ಅಧ್ಯಯನ ಲೇಖನ 19
ಯೆಹೋವ ಹೇಳಿರೋ ತರ ಹೊಸಲೋಕ ಬಂದೇ ಬರುತ್ತೆ!
“[ಯೆಹೋವ] ತಾನು ಹೇಳಿದ ಹಾಗೇ ನಡೀತಾನೆ.”—ಅರ. 23:19.
ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು
ಈ ಲೇಖನದಲ್ಲಿ ಏನಿದೆ? a
1-2. ಹೊಸಲೋಕಕ್ಕೆ ಕಾಯ್ತಾ ಇರುವಾಗ ನಾವು ಏನ್ ಮಾಡ್ತಾ ಇರಬೇಕು?
ಲೋಕದಲ್ಲಿರೋ ಕೆಟ್ಟತನನೆಲ್ಲಾ ತೆಗೆದುಹಾಕಿ ಹೊಸಲೋಕ ತರ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (2 ಪೇತ್ರ 3:13) ಅದಕ್ಕೋಸ್ಕರ ನಾವು ಕಾಯ್ತಾ ಇದ್ದೀವಿ. ಇದೆಲ್ಲಾ ಯಾವಾಗ ನಡಿಯುತ್ತೆ ಅಂತ ನಮಗೆ ಗೊತ್ತಿಲ್ಲ ನಿಜ, ಆದ್ರೆ ನಮ್ಮ ಸುತ್ತಮುತ್ತ ನಡೀತಾ ಇರೋದನ್ನೆಲ್ಲಾ ನೋಡಿದ್ರೆ ಆ ದಿನ ಬೇಗ ಬರುತ್ತೆ.—ಮತ್ತಾ. 24:32-34, 36; ಅ. ಕಾ. 1:7.
2 ನಾವು ತುಂಬ ವರ್ಷಗಳಿಂದ ಯೆಹೋವನ ಆರಾಧನೆ ಮಾಡ್ತಿರಬಹುದು. ಆದ್ರೆ ಹೊಸಲೋಕ ಬರುತ್ತೆ ಅಂತ ಕಾಯ್ತಾ ಇರುವಾಗ ಕೆಲವೊಮ್ಮೆ ನಮಗೇ ಗೊತ್ತಿಲ್ಲದೆ ನಂಬಿಕೆ ಕಮ್ಮಿ ಆಗಿಬಿಡುತ್ತೆ. ಈ ತರ ನಂಬಿಕೆ ಕಮ್ಮಿ ಆಗೋದನ್ನ ‘ಸುಲಭವಾಗಿ ಬಲೆಗೆ ಬೀಳಿಸೋ ಪಾಪ’ ಅಂತ ಅಪೊಸ್ತಲ ಪೌಲ ಹೇಳಿದ್ದಾನೆ. (ಇಬ್ರಿ. 12:1) ಅದಕ್ಕೆ ನಾವು ಹುಷಾರಾಗಿ ಇರಬೇಕು. ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ತಾ ಇರಬೇಕು. ಹೊಸಲೋಕ ಬೇಗ ಬರುತ್ತೆ ಅನ್ನೋದಕ್ಕೆ ಏನೆಲ್ಲಾ ಆಧಾರಗಳಿದೆಯೋ ಅದ್ರ ಬಗ್ಗೆ ಆಗಾಗ ಯೋಚ್ನೆ ಮಾಡ್ತಾ ಇರಬೇಕು.—ಇಬ್ರಿ. 11:1.
3. ನಾವು ಈ ಲೇಖನದಲ್ಲಿ ಏನ್ ಕಲಿತೀವಿ?
3 ಹೊಸಲೋಕ ತರ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತಿನ ಮೇಲೆ ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ನಾವು 3 ವಿಷ್ಯಗಳನ್ನ ಮಾಡಬೇಕು. (1) ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. (2) ಯೆಹೋವ ದೇವರಿಗೆ ಎಷ್ಟು ಶಕ್ತಿಯಿದೆ ಅನ್ನೋದನ್ನ ಆಗಾಗ ನೆನಪಿಸ್ಕೊಳ್ತಾ ಇರಬೇಕು. (3) ಯೆಹೋವನಿಗೆ ಇನ್ನೂ ಹತ್ರ ಆಗೋ ಕೆಲಸಗಳನ್ನ ಮಾಡ್ತಾ ಇರಬೇಕು. ಇದನ್ನ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಹಬಕ್ಕೂಕನಿಗೆ ಯೆಹೋವ ಹೇಳಿದ ಮಾತುಗಳಿಂದ ನಮ್ಮ ನಂಬಿಕೆ ಹೇಗೆ ಜಾಸ್ತಿ ಆಗುತ್ತೆ ಅಂತಾನೂ ನೋಡೋಣ. ಅದ್ರಲ್ಲೂ ಯಾವ ಸಂದರ್ಭಗಳಲ್ಲಿ ನಮಗೆ ಜಾಸ್ತಿ ನಂಬಿಕೆ ಬೇಕು? ಅದನ್ನ ಮೊದಲು ನೋಡೋಣ.
ಯಾವಾಗ ನಮಗೆ ಇನ್ನೂ ಜಾಸ್ತಿ ನಂಬಿಕೆ ಬೇಕು?
4. ಯಾವ ನಿರ್ಧಾರಗಳನ್ನ ಮಾಡೋಕೆ ನಮಗೆ ಜಾಸ್ತಿ ನಂಬಿಕೆ ಬೇಕು?
