ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 15

ಯೇಸುವಿನ ಕೊನೆ ಮಾತುಗಳು ಕಲಿಸೋ ಪಾಠಗಳು

ಯೇಸುವಿನ ಕೊನೆ ಮಾತುಗಳು ಕಲಿಸೋ ಪಾಠಗಳು

“ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ. ಇವನ ಮಾತು ಕೇಳಿ.”—ಮತ್ತಾ. 17:5.

ಗೀತೆ 84 “ನನಗೆ ಮನಸ್ಸುಂಟು”

ಕಿರುನೋಟ *

1-2. ಯೇಸು ತನ್ನ ಕೊನೆ ಮಾತುಗಳನ್ನ ಆಡೋ ಮುಂಚೆ ಏನೆಲ್ಲಾ ಆಯಿತು ವಿವರಿಸ್ತೀರಾ?

ಕ್ರಿಸ್ತ ಶಕ 33ರ ನೈಸಾನ್‌ 14ರಂದು ಹಗಲು ಹೊತ್ತಲ್ಲಿ ನಡೆದ ಘಟನೆ. ಯೇಸು ಮೇಲೆ ಸುಳ್ಳಾರೋಪ ಹಾಕಿ ಮಾಡದೇ ಇರೋ ತಪ್ಪಿಗೆ ಅವನಿಗೆ ಮರಣ ಶಿಕ್ಷೆ ವಿಧಿಸಲಾಗಿದೆ. ಜನರು ಅವನಿಗೆ ಅವಮಾನ ಮಾಡಿ ಚಿತ್ರಹಿಂಸೆ ಕೊಟ್ಟು ಈಗ ಹಿಂಸಾ ಕಂಬಕ್ಕೆ ಜಡಿದಿದ್ದಾರೆ. ಅವನ ಕೈಕಾಲುಗಳಿಗೆ ಮೊಳೆ ಹೊಡೆದಿದ್ದಾರೆ. ಒಂದೊಂದು ಉಸಿರು ಎಳೆಯೋಕೂ ಯೇಸುಗೆ ತುಂಬ ಕಷ್ಟ ಆಗ್ತಿದೆ. ಮಾತಾಡೋಕಂತೂ ಇನ್ನೂ ಕಷ್ಟ ಆಗ್ತಿದೆ. ಆದರೂ ಅವನು ಮಾತಾಡುತ್ತಾನೆ. ಯಾಕಂದರೆ ತುಂಬ ಮುಖ್ಯವಾದ ವಿಷಯವನ್ನ ಹೇಳಬೇಕಾಗಿದೆ.

2 ಯೇಸು ಹಿಂಸಾ ಕಂಬದಲ್ಲಿ ಇನ್ನೇನು ಕೊನೆಯುಸಿರು ಎಳೆಯೋ ಸಮಯದಲ್ಲಿ ಆಡಿದ ಒಂದೊಂದು ಮಾತನ್ನೂ ಈಗ ಚರ್ಚಿಸೋಣ. ಅದರಿಂದ ನಾವು ಯಾವ ಪಾಠ ಕಲಿಬಹುದು ಅಂತ ನೋಡೋಣ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ‘ಅವನ ಮಾತು ಕೇಳೋಣ.’—ಮತ್ತಾ. 17:5.

“ಅಪ್ಪಾ, ಇವ್ರನ್ನ ಕ್ಷಮಿಸು”

3. “ಅಪ್ಪಾ, ಇವ್ರನ್ನ ಕ್ಷಮಿಸು” ಅಂತ ಯೇಸು ಯಾರಿಗೋಸ್ಕರ ಬೇಡಿಕೊಂಡನು?

3 ಯೇಸು ಏನು ಹೇಳಿದನು? ಯೇಸುವನ್ನ ಹಿಂಸಾ ಕಂಬಕ್ಕೆ ಜಡಿದಿದ್ದಾಗ “ಅಪ್ಪಾ, ಇವ್ರನ್ನ ಕ್ಷಮಿಸು” ಅಂತ ಯೆಹೋವ ದೇವರ ಹತ್ರ ಬೇಡಿಕೊಂಡನು. ಯಾರನ್ನ ಕ್ಷಮಿಸೋಕೆ ಬೇಡಿಕೊಂಡನು? ಅದನ್ನ ತಿಳುಕೊಳ್ಳೋಕೆ ಯೇಸುವಿನ ಮುಂದಿನ ಮಾತುಗಳನ್ನ ಗಮನಿಸಿ. ಅವನು ಹೇಳಿದ್ದು: “ಇವ್ರೇನು ಮಾಡ್ತಿದ್ದಾರೆ ಅಂತ ಇವ್ರಿಗೆ ಗೊತ್ತಿಲ್ಲ.” (ಲೂಕ 23:33, 34) ಇಲ್ಲಿ ಯೇಸು ‘ಇವರು’ ಅಂತ ಹೇಳಿದ್ದು ಅವನ ಕೈಕಾಲುಗಳಿಗೆ ಮೊಳೆ ಜಡಿದ ರೋಮಿನ ಸೈನಿಕರು ಇದ್ದಿರಬಹುದು. ಈ ಸೈನಿಕರಿಗೆ ಯೇಸು ದೇವರ ಮಗ ಅಂತ ಗೊತ್ತಿರಲಿಲ್ಲ. ಯೇಸುಗೆ ಮರಣ ಶಿಕ್ಷೆ ಆಗಬೇಕು ಅಂತ ಕಿರಿಚ್ತಾ ಇದ್ದ ಜನರ ಗುಂಪನ್ನ ಕೂಡ ಯೇಸು ಸೂಚಿಸಿದ್ದಿರಬಹುದು. ಇವರಲ್ಲಿ ಕೆಲವರು ಮುಂದಕ್ಕೆ ಯೇಸುವಿನಲ್ಲಿ ನಂಬಿಕೆ ಇಡಲಿದ್ದರು. (ಅ. ಕಾ. 2:36-38) ಜನ ಇಷ್ಟೆಲ್ಲಾ ಕಷ್ಟ ಕೊಟ್ಟರೂ ಯೇಸು ಅವರ ಮೇಲೆ ಕೋಪ ಮಾಡಿಕೊಳ್ಳಲಿಲ್ಲ ಅಥವಾ ಅವರನ್ನ ದೂರಲಿಲ್ಲ. (1 ಪೇತ್ರ 2:23) ಬದಲಿಗೆ ಅವರನ್ನು ಕ್ಷಮಿಸು ಅಂತ ಯೆಹೋವನ ಹತ್ರ ಬೇಡಿಕೊಂಡನು.

