ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೇಸುವಿನ ಪ್ರಾಣ ಹೋಗೋ ಮುಂಚೆ ಅವನು ಯಾಕೆ ಕೀರ್ತನೆ 22:1ರಲ್ಲಿರೋ ದಾವೀದನ ಮಾತುಗಳನ್ನು ಹೇಳಿದನು?

▪ ಯೇಸುವಿನ ಪ್ರಾಣ ಹೋಗೋ ಮುಂಚೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅಂತ ಕೇಳಿದನು. ಆ ಮಾತುಗಳು ಮತ್ತಾಯ 27:46ರಲ್ಲಿದೆ. ಹೀಗೆ ಹೇಳಿ ಯೇಸು ಕೀರ್ತನೆ 22:1ರಲ್ಲಿರೋ ದಾವೀದನ ಮಾತನ್ನು ನೆರವೇರಿಸಿದನು. (ಮಾರ್ಕ 15:34) ಯೆಹೋವನ ಮೇಲೆ ಬೇಜಾರು ಮಾಡಿಕೊಂಡೋ ಅಥವಾ ಆ ಕ್ಷಣಕ್ಕೆ ಆತನ ಮೇಲೆ ನಂಬಿಕೆ ಕಳಕೊಂಡೋ ಯೇಸು ಆ ಮಾತನ್ನು ಹೇಳಿರಬೇಕು ಅಂತ ಯೋಚಿಸೋದು ತಪ್ಪು. ತಾನು ಯಾಕೆ ಪ್ರಾಣ ಕೊಡಬೇಕು ಅನ್ನೋದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದನ್ನು ಮಾಡೋಕೂ ಸಿದ್ಧನಿದ್ದನು. (ಮತ್ತಾ. 16:21; 20:28) ಅಷ್ಟೇ ಅಲ್ಲ, ತಾನು ತೀರಿಹೋಗುವಾಗ ಯೆಹೋವ ತನ್ನನ್ನು ಕಾಪಾಡಲ್ಲ ಅಂತನೂ ಯೇಸುಗೆ ಗೊತ್ತಿತ್ತು. (ಯೋಬ 1:10) ಚಿತ್ರಹಿಂಸೆ ಅನುಭವಿಸಿ ಸಾಯಬೇಕಾಗಿ ಬಂದ್ರೂ ನಿಷ್ಠಾವಂತನಾಗಿ ಇರುತ್ತೀನಿ ಅಂತ ತೋರಿಸಿಕೊಡೋಕೆ ಯೇಸುಗೆ ಯೆಹೋವ ಅವಕಾಶ ಮಾಡಿಕೊಟ್ಟನು.—ಮಾರ್ಕ 14:35, 36.

ಯೇಸು ಯಾಕೆ ಕೀರ್ತನೆಯಲ್ಲಿ ಇರೋ ಈ ಮಾತನ್ನು ಹೇಳಿದನು? ಅದಕ್ಕೆ ಕೆಲವು ಕಾರಣಗಳನ್ನು ನೋಡೋಣ. ಆದರೆ ಇದೇ ಕಾರಣಕ್ಕೆ ಹೇಳಿದನು ಅಂತ ಖಚಿತವಾಗಿ ಹೇಳಕ್ಕಾಗಲ್ಲ. ಇದು ಕೇವಲ ಅಂದಾಜು ಅಷ್ಟೇ. *

ಜನರು ತನ್ನನ್ನು ಕೊಲ್ಲುವಾಗ ಯೆಹೋವ ಮಧ್ಯ ಬಂದು ತಡಿಯಲ್ಲ ಅನ್ನೋದು ಅವರಿಗೆಲ್ಲ ಗೊತ್ತಾಗಲಿ ಅಂತ ಯೇಸು ಈ ಮಾತುಗಳನ್ನು ಹೇಳಿರಬಹುದು. ಯೇಸು ಯೆಹೋವನ ಸಹಾಯ ಇಲ್ಲದೆ ಬಿಡುಗಡೆ ಬೆಲೆ ಕೊಡಬೇಕಿತ್ತು. ಅವನು ಮನುಷ್ಯನಾಗಿದ್ದನು ಮತ್ತು ಎಲ್ಲಾ ಮನುಷ್ಯರಿಗೋಸ್ಕರ “ಸಾವಿನ ರುಚಿ” ನೋಡಬೇಕಿತ್ತು ಅಂದ್ರೆ ತನ್ನ ಪ್ರಾಣ ಕೊಡಬೇಕಿತ್ತು.—ಇಬ್ರಿ. 2:9.

