ಅಧ್ಯಯನ ಲೇಖನ 17
ದಿಢೀರಂತ ಸಮಸ್ಯೆಗಳು ಬಂದ್ರೂ ಯೆಹೋವ ನಿಮಗೆ ಸಹಾಯ ಮಾಡ್ತಾನೆ
“ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು, ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.”—ಕೀರ್ತ. 34:19.
ಗೀತೆ 68 ವಿನಮ್ರನ ಪ್ರಾರ್ಥನೆ
ಈ ಲೇಖನದಲ್ಲಿ ಏನಿದೆ? a
1. ನಮಗೆ ಯಾವ ವಿಷ್ಯದಲ್ಲಿ ಸಂಶಯ ಇಲ್ಲ?
ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ, ನಾವು ಚೆನ್ನಾಗಿರಬೇಕು ಅಂತ ಆಸೆ ಪಡ್ತಾನೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ. (ರೋಮ. 8:35-39) ಬೈಬಲಲ್ಲಿರೋ ಬುದ್ಧಿಮಾತುಗಳನ್ನ ಪಾಲಿಸೋದ್ರಿಂದ ನಮ್ಮ ಜೀವನ ಚೆನ್ನಾಗಿರುತ್ತೆ ಅನ್ನೋದ್ರಲ್ಲೂ ಎರಡು ಮಾತಿಲ್ಲ. (ಯೆಶಾ. 48:17, 18) ಆದ್ರೆ ಕೆಲವೊಮ್ಮೆ ನಮಗೆ ಕಷ್ಟಗಳು ಬಂದುಬಿಡುತ್ತೆ. ಆಗ ನಮ್ಮ ಜೀವನಾನೇ ತಲೆಕೆಳಗೆ ಆಗಿಬಿಡುತ್ತೆ.
2. ಯಾವೆಲ್ಲಾ ಕಷ್ಟಗಳು ನಮಗೆ ಬರಬಹುದು? ಆಗ ನಮಗೆ ಹೇಗೆ ಅನಿಸುತ್ತೆ?
2 ನಮ್ಮೆಲ್ಲರಿಗೂ ಒಂದಲ್ಲಾ ಒಂದು ರೀತಿಯ ಕಷ್ಟ ಬರುತ್ತೆ. ನಮ್ಮವರು ಯಾರಾದ್ರೂ ನಮಗೆ ತುಂಬ ಬೇಜಾರ್ ಆಗೋ ತರ ನಡ್ಕೊಬಹುದು, ನಮಗೆ ದೊಡ್ಡ ಕಾಯಿಲೆ ಬಂದು ನಾವು ಮುಂಚಿನ ತರ ಯೆಹೋವನ ಸೇವೆ ಮಾಡೋಕೆ ಆಗದೇ ಹೋಗಬಹುದು. ನೈಸರ್ಗಿಕ ವಿಪತ್ತಿಂದ ನಮಗೆ ತುಂಬ ತೊಂದ್ರೆ ಆಗಬಹುದು, ನಾವು ಯೆಹೋವನ ಸಾಕ್ಷಿ ಆಗಿರೋದ್ರಿಂದ ಜನ್ರು ನಮ್ಮನ್ನ ವಿರೋಧಿಸಬಹುದು. ಈ ತರ ಕಷ್ಟಗಳು ಬಂದಾಗ ‘ಈ ಕಷ್ಟಗಳು ನಂಗೇ ಯಾಕೆ ಬರ್ತಿದೆ? ನಾನು ಏನಾದ್ರೂ ತಪ್ಪು ಮಾಡಿದ್ದೀನಾ? ಯೆಹೋವ ನನ್ನನ್ನ ಪ್ರೀತಿಸ್ತಿಲ್ವಾ?’ ಅಂತೆಲ್ಲಾ ನಮಗೆ ಅನಿಸಬಹುದು. ನಿಮಗೂ ಹಾಗೆ ಅನಿಸಿದ್ಯಾ? ಹಾಗಿದ್ರೆ, ಬೇಜಾರ್ ಮಾಡ್ಕೊಬೇಡಿ. ಯೆಹೋವನ ಆರಾಧನೆ ಮಾಡ್ತಿದ್ದ ಎಷ್ಟೋ ಜನ್ರಿಗೆ ಈ ತರ ಅನಿಸಿದೆ.—ಕೀರ್ತ. 22:1, 2; ಹಬ. 1:2, 3.
3. ಕೀರ್ತನೆ 34:19ರಿಂದ ನಮಗೆ ಏನು ಗೊತ್ತಾಗುತ್ತೆ?
3 ಕೀರ್ತನೆ 34:19 ಓದಿ. ಈ ಕೀರ್ತನೆಯಲ್ಲಿ 2 ವಿಷ್ಯಗಳಿದೆ. (1) ನೀತಿವಂತರಿಗೂ ಕಷ್ಟಗಳು ಬಂದೇ ಬರುತ್ತೆ. (2) ಆ ಕಷ್ಟಗಳಿಂದ ಯೆಹೋವ ದೇವರು ನಮ್ಮನ್ನ ಬಿಡಿಸ್ತಾನೆ. ಆದ್ರೆ, ಯೆಹೋವ ಯಾವ ಅರ್ಥದಲ್ಲಿ ನಮ್ಮನ್ನ ಬಿಡಿಸ್ತಾನೆ? ಈ ಲೋಕದಲ್ಲಿ ನಮಗೆ ಕಷ್ಟಗಳು ಇದ್ದಿದ್ದೇ ಅಂತ ಮೊದಲು ನಮಗೆ ಅರ್ಥ ಮಾಡಿಸ್ತಾನೆ. ಅಂದ್ರೆ ನಮಗೆ ಕಷ್ಟಗಳು ಬರದೇ ಇರೋ ತರ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿಲ್ಲ. ಆದ್ರೆ, ಎಷ್ಟೇ ಕಷ್ಟಗಳಿದ್ರೂ ಆತನ ಸೇವೆ ಮಾಡ್ತಾ ಖುಷಿಯಾಗಿರೋ ತರ ನೋಡ್ಕೊಳ್ತಾನೆ. (ಯೆಶಾ. 66:14) ಮುಂದೆ ಹೊಸ ಲೋಕದಲ್ಲಿ ಕಷ್ಟಗಳೇ ಇರಲ್ಲ ಅನ್ನೋದನ್ನ ಮನಸ್ಸಲ್ಲಿ ಇಡೋಕೆ ಹೇಳ್ತಿದ್ದಾನೆ. (2 ಕೊರಿಂ. 4:16-18) ಆದ್ರೆ ಅಲ್ಲಿ ತನಕ ಒಂದೊಂದು ದಿನಾನೂ ನಾವು ಆತನ ಸೇವೆ ಮಾಡ್ತಾ ಖುಷಿಯಾಗಿರೋಕೆ ಸಹಾಯ ಮಾಡ್ತಾನೆ.—ಪ್ರಲಾ. 3:22-24.
4. ನಾವು ಈ ಲೇಖನದಲ್ಲಿ ಏನು ಕಲಿತೀವಿ?
