ಅಧ್ಯಯನ ಲೇಖನ 12
ಜೆಕರ್ಯ ನೋಡಿದ್ದು ನಿಮಗೂ ಕಾಣಿಸ್ತಿದ್ದೀಯಾ?
“‘ನನ್ನ ಪವಿತ್ರಶಕ್ತಿಯಿಂದಾನೇ’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.”—ಜೆಕ. 4:6.
ಗೀತೆ 137 ಕೊಡು ನಮಗೆ ಧೈರ್ಯ
ಕಿರುನೋಟ *
1. ಕೈದಿಗಳಾಗಿದ್ದ ಯೆಹೂದ್ಯರಿಗೆ ಯಾವ ಸಿಹಿಸುದ್ದಿ ಸಿಕ್ತು?
ಯೆಹೂದ್ಯರು ಬಾಬೆಲಿನಲ್ಲಿ ಹತ್ತಾರು ವರ್ಷಗಳಿಂದ ಕೈದಿಗಳಾಗಿದ್ದಾರೆ. ಈಗ ಅವರನ್ನೆಲ್ಲಾ ಬಿಡುಗಡೆ ಮಾಡಬೇಕಂತ ಯೆಹೋವ ದೇವರು ಪರ್ಷಿಯದ ರಾಜ “ಕೋರೆಷನ ಮನಸ್ಸನ್ನ ಪ್ರಚೋದಿಸಿದನು.” ಆಗ ರಾಜ ಯೆಹೂದ್ಯರು ತಮ್ಮ ಸ್ವದೇಶಕ್ಕೆ ವಾಪಸ್ಸು ಹೋಗಿ “ಇಸ್ರಾಯೇಲಿನ ದೇವರಾದ ಯೆಹೋವನ ಆಲಯವನ್ನ ಪುನಃ ಕಟ್ಟಬೇಕು” ಅಂತ ಆಜ್ಞೆ ಕೊಟ್ಟ. (ಎಜ್ರ 1:1, 3) ಇದನ್ನ ಕೇಳಿದಾಗ ಅಲ್ಲಿದ್ದ ಯೆಹೂದ್ಯರು ಖುಷಿಯಿಂದ ಕುಣಿದು ಕುಪ್ಪಳಿಸಿರಬೇಕು! ಯಾಕಂದ್ರೆ ಇದ್ರಿಂದ ಅವರು ಸ್ವದೇಶಕ್ಕೆ ಹೋಗಿ ಸತ್ಯದೇವರಾದ ಯೆಹೋವನ ಶುದ್ಧಾರಾಧನೆಯನ್ನು ಪುನಃ ಶುರುಮಾಡೋಕೆ ಆಯ್ತು.
2. ಯೆರೂಸಲೇಮಿಗೆ ಬಂದ ತಕ್ಷಣ ಯೆಹೂದ್ಯರು ಏನು ಮಾಡಿದ್ರು?
2 ಬಾಬೆಲಿನಲ್ಲಿ ಕೈದಿಗಳಾಗಿದ್ದ ಯೆಹೂದ್ಯರು ಕ್ರಿಸ್ತಪೂರ್ವ 537ರಲ್ಲಿ ಯೆಹೂದ ಕುಲದ ರಾಜಧಾನಿಯಾಗಿದ್ದ ಯೆರೂಸಲೇಮಿಗೆ ವಾಪಸ್ಸು ಬಂದರು. ಅವರು ಅಲ್ಲಿಗೆ ಬಂದು ಮುಟ್ಟಿದ ತಕ್ಷಣ ಆಲಯ ಕಟ್ಟೋಕೆ ಶುರುಮಾಡಿದರು ಮತ್ತು ಕ್ರಿಸ್ತಪೂರ್ವ 536ರಷ್ಟಕ್ಕೆ ಆಲಯದ ಅಡಿಪಾಯ ಹಾಕಿ ಮುಗಿಸಿದರು!
3. ಯೆಹೂದ್ಯರು ಯಾಕೆ ಆಲಯ ಕಟ್ಟೋದನ್ನ ನಿಲ್ಲಿಸಬೇಕಾಯ್ತು?
3 ಯೆಹೂದ್ಯರು ಆಲಯವನ್ನ ಕಟ್ಟೋಕೆ ಶುರುಮಾಡಿದಾಗ ಅಲ್ಲಿದ್ದ ಜನರು ತುಂಬ ವಿರೋಧಿಸಿದರು. “ಯೆಹೂದ್ಯರು ಧೈರ್ಯ ಕಳ್ಕೊಳ್ಳೋ ತರ ಮಾಡಿದ್ರು. ಬೇಜಾರಾಗಿ ಅವರು ಕಟ್ಟೋ ಕೆಲ್ಸ ನಿಲ್ಲಿಸಿಬಿಡ್ಲಿ” ಅಂತ ತೊಂದರೆ ಕೊಟ್ರು. (ಎಜ್ರ 4:4) ಅವರು ಇಷ್ಟಕ್ಕೇ ನಿಲ್ಲಿಸಲಿಲ್ಲ. ಕ್ರಿಸ್ತಪೂರ್ವ 522ರಲ್ಲಿ ಅರ್ತಷಸ್ತ ಪರ್ಷಿಯದ ರಾಜನಾದಾಗ, ಯೆಹೂದ್ಯರ ಕೆಲಸಕ್ಕೆ ಅಂತ್ಯ ಹಾಡೋಕೆ ಇದೇ ಒಳ್ಳೇ ಅವಕಾಶ ಅಂತ ವಿರೋಧಿಗಳು ಅಂದುಕೊಂಡರು. * ಅದಕ್ಕೆ ಅವರು “ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋ” ಸಂಚು ಹೂಡಿದರು. (ಕೀರ್ತ. 94:20) ರಾಜನಿಗೆ ಪತ್ರ ಬರೆದು ಯೆಹೂದ್ಯರ ಮೇಲೆ ಆರೋಪಗಳನ್ನ ಹಾಕಿದರು. ರಾಜನ ವಿರುದ್ಧ ದಂಗೆ ಏಳೋಕಂತಾನೇ ಗೋಡೆ ಕಟ್ಟುತ್ತಿದ್ದಾರೆ ಅಂತ ಹೇಳಿದ್ರು. (ಎಜ್ರ 4:11-16) ಇದನ್ನ ಕೇಳಿಸಿಕೊಂಡ ರಾಜ, ಯೆಹೂದ್ಯರು ಕಟ್ಟೋ ಕೆಲಸನ ನಿಲ್ಲಿಸಬೇಕು ಅಂತ ನಿಷೇಧ ಹಾಕಿದ. (ಎಜ್ರ 4:17-23) ಹಾಗಾಗಿ ಯೆಹೂದ್ಯರು ಖುಷಿಯಿಂದ ಕಟ್ಟುತ್ತಿದ್ದ ಆಲಯದ ಕೆಲಸ ನಿಂತುಹೋಯ್ತು.—ಎಜ್ರ 4:24.