4 ಪ್ರತಿದಿನ ನಾವೆಲ್ರೂ ಒಂದಲ್ಲಾ ಒಂದು ನಿರ್ಧಾರ ಮಾಡ್ತೀವಿ. ಉದಾಹರಣೆಗೆ, ಯಾರನ್ನ ಫ್ರೆಂಡ್ಸ್ ಮಾಡ್ಕೊಬೇಕು, ಎಂಥ ಮನೋರಂಜನೆ ನೋಡಬೇಕು, ಇನ್ನೂ ಜಾಸ್ತಿ ಓದಬೇಕಾ, ಮದುವೆ ಮಾಡ್ಕೊಬೇಕಾ, ಮಕ್ಕಳು ಮಾಡ್ಕೊಬೇಕಾ, ಯಾವ ಕೆಲಸಕ್ಕೆ ಹೋಗಬೇಕು ಅನ್ನೋ ನಿರ್ಧಾರಗಳನ್ನ ಮಾಡಬೇಕಾಗುತ್ತೆ. ಆಗ “ನಾನು ಮಾಡೋ ನಿರ್ಧಾರಗಳು ಈ ಕೆಟ್ಟ ಲೋಕ ನಾಶ ಆಗುತ್ತೆ, ಹೊಸಲೋಕ ಬೇಗ ಬರುತ್ತೆ ಅನ್ನೋದನ್ನ ನಾನು ನಂಬ್ತೀನಿ ಅಂತ ತೋರಿಸ್ಕೊಡುತ್ತಾ?” ಅಥವಾ “ಇರೋದೇ ಸ್ವಲ್ಪ ದಿನ ಚೆನ್ನಾಗಿ ಮಜಾ ಮಾಡೋಣ ಅಂತ ಬೇರೆ ಜನ್ರ ತರ ಯೋಚ್ನೆ ಮಾಡ್ತಿದ್ದೀನಿ ಅಂತ ತೋರಿಸ್ಕೊಡುತ್ತಾ?” ಅಂತ ಕೇಳ್ಕೊಬೇಕು. (ಮತ್ತಾ. 6:19, 20; ಲೂಕ 12:16-21) ಯಾಕಂದ್ರೆ ಹೊಸಲೋಕ ಬಂದೇ ಬರುತ್ತೆ ಅನ್ನೋ ನಂಬಿಕೆ ಇದ್ರೆ ಮಾತ್ರ ನಾವು ಸರಿಯಾಗಿ ನಿರ್ಧಾರಗಳನ್ನ ಮಾಡೋಕೆ ಆಗುತ್ತೆ.
5-6. ಕಷ್ಟಗಳು ಬಂದಾಗ ಯಾಕೆ ನಮಗೆ ಇನ್ನೂ ಜಾಸ್ತಿ ನಂಬಿಕೆ ಬೇಕು? ಉದಾಹರಣೆ ಕೊಡಿ.
5 ನಮಗೆ ಕಷ್ಟ ಬಂದಾಗಲೂ ಜಾಸ್ತಿ ನಂಬಿಕೆ ಬೇಕು. ಕೆಲವೊಮ್ಮೆ ನಮಗೆ ಹಿಂಸೆ ಬರಬಹುದು, ಆರೋಗ್ಯ ಹಾಳಾಗಬಹುದು ಅಥವಾ ಬೇರೆ ಯಾವುದಾದ್ರೂ ಕಷ್ಟ ಬರಬಹುದು. ಅದು ಸ್ವಲ್ಪ ದಿನ ಇದ್ರೆ ಸಹಿಸ್ಕೊಳ್ತೀವಿ. ತುಂಬ ದಿನ ಆದ್ರೆ ಕುಗ್ಗಿಹೋಗಿಬಿಡ್ತೀವಿ. ಹಾಗಾಗಿ ಆ ಕಷ್ಟ ಎಷ್ಟೇ ದಿನ ಇದ್ರೂ ಅದನ್ನ ಸಹಿಸ್ಕೊಂಡು ಖುಷಿಖುಷಿಯಾಗಿ ಯೆಹೋವನ ಸೇವೆ ಮಾಡ್ತಾ ಇರೋಕೆ ಜಾಸ್ತಿ ನಂಬಿಕೆ ಬೇಕು.—ರೋಮ. 12:12; 1 ಪೇತ್ರ 1:6, 7.
6 ನಮಗೆ ಕಷ್ಟಗಳು ಬಂದಾಗ “ಹೊಸಲೋಕ ಯಾವಾಗಪ್ಪಾ ಬರುತ್ತೆ?” ಅಂತ ಅನಿಸುತ್ತೆ. ಆದ್ರೆ ಇದ್ರ ಅರ್ಥ ನಮ್ ನಂಬಿಕೆ ಕಮ್ಮಿ ಆಗಿಬಿಟ್ಟಿದೆ ಅಂತನಾ? ಇಲ್ಲ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಕೊರೆಯೋ ಚಳಿಗಾಲದಲ್ಲಿ ಇದ್ದಾಗ ಬೇಸಿಗೆ ಯಾವಾಗ ಬರುತ್ತಪ್ಪಾ ಅಂತ ಅನಿಸುತ್ತೆ. ಆದ್ರೆ ಬೇಸಿಗೆ ಕಾಲ ಬಂದೇ ಬರುತ್ತೆ ಅಂತ ನಮಗೆ ಗೊತ್ತು. ಅದೇ ತರಾನೇ ನಾವು ಕುಗ್ಗಿಹೋದಾಗ ಹೊಸಲೋಕ ಯಾವಾಗಪ್ಪಾ ಬರುತ್ತೆ ಅಂತ ಅನಿಸುತ್ತೆ. ಆದ್ರೆ ಯೆಹೋವ ಮಾತು ಕೊಟ್ಟಿರೋದ್ರಿಂದ ಅದು ಖಂಡಿತ ಬಂದೇ ಬರುತ್ತೆ ಅಂತ ನಮಗೆ ಗೊತ್ತು. (ಕೀರ್ತ. 94:3, 14, 15; ಇಬ್ರಿ. 6:17-19) ಆ ನಂಬಿಕೆ ನಮಗಿದ್ರೆ ಯೆಹೋವನ ಸೇವೆನೇ ನಮಗೆ ಮುಖ್ಯ ಅಂತ ನಮ್ಮ ಜೀವನದಲ್ಲಿ ತೋರಿಸ್ಕೊಡ್ತೀವಿ.
7. ನಾವು ಯಾವ ವಿಷ್ಯದಲ್ಲಿ ಹುಷಾರಾಗಿ ಇರಬೇಕು?
7 ನಮಗೆ ಸಿಹಿಸುದ್ದಿ ಸಾರೋಕೂ ನಂಬಿಕೆ ಬೇಕು. ಹೊಸಲೋಕ ಬರುತ್ತೆ ಅಂತ ನಾವು ಜನ್ರಿಗೆ “ಸಿಹಿಸುದ್ದಿ” ಸಾರುವಾಗ ತುಂಬ ಜನ ‘ಇದೆಲ್ಲ ಕೇಳೋಕೆ ಚೆನ್ನಾಗಿದೆ. ಆದ್ರೆ ಆಗೋ ಮಾತಲ್ಲ ಬಿಡಿ’ ಅಂತ ಹೇಳ್ತಾರೆ. (ಮತ್ತಾ. 24:14; ಯೆಹೆ. 33:32) ನಾವು ಹುಷಾರಾಗಿ ಇರಬೇಕು. ಅವ್ರ ತರ ನಾವು ಯಾವತ್ತೂ ಯೋಚ್ನೆ ಮಾಡಬಾರದು. ನಮ್ಮ ನಂಬಿಕೆಯನ್ನ ಕಮ್ಮಿ ಆಗೋಕೆ ಬಿಡಬಾರದು. ಅದಕ್ಕೆ ಮೂರು ವಿಷ್ಯಗಳನ್ನ ನಾವು ಮಾಡಬೇಕು. ಅದೇನು ಅಂತ ಈಗ ನೋಡೋಣ.
ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ
8-9. ಬಿಡುಗಡೆ ಬೆಲೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನಮ್ಮ ನಂಬಿಕೆ ಹೇಗೆ ಜಾಸ್ತಿ ಆಗುತ್ತೆ?
8 ನಮ್ಮ ನಂಬಿಕೆನ ಇನ್ನೂ ಜಾಸ್ತಿ ಮಾಡ್ಕೊಬೇಕಂದ್ರೆ ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ಯೆಹೋವ ಯಾಕೆ ಈ ಬಿಡುಗಡೆ ಬೆಲೆ ಕೊಟ್ಟನು ಮತ್ತು ಇದಕ್ಕೋಸ್ಕರ ಏನೆಲ್ಲ ತ್ಯಾಗ ಮಾಡಿದನು ಅಂತ ಅರ್ಥ ಮಾಡ್ಕೊಬೇಕು. ಆಗ ಯೆಹೋವ ಕೊಟ್ಟಿರೋ ಮಾತೆಲ್ಲ ಖಂಡಿತ ನಡೆದೇ ನಡೆಯುತ್ತೆ ಅನ್ನೋ ಗ್ಯಾರಂಟಿ ಸಿಗುತ್ತೆ. ಹೊಸಲೋಕದಲ್ಲಿ ನಮಗೆ ಶಾಶ್ವತ ಜೀವ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆನೂ ಜಾಸ್ತಿ ಆಗುತ್ತೆ. ಹೇಗೆ?
9 ಯೆಹೋವ ದೇವರು ಎಷ್ಟು ತ್ಯಾಗ ಮಾಡಿದ್ದಾರೆ ಅಂತ ಸ್ವಲ್ಪ ಯೋಚ್ನೆ ಮಾಡಿ. ತನ್ನ ಒಬ್ಬನೇ ಮಗನನ್ನ, ತನ್ನ ಬೆಸ್ಟ್ ಫ್ರೆಂಡನ್ನ ನಮಗೋಸ್ಕರ ಭೂಮಿಗೆ ಕಳಿಸ್ಕೊಟ್ಟನು. ಭೂಮೀಲಿ ಯೇಸು ಎಲ್ಲಾ ತರದ ಕಷ್ಟ ಅನುಭವಿಸಿದನು. ಕೊನೆಗೆ ಚಿತ್ರಹಿಂಸೆ ಅನುಭವಿಸಿ ಪ್ರಾಣ ಬಿಟ್ಟನು. ಯೆಹೋವ ತನ್ನ ಮಗನನ್ನ ಇಷ್ಟೆಲ್ಲ ಕಷ್ಟಪಟ್ಟು ಸಾಯೋಕೆ ಬಿಟ್ಟಿದ್ದು ನಾವೆಲ್ಲ ಸ್ವಲ್ಪ ದಿನ ಚೆನ್ನಾಗಿದ್ದು ಸಾಯಲಿ ಅಂತಾನಾ? ಖಂಡಿತ ಇಲ್ಲ. ನಾವೆಲ್ರೂ ಶಾಶ್ವತವಾಗಿ ಜೀವಿಸಬೇಕು ಅಂತ ಅಲ್ವಾ? (ಯೋಹಾ. 3:16; 1 ಪೇತ್ರ 1:18, 19) ಇಷ್ಟು ದೊಡ್ಡ ಬೆಲೆ ಕೊಟ್ಟ ಮೇಲೆ ಯೆಹೋವ ದೇವರು ಹೊಸಲೋಕ ಬರೋ ತರ ಮಾಡೇ ಮಾಡ್ತಾನೆ ಅಲ್ವಾ?
ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಯೋಚ್ನೆ ಮಾಡಿ
10. ಎಫೆಸ 3:20 ಹೇಳೋ ತರ ಯೆಹೋವನಿಗೆ ಏನೆಲ್ಲ ಮಾಡಕ್ಕಾಗುತ್ತೆ?
10 ಕೊಟ್ಟ ಮಾತನ್ನ ನೆರವೇರಿಸೋ ಶಕ್ತಿ ಯೆಹೋವನಿಗಿದೆ. ಹಾಗಾಗಿ ಆತನ ಶಕ್ತಿ ಬಗ್ಗೆ ಯೋಚ್ನೆ ಮಾಡಿದಾಗ ನಮ್ಮ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. ಹೊಸಲೋಕ ತರ್ತೀನಿ ಅಂತ ಯೆಹೋವ ಹೇಳಿದ ಮಾತನ್ನ ಜನ ನಂಬ್ತಿಲ್ಲ. ಯಾಕಂದ್ರೆ ಅದನ್ನ ಜನ್ರ ಕೈಯಿಂದ ಮಾಡಕ್ಕಾಗಲ್ಲ. ಆದ್ರೆ ಯೆಹೋವ ಸರ್ವಶಕ್ತ ದೇವರು. ಆತನ ಕೈಯಿಂದ ಮಾಡೋಕೆ ಆಗದೆ ಇರೋದು ಯಾವುದೂ ಇಲ್ಲ. (ಯೋಬ 42:2; ಮಾರ್ಕ 10:27) ಹಾಗಾಗಿ ಆತನು ಕೊಟ್ಟ ಮಾತನ್ನ ನಿಜ ಮಾಡೇ ಮಾಡ್ತಾನೆ. ಅದ್ರಲ್ಲಿ ಯಾವ ಸಂಶಯನೂ ಇಲ್ಲ!—ಎಫೆಸ 3:20 ಓದಿ.
11. ಮನುಷ್ಯ ಆಗಲ್ಲ ಅಂದ್ಕೊಂಡಿದ್ದನ್ನ ಯೆಹೋವ ಮಾಡಿ ತೋರಿಸ್ತಾನೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ. (“ ಮನುಷ್ಯ ಆಗಲ್ಲ ಅಂದ್ಕೊಂಡಿದ್ದನ್ನ ಯೆಹೋವ ಮಾಡಿದನು” ಅನ್ನೋ ಚೌಕ ನೋಡಿ.)
11 ಮನುಷ್ಯ ಆಗಲ್ಲ ಅಂತ ಅಂದ್ಕೊಂಡಿರೋ ಎಷ್ಟೋ ವಿಷ್ಯಗಳನ್ನ ಯೆಹೋವ ಈಗಾಗ್ಲೇ ಮಾಡಿ ತೋರಿಸಿದ್ದಾನೆ. ಉದಾಹರಣೆಗೆ, ಅಬ್ರಹಾಮ ಮತ್ತು ಸಾರಾಗೆ ತುಂಬ ವಯಸ್ಸಾಗಿತ್ತು. ಆದ್ರೂ ಅವ್ರಿಗೆ ಒಬ್ಬ ಮಗ ಹುಟ್ತಾನೆ ಅಂತ ಯೆಹೋವ ಹೇಳಿದ್ದನು. (ಆದಿ. 17:15-17) ಆತನು ಹೇಳಿದ ಹಾಗೇ ಅವ್ರಿಗೆ ಒಬ್ಬ ಮಗನನ್ನ ಕೊಟ್ಟನು. ಯೆಹೋವ ಅಬ್ರಹಾಮನಿಗೆ ಇನ್ನೂ ಒಂದು ಮಾತು ಕೊಟ್ಟನು. ಅವನ ವಂಶದವ್ರಿಗೆ ಕಾನಾನ್ ದೇಶವನ್ನ ಕೊಡ್ತೀನಿ ಅಂತ ಆತನು ಹೇಳಿದ್ದನು. ಆದ್ರೆ ಅಬ್ರಹಾಮನ ವಂಶದವರಾದ ಇಸ್ರಾಯೇಲ್ಯರು ತುಂಬ ವರ್ಷಗಳಿಂದ ಈಜಿಪ್ಟಲ್ಲಿ ಗುಲಾಮರಾಗಿ ಇದ್ರು. ಹಾಗಾಗಿ ಯೆಹೋವ ಹೇಳಿದ ಮಾತು ನಿಜ ಆಗುತ್ತೋ ಇಲ್ವೋ ಅಂತ ಅನಿಸಿರಬಹುದು. ಆದ್ರೆ ಯೆಹೋವ ತಾನು ಹೇಳಿದ್ದನ್ನ ಮಾಡಿ ತೋರಿಸಿದನು. ಅಷ್ಟೇ ಅಲ್ಲ, ಯೆಹೋವ ಎಲಿಸಬೆತ್‌ಗೆ ಒಬ್ಬ ಮಗ ಹುಟ್ತಾನೆ ಅಂತ ಹೇಳಿದ್ದನು. ಆಗ ಅವಳಿಗೆ ತುಂಬ ವಯಸ್ಸಾಗಿತ್ತು. ಆದ್ರೆ ಆ ಮಾತು ಸುಳ್ಳಾಗಲಿಲ್ಲ. ಮರಿಯಳಿಗೂ ಮಗು ಆಗುತ್ತೆ ಅಂತ ಯೆಹೋವ ಹೇಳಿದ್ದನು. ಆದ್ರೆ ಮರಿಯಗೆ ಇನ್ನೂ ಮದುವೆನೇ ಆಗಿರಲಿಲ್ಲ. ಆದ್ರೆ ಆ ಮಾತೂ ನಿಜ ಆಯ್ತು. ತನ್ನ ಮಗ ಈ ಭೂಮಿ ಮೇಲೆ ಹುಟ್ತಾನೆ ಅಂತ ಯೆಹೋವ ಸಾವಿರಾರು ವರ್ಷಗಳ ಮುಂಚೆನೇ ಏದೆನ್ ತೋಟದಲ್ಲಿ ಹೇಳಿದ್ದ ಮಾತನ್ನ ಹೀಗೆ ನೆರವೇರಿಸಿದನು.—ಆದಿ. 3:15.
12. ಕೊಟ್ಟ ಮಾತನ್ನ ಉಳಿಸ್ಕೊಳ್ಳೋ ಶಕ್ತಿ ಯೆಹೋವನಿಗೆ ಇದೆ ಅಂತ ಯೆಹೋಶುವ 23:14 ಮತ್ತು ಯೆಶಾಯ 55:10, 11ರಿಂದ ಹೇಗೆ ಗೊತ್ತಾಗುತ್ತೆ?
12 ಈ ತರ ಯೆಹೋವ ಹೇಳಿದ ಎಷ್ಟೋ ಮಾತುಗಳು ನಿಜ ಆಗಿದೆ. ಅದ್ರ ಬಗ್ಗೆ ಓದಿದಾಗ ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತಾಗುತ್ತೆ. (ಯೆಹೋಶುವ 23:14; ಯೆಶಾಯ 55:10, 11 ಓದಿ.) ಆಗ ಹೊಸಲೋಕದ ಬಗ್ಗೆ ಯೆಹೋವ ಕೊಟ್ಟಿರೋ ಮಾತಿನ ಮೇಲೂ ನಮ್ಮ ನಂಬಿಕೆ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ, ‘ಹೊಸಲೋಕ ಬರುತ್ತೆ ಅನ್ನೋದು ಕನಸಲ್ಲ, ನಿಜವಾಗ್ಲೂ ನಡೆದೇ ನಡೆಯುತ್ತೆ’ ಅಂತ ನಾವು ಬೇರೆಯವ್ರಿಗೆ ಹೇಳೋಕೆ ಆಗುತ್ತೆ. ಯೆಹೋವ ದೇವರು ಹೊಸ ಆಕಾಶ, ಹೊಸ ಭೂಮಿ ಬಗ್ಗೆ ಹೇಳ್ತಾ “ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ” ಅಂತ ಹೇಳಿದ್ದಾನೆ.—ಪ್ರಕ. 21:1, 5.
ಯೆಹೋವನಿಗೆ ಹತ್ರ ಆಗೋ ಕೆಲಸಗಳನ್ನ ಮಾಡ್ತಾ ಇರಿ
13. ಕೂಟಗಳಿಂದ ನಮ್ಮ ನಂಬಿಕೆ ಹೇಗೆ ಜಾಸ್ತಿಯಾಗುತ್ತೆ?
13 ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಇನ್ನೂ ಏನು ಮಾಡಬೇಕು? ಯೆಹೋವನಿಗೆ ಹತ್ರ ಆಗೋ ಕೆಲಸಗಳನ್ನ ನಾವು ಮಾಡ್ತಾ ಇರಬೇಕು. ಅದ್ರಲ್ಲೊಂದು ಕೂಟಗಳು. ಹತ್ತಾರು ವರ್ಷಗಳಿಂದ ಬೇರೆಬೇರೆ ತರದ ಪೂರ್ಣ ಸಮಯದ ಸೇವೆ ಮಾಡಿರೋ ಸಹೋದರಿ ಆ್ಯನ ಏನು ಹೇಳ್ತಾರೆ ನೋಡಿ: “ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಕೂಟಗಳು ನನಗೆ ತುಂಬ ಸಹಾಯ ಮಾಡಿದೆ. ಕೆಲವೊಮ್ಮೆ ಸಹೋದರರು ಚೆನ್ನಾಗಿ ಭಾಷಣ ಕೊಡದೇ ಇರಬಹುದು ಅಥವಾ ಏನೂ ಹೊಸ ವಿಷ್ಯನ ಕಲಿಸದೇ ಇರಬಹುದು. ಆದ್ರೆ ನನಗೆ ಗೊತ್ತಿರೋ ವಿಷ್ಯನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಮತ್ತು ನಂಬಿಕೆ ಬೆಳೆಸ್ಕೊಳ್ಳೋಕೆ ಈ ಕೂಟಗಳು ನನಗೆ ಸಹಾಯ ಮಾಡುತ್ತೆ.” b ಅಷ್ಟೇ ಅಲ್ಲ, ಸಹೋದರ ಸಹೋದರಿಯರು ಕೊಡೋ ಉತ್ರಗಳಿಂದನೂ ನಮ್ಮ ನಂಬಿಕೆ ಜಾಸ್ತಿಯಾಗುತ್ತೆ.—ರೋಮ. 1:11, 12; 10:17.
14. ಸಿಹಿಸುದ್ದಿ ಸಾರೋದ್ರಿಂದ ನಮ್ಮ ನಂಬಿಕೆ ಹೇಗೆ ಜಾಸ್ತಿ ಆಗುತ್ತೆ?
14 ಸಿಹಿಸುದ್ದಿ ಸಾರುವಾಗಲೂ ನಮ್ಮ ನಂಬಿಕೆ ಜಾಸ್ತಿ ಆಗುತ್ತೆ. (ಇಬ್ರಿ. 10:23) 70ಕ್ಕಿಂತ ಜಾಸ್ತಿ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರೋ ಸಹೋದರಿ ಬಾರ್ಬರ ಹೀಗೆ ಹೇಳ್ತಾರೆ: “ಸಿಹಿಸುದ್ದಿ ಸಾರುವಾಗೆಲ್ಲ ನನ್ನ ನಂಬಿಕೆ ಜಾಸ್ತಿ ಆಗ್ತಾ ಇರುತ್ತೆ. ಯೆಹೋವ ಕೊಟ್ಟ ಮಾತಿನ ಬಗ್ಗೆ ಜನರ ಜೊತೆ ಎಷ್ಟು ಮಾತಾಡ್ತೀನೋ ಅಷ್ಟು ನನ್ನ ನಂಬಿಕೆ ಜಾಸ್ತಿಯಾಗ್ತಿದೆ.”
15. ಬೈಬಲ್ ಓದಿ, ಅಧ್ಯಯನ ಮಾಡೋದ್ರಿಂದ ನಮ್ಮ ನಂಬಿಕೆ ಹೇಗೆ ಜಾಸ್ತಿಯಾಗುತ್ತೆ? (ಚಿತ್ರಗಳನ್ನೂ ನೋಡಿ.)
15 ನಾವು ಸಮಯ ಮಾಡ್ಕೊಂಡು ಬೈಬಲನ್ನ ಓದಿ, ಅಧ್ಯಯನ ಮಾಡುವಾಗ ನಮ್ಮ ನಂಬಿಕೆ ಇನ್ನೂ ಜಾಸ್ತಿಯಾಗುತ್ತೆ. ಸೂಸನ್ ಅನ್ನೋ ಸಹೋದರಿ ಏನ್ ಹೇಳ್ತಾರೆ ನೋಡಿ: “ನಾನು ಭಾನುವಾರ ಮುಂದಿನ ವಾರದ ಕಾವಲಿನಬುರುಜುನ ತಯಾರಿ ಮಾಡ್ತೀನಿ. ಸೋಮವಾರ ಮತ್ತು ಮಂಗಳವಾರ ಮಧ್ಯವಾರದ ಕೂಟಕ್ಕೆ ತಯಾರಿ ಮಾಡ್ತೀನಿ. ಮಿಕ್ಕಿದ ದಿನ ಬೈಬಲ್ ಪ್ರಾಜೆಕ್ಟ್ ಮಾಡ್ತೀನಿ.” ಹೀಗೆ ಶೆಡ್ಯೂಲ್ ಮಾಡ್ಕೊಂಡು ದಿನಾ ಬೈಬಲ್ ಅಧ್ಯಯನ ಮಾಡೋದ್ರಿಂದ ಸೂಸನ್ ಅವ್ರ ನಂಬಿಕೆ ಜಾಸ್ತಿಯಾಗಿದೆ. ಸಹೋದರಿ ಐರಿನ್ ಮುಖ್ಯ ಕಾರ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ಸೇವೆ ಮಾಡ್ತಿದ್ದಾರೆ. ಅವ್ರಿಗೆ ಬೈಬಲಿನಲ್ಲಿರೋ ಭವಿಷ್ಯವಾಣಿಗಳ ಬಗ್ಗೆ ಅಧ್ಯಯನ ಮಾಡೋದಂದ್ರೆ ತುಂಬ ಇಷ್ಟ. “ಬೈಬಲ್ ಭವಿಷ್ಯವಾಣಿಯಲ್ಲಿರೋ ಚಿಕ್ಕಚಿಕ್ಕ ವಿಷ್ಯಗಳೂ ಯೆಹೋವ ಹೇಳಿರೋ ಹಾಗೇ ನಡೆದಿದೆ ಅನ್ನೋದನ್ನ ಅರ್ಥ ಮಾಡ್ಕೊಂಡಾಗ ನನಗೆ ತುಂಬ ಆಶ್ಚರ್ಯ ಆಗುತ್ತೆ” ಅಂತ ಅವರು ಹೇಳ್ತಾರೆ. c
“ಅದು ಖಂಡಿತ ನೆರವೇರುತ್ತೆ”
16. ಯೆಹೋವ ಹಬಕ್ಕೂಕನಿಗೆ ಹೇಳಿದ ಮಾತುಗಳು ನಮಗೆ ಯಾವ ಗ್ಯಾರಂಟಿ ಕೊಡುತ್ತೆ? (ಇಬ್ರಿಯ 10:36, 37)
