ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 15

ಯೇಸುವನ್ನು ಅನುಕರಿಸಿ, ಶಾಂತಿಯಿಂದ ಜೀವಿಸಿ

ಯೇಸುವನ್ನು ಅನುಕರಿಸಿ, ಶಾಂತಿಯಿಂದ ಜೀವಿಸಿ

‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ ನಿಮ್ಮ ಹೃದಯಗಳನ್ನು ಕಾಯುವುದು.’—ಫಿಲಿ. 4:7.

ಗೀತೆ 39 ನಮ್ಮ ಶಾಂತಿ ಸಂಪತ್ತು

ಕಿರುನೋಟ *

1-2. ಯೇಸು ಯಾಕೆ ತುಂಬ ಒತ್ತಡದಲ್ಲಿದ್ದನು?

ಯೇಸು ಭೂಮಿಯ ಮೇಲಿದ್ದ ಕೊನೆಯ ದಿನ ತುಂಬ ಒತ್ತಡದಲ್ಲಿದ್ದನು. ಯಾಕೆಂದರೆ ಇನ್ನು ಸ್ವಲ್ಪ ಹೊತ್ತಲ್ಲೇ ದುಷ್ಟ ಜನರು ಆತನನ್ನು ಹಿಡಿದು ಚಿತ್ರಹಿಂಸೆ ಕೊಟ್ಟು ಕೊಲ್ಲಲಿದ್ದರು. ಆದರೆ ಯೇಸು ಬರೀ ತನ್ನ ಸಾವಿನ ಬಗ್ಗೆ ಯೋಚಿಸುತ್ತಾ ಇಷ್ಟು ಚಿಂತೆ ಮಾಡುತ್ತಿರಲಿಲ್ಲ. ತಾನು ಎದುರಿಸಲಿದ್ದ ಪರೀಕ್ಷೆಯನ್ನು ಪಾರಾದರೆ ಮಾತ್ರ ತಾನು ತುಂಬ ಪ್ರೀತಿಸುತ್ತಿದ್ದ ತನ್ನ ತಂದೆಯ ಹೆಸರಿಗೆ ಮಹಿಮೆ ಬರುತ್ತದೆ ಎಂದು ಆತನಿಗೆ ಗೊತ್ತಿತ್ತು. ತನ್ನ ತಂದೆಯ ಮನಸ್ಸಿಗೆ ಸಂತೋಷವಾಗುವ ತರ ನಡೆಯಲು ಬಯಸಿದನು. ಯೇಸುಗೆ ಜನರ ಮೇಲೆ ಸಹ ತುಂಬ ಪ್ರೀತಿ ಇತ್ತು. ಆತನು ಭೂಮಿಯ ಮೇಲೆ ನಂಬಿಗಸ್ತನಾಗಿ ಉಳಿದರೆ ಮಾತ್ರ ಮನುಷ್ಯರಿಗೆ ನಿತ್ಯಜೀವ ಸಿಗುತ್ತದೆ ಎಂದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ತುಂಬ ಒತ್ತಡದಲ್ಲಿದ್ದನು.

2 ಯೇಸು ತುಂಬ ಒತ್ತಡದಲ್ಲಿದ್ದರೂ ಆತನ ಮನಸ್ಸು ಪ್ರಶಾಂತವಾಗಿತ್ತು. “ನನ್ನ ಶಾಂತಿಯನ್ನು ನಿಮಗೆ ಕೊಡುತ್ತೇನೆ” ಎಂದು ಆತನು ತನ್ನ ಅಪೊಸ್ತಲರಿಗೆ ಹೇಳಿದನು. (ಯೋಹಾ. 14:27) ಆತನಲ್ಲಿ “ದೇವಶಾಂತಿ” ಇತ್ತು. ಯೆಹೋವನ ಜೊತೆ ಹತ್ತಿರದ ಸಂಬಂಧ ಇರುವವರಿಗೆ ಮಾತ್ರ ಸಿಗುವ ಈ ಶಾಂತಿ ಯೇಸುವಿಗೆ ಸಿಕ್ಕಿದ್ದರಿಂದ ಆತನು ಪ್ರಶಾಂತವಾಗಿರಲು ಸಾಧ್ಯವಾಯಿತು.—ಫಿಲಿ. 4:6, 7.

3. ಈ ಲೇಖನದಲ್ಲಿ ನಾವು ಏನನ್ನು ಪರಿಗಣಿಸಲಿದ್ದೇವೆ?

3 ನಮ್ಮಲ್ಲಿ ಯಾರಿಗೂ ಯೇಸುಗೆ ಬಂದಷ್ಟು ಕಷ್ಟ ಬರುವುದಿಲ್ಲ. ಆದರೆ ಯೇಸುವಿನ ಹಿಂಬಾಲಕರಾಗಿರುವ ಎಲ್ಲರೂ ಕಷ್ಟಗಳನ್ನು ಎದುರಿಸಲೇಬೇಕು. (ಮತ್ತಾ. 16:24, 25; ಯೋಹಾ. 15:20) ಕಷ್ಟಗಳನ್ನು ಎದುರಿಸುವಾಗ ಯೇಸುವಿನ ತರ ನಮಗೂ ಚಿಂತೆ ಆಗಬಹುದು. ಇಂಥ ಚಿಂತೆ ನಮ್ಮನ್ನು ಚಿತೆಯಂತೆ ಸುಡದಿರಲು, ನಮ್ಮ ಮನಶ್ಶಾಂತಿಯನ್ನು ಹಾಳುಮಾಡದಿರಲು ಏನು ಮಾಡಬೇಕು? ಯೇಸು ಭೂಮಿಯ ಮೇಲಿದ್ದಾಗ ಮಾಡಿದ ಮೂರು ವಿಷಯಗಳನ್ನು ಈಗ ಪರಿಗಣಿಸೋಣ. ನಾವು ಪರೀಕ್ಷೆಗಳನ್ನು ಎದುರಿಸುವಾಗ ಆತನನ್ನು ಹೇಗೆ ಅನುಕರಿಸಬಹುದೆಂದು ನೋಡೋಣ.

ಯೇಸು ಯಾವಾಗಲೂ ಪ್ರಾರ್ಥನೆ ಮಾಡುತ್ತಿದ್ದನು

ಪ್ರಾರ್ಥನೆ ಮಾಡುವುದರಿಂದ ಮನಶ್ಶಾಂತಿ ಕಾಪಾಡಿಕೊಳ್ಳಬಹುದು (ಪ್ಯಾರ 4-7 ನೋಡಿ)

4. ಒಂದನೇ ಥೆಸಲೊನೀಕ 5:17​ರಲ್ಲಿ ಇರುವಂತೆ, ಯೇಸು ಭೂಮಿಯ ಮೇಲಿದ್ದ ಕೊನೆಯ ದಿನದಂದು ತುಂಬ ಸಲ ಪ್ರಾರ್ಥಿಸಿದನು ಅನ್ನುವುದಕ್ಕೆ ಕೆಲವು ಉದಾಹರಣೆ ಕೊಡಿ.

4 ಒಂದನೇ ಥೆಸಲೊನೀಕ 5:17 ಓದಿ. ಯೇಸು ಭೂಮಿಯ ಮೇಲಿದ್ದ ಕೊನೆಯ ದಿನದಂದು ತುಂಬ ಸಲ ಪ್ರಾರ್ಥನೆ ಮಾಡಿದನು. ತನ್ನ ಮರಣವನ್ನು ಹೇಗೆ ಜ್ಞಾಪಿಸಿಕೊಳ್ಳಬೇಕೆಂದು ತನ್ನ ಶಿಷ್ಯರಿಗೆ ತೋರಿಸಿದಾಗ ಆತನು ಪ್ರಾರ್ಥಿಸಿದನು. (1 ಕೊರಿಂ. 11:23-25) ಅವರು ಪಸ್ಕಹಬ್ಬವನ್ನು ಆಚರಿಸಿದ ಕೋಣೆಯನ್ನು ಬಿಟ್ಟು ಹೋಗುವಾಗ ತನ್ನ ಶಿಷ್ಯರ ಜೊತೆ ಪುನಃ ಪ್ರಾರ್ಥಿಸಿದನು. (ಯೋಹಾ. 17:1-26) ತನ್ನ ಶಿಷ್ಯರ ಜೊತೆ ಗೆತ್ಸೇಮನೆಗೆ ರಾತ್ರಿ ಬಂದಾಗ ತುಂಬ ಸಲ ಪ್ರಾರ್ಥಿಸಿದನು. (ಮತ್ತಾ. 26:36-39, 42, 44) ಆತನ ಜೀವ ಹೋಗಲಿರುವಾಗ ಆತನು ಹೇಳಿದ ಕೊನೆಯ ಮಾತುಗಳು ಸಹ ಒಂದು ಪ್ರಾರ್ಥನೆಯಾಗಿತ್ತು. (ಲೂಕ 23:46) ಭೂಮಿಯ ಮೇಲೆ ತನ್ನ ಜೀವನದ ಕೊನೆಯ ದಿನದಂದು ನಡೆದ ಎಲ್ಲಾ ವಿಷಯಗಳ ಬಗ್ಗೆ ಯೇಸು ಪ್ರಾರ್ಥಿಸಿದನು.

5. ಅಪೊಸ್ತಲರು ಯೇಸುವನ್ನು ಬಿಟ್ಟು ಓಡಿಹೋಗಲು ಕಾರಣವೇನು?

5 ಯೇಸುಗೆ ತನ್ನ ತಂದೆಯಾದ ಯೆಹೋವನ ಮೇಲೆ ನಂಬಿಕೆ ಇದ್ದದರಿಂದ ತನ್ನ ಮನಸ್ಸಲ್ಲಿ ಇದ್ದದ್ದನ್ನೆಲ್ಲಾ ಆತನಿಗೆ ಹೇಳಿದನು. ಹಾಗಾಗಿ ಬಂದ ಕಷ್ಟಗಳನ್ನು ತಾಳಿಕೊಳ್ಳಲು ಯೇಸುಗೆ ಸಾಧ್ಯವಾಯಿತು. ಆದರೆ ಅಪೊಸ್ತಲರು ಇದನ್ನು ಮಾಡಲಿಲ್ಲ. ಯೇಸು ಭೂಮಿಯ ಮೇಲಿದ್ದ ಆ ಕೊನೆಯ ರಾತ್ರಿ ಅವರು ಎಡೆಬಿಡದೆ ಪ್ರಾರ್ಥನೆ ಮಾಡಬೇಕಿತ್ತು. ಇದನ್ನು ಮಾಡದೇ ಹೋದದ್ದರಿಂದ ತೊಂದರೆ ಬಂದಾಗ ಎಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು. (ಮತ್ತಾ. 26:40, 41, 43, 45, 56) ನಮಗೆ ಪರೀಕ್ಷೆಗಳು ಎದುರಾದಾಗ ಯೇಸುವಿನ ತರ ‘ಪ್ರಾರ್ಥಿಸುತ್ತಾ ಇದ್ದರೆ’ ಮಾತ್ರ ನಾವು ನಂಬಿಗಸ್ತರಾಗಿ ಉಳಿಯುತ್ತೇವೆ. ನಾವು ಯಾವ ವಿಷಯಗಳಿಗಾಗಿ ಪ್ರಾರ್ಥಿಸಬಹುದು?

6. ಮನಶ್ಶಾಂತಿ ಕಾಪಾಡಿಕೊಳ್ಳಲು ನಂಬಿಕೆ ಹೇಗೆ ಸಹಾಯ ಮಾಡುತ್ತದೆ?

6 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ನಾವು ಪ್ರಾರ್ಥಿಸಬಹುದು. (ಲೂಕ 17:5; ಯೋಹಾ. 14:1) ಯೇಸುವನ್ನು ಹಿಂಬಾಲಿಸುವ ನಮ್ಮೆಲ್ಲರಿಗೂ ಸೈತಾನ ಕಷ್ಟ ಕೊಡುವುದರಿಂದ ನಮಗೆ ಹೆಚ್ಚು ನಂಬಿಕೆ ಬೇಕು. (ಲೂಕ 22:31) ನಮಗೆ ಒಂದರ ಹಿಂದೆ ಒಂದು ಸಮಸ್ಯೆ ಬರುತ್ತಾ ಇರುವಾಗಲೂ ಪ್ರಶಾಂತವಾಗಿರಲು ನಂಬಿಕೆ ಹೇಗೆ ಸಹಾಯ ಮಾಡುತ್ತದೆ? ಎದುರಾಗಿರುವ ಸಮಸ್ಯೆಯನ್ನು ನಿಭಾಯಿಸಲು ನಮ್ಮ ಕೈಯಲ್ಲಿ ಆಗಿದ್ದನ್ನು ಮಾಡಿದ ಮೇಲೆ ಎಲ್ಲವನ್ನೂ ಯೆಹೋವನ ಕೈಯಲ್ಲಿ ಬಿಟ್ಟುಬಿಡಲು ನಂಬಿಕೆ ಸಹಾಯ ಮಾಡುತ್ತದೆ. ಯಾವುದೇ ಸನ್ನಿವೇಶವನ್ನು ಯೆಹೋವನು ನಮಗಿಂತ ಚೆನ್ನಾಗಿ ನಿಭಾಯಿಸುತ್ತಾನೆ ಅಂತ ಗೊತ್ತಿರುವುದರಿಂದ ನಮಗೆ ಮನಶ್ಶಾಂತಿ ಇರುತ್ತದೆ.—1 ಪೇತ್ರ 5:6, 7.

7. ರಾಬರ್ಟ್‌ ಅವರ ಹೇಳಿಕೆಯಿಂದ ನೀವೇನು ಕಲಿತಿರಿ?

7 ನಮಗೆ ಎಂಥ ಕಷ್ಟ ಬಂದರೂ ಮನಶ್ಶಾಂತಿ ಕಾಪಾಡಿಕೊಳ್ಳಲು ಪ್ರಾರ್ಥನೆ ಸಹಾಯ ಮಾಡುತ್ತದೆ. ರಾಬರ್ಟ್‌ ಎಂಬ ಸಹೋದರನ ಉದಾಹರಣೆ ನೋಡಿ. ಅವರೊಬ್ಬ ನಂಬಿಗಸ್ತ ಹಿರಿಯ. ಅವರಿಗೀಗ 80 ವಯಸ್ಸು ದಾಟಿದೆ. ರಾಬರ್ಟ್‌ ಹೇಳುವುದು: “ನನ್ನ ಜೀವನದಲ್ಲಿ ಎದುರಾದ ಸವಾಲುಗಳನ್ನು ನಿಭಾಯಿಸಲು ಫಿಲಿಪ್ಪಿ 4:6, 7 ಸಹಾಯ ಮಾಡಿದೆ. ನನಗೆ ಹಣಕಾಸಿನ ತೊಂದರೆ ಇತ್ತು. ಹಿರಿಯನಾಗಿ ಸೇವೆ ಮಾಡುವ ಸುಯೋಗವನ್ನು ಸಹ ನಾನು ಒಂದು ಸಲ ಕಳಕೊಂಡಿದ್ದೆ.” ಮನಶ್ಶಾಂತಿ ಕಾಪಾಡಿಕೊಳ್ಳಲು ರಾಬರ್ಟ್‌ಗೆ ಯಾವುದು ಸಹಾಯ ಮಾಡಿತು? “ನನಗೆ ಏನಾದ್ರೂ ಚಿಂತೆಯಾದ ಕೂಡಲೆ ಪ್ರಾರ್ಥನೆ ಮಾಡುತ್ತೇನೆ. ನಾನು ತುಂಬ ಸಲ ಪ್ರಾರ್ಥನೆ ಮಾಡಿದಾಗ ಮತ್ತು ಮನಬಿಚ್ಚಿ ಎಲ್ಲಾ ಯೆಹೋವನಿಗೆ ಹೇಳಿಕೊಳ್ಳುವಾಗ ನನ್ನ ಮನಸ್ಸು ಪ್ರಶಾಂತವಾಗಿರುತ್ತದೆ” ಎಂದು ಅವರು ಹೇಳುತ್ತಾರೆ.

ಯೇಸು ಹುರುಪಿನಿಂದ ಸಾರಿದನು

ಸುವಾರ್ತೆ ಸಾರುವುದರಿಂದ ಮನಶ್ಶಾಂತಿ ಕಾಪಾಡಿಕೊಳ್ಳಬಹುದು (ಪ್ಯಾರ 8-10 ನೋಡಿ)

8. ಯೇಸುಗೆ ಮನಶ್ಶಾಂತಿ ಇರಲು ಇನ್ನೊಂದು ಕಾರಣ ಏನೆಂದು ಯೋಹಾನ 8:29 ತಿಳಿಸುತ್ತದೆ?

8 ಯೋಹಾನ 8:29 ಓದಿ. ಯೇಸುಗೆ ಜನರು ಚಿತ್ರಹಿಂಸೆ ಕೊಡುವಾಗಲೂ ಆತನು ಪ್ರಶಾಂತವಾಗಿದ್ದನು. ವಿಧೇಯತೆ ತೋರಿಸುವುದು ತುಂಬ ಕಷ್ಟವಾಗಿದ್ದರೂ ಆತನು ತಪ್ಪು ಮಾಡಲಿಲ್ಲ. ಯಾಕೆಂದರೆ ತನ್ನ ನಂಬಿಗಸ್ತಿಕೆ ನೋಡಿ ಯೆಹೋವನಿಗೆ ಸಂತೋಷ ಆಗುತ್ತಿದೆ ಅಂತ ಆತನಿಗೆ ಗೊತ್ತಿತ್ತು. ತನ್ನ ತಂದೆಯ ಮೇಲೆ ಯೇಸುಗೆ ತುಂಬ ಪ್ರೀತಿ ಇದ್ದದರಿಂದ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ಟನು. ಭೂಮಿಗೆ ಬರುವ ಮುಂಚೆ ಆತನು ದೇವರ ಹತ್ತಿರ ನಿಪುಣ ಕೆಲಸಗಾರನಾಗಿದ್ದನು. (ಜ್ಞಾನೋ. 8:30) ಭೂಮಿಯ ಮೇಲೆ ಇದ್ದಾಗ ತನ್ನ ತಂದೆಯ ಬಗ್ಗೆ ಬೇರೆಯವರಿಗೆ ಹುರುಪಿನಿಂದ ಕಲಿಸಿದನು. (ಮತ್ತಾ. 6:9; ಯೋಹಾ. 5:17) ಈ ಕೆಲಸ ಮಾಡುವುದರಿಂದ ಯೇಸುವಿಗೆ ತುಂಬ ಸಂತೋಷ ಸಿಕ್ಕಿತು.—ಯೋಹಾ. 4:34-36.

9. ಹೆಚ್ಚು ಸೇವೆ ಮಾಡುತ್ತಾ ಇದ್ದರೆ ನಮ್ಮ ಶಾಂತಿಯನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಸಿಗುತ್ತದೆ?

9 ನಾವು ಯೆಹೋವನಿಗೆ ವಿಧೇಯರಾದರೆ ಮತ್ತು ‘ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುತ್ತಾ’ ಇರುವುದಾದರೆ ಯೇಸುವನ್ನು ಅನುಕರಿಸಿದಂತೆ ಆಗುತ್ತೆ. (1 ಕೊರಿಂ. 15:58) ನಾವು ಸಾರುವ ಕೆಲಸದಲ್ಲಿ ‘ತೀವ್ರಾಸಕ್ತಿಯಿಂದ ನಿರತರಾಗಿರುವಾಗ’ ಮೂರು ಹೊತ್ತೂ ನಮ್ಮ ಚಿಂತೆಗಳ ಬಗ್ಗೆ ಯೋಚಿಸುತ್ತಾ ಕೊರಗುವುದಿಲ್ಲ. (ಅ. ಕಾ. 18:5) ಸೇವೆಗೆ ಹೋದಾಗ ಲೋಕದ ಜನರು ನಮಗಿಂತ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಆದರೆ ಅವರು ಯೆಹೋವನ ಬಗ್ಗೆ ಕಲಿತು ಆತನ ಸಲಹೆಗಳನ್ನು ಪಾಲಿಸುತ್ತಾ ಅವರ ಜೀವನ ಚೆನ್ನಾಗಾಗುವುದನ್ನು ನೋಡುವಾಗ ನಮಗೆ ಸಂತೋಷವಾಗುತ್ತದೆ. ಯೆಹೋವನು ಖಂಡಿತ ನಮ್ಮ ಕೈಬಿಡಲ್ಲ ಎಂಬ ಭರವಸೆ ಬರುತ್ತದೆ. ಇದರಿಂದ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ. ಒಬ್ಬ ಸಹೋದರಿಯ ಅನುಭವ ನೋಡಿ. ಖಿನ್ನತೆಯಿಂದ ಮತ್ತು ತಾನು ಅಯೋಗ್ಯಳು ಎಂಬ ಭಾವನೆಯಿಂದ ಅವರು ಜೀವನಪೂರ್ತಿ ಕಷ್ಟಪಟ್ಟಿದ್ದಾರೆ. ಆದರೆ “ಸೇವೆ ಮಾಡುತ್ತಿರುವಾಗ ನನ್ನ ಮನಸ್ಸು ಹತೋಟಿಯಲ್ಲಿರುತ್ತೆ, ನಾನು ಸಂತೋಷವಾಗಿರುತ್ತೇನೆ. ಸೇವೆಗೆ ಹೋದಾಗ ನಾನು ಯೆಹೋವನಿಗೆ ತುಂಬ ಹತ್ತಿರವಾಗಿ ಇದ್ದೇನೆ ಅನ್ನುವ ಭಾವನೆ ಬರುವುದರಿಂದ ನನಗೆ ಸಂತೋಷವಾಗುತ್ತದೆ” ಎಂದು ಅವರು ಹೇಳುತ್ತಾರೆ.

10. ಬ್ರೆಂಡಾ ಅವರ ಹೇಳಿಕೆಯಿಂದ ನೀವೇನು ಕಲಿತಿರಿ?

10 ಬ್ರೆಂಡಾ ಎಂಬ ಸಹೋದರಿಯ ಅನುಭವ ಸಹ ನೋಡಿ. ಬ್ರೆಂಡಾ ಮತ್ತು ಅವರ ಮಗಳಿಗೆ ಸ್ನಾಯು ಮತ್ತು ನರಸಂಬಂಧಿತ ಕಾಯಿಲೆ ಇದೆ. ಬ್ರೆಂಡಾ ವೀಲ್‌ಚೇರಲ್ಲೇ ಓಡಾಡಬೇಕು. ಅವರಿಗೆ ಅಷ್ಟು ಶಕ್ತಿ ಇಲ್ಲ. ಸಾಧ್ಯ ಆದಾಗ ಅವರು ಮನೆ ಮನೆ ಸೇವೆ ಮಾಡುತ್ತಾರೆ. ಆದರೆ ಹೆಚ್ಚಾಗಿ ಅವರು ಪತ್ರ ಬರೆಯುವ ಮೂಲಕ ಸಾಕ್ಷಿಕೊಡುತ್ತಾರೆ. ಅವರು ಹೇಳುವುದು: “ನನ್ನ ಪರಿಸ್ಥಿತಿ ಈ ಲೋಕದಲ್ಲಿ ಸುಧಾರಣೆ ಆಗಲ್ಲ ಎಂದು ನನ್ನ ಮನಸ್ಸು ಒಪ್ಪಿಕೊಂಡಾಗ ನಾನು ಸೇವೆಗೆ ಪೂರ್ತಿ ಗಮನ ಕೊಡಲು ಆರಂಭಿಸಿದೆ. ಕ್ಷೇತ್ರ ಸೇವೆಯಲ್ಲಿರುವಾಗ ನಾನು ನನ್ನ ಕಷ್ಟಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ನನಗೆ ಸಿಗುವ ಜನರಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುತ್ತೇನೆ. ಮುಂದೆ ನಮಗೆ ಎಂಥ ಭವಿಷ್ಯ ಸಿಗಲಿದೆ ಅನ್ನುವುದರ ಬಗ್ಗೆ ನಾನು ಯೋಚಿಸುತ್ತೇನೆ.”

ಯೇಸು ಸ್ನೇಹಿತರ ಸಹಾಯ ಸ್ವೀಕರಿಸಿದನು

ಒಳ್ಳೇ ಸ್ನೇಹಿತರ ಸಹವಾಸದಿಂದ ಮನಶ್ಶಾಂತಿ ಕಾಪಾಡಿಕೊಳ್ಳಬಹುದು (ಪ್ಯಾರ 11-15 ನೋಡಿ)

11-13. (ಎ) ಅಪೊಸ್ತಲರು ಮತ್ತು ಬೇರೆಯವರು ಹೇಗೆ ಯೇಸುಗೆ ನಿಜ ಸ್ನೇಹಿತರಂತೆ ಇದ್ದರು? (ಬಿ) ಇದರಿಂದ ಯೇಸುಗೆ ಹೇಗನಿಸಿತು?

11 ಯೇಸು ಭೂಮಿಯ ಮೇಲೆ ಸೇವೆ ಮಾಡುತ್ತಿದ್ದಾಗ ಅನೇಕ ಸವಾಲುಗಳನ್ನು ಎದುರಿಸಿದನು. ಆ ಎಲ್ಲಾ ಸವಾಲುಗಳನ್ನು ಎದುರಿಸುವಾಗ ಆತನಿಗೆ ತನ್ನ ಅಪೊಸ್ತಲರಿಂದ ತುಂಬ ಸಹಾಯ ಸಿಕ್ಕಿತು. ಅವರು ಆತನಿಗೆ ನಿಜ ಸ್ನೇಹಿತರಾಗಿದ್ದರು. “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂಬ ಮಾತಿಗೆ ತಕ್ಕ ಹಾಗೆ ನಡಕೊಂಡರು. (ಜ್ಞಾನೋ. 18:24) ಯೇಸುಗೆ ಇಂಥ ಸ್ನೇಹಿತರನ್ನು ಕಂಡರೆ ತುಂಬ ಇಷ್ಟ. ಯೇಸು ಭೂಮಿಯ ಮೇಲಿದ್ದಾಗ ಆತನ ತಮ್ಮಂದಿರು ಯಾರೂ ಆತನಲ್ಲಿ ನಂಬಿಕೆ ಇಟ್ಟಿರಲಿಲ್ಲ. (ಯೋಹಾ. 7:3-5) ಒಂದು ಸಂದರ್ಭದಲ್ಲಿ ಯೇಸುವಿನ ಸಂಬಂಧಿಕರು ಆತನಿಗೆ ಹುಚ್ಚು ಹಿಡಿದಿದೆ ಅಂತ ಕೂಡ ಅಂದುಕೊಂಡರು. (ಮಾರ್ಕ 3:21) ಆದರೆ ಆತನ ನಂಬಿಗಸ್ತ ಅಪೊಸ್ತಲರು ಆತನಲ್ಲಿ ನಂಬಿಕೆ ಇಟ್ಟರು. ಯೇಸು ಸಾಯುವ ಹಿಂದಿನ ರಾತ್ರಿ ತನ್ನ ಅಪೊಸ್ತಲರನ್ನು ನೋಡಿ “ನೀವು ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ಯಾವಾಗಲೂ ಇದ್ದವರು” ಅಂದನು.—ಲೂಕ 22:28.

12 ಅಪೊಸ್ತಲರು ಕೆಲವೊಮ್ಮೆ ಯೇಸುಗೆ ಬೇಜಾರಾಗುವ ರೀತಿ ನಡಕೊಂಡರು. ಆದರೆ ಯೇಸು ಅವರ ತಪ್ಪುಗಳನ್ನು ಎತ್ತಿ ಆಡದೆ ಅವರು ತನ್ನಲ್ಲಿಟ್ಟಿದ್ದ ನಂಬಿಕೆಯನ್ನು ನೋಡಿದನು. (ಮತ್ತಾ. 26:40; ಮಾರ್ಕ 10:13, 14; ಯೋಹಾ. 6:66-69) ತಾನು ಸಾಯುವ ಹಿಂದಿನ ರಾತ್ರಿ ಆತನು ಈ ನಿಷ್ಠಾವಂತ ಪುರುಷರಿಗೆ, “ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯಿಂದ ನಾನು ಕೇಳಿಸಿಕೊಂಡಿರುವ ಎಲ್ಲ ವಿಷಯಗಳನ್ನು ನಿಮಗೆ ತಿಳಿಯಪಡಿಸಿದ್ದೇನೆ” ಅಂದನು. (ಯೋಹಾ. 15:15) ನಿಜವಾಗಲೂ ಯೇಸುಗೆ ತನ್ನ ಸ್ನೇಹಿತರಿಂದ ತುಂಬ ಪ್ರೋತ್ಸಾಹ ಸಿಕ್ಕಿತು. ಆತನು ಮಾಡುತ್ತಿದ್ದ ಸೇವೆಯಲ್ಲಿ ಅವರು ಕೈಜೋಡಿಸಿದ್ದರಿಂದ ಯೇಸುಗೆ ತುಂಬ ಸಂತೋಷ ಆಯಿತು.—ಲೂಕ 10:17, 21.

13 ಯೇಸುಗೆ ತನ್ನ ಅಪೊಸ್ತಲರು ಮಾತ್ರ ಅಲ್ಲ, ಬೇರೆ ಗಂಡಸರು ಮತ್ತು ಹೆಂಗಸರು ಸಹ ಸ್ನೇಹಿತರಾಗಿದ್ದರು. ಇವರು ಸಾರುವ ಕೆಲಸದಲ್ಲಿ ಕೈಜೋಡಿಸಿದರು ಮತ್ತು ಬೇರೆ ರೀತಿಗಳಲ್ಲಿ ಸಹಾಯ ಮಾಡಿದರು. ಕೆಲವರು ಆತನನ್ನು ತಮ್ಮ ಮನೆಗೆ ಕರೆದು ಊಟ-ಉಪಚಾರ ಮಾಡುತ್ತಿದ್ದರು. (ಲೂಕ 10:38-42; ಯೋಹಾ. 12:1, 2) ಕೆಲವರು ಆತನ ಜೊತೆ ಪ್ರಯಾಣಿಸಿದರು ಮತ್ತು ತಮ್ಮ ಸ್ವತ್ತುಗಳಿಂದ ಆತನ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿದ್ದರು. (ಲೂಕ 8:3) ಯೇಸು ಒಬ್ಬ ಒಳ್ಳೇ ಸ್ನೇಹಿತನಾಗಿ ನಡಕೊಂಡದ್ದರಿಂದ ಆತನಿಗೆ ಒಳ್ಳೇ ಸ್ನೇಹಿತರು ಸಿಕ್ಕಿದರು. ಆತನು ತನ್ನ ಸ್ನೇಹಿತರಿಗೆ ಒಳ್ಳೇದನ್ನು ಮಾಡುತ್ತಿದ್ದನು. ಅವರ ಶಕ್ತಿಗಿಂತ ಹೆಚ್ಚನ್ನು ಮಾಡಬೇಕೆಂದು ಆತನು ಯಾವತ್ತೂ ನಿರೀಕ್ಷಿಸಲಿಲ್ಲ. ಯೇಸು ಪರಿಪೂರ್ಣನಾಗಿದ್ದರೂ ತನ್ನ ಅಪರಿಪೂರ್ಣ ಸ್ನೇಹಿತರು ಕೊಟ್ಟ ಬೆಂಬಲವನ್ನು ಮೆಚ್ಚಿದನು. ಯೇಸು ಶಾಂತಿಯಿಂದ ಇರಲು ಆತನ ಸ್ನೇಹಿತರು ಸಹಾಯ ಮಾಡಿದರು ಅನ್ನುವುದರಲ್ಲಿ ಸಂದೇಹವಿಲ್ಲ.

14-15. (ಎ) ನಾವು ಹೇಗೆ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಬಹುದು? (ಬಿ) ಅವರಿಂದ ನಮಗೆ ಯಾವ ಸಹಾಯ ಸಿಗುತ್ತದೆ?