4. ಆಲಯದ ಕೆಲಸ ನಿಂತುಹೋದಾಗ ಯೆಹೋವ ಏನು ಮಾಡಿದನು? (ಯೆಶಾಯ 55:11)
4 ಪರ್ಷಿಯದ ಸರ್ಕಾರದಲ್ಲಿದ್ದ ಕೆಲವು ಅಧಿಕಾರಿಗಳು ಮತ್ತು ಸುಳ್ಳಾರಾಧನೆ ಮಾಡುತ್ತಿದ್ದ ಕೆಲವು ಜನರು ಯೆಹೋವನ ಆಲಯದ ಕೆಲಸನ ಹೇಗಾದರೂ ಮಾಡಿ ನಿಲ್ಲಿಸಬೇಕು ಅಂತ ಪ್ರಯತ್ನಿಸಿದರು. ಆದ್ರೆ ಯೆಹೋವ, ಏನೇ ಆದರೂ ಆಲಯ ಕಟ್ಟೋ ಕೆಲಸ ನಿಲ್ಲಬಾರದು ಅಂತ ನಿರ್ಧಾರ ಮಾಡಿದ್ದನು. ಆತನು ನಿರ್ಧಾರ ಮಾಡಿದ ಮೇಲೆ ಅದು ನಡೆದೇ ನಡೆಯುತ್ತೆ. (ಯೆಶಾಯ 55:11 ಓದಿ.) ಆ ಸಮಯದಲ್ಲಿ ಯೆಹೂದ್ಯರಿಗೆ ಧೈರ್ಯ ತುಂಬೋಕೆ ಯೆಹೋವ ದೇವರು ಧೀರ ಪ್ರವಾದಿ ಜೆಕರ್ಯನನ್ನು ಅವರ ಹತ್ರ ಕಳಿಸಿದನು. ಅವನಿಗೆ ಯೆಹೋವ ಎಂಟು ದರ್ಶನಗಳನ್ನ ತೋರಿಸಿದನು. ಐದನೇ ದರ್ಶನದಲ್ಲಿ ಜೆಕರ್ಯ ದೀಪಸ್ತಂಭ ಮತ್ತು ಎರಡು ಆಲೀವ್ ಮರಗಳನ್ನ ನೋಡಿದ. ತಮ್ಮ ವಿರೋಧಿಗಳು ಎಷ್ಟೇ ತೊಂದರೆ ಕೊಟ್ಟರೂ ಭಯ ಪಡಬಾರದು ಅಂತ ಈ ದರ್ಶನಗಳು ಯೆಹೂದ್ಯರಿಗೆ ಧೈರ್ಯ ತುಂಬಿತು.
5. ಈ ಲೇಖನದಲ್ಲಿ ನಾವು ಏನು ನೋಡ್ತೀವಿ?
5 ಯೆಹೋವ ದೇವರು ಯೆಹೂದ್ಯರಿಗೆ ಧೈರ್ಯ ತುಂಬೋಕೆ ತೋರಿಸಿದ ಐದನೇ ದರ್ಶನ ನಮಗೂ ಧೈರ್ಯ ತುಂಬುತ್ತೆ. ಹಾಗಾಗಿ ಈ ಲೇಖನದಲ್ಲಿ ನಾವು ಆ ದರ್ಶನದ ಬಗ್ಗೆ ನೋಡೋಣ. ಅದು ನಮಗೆ ಎಂಥಾ ವಿರೋಧಗಳು ಬಂದರೂ, ನಮ್ಮ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆಗಳಾದರೂ, ಹೊಸ ನಿರ್ದೇಶನ ಸಿಕ್ಕಾಗ ಅದು ಅರ್ಥ ಆಗದೇ ಇದ್ದರೂ ಯೆಹೋವನ ಸೇವೆಯನ್ನ ಬಿಡದೇ ಇರೋಕೆ ಸಹಾಯ ಮಾಡುತ್ತೆ.
ಹಿಂಸೆ, ವಿರೋಧ ಬಂದಾಗ
6. ಜೆಕರ್ಯ 4:1-3ರಲ್ಲಿರೋ ದೀಪಸ್ತಂಭ ಮತ್ತು ಆಲೀವ್ ಮರಗಳ ದರ್ಶನ ಯೆಹೂದ್ಯರಿಗೆ ಹೇಗೆ ಧೈರ್ಯ ತುಂಬಿತು? (ಮುಖಪುಟ ಚಿತ್ರ ನೋಡಿ.)
