ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 15

ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ?

ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ?

“ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ.”—ಯೋಹಾ. 4:35.

ಗೀತೆ 44 ಕೊಯ್ಲಿನಲ್ಲಿ ಆನಂದಿಸುತ್ತಾ ಪಾಲಿಗರಾಗುವುದು

ಕಿರುನೋಟ *

1-2. ಯೋಹಾನ 4:35, 36 ರಲ್ಲಿ ಯೇಸು ಹೇಳಿರುವ ಮಾತಿನ ಅರ್ಥವೇನು?

ಯೇಸು ಗಲಿಲಾಯಕ್ಕೆ ಹೋಗುವಾಗ ಬಾರ್ಲಿಯ ಹೊಲಗಳ ಮಧ್ಯೆ ಹಾದುಹೋದನು. ಬಹುಶಃ ಬಾರ್ಲಿ ಆಗ ತಾನೇ ಬೆಳೆಯುವ ಹಂತದಲ್ಲಿ ಇದ್ದಿರಬಹುದು. (ಯೋಹಾ. 4:3-6) ಅವುಗಳು ಕೊಯ್ಲಿಗೆ ಸಿದ್ಧವಾಗೋಕೆ ಇನ್ನೂ ನಾಲ್ಕು ತಿಂಗಳಿತ್ತು. ಅದಕ್ಕೇ ಯೇಸು ಹೇಳಿದ ಮಾತನ್ನು ಕೇಳಿ ಜನ್ರಿಗೆ ವಿಚಿತ್ರ ಅನ್ಸಿರಬಹುದು. ಆತನು “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ, ಅವು ಕೊಯ್ಲಿಗೆ ಸಿದ್ಧವಾಗಿವೆ” ಅಂತ ಹೇಳಿದನು. (ಯೋಹಾನ 4:35, 36 ಓದಿ.) ಆತನ ಮಾತಿನ ಅರ್ಥವೇನಾಗಿತ್ತು?

2 ಯೇಸು “ಕೊಯ್ಲಿಗೆ ಸಿದ್ಧವಾಗಿವೆ” ಅಂತ ಹೇಳಿದ್ದು ಬೆಳೆ ಬಗ್ಗೆ ಅಲ್ಲ, ಜನ್ರ ಬಗ್ಗೆ. ಇದಕ್ಕಿಂತ ಸ್ವಲ್ಪ ಮುಂಚೆ ಏನು ನಡೆಯಿತೆಂದು ಗಮನಿಸಿ. ಯೆಹೂದಿಗಳು ಸಮಾರ್ಯದವರನ್ನು ಕಂಡ್ರೆ ಒಂದು ಮಾರು ದೂರ ಇರ್ತಿದ್ರು. ಆದ್ರೆ ಯೇಸು ಸಮಾರ್ಯದ ಸ್ತ್ರೀಗೆ ಸುವಾರ್ತೆ ಸಾರಿದ್ನು. ಅವಳು ಸಹ ಆತನು ಹೇಳೋದನ್ನು ಕೇಳಿಸಿಕೊಂಡಳು. ಅಷ್ಟೇ ಅಲ್ಲ, ಯೇಸು “ಕೊಯ್ಲಿಗೆ ಸಿದ್ಧವಾಗಿವೆ” ಅಂತ ಹೇಳುತ್ತಿರುವಾಗಲೇ ಸಮಾರ್ಯದ ಸ್ತ್ರೀಯ ಮಾತು ಕೇಳಿ ಸಮಾರ್ಯದಿಂದ ಜನ್ರ ಗುಂಪೊಂದು ಆತನಿಂದ ಇನ್ನೂ ಹೆಚ್ಚು ಕಲಿಯೋಕೆ ಬರ್ತಾ ಇತ್ತು. (ಯೋಹಾ. 4:9, 39-42) ಬೈಬಲ್‌ ಪರಿಣತರೊಬ್ರು ಈ ವೃತ್ತಾಂತದ ಬಗ್ಗೆ ಹೀಗೆ ಹೇಳ್ತಾರೆ: “ಆ ಜನ್ರು ಕೊಯ್ಲಿಗೆ ಸಿದ್ಧವಾಗಿರೋ ಬೆಳೆ ತರ ಇದ್ದಾರೆ ಅನ್ನೋದು ಯೇಸುವಿನ ಮಾತು ಕೇಳೋಕೆ ಅವ್ರಿಗಿದ್ದ ಹಂಬಲದಿಂದ ಗೊತ್ತಾಗುತ್ತೆ.”

ಹೊಲ “ಕೊಯ್ಲಿಗಾಗಿ ಸಿದ್ಧವಾಗಿದೆ” ಅಂತ ನಾವು ಯೋಚಿಸೋದಾದ್ರೆ ಏನು ಮಾಡ್ತೇವೆ? (ಪ್ಯಾರ 3 ನೋಡಿ)

3. ಜನ್ರ ಕಡೆಗೆ ಯೇಸುವಿಗಿದ್ದ ಅಭಿಪ್ರಾಯನೇ ನಿಮಗೂ ಇದ್ರೆ ಏನಾಗುತ್ತೆ?

3 ನಿಮ್ಮ ಟೆರಿಟೊರಿಯಲ್ಲಿರೋ ಜನ್ರ ಬಗ್ಗೆ ನಿಮಗೆ ಯಾವ ಅಭಿಪ್ರಾಯ ಇದೆ? ಅವ್ರನ್ನು ಕೊಯ್ಲಿಗೆ ಸಿದ್ಧವಾಗಿರುವ ಬೆಳೆ ತರ ನೋಡ್ತೀರಾ? ಹಾಗೆ ನೋಡೋದಾದ್ರೆ ಈ ಮೂರು ವಿಷ್ಯಗಳಂತೂ ಖಂಡಿತ ನಡೆಯುತ್ತೆ. ಒಂದು, ಕೊಯ್ಲಿನ ಸಮಯ ತುಂಬ ಕಡಿಮೆ ಇದೆ, ಇದು ವ್ಯರ್ಥ ಮಾಡೋ ಸಮಯ ಅಲ್ಲ, ಅಮೂಲ್ಯ ಸಮಯ ಅಂತ ನೆನಸಿ ನೀವು ತುಂಬ ತುರ್ತಿನಿಂದ ಸುವಾರ್ತೆ ಸಾರುತ್ತೀರಿ. ಎರಡು, ಮನಸ್ಪೂರ್ತಿಯಾಗಿ ಸುವಾರ್ತೆ ಸಾರೋದ್ರಿಂದ ನಿಮಗೆ ಖುಷಿ ಸಿಗುತ್ತೆ. ‘ಸುಗ್ಗಿಕಾಲದಲ್ಲಿ ಜನರು ಹರ್ಷಿಸುತ್ತಾರೆ’ ಅಂತ ಬೈಬಲೇ ಹೇಳುತ್ತೆ. (ಯೆಶಾ. 9:3) ಮೂರು, ನೀವು ಸುವಾರ್ತೆ ಸಾರೋ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ದಿನ ಯೇಸುವಿನ ಶಿಷ್ಯರಾಗ್ತಾರೆ ಅಂತ ಮನಸ್ಸಲ್ಲಿಟ್ಟು ಅವ್ರ ಆಸಕ್ತಿಗೆ ತಕ್ಕ ಹಾಗೆ ನಿಮ್ಮ ಮಾತನ್ನು ಹೊಂದಿಸಿಕೊಳ್ತೀರಿ.

4. ಈ ಲೇಖನದಲ್ಲಿ ನಾವು ಅಪೊಸ್ತಲ ಪೌಲನ ಬಗ್ಗೆ ಏನನ್ನು ಕಲಿಯಲಿದ್ದೇವೆ?

