ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 14

ದೇವರ ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡುತ್ತಿದ್ದೀರಾ?

ದೇವರ ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡುತ್ತಿದ್ದೀರಾ?

“ಸೌವಾರ್ತಿಕನ ಕೆಲಸವನ್ನು ಮಾಡು, ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು.”—2 ತಿಮೊ. 4:5.

ಗೀತೆ 142 ಎಲ್ಲ ರೀತಿಯ ಜನರಿಗೆ ಸಾರಿ

ಕಿರುನೋಟ *

ಯೇಸು ಪುನರುತ್ಥಾನವಾದ ಮೇಲೆ ತನ್ನ ಶಿಷ್ಯರನ್ನು ಭೇಟಿ ಮಾಡಿ “ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ” ಎಂದು ಆಜ್ಞೆ ಕೊಡುತ್ತಿದ್ದಾನೆ (ಅಧ್ಯಯನ ಲೇಖನ 14, ಪ್ಯಾರ 1 ನೋಡಿ)

1. ದೇವರ ಸೇವಕರೆಲ್ಲರೂ ಏನು ಮಾಡಲು ಬಯಸುತ್ತಾರೆ? ಯಾಕೆ? (ಮುಖಪುಟ ಚಿತ್ರ ನೋಡಿ.)

ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆ ಕೊಟ್ಟನು. (ಮತ್ತಾ. 28:19) ಆದ್ದರಿಂದ ದೇವರ ನಿಷ್ಠಾವಂತ ಸೇವಕರೆಲ್ಲರೂ ಯೇಸು ಕೊಟ್ಟಿರುವ ಕೆಲಸವನ್ನು ‘ಸಂಪೂರ್ಣವಾಗಿ ಮಾಡುವುದು’ ಹೇಗೆಂದು ಕಲಿಯಲು ಬಯಸುತ್ತಾರೆ. (2 ತಿಮೊ. 4:5) ಯಾಕೆಂದರೆ ಈ ಕೆಲಸಕ್ಕಿಂತ ಪ್ರಾಮುಖ್ಯವಾದ, ಅರ್ಥಭರಿತವಾದ ಮತ್ತು ತುಂಬ ತುರ್ತಿನಿಂದ ಮಾಡಬೇಕಾದ ಕೆಲಸ ಬೇರೊಂದಿಲ್ಲ. ಆದರೆ ನಾವು ನೆನಸಿದಷ್ಟು ಸೇವೆ ಮಾಡಲು ಆಗದೇ ಇರಬಹುದು.

2. ಸೇವೆಯನ್ನು ನಾವು ಬಯಸಿದಷ್ಟು ಮಾಡಲು ಯಾಕೆ ಕಷ್ಟ ಆಗಬಹುದು?

2 ನಮ್ಮ ಸಮಯ ಮತ್ತು ಶಕ್ತಿಯನ್ನು ಮುಖ್ಯವಾದ ಬೇರೆ ಚಟುವಟಿಕೆಗಳಿಗೂ ನಾವು ಕೊಡಬೇಕಾಗುತ್ತದೆ. ನಮ್ಮ ಅಗತ್ಯಗಳನ್ನು ಮತ್ತು ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ತುಂಬ ತಾಸು ದುಡಿಯಬೇಕಾಗಿರಬಹುದು. ಕುಟುಂಬದ ಜವಾಬ್ದಾರಿಗಳಿಂದ, ಕಾಯಿಲೆಗಳಿಂದ, ಖಿನ್ನತೆಯಿಂದ ಅಥವಾ ವಯಸ್ಸಾಗಿ ಅನುಭವಿಸುತ್ತಿರುವ ಸಮಸ್ಯೆಗಳಿಂದ ನಾವು ತುಂಬ ಕಷ್ಟಪಡುತ್ತಿರಬಹುದು. ಇಂಥ ಕಷ್ಟದ ಸನ್ನಿವೇಶಗಳಿದ್ದರೂ ದೇವರ ಸೇವೆಯನ್ನು ನಾವು ಹೇಗೆ ನಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡಬಹುದು?

3. ಮತ್ತಾಯ 13:23​ರಲ್ಲಿರುವ ಯೇಸುವಿನ ಮಾತಿನಿಂದ ನಮಗೇನು ಗೊತ್ತಾಗುತ್ತದೆ?

3 ನಮ್ಮ ಸನ್ನಿವೇಶಗಳಿಂದಾಗಿ ಯೆಹೋವನ ಸೇವೆಗೆ ಹೆಚ್ಚು ಸಮಯ ಕೊಡಕ್ಕಾಗದಿದ್ದರೆ ನಾವು ನಿರುತ್ಸಾಹಗೊಳ್ಳಬಾರದು. ನಮ್ಮಲ್ಲಿ ಪ್ರತಿಯೊಬ್ಬರು ಒಂದೇ ಪ್ರಮಾಣದಲ್ಲಿ ಫಲ ಕೊಡಲು ಸಾಧ್ಯವಿಲ್ಲ ಎಂದು ಯೇಸುವಿಗೆ ಗೊತ್ತಿತ್ತು. (ಮತ್ತಾಯ 13:23 ಓದಿ.) ಯೆಹೋವನ ಸೇವೆಯಲ್ಲಿ ನಾವೇನೇ ಮಾಡಿದರೂ ಅದು ನಮ್ಮಿಂದಾದ ಅತ್ಯುತ್ತಮ ಸೇವೆಯಾಗಿದ್ದರೆ ಆತನದನ್ನು ತುಂಬ ಮಾನ್ಯಮಾಡುತ್ತಾನೆ. (ಇಬ್ರಿ. 6:10-12) ಆದರೆ ನಮ್ಮಲ್ಲಿ ಕೆಲವರಿಗೆ ತಮ್ಮ ಸನ್ನಿವೇಶವನ್ನು ನೋಡುವಾಗ ಹೆಚ್ಚು ಸೇವೆ ಮಾಡಕ್ಕಾಗುತ್ತೆ ಅಂತ ಅನಿಸಬಹುದು. ಈ ಲೇಖನದಲ್ಲಿ, ನಾವು ಸೇವೆಗೆ ಹೇಗೆ ಮೊದಲ ಸ್ಥಾನ ಕೊಡಬಹುದು, ಜೀವನವನ್ನು ಹೇಗೆ ಸರಳವಾಗಿ ಇಡಬಹುದು, ಸಾರುವ ಕೆಲಸವನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದೆಂದು ನೋಡೋಣ. ಅದಕ್ಕಿಂತ ಮೊದಲು, ಸೇವೆಯನ್ನು ಸಂಪೂರ್ಣವಾಗಿ ಮಾಡುವುದು ಅಂದರೇನು ಎಂದು ನೋಡೋಣ.

