೋವನಿಗೆ ಗೊತ್ತು. ಸೈತಾನ ಮಾಟಮಂತ್ರ ಉಪಯೋಗಿಸಿ ಸುಳ್ಳುಗಳನ್ನೂ ಹಬ್ಬಿಸುತ್ತಾನೆ. ಸತ್ತವರು ಬೇರೊಂದು ಲೋಕದಲ್ಲಿ ಜೀವಂತವಾಗಿದ್ದಾರೆ ಎಂಬಂಥ ಸುಳ್ಳುಗಳನ್ನು ಮಾಟಮಂತ್ರದ ಮೂಲಕ ಹಬ್ಬಿಸಿದ್ದಾನೆ. (ಪ್ರಸಂಗಿ 9:5 ಓದಿ.) ಜನರನ್ನು ಹೆದರಿಸಿ ಬೆದರಿಸಿ ಯೆಹೋವನಿಂದ ದೂರಮಾಡಲು ಸಹ ಆತನು ಮಾಟಮಂತ್ರವನ್ನು ಬಳಸುತ್ತಾನೆ. ಜನ ಮಾಟಮಂತ್ರದಲ್ಲಿ ಒಳಗೂಡಬೇಕು ಅನ್ನುವುದೇ ಅವನ ಗುರಿ. ಹೀಗೆ ಮಾಡಿದರೆ ಜನರು ಯೆಹೋವನಲ್ಲಿ ಅಲ್ಲ ದೆವ್ವಗಳಲ್ಲಿ ನಂಬಿಕೆ ಇಡುತ್ತಾರೆ ಅಂತ ಅವನಿಗೆ ಗೊತ್ತು.

ನಾವು ದೆವ್ವಗಳನ್ನು ಹೇಗೆ ಎದುರಿಸಬಹುದು?

7. ಯೆಹೋವನು ನಮಗೆ ಏನು ಹೇಳಿದ್ದಾನೆ?

7 ಈ ಹಿಂದೆ ನೋಡಿದಂತೆ, ಸೈತಾನ ಮತ್ತು ದೆವ್ವಗಳಿಂದ ಮೋಸ ಹೋಗದಿರಲು ಏನನ್ನು ತಿಳುಕೊಂಡಿರಬೇಕೆಂದು ಯೆಹೋವನು ನಮಗೆ ಹೇಳಿದ್ದಾನೆ. ಸೈತಾನ ಮತ್ತು ದೆವ್ವಗಳ ವಿರುದ್ಧ ಹೋರಾಡಲು ಪ್ರಾಯೋಗಿಕವಾಗಿ ಏನು ಮಾಡಬೇಕೆಂದು ನೋಡೋಣ.

8. (ಎ) ನಾವು ದೆವ್ವಗಳನ್ನು ಎದುರಿಸುವ ಪ್ರಧಾನ ವಿಧ ಯಾವುದು? (ಬಿ) ಸತ್ತವರ ಬಗ್ಗೆ ಸೈತಾನ ಹೇಳಿರುವುದು ಸುಳ್ಳೆಂದು ಕೀರ್ತನೆ 146:4 ಹೇಗೆ ಬಯಲುಪಡಿಸುತ್ತದೆ?

8 ದೇವರ ವಾಕ್ಯವನ್ನು ಓದಿ ಧ್ಯಾನಿಸಿ. ದೆವ್ವಗಳು ಹಬ್ಬಿಸುವಂಥ ಸುಳ್ಳುಗಳನ್ನು ಎದುರಿಸಲು ಇದು ಪ್ರಧಾನ ವಿಧ ಆಗಿದೆ. ದೇವರ ವಾಕ್ಯ ಒಂದು ಚೂಪಾದ ಕತ್ತಿಯಂತೆ ಸೈತಾನ ಹಬ್ಬಿಸುವ ಸುಳ್ಳುಗಳನ್ನು ಕತ್ತರಿಸಿ ಹಾಕುತ್ತದೆ. (ಎಫೆ. 6:17) ಉದಾಹರಣೆಗೆ, ಸತ್ತವರು ಬದುಕಿರುವವರ ಜೊತೆ ಮಾತಾಡಕ್ಕಾಗುತ್ತೆ ಅನ್ನುವ ವಿಷಯವನ್ನು ದೇವರ ವಾಕ್ಯ ಸುಳ್ಳೆಂದು ಬಯಲುಪಡಿಸುತ್ತದೆ. (ಕೀರ್ತನೆ 146:4 ಓದಿ.) ಯೆಹೋವನು ಮಾತ್ರ ಭವಿಷ್ಯದ ಬಗ್ಗೆ ನಿಷ್ಕೃಷ್ಟವಾಗಿ ಹೇಳಬಲ್ಲನು ಎಂದು ಸಹ ತೋರಿಸುತ್ತದೆ. (ಯೆಶಾ. 45:21; 46:10) ನಾವು ದೇವರ ವಾಕ್ಯವನ್ನು ದಿನಾ ಓದಿ ಧ್ಯಾನಿಸಿದರೆ, ದೆವ್ವಗಳು ಹಬ್ಬಿಸುವಂಥ ಸುಳ್ಳುಗಳನ್ನು ದೂರ ಮಾಡುತ್ತೇವೆ ಮತ್ತು ದ್ವೇಷಿಸುತ್ತೇವೆ.