4 ಸಮಾರ್ಯದವ್ರು ಯಾವತ್ತಿಗೂ ಯೇಸುವಿನ ಶಿಷ್ಯರಾಗೋದೇ ಇಲ್ಲ ಅಂತ ಆತನ ಕೆಲವು ಹಿಂಬಾಲಕರು ಯೋಚಿಸಿದ್ರು. ಆದ್ರೆ ಯೇಸು ಆ ರೀತಿ ಯೋಚಿಸಲಿಲ್ಲ. ಸಮಾರ್ಯದವ್ರೂ ತನ್ನ ಶಿಷ್ಯರಾಗ್ತಾರೆ ಅಂತ ನಂಬಿದನು. ನಾವು ಸಹ ನಮ್ಮ ಟೆರಿಟೊರಿಯಲ್ಲಿರುವ ಜನ್ರು ಯೇಸುವಿನ ಶಿಷ್ಯರಾಗ್ತಾರೆ ಅಂತ ಯೋಚಿಸ್ಬೇಕು. ಈ ವಿಷ್ಯದಲ್ಲಿ ಅಪೊಸ್ತಲ ಪೌಲ ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ಆತನಿಂದ ನಾವೇನು ಕಲೀಬಹುದು? ಈ ಲೇಖನದಲ್ಲಿ ನಾವು, (1) ಪೌಲ ಯಾರಿಗೆಲ್ಲ ಸುವಾರ್ತೆ ಸಾರಿದನೋ ಅವ್ರ ನಂಬಿಕೆಗಳ ಬಗ್ಗೆ ಹೇಗೆ ತಿಳ್ಕೊಂಡನು, (2) ಅವ್ರ ಆಸಕ್ತಿಗಳ ಬಗ್ಗೆ ಹೇಗೆ ತಿಳ್ಕೊಂಡನು ಮತ್ತು (3) ಅವ್ರು ಯೇಸುವಿನ ಶಿಷ್ಯರಾಗ್ತಾರೆ ಎಂಬ ಅಭಿಪ್ರಾಯ ತನಗಿದೆ ಅಂತ ಹೇಗೆ ತೋರಿಸಿಕೊಟ್ನು ಅನ್ನೋದನ್ನು ನೋಡಲಿದ್ದೇವೆ.

ಜನ್ರು ಏನನ್ನು ನಂಬ್ತಾರೆ?

5. ಸಭಾಮಂದಿರದಲ್ಲಿದ್ದ ಜನ್ರಿಗೆ ಸುವಾರ್ತೆ ಸಾರಲು ಪೌಲನಿಗೆ ಯಾಕೆ ಸುಲಭ ಆಯ್ತು?

5 ಪೌಲ ಯೆಹೂದಿ ಸಭಾಮಂದಿರಕ್ಕೆ ಆಗಾಗ ಹೋಗಿ ಸುವಾರ್ತೆ ಸಾರುತ್ತಿದ್ದ. ಉದಾಹರಣೆಗೆ, ಥೆಸಲೊನೀಕದ ಸಭಾಮಂದಿರದಲ್ಲಿ ‘ಮೂರು ಸಬ್ಬತ್‌ ದಿನಗಳ ತನಕ ಅವರೊಂದಿಗೆ [ಯೆಹೂದಿಗಳೊಂದಿಗೆ] ಶಾಸ್ತ್ರಗ್ರಂಥದಿಂದ ತರ್ಕಿಸಿದನು.’ (ಅ. ಕಾ. 17:1, 2) ಸಭಾಮಂದಿರದಲ್ಲಿ ಸುವಾರ್ತೆ ಸಾರೋಕೆ ಪೌಲನಿಗೆ ಸುಲಭವಾಗಿತ್ತು. ಯಾಕೆಂದ್ರೆ ಆತನು ಒಬ್ಬ ಯೆಹೂದಿಯಾಗಿದ್ದನು. (ಅ. ಕಾ. 26:4, 5) ಪೌಲನಿಗೆ ಯೆಹೂದಿಗಳ ನಂಬಿಕೆ ಬಗ್ಗೆ ಚೆನ್ನಾಗಿ ಗೊತ್ತಿದ್ದರಿಂದ ಅವ್ರ ಹತ್ರ ಧೈರ್ಯವಾಗಿ ಮಾತಾಡೋಕೆ ಸಾಧ್ಯವಾಯ್ತು.—ಫಿಲಿ. 3:4, 5.

6. ಅಥೆನ್ಸಿನ ಪೇಟೆಯಲ್ಲಿದ್ದ ಜನ್ರು ಸಭಾಮಂದಿರದಲ್ಲಿ ಪೌಲ ಸಾರಿದ ಜನ್ರಿಗಿಂತ ವ್ಯತ್ಯಾಸವಾಗಿದ್ರು ಹೇಗೆ?

6 ಪೌಲನು ವಿರೋಧಿಗಳ ಕಾಟದಿಂದಾಗಿ ಮೊದಲು ಥೆಸಲೊನೀಕ ನಂತ್ರ ಬೆರೋಯವನ್ನು ಬಿಟ್ಟು ಅಥೆನ್ಸಿಗೆ ಹೋಗಬೇಕಾಯಿತು. ಅಲ್ಲಿಯೂ ಆತನು “ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ದೇವರನ್ನು ಆರಾಧಿಸುತ್ತಿದ್ದ ಇತರರೊಂದಿಗೂ . . . ತರ್ಕಿಸಲಾರಂಭಿಸಿದನು.” (ಅ. ಕಾ. 17:17) ಆದ್ರೆ ಪೇಟೆಯಲ್ಲಿ ಪೌಲ ಸುವಾರ್ತೆ ಸಾರುತ್ತಿದ್ದಾಗ ಬೇರೆ ಜನ್ರೂ ಇದ್ರು. ಅವ್ರಲ್ಲಿದ್ದ ತತ್ವಜ್ಞಾನಿಗಳಿಗೆ ಮತ್ತು ಅನ್ಯಜನಾಂಗದವರಿಗೆ ಪೌಲನ ಸಂದೇಶ “ಹೊಸ ಬೋಧನೆ” ತರ ಅನಿಸ್ತು. ಅವ್ರು ಆತನಿಗೆ, “ನಮಗೆ ವಿಚಿತ್ರವಾಗಿ ಕೇಳುತ್ತಿರುವ ಕೆಲವು ವಿಷಯಗಳನ್ನು ನೀನು ಪರಿಚಯಿಸುತ್ತಿದ್ದೀ” ಎಂದು ಹೇಳಿದ್ರು.—ಅ. ಕಾ. 17:18-20.

7. ಅಪೊಸ್ತಲರ ಕಾರ್ಯಗಳು 17:22, 23 ರ ಪ್ರಕಾರ ಪೌಲ ಅಥೆನ್ಸಿನ ಜನ್ರಿಗೆ ತಕ್ಕಂತೆ ಹೇಗೆ ತನ್ನ ಮಾತನ್ನು ಹೊಂದಿಸಿಕೊಂಡನು?