4. ಸೇವೆಯನ್ನು ಸಂಪೂರ್ಣವಾಗಿ ಮಾಡುವುದು ಅಂದರೆ ಏನು?

4 ಸೇವೆಯನ್ನು ಸಂಪೂರ್ಣವಾಗಿ ಮಾಡುವುದು ಅಂದರೆ ಸಾರುವ ಮತ್ತು ಕಲಿಸುವ ಕೆಲಸವನ್ನು ನಮ್ಮಿಂದ ಎಷ್ಟು ಸಾಧ್ಯನೋ ಅಷ್ಟನ್ನು ಮಾಡುವುದು ಎಂದಾಗಿದೆ. ಆದರೆ ಈ ಕೆಲಸಕ್ಕಾಗಿ ಎಷ್ಟು ಸಮಯ ಕೊಡುತ್ತೇವೆ ಅನ್ನುವುದಕ್ಕಿಂತ ಯಾಕೆ ಈ ಕೆಲಸ ಮಾಡುತ್ತೇವೆ ಅನ್ನುವುದು ಯೆಹೋವನಿಗೆ ಮುಖ್ಯ. ನಮಗೆ ಯೆಹೋವನ ಮೇಲೆ ಮತ್ತು ನಮ್ಮ ನೆರೆಯವರ ಮೇಲೆ ಪ್ರೀತಿ ಇರುವುದರಿಂದ ಯೆಹೋವನ ಸೇವೆಯನ್ನು * ಪೂರ್ಣಪ್ರಾಣದಿಂದ ಮಾಡುತ್ತೇವೆ. (ಮಾರ್ಕ 12:30, 31; ಕೊಲೊ. 3:23) ದೇವರ ಸೇವೆಯನ್ನು ಪೂರ್ಣಪ್ರಾಣದಿಂದ ಮಾಡುವುದೆಂದರೆ ಆತನ ಸೇವೆಗಾಗಿ ನಮ್ಮೆಲ್ಲಾ ಶಕ್ತಿ-ಸಾಮರ್ಥ್ಯವನ್ನು ಬಳಸುವುದೇ ಆಗಿದೆ. ಸಾರುವ ಕೆಲಸವನ್ನು ಒಂದು ಸುಯೋಗ ಎಂದು ನೋಡಿದರೆ ನಮ್ಮಿಂದಾದಷ್ಟು ಹೆಚ್ಚು ಜನರಿಗೆ ಸುವಾರ್ತೆ ಸಾರಲು ಪ್ರಯತ್ನಿಸುತ್ತೇವೆ.

5-6. ಒಬ್ಬ ವ್ಯಕ್ತಿಗೆ ಸೇವೆ ಮಾಡಲು ಸ್ವಲ್ಪವೇ ಸಮಯ ಇದ್ದರೂ ಅದಕ್ಕೆ ಹೇಗೆ ಮೊದಲ ಸ್ಥಾನ ಕೊಡಬಹುದು ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

5 ಒಂದು ಉದಾಹರಣೆ ನೋಡಿ. ಒಬ್ಬ ಯುವಕನಿಗೆ ಗಿಟಾರ್‌ ನುಡಿಸುವುದು ಅಂದರೆ ತುಂಬ ಇಷ್ಟ. ಸಾಧ್ಯವಾದಾಗೆಲ್ಲ ನುಡಿಸುತ್ತಿರುತ್ತಾನೆ. ಆದರೆ ಹೊಟ್ಟೆಪಾಡಿಗಾಗಿ ಅವನು ಒಂದು ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಅವನು ಅಂಗಡಿಯಲ್ಲೇ ಹೆಚ್ಚು ಸಮಯ ಕಳೆಯುವುದಾದರೂ ಅವನ ಮನಸ್ಸೆಲ್ಲ ಸಂಗೀತದ ಮೇಲೇ ಇರುತ್ತದೆ. ಗಿಟಾರನ್ನು ಇನ್ನೂ ಚೆನ್ನಾಗಿ ನುಡಿಸೋಕೆ ಕಲಿಯಬೇಕು, ಪೂರ್ಣ ಸಮಯದ ಸಂಗೀತಗಾರ ಆಗಬೇಕು ಎಂದು ತುಂಬ ಆಸೆಪಡುತ್ತಾನೆ. ಗಿಟಾರ್‌ ನುಡಿಸಲು ಚಿಕ್ಕ ಅವಕಾಶ ಸಿಕ್ಕಿದರೆ ಸಾಕು ಕುಣಿದು ಕುಪ್ಪಳಿಸುತ್ತಾನೆ.