ಅಲ್ಲಿ ಇದ್ದವರಿಗೆ ಇಡೀ ಕೀರ್ತನೆಯನ್ನು ನೆನಪಿಸೋಕೆ ಯೇಸು ಕೀರ್ತನೆಯ ಕೆಲವು ಮಾತುಗಳನ್ನು ಹೇಳಿರಬೇಕು. ಆಗಿನ ಕಾಲದಲ್ಲಿ ಯೆಹೂದ್ಯರು ಕೀರ್ತನೆ ಪುಸ್ತಕದಲ್ಲಿರೋ ಕೀರ್ತನೆಗಳನ್ನು ಬಾಯಿಪಾಠ ಮಾಡಿ ಹೇಳುತ್ತಿದ್ರು. ಹಾಗಾಗಿ ಒಂದು ವಚನ ಕೇಳಿಸಿಕೊಂಡರೆ ಸಾಕು ಅವರಿಗೆ ಇಡೀ ಕೀರ್ತನೆ ಮನಸ್ಸಿಗೆ ಬಂದುಬಿಡುತ್ತಿತ್ತು. ಇಡೀ 22ನೇ ಕೀರ್ತನೆಯನ್ನು ತನ್ನ ಯೆಹೂದಿ ಶಿಷ್ಯರಿಗೆ ನೆನಪಿಸೋಕೆ ಯೇಸು ಆ ಕೀರ್ತನೆಯ ಕೆಲವು ಮಾತುಗಳನ್ನು ಹೇಳಿರಬೇಕು. ಯಾಕಂದ್ರೆ ಆ ಕೀರ್ತನೆಯಲ್ಲಿ ಅವನ ಮರಣಕ್ಕೆ ಸಂಬಂಧಪಟ್ಟ ಅನೇಕ ಭವಿಷ್ಯವಾಣಿಗಳು ಇದ್ದವು. (ಕೀರ್ತ. 22:7, 8, 15, 16, 18, 24) ಅಷ್ಟೇ ಅಲ್ಲ, ಆ ಕೀರ್ತನೆಯ ಕೊನೇ ವಚನಗಳಲ್ಲಿ ಯೆಹೋವ ದೇವರನ್ನು ಇಡೀ ಭೂಮಿಯ ರಾಜ ಅಂತ ವರ್ಣಿಸಲಾಗಿದೆ.—ಕೀರ್ತ. 22:27-31.

ತಾನೇನು ತಪ್ಪು ಮಾಡಿಲ್ಲ ಅಂತ ತೋರಿಸೋಕೆ ಯೇಸು ಈ ಮಾತು ಹೇಳಿರಬಹುದು. ಯೇಸುಗೆ ಮರಣಶಿಕ್ಷೆ ವಿಧಿಸುವ ಮುಂಚೆ ಅವನನ್ನು ಹಿರೀಸಭೆಯ ಮುಂದೆ ತಂದು ನಿಲ್ಲಿಸಿ ‘ಅವನು ದೇವರ ವಿರುದ್ಧ ಮಾತಾಡುತ್ತಿದ್ದಾನೆ’ ಅಂತ ಸುಳ್ಳು ಆರೋಪ ಹಾಕಿದ್ರು. (ಮತ್ತಾ. 26:65, 66) ಹಿರೀಸಭೆಯ ಸದಸ್ಯರೆಲ್ಲ ರಾತ್ರಿಯಲ್ಲೇ ಸೇರಿಬಂದು ಗಡಿಬಿಡಿಯಲ್ಲಿ ವಿಚಾರಣೆ ನಡೆಸಿದ್ರು. ಇದು ಕಾನೂನಿಗೆ ವಿರುದ್ಧವಾಗಿತ್ತು. (ಮತ್ತಾ. 26:59; ಮಾರ್ಕ 14:56-59) ಇನ್ನೊಂದು ಅರ್ಥದಲ್ಲಿ “ನನ್ನ ದೇವರೇ, ನನ್ನ ದೇವರೇ ನಾನೇನೂ ತಪ್ಪು ಮಾಡದಿದ್ರೂ ಯಾಕಪ್ಪಾ ನನ್ನ ಕೈಬಿಟ್ಟೆ?” ಅಂತ ಯೇಸು ಕೇಳಿರಬಹುದು. ಹೀಗೆ ತಾನೇನೂ ತಪ್ಪು ಮಾಡಿಲ್ಲ ಅಂತ ತೋರಿಸೋಕೆ ಅವನು ಕೀರ್ತನೆ 22:1ರಲ್ಲಿರೋ ಮಾತನ್ನು ಹೇಳಿರಬಹುದು.