7 ಅಪೊಸ್ತಲರ ಕಾರ್ಯಗಳು 17:22, 23 ಓದಿ. ಪೌಲ ಸಭಾಮಂದಿರಲ್ಲಿದ್ದ ಯೆಹೂದಿಗಳಿಗೆ ಸಾರುವಾಗ ಏನು ಹೇಳಿದನೋ ಅದನ್ನೇ ಅಥೆನ್ಸಿನ ಅನ್ಯಜನಾಂಗದವರಿಗೆ ಹೇಳಲಿಲ್ಲ. ಬಹುಶಃ ಆತನು, ಅಥೆನ್ಸಿನ ಜನ್ರು ಏನನ್ನು ನಂಬ್ತಾರೆ ಅಂತ ತನ್ನಲ್ಲೇ ಯೋಚಿಸಿರಬಹುದು. ತನ್ನ ಸುತ್ತಮುತ್ತ ಏನಿದೆ, ಅಥೆನ್ಸಿನ ಜನ್ರು ಯಾವ ರೀತಿ ಆರಾಧನೆ ಮಾಡ್ತಾರೆ ಅಂತನೂ ಗಮನಿಸಿದನು. ದೇವ್ರ ವಾಕ್ಯದಲ್ಲಿರುವ ಯಾವ ವಿಷ್ಯವನ್ನು ಆ ಜನ್ರು ನಂಬ್ತಿದ್ರೋ, ಅದನ್ನು ಮೊದ್ಲು ಹೇಳಿ ಪೌಲನು ತನ್ನ ಮಾತನ್ನು ಶುರುಮಾಡಿದನು. ಒಬ್ಬ ಬೈಬಲ್‌ ಪರಿಣತರು ಇದ್ರ ಬಗ್ಗೆ ಹೀಗೆ ಹೇಳ್ತಾರೆ: “ವಿಧರ್ಮಿ ಗ್ರೀಕರು ಯೆಹೂದಿಗಳ ಮತ್ತು ಕ್ರೈಸ್ತರ ಸತ್ಯದೇವರನ್ನು ಆರಾಧಿಸುವುದಿಲ್ಲ ಅನ್ನೋದು ಯೆಹೂದಿ ಕ್ರೈಸ್ತನಾಗಿದ್ದ ಪೌಲನಿಗೆ ಅರ್ಥವಾಗಿತ್ತು. ಆದ್ದರಿಂದ ಆತನು ಯಾವ ದೇವರ ಬಗ್ಗೆ ಮಾತಾಡುತ್ತಿದ್ದನೋ ಆ ದೇವ್ರು ಅಥೆನ್ಸಿನ ಜನ್ರಿಗೆ ಗೊತ್ತಿಲ್ಲದವನೇನಲ್ಲ ಅನ್ನೋದನ್ನು ತೋರಿಸಿಕೊಡೋಕೆ ಪ್ರಯತ್ನಿಸಿದನು.” ಹಾಗಾಗಿ ಪೌಲ ಅವ್ರ ನಂಬಿಕೆಗೆ ತಕ್ಕಂತೆ ಮಾತನ್ನು ಹೊಂದಿಸಿಕೊಂಡನು. ಅಥೆನ್ಸಿನ ಜನ್ರು “ಅಜ್ಞಾತ ದೇವರಿಗೆ” ಒಂದು ಬಲಿಪೀಠ ಮಾಡಿಕೊಂಡಿದ್ರು. ಪೌಲ ಅದನ್ನೇ ಬಳಸಿ ತಾನು ಹೇಳುತ್ತಿರುವ ಸಂದೇಶ ಆ ಜನ್ರು ಆರಾಧಿಸೋಕೆ ಪ್ರಯತ್ನಿಸುತ್ತಿರುವ ‘ಅಜ್ಞಾತ ದೇವರಿಂದ’ ಬಂದಿರುವುದು ಅಂತ ತಿಳಿಸಿದನು. ಅವರಿಗೆ ದೇವ್ರ ವಾಕ್ಯದ ಬಗ್ಗೆ ಗೊತ್ತಿಲ್ಲದ ಕಾರಣ ‘ಅವ್ರು ಯಾವತ್ತಿಗೂ ಕ್ರೈಸ್ತರಾಗಲ್ಲ’ ಅಂತ ಪೌಲ ನೆನಸಲಿಲ್ಲ. ಬದಲಿಗೆ, ಅವ್ರು ಕೊಯ್ಲಿಗೆ ಸಿದ್ಧವಾಗಿರೋ ಬೆಳೆಯಂತೆ ಇದ್ದಾರೆ ಅಂತ ನೆನಸಿದನು ಮತ್ತು ಅವ್ರು ಒಪ್ಪುವಂಥ ರೀತಿಯಲ್ಲಿ ಸುವಾರ್ತೆ ಸಾರಿದನು.

ಪೌಲನ ಮಾದರಿ ಅನುಸರಿಸುತ್ತಾ ಗಮನಿಸುವವರಾಗಿ, ಜನ್ರಿಗೆ ತಕ್ಕಂತೆ ನಿಮ್ಮ ಮಾತನ್ನು ಹೊಂದಿಸಿಕೊಳ್ಳಿ ಮತ್ತು ಅವ್ರು ಯೇಸುವಿನ ಶಿಷ್ಯರಾಗ್ತಾರೆ ಅಂತ ನಂಬಿ (ಪ್ಯಾರ 8, 12, 18 ನೋಡಿ) *

8. (ಎ) ನಿಮ್ಮ ಟೆರಿಟೊರಿಯಲ್ಲಿರುವ ಜನ್ರು ಏನನ್ನು ನಂಬ್ತಾರೆ ಅಂತ ನೀವು ಹೇಗೆ ತಿಳುಕೊಳ್ಳಬಹುದು? (ಬಿ) ಯಾರಾದ್ರೂ ನಿಮ್ಮತ್ರ “ನನ್ಗೆ ನನ್ನದೇ ಆದ ಧರ್ಮ ಇದೆ” ಅಂತ ಹೇಳಿದಾಗ ನೀವು ಹೇಗೆ ಮಾತಾಡ್ಬಹುದು?

8 ಪೌಲನ ತರ ನಾವೂ ಗಮನಿಸಬೇಕು. ನಿಮ್ಮ ಟೆರಿಟೊರಿಯಲ್ಲಿರುವ ಜನ್ರು ಏನನ್ನು ನಂಬ್ತಾರೆ ಅನ್ನೋದನ್ನು ತಿಳ್ಕೊಳೋಕೆ ಸೂಚನೆಗಳೇನಾದ್ರೂ ಇವೆಯಾ ಅಂತ ಗಮನಿಸಿ. ಮನೆಯವ್ರು ತಮ್ಮ ಮನೆಯಲ್ಲಿ, ಮನೆ ಹೊರಗಡೆ, ಗಾಡಿಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ್ದೇನಾದ್ರೂ ಇಟ್ಟುಕೊಂಡಿದ್ದಾರಾ ಅಂತ ನೋಡಿ. ಹೆಸ್ರು, ಬಟ್ಟೆ, ಕೇಶಾಲಂಕಾರ ಅಥವಾ ಮಾತಿನ ಶೈಲಿಯಿಂದ ಅವ್ರು ಯಾವ ಧರ್ಮದವರು ಅಂತ ಗುರುತಿಸಲಿಕ್ಕಾಗುತ್ತಾ ಅಂತನೂ ನೋಡಿ. ಒಂದುವೇಳೆ ಮನೆಯವ್ರು “ನನ್ಗೆ ನನ್ನದೇ ಆದ ಧರ್ಮ ಇದೆ” ಅಂತ ಹೇಳಿದ್ರೆ ಏನು ಮಾಡೋದು? ಫ್ಲೂಟೂರಾ ಎಂಬ ವಿಶೇಷ ಪಯನೀಯರ್‌ ಸಹೋದರಿ ಅಂಥವ್ರಿಗೆ ಹೀಗೆ ಉತ್ರ ಕೊಡ್ತಾರೆ: “ನಾನೇನು ನಂಬ್ತಿನೋ ಅದನ್ನ ನೀವೂ ನಂಬಿ ಅಂತ ಒತ್ತಾಯ ಮಾಡೋಕೆ ನಾನು ಬಂದಿಲ್ಲ. ನಾನು ಹೇಳೋ ವಿಷ್ಯ ಏನಂದ್ರೆ . . . ”

9. ದೇವ್ರಲ್ಲಿ ನಂಬಿಕೆ ಇಟ್ಟಿರೋ ವ್ಯಕ್ತಿ ಹತ್ರ ಮಾತಾಡೋಕೆ ಅವ್ರು, ನೀವು ಇಬ್ರೂ ನಂಬುವಂಥ ಯಾವ ವಿಷ್ಯಗಳಿರಬಹುದು?