6 ಅದೇ ರೀತಿ, ಸಾರುವ ಕೆಲಸಕ್ಕೆ ನೀವು ಬಯಸಿದಷ್ಟು ಸಮಯವನ್ನು ನಿಮ್ಮಿಂದ ಕೊಡಕ್ಕಾಗದೇ ಇರಬಹುದು. ಆದರೂ ನಿಮ್ಮ ಮನಸ್ಸೆಲ್ಲಾ ಆ ಕೆಲಸದ ಮೇಲೇ ಇರುತ್ತದೆ. ಜನರ ಮನಸ್ಪರ್ಶಿಸುವ ತರ ಸುವಾರ್ತೆ ಸಾರಲು ತುಂಬ ಪ್ರಯತ್ನ ಮಾಡುತ್ತೀರಿ. ನಿಮಗೆ ಎಷ್ಟೇ ಕೆಲಸ ಇದ್ದರೂ ಸಾರುವ ಕೆಲಸಕ್ಕೆ ಮೊದಲ ಸ್ಥಾನ ಕೊಡುವುದು ಹೇಗೆ ಎಂದು ಯೋಚಿಸುತ್ತಾ ಇರುತ್ತೀರಿ.

ಸೇವೆಗೆ ಹೇಗೆ ಮೊದಲ ಸ್ಥಾನ ಕೊಡಬಹುದು?

7-8. (ಎ) ಯೇಸುಗೆ ಸೇವೆ ಬಗ್ಗೆ ಯಾವ ಮನೋಭಾವ ಇತ್ತು? (ಬಿ) ಆತನಿಗಿದ್ದ ಮನೋಭಾವವನ್ನು ನಾವು ಹೇಗೆ ಅನುಕರಿಸಬಹುದು?

7 ಸೇವೆ ಕಡೆಗೆ ಯೇಸುವಿಗೆ ಒಳ್ಳೇ ಮನೋಭಾವ ಇತ್ತು. ಈ ವಿಷಯದಲ್ಲಿ ಆತನು ನಮ್ಮೆಲ್ಲರಿಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ದೇವರ ರಾಜ್ಯದ ಬಗ್ಗೆ ಮಾತಾಡುವುದೇ ಆತನ ಜೀವನದಲ್ಲಿ ಪ್ರಾಮುಖ್ಯವಾಗಿತ್ತು. (ಯೋಹಾ. 4:34, 35) ತನ್ನಿಂದ ಎಷ್ಟು ಜನರಿಗೆ ಆಗುತ್ತೋ ಅಷ್ಟು ಜನರಿಗೆ ಸಾರಲು ನೂರಾರು ಮೈಲಿ ನಡೆದನು. ಜನರು ಮನೆಗಳಲ್ಲಿ, ಬೇರೆ ಎಲ್ಲಿ ಸಿಕ್ಕಿದರೂ ಅವರ ಹತ್ತಿರ ಮಾತಾಡಲು ಸಿಗುತ್ತಿದ್ದ ಒಂದು ಚಿಕ್ಕ ಅವಕಾಶವನ್ನೂ ಆತನು ಬಿಡಲಿಲ್ಲ. ಆತನಿಗೆ ಸೇವೆನೇ ಜೀವ ಆಗಿತ್ತು.

8 ನಾವು ಸಹ ಕ್ರಿಸ್ತನಂತೆ, ಜನ ಎಲ್ಲಿ ಸಿಕ್ಕಿದರೂ ಯಾವಾಗ ಸಿಕ್ಕಿದರೂ ಅವರಿಗೆ ಸುವಾರ್ತೆ ಸಾರಲು ಪ್ರಯತ್ನಿಸುತ್ತೇವೆ. ಸುವಾರ್ತೆ ಸಾರಲು ನಾವು ಕೆಲವು ತ್ಯಾಗಗಳನ್ನೂ ಮಾಡಲು ಸಿದ್ಧರಿರುತ್ತೇವೆ. (ಮಾರ್ಕ 6:31-34; 1 ಪೇತ್ರ 2:21) ಸಭೆಯಲ್ಲಿ ಕೆಲವರಿಗೆ ವಿಶೇಷ ಪಯನೀಯರ್‌, ರೆಗ್ಯುಲರ್‌ ಪಯನೀಯರ್‌ ಅಥವಾ ಸಹಾಯಕ ಪಯನೀಯರ್‌ ಆಗಿ ಸೇವೆ ಮಾಡಲು ಸಾಧ್ಯವಾಗಿದೆ. ಇನ್ನು ಕೆಲವರು ಬೇರೆ ಭಾಷೆ ಮಾತಾಡಲು ಕಲಿತಿದ್ದಾರೆ ಅಥವಾ ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಆದರೆ ಸಾರುವ ಕೆಲಸ ಹೆಚ್ಚು ನಡೆಯುತ್ತಾ ಇರೋದು ತಮ್ಮ ಕೈಲಾದಷ್ಟು ಸೇವೆ ಮಾಡುವ ಸಾಮಾನ್ಯ ಪ್ರಚಾರಕರಿಂದಲೇ. ನಾವು ಸೇವೆಯನ್ನು ಹೆಚ್ಚು ಮಾಡುತ್ತಿರಲಿ ಅಥವಾ ಕಡಿಮೆ ಮಾಡುತ್ತಿರಲಿ ಯೆಹೋವನು ನಮ್ಮ ಕೈಯಲ್ಲಿ ಆಗುವುದಕ್ಕಿಂತ ಹೆಚ್ಚನ್ನು ಕೇಳಲ್ಲ. ‘ಸಂತೋಷದ ದೇವರ ಮಹಿಮಾಭರಿತ ಸುವಾರ್ತೆಯನ್ನು’ ನಾವು ಸಂತೋಷದಿಂದ ಮಾಡಬೇಕೆಂದು ಆತನು ಬಯಸುತ್ತಾನೆ.—1 ತಿಮೊ. 1:11; ಧರ್ಮೋ. 30:11.

