ಅಧ್ಯಯನ ಲೇಖನ 16
ಸಾವಿನ ಸತ್ಯವನ್ನು ಸಮರ್ಥಿಸಿ
‘ನಾವು ಸತ್ಯದ ಪ್ರೇರಿತ ನುಡಿಯನ್ನೂ ತಪ್ಪಾದ ಪ್ರೇರಿತ ನುಡಿಯನ್ನೂ ಗುರುತಿಸಬೇಕು.’—1 ಯೋಹಾ. 4:6.
ಗೀತೆ 137 ಕೊಡು ನಮಗೆ ಧೈರ್ಯ
ಕಿರುನೋಟ *
1-2. (ಎ) ಸೈತಾನ ಜನರನ್ನು ಹೇಗೆ ಮೋಸ ಮಾಡಿದ್ದಾನೆ? (ಬಿ) ಈ ಲೇಖನದಲ್ಲಿ ನಾವೇನು ಚರ್ಚೆ ಮಾಡಲಿದ್ದೇವೆ?
‘ಸುಳ್ಳಿಗೆ ತಂದೆಯಾದ’ ಸೈತಾನ ಆದಾಮ-ಹವ್ವರ ಕಾಲದಿಂದಲೂ ಜನರಿಗೆ ಮೋಸ ಮಾಡುತ್ತಾ ಬಂದಿದ್ದಾನೆ. (ಯೋಹಾ. 8:44) ಸಾವಿನ ಬಗ್ಗೆ ಮತ್ತು ಸತ್ತ ನಂತರ ಏನಾಗುತ್ತದೆ ಅನ್ನುವುದರ ಬಗ್ಗೆ ಅವನು ಹೇಳಿರುವ ಸುಳ್ಳುಗಳು ಒಂದೆರಡಲ್ಲ. ಇದರಿಂದ ಅನೇಕ ಸಂಪ್ರದಾಯಗಳು, ಮೂಢನಂಬಿಕೆಗಳು ಹುಟ್ಟಿಕೊಂಡಿವೆ. ತಮ್ಮ ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಯಾರಾದರೂ ಸತ್ತುಹೋದರೆ ನಮ್ಮ ಸಹೋದರ-ಸಹೋದರಿಯರ ಮೇಲೆ ತುಂಬ ಒತ್ತಡ ಬರುತ್ತದೆ. ಅವರು ಈ ಸಂಪ್ರದಾಯಗಳನ್ನು ಮಾಡಬೇಕೆಂದು ಸಂಬಂಧಿಕರು ಮತ್ತು ಬೇರೆ ಜನರು ಒತ್ತಡ ಹಾಕುತ್ತಾರೆ. ಹಾಗಾಗಿ ನಮ್ಮ ಎಷ್ಟೋ ಸಹೋದರ-ಸಹೋದರಿಯರು ‘ನಂಬಿಕೆಗಾಗಿ ಕಠಿನ ಹೋರಾಟ’ ಮಾಡಬೇಕಾಗಿದೆ.—ಯೂದ 3.
2 ನಿಮಗೆ ಈ ಪರೀಕ್ಷೆ ಬಂದಾಗ, ಸಾವಿನ ಬಗ್ಗೆ ಬೈಬಲ್ ಹೇಳುವುದೇ ಸತ್ಯ ಎಂದು ಹೇಗೆ ಸಮರ್ಥಿಸುವಿರಿ? (ಎಫೆ. 6:11) ದೇವರಿಗೆ ಇಷ್ಟವಾಗದ ಸಂಪ್ರದಾಯವನ್ನು ಮಾಡುವಂತೆ ಬೇರೆಯವರು ನಮ್ಮ ಸಹೋದರ-ಸಹೋದರಿಯರ ಮೇಲೆ ಒತ್ತಡ ಹಾಕುವಾಗ ನೀವು ಅವರಿಗೆ ಹೇಗೆ ಸಹಾಯ ಮಾಡಬಹುದು? ಈ ವಿಷಯದಲ್ಲಿ ಯೆಹೋವನು ನಮಗೆ ಏನು ಸಹಾಯ ಕೊಡುತ್ತಾನೆ ಎಂದು ಈ ಲೇಖನದಲ್ಲಿ ಚರ್ಚೆ ಮಾಡಲಿದ್ದೇವೆ. ಮೊದಲು, ಸಾವಿನ ಬಗ್ಗೆ ಬೈಬಲ್ ಏನು ಹೇಳುತ್ತದೆ ಅಂತ ನೋಡೋಣ.
ಸತ್ತ ಮೇಲೆ ಏನಾಗುತ್ತದೆ?
3. ಮೊದಲ ಸುಳ್ಳಿನ ಪರಿಣಾಮ ಏನಾಯಿತು?
3 ದೇವರು ಮನುಷ್ಯರನ್ನು ಸೃಷ್ಟಿಮಾಡಿದಾಗ ಅವರು ಸಾಯಬೇಕು ಅನ್ನುವುದು ಆತನ ಉದ್ದೇಶ ಆಗಿರಲಿಲ್ಲ. ಆದಾಮ-ಹವ್ವ ಸಾಯದೆ ಶಾಶ್ವತವಾಗಿ ಬದುಕಬೇಕು ಅನ್ನುವುದು ಆತನ ಇಷ್ಟವಾಗಿತ್ತು. ಹಾಗೆ ಬದುಕಬೇಕೆಂದರೆ ಅವರು ಯೆಹೋವನು ಹೇಳಿದ ಹಾಗೆ ನಡಕೊಳ್ಳಬೇಕಿತ್ತು. “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು” ಎಂಬ ಒಂದು ಸರಳವಾದ ನಿಯಮವನ್ನು ದೇವರು ಕೊಟ್ಟಿದ್ದನು. ತಿಂದರೆ ಅದೇ ದಿನ “ಸತ್ತೇ ಹೋಗುವಿ” ಎಂದೂ ಆದಾಮನಿಗೆ ಹೇಳಿದ್ದನು. (ಆದಿ. 2:16, 17) ನಂತರ ಸೈತಾನ ಬಂದು ಬತ್ತಿ ಇಟ್ಟ. ಹಾವಿನ ಮೂಲಕ ಮಾತಾಡುತ್ತಾ ಹವ್ವಳ ಹತ್ತಿರ “ನೀವು ಹೇಗೂ ಸಾಯುವದಿಲ್ಲ” ಎಂದು ಸುಳ್ಳು ಹೇಳಿದ. ಅದನ್ನು ನಂಬಿ ಅವಳು ಆ ಹಣ್ಣನ್ನು ತಿಂದಳು. ಆಮೇಲೆ ಆದಾಮ ಕೂಡ ತಿಂದ. (ಆದಿ. 3:4, 6) ಹೀಗೆ ಮಾನವರಿಗೆ ಪಾಪ ಮತ್ತು ಮರಣ ಬಂತು.—ರೋಮ. 5:12.
4-5. ಸೈತಾನ ಹೇಗೆ ಜನರನ್ನು ಮೋಸ ಮಾಡುತ್ತಾ ಬಂದಿದ್ದಾನೆ?
4 ದೇವರು ಹೇಳಿದಂತೆ ಆದಾಮ-ಹವ್ವ ಸತ್ತುಹೋದರು. ಆದರೆ ಸಾವಿನ ಬಗ್ಗೆ ಸುಳ್ಳು ಹೇಳುವುದನ್ನು ಸೈತಾನ ನಿಲ್ಲಿಸಲಿಲ್ಲ. ಸಮಯ ಹೋದ ಹಾಗೆ ಹೊಸಹೊಸ ಸುಳ್ಳುಗಳನ್ನು ಹೇಳುತ್ತಾ ಹೋದ. ಅದರಲ್ಲಿ ಒಂದು ಸುಳ್ಳು ಏನೆಂದರೆ, ಒಬ್ಬ ವ್ಯಕ್ತಿ ಸತ್ತಾಗ ಅವನ ಆತ್ಮ ಸಾಯಲ್ಲ, ಅದು ಆತ್ಮಲೋಕದಲ್ಲಿ ಅಥವಾ ಬೇರೆಲ್ಲೋ ಜೀವಿಸುತ್ತದೆ. ಈ ಸುಳ್ಳಿಗೆ ರೆಕ್ಕೆ-ಪುಕ್ಕ ಸೇರಿಸಿ ಏನೇನೋ ಕಥೆ ಹುಟ್ಟಿಕೊಂಡಿದೆ. ಇದರಿಂದ ಜನರು ಇವತ್ತಿಗೂ ಮೋಸ ಹೋಗುತ್ತಾನೇ ಇದ್ದಾರೆ.—5 ಯಾಕೆ ಇಷ್ಟೊಂದು ಜನರು ಮೋಸ ಹೋಗುತ್ತಾರೆ? ಸಾವು ಅಂದರೆ ಜನರಿಗೆ ಭಯ ಅಂತ ಸೈತಾನನಿಗೆ ಗೊತ್ತು. ಇದನ್ನೇ ಅವನು ಬಂಡವಾಳ ಮಾಡಿಕೊಂಡು ಜನರನ್ನು ಮೋಸ ಮಾಡುತ್ತಾನೆ. ದೇವರು ನಮ್ಮನ್ನು ಶಾಶ್ವತವಾಗಿ ಬದುಕಬೇಕೆಂದು ಸೃಷ್ಟಿಮಾಡಿರುವುದರಿಂದ ನಮಗೆ ಸಾಯಕ್ಕೆ ಇಷ್ಟ ಇಲ್ಲ. (ಪ್ರಸಂ. 3:11) ಸಾವನ್ನು ನಾವು ಶತ್ರುವಾಗಿ ನೋಡುತ್ತೇವೆ.—1 ಕೊರಿಂ. 15:26.
6-7. (ಎ) ಸಾವಿನ ಬಗ್ಗೆ ಇರುವ ಸತ್ಯವನ್ನು ಸೈತಾನನು ಮುಚ್ಚಿಹಾಕಲು ಸಾಧ್ಯ ಆಗಿದೆಯಾ? ವಿವರಿಸಿ. (ಬಿ) ಸತ್ತವರ ಬಗ್ಗೆ ಹೆದರದೆ ಇರಲು ಬೈಬಲ್ ಹೇಗೆ ಸಹಾಯ ಮಾಡುತ್ತದೆ?
6 ಸೈತಾನ ಎಷ್ಟೇ ಸಾಹಸ ಮಾಡಿದರೂ ಸಾವಿನ ಬಗ್ಗೆ ಇರುವ ಸತ್ಯವನ್ನು ಮುಚ್ಚಿಹಾಕಲು ಅವನಿಂದ ಆಗಲಿಲ್ಲ. ಸತ್ತ ಮೇಲೆ ಏನಾಗುತ್ತೆ ಮತ್ತು ಸತ್ತ ಜನರಿಗೆ ಇರುವ ನಿರೀಕ್ಷೆ ಏನು ಎಂದು ಹೆಚ್ಚೆಚ್ಚು ಜನರು ಬೈಬಲಿಂದ ತಿಳುಕೊಂಡಿದ್ದಾರೆ. ಅಷ್ಟೇ ಅಲ್ಲ, ಅದನ್ನು ಬೇರೆಯವರಿಗೂ ತಿಳಿಸುತ್ತಾ ಇದ್ದಾರೆ. (ಪ್ರಸಂ. 9:5, 10; ಅ. ಕಾ. 24:15) ನಾವು ಈ ಸತ್ಯ ತಿಳುಕೊಂಡದ್ದರಿಂದ ಗೊಂದಲ ಇಲ್ಲದೆ, ನೆಮ್ಮದಿಯಿಂದ ಜೀವಿಸುತ್ತಾ ಇದ್ದೇವೆ. ಉದಾಹರಣೆಗೆ, ಸತ್ತವರಿಗೆ ನಾವು ಭಯಪಡಲ್ಲ, ತೀರಿಹೋಗಿರುವ ನಮ್ಮ ಆಪ್ತರಿಗೆ ಏನಾಗುತ್ತೋ ಏನೋ ಅನ್ನುವ ಭಯನೂ ನಮಗಿಲ್ಲ. ಅವರು ಆತ್ಮಲೋಕದಲ್ಲಿ ಜೀವಿಸುತ್ತಿಲ್ಲ, ಯಾರಿಗೂ ಕೆಟ್ಟದು ಮಾಡಕ್ಕಾಗಲ್ಲ. ಅವರು ಗಾಢ ನಿದ್ದೆಯಲ್ಲಿ ಇರೋ ತರ ಇದ್ದಾರೆ ಅಷ್ಟೆ ಅಂತನೂ ನಮಗೆ ಗೊತ್ತು. (ಯೋಹಾ. 11:11-14) ತೀರಿಹೋಗಿರುವ ಜನರಿಗೆ ದಿನ-ವರ್ಷ ಏನೂ ಗೊತ್ತಾಗಲ್ಲ. ಪುನರುತ್ಥಾನ ಆಗುವಾಗ ನೂರಾರು ವರ್ಷಗಳ ಹಿಂದೆ ತೀರಿಹೋದವರಿಗೆ ಸಹ ಐದು ನಿಮಿಷ ಮಲಗಿ ಎದ್ದ ಹಾಗೆ ಇರುತ್ತದೆ.
7 ಸಾವಿನ ಬಗ್ಗೆ ಬೈಬಲ್ ಹೇಳುವ ವಿಷಯ ಸರಳ, ಸ್ಪಷ್ಟ, ಸತ್ಯ ಅಂತ ನಿಮಗೆ ಅನಿಸುವುದಿಲ್ವಾ? ಸೈತಾನ ಹಬ್ಬಿಸಿರುವ ಸುಳ್ಳುಗಳಿಗೂ ಬೈಬಲ್ ಹೇಳುವ ಸತ್ಯಕ್ಕೂ ಎಷ್ಟು ವ್ಯತ್ಯಾಸ ಅಲ್ವಾ? ಸೈತಾನ ಸಾವಿನ ಬಗ್ಗೆ ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡಿರುವುದು ಮಾತ್ರ ಅಲ್ಲ, ನಮ್ಮ ಸೃಷ್ಟಿಕರ್ತನ ಹೆಸರನ್ನೂ ಹಾಳುಮಾಡಿದ್ದಾನೆ. ಸೈತಾನ ಹೇಳಿರುವ ಸುಳ್ಳಿಂದ ಎಷ್ಟೊಂದು ಹಾನಿಯಾಗಿದೆ ಎಂದು ಈಗ ತಿಳುಕೊಳ್ಳೋಣ. ಈ ಪ್ರಶ್ನೆಗಳನ್ನು ಚರ್ಚಿಸೋಣ: ಸೈತಾನ ಹೇಳಿರುವ ಸುಳ್ಳು ಯೆಹೋವನ ಹೆಸರನ್ನು ಹೇಗೆ ಹಾಳುಮಾಡಿದೆ? ಹೇಗೆ ಆ ಸುಳ್ಳುಗಳು ಯೇಸುವಿನ ವಿಮೋಚನಾ ಮೌಲ್ಯದಲ್ಲಿ ಜನರು ನಂಬಿಕೆ ಕಳಕೊಳ್ಳುವಂತೆ ಮಾಡಿವೆ? ಆ ಸುಳ್ಳುಗಳು ಜನರ ನೋವು-ನರಳಾಟವನ್ನು ಹೇಗೆ ಜಾಸ್ತಿ ಮಾಡಿವೆ?
ಸೈತಾನ ಹೇಳಿದ ಸುಳ್ಳಿಂದ ಆಗಿರುವ ಹಾನಿ ಅಷ್ಟಿಷ್ಟಲ್ಲ!
8. ಸೈತಾನನು ಹಬ್ಬಿಸಿರುವ ಸುಳ್ಳು ಯೆಹೋವನ ಹೆಸರನ್ನು ಹಾಳುಮಾಡಿದೆ ಎಂದು ಯೆರೆಮೀಯ 19:5ರಿಂದ ಹೇಗೆ ಗೊತ್ತಾಗುತ್ತದೆ?
8 ಸೈತಾನ ಹೇಳಿರುವ ಸುಳ್ಳು ಯೆಹೋವನ ಹೆಸರನ್ನು ಹಾಳುಮಾಡಿದೆ. 1 ಯೋಹಾ. 4:8) ಇದರ ಬಗ್ಗೆ ನಿಮಗೆ ಹೇಗನಿಸುತ್ತೆ? ಯೆಹೋವನಿಗೆ ಹೇಗನಿಸುತ್ತಿರಬೇಕು ಯೋಚಿಸಿ. ಆತನು ಯಾವ ರೀತಿಯ ಕ್ರೂರತನವನ್ನೂ ಇಷ್ಟಪಡಲ್ಲ.—ಯೆರೆಮೀಯ 19:5 ಓದಿ.
ಸತ್ತವರನ್ನು ಬೆಂಕಿಯಲ್ಲಿ ಹಾಕಿ ಚಿತ್ರಹಿಂಸೆ ಕೊಡಲಾಗುತ್ತದೆ ಅನ್ನುವ ಸುಳ್ಳನ್ನು ಸೈತಾನ ಹಬ್ಬಿಸಿದ್ದಾನೆ. ಇಂಥ ಬೋಧನೆ ದೇವರ ಹೆಸರಿಗೆ ಮಸಿ ಬಳಿಯುತ್ತದೆ! ಹೇಗೆ? ಚಿತ್ರಹಿಂಸೆ ಕೊಡುವ ದೇವರು ಪ್ರೀತಿಸ್ವರೂಪಿ ಅಲ್ಲ, ಸೈತಾನನ ತರ ಕ್ರೂರಿ ಎಂದು ಜನರಿಗೆ ಅನಿಸಿಬಿಡುತ್ತದೆ. (9. ಸೈತಾನ ಹೇಳಿರುವ ಸುಳ್ಳು ಯೋಹಾನ 3:16 ಮತ್ತು 15:13ರಲ್ಲಿ ತಿಳಿಸಲಾಗಿರುವ ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಕಳಕೊಳ್ಳುವಂತೆ ಹೇಗೆ ಮಾಡುತ್ತದೆ?
9 ಸಾವಿನ ಬಗ್ಗೆ ಸೈತಾನ ಹೇಳಿರುವ ಸುಳ್ಳು ಯೇಸುವಿನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಕಳಕೊಳ್ಳುವಂತೆ ಮಾಡುತ್ತದೆ. (ಮತ್ತಾ. 20:28) ಸೈತಾನ ಹಬ್ಬಿಸಿರುವ ಇನ್ನೊಂದು ಸುಳ್ಳು ಏನೆಂದರೆ, ಮನುಷ್ಯರಲ್ಲಿ ಒಂದು ಆತ್ಮ ಇದೆ, ಅದು ಸಾಯಲ್ಲ. ಇದು ನಿಜವಾದರೆ, ಎಲ್ಲರೂ ಸದಾಕಾಲ ಬದುಕುತ್ತಾರೆ ಅಂತಾಯಿತು. ಇದು ನಿಜವಾಗಿದ್ದರೆ, ನಾವು ನಿತ್ಯಜೀವ ಪಡೆಯಲಿಕ್ಕಾಗಿ ಕ್ರಿಸ್ತನು ತನ್ನ ಜೀವವನ್ನು ನಮಗೋಸ್ಕರ ವಿಮೋಚನಾ ಮೌಲ್ಯವಾಗಿ ಕೊಡುವ ಅಗತ್ಯನೇ ಇರುತ್ತಿರಲಿಲ್ಲ. ಆದರೆ ನೆನಪಿಡಿ, ವಿಮೋಚನಾ ಮೌಲ್ಯ ಕೊಟ್ಟು ಯೆಹೋವ ಮತ್ತು ಯೇಸು ಮಾನವರಿಗೆ ಅತಿ ಹೆಚ್ಚು ಪ್ರೀತಿ ತೋರಿಸಿದ್ದಾರೆ. (ಯೋಹಾನ 3:16; 15:13 ಓದಿ.) ಸಾವಿನ ಬಗ್ಗೆ ಸೈತಾನ ಹೇಳಿರುವ ಸುಳ್ಳು ಆ ದೊಡ್ಡ ಉಡುಗೊರೆಗೆ ಬೆಲೆನೇ ಇಲ್ಲದ ಹಾಗೆ ಮಾಡುತ್ತದೆ. ಇದರಿಂದ ಯೆಹೋವ ಮತ್ತು ಯೇಸುಗೆ ಎಷ್ಟೊಂದು ನೋವಾಗುತ್ತಿರಬೇಕು!
10. ಸೈತಾನ ಹೇಳಿರುವ ಸುಳ್ಳುಗಳು ಜನರ ನೋವು-ನರಳಾಟವನ್ನು ಹೇಗೆ ಜಾಸ್ತಿ ಮಾಡಿವೆ?
10 ಸೈತಾನ ಹೇಳಿರುವ ಸುಳ್ಳುಗಳು ಜನರ ನೋವು-ನರಳಾಟವನ್ನು ಜಾಸ್ತಿ ಮಾಡಿವೆ. ಚಿಕ್ಕ ಮಕ್ಕಳು ತೀರಿಕೊಂಡಾಗ ಅವರ ಅಪ್ಪ-ಅಮ್ಮಂಗೆ ಕೆಲವರು ‘ನಿಮ್ಮ ಮಗುವನ್ನು ದೇವರೇ ಕರಕೊಂಡನು, ಬಹುಶಃ ಆತನಿಗೆ ಸ್ವರ್ಗದಲ್ಲಿ ಒಬ್ಬ ದೇವದೂತ ಬೇಕಾಗಿದ್ದನೊ ಏನೋ’ ಅಂತ ಹೇಳುತ್ತಾರೆ. ಸೈತಾನ ಹಬ್ಬಿಸಿರುವ ಈ ಸುಳ್ಳು ಆ ಅಪ್ಪ-ಅಮ್ಮನ ನೋವನ್ನು ಕಡಿಮೆ ಮಾಡುತ್ತಾ ಅಥವಾ ಜಾಸ್ತಿ ಮಾಡುತ್ತಾ? ದೇವರು ನರಕದಲ್ಲಿ ಹಾಕಿ ಚಿತ್ರಹಿಂಸೆ ಕೊಡುತ್ತಾನೆ ಎಂಬ ಸುಳ್ಳು ಬೋಧನೆಯನ್ನು ಆಧಾರವಾಗಿ ಇಟ್ಟುಕೊಂಡು ಕೆಲವರು ಕ್ರೂರವಾಗಿ ನಡಕೊಂಡಿದ್ದಾರೆ. ಚರ್ಚಿನ ಬೋಧನೆಗಳನ್ನು ವಿರೋಧಿಸಿದವರನ್ನು ಕಂಬಕ್ಕೆ ಕಟ್ಟಿಹಾಕಿ ಸುಟ್ಟಿದ್ದಾರೆ. ಯಾಕೆಂದರೆ ಅವರಿಗೆ “ಮುಂದೆ ಸಿಗುವ ನರಕಾಗ್ನಿಯ ರುಚಿಯನ್ನು ಇಲ್ಲೇ ತೋರಿಸಿದರೆ” ಅವರು ಸಾಯುವ ಮುಂಚೆ ಪಶ್ಚಾತ್ತಾಪಪಡುತ್ತಾರೆ, ಆಗ ಸತ್ತ ಮೇಲೆ ಬೆಂಕಿಯಲ್ಲಿ ಯಾತನೆ ಅನುಭವಿಸುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಚಿತ್ರಹಿಂಸೆ ಕೊಟ್ಟವರು ನೆನಸಿರಬಹುದೆಂದು ಸ್ಪ್ಯಾನಿಷ್ ಧಾರ್ಮಿಕ ನ್ಯಾಯಾಲಯದ ಬಗ್ಗೆ ಇರುವ ಒಂದು ಪುಸ್ತಕ ಹೇಳುತ್ತದೆ. ಅನೇಕ ದೇಶಗಳಲ್ಲಿ ಜನರು ಸತ್ತುಹೋಗಿರುವ ತಮ್ಮ ಪೂರ್ವಜರನ್ನು ಆರಾಧನೆ ಮಾಡಲೇಬೇಕು, ಗೌರವ ಕೊಡಲೇಬೇಕು, ಅವರಿಂದ ಆಶೀರ್ವಾದ ಪಡೆಯಲೇಬೇಕು ಎಂದು ನೆನಸುತ್ತಾರೆ. ಸತ್ತವರು ತಮಗೆ ಕಾಟ ಕೊಡದೆ ಇರಬೇಕೆಂದರೆ ಅವರ ಕೋಪ ತಣಿಸಬೇಕು, ಅವರನ್ನು ತೃಪ್ತಿಪಡಿಸಬೇಕು ಅಂತ ಕೆಲವರು ನಂಬುತ್ತಾರೆ. ಆದರೆ ಇದೆಲ್ಲ ಸೈತಾನ ಕಟ್ಟಿರುವ ಕಥೆ. ಇದರಿಂದ ಜನರಿಗೆ ನಿಜವಾದ ಸಾಂತ್ವನ ಸಿಗಲ್ಲ. ಬದಲಿಗೆ ಅನಾವಶ್ಯಕ ಚಿಂತೆ-ಭಯ ಆಗುತ್ತೆ.
ಸಾವಿನ ಸತ್ಯವನ್ನು ನಾವು ಹೇಗೆ ಸಮರ್ಥಿಸಬಹುದು?
11. ನಾವು ದೇವರ ವಾಕ್ಯದ ವಿರುದ್ಧ ಹೋಗುವಂತೆ ಸ್ನೇಹಿತರು ಅಥವಾ ಸಂಬಂಧಿಕರು ನಮ್ಮನ್ನು ಹೇಗೆ ಒತ್ತಾಯ ಮಾಡಬಹುದು?
11 ಯಾರಾದರೂ ತೀರಿಹೋದಾಗ ನಮ್ಮ ಸ್ನೇಹಿತರು-ಸಂಬಂಧಿಕರು ಬೈಬಲ್ ಒಪ್ಪದಿರುವ ಸಂಪ್ರದಾಯಗಳನ್ನು ಮಾಡುವಂತೆ ನಮ್ಮನ್ನು ಒತ್ತಾಯಿಸಬಹುದು. ಆಗ ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ನಮಗಿರುವ ಪ್ರೀತಿ ಆ ಸಂಪ್ರದಾಯಗಳನ್ನು ಮಾಡದಿರಲು ಸಹಾಯ ಮಾಡುತ್ತದೆ. ನಾವು ಸಂಪ್ರದಾಯಗಳನ್ನು ಮಾಡದೇ ಇದ್ದಾಗ ತೀರಿಹೋದ ವ್ಯಕ್ತಿ ಮೇಲೆ ‘ನಿಮಗೆ ಒಂಚೂರೂ ಪ್ರೀತಿ-ಗೌರವ ಇಲ್ಲ’ ಅಂತ ಹೇಳಿ ನಮಗೆ ಅವಮಾನ ಮಾಡಬಹುದು. ಸಂಪ್ರದಾಯಗಳನ್ನು ಮಾಡದಿದ್ದರೆ ಸತ್ತವರು ಬದುಕಿರುವವರಿಗೆ ತೊಂದರೆ ಕೊಡುತ್ತಾರೆ ಅಂತನೂ ಹೇಳಬಹುದು. ಆಗ ನಾವು ಬೈಬಲಲ್ಲಿರುವ ಸತ್ಯವನ್ನು ಹೇಗೆ ಸಮರ್ಥಿಸಬಹುದು? ಮುಂದೆ ಕೆಲವು ಬೈಬಲ್ ತತ್ವಗಳನ್ನು ಕೊಡಲಾಗಿದೆ. ಅದನ್ನು ಹೇಗೆ ಅನ್ವಯಿಸಬಹುದು ಎಂದು ನೋಡಿ.
12. ಸತ್ತವರ ಬಗ್ಗೆ ಇರುವ ಯಾವ ನಂಬಿಕೆಗಳು ಮತ್ತು ಸಂಪ್ರದಾಯಗಳು ಬೈಬಲಿಗೆ ವಿರುದ್ಧವಾಗಿವೆ?
12 ಬೈಬಲಿಗೆ ವಿರುದ್ಧವಾದ ಬೋಧನೆಗಳಿಂದ, ಸಂಪ್ರದಾಯಗಳಿಂದ “ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ.” (2 ಕೊರಿಂ. 6:17) ಒಂದು ಕೆರೀಬಿಯನ್ ದೇಶದಲ್ಲಿ ಅನೇಕರು, ಒಬ್ಬ ವ್ಯಕ್ತಿ ಸತ್ತ ಮೇಲೆ “ದೆವ್ವ” ಆಗಿ ಬಂದು ಯಾರೆಲ್ಲ ಅವನಿಗೆ ತೊಂದರೆ ಕೊಟ್ಟಿದ್ದರೋ ಅವರೆಲ್ಲರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎಂದು ನಂಬುತ್ತಾರೆ. ಆ “ದೆವ್ವ” “ಇಡೀ ಸಮಾಜದ ಮೇಲೆ ಆಪತ್ತು ತಂದುಹಾಕಬಹುದು” ಎಂದು ಒಂದು ಪುಸ್ತಕ ಹೇಳುತ್ತದೆ. ಆಫ್ರಿಕದಲ್ಲಿ, ಯಾರಾದರೂ ಸತ್ತುಹೋದರೆ ತಮ್ಮ ಕೂದಲು ತೆಗೆಯುತ್ತಾರೆ, ರಾತ್ರಿಯೆಲ್ಲಾ ಬೆಂಕಿ ಉರಿಸುತ್ತಾರೆ, ಸತ್ತ ವ್ಯಕ್ತಿ ಇದ್ದ ಮನೆಯನ್ನು ಖಾಲಿ ಮಾಡಲು ನೋಡುತ್ತಾರೆ. ಕಾರಣ ಏನು? ದೆವ್ವಗಳ ಕಾಟದಿಂದ ತಪ್ಪಿಸಿಕೊಳ್ಳಲು ಇದನ್ನೆಲ್ಲಾ ಮಾಡುತ್ತಾರೆ. ಆದರೆ ಯೆಹೋವನ ಸೇವಕರಾದ ನಾವು ಇಂಥ ಮೂಢನಂಬಿಕೆಗಳನ್ನು ನಂಬಲ್ಲ ಮತ್ತು ಇಂಥ ಸಂಪ್ರದಾಯಗಳ ಕಡೆಗೆ ತಲೆನೂ ಹಾಕಲ್ಲ.—1 ಕೊರಿಂ. 10:21, 22.
13. ನಿಮಗೆ ಒಂದು ಆಚಾರ ಸರಿನಾ ತಪ್ಪಾ ಅಂತ ಗೊತ್ತಾಗದಿದ್ದರೆ ಯಾಕೋಬ 1:5 ಹೇಳುವಂತೆ ಏನು ಮಾಡಬೇಕು?
13 ನಿಮಗೆ ಒಂದು ಆಚಾರ ಸರಿನಾ ತಪ್ಪಾ ಅಂತ ಗೊತ್ತಾಗದಿದ್ದರೆ ಯೆಹೋವನಿಗೆ ಪ್ರಾರ್ಥಿಸಿ ವಿವೇಕ ಕೊಡುವಂತೆ ಕೇಳಿ. (ಯಾಕೋಬ 1:5 ಓದಿ.) ಆಮೇಲೆ ನಮ್ಮ ಸಂಘಟನೆ ಕೊಟ್ಟಿರುವ ಪ್ರಕಾಶನಗಳಲ್ಲಿ ಅದರ ಬಗ್ಗೆ ಸಂಶೋಧನೆ ಮಾಡಿ. ಅಗತ್ಯವಿದ್ದರೆ ಸಭೆಯ ಹಿರಿಯರ ಹತ್ತಿರ ಮಾತಾಡಿ. ಅವರು ನೀವು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲ್ಲ. ಅದರ ಬದಲು ನಿಮ್ಮ ಸನ್ನಿವೇಶಕ್ಕೆ ಅನ್ವಯಿಸುವಂಥ ಬೈಬಲ್ ತತ್ವಗಳನ್ನು ತೋರಿಸುತ್ತಾರೆ. ಈ ಪ್ಯಾರದಲ್ಲಿ ಹೇಳಿರುವ ಹೆಜ್ಜೆಗಳನ್ನು ನೀವು ತಗೊಂಡರೆ ನಿಮ್ಮ ‘ಗ್ರಹಣ ಶಕ್ತಿಗಳಿಗೆ ತರಬೇತಿ‘ ಕೊಡುತ್ತೀರಿ. ಆಗ “ಸರಿ ಮತ್ತು ತಪ್ಪಿನ ಭೇದವನ್ನು” ತಿಳುಕೊಳ್ಳುತ್ತೀರಿ.—ಇಬ್ರಿ. 5:14.
14. ಜನರನ್ನು ಎಡವಿಸದೆ ಇರಲು ನಾವೇನು ಮಾಡಬೇಕು?
14 “ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ. . . . ಎಡವಲು ಕಾರಣವಾಗಬೇಡಿರಿ.” (1 ಕೊರಿಂ. 10:31, 32) ನಾವು ಒಂದು ಆಚಾರ ಅಥವಾ ಪದ್ಧತಿಯಲ್ಲಿ ಒಳಗೂಡುವ ಮುಂಚೆ ಅದು ಬೇರೆಯವರ ಮೇಲೆ ಯಾವ ಪರಿಣಾಮ ಬೀರಬಹುದು ಅಂತ ಯೋಚಿಸಬೇಕು. ಮುಖ್ಯವಾಗಿ ನಮ್ಮ ಸಹೋದರ-ಸಹೋದರಿಯರ ಮನಸ್ಸಾಕ್ಷಿ ಮೇಲೆ ಯಾವ ಪರಿಣಾಮ ಆಗಬಹುದು ಅಂತ ಯೋಚನೆ ಮಾಡಬೇಕು. ಯಾಕೆಂದರೆ ನಾವು ಯಾರನ್ನೂ ಎಡವಿಸಲು ಇಷ್ಟಪಡಲ್ಲ! (ಮಾರ್ಕ 9:42) ಸತ್ಯದಲ್ಲಿ ಇಲ್ಲದವರ ಮನಸ್ಸಿಗೆ ನೋವಾಗದ ಹಾಗೆ ನಡಕೊಳ್ಳಲು ಕೂಡ ಆದಷ್ಟು ಪ್ರಯತ್ನಿಸುತ್ತೇವೆ. ನಮಗೆ ಅವರ ಮೇಲೆ ಪ್ರೀತಿ ಇರುವುದರಿಂದ ಗೌರವದಿಂದ ಮಾತಾಡುತ್ತೇವೆ. ಇದರಿಂದ ಯೆಹೋವನ ಹೆಸರಿಗೂ ಗೌರವ ಬರುತ್ತೆ. ನಾವು ಅವರ ಜೊತೆ ವಾದ-ವಿವಾದ ಮಾಡಲ್ಲ. ಅವರ ಸಂಪ್ರದಾಯಗಳನ್ನು ಗೇಲಿ ಮಾಡಲ್ಲ. ಪ್ರೀತಿಗೆ ತುಂಬ ಶಕ್ತಿ ಇದೆ. ಆದ್ದರಿಂದ ನಾವು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಗೌರವ ತೋರಿಸುವ ಮೂಲಕ ಪ್ರೀತಿಯನ್ನು ತೋರಿಸುತ್ತೇವೆ. ಆಗ ನಮ್ಮನ್ನು ವಿರೋಧಿಸುವವರ ಮನಸ್ಸೂ ಕರಗಬಹುದು.
15-16. (ಎ) ನಿಮ್ಮ ನಂಬಿಕೆಗಳ ಬಗ್ಗೆ ಮೊದಲೇ ಹೇಳುವುದು ಯಾಕೆ ಒಳ್ಳೇದು? ಉದಾಹರಣೆ ಕೊಡಿ. (ಬಿ) ರೋಮನ್ನರಿಗೆ 1:16ರಲ್ಲಿ ಪೌಲ ಹೇಳಿದ ಮಾತು ನಮಗೆ ಹೇಗೆ ಅನ್ವಯಿಸುತ್ತದೆ?
15 ನೀವು ಒಬ್ಬ ಯೆಹೋವನ ಸಾಕ್ಷಿ ಎಂದು ಬೇರೆಯವರಿಗೆ ಹೇಳಿ. (ಯೆಶಾ. 43:10) ನೀವು ಸಂಪ್ರದಾಯಗಳನ್ನು ಮಾಡದೇ ಇದ್ದಾಗ ನಿಮ್ಮ ಸಂಬಂಧಿಕರಿಗೆ ಮತ್ತು ನೆರೆಯವರಿಗೆ ಬೇಜಾರಾಗಬಹುದು, ಕೋಪನೂ ಬರಬಹುದು. ಹಾಗಾಗಿ ಮೊದಲೇ ನಿಮ್ಮ ನಂಬಿಕೆಗಳ ಬಗ್ಗೆ ಅವರಿಗೆ ಹೇಳುವುದರಿಂದ ಅಂಥ ಸನ್ನಿವೇಶಗಳನ್ನು ನಿಭಾಯಿಸಲು ಸುಲಭ ಆಗುತ್ತದೆ. ಮೊಜಾಂಬಿಕ್‌ನಲ್ಲಿ ಇರುವ ಫ್ರಾನ್ಸಿಸ್ಕೊ ಹೀಗೆ ಹೇಳುತ್ತಾರೆ: “ನಾನು ಮತ್ತು ನನ್ನ ಹೆಂಡತಿ ಕ್ಯಾರೋಲಿನಾ ಸತ್ಯ ಕಲಿತಾಗ ನಮ್ಮ ಸಂಬಂಧಿಕರಿಗೆ ನಾವು ಇನ್ನುಮುಂದೆ ಸತ್ತವರ ಆರಾಧನೆ ಮಾಡಲ್ಲ ಅಂತ ಹೇಳಿದ್ವಿ. ಅವಳ ಅಕ್ಕ ತೀರಿಕೊಂಡಾಗ ನಮಗೆ ದೊಡ್ಡ ಪರೀಕ್ಷೆ ಎದುರಾಯಿತು. ಇಲ್ಲಿರುವ ಸಂಪ್ರದಾಯದ ಪ್ರಕಾರ ಸತ್ತ ವ್ಯಕ್ತಿಯನ್ನು ಸ್ನಾನ ಮಾಡಿಸುತ್ತಾರೆ. ಆಮೇಲೆ ಸ್ನಾನಮಾಡಿಸಿದ ನೀರನ್ನು ಎಲ್ಲಿ ಚೆಲ್ಲಿದರೋ ಅಲ್ಲಿ ತೀರಿಕೊಂಡವರ ಹತ್ತಿರದ ಸಂಬಂಧಿ ಮೂರು ದಿನ ಮಲಗಬೇಕು. ಆಗಲೇ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುತ್ತೆ ಅಂತ ಇಲ್ಲಿನ ಜನ ನಂಬುತ್ತಾರೆ. ನನ್ನ ಹೆಂಡತಿನೇ ಆ ಜಾಗದಲ್ಲಿ ಮಲಗಬೇಕು ಅಂತ ಅವಳ ಕುಟುಂಬದವರು ಒತ್ತಾಯ ಮಾಡಿದರು.”
16 ಆಗ ಫ್ರಾನ್ಸಿಸ್ಕೊ ಮತ್ತು ಕ್ಯಾರೋಲಿನಾ ಏನು ಮಾಡಿದರು? ಫ್ರಾನ್ಸಿಸ್ಕೊ ಹೇಳುವುದು: “ನಮಗೆ ಯೆಹೋವನ ಮೇಲೆ ಪ್ರೀತಿ ಇದ್ದದರಿಂದ, ಆತನನ್ನು ಮೆಚ್ಚಿಸಬೇಕು ಅನ್ನೋ ಆಸೆ ಇದ್ದದರಿಂದ ಆ ಸಂಪ್ರದಾಯವನ್ನು ಮಾಡೋಕೆ ಒಪ್ಪಲಿಲ್ಲ. ಇದರಿಂದ ಕ್ಯಾರೋಲಿನಾ ಕುಟುಂಬಕ್ಕೆ ತುಂಬ ಕೋಪ ಬಂತು. ನಿಮಗೆ ಅವಳೆಂದರೆ ಒಂದು ಚೂರು ಪ್ರೀತಿನೇ ಇಲ್ವಲ್ಲಾ ಅಂತ ಬೈದರು. ಇನ್ನು ಮುಂದೆ ನಿಮ್ಮ ಮುಖನೂ ನೋಡಲ್ಲ, ಸಹಾಯನೂ ಮಾಡಲ್ಲ ಅಂತ ಹೇಳಿಬಿಟ್ಟರು. ನಾವು ಇಂಥ ಸಂಪ್ರದಾಯಗಳನ್ನೆಲ್ಲ ಮಾಡಲ್ಲ ಅಂತ ಮೊದಲೇ ಹೇಳಿದ್ದರಿಂದ ಅವರು ಕೋಪಮಾಡಿಕೊಂಡಾಗ ಆ ವಿಷಯದ ಬಗ್ಗೆ ನಾವೇನೂ ಮಾತಾಡಕ್ಕೆ ಹೋಗಲಿಲ್ಲ. ಆದರೆ ನಮ್ಮ ಸಂಬಂಧಿಕರಲ್ಲಿ ಕೆಲವರು ‘ಇವರು ಇದನ್ನೆಲ್ಲ ಮಾಡಲ್ಲ ಅಂತ ಮುಂಚೆನೇ ಹೇಳಿದ್ರಲ್ಲ’ ಎಂದು ನಮ್ಮ ಪರ ಮಾತಾಡಿದರು. ಸಮಯ ಹೋದ ಹಾಗೆ ಸಂಬಂಧಿಕರ ಕೋಪ ಕಮ್ಮಿಯಾಯಿತು. ಆಮೇಲೆ ಮೊದಲಿನ ತರ ಚೆನ್ನಾಗಿ ಮಾತಾಡಕ್ಕೆ ಶುರುಮಾಡಿದರು. ಕೆಲವರು ನಮ್ಮ ಮನೆಗೆ ಬಂದು ಬೈಬಲಾಧರಿತ ಪುಸ್ತಕಗಳನ್ನೂ ಕೇಳಿ ತಗೊಂಡು ಹೋದರು.” ಸಾವಿನ ಬಗ್ಗೆ ಇರುವ ಸತ್ಯವನ್ನು ಸಮರ್ಥಿಸಲು ನಾವು ಯಾವತ್ತೂ ನಾಚಿಕೆಪಡಬಾರದು.—ರೋಮನ್ನರಿಗೆ 1:16 ಓದಿ.
ದುಃಖದಲ್ಲಿ ಇರುವವರನ್ನು ಸಂತೈಸಿ, ಸಹಾಯ ಮಾಡಿ
17. ನಮ್ಮ ಸಹೋದರ-ಸಹೋದರಿಯರ ಆಪ್ತರು ಯಾರಾದರೂ ತೀರಿಕೊಂಡಾಗ ನಾವೇನು ಮಾಡಬೇಕು?
17 ನಮ್ಮ ಸಹೋದರ-ಸಹೋದರಿಯರ ಆಪ್ತರು ಯಾರಾದರೂ ತೀರಿಕೊಂಡಾಗ ನಾವು “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ” ಎಂದು ತೋರಿಸಿಕೊಡಬೇಕು. (ಜ್ಞಾನೋ. 17:17) ಮುಖ್ಯವಾಗಿ ಸಂಪ್ರದಾಯಗಳಲ್ಲಿ ಒಳಗೂಡುವಂತೆ ಅವರ ಮೇಲೆ ಬೇರೆಯವರು ಒತ್ತಡ ಹಾಕುವಾಗ ನಾವು ಸಹಾಯ ಮಾಡಬೇಕು. ಹೇಗೆ? ದುಃಖದಲ್ಲಿರುವವರಿಗೆ ಸಾಂತ್ವನ ಕೊಡಲು ನಮಗೆ ಎರಡು ಬೈಬಲ್ ತತ್ವಗಳು ಸಹಾಯ ಮಾಡುತ್ತವೆ.
18. (ಎ) ಯೇಸು ಯಾಕೆ ಅತ್ತನು? (ಬಿ) ಆತನಿಂದ ನಾವೇನು ಕಲಿಯಬಹುದು?
18 “ಅಳುವವರೊಂದಿಗೆ ಅಳಿರಿ.” (ರೋಮ. 12:15) ಆಪ್ತರನ್ನು ಕಳಕೊಂಡು ದುಃಖದಲ್ಲಿ ಮುಳುಗಿರುವವರಿಗೆ ಕೆಲವೊಮ್ಮೆ ಏನು ಹೇಳಿ ಸಮಾಧಾನ ಮಾಡಬೇಕು ಅಂತ ನಮಗೆ ಗೊತ್ತಾಗಲ್ಲ. ಆದರೆ ಅವರು ಅಳುವಾಗ ನಾವು ಕೂಡ ಅತ್ತರೆ ಕೆಲವೊಮ್ಮೆ ಅದೇ ಸಾಕಾಗುತ್ತೆ. ಯೇಸುವಿನ ಸ್ನೇಹಿತನಾದ ಲಾಜರ ತೀರಿಕೊಂಡಾಗ ಮರಿಯ, ಮಾರ್ಥ ಮತ್ತು ಬೇರೆಯವರಿಗೆ ತುಂಬ ದುಃಖ ಆಯಿತು. ‘ನಮ್ಮ ತಮ್ಮ ಹೋಗಿಬಿಟ್ಟಾ ಅಲ್ಲಾ, ನಮ್ಮ ಸ್ನೇಹಿತ ಹೋಗಿಬಿಟ್ಟಾ ಅಲ್ಲಾ’ ಎಂದು ನೆನಸಿ ಅತ್ತರು. ಲಾಜರ ತೀರಿಹೋಗಿ ನಾಲ್ಕು ದಿನ ಆದ ಮೇಲೆ ಬಂದ ಯೇಸು ಕೂಡ “ಕಣ್ಣೀರು ಸುರಿಸಿದನು.” ಇನ್ನೇನು ಲಾಜರನನ್ನು ಪುನರುತ್ಥಾನ ಮಾಡುತ್ತೇನೆ ಅಂತ ಯೇಸುಗೆ ಗೊತ್ತಿದ್ದರೂ ಅತ್ತನು. (ಯೋಹಾ. 11:17, 33-35) ಯೇಸುವಿನ ಕಣ್ಣೀರು ಆತನ ತಂದೆಯ ಭಾವನೆಗಳನ್ನು ತೋರಿಸಿತು. ಲಾಜರನ ಕುಟುಂಬದ ಮೇಲೆ ಯೇಸುಗೆ ತುಂಬ ಪ್ರೀತಿ ಇತ್ತು ಅಂತ ಸಹ ಇದರಿಂದ ಗೊತ್ತಾಯಿತು. ಇದರಿಂದ ಮರಿಯ ಮತ್ತು ಮಾರ್ಥಗೆ ಖಂಡಿತ ತುಂಬ ಸಾಂತ್ವನ ಸಿಕ್ಕಿರುತ್ತದೆ. ಅದೇ ರೀತಿ ನಮ್ಮ ಸಹೋದರ-ಸಹೋದರಿಯರಿಗೆ ನಾವು ಅವರನ್ನು ಪ್ರೀತಿಸುತ್ತೇವೆ, ಕಾಳಜಿ ವಹಿಸುತ್ತೇವೆ ಅಂತ ಗೊತ್ತಾದಾಗ ತುಂಬ ಸಾಂತ್ವನ ಸಿಗುತ್ತೆ. ‘ನನಗೆ ನನ್ನ ಸಹೋದರ-ಸಹೋದರಿಯರು ಇದ್ದಾರೆ’ ಎಂದು ಧೈರ್ಯ ಸಿಗುತ್ತದೆ.
19. ನಮ್ಮ ಸಹೋದರ-ಸಹೋದರಿಯರು ಆಪ್ತರನ್ನು ಕಳಕೊಂಡು ದುಃಖದಲ್ಲಿರುವಾಗ ನಾವು ಪ್ರಸಂಗಿ 3:7ನ್ನು ಹೇಗೆ ಅನ್ವಯಿಸಿಕೊಳ್ಳಬಹುದು?
19 “ಸುಮ್ಮನಿರುವ ಸಮಯ, ಮಾತಾಡುವ ಸಮಯ.” (ಪ್ರಸಂ. 3:7) ದುಃಖದಲ್ಲಿರುವವರು ತಮ್ಮ ದುಃಖವನ್ನು ಹೇಳಿಕೊಳ್ಳುವಾಗ ನಾವು ತಾಳ್ಮೆಯಿಂದ ಕೇಳಬೇಕು. ಇದು ಕೂಡ ಅವರಿಗೆ ಸಾಂತ್ವನ ಕೊಡುತ್ತದೆ. ಅವರ ಮನಸ್ಸಲ್ಲಿ ಇರುವುದನ್ನು ಪೂರ್ತಿಯಾಗಿ ಹೇಳಲು ಬಿಡಬೇಕು. ಅವರು ಹೇಳುವುದನ್ನೆಲ್ಲ ಗಂಭೀರವಾಗಿ ತಗೊಂಡು ಬೇಜಾರು ಮಾಡಿಕೊಳ್ಳಬಾರದು. (ಯೋಬ 6:2,3) ಯಾಕೆಂದರೆ ಸತ್ಯದಲ್ಲಿಲ್ಲದ ಸಂಬಂಧಿಕರ ಒತ್ತಡನೂ ಇರುವುದರಿಂದ ಅವರು ಹಾಗೆ ಮಾತಾಡಿರಬಹುದು. ಆದ್ದರಿಂದ ಅವರ ಜೊತೆ ಪ್ರಾರ್ಥನೆ ಮಾಡಿ. ಅವರಿಗೆ ನೋವನ್ನು ಸಹಿಸಿಕೊಳ್ಳಲು ಮತ್ತು ಸರಿಯಾಗಿ ಯೋಚಿಸಲು ಸಹಾಯ ಮಾಡುವಂತೆ ‘ಪ್ರಾರ್ಥನೆಯನ್ನು ಕೇಳುವವನಾದ’ ಯೆಹೋವನ ಹತ್ತಿರ ಬೇಡಿಕೊಳ್ಳಿ. (ಕೀರ್ತ. 65:2) ಸಾಧ್ಯವಾದರೆ ಅವರ ಜೊತೆ ಬೈಬಲ್ ಓದಿ. ಸಂದರ್ಭಕ್ಕೆ ತಕ್ಕಂಥ ಲೇಖನವನ್ನು ಓದಿ. ಉದಾಹರಣೆಗೆ, ಪ್ರೋತ್ಸಾಹ ಕೊಡುವಂಥ ಒಂದು ಜೀವನ ಕಥೆಯನ್ನು ಓದಬಹುದು.
20. ಮುಂದಿನ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?
20 ಸತ್ತ ಮೇಲೆ ಏನಾಗುತ್ತೆ ಮತ್ತು ಸತ್ತವರಿಗೆ ಯಾವ ನಿರೀಕ್ಷೆ ಇದೆ ಅನ್ನುವುದರ ಬಗ್ಗೆ ಯೆಹೋವನು ನಮಗೆ ತಿಳಿಸಿದ್ದಾನೆ. (ಯೋಹಾ. 5:28, 29) ಅದಕ್ಕಾಗಿ ನಾವು ಆತನಿಗೆ ಕೃತಜ್ಞರು. ನಮ್ಮ ಮಾತು ಮತ್ತು ನಡತೆಯಲ್ಲಿ ನಾವು ಬೈಬಲ್ ಸತ್ಯವನ್ನು ಧೈರ್ಯದಿಂದ ಸಮರ್ಥಿಸೋಣ. ಸಾಧ್ಯವಾದಾಗೆಲ್ಲಾ ಸಾವಿನ ಸತ್ಯವನ್ನು ಬೇರೆಯವರಿಗೆ ತಿಳಿಸೋಣ. ಮುಂದಿನ ಲೇಖನದಲ್ಲಿ, ಸೈತಾನ ಜನರಿಗೆ ಮಾಟಮಂತ್ರದ ಮೂಲಕ ಹೇಗೆ ಮೋಸ ಮಾಡುತ್ತಿದ್ದಾನೆ ಎಂದು ಕಲಿಯಲಿದ್ದೇವೆ. ಮಾಟಮಂತ್ರಕ್ಕೆ ಸಂಬಂಧಪಟ್ಟ ಆಚಾರಗಳಿಂದ ಮತ್ತು ಮನೋರಂಜನೆಯಿಂದ ಯಾಕೆ ದೂರ ಇರಬೇಕು ಎಂದು ಕೂಡ ಕಲಿಯಲಿದ್ದೇವೆ.
ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ
^ ಪ್ಯಾರ. 5 ಸೈತಾನ ಮತ್ತು ಅವನ ದೆವ್ವಗಳು ಸಾವಿನ ಬಗ್ಗೆ ಸುಳ್ಳಿನ ಕಂತೆ ಕಟ್ಟಿ ಜನರಿಗೆ ಮೋಸ ಮಾಡಿವೆ. ಈ ಸುಳ್ಳುಗಳಿಂದಾಗಿ ಜನರು ಅನೇಕ ಸಂಪ್ರದಾಯಗಳನ್ನು ಮಾಡುತ್ತಾರೆ. ಇದರಲ್ಲಿ ನಾವೂ ಸೇರಬೇಕೆಂದು ಒತ್ತಡ ಹಾಕುತ್ತಾರೆ. ಆಗ ಯೆಹೋವನಿಗೆ ಹೇಗೆ ನಿಷ್ಠೆಯಿಂದ ಇರಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.
^ ಪ್ಯಾರ. 55 ಚಿತ್ರ ವಿವರಣೆ: ಆಪ್ತರೊಬ್ಬರನ್ನು ಕಳಕೊಂಡ ದುಃಖದಲ್ಲಿರುವ ಸಂಬಂಧಿಕಳಿಗೆ ಸತ್ಯದಲ್ಲಿರುವ ಅವರ ಕುಟುಂಬ ಸದಸ್ಯರು ಸಂತೈಸುತ್ತಿದ್ದಾರೆ.
^ ಪ್ಯಾರ. 57 ಚಿತ್ರ ವಿವರಣೆ: ಸಾವಿಗೆ ಸಂಬಂಧಿಸಿದ ಸಂಪ್ರದಾಯಗಳ ಬಗ್ಗೆ ಒಬ್ಬ ಸಹೋದರ ಸಂಶೋಧನೆ ಮಾಡಿ ತನ್ನ ಸಂಬಂಧಿಕರಿಗೆ ಗೌರವದಿಂದ ವಿವರಿಸುತ್ತಿದ್ದಾರೆ.
^ ಪ್ಯಾರ. 59 ಚಿತ್ರ ವಿವರಣೆ: ತಮ್ಮ ಆಪ್ತರನ್ನು ಕಳಕೊಂಡು ದುಃಖದಲ್ಲಿರುವ ಒಬ್ಬ ಸಹೋದರನಿಗೆ ಸಭೆಯ ಹಿರಿಯರು ಸಾಂತ್ವನ ಕೊಡುತ್ತಿದ್ದಾರೆ.