9 ದೇವ್ರಲ್ಲಿ ತುಂಬ ನಂಬಿಕೆ ಇರೋ ವ್ಯಕ್ತಿ ಹತ್ರ ನೀವು ಯಾವ ವಿಷ್ಯದ ಬಗ್ಗೆ ಮಾತಾಡ್ಬಹುದು? ನೀವು ನಂಬುವಂಥ ಯಾವ ವಿಷ್ಯವನ್ನು ಅವ್ರೂ ನಂಬ್ತಾರೆ ಅಂತ ಕಂಡುಹಿಡಿಯೋಕೆ ಪ್ರಯತ್ನಿಸಿ. ಆ ವ್ಯಕ್ತಿ ಒಂದೇ ದೇವ್ರನ್ನು ಆರಾಧಿಸುತ್ತಿರಬಹುದು ಅಥವಾ ಯೇಸು ಇಡೀ ಮಾನವಕುಲಕ್ಕೆ ರಕ್ಷಕನಾಗಿದ್ದಾನೆ ಅಂತ ನೆನಸುತ್ತಿರಬಹುದು ಅಥವಾ ದುಷ್ಟತನ ಬೇಗ ಕೊನೆಯಾಗುತ್ತೆ ಅಂತ ನಂಬಿರಬಹುದು. ಇಂಥ ವಿಷ್ಯಗಳ ಬಗ್ಗೆ ಗೊತ್ತಾದ್ರೆ ಅವುಗಳ ಬಗ್ಗೆ ಮಾತಾಡ್ತಾ ಅವ್ರಿಗೆ ಇಷ್ಟ ಆಗೋ ರೀತಿಯಲ್ಲಿ ಬೈಬಲ್‌ ಸಂದೇಶವನ್ನು ತಿಳಿಸಿ.

10. ನಾವೇನು ತಿಳುಕೊಳ್ಳೋಕೆ ಪ್ರಯತ್ನಿಸ್ಬೇಕು? ಮತ್ತು ಯಾಕೆ?

10 ನೆನಪಿಡಿ, ಜನ್ರು ತಮ್ಮ ಧರ್ಮದಲ್ಲಿರುವ ಎಲ್ಲಾ ಬೋಧನೆಗಳನ್ನು ನಂಬ್ತಾರೆ ಅಂತ ಹೇಳೋಕಾಗಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಯಾವ ಧರ್ಮದವರು ಅಂತ ನೀವು ತಿಳ್ಕೊಂಡ ಮೇಲೆ ಅವ್ರು ಏನನ್ನು ನಂಬ್ತಾರೆ ಅಂತನೂ ತಿಳುಕೊಳ್ಳೋಕೆ ಪ್ರಯತ್ನಿಸಿ. ಆಸ್ಟ್ರೇಲಿಯದಲ್ಲಿರುವ ವಿಶೇಷ ಪಯನೀಯರರಾದ ಡೇವಿಡ್‌ ಹೀಗೆ ಹೇಳ್ತಾರೆ: “ಈಗ ಅನೇಕರು ಧರ್ಮವನ್ನು ಮಾತ್ರವಲ್ಲ ಮಾನವ ಕಲ್ಪಿತ ತತ್ವಜ್ಞಾನವನ್ನೂ ನಂಬ್ತಾರೆ.” ಅಲ್ಬೇನಿಯದ ಡೊನಾಲ್ಟಾ ಹೀಗೆ ಹೇಳ್ತಾಳೆ: “ಕೆಲವ್ರು ತಾವು ಇಂಥ ಧರ್ಮಕ್ಕೆ ಸೇರಿದವ್ರು ಅಂತ ಮೊದ್ಲು ನಮಗೆ ತಿಳಿಸ್ತಾರೆ. ಆದ್ರೆ ನಂತ್ರ ತಮ್ಗೆ ದೇವ್ರಲ್ಲಿ ನಂಬಿಕೆನೇ ಇಲ್ಲ ಅಂತ ಹೇಳ್ತಾರೆ.” ಅನೇಕರು ತಾವು ತ್ರಿಯೇಕ ದೇವರನ್ನು ನಂಬ್ತೀವಿ ಅಂತ ಹೇಳಿಕೊಳ್ತಾರೆ. ಆದ್ರೆ ನಿಜವಾಗ್ಲೂ ಅವ್ರಿಗೆ ತಂದೆ, ಮಗ, ಪವಿತ್ರಾತ್ಮ ಒಂದೇ ಅನ್ನೋದ್ರಲ್ಲಿ ನಂಬಿಕೆ ಇರೋದಿಲ್ಲ. “ಇಂಥ ವ್ಯಕ್ತಿಗಳು ಸಿಕ್ಕಿದಾಗ ಅವ್ರು ತಮ್ಮ ಧರ್ಮದಲ್ಲಿರುವ ಎಲ್ಲಾ ಬೋಧನೆಗಳನ್ನು ಒಪ್ಪಲ್ಲ ಅನ್ನೋದನ್ನು ಮನಸ್ಸಲ್ಲಿಟ್ಟು ಅವ್ರು ನಾನು ಇಬ್ರೂ ನಂಬುವಂಥ ವಿಷ್ಯದ ಬಗ್ಗೆ ಮಾತಾಡ್ತೀನಿ” ಅಂತ ಅರ್ಜೆಂಟೀನದಲ್ಲಿರುವ ಮಿಷನರಿ ಸಹೋದರ ಹೇಳ್ತಾರೆ. ಹಾಗಾಗಿ ಜನ್ರು ನಿಜವಾಗ್ಲೂ ಏನನ್ನು ನಂಬ್ತಾರೆ ಅನ್ನೋದನ್ನು ತಿಳುಕೊಳ್ಳೋಕೆ ಪ್ರಯತ್ನಿಸಿ. ಆಗ ನೀವು ಸಹ ಪೌಲನ ತರ ‘ಎಲ್ಲ ರೀತಿಯ ಜನರಿಗೆ ಎಲ್ಲವೂ ಆಗುತ್ತೀರಿ.’—1 ಕೊರಿಂ. 9:19-23.

ಜನ್ರಿಗೆ ಯಾವುದ್ರಲ್ಲಿ ಆಸಕ್ತಿ ಇದೆ?

11. ಅಪೊಸ್ತಲರ ಕಾರ್ಯಗಳು 14:14-17 ರಲ್ಲಿರುವ ಪ್ರಕಾರ ಲುಸ್ತ್ರದಲ್ಲಿದ್ದ ಜನ್ರಿಗೆ ಇಷ್ಟ ಆಗುವಂಥ ರೀತಿಯಲ್ಲಿ ಪೌಲನು ಹೇಗೆ ಸುವಾರ್ತೆ ಸಾರಿದನು?

11 ಅಪೊಸ್ತಲರ ಕಾರ್ಯಗಳು 14:14-17 ಓದಿ. ಪೌಲ ಜನ್ರಿಗೆ ಯಾವುದರಲ್ಲಿ ಆಸಕ್ತಿ ಇದೆ ಅನ್ನೋದನ್ನು ತಿಳುಕೊಂಡು ತನ್ನ ಮಾತನ್ನು ಹೊಂದಿಸಿಕೊಳ್ಳುತ್ತಿದ್ದನು. ಉದಾಹರಣೆಗೆ, ಲುಸ್ತ್ರದಲ್ಲಿದ್ದ ಜನ್ರಿಗೆ ಶಾಸ್ತ್ರಗ್ರಂಥದ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಅವ್ರಿಗೆ ಚೆನ್ನಾಗಿ ಅರ್ಥವಾಗುವಂಥ ವಿಷ್ಯಗಳ ಬಗ್ಗೆ ಮಾತಾಡಿದನು. ಆತನು ಅವ್ರ ಹತ್ರ ಸುಗ್ಗೀಕಾಲದ ಬಗ್ಗೆ, ಜೀವನವನ್ನ ಆನಂದಿಸುವ ಸಾಮರ್ಥ್ಯವನ್ನಿಟ್ಟು ದೇವ್ರು ನಮ್ಮನ್ನು ಸೃಷ್ಟಿಮಾಡಿರೋದರ ಬಗ್ಗೆ ಮಾತಾಡಿದನು. ಆತನು ಉಪಯೋಗಿಸಿದ ಪದಗಳು ಮತ್ತು ಉದಾಹರಣೆಗಳು ಅಲ್ಲಿನ ಜನ್ರಿಗೆ ಸುಲಭವಾಗಿ ಅರ್ಥ ಆಗೋ ತರ ಇತ್ತು.