9. ನಾವು ಮಾಟಮಂತ್ರಕ್ಕೆ ಸಂಬಂಧಿಸಿದ ಯಾವ ಆಚಾರಗಳನ್ನು ಮಾಡುವುದಿಲ್ಲ?

9 ಮಾಟಮಂತ್ರಕ್ಕೆ ಸಂಬಂಧಪಟ್ಟ ಯಾವ ವಿಷಯದಲ್ಲೂ ತಲೆ ಹಾಕಬೇಡಿ. ಸತ್ಯ ಕ್ರೈಸ್ತರಾಗಿರುವ ನಾವು ಯಾವುದೇ ವಿಧದ ಮಾಟಮಂತ್ರದಲ್ಲಿ ಭಾಗವಹಿಸುವುದಿಲ್ಲ. ಉದಾಹರಣೆಗೆ, ನಾವು ಮಾಂತ್ರಿಕರ ಹತ್ತಿರ ಹೋಗುವುದಿಲ್ಲ ಅಥವಾ ಬೇರೆ ವಿಧದಲ್ಲಿ ಸತ್ತವರ ಜೊತೆ ಮಾತಾಡಲು ಪ್ರಯತ್ನಿಸುವುದಿಲ್ಲ. ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ಸತ್ತವರು ಎಲ್ಲೋ ಬದುಕಿದ್ದಾರೆ ಎಂಬ ನಂಬಿಕೆಯ ಮೇಲೆ ಆಧರಿಸಿ ಕೆಲವರು ಶವಸಂಸ್ಕಾರದ ಸಂಪ್ರದಾಯಗಳನ್ನು ಮಾಡುತ್ತಾರೆ. ಇದರಲ್ಲಿ ಕೂಡ ನಾವು ಸೇರುವುದಿಲ್ಲ. ನಾವು ಜ್ಯೋತಿಷ್ಯ ಅಥವಾ ಕಣಿಹೇಳುವವರ ಸಹಾಯದಿಂದ ಭವಿಷ್ಯದಲ್ಲಿ ಏನಾಗುತ್ತದೆ ಅಂತ ತಿಳುಕೊಳ್ಳಲು ಪ್ರಯತ್ನಿಸಲ್ಲ. (ಯೆಶಾ. 8:19) ಇಂಥ ಎಲ್ಲಾ ಆಚಾರಗಳು ತುಂಬ ಅಪಾಯಕಾರಿ ಎಂದು ನಮಗೆ ಗೊತ್ತು. ಯಾಕೆಂದರೆ ಇವು ನಮ್ಮನ್ನು ಸೈತಾನ ಮತ್ತು ದೆವ್ವಗಳ ಜೊತೆ ನೇರವಾದ ಸಂಪರ್ಕಕ್ಕೆ ಬರುವಂತೆ ಮಾಡುತ್ತವೆ.

ಮೊದಲನೇ ಶತಮಾನದ ಕ್ರೈಸ್ತರಂತೆ ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಬಿಸಾಕಿ ಮತ್ತು ಮಾಟಮಂತ್ರಕ್ಕೆ ಸಂಬಂಧಪಟ್ಟ ಮನೋರಂಜನೆಯಿಂದ ದೂರವಿರಿ (ಪ್ಯಾರ 10-12 ನೋಡಿ)

10-11. (ಎ) ಮೊದಲನೇ ಶತಮಾನದಲ್ಲಿ ಕೆಲವರು ಸತ್ಯ ಕಲಿತಾಗ ಏನು ಮಾಡಿದರು? (ಬಿ) 1 ಕೊರಿಂಥ 10:21 ಹೇಳುವ ಪ್ರಕಾರ, ನಾವು ಯಾಕೆ ಮೊದಲನೇ ಶತಮಾನದ ಕ್ರೈಸ್ತರ ಮಾದರಿಯನ್ನು ಅನುಕರಿಸಬೇಕು? (ಸಿ) ನಾವಿದನ್ನು ಹೇಗೆ ಮಾಡಬಹುದು?