4. ಕ್ಷಮಿಸೋ ವಿಷಯದಲ್ಲಿ ನಾವು ಯೇಸುವಿನಿಂದ ಏನು ಕಲಿಬಹುದು?

4 ಈ ಮಾತಿಂದ ನಾವೇನು ಕಲಿಬಹುದು? ಯೇಸು ತರ ನಾವೂ ಬೇರೆಯವರನ್ನ ಕ್ಷಮಿಸಬೇಕು. (ಕೊಲೊ. 3:13) ನಾವ್ಯಾಕೆ ಬೈಬಲನ್ನು ನಂಬ್ತೀವಿ ಅಂತ ಸಂಬಂಧಿಕರಿಗೆ ಅಥವಾ ಬೇರೆಯವರಿಗೆ ಅರ್ಥ ಆಗದೇ ಇರಬಹುದು. ಹಾಗಾಗಿ ಅವರು ನಮ್ಮ ಬಗ್ಗೆ ಸುಳ್ಳು ಹೇಳಬಹುದು, ಬೇರೆಯವರ ಮುಂದೆ ಅವಮಾನ ಮಾಡಬಹುದು, ನಮ್ಮ ಪುಸ್ತಕ-ಪತ್ರಿಕೆಗಳನ್ನ ಹರಿದು ಹಾಕಬಹುದು. ‘ಹೊಡಿತೀವಿ, ಕೊಲ್ತೀವಿ’ ಅಂತ ಬೆದರಿಕೆನೂ ಹಾಕಬಹುದು. ಹಾಗಂತ ಅವರ ಮೇಲೆ ಕೋಪ ಇಟ್ಟುಕೊಳ್ಳೋದು ಸರಿನಾ? ಸರಿಯಲ್ಲ. ಸತ್ಯ ಕಲಿಯೋಕೆ ಅವರು ಮನಸ್ಸು ಮಾಡಲಿ ಅಂತ ಯೆಹೋವನ ಹತ್ರ ಬೇಡಿಕೊಳ್ಳೋಣ. (ಮತ್ತಾ. 5:44, 45) ನಮಗೆ ಯಾರಾದ್ರೂ ದೊಡ್ಡ ಅನ್ಯಾಯ ಮಾಡಿದರಂತೂ ಅವರನ್ನ ಕ್ಷಮಿಸೋಕೆ ನಮಗೆ ಕೆಲವೊಮ್ಮೆ ಕಷ್ಟ ಆಗುತ್ತೆ. ಆದರೆ ಅದನ್ನೇ ನಾವು ಮನಸ್ಸಲ್ಲಿ ಇಟ್ಟುಕೊಂಡಿದ್ದರೆ ಅದ್ರಿಂದ ನಮಗೇ ಹಾನಿ ಆಗುತ್ತೆ. ಒಬ್ಬ ಸಹೋದರಿ ಹೀಗೆ ಹೇಳ್ತಾಳೆ: “ಒಬ್ಬರು ಮಾಡಿದ ಅನ್ಯಾಯವನ್ನ ನಾನು ಕ್ಷಮಿಸ್ತೀನಿ ಅಂದ್ರೆ ಅದರರ್ಥ ಅವರು ಮಾಡಿದ್ದು ಸರಿ ಅಂತನೋ ಅಥವಾ ಅವರು ನನಗೆ ಇನ್ನೂ ಅನ್ಯಾಯ ಮಾಡಲಿ ಅಂತನೋ ಅಲ್ಲ. ಅವರ ಮೇಲೆ ನಾನು ಕೋಪ ಇಟ್ಟುಕೊಳ್ಳಲ್ಲ, ಅವರು ಮಾಡಿದ್ದನ್ನ ಮರೆಯೋಕೆ ಇಷ್ಟಪಡ್ತೀನಿ ಅಂತ ಅರ್ಥ.” (ಕೀರ್ತ. 37:8) ಹಾಗಾದರೆ ನಾವು ಒಬ್ಬರನ್ನ ಒಂದು ಸಲ ಕ್ಷಮಿಸಿದ ಮೇಲೆ ಅವರು ಮಾಡಿದ ಅನ್ಯಾಯದ ಬಗ್ಗೆ ಒಂಚೂರು ಮನಸ್ಸಲ್ಲಿ ಇಟ್ಟುಕೊಳ್ಳಬಾರದು, ಅದನ್ನ ಪೂರ್ತಿ ಮರೆತು ಬಿಡಬೇಕು.—ಎಫೆ. 4:31, 32.

“ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ”

5. (ಎ) ಯೇಸು ತನ್ನ ಪಕ್ಕದಲ್ಲಿದ್ದ ಅಪರಾಧಿಗೆ ಏನಂತ ಮಾತು ಕೊಟ್ಟನು? (ಬಿ) ಯಾಕೆ ಈ ಮಾತು ಕೊಟ್ಟನು?

5 ಯೇಸು ಏನು ಹೇಳಿದನು? ಯೇಸುವಿನ ಅಕ್ಕಪಕ್ಕದ ಕಂಬಗಳಲ್ಲಿಯೂ ಇಬ್ಬರು ಅಪರಾಧಿಗಳನ್ನ ಜಡಿದಿದ್ದರು. ಮೊದಲಿಗೆ ಅವರು ಸಹ ಯೇಸುವನ್ನ ಅವಮಾನ ಮಾಡಿದರು. (ಮತ್ತಾ. 27:44) ಆದರೆ ಆಮೇಲೆ ಅವರಲ್ಲೊಬ್ಬ ತನ್ನ ಮನಸ್ಸು ಬದಲಾಯಿಸಿಕೊಂಡ. ಯೇಸು “ಯಾವ ತಪ್ಪೂ ಮಾಡಿಲ್ಲ” ಅಂತ ಅವನಿಗೆ ಅರ್ಥ ಆಯಿತು. (ಲೂಕ 23:40, 41) ಅಷ್ಟೇ ಅಲ್ಲ ಯೇಸು ಮತ್ತೆ ಜೀವಂತವಾಗಿ ಎದ್ದೇಳುತ್ತಾನೆ ಮತ್ತು ರಾಜನಾಗಿ ಆಳುತ್ತಾನೆ ಅಂತನೂ ನಂಬಿದನು. ಅವನು ಯೇಸುಗೆ “ನೀನು ರಾಜನಾದಾಗ ನನ್ನನ್ನ ನೆನಪು ಮಾಡ್ಕೊ” ಅಂತ ಕೇಳಿಕೊಂಡ. (ಲೂಕ 23:42) ಆ ಸಾವಿನ ಗಳಿಗೆಯಲ್ಲೂ ಆ ವ್ಯಕ್ತಿ ಎಷ್ಟು ನಂಬಿಕೆ ತೋರಿಸಿದ ಅಲ್ವಾ! ಅದಕ್ಕೆ ಯೇಸು ಅವನಿಗೆ “ಈ ದಿನ ನಿನಗೆ ಮಾತು ಕೊಡ್ತಾ ಇದ್ದೀನಿ, ನೀನು ನನ್ನ ಜೊತೆ [ಸ್ವರ್ಗದಲ್ಲಿ ಅಲ್ಲ] ಪರದೈಸಲ್ಲಿ ಇರ್ತಿಯ” ಅಂದನು. (ಲೂಕ 23:43) ಯೇಸು ಇಷ್ಟು ಗ್ಯಾರಂಟಿಯಾಗಿ ಅವನಿಗೆ ಹೀಗೆ ಮಾತು ಕೊಡೋಕೆ ಏನು ಕಾರಣ? ಏನಂದ್ರೆ ತನ್ನ ತಂದೆ ಯೆಹೋವ ಕರುಣಾಮಯಿ, ಸಾಯುತ್ತಿರೋ ಈ ಅಪರಾಧಿಗೆ ಯೆಹೋವ ಖಂಡಿತ ಕರುಣೆ ತೋರಿಸ್ತಾನೆ ಅಂತ ಯೇಸುಗೆ ಗೊತ್ತಿತ್ತು.—ಕೀರ್ತ. 103:8.