12. ನಾವು ಹೇಗೆ ಒಬ್ಬ ವ್ಯಕ್ತಿಗೆ ಯಾವ ವಿಷ್ಯದಲ್ಲಿ ಆಸಕ್ತಿ ಇದೆ ಅಂತ ತಿಳುಕೊಂಡು ಅದಕ್ಕೆ ತಕ್ಕ ಹಾಗೆ ನಮ್ಮ ಮಾತನ್ನು ಹೊಂದಿಸಿಕೊಳ್ಳಬಹುದು?

12 ನಿಮ್ಮ ಟೆರಿಟೊರಿಯಲ್ಲಿರುವ ಜನ್ರಿಗೆ ಯಾವ ವಿಷ್ಯದ ಬಗ್ಗೆ ಆಸಕ್ತಿ ಇದೆ ಅನ್ನೋದನ್ನು ವಿವೇಚನೆಯಿಂದ ತಿಳುಕೊಳ್ಳಿ ಮತ್ತು ಅದಕ್ಕೆ ತಕ್ಕಂತೆ ನಿಮ್ಮ ಮಾತನ್ನು ಹೊಂದಿಸಿಕೊಳ್ಳಿ. ಒಬ್ಬ ವ್ಯಕ್ತಿಯನ್ನು ಅಥವಾ ಅವನ ಮನೆಯನ್ನು ನೋಡಿ ಆ ವ್ಯಕ್ತಿಗೆ ಯಾವ ವಿಷ್ಯದಲ್ಲಿ ಆಸಕ್ತಿ ಇದೆ ಅನ್ನೋದನ್ನು ಕಂಡುಹಿಡಿಯೋದು ಹೇಗೆ? ಚೆನ್ನಾಗಿ ಗಮನಿಸಿ. ನೀವು ಭೇಟಿಯಾದ ವ್ಯಕ್ತಿ ತೋಟದಲ್ಲಿ ಕೆಲ್ಸ ಮಾಡ್ತಿರಬಹುದು, ಪುಸ್ತಕ ಓದುತ್ತಿರಬಹುದು, ಗಾಡಿಯನ್ನು ರಿಪೇರಿ ಮಾಡ್ತಿರಬಹುದು ಅಥವಾ ಬೇರೆ ಏನಾದ್ರೂ ಕೆಲ್ಸ ಮಾಡ್ತಿರಬಹುದು. ಅವನು ಮಾಡುತ್ತಿರುವ ಕೆಲ್ಸದ ಬಗ್ಗೆನೇ ಅವನ ಹತ್ರ ಮಾತು ಶುರು ಮಾಡಿ. (ಯೋಹಾ. 4:7) ಒಬ್ಬ ವ್ಯಕ್ತಿಯ ಬಟ್ಟೆ ನೋಡಿ ಕೂಡ ಅವನ ಬಗ್ಗೆ ತಿಳುಕೊಳ್ಳಬಹುದು. ಉದಾಹರಣೆಗೆ, ಅವನು ಯಾವ ದೇಶದವನು, ಏನು ಕೆಲ್ಸ ಮಾಡ್ತಾನೆ ಮತ್ತು ಅವನಿಗೆ ಯಾವ ಕ್ರೀಡೆ ಅಥವಾ ಯಾವ ಕ್ರೀಡಾ ತಂಡ ಇಷ್ಟ ಅನ್ನೋದನ್ನು ಕೂಡ ತಿಳುಕೊಳ್ಳಬಹುದು. ಗಸ್ಟಾವೋ ಎಂಬ ಸಹೋದರ ಹೀಗೆ ಹೇಳ್ತಾರೆ: “ನಾನು ಒಮ್ಮೆ 19 ವರ್ಷದ ಹುಡುಗನನ್ನು ಭೇಟಿಯಾದೆ. ಅವನ ಟಿ-ಷರ್ಟ್‌ನಲ್ಲಿ ಪ್ರಸಿದ್ಧ ಹಾಡುಗಾರನ ಚಿತ್ರ ಇತ್ತು. ಅದ್ರ ಬಗ್ಗೆ ಅವನ ಹತ್ರ ಕೇಳಿದೆ. ಆಗ ಅವನು ಆ ಹಾಡುಗಾರ ಯಾಕೆ ಇಷ್ಟ ಅಂತ ಹೇಳಿದ. ಹೀಗೆ ಮಾತಾಡ್ತಾ ಮಾತಾಡ್ತಾ ಕೊನೆಗೆ ಅವನು ಬೈಬಲ್‌ ಕಲಿಯೋಕೆ ಒಪ್ಪಿಕೊಂಡ. ಈಗ ಅವನು ನಮ್ಮ ಸಹೋದರನಾಗಿದ್ದಾನೆ.”

13. ಜನ್ರು ಬೈಬಲ್‌ ಸ್ಟಡಿಗೆ ಒಪ್ಪಿಕೊಳ್ಳೋ ತರ ನೀವು ಹೇಗೆ ಮಾತಾಡ್ಬಹುದು?

13 ನೀವು ಯಾರಿಗಾದ್ರೂ ಮೊದಲ ಬಾರಿಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳುವಾಗ ಏನು ಹೇಳಿದ್ರೆ ಅವ್ರು ಬೈಬಲ್‌ ಕಲಿಯೋಕೆ ಒಪ್ಪಿಕೊಳ್ಳಬಹುದು ಅನ್ನೋದನ್ನು ಯೋಚಿಸಿ ಮಾತಾಡಿ. ಬೈಬಲ್‌ ಕಲಿಯೋದ್ರಿಂದ ಏನು ಪ್ರಯೋಜನವಿದೆ ಅನ್ನೋದನ್ನು ಅರ್ಥಮಾಡಿಸಿ. (ಯೋಹಾ. 4:13-15) ಉದಾಹರಣೆಗೆ, ಹೆಸ್ಟರ್‌ ಎಂಬ ಸಹೋದರಿ ಸ್ತ್ರೀಯೊಬ್ಬಳಿಗೆ ಸುವಾರ್ತೆ ಸಾರಿದಾಗ ಅವಳು ಸಹೋದರಿಯನ್ನು ಮನೆಯೊಳಗೆ ಕರೆದಳು. ಗೋಡೆ ಮೇಲಿದ್ದ ಸರ್ಟಿಫಿಕೇಟನ್ನು ನೋಡಿದಾಗ ಆ ಸ್ತ್ರೀ ಪ್ರೊಫೆಸರ್‌ ಅಂತ ಸಹೋದರಿಗೆ ಗೊತ್ತಾಯ್ತು. ಆಗ ಸಹೋದರಿ ನಾವು ಸಹ ಜನ್ರಿಗೆ ಶಿಕ್ಷಣ ಕೊಡ್ತೇವೆ, ಅವರನ್ನ ಖುದ್ದಾಗಿ ಭೇಟಿ ಮಾಡಿ ಮತ್ತು ಕೂಟಗಳಲ್ಲಿ ಬೈಬಲ್‌ ಬಗ್ಗೆ ಕಲಿಸ್ತೀವಿ ಅಂತ ಒತ್ತಿಹೇಳಿದ್ರು. ಆ ಸ್ತ್ರೀ ಬೈಬಲ್‌ ಕಲಿಯೋಕೆ ಒಪ್ಪಿಕೊಂಡಳು, ಮಾರನೇ ದಿನನೇ ಕೂಟಕ್ಕೂ ಹೋದಳು. ಆಮೇಲೆ ಸರ್ಕಿಟ್‌ ಸಮ್ಮೇಳನಕ್ಕೆ ಹಾಜರಾದಳು. ಒಂದು ವರ್ಷದ ನಂತ್ರ ಅವಳಿಗೆ ದೀಕ್ಷಾಸ್ನಾನ ಆಯ್ತು. ನೀವು ಈ ಪ್ರಶ್ನೆ ಕೇಳಿಕೊಳ್ಳಿ: ‘ನಾನು ಪುನರ್ಭೇಟಿ ಮಾಡೋ ಜನ್ರಿಗೆ ಯಾವ ವಿಷ್ಯದಲ್ಲಿ ಆಸಕ್ತಿ ಇದೆ? ಅವ್ರು ಬೈಬಲ್‌ ಸ್ಟಡಿಗೆ ಒಪ್ಪಿಕೊಳ್ಳೋ ತರ ನಾನು ಹೇಗೆ ಮಾತಾಡ್ಬಹುದು?’