4 ಹಿಂದಿನ ಕಾಲದಲ್ಲಿದ್ದ ಮತ್ತು ಈಗಿರೋ ಯೆಹೋವನ ಸೇವಕರ ಉದಾಹರಣೆಗಳನ್ನ ಈಗ ನೋಡೋಣ. ಯಾಕಂದ್ರೆ ಅವ್ರ ತರಾನೇ ನಮ್ಮ ಜೀವನದಲ್ಲೂ ದಿಢೀರಂತ ಕಷ್ಟಗಳು ಬಂದುಬಿಡಬಹುದು. ಆಗ ನಾವು ಯೆಹೋವನನ್ನ ನಂಬಿದ್ರೆ ಆತನು ನಮಗೆ ಖಂಡಿತ ಸಹಾಯ ಮಾಡ್ತಾನೆ ಅಂತ ಅವ್ರ ಉದಾಹರಣೆಗಳಿಂದ ಗೊತ್ತಾಗುತ್ತೆ. (ಕೀರ್ತ. 55:22) ಅದನ್ನ ಓದುವಾಗ ‘ನಾನು ಅವ್ರ ಪರಿಸ್ಥಿತಿಯಲ್ಲಿ ಇದ್ದಿದ್ರೆ ಏನ್ ಮಾಡ್ತಿದ್ದೆ? ಅವ್ರ ಉದಾಹರಣೆಗಳಿಂದ ನನ್ನ ನಂಬಿಕೆ ಹೇಗೆ ಜಾಸ್ತಿ ಆಗ್ತಿದೆ? ನಾನು ಅವ್ರ ತರ ಇರೋಕೆ ಏನು ಮಾಡಬೇಕು?’ ಅಂತ ಕೇಳಿಕೊಳ್ಳಿ.
ಹಿಂದಿನ ಕಾಲದಲ್ಲಿ ಯೆಹೋವ ಹೇಗೆ ಸಹಾಯ ಮಾಡಿದ್ದಾನೆ?
5. ಲಾಬಾನನಿಂದ ಯಾಕೋಬ ಯಾವೆಲ್ಲಾ ಕಷ್ಟಗಳನ್ನ ಅನುಭವಿಸಿದ? (ಮುಖಪುಟ ಚಿತ್ರ ನೋಡಿ.)
5 ಹಿಂದಿನ ಕಾಲದಲ್ಲೂ ಯೆಹೋವನನ್ನ ಆರಾಧನೆ ಮಾಡ್ತಿದ್ದ ಜನ್ರಿಗೆ ದಿಢೀರಂತ ಕಷ್ಟಗಳು ಬಂತು. ಯಾಕೋಬನ ಉದಾಹರಣೆ ನೋಡಿ. ಅವನ ಅಪ್ಪ ಅವನಿಗೆ ತನ್ನ ಸಂಬಂಧಿಕನಾದ ಲಾಬಾನನ ಹೆಣ್ಣು ಮಕ್ಕಳಲ್ಲಿ ಯಾರನ್ನಾದ್ರೂ ಮದುವೆ ಮಾಡ್ಕೊಳ್ಳೋಕೆ ಹೇಳಿದ. ಯಾಕಂದ್ರೆ ಲಾಬಾನ ಯೆಹೋವನ ಆರಾಧಕನಾಗಿದ್ದ. ಹೀಗೆ ಮಾಡೋದ್ರಿಂದ ಯೆಹೋವ ದೇವರಿಗೆ ಖುಷಿಯಾಗುತ್ತೆ, ಆತನ ಆಶೀರ್ವಾದ ಸಿಗುತ್ತೆ ಅಂತನೂ ಹೇಳಿದ. (ಆದಿ. 28:1-4) ಯಾಕೋಬ ಅವನ ಅಪ್ಪ ಹೇಳಿದ ಹಾಗೇ ಮಾಡಿದ. ಅವನು ಕಾನಾನ್ ದೇಶ ಬಿಟ್ಟು ಲಾಬಾನನ ಮನೆಗೆ ಹೋದ. ಲಾಬಾನನ ಹತ್ರ ರಾಹೇಲನ್ನ ಮದುವೆ ಆಗೋಕೆ ಇಷ್ಟ ಪಡ್ತೀನಿ ಅಂದ. ಅವಳಿಗೋಸ್ಕರ ನಾನು 7 ವರ್ಷ ದುಡಿತೀನಿ ಅಂತನೂ ಹೇಳಿದ. ಅದಕ್ಕೆ ಲಾಬಾನ ಒಪ್ಕೊಂಡ. (ಆದಿ. 29:18) ಆದ್ರೆ 7 ವರ್ಷ ಆದ್ಮೇಲೆ ಲಾಬಾನ ಯಾಕೋಬನಿಗೆ ಮೋಸ ಮಾಡಿಬಿಟ್ಟ. ರಾಹೇಲನ್ನ ಬಿಟ್ಟು ದೊಡ್ಡ ಮಗಳಾದ ಲೇಯಳನ್ನ ಮದುವೆ ಮಾಡ್ಕೊಟ್ಟ. ಒಂದು ವಾರ ಆದ್ಮೇಲೆ ರಾಹೇಲ್‌ನೂ ಮದುವೆ ಮಾಡ್ಕೊಡ್ತೀನಿ, ಆದ್ರೆ ಅವಳಿಗೋಸ್ಕರ ಇನ್ನೂ 7 ವರ್ಷ ದುಡಿಬೇಕು ಅಂದ. (ಆದಿ. 29:25-27) ಇದಿಷ್ಟೇ ಅಲ್ಲ ಲಾಬಾನ ಕೆಲಸದಲ್ಲೂ ಮೋಸ ಮಾಡಿದ. ಹೀಗೆ ಯಾಕೋಬ ಒಂದಲ್ಲ, ಎರಡಲ್ಲ 20 ವರ್ಷ ಕಷ್ಟ ಪಡಬೇಕಾಯ್ತು!—ಆದಿ. 31:41, 42.
6. ಯಾಕೋಬನಿಗೆ ಇನ್ನೂ ಯಾವ ಕಷ್ಟಗಳು ಬಂತು?
6 ಯಾಕೋಬನಿಗೆ ಇನ್ನೂ ತುಂಬ ಕಷ್ಟಗಳು ಬಂತು. ಮನೆ ತುಂಬ ಮಕ್ಕಳಿದ್ರೂ ಅವರು ಒಬ್ರಿಗೊಬ್ರು ಹೊಂದ್ಕೊಂಡು ಹೋಗ್ತಿರಲಿಲ್ಲ. ಮಕ್ಕಳೆಲ್ಲಾ ಸೇರಿ ಚಿಕ್ಕ ಮಗ ಯೋಸೇಫನನ್ನ ಗುಲಾಮನಾಗಿ ಮಾರಿಬಿಟ್ರು. ಆಮೇಲೆ ಸಿಮೆಯೋನ ಮತ್ತು ಲೇವಿ ತಮ್ಮ ಮನೆತನಕ್ಕೇ ಅವಮಾನ ಆಗೋ ಕೆಲಸ ಮಾಡಿಬಿಟ್ರು. ಇದ್ರಿಂದ ಯೆಹೋವನ ಹೆಸ್ರೂ ಹಾಳಾಯ್ತು. ಅದೂ ಅಲ್ಲದೆ ಯಾಕೋಬನ ಪ್ರೀತಿಯ ಹೆಂಡತಿ ರಾಹೇಲ ಎರಡನೇ ಮಗುವನ್ನ ಹೆರುವಾಗ ತೀರಿ ಹೋದಳು. ಅಷ್ಟೇ ಅಲ್ಲ, ಬರಗಾಲ ಬಂದಾಗ ಯಾಕೋಬ ಊರು ಬಿಟ್ಟು ಈಜಿಪ್ಟ್‌ಗೆ ಹೋಗಬೇಕಾಯ್ತು. ಆಗ ಅವನಿಗೆ ತುಂಬ ವಯಸ್ಸಾಗಿತ್ತು.—ಆದಿ. 34:30; 35:16-19; 37:28; 45:9-11, 28.
