ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 16

“ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ”!

“ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ”!

“ಯೇಸು [ಮಾರ್ಥಗೆ] ‘ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ’ ಅಂದನು.” —ಯೋಹಾ. 11:23.

ಗೀತೆ 111 ಆತ ಕರೆಯುವ

ಈ ಲೇಖನದಲ್ಲಿ ಏನಿದೆ? a

1. ಮ್ಯಾಥ್ಯು ಅನ್ನೋ ಚಿಕ್ಕ ಹುಡುಗನಿಗೆ ಯಾವ ನಂಬಿಕೆಯಿತ್ತು?

 ಮ್ಯಾಥ್ಯು ಅನ್ನೋ ಹುಡುಗನಿಗೆ ಒಂದು ಕಾಯಿಲೆ ಇದೆ. ಅದ್ರಿಂದ ಅವನಿಗೆ ತುಂಬ ಆಪರೇಷನ್‌ಗಳು ಆಗಿದೆ. ಒಂದು ಸಲ ಅವನು ಅಪ್ಪ ಅಮ್ಮನ ಜೊತೆ JW ಪ್ರಸಾರ ನೋಡ್ತಿದ್ದ. ಆಗ ಅವನಿಗೆ 7 ವರ್ಷ. ಆ ಕಾರ್ಯಕ್ರಮದ ಕೊನೇಲಿ ಒಂದು ಹಾಡು ಇತ್ತು. ಅದ್ರಲ್ಲಿ ಯೆಹೋವ ದೇವರು ಸತ್ತಿರೋರನ್ನ ಮತ್ತೆ ಬದುಕಿಸಿದಾಗ ಅವರ ಮನೆಯವರೆಲ್ಲಾ ಅವರನ್ನ ತಬ್ಬಿಕೊಳ್ತಿದ್ರು. b ಇದನ್ನ ನೋಡಿ ಮ್ಯಾಥ್ಯು ತನ್ನ ಅಪ್ಪ ಅಮ್ಮನ ಕೈ ಹಿಡ್ಕೊಂಡು “ಅಪ್ಪ, ಅಮ್ಮ ನಾನು ಇವಾಗ ಸತ್ತು ಹೋದ್ರು ಪ್ಯಾರಡೈಸಲ್ಲಿ ಬರ್ತಿನಿ. ನೀವು ಏನು ಚಿಂತೆ ಮಾಡಬೇಡಿ ಎಲ್ಲಾ ಸರಿಹೋಗುತ್ತೆ” ಅಂತ ಹೇಳಿದ. ಯೆಹೋವ ತನ್ನನ್ನ ಬದುಕಿಸ್ತಾನೆ ಅಂತ ಅವನಿಗೆ ನಂಬಿಕೆ ಇತ್ತು. ಇದನ್ನ ನೋಡಿದಾಗ ಅವನ ಅಪ್ಪ ಅಮ್ಮಗೆ ಎಷ್ಟು ಖುಷಿಯಾಗಿರಬೇಕಲ್ವಾ?

2-3. ಸತ್ತವರನ್ನ ಯೆಹೋವ ಮತ್ತೆ ಬದುಕಿಸ್ತಾನೆ ಅಂತ ನಾವ್ಯಾಕೆ ಆಗಾಗ ನೆನಪಿಸಿಕೊಳ್ತಾ ಇರ್ಬೇಕು?

2 ಸತ್ತಿರೋರನ್ನ ಮತ್ತೆ ಬದುಕಿಸ್ತೀನಿ ಅಂತ ಯೆಹೋವ ಕೊಟ್ಟ ಮಾತನ್ನ ಆಗಾಗ ನೆನಪಿಸ್ಕೊಳ್ತಾ ಇರಿ. (ಯೋಹಾ. 5:28, 29) ಯಾಕೆ? ಯಾಕಂದ್ರೆ ನಾಳೆ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲ. ನಮಗೆ ದೊಡ್ಡ ಕಾಯಿಲೆ ಬರಬಹುದು ಅಥವಾ ನಮ್ಮವರು ಯಾರಾದ್ರೂ ತೀರಿಹೋಗಬಹುದು. (ಪ್ರಸಂ. 9:11; ಯಾಕೋ. 4:13, 14) ಅಂಥ ಸಮಯದಲ್ಲಿ ನಾವು ಇದನ್ನ ನೆನಸ್ಕೊಂಡಾಗ ಆ ದುಃಖನ ಸಹಿಸ್ಕೊಳ್ಳೋಕೆ ಆಗುತ್ತೆ. (1 ಥೆಸ. 4:13) ಅಷ್ಟೇ ಅಲ್ಲ ಯೆಹೋವ ಅಪ್ಪ ನಮ್ಮನ್ನ ತುಂಬ ಪ್ರೀತಿಸ್ತಾನೆ. (ಲೂಕ 12:7) ನಮ್ಮ ಬಗ್ಗೆ ಎಲ್ಲಾನೂ ಚೆನ್ನಾಗಿ ತಿಳ್ಕೊಂಡಿದ್ದಾನೆ ಅನ್ನೋದನ್ನೂ ನೆನಪಿಡಿ. ಯಾಕಂದ್ರೆ ಸಾಯೋ ಮುಂಚೆ ಇದ್ದ ಸ್ವಭಾವ, ನೆನಪುಗಳನ್ನೆಲ್ಲಾ ಮತ್ತೆ ನಮಗೆ ವಾಪಸ್‌ ಕೊಟ್ಟು ಸೃಷ್ಟಿ ಮಾಡ್ತಾನೆ. ಯೆಹೋವ ದೇವರಿಗೆ ನಾವಂದ್ರೆ ತುಂಬ ಇಷ್ಟ. ಅದಕ್ಕೆ ನಾವು ತೀರಿಹೋದ್ರೂ ಯೆಹೋವ ನಮ್ಮನ್ನ ಮತ್ತೆ ಬದುಕಿಸಿ ಶಾಶ್ವತ ಜೀವ ಕೊಡ್ತಾನೆ. ಇದನ್ನ ತಿಳ್ಕೊಂಡಾಗ ನಮಗೆ ಆತನ ಮೇಲೆ ಪ್ರೀತಿ ಉಕ್ಕಿ ಬರುತ್ತೆ ಅಲ್ವಾ!

3 ಸತ್ತವರನ್ನ ಮತ್ತೆ ಬದುಕಿಸ್ತೀನಿ ಅಂತ ಯೆಹೋವ ಕೊಟ್ಟ ಮಾತನ್ನ ನಾವು ಯಾಕೆ ನಂಬಬಹುದು ಅನ್ನೋದನ್ನ ಈಗ ನೋಡೋಣ. ಆಮೇಲೆ ಯೋಹಾನ 11ನೇ ಅಧ್ಯಾಯದಲ್ಲಿರೋ ಒಂದು ಘಟನೆಯನ್ನ ಚರ್ಚಿಸೋಣ. ಈ ಲೇಖನದಲ್ಲಿ ಮುಖ್ಯ ವಚನದಲ್ಲಿರೋ ಮಾತುಗಳನ್ನ ಯೇಸು ಆವಾಗ್ಲೇ ಹೇಳಿದ್ದು. ಆ ವಚನದಲ್ಲಿ “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ಅಂತ ಇದೆ. (ಯೋಹಾ. 11:23) ಈ ಘಟನೆಯನ್ನ ಓದುವಾಗ ಯೆಹೋವ ಕೊಟ್ಟಿರೋ ಮಾತಿನ ಮೇಲೆ ನಮ್ಮ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. ಕೊನೆಗೆ, ಸತ್ತವರು ಮತ್ತೆ ಬದುಕ್ತಾರೆ ಅನ್ನೋ ನಂಬಿಕೆನ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ನಾವು ಏನು ಮಾಡಬೇಕು ಅಂತನೂ ನೋಡೋಣ.

ಸತ್ತವರು ಮತ್ತೆ ಬದುಕ್ತಾರೆ ಅಂತ ನಾವ್ಯಾಕೆ ನಂಬಬಹುದು?

4. ಒಬ್ರು ಕೊಟ್ಟಿರೋ ಮಾತನ್ನ ನಾವು ಯಾವಾಗ ನಂಬ್ತೀವಿ? ಉದಾಹರಣೆ ಕೊಡಿ.

4 ಯಾರಾದ್ರೂ ನಮಗೆ ಮಾತು ಕೊಟ್ರೆ ಅದನ್ನ ಉಳಿಸ್ಕೊಳ್ಳೋ ಆಸೆ ಅವ್ರಿಗಿದ್ಯಾ ಅಂತ ಯೋಚನೆ ಮಾಡ್ತೀವಿ. ಅದನ್ನ ಮಾಡೋ ಶಕ್ತಿ ಅವ್ರಿಗಿದ್ಯಾ ಅಂತಾನೂ ಯೋಚಿಸ್ತೀವಿ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ತುಂಬ ಮಳೆ ಬಂದು ನಿಮ್ಮ ಮನೆ ಹಾಳಾಗಿ ಹೋಗಿದೆ ಅಂತ ಅಂದ್ಕೊಳಿ. ಆಗ ನಿಮ್ಮ ಫ್ರೆಂಡ್‌ ಬಂದು “ಬೇಜಾರ್‌ ಮಾಡ್ಕೊಬೇಡ ನಾನ್‌ ಅದನ್ನ ಮತ್ತೆ ಕಟ್ಟಿಕೊಡ್ತೀನಿ” ಅಂತ ಹೇಳ್ತಾನೆ. ನಿಮ್ಮ ಮೇಲೆ ಅವನಿಗೆ ಪ್ರೀತಿ ಇರೋದ್ರಿಂದ, ನಿಮಗೆ ಸಹಾಯ ಮಾಡೋ ಆಸೆ ಅವನಿಗೆ ಇರೋದ್ರಿಂದ ಅವನು ಖಂಡಿತ ಸಹಾಯ ಮಾಡ್ತಾನೆ ಅಂತ ನಂಬ್ತೀರ. ಅದ್ರಲ್ಲೂ ಅವನಿಗೆ ಮನೆ ಕಟ್ಟೋಕೆ ಬರುತ್ತೆ, ಅದಕ್ಕೆ ಬೇಕಾದ ವಸ್ತುಗಳೂ ಅವನ ಹತ್ರ ಇದೆ ಅಂದಾಗ ಅವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬರುತ್ತೆ. ಯಾಕಂದ್ರೆ ಅದನ್ನ ಮಾಡೋ ಶಕ್ತಿನೂ ಅವನಿಗಿದೆ. ಹಾಗಾದ್ರೆ ದೇವರು ಕೊಟ್ಟಿರೋ ಮಾತನ್ನ ನಾವು ನಂಬಬಹುದಾ? ನಮ್ಮನ್ನ ಮತ್ತೆ ಬದುಕಿಸೋ ಆಸೆ ಮತ್ತು ಶಕ್ತಿ ಆತನಿಗಿದೆಯಾ? ನಿಮಗೇನು ಅನಿಸುತ್ತೆ?

5-6. ಸತ್ತವರನ್ನ ಮತ್ತೆ ಬದುಕಿಸಬೇಕು ಅನ್ನೋ ಆಸೆ ಯೆಹೋವನಿಗಿದೆ ಅಂತ ನಾವ್ಯಾಕೆ ಹೇಳಬಹುದು?

5 ತೀರಿಹೋದವ್ರನ್ನ ಮತ್ತೆ ಬದುಕಿಸಬೇಕು ಅನ್ನೋ ಆಸೆ ಯೆಹೋವನಿಗಿದೆಯಾ? ಖಂಡಿತ ಇದೆ. ಅದಕ್ಕೆ ತಾನು ಕೊಟ್ಟಿರೋ ಮಾತನ್ನ ಬೈಬಲಲ್ಲಿ ತುಂಬ ಕಡೆ ಬರೆಸಿಟ್ಟಿದ್ದಾನೆ. (ಯೆಶಾ. 26:19; ಹೋಶೇ. 13:14; ಪ್ರಕ. 20:11-13) ಯೆಹೋವ ದೇವರು ಒಂದು ಸಲ ಮಾತು ಕೊಟ್ಟ ಮೇಲೆ ಅದನ್ನ ಖಂಡಿತ ಮಾಡೇ ಮಾಡ್ತಾನೆ. (ಯೆಹೋ. 23:14) ಅಷ್ಟೇ ಅಲ್ಲ, ಅದನ್ನ ಮಾಡೋಕೆ ಆತನು ಕಾಯ್ತಾ ಇದ್ದಾನೆ. ಅದನ್ನ ನಾವು ಹೇಗೆ ಹೇಳಬಹುದು?

6 ಯೋಬನ ಉದಾಹರಣೆ ನೋಡಿ. ತಾನು ಸತ್ತು ಹೋದ್ರೂ ತನ್ನನ್ನ ಮತ್ತೆ ನೋಡೋಕೆ ಯೆಹೋವ ಆಸೆ ಪಡ್ತಾನೆ ಅಂತ ಯೋಬನಿಗೆ ಚೆನ್ನಾಗಿ ಗೊತ್ತಿತ್ತು. (ಯೋಬ 14:14, 15, ಪಾದಟಿಪ್ಪಣಿ) ಯೆಹೋವನನ್ನ ಆರಾಧನೆ ಮಾಡ್ತಿದ್ದ ಎಷ್ಟೋ ಜನ ಸತ್ತು ಹೋಗಿದ್ದಾರೆ. ಅವರನ್ನೆಲ್ಲಾ ಮತ್ತೆ ನೋಡಬೇಕು ಅಂತ ಯೆಹೋವ ಹಂಬಲಿಸ್ತಾನೆ. ಅವರೆಲ್ಲಾ ಆರೋಗ್ಯವಾಗಿ ಖುಷಿಖುಷಿಯಾಗಿ ಇರ್ಬೇಕು ಅಂತ ಆತನು ಇಷ್ಟ ಪಡ್ತಾನೆ. ಕೋಟಿಗಟ್ಟಲೆ ಜನ್ರು ಆತನ ಬಗ್ಗೆ ಕಲಿಯೋಕೆ ಅವಕಾಶನೇ ಸಿಗದೆ ತೀರಿಹೋಗಿದ್ದಾರೆ. ಅವರನ್ನೂ ಕೂಡ ಮತ್ತೆ ಜೀವಂತವಾಗಿ ನೋಡೋಕೆ ಯೆಹೋವ ಆಸೆ ಪಡ್ತಾನೆ. (ಅ. ಕಾ. 24:15) ಅವರಿಗೆಲ್ಲಾ ಶಾಶ್ವತವಾಗಿ ಜೀವಿಸೋಕೆ ಮತ್ತು ತನ್ನ ಜೊತೆ ಫ್ರೆಂಡ್‌ ಆಗೋಕೆ ಒಂದು ಅವಕಾಶ ಕೊಡ್ತಾನೆ. (ಯೋಹಾ. 3:16) ಇದ್ರಿಂದ ಯೆಹೋವನಿಗೆ ಸತ್ತವರನ್ನ ಮತ್ತೆ ನೋಡಬೇಕು ಅನ್ನೋ ಆಸೆ ಇದೆ ಅಂತ ಗೊತ್ತಾಗುತ್ತೆ.