14. ಪ್ರತಿ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಹೇಗೆ ಬೈಬಲ್‌ ಸ್ಟಡಿ ಮಾಡ್ಬಹುದು?

14 ಬೈಬಲ್‌ ಸ್ಟಡಿ ಶುರು ಮಾಡಿದ ಮೇಲೆ ಪ್ರತಿ ಸಲ ಸ್ಟಡಿಗೆ ಹೋಗೋ ಮುಂಚೆ ಚೆನ್ನಾಗಿ ತಯಾರಿ ಮಾಡಿ. ನಿಮ್ಮ ವಿದ್ಯಾರ್ಥಿಯ ಕುಟುಂಬ, ವಿದ್ಯಾಭ್ಯಾಸ, ಅವ್ರಿಗಿರೋ ಅನುಭವ, ಅವ್ರಿಗೆ ಯಾವ ವಿಷ್ಯದಲ್ಲಿ ಆಸಕ್ತಿ ಇದೆ ಅನ್ನೋದನ್ನು ಯೋಚಿಸಿ. ಯಾವ ವಚನಗಳನ್ನು ಓದಬೇಕಂತಿದ್ದೀರಿ, ಯಾವ ವಿಡಿಯೋ ತೋರಿಸಬೇಕಂತಿದ್ದೀರಿ ಮತ್ತು ಬೈಬಲ್‌ ಸತ್ಯವನ್ನು ವಿವರಿಸೋಕೆ ಯಾವ ಉದಾಹರಣೆ ಬಳಸಬೇಕಂತಿದ್ದೀರಿ ಅನ್ನೋದನ್ನು ತಯಾರಿ ಮಾಡ್ವಾಗ ನಿರ್ಧರಿಸಿ. ‘ವಿದ್ಯಾರ್ಥಿಗೆ ಯಾವ ವಿಷ್ಯ ಹೇಳಿದ್ರೆ ಇಷ್ಟ ಆಗುತ್ತೆ, ಹೃದಯಕ್ಕೆ ನಾಟುತ್ತೆ’ ಅಂತ ಕೇಳಿಕೊಳ್ಳಿ. (ಜ್ಞಾನೋ. 16:23) ಅಲ್ಬೇನಿಯದ ಫ್ಲೋರ ಎಂಬ ಪಯನೀಯರ್‌ ಸಹೋದರಿ ಹತ್ರ ಬೈಬಲ್‌ ಕಲಿಯುತ್ತಿದ್ದ ಸ್ತ್ರೀಯೊಬ್ಬಳು “ನಾನಂತೂ ಸತ್ತವ್ರು ಪುನಃ ಜೀವಂತವಾಗಿ ಎದ್ದುಬರ್ತಾರೆ ಅನ್ನೋದನ್ನ ನಂಬಲ್ಲ” ಅಂತ ಕಡ್ಡಿ ಮುರಿದಂಗೆ ಹೇಳಿಬಿಟ್ಟಳು. ಆಗ ಫ್ಲೋರ ಇದನ್ನು ಆ ಸ್ತ್ರೀ ನಂಬಲೇ ಬೇಕು ಅಂತ ಒತ್ತಾಯ ಮಾಡೋಕೆ ಹೋಗಲಿಲ್ಲ. “ಸತ್ತವ್ರನ್ನ ಎಬ್ಬಿಸ್ತೀನಿ ಅಂತ ಮಾತು ಕೊಟ್ಟಿರೋ ದೇವ್ರ ಬಗ್ಗೆ ಮೊದ್ಲು ಆಕೆ ಚೆನ್ನಾಗಿ ತಿಳುಕೊಳ್ಳಲಿ ಅಂತ ಅಂದುಕೊಂಡೆ” ಎಂದು ಫ್ಲೋರ ಹೇಳ್ತಾರೆ. ಅಲ್ಲಿಂದ ಪ್ರತಿ ಸಲ ಸ್ಟಡಿ ಮಾಡ್ವಾಗ ಫ್ಲೋರ ಯೆಹೋವನ ಪ್ರೀತಿ, ವಿವೇಕ ಮತ್ತು ಶಕ್ತಿ ಬಗ್ಗೆ ಹೆಚ್ಚು ಒತ್ತು ಕೊಟ್ರು. ಇದ್ರಿಂದಾಗಿ ಅವ್ರ ವಿದ್ಯಾರ್ಥಿ ಸತ್ತವ್ರು ಪುನಃ ಜೀವಂತವಾಗಿ ಎದ್ದುಬರ್ತಾರೆ ಅನ್ನೋದನ್ನ ನಂಬೋಕೆ ಶುರುಮಾಡಿದಳು. ಈಗ ಅವಳು ಯೆಹೋವನ ಸಾಕ್ಷಿಯಾಗಿ ಹುರುಪಿನಿಂದ ಸೇವೆ ಮಾಡ್ತಿದ್ದಾಳೆ.

ಜನ್ರು ಯೇಸುವಿನ ಶಿಷ್ಯರಾಗ್ತಾರೆ ಅಂತ ನಂಬಿ

15. (ಎ) ಅಪೊಸ್ತಲರ ಕಾರ್ಯಗಳು 17:16-18 ರ ಪ್ರಕಾರ ಅಥೆನ್ಸಿನ ಜನ್ರು ಮಾಡ್ತಿದ್ದ ಯಾವ ವಿಷ್ಯ ನೋಡಿ ಪೌಲನಿಗೆ ಕಿರಿಕಿರಿ ಆಯ್ತು? (ಬಿ) ಆದ್ರೂ ಆತನು ಯಾಕೆ ಅವ್ರಿಗೆ ಸುವಾರ್ತೆ ಸಾರಿದನು?

15 ಅಪೊಸ್ತಲರ ಕಾರ್ಯಗಳು 17:16-18 ಓದಿ. ಅಥೆನ್ಸಿನ ಜನ್ರು ವಿಗ್ರಹಾರಾಧನೆ, ಲೈಂಗಿಕ ಅನೈತಿಕತೆಯಲ್ಲಿ ಮುಳುಗಿ ಹೋಗಿದ್ರು ಮತ್ತು ವಿಧರ್ಮಿ ತತ್ವಗಳನ್ನು ನಂಬುತ್ತಿದ್ದರು. ಆದ್ರೂ ಪೌಲನು ‘ಅವ್ರು ಯೇಸುವಿನ ಶಿಷ್ಯರಾಗಲ್ಲ’ ಅಂತ ಯೋಚಿಸಲಿಲ್ಲ. ಅಷ್ಟೇ ಅಲ್ಲ ಅವ್ರು ಅವಮಾನ ಮಾಡಿದ್ರೂ ಅವ್ರಿಗೆ ಸುವಾರ್ತೆ ಸಾರೋದನ್ನು ನಿಲ್ಲಿಸಲಿಲ್ಲ. ಯಾಕಂದ್ರೆ ಪೌಲ ಸಹ ಕ್ರೈಸ್ತನಾಗೋ ಮುಂಚೆ “ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ” ಆಗಿದ್ದ. (1 ತಿಮೊ. 1:13) ‘ಪೌಲ ತನ್ನ ಶಿಷ್ಯನಾಗುತ್ತಾನೆ’ ಅಂತ ಯೇಸು ಯೋಚಿಸಿದ ತರಾನೇ ‘ಅಥೆನ್ಸಿನ ಜನ್ರು ಯೇಸುವಿನ ಶಿಷ್ಯರಾಗ್ತಾರೆ’ ಅಂತ ಪೌಲ ಯೋಚಿಸಿದನು. ಆತನಿಟ್ಟ ನಂಬಿಕೆ ಸುಳ್ಳಾಗಲಿಲ್ಲ.—ಅ. ಕಾ. 9:13-15; 17:34.

