ಅಧ್ಯಯನ ಲೇಖನ 15
ಯೇಸು ಮಾಡಿರೋ ಅದ್ಭುತಗಳಿಂದ ನಾವೇನ್ ಕಲಿಬಹುದು?
“ಆತನು ಆ ಇಡೀ ಪ್ರದೇಶ ತಿರುಗಾಡ್ತಾ ಒಳ್ಳೇ ಕೆಲಸಗಳನ್ನ ಮಾಡಿದನು. . . . ಜನ್ರನ್ನ ವಾಸಿಮಾಡಿದನು.”—ಅ. ಕಾ. 10:38.
ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು
ಈ ಲೇಖನದಲ್ಲಿ ಏನಿದೆ? a
1. (ಎ) ಮದುವೆ ಮನೆಯಲ್ಲಿ ಏನಾಯ್ತು? (ಬಿ) ಆಗ ಯೇಸು ಏನು ಮಾಡಿದನು?
ಕ್ರಿಸ್ತ ಶಕ 29ರ ಕೊನೆಯಲ್ಲಿ ಯೇಸು ದೇವರ ಸೇವೆಯನ್ನ ಶುರು ಮಾಡಿದ್ದಾನೆ. ಆತನು, ಆತನ ಅಮ್ಮ ಮರಿಯ ಮತ್ತು ಶಿಷ್ಯರು ಕಾನಾ ಅನ್ನೋ ಊರಿಗೆ ಮದುವೆಗೆ ಹೋಗಿದ್ದಾರೆ. ಈ ಊರು ಯೇಸುವಿನ ಹುಟ್ಟೂರಾದ ನಜರೇತಿನ ಉತ್ತರ ದಿಕ್ಕಲ್ಲಿ ಇತ್ತು. ಮದುವೆ ಮನೆಯವರು ಮರಿಯಗೆ ತುಂಬ ಪರಿಚಯ ಅನ್ಸುತ್ತೆ. ಅದಕ್ಕೆ ಮರಿಯ, ಮದುವೆಯಲ್ಲಿ ಅತಿಥಿಗಳನ್ನ ಉಪಚರಿಸೋಕೆ ಹೋಗಿರಬೇಕು. ಆದ್ರೆ ಮದುವೆ ಮನೆಯವರು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ಜನ ಮದುವೆಗೆ ಬಂದಿದ್ರು ಅನ್ಸುತ್ತೆ. ಅದಕ್ಕೇ ಅಲ್ಲಿ ದ್ರಾಕ್ಷಾಮದ್ಯ ಖಾಲಿ ಆಗೋಯ್ತು. ಆಗ ಆ ನವಜೋಡಿಗಳಿಗೆ ಮತ್ತು ಅವ್ರ ಮನೆಯವ್ರಿಗೆ ಹೇಗನಿಸಿರುತ್ತೆ ಅಂತ ಸ್ವಲ್ಪ ಯೋಚ್ನೆ ಮಾಡಿ. ಜನ್ರಿಗೆಲ್ಲಾ ಇದು ಗೊತ್ತಾದ್ರೆ ಎಷ್ಟು ಅವಮಾನ ಆಗುತ್ತಲ್ವಾ? b ಮರಿಯಾಗೆ ತುಂಬ ಗಾಬರಿ ಆಯ್ತು. ಅವಳು ಯೇಸು ಹತ್ರ ಓಡಿಬಂದು: “ದ್ರಾಕ್ಷಾಮದ್ಯ ಖಾಲಿ ಆಗಿಬಿಡ್ತು” ಅಂತ ಹೇಳಿದಳು. (ಯೋಹಾ. 2:1-3) ಆಗ ಯೇಸು ಒಂದು ಅದ್ಭುತ ಮಾಡಿದನು. ನೀರನ್ನ ದ್ರಾಕ್ಷಾಮದ್ಯವಾಗಿ ಮಾಡಿದನು. ಆ ದ್ರಾಕ್ಷಾಮದ್ಯ ತುಂಬ ‘ಚೆನ್ನಾಗಿತ್ತು.’—ಯೋಹಾ. 2:9, 10.
2-3. (ಎ) ಯೇಸು ತನಗಿದ್ದ ಶಕ್ತಿನ ಯಾವುದಕ್ಕೆ ಉಪಯೋಗಿಸಿದನು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?
2 ಯೇಸು ಇದೊಂದೇ ಅಲ್ಲ ಇನ್ನೂ ತುಂಬ ಅದ್ಭುತಗಳನ್ನ ಮಾಡಿದನು. c ತನ್ನ ಶಕ್ತಿನ ಸಾವಿರಾರು ಜನ್ರಿಗೆ ಸಹಾಯ ಮಾಡೋಕೆ ಉಪಯೋಗಿಸಿದನು. ಉದಾಹರಣೆಗೆ, ಯೇಸು ಒಂದು ಸಲ 5000 ಗಂಡಸರಿಗೆ ಇನ್ನೊಂದ್ಸಲ 4000 ಗಂಡಸರಿಗೆ ಊಟ ಕೊಟ್ಟನು ಅಂತ ಬೈಬಲ್ ಹೇಳುತ್ತೆ. ಆದ್ರೆ ಅಲ್ಲಿದ್ದ ಹೆಂಗಸರು ಮತ್ತು ಮಕ್ಕಳನ್ನ ಲೆಕ್ಕ ಹಾಕಿದ್ರೆ 27000ಕ್ಕಿಂತ ಜಾಸ್ತಿ ಜನ ಇದ್ದಿರಬಹುದು. (ಮತ್ತಾ. 14:15-21; 15:32-38) ಆ ಎರಡೂ ಸಂದರ್ಭದಲ್ಲೂ ಯೇಸು ಅವ್ರಿಗೆ ಬರೀ ಊಟ ಕೊಟ್ಟಿದ್ದಷ್ಟೇ ಅಲ್ಲ, ಅಲ್ಲಿದ್ದ ರೋಗಿಗಳನ್ನ ವಾಸಿಮಾಡಿದನು. (ಮತ್ತಾ. 14:14; 15:30, 31) ಇದನ್ನೆಲ್ಲಾ ನೋಡಿದಾಗ ಜನ್ರಿಗೆ ಎಷ್ಟು ಆಶ್ಚರ್ಯ ಆಗಿರಬೇಕಲ್ವಾ?
3 ಯೇಸು ಮಾಡಿದ ಅದ್ಭುತಗಳಿಂದ ನಾವು ತುಂಬ ಪಾಠಗಳನ್ನ ಕಲಿಬಹುದು. ಅವು ಯೆಹೋವ ಮತ್ತು ಯೇಸು ಮೇಲಿರೋ ನಮ್ಮ ನಂಬಿಕೆಯನ್ನ ಹೇಗೆ ಜಾಸ್ತಿ ಮಾಡುತ್ತೆ? ಯೇಸು ಈ ಅದ್ಭುತಗಳನ್ನ ಮಾಡುವಾಗ ದೀನತೆ ಮತ್ತು ಅನುಕಂಪನ ಹೇಗೆ ತೋರಿಸಿದನು? ನಾವು ಆ ಗುಣಗಳನ್ನ ಹೇಗೆ ತೋರಿಸಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ನಾವೀಗ ಉತ್ರ ತಿಳ್ಕೊಳ್ಳೋಣ.
ಯೆಹೋವ ಮತ್ತು ಯೇಸು ಬಗ್ಗೆ ಏನ್ ಕಲಿಬಹುದು?
4. ಯೇಸು ಮಾಡಿದ ಅದ್ಭುತಗಳ ಬಗ್ಗೆ ಕಲಿಯೋದ್ರಿಂದ ಯೆಹೋವನ ಮೇಲಿರೋ ನಂಬಿಕೆ ಹೇಗೆ ಜಾಸ್ತಿಯಾಗುತ್ತೆ?
4 ಯೇಸು ಮಾಡಿರೋ ಅದ್ಭುತಗಳ ಬಗ್ಗೆ ಕಲಿಯುವಾಗ ಆತನ ಮೇಲಷ್ಟೇ ಅಲ್ಲ, ಯೆಹೋವನ ಮೇಲೆ ನಮಗಿರೋ ನಂಬಿಕೆನೂ ಜಾಸ್ತಿ ಆಗುತ್ತೆ. ಯಾಕಂದ್ರೆ ಈ ಅದ್ಭುತಗಳನ್ನ ಮಾಡೋಕೆ ಯೇಸುಗೆ ಶಕ್ತಿ ಕೊಟ್ಟಿದ್ದು ಯೆಹೋವನೇ. ಅದು ನಮಗೆ ಹೇಗೆ ಗೊತ್ತು? “ದೇವರು ಆತನನ್ನ ಪವಿತ್ರಶಕ್ತಿಯಿಂದ ಆರಿಸ್ಕೊಂಡನು. ಆತನಿಗೆ ಅಧಿಕಾರ ಕೊಟ್ಟನು. ಆತನು ಆ ಇಡೀ ಪ್ರದೇಶ ತಿರುಗಾಡ್ತಾ ಒಳ್ಳೇ ಕೆಲಸಗಳನ್ನ ಮಾಡಿದನು. ಸೈತಾನನಿಂದಾಗಿ ಕಷ್ಟಗಳನ್ನ ಅನುಭವಿಸ್ತಿದ್ದ ಜನ್ರನ್ನ ವಾಸಿಮಾಡಿದನು. ದೇವರು ಯಾವಾಗ್ಲೂ ಆತನ ಜೊತೆ ಇದ್ದ ಕಾರಣ ಆತನಿಗೆ ಇದನ್ನೆಲ್ಲ ಮಾಡೋಕಾಯ್ತು” ಅಂತ ಅಪೊಸ್ತಲರ ಕಾರ್ಯ 10:38 ಹೇಳುತ್ತೆ. ಅಷ್ಟೇ ಅಲ್ಲ, ಯೇಸು ಹೇಳಿದ ಮಾತುಗಳಲ್ಲಿ ಆತನು ನಡ್ಕೊಳ್ತಿದ್ದ ರೀತಿಯಲ್ಲಿ ಯೆಹೋವನ ಗುಣಗಳು ಕಾಣ್ತಿತ್ತು. ಹಾಗಾಗಿ ಯೇಸು ಮಾಡಿದ ಅದ್ಭುತಗಳಿಂದಾನೂ ಯೆಹೋವನ ಯೋಚ್ನೆ ಏನು, ಆತನ ಆಸೆಗಳೇನು ಅಂತ ನಮಗೆ ಗೊತ್ತಾಗುತ್ತೆ. (ಯೋಹಾ. 14:9) ಹಾಗಾಗಿ ಯೇಸು ಮಾಡಿದ ಅದ್ಭುತಗಳು ಅವ್ರಿಬ್ಬರ ಬಗ್ಗೆ ಯಾವ 3 ವಿಷ್ಯಗಳನ್ನ ಕಲಿಸುತ್ತೆ ಅಂತ ಈಗ ನೋಡೋಣ.
5. ಯೇಸು ಯಾಕೆ ಅದ್ಭುತಗಳನ್ನ ಮಾಡಿದನು? (ಮತ್ತಾಯ 20:30-34)
5 ಒಂದು, ಯೆಹೋವ ಮತ್ತು ಯೇಸುಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ. ಯೇಸುಗೆ ಜನ್ರ ಮೇಲೆ ಪ್ರೀತಿ ಇತ್ತು. ಅದಕ್ಕೆ ಅವರು ಕಷ್ಟಪಡ್ತಿದ್ದಾಗ ಅವ್ರಿಗೆ ಸಹಾಯ ಮಾಡೋಕೆ ಅದ್ಭುತಗಳನ್ನ ಮಾಡಿದನು. ಒಂದು ಸಲ, ಇಬ್ರು ಕುರುಡರು ಯೇಸು ಹತ್ರ ಬಂದು ತಮ್ಮನ್ನ ವಾಸಿ ಮಾಡು ಅಂತ ಅಂಗಲಾಚಿ ಬೇಡ್ಕೊಂಡ್ರು. (ಮತ್ತಾಯ 20:30-34 ಓದಿ.) ಅವ್ರನ್ನ ನೋಡಿದಾಗ ಆತನಿಗೆ “ತುಂಬ ಕನಿಕರ ಆಯ್ತು.” ಈ ವಚನದಲ್ಲಿ “ಕನಿಕರ ಆಯ್ತು” ಅನ್ನೋ ಪದಕ್ಕೆ ಬಳಸಿರೋ ಗ್ರೀಕ್ ಕ್ರಿಯಾಪದ ‘ಕರುಳು’ ಅನ್ನೋ ಪದಕ್ಕೆ ಸಂಬಂಧಪಟ್ಟಿದೆ. ಯೇಸುಗೆ ಅವ್ರನ್ನ ನೋಡಿದಾಗ ಕರುಳು ಕಿತ್ತು ಬಂದ ಹಾಗಾಯ್ತು. ಅದಕ್ಕೆ ಅವ್ರಿಗೆ ಕಣ್ಣು ಬರೋ ತರ ಮಾಡಿದನು. ಜನ್ರನ್ನ ನೋಡಿ ಯೇಸುಗೆ ಅಯ್ಯೋ ಪಾಪ ಅನಿಸಿದ್ರಿಂದಾನೇ ಸಹಾಯ ಮಾಡೋಕೆ ಮುಂದೆ ಬಂದನು. ಹಸಿದವ್ರಿಗೆ ಊಟ ಕೊಟ್ಟನು. ಕುಷ್ಠರೋಗಿಗಳನ್ನ ವಾಸಿ ಮಾಡಿದನು. (ಮತ್ತಾ. 15:32; ಮಾರ್ಕ 1:41) ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವ ದೇವರಿಗೂ ನಮ್ಮ ಮೇಲೆ ಕೋಮಲ ಕರುಣೆ ಇದೆ. ಆತನು ಮತ್ತು ಯೇಸು ನಮ್ಮನ್ನ ತುಂಬ ಪ್ರೀತಿಸ್ತಾರೆ. ನಮಗೆ ಕಷ್ಟ ಬಂದ್ರೆ ಅವ್ರಿಗೂ ತುಂಬ ನೋವಾಗುತ್ತೆ. (ಲೂಕ 1:78; 1 ಪೇತ್ರ 5:7) ಹಾಗಾಗಿ ನಮ್ಮ ಕಷ್ಟಗಳನ್ನ ತೆಗೆದುಹಾಕೋಕೆ ಅವ್ರಿಬ್ರು ತುದಿಗಾಲಲ್ಲಿ ನಿಂತಿದ್ದಾರೆ.