7-8. ಸತ್ತವರನ್ನ ಮತ್ತೆ ಬದುಕಿಸೋ ಶಕ್ತಿ ಯೆಹೋವನಿಗಿದೆ ಅಂತ ನಾವು ಯಾಕೆ ಗ್ಯಾರಂಟಿಯಾಗಿ ಹೇಳಬಹುದು?

7 ಸತ್ತವರನ್ನ ಮತ್ತೆ ಬದುಕಿಸೋ ಶಕ್ತಿ ಯೆಹೋವ ದೇವರಿಗಿದ್ಯಾ? ಖಂಡಿತ ಇದೆ! ಅದ್ರಲ್ಲಿ ಯಾವ ಸಂಶಯನೂ ಇಲ್ಲ. ಯಾಕಂದ್ರೆ ಆತನು “ಸರ್ವಶಕ್ತ” ದೇವರು. (ಪ್ರಕ. 1:8) ಶತ್ರು ತರ ಇರೋ ಮರಣವನ್ನ ಸೋಲಿಸೋ ಶಕ್ತಿ ಆತನಿಗಿದೆ. (1 ಕೊರಿಂ. 15:26) ಇದನ್ನ ತಿಳ್ಕೊಂಡಾಗ ನಮಗೆ ಎಷ್ಟು ನೆಮ್ಮದಿ ಆಗುತ್ತೆ ಅಲ್ವಾ? ಸಹೋದರಿ ಎಮ್ಮಾ ಅರ್ನಾಲ್ಡ್‌ ಅವ್ರ ಅನುಭವ ನೋಡಿ. ಎರಡನೇ ಮಹಾಯುದ್ಧ ನಡಿವಾಗ ಅವರು ಮತ್ತು ಅವ್ರ ಕುಟುಂಬದವರು ತುಂಬ ಹಿಂಸೆ ವಿರೋಧಗಳನ್ನ ಅನುಭವಿಸಿದ್ರು. ಅಷ್ಟೇ ಅಲ್ಲ, ಆಗ ನಾಜಿ಼ ಸೆರೆಶಿಬಿರದಲ್ಲಿ ಎಷ್ಟೋ ಸಹೋದರ ಸಹೋದರಿಯರು ಪ್ರಾಣ ಕಳ್ಕೊಂಡ್ರು. ಇದನ್ನೆಲ್ಲ ನೋಡಿದಾಗ ಎಮ್ಮಾ ಅವ್ರ ಮಗಳಿಗೆ ತುಂಬ ದುಃಖ ಆಯ್ತು. ಆಗ ಅವರು ಅವಳಿಗೆ “ಸತ್ತವರು ಮತ್ತೆ ಯಾವತ್ತೂ ಬದುಕಿ ಬರಲ್ಲ ಅಂದ್ರೆ ಯೆಹೋವನಿಗಿಂತ ಸಾವಿಗೆ ಜಾಸ್ತಿ ಶಕ್ತಿ ಇದೆ ಅಂತ ಆಗಿಬಿಡುತ್ತೆ ಅಲ್ವಾ?” ಅಂತ ಕೇಳಿದ್ರು. ಸಹೋದರಿ ಎಮ್ಮಾ ಕೇಳಿದ್ದು ಸರಿಯಾಗೇ ಇದೆ ಅಲ್ವಾ? ಯೆಹೋವನೇ ಎಲ್ಲದಕ್ಕಿಂತ, ಎಲ್ರಿಗಿಂತ ಶಕ್ತಿಶಾಲಿ ದೇವರು! ಮನುಷ್ಯರನ್ನ ಸೃಷ್ಟಿ ಮಾಡಿರೋ ಯೆಹೋವ ದೇವರಿಗೆ ಸತ್ತುಹೋದ ಜನ್ರನ್ನ ಮತ್ತೆ ಬದುಕಿಸೋಕೆ ಆಗಲ್ವಾ? ಆಗೇ ಆಗುತ್ತೆ!

8 ಯೆಹೋವ ಸತ್ತವರನ್ನ ಮತ್ತೆ ಬದುಕಿಸ್ತಾನೆ ಅಂತ ಹೇಳೋಕೆ ಇನ್ನೊಂದು ಕಾರಣ ಆತನಿಗಿರೋ ನೆನಪಿನ ಶಕ್ತಿ. ಅದನ್ನ ನಾವು ಅಳೆಯೋಕೇ ಆಗಲ್ಲ. ಆತನು ಒಂದೊಂದು ನಕ್ಷತ್ರವನ್ನೂ ಹೆಸ್ರಿಡಿದು ಕರಿತಾನೆ. (ಯೆಶಾ. 40:26) ಅಂದ್ಮೇಲೆ ತೀರಿಹೋದವರನ್ನೆಲ್ಲಾ ಆತನು ನೆನಪಲ್ಲಿ ಇಟ್ಕೊಂಡಿರ್ತಾನೆ. (ಯೋಬ 14:13; ಲೂಕ 20:37, 38) ಅವ್ರ ಬಗ್ಗೆ ಆತನಿಗೆ ಎಲ್ಲಾ ಗೊತ್ತು. ಅವರು ನೋಡೋಕೆ ಹೇಗಿದ್ರು, ಅವ್ರ ಸ್ವಭಾವ ಏನು, ಅವ್ರ ಜೀವನದಲ್ಲಿ ಆದ ಅನುಭವಗಳೇನು ಮತ್ತು ಅವ್ರ ನೆನಪಲ್ಲಿ ಏನೆಲ್ಲಾ ಇತ್ತು ಅನ್ನೋದೂ ಆತನಿಗೆ ಚೆನ್ನಾಗಿ ಗೊತ್ತು.

9. ಸತ್ತವರನ್ನ ಮತ್ತೆ ಬದುಕಿಸ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತನ್ನ ನೀವ್ಯಾಕೆ ನಂಬ್ತೀರಾ?