9. (ಎ) ಪೌಲನು ಕೆಲಸ ಮಾಡಬೇಕಾಗಿ ಬಂದರೂ ದೇವರ ಸೇವೆಗೆ ಹೇಗೆ ಆದ್ಯತೆ ಕೊಟ್ಟನು? (ಬಿ) ಪೌಲನು ಸೇವೆ ಕಡೆಗೆ ಯಾವ ಮನೋಭಾವ ತೋರಿಸಿದನು ಎಂದು ಅಪೊಸ್ತಲರ ಕಾರ್ಯಗಳು 28:16, 30, 31​ರಿಂದ ಗೊತ್ತಾಗುತ್ತದೆ?

9 ಸೇವೆಯನ್ನೇ ಜೀವನದಲ್ಲಿ ಮುಖ್ಯ ಕೆಲಸವನ್ನಾಗಿ ಮಾಡಿಕೊಂಡಿದ್ದರಲ್ಲಿ ಅಪೊಸ್ತಲ ಪೌಲನು ಒಳ್ಳೇ ಮಾದರಿ ಇಟ್ಟಿದ್ದಾನೆ. ತನ್ನ ಎರಡನೇ ಮಿಷನರಿ ಪ್ರಯಾಣದ ಸಮಯದಲ್ಲಿ ಕೊರಿಂಥದಲ್ಲಿದ್ದಾಗ ಆತನಿಗೆ ಹಣದ ಅಭಾವ ಬಂತು. ಇದಕ್ಕಾಗಿ ಸ್ವಲ್ಪ ಸಮಯ ಡೇರೆ ಮಾಡುವ ಕೆಲಸ ಮಾಡಬೇಕಾಯಿತು. ಆದರೆ ಪೌಲನಿಗೆ ಡೇರೆ ಮಾಡುವ ಕೆಲಸ ಮುಖ್ಯವಾಗಿರಲಿಲ್ಲ. ಕೊರಿಂಥದವರು ತನಗೋಸ್ಕರ ಖರ್ಚು ಮಾಡದೆ ಉಚಿತವಾಗಿ ಸುವಾರ್ತೆ ಕೇಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಡೇರೆ ಕೆಲಸ ಮಾಡಿದನು. (2 ಕೊರಿಂ. 11:7) ಆತನು ಈ ಕೆಲಸ ಮಾಡುತ್ತಿದ್ದರೂ ಸಾರುವ ಕೆಲಸಕ್ಕೆ ಆದ್ಯತೆ ಕೊಟ್ಟನು ಮತ್ತು ಪ್ರತಿ ಸಬ್ಬತ್‌ ದಿನದಂದು ಸುವಾರ್ತೆ ಸಾರುತ್ತಿದ್ದನು. ಆತನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಸಾರುವ ಕೆಲಸಕ್ಕೆ ಹೆಚ್ಚು ಗಮನ ಕೊಟ್ಟನು. “ಯೇಸುವೇ ಕ್ರಿಸ್ತನೆಂದು ರುಜುಪಡಿಸಲಿಕ್ಕಾಗಿ ಯೆಹೂದ್ಯರಿಗೆ ಸಾಕ್ಷಿನೀಡುತ್ತಾ ವಾಕ್ಯವನ್ನು ಸಾರುವುದರಲ್ಲಿ ಪೌಲನು ತೀವ್ರಾಸಕ್ತಿಯಿಂದ” ನಿರತನಾದನು. (ಅ. ಕಾ. 18:3-5; 2 ಕೊರಿಂ. 11:9) ನಂತರ ರೋಮ್‌ನಲ್ಲಿ ಪೌಲನು ಎರಡು ವರ್ಷ ಗೃಹ ಬಂಧನದಲ್ಲಿದ್ದಾಗಲೂ ಆತನನ್ನು ಭೇಟಿ ಮಾಡಲು ಬಂದವರಿಗೆ ಸಾರಿದನು ಮತ್ತು ಪತ್ರಗಳನ್ನು ಬರೆದನು. (ಅ. ಕಾರ್ಯಗಳು 28:16, 30, 31 ಓದಿ.) ತಾನು ಮಾಡುತ್ತಿದ್ದ ಸೇವೆಯನ್ನು ಯಾವ ವಿಷಯವೂ ಅಡ್ಡಿಪಡಿಸಲು ಪೌಲನು ಬಿಟ್ಟುಕೊಡಲಿಲ್ಲ. “ಈ ಶುಶ್ರೂಷೆಯು ನಮಗಿರುವುದರಿಂದ ನಾವು ಬಿಟ್ಟುಬಿಡುವುದಿಲ್ಲ” ಎಂದು ಆತನು ಬರೆದನು. (2 ಕೊರಿಂ. 4:1) ನಾವು ಸಹ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕಾಗಿರುತ್ತದೆ. ಆದರೆ ಪೌಲನಂತೆ ನಾವು ಸಹ ರಾಜ್ಯದ ಕೆಲಸವನ್ನು ನಮ್ಮ ಜೀವನದ ಮುಖ್ಯ ಕೆಲಸವಾಗಿ ಮಾಡಿಕೊಳ್ಳಲು ಖಂಡಿತ ಸಾಧ್ಯ.

ಸೇವೆಯನ್ನು ನಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡಲು ಅನೇಕ ವಿಧಗಳಿವೆ (ಪ್ಯಾರ 10-11 ನೋಡಿ)

10-11. ನಮಗೆ ಆರೋಗ್ಯ ಸಮಸ್ಯೆಯಿದ್ದರೂ ಸೇವೆಯನ್ನು ನಮ್ಮಿಂದಾದಷ್ಟು ಸಂಪೂರ್ಣವಾಗಿ ಹೇಗೆ ಮಾಡಬಹುದು?