10 ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಎಸೆದುಬಿಡಿ. ಮೊದಲನೇ ಶತಮಾನದ ಎಫೆಸದಲ್ಲಿ ಮಾಟಮಂತ್ರ ಮಾಡುತ್ತಿದ್ದ ಕೆಲವರು ಸತ್ಯ ಕಲಿತಾಗ ನಿರ್ಣಾಯಕ ಕ್ರಮ ತಗೊಂಡರು. “ಮಾಟಮಂತ್ರಗಳನ್ನು ಮಾಡುತ್ತಿದ್ದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಒಟ್ಟುಗೂಡಿಸಿ ಎಲ್ಲರ ಮುಂದೆ ಅವುಗಳನ್ನು ಸುಟ್ಟುಬಿಟ್ಟರು.” (ಅ. ಕಾ. 19:19) ದೆವ್ವಗಳನ್ನು ಎದುರಿಸಲು ಏನೇ ಮಾಡಬೇಕಾದರೂ ಅದನ್ನು ಮಾಡಲು ಇವರು ಸಿದ್ಧರಿದ್ದರು. ಅವರು ಇಟ್ಟುಕೊಂಡಿದ್ದ ಮಾಟಮಂತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳು ದುಬಾರಿಯಾಗಿದ್ದವು. ಆದರೆ ಈ ಪುಸ್ತಕಗಳನ್ನು ಬೇರೆಯವರಿಗೆ ಕೊಟ್ಟುಬಿಡುವ ಬದಲು ಅಥವಾ ಮಾರುವ ಬದಲು ಸುಟ್ಟುಹಾಕಿದರು. ಯೆಹೋವನಿಗೆ ಏನಿಷ್ಟಾನೋ ಅದೇ ಮುಖ್ಯ, ಪುಸ್ತಕಗಳ ಬೆಲೆ ಅಲ್ಲ ಅಂತ ಅವರಿಗೆ ಮನವರಿಕೆ ಆಯಿತು.

11 ಮೊದಲನೇ ಶತಮಾನದ ಆ ಕ್ರೈಸ್ತರ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು? ಮಾಟಮಂತ್ರಕ್ಕೆ ಸಂಬಂಧಪಟ್ಟ ಯಾವ ವಸ್ತುವನ್ನೂ ನಾವು ಇಟ್ಟುಕೊಳ್ಳಬಾರದು. ಅದು ತಾಯಿತ ಆಗಿರಬಹುದು, ಜಪಮಾಲೆ ಆಗಿರಬಹುದು ಅಥವಾ ಬೇರೆ ಯಾವ ವಸ್ತುನೇ ಆಗಿರಬಹುದು. ದೆವ್ವಗಳ ಕಾಟದಿಂದ ದೂರ ಇರಲು ಜನ ಏನನ್ನು ಹಾಕುತ್ತಾರೋ ಅಥವಾ ಇಟ್ಟುಕೊಳ್ಳುತ್ತಾರೋ ಅದೆಲ್ಲವನ್ನು ನಾವು ಬಿಸಾಡುವುದು ಒಳ್ಳೇದು.—1 ಕೊರಿಂಥ 10:21 ಓದಿ.

12. ನಾವು ಮನೋರಂಜನೆಗಾಗಿ ಆರಿಸಿಕೊಳ್ಳುವ ವಿಷಯಗಳ ಬಗ್ಗೆ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