6. ಯೇಸು ಅಪರಾಧಿಗೆ ಹೇಳಿದ ಮಾತಿಂದ ನಮಗೇನು ಗೊತ್ತಾಗುತ್ತೆ?

6 ಈ ಮಾತಿಂದ ನಾವೇನು ಕಲಿಬಹುದು? ಯೇಸು ತನ್ನ ತಂದೆಯ ತರಾನೇ ಕರುಣಾಮಯಿ. (ಇಬ್ರಿ. 1:3) ಯೆಹೋವ ತುಂಬ ಕರುಣೆ ತೋರಿಸೋ ದೇವರು. ನಾವು ಹಿಂದೆ ಮಾಡಿದ ತಪ್ಪುಗಳಿಗೆ ನಿಜವಾದ ಪಶ್ಚಾತ್ತಾಪ ಪಟ್ಟರೆ, ಯೇಸುವಿನ ರಕ್ತದಿಂದ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತೆ ಅಂತ ನಂಬಿದರೆ ಯೆಹೋವ ನಮ್ಮನ್ನ ಕ್ಷಮಿಸಿ ನಮಗೆ ಕರುಣೆ ತೋರಿಸ್ತಾನೆ. (1 ಯೋಹಾ. 1:7) ಯೆಹೋವ ತಪ್ಪುಗಳನ್ನ ಖಂಡಿತ ಕ್ಷಮಿಸ್ತಾನೆ ಅಂತ ನಂಬೋಕೆ ಕೆಲವರಿಗೆ ಕಷ್ಟ ಆಗುತ್ತೆ. ನಿಮಗೆ ಆ ತರ ಅನಿಸೋದಾದರೆ ಯೇಸು ಹೇಳಿದ ಮಾತಿಗೆ ಸ್ವಲ್ಪ ಗಮನ ಕೊಡಿ. ಆಗಷ್ಟೇ ನಂಬಿಕೆ ತೋರಿಸೋಕೆ ಶುರುಮಾಡಿದ ಆ ಅಪರಾಧಿಗೇ ಯೇಸು ಕರುಣೆ ತೋರಿಸಿದ ಅಂದಮೇಲೆ ನಂಬಿಗಸ್ತಿಕೆಯಿಂದ ಸೇವೆ ಮಾಡ್ತಿರೋ, ಬೈಬಲಿನಲ್ಲಿರೋ ಆಜ್ಞೆಗಳನ್ನ ಪಾಲಿಸೋಕೆ ಆದಷ್ಟು ಪ್ರಯತ್ನಿಸುತ್ತಿರೋ ನಿಮಗೆ ಯೆಹೋವ ದಯೆ ತೋರಿಸಲ್ವಾ? ನೀವೇ ಯೋಚಿಸಿ.—ಕೀರ್ತ. 51:1; 1 ಯೋಹಾ. 2:1, 2.

‘ನೋಡು, ನಿನ್ನ ಮಗ . . . ನೋಡು, ನಿನ್ನ ಅಮ್ಮ’

7. (ಎ) ಯೋಹಾನ 19:26, 27ರಲ್ಲಿ ಯೇಸು ಮರಿಯಳಿಗೆ ಮತ್ತು ಯೋಹಾನನಿಗೆ ಏನು ಹೇಳಿದನು? (ಬಿ) ಯಾಕೆ ಹೇಳಿದನು?