ಈ ಕೀರ್ತನೆಯನ್ನು ಬರೆದ ದಾವೀದನಿಗೆ ಯೇಸು ತನ್ನನ್ನು ಹೋಲಿಸಿಕೊಂಡಿರಬಹುದು. ದಾವೀದನಿಗೂ ಕಷ್ಟಗಳು ಬಂದಿತ್ತು. ಅದರರ್ಥ ಯೆಹೋವ ಅವನ ಕೈಬಿಟ್ಟುಬಿಟ್ಟನು ಅಂತಲ್ಲ. ಕೀರ್ತನೆ 22:1ರಲ್ಲಿರೋ ಮಾತನ್ನು ದಾವೀದ ಬರೆದಾಗ ಅದರರ್ಥ ಅವನಿಗೆ ದೇವರ ಮೇಲೆ ನಂಬಿಕೆ ಕಡಿಮೆ ಆಯ್ತು ಅಂತಲ್ಲ. ಯಾಕಂದರೆ ಆ ಕೀರ್ತನೆಯ ಮುಂದಿನ ವಚನಗಳಲ್ಲಿ, ಯೆಹೋವ ತನ್ನ ಜನರನ್ನು ಕಾಪಾಡ್ತಾನೆ ಅನ್ನೋ ನಂಬಿಕೆ ತನಗಿದೆ ಅಂತ ದಾವೀದ ಬರೆದಿದ್ದಾನೆ. ಅವನು ಹೇಳಿದ ಹಾಗೇ ಯೆಹೋವ ಅವನನ್ನು ಕಾಪಾಡಿ ಆಶೀರ್ವದಿಸಿದನು. (ಕೀರ್ತ. 22:23, 24, 27) ಅದೇ ತರ ‘ದಾವೀದನ ಮಗನಾದ’ ಯೇಸು ಕೂಡ ಹಿಂಸಾ ಕಂಬದಲ್ಲಿ ಕಷ್ಟ ಅನುಭವಿಸಿದನು. ಅದರರ್ಥ ಯೆಹೋವ ಅವನನ್ನು ಕೈಬಿಟ್ಟನು ಅಂತಲ್ಲ.—ಮತ್ತಾ. 21:9.