6. ಯೇಸುಗೆ ಯೆಹೋವ ಎಷ್ಟು ಶಕ್ತಿ ಕೊಟ್ಟಿದ್ದಾನೆ?
6 ಎರಡು, ಯೆಹೋವ ನಮ್ಮೆಲ್ಲಾ ಕಷ್ಟಗಳನ್ನ ತೆಗೆದುಹಾಕೋ ಶಕ್ತಿಯನ್ನ ಯೇಸುಗೆ ಕೊಟ್ಟಿದ್ದಾನೆ. ಕೆಲವು ಸಮಸ್ಯೆಗಳನ್ನ ನಮ್ಮಿಂದ ಸರಿಮಾಡೋಕೆ ಆಗಲ್ಲ. ಆದ್ರೆ ಅಂಥ ಸಮಸ್ಯೆಗಳನ್ನ ತನ್ನಿಂದ ಸರಿಮಾಡೋಕೆ ಆಗುತ್ತೆ ಅಂತ ಯೇಸು ತೋರಿಸಿದ್ದಾನೆ. ಉದಾಹರಣೆಗೆ, ನಮ್ಮಲ್ಲಿ ಪಾಪ ಇರೋದ್ರಿಂದ ಕಾಯಿಲೆ ಬರುತ್ತೆ, ಇದ್ರಿಂದ ಸಾಯ್ತಾ ಇದ್ದೀವಿ. ಆದ್ರೆ ಇದನ್ನೆಲ್ಲಾ ತೆಗೆದುಹಾಕೋ ಶಕ್ತಿ ಯೇಸುಗಿದೆ. (ಮತ್ತಾ. 9:1-6; ರೋಮ. 5:12, 18, 19) ಆತನಿಗೆ ‘ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡೋಕೆ’ ಆಗುತ್ತೆ. ಸತ್ತವರನ್ನೂ ಮತ್ತೆ ಬದುಕಿಸೋಕೆ ಆಗುತ್ತೆ. (ಮತ್ತಾ. 4:23; ಯೋಹಾ. 11:43, 44) ಯೇಸು ಅದ್ಭುತ ಮಾಡಿ ದೊಡ್ಡದೊಡ್ಡ ಬಿರುಗಾಳಿಯನ್ನ ನಿಲ್ಲಿಸಿದ್ದಾನೆ. ಕೆಟ್ಟ ದೇವದೂತರನ್ನ ಸೋಲಿಸಿದ್ದಾನೆ. (ಮಾರ್ಕ 4:37-39; ಲೂಕ 8:2) ಯೆಹೋವ ಕೊಟ್ಟಿರೋ ಶಕ್ತಿಯಿಂದ ಯೇಸು ಮುಂದೆ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕ್ತಾನೆ ಅಂತ ತಿಳ್ಕೊಂಡಾಗ ನಮಗೆ ಎಷ್ಟು ಖುಷಿಯಾಗುತ್ತೆ ಅಲ್ವಾ!
7-8. (ಎ) ಯೇಸು ಮಾಡಿದ ಅದ್ಭುತಗಳಿಂದ ಯಾವ ಗ್ಯಾರಂಟಿ ಸಿಗುತ್ತೆ? (ಬಿ) ಹೊಸ ಲೋಕದಲ್ಲಿ ಯಾವ ಅದ್ಭುತ ನೋಡೋಕೆ ನೀವು ಕಾಯ್ತಾ ಇದ್ದೀರ?
7 ಮೂರು, ತನ್ನ ಆಳ್ವಿಕೆಯಲ್ಲಿ ಏನೆಲ್ಲ ಆಶೀರ್ವಾದ ಸಿಗುತ್ತೆ ಅಂತ ಯೆಹೋವ ಹೇಳಿದ್ದಾನೋ ಅದೆಲ್ಲ ನಿಜ ಆಗುತ್ತೆ ಅನ್ನೋ ಗ್ಯಾರಂಟಿ ನಮಗೆ ಸಿಗುತ್ತೆ. ಯೇಸು ಭೂಮಿಯಲ್ಲಿ ಇದ್ದಾಗ ಆತನು ಮಾಡಿದ ಅದ್ಭುತಗಳಿಂದ ಸ್ವಲ್ಪ ಜನ್ರಿಗೆ ಸಹಾಯ ಆಯ್ತು. ಆದ್ರೆ ಆತನು ದೇವರ ಸರ್ಕಾರದಲ್ಲಿ ರಾಜನಾಗಿ ಆಳುವಾಗ ಲೋಕದಲ್ಲಿರೋ ಎಲ್ರಿಗೂ ಸಹಾಯ ಮಾಡ್ತಾನೆ. ಹೇಗೆ? ಆಗ ನಮಗೆ ಒಳ್ಳೇ ಆರೋಗ್ಯ ಇರುತ್ತೆ. ಯಾಕಂದ್ರೆ ಎಲ್ಲಾ ತರದ ಕಾಯಿಲೆ ಮತ್ತು ಅಂಗವಿಕಲತೆನ ಯೇಸು ತೆಗೆದುಹಾಕ್ತಾನೆ. (ಯೆಶಾ. 33:24; 35:5, 6; ಪ್ರಕ. 21:3, 4) ಹಸಿವಿಂದ ನರಳಾಡೋ ಪರಿಸ್ಥಿತಿ ಇರಲ್ಲ. ನೈಸರ್ಗಿಕ ವಿಪತ್ತುಗಳು ಆಗಲ್ಲ. (ಯೆಶಾ. 25:6; ಮಾರ್ಕ 4:41) ನಾವು ಪ್ರೀತಿಸೋ ಜನ್ರು ಮತ್ತೆ ಜೀವ ಪಡ್ಕೊಂಡು ‘ಸಮಾಧಿಯಿಂದ’ ಎದ್ದು ಬರ್ತಾರೆ. (ಯೋಹಾ. 5:28, 29) ಆಗ ನಾವು ಖುಷಿಯಿಂದ ಅವ್ರನ್ನ ತಬ್ಬಿಕೊಳ್ತೀವಿ. ಹೊಸ ಲೋಕದಲ್ಲಿ ಯಾವ ಅದ್ಭುತ ನೋಡೋಕೆ ನೀವು ಕಾಯ್ತಾ ಇದ್ದೀರ?