7 ಯೇಸು ಏನು ಹೇಳಿದನು? (ಯೋಹಾನ 19:26, 27 ಓದಿ.) ಯೇಸುಗೆ ತನ್ನ ತಾಯಿ ಬಗ್ಗೆ ಚಿಂತೆ ಆಯಿತು. ಬಹುಶಃ ಆಗ ಆಕೆ ವಿಧವೆ ಆಗಿರಬೇಕು. ಅವನ ಒಡಹುಟ್ಟಿದವರು ಆಕೆಯ ಜೀವನಕ್ಕೆ ಬೇಕಾಗಿದ್ದ ಅವಶ್ಯಕತೆ ಏನೋ ನೋಡಿಕೊಳ್ತಿದ್ದರು. ಆದರೆ ಯೆಹೋವನ ಜೊತೆ ಇರೋ ಸಂಬಂಧ ಕಾಪಾಡಿಕೊಳ್ಳೋಕೆ ಆಕೆಗೆ ಇನ್ಯಾರು ಸಹಾಯ ಮಾಡ್ತಾರೆ ಅಂತ ಯೇಸುಗೆ ಯೋಚನೆ ಆಗಿರಬೇಕು. ಯಾಕಂದ್ರೆ ಅವನ ತಮ್ಮಂದಿರು ಆಗಿನ್ನೂ ಅವನ ಶಿಷ್ಯರಾಗಿರಲಿಲ್ಲ. ಆದರೆ ಯೋಹಾನ ಯೇಸುವಿನ ನಿಷ್ಠಾವಂತ ಶಿಷ್ಯನಾಗಿದ್ದ ಮತ್ತು ಅವನ ಒಬ್ಬ ಆಪ್ತ ಸ್ನೇಹಿತನೂ ಆಗಿದ್ದ. ಯಾರೆಲ್ಲ ತನ್ನ ಜೊತೆ ಸೇರಿ ಯೆಹೋವನ ಆರಾಧನೆ ಮಾಡ್ತಿದ್ದರೋ ಅವರನ್ನೆಲ್ಲಾ ಯೇಸು ತನ್ನ ಸ್ವಂತ ಕುಟುಂಬದವರ ತರ ನೋಡಿದ. (ಮತ್ತಾ. 12:46-50) ತನ್ನ ತಾಯಿ ಯೆಹೋವನ ಸೇವೆ ಮುಂದುವರಿಸೋಕೆ ಯೋಹಾನ ಖಂಡಿತ ಸಹಾಯ ಮಾಡ್ತಾನೆ ಅನ್ನೋ ಭರವಸೆ ಇದ್ದಿದ್ದಕ್ಕೆ ಯೇಸು ಮರಿಯಳ ಜವಾಬ್ದಾರಿಯನ್ನ ಯೋಹಾನನ ಕೈಗೆ ಒಪ್ಪಿಸಿದ. ಹೀಗೆ ಮರಿಯಳ ಮೇಲಿದ್ದ ಪ್ರೀತಿ ಕಾಳಜಿ ತೋರಿಸಿದ. ಅವನು ಮರಿಯಳಿಗೆ “ನೋಡು! ಇನ್ನು ಮೇಲಿಂದ ಇವನೇ ನಿನ್ನ ಮಗ” ಅಂತ ಹೇಳಿದ. ಯೋಹಾನನಿಗೆ “ನೋಡು, ಇನ್ನು ಮೇಲಿಂದ ಇವಳೇ ನಿನ್ನ ಅಮ್ಮ” ಅಂತ ಹೇಳಿದ. ಅವತ್ತಿಂದ ಯೋಹಾನ ಮರಿಯಳನ್ನ ತನ್ನ ಸ್ವಂತ ತಾಯಿ ತರ ನೋಡಿಕೊಂಡ. ಹುಟ್ಟಿದಾಗ್ಲೂ ತನ್ನನ್ನ ಜೋಪಾನವಾಗಿ ನೋಡಿಕೊಂಡಂಥ, ಸಾಯುವಾಗ್ಲೂ ತನ್ನ ಹತ್ರನೇ ನಿಂತಿದ್ದ ಅಮ್ಮನ ಮೇಲೆ ಯೇಸುಗೆ ಎಷ್ಟು ಪ್ರೀತಿ ಇತ್ತಲ್ವಾ!

8. ಯೇಸು ಮರಿಯ ಮತ್ತು ಯೋಹಾನನಿಗೆ ಹೇಳಿದ ಮಾತುಗಳಿಂದ ನಮಗೇನು ಅರ್ಥ ಆಗುತ್ತೆ?

8 ಈ ಮಾತಿಂದ ನಾವೇನು ಕಲಿಬಹುದು? ನಾವು ನಮ್ಮ ಕುಟುಂಬದವರಿಗಿಂತ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಆಪ್ತರಾಗ್ತೀವಿ. ನಮ್ಮ ಸಂಬಂಧಿಕರು ನಮ್ಮನ್ನ ವಿರೋಧಿಸಬಹುದು, ನಮ್ಮನ್ನ ದೂರ ಮಾಡಲೂಬಹುದು. ಆದರೆ ಯೇಸು ಮಾತು ಕೊಟ್ಟಿರೋ ಹಾಗೆ ನಾವು ಯೆಹೋವನಿಗೆ ಮತ್ತು ಆತನ ಸಂಘಟನೆಗೆ ಹತ್ತಿರವಾಗೇ ಇದ್ದರೆ ಕಳಕೊಂಡಿರೋದೆಲ್ಲಾ “ನೂರರಷ್ಟು ಸಿಗುತ್ತೆ.” ಸಹೋದರ ಸಹೋದರಿಯರಲ್ಲೇ ಮಗ, ಮಗಳು, ಅಪ್ಪ, ಅಮ್ಮನನ್ನು ಯೆಹೋವ ನಮಗೆ ಕೊಡ್ತಾನೆ. (ಮಾರ್ಕ 10:29, 30) ದೇವರ ಮೇಲೆ ಇಷ್ಟು ಪ್ರೀತಿ, ನಂಬಿಕೆ ಮತ್ತು ಒಬ್ಬರ ಮೇಲೊಬ್ಬರಿಗೆ ಇಷ್ಟು ಪ್ರೀತಿ ಇರೋ ಕುಟುಂಬವನ್ನ ಪಡೆದಿರೋಕೆ ನಮಗೆ ಸಂತೋಷ ಆಗುತ್ತಲ್ವಾ?—ಕೊಲೊ. 3:14; 1 ಪೇತ್ರ 2:17.

“ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?”

9. ಮತ್ತಾಯ 27:46ರಲ್ಲಿ ಯೇಸು ಹೇಳಿದ ಮಾತುಗಳಿಂದ ನಮಗೇನು ಗೊತ್ತಾಗುತ್ತೆ?

9 ಯೇಸು ಏನು ಹೇಳಿದನು? ಯೇಸುವಿನ ಪ್ರಾಣ ಹೋಗೋ ಮುಂಚೆ ಅವನು “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅಂತ ಜೋರಾಗಿ ಕೂಗಿದನು. (ಮತ್ತಾ. 27:46) ಯಾಕೆ ಯೇಸು ಹೀಗೆ ಹೇಳಿದನು ಅಂತ ಬೈಬಲ್‌ ಹೇಳಲ್ಲ. ಆದರೆ ಈ ಮಾತುಗಳಿಂದ ಕೆಲವೊಂದು ವಿಷಯ ನಮಗೆ ಗೊತ್ತಾಗುತ್ತೆ. ಒಂದೇನಂದ್ರೆ, ಕೀರ್ತನೆ 22:1ರಲ್ಲಿರೋ * ಭವಿಷ್ಯವಾಣಿಯನ್ನು ಯೇಸು ಈ ಮಾತು ಹೇಳಿ ನೆರವೇರಿಸಿದನು. ಎರಡನೇದು, ಯೆಹೋವ ಯೇಸುವಿನ ‘ಸುತ್ತ ಬೇಲಿ’ ಹಾಕಿ ಕಾಪಾಡಲಿಲ್ಲ ಅಂತ ಈ ಮಾತುಗಳಿಂದ ಗೊತ್ತಾಗುತ್ತೆ. (ಯೋಬ 1:10) ವಿರೋಧಿಗಳು ಯೇಸುವಿನ ನಂಬಿಕೆಯನ್ನ ಪೂರ್ತಿಯಾಗಿ ಪರೀಕ್ಷಿಸೋಕೆ ಯೆಹೋವ ಬಿಟ್ಟುಕೊಟ್ಟನು. ಇದು ಯೇಸುಗೆ ಚೆನ್ನಾಗಿ ಗೊತ್ತಿತ್ತು. ಯೇಸುಗೆ ಬಂದಂಥ ಪರೀಕ್ಷೆ ಯಾವ ಮನುಷ್ಯನಿಗೂ ಬಂದಿಲ್ಲ. ಮೂರನೇದು, ‘ಯಾವ ತಪ್ಪೂ ಮಾಡದೆ ಈ ಶಿಕ್ಷೆ ಅನುಭವಿಸ್ತಾ ಇದ್ದೀನಲ್ಲಾ’ ಅನ್ನೋ ಯೇಸುವಿನ ನೋವು ಈ ಮಾತುಗಳಿಂದ ಗೊತ್ತಾಗುತ್ತೆ.