7. ಯೆಹೋವ ಯಾಕೋಬನ ಕೈಬಿಡಲಿಲ್ಲ ಅಂತ ನಾವು ಹೇಗೆ ಹೇಳಬಹುದು?
7 ಯಾಕೋಬನಿಗೆ ಇಷ್ಟೆಲ್ಲಾ ಕಷ್ಟಗಳು ಬಂದ್ರೂ ಅವನು ಯೆಹೋವನ ಮೇಲೆ ಮತ್ತು ಆತನು ಕೊಟ್ಟ ಮಾತಿನ ಮೇಲೆ ನಂಬಿಕೆ ಕಳ್ಕೊಳ್ಳಲಿಲ್ಲ. ಅದಕ್ಕೆ ಯೆಹೋವ ಅವನನ್ನ ತುಂಬ ಆಶೀರ್ವದಿಸಿದನು. ಉದಾಹರಣೆಗೆ, ಲಾಬಾನ ಎಷ್ಟೇ ಮೋಸ ಮಾಡಿದ್ರೂ ಯಾಕೋಬನ ಆಸ್ತಿ ಜಾಸ್ತಿ ಆಗೋ ತರ ಯೆಹೋವ ಮಾಡಿದನು. ಯೋಸೇಫ ತೀರಿಹೋಗಿದ್ದಾನೆ ಅಂತ ಯಾಕೋಬ ಅಂದ್ಕೊಂಡಿದ್ದ. ಆದ್ರೆ ಅವನೂ ವಾಪಸ್ ಸಿಗೋ ತರ ಯೆಹೋವ ಮಾಡಿದನು. ಯಾಕೋಬನಿಗೆ ಬಂದ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಸಹಾಯ ಮಾಡಿದನು. ಯಾಕಂದ್ರೆ ಯಾಕೋಬ ಯೆಹೋವನ ಫ್ರೆಂಡ್ ಆಗಿದ್ದನು. (ಆದಿ. 30:43; 32:9, 10; 46:28-30) ನಾವೂ ಯೆಹೋವ ದೇವರಿಗೆ ಒಳ್ಳೇ ಫ್ರೆಂಡ್ ಆಗಿರಬೇಕು. ಆಗ ನಮಗೂ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆತನು ಸಹಾಯ ಮಾಡ್ತಾನೆ.
8. ದಾವೀದನಿಗೆ ಯಾವ ಆಸೆ ಇತ್ತು?
8 ಯೆಹೋವನಿಗೋಸ್ಕರ ತುಂಬ ವಿಷ್ಯಗಳನ್ನ ಮಾಡಬೇಕು ಅನ್ನೋ ಆಸೆ ರಾಜ ದಾವೀದನಿಗೆ ಇತ್ತು. ಆದ್ರೆ ಅದನ್ನೆಲ್ಲ ಮಾಡೋಕೆ ಅವನ ಕೈಯಲ್ಲಿ ಆಗಲಿಲ್ಲ. ಉದಾಹರಣೆಗೆ, ದೇವಾಲಯ ಕಟ್ಟಬೇಕು ಅಂತ ಅವನಿಗೆ ಆಸೆ ಇತ್ತು. ಅದನ್ನ ಅವನು ಪ್ರವಾದಿ ನಾತಾನನ ಹತ್ರ ಹೇಳಿದ. ಅದಕ್ಕೆ ನಾತಾನ “ನಿನಗೆ ಏನು ಆಸೆನೋ ಅದನ್ನೇ ಮಾಡು. ಯಾಕಂದ್ರೆ ದೇವರು ನಿನ್ನ ಜೊತೆ ಇದ್ದಾನೆ” ಅಂದ. (1 ಪೂರ್ವ. 17:1, 2) ಇದನ್ನ ಕೇಳಿದಾಗ ದಾವೀದನಿಗೆ ತುಂಬ ಖುಷಿ ಆಯ್ತು. ಆಗ ತಕ್ಷಣ ಅವನು ಎಲ್ಲಾ ರೆಡಿ ಮಾಡ್ಕೊಳ್ಳೋಕೆ ಶುರು ಮಾಡಿರ್ತಾನೆ.
9. ತಾನು ಆಲಯ ಕಟ್ಟಲ್ಲ ಅಂತ ಗೊತ್ತಾದಾಗ ದಾವೀದ ಏನು ಮಾಡಿದ?
9 ಆದ್ರೆ ದಾವೀದ ಆಸೆ ಪಟ್ಟಿದ್ದು ನಡೀಲಿಲ್ಲ. ಯಾಕಂದ್ರೆ “ಆ ರಾತ್ರಿನೇ” ಯೆಹೋವ ನಾತಾನನಿಗೆ ‘ದಾವೀದ ಆಲಯ ಕಟ್ಟಲ್ಲ, ಅವನ ಗಂಡು ಮಕ್ಕಳಲ್ಲಿ ಒಬ್ರು ಅದನ್ನ ಕಟ್ತಾರೆ’ ಅಂತ ಹೇಳಿದನು. ಅದನ್ನ ನಾತಾನ ದಾವೀದನಿಗೆ ಹೇಳಿದ. (1 ಪೂರ್ವ. 17:3, 4, 11, 12) ಆಗ ದಾವೀದ ಏನು ಮಾಡಿದ? ಆಲಯ ಕಟ್ಟೋಕೆ ತನ್ನಿಂದ ಆಗದಿದ್ರೂ ಸೊಲೊಮೋನನಿಗೆ ಅದನ್ನ ಕಟ್ಟೋಕೆ ಎಲ್ಲಾ ಸಹಾಯನೂ ಮಾಡಿದ. ಅದಕ್ಕೆ ಬೇಕಾಗಿರೋ ಹಣ, ವಸ್ತುಗಳನ್ನ ಕೂಡಿಸಿಟ್ಟ.—1 ಪೂರ್ವ. 29:1-5.
10. ಯೆಹೋವ ದಾವೀದನನ್ನ ಹೇಗೆ ಆಶೀರ್ವದಿಸಿದನು?
10 ತನಗೋಸ್ಕರ ಆಲಯ ಕಟ್ಟಬಾರದು ಅಂತ ಯೆಹೋವ ದಾವೀದನಿಗೆ ಹೇಳಿದ ಮೇಲೆ ಅವನ ಜೊತೆ ಒಪ್ಪಂದ ಮಾಡ್ಕೊಂಡನು. ಅವನ ವಂಶದಲ್ಲಿ ಹುಟ್ಟೋ ಒಬ್ಬ ವ್ಯಕ್ತಿ ಶಾಶ್ವತವಾಗಿ ಆಳ್ತಾನೆ ಅಂತ ಮಾತು ಕೊಟ್ಟನು. (2 ಸಮು. 7:16) ಸ್ವಲ್ಪ ಯೋಚ್ನೆ ಮಾಡಿ ನೋಡಿ. ದಾವೀದನಿಗೆ ಹೊಸ ಲೋಕದಲ್ಲಿ ಯೆಹೋವ ಮತ್ತೆ ಜೀವ ಕೊಡ್ತಾನೆ. ಆಗ ಯೇಸುವಿನ ಸಾವಿರ ವರ್ಷದ ಆಳ್ವಿಕೆ ಶುರು ಆಗಿರುತ್ತೆ. ದಾವೀದ ಅಲ್ಲಿ ಖುಷಿ ಖುಷಿಯಾಗಿ ಇರ್ತಾನೆ. ತಾನಿಷ್ಟು ಖುಷಿ ಖುಷಿಯಾಗಿ ಇರೋದು ತನ್ನ ವಂಶದಲ್ಲೇ ಹುಟ್ಟಿರೋ ಒಬ್ಬ ವ್ಯಕ್ತಿಯ ಆಡಳಿತದಲ್ಲಿ ಅಂತ ಗೊತ್ತಾದಾಗ ಅವನಿಗೆ ಹೇಗನಿಸುತ್ತೆ ಅಲ್ವಾ? ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವು ಯೆಹೋವ ದೇವರಿಗೋಸ್ಕರ ತುಂಬ ವಿಷ್ಯಗಳನ್ನ ಮಾಡಬೇಕು ಅಂತ ಅಂದ್ಕೊಂಡಿರ್ತೀವಿ. ಅದು ನಮ್ಮಿಂದ ಆಗದೇ ಇದ್ದಾಗ ಬೇಜಾರ್ ಮಾಡ್ಕೊಬಾರದು. ಯಾಕಂದ್ರೆ ಯೆಹೋವ ನಮಗೆ ಬೇರೆ ಆಶೀರ್ವಾದಗಳನ್ನ ಕೊಡೋಕೆ ಕಾಯ್ತಾ ಇರ್ತಾನೆ. ಅಂಥ ಆಶೀರ್ವಾದ ಸಿಗುತ್ತೆ ಅಂತ ನಾವು ಅಂದ್ಕೊಂಡೇ ಇರಲ್ಲ!
11. ಒಂದನೇ ಶತಮಾನದ ಕ್ರೈಸ್ತರು ತಾವು ಅಂದ್ಕೊಂಡಿದ್ದ ವಿಷ್ಯ ನಡೀದೇ ಇದ್ದಾಗ ಯೆಹೋವ ಅವ್ರನ್ನ ಹೇಗೆ ಆಶೀರ್ವದಿಸಿದನು? (ಅಪೊಸ್ತಲರ ಕಾರ್ಯ 6:7)
11 ಒಂದನೇ ಶತಮಾನದಲ್ಲಿದ್ದ ಕ್ರೈಸ್ತರ ಉದಾಹರಣೆ ನೋಡಿ. ಅವರು ದೇವರ ಆಳ್ವಿಕೆ ಬರುತ್ತೆ ಅಂತ ಕಾಯ್ತಾ ಇದ್ರು. ಆದ್ರೆ ಅವರು ಅಂದ್ಕೊಂಡ ಸಮಯದಲ್ಲಿ ಅದು ಬರಲಿಲ್ಲ. (ಅ. ಕಾ. 1:6, 7) ಆಗ ಅವರು ಏನು ಮಾಡಿದ್ರು? ಸಿಹಿಸುದ್ದಿ ಸಾರೋದ್ರಲ್ಲಿ ಬಿಜಿ಼ ಆದ್ರು. ಆಗ ತುಂಬ ಜನ ದೇವರ ಬಗ್ಗೆ ಕಲಿತ್ರು. ಇದನ್ನ ನೋಡಿದಾಗ ಯೆಹೋವ ದೇವರು ತಮ್ಮನ್ನ ಆಶೀರ್ವದಿಸ್ತಿದ್ದಾನೆ ಅಂತ ಆ ಕ್ರೈಸ್ತರಿಗೆ ಗೊತ್ತಾಯ್ತು.—ಅಪೊಸ್ತಲರ ಕಾರ್ಯ 6:7 ಓದಿ.
12. ಬರಗಾಲ ಬಂದಾಗ ಒಂದನೇ ಶತಮಾನ ಕ್ರೈಸ್ತರು ಏನು ಮಾಡಿದ್ರು?
12 ಒಂದು ಸಲ “ಇಡೀ ಭೂಮಿಯಲ್ಲಿ” ಬರ ಬಂತು. (ಅ. ಕಾ. 11:28) ಆಗ ಒಂದನೇ ಶತಮಾನದ ಕ್ರೈಸ್ತರಿಗೂ ತುಂಬ ಕಷ್ಟ ಆಯ್ತು. ಅವ್ರಿಗೆ ಊಟಕ್ಕೆ ಎಷ್ಟು ಕಷ್ಟ ಆಗಿರಬೇಕು ಅಂತ ಸ್ವಲ್ಪ ಯೋಚ್ನೆ ಮಾಡಿ. ಅಪ್ಪ-ಅಮ್ಮಂದಿರಿಗೆ ಕುಟುಂಬನ ಹೇಗಪ್ಪಾ ಸಾಕೋದು ಅಂತ ಚಿಂತೆ ಆಗಿರುತ್ತೆ. ಬೇರೆಬೇರೆ ಕಡೆ ಹೋಗಿ ಸಿಹಿಸುದ್ದಿ ಸಾರಬೇಕು ಅಂತ ಅಂದ್ಕೊಂಡಿರೋ ಯುವ ಜನ್ರಿಗೆ ಬರ ಮುಗಿಯೋ ತನಕ ಕಾಯಬೇಕಾ ಅಥವಾ ಹೋಗಬೇಕಾ ಅಂತ ಯೋಚ್ನೆ ಆಗಿರುತ್ತೆ. ಆದ್ರೂ ಅಲ್ಲೇ ಇದ್ಕೊಂಡು ಆದಷ್ಟು ಜನ್ರಿಗೆ ಸಿಹಿಸುದ್ದಿ ಸಾರಿದ್ರು. ಅಷ್ಟೇ ಅಲ್ಲ, ಯೂದಾಯದಲ್ಲಿದ್ದ ಸಹೋದರ ಸಹೋದರಿಯರಿಗೆ ತಮ್ಮ ಹತ್ರ ಇದ್ದಿದ್ದನ್ನ ಕೊಟ್ಟು ಸಹಾಯ ಮಾಡಿದ್ರು.—ಅ. ಕಾ. 11:29, 30.
13. ಬರಗಾಲ ಬಂದಾಗ ಯೆಹೋವ ಕ್ರೈಸ್ತರನ್ನ ಹೇಗೆ ಆಶೀರ್ವದಿಸಿದನು?
13 ಬರಗಾಲ ಇದ್ರೂ ಅದಕ್ಕೆ ಹೊಂದ್ಕೊಂಡಿದ್ರಿಂದ ಒಂದನೇ ಶತಮಾನದ ಕ್ರೈಸ್ತರನ್ನ ಯೆಹೋವ ಹೇಗೆ ಆಶೀರ್ವದಿಸಿದನು? ಯೂದಾಯದಲ್ಲಿದ್ದ ಕ್ರೈಸ್ತರಿಗೆ ಸಹೋದರ ಸಹೋದರಿಯರಿಂದ ಸಹಾಯ ಸಿಕ್ಕಿದಾಗ ಅವರು ಯೆಹೋವನ ಆಶೀರ್ವಾದನ ಕಣ್ಣಾರೆ ನೋಡಿದ್ರು. (ಮತ್ತಾ. 6:31-33) ಅವರು ಒಬ್ರಿಗೊಬ್ರು ಇನ್ನೂ ಹತ್ರ ಆದ್ರು. ಸಹಾಯ ಮಾಡಿದವರು ಕೂಡ ಯೆಹೋವನ ಆಶೀರ್ವಾದ ಪಡ್ಕೊಂಡ್ರು. ಯಾಕಂದ್ರೆ ಅವ್ರಲ್ಲಿ ಕೆಲವರು ಹಣ ಕೊಟ್ಟು ಸಹಾಯ ಮಾಡಿದ್ರು. ಇನ್ನು ಕೆಲವರು ಬೇರೆಬೇರೆ ರೀತಿಯಲ್ಲಿ ಸಹಾಯ ಮಾಡಿದ್ರು. ಹೀಗೆ ಅವರು ಕೊಡೋದ್ರಲ್ಲಿ ಸಿಗೋ ಸಂತೋಷನ ಅನುಭವಿಸಿದ್ರು.—ಅ. ಕಾ. 20:35.
14. (ಎ) ಹಿಂಸೆ-ವಿರೋಧ ಬಂದಾಗ ಪೌಲ ಮತ್ತು ಬಾರ್ನಬ ಏನು ಮಾಡಿದ್ರು? (ಬಿ) ಇದ್ರಿಂದ ಏನಾಯ್ತು? (ಅಪೊಸ್ತಲರ ಕಾರ್ಯ 14:21, 22)
14 ಒಂದನೇ ಶತಮಾನದ ಕ್ರೈಸ್ತರಿಗೆ ಕೆಲವೊಮ್ಮೆ ದಿಢೀರಂತ ಹಿಂಸೆ ವಿರೋಧಗಳು ಬರ್ತಿತ್ತು. ಪೌಲ ಮತ್ತು ಬಾರ್ನಬನ ಉದಾಹರಣೆ ನೋಡಿ. ಅವರು ಲುಸ್ತ್ರಕ್ಕೆ ಸಿಹಿಸುದ್ದಿ ಸಾರೋಕೆ ಹೋದಾಗ ಅಲ್ಲಿನ ಜನ ಚೆನ್ನಾಗಿ ಕೇಳಿಸ್ಕೊಂಡ್ರು. ಆದ್ರೆ ಆಮೇಲೆ ಆ ಜನ್ರನ್ನ ವಿರೋಧಿಗಳು “ತಮ್ಮ ಪಕ್ಷಕ್ಕೆ ಸೇರಿಸ್ಕೊಂಡ್ರು.” ಅವ್ರಲ್ಲಿ ಕೆಲವರು ವಿರೋಧಿಗಳ ಜೊತೆ ಸೇರ್ಕೊಂಡು ಪೌಲನಿಗೆ ಕಲ್ಲು ಹೊಡೆದು ಕೊಲ್ಲೋಕೆ ಪ್ರಯತ್ನ ಮಾಡಿದ್ರು. (ಅ. ಕಾ. 14:19) ಇಷ್ಟೆಲ್ಲಾ ಕಷ್ಟಗಳು ಬಂದಾಗ ಪೌಲ ಮತ್ತು ಬಾರ್ನಬ ಸಿಹಿಸುದ್ದಿ ಸಾರೋದನ್ನ ನಿಲ್ಲಿಸಿಬಿಟ್ರಾ? ಇಲ್ಲ. ಅವರು ಬೇರೆ ಕಡೆ ಹೋಗಿ ಸಾರಿದ್ರು. ಇದ್ರಿಂದ ‘ತುಂಬ ಜನ ಶಿಷ್ಯರಾದ್ರು.’ ಅಷ್ಟೇ ಅಲ್ಲ, ಅವ್ರಿಬ್ರನ್ನ ನೋಡಿ ಅಲ್ಲಿದ್ದ ಸಹೋದರ ಸಹೋದರಿಯರ ನಂಬಿಕೆನೂ ಜಾಸ್ತಿ ಆಯ್ತು. (ಅಪೊಸ್ತಲರ ಕಾರ್ಯ 14:21, 22 ಓದಿ.) ಇದ್ರಿಂದ ನಾವೇನು ಕಲಿಬಹುದು? ಪೌಲ ಮತ್ತು ಬಾರ್ನಬನಿಗೆ ದಿಢೀರಂತ ಹಿಂಸೆ ಬಂದಾಗ ಅವರು ನಂಬಿಕೆ ಕಳಕೊಳ್ಳಲಿಲ್ಲ. ಸಿಹಿಸುದ್ದಿ ಸಾರೋದನ್ನ ಬಿಟ್ಟುಬಿಡಲಿಲ್ಲ. ನಾವೂ ಅವ್ರ ತರಾನೇ ಇರಬೇಕು. ಯೆಹೋವ ಕೊಟ್ಟಿರೋ ಕೆಲಸನ ನಾವು ಭಯಪಡದೆ ಮಾಡ್ತಾ ಇದ್ರೆ ಯೆಹೋವ ನಮ್ಮನ್ನೂ ಆಶೀರ್ವದಿಸ್ತಾನೆ.
ಯೆಹೋವ ಈಗ ಹೇಗೆ ಸಹಾಯ ಮಾಡ್ತಿದ್ದಾನೆ?
15. ಸಹೋದರ ಎ. ಹೆಚ್. ಮ್ಯಾಕ್‌ಮಿಲನ್ ಅವ್ರಿಂದ ನೀವೇನು ಕಲಿತ್ರಿ?
15 1914ಕ್ಕೆ ಮುಂಚೆ ಇದ್ದ ಎಷ್ಟೋ ಸಹೋದರ ಸಹೋದರಿಯರು ತಾವು ಬೇಗ ಸ್ವರ್ಗಕ್ಕೆ ಹೋಗಿಬಿಡ್ತೀವಿ ಅಂದ್ಕೊಂಡಿದ್ರು. ಸಹೋದರ ಎ. ಹೆಚ್. ಮ್ಯಾಕ್‌ಮಿಲನ್ ಕೂಡ ಅದನ್ನೇ ನಂಬಿದ್ರು. ಅದಕ್ಕೇ ಅವರು ಸೆಪ್ಟೆಂಬರ್ 1914ರಲ್ಲಿ ಸಾರ್ವಜನಿಕ ಭಾಷಣ ಕೊಡ್ತಿದ್ದಾಗ “ಬಹುಶಃ ಇದೇ ನನ್ನ ಕೊನೇ ಭಾಷಣ ಆಗಿರಬಹುದು” ಅಂತ ಸಭಿಕರಿಗೆ ಹೇಳಿದ್ರು. ಆದ್ರೆ ಹಾಗೆ ನಡೀಲಿಲ್ಲ. ಆಗ ಸಹೋದರ ಮ್ಯಾಕ್‌ಮಿಲನ್ “ನಾವು ತಪ್ಪಾಗಿ ಅರ್ಥ ಮಾಡ್ಕೊಂಡುಬಿಟ್ವಿ, ಬೇಗ ಸ್ವರ್ಗಕ್ಕೆ ಹೋಗ್ತೀವಿ ಅಂತ ಆತುರ ಪಟ್ಟುಬಿಟ್ವಿ. ಆದ್ರೆ ನಾವು ಒಡೆಯನ ಕೆಲಸದಲ್ಲಿ ಯಾವಾಗ್ಲೂ ಬಿಜಿ಼ಯಾಗಿರಬೇಕು ಅಂತ ಆಮೇಲೆ ಗೊತ್ತಾಯ್ತು” ಅಂತ ಬರೆದ್ರು. ಆಮೇಲೆ ಅವರು ಸಿಹಿಸುದ್ದಿ ಸಾರುತ್ತಾ ಬಿಜಿ಼ಯಾಗಿದ್ರು. ನಂಬಿಕೆಗೋಸ್ಕರ ಜೈಲಿಗೆ ಹೋಗಿದ್ದ ಸಹೋದರ ಸಹೋದರಿಯರನ್ನ ಪ್ರೋತ್ಸಾಹ ಮಾಡ್ತಿದ್ರು. ವಯಸ್ಸಾಗಿದ್ರೂ ತಪ್ಪದೇ ಕೂಟಗಳಿಗೆ ಹೋಗ್ತಿದ್ರು. ಅವರು ಬಹುಮಾನಕ್ಕೋಸ್ಕರ ಕಾಯ್ತಾ ಸುಮ್ನೆ ಕೂತಿರಲಿಲ್ಲ. ಕೊನೇ ಉಸಿರಿರೋ ತನಕ ಇದನ್ನೆಲ್ಲಾ ಮಾಡಿದ್ರು. ಅವರು ಸಾಯೋ ಮುಂಚೆ ಅಂದ್ರೆ 1966ರಲ್ಲಿ “ನನಗೆ ಮುಂಚೆಗಿಂತ ಈಗ ನಂಬಿಕೆ ಜಾಸ್ತಿಯಾಗಿದೆ” ಅಂದ್ರು. ಸಹೋದರ ಮ್ಯಾಕ್‌ಮಿಲನ್ ಅವ್ರಿಂದ ನಾವೇನು ಕಲಿಬಹುದು? ತುಂಬಾ ವರ್ಷಗಳಿಂದ ಕಷ್ಟಗಳನ್ನ ತಾಳ್ಕೊಂಡು ಹೊಸ ಲೋಕಕ್ಕೋಸ್ಕರ ಕಾಯ್ತಾ ಇರೋ ನಾವು ಕೂಡ ಸಹೋದರನ ತರ ಯೋಚ್ನೆ ಮಾಡಬೇಕಲ್ವಾ?—ಇಬ್ರಿ. 13:7.
16. ಸಹೋದರ ಹರ್ಬರ್ಟ್ ಜೆನಿಂಗ್ಸ್ ಮತ್ತು ಅವ್ರ ಹೆಂಡತಿಯ ಪರಿಸ್ಥಿತಿ ಇದ್ದಕ್ಕಿದ್ದ ಹಾಗೆ ಹೇಗೆ ಬದಲಾಯ್ತು? (ಯಾಕೋಬ 4:14)
16 ನಮ್ಮ ಸಹೋದರ ಸಹೋದರಿಯರಲ್ಲಿ ಎಷ್ಟೋ ಜನ್ರಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯ ಹಾಳಾಗಿದೆ. ಸಹೋದರ ಹರ್ಬರ್ಟ್ ಜೆನಿಂಗ್ಸ್‌ಗೂ b ಹೀಗೇ ಆಯ್ತು. ಅವರು ಮತ್ತು ಅವ್ರ ಹೆಂಡತಿ ಘಾನದಲ್ಲಿ ಮಿಷನರಿ ಸೇವೆ ಮಾಡ್ತಾ ಖುಷಿಖುಷಿಯಾಗಿ ಇದ್ರು. ಆದ್ರೆ ಆಮೇಲೆ ಆ ಸಹೋದರನಿಗೆ ಒಂದು ಕಾಯಿಲೆ ಬಂತು. ಅವ್ರಿಗೆ ಮೂಡ್ ಡಿಸಾರ್ಡರ್ ಇತ್ತು. ಅಂದ್ರೆ ಅವ್ರ ಮನಸ್ಥಿತಿ ಒಂದು ಸಲ ಇದ್ದ ಹಾಗೆ ಇನ್ನೊಂದು ಸಲ ಇರ್ತಾ ಇರ್ಲಿಲ್ಲ. ಆ ಕಾಯಿಲೆ ಬರುತ್ತೆ ಅಂತ ಅವರು ಅಂದ್ಕೊಂಡೇ ಇರ್ಲಿಲ್ಲ. ಅದಕ್ಕೆ ಅವರು ಯಾಕೋಬ 4:14ರಲ್ಲಿ ಹೇಳೋ ಹಾಗೆ ಆ ಕಾಯಿಲೆನ “ನಾವು ನಿರೀಕ್ಷಿಸದಿದ್ದ ‘ನಾಳೆ’” ಅಂತ ಕರೆದ್ರು. (ಓದಿ.) ಆದ್ರೂ “ವಾಸ್ತವ ಸಂಗತಿಯನ್ನು ಅಂಗೀಕರಿಸಿಕೊಂಡು, . . . ಘಾನ ದೇಶವನ್ನು ಮತ್ತು ನಮ್ಮ ಅನೇಕ ಮಂದಿ ಆಪ್ತ ಮಿತ್ರರನ್ನು ಬಿಟ್ಟು [ಚಿಕಿತ್ಸೆಗೋಸ್ಕರ] ಕೆನಡಕ್ಕೆ ಹಿಂದಿರುಗಲು ಏರ್ಪಾಡುಮಾಡಿದೆವು” ಅಂದ್ರು. ಇಷ್ಟೆಲ್ಲಾ ಕಷ್ಟ ಇದ್ರೂ ಅವ್ರಿಬ್ರೂ ಯೆಹೋವನ ಸಹಾಯದಿಂದ ಖುಷಿಖುಷಿಯಾಗಿ ಯೆಹೋವನ ಸೇವೆ ಮಾಡಿದ್ರು.
17. ಸಹೋದರ ಜೆನಿಂಗ್ಸ್ ಅವ್ರ ಜೀವನ ಕಥೆಯಿಂದ ಬೇರೆಯವರಿಗೆ ಹೇಗೆ ಸಹಾಯ ಆಯ್ತು?
17 ಸಹೋದರ ಜೆನಿಂಗ್ಸ್ ಅವ್ರ ಜೀವನ ಕಥೆ ತುಂಬ ಜನ್ರಿಗೆ ಧೈರ್ಯ ತುಂಬಿದೆ. ಅದನ್ನ ಓದಿದ ಮೇಲೆ ಒಬ್ಬ ಸಹೋದರಿ ಹೇಳಿದ್ದು: “ಈ ಲೇಖನದಂತೆ ಬೇರೆ ಯಾವ ಲೇಖನವೂ ನನ್ನನ್ನು ಇಷ್ಟೊಂದು ಪ್ರೇರೇಪಿಸಿಲ್ಲ . . . ಸಹೋದರ ಜೆನಿಂಗ್ಸ್‌ರವರು ಅಸ್ವಸ್ಥತೆಯ ಕಾರಣ ತಮ್ಮ ನೇಮಕವನ್ನು ಹೇಗೆ ಬಿಟ್ಟುಬಿಡಬೇಕಾಯಿತು ಎಂಬುದನ್ನು ಓದಿದಾಗ ನನಗೆ ಸಮತೋಲನವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.” ಇದೇ ತರ ಒಬ್ಬ ಸಹೋದರ ಏನು ಹೇಳ್ತಾರಂದ್ರೆ, “ಸಭೆಯಲ್ಲಿ ಹತ್ತು ವರುಷ ಹಿರಿಯನಾಗಿ ಸೇವೆಸಲ್ಲಿಸಿದ ನಂತರ ಮಾನಸಿಕ ಅನಾರೋಗ್ಯದ ಕಾರಣ ನಾನು ನನ್ನ ಸುಯೋಗವನ್ನು ಬಿಟ್ಟುಕೊಡಬೇಕಾಯಿತು. ನನಗೆ ಇದರಿಂದಾಗಿ ಎಷ್ಟೊಂದು ಸೋಲಿನ ಭಾವನೆಯಾಗುತ್ತಿತ್ತೆಂದರೆ, . . . ಜೀವನ ಕಥೆಗಳ ಲೇಖನಗಳನ್ನು ನಾನು ಓದುತ್ತಿರಲಿಲ್ಲ. ಆದರೆ ಸಹೋದರ ಜೆನಿಂಗ್ಸ್‌ರವರ ಪ್ರಯತ್ನವು ನನಗೆ ಪ್ರೋತ್ಸಾಹದಾಯಕವಾಗಿತ್ತು. ಎಣಿಸಲಾರದಷ್ಟು ಬಾರಿ ನಾನು ಈ ಲೇಖನವನ್ನು ಓದಿದ್ದೇನೆ” ಅಂದ್ರು. ನಮಗೂ ಈ ತರ ಇದ್ದಕ್ಕಿದ್ದ ಹಾಗೆ ಕಷ್ಟಗಳು ಬಂದಾಗ ಅದನ್ನ ತಾಳ್ಕೊಂಡ್ರೆ ಬೇರೆಯವರು ನಮ್ಮನ್ನ ನೋಡಿ ಧೈರ್ಯ ಪಡ್ಕೊಳ್ತಾರೆ. ನಾವು ಕೆಲವೊಮ್ಮೆ ನಮ್ಮ ಜೀವನ ಹೀಗಿರುತ್ತೆ, ಹಾಗಿರುತ್ತೆ ಅಂತ ಕನಸು ಕಂಡಿರ್ತೀವಿ. ಆದ್ರೆ ಅದು ಆಗದೇ ಹೋದಾಗ ಸೋತು ಹೋಗಬಾರದು, ನಂಬಿಕೆ ಕಳಕೊಳ್ಳಬಾರದು, ತಾಳ್ಕೊಬೇಕು.—1 ಪೇತ್ರ 5:9.
18. ಚಿತ್ರದಲ್ಲಿ ತೋರಿಸಿರೋ ಹಾಗೆ ನೈಜೀರಿಯಾದ ಸಹೋದರಿಯಿಂದ ನೀವೇನು ಕಲಿತ್ರಿ?
18 ಕೊರೊನಾ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರು ತುಂಬಾನೇ ಕಷ್ಟ ಅನುಭವಿಸಿದ್ರು. ಅವ್ರ ಪರಿಸ್ಥಿತಿನೇ ತಲೆಕೆಳಗಾಯ್ತು. ನೈಜೀರಿಯಾದಲ್ಲಿರೋ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಅವರು ವಿಧವೆಯಾಗಿದ್ರು. ಅವ್ರಿಗೆ ತಿನ್ನೋಕೆ ಬೇಕಾದಷ್ಟು ಆಹಾರನೂ ಇರ್ಲಿಲ್ಲ, ಕೈಯಲ್ಲಿ ಕಾಸೂ ಇರ್ಲಿಲ್ಲ. ಅವ್ರ ಮಗಳು ಒಂದಿನ ಬೆಳಗ್ಗೆ ‘ಅಮ್ಮ, ಇಷ್ಟೇ ಇಷ್ಟು ಅಕ್ಕಿ ಇದ್ಯಲ್ಲಾ, ಮಧ್ಯಾಹ್ನ ಊಟಕ್ಕೆ ಏನು ಮಾಡೋದು’ ಅಂತ ಕೇಳಿದಳು. ಆಗ ಆ ಸಹೋದರಿ ಮಗಳಿಗೆ ‘ನಮ್ಮತ್ರ ಊಟ ತಗೊಳ್ಳೋಕೆ ಕಾಸಿಲ್ಲಮ, ಆದ್ರೆ ಚಾರೆಪ್ತದ ವಿಧವೆ ತರ ಯೆಹೋವನ ಮೇಲೆ ನಂಬಿಕೆ ಇಡೋಣ. ಈಗ ಏನಿದೆಯೋ ಅದನ್ನ ತಿನ್ನೋಣ, ಆಮೇಲೆ ಯೆಹೋವ ನೋಡ್ಕೊಳ್ತಾನೆ’ ಅಂತ ಹೇಳಿದ್ರು. (1 ಅರ. 17:8-16) ಅವತ್ತು ಮಧ್ಯಾಹ್ನನೇ ಸಹೋದರರು ಅವ್ರಿಗೆ ಊಟಕ್ಕೆ ಬೇಕಾದ ಸಾಮಾನುಗಳನ್ನ ತಂದುಕೊಟ್ರು. ಅದ್ರಿಂದ ಅವ್ರಿಗೆ 2 ವಾರಕ್ಕಿಂತ ಜಾಸ್ತಿ ದಿನ ಅಡುಗೆ ಮಾಡೋಕೆ ಆಯ್ತು. ‘ನಾನು ನನ್ ಮಗಳ ಹತ್ರ ಹೇಳಿದ ವಿಷ್ಯನ ಕೇಳಿಸಿಕೊಂಡು ಯೆಹೋವ ದೇವರು ಇಷ್ಟೊಂದು ಸಹಾಯ ಮಾಡಿದ್ರಲ್ಲಾ ಅಂತ ನೆನಸ್ಕೊಂಡಾಗ ಖುಷಿಯಾಯ್ತು’ ಅಂತ ಆ ಸಹೋದರಿ ಹೇಳಿದ್ರು. ನಮಗೆ ಯೆಹೋವನ ಮೇಲೆ ನಂಬಿಕೆ ಇದ್ರೆ ಜೀವನದಲ್ಲಿ ದಿಢೀರಂತ ಬರೋ ಕಷ್ಟಗಳು ನಮ್ಮನ್ನ ಆತನಿಗೆ ಇನ್ನೂ ಹತ್ರ ಆಗೋ ತರ ಮಾಡುತ್ತೆ.—1 ಪೇತ್ರ 5:6, 7.
19. ಸಹೋದರ ಅಲೆಸ್ಕಿ ಯರ್ಶಾವ್ ಅವರು ಯಾವೆಲ್ಲ ಕಷ್ಟಗಳನ್ನ ಅನುಭವಿಸಬೇಕಾಯ್ತು?
19 ಇತ್ತೀಚಿನ ವರ್ಷಗಳಲ್ಲಂತೂ ನಮ್ಮ ಸಹೋದರ ಸಹೋದರಿಯರು ತುಂಬ ಹಿಂಸೆ, ವಿರೋಧಗಳನ್ನ ಅನುಭವಿಸಿದ್ದಾರೆ. ರಷ್ಯಾದಲ್ಲಿರೋ ಸಹೋದರ ಅಲೆಸ್ಕಿ ಯರ್ಶಾವ್ ಅವ್ರ ಅನುಭವ ನೋಡಿ. 1994ರಲ್ಲಿ ಅವರು ದೀಕ್ಷಾಸ್ನಾನ ತಗೊಂಡ್ರು. ಆಗ ಅವ್ರಿದ್ದ ಜಾಗದಲ್ಲಿ ಯೆಹೋವನ ಸಾಕ್ಷಿಗಳಿಗೆ ಆರಾಧನೆ ಮಾಡೋ ಸ್ವಾತಂತ್ರ್ಯ ಇತ್ತು. ಆದ್ರೆ ಬರ್ತಾ ಬರ್ತಾ ಸನ್ನಿವೇಶ ಅದೇ ತರ ಇರ್ಲಿಲ್ಲ, ಪೂರ್ತಿ ಬದಲಾಯ್ತು. 2020ರಲ್ಲಿ ಸಹೋದರ ಯರ್ಶಾವ್ ಅವ್ರ ಮನೆಗೆ ಪೊಲೀಸರು ನುಗ್ಗಿ ಅವ್ರ ಹತ್ರ ಇದ್ದ ವಸ್ತುಗಳನ್ನೆಲ್ಲ ಜಪ್ತಿ ಮಾಡಿದ್ರು. ಕೆಲವು ತಿಂಗಳಾದಮೇಲೆ ಸರ್ಕಾರ ಅವ್ರ ಮೇಲೆ ಕ್ರಿಮಿನಲ್ ಕೇಸ್ ಹಾಕ್ತು. ಇದಕ್ಕೆ ಕಾರಣ ಅವ್ರ ಜೊತೆ ಸ್ಟಡಿ ಮಾಡ್ತಿದ್ದ ಒಬ್ಬ ವ್ಯಕ್ತಿ ಕೊಟ್ಟ ವಿಡಿಯೋ ರೆಕಾರ್ಡಿಂಗ್‌ಗಳು. ಅವನು ಆ ಸಹೋದರನ ಜೊತೆ ಬೈಬಲ್ ಕಲಿಯೋಕೆ ಆಸೆಯಿದೆ ಅಂತ ಒಂದು ವರ್ಷದಿಂದ ನಾಟಕ ಆಡಿಕೊಂಡು ಇದ್ದ. ಕೊನೆಗೆ ಆ ಸಹೋದರನ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡಿಬಿಟ್ಟ!
20. ಸಹೋದರ ಯರ್ಶಾವ್ ಯೆಹೋವನ ಜೊತೆಗಿದ್ದ ತಮ್ಮ ಸಂಬಂಧನ ಹೇಗೆ ಇನ್ನೂ ಗಟ್ಟಿ ಮಾಡ್ಕೊಂಡ್ರು?
20 ಈ ಕಷ್ಟಗಳಿಂದ ಸಹೋದರ ಯರ್ಶಾವ್‌ಗೆ ಏನು ಒಳ್ಳೇದಾಯ್ತು? ಯೆಹೋವನ ಜೊತೆ ಅವ್ರಿಗಿರೋ ಸಂಬಂಧ ಗಟ್ಟಿ ಆಯ್ತು. ಹೇಗೆ ಅಂತ ಅವ್ರ ಮಾತಲ್ಲೇ ಕೇಳಿ: “ನಾನೂ ನನ್ನ ಹೆಂಡತಿ ಯಾವಾಗ್ಲೂ ಒಟ್ಟಿಗೆ ಪ್ರಾರ್ಥನೆ ಮಾಡ್ತೀವಿ. ಯಾಕಂದ್ರೆ ಯೆಹೋವನ ಸಹಾಯ ಇದ್ರೆ ಮಾತ್ರ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗುತ್ತೆ. ನಾನು ಧೈರ್ಯ ಕಳ್ಕೊಂಡಾಗೆಲ್ಲಾ ಬೈಬಲ್ ಓದ್ತೀನಿ. ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರ ಬಗ್ಗೆ ಓದ್ತೀನಿ. ಕಷ್ಟ ಬಂದಾಗ ನಾವು ಗಾಬರಿ ಪಡಬಾರದು, ಯೆಹೋವನ ಮೇಲೆ ಪೂರ್ತಿ ನಂಬಿಕೆ ಇಡಬೇಕು ಅಂತ ಅವ್ರಿಂದ ನಾನು ಕಲ್ತಿದ್ದೀನಿ.”
21. ಈ ಲೇಖನದಲ್ಲಿ ನಾವೇನು ಕಲಿತ್ವಿ?
21 ಈ ಲೇಖನದಲ್ಲಿ ನಾವೇನು ಕಲಿತ್ವಿ? ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಪರಿಸ್ಥಿತಿ ಬದಲಾಗುತ್ತೆ, ದಿಢೀರಂತ ಕಷ್ಟಗಳು ಬರುತ್ತೆ. ಆಗ ನಾವು ಯೆಹೋವನ ಮೇಲೆ ನಂಬಿಕೆ ಇಟ್ರೆ ಏನೇ ಕಷ್ಟ ಬಂದ್ರೂ ಸಹಿಸ್ಕೊಳ್ತೀವಿ. ಯಾಕಂದ್ರೆ ಈ ಲೇಖನದ ಮುಖ್ಯವಚನ ಹೇಳೋ ತರ “ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು, ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.” (ಕೀರ್ತ. 34:19) ಹಾಗಾಗಿ ಕಷ್ಟ ಬಂದಾಗ ನಾವು ಅದ್ರ ಮೇಲೆ ಗಮನ ಕೊಡೋದು ಬೇಡ. ಅದನ್ನ ಸಹಿಸ್ಕೊಳ್ಳೋಕೆ ಯೆಹೋವ ನಮಗೆ ಶಕ್ತಿ ಕೊಡ್ತಾನೆ ಅನ್ನೋದನ್ನ ಮನಸ್ಸಲ್ಲಿಡೋಣ. ಆಗ ನಾವು ಕೂಡ ಅಪೊಸ್ತಲ ಪೌಲನ ತರ “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ” ಅಂತ ಹೇಳ್ತೀವಿ.—ಫಿಲಿ. 4:13.
ಗೀತೆ 60 ಆತನು ನಿನ್ನನ್ನು ಬಲಪಡಿಸುವನು
a ನಾಳೆ ನಮಗೆ ಯಾವ ಕಷ್ಟ ಬರುತ್ತೋ ಗೊತ್ತಿಲ್ಲ. ಆದ್ರೆ ಏನೇ ಕಷ್ಟ ಬಂದ್ರೂ, ಯೆಹೋವ ಅಂತೂ ನಮ್ಮ ಕೈಬಿಡಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು. ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಕಷ್ಟ ಬಂದಾಗ ಯೆಹೋವ ಅವ್ರಿಗೆ ಹೇಗೆ ಸಹಾಯ ಮಾಡಿದ್ದಾನೆ? ಈಗ ತನ್ನ ಜನ್ರಿಗೆ ಹೇಗೆ ಸಹಾಯ ಮಾಡ್ತಿದ್ದಾನೆ? ಅದನ್ನ ಈ ಲೇಖನದಲ್ಲಿ ನೋಡೋಣ. ಆಗ ನಾವೂ ಕೂಡ ಅವ್ರ ತರ ಯೆಹೋವನನ್ನ ನಂಬಿದ್ರೆ ಆತನು ನಮ್ಮ ನಂಬಿಕೆನೂ ಖಂಡಿತ ಉಳಿಸ್ಕೊಳ್ತಾನೆ, ಕಷ್ಟಕಾಲದಲ್ಲಿ ನಮ್ಮ ಕೈಬಿಡಲ್ಲ ಅಂತ ನಮಗೆ ಗೊತ್ತಾಗುತ್ತೆ.