10 ನಮಗೆ ವಯಸ್ಸಾಗುತ್ತಿರುವುದರಿಂದ ಅಥವಾ ಅನಾರೋಗ್ಯದ ಕಾರಣ ಮನೆ-ಮನೆ ಸೇವೆ ಮಾಡಲು ಸಾಧ್ಯವಾಗದಿದ್ದರೆ ಬೇರೆ ವಿಧಾನಗಳಲ್ಲಿ ಸುವಾರ್ತೆ ಸಾರಬಹುದು. ಆರಂಭದ ಕ್ರೈಸ್ತರು ಮನೆ-ಮನೆಯಲ್ಲಿ, ಸಾರ್ವಜನಿಕವಾಗಿ, ಅನೌಪಚಾರಿಕವಾಗಿ ಹೀಗೆ ಜನರು ತಮಗೆ ‘ಸಿಕ್ಕಿದಲ್ಲೆಲ್ಲ’ ಸುವಾರ್ತೆ ಸಾರಿದರು. (ಅ. ಕಾ. 17:17; 20:20) ನಮಗೆ ಹೆಚ್ಚು ನಡೆಯಲು ಆಗದಿದ್ದರೆ ಒಂದು ಸಾರ್ವಜನಿಕ ಸ್ಥಳದಲ್ಲಿ ಕೂತು ಹೋಗುವವರು-ಬರುವವರ ಹತ್ತಿರ ಮಾತಾಡಬಹುದು. ಅಥವಾ ಅನೌಪಚಾರಿಕವಾಗಿ ಸಾರಬಹುದು, ಪತ್ರ ಬರೆಯಬಹುದು, ಟೆಲಿಫೋನ್‌ ಸಾಕ್ಷಿಕಾರ್ಯ ಮಾಡಬಹುದು. ಕಾಯಿಲೆ ಅಥವಾ ಬೇರೆ ಸಮಸ್ಯೆಗಳಿಂದಾಗಿ ಮನೆ-ಮನೆ ಸೇವೆ ಹೆಚ್ಚು ಮಾಡಕ್ಕಾಗದಿರುವ ಅನೇಕ ಪ್ರಚಾರಕರು ಈ ವಿಧಾನಗಳಲ್ಲಿ ಸುವಾರ್ತೆ ಸಾರುವ ಮೂಲಕ ಸಂತೋಷವನ್ನು ಅನುಭವಿಸಿದ್ದಾರೆ.

11 ನಿಮಗೆ ಆರೋಗ್ಯ ಸಮಸ್ಯೆಯಿದ್ದರೂ ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡಬಹುದು. ಪುನಃ ಅಪೊಸ್ತಲ ಪೌಲನ ಉದಾಹರಣೆ ನೋಡಿ. “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ” ಎಂದು ಆತನು ಹೇಳಿದನು. (ಫಿಲಿ. 4:13) ಪೌಲನಿಗೆ ಆ ಶಕ್ತಿ ತನ್ನ ಒಂದು ಮಿಷನರಿ ಪ್ರಯಾಣದಲ್ಲಿ ಅಸ್ವಸ್ಥನಾದಾಗ ಬೇಕಾಯಿತು. ಆತನು ಗಲಾತ್ಯದವರಿಗೆ “ನನ್ನ ಶರೀರದಲ್ಲಿ ಅಸ್ವಸ್ಥತೆಯಿದ್ದಾಗ ನಾನು ಮೊದಲ ಬಾರಿ ನಿಮಗೆ ಸುವಾರ್ತೆಯನ್ನು ಸಾರಿದೆನು” ಎಂದು ಹೇಳಿದನು. (ಗಲಾ. 4:13) ಅದೇ ರೀತಿ, ನಿಮ್ಮ ಆರೋಗ್ಯದ ಸಮಸ್ಯೆಯಿಂದಾಗಿ ಅನೇಕರಿಗೆ ಸುವಾರ್ತೆ ಸಾರುವ ಅವಕಾಶ ನಿಮಗೆ ಸಿಗಬಹುದು. ಉದಾಹರಣೆಗೆ ವೈದ್ಯರಿಗೆ, ನರ್ಸ್‌ಗಳಿಗೆ ಮತ್ತು ನಿಮ್ಮನ್ನು ನೋಡಿಕೊಳ್ಳುವ ಬೇರೆ ವ್ಯಕ್ತಿಗಳಿಗೆ ಸುವಾರ್ತೆ ಸಾರುವ ಅವಕಾಶ ಸಿಗಬಹುದು. ಇವರೆಲ್ಲ ಕೆಲಸ ಮಾಡುವುದರಿಂದ ಹೆಚ್ಚಾಗಿ ಮನೆ-ಮನೆ ಸೇವೆಯಲ್ಲಿ ಸಿಗುವುದಿಲ್ಲ.

ಜೀವನವನ್ನು ಹೇಗೆ ಸರಳವಾಗಿ ಇಡಬಹುದು?

12. ನಿಮ್ಮ ಕಣ್ಣನ್ನು “ಸರಳವಾಗಿ” ಇಟ್ಟುಕೊಳ್ಳುವುದು ಅಂದರೆ ಏನು?