8 ಯೇಸು ಅದ್ಭುತಗಳನ್ನ ಮಾಡುವಾಗ ದೀನತೆ ಮತ್ತು ಕರುಣೆ ತೋರಿಸಿದನು. ಇದನ್ನ ನಾವು ಕೂಡ ಬೆಳೆಸ್ಕೊಬೇಕು. ಹಾಗಾಗಿ ಯೇಸು ಇದನ್ನ ಹೇಗೆ ತೋರಿಸಿದನು ಅಂತ ಈಗ ನೋಡೋಣ.
ಯೇಸು ತರ ದೀನತೆ ತೋರಿಸೋಣ
9. ಮದುವೆ ಸಮಾರಂಭದಲ್ಲಿ ಯೇಸು ಏನು ಮಾಡಿದನು? (ಯೋಹಾನ 2:6-10)
9 ಯೋಹಾನ 2:6-10 ಓದಿ. ನಾವು ಈಗಾಗಲೇ ನೋಡಿದ ಹಾಗೆ ಯೇಸು ಕಾನಾ ಊರಿಗೆ ಮದುವೆಗೆ ಹೋಗಿದ್ದಾಗ ಅಲ್ಲಿ ದ್ರಾಕ್ಷಾಮದ್ಯ ಖಾಲಿ ಆಗೋಯ್ತು. ಆದ್ರೆ ಯೇಸು ಅದ್ಭುತ ಮಾಡಿ ಎಲ್ರಿಗೂ ದ್ರಾಕ್ಷಾಮದ್ಯ ಕೊಡಬೇಕು ಅನ್ನೋ ಅವಶ್ಯಕತೆ ಇರಲಿಲ್ಲ. ಯಾಕಂದ್ರೆ ಯೇಸು ಈ ತರ ಮಾಡ್ತಾನೆ ಅಂತ ಬೈಬಲಲ್ಲಿ ಎಲ್ಲೂ ಭವಿಷ್ಯವಾಣಿ ಹೇಳಿರಲಿಲ್ಲ. ಆದ್ರೂ ಯೇಸು ಯಾಕೆ ಇದನ್ನ ಮಾಡಿದನು? ನಿಮ್ಮ ಮದುವೆಯಲ್ಲಿ ಊಟ ಖಾಲಿ ಆಗಿಬಿಟ್ರೆ ಹೇಗಿರುತ್ತೆ ಅಂತ ಸ್ವಲ್ಪ ಯೋಚ್ನೆ ಮಾಡಿ. ನಿಮಗೆ, ನಿಮ್ಮ ಮನೆಯವ್ರಿಗೆ ಎಷ್ಟು ಅವಮಾನ ಆಗುತ್ತೆ ಅಲ್ವಾ? ಆ ತರ ಅವ್ರಿಗೆ ಅವಮಾನ ಆಗಬಾರದು ಅಂತಾನೇ ಯೇಸು ಅದ್ಭುತ ಮಾಡಿದನು. 390 ಲೀಟರ್ ನೀರನ್ನ ದ್ರಾಕ್ಷಾಮದ್ಯ ಮಾಡಿದನು. ಆದ್ರೆ ಆತನು ಅತಿಥಿಗಳಿಗೆ ಬೇಕಾಗೋಷ್ಟು ದ್ರಾಕ್ಷಾಮದ್ಯ ಮಾಡಿದ್ರೆ ಸಾಕಾಗ್ತಿತ್ತು. ಆದ್ರೂ ಯಾಕೆ ಅಷ್ಟು ದ್ರಾಕ್ಷಾಮದ್ಯ ಮಾಡಿದನು? ಮಿಕ್ಕಿದ ದ್ರಾಕ್ಷಾಮದ್ಯನ ಮದುವೆ ಮನೆಯವರು ಇಟ್ಕೊಬಹುದಿತ್ತು ಅಥವಾ ಅದನ್ನ ಮಾರಿ ಅದ್ರಿಂದ ಬರೋ ಹಣದಿಂದ ಹೊಸ ದಂಪತಿ ಜೀವನ ಶುರುಮಾಡೋಕೆ ಆಗ್ತಿತ್ತು. ಯೇಸು ಮಾಡಿದ ಈ ಸಹಾಯವನ್ನ ಆ ಹೊಸ ದಂಪತಿ ಜೀವನದಲ್ಲೇ ಮರೆತಿರಲ್ಲ!
10. ಯೇಸು ಅದ್ಭುತ ಮಾಡಿದಾಗ ಹೇಗೆ ನಡ್ಕೊಂಡ ಅಂತ ಯೋಹಾನ 2ನೇ ಅಧ್ಯಾಯದಲ್ಲಿದೆ? (ಚಿತ್ರನೂ ನೋಡಿ.)
10 ಯೇಸು ಈ ಅದ್ಭುತನ ಹೇಗೆ ಮಾಡಿದನು ಅಂತ ಯೋಹಾನ 2ನೇ ಅಧ್ಯಾಯದಲ್ಲಿ ವಿವರವಾಗಿ ಇದೆ. ಅದನ್ನ ಈಗ ನೋಡೋಣ. ಅಲ್ಲಿದ್ದ ಕಲ್ಲಿನ ಹಂಡೆಗಳಲ್ಲಿ ಯೇಸುನೇ ನೀರು ತುಂಬಿಸಿದ್ನಾ? ಇಲ್ಲ, ಕೆಲಸದವ್ರಿಗೆ ತುಂಬಿಸೋಕೆ ಹೇಳಿದನು. (ವಚನ 6, 7) ನೀರನ್ನ ದ್ರಾಕ್ಷಾಮದ್ಯ ಮಾಡಿದ ಮೇಲೆ ಆತನೇ ಮದುವೆ ಊಟದ ನಿರ್ದೇಶಕನಿಗೆ ತಗೊಂಡು ಹೋಗಿ ಕೊಟ್ನಾ? ಇಲ್ಲ, ಅದನ್ನೂ ಕೆಲಸದವ್ರಿಗೇ ಮಾಡೋಕೆ ಹೇಳಿದನು. (ವಚನ 8) ತಾನೊಂದು ಅದ್ಭುತ ಮಾಡಿದ್ದೀನಿ ಅಂತ ಎಲ್ರಿಗೂ ಗೊತ್ತಾಗಬೇಕು ಅಂತ ಯೇಸು ಆಸೆಪಡಲಿಲ್ಲ ಅಂತ ಇದ್ರಿಂದ ಗೊತ್ತಾಗುತ್ತೆ. ಅಷ್ಟೇ ಅಲ್ಲ ಯೇಸು ಆ ದ್ರಾಕ್ಷಾಮದ್ಯನ ಒಂದು ಲೋಟದಲ್ಲಿ ತಗೊಂಡು ಹೋಗಿ ಅತಿಥಿಗಳ ಹತ್ರ ‘ನಾನು ಮಾಡಿರೋ ಈ ದ್ರಾಕ್ಷಾಮದ್ಯ ಎಷ್ಟು ಚೆನ್ನಾಗಿದೆ ನೋಡಿ!’ ಅಂತ ಕೊಚ್ಕೊಳ್ಳಲಿಲ್ಲ.