6 ಜೆಕರ್ಯ 4:1-3 ಓದಿ. ಈ ದರ್ಶನದಲ್ಲಿದ್ದ ದೀಪಗಳಿಗೆ ಎಣ್ಣೆ ಎಲ್ಲಿಂದ ಸಿಗುತ್ತಿತ್ತು ಅಂತ ನೋಡಿದ್ರಾ? ಆ ದೀಪಸ್ತಂಭದ ಮೇಲಿದ್ದ ಬಟ್ಟಲಿಗೆ ಅಕ್ಕಪಕ್ಕದಲ್ಲಿದ್ದ ಆಲೀವ್ ಮರಗಳಿಂದ ಎಣ್ಣೆ ಸಿಗುತ್ತಿತ್ತು. ಆ ಬಟ್ಟಲನ್ನ ದೀಪಗಳ ಏಳು ಕೊಳವೆಗಳಿಗೆ ಜೋಡಿಸಲಾಗಿತ್ತು. ಇದರಿಂದ ದೀಪಸ್ತಂಭದಲ್ಲಿದ್ದ ಏಳು ದೀಪಗಳು ಆರಿಹೋಗದೆ ಉರಿತಾ ಇತ್ತು. ಇದನ್ನ ನೋಡಿದ ಜೆಕರ್ಯ “ಇವುಗಳ ಅರ್ಥ ಏನು” ಅಂತ ದೇವದೂತನಿಗೆ ಕೇಳಿದ. ಅದಕ್ಕೆ ಅವನು, “‘ಇವೆಲ್ಲ ನಡಿಯೋದು ಯಾವುದೇ ಸೈನ್ಯದಿಂದಲ್ಲ, ಯಾವುದೇ ಶಕ್ತಿಯಿಂದಲ್ಲ. ಬದಲಿಗೆ ನನ್ನ ಪವಿತ್ರಶಕ್ತಿಯಿಂದಾನೇ’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ” ಅಂದ. (ಜೆಕ. 4:4, 6) ಮರಗಳಿಂದ ಸಿಗುತ್ತಿದ್ದ ಎಣ್ಣೆ ಯೆಹೋವನ ಪವಿತ್ರಶಕ್ತಿಯನ್ನ ಸೂಚಿಸುತ್ತೆ. ಇದು ಯಾವತ್ತೂ ಖಾಲಿಯಾಗಲ್ಲ ಅಥವಾ ನಿಂತುಹೋಗಲ್ಲ. ಯೆಹೋವನ ಪವಿತ್ರಶಕ್ತಿಯ ಮುಂದೆ ಪರ್ಷಿಯನ್ನರ ಮಿಲಿಟರಿ ಶಕ್ತಿ ಏನೇನೂ ಅಲ್ಲ ಅಂತ ಇದು ತೋರಿಸಿತು. ಯೆಹೋವ ನಮ್ಮ ಜೊತೆ ಇದ್ರೆ ಯಾರೇ ಎಷ್ಟೇ ವಿರೋಧ ತಂದರೂ ಆಲಯದ ಕೆಲಸನ ಮಾಡಿ ಮುಗಿಸೋಕೆ ಆಗುತ್ತೆ ಅನ್ನೋ ಭರವಸೆನ ಯೆಹೂದ್ಯರಿಗೆ ಈ ದರ್ಶನ ಕೊಡ್ತು. ಈಗ ಯೆಹೂದ್ಯರು ಯೆಹೋವನ ಮೇಲೆ ಭರವಸೆ ಇಟ್ಟು ಕೆಲಸನ ಮುಂದುವರಿಸೋದಷ್ಟೇ ಬಾಕಿ. ಮಿಕ್ಕಿದ್ದೆಲ್ಲಾ ಯೆಹೋವ ನೋಡಿಕೊಳ್ಳುತ್ತಿದ್ದನು. ಯೆಹೂದ್ಯರು ಅದನ್ನೇ ಮಾಡಿದರು.
7. ಆಲಯ ಕಟ್ಟೋಕೆ ಯೆಹೂದ್ಯರಿಗೆ ಯಾವ ಸಹಾಯ ಸಿಕ್ತು?
7 ಸ್ವಲ್ಪ ದಿನ ಆದಮೇಲೆ ಪರಿಸ್ಥಿತಿ ಬದಲಾಯಿತು. ಕ್ರಿಸ್ತಪೂರ್ವ 520ರಲ್ಲಿ ದಾರ್ಯಾವೆಷನು ಪರ್ಷಿಯದ ರಾಜನಾದ. ಅವನು ರಾಜನಾಗಿ ಎರಡು ವರ್ಷಗಳಾದ ಮೇಲೆ ಆಲಯ ಕಟ್ಟೋ ಕೆಲಸನ ಈ ಮುಂಚೆ ಇದ್ದ ಅಧಿಕಾರಿಗಳು ಅನ್ಯಾಯವಾಗಿ ನಿಲ್ಲಿಸಿಬಿಟ್ಟಿದ್ದಾರೆ ಅಂತ ಅವನಿಗೆ ಗೊತ್ತಾಯ್ತು. ಹಾಗಾಗಿ ದೇವಾಲಯ ಕಟ್ಟಿ ಮುಗಿಸಿ ಅಂತ ಯೆಹೂದ್ಯರಿಗೆ ಆಜ್ಞೆ ಕೊಟ್ಟ. (ಎಜ್ರ 6:1-3) ಇದನ್ನ ಕೇಳಿದಾಗ ಯೆಹೂದ್ಯರಿಗೆ ತುಂಬ ಖುಷಿಯಾಗಿರುತ್ತೆ. ಅಷ್ಟೇ ಅಲ್ಲ, ಯೆಹೂದ್ಯರಿಗೆ ಯಾರೂ ತೊಂದ್ರೆ ಕೊಡಬಾರದು, ಆಲಯದ ಕೆಲಸಕ್ಕೆ ಹಣ, ವಸ್ತುಗಳನ್ನ ಕೊಟ್ಟು ಬೆಂಬಲ ಕೊಡಬೇಕು ಅಂತ ರಾಜ ಹೇಳಿದನು. (ಎಜ್ರ 6:7-12) ಇದರಿಂದ ಯೆಹೂದ್ಯರು ಖುಷಿಖುಷಿಯಿಂದ ಆಲಯ ಕಟ್ಟೋ ಕೆಲಸನ ಮಾಡಿದ್ರು. ನಾಲ್ಕೇ ವರ್ಷದಲ್ಲಿ ಅಂದ್ರೆ ಕ್ರಿಸ್ತಪೂರ್ವ 515ರಲ್ಲಿ ಆಲಯ ಕಟ್ಟಿ ಮುಗಿಸಿದರು.—ಎಜ್ರ 6:15.
8. ವಿರೋಧ ಇದ್ರೂ ನೀವ್ಯಾಕೆ ಧೈರ್ಯದಿಂದ ಇರಬಹುದು?