12 ಮನೋರಂಜನೆಯನ್ನು ಆಯ್ಕೆ ಮಾಡುವಾಗ ಎಚ್ಚರವಹಿಸಿ. ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ: ‘ನಾನು ಮಾಟಮಂತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು, ಪತ್ರಿಕೆಗಳನ್ನು ಅಥವಾ ಆನ್‌ಲೈನ್‌ ಲೇಖನಗಳನ್ನು ಓದುತ್ತೇನಾ? ನಾನು ಕೇಳಿಸಿಕೊಳ್ಳುವ ಸಂಗೀತದಲ್ಲಿ, ನೋಡುವ ಚಲನಚಿತ್ರಗಳಲ್ಲಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಮಾಟಮಂತ್ರಕ್ಕೆ ಸಂಬಂಧಪಟ್ಟ ವಿಷಯ ಇದೆಯಾ? ನಾನು ಆಡುವ ವಿಡಿಯೋ ಗೇಮ್‌ಗಳಲ್ಲಿ ಮಾಟಮಂತ್ರಕ್ಕೆ ಸಂಬಂಧಪಟ್ಟ ವಿಷಯಗಳು ಇದೆಯಾ? ನಾನು ಮನೋರಂಜನೆಗೆ ಅಂತ ಬೇರೇನೇ ಮಾಡಿದರೂ ಅದರಲ್ಲಿ ಮಾಟಮಂತ್ರಕ್ಕೆ ಸಂಬಂಧಪಟ್ಟದ್ದು ಏನಾದರೂ ಇದೆಯಾ? ಅದರಲ್ಲಿ ರಕ್ತಪಿಶಾಚಿ, ಹೆಣಗಳು ಎದ್ದುಬರುವುದು, ಭೂತ-ಪ್ರೇತ ಇದೆಯಾ? ಅದರಲ್ಲಿ ಮಂತ್ರತಂತ್ರ, ವಶೀಕರಣ, ಮಾಟ ಮಾಡಿಡುವುದು ಇದೆಯಾ?’ ಆದರೆ ಮನೋರಂಜನೆಯಲ್ಲಿ ಇರುವ ಎಲ್ಲಾ ಕಲ್ಪನಾಕಥೆಗಳು ಅಥವಾ ಕಟ್ಟುಕಥೆಗಳು ಮಾಟಮಂತ್ರಕ್ಕೆ ಸೇರಿರಲ್ಲ. ನೀವು ಮನೋರಂಜನೆಗಾಗಿ ಏನಾದರೂ ಮಾಡಲು ಯೋಚಿಸುವಾಗ, ಯೆಹೋವ ದೇವರು ದ್ವೇಷಿಸುವ ವಿಷಯಗಳು ಅದರಲ್ಲಿ ಇರಬಾರದು. ನಾವು ಯೆಹೋವ ದೇವರ ಮುಂದೆ ಶುದ್ಧ ಮನಸ್ಸಾಕ್ಷಿಯಿಂದ ಇರಲು ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕು.—ಅ. ಕಾ. 24:16. *

13. ನಾವು ಏನು ಮಾಡಬಾರದು?

13 ಭೂತ-ಪ್ರೇತದ ಕಥೆ ಹೇಳುತ್ತಾ ಇರಬೇಡಿ. ಈ ವಿಷಯದಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಕರಿಸಬೇಕು. (1 ಪೇತ್ರ 2:21) ಭೂಮಿಗೆ ಬರುವ ಮುಂಚೆ ಯೇಸು ಸ್ವರ್ಗದಲ್ಲಿದ್ದನು. ಆದ್ದರಿಂದ ಆತನಿಗೆ ಸೈತಾನ ಮತ್ತು ದೆವ್ವಗಳ ಬಗ್ಗೆ ತುಂಬ ವಿಷಯ ಗೊತ್ತಿತ್ತು. ಸೈತಾನ-ದೆವ್ವಗಳು ಸೇರಿಕೊಂಡು ಏನೆಲ್ಲಾ ಮಾಡಿದವು ಎಂದು ಆತನು ಜನರಿಗೆ ಕಥೆ ಹೇಳುತ್ತಾ ಇರಲಿಲ್ಲ. ಯೇಸು ಕ್ರಿಸ್ತನು ಯೆಹೋವ ದೇವರಿಗೆ ಸಾಕ್ಷಿಕೊಡಲು ಬಯಸಿದನೇ ಹೊರತು ಸೈತಾನನ ಬಗ್ಗೆ ಪ್ರಚಾರ ಮಾಡಲು ಇಷ್ಟಪಡಲಿಲ್ಲ. ಅದೇ ರೀತಿ ನಾವು ಕೂಡ ಭೂತ-ಪ್ರೇತದ ಕಥೆ ಹೇಳಿಕೊಂಡು ಬರಬಾರದು. ಅದರ ಬದಲು ನಮ್ಮ ಹೃದಯ ಸತ್ಯದ ಕುರಿತಾದ ಒಳ್ಳೇ ವಿಷಯಗಳನ್ನು ಹೇಳುವುದಕ್ಕೆ ತವಕಪಡುತ್ತದೆ ಎಂದು ನಮ್ಮ ಮಾತುಗಳಿಂದ ಗೊತ್ತಾಗಬೇಕು.—ಕೀರ್ತ. 45:1.

ನಾವು ದೆವ್ವಗಳಿಗೆ ಹೆದರುವ ಆವಶ್ಯಕತೆ ಇಲ್ಲ. ಅವುಗಳಿಗಿಂತ ಯೆಹೋವಗೆ, ಯೇಸುಗೆ, ದೇವದೂತರಿಗೆ ತುಂಬ ಶಕ್ತಿ ಇದೆ (ಪ್ಯಾರ 14-15 ನೋಡಿ) *

14-15. (ಎ) ನಾವು ಯಾಕೆ ದೆವ್ವಗಳಿಗೆ ಹೆದರಬಾರದು? (ಬಿ) ಯೆಹೋವನು ಇಂದು ಕೂಡ ತನ್ನ ಜನರನ್ನು ಸಂರಕ್ಷಿಸುತ್ತಾನೆ ಅನ್ನುವುದಕ್ಕೆ ಯಾವ ಪುರಾವೆ ಇದೆ?