16-17. ಎಲ್ಲಾ ಹಿನ್ನೆಲೆಯ ಜನ್ರು ಯೇಸುವಿನ ಶಿಷ್ಯರಾಗಬಹುದು ಅಂತ ಹೇಗೆ ಹೇಳ್ತೀರಿ? ಉದಾಹರಣೆ ಕೊಡಿ.

16 ಒಂದನೇ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರು ಬೇರೆ-ಬೇರೆ ಹಿನ್ನೆಲೆಯಿಂದ ಬಂದಿದ್ದರು. ಗ್ರೀಕ್‌ ಪಟ್ಟಣವಾದ ಕೊರಿಂಥದ ಸಭೆಯಲ್ಲಿದ್ದ ಕೆಲವು ಸದಸ್ಯರು ಹಿಂದೆ ಪಾತಕಿಗಳಾಗಿದ್ದರು, ಯಾರೂ ಕಂಡುಕೇಳರಿಯದಂಥ ಅನೈತಿಕ ಜೀವನವನ್ನು ನಡೆಸುವವರಾಗಿದ್ದರು ಅಂತ ಪೌಲನು ಅವರಿಗೆ ಪತ್ರ ಬರೆದಾಗ ತಿಳಿಸಿದನು. ನಂತ್ರ ಆತನು ಹೀಗೆ ಹೇಳಿದನು: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ನೀವು ತೊಳೆದು ಶುದ್ಧೀಕರಿಸಲ್ಪಟ್ಟಿದ್ದೀರಿ.” (1 ಕೊರಿಂ. 6:9-11) ನೀವು ಅಲ್ಲಿ ಇದ್ದಿದ್ರೆ ಆ ಜನ್ರು ಬದಲಾವಣೆ ಮಾಡಿಕೊಂಡು ಯೇಸುವಿನ ಶಿಷ್ಯರಾಗ್ತಾರೆ ಅಂತ ನೆನಸ್ತಿದ್ರಾ?

17 ಇಂದು ಅನೇಕ ಜನ್ರು ಯೇಸುವಿನ ಶಿಷ್ಯರಾಗಲಿಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ, ಎಲ್ಲಾ ಹಿನ್ನೆಲೆಯ ಜನ್ರು ಬೈಬಲ್‌ ಸಂದೇಶವನ್ನು ಇಷ್ಟಪಡ್ತಾರೆ ಅನ್ನೋದನ್ನು ಆಸ್ಟ್ರೇಲಿಯದಲ್ಲಿರುವ ಯೂಕಿನ ಎಂಬ ವಿಶೇಷ ಪಯನೀಯರ್‌ ಸಹೋದರಿ ಅನುಭವದಿಂದ ತಿಳುಕೊಂಡಿದ್ದಾಳೆ. ಒಂದ್ಸಲ ಆಕೆ ರಿಯಲ್‌ ಎಸ್ಟೇಟ್‌ ಕಚೇರಿಯಲ್ಲಿದ್ದಾಗ ಟ್ಯಾಟೂ ಹಾಕಿಕೊಂಡು, ಲೂಸಾದ ಬಟ್ಟೆ ಧರಿಸಿದ್ದ ಒಬ್ಬ ಸ್ತ್ರೀಯನ್ನು ಗಮನಿಸಿದಳು. ‘ಅವಳ ಹತ್ರ ಹೋಗಿ ಹೇಗಪ್ಪಾ ಮಾತಾಡೋದು?’ ಅಂತ ಸಹೋದರಿಗೆ ಅನಿಸಿತು. ಆದ್ರೆ ನಂತ್ರ ಆಕೆ ಹತ್ರ ಮಾತಾಡಿದಳು. ಆಮೇಲೆ ಆಕೆಗೆ ಬೈಬಲ್‌ ಬಗ್ಗೆ ಆಸಕ್ತಿ ಇದೆ, ಅವಳು ಹಾಕಿಕೊಂಡಿರೋ ಟ್ಯಾಟೂನಲ್ಲಿ ಕೀರ್ತನೆ ಪುಸ್ತಕದ ಕೆಲವು ವಚನಗಳಿವೆ ಅನ್ನೋದು ಸಹೋದರಿಗೆ ಗೊತ್ತಾಯಿತು. ನಂತ್ರ ಆ ಸ್ತ್ರೀ ಬೈಬಲ್‌ ಕಲಿಯೋಕೆ, ಕೂಟಗಳಿಗೆ ಹಾಜರಾಗೋಕೆ ಶುರುಮಾಡಿದಳು. *

18. ನಾವ್ಯಾಕೆ ಜನ್ರ ಬಗ್ಗೆ ತೀರ್ಪು ಮಾಡಬಾರದು?

18 ತುಂಬ ಜನ ತನ್ನನ್ನು ಹಿಂಬಾಲಿಸ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡು ಯೇಸು ಹೊಲ ಕೊಯ್ಲಿಗಾಗಿ ಸಿದ್ಧವಾಗಿದೆ ಅಂತ ಯೋಚಿಸಿದನಾ? ಖಂಡಿತ ಇಲ್ಲ. ಬೆರಳಣಿಕೆಯಷ್ಟು ಜನ್ರು ಮಾತ್ರ ಆತನನ್ನು ನಂಬ್ತಾರೆ ಅಂತ ಮೊದಲೇ ತಿಳಿಸಲಾಗಿತ್ತು. (ಯೋಹಾ. 12:37, 38) ಯೇಸುವಿಗೆ ಜನ್ರ ಹೃದಯದಲ್ಲೇನಿದೆ ಅಂತ ತಿಳುಕೊಳ್ಳುವ ಸಾಮರ್ಥ್ಯ ಇತ್ತು. (ಮತ್ತಾ. 9:4) ಆತನಲ್ಲಿ ಕೆಲವರೇ ನಂಬಿಕೆ ಇಟ್ರೂ ಆತನು ಎಲ್ರಿಗೂ ಹುರುಪಿನಿಂದ ಸುವಾರ್ತೆ ಸಾರಿದನು. ಹಾಗಂದ ಮೇಲೆ ಬೇರೆಯವ್ರ ಹೃದಯದಲ್ಲೇನಿದೆ ಅಂತ ತಿಳುಕೊಳ್ಳುವ ಸಾಮರ್ಥ್ಯ ಇಲ್ಲದಿರುವ ನಾವು ಒಬ್ಬ ವ್ಯಕ್ತಿ ಬಗ್ಗೆ ಆಗಲಿ, ಟೆರಿಟೊರಿಯಲ್ಲಿರುವ ಜನ್ರ ಬಗ್ಗೆ ಆಗಲಿ ‘ಇವ್ರು ಯಾವತ್ತಿಗೂ ಸತ್ಯಕ್ಕೆ ಬರಲ್ಲ’ ಅಂತ ತೀರ್ಪು ಮಾಡಿಬಿಡಬಾರದು. ಬದಲಿಗೆ, ‘ಇವ್ರು ಒಂದಲ್ಲ ಒಂದು ದಿನ ಯೇಸುವಿನ ಶಿಷ್ಯರಾಗ್ತಾರೆ’ ಅಂತ ಯೋಚಿಸಬೇಕು. ಬುರ್ಕಿನಾ ಫಾಸೊದಲ್ಲಿರುವ ಮಾರ್ಕ್‌ ಎಂಬ ಮಿಷನರಿ ಸಹೋದರ ಈ ರೀತಿ ಹೇಳ್ತಾರೆ: “ಯಾರು ಪ್ರಗತಿ ಮಾಡ್ತಾರೆ ಅಂತ ನಾನು ಅಂದುಕೊಂಡಿದ್ದೆನೋ ಅವ್ರು ಸತ್ಯ ಕಲಿಯೋದನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ, ಆದ್ರೆ ಯಾರು ಪ್ರಗತಿ ಮಾಡಲ್ಲ ಅಂತ ಅಂದುಕೊಂಡಿದ್ದೆನೋ ಅವ್ರು ಪ್ರಗತಿ ಮಾಡಿದ್ದಾರೆ. ಹಾಗಾಗಿ ಸತ್ಯ ಕಲಿಯೋಕೆ ಯಾರು ಹಂಬಲಿಸ್ತಿದ್ದಾರೋ ಅವ್ರನ್ನು ಹುಡುಕೋದ್ರಲ್ಲಿ ಯೆಹೋವನ ಪವಿತ್ರಾತ್ಮ ನನ್ನನ್ನು ಮಾರ್ಗದರ್ಶಿಸೋಕೆ ಬಿಡಬೇಕು ಅಂತ ಕಲಿತಿದ್ದೇನೆ.”