12 “ಕಣ್ಣು ದೇಹದ ದೀಪವಾಗಿದೆ. ನಿನ್ನ ಕಣ್ಣು ಸರಳವಾಗಿರುವಲ್ಲಿ ನಿನ್ನ ದೇಹವೆಲ್ಲ ಪ್ರಕಾಶಮಾನವಾಗಿರುವುದು” ಎಂದು ಯೇಸು ಹೇಳಿದನು. (ಮತ್ತಾ. 6:22) ಆತನ ಮಾತಿನ ಅರ್ಥವೇನು? ಕಣ್ಣನ್ನು ಸರಳವಾಗಿ ಇಟ್ಟುಕೊಳ್ಳುವುದೆಂದರೆ, ನಮ್ಮ ಜೀವನವನ್ನು ಸರಳವಾಗಿ ಇಟ್ಟುಕೊಳ್ಳಬೇಕು ಅಥವಾ ಒಂದೇ ಗುರಿಯ ಮೇಲೆ ಗಮನ ಇಡಬೇಕು. ಆ ಗುರಿ ಅಥವಾ ಉದ್ದೇಶ ಬಿಟ್ಟು ಬೇರೆ ಕಡೆಗೆ ನಮ್ಮ ಗಮನ ಹೋಗಬಾರದು ಎಂದರ್ಥ. ಈ ವಿಷಯದಲ್ಲಿ ಸ್ವತಃ ಯೇಸುನೇ ಅತ್ಯುತ್ತಮ ಮಾದರಿ ಇಟ್ಟನು. ಆತನ ಜೀವನದ ಮುಖ್ಯ ಗುರಿ ಸೇವೆ ಮಾಡುವುದೇ ಆಗಿತ್ತು. ತನ್ನ ಶಿಷ್ಯರೂ ಯೆಹೋವನ ಸೇವೆಯ ಮೇಲೆ ಮತ್ತು ಆತನ ರಾಜ್ಯದ ಮೇಲೆ ಗಮನ ಇಟ್ಟಿರಬೇಕೆಂದು ಹೇಳಿದನು. ನಾವು ಸಹ ಯೇಸುವನ್ನು ಅನುಕರಿಸುತ್ತಾ ಜೀವನದಲ್ಲಿ ಸೇವೆಗೆ ಆದ್ಯತೆ ಕೊಡೋಣ. “ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ” ಇರೋಣ.—ಮತ್ತಾ. 6:33.

13. ನಮ್ಮ ಸೇವೆಗೆ ಹೆಚ್ಚು ಗಮನ ಕೊಡಲು ಯಾವುದು ಸಹಾಯ ಮಾಡುತ್ತದೆ?

13 ಸೇವೆಗೆ ಹೆಚ್ಚು ಗಮನ ಕೊಡುವ ಒಂದು ವಿಧ ಹೆಚ್ಚು ಪ್ರಾಮುಖ್ಯವಲ್ಲದ ವಿಷಯಗಳಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡುವುದೇ ಆಗಿದೆ. ಆ ಸಮಯವನ್ನು ಬೇರೆಯವರು ಯೆಹೋವನ ಬಗ್ಗೆ ಕಲಿತು ಆತನ ಮೇಲೆ ಪ್ರೀತಿ ಬೆಳೆಸಿಕೊಳ್ಳುವುದಕ್ಕೆ ಸಹಾಯ ಮಾಡಲು ಉಪಯೋಗಿಸಬೇಕು. * ಉದಾಹರಣೆಗೆ, ಕೆಲಸದಲ್ಲಿ ನಾವು ಕಳೆಯುತ್ತಿರುವ ಸಮಯವನ್ನು ಸ್ವಲ್ಪ ಕಡಿಮೆ ಮಾಡಿ ಸೋಮವಾರದಿಂದ ಶುಕ್ರವಾರ ಸೇವೆಗೆ ಹೆಚ್ಚು ಸಮಯ ಕೊಡಕ್ಕಾಗುತ್ತಾ? ಸಮಯವನ್ನು ತುಂಬ ಹಾಳುಮಾಡುವಂಥ ಆಟೋಟ, ಮನೋರಂಜನೆಯನ್ನು ಸ್ವಲ್ಪ ಕಡಿಮೆ ಮಾಡಕ್ಕಾಗುತ್ತಾ?

14. ಸೇವೆಗೆ ಹೆಚ್ಚು ಗಮನ ಕೊಡಲು ಒಬ್ಬ ದಂಪತಿ ಯಾವ ಹೊಂದಾಣಿಕೆಗಳನ್ನು ಮಾಡಿಕೊಂಡರು?

14 ಇದನ್ನೇ ಒಬ್ಬ ಹಿರಿಯರಾದ ಇಲೈಯಸ್‌ ಮತ್ತು ಅವರ ಪತ್ನಿ ಮಾಡಿದರು. ಅವರು ಹೇಳುವುದು: “ನಮಗೆ ಪಯನೀಯರ್‌ ಸೇವೆ ಮಾಡಲು ಆಗಲಿಲ್ಲ. ಆದರೆ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಲು ತೀರ್ಮಾನಿಸಿದ್ವಿ. ಇದಕ್ಕಾಗಿ ಚಿಕ್ಕ-ಪುಟ್ಟ ಹೆಜ್ಜೆಗಳನ್ನು ತಗೊಂಡ್ವಿ. ಉದಾಹರಣೆಗೆ, ನಮ್ಮ ಖರ್ಚನ್ನು ಕಡಿಮೆ ಮಾಡಿದ್ವಿ, ಆಟೋಟ-ಮನೋರಂಜನೆಗೆ ಕೊಡುತ್ತಿದ್ದ ಸಮಯವನ್ನು ಕಡಿಮೆ ಮಾಡಿದ್ವಿ, ಕೆಲಸ ಮಾಡುವ ಸಮಯವನ್ನು ಹೊಂದಿಸಿಕೊಳ್ಳಲು ಸಹಾಯ ಮಾಡುವಂತೆ ನಮ್ಮ ಬಾಸ್‌ಗಳಿಗೆ ಕೇಳಿದ್ವಿ. ಇದರಿಂದಾಗಿ ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸಲು, ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಲು ಮತ್ತು ತಿಂಗಳಲ್ಲಿ ಎರಡು ಸಲ ವಾರದ ಮಧ್ಯದಲ್ಲೂ ಸೇವೆ ಮಾಡಲು ಸಾಧ್ಯವಾಯಿತು. ಇದರಿಂದ ತುಂಬ ಖುಷಿಯಾಯಿತು!”

ಸಾರುವ, ಕಲಿಸುವ ಕೆಲಸವನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು?