9 ಯೆಹೋವ ದೇವರಿಗೆ ಸತ್ತವರನ್ನ ಮತ್ತೆ ಬದುಕಿಸೋ ಆಸೆನೂ ಇದೆ ಶಕ್ತಿನೂ ಇದೆ ಅಂತ ಈಗ ನಮಗೆ ಗೊತ್ತಾಯ್ತು. ಯೆಹೋವ ಕೊಟ್ಟಿರೋ ಮಾತನ್ನ ನಂಬೋಕೆ ನಮಗೆ ಇನ್ನೊಂದು ಕಾರಣನೂ ಇದೆ. ಅದೇನಂದ್ರೆ, ಯೆಹೋವ ಈಗಾಗಲೇ ಕೆಲವ್ರನ್ನ ಮತ್ತೆ ಬದುಕಿಸಿದ್ದಾನೆ. ಅಷ್ಟೇ ಅಲ್ಲ, ಯೇಸುಗೆ ಮತ್ತು ಇನ್ನೂ ಕೆಲವು ನಂಬಿಗಸ್ತ ಜನ್ರಿಗೆ ಸತ್ತವರನ್ನ ಮತ್ತೆ ಬದುಕಿಸೋ ಶಕ್ತಿ ಕೊಟ್ಟಿದ್ದನು. ಈ ತರ ಯೇಸು ಮಾಡಿದ ಒಂದು ಅದ್ಭುತ ಯೋಹಾನ 11ನೇ ಅಧ್ಯಾಯದಲ್ಲಿ ಇದೆ. ಅದನ್ನ ಈಗ ನೋಡೋಣ.

ಯೇಸು ತನ್ನ ಸ್ನೇಹಿತನನ್ನ ಕಳ್ಕೊಂಡಾಗ . . .

10. (ಎ) ಯೇಸು ಯೋರ್ದನಿನ ಆಚೆ ಸಾರೋಕೆ ಹೋಗಿದ್ದಾಗ ಬೇಥಾನ್ಯದಲ್ಲಿ ಏನಾಯ್ತು? (ಬಿ) ಆಗ ಯೇಸು ಏನು ಮಾಡಿದನು? (ಯೋಹಾನ 11:1-3)

10 ಯೋಹಾನ 11:1-3 ಓದಿ. ಕ್ರಿಸ್ತ ಶಕ 32ರ ಕೊನೆಯಲ್ಲಿ ಬೇಥಾನ್ಯದಲ್ಲಿ ಏನು ನಡೀತು ಅಂತ ನೋಡಿ. ಆ ಹಳ್ಳಿಯಲ್ಲಿ ಯೇಸು ಕ್ರಿಸ್ತನ ಸ್ನೇಹಿತ ಲಾಜರ ಮತ್ತು ಅವನ ಅಕ್ಕಂದಿರು ಇದ್ರು. (ಲೂಕ 10:38-42) ಒಂದಿನ ಲಾಜರನಿಗೆ ಹುಷಾರು ತಪ್ಪಿತು. ಅದಕ್ಕೆ ಅವನ ಅಕ್ಕಂದಿರು ತುಂಬ ಚಿಂತೆಯಲ್ಲಿದ್ರು. ಈ ಸುದ್ದಿನ ಯೇಸುಗೆ ತಲುಪಿಸಿದ್ರು. ಆಗ ಯೇಸು ಯೋರ್ದನ್‌ ನದಿಯ ಆಚೆ ಇದ್ದ. ಬೇಥಾನ್ಯದಿಂದ ಅಲ್ಲಿಗೆ ಹೋಗೋಕೆ ಎರಡು ದಿನ ಆಗ್ತಿತ್ತು. (ಯೋಹಾ. 10:40) ಈ ಸಂದೇಶ ಯೇಸುಗೆ ತಲಪೋಷ್ಟರಲ್ಲಿ ಲಾಜರ ತೀರಿಹೋದ. ಆದ್ರೆ ಈ ವಿಷ್ಯ ಗೊತ್ತಾದ ಮೇಲೂ ಯೇಸು ಅದೇ ಊರಲ್ಲಿ ಎರಡು ದಿನ ಇದ್ದ. ಆಮೇಲೆ ಆತನು ಬೇಥಾನ್ಯಕ್ಕೆ ಬಂದ. ಯೇಸು ಅಲ್ಲಿಗೆ ಬರೋಷ್ಟರಲ್ಲಿ ಲಾಜರ ಸತ್ತು 4 ದಿನ ಆಗಿತ್ತು. ಯೇಸು ಅಲ್ಲಿಗೆ ಬಂದ್ಮೇಲೆ ಒಂದು ಅದ್ಭುತ ಮಾಡಿದನು. ಅದ್ರಿಂದ ಯೆಹೋವ ದೇವರಿಗೆ ಹೊಗಳಿಕೆನೂ ಸಿಕ್ತು. ಲಾಜರನ ಕುಟುಂಬದವ್ರಿಗೆ ಖುಷಿನೂ ಆಯ್ತು.—ಯೋಹಾ. 11:4, 6, 11, 17.

11. ನಾವು ಎಂಥ ಸ್ನೇಹಿತರಾಗಿರಬೇಕು ಅಂತ ಯೇಸುವಿಂದ ಕಲಿತ್ವಿ?

11 ಸ್ನೇಹಿತರು ಅಂದ್ರೆ ಹೇಗಿರಬೇಕು ಅನ್ನೋದನ್ನ ಈ ಘಟನೆಯಿಂದ ತಿಳ್ಕೊಳ್ತೀವಿ. ಮಾರ್ಥ ಮತ್ತು ಮರಿಯ ಯೇಸುಗೆ ಏನಂತ ಸಂದೇಶ ಕಳಿಸಿದ್ರು? ‘ನೀನು ಇಲ್ಲಿಗೆ ಬರಬೇಕು’ ಅಂತ ಹೇಳಿರಲಿಲ್ಲ, ‘ನಿನ್ನ ಸ್ನೇಹಿತನಿಗೆ ಹುಷಾರಿಲ್ಲ’ ಅಂತ ಹೇಳಿದ್ರು. (ಯೋಹಾ. 11:3) ಲಾಜರ ಸತ್ತುಹೋದಾಗ ಯೇಸು ಅಲ್ಲೇ ಇದ್ಕೊಂಡು ಅವನಿಗೆ ಮತ್ತೆ ಜೀವ ಕೊಡಬಹುದಿತ್ತು. ಆದ್ರೆ ಯೇಸು ಬೇಥಾನ್ಯಕ್ಕೆ ಬಂದನು. ಯಾಕೆ? ತಮ್ಮನನ್ನ ಕಳ್ಕೊಂಡು ದುಃಖದಲ್ಲಿರೋ ಮಾರ್ಥ ಮತ್ತು ಮರಿಯಗೆ ಸಮಾಧಾನ ಮಾಡೋಕೆ. ನೀವು ಕಷ್ಟದಲ್ಲಿ ಇರುವಾಗ ಸಹಾಯ ಮಾಡೋ ಸ್ನೇಹಿತರು ನಿಮಗಿದ್ದಾರಾ? ಅವರು “ಕಷ್ಟಕಾಲದಲ್ಲಿ” ನಿಮಗೆ ಆಸರೆ ಆಗಿರ್ತಾರೆ. (ಜ್ಞಾನೋ. 17:17) ಯೇಸು ತರ ನಾವೂ ಬೇರೆಯವ್ರಿಗೆ ಒಳ್ಳೇ ಸ್ನೇಹಿತರಾಗಿರಬೇಕು. ಈಗ ನಾವು ಮತ್ತೆ ಬೇಥಾನ್ಯಕ್ಕೆ ವಾಪಸ್‌ ಹೋಗೋಣ. ಅಲ್ಲಿ ಏನು ನಡೀತು ಅಂತ ನೋಡೋಣ.