10. ಯೇಸು ತನ್ನ ತಂದೆಗೆ ಹೇಳಿದ ಮಾತುಗಳಿಂದ ನಾವ್ಯಾವ ಪಾಠ ಕಲಿಬಹುದು?

10 ಈ ಮಾತಿಂದ ನಾವೇನು ಕಲಿಬಹುದು? ಒಂದು, ನಮಗೆ ಕಷ್ಟಗಳು ಬಂದಾಗ ಯೆಹೋವ ಯಾವಾಗಲೂ ನಮ್ಮನ್ನು ಕಾಪಾಡ್ತಾನೆ ಅಂತ ನಾವು ನಿರೀಕ್ಷಿಸಬಾರದು. ಯೇಸುಗೆ ಬಂದಂಥ ನಂಬಿಕೆ ಪರೀಕ್ಷೆ ನಮಗೂ ಬರಬಹುದು. ಹಾಗಾಗಿ ಯೇಸು ತರ ನಾವೂ ಸಾವನ್ನ ಎದುರಿಸೋಕೂ ತಯಾರಿರಬೇಕು. (ಮತ್ತಾ. 16:24, 25) ಆದರೆ ನಮಗೆ ಸಹಿಸಿಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಯೆಹೋವ ಬಿಡಲ್ಲ ಅನ್ನೋದಂತೂ ಗ್ಯಾರಂಟಿ. (1 ಕೊರಿಂ. 10:13) ಎರಡು, ಯೇಸು ತರ ನಾವೂ ಕೆಲವೊಮ್ಮೆ ತಪ್ಪೇ ಮಾಡದೆ ಕಷ್ಟ ಅನುಭವಿಸಬೇಕಾಗಿ ಬರಬಹುದು. (1 ಪೇತ್ರ 2:19, 20) ನಾವೇನೋ ತಪ್ಪು ಮಾಡ್ತಿದ್ದೀವಿ ಅನ್ನೋ ಕಾರಣಕ್ಕಲ್ಲ, ಲೋಕದವರ ತರ ಇಲ್ಲದಿರೋದಕ್ಕೆ ಮತ್ತು ಸತ್ಯ ಸಾರುತ್ತಿರೋದಕ್ಕೆ ಜನ ನಮ್ಮನ್ನ ದ್ವೇಷಿಸ್ತಾರೆ, ವಿರೋಧಿಸ್ತಾರೆ. (ಯೋಹಾ. 17:14; 1 ಪೇತ್ರ 4:15, 16) ಕಷ್ಟ ಬಂದಾಗ ಯೆಹೋವ ಅದನ್ನ ಯಾಕೆ ಬಿಟ್ಟನು ಅಂತ ಯೇಸು ಅರ್ಥ ಮಾಡಿಕೊಂಡನು. ಆದರೆ ಇವತ್ತು ನಂಬಿಗಸ್ತ ಕ್ರೈಸ್ತರಿಗೆ ಕಷ್ಟ ಬಂದಾಗ ಯೆಹೋವ ಯಾಕೆ ಇದನ್ನ ಅನುಮತಿಸಿದ್ದಾನೆ ಅಂತ ಕೆಲವೊಮ್ಮೆ ಅರ್ಥ ಆಗದೇ ಇರಬಹುದು. (ಹಬ. 1:3) ಹಾಗಂತ ಅವರಲ್ಲಿ ನಂಬಿಕೆಯ ಕೊರತೆ ಇದೆ ಅಂತ ಯೆಹೋವ ಯೋಚಿಸ್ತಾನಾ? ಖಂಡಿತ ಇಲ್ಲ. ಆತ ಕರುಣೆ ಮತ್ತು ತಾಳ್ಮೆ ತೋರಿಸೋ ದೇವರು. ಅವರಿಗೆ ಬೇಕಾದ ಸಾಂತ್ವನ ಕೊಡೋಕೆ ಆಗೋದು ಯೆಹೋವ ದೇವರಿಗೆ ಮಾತ್ರನೇ.—2 ಕೊರಿಂ. 1:3, 4.

“ನೀರು ಬೇಕು”

11. ಯೋಹಾನ 19:28ರಲ್ಲಿರೋ ಮಾತನ್ನ ಯೇಸು ಯಾಕೆ ಹೇಳಿದನು?

11 ಯೇಸು ಏನು ಹೇಳಿದನು? (ಯೋಹಾನ 19:28 ಓದಿ.) ಯೇಸು ಯಾಕೆ “ನೀರು ಬೇಕು” ಅಂತ ಕೇಳಿದನು? ಕೀರ್ತನೆ 22:15ರಲ್ಲಿರೋ ಭವಿಷ್ಯವಾಣಿ ನೆರವೇರೋಕೆ ಕೇಳಿದನು. ಅಲ್ಲಿ ಹೀಗಿದೆ: “ಮಡಿಕೆ ತುಂಡಿನ ತರ ನನ್ನ ಶಕ್ತಿ ಒಣಗಿ ಹೋಗಿದೆ, ನನ್ನ ನಾಲಿಗೆ ನನ್ನ ವಸಡಿಗೆ ಅಂಟ್ಕೊಂಡಿದೆ.” “ಹೀಗೆ ಪವಿತ್ರ ಗ್ರಂಥದಲ್ಲಿರೋ ಮಾತು ನಿಜ ಆಯ್ತು.” ಇನ್ನೊಂದು ವಿಷಯ ಏನಂದರೆ ಯೇಸುಗೆ ನಿಜವಾಗ್ಲೂ ಬಾಯಾರಿಕೆ ಆಗಿತ್ತು. ಯಾಕಂದ್ರೆ ಈಗಾಗ್ಲೇ ತುಂಬ ಕಷ್ಟ ಅನುಭವಿಸಿದ್ದನು. ಕಂಬದಲ್ಲಿ ನೋವಿಂದ ನರಳಾಡ್ತಾ ಇದ್ದನು. ಅದನ್ನೆಲ್ಲಾ ಸಹಿಸಿಕೊಳ್ಳೋಕೆ ಅವನಿಗೆ ನೀರು ಬೇಕಿತ್ತು.