8 ಇವತ್ತು ಯೆಹೋವನ ಜನರಿಗೆ ತುಂಬ ಹಿಂಸೆ ವಿರೋಧ ಇದೆ. ಉದಾಹರಣೆಗೆ, ಕೆಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಕೆಲಸನ ಬ್ಯಾನ್ ಮಾಡಿದ್ದಾರೆ. ಇದರಿಂದ ಕೆಲವು ಸಹೋದರರನ್ನ ಅಲ್ಲಿನ ಸರ್ಕಾರ ಬಂಧಿಸಿರಬಹುದು ಮತ್ತು ಅವರನ್ನ ‘ರಾಜರ ಅಥವಾ ರಾಜ್ಯಪಾಲರ ಹತ್ರ ಎಳೆದುಕೊಂಡು ಹೋಗಿರಬಹುದು.’ (ಮತ್ತಾ. 10:17, 18) ಆದರೆ ಕೆಲವೊಮ್ಮೆ ಸರ್ಕಾರಗಳು ಬದಲಾದಾಗ ಸನ್ನಿವೇಶ ಬದಲಾಗುತ್ತೆ. ಆಗ ನಮ್ಮ ಸಹೋದರ ಸಹೋದರಿಯರಿಗೆ ಯೆಹೋವನನ್ನ ಆರಾಧನೆ ಮಾಡೋಕೆ ಸ್ವಾತಂತ್ರ್ಯ ಸಿಗಬಹುದು ಅಥವಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ನಮ್ಮ ಪರವಾಗಿ ತೀರ್ಪುಕೊಡಬಹುದು. ಇನ್ನು ಕೆಲವು ಕಡೆ ನಮ್ಮ ಸಹೋದರರಿಗೆ ತಮ್ಮ ದೇಶದಲ್ಲಿ ಯೆಹೋವನ ಆರಾಧನೆ ಮಾಡೋಕೆ ಯಾವ ತೊಂದರೆನೂ ಇಲ್ಲ. ಆದರೆ ಅವರ ಕುಟುಂಬದವರು, ಸಂಬಂಧಿಕರು ಅವರನ್ನ ವಿರೋಧಿಸುತ್ತಾ ಇರಬಹುದು. (ಮತ್ತಾ. 10:32-36) ಆದರೂ ಅವರು ಯೆಹೋವನ ಸೇವೆನ ಮಾಡ್ತಾ ಇರೋದನ್ನ ನೋಡಿ ಅವರ ಸಂಬಂಧಿಕರು ವಿರೋಧಿಸೋದನ್ನ ನಿಲ್ಲಿಸಿಬಿಟ್ಟಿದ್ದಾರೆ ಮತ್ತು ಈ ರೀತಿ ವಿರೋಧಗಳನ್ನ ಎದುರಿಸಿದ ಎಷ್ಟೋ ಸಹೋದರ ಸಹೋದರಿಯರು ಈಗ ಹುರುಪಿಂದ ಸೇವೆ ಮಾಡ್ತಿದ್ದಾರೆ. ಒಂದುವೇಳೆ ನೀವು ಇಂಥ ವಿರೋಧಗಳನ್ನ ಎದುರಿಸುತ್ತಿರೋದಾದ್ರೆ ಧೈರ್ಯ ಕಳಕೊಳ್ಳಬೇಡಿ, ಸೋತುಹೋಗಬೇಡಿ. ಯೆಹೋವ ಯಾವಾಗಲೂ ನಿಮ್ಮ ಜೊತೆ ಇದ್ದಾನೆ. ಆತನ ಪವಿತ್ರಶಕ್ತಿ ನಿಮಗೆ ಖಂಡಿತ ಸಹಾಯ ಮಾಡುತ್ತೆ.
ನಮ್ಮ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆಗಳು ಆದಾಗ
9. ಆಲಯದ ಅಡಿಪಾಯ ಹಾಕಿದಾಗ ಕೆಲವು ಯೆಹೂದ್ಯರು ಯಾಕೆ ಅತ್ತರು?
9 ಆಲಯದ ಅಡಿಪಾಯ ಹಾಕಿದಾಗ ಅಲ್ಲಿದ್ದ ಕೆಲವು ವಯಸ್ಸಾದ ಯೆಹೂದ್ಯರು ಅದನ್ನ ನೋಡಿ ಅತ್ತರು. (ಎಜ್ರ 3:12) ಯಾಕಂದ್ರೆ ಅವರು ಸೊಲೊಮೋನ ಕಟ್ಟಿಸಿದ್ದ ಸುಂದರವಾದ ಆಲಯನ ನೋಡಿದ್ದರು. ಹಾಗಾಗಿ ಮುಂಚೆ ಇದ್ದ ಆಲಯಕ್ಕೆ ಹೋಲಿಸುವಾಗ ಈಗ ಇರೋ ಆಲಯ “ಏನೇನೂ ಅಲ್ಲ” ಅಂತ ಅವರಿಗೆ ಅನಿಸಿತು. (ಹಗ್ಗಾ. 2:2, 3) ಇದ್ರಿಂದ ಅವರಿಗೆ ತುಂಬ ದುಃಖ ಆಯ್ತು. ಆದರೆ ಜೆಕರ್ಯನ ದರ್ಶನದಿಂದ ಅವರಿಗೆ ಸಮಾಧಾನ ಆಯ್ತು. ಹೇಗೆ ಅಂತ ಈಗ ನೋಡೋಣ.
10. ಜೆಕರ್ಯ 4:8-10ರಲ್ಲಿರೋ ದೇವದೂತನ ಮಾತುಗಳು ಯೆಹೂದ್ಯರಿಗೆ ಖಂಡಿತ ಸಮಾಧಾನ ತಂದಿರುತ್ತೆ ಅಂತ ನಾವು ಹೇಗೆ ಹೇಳಬಹುದು?