ವಾರಮಧ್ಯದ ಕೂಟದಲ್ಲಿ ಕಲಿತ ವಿಷಯಗಳನ್ನು ಅನ್ವಯಿಸಿಕೊಂಡರೆ ಸೇವೆಯನ್ನು ಚೆನ್ನಾಗಿ ಮಾಡಬಹುದು (ಪ್ಯಾರ 15-16 ನೋಡಿ) *

15-16. ಒಂದನೇ ತಿಮೊಥೆಯ 4:13, 15​ರಲ್ಲಿರುವಂತೆ ಸೇವೆಯಲ್ಲಿ ಹೇಗೆ ನಿಪುಣತೆ ಬೆಳೆಸಿಕೊಳ್ಳಬಹುದು? (“ಸೇವೆಯನ್ನು ನನ್ನಿಂದಾದಷ್ಟು ಸಂಪೂರ್ಣವಾಗಿ ಮಾಡಲು ಸಹಾಯ ಮಾಡುವ ಗುರಿಗಳು” ಎಂಬ ಚೌಕ ಸಹ ನೋಡಿ.)

15 ಸಾರುವ ಕೆಲಸದಲ್ಲಿ ನಿಪುಣತೆಯನ್ನು ಬೆಳೆಸಿಕೊಳ್ಳುವ ಮೂಲಕವೂ ನಾವು ಸೇವೆಯನ್ನು ನಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡಬಹುದು. ಕೆಲವು ಉದ್ಯೋಗಗಳಲ್ಲಿ ಜನರಿಗೆ ಆಗಾಗ ತರಬೇತಿ ಸಿಗುತ್ತದೆ. ಇದರಿಂದ ಅವರು ತಮ್ಮ ಜ್ಞಾನವನ್ನು, ನಿಪುಣತೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ರಾಜ್ಯ ಪ್ರಚಾರಕರ ವಿಷಯದಲ್ಲೂ ಇದು ಸತ್ಯ. ಸೇವೆಯಲ್ಲಿ ನಿಪುಣರಾಗಲು ನಮಗೂ ತರಬೇತಿ ಬೇಕು.—ಜ್ಞಾನೋ. 1:5; 1 ತಿಮೊಥೆಯ 4:13, 15 ಓದಿ.

16 ಸೇವೆಯನ್ನು ಇನ್ನೂ ಚೆನ್ನಾಗಿ ಮಾಡಲು ಹೇಗೆ ಕಲಿಯಬಹುದು? ಪ್ರತಿ ವಾರ ನಡೆಯುವ ಜೀವನ ಮತ್ತು ಸೇವೆ ಕೂಟದಲ್ಲಿ ಸಿಗುವ ನಿರ್ದೇಶನಗಳನ್ನು ಚೆನ್ನಾಗಿ ಗಮನಿಸುವ ಮೂಲಕ ಕಲಿಯಬಹುದು. ಈ ಕೂಟದಲ್ಲಿ ಸಿಗುವ ಬೆಲೆಕಟ್ಟಲಾಗದ ತರಬೇತಿಯಿಂದ ಸೇವೆಯನ್ನು ಇನ್ನೂ ಚೆನ್ನಾಗಿ ಮಾಡಲು ನಮಗೆ ಸಹಾಯವಾಗುತ್ತದೆ. ಉದಾಹರಣೆಗೆ, ವಿದ್ಯಾರ್ಥಿ ನೇಮಕವನ್ನು ಮಾಡಿದವರಿಗೆ ಕೂಟದ ಅಧ್ಯಕ್ಷನು ಕೊಡುವ ಸಲಹೆಯಿಂದ ನಮಗೂ ಪ್ರಯೋಜನ ಆಗುತ್ತದೆ. ಈ ಸಲಹೆಗಳನ್ನು ನಾವು ಮುಂದಿನ ಸಲ ಸೇವೆಗೆ ಹೋದಾಗ ಅನ್ವಯಿಸಿಕೊಳ್ಳಬಹುದು. ನಾವು ಈ ವಿಷಯದಲ್ಲಿ ನಮ್ಮ ಗುಂಪು ಮೇಲ್ವಿಚಾರಕನ ಸಹಾಯ ಕೇಳಬಹುದು. ನಾವು ಅವರ ಜೊತೆ ಸೇರಿ ಅಥವಾ ಅನುಭವವಿರುವ ಇನ್ನೊಬ್ಬ ಪ್ರಚಾರಕ, ಪಯನೀಯರ್‌ ಅಥವಾ ಸಂಚರಣ ಮೇಲ್ವಿಚಾರಕರ ಜೊತೆ ಸೇರಿ ಸೇವೆ ಮಾಡಬಹುದು. ಬೋಧನಾ ಸಲಕರಣೆಯಲ್ಲಿರುವ ಪ್ರತಿಯೊಂದು ಸಲಕರಣೆಯನ್ನು ಚೆನ್ನಾಗಿ ಉಪಯೋಗಿಸಲು ಕಲಿಯುವ ಮೂಲಕವೂ ನಾವು ಸೇವೆಯಲ್ಲಿ ನಿಪುಣರಾಗುತ್ತೇವೆ. ಆಗ ಸಾರುವ ಮತ್ತು ಕಲಿಸುವ ಕೆಲಸವನ್ನು ಹೆಚ್ಚು ಆನಂದಿಸುತ್ತೇವೆ.

17. ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡುವಾಗ ಯಾವ ಪ್ರತಿಫಲ ಸಿಗುತ್ತದೆ?