14 ದೆವ್ವಗಳಿಗೆ ಹೆದರಬೇಡಿ. ಈ ಲೋಕದಲ್ಲಿ ನಮಗೆ ಕೆಟ್ಟದ್ದೇನಾದರೂ ಆಗಬಹುದು. ಅಪಘಾತ ಆಗಬಹುದು, ಕಾಯಿಲೆ ಬರಬಹುದು, ಸಾವು ಕೂಡ ಬರಬಹುದು. ಇದಕ್ಕೆಲ್ಲ ದೆವ್ವಗಳೇ ಕಾರಣ ಎಂದು ನಾವು ನೆನಸಬಾರದು. ಆಕಸ್ಮಿಕವಾಗಿ ಕೆಲವು ವಿಷಯಗಳು ನಡೆದುಹೋಗುತ್ತೆ ಎಂದು ಬೈಬಲ್‌ ಹೇಳುತ್ತದೆ. (ಪ್ರಸಂ. 9:11) ದೆವ್ವಗಳ ವಿಷಯಕ್ಕೆ ಬರುವುದಾದರೆ, ಯೆಹೋವನು ದೆವ್ವಗಳಿಗಿಂತ ತುಂಬ ಶಕ್ತಿಶಾಲಿ ಎಂದು ಈಗಾಗಲೇ ತೋರಿಸಿದ್ದಾನೆ. ಉದಾಹರಣೆಗೆ, ಸೈತಾನ ಯೋಬನನ್ನು ಕೊಲ್ಲಲು ಯೆಹೋವನು ಅನುಮತಿಸಲಿಲ್ಲ. (ಯೋಬ 2:6) ಮೋಶೆಯ ದಿನಗಳಲ್ಲಿ, ಐಗುಪ್ತದಲ್ಲಿದ್ದ ಜೋಯಿಸರಿಗಿಂತ ತನಗೆ ಹೆಚ್ಚು ಶಕ್ತಿ ಇದೆ ಎಂದು ಯೆಹೋವನು ತೋರಿಸಿದನು. (ವಿಮೋ. 8:18; 9:11) ನಂತರ ಸ್ವರ್ಗದಲ್ಲಿ ಯೆಹೋವನು ಯೇಸುಗೆ ಸೈತಾನ ಮತ್ತು ದೆವ್ವಗಳ ಮೇಲೆ ಅಧಿಕಾರ ಕೊಟ್ಟನು. ಆಗ ಯೇಸು ಅವನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಿದನು. ತುಂಬ ಬೇಗ ಅಗಾಧ ಸ್ಥಳಕ್ಕೂ ದೊಬ್ಬಿಬಿಡುವನು. ಆಮೇಲೆ ಅವುಗಳಿಂದ ಯಾರಿಗೂ ಹಾನಿ ಆಗಲ್ಲ.—ಪ್ರಕ. 12:9; 20:2, 3.

15 ಯೆಹೋವನು ಇಂದು ಕೂಡ ತನ್ನ ಜನರನ್ನು ಸಂರಕ್ಷಿಸುತ್ತಾನೆ ಅನ್ನುವುದಕ್ಕೆ ಎಷ್ಟೋ ಪುರಾವೆ ಇದೆ. ಉದಾಹರಣೆಗೆ, ನಾವು ಭೂಮಿಯ ಎಲ್ಲಾ ಕಡೆ ಸುವಾರ್ತೆ ಸಾರುತ್ತಿದ್ದೇವೆ. (ಮತ್ತಾ. 28:19, 20) ಸಾರುವಾಗ ನಾವು ಸೈತಾನನ ಕೆಟ್ಟ ಕೆಲಸಗಳನ್ನು ಬಯಲಿಗೆ ತರುತ್ತೇವೆ. ಸೈತಾನನಿಗೆ ಒಂದುವೇಳೆ ಸಾಧ್ಯ ಇದ್ದಿದ್ದರೆ ಖಂಡಿತ ನಮ್ಮ ಸಾರುವ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಿದ್ದ. ಆದರೆ ಅವನಿಂದ ಇದು ಸಾಧ್ಯವಿಲ್ಲ. ಹಾಗಾಗಿ ನಾವು ದೆವ್ವಗಳಿಗೆ ಹೆದರುವ ಆವಶ್ಯಕತೆ ಇಲ್ಲ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂದು ನಮಗೆ ಗೊತ್ತು. (2 ಪೂರ್ವ. 16:9) ನಾವು ನಿಷ್ಠೆಯಿಂದ ಇದ್ದರೆ ದೆವ್ವಗಳು ನಮಗೆ ಶಾಶ್ವತ ಹಾನಿ ಮಾಡಕ್ಕಾಗಲ್ಲ.