10 ಜೆಕರ್ಯ 4:8-10 ಓದಿ. “ಜೆರುಬ್ಬಾಬೆಲನ ಕೈಯಲ್ಲಿ ಜನ ತೂಗುಗುಂಡನ್ನ ನೋಡ್ತಾರೆ, ಖಂಡಿತ ಸಂಭ್ರಮಿಸ್ತಾರೆ” ಅಂತ ದೇವದೂತ ಹೇಳಿದ್ದರ ಅರ್ಥ ಏನು? ತೂಗುಗುಂಡು ಅಂದರೆ ಒಂದು ವಸ್ತು ನೇರವಾಗಿದೆಯಾ, ಸರಿಯಾಗಿದೆಯಾ ಅಂತ ತೋರಿಸುವ ಸಾಧನ. ಇದರಿಂದ ಆ ದೇವದೂತ ಏನು ಹೇಳೋಕೆ ಬರುತ್ತಿದ್ದಾನೆ ಅಂದ್ರೆ ಈಗ ಕಟ್ಟುತ್ತಿರೋ ಈ ಆಲಯ ಸೊಲೊಮೋನ ಕಟ್ಟಿದ ಆಲಯದಷ್ಟು ದೊಡ್ಡದಾಗಿಲ್ಲದೆ ಇರಬಹುದು. ಆದರೆ ಈ ಆಲಯನ ಖಂಡಿತ ಸರಿಯಾದ ರೀತಿಯಲ್ಲಿ ಕಟ್ಟಿ ಮುಗಿಸಲಾಗುತ್ತೆ ಮತ್ತು ಇದು ಯೆಹೋವನಿಗೆ ಇಷ್ಟ ಆಗೋ ತರಾನೇ ಇರುತ್ತೆ ಅಂತ ಹೇಳುತ್ತಿದ್ದಾನೆ. ಈ ಆಲಯ ಯೆಹೋವ ದೇವರಿಗೇ ಇಷ್ಟ ಆಯ್ತು ಅಂದಮೇಲೆ ಯೆಹೂದ್ಯರು ಅದನ್ನ ನೋಡಿ ಬೇಜಾರು ಮಾಡಿಕೊಳ್ಳೋ ಅಗತ್ಯ ಇರಲಿಲ್ಲ. ಯಾಕಂದ್ರೆ ಯೆಹೋವ ದೇವರಿಗೆ ಆಲಯ ಎಷ್ಟು ದೊಡ್ಡದಾಗಿದೆ ಅನ್ನೋದಲ್ಲ, ಅಲ್ಲಿ ಜನ ತನಗಿಷ್ಟ ಆಗೋ ತರ ಆರಾಧನೆ ಮಾಡ್ತಾರಾ ಅನ್ನೋದೇ ಮುಖ್ಯ ಆಗಿತ್ತು. ಇದನ್ನ ಯೆಹೂದ್ಯರು ಅರ್ಥಮಾಡಿಕೊಂಡರೆ ಖಂಡಿತ ಖುಷಿಯಾಗಿರೋಕೆ ಆಗುತ್ತಿತ್ತು.
11. ಕೆಲವು ಸಹೋದರ ಸಹೋದರಿಯರಿಗೆ ಯಾವಾಗ ಬೇಜಾರಾಗುತ್ತೆ?
11 ಪರಿಸ್ಥಿತಿಗಳು ಬದಲಾದಾಗ ನಮ್ಮಲ್ಲಿ ತುಂಬ ಜನರಿಗೆ ಬೇಜಾರಾಗುತ್ತೆ. ಉದಾಹರಣೆಗೆ, ತುಂಬ ವರ್ಷಗಳಿಂದ ವಿಶೇಷ ಪೂರ್ಣ ಸಮಯದ ಸೇವೆ ಮಾಡುತ್ತಿದ್ದವರಿಗೆ ಅವರ ನೇಮಕ ಬದಲಾಗಿದೆ. ಇನ್ನೂ ಕೆಲವರಿಗೆ ವಯಸ್ಸಾಗಿರೋದರಿಂದ ತಮಗೆ ಇಷ್ಟವಾದ ನೇಮಕವನ್ನ ಬಿಡಬೇಕಾಗಿ ಬಂದಿದೆ. ಹೀಗಾದಾಗ ತುಂಬ ಬೇಜಾರಾಗುತ್ತೆ. ಯಾಕೆ ಹೀಗಾಯ್ತು ಅನ್ನೋ ಪ್ರಶ್ನೆ ಬರಬಹುದು ಅಥವಾ ಮುಂಚೆ ಇದ್ದ ಹಾಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನಿಸಬಹುದು. ‘ಯೆಹೋವನ ಸೇವೆ ಮಾಡೋಕೆ ನಾನು ಲಾಯಕ್ಕಿಲ್ಲ’ ಅಂತ ಕೆಲವರು ಅಂದುಕೊಳ್ಳಬಹುದು. (ಜ್ಞಾನೋ. 24:10) ಇಂಥ ಪರಿಸ್ಥಿತಿಯಲ್ಲೂ ಖುಷಿಯಿಂದ ದೇವರ ಸೇವೆ ಮಾಡೋಕೆ ಜೆಕರ್ಯನ ದರ್ಶನಗಳು ನಮಗೆ ಹೇಗೆ ಸಹಾಯ ಮಾಡುತ್ತೆ?
12. ಪರಿಸ್ಥಿತಿ ಬದಲಾದಾಗಲೂ ಖುಷಿಯಿಂದ ಇರೋಕೆ ಜೆಕರ್ಯನ ದರ್ಶನ ಹೇಗೆ ಸಹಾಯ ಮಾಡುತ್ತೆ?
12 ನಮ್ಮ ಪರಿಸ್ಥಿತಿ ಬದಲಾದಾಗ ಯೆಹೋವನ ತರ ಯೋಚನೆ ಮಾಡಿದ್ರೆ ಖುಷಿಯಾಗಿರೋಕೆ ಆಗುತ್ತೆ. ಯೆಹೋವ ದೇವರು ತುಂಬ ಸಾಧನೆ ಮಾಡುತ್ತಾ ಇದ್ದಾನೆ. ನಾವು ಆತನ ಜೊತೆ ಕೆಲಸಗಾರರಾಗಿ ಇರೋದೇ ಒಂದು ಹೆಮ್ಮೆಯ ವಿಷಯ. (1 ಕೊರಿಂ. 3:9) ನಮ್ಮ ನೇಮಕಗಳು ಇವತ್ತು ಇರಬಹುದು, ನಾಳೆ ಹೋಗಬಹುದು. ಆದ್ರೆ ಯೆಹೋವ ನಮ್ಮ ಮೇಲಿಟ್ಟಿರೋ ಪ್ರೀತಿ ಯಾವಾಗಲೂ ಹಾಗೇ ಇರುತ್ತೆ. ಹಾಗಾಗಿ ಪರಿಸ್ಥಿತಿ ಬದಲಾದಾಗ ಯಾಕೆ ಹೀಗೆ ಆಯ್ತು? ಹೀಗೆ ಆಗಬಾರದಿತ್ತು ಅಂತೆಲ್ಲಾ ಯೋಚನೆ ಮಾಡಬೇಡಿ. “ಹಿಂದೆ ನಾವು ತುಂಬ ಚೆನ್ನಾಗಿದ್ವಿ” ಅಂತ ಯೋಚನೆ ಮಾಡೋದನ್ನ ಬಿಟ್ಟು ಈಗಿರೋ ಪರಿಸ್ಥಿತಿಯಲ್ಲೂ ಖುಷಿಯಾಗಿರೋಕೆ ಯೆಹೋವ ಹತ್ರ ಸಹಾಯ ಕೇಳಿ. (ಪ್ರಸಂ. 7:10) ನಿಮ್ಮಿಂದ ಏನು ಆಗಲ್ವೋ ಅದರ ಬಗ್ಗೆ ಯೋಚನೆ ಮಾಡೋದಕ್ಕಿಂತ ಏನು ಆಗುತ್ತೆ ಅನ್ನೋದರ ಬಗ್ಗೆ ಯೋಚನೆ ಮಾಡಿ. ಆಗ ಪರಿಸ್ಥಿತಿ ಬದಲಾದರೂ ಸಂತೋಷವಾಗಿ ಇರೋಕಾಗುತ್ತೆ, ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡೋಕೆ ಆಗುತ್ತೆ. ಇದನ್ನೇ ನಾವು ಜೆಕರ್ಯನ ದರ್ಶನದಿಂದ ಕಲಿತೀವಿ.