12. (ಎ) ಯೇಸು ಮಾರ್ಥಗೆ ಏನಂತ ಮಾತು ಕೊಟ್ಟನು? (ಬಿ) ಮಾರ್ಥ ಆ ಮಾತನ್ನ ಯಾಕೆ ನಂಬಬಹುದಿತ್ತು? (ಯೋಹಾನ 11:23-26)

12 ಯೋಹಾನ 11:23-26 ಓದಿ. ಯೇಸು ಬೇಥಾನ್ಯದ ಹತ್ತತ್ರ ಬರ್ತಿದ್ದಾನೆ ಅಂತ ಮಾರ್ಥಗೆ ಗೊತ್ತಾಯ್ತು. ಆಗ ಅವಳು ಯೇಸು ಹತ್ರ ಓಡಿಹೋಗಿ ಅಳ್ತಾ “ಪ್ರಭು, ನೀನು ಇಲ್ಲಿ ಇರ್ತಿದ್ರೆ ನನ್ನ ತಮ್ಮ ಸಾಯ್ತಿರಲಿಲ್ಲ” ಅಂದಳು. (ಯೋಹಾ. 11:21) ನಿಜ, ಯೇಸು ಅಲ್ಲಿ ಇದ್ದಿದ್ರೆ ಲಾಜರನನ್ನ ವಾಸಿ ಮಾಡ್ತಿದ್ದನು. ಆದ್ರೆ ಯೇಸುವಿನ ಮನಸ್ಸಲ್ಲಿ ಬೇರೇನೋ ಇತ್ತು. ಅದಕ್ಕೆ ಆತನು “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ಅಂತ ಮಾರ್ಥಗೆ ಹೇಳಿದನು. ಯಾಕಂದ್ರೆ “ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ” ಅಂತಾನೂ ಹೇಳಿದನು. (ಲೂಕ 7:11-15; 8:49-55) ಸತ್ತವರನ್ನ ಬದುಕಿಸೋ ಶಕ್ತಿನ ಆತನು ಯೆಹೋವನಿಂದ ಪಡ್ಕೊಂಡಿದ್ದನು. ಇದಕ್ಕೆ ಮುಂಚೆ ಯೇಸು ಒಬ್ಬ ಚಿಕ್ಕ ಹುಡುಗಿಯನ್ನ ಬದುಕಿಸಿದಾಗ ಅವಳು ಸತ್ತು ಸ್ವಲ್ಪ ಸಮಯ ಆಗಿತ್ತಷ್ಟೆ. ಇನ್ನೊಂದು ಸಲ, ಒಬ್ಬ ವ್ಯಕ್ತಿ ಸತ್ತುಹೋದಾಗ ಅದೇ ದಿನಾನೇ ಮತ್ತೆ ಅವನಿಗೆ ಜೀವ ಕೊಟ್ಟಿದ್ದನು. ಆದ್ರೆ ಈಗ ಲಾಜರ ಸತ್ತು 4 ದಿನ ಆಗಿದೆ. ಅವನ ದೇಹ ಕೊಳೆತು ವಾಸನೆ ಬರ್ತಾ ಇರುತ್ತೆ. ಈಗ ಯೇಸು ಮತ್ತೆ ಅವನಿಗೆ ಜೀವ ಕೊಡಕ್ಕಾಗುತ್ತಾ?

“ಲಾಜರ, ಎದ್ದು ಹೊರಗೆ ಬಾ”

ತನ್ನ ಸ್ನೇಹಿತರು ಅಳ್ತಿರೋದನ್ನ ನೋಡಿ ಯೇಸುಗೆ ಕರುಳೇ ಕಿತ್ತುಬಂತು (ಪ್ಯಾರ 13-14 ನೋಡಿ)

13. ಯೋಹಾನ 11:32-35ರಲ್ಲಿ ಹೇಳೋ ಹಾಗೆ, ಮರಿಯ ಮತ್ತು ಬೇರೆಯವರು ಅಳ್ತಿರೋದನ್ನ ನೋಡಿದಾಗ ಯೇಸುಗೆ ಹೇಗನಿಸ್ತು? (ಚಿತ್ರನೂ ನೋಡಿ.)

13 ಯೋಹಾನ 11:32-35 ಓದಿ, ಆಮೇಲೆ ಏನಾಯ್ತು ಅನ್ನೋದನ್ನ ಕಲ್ಪಿಸ್ಕೊಳ್ಳಿ. ಲಾಜರನ ಅಕ್ಕ ಮರಿಯ ಕೂಡ ಯೇಸು ಹತ್ರ ಬಂದು ಮಾರ್ಥ ಹೇಳಿದ ತರಾನೇ “ಪ್ರಭು, ನೀನು ಇಲ್ಲಿ ಇರ್ತಿದ್ರೆ ತಮ್ಮ ಸಾಯ್ತಿರಲಿಲ್ಲ” ಅಂತ ಅಳ್ತಾ ಹೇಳಿದಳು. ಅಲ್ಲಿ ಇದ್ದವ್ರೆಲ್ಲ ತುಂಬ ದುಃಖದಲ್ಲಿದ್ರು. ಇವ್ರಿಬ್ರು ಅಳ್ತಾ ಇರೋದನ್ನ ನೋಡಿ ಯೇಸುಗೆ ಕರುಳೇ ಕಿತ್ತು ಬಂದ ಹಾಗಾಯ್ತು. ಯೇಸು ಕೂಡ ಅತ್ತುಬಿಟ್ಟನು. ಒಬ್ರು ಸತ್ತುಹೋದ್ರೆ ಅವ್ರ ಮನೆಯವ್ರಿಗೆ ಎಷ್ಟು ನೋವಾಗುತ್ತೆ ಅಂತ ಯೇಸು ಅರ್ಥ ಮಾಡ್ಕೊಂಡನು. ಆದಷ್ಟು ಬೇಗ ಅವ್ರ ನೋವನ್ನ ತೆಗೆದುಹಾಕಬೇಕು ಅಂತ ಆತನು ಅಂದ್ಕೊಂಡನು.

14. (ಎ) ಮರಿಯ ಅಳೋದನ್ನ ನೋಡಿದಾಗ ಯೇಸುಗೆ ಏನಾಯ್ತು? (ಬಿ) ಇದ್ರಿಂದ ನಮಗೆ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?

14 ಮರಿಯ ಅಳ್ತಿರೋದನ್ನ ನೋಡಿ ಯೇಸು ಕೂಡ ಅತ್ತು ಬಿಟ್ಟನು. ಇದ್ರಿಂದ ನಮಗೆ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ? ಯೆಹೋವ ಕೋಮಲ ಕರುಣೆಯ ದೇವರು ಅಂತ ಇದ್ರಿಂದ ಗೊತ್ತಾಗುತ್ತೆ. ಹೇಗೆ? ನಾವು ಹಿಂದಿನ ಲೇಖನದಲ್ಲಿ, ಯೇಸು ಯಾವಾಗ್ಲೂ ತನ್ನ ಅಪ್ಪ ಯೆಹೋವನ ತರಾನೇ ಯೋಚ್ನೆ ಮಾಡ್ತಾನೆ, ಆತನ ತರಾನೇ ನಡ್ಕೊಳ್ತಾನೆ ಅಂತ ಕಲಿತ್ವಿ. (ಯೋಹಾ. 12:45) ಹಾಗಾಗಿ ನಾವು ಕಷ್ಟಪಡೋದನ್ನ ನೋಡುವಾಗ ಯೆಹೋವನಿಗೆ ತುಂಬ ನೋವಾಗುತ್ತೆ ಅಂತ ಇದ್ರಿಂದ ಗೊತ್ತಾಗುತ್ತೆ. (ಕೀರ್ತ. 56:8) ಇದನ್ನ ನೋಡುವಾಗ ಕೋಮಲ ಕರುಣೆಯ ದೇವರಾದ ಯೆಹೋವನಿಗೆ ಇನ್ನೂ ಹತ್ರ ಆಗಬೇಕು ಅಂತ ನಿಮಗೆ ಅನಿಸಲ್ವಾ?

ಸತ್ತವರನ್ನ ಮತ್ತೆ ಬದುಕಿಸೋ ಶಕ್ತಿ ತನಗಿದೆ ಅಂತ ಯೇಸು ತೋರಿಸಿದನು (ಪ್ಯಾರ 15-16 ನೋಡಿ)

15. ಯೋಹಾನ 11:41-44ರಲ್ಲಿ ಹೇಳೋ ಹಾಗೆ ಲಾಜರನ ಸಮಾಧಿ ಹತ್ರ ಏನಾಯ್ತು? ವಿವರಿಸಿ. (ಚಿತ್ರನೂ ನೋಡಿ.)

15 ಯೋಹಾನ 11:41-44 ಓದಿ. ಯೇಸು ಸಮಾಧಿ ಹತ್ರ ಬಂದನು. ಸಮಾಧಿ ಮುಂದೆ ಇಟ್ಟಿದ್ದ ಕಲ್ಲನ್ನ ಪಕ್ಕಕ್ಕೆ ಸರಿಸೋಕೆ ಹೇಳಿದನು. ಆಗ ಮಾರ್ಥ, ‘ಬೇಡ ದೇಹದಿಂದ ವಾಸನೆ ಬರುತ್ತಿರುತ್ತೆ’ ಅಂತ ಹೇಳಿದಳು. ಯೇಸು ಅವಳಿಗೆ “ನೀನು ನಂಬಿದ್ರೆ ದೇವರ ಮಹಾ ಶಕ್ತಿಯನ್ನ ನೋಡ್ತೀಯ ಅಂತ ಹೇಳಿರಲಿಲ್ವಾ?” ಅಂದನು. (ಯೋಹಾ. 11:39, 40) ಆಮೇಲೆ ಯೇಸು, ಆಕಾಶದ ಕಡೆ ನೋಡ್ತಾ ಎಲ್ರ ಮುಂದೆ ಪ್ರಾರ್ಥನೆ ಮಾಡಿದನು. ಯೆಹೋವನಿಗೆ ಎಲ್ಲಾ ಹೊಗಳಿಕೆ ಸಿಗಲಿ ಅಂತ ಅವನು ಹೀಗೆ ಮಾಡಿದನು. ಆಮೇಲೆ ಏನಾಯ್ತು? “ಲಾಜರ, ಎದ್ದು ಹೊರಗೆ ಬಾ” ಅಂತ ಯೇಸು ಕರೆದನು. ಲಾಜರ ಸಮಾಧಿಯಿಂದ ಹೊರಗೆ ಬಂದ! ಅಲ್ಲಿದ್ದವರಿಗೆ ಊಹಿಸೋಕೂ ಆಗದೆ ಇರೋ ಅದ್ಭುತನ ಯೇಸು ಮಾಡಿದನು.—ಜನವರಿ 1, 2008ರ ಕಾವಲಿನಬುರುಜುವಿನಲ್ಲಿ “ಲಾಜರನ ಸಮಾಧಿಯ ಬಳಿ ತಲಪಲು ಯೇಸುವಿಗೆ ನಾಲ್ಕು ದಿನಗಳು ಹಿಡಿದದ್ದೇಕೆ?” ಅನ್ನೋ ಲೇಖನ ನೋಡಿ.

16. ಯೋಹಾನ 11ನೇ ಅಧ್ಯಾಯದಿಂದ ಸತ್ತವರು ಮತ್ತೆ ಬದುಕ್ತಾರೆ ಅನ್ನೋ ನಂಬಿಕೆ ಇನ್ನೂ ಹೇಗೆ ಜಾಸ್ತಿಯಾಗುತ್ತೆ?

16 ಯೋಹಾನ 11ನೇ ಅಧ್ಯಾಯದಲ್ಲಿರೋ ಘಟನೆನ ಓದಿದಾಗ ಸತ್ತವರು ಮತ್ತೆ ಬದುಕ್ತಾರೆ ಅನ್ನೋ ನಮ್ಮ ನಿರೀಕ್ಷೆ ಇನ್ನೂ ಜಾಸ್ತಿಯಾಗುತ್ತೆ. ಹೇಗೆ? ಯೇಸು ಮಾರ್ಥಗೆ ಏನು ಹೇಳಿದನು ಅಂತ ನೆನಪಿಸ್ಕೊಳ್ಳಿ. “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ಅಂದನು. (ಯೋಹಾ. 11:23) ಮಾರ್ಥ ಮತ್ತು ಮರಿಯ ಅತ್ತಿದ್ದನ್ನ ನೋಡಿ ಯೇಸುಗೂ ತುಂಬ ದುಃಖ ಆಯ್ತು. ಆತನೂ ಅತ್ತುಬಿಟ್ಟನು. ಅಷ್ಟೇ ಅಲ್ಲ, ಲಾಜರನನ್ನ ಮತ್ತೆ ಬದುಕಿಸಿದನು. ಇದ್ರಿಂದ ಯೆಹೋವ ದೇವರ ತರಾನೇ ಯೇಸುಗೂ ಸತ್ತವರನ್ನ ಮತ್ತೆ ಬದುಕಿಸೋ ಆಸೆ ಮತ್ತು ಶಕ್ತಿ ಇದೆ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಮಾರ್ಥಗೆ ಯೇಸು ಏನು ಹೇಳಿದನು ಅಂತ ಸ್ವಲ್ಪ ನೆನಪು ಮಾಡಿಕೊಳ್ಳಿ. “ನೀನು ನಂಬಿದ್ರೆ ದೇವರ ಮಹಾ ಶಕ್ತಿಯನ್ನ ನೋಡ್ತೀಯ ಅಂತ ಹೇಳಿರಲಿಲ್ವಾ?” ಅಂದನು. (ಯೋಹಾ. 11:40) ಹಾಗಾಗಿ ಯೆಹೋವ ದೇವರು ಸತ್ತವರನ್ನ ಮತ್ತೆ ಬದುಕಿಸ್ತೀನಿ ಅಂತ ಹೇಳಿರೋ ಮಾತು ನಿಜ ಆಗೇ ಆಗುತ್ತೆ. ಆದ್ರೆ ನಾವು ಆ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಇನ್ನೂ ಏನು ಮಾಡಬೇಕು ಅನ್ನೋದನ್ನ ಈಗ ನೋಡೋಣ.