ದೇವರ ಸಹಾಯದಿಂದ ದೆವ್ವಗಳನ್ನು ಎದುರಿಸುವವರಿಗೆ ಸಿಗುವ ಆಶೀರ್ವಾದಗಳು

16-17. ದೆವ್ವಗಳನ್ನು ಎದುರಿಸಲು ಧೈರ್ಯ ಬೇಕಾಗುತ್ತದೆ ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

16 ದೆವ್ವಗಳನ್ನು ಎದುರಿಸಲು ನಮಗೆ ಧೈರ್ಯ ಬೇಕು. ನಮಗೆ ಏನಾದರೂ ಕೇಡು ಆಗಬಹುದು ಎಂದು ಹೆದರುವ ಸ್ನೇಹಿತರು ಮತ್ತು ಸಂಬಂಧಿಕರು ಒತ್ತಡ ಹಾಕುವಾಗ ನಾವು ಮುಖ್ಯವಾಗಿ ಧೈರ್ಯ ತೋರಿಸಬೇಕು. ಇಂಥ ಸಂದರ್ಭದಲ್ಲಿ ನಾವು ಧೈರ್ಯ ತೋರಿಸುವಾಗ ಯೆಹೋವನು ನಮ್ಮನ್ನು ಆಶೀರ್ವದಿಸುತ್ತಾನೆ. ಎರಿಕಾ ಎಂಬ ಸಹೋದರಿಯ ಅನುಭವ ನೋಡಿ. ಇವಳು ಘಾನ ದೇಶದವಳು. ಎರಿಕಾಗೆ 21 ವರ್ಷ ಇದ್ದಾಗ ಅವಳು ಬೈಬಲ್‌ ಅಧ್ಯಯನ ತಗೊಂಡಳು. ಅವಳ ತಂದೆ ಮಾಟಮಂತ್ರ ಮಾಡುತ್ತಿದ್ದ ಪೂಜಾರಿ. ತನ್ನ ತಂದೆ ಆರಾಧಿಸುತ್ತಿದ್ದ ದೇವರುಗಳಿಗೆ ಅರ್ಪಿಸಿದ ಮಾಂಸವನ್ನು ತಿನ್ನಬೇಕೆಂದು ಅವಳಿಗೆ ಹೇಳಿದರು. ಇದು ಮಾಟಮಂತ್ರಕ್ಕೆ ಸಂಬಂಧಿಸಿದ ಒಂದು ಪದ್ಧತಿ. ಎರಿಕಾ ಇದನ್ನು ಮಾಡಕ್ಕಾಗಲ್ಲ ಅಂದಾಗ, ಅವಳು ದೇವರುಗಳನ್ನು ಅವಮಾನ ಮಾಡುತ್ತಿದ್ದಾಳೆ ಎಂದು ಕುಟುಂಬದ ಸದಸ್ಯರಿಗೆ ಅನಿಸಿತು. ದೇವರುಗಳು ತಮಗೆ ಮಾನಸಿಕ ಮತ್ತು ಶಾರೀರಿಕ ಕಾಯಿಲೆ ಕೊಟ್ಟು ದಂಡಿಸಬಹುದು ಎಂದವರು ನೆನಸಿದರು.