19. ನಮ್ಮ ಟೆರಿಟೊರಿಯಲ್ಲಿರುವ ಜನ್ರ ಬಗ್ಗೆ ನಮ್ಗೆ ಎಂಥ ಅಭಿಪ್ರಾಯ ಇರಬೇಕು?

19 ನಮ್ಮ ಟೆರಿಟೊರಿಯಲ್ಲಿರುವ ಜನ್ರನ್ನು ನೋಡಿದ ತಕ್ಷಣ ಅವ್ರು ಕೊಯ್ಲಿಗೆ ಸಿದ್ಧವಾಗಿರುವ ಬೆಳೆ ತರ ಇಲ್ಲ ಅಂತ ನಮಗನಿಸಬಹುದು. ಆದ್ರೆ ಯೇಸು ತನ್ನ ಶಿಷ್ಯರಿಗೆ ಏನು ಹೇಳಿದ್ನು ಅನ್ನೋದನ್ನು ಮರೆಯಬೇಡಿ. ಹೊಲವು ಕೊಯ್ಲಿಗಾಗಿ ಸಿದ್ಧವಾಗಿದೆ ಅಂತ ಹೇಳಿದ್ನು. ಜನ್ರು ಬದಲಾಗಬಹುದು ಮತ್ತು ಕ್ರಿಸ್ತನ ಶಿಷ್ಯರಾಗಬಹುದು. ‘ಜನ್ರು ಯೇಸುವಿನ ಶಿಷ್ಯರಾಗ್ತಾರೆ’ ಅಂತ ಯೆಹೋವನು ನಂಬ್ತಾನೆ ಮತ್ತು ಅವರನ್ನು “ಇಷ್ಟವಸ್ತುಗಳು” ಅಥವಾ ಅಮೂಲ್ಯರನ್ನಾಗಿ ನೋಡ್ತಾನೆ. (ಹಗ್ಗಾ. 2:7) ನಾವು ಸಹ ಯೆಹೋವ ಮತ್ತು ಯೇಸುವಿನ ತರ ಜನ್ರನ್ನು ನೋಡೋದಾದ್ರೆ ಅವರ ಹಿನ್ನೆಲೆ ಬಗ್ಗೆ ತಿಳುಕೊಳ್ಳುತ್ತೇವೆ, ಅವ್ರಿಗೆ ಯಾವುದರಲ್ಲಿ ಆಸಕ್ತಿ ಇದೆ ಅನ್ನೋದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಅವ್ರು ಸತ್ಯ ಕಲಿಯಲ್ಲ ಅಂತ ಯೋಚಿಸಲ್ಲ, ಬದಲಿಗೆ ‘ಇವ್ರು ನಮ್ಮ ಸಹೋದರ-ಸಹೋದರಿ ಆಗ್ತಾರೆ’ ಅಂತ ನೋಡ್ತೇವೆ.

ಗೀತೆ 142 ಎಲ್ಲ ರೀತಿಯ ಜನರಿಗೆ ಸಾರಿ

^ ಪ್ಯಾರ. 5 ನಮ್ಮ ಟೆರಿಟೊರಿಯಲ್ಲಿರುವ ಜನ್ರ ಬಗ್ಗೆ ನಮಗಿರೋ ಅಭಿಪ್ರಾಯ ನಾವು ಅವ್ರಿಗೆ ಸಾರುವ ಮತ್ತು ಕಲಿಸುವ ರೀತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಯೇಸು ಮತ್ತು ಅಪೊಸ್ತಲ ಪೌಲನಿಗೆ ತಾವು ಮಾತಾಡ್ತಿದ್ದ ಜನ್ರ ಬಗ್ಗೆ ಯಾವ ಅಭಿಪ್ರಾಯ ಇತ್ತು, ಅವ್ರಿಬ್ಬರೂ ಆ ಜನರ ನಂಬಿಕೆ, ಆಸಕ್ತಿ ಮತ್ತು ‘ಮುಂದೆ ಅವರು ಶಿಷ್ಯರಾಗುತ್ತಾರೆ’ ಅನ್ನೋದನ್ನು ಮನ್ಸಲ್ಲಿಟ್ಟು ಹೇಗೆ ಮಾತಾಡಿದ್ರು ಅನ್ನೋದನ್ನು ನಾವು ಈ ಲೇಖನದಲ್ಲಿ ನೋಡಲಿದ್ದೇವೆ. ಅಷ್ಟೇ ಅಲ್ಲ, ನಾವು ಅವರಿಬ್ರನ್ನು ಹೇಗೆ ಅನುಕರಿಸಬಹುದು ಅಂತನೂ ಕಲಿಯಲಿದ್ದೇವೆ.

^ ಪ್ಯಾರ. 17ಬದುಕು ಬದಲಾದ ವಿಧ” ಎಂಬ ಸರಣಿಯಲ್ಲಿ ಜನ್ರು ಹೇಗೆ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸುವ ತುಂಬ ಉದಾಹರಣೆಗಳಿವೆ. ಇದು 2017 ರವರೆಗೆ ಕಾವಲಿನಬುರುಜು ಪತ್ರಿಕೆಯಲ್ಲಿ ಬಂತು. ಈಗ jw.org® ವೆಬ್‌ಸೈಟ್‌ನಲ್ಲಿ ಸಿಗುತ್ತದೆ. ಇದಕ್ಕಾಗಿ ನಮ್ಮ ಬಗ್ಗೆ > ಅನುಭವಗಳು ನೋಡಿ.

^ ಪ್ಯಾರ. 57 ಚಿತ್ರ ವಿವರಣೆ: ಒಬ್ಬ ದಂಪತಿ ಮನೆ-ಮನೆ ಸೇವೆ ಮಾಡ್ತಿದ್ದಾರೆ. ಅವ್ರು ಮೊದಲನೇ ಮನೆ ಅಚ್ಚುಕಟ್ಟಾಗಿ ಇರೋದನ್ನು ಮತ್ತು ಮುಂದೆ ಸುಂದರ ಹೂ ತೋಟ ಇರೋದನ್ನು ನೋಡ್ತಾರೆ; ಎರಡನೇ ಮನೆಯಲ್ಲಿ ಚಿಕ್ಕ ಮಕ್ಕಳಿರೋದನ್ನು ಗಮನಿಸ್ತಾರೆ; ಮೂರನೇ ಮನೆ ನೀಟಾಗಿ ಇಲ್ಲದಿರೋದನ್ನು ಗಮನಿಸ್ತಾರೆ; ನಾಲ್ಕನೇ ಮನೆಯಲ್ಲಿ ಇರುವವ್ರಿಗೆ ಧರ್ಮದಲ್ಲಿ ನಂಬಿಕೆ ಇದೆ ಅಂತ ಗೊತ್ತಾಗುತ್ತೆ. ಯಾವ ಮನೆಯವ್ರು ‘ಯೇಸುವಿನ ಶಿಷ್ಯರಾಗ್ತಾರೆ’ ಅಂತ ನಿಮಗನಿಸುತ್ತೆ?