ಸತ್ತವರು ಮತ್ತೆ ಬದುಕ್ತಾರೆ ಅನ್ನೋ ನಂಬಿಕೆನ ಇನ್ನೂ ಜಾಸ್ತಿ ಮಾಡ್ಕೊಳ್ಳೋದು ಹೇಗೆ?

17. ಸತ್ತವರು ಮತ್ತೆ ಜೀವ ಪಡ್ಕೊಂಡ ಘಟನೆಗಳನ್ನ ಬೈಬಲಲ್ಲಿ ಓದುವಾಗ ಏನನ್ನ ಮನಸ್ಸಲ್ಲಿಡಬೇಕು?

17 ಸತ್ತವರು ಮತ್ತೆ ಬದುಕಿದ ಘಟನೆಗಳನ್ನ ಓದಿ ಅದ್ರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿ. ಈ ತರ ನಡೆದ 8 ಘಟನೆಗಳು ಬೈಬಲಿನಲ್ಲಿದೆ. c ಅದನ್ನ ನಾವು ಚೆನ್ನಾಗಿ ಗಮನ ಕೊಟ್ಟು ಓದಬೇಕು. ಅವನ್ನ ಓದುವಾಗ ಆ ಸಮಯದಲ್ಲಿ ಮತ್ತೆ ಜೀವ ಪಡಕೊಂಡವರು ನಿಜವಾಗ್ಲೂ ಈ ಭೂಮಿ ಮೇಲೆ ಇದ್ರು ಅನ್ನೋದನ್ನ ನೆನಪಲ್ಲಿಡಿ. ಅಷ್ಟೇ ಅಲ್ಲ, ಪ್ರತಿಯೊಬ್ಬರ ಬಗ್ಗೆ ಓದುವಾಗ್ಲೂ ಯೆಹೋವ ಅವ್ರನ್ನ ಬದುಕಿಸೋಕೆ ಎಷ್ಟು ಆಸೆಪಟ್ಟನು, ಆತನಿಗೆಷ್ಟು ಶಕ್ತಿ ಇತ್ತು ಅಂತ ಯೋಚ್ನೆ ಮಾಡಿ. ಅದ್ರಲ್ಲೂ ಯೇಸು ಬಗ್ಗೆ ಓದುವಾಗ ನಾವಿದನ್ನ ಮಾಡಬೇಕು. ಆತನು ಮತ್ತೆ ಜೀವ ಪಡಕೊಂಡಾಗ ನೂರಾರು ಜನ ಕಣ್ಣಾರೆ ನೋಡಿದ್ರು. ಈ ವಿಷ್ಯದ ಬಗ್ಗೆ ತಿಳ್ಕೊಂಡಾಗ ಸತ್ತವರು ಮತ್ತೆ ಜೀವ ಪಡ್ಕೊಳ್ತಾರೆ ಅನ್ನೋ ನಂಬಿಕೆ ಇನ್ನೂ ಜಾಸ್ತಿಯಾಗುತ್ತೆ.—1 ಕೊರಿಂ. 15:3-6, 20-22.

18. ಸತ್ತವರು ಮತ್ತೆ ಬದುಕ್ತಾರೆ ಅನ್ನೋ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಇನ್ನೂ ಏನು ಮಾಡಬೇಕು? (ಪಾದಟಿಪ್ಪಣಿನೂ ನೋಡಿ.)

18 ಸತ್ತವರು ಮತ್ತೆ ಬದುಕ್ತಾರೆ ಅಂತ ವರ್ಣಿಸೋ “ಗೀತೆಗಳನ್ನ” ಆಗಾಗ ಕೇಳ್ತಾ ಇರಿ, ಹಾಡ್ತಾ ಇರಿ. d (ಎಫೆ. 5:19) ಈ ಹಾಡುಗಳನ್ನ ಕೇಳ್ತಾ ಇರುವಾಗ ಯೆಹೋವ ಕೊಟ್ಟಿರೋ ಮಾತು ನಡೆದೇ ನಡಿಯುತ್ತೆ ಅನ್ನೋ ನಂಬಿಕೆ ಜಾಸ್ತಿಯಾಗುತ್ತೆ. ಹಾಗಾಗಿ ಆ ಹಾಡುಗಳನ್ನ ಕೇಳ್ತಾ ಇರಿ. ಅದನ್ನ ಚೆನ್ನಾಗಿ ಹಾಡೋಕೆ ಕಲಿಯಿರಿ. ನಿಮ್ಮ ಕುಟುಂಬ ಆರಾಧನೆಯಲ್ಲಿ ಆ ಹಾಡುಗಳಲ್ಲಿರೋ ಪದಗಳ ಅರ್ಥವನ್ನ ತಿಳ್ಕೊಳ್ಳಿ. ಆ ಹಾಡುಗಳು ನಿಮ್ಮ ಮನಸ್ಸಲ್ಲಿ ಅಚ್ಚೊತ್ತೋ ಹಾಗೆ ಪ್ರ್ಯಾಕ್ಟೀಸ್‌ ಮಾಡಿ. ಆಗ ನಿಮ್ಮ ಜೀವ ಹೋಗೋ ಪರಿಸ್ಥಿತಿ ಬಂದಾಗ ಅಥವಾ ನಿಮ್ಮವರು ಯಾರಾದ್ರೂ ತೀರಿಕೊಂಡಾಗ ಈ ಹಾಡುಗಳು ನಿಮಗೆ ಧೈರ್ಯ ತುಂಬುತ್ತೆ. ಅಂಥ ಸಂದರ್ಭದಲ್ಲಿ ದುಃಖನ ಸಹಿಸ್ಕೊಳ್ಳೋಕೆ ಯೆಹೋವ ಆ ಹಾಡುಗಳನ್ನ ನಿಮ್ಮ ನೆನಪಿಗೆ ತರ್ತಾನೆ.

19. ಸತ್ತವರು ಮತ್ತೆ ಬದುಕೋದರ ಬಗ್ಗೆ ನಾವು ಏನೆಲ್ಲಾ ಕಲ್ಪಿಸಿಕೊಳ್ಳಬಹುದು? (“ ನೀವು ಅವ್ರ ಹತ್ರ ಏನ್‌ ಕೇಳ್ತೀರಾ?” ಅನ್ನೋ ಚೌಕ ನೋಡಿ.)

19 ಹೊಸಲೋಕದಲ್ಲಿ ಜೀವನ ಹೇಗಿರುತ್ತೆ ಅನ್ನೋದನ್ನ ಕಲ್ಪಿಸಿಕೊಳ್ಳಿ. ಯಾಕಂದ್ರೆ ಯೆಹೋವ ನಮಗೆ ಆ ಸಾಮರ್ಥ್ಯನ ಕೊಟ್ಟಿದ್ದಾನೆ. ಒಬ್ಬ ಸಹೋದರಿ ಏನು ಹೇಳ್ತಾರೆ ನೋಡಿ: “ಹೊಸಲೋಕದಲ್ಲಿ ಜೀವನ ಹೇಗಿರುತ್ತೆ ಅಂತ ನಾನು ಯಾವಾಗ್ಲೂ ಕಲ್ಪಿಸಿಕೊಳ್ತಾ ಇರ್ತೀನಿ. ಎಷ್ಟರ ಮಟ್ಟಿಗೆ ಕಲ್ಪಿಸಿಕೊಳ್ತಿದ್ದೀನಿ ಅಂದ್ರೆ ನಾನು ಆ ಹೂಗಳ ಮಧ್ಯ ಈಗಾಗಲೇ ಇದ್ದೀನೇನೋ ಅಂತ ಅನಿಸ್ತಿದೆ. ಆ ಹೂವಿನ ಪರಿಮಳ ನನಗೆ ಬರ್ತಿದೆ” ಅಂತ ಅವರು ಹೇಳ್ತಾರೆ. ಹಿಂದಿನ ಕಾಲದಲ್ಲಿ ಯೆಹೋವನಿಗೆ ನಂಬಿಗಸ್ತರಾಗಿದ್ದ ಜನ್ರು ಮತ್ತೆ ಬದುಕ್ತಾರೆ. ಅವ್ರಲ್ಲಿ ಯಾರನ್ನ ನೋಡಬೇಕು ಅಂತ ನೀವು ಕಾಯ್ತಾ ಇದ್ದೀರಾ? ಯಾವ ಪ್ರಶ್ನೆ ಕೇಳಬೇಕು ಅಂದ್ಕೊಂಡಿದ್ದೀರಾ? ನೀವು ಪ್ರೀತಿಸೋ ಜನ್ರು ಮತ್ತೆ ಬರಬೇಕು ಅಂತ ಕಾಯ್ತಾ ಇದ್ದೀರಾ ಅಲ್ವಾ? ಅವರು ನಿಮ್ಮ ಕಣ್ಮುಂದೆ ಬಂದ ತಕ್ಷಣ ನೀವೇನು ಮಾಡ್ತೀರಾ? ಓಡಿಹೋಗಿ ಅವ್ರನ್ನ ತಬ್ಬಿಕೊಳ್ತೀರ, ಖುಷಿಯಲ್ಲಿ ನಿಮ್ಮ ಕಣ್ಣು ತುಂಬಿಬರುತ್ತೆ. ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಅದನ್ನೆಲ್ಲ ಸ್ವಲ್ಪ ಕಲ್ಪಿಸ್ಕೊಳ್ಳಿ.

20. ಈಗ ನೀವೇನು ಮಾಡಬೇಕು?

20 ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಕಮ್ಮಿನೇ. ಸತ್ತವರನ್ನ ಮತ್ತೆ ಬದುಕಿಸ್ತೀನಿ ಅಂತ ಆತನು ಕೊಟ್ಟ ಮಾತನ್ನ ಖಂಡಿತ ನಿಜ ಮಾಡ್ತಾನೆ. ಯಾಕಂದ್ರೆ ಅದನ್ನ ಮಾಡೋ ಆಸೆನೂ ಆತನಿಗಿದೆ, ಶಕ್ತಿನೂ ಇದೆ. ಹಾಗಾಗಿ ಯೆಹೋವ ಕೊಟ್ಟಿರೋ ಮಾತಿನ ಮೇಲೆ ನಿಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ತಾ ಇರಿ. ಆಗ ಆತನಿಗೆ ಹತ್ರ ಆಗ್ತೀರ. ಯೆಹೋವ ಕೊಟ್ಟಿರೋ ಈ ನಿರೀಕ್ಷೆನ ಯಾವತ್ತೂ ಮರಿಬೇಡಿ. ಯಾಕಂದ್ರೆ ನಿಮ್ಮವರು ಮತ್ತೆ ಜೀವಂತವಾಗಿ ಬರ್ತಾರೆ.

ಗೀತೆ 12 ನಿತ್ಯಜೀವದ ವಾಗ್ದಾನ

a ನಮ್ಮವರು ಯಾರಾದ್ರು ತೀರಿಕೊಂಡಾಗ ನಮಗೆ ತುಂಬ ದುಃಖ ಆಗುತ್ತೆ ನಿಜ. ಆದ್ರೆ, ಯೆಹೋವ ಅವರನ್ನ ಮತ್ತೆ ಬದುಕಿಸ್ತೀನಿ ಅಂತ ಕೊಟ್ಟಿರೋ ಮಾತನ್ನ ನೆನಸ್ಕೊಂಡಾಗ ಎಷ್ಟು ನೆಮ್ಮದಿಯಾಗುತ್ತೆ ಅಲ್ವಾ? ಯೆಹೋವ ಕೊಟ್ಟಿರೋ ಈ ಮಾತನ್ನ ನಾವ್ಯಾಕೆ ನಂಬಬಹುದು? ಆ ನಂಬಿಕೆನ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಅದನ್ನ ಈ ಲೇಖನದಲ್ಲಿ ನೋಡೋಣ.

b ಇವರು ನವೆಂಬರ್‌ 2016ರ (ಇಂಗ್ಲಿಷ್‌) JW ಪ್ರಸಾರದಲ್ಲಿ ಒಂಚೂರು ತಾಳು ಅನ್ನೋ ಸಂಗೀತ ವಿಡಿಯೋನ ನೋಡ್ತಿದ್ರು.

d ಯೆಹೋವನಿಗೆ ಸಂತೋಷದಿಂದ ಹಾಡಿರಿ ಅನ್ನೋ ಪುಸ್ತಕದಲ್ಲಿ “ಕಲ್ಪಿಸಿ ನೋಡು ದೇವರ ರಾಜ್ಯ!” (ಗೀತೆ 139) “ಹೊಸಲೋಕವ ನೋಡು ಮನದಿ,” (ಗೀತೆ 144) ಮತ್ತು “ಆತನು ಕರೆದಾಗ” (ಗೀತೆ 151) ಅನ್ನೋ ಹಾಡುಗಳನ್ನ ನೋಡಿ. jw.orgನಲ್ಲಿ “ಒಂಚೂರು ತಾಳು,” “ಹೊಸಲೋಕದಲ್ಲಿ....,” “ಬಾ ನೋಡು ಈ ಬೀಡು” ಅನ್ನೋ ಬ್ರಾಡ್‌ಕಾಸ್ಟಿಂಗ್‌ ಹಾಡುಗಳನ್ನೂ ನೋಡಿ.