ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 10

ನಿಮ್ಮಿಂದ ‘ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋಕೆ’ ಆಗುತ್ತೆ

ನಿಮ್ಮಿಂದ ‘ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋಕೆ’ ಆಗುತ್ತೆ

“ಹಳೇ ವ್ಯಕ್ತಿತ್ವವನ್ನ ಬಟ್ಟೆ ತರ ತೆಗೆದುಹಾಕಿ.”ಕೊಲೊ. 3:9.

ಗೀತೆ 34 ನಮ್ಮ ಹೆಸರಿನ ಪ್ರಕಾರ ಜೀವಿಸುವುದು

ಕಿರುನೋಟ *

1. ಬೈಬಲ್‌ ಕಲಿಯೋಕೂ ಮುಂಚೆ ನಿಮ್ಮ ಜೀವನ ಹೇಗಿತ್ತು?

 ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೂ ಮುಂಚೆ ನಿಮ್ಮ ಜೀವನ ಹೇಗಿತ್ತು? ನಮ್ಮಲ್ಲಿ ಕೆಲವರಿಗೆ ಅದನ್ನ ನೆನಸಿಕೊಂಡರೆನೇ ತುಂಬ ಭಯ ಆಗುತ್ತೆ ಅಲ್ವಾ? ಯಾಕಂದ್ರೆ ಲೋಕದಲ್ಲಿ ಜನ ಯಾವುದನ್ನ ಸರಿ, ಯಾವುದನ್ನ ತಪ್ಪು ಅಂತಾರೋ ಅದನ್ನೇ ನಾವೂ ನಂಬುತ್ತಿದ್ವಿ. ಒಂದರ್ಥದಲ್ಲಿ ನಮಗೆ “ನಿರೀಕ್ಷೆ ಇರಲಿಲ್ಲ, ದೇವರು ಯಾರಂತ ಗೊತ್ತೂ ಇರಲಿಲ್ಲ.” (ಎಫೆ. 2:12) ಆದ್ರೆ ಬೈಬಲ್‌ ನಮ್ಮ ಜೀವನವನ್ನೇ ಬದಲಾಯಿಸಿಬಿಡ್ತು!

2. ಬೈಬಲ್‌ ಸ್ಟಡಿಯಿಂದ ನೀವು ಯಾವೆಲ್ಲಾ ವಿಷಯ ಕಲಿತುಕೊಂಡ್ರಿ?

2 ನೀವು ಬೈಬಲ್‌ ಸ್ಟಡಿ ತೆಗೆದುಕೊಳ್ಳೋಕೆ ಶುರು ಮಾಡಿದ ಮೇಲೆ ನಿಮ್ಮನ್ನ ಪ್ರೀತಿಸೋ ಒಬ್ಬ ದೇವರಿದ್ದಾನೆ ಅಂತ ನಿಮಗೆ ಗೊತ್ತಾಯ್ತು. ಯೆಹೋವ ದೇವರನ್ನ ಮೆಚ್ಚಿಸೋಕೆ, ಆತನ ಕುಟುಂಬದಲ್ಲಿ ನೀವೂ ಒಬ್ಬರಾಗೋಕೆ ನಿಮ್ಮ ಜೀವನದಲ್ಲಿ, ನಿಮ್ಮ ಯೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅಂತ ಕಲಿತ್ರಿ. ಯೆಹೋವ ದೇವರಿಗೆ ಏನು ಇಷ್ಟನೋ ಅದನ್ನ ಮಾಡಬೇಕು, ಇಷ್ಟ ಇಲ್ಲದೆ ