ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 16

ಬೇರೆಯವರ ಬಗ್ಗೆ ಯೆಹೋವನ ತರ ಯೋಚಿಸಿ

ಬೇರೆಯವರ ಬಗ್ಗೆ ಯೆಹೋವನ ತರ ಯೋಚಿಸಿ

“ಹೊರತೋರಿಕೆಯನ್ನು ನೋಡಿ ತೀರ್ಪುಮಾಡುವುದನ್ನು ನಿಲ್ಲಿಸಿರಿ; ನ್ಯಾಯವಾಗಿ ತೀರ್ಪುಮಾಡಿರಿ.”—ಯೋಹಾ. 7:24.

ಗೀತೆ 53 ಐಕ್ಯದಿಂದ ಕೆಲಸ ಮಾಡುವುದು

ಕಿರುನೋಟ *

1. ಯೆಹೋವನು ಜನ್ರಲ್ಲಿ ಏನನ್ನ ನೋಡ್ತಾನೆ?

ನಿಮ್ಮ ಬಣ್ಣ, ರೂಪ, ಮೈಕಟ್ಟು ನೋಡಿ ಯಾರಾದ್ರೂ ನಿಮ್ಮ ಬಗ್ಗೆ ತಪ್ಪಾಗಿ ತೀರ್ಮಾನ ಮಾಡಿಬಿಟ್ರೆ ನಿಮ್ಗೆ ಇಷ್ಟ ಆಗುತ್ತಾ? ಇಲ್ಲ ಅಲ್ವಾ? ಆದ್ರೆ ಯೆಹೋವ ದೇವ್ರು ಕಣ್ಣಿಗೆ ಏನ್‌ ಕಾಣಿಸುತ್ತೋ ಅದನ್ನು ನೋಡಿ ತೀರ್ಪು ಮಾಡಲ್ಲ. ಇದನ್ನು ತಿಳ್ಕೊಳ್ವಾಗ ಎಷ್ಟು ಖುಷಿ ಆಗುತ್ತಲ್ವಾ? ಉದಾಹರಣೆಗೆ, ಇಷಯನ ಮಕ್ಕಳನ್ನ ಯೆಹೋವನು ನೋಡಿದ ರೀತಿಗೂ ಸಮುವೇಲ ನೋಡಿದ ರೀತಿಗೂ ವ್ಯತ್ಯಾಸ ಇತ್ತು. ಯೆಹೋವನು ಸಮುವೇಲನಿಗೆ ಇಷಯನ ಮಕ್ಕಳಲ್ಲಿ ಒಬ್ಬನು ಇಸ್ರಾಯೇಲಿನ ರಾಜನಾಗ್ತಾನೆ ಅಂತ ಹೇಳಿದ್ನು. ಆದ್ರೆ ಅವ್ನು ಯಾರು ಅಂತ ಹೇಳಿರಲಿಲ್ಲ. ಸಮುವೇಲನು ಇಷಯನ ಮೊದಲ್ನೇ ಮಗನಾದ ಎಲೀಯಾಬನನ್ನ ನೋಡ್ದಾಗ ‘ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕಾಗಿ ಆರಿಸಿಕೊಂಡವನು ಇವನೇ’ ಅಂತ ಅಂದ್ಕೊಂಡನು. ಸಮುವೇಲ ಎಲೀಯಾಬನ ರೂಪ, ಎತ್ತರ ನೋಡಿ ಇವನೇ ರಾಜನಾಗುವವನು ಅಂತ ಅಂದ್ಕೊಂಡ. “ಆದರೆ ಯೆಹೋವನು ಸಮುವೇಲನಿಗೆ—ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ” ಅಂತ ಹೇಳಿದನು. ಇದ್ರಿಂದ ನಾವೇನು ಕಲೀತೇವೆ? ‘ಮನುಷ್ಯರು ಹೊರಗಿನ ತೋರಿಕೆ ನೋಡ್ತಾರೆ, ಆದ್ರೆ ಯೆಹೋವನು ಹೃದಯವನ್ನೇ ನೋಡ್ತಾನೆ.’—1 ಸಮು. 16:1, 6, 7.

2. ಯೋಹಾನ 7:24 ರಲ್ಲಿರುವಂತೆ ನಾವು ಹೊರತೋರಿಕೆಯನ್ನ ನೋಡಿ ಯಾಕೆ ತೀರ್ಪು ಮಾಡಬಾರದು? ಉದಾಹರಣೆ ಕೊಡಿ.

2 ನಾವು ಅಪರಿಪೂರ್ಣರಾಗಿರೋದ್ರಿಂದ ಬೇರೆಯವ್ರ ಹೊರತೋರಿಕೆಯನ್ನ ನೋಡಿ ಅವ್ರ ಬಗ್ಗೆ ತಪ್ಪಾಗಿ ತೀರ್ಮಾನ ಮಾಡಿಬಿಡ್ತೇವೆ. (ಯೋಹಾನ 7:24 ಓದಿ.) ಆದ್ರೆ ಒಬ್ಬರನ್ನ ನೋಡ್ದಾಗ ಅವ್ರ ಬಗ್ಗೆ ನಾವು ಸ್ವಲ್ಪನೇ ತಿಳ್ಕೊಳ್ಳೋಕೆ ಆಗುತ್ತೆ. ಉದಾಹರಣೆಗೆ, ಒಬ್ಬ ಅನುಭವ ಇರುವಂಥ ನುರಿತ ಡಾಕ್ಟರ್‌ಗೂ ರೋಗಿನಾ ನೋಡ್ದಾಗ ಅವ್ನ ಬಗ್ಗೆ ಸ್ವಲ್ಪನೇ ತಿಳ್ಕೊಳ್ಳೋಕೆ ಆಗೋದು. ಆ ರೋಗಿಗೆ ಇದಕ್ಕೂ ಮುಂಚೆ ಯಾವ ಕಾಯಿಲೆ ಬಂದಿತ್ತು, ಈಗ ಹೇಗನಿಸ್ತಿದೆ, ಅವ್ನಿಗೆ ಯಾವೆಲ್ಲಾ ರೋಗ ಲಕ್ಷಣಗಳಿವೆ ಅಂತ ತಿಳ್ಕೊಳ್ಳಬೇಕಂದ್ರೆ ಅವ್ನು ಹೇಳೋದನ್ನ ಡಾಕ್ಟರ್‌ ಚೆನ್ನಾಗಿ ಕೇಳಿಸಿಕೊಳ್ಳಬೇಕು. ರೋಗಿಯ ದೇಹದೊಳಗೆ ಬೇರೆ ಏನಾದ್ರೂ ಸಮಸ್ಯೆ ಇದ್ಯಾ ಅಂತ ತಿಳ್ಕೊಳ್ಳೋಕೆ ಎಕ್ಸರೇ ತೆಗೆಯೋಕೂ ಹೇಳಬಹುದು. ಡಾಕ್ಟರ್‌ ಇದೆಲ್ಲಾ ಮಾಡದಿದ್ರೆ ರೋಗಿಗೆ ಸರಿಯಾದ ಚಿಕಿತ್ಸೆ ಕೊಡೋಕೆ ಆಗಲ್ಲ. ಅದೇರೀತಿ ನಾವು ನಮ್ಮ ಸಹೋದರ ಸಹೋದರಿಯರ ಹೊರತೋರಿಕೆಯನ್ನ ನೋಡಿ ಅವ್ರನ್ನ ಪೂರ್ತಿ ಅರ್ಥಮಾಡ್ಕೊಳ್ಳೋಕೆ ಸಾಧ್ಯ ಇಲ್ಲ. ಅವ್ರು ನಿಜವಾಗಿಯೂ ಎಂಥ ವ್ಯಕ್ತಿಯಾಗಿದ್ದಾರೆ ಅಂತ ತಿಳ್ಕೊಳ್ಳೋಕೆ ನಾವು ಪ್ರಯತ್ನಿಸಬೇಕು. ನಮ್ಗೆ ಬೇರೆಯವ್ರ ಹೃದಯದಲ್ಲಿ ಏನಿದೆ ಅಂತ ತಿಳ್ಕೊಳ್ಳೋಕೆ ಆಗಲ್ಲ. ಆದ್ರಿಂದ ಯೆಹೋವನಷ್ಟು ಚೆನ್ನಾಗಿ ನಾವು ಅವ್ರನ್ನ ಅರ್ಥ ಮಾಡ್ಕೊಳ್ಳೋಕಾಗಲ್ಲ. ಆದ್ರೆ ನಾವು ಯೆಹೋವನನ್ನ ಅನುಕರಿಸೋಕೆ ನಮ್ಮಿಂದಾಗೋದೆಲ್ಲವನ್ನ ಮಾಡಬಹುದು. ಅದನ್ನ ಮಾಡೋದು ಹೇಗೆ?

3. ಈ ಲೇಖನದಲ್ಲಿ ತಿಳಿಸಿರುವ ಬೈಬಲ್‌ ವೃತ್ತಾಂತಗಳು ಯೆಹೋವನನ್ನು ಅನುಕರಿಸಲು ನಮ್ಗೆ ಹೇಗೆ ಸಹಾಯ ಮಾಡ್ತವೆ?

3 ಯೆಹೋವನು ತನ್ನ ಆರಾಧಕರ ಜೊತೆ ಹೇಗೆ ನಡಕೊಳ್ತಾನೆ? ಆತನು ಅವ್ರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ತಾನೆ. ಅವ್ರ ಹಿನ್ನಲೆ, ಪರಿಸ್ಥಿತಿನಾ ಅರ್ಥಮಾಡ್ಕೊಳ್ತಾನೆ ಮತ್ತು ಕನಿಕರ ತೋರಿಸ್ತಾನೆ. ಆತನು ಯೋನ, ಎಲೀಯ, ಹಾಗರ ಮತ್ತು ಲೋಟನ ಜೊತೆ ನಡ್ಕೊಂಡ ರೀತಿಯಿಂದ ಇದು ಸತ್ಯ ಅಂತ ಗೊತ್ತಾಗುತ್ತೆ. ಹಾಗಾಗಿ ಆತನು ಅವ್ರ ಜೊತೆ ಹೇಗೆ ನಡ್ಕೊಂಡನು ಮತ್ತು ನಾವು ಸಹೋದರ ಸಹೋದರಿಯರ ಜೊತೆ ಯೆಹೋವನ ತರ ಹೇಗೆ ನಡ್ಕೊಳ್ಳಬಹುದು ಅಂತ ಈಗ ನೋಡಲಿದ್ದೇವೆ.

ಚೆನ್ನಾಗಿ ಕೇಳಿಸಿಕೊಳ್ಳಿ

4. ನಾವ್ಯಾಕೆ ಯೋನನ ಬಗ್ಗೆ ತಪ್ಪಾಗಿ ಯೋಚಿಸಿಬಿಡಬಹುದು?

4 ಯೋನನ ಬಗ್ಗೆ ನಮ್ಗೆ ಹೆಚ್ಚು ಗೊತ್ತಿಲ್ಲದೇ ಇರೋ ಕಾರಣ ಅವ್ನು ಭರವಸಾರ್ಹ ವ್ಯಕ್ತಿ ಅಲ್ಲ, ದೇವ್ರಿಗೆ ವಿಧೇಯನಾಗಿರಲಿಲ್ಲ ಅಂತ ನಾವು ತೀರ್ಪು ಮಾಡಿಬಿಡಬಹುದು. ಅವ್ನಿಗೆ ಯೆಹೋವನೇ ನೇರವಾಗಿ ನಿನೆವೆಗೆ ಹೋಗಿ ನ್ಯಾಯತೀರ್ಪಿನ ಸಂದೇಶವನ್ನು ತಿಳಿಸಬೇಕು ಅಂತ ಆಜ್ಞಾಪಿಸಿದನು. ಆದ್ರೆ ಅವ್ನು ಅದನ್ನು ಪಾಲಿಸೋ ಬದ್ಲು ನಿನೆವೆಗೆ ವಿರುದ್ಧ ದಿಕ್ಕಿನ ಕಡೆಗೆ ಹೋಗೋ ಹಡಗನ್ನು ಹತ್ತಿ “ಯೆಹೋವನ ಸನ್ನಿಧಿಯಿಂದ” ದೂರ ಹೋದ. (ಯೋನ 1:1-3) ಇಷ್ಟೆಲ್ಲಾ ಮಾಡಿದ ಮೇಲೆ ನೀವಾಗಿದ್ದಿದ್ದರೆ ಯೋನನಿಗೆ ಪುನಃ ಅದೇ ನೇಮಕನಾ ಕೊಡ್ತಿದ್ರಾ? ಬಹುಶಃ ಇಲ್ಲ. ಆದ್ರೆ ಯೆಹೋವನು ಯೋನನಿಗೆ ಪುನಃ ಅದೇ ನೇಮಕವನ್ನ ಕೊಟ್ಟನು. ಹಾಗೇ ಕೊಡಲಿಕ್ಕೆ ಕಾರಣಗಳಿದ್ದವು.—ಯೋನ 3:1, 2.

5. ಯೋನ 2:1, 2, 9 ರಲ್ಲಿ ಯೋನ ಹೇಳಿದ ಮಾತುಗಳಿಂದ ಅವ್ನ ಬಗ್ಗೆ ನಾವು ಏನನ್ನು ಕಲೀಬಹುದು?

5 ಯೋನ ನಿಜವಾಗಿ ಎಂಥ ವ್ಯಕ್ತಿ ಆಗಿದ್ನು ಅಂತ ಅವ್ನು ಮಾಡಿದ ಪ್ರಾರ್ಥನೆಯಿಂದ ಗೊತ್ತಾಗುತ್ತೆ. (ಯೋನ 2:1, 2, 9 ಓದಿ.) ಅವ್ನು ಖಂಡಿತವಾಗಿ ಅನೇಕ ಬಾರಿ ಪ್ರಾರ್ಥನೆ ಮಾಡಿರುತ್ತಾನೆ. ಆದ್ರೆ ಮೀನಿನ ಹೊಟ್ಟೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆಯಿಂದ ಅವ್ನು ಎಂಥ ವ್ಯಕ್ತಿಯಾಗಿದ್ದನು ಅಂತ ಗೊತ್ತಾಗುತ್ತೆ ಮತ್ತು ‘ಸಿಕ್ಕ ನೇಮಕಾನ ಮಾಡೋಕಾಗದೇ ಓಡಿಹೋದವ್ನು’ ಅಂತ ಯೋಚಿಸದಿರೋಕೆ ಸಹಾಯ ಮಾಡುತ್ತೆ. ಅವ್ನು ದೀನನಾಗಿದ್ನು, ಕೃತಜ್ಞನಾಗಿದ್ನು, ಯೆಹೋವನು ಹೇಳಿದ ಮಾತನ್ನು ಕೇಳಬೇಕು ಅನ್ನೋ ದೃಢತೀರ್ಮಾನ ಮಾಡಿದ್ನು ಅಂತ ಆ ಪ್ರಾರ್ಥನೆಯಿಂದ ಗೊತ್ತಾಗುತ್ತೆ. ಅದಕ್ಕೆ ಯೆಹೋವನು ಅವ್ನ ತಪ್ಪನ್ನ ಮನಸ್ಸಲ್ಲಿಡದೇ ಅವ್ನ ಪಾರ್ಥನೆಗೆ ಉತ್ರ ಕೊಟ್ನು ಮತ್ತು ಅದ್ರ ನಂತ್ರನೂ ಪ್ರವಾದಿಯಾಗಿ ಕೆಲ್ಸ ಮಾಡುವಂತೆ ಅನುಮತಿಸಿದ್ನು.

ನಾವು ನಿಜಾಂಶಗಳನ್ನು ತಿಳುಕೊಂಡ್ರೆ ಬೇರೆಯವ್ರಿಗೆ ಹೆಚ್ಚು ಅನುಕಂಪ ತೋರಿಸೋಕೆ ಆಗುತ್ತೆ (ಪ್ಯಾರ 6 ನೋಡಿ) *

6. ಬೇರೆಯವ್ರು ಹೇಳೋದನ್ನ ಕೇಳಿಸಿಕೊಳ್ಳೋದು ಯಾಕೆ ಒಳ್ಳೇದು?

6 ಬೇರೆಯವ್ರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ಳಲು ನಮಗೆ ದೀನತೆ, ತಾಳ್ಮೆ ಇರಬೇಕು. ಈ ರೀತಿ ಕೇಳಿಸಿಕೊಳ್ಳೋದು ತುಂಬಾ ಒಳ್ಳೇದು. ಯಾಕಂದ್ರೆ ಮೊದಲ್ನೇದಾಗಿ, ಕೇಳಿಸಿಕೊಳ್ಳೋದ್ರಿಂದ ನಾವು ಬೇರೆಯವ್ರ ಬಗ್ಗೆ ತಪ್ಪಾದ ತೀರ್ಮಾನ ಮಾಡಿಬಿಡಲ್ಲ. ಎರಡ್ನೇದಾಗಿ, ಸಹೋದರ ಸಹೋದರಿಯರ ಭಾವನೆಗಳನ್ನ, ಉದ್ದೇಶಗಳನ್ನ ತಿಳ್ಕೊಳ್ಳೋಕೆ ಸಹಾಯ ಆಗುತ್ತೆ. ಇದ್ರಿಂದ ನಾವು ಅವ್ರಿಗೆ ಹೆಚ್ಚು ಕನಿಕರವನ್ನ ತೋರಿಸ್ತೇವೆ. ಮೂರನೇದಾಗಿ, ಅವ್ರಿಗೆ ತಮ್ಮ ಬಗ್ಗೆ ಗೊತ್ತಿಲ್ಲದೇ ಇರೋ ವಿಷ್ಯಗಳನ್ನು ತಿಳ್ಕೊಳ್ಳೋಕೆ ನಾವು ಸಹಾಯ ಮಾಡ್ತೇವೆ. ಹೇಗಂದ್ರೆ ಕೆಲ್ವೊಮ್ಮೆ ಬೇರೆಯವ್ರ ಹತ್ರ ಹೇಳಿಕೊಳ್ಳುವವರೆಗೂ ಅವ್ರ ಭಾವನೆಗಳ ಬಗ್ಗೆ ಅವ್ರಿಗೇ ಸರಿಯಾಗಿ ಅರ್ಥ ಆಗಿರಲ್ಲ. (ಜ್ಞಾನೋ. 20:5) ಏಷ್ಯಾದಲ್ಲಿರೋ ಒಬ್ಬ ಹಿರಿಯ ಹೀಗೆ ಹೇಳ್ತಾರೆ: “ಒಂದ್ಸಲ ನಾನು ಎಲ್ಲಾ ವಿಷ್ಯ ತಿಳ್ಕೊಳ್ಳೋಕೂ ಮುಂಚೆನೇ ದುಡುಕಿ ಮಾತಾಡಿಬಿಟ್ಟೆ. ಒಬ್ಬ ಸಹೋದರಿಗೆ ‘ನೀವಿನ್ನೂ ಚೆನ್ನಾಗಿ ಉತ್ರ ಹೇಳೋಕೆ ಕಲೀಬೇಕು’ ಅಂತ ಹೇಳ್ಬಿಟ್ಟೆ. ಆದ್ರೆ ಅವ್ರಿಗೆ ಸರಿಯಾಗಿ ಓದೋಕೆ ಬರಲ್ಲ ಮತ್ತು ಒಂದು ಉತ್ರ ಕೊಡೋಕೂ ತುಂಬ ಪ್ರಯತ್ನ ಹಾಕ್ತಾರೆ ಅಂತ ಆಮೇಲೆ ಗೊತ್ತಾಯ್ತು.” ಹಾಗಾಗಿ ಹಿರಿಯರು ಬೇರೆಯವ್ರಿಗೆ ಸಲಹೆ ಕೊಡೋ ಮುಂಚೆ ‘ಗಮನಿಸೋದು’ ಅಥ್ವಾ ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋದು ತುಂಬ ಮುಖ್ಯ.—ಜ್ಞಾನೋ. 18:13.

7. ಯೆಹೋವನು ಎಲೀಯನ ಜೊತೆ ನಡ್ಕೊಂಡ ರೀತಿಯಿಂದ ನಾವೇನು ಕಲೀಬಹುದು?

7 ಕೆಲವು ಸಹೋದರ ಸಹೋದರಿಯರಿಗೆ ತಮ್ಮ ಹಿನ್ನಲೆ, ಸಂಸ್ಕೃತಿ ಅಥ್ವಾ ಸ್ವಭಾವದಿಂದಾಗಿ ತಮ್ಮ ಭಾವನೆಗಳನ್ನ ಹೇಳಿಕೊಳ್ಳೋಕೆ ಕಷ್ಟ ಆಗಬಹುದು. ಅಂಥವ್ರು ತಮ್ಮ ಮನಸ್ಸಿನಲ್ಲಿರೋದನ್ನ ಮುಕ್ತವಾಗಿ ಹೇಳಿಕೊಳ್ಳೋಕೆ ನಾವು ಹೇಗೆ ಸಹಾಯ ಮಾಡಬಹುದು? ಈಜೆಬೆಲಳಿಗೆ ಭಯಪಟ್ಟು ಓಡಿಹೋದ ಎಲೀಯನ ಜೊತೆ ಯೆಹೋವನು ಹೇಗೆ ನಡ್ಕೊಂಡನು ಅನ್ನೋದನ್ನ ನೆನಪಿಸಿಕೊಳ್ಳಿ. ಎಲೀಯನಿಗೆ ಯೆಹೋವನ ಹತ್ರ ತನ್ನ ಭಾವನೆಗಳನ್ನೆಲ್ಲಾ ಹೇಳಿಕೊಳ್ಳೋಕೆ ತುಂಬಾ ದಿನ ಹಿಡೀತು. ಆದ್ರೂ ಅವ್ನು ತನ್ನ ಭಾವನೆಗಳನ್ನ ಹೇಳ್ಕೊಂಡಾಗ ಯೆಹೋವನು ಚೆನ್ನಾಗಿ ಕೇಳಿಸಿಕೊಂಡನು. ನಂತ್ರ ಅವನಿಗೆ ಉತ್ತೇಜನ ಕೊಟ್ಟು ಒಂದು ಪ್ರಾಮುಖ್ಯ ಕೆಲ್ಸವನ್ನು ಕೊಟ್ಟನು. (1 ಅರ. 19:1-18) ನಮ್ಮ ಸಹೋದರ ಸಹೋದರಿಯರು ನಮ್ಮನ್ನ ನಂಬಿ ತಮ್ಮ ಭಾವನೆಗಳನ್ನೆಲ್ಲಾ ನಮ್ಮ ಹತ್ರ ಹೇಳಿಕೊಳ್ಳಬೇಕಂದ್ರೆ ಸ್ವಲ್ಪ ಸಮಯ ತಗೊಳ್ಳಬಹುದು. ಆದ್ರೆ ನಾವು ಯೆಹೋವನ ತರ ತಾಳ್ಮೆ ತೋರಿಸಿದ್ರೆ ಸ್ವಲ್ಪ ಸಮಯದ ನಂತ್ರ ಅವರಾಗೇ ಬಂದು ತಮ್ಮ ಭಾವನೆಗಳನ್ನು ಹೇಳಿಕೊಳ್ಳಬಹುದು. ಹಾಗೇ ಹೇಳಿಕೊಳ್ವಾಗ ನಾವು ಚೆನ್ನಾಗಿ ಕೇಳಿಸಿಕೊಳ್ಳಬೇಕು.

ಅರ್ಥ ಮಾಡ್ಕೊಳ್ಳಿ

8. ಆದಿಕಾಂಡ 16:7-13 ರ ಪ್ರಕಾರ ಯೆಹೋವನು ಹಾಗರಳಿಗೆ ಹೇಗೆ ಸಹಾಯ ಮಾಡಿದನು?

8 ಸಾರಯಳ ದಾಸಿಯಾಗಿದ್ದ ಹಾಗರಳು ಅಬ್ರಾಮನನ್ನ ಮದ್ವೆ ಆದ ಮೇಲೆ ಮೂರ್ಖಳಂತೆ ನಡ್ಕೊಂಡಳು. ಅವಳು ಗರ್ಭಿಣಿ ಆದಾಗ ಮಕ್ಕಳು ಇಲ್ದಿರೋ ಸಾರಯಳನ್ನು ತಾತ್ಸಾರ ಮಾಡಿದಳು. ಪರಿಸ್ಥಿತಿ ಎಷ್ಟು ಬಿಗಡಾಯಿಸಿತಂದ್ರೆ ಸಾರಯಳು ಹಾಗರಳಿಗೆ ಕಷ್ಟ ಕೊಡೋಕೆ ಶುರು ಮಾಡಿದಳು. ಇದ್ರಿಂದ ಹಾಗರಳು ಮನೆ ಬಿಟ್ಟು ಓಡಿ ಹೋದ್ಲು. (ಆದಿ. 16:4-6) ನಾವು ಅಪರಿಪೂರ್ಣರಾಗಿರೋದ್ರಿಂದ ‘ಹಾಗರಳು ದುರಹಂಕಾರಿ, ಅವಳಿಗೆ ಈ ರೀತಿ ಆಗಿದ್ದು ಒಳ್ಳೇದಾಯ್ತು’ ಅಂತ ಅಂದುಕೊಳ್ಳಬಹುದು. ಆದ್ರೆ ಯೆಹೋವನು ಅವಳ ಬಗ್ಗೆ ಆ ರೀತಿ ನೆನಸಲಿಲ್ಲ. ಆತನು ತನ್ನ ದೇವದೂತನನ್ನು ಅವಳ ಹತ್ರ ಕಳುಹಿಸಿದನು. ಅವಳು ಸಿಕ್ದಾಗ ದೇವದೂತನು ಅವಳ ಮನೋಭಾವ ಬದಲಾಯಿಸಿಕೊಳ್ಳೋಕೆ ಸಹಾಯ ಮಾಡಿದನು ಮತ್ತು ಆಶೀರ್ವದಿಸಿದನು. ಇದ್ರಿಂದ ಯೆಹೋವನು ತನ್ನನ್ನ ನೋಡ್ತಿದ್ದಾನೆ, ತನ್ನ ಪರಿಸ್ಥಿತಿ ಯೆಹೋವನಿಗೆ ಗೊತ್ತಿದೆ ಅಂತ ಹಾಗರಳಿಗೆ ಅರ್ಥ ಆಯ್ತು. ಹಾಗಾಗಿ ಅವಳು ಯೆಹೋವನನ್ನು ‘ಎಲ್ಲವನ್ನೂ ನೋಡುವ ದೇವರು’ ಅಂತ ಕರೆದಳು.—ಆದಿಕಾಂಡ 16:7-13 ಓದಿ.

9. ಯೆಹೋವನು ಯಾಕೆ ಹಾಗರಳಿಗೆ ಸಹಾಯ ಮಾಡಿದ್ನು?

9 ಯೆಹೋವನು ಯಾಕೆ ಹಾಗರಳಿಗೆ ಸಹಾಯ ಮಾಡಿದ್ನು? ಆತನಿಗೆ ಅವಳ ಹಿನ್ನಲೆ ಮತ್ತು ಜೀವನದಲ್ಲಿ ಏನೆಲ್ಲಾ ಕಷ್ಟ ಅನುಭವಿಸಿದ್ದಾಳೆ ಅನ್ನೋದು ಗೊತ್ತಿತ್ತು. (ಜ್ಞಾನೋ. 15:3) ಈಜಿಪ್ಟಿನವಳಾಗಿದ್ದ ಹಾಗರಳು ತನ್ನ ಸ್ವಂತ ಜನರ ಮಧ್ಯೆ ಇರಲಿಲ್ಲ, ಇಬ್ರಿಯರ ಮನೇಲಿ ಇದ್ದಳು. ಅವಳಿಗೆ ತಾನು ಯಾರಿಗೂ ಬೇಡವಾದಳು ಅಂತ ಅನಿಸಿರಬಹುದು. ತನ್ನ ಕುಟುಂಬ ಮತ್ತು ಊರನ್ನ ನೆನಪಿಸಿಕೊಂಡು ಕೊರಗಿರಬಹುದು. ಅಬ್ರಾಮ ಅವಳೊಬ್ಬಳನ್ನೇ ಮದುವೆ ಆಗಿರಲಿಲ್ಲ. ಆಗಿನ ಕಾಲದಲ್ಲಿ ಕೆಲವು ನಂಬಿಗಸ್ತ ಪುರುಷರು ಒಬ್ಬರಿಗಿಂತ ಹೆಚ್ಚು ಸ್ತ್ರೀಯರನ್ನ ಮದ್ವೆ ಆಗ್ತಿದ್ರು. ಆದ್ರೆ ಅದು ಯೆಹೋವನ ಉದ್ದೇಶ ಆಗಿರಲಿಲ್ಲ. (ಮತ್ತಾ. 19:4-6) ಹಾಗಾಗಿ ಒಂದಕ್ಕಿಂತ ಹೆಚ್ಚು ಮದ್ವೆಯಾಗಿರೋ ಕುಟುಂಬಗಳಲ್ಲಿ ಹೊಟ್ಟೆಕಿಚ್ಚು, ದ್ವೇಷ ಸಾಮಾನ್ಯವಾಗಿರುತ್ತಿತ್ತು. ಹಾಗರಳು ಸಾರಯಳ ಜೊತೆ ಅಗೌರವದಿಂದ ನಡ್ಕೊಂಡಿದ್ದು ತಪ್ಪು ಅಂತ ಯೆಹೋವನಿಗೆ ಗೊತ್ತಿತ್ತು. ಆದ್ರೂ ಹಾಗರಳ ಭಾವನೆಯನ್ನ, ಪರಿಸ್ಥಿತಿಯನ್ನ ಆತನು ಅರ್ಥ ಮಾಡ್ಕೊಂಡು ಅವಳ ಜೊತೆ ದಯೆಯಿಂದ ನಡ್ಕೊಂಡನು.

ನಿಮ್ಮ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳುಕೊಳ್ಳಿ (ಪ್ಯಾರ 10-12 ನೋಡಿ) *

10. ನಾವು ಹೇಗೆ ನಮ್ಮ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಬಹುದು?

10 ನಾವು ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸೋ ಮೂಲಕ ಯೆಹೋವನನ್ನು ಅನುಕರಿಸಬಹುದು. ಇದಕ್ಕೋಸ್ಕರ ನಾವು ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಪ್ರಯತ್ನಿಸಬೇಕು. ಕೂಟಗಳಿಗೆ ಮುಂಚೆ ಮತ್ತು ನಂತರ ಅವ್ರ ಹತ್ರ ಮಾತಾಡಬೇಕು. ಅವ್ರ ಜೊತೆ ಸೇವೆ ಮಾಡಬೇಕು. ಸಾಧ್ಯವಾದ್ರೆ ಅವ್ರನ್ನ ಊಟಕ್ಕೂ ಕರೀಬಹುದು. ಹೀಗೆ ಮಾಡೋದಾದ್ರೆ, ಯಾರ ಜೊತೆನೂ ಹೆಚ್ಚು ಬೆರೆಯದೇ ಇರೋ ಸಹೋದರಿಗೆ ನಾಚಿಕೆ ಸ್ವಭಾವ ಇದೆ ಅಂತ ಗೊತ್ತಾಗಬಹುದು. ಶ್ರೀಮಂತ ಸಹೋದರನಿಗೆ ಹಣದ ಹುಚ್ಚಿಲ್ಲ, ಬದಲಿಗೆ ಉದಾರಿಯಾಗಿದ್ದಾನೆ ಅಂತ ಗೊತ್ತಾಗಬಹುದು. ಕೂಟಗಳಿಗೆ ಯಾವಾಗಲೂ ತಡವಾಗಿ ಬರ್ತಿರೋ ಸಹೋದರಿ ಮತ್ತು ಅವಳ ಮಕ್ಕಳು ಕುಟುಂಬದಲ್ಲಿ ವಿರೋಧ ಎದುರಿಸ್ತಿದ್ದಾರೆ ಅಂತ ಗೊತ್ತಾಗಬಹುದು. (ಯೋಬ 6:29) ಹಾಗಂತ ಬೇರೆಯವ್ರ ಬಗ್ಗೆ ಹೆಚ್ಚು ತಿಳುಕೊಳ್ಳೋದಕ್ಕಾಗಿ ನಾವು ಅವರ ‘ವಿಷಯಗಳಲ್ಲಿ ತಲೆ ಹಾಕುವವರು’ ಆಗಿರಬಾರದು. (1 ತಿಮೊ. 5:13) ಆದ್ರೂ ನಮ್ಮ ಸಹೋದರ ಸಹೋದರಿಯರ ಬಗ್ಗೆ, ಅವ್ರ ಜೀವ್ನದಲ್ಲಿ ಏನೆಲ್ಲಾ ಅನುಭವಿಸಿದ್ದಾರೆ ಅನ್ನೋದ್ರ ಬಗ್ಗೆ ತಿಳ್ಕೊಳ್ಳೋದು ಒಳ್ಳೇದು. ಇದ್ರಿಂದ ಅವ್ರನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯ ಆಗುತ್ತೆ.

11. ಹಿರಿಯರು ತಮ್ಮ ಸಭೆಲಿರೋ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋದು ಯಾಕೆ ಪ್ರಾಮುಖ್ಯ?

11 ಎಲ್ಲರಿಗಿಂತ ಮುಖ್ಯವಾಗಿ ಹಿರಿಯರು, ತಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಂಡಿರಬೇಕು. ಸಂಚರಣ ಮೇಲ್ವಿಚಾರಕರಾಗಿದ್ದ ಆರ್ಟರ್‌ ಎಂಬ ಸಹೋದರನ ಉದಾಹರಣೆ ನೋಡಿ. ಅವ್ರು ಮತ್ತು ಇನ್ನೊಬ್ಬ ಸಹೋದರ ಒಬ್ಬ ಸಹೋದರಿಯನ್ನ ಭೇಟಿ ಮಾಡಿದ್ರು. ಆ ಸಹೋದರಿಗೆ ನಾಚಿಕೆ ಸ್ವಭಾವ ಇತ್ತು, ಯಾರ ಜೊತೆನೂ ಹೆಚ್ಚು ಮಾತಾಡ್ತಾ ಇರಲಿಲ್ಲ. ಆ ಸಹೋದರಿ ಹತ್ರ ಮಾತಾಡ್ದಾಗ ಅವ್ರ ಬಗ್ಗೆ ಏನು ಗೊತ್ತಾಯ್ತು ಅಂತ ಸಹೋದರ ಆರ್ಟರ್‌ ಹೀಗೆ ಹೇಳ್ತಾರೆ: “ಮದ್ವೆ ಆಗಿ ಕೆಲ್ವು ವರ್ಷದಲ್ಲೇ ಆಕೆಯ ಗಂಡ ತೀರಿಹೋಗಿದ್ರು. ನಂತ್ರ ಜೀವ್ನದಲ್ಲಿ ಆಕೆ ತುಂಬಾ ಕಷ್ಟಗಳನ್ನ ಅನುಭವಿಸಿದ್ರು. ತನ್ನ ಇಬ್ರು ಹೆಣ್ಣು ಮಕ್ಕಳು ಯೆಹೋವನನ್ನು ಪ್ರೀತಿಸೋ ತರ ಮತ್ತು ಆತನಿಗೆ ನಂಬಿಗಸ್ತರಾಗಿ ಸೇವೆ ಮಾಡೋ ತರ ಅವ್ರನ್ನ ಬೆಳೆಸಿದ್ರು. ಈಗ ಆ ಸಹೋದರಿಗೆ ಸರಿಯಾಗಿ ಕಣ್ಣು ಕಾಣಿಸಲ್ಲ ಮತ್ತು ಖಿನ್ನತೆನೂ ಇದೆ. ನಿಜವಾಗ್ಲೂ ಆ ಸಹೋದರಿ ನಮ್ಮೆಲ್ರಿಗೂ ಉತ್ತಮ ಮಾದರಿಯಾಗಿದ್ದಾರೆ.” (ಫಿಲಿ. 2:3) ಆ ಸಂಚರಣ ಮೇಲ್ವಿಚಾರಕ ಯೆಹೋವನ ತರ ನಡಕೊಂಡರು. ಯಾಕಂದ್ರೆ ಯೆಹೋವನಿಗೆ ಸಹ ತನ್ನ ನಂಬಿಗಸ್ತ ಸೇವಕರ ಬಗ್ಗೆ, ಅವ್ರ ಕಷ್ಟಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. (ವಿಮೋ. 3:7) ಹಿರಿಯರು ತಮ್ಮ ಸಭೆಯಲ್ಲಿರುವವ್ರ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ರೆ ಅವ್ರಿಗೆ ಸಹಾಯ ಮಾಡೋಕೆ ಸಾಧ್ಯ ಆಗುತ್ತೆ.

12. ತನ್ನ ಸಭೆಯಲ್ಲಿರೋ ಸಹೋದರಿಯ ಬಗ್ಗೆ ತಿಳ್ಕೊಂಡಿದ್ರಿಂದ ಯಿಪ್ಪೀ ಎಂಬ ಸಹೋದರಿಗೆ ಯಾವ ಪ್ರಯೋಜನ ಆಯ್ತು?

12 ನಿಮ್ಗೆ ಯಾವ ಸಹೋದರ ಅಥ್ವಾ ಸಹೋದರಿ ಬಗ್ಗೆ ಕಿರಿಕಿರಿ ಅನ್ಸುತ್ತೋ ಅವ್ರ ಹಿನ್ನೆಲೆ ಬಗ್ಗೆ ತಿಳ್ಕೊಂಡಾಗ ಅವ್ರ ಮೇಲೆ ಅನುಕಂಪ ಹುಟ್ಟಬಹುದು. ಇದಕ್ಕೊಂದು ಉದಾಹರಣೆ ನೋಡಿ. ಏಷ್ಯಾದ ಯಿಪ್ಪೀ ಎಂಬ ಸಹೋದರಿ ಹೀಗೆ ಹೇಳ್ತಾಳೆ: “ನಮ್ಮ ಸಭೇಲಿ ಒಬ್ಬ ಸಹೋದರಿ ತುಂಬಾ ಗಟ್ಟಿ ಧ್ವನಿಯಲ್ಲಿ ಮಾತಾಡ್ತಾರೆ. ‘ಇವ್ರು ಯಾಕೆ ಈ ರೀತಿ ಯಾವಾಗ್ಲೂ ಕಿರುಚುತ್ತಾರೆ’ ಅಂತ ನಾನು ಅಂದ್ಕೊಳ್ತಿದ್ದೆ. ಆದ್ರೆ ಒಂದ್ಸಲ ನಾನು ಅವ್ರ ಜೊತೆ ಸೇವೆ ಮಾಡ್ದಾಗ ಒಂದು ವಿಷ್ಯ ಗೊತ್ತಾಯ್ತು. ಅವ್ರು, ಅವ್ರ ಅಪ್ಪಮ್ಮ ಜೊತೆ ಮಾರ್ಕೆಟ್‌ನಲ್ಲಿ ಮೀನು ಮಾರುತ್ತಿದ್ರಂತೆ ಮತ್ತು ಜನ್ರು ಬಂದು ಮೀನು ತಗೊಳ್ಳೋಕ್ಕಾಗಿ ಜೋರಾಗಿ ಕೂಗಿ ಕರೀತಿದ್ದರಂತೆ. ನಮ್ಮ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಬೇಕಂದ್ರೆ ಅವ್ರ ಹಿನ್ನೆಲೆ ಬಗ್ಗೆ ತಿಳ್ಕೊಳ್ಳಬೇಕು ಅಂತ ಇದ್ರಿಂದ ನಂಗೆ ಗೊತ್ತಾಯ್ತು.” ನಮ್ಮ ಸಹೋದರ ಸಹೋದರಿಯರ ಬಗ್ಗೆ ತಿಳ್ಕೊಳ್ಳಬೇಕಂದ್ರೆ ನಾವು ತುಂಬಾ ಪ್ರಯತ್ನ ಹಾಕಬೇಕು. ಆದ್ರೆ ಹೃದಯವನ್ನು ವಿಶಾಲ ಮಾಡ್ಕೊಳ್ಳಿ ಅಂತ ಬೈಬಲ್‌ ಕೊಡೋ ಸಲಹೆನಾ ಪಾಲಿಸಿದಾಗಲೇ ನಾವು ‘ಎಲ್ಲಾ ರೀತಿಯ ಜನರನ್ನು’ ಪ್ರೀತಿಸುವ ಯೆಹೋವನನ್ನು ಅನುಕರಿಸೋಕಾಗುತ್ತೆ.—1 ತಿಮೊ. 2:3, 4; 2 ಕೊರಿಂ. 6:11-13.

ಕನಿಕರ ತೋರಿಸಿ

13. ಆದಿಕಾಂಡ 19:15, 16 ರಲ್ಲಿ ತಿಳಿಸಿರೋ ಪ್ರಕಾರ ಲೋಟನು ತಡ ಮಾಡಿದಾಗ ದೇವದೂತರು ಏನು ಮಾಡಿದ್ರು ಮತ್ತು ಯಾಕೆ?

13 ಲೋಟನು ತನ್ನ ಜೀವನದ ಒಂದು ಪ್ರಾಮುಖ್ಯ ಸಮಯದಲ್ಲಿ ಯೆಹೋವನು ಕೊಟ್ಟ ಮಾರ್ಗದರ್ಶನವನ್ನ ಪಾಲಿಸೋಕೆ ತಡ ಮಾಡಿದ್ನು. ಇಬ್ಬರು ದೇವದೂತರು ಲೋಟನನ್ನ ಭೇಟಿ ಮಾಡಿ ಅವ್ನು ಮತ್ತವನ ಕುಟುಂಬ ಸೋದೋಮನ್ನು ಬಿಟ್ಟು ಹೋಗ್ಬೇಕು ಅಂತ ಹೇಳಿದ್ರು. ಯಾಕಂದ್ರೆ ಅವ್ರು ‘ಆ ಪಟ್ಟಣವನ್ನು ನಾಶಮಾಡಲಿದ್ದರು.’ (ಆದಿ. 19:12, 13) ಆದ್ರೆ ಮಾರನೇ ದಿನ ಬೆಳಿಗ್ಗೆ, ಲೋಟ ಮತ್ತವನ ಕುಟುಂಬ ಇನ್ನೂ ಮನೆಯಲ್ಲೇ ಇದ್ರು. ದೇವದೂತರು ಪುನಃ ಅವನಿಗೆ ಎಚ್ಚರಿಕೆ ಕೊಟ್ರು. ಆದ್ರೂ ಅವನು ‘ತಡ ಮಾಡಿದನು.’ ಇದನ್ನ ನೋಡ್ವಾಗ ನಮ್ಗೆ, ಲೋಟ ದೇವ್ರ ಮಾತಿಗೆ ಒಂಚೂರು ಬೆಲೆ ಕೊಡ್ಲಿಲ್ಲ, ಅವಿಧೇಯನಾದನು ಅಂತ ಅನಿಸಬಹುದು. ಆದ್ರೆ ಯೆಹೋವನು ಆಗಲೂ ಅವನನ್ನು ರಕ್ಷಿಸೋಕೆ ಬೇಕಾದದ್ದೆಲ್ಲವನ್ನು ಮಾಡಿದ್ನು. “ಯೆಹೋವನು ಅವನನ್ನು ಕನಿಕರಿಸಿದ್ದರಿಂದ” ಆ ದೇವದೂತರು ಅವನನ್ನು ಮತ್ತು ಅವನ ಹೆಂಡತಿ ಮಕ್ಕಳನ್ನು ಕೈ ಹಿಡಿದು ಹೊರಗೆ ತಂದು ಊರಾಚೆ ಬಿಟ್ರು.—ಆದಿಕಾಂಡ 19:15, 16 ಓದಿ.

14. ಯೆಹೋವನು ಲೋಟನಿಗೆ ಯಾಕೆ ಕನಿಕರ ತೋರಿಸಿರಬಹುದು?

14 ಯೆಹೋವನು ಲೋಟನಿಗೆ ಕನಿಕರ ತೋರಿಸೋಕೆ ಅನೇಕ ಕಾರಣಗಳಿದ್ದಿರಬಹುದು. ಲೋಟನು ಪಟ್ಟಣದಲ್ಲಿದ್ದ ಜನ್ರಿಗೆ ಹೆದರಿ ಮನೆಯಿಂದ ಹೊರಡೋಕೆ ತಡ ಮಾಡಿರಬಹುದು. ಬೇರೆ ಅಪಾಯಗಳೂ ಇದ್ದವು. ಸೋದೋಮಿನ ಹತ್ರ ಇದ್ದ ಕಣಿವೆಯಲ್ಲಿ ಅನೇಕ ಕೆಸರಿನ ಕುಣಿಗಳಿದ್ದವು ಮತ್ತು ಅವುಗಳಲ್ಲಿ ಹಿಂದೆ ಇಬ್ಬರು ರಾಜರು ಬಿದ್ದು ಸತ್ತು ಹೋಗಿದ್ದರು ಅನ್ನೋದು ಲೋಟನಿಗೆ ಗೊತ್ತಿದ್ದಿರಬೇಕು. (ಆದಿ. 14:8-12) ಕುಟುಂಬದ ತಲೆಯಾಗಿ ಲೋಟನಿಗೆ ತನ್ನ ಹೆಂಡ್ತಿ-ಮಕ್ಕಳ ಬಗ್ಗೆ ಚಿಂತೆ ಆಗಿರಬಹುದು. ಅಷ್ಟೇ ಅಲ್ಲ, ಲೋಟನು ಶ್ರೀಮಂತನಾಗಿದ್ದನು. ಹಾಗಾಗಿ ಅವನಿಗೆ ಸೋದೋಮಿನಲ್ಲಿ ಒಂದು ಒಳ್ಳೇ ಮನೆ ಇದ್ದಿರಬಹುದು. (ಆದಿ. 13:5, 6) ಅದೇನೇ ಕಾರಣ ಇದ್ರೂ ಅವನು ಯೆಹೋವನು ಹೇಳಿದ ಮಾತನ್ನು ಪಾಲಿಸೋಕೆ ತಡಮಾಡಿದ್ದು ಸರಿಯಲ್ಲ. ಹಾಗಿದ್ರೂ ಯೆಹೋವನು ಅವನ ತಪ್ಪನ್ನ ನೋಡದೇ ಅವನನ್ನ “ನೀತಿವಂತ” ಅಂತ ನೆನೆಸಿದನು.—2 ಪೇತ್ರ 2:7, 8.