11. ಯೇಸು ಮಾಡಿದ ಅದ್ಭುತದಿಂದ ನಾವು ಏನು ಕಲಿಬಹುದು?
11 ಯೇಸು ಮಾಡಿದ ಈ ಅದ್ಭುತದಿಂದ ಆತನ ಬಗ್ಗೆ ನಾವೇನು ಕಲಿಬಹುದು? ಯೇಸು ತುಂಬ ದೀನ ವ್ಯಕ್ತಿ ಆಗಿದ್ದ. ತಾನು ಮಾಡಿದ ಅದ್ಭುತದ ಬಗ್ಗೆ ಕೊಚ್ಕೊಳ್ಳಲಿಲ್ಲ. ತನ್ನ ಸಾಧನೆಗಳ ಬಗ್ಗೆ ಯಾವತ್ತೂ ಜನ್ರ ಹತ್ರ ಹೋಗಿ ಹೇಳ್ಕೊಳ್ಳಲಿಲ್ಲ. ಬದಲಿಗೆ ಇದನ್ನೆಲ್ಲ ಮಾಡಿದ್ದು ತನ್ನ ಅಪ್ಪನ ಸಹಾಯದಿಂದಾನೇ ಅಂತ ಹೇಳಿದನು. ಯೆಹೋವ ದೇವರಿಗೆ ಹೊಗಳಿಕೆ ಸಿಗೋ ತರ ಮಾಡಿದನು. (ಯೋಹಾ. 5:19, 30; 8:28) ನಾವು ಕೂಡ ಯೇಸು ತರಾನೇ ಇರಬೇಕು. ನಮ್ಮ ಸಾಧನೆಗಳ ಬಗ್ಗೆ ಬೇರೆಯವ್ರ ಹತ್ರ ಕೊಚ್ಕೊಬಾರದು. ನಾವೆಷ್ಟೇ ಚೆನ್ನಾಗಿ ಯೆಹೋವನ ಸೇವೆ ಮಾಡಿದ್ರೂ ಅದು ನಮ್ಮಿಂದ ಅಲ್ಲ, ಯೆಹೋವನ ಸಹಾಯದಿಂದ ಮಾತ್ರ ಮಾಡಕ್ಕಾಗೋದು. (ಯೆರೆ. 9:23, 24) ಹಾಗಾಗಿ ಆ ಹೊಗಳಿಕೆಯೆಲ್ಲಾ ಯೆಹೋವನಿಗೇ ಸಿಗಬೇಕು. ಯೆಹೋವನ ಸಹಾಯ ಇಲ್ಲದೇ ನಾವೇನಾದ್ರೂ ಮಾಡಕ್ಕಾಗುತ್ತಾ ಹೇಳಿ?—1 ಕೊರಿಂ. 1:26-31.
12. ಯೇಸು ತರ ನಾವು ಹೇಗೆ ದೀನತೆ ತೋರಿಸಬಹುದು?
12 ನಾವು ಯೇಸು ತರ ಹೇಗೆ ದೀನತೆ ತೋರಿಸಬಹುದು? ಒಂದು ಉದಾಹರಣೆ ನೋಡಿ. ಒಬ್ಬ ಸಹಾಯಕ ಸೇವಕನಿಗೆ ಮೊದಲನೇ ಸಲ ಸಾರ್ವಜನಿಕ ಭಾಷಣ ಕೊಡೋ ನೇಮಕ ಸಿಗುತ್ತೆ. ಅದಕ್ಕೆ ಒಬ್ಬ ಹಿರಿಯ ಅವನಿಗೆ ಸಹಾಯ ಮಾಡ್ತಾನೆ ಅಂದ್ಕೊಳ್ಳಿ. ಆ ಸಹಾಯಕ ಸೇವಕ ಆ ಭಾಷಣನ ತುಂಬ ಚೆನ್ನಾಗಿ ಕೊಡ್ತಾನೆ. ಅದು ಸಹೋದರ ಸಹೋದರಿಯರಿಗೆ ತುಂಬ ಇಷ್ಟ ಆಗುತ್ತೆ. ಅವರು ಆ ಹಿರಿಯನ ಹತ್ರ ಹೋಗಿ ‘ಆ ಸಹೋದರ ಎಷ್ಟು ಚೆನ್ನಾಗಿ ಟಾಕ್ ಕೊಟ್ರಲ್ವಾ?’ ಅಂತ ಕೇಳಿದಾಗ ಆ ಹಿರಿಯ ಏನು ಹೇಳಿದ್ರೆ ಚೆನ್ನಾಗಿರುತ್ತೆ? ‘ಹೌದು ಈ ಭಾಷಣ ತಯಾರಿಸೋಕೆ ನಾನು ತುಂಬ ಸಂಶೋಧನೆ ಮಾಡಿ ಸಹಾಯ ಮಾಡಿದೆ’ ಅಂತಾನಾ? ಅಥವಾ ‘ಆ ಸಹೋದರ ತುಂಬ ಪ್ರಯತ್ನ ಹಾಕಿದ್ದಾರೆ, ನಂಗೂ ತುಂಬ ಖುಷಿ ಆಯ್ತು’ ಅಂತಾನಾ? ನಾವು ದೀನರಾಗಿದ್ರೆ ಬೇರೆಯವ್ರಿಗೆ ನಮ್ಮಿಂದ ಏನೇ ಒಳ್ಳೇದಾದ್ರೂ ಅದನ್ನ ನಾವು ಕೊಚ್ಕೊಳಲ್ಲ. ನಾವು ಮಾಡೋ ಎಲ್ಲಾ ಒಳ್ಳೇ ಕೆಲಸಗಳನ್ನ ಯೆಹೋವ ನೋಡ್ತಾನೆ ಮತ್ತು ನಮ್ಮನ್ನ ಆಶೀರ್ವದಿಸ್ತಾನೆ ಅಂತ ನಮಗೆ ಗೊತ್ತಿರುತ್ತೆ. (ಮತ್ತಾಯ 6:2-4 ಹೋಲಿಸಿ; ಇಬ್ರಿ. 13:16) ಯೇಸು ತರ ನಾವೂ ದೀನತೆ ತೋರಿಸಿದ್ರೆ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ.—1 ಪೇತ್ರ 5:6.