14 ನಾವು ಯೆಹೋವನಿಗೆ ನಿಷ್ಠಾವಂತರಾಗಿರಲು ಒಳ್ಳೇ ಸ್ನೇಹಿತರು ಸಹಾಯ ಮಾಡುತ್ತಾರೆ. ನಮಗೆ ಒಳ್ಳೇ ಸ್ನೇಹಿತರು ಬೇಕಾದರೆ ಮೊದಲು ನಾವು ಒಳ್ಳೇ ಸ್ನೇಹಿತರು ಆಗಿರಬೇಕು. (ಮತ್ತಾ. 7:12) ಅಂದರೆ ನಾವು ಬೇರೆಯವರಿಗೋಸ್ಕರ ಏನಾದರೂ ಮಾಡಲು ಮುಂದೆ ಬರಬೇಕೆಂದು ಬೈಬಲ್‌ ಹೇಳುತ್ತದೆ. ಮುಖ್ಯವಾಗಿ “ಅಗತ್ಯದಲ್ಲಿ” ಇರುವವರಿಗೆ ಏನಾದರೂ ಸಹಾಯ ಮಾಡಬೇಕು. (ಎಫೆ. 4:28) ನಿಮ್ಮ ಸಭೆಯಲ್ಲಿರುವ ಯಾರಿಗಾದರೂ ಸಹಾಯ ಬೇಕಿದೆಯಾ? ಮನೆಯಿಂದ ಹೊರಗೆ ಹೋಗಲು ಸಾಧ್ಯವಿಲ್ಲದ ಒಬ್ಬ ಸಹೋದರ ಅಥವಾ ಸಹೋದರಿಗೆ ನೀವು ಏನಾದರೂ ತಂದುಕೊಡಲು ಸಾಧ್ಯನಾ? ಹಣಕಾಸಿನ ತೊಂದರೆಯಲ್ಲಿರುವ ಒಂದು ಕುಟುಂಬಕ್ಕೆ ನೀವು ಒಂದು ಹೊತ್ತು ಊಟ ಕೊಡಲು ಸಾಧ್ಯನಾ? jw.org ಮತ್ತು JW ಲೈಬ್ರರಿ ಅನ್ನು ಹೇಗೆ ಉಪಯೋಗಿಸುವುದೆಂದು ಗೊತ್ತಿಲ್ಲದ ವ್ಯಕ್ತಿಗಳಿಗೆ ನೀವು ಸಹಾಯ ಮಾಡಲು ಸಾಧ್ಯನಾ? ನಾವು ಯಾವಾಗಲೂ ಬೇರೆಯವರಿಗೆ ಏನಾದರೂ ಸಹಾಯ ಮಾಡಲು ಯೋಚಿಸಿದರೆ ಸಂತೋಷವಾಗಿರುತ್ತೇವೆ.—ಅ. ಕಾ. 20:35.

15 ನಾವು ಪರೀಕ್ಷೆಗಳನ್ನು ಎದುರಿಸುವಾಗ ನಮ್ಮ ಸ್ನೇಹಿತರು ನಮ್ಮ ಮನಶ್ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಯೋಬ ತನ್ನ ಕಷ್ಟಗಳನ್ನು ಹೇಳಿಕೊಂಡಾಗ ಎಲೀಹು ಕಿವಿಗೊಟ್ಟು ಕೇಳಿದಂತೆ, ನಾವು ನಮ್ಮ ಮನದಾಳದ ಅನಿಸಿಕೆಗಳನ್ನು ಹೇಳಿಕೊಳ್ಳುವಾಗ ನಮ್ಮ ಸ್ನೇಹಿತರು ನಮಗೆ ಕಿವಿಗೊಟ್ಟು ಕೇಳುತ್ತಾರೆ. (ಯೋಬ 32:4) ನಮ್ಮ ಸ್ನೇಹಿತರು ನಮಗೋಸ್ಕರ ತೀರ್ಮಾನಗಳನ್ನು ಮಾಡಬೇಕೆಂದು ನಾವು ನಿರೀಕ್ಷಿಸಬಾರದು. ಆದರೆ ಅವರು ಬೈಬಲಿಂದ ಕೆಲವು ಸಲಹೆ-ಸೂಚನೆಗಳನ್ನು ಕೊಡುವಾಗ ನಾವು ಅದಕ್ಕೆ ಕಿವಿಗೊಡುವುದು ಜಾಣತನ. (ಜ್ಞಾನೋ. 15:22) ರಾಜ ದಾವೀದನು ತನ್ನ ಸ್ನೇಹಿತರು ಕೊಟ್ಟ ಸಹಾಯವನ್ನು ದೀನತೆಯಿಂದ ಸ್ವೀಕರಿಸಿದನು. ಅದೇ ರೀತಿ, ನಾವು ಕೂಡ ಅಗತ್ಯದಲ್ಲಿರುವಾಗ ನಮ್ಮ ಸ್ನೇಹಿತರು ಏನಾದರೂ ಸಹಾಯ ಮಾಡಿದರೆ ಅದನ್ನು ದೀನತೆಯಿಂದ ಸ್ವೀಕರಿಸಬೇಕು. (2 ಸಮು. 17:27-29) ಇಂಥ ಸ್ನೇಹಿತರು ದೇವರಿಂದ ನಮಗೆ ಸಿಕ್ಕಿರುವ ವರದಾನ.—ಯಾಕೋ. 1:17.

ಮನಶ್ಶಾಂತಿ ಕಾಪಾಡಿಕೊಳ್ಳಲು ಏನು ಮಾಡಬೇಕು?

16. ಫಿಲಿಪ್ಪಿ 4:6, 7 ಹೇಳುವ ಪ್ರಕಾರ, ನಮಗೆ ಯಾರ ಮೂಲಕ ಮಾತ್ರ ಶಾಂತಿ ಸಿಗುತ್ತದೆ?