16 ಕೆಲವರು ಈ ಕೆಟ್ಟ ಲೋಕ ನಾಶ ಆಗುತ್ತೆ ಅಂತ ತುಂಬ ವರ್ಷಗಳಿಂದ ಕಾಯ್ತಾ ಇದ್ದಾರೆ. ಆದ್ರೆ ‘ಈ ಅಂತ್ಯ ಯಾಕೆ ಇನ್ನೂ ಬಂದಿಲ್ಲ, ಇನ್ನೂ ಎಷ್ಟು ದಿನ ಕಾಯಬೇಕಪ್ಪಾ!’ ಅಂತ ಕೆಲವೊಮ್ಮೆ ಅನಿಸುತ್ತೆ. ಹಬಕ್ಕೂಕನಿಗೂ ಹೀಗೇ ಅನಿಸ್ತು. ಅದಕ್ಕೇ ಯೆಹೋವ ಅವನಿಗೆ “ಆ ದರ್ಶನ ನಿರ್ಧರಿಸಿದ ಸಮಯಕ್ಕೆ ನಿಜ ಆಗುತ್ತೆ, ಆ ಸಮಯ ತುಂಬ ಬೇಗ ಬರ್ತಿದೆ. ಆ ದರ್ಶನ ಸುಳ್ಳಾಗಲ್ಲ. ಅದು ನಿಜ ಆಗೋದು ತಡ ಆಗ್ತಿದೆ ಅಂತ ಅನಿಸಿದ್ರೂ ಅದಕ್ಕಾಗಿ ಕಾದಿರು! ಯಾಕಂದ್ರೆ ಅದು ಖಂಡಿತ ನೆರವೇರುತ್ತೆ. ತಡವಾಗಲ್ಲ!” ಅಂದನು. (ಹಬ. 2:3) ಇದನ್ನ ಯೆಹೋವ ಹಬಕ್ಕೂಕನಿಗಷ್ಟೇ ಅಲ್ಲ ನಮಗೂ ಹೇಳ್ತಿದ್ದಾನೆ. ಒಂದನೇ ಶತಮಾನದ ಕ್ರೈಸ್ತರು ಕೂಡ ಹೊಸಲೋಕ ಬರುತ್ತೆ ಅಂತ ಕಾಯ್ತಾ ಇದ್ರು. ಅವ್ರಿಗೂ ಅಪೊಸ್ತಲ ಪೌಲ ಇದನ್ನೇ ಹೇಳಿದ. (ಇಬ್ರಿಯ 10:36, 37 ಓದಿ.) ಹೊಸಲೋಕ ಬರೋಕೆ ತಡ ಆಗ್ತಿದೆ ಅಂತ ನಮಗನಿಸ್ತಿದೆ ಅಷ್ಟೇ. ಆದ್ರೆ ಯೆಹೋವ ಹೇಳಿರೋ ಮಾತು ಖಂಡಿತ ನೆರವೇರುತ್ತೆ, ತಡ ಆಗಲ್ಲ.
17. ಸಹೋದರಿ ಲೋಯಿಸ್ ಯೆಹೋವ ಹೇಳಿದ ತರ ಹೇಗೆ ಕಾಯ್ತಾ ಇದ್ದಾರೆ?
17 ಎಷ್ಟೋ ಸಹೋದರ ಸಹೋದರಿಯರು ಯೆಹೋವ ಹೇಳಿದ ತರಾನೇ ‘ಕಾಯ್ತಾ ಇದ್ದಾರೆ.’ ಸಹೋದರಿ ಲೋಯಿಸ್ ಅವ್ರ ಉದಾಹರಣೆ ನೋಡಿ. ಅವರು 1939ರಲ್ಲಿ ಯೆಹೋವನ ಸೇವೆ ಮಾಡೋಕೆ ಶುರು ಮಾಡಿದ್ರು. “ನಾನು ಹೈಸ್ಕೂಲ್ ಮುಗಿಸುವಷ್ಟರಲ್ಲಿ ಹರ್ಮಗೆದೋನ್ ಬಂದುಬಿಡುತ್ತೆ ಅಂದ್ಕೊಂಡಿದ್ದೆ. ಆದ್ರೆ ಅದು ಬರಲೇ ಇಲ್ಲ. ತಾನು ಕೊಟ್ಟ ಮಾತನ್ನ ಯೆಹೋವ ನೆರವೇರಿಸೋ ತನಕ ಕಾಯ್ತಾ ಇದ್ದವ್ರ ಉದಾಹರಣೆಗಳನ್ನ ನಾನು ಬೈಬಲಿನಿಂದ ಓದಿದೆ. ನೋಹ, ಅಬ್ರಹಾಮ, ಯೋಸೇಫ ಮತ್ತು ಇನ್ನೂ ಕೆಲವರು ಯೆಹೋವನ ಆಶೀರ್ವಾದಕ್ಕೋಸ್ಕರ ತುಂಬ ದಿನ ಕಾಯಬೇಕಿತ್ತು. ಅವ್ರಿಗೆ ಅದು ತಕ್ಷಣ ಸಿಗಲಿಲ್ಲ. ಅವ್ರ ಬಗ್ಗೆ ಓದಿದಾಗ ಹೊಸಲೋಕ ಆದಷ್ಟು ಬೇಗ ಬರುತ್ತೆ ಅಂತ ಯೆಹೋವ ಹೇಳಿರೋ ಮಾತಿನ ಮೇಲೆ ನನ್ನ ನಂಬಿಕೆ ಜಾಸ್ತಿಯಾಗಿದೆ” ಅಂತ ಅವರು ಹೇಳ್ತಾರೆ. ಎಷ್ಟೋ ಸಹೋದರ ಸಹೋದರಿಯರಿಗೂ ಹೀಗೇ ಅನಿಸಿದೆ!
18. ಸೃಷ್ಟಿನ ನೋಡಿದಾಗ ಹೊಸಲೋಕ ಬಂದೇ ಬರುತ್ತೆ ಅಂತ ನಾವು ಹೇಗೆ ಗ್ಯಾರಂಟಿಯಾಗಿ ಹೇಳಬಹುದು?