ತನ್ನ ತಂದೆಗೆ ತನ್ನನ್ನು ಕಾಪಾಡೋ ಶಕ್ತಿ ಇದ್ರೂ ಏನೂ ಮಾಡೋಕೆ ಆಗ್ತಾ ಇಲ್ವಲ್ಲಾ ಅನ್ನೋ ದುಃಖದಿಂದ ಯೇಸು ಈ ಮಾತು ಹೇಳಿರಬಹುದು. ಯೇಸುವಿನ ನಿಷ್ಠೆ ಸಾಬೀತು ಆಗೋಕ್ಕೋಸ್ಕರ ಅವನನ್ನು ಯೆಹೋವ ಕಾಪಾಡಲಿಲ್ಲ. ಅವನಿಗೆ ಕಷ್ಟ ಬಂದಾಗ ಮರಣ ಬಂದಾಗ ಅದನ್ನು ಅನುಭವಿಸೋಕೆ ಬಿಟ್ಟುಬಿಟ್ಟನು. ಆರಂಭದಲ್ಲಿ, ಯೇಸು ಈ ರೀತಿ ಕಷ್ಟಪಟ್ಟು ಸಾಯಬೇಕು ಅನ್ನೋದು ಯೆಹೋವ ದೇವರ ಉದ್ದೇಶ ಆಗಿರಲಿಲ್ಲ. ಇದಕ್ಕೆಲ್ಲ ಕಾರಣ ಆದಾಮ ಹವ್ವ ಮಾಡಿದ ತಪ್ಪು. ಅಷ್ಟೇ ಅಲ್ಲ ಯೇಸು ಯಾವ ತಪ್ಪೂ ಮಾಡಿರಲಿಲ್ಲ. ಆದ್ರೂ ಸೈತಾನ ಎಬ್ಬಿಸಿದ ಪ್ರಶ್ನೆಗೆ ಉತ್ತರ ಕೊಡೋಕೆ ಮತ್ತು ಮನುಷ್ಯ ಏನೆಲ್ಲಾ ಕಳಕೊಂಡಿದ್ದನೋ ಅದನ್ನು ವಾಪಸ್‌ ಪಡೆಯೋಕೆ ಬೇಕಾದ ಬಿಡುಗಡೆ ಬೆಲೆಯನ್ನು ಕೊಡೋಕೆ ಯೇಸು ಕಷ್ಟ ಅನುಭವಿಸಿ ಸಾಯಬೇಕಾಗಿ ಬಂತು. (ಮಾರ್ಕ 8:31; 1 ಪೇತ್ರ 2:21-24) ಯೆಹೋವ ಆ ಸಮಯದಲ್ಲಿ ಯೇಸುವನ್ನು ಕಾಪಾಡದೇ ಇದ್ದದ್ರಿಂದ ಇಷ್ಟೆಲ್ಲ ಸಾಧಿಸೋಕೆ ಆಯ್ತು. ಯೆಹೋವ ಯೇಸುಗೆ ಏನೂ ಸಹಾಯ ಮಾಡದೆ ಇದ್ದಿದ್ದು ಇದೇ ಮೊದಲನೇ ಸಲ.

ತಾನು ಕಷ್ಟ ಅನುಭವಿಸಿ ಸಾಯೋಕೆ ದೇವರು ಯಾಕೆ ಬಿಟ್ಟಿದ್ದಾನೆ ಅನ್ನೋದಕ್ಕೆ ಇರೋ ಕಾರಣದ ಕಡೆಗೆ ತನ್ನ ಶಿಷ್ಯರ ಗಮನ ಹೋಗಲಿ ಅಂತ ಯೇಸು ಈ ಮಾತು ಹೇಳಿರಬಹುದು. * ತಾನು ಹಿಂಸಾ ಕಂಬದಲ್ಲಿ ಅಪರಾಧಿ ತರ ಸಾಯೋದನ್ನು ನೋಡಿದಾಗ ತುಂಬ ಜನರಿಗೆ ಜೀರ್ಣಿಸಿಕೊಳ್ಳೋಕೆ ಆಗಲ್ಲ ಅಂತ ಯೇಸುಗೆ ಗೊತ್ತಿತ್ತು. (1 ಕೊರಿಂ. 1:23) ಹಾಗಾಗಿ ಯೇಸು ತನ್ನ ಸಾವಿಗಿರೋ ನಿಜವಾದ ಕಾರಣದ ಕಡೆಗೆ ಶಿಷ್ಯರ ಗಮನ ಸೆಳೆಯೋಕೆ ಪ್ರಯತ್ನ ಮಾಡಿರಬೇಕು. ಆಗ ಶಿಷ್ಯರಿಗೆ ಇದೆಲ್ಲ ಯಾಕೆ ನಡಿತಿದೆ ಅಂತ ಅರ್ಥ ಮಾಡಿಕೊಳ್ಳೋಕೆ ಆಗುತ್ತಿತ್ತು. (ಗಲಾ. 3:13, 14) ಅಷ್ಟೇ ಅಲ್ಲ ಯೇಸುವನ್ನು ಅಪರಾಧಿ ತರ ಅಲ್ಲ ರಕ್ಷಕನ ತರ ನೋಡೋಕೆ ಆಗುತ್ತಿತ್ತು.