ಬೇರೆಯವ್ರು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಂಡ್ರೆ ನಾವು ಅವ್ರಿಗೆ ಕನಿಕರ ಹೇಗೆ ತೋರಿಸ್ಬಹುದು ಅಂತ ಗೊತ್ತಾಗುತ್ತೆ (ಪ್ಯಾರ 15-16 ನೋಡಿ) *

15. ಒಬ್ಬ ವ್ಯಕ್ತಿ ನಡ್ಕೊಳ್ಳೋ ರೀತಿ ನೋಡಿ ಅವ್ರ ಬಗ್ಗೆ ತೀರ್ಪು ಮಾಡೋ ಬದ್ಲಿಗೆ ನಾವೇನು ಮಾಡಬೇಕು?

15 ಒಬ್ಬ ವ್ಯಕ್ತಿ ನಡ್ಕೊಳ್ಳೋ ರೀತಿ ನೋಡಿ ಅವ್ರ ಬಗ್ಗೆ ತೀರ್ಪು ಮಾಡೋ ಬದ್ಲು ಅವ್ರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸಬೇಕು. ಯೂರೋಪ್‌ನಲ್ಲಿರೋ ವೆರೋನಿಕ ಎಂಬ ಸಹೋದರಿ ಇದನ್ನೇ ಮಾಡಿದ್ರು. ಅವ್ರು ಹೀಗೆ ಹೇಳ್ತಾರೆ: “ಒಬ್ಬ ಸಹೋದರಿ ಯಾವಾಗ್ಲೂ ಬೇಜಾರಲ್ಲೇ ಇರ್ತಿದ್ರು. ಯಾರ್‌ ಜೊತೆನೂ ಸೇರ್ತಿರಲಿಲ್ಲ. ಕೆಲವೊಮ್ಮೆ ನಂಗೆ ಅವ್ರ ಹತ್ರ ಹೋಗಿ ಮಾತಾಡೋಕೂ ಭಯ ಆಗ್ತಿತ್ತು. ಆದ್ರೆ ‘ನಾನು ಅವ್ರ ಪರಿಸ್ಥಿತಿಲಿ ಇದ್ದಿದ್ರೆ ನಂಗೆ ಒಬ್ಬ ಸ್ನೇಹಿತೆಯ ಅಗತ್ಯ ಇರ್ತಿತ್ತು’ ಅಂತ ಯೋಚಿಸಿದೆ. ಹಾಗಾಗಿ ಅವ್ರ ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಬೇಕೆಂದು ನಿರ್ಧರಿಸಿದೆ. ಆಕೆ ಜೊತೆ ಮಾತಾಡ್ತಾ ಮಾತಾಡ್ತಾ ಆಕೆ ತನ್ನ ಮನಸ್ಸಲ್ಲಿ ಇರೋದನ್ನು ಹೇಳೋಕೆ ಶುರು ಮಾಡಿದಳು. ಈಗ ನನಗೆ ಅವಳನ್ನು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗಿದೆ.”

16. ‘ಅನುಕಂಪ ಬೆಳೆಸಿಕೊಳ್ಳೋಕೆ ಸಹಾಯ ಮಾಡು’ ಅಂತ ನಾವ್ಯಾಕೆ ಪ್ರಾರ್ಥಿಸಬೇಕು?

16 ಯೆಹೋವನೊಬ್ಬನೇ ನಮ್ಮನ್ನು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಾಧ್ಯ. (1 ಯೋಹಾ. 3:20) ಆದ್ರಿಂದ ಆತನು ಬೇರೆಯವ್ರನ್ನ ಹೇಗೆ ನೋಡ್ತಾನೋ ಅದೇ ರೀತಿ ನಾವೂ ನೋಡೋಕೆ ಮತ್ತು ಅವ್ರಿಗೆ ಕನಿಕರ ಹೇಗೆ ತೋರಿಸೋದು ಅಂತ ತಿಳ್ಕೊಳ್ಳೋಕೆ ಸಹಾಯ ಮಾಡು ಅಂತ ಆತನ ಹತ್ರ ಕೇಳಿಕೊಳ್ಳಬೇಕು. ಬೇರೆಯವ್ರಿಗೆ ಇನ್ನೂ ಹೆಚ್ಚು ಅನುಕಂಪ ತೋರಿಸೋಕೆ ಅಂಜೆಲಾ ಅನ್ನೋ ಸಹೋದರಿಗೆ ಪ್ರಾರ್ಥನೆ ಸಹಾಯ ಮಾಡ್ತು. ಆಕೆಗೆ ತನ್ನ ಸಭೆಯಲ್ಲಿದ್ದ ಒಬ್ಬ ಸಹೋದರಿ ಜೊತೆ ಎಷ್ಟು ಪ್ರಯತ್ನ ಮಾಡಿದ್ರೂ ಚೆನ್ನಾಗಿ ಇರೋಕೆ ಕಷ್ಟ ಆಗ್ತಿತ್ತು. ಅಂಜೆಲಾ ಹೀಗೆ ಹೇಳ್ತಾಳೆ: “ತಪ್ಪೆಲ್ಲಾ ಅವಳದೇ ಅಂತ ಅಂದುಕೊಂಡು ನಾನು ಅವಳಿಂದ ದೂರ ಉಳಿಬಹುದಿತ್ತು. ಆದ್ರೆ ನಾನು ‘ಆ ಸಹೋದರಿಗೆ ಅನುಕಂಪ ತೋರಿಸೋಕೆ ಸಹಾಯ ಮಾಡಪ್ಪಾ’ ಅಂತ ಯೆಹೋವನ ಹತ್ರ ಪ್ರಾರ್ಥಿಸಿದೆ.” ಅಂಜೆಲಾ ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ರ ಕೊಟ್ನಾ? ಆಕೆ ಹೀಗೆ ಹೇಳ್ತಾಳೆ: “ನಾವು ಒಟ್ಟಿಗೆ ಸೇವೆಗೆ ಹೋದ್ವಿ. ಆಮೇಲೆ ತುಂಬ ಹೊತ್ತು ಮಾತಾಡಿದ್ವಿ. ಅವಳು ಹೇಳೋದನ್ನು ನಾನು ಕನಿಕರದಿಂದ ಕೇಳಿಸಿಕೊಂಡೆ. ಇದ್ರಿಂದಾಗಿ ಈಗ ನನಗೆ ಅವಳಂದ್ರೆ ತುಂಬಾ ಇಷ್ಟ ಮತ್ತು ಅವಳಿಗೆ ಸಹಾಯ ಮಾಡಬೇಕು ಅನ್ನೋ ದೃಢತೀರ್ಮಾನ ಮಾಡಿದ್ದೇನೆ.”