ಸಿಕ್ಕಿದ ನಿರ್ದೇಶನಗಳು ಪೂರ್ತಿಯಾಗಿ ಅರ್ಥ ಆಗದೇ ಇದ್ದಾಗ
13. ಆಲಯವನ್ನ ಮತ್ತೆ ಕಟ್ಟುವುದು ಯೆಹೂದ್ಯರಿಗೆ ಯಾಕೆ ಸರಿ ಅನಿಸಲಿಲ್ಲ?
13 ಆಲಯ ಕಟ್ಟೋ ಕೆಲಸಕ್ಕೆ ನಿಷೇಧ ಹಾಕಿದ್ರೂ ಮಹಾ ಪುರೋಹಿತ ಯೇಷೂವ (ಯೆಹೋಶುವ) ಹಾಗೂ ರಾಜ್ಯಪಾಲ ಜೆರುಬ್ಬಾಬೆಲ್ “ದೇವರ ಆಲಯವನ್ನ ಮತ್ತೆ ಕಟ್ಟೋಕೆ ಶುರು ಮಾಡಿದ್ರು.” (ಎಜ್ರ 5:1, 2) ಇದು ಕೆಲವು ಯೆಹೂದ್ಯರಿಗೆ ಸರಿ ಅನಿಸಲಿಲ್ಲ. ಯಾಕಂದ್ರೆ ಯಾರಿಗೂ ಕಾಣದ ಹಾಗೆ ಕಟ್ಟೋಕಾಗಲ್ಲ. ಈ ಆಲಯನ ಕಟ್ಟೋಕೆ ಶುರುಮಾಡಿದ್ರೆ ಅವರ ವಿರೋಧಿಗಳು ಹೇಗಾದ್ರೂ ಮಾಡಿ ಇದನ್ನ ತಡೆಯುತ್ತಿದ್ರು. ಹಾಗಾಗಿ ಯೆಹೋಶುವ ಮತ್ತು ಜೆರುಬ್ಬಾಬೆಲನಿಗೆ ಈ ಕೆಲಸದ ಮೇಲೆ ಯೆಹೋವನ ಆಶೀರ್ವಾದ ಇದೆಯಾ ಅಂತ ತಿಳಿದುಕೊಳ್ಳೋಕೆ ಆಧಾರ ಬೇಕಾಗಿತ್ತು. ಅದು ಅವರಿಗೆ ಸಿಕ್ತು. ಹೇಗೆ?
14. ಜೆಕರ್ಯ 4:12, 14ರಲ್ಲಿ ಹೇಳೋ ಹಾಗೆ ಮಹಾ ಪುರೋಹಿತ ಯೆಹೋಶುವ ಮತ್ತು ರಾಜ್ಯಪಾಲ ಜೆರುಬ್ಬಾಬೆಲನಿಗೆ ಯಾವ ಆಧಾರ ಸಿಕ್ತು?
14 ಜೆಕರ್ಯ 4:12, 14 ಓದಿ. ಈ ದರ್ಶನದಲ್ಲಿರೊ ಎರಡು ಆಲೀವ್ ಮರಗಳು “ಇಬ್ರು ಅಭಿಷಿಕ್ತರನ್ನ” ಅಂದರೆ ಯೆಹೋಶುವ ಮತ್ತು ಜೆರುಬ್ಬಾಬೆಲನನ್ನು ಸೂಚಿಸುತ್ತೆ ಅಂತ ದೇವದೂತ ಜೆಕರ್ಯನಿಗೆ ಹೇಳಿದ. ಅಷ್ಟೇ ಅಲ್ಲ, ಅವರಿಬ್ಬರೂ “ಇಡೀ ಭೂಮಿಯ ಒಡೆಯನ ಅಕ್ಕಪಕ್ಕ” ಅಂದರೆ ಯೆಹೋವನ ಅಕ್ಕಪಕ್ಕದಲ್ಲಿ ನಿಂತಿರೋದನ್ನ ಸೂಚಿಸುತ್ತೆ ಅಂತನೂ ಹೇಳಿದ. ಅದೆಂಥಾ ದೊಡ್ಡ ಸುಯೋಗ ಅಲ್ವಾ? ಆಲಯ ಕಟ್ಟೋ ಕೆಲಸನ ಮುಂದೆ ನಿಂತು ಮಾಡೋಕೆ ಯೆಹೋಶುವ ಮತ್ತು ಜೆರುಬ್ಬಾಬೆಲನನ್ನು ಯೆಹೋವ ನೇಮಿಸಿದ್ದನು. ಅವರ ಮೇಲೆ ಯೆಹೋವನಿಗೆ ತುಂಬ ನಂಬಿಕೆ ಇತ್ತು. ಹಾಗಾಗಿ ಯೆಹೂದ್ಯರೂ ಅವರ ಮೇಲೆ ನಂಬಿಕೆ ಇಡಬೇಕಿತ್ತು. ಅವರಿಬ್ಬರು ಯಾವ ನಿರ್ದೇಶನ ಕೊಟ್ಟರೂ ಅದನ್ನ ಪಾಲಿಸಬೇಕಿತ್ತು.
15. ಬೈಬಲಲ್ಲಿರೋ ನಿರ್ದೇಶನಗಳನ್ನ ಪಾಲಿಸ್ತೀವಿ ಅಂತ ಹೇಗೆ ತೋರಿಸಿಕೊಡಬಹುದು?