ಯೇಸು ತರ ಅನುಕಂಪ ತೋರಿಸೋಣ
13. ನಾಯಿನ್ ಊರಿನ ಹತ್ರ ಯೇಸು ಏನು ನೋಡಿದನು? ಆಮೇಲೆ ಏನು ಮಾಡಿದನು? (ಲೂಕ 7:11-15)
13 ಲೂಕ 7:11-15 ಓದಿ. ಕ್ರಿಸ್ತ ಶಕ 31ರಲ್ಲಿ ಏನು ನಡಿತು ಅಂತ ನೋಡಿ. ಯೇಸು ಗಲಿಲಾಯದ ನಾಯಿನ್ ಊರಿಗೆ ಹೋಗ್ತಿದ್ದಾನೆ. ಇದು ಶೂನೇಮಿನ ಪಕ್ಕದಲ್ಲೇ ಇತ್ತು. ಈ ಶೂನೇಮ್‌ನಲ್ಲೇ ಎಲೀಷ ಸುಮಾರು 900 ವರ್ಷಗಳ ಹಿಂದೆ ಒಬ್ಬ ಸ್ತ್ರೀಯ ಮಗನನ್ನ ಮತ್ತೆ ಬದುಕಿಸಿದ್ದ. (2 ಅರ. 4:32-37) ಯೇಸು ಆ ಊರಿನ ಬಾಗಿಲ ಹತ್ರ ಬರ್ತಿದ್ದಾಗ ಅಲ್ಲಿನ ಜನ್ರು ಒಂದು ಶವ ಹೊತ್ಕೊಂಡು ಊರಾಚೆ ಬರ್ತಿದ್ರು. ಎಲ್ರೂ ತುಂಬ ದುಃಖದಲ್ಲಿ ಇದ್ರು. ಯಾಕಂದ್ರೆ ಅಲ್ಲಿ ಒಬ್ಬ ವಿಧವೆಯ ಮಗ ತೀರಿಕೊಂಡಿದ್ದ. ತನ್ನ ಒಬ್ಬನೇ ಮಗನನ್ನ ಕಳಕೊಂಡ ಆ ವಿಧವೆ ತುಂಬ ಗೋಳಾಡ್ತಾ, ಅಳ್ತಾ ಇದ್ದಳು. ಆಗ ಯೇಸು ಯಾರೂ ಯೋಚ್ನೆ ಮಾಡದೆ ಇರೋ ಒಂದು ವಿಷ್ಯನ ಮಾಡ್ತಾನೆ. ತೀರಿಹೋಗಿದ್ದ ಆ ಹುಡುಗನಿಗೆ ಮತ್ತೆ ಜೀವ ಕೊಡ್ತಾನೆ. ತೀರಿಹೋದವರಿಗೆ ಯೇಸು ಮತ್ತೆ ಜೀವ ಕೊಟ್ಟ ಮೂರು ಘಟನೆಗಳ ಬಗ್ಗೆ ಬೈಬಲಲ್ಲಿದೆ. ಅದ್ರಲ್ಲಿ ಇದು ಮೊದಲನೇದು.
14. ಲೂಕ 7ನೇ ಅಧ್ಯಾಯದಲ್ಲಿ ಯೇಸು ಅದ್ಭುತ ಮಾಡಿದ ಘಟನೆ ಬಗ್ಗೆ ಯಾವ ವಿವರಣೆ ಇದೆ? (ಚಿತ್ರನೂ ನೋಡಿ.)
14 ಲೂಕ 7ನೇ ಅಧ್ಯಾಯದಲ್ಲಿರೋ ವಿವರಗಳ ಕಡೆ ಸ್ವಲ್ಪ ಗಮನ ಕೊಡಿ. ಅಲ್ಲಿ ಮೊದಲು ಯೇಸು ‘ಅವಳನ್ನ ನೋಡಿದನು’ ಅಂತ ಹೇಳುತ್ತೆ. ಆಮೇಲೆ ಏನಾಯ್ತು? ಆತನ “ಮನಸ್ಸು ಕರಗಿ ಹೋಯ್ತು.” (ವಚನ 13) ಏನನ್ನ ನೋಡಿ ಆತನ ಮನಸ್ಸು ಕರಗಿತು? ವಿಧವೆ ಗೋಳಾಡ್ತಿರೋದನ್ನ ನೋಡಿದಾಗ ಯೇಸುಗೆ ಅಯ್ಯೋ ಪಾಪ ಅಂತ ಅನಿಸ್ತು. ಅವನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅವಳಿಗೆ ಅನುಕಂಪ ತೋರಿಸಿದನು. ಹೇಗೆ? ಅವಳನ್ನ ಸಮಾಧಾನ ಮಾಡಿದನು, “ಅಳಬೇಡ” ಅಂತ ಹೇಳಿದನು. ಆಮೇಲೆ ಅವಳ ಮಗನನ್ನ ಬದುಕಿಸಿ “ಅವನನ್ನ ತಾಯಿಗೆ ಒಪ್ಪಿಸಿದನು.”—ವಚನ 14, 15.
15. ಯೇಸು ಮಾಡಿದ ಅದ್ಭುತದಿಂದ ನಾವೇನು ಕಲಿಬಹುದು?
15 ಯೇಸು ಮಾಡಿದ ಆ ಅದ್ಭುತದಿಂದ ನಾವೇನು ಕಲಿಬಹುದು? ನಾವು ಕೂಡ ದುಃಖದಲ್ಲಿ ಇರೋರಿಗೆ ಅನುಕಂಪ ತೋರಿಸಬೇಕು. ಹೇಗೆ? ನಾವು ಯೇಸು ತರ ಸತ್ತಿರೋರನ್ನ ಮತ್ತೆ ಬದುಕಿಸೋಕೆ ಆಗಲ್ಲ. ಆದ್ರೆ ಯಾರಾದ್ರೂ ದುಃಖದಲ್ಲಿ ಇದ್ದಾರಾ ಅಂತ ಚೆನ್ನಾಗಿ ಗಮನಿಸಬೇಕು. ಅವ್ರಿಗೆ ಸಮಾಧಾನ ಮಾಡೋಕೆ, ಸಹಾಯ ಮಾಡೋಕೆ ಮುಂದೆ ಹೋಗಬೇಕು. d (ಜ್ಞಾನೋ. 17:17; 2 ಕೊರಿಂ. 1:3, 4; 1 ಪೇತ್ರ 3:8) ಆ ಸಮಯದಲ್ಲಿ ನಾವು ಆಡೋ ಮಾತುಗಳು ಮತ್ತು ನಾವು ಅವ್ರಿಗೆ ಮಾಡೋ ಚಿಕ್ಕಪುಟ್ಟ ಸಹಾಯಗಳು ಅವ್ರಿಗೆ ತುಂಬ ನೆಮ್ಮದಿ ಕೊಡುತ್ತೆ.