17. ನಾವು ಯಾವ ದೃಢತೀರ್ಮಾನ ಮಾಡಬೇಕು?

17 ಕೆಲವು ಸಹೋದರರಿಗೆ ಕನಿಕರ ತೋರಿಸಬೇಕು, ಇನ್ನು ಕೆಲವರಿಗೆ ತೋರಿಸೋ ಅವಶ್ಯಕತೆ ಇಲ್ಲ ಅಂತ ನಾವು ಅಂದ್ಕೊಳ್ಳೋಕೆ ಆಗಲ್ಲ. ಯಾಕಂದ್ರೆ ಅವ್ರಲ್ಲಿ ಎಲ್ರೂ ಯೋನ, ಎಲೀಯ, ಹಾಗರ ಮತ್ತು ಲೋಟನಂತೆ ಸಮಸ್ಯೆಗಳನ್ನ ಎದುರಿಸ್ತಿರಬಹುದು. ಹೆಚ್ಚಿನ ಸಲ ತಾವು ಮಾಡಿದ ತಪ್ಪಿನಿಂದಲೇ ಸಮಸ್ಯೆನಾ ಮೈಮೇಲೆ ಎಳಕೊಂಡಿರಬಹುದು. ನಿಜ ಏನಂದ್ರೆ, ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ತಪ್ಪು ಮಾಡಿ ನಾವಾಗೇ ಸಮಸ್ಯೆನಾ ತಂದುಕೊಂಡಿರುತ್ತೇವೆ. ಹಾಗಾಗಿ ಒಬ್ಬರಿಗೊಬ್ಬರು ಅನುಕಂಪ ತೋರಿಸೋಕೆ ಸಹಾಯ ಮಾಡುವಂತೆ ಯೆಹೋವನ ಹತ್ರ ನಾವು ಕೇಳಿಕೊಳ್ಳಬೇಕು. (1 ಪೇತ್ರ 3:8) ನಾವು ಯೆಹೋವನ ಮಾತನ್ನು ಪಾಲಿಸೋದಾದ್ರೆ ಐಕ್ಯತೆಗೆ ಹೆಸರುವಾಸಿಯಾಗಿರೋ ನಮ್ಮ ಲೋಕವ್ಯಾಪಕ ಕುಟುಂಬಕ್ಕೆ ಇನ್ನಷ್ಟು ಮೆರಗನ್ನು ನೀಡ್ತೇವೆ. ಹಾಗಾಗಿ ಯೆಹೋವನ ತರ ನಾವು ಕೂಡ ಬೇರೆಯವ್ರು ಹೇಳೋದನ್ನು ಕೇಳಿಸಿಕೊಂಡು, ಅವ್ರನ್ನ ಅರ್ಥ ಮಾಡ್ಕೊಂಡು, ಕನಿಕರ ತೋರಿಸೋಕೆ ದೃಢತೀರ್ಮಾನ ಮಾಡೋಣ.

ಗೀತೆ 119 ಬನ್ನಿ, ಚೈತನ್ಯ ಪಡೆಯಿರಿ

^ ಪ್ಯಾರ. 5 ನಾವು ಅಪರಿಪೂರ್ಣರಾಗಿರೋದ್ರಿಂದ ಜನ್ರ ಬಗ್ಗೆ, ಅವ್ರ ಉದ್ದೇಶದ ಬಗ್ಗೆ ಹಿಂದೆ ಮುಂದೆ ಯೋಚಿಸದೇ ತಪ್ಪಾಗಿ ತೀರ್ಮಾನ ಮಾಡಿಬಿಡ್ತೇವೆ. ಆದ್ರೆ ಯೆಹೋವನು ‘ಹೃದಯವನ್ನು ನೋಡ್ತಾನೆ.’ (1 ಸಮು. 16:7) ಯೆಹೋವನು ಯೋನ, ಎಲೀಯ, ಹಾಗರ ಮತ್ತು ಲೋಟನ ಜೊತೆ ಹೇಗೆ ಪ್ರೀತಿಯಿಂದ ನಡ್ಕೊಂಡನು ಅಂತ ಈ ಲೇಖನದಲ್ಲಿ ನೋಡಲಿದ್ದೇವೆ. ಅಷ್ಟೇ ಅಲ್ಲ, ಯೆಹೋವನ ತರಾನೇ ನಾವು ಸಹ ಸಹೋದರ ಸಹೋದರಿಯರ ಜೊತೆ ಹೇಗೆ ಪ್ರೀತಿಯಿಂದ ನಡ್ಕೊಳ್ಳಬಹುದು ಅಂತನೂ ತಿಳ್ಕೊಳ್ತೇವೆ.

^ ಪ್ಯಾರ. 52 ಚಿತ್ರ ವಿವರಣೆ: ಒಬ್ಬ ಯುವ ಸಹೋದರ ಕೂಟಕ್ಕೆ ತಡವಾಗಿ ಬರ್ತಿರೋದನ್ನು ನೋಡಿ ವೃದ್ಧ ಸಹೋದರನಿಗೆ ಕಿರಿಕಿರಿ ಆಗುತ್ತಿದೆ. ಆದ್ರೆ ಆ ಯುವ ಸಹೋದರನ ಕಾರಿಗೆ ಆಕ್ಸಿಡೆಂಟ್‌ ಆಗಿದ್ರಿಂದ ಅವನು ತಡವಾಗಿ ಬಂದ ಅಂತ ಆಮೇಲೆ ಗೊತ್ತಾಗುತ್ತೆ.

^ ಪ್ಯಾರ. 54 ಚಿತ್ರ ವಿವರಣೆ: ಒಬ್ಬ ಸಹೋದರಿ ಯಾರ ಜೊತೆನೂ ಬೆರೆಯಲ್ಲ ಅಂತ ಗುಂಪು ಮೇಲ್ವಿಚಾರಕ ನೆನಸ್ತಾನೆ. ಆದ್ರೆ ಆಕೆ ತುಂಬ ನಾಚಿಕೆ ಸ್ವಭಾವದವಳು, ಹೆಚ್ಚು ಪರಿಚಯ ಇಲ್ಲದವ್ರ ಜೊತೆ ಬೆರೆಯೋಕೆ ಆಕೆಗೆ ತುಂಬ ಕಷ್ಟ ಆಗುತ್ತೆ ಅಂತ ನಂತ್ರ ಅವ್ನಿಗೆ ಗೊತ್ತಾಗುತ್ತೆ.

^ ಪ್ಯಾರ. 56 ಚಿತ್ರ ವಿವರಣೆ: ಮೊದಲ ಬಾರಿಗೆ ಒಬ್ಬ ಸಹೋದರಿಯನ್ನ ರಾಜ್ಯ ಸಭಾಗೃಹದಲ್ಲಿ ನೋಡಿದಾಗ ಇನ್ನೊಬ್ಬ ಸಹೋದರಿ, ‘ಆಕೆ ಯಾವಾಗ್ಲೂ ಬೇಜಾರಲ್ಲಿರ್ತಾಳೆ, ಯಾರತ್ರನೂ ಮಾತಾಡಲ್ಲ’ ಅಂತ ಅಂದುಕೊಂಡಳು. ಆದ್ರೆ ಅವ್ಳ ಜೊತೆ ಮಾತಾಡೋಕೆ ಶುರು ಮಾಡಿದ ಮೇಲೆ ತಾನು ಅಂದುಕೊಂಡಿದ್ದು ತಪ್ಪು ಅಂತ ಗೊತ್ತಾಗುತ್ತೆ.