18 ಹೊಸಲೋಕ ಇನ್ನೂ ಬಂದಿಲ್ಲ ನಿಜ, ಆದ್ರೆ ಅದು ಖಂಡಿತ ನೆರವೇರುತ್ತೆ. ಅದನ್ನ ನಾವು ಹೇಗೆ ಹೇಳಬಹುದು? ನಿಮ್ಮ ಸುತ್ತಮುತ್ತ ಇರೋ ಸೃಷ್ಟಿನ ಸ್ವಲ್ಪ ನೋಡಿ. ಈ ಮರಗಳು, ನಕ್ಷತ್ರಗಳು, ಪ್ರಾಣಿಗಳು, ಮನುಷ್ಯರು ಇವೆಲ್ಲಾ ಒಂದ್ ಕಾಲದಲ್ಲಿ ಇರಲೇ ಇಲ್ಲ. ಯೆಹೋವ ಸೃಷ್ಟಿ ಮಾಡಿದ್ರಿಂದನೇ ಇದೆಲ್ಲ ಇವತ್ತಿದೆ. (ಆದಿ. 1:1, 26, 27) ಅದೇ ತರ ಹೊಸಲೋಕ ತರ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಅದನ್ನೂ ಮಾಡೇ ಮಾಡ್ತಾನೆ. ಹೊಸಲೋಕದಲ್ಲಿ ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಾವು ಶಾಶ್ವತವಾಗಿ ಜೀವಿಸ್ತೀವಿ. ಇವತ್ತು ಈ ವಿಶ್ವ ಇರೋದು ಎಷ್ಟು ನಿಜಾನೋ ಮುಂದೆ ಹೊಸಲೋಕದಲ್ಲಿ ನಾವು ಜೀವಿಸ್ತೀವಿ ಅನ್ನೋದೂ ಅಷ್ಟೇ ನಿಜ.—ಯೆಶಾ. 65:17; ಪ್ರಕ. 21:3, 4.
19. ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ನಾವೇನು ಮಾಡಬೇಕು?
19 ಈಗ ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಸಿಗೋ ಒಂದೊಂದು ಅವಕಾಶನೂ ಚೆನ್ನಾಗಿ ಉಪಯೋಗಿಸ್ಕೊಳ್ಳೋಣ. ಯೇಸು ಕ್ರಿಸ್ತನ ಬಿಡುಗಡೆ ಬೆಲೆ ಬಗ್ಗೆ ಯಾವಾಗ್ಲೂ ಯೋಚ್ನೆ ಮಾಡ್ತಾ ಇರೋಣ. ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಆಗಾಗ ನೆನಪಿಸ್ಕೊಳ್ತಾ ಇರೋಣ. ಯೆಹೋವನಿಗೆ ಹತ್ರ ಆಗೋ ಕೆಲಸಗಳನ್ನ ಮಾಡ್ತಾ ಇರೋಣ. ಆಗ ‘ನಂಬಿಕೆ, ತಾಳ್ಮೆ ತೋರಿಸೋ ಮೂಲಕ ದೇವರು ಮಾತು ಕೊಟ್ಟದ್ದನ್ನ ಪಡೆದವ್ರಲ್ಲಿ’ ನೀವೂ ಒಬ್ರಾಗಿ ಇರ್ತೀರ!—ಇಬ್ರಿ. 6:11, 12; ರೋಮ. 5:5.
ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು
a ಬೈಬಲಲ್ಲಿ ಹೇಳಿರೋ ತರ ಹೊಸಲೋಕ ಬರಲ್ಲ, ಅದೆಲ್ಲಾ ಬರೀ ಕನಸು ಅಷ್ಟೇ ಅಂತ ತುಂಬ ಜನ ಹೇಳ್ತಾರೆ. ಆದ್ರೆ ಯೆಹೋವ ಒಂದು ಸಲ ಮಾತು ಕೊಟ್ಟ ಮೇಲೆ ಅದನ್ನ ಮಾಡೇ ಮಾಡ್ತಾನೆ ಅಂತ ನಮಗೆ ಚೆನ್ನಾಗಿ ಗೊತ್ತು. ಆದ್ರೂ ಕೆಲವೊಮ್ಮೆ ನಮ್ಮ ನಂಬಿಕೆ ಕಮ್ಮಿ ಆಗಬಹುದು. ಹಾಗಾಗಿ ದೇವರ ಮಾತಿನ ಮೇಲೆ ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ತಾ ಇರೋಕೆ ಏನೆಲ್ಲಾ ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ.
b ಕೆಲವರ ಹೆಸ್ರು ಬದಲಾಗಿದೆ.
c ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಪುಸ್ತಕದಲ್ಲಿ “ಬೈಬಲ್” ಅನ್ನೋ ವಿಷ್ಯದ ಕೆಳಗೆ “ಪ್ರವಾದನೆ” ಅನ್ನೋ ಭಾಗದಲ್ಲಿ ಬೈಬಲ್ ಭವಿಷ್ಯವಾಣಿಗಳ ಬಗ್ಗೆ ತುಂಬ ಲೇಖನಗಳಿವೆ. ಉದಾಹರಣೆಗೆ, ಜನವರಿ 1, 2008ರ ಕಾವಲಿನಬುರುಜುವಿನಲ್ಲಿ “ಯೆಹೋವನು ಮುಂತಿಳಿಸುವ ಸಂಗತಿಗಳು ಸತ್ಯವಾಗಿ ನೆರವೇರುತ್ತವೆ” ಅನ್ನೋ ಲೇಖನ ನೋಡಿ.