15 ಯೆಹೋವ ತನ್ನ ವಾಕ್ಯವಾದ ಬೈಬಲಿನಿಂದ ನಮಗೆ ನಿರ್ದೇಶನಗಳನ್ನ ಕೊಡುತ್ತಿದ್ದಾನೆ. ಈ ಪವಿತ್ರ ಗ್ರಂಥದಲ್ಲಿ ತನ್ನನ್ನ ಹೇಗೆ ಆರಾಧನೆ ಮಾಡಬೇಕು ಅಂತ ಹೇಳಿದ್ದಾನೆ. ನಾವು ಬೈಬಲಲ್ಲಿರೋ ನಿರ್ದೇಶನವನ್ನ ಪಾಲಿಸ್ತೀವಿ ಅಂತ ಹೇಗೆ ತೋರಿಸಿಕೊಡೋದು? ಬೈಬಲನ್ನ ಓದಿ ಅದನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ನಾವು ಸಮಯ ಕೊಡಬೇಕು. ಹಾಗಾಗಿ “ನಾನು ಬೈಬಲ್ ಮತ್ತು ಪತ್ರಿಕೆಗಳನ್ನ ಓದುವಾಗ ನಿಲ್ಲಿಸಿ ಅದರ ಬಗ್ಗೆ ಯೋಚನೆ ಮಾಡ್ತೀನಾ? ಓದುವಾಗ ಬರೀ ಮೇಲೆಮೇಲೆ ಓದಿಕೊಂಡು ಹೋಗುತ್ತೀನಾ ಅಥವಾ ‘ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗಿರೋ’ ವಿಷಯಗಳನ್ನ ಸಂಶೋಧನೆ ಮಾಡಿ ತಿಳಿದುಕೊಳ್ಳುತ್ತೀನಾ?” ಅಂತ ನಮ್ಮನ್ನೇ ಕೇಳಿಕೊಳ್ಳಬೇಕು. (2 ಪೇತ್ರ 3:16) ಯೆಹೋವ ಕಲಿಸಿಕೊಡುವಾಗ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿದ್ರೆ ಆತನು ಕೊಡೋ ನಿರ್ದೇಶನಗಳನ್ನ ಪಾಲಿಸೋಕೆ ಆಗುತ್ತೆ ಮತ್ತು ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಆಗುತ್ತೆ.—1 ತಿಮೊ. 4:15, 16.
16. “ನಂಬಿಗಸ್ತ, ವಿವೇಕಿ ಆದ ಆಳು” ಕೊಡೋ ನಿರ್ದೇಶನ ಸರಿ ಅನಿಸಲಿಲ್ಲ ಅಂದರೂ ನಾವು ಅದನ್ನ ಯಾಕೆ ಪಾಲಿಸಬೇಕು?
16 ಇವತ್ತು ಯೆಹೋವ ದೇವರು ‘ನಂಬಿಗಸ್ತ ಮತ್ತು ವಿವೇಕಿ ಆದ ಆಳಿನ’ ಮೂಲಕನೂ ನಮಗೆ ನಿರ್ದೇಶನಗಳನ್ನ ಕೊಡುತ್ತಿದ್ದಾನೆ. (ಮತ್ತಾ. 24:45) ಕೆಲವೊಮ್ಮೆ ಈ ಆಳು ಕೊಡೋ ನಿರ್ದೇಶನ ನಮಗೆ ಪೂರ್ತಿಯಾಗಿ ಅರ್ಥ ಆಗದೇ ಹೋಗಬಹುದು. ಉದಾಹರಣೆಗೆ, ನೈಸರ್ಗಿಕ ವಿಪತ್ತುಗಳಾದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ಕೆಲವು ನಿರ್ದೇಶನಗಳನ್ನ ಕೊಡಬಹುದು. ಆದ್ರೆ ‘ಇವೆಲ್ಲಾ ನಾವಿರೋ ಕಡೆ ನಡಿಯಲ್ಲ, ಹಾಗಾಗಿ ಈ ನಿರ್ದೇಶನ ನಮಗೆ ಅವಶ್ಯಕತೆ ಇಲ್ಲ’ ಅಂತ ನಾವು ಅಂದುಕೊಳ್ಳಬಹುದು. ಈ ಕೊರೋನ ಸಮಯದಲ್ಲಿ ನಮಗೆ ಸಿಗೋ ನಿರ್ದೇಶನಗಳನ್ನ ನೋಡುವಾಗ ಅವರು ಅತಿಯಾಗಿ ತಲೆಕೆಡಿಸಿಕೊಂಡಿದ್ದಾರೆ ಅಂತ ನಮಗೆ ಅನಿಸಬಹುದು. ಇನ್ನೂ ಕೆಲವೊಮ್ಮೆ ಇವೆಲ್ಲಾ ನಮಗೆ ವಿಚಿತ್ರ ಅಂತ ಅನಿಸಬಹುದು. ಆದ್ರೆ ಹೀಗೆ ಅನಿಸುವಾಗ ಯೆಹೋಶುವ ಮತ್ತು ಜೆರುಬ್ಬಾಬೆಲ್ ಕೊಟ್ಟ ನಿರ್ದೇಶನದಿಂದ ಯೆಹೂದ್ಯರಿಗೆ ಎಷ್ಟು ಒಳ್ಳೇದಾಯ್ತು ಅನ್ನೋದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ಅಷ್ಟೇ ಅಲ್ಲ, ಇದೇ ತರ ಬೈಬಲಲ್ಲಿ ಇರೋ ಬೇರೆಬೇರೆ ಘಟನೆಗಳ ಬಗ್ಗೆನೂ ಯೋಚನೆ ಮಾಡಿ. ಆ ಕಾಲದಲ್ಲಿದ್ದ ದೇವಜನರಿಗೂ ಕೆಲವೊಮ್ಮೆ ಯೆಹೋವ ಕೊಟ್ಟ ನಿರ್ದೇಶನಗಳು ಸರಿ ಅನಿಸಲಿಲ್ಲ. ಆದ್ರೂ ಅದನ್ನ ಪಾಲಿಸಿದ್ರಿಂದ ಅವರ ಜೀವ ಕಾಪಾಡಿಕೊಂಡರು.—ನ್ಯಾಯ. 7:7; 8:10.
ಜೆಕರ್ಯ ನೋಡಿದ್ದನ್ನ ನೀವೂ ನೋಡಿ
17. ಜೆಕರ್ಯನ 5ನೇ ದರ್ಶನದಿಂದ ಯೆಹೂದ್ಯರಿಗೆ ಯಾವ ಸಹಾಯ ಆಯ್ತು?