17 ಎರಿಕಾ ಆ ಸಂಪ್ರದಾಯವನ್ನು ಮಾಡಲೇಬೇಕೆಂದು ಕುಟುಂಬದ ಸದಸ್ಯರು ಒತ್ತಾಯಿಸಿದರು. ಆದರೆ ಅವಳು ಅದಕ್ಕೆ ಒಪ್ಪಲಿಲ್ಲ. ಇದರಿಂದ ಅವಳು ಮನೆ ಬಿಟ್ಟು ಹೋಗಬೇಕಾಯಿತು. ಕೆಲವು ಸಾಕ್ಷಿಗಳು ಅವಳನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡರು. ಹೀಗೆ ಯೆಹೋವನು ಎರಿಕಾಗೆ ಒಂದು ಹೊಸ ಕುಟುಂಬ ಕೊಟ್ಟನು. ಸಭೆಯಲ್ಲಿದ್ದ ಸಹೋದರ-ಸಹೋದರಿಯರು ಎರಿಕಾಗೆ ಒಡಹುಟ್ಟಿದವರಂತೆ ಆದರು. (ಮಾರ್ಕ 10:29, 30) ಎರಿಕಾ ಸಂಬಂಧಿಕರು ಅವಳನ್ನು ಕೈಬಿಟ್ಟರು ಮತ್ತು ಅವಳಿಗೆ ಸೇರಿದ ಎಲ್ಲಾ ವಸ್ತುಗಳನ್ನು ಸುಟ್ಟುಹಾಕಿದರು. ಆದರೂ ಅವಳು ಯೆಹೋವನಿಗೆ ನಿಷ್ಠಾವಂತಳಾಗಿ ಉಳಿದಳು. ದೀಕ್ಷಾಸ್ನಾನ ತಗೊಂಡು ಈಗ ಒಬ್ಬ ಪಯನೀಯರಾಗಿ ಸೇವೆ ಮಾಡುತ್ತಿದ್ದಾಳೆ. ಎರಿಕಾ ದೆವ್ವಗಳಿಗೆ ಹೆದರುವುದಿಲ್ಲ. ತನ್ನ ಕುಟುಂಬದ ಬಗ್ಗೆ ನೆನಸಿಕೊಳ್ಳುತ್ತಾ ಎರಿಕಾ ಹೇಳುವುದು: “ನನ್ನ ಕುಟುಂಬ ಸಹ ಯೆಹೋವನ ಬಗ್ಗೆ ತಿಳುಕೊಂಡು ಆತನ ಸೇವೆ ಮಾಡುವುದರಿಂದ ಸಿಗುವ ಆಶೀರ್ವಾದವನ್ನು ಅನುಭವಿಸಬೇಕೆಂದು ನಾನು ಪ್ರತಿ ದಿನ ಪ್ರಾರ್ಥನೆ ಮಾಡುತ್ತೇನೆ.”

18. ಯೆಹೋವನಲ್ಲಿ ಭರವಸೆ ಇಡುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ?

18 ನಮ್ಮೆಲ್ಲರಿಗೂ ಇಂಥ ದೊಡ್ಡ ಪರೀಕ್ಷೆ ಬರದೇ ಇರಬಹುದು. ಆದರೆ ನಾವೆಲ್ಲರೂ ದೇವರಲ್ಲಿ ಭರವಸೆ ಇಟ್ಟು ದೆವ್ವಗಳನ್ನು ಎದುರಿಸಬೇಕು. ಹೀಗೆ ಮಾಡಿದರೆ ನಮಗೆ ತುಂಬ ಆಶೀರ್ವಾದ ಸಿಗುತ್ತೆ ಮತ್ತು ಸೈತಾನ ಹೇಳುವ ಸುಳ್ಳುಗಳಿಂದ ನಾವು ಮೋಸ ಹೋಗಲ್ಲ. ದೆವ್ವಗಳ ಭಯದಿಂದ ನಾವು ದೇವರ ಸೇವೆಯನ್ನು ಬಿಟ್ಟುಬಿಡಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಯುತ್ತದೆ. ಈ ಸಂಬಂಧವಾಗಿ ಶಿಷ್ಯನಾದ ಯಾಕೋಬನು ಹೀಗೆ ಬರೆದನು: “ದೇವರಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ; ಆದರೆ ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋ. 4:7, 8.

ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

^ ಪ್ಯಾರ. 5 ಯೆಹೋವನು ನಮಗೆ ದೆವ್ವಗಳ ಬಗ್ಗೆ ಮತ್ತು ಅವು ಹೇಗೆಲ್ಲಾ ಕಷ್ಟ ಕೊಡುತ್ತವೆ ಅನ್ನುವುದರ ಬಗ್ಗೆ ಪ್ರೀತಿಯಿಂದ ಎಚ್ಚರಿಸಿದ್ದಾನೆ. ಈ ದೆವ್ವಗಳು ಜನರನ್ನು ಹೇಗೆ ಮೋಸ ಮಾಡುತ್ತವೆ? ಅವುಗಳನ್ನು ಎದುರಿಸಲು ನಾವೇನು ಮಾಡಬೇಕು? ಅವುಗಳ ಪ್ರಭಾವಕ್ಕೆ ಒಳಗಾಗದಿರಲು ನಮಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ ಎಂದು ಈ ಲೇಖನದಲ್ಲಿ ಚರ್ಚೆ ಮಾಡಲಿದ್ದೇವೆ.

^ ಪ್ಯಾರ. 3 ಪದ ವಿವರಣೆ: ಮಾಟಮಂತ್ರ ಅನ್ನುವುದು ದೆವ್ವಗಳಿಗೆ ಸಂಬಂಧಪಟ್ಟ ನಂಬಿಕೆಗಳು ಮತ್ತು ಆಚಾರಗಳಿಗೆ ಸೂಚಿಸುತ್ತದೆ. ಮಾನವರು ಸತ್ತ ಮೇಲೆ ಆತ್ಮಗಳಾಗಿ ಬಂದು ಮುಖ್ಯವಾಗಿ ಒಬ್ಬ ಮಾಂತ್ರಿಕನ ಮೂಲಕ ಜೀವಂತ ಇರುವವರ ಜೊತೆ ಮಾತಾಡುತ್ತವೆ ಅನ್ನುವ ನಂಬಿಕೆ ಇದರಲ್ಲಿ ಸೇರಿದೆ. ಮಾಟಮಂತ್ರದಲ್ಲಿ ವಾಮಾಚಾರ ಮತ್ತು ಕಣಿಹೇಳುವುದು ಸಹ ಸೇರಿದೆ. ಇದು ಅತಿಮಾನುಷ ವಿಷಯಗಳಿಗೆ ಸಂಬಂಧಿಸಿದ ಆಚಾರ-ವಿಚಾರಗಳಿಗೂ ಸೂಚಿಸುತ್ತದೆ. ಇದರಲ್ಲಿ ಮಾಟ ಮಾಡಿಡುವುದು ಮತ್ತು ವಶೀಕರಣ ಮಾಡುವುದು ಅಥವಾ ವಶೀಕರಣಕ್ಕೆ ಬಂದಿಯಾಗಿರುವವರನ್ನು ಬಿಡಿಸುವುದು ಸೇರಿದೆ. ಇಲ್ಲಿ ನಾವು ಮ್ಯಾಜಿಕ್‌ ಅಥವಾ ಜಾದೂ ಬಗ್ಗೆ ಮಾತಾಡುತ್ತಿಲ್ಲ. ಮ್ಯಾಜಿಕನ್ನು ಒಬ್ಬ ವ್ಯಕ್ತಿ ತನ್ನ ಕೈಚಳಕ ತೋರಿಸುತ್ತಾ ಬರೀ ಮೋಜಿಗಾಗಿ ಜನರ ಮುಂದೆ ಮಾಡುತ್ತಾನೆ.

^ ಪ್ಯಾರ. 12 ಯಾವ ಮನೋರಂಜನೆಯನ್ನು ಆರಿಸಿಕೊಳ್ಳಬೇಕು, ಯಾವುದನ್ನು ಆರಿಸಿಕೊಳ್ಳಬಾರದು ಅನ್ನುವ ವಿಷಯದಲ್ಲಿ ನಿಯಮಗಳನ್ನು ಮಾಡಲು ಹಿರಿಯರಿಗೆ ಅಧಿಕಾರ ಇಲ್ಲ. ಏನನ್ನು ಓದಬೇಕು, ನೋಡಬೇಕು, ಆಡಬೇಕು ಅನ್ನುವ ವಿಷಯವನ್ನು ಪ್ರತಿಯೊಬ್ಬ ಕ್ರೈಸ್ತನು ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಸಹಾಯದಿಂದ ಆರಿಸಬೇಕು. ಬುದ್ಧಿವಂತನಾದ ಒಬ್ಬ ಕುಟುಂಬದ ಶಿರಸ್ಸು, ಬೈಬಲ್‌ ತತ್ವಗಳಿಗೆ ಅನುಸಾರ ತನ್ನ ಕುಟುಂಬ ಮನೋರಂಜನೆಯನ್ನು ಆರಿಸಿಕೊಳ್ಳುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳುತ್ತಾನೆ.—jw.org ವೆಬ್‌ಸೈಟಲ್ಲಿ “ಯೆಹೋವನ ಸಾಕ್ಷಿಗಳು ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ನಿಷೇಧಿಸುತ್ತಾರೋ?” ಎಂಬ ಲೇಖನ ನೋಡಿ. (‘ನಮ್ಮ ಬಗ್ಗೆ’ ವಿಭಾಗದಲ್ಲಿ ‘ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು’ ಸರಣಿಯಲ್ಲಿ ನೋಡಿ.)

^ ಪ್ಯಾರ. 54 ಚಿತ್ರ ವಿವರಣೆ: ದೇವದೂತ ಸೈನ್ಯದೊಂದಿಗೆ ಶಕ್ತಿಶಾಲಿ ಸ್ವರ್ಗೀಯ ರಾಜನಾಗಿ ಯೇಸು.