12. “ನೀರು ಬೇಕು” ಅಂತ ಯೇಸು ಹೇಳಿದ ಮಾತಿಂದ ನಾವೇನು ಕಲಿಬಹುದು?

12 ಈ ಮಾತಿಂದ ನಾವೇನು ಕಲಿಬಹುದು? ನೀರು ಕೇಳಿದ್ರೆ ಜನ ಏನು ನೆನಸುತ್ತಾರೋ ಅಂತ ಯೇಸು ಯೋಚಿಸಲಿಲ್ಲ. ಅದೇ ತರ ನಮಗೇನು ಅನಿಸುತ್ತೆ ಅಂತ ನಾವು ಬೇರೆಯವರ ಹತ್ರ ಹೇಳಿಕೊಳ್ಳಬೇಕು. ಬೇರೆಯವರ ಸಹಾಯ ಕೇಳಿದ್ರೆ ನಮಗೆ ಅವಮಾನ ಆಗುತ್ತೆ ಅಂತ ನೆನಸಬಾರದು. ನಿಜವಾಗ್ಲೂ ನಮಗೆ ಸಹಾಯದ ಅಗತ್ಯ ಇದ್ದಾಗ ಹಿಂಜರಿಯದೆ ಕೇಳಬೇಕು. ಉದಾಹರಣೆಗೆ, ನಮಗೆ ವಯಸ್ಸಾಗಿದ್ದರೆ ಅಥವಾ ಹುಷಾರಿಲ್ಲದಿದ್ದರೆ ನಮ್ಮ ಒಬ್ಬ ಸ್ನೇಹಿತರ ಹತ್ರ ಒಂದು ಅಂಗಡಿಗೋ ಹಾಸ್ಪಿಟಲ್‌ಗೋ ಕರಕೊಂಡು ಹೋಗೋಕೆ ಕೇಳಬೇಕು. ನಾವು ಬೇಜಾರಲ್ಲಿದ್ದಾಗ ಅಥ್ವಾ ಕುಗ್ಗಿಹೋದಾಗ ಹಿರಿಯರ ಹತ್ರನೋ ಅನುಭವಸ್ಥ ಸಹೋದರ ಸಹೋದರಿಯರ ಹತ್ರನೋ ಮಾತಾಡಬೇಕು. ಅವರು ನಾವು ಹೇಳೋದನ್ನ ಕೇಳಿಸಿಕೊಳ್ತಾರೆ, ನಮ್ಮ ಮನಸ್ಸು ಅರಳುವಂಥ ‘ಒಳ್ಳೇ ಮಾತುಗಳನ್ನ’ ಆಡ್ತಾರೆ. (ಜ್ಞಾನೋ. 12:25) ಸಹೋದರ ಸಹೋದರಿಯರು ನಮ್ಮನ್ನ ಪ್ರೀತಿಸ್ತಾರೆ “ಕಷ್ಟಕಾಲದಲ್ಲಿ” ನಮಗೆ ಸಹಾಯ ಮಾಡೋಕೆ ತಯಾರಿರುತ್ತಾರೆ ಅನ್ನೋದನ್ನ ನಾವು ಯಾವತ್ತೂ ಮರೆಯಬಾರದು. (ಜ್ಞಾನೋ. 17:17) ಆದರೆ ನಮಗೇನು ಅನಿಸ್ತಿದೆ, ನಮ್ಮ ನೋವೇನು ಅಂತ ಅವರಿಗೆ ಗೊತ್ತಾಗಲ್ಲ. ನಾವು ಮನಸ್ಸುಬಿಚ್ಚಿ ಹೇಳಿದ್ರೇನೇ ಅವರಿಗೆ ಗೊತ್ತಾಗೋದು. ಅದಕ್ಕೇ ನಾವೇ ಮೊದಲು ಹೋಗಿ ಮಾತಾಡಬೇಕು.

“ಎಲ್ಲಾ ಮುಗಿತು!”

13. ಕೊನೆ ಉಸಿರಿರೋ ತನಕ ಯೇಸು ನಿಷ್ಠೆ ಕಾಪಾಡಿಕೊಂಡಿದ್ದರಿಂದ ಏನೆಲ್ಲಾ ಸಾಧಿಸಿದನು?

13 ಯೇಸು ಏನು ಹೇಳಿದನು? ನೈಸಾನ್‌ 14ರ ಮಧ್ಯಾಹ್ನ ಸುಮಾರು 3 ಗಂಟೆಗೆ “ಎಲ್ಲಾ ಮುಗಿತು!” ಅಂತ ಯೇಸು ಜೋರಾಗಿ ಹೇಳಿದನು. (ಯೋಹಾ. 19:30) ಇದನ್ನ ಹೇಳಿ ಯೇಸು ಪ್ರಾಣ ಬಿಟ್ಟನು. ಯೆಹೋವ ಬಯಸಿದ್ದೆಲ್ಲವನ್ನೂ ಯೇಸು ತನ್ನ ಕೊನೆ ಉಸಿರಿರೋ ತನಕ ನಿಷ್ಠೆಯಿಂದ ಮಾಡಿದನು. ಹೀಗೆ ಅವನು ಏನೆಲ್ಲಾ ಸಾಧಿಸಿದನು? ಒಂದು, ಸೈತಾನ ಸುಳ್ಳುಗಾರ ಅಂತ ಯೇಸು ಸಾಬೀತು ಮಾಡಿದನು. ಸೈತಾನ ಏನೇ ಮಾಡಿದ್ರೂ ಒಬ್ಬ ಪರಿಪೂರ್ಣ ಮನುಷ್ಯ ಯೆಹೋವನಿಗೆ ನಿಯತ್ತಾಗಿ ಇರೋಕೆ ಆಗುತ್ತೆ ಅಂತ ಯೇಸು ತೋರಿಸಿಕೊಟ್ಟನು. ಎರಡು, ಯೇಸು ತನ್ನ ಪ್ರಾಣವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು. ಇದ್ರಿಂದಾಗಿ ಅಪರಿಪೂರ್ಣ ಮನುಷ್ಯರಿಗೆ ದೇವರ ಜೊತೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳೋಕೆ ಆಗಿದೆ ಮತ್ತು ಶಾಶ್ವತ ಜೀವ ಪಡ್ಕೊಳ್ಳೋ ನಿರೀಕ್ಷೆ ಸಿಕ್ಕಿದೆ. ಮೂರು, ಯೆಹೋವನಿಗೆ ಮಾತ್ರ ಇಡೀ ವಿಶ್ವವನ್ನು ಆಳುವ ಅಧಿಕಾರ ಇದೆ ಅಂತ ಯೇಸು ತೋರಿಸಿಕೊಟ್ಟನು. ಅಷ್ಟೇ ಅಲ್ಲ, ತನ್ನ ತಂದೆಯ ಹೆಸರಿಗೆ ಬಂದ ಕಳಂಕವನ್ನು ತೆಗೆದು ಹಾಕಿದನು.