16. ಚಿತ್ರದಲ್ಲಿ ಇರೋ ಹಾಗೆ ಮಗಳನ್ನ ಕಳಕೊಂಡ ಸಹೋದರಿಯ ಅನುಭವದಿಂದ ನೀವೇನು ಕಲಿತ್ರಿ?
16 ಕೆಲವು ವರ್ಷಗಳ ಹಿಂದೆ ನಡೆದ ಒಂದು ಅನುಭವ ನೋಡಿ. ಒಬ್ಬ ಸಹೋದರಿ ಸ್ವಲ್ಪ ದಿನಗಳ ಹಿಂದೆಯಷ್ಟೇ ಮಗಳನ್ನ ಕಳಕೊಂಡಿದ್ರು. ಒಂದಿನ ಅವರು ಕೂಟದಲ್ಲಿ ಹಾಡ್ತಿದ್ದಾಗ ಅಳ್ತಾ ಇದ್ರು. ಯಾಕಂದ್ರೆ ಆ ಹಾಡು ಯೆಹೋವ ಸತ್ತವರಿಗೆ ಮತ್ತೆ ಜೀವ ಕೊಡ್ತಾರೆ ಅನ್ನೋ ವಿಷ್ಯದ ಬಗ್ಗೆ ಇತ್ತು. ಇದನ್ನ ಒಬ್ಬ ಸಹೋದರಿ ಗಮನಿಸಿದ್ರು. ಅವರು ಆ ಸಹೋದರಿಯ ಹತ್ರ ಹೋಗಿ, ಅವ್ರ ಹೆಗಲ ಮೇಲೆ ಕೈ ಹಾಕಿ ಜೊತೆಯಾಗಿ ಹಾಡಿದ್ರು. ಆಗ ದುಃಖದಲ್ಲಿದ್ದ ಆ ಸಹೋದರಿಗೆ ಹೇಗನಿಸ್ತು? “ಸಹೋದರ ಸಹೋದರಿಯರು ನನ್ನನ್ನ ಎಷ್ಟು ಪ್ರೀತಿಸ್ತಾರೆ ಅಂತ ಗೊತ್ತಾಯ್ತು. ಕೂಟಗಳಿಗೆ ಹೋದ್ರೆ ನನಗೆ ಸಹಾಯ ಸಿಗುತ್ತೆ ಅಂತ ಗೊತ್ತಿತ್ತು, ಆದ್ರೆ ಅವತ್ತು ಅದನ್ನ ಕಣ್ಣಾರೆ ನೋಡಿದೆ” ಅಂತ ಅವರು ಹೇಳಿದ್ರು. ಇದ್ರಿಂದ ನಮಗೇನು ಗೊತ್ತಾಗುತ್ತೆ? “ಮನಸ್ಸು ಚೂರುಚೂರಾಗಿ” ಹೋಗಿರೋರಿಗೆ ನಾವು ಮಾಡೋ ಚಿಕ್ಕಪುಟ್ಟ ಸಹಾಯನೂ ಯೆಹೋವ ಗಮನಿಸ್ತಾನೆ, ಅದಕ್ಕೆ ತುಂಬ ಬೆಲೆ ಕೊಡ್ತಾನೆ ಅಂತ ಗೊತ್ತಾಗುತ್ತೆ.—ಕೀರ್ತ. 34:18.
ನಂಬಿಕೆ ಜಾಸ್ತಿ ಮಾಡಿಕೊಳ್ಳೋಕೆ ಬೈಬಲ್ ಪ್ರಾಜೆಕ್ಟ್ ಮಾಡಿ
17. ನಾವು ಈ ಲೇಖನದಲ್ಲಿ ಏನು ಕಲಿತ್ವಿ?
17 ಯೇಸು ಮಾಡಿರೋ ಅದ್ಭುತಗಳ ಬಗ್ಗೆ ಬೈಬಲಿನಲ್ಲಿ ಓದಿದಾಗ ನಮಗೆ ತುಂಬ ವಿಷ್ಯಗಳನ್ನ ಕಲಿಯೋಕೆ ಆಗುತ್ತೆ. ಯೆಹೋವ ಮತ್ತು ಯೇಸು ನಮ್ಮನ್ನ ಎಷ್ಟು ಪ್ರೀತಿಸ್ತಾರೆ ಅಂತ ಗೊತ್ತಾಗುತ್ತೆ. ಯೇಸು ನಮಗಿರೋ ಕಷ್ಟಗಳನ್ನೆಲ್ಲ ತೆಗೆದುಹಾಕ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ, ಯೆಹೋವ ಮುಂದೆ ಆಶೀರ್ವಾದ ಕೊಟ್ಟೇ ಕೊಡ್ತಾನೆ ಅನ್ನೋ ಗ್ಯಾರಂಟಿ ಸಿಗುತ್ತೆ. ಈ ಅದ್ಭುತಗಳ ಬಗ್ಗೆ ಓದುವಾಗ ನಾವು ಹೇಗೆ ಯೇಸು ತರ ಒಳ್ಳೇ ಗುಣಗಳನ್ನ ತೋರಿಸಬಹುದು ಅಂತ ಯೋಚ್ನೆ ಮಾಡಬೇಕು. ಹಾಗಾಗಿ ಇದರ ಬಗ್ಗೆ ಬೈಬಲ್ ಪ್ರಾಜೆಕ್ಟ್ ಮಾಡಿ, ಕುಟುಂಬ ಆರಾಧನೆಯಲ್ಲಿ ಇದ್ರ ಬಗ್ಗೆ ಮಾತಾಡಿ. ಹೀಗೆ ಯೇಸು ಮಾಡಿದ ಅದ್ಭುತಗಳ ಬಗ್ಗೆ ಓದಿ ಅದ್ರಿಂದ ಪಾಠಗಳನ್ನ ಕಲಿಯೋಕೆ ಪ್ರಯತ್ನ ಮಾಡೋಣ. ಕಲಿತ ವಿಷ್ಯಗಳನ್ನ ಬೇರೆಯವ್ರಿಗೂ ಹೇಳೋಣ. ಇದ್ರಿಂದ ನಮ್ಮ ನಂಬಿಕೆನೂ ಜಾಸ್ತಿಯಾಗುತ್ತೆ, ಅವ್ರ ನಂಬಿಕೆನೂ ಜಾಸ್ತಿಯಾಗುತ್ತೆ.—ರೋಮ. 1:11, 12.
18. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?
18 ಯೇಸು ಒಟ್ಟು 3 ಜನರನ್ನ ಬದುಕಿಸಿದ್ದಾನೆ. ಅದ್ರಲ್ಲಿ ಮೂರನೇ ಅದ್ಭುತ ತುಂಬ ಸ್ಪೆಶಲ್ ಅಂತನೇ ಹೇಳಬಹುದು. ಯಾಕಂದ್ರೆ ಯೇಸು ಬದುಕಿಸಿದ ಆ ವ್ಯಕ್ತಿ ಸತ್ತು 4 ದಿನ ಆಗಿತ್ತು. ಈ ಅದ್ಭುತದಿಂದ ನಾವೇನು ಕಲಿಬಹುದು? ಇದ್ರಿಂದ ಮುಂದೆ ಸತ್ತವರಿಗೆ ಮತ್ತೆ ಜೀವ ಕೊಡ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತಿನ ಮೇಲೆ ನಮ್ಮ ನಂಬಿಕೆ ಹೇಗೆ ಜಾಸ್ತಿಯಾಗುತ್ತೆ? ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.
ಗೀತೆ 148 ಕೊಟ್ಟೆ ನೀ ಮಗನ
a ಯೇಸು ದೊಡ್ಡ ಬಿರುಗಾಳಿಯನ್ನೇ ನಿಲ್ಲಿಸಿದನು, ರೋಗಿಗಳನ್ನ ವಾಸಿಮಾಡಿದನು, ಸತ್ತವರನ್ನ ಮತ್ತೆ ಬದುಕಿಸಿದನು. ಯೇಸು ಮಾಡಿದ ಈ ಅದ್ಭುತಗಳನ್ನ ಓದುವಾಗ ನಮ್ಮ ಮೈ ಜುಂ ಅನ್ನುತ್ತೆ. ಈ ಎಲ್ಲಾ ಅದ್ಭುತಗಳನ್ನ ಯೆಹೋವ ಬೈಬಲಲ್ಲಿ ಸುಮ್ಮನೆ ಬರೆಸಿಲ್ಲ. ಇದ್ರಿಂದ ನಾವು ಕಲೀಬೇಕನ್ನೋದೇ ಆತನ ಆಸೆ. ಹಾಗಾಗಿ ನಾವೀಗ ಕೆಲವು ಅದ್ಭುತಗಳ ಬಗ್ಗೆ ಓದೋಣ. ಆಗ ನಮ್ಮ ನಂಬಿಕೆ ಗಟ್ಟಿಯಾಗುತ್ತೆ, ಯೆಹೋವ ಮತ್ತು ಯೇಸುವಿನ ಗುಣಗಳ ಬಗ್ಗೆ ಕಲಿತೀವಿ. ಅಷ್ಟೇ ಅಲ್ಲ, ಆ ಗುಣಗಳನ್ನ ನಾವು ಹೇಗೆ ಬೆಳೆಸ್ಕೊಳ್ಳಬಹುದು ಅಂತನೂ ನೋಡೋಣ.
b ಒಬ್ಬ ಬೈಬಲ್ ಪಂಡಿತ ಏನ್ ಹೇಳ್ತಾನೆ ಅಂದ್ರೆ “ಹಿಂದಿನ ಕಾಲದಲ್ಲಿ ಜನ್ರು ಬೇರೆಯವ್ರಿಗೆ ಅತಿಥಿಸತ್ಕಾರ ಮಾಡೋದು ತಮ್ಮ ಜವಾಬ್ದಾರಿ ಅಂತ ಅಂದ್ಕೊಳ್ತಿದ್ರು. ಅಷ್ಟೇ ಅಲ್ಲ, ಅತಿಥಿಗಳಿಗೆ ಏನೂ ಕಮ್ಮಿಯಾಗದೇ ಇರೋ ತರ ನೋಡ್ಕೋಬೇಕು ಅಂತ ನೆನಸ್ತಿದ್ರು. ಅದ್ರಲ್ಲೂ ಮದ್ವೆ ಸಮಾರಂಭಗಳಲ್ಲಿ ಅತಿಥಿಗಳಿಗೆ ಊಟ ಮತ್ತು ದ್ರಾಕ್ಷಾಮದ್ಯನಾ ಇನ್ನೂ ಜಾಸ್ತಿನೇ ರೆಡಿಮಾಡಿ ಇಟ್ಕೊಳ್ತಿದ್ರು.”
c ಮತ್ತಾಯದಿಂದ ಯೋಹಾನ ಪುಸ್ತಕದ ತನಕ ಓದಿದ್ರೆ ಯೇಸು ಸುಮಾರು 30ಕ್ಕಿಂತ ಜಾಸ್ತಿ ಅದ್ಭುತಗಳನ್ನ ಮಾಡಿದ್ದಾನೆ ಅಂತ ಗೊತ್ತಾಗುತ್ತೆ. ಆದ್ರೆ ಎಲ್ಲಾ ಅದ್ಭುತಗಳನ್ನ ಒಂದೊಂದಾಗಿ ವಿವರವಾಗಿ ಬೈಬಲಿನಲ್ಲಿ ಬರೆದಿಲ್ಲ. ಉದಾಹರಣೆಗೆ, ಒಂದು ಸಲ ಇಡೀ “ಊರಿಗೆ ಊರೇ” ಯೇಸು ಹತ್ರ ಬಂದಿತ್ತು. ಆಗ “ಆತನು ಬೇರೆಬೇರೆ ರೋಗಗಳಿಂದ ನರಳ್ತಿದ್ದ ಜನ್ರನ್ನ ವಾಸಿಮಾಡಿದನು.”—ಮಾರ್ಕ 1:32-34.
d ದುಃಖದಲ್ಲಿ ಇರೋರ ಹತ್ರ ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಅಂತ ತಿಳ್ಕೊಳ್ಳೋಕೆ ನವೆಂಬರ್ 1, 2010ರ ಕಾವಲಿನಬುರುಜುವಿನಲ್ಲಿರೋ “ದುಃಖದಲ್ಲಿ ಇರೋರಿಗೆ ಯೇಸು ತರ ಸಮಾಧಾನ ಮಾಡಿ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
e ಚಿತ್ರ ವಿವರಣೆ: ಮದುವೆ ಮನೆಲಿ ಗಂಡುಹೆಣ್ಣು ಅತಿಥಿಗಳ ಜೊತೆ ದ್ರಾಕ್ಷಾಮದ್ಯ ಕುಡಿತಾ ಸಂತೋಷವಾಗಿದ್ದಾರೆ. ಅದನ್ನ ಯೇಸು ದೂರದಲ್ಲಿ ನಿಂತು ನೋಡ್ತಾ ಖುಷಿ ಪಡ್ತಿದ್ದಾನೆ.