16 ಫಿಲಿಪ್ಪಿ 4:6, 7 ಓದಿ. ಯೆಹೋವನು ಕೊಡುವ ಶಾಂತಿಯನ್ನು ನಾವು “ಕ್ರಿಸ್ತ ಯೇಸುವಿನ ಮೂಲಕ” ಪಡಕೊಳ್ಳಬಹುದು ಎಂದು ಯೆಹೋವನು ಯಾಕೆ ಹೇಳುತ್ತಾನೆ? ಯೆಹೋವನ ಉದ್ದೇಶದಲ್ಲಿ ಯೇಸುಗಿರುವ ಪಾತ್ರವನ್ನು ನಾವು ಅರ್ಥಮಾಡಿಕೊಂಡರೆ ಮಾತ್ರ ನಮಗೆ ಶಾಶ್ವತವಾದ ಶಾಂತಿ, ನೆಮ್ಮದಿ ಸಿಗುತ್ತದೆ. ಯಾಕೆಂದರೆ ಯೇಸು ಕೊಟ್ಟ ಯಜ್ಞದ ಮೂಲಕ ನಮ್ಮ ಎಲ್ಲಾ ಪಾಪಗಳಿಗೆ ಕ್ಷಮಾಪಣೆ ಸಿಗುತ್ತದೆ. (1 ಯೋಹಾ. 2:12) ಇದರಿಂದ ನಮಗೆಷ್ಟು ಸಮಾಧಾನ ಆಗುತ್ತದೆ ಅಲ್ವಾ? ದೇವರ ರಾಜ್ಯದ ರಾಜನಾಗಿರುವ ಯೇಸು, ಸೈತಾನ ಮತ್ತು ಈ ಲೋಕ ನಮಗೆ ಕೊಡುತ್ತಿರುವ ಯಾವುದೇ ಕಷ್ಟವನ್ನು ತೆಗೆದುಹಾಕುತ್ತಾನೆ. (ಯೆಶಾ. 65:17; 1 ಯೋಹಾ. 3:8; ಪ್ರಕ. 21:3, 4) ಇದರಿಂದ ನಮ್ಮ ನಿರೀಕ್ಷೆ ಬಲವಾಗುತ್ತದೆ ಅಲ್ವಾ? ಯೇಸು ನಮಗೆ ಕೊಟ್ಟಿರುವ ಕೆಲಸದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಯೇಸು ನಮ್ಮ ಜೊತೆ ಇದ್ದಾನೆ ಅನ್ನುವುದನ್ನು ನಾವು ಮರೆಯಬಾರದು. ಆತನು ಮುಖ್ಯವಾಗಿ ಈ ಕಡೇ ದಿವಸಗಳಲ್ಲಿ ನಮಗೆ ಆಸರೆಯಾಗಿ ನಿಂತಿದ್ದಾನೆ. (ಮತ್ತಾ. 28:19, 20) ಇದರಿಂದ ನಮಗೆ ತುಂಬ ಧೈರ್ಯ ಸಿಗುತ್ತದೆ ಅಲ್ವಾ? ಮನಶ್ಶಾಂತಿ ಎಂಬ ಕಟ್ಟಡಕ್ಕೆ ಸಮಾಧಾನ, ನಿರೀಕ್ಷೆ ಮತ್ತು ಧೈರ್ಯ ಅಸ್ತಿವಾರ ಇದ್ದಂತೆ.

17. (ಎ) ಒಬ್ಬ ಕ್ರೈಸ್ತನು ಮನಶ್ಶಾಂತಿ ಕಾಪಾಡಿಕೊಳ್ಳಲು ಏನು ಮಾಡಬೇಕು? (ಬಿ) ಯೋಹಾನ 16:33 ಹೇಳುವ ಪ್ರಕಾರ ನಮ್ಮಿಂದ ಏನು ಮಾಡಲು ಸಾಧ್ಯವಾಗುತ್ತದೆ?

17 ಹಾಗಾದರೆ, ತುಂಬ ಕಷ್ಟಗಳು ಬಂದು ನಿಮ್ಮ ಅಸ್ತಿವಾರವನ್ನೇ ಅಲುಗಾಡಿಸಿದಂತೆ ಆದರೂ ನೀವು ಹೇಗೆ ಮನಶ್ಶಾಂತಿ ಕಾಪಾಡಿಕೊಳ್ಳಬಹುದು? ಯೇಸು ಏನು ಮಾಡಿದನೋ ಅದನ್ನು ನೀವೂ ಮಾಡಬೇಕು. ಮೊದಲು, ಪ್ರಾರ್ಥನೆ ಮಾಡಬೇಕು. ಅದೇನೇ ಆದರೂ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬಾರದು. ಎರಡು, ಕಷ್ಟ ಆದರೂ ಯೆಹೋವನ ಮಾತಿಗೆ ವಿಧೇಯರಾಗುತ್ತಾ ಹುರುಪಿನಿಂದ ಸುವಾರ್ತೆ ಸಾರಬೇಕು. ಮೂರು, ಪರೀಕ್ಷೆಗಳು ಬಂದಾಗ ಸ್ನೇಹಿತರು ಕೊಡುವ ಸಹಾಯವನ್ನು ಸ್ವೀಕರಿಸಬೇಕು. ಆಗ ದೇವಶಾಂತಿ ನಿಮ್ಮ ಹೃದಯ ಮತ್ತು ಮನಸ್ಸನ್ನು ಕಾಪಾಡುತ್ತದೆ. ಆಗ ನೀವು ಯೇಸುವಿನಂತೆ ಯಾವುದೇ ಸವಾಲನ್ನು ಜಯಿಸಲು ಸಾಧ್ಯವಾಗುತ್ತದೆ.—ಯೋಹಾನ 16:33 ಓದಿ.

ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು

^ ಪ್ಯಾರ. 5 ನಮ್ಮೆಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ನಮ್ಮ ಮನಶ್ಶಾಂತಿ ಹಾಳಾಗಬಹುದು. ಶಾಂತಿಯಿಂದ ಇರಲು ಯೇಸು ಮೂರು ವಿಷಯಗಳನ್ನು ಮಾಡಿದನು. ನಾವೂ ಅದನ್ನೇ ಮಾಡಿದರೆ ತುಂಬ ಗಂಭೀರವಾದ ಸಮಸ್ಯೆಗಳನ್ನು ಎದುರಿಸುವಾಗಲೂ ಮನಶ್ಶಾಂತಿ ಇರುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡಲಿದ್ದೇವೆ.