14. ನಾವು ಯಾವ ದೃಢತೀರ್ಮಾನ ಮಾಡಬೇಕು? ವಿವರಿಸಿ.

14 ಈ ಮಾತಿಂದ ನಾವೇನು ಕಲಿಬಹುದು? ಪ್ರತಿದಿನ ನಿಯತ್ತಾಗಿ ಇರಬೇಕು ಅನ್ನೋ ದೃಢತೀರ್ಮಾನ ಮಾಡಬೇಕು. ಸಹೋದರ ಮ್ಯಾಕ್ಸ್‌ವೆಲ್‌ ಫ್ರೆಂಡ್‌ ಏನು ಹೇಳಿದರು ನೋಡಿ. ಅವರು ದ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ ಶಿಕ್ಷಕರಾಗಿದ್ದರು. ಒಂದು ಸಲ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದೇವರಿಗೆ ನಿಷ್ಠೆ ತೋರಿಸೋದರ ಬಗ್ಗೆ ಇದ್ದ ಭಾಷಣದಲ್ಲಿ ಹೀಗೆ ಹೇಳಿದರು: “ಇವತ್ತು ಹೇಳಬೇಕು ಅಂದುಕೊಂಡಿರೋ ಮಾತನ್ನ ಅಥವಾ ಮಾಡಬೇಕು ಅಂದುಕೊಂಡಿರೋ ಕೆಲಸವನ್ನ ಇವತ್ತೇ ಮಾಡಿ. ನಾಳೆಗೆ ಅಂತ ಇಟ್ಟುಕೊಳ್ಳಬೇಡಿ. ನಾಳೆ ಇರುತ್ತೀವಿ ಅನ್ನೋದಕ್ಕೆ ಏನು ಗ್ಯಾರಂಟಿ? ಶಾಶ್ವತ ಜೀವ ಪಡೆಯೋ ಅರ್ಹತೆ ನಿಮಗೂ ಇದೆ ಅಂತ ತೋರಿಸಿಕೊಡೋಕೆ ಇದೇ ಕೊನೆ ದಿನ ಅಂತ ನೆನಸಿ ಜೀವನ ಮಾಡಿ.” ಆ ಸಹೋದರ ಹೇಳಿದ್ದು ಎಷ್ಟು ನಿಜ ಅಲ್ವಾ? ಪ್ರತಿದಿನ ಇದೇ ಕೊನೆ ದಿನ ಅಂತ ನೆನಸಿ ಯೆಹೋವನಿಗೆ ನಿಯತ್ತಾಗಿದ್ದು ಜೀವನ ಮಾಡೋಣ. ಈ ತರ ನಡಕೊಂಡಾಗ ಮಾತ್ರನೇ ನಮಗೆ ಸಾವು ಎದುರಾದರೂ ಯೆಹೋವ ದೇವರಿಗೆ ಹೀಗೆ ಹೇಳಕ್ಕಾಗುತ್ತೆ: “ಯೆಹೋವ ಅಪ್ಪಾ, ನಾನು ನಿಯತ್ತಾಗಿರೋಕೆ, ಸೈತಾನ ಸುಳ್ಳುಗಾರ ಅಂತ ತೋರಿಸೋಕೆ, ನಿನ್ನ ಹೆಸರಿಗೆ ಬಂದಿರೋ ಕಳಂಕ ತೆಗೆದುಹಾಕೋಕೆ ಮತ್ತು ನೀನೊಬ್ಬನೇ ವಿಶ್ವದ ರಾಜ ಅಂತ ತೋರಿಸೋಕೆ ನನ್ನ ಕೈಲಾಗಿದ್ದನ್ನೆಲ್ಲಾ ಮಾಡಿದ್ದೀನಪ್ಪಾ.”

“ನನ್ನ ಪ್ರಾಣವನ್ನ ನಿನ್ನ ಕೈಗೆ ಒಪ್ಪಿಸ್ತಾ ಇದ್ದೀನಿ”

15. ಲೂಕ 23:46ರ ಪ್ರಕಾರ ಯೇಸುಗೆ ಯಾವ ಭರವಸೆ ಇತ್ತು?

15 ಯೇಸು ಏನು ಹೇಳಿದನು? (ಲೂಕ 23:46 ಓದಿ.) ಯೆಹೋವನ ಮೇಲೆ ಪೂರ್ತಿ ನಂಬಿಕೆಯಿಟ್ಟು ಯೇಸು “ಅಪ್ಪಾ, ನನ್ನ ಪ್ರಾಣವನ್ನ ನಿನ್ನ ಕೈಗೆ ಒಪ್ಪಿಸ್ತಾ ಇದ್ದೀನಿ” ಅಂತ ಹೇಳಿದನು. ತನ್ನ ಭವಿಷ್ಯ ಯೆಹೋವನ ಕೈಯಲ್ಲಿದೆ, ತನ್ನನ್ನ ನೆನಪಿಸಿಕೊಂಡು ತನಗೆ ಮತ್ತೆ ಜೀವ ಕೊಡ್ತಾನೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು.

16. ಹದಿನೈದು ವರ್ಷದ ಜೋಶುವ ಅನ್ನೋ ಹುಡುಗನ ಅನುಭವದಿಂದ ನೀವೇನು ಕಲಿತಿರಿ?