ಕೀರ್ತನೆ 22:1ರಲ್ಲಿರೋ ಮಾತುಗಳನ್ನು ಯೇಸು ಯಾವುದೇ ಕಾರಣಕ್ಕೆ ಹೇಳಿದ್ರೂ ತಾನು ಹಿಂಸಾ ಕಂಬದಲ್ಲಿ ಸಾಯೋದು ಯೆಹೋವನ ಉದ್ದೇಶವಾಗಿದೆ ಅನ್ನೋದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಈ ಮಾತನ್ನು ಹೇಳಿ ಸ್ವಲ್ಪ ಹೊತ್ತಲ್ಲೇ “ಎಲ್ಲಾ ಮುಗಿತು!” ಅಂತ ಅವನು ಹೇಳಿದನು. (ಯೋಹಾ. 19:30; ಲೂಕ 22:37) ಆ ಸಮಯಕ್ಕೆ ಯೆಹೋವ ಯೇಸುವನ್ನು ಕಾಪಾಡದೆ ಹೋಗಿದ್ದರಿಂದ ಅವನನ್ನು ಭೂಮಿಗೆ ಕಳಿಸಿದ ಉದ್ದೇಶ ಪೂರ್ತಿಯಾಗಿ ನೆರವೇರಿತು. “ಮೋಶೆಯ ಪುಸ್ತಕದಲ್ಲಿ, ಪ್ರವಾದಿಗಳ ಪುಸ್ತಕದಲ್ಲಿ, ಕೀರ್ತನೆಗಳಲ್ಲಿ” ಯೇಸು ಬಗ್ಗೆ ಹೇಳಿರೋ ಮಾತುಗಳೆಲ್ಲ ನಿಜ ಆಗೋಕೆ ಸಾಧ್ಯ ಆಯ್ತು.—ಲೂಕ 24:44.

^ ಪ್ಯಾರ. 2 ಈ ಸಂಚಿಕೆಯಲ್ಲಿ ಇರೋ “ಯೇಸುವಿನ ಕೊನೆ ಮಾತುಗಳು ಕಲಿಸೋ ಪಾಠಗಳು” ಅನ್ನೋ ಲೇಖನದ ಪ್ಯಾರ 9 ಮತ್ತು 10 ನೋಡಿ.

^ ಪ್ಯಾರ. 4 ಈ ಹಿಂದೆ ಯೇಸು ಶಿಷ್ಯರ ಜೊತೆ ಸೇವೆ ಮಾಡುತ್ತಿದ್ದಾಗ ಕೆಲವು ವಿಷ್ಯಗಳನ್ನು ಹೇಳಿದ್ದನು, ಪ್ರಶ್ನೆಗಳನ್ನೂ ಕೇಳಿದ್ದನು. ಅದರರ್ಥ ಆ ವಿಷಯಗಳೆಲ್ಲ ಅವನ ಮನಸ್ಸಲ್ಲಿ ಇತ್ತು ಅಂತಲ್ಲ. ಬದಲಿಗೆ ತನ್ನ ಶಿಷ್ಯರ ಮನಸ್ಸಲ್ಲಿ ಏನಿದೆ ಅಂತ ತಿಳುಕೊಳ್ಳೋಕೆ ಈ ತರ ಮಾಡಿದ್ದನು.—ಮಾರ್ಕ 7:24-27; ಯೋಹಾ. 6:1-5; 2010, ಅಕ್ಟೋಬರ್‌ 15ರ ಕಾವಲಿನಬುರುಜು ಪುಟ 4-5 ನೋಡಿ.