17 ಜೆಕರ್ಯ ನೋಡಿದ 5ನೇ ದರ್ಶನ ಚಿಕ್ಕದಾಗಿದ್ದರೂ ಅದು ಯೆಹೂದ್ಯರಿಗೆ ಆಲಯ ಕಟ್ಟೋಕೆ ಮತ್ತು ಯೆಹೋವನ ಆರಾಧನೆ ಮಾಡೋಕೆ ಬೇಕಾದ ಧೈರ್ಯ ಮತ್ತು ಹುರುಪನ್ನು ಕೊಡ್ತು. ಯೆಹೋವ ಅವರ ಕೆಲಸಗಳನ್ನ ಆಶೀರ್ವದಿಸಿದನು ಮತ್ತು ಅವರಿಗೆ ಬೇಕಾದ ಸಹಾಯನೂ ಮಾಡಿದನು. ಯೆಹೋವನ ಪವಿತ್ರಶಕ್ತಿಯ ಸಹಾಯದಿಂದ ಅವರು ಆಲಯದ ಕೆಲಸವನ್ನು ಮಾಡಿ ಮುಗಿಸಿದರು ಮತ್ತು ಇದರಿಂದ ಅವರಿಗೆ ಖುಷಿ ಸಿಕ್ಕಿತು.—ಎಜ್ರ 6:16.
18. ಜೆಕರ್ಯನ ದರ್ಶನ ನಿಮಗೆ ಹೇಗೆ ಸಹಾಯ ಮಾಡುತ್ತೆ?
18 ಜೆಕರ್ಯ ನೋಡಿದ ದೀಪಸ್ತಂಭದ ಮತ್ತು ಆಲೀವ್ ಮರಗಳ ದರ್ಶನದಿಂದ ನಿಮಗೂ ತುಂಬ ಸಹಾಯ ಆಗುತ್ತೆ. ನಾವೀಗಾಗಲೇ ಕಲಿತ ಹಾಗೆ ನಿಮಗೆ ಎಷ್ಟೇ ವಿರೋಧ ಬಂದರೂ ಅದನ್ನ ಎದುರಿಸೋಕೆ ಬೇಕಾದ ಶಕ್ತಿ ಸಿಗುತ್ತೆ. ನಿಮ್ಮ ಜೀವನದಲ್ಲಿ ಎಂಥ ದೊಡ್ಡ ಬದಲಾವಣೆಗಳಾದರೂ ಖುಷಿಯಾಗಿರೋಕೆ ಆಗುತ್ತೆ ಮತ್ತು ನಿರ್ದೇಶನಗಳು ಸಿಕ್ಕಾಗ ಅದು ನಿಮಗೆ ಪೂರ್ತಿಯಾಗಿ ಅರ್ಥ ಆಗಲಿಲ್ಲ ಅಂದರೂ ಯೆಹೋವನ ಮೇಲೆ ನಂಬಿಕೆ ಇಡೋಕೆ ಸಹಾಯ ಆಗುತ್ತೆ. ಜೀವನದಲ್ಲಿ ಕಷ್ಟ ಬಂದಾಗ ನೀವೇನು ಮಾಡಬೇಕು? ಜೆಕರ್ಯ ನೋಡಿದ್ದನ್ನೇ ನೀವೂ ನೋಡಿ. ಯೆಹೋವ ನಿಮ್ಮ ಕೈಬಿಡಲ್ಲ, ನಿಮ್ಮ ಕಾಳಜಿ ವಹಿಸುತ್ತಾನೆ ಅನ್ನೋದನ್ನ ನೆನಪಿಸಿಕೊಳ್ಳಿ. ಯೆಹೋವನನ್ನ ಪೂರ್ತಿಯಾಗಿ ನಂಬಿ. ಆತನ ಸೇವೆಯನ್ನ ಮನಸಾರೆ ಮಾಡುತ್ತಾ ಇರಿ. (ಮತ್ತಾ. 22:37) ಆಗ ಯಾವಾಗಲೂ ಆತನ ಸೇವೆಯನ್ನ ಖುಷಿಯಿಂದ ಮಾಡೋಕೆ ನಿಮಗೆ ಸಹಾಯ ಮಾಡುತ್ತಾನೆ.—ಕೊಲೊ. 1:10, 11.
ಗೀತೆ 23 ಯೆಹೋವನು ನಮ್ಮ ಬಲ
^ ಯೆಹೋವನು ಪ್ರವಾದಿ ಜೆಕರ್ಯನಿಗೆ ರೋಮಾಂಚಕ ದರ್ಶನಗಳನ್ನ ತೋರಿಸಿದನು. ಈ ದರ್ಶನಗಳು ಅವನಿಗೂ ಮತ್ತು ಅವನ ಜೊತೆ ಇದ್ದ ಜನರಿಗೂ ಧೈರ್ಯ ತುಂಬಿತು. ಎಷ್ಟೇ ಹಿಂಸೆ ವಿರೋಧ ಇದ್ರೂ ಯೆಹೋವನ ಶುದ್ಧಾರಾಧನೆಯನ್ನು ಪುನಃ ಶುರುಮಾಡೋಕೆ ಸಹಾಯ ಮಾಡ್ತು. ನಮಗೂ ಇವತ್ತು ಎಷ್ಟೇ ಕಷ್ಟ ಬಂದ್ರೂ ಯೆಹೋವನ ಸೇವೆನ ಬಿಡದೆ ಇರೋಕೆ ಈ ದರ್ಶನಗಳು ಸಹಾಯ ಮಾಡುತ್ತೆ. ಹಾಗಾಗಿ ಈ ಲೇಖನದಲ್ಲಿ ಜೆಕರ್ಯ ದರ್ಶನದಲ್ಲಿ ನೋಡಿದ ದೀಪಸ್ತಂಭ ಮತ್ತು ಆಲೀವ್ ಮರಗಳಿಂದ ಕೆಲವು ಮುಖ್ಯವಾದ ಪಾಠಗಳನ್ನ ಕಲಿಯೋಣ.
^ ಕೆಲವು ವರ್ಷಗಳಾದ ಮೇಲೆ ರಾಜ್ಯಪಾಲ ನೆಹೆಮೀಯನ ಕಾಲದಲ್ಲಿ ಅರ್ತಷಸ್ತ ಅನ್ನೋ ಇನ್ನೊಬ್ಬ ರಾಜ ಬಂದ. ಅವನು ಯೆಹೂದ್ಯರಿಗೆ ಸಹಾಯ ಮಾಡಿದ.