16 ಈ ಮಾತಿಂದ ನಾವೇನು ಕಲಿಬಹುದು? ಜೀವ ಅಪಾಯದಲ್ಲಿ ಇದ್ದಾಗ್ಲೂ ನಾವು ಯೆಹೋವನಿಗೆ ನಿಷ್ಠೆ ತೋರಿಸಬೇಕು. ‘ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಟ್ಟಾಗ’ ಮಾತ್ರ ನಮಗೆ ಇಷ್ಟು ನಿಷ್ಠೆ ತೋರಿಸೋಕೆ ಆಗೋದು. (ಜ್ಞಾನೋ. 3:5) ಜೋಶುವ ಅನ್ನೋ ಹುಡುಗನ ಉದಾಹರಣೆ ನೋಡಿ. ಅವನಿಗೆ 15 ವರ್ಷ ಇದ್ದಾಗ ಗಂಭೀರ ಕಾಯಿಲೆ ಇತ್ತು. ದೇವರ ನಿಯಮವನ್ನ ಮುರಿಯುವಂಥ ಚಿಕಿತ್ಸೆ ಬೇಡ ಅಂತ ಹೇಳಿದ. ಅವನು ತೀರಿಹೋಗೋ ಸ್ವಲ್ಪ ಮುಂಚೆ ತನ್ನ ತಾಯಿಗೆ ಹೀಗೆ ಹೇಳಿದ: “ಅಮ್ಮ ನಾನು ಯೆಹೋವನ ಕೈಯಲ್ಲಿ ಜೋಪಾನವಾಗಿದ್ದೀನಿ. . . . ಯೆಹೋವ ನನಗೆ ಮತ್ತೆ ಜೀವ ಕೊಟ್ಟು ಎಬ್ಬಿಸ್ತಾರೆ. ಅವರಿಗೆ ನನ್ನ ಹೃದಯ ಗೊತ್ತು. ನಾನು ಅವರನ್ನು ತುಂಬ ಪ್ರೀತಿಸ್ತೀನಿ.” * ನಮ್ಮಲ್ಲಿ ಪ್ರತಿಯೊಬ್ಬರು ಈ ಪ್ರಶ್ನೆ ಕೇಳಿಕೊಳ್ಳಬೇಕು: ‘ನನ್ನ ಜೀವ ಹೋಗೋ ಸನ್ನಿವೇಶದಲ್ಲಿ ನಂಬಿಕೆಗೆ ಪರೀಕ್ಷೆ ಬಂದ್ರೆ, ನನ್ನ ಜೀವ ಯೆಹೋವನ ಕೈಯಲ್ಲಿದೆ ಆತನು ನನ್ನನ್ನು ನೆನಪಿಸಿಕೊಂಡು ಮತ್ತೆ ನನಗೆ ಜೀವ ಕೊಡ್ತಾನೆ ಅಂತ ಯೆಹೋವನ ಮೇಲೆ ಭರವಸೆ ಇಡ್ತೀನಾ?’

17-18. ಈ ಲೇಖನದಲ್ಲಿ ನಾವೇನು ಕಲಿತ್ವಿ? (“ ಯೇಸುವಿನ ಕೊನೆ ಮಾತುಗಳಿಂದ ನಾವೇನು ಕಲಿತ್ವಿ?” ಚೌಕ ನೋಡಿ.)

17 ಯೇಸುವಿನ ಜೀವನದ ಕೊನೆ ಕ್ಷಣಗಳಲ್ಲಿ ಅವನು ಹೇಳಿದ ಮಾತುಗಳಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿತ್ವಿ. ಯಾವ ಪಾಠಗಳು? ನಾವು ಬೇರೆಯವರನ್ನ ಕ್ಷಮಿಸಬೇಕು, ಯೆಹೋವನು ನಮ್ಮನ್ನ ಕ್ಷಮಿಸ್ತಾನೆ ಅಂತ ನಂಬಬೇಕು. ನಮಗೆ ಸಹಾಯ ಮಾಡೋಕೆ ನಮ್ಮ ಸಹೋದರ ಸಹೋದರಿಯರು ಯಾವಾಗಲೂ ತಯಾರಿರುತ್ತಾರೆ. ಆದರೆ ಸಹಾಯ ಬೇಕಾದಾಗ ನಾವೇ ಮುಂದೆ ಹೋಗಿ ಅವರ ಸಹಾಯ ಕೇಳಬೇಕು. ನಮಗೇನೇ ಸಮಸ್ಯೆ ಬಂದರೂ ಅದನ್ನ ತಾಳಿಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ. ಪ್ರತಿದಿನ ಇದೇ ಕೊನೆ ದಿನ ಅಂತ ನೆನಸಿ ನಮ್ಮ ಕೈಯಲ್ಲಾದಷ್ಟು ನಿಯತ್ತಾಗಿ ಇರಬೇಕು. ಯೆಹೋವನ ಕೈಯಲ್ಲಿ ನಮ್ಮ ಜೀವ ಜೋಪಾನವಾಗಿದೆ ಅಂತ ಪೂರ್ತಿ ಭರವಸೆ ಇಡಬೇಕು.

18 ಹಿಂಸಾ ಕಂಬದಲ್ಲಿ ನರಳ್ತಾ ಕಷ್ಟ ಪಡ್ತಾ ಇರುವಾಗ್ಲೂ ಯೇಸು ತುಂಬ ಅರ್ಥ ಇರೋ ಮಾತುಗಳನ್ನ ಆಡಿದನಲ್ವಾ! ಇದ್ರಿಂದ ಕಲಿತ ಪಾಠಗಳನ್ನ ನಾವು ಅನ್ವಯಿಸಿದ್ರೆ “ಇವನ ಮಾತು ಕೇಳಿ” ಅಂತ ಯೆಹೋವ ನಮಗೆ ಕೊಟ್ಟ ಆಜ್ಞೆಯನ್ನೂ ಪಾಲಿಸಿದ ಹಾಗೆ ಆಗುತ್ತೆ.—ಮತ್ತಾ. 17:5.

ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ

^ ಪ್ಯಾರ. 5 ಯೆಹೋವ ಮತ್ತಾಯ 17:5ರಲ್ಲಿ ನಾವೆಲ್ಲರೂ ಆತನ ಮಗನ ಮಾತನ್ನ ಕೇಳಬೇಕು ಅಂತ ಹೇಳಿದ್ದಾನೆ. ಯೇಸು ಹಿಂಸಾ ಕಂಬದಲ್ಲಿದ್ದಾಗ ಹೇಳಿದ ಮಾತುಗಳಿಂದ ನಾವು ಅನೇಕ ಪಾಠಗಳನ್ನು ಕಲಿಬಹುದು. ಅಂಥ ಕೆಲವು ಪಾಠಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 9 ಕೀರ್ತನೆ 22:1ರಲ್ಲಿರೋ ಮಾತುಗಳನ್ನ ಯೇಸು ಹೇಳಿರೋದಕ್ಕೆ ಏನು ಕಾರಣಗಳು ಇದ್ದಿರಬಹುದು ಅನ್ನೋದನ್ನ ತಿಳುಕೊಳ್ಳಲು ಇದೇ ಸಂಚಿಕೆಯಲ್ಲಿರೋ “ವಾಚಕರಿಂದ ಪ್ರಶ್ನೆಗಳು” ನೋಡಿ.

^ ಪ್ಯಾರ. 16 ಜೋಶುವನ ಅನುಭವ ಜನವರಿ 22, 1995ರ ಎಚ್ಚರ! ಪತ್ರಿಕೆ (ಇಂಗ್ಲಿಷ್‌) ಪುಟ 11-15ರಲ್ಲಿ ಇದೆ.