17 ಯೆಹೋವನು ನಮ್ಮನ್ನು ತನ್ನ ‘ಜೊತೆಕೆಲಸಗಾರರಾಗಿರಲು’ ಅನುಮತಿಸಿರುವುದು ನಮಗೆ ಸಿಕ್ಕಿರುವ ಮಹಾ ಸುಯೋಗ! (1 ಕೊರಿಂ. 3:9) ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುತ್ತಾ’ ಸೇವೆಗೆ ಹೆಚ್ಚು ಗಮನ ಕೊಡುವುದಾದರೆ ‘ಯೆಹೋವನನ್ನು ಸಂತೋಷದಿಂದ ಸೇವಿಸುತ್ತೇವೆ.’ (ಫಿಲಿ. 1:10; ಕೀರ್ತ. 100:2) ಒಂದಂತೂ ನಿಜ, ನೀವು ಯಾವುದೇ ಸವಾಲನ್ನು ಅಥವಾ ಇತಿಮಿತಿಯನ್ನು ಎದುರಿಸುತ್ತಿರಲಿ ಸೇವೆಯನ್ನು ಸಂಪೂರ್ಣವಾಗಿ ಮಾಡಲು ಬೇಕಾದ ಶಕ್ತಿಯನ್ನು ಯೆಹೋವನು ನಿಮಗೆ ಕೊಟ್ಟೇ ಕೊಡುತ್ತಾನೆ. (2 ಕೊರಿಂ. 4:1,7; 6:4) ನೀವು ಸೇವೆಯನ್ನು ಸ್ವಲ್ಪನೇ ಮಾಡಿ ಅಥವಾ ಹೆಚ್ಚೇ ಮಾಡಿ, ನಿಮ್ಮಿಂದಾದಷ್ಟು ಸೇವೆ ಮಾಡಿದರೆ ಸಂತೋಷಪಡಲು ಕಾರಣ ಇರುತ್ತದೆ. (ಗಲಾ. 6:4) ಸೇವೆಯನ್ನು ಸಂಪೂರ್ಣವಾಗಿ ಮಾಡಿದಾಗ ಯೆಹೋವನ ಮೇಲೆ ಮತ್ತು ಜೊತೆ ಮಾನವರ ಮೇಲಿರುವ ನಿಮ್ಮ ಪ್ರೀತಿಯನ್ನು ತೋರಿಸುತ್ತೀರಿ. ‘ಹೀಗೆ ಮಾಡುವ ಮೂಲಕ ನಿಮ್ಮನ್ನೂ ನಿಮಗೆ ಕಿವಿಗೊಡುವವರನ್ನೂ ರಕ್ಷಿಸುವಿರಿ.’—1 ತಿಮೊ. 4:16.

ಗೀತೆ 141 ಶಾಂತಿಪ್ರಿಯರ ಹುಡುಕಿ

^ ಪ್ಯಾರ. 5 ರಾಜ್ಯದ ಸುವಾರ್ತೆ ಸಾರಬೇಕು ಮತ್ತು ಜನರನ್ನು ಶಿಷ್ಯರನ್ನಾಗಿ ಮಾಡಬೇಕು ಎಂಬ ಆಜ್ಞೆಯನ್ನು ಯೇಸು ನಮಗೆ ಕೊಟ್ಟಿದ್ದಾನೆ. ನಮಗೆ ಸಮಸ್ಯೆಗಳು ಇರುವುದಾದರೂ ನಾವು ಹೇಗೆ ಸೇವೆಯನ್ನು ನಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ನಾವು ಸಾರುವ ಕೆಲಸವನ್ನು ಹೇಗೆ ಇನ್ನೂ ಚೆನ್ನಾಗಿ ಮಾಡಿ ಸಂತೋಷವಾಗಿ ಇರಬಹುದು ಎಂದು ಸಹ ಕಲಿಯಲಿದ್ದೇವೆ.

^ ಪ್ಯಾರ. 4 ಪದ ವಿವರಣೆ: ಯೆಹೋವನ ಸೇವೆಯಲ್ಲಿ ಸಾರುವ ಮತ್ತು ಕಲಿಸುವ ಕೆಲಸಕ್ಕೆ ಸಂಬಂಧಪಟ್ಟ ಚಟುವಟಿಕೆಗಳು, ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುವ ಕಟ್ಟಡಗಳ ನಿರ್ಮಾಣ-ನಿರ್ವಹಣೆ, ವಿಪತ್ತು ಪರಿಹಾರಕಾರ್ಯ ಸೇರಿದೆ.—2 ಕೊರಿಂ. 5:18, 19; 8:4.

^ ಪ್ಯಾರ. 13 ಜುಲೈ 2016​ರ ಕಾವಲಿನಬುರುಜುವಿನ ಪುಟ 10​ರಲ್ಲಿರುವ “ನಿಮ್ಮ ಜೀವನವನ್ನು ಸರಳಮಾಡುವ ವಿಧ” ಎಂಬ ಚೌಕದಲ್ಲಿರುವ ಏಳು ವಿಧಗಳನ್ನು ನೋಡಿ.

^ ಪ್ಯಾರ. 62 ಚಿತ್ರ ವಿವರಣೆ: ಒಬ್ಬ ಸಹೋದರಿ ವಾರಮಧ್ಯದ ಕೂಟದಲ್ಲಿ ಪುನರ್ಭೇಟಿಯ ಅಭಿನಯ ಮಾಡುತ್ತಿದ್ದಾಳೆ. ನಂತರ ಕೂಟದ ಅಧ್ಯಕ್ಷನು ಸಲಹೆ ಕೊಡುವಾಗ, ಆ ಸಹೋದರಿ ಪ್ರಗತಿ ಕಿರುಹೊತ್ತಗೆಯಲ್ಲಿ ಟಿಪ್ಪಣಿ ಬರೆದುಕೊಳ್ಳುತ್ತಿದ್ದಾಳೆ. ವಾರಾಂತ್ಯದಲ್ಲಿ, ಸೇವೆ ಮಾಡುವಾಗ ಕೂಟದಲ್ಲಿ ಕಲಿತದ್ದನ್ನು ಅನ್ವಯಿಸುತ್ತಿದ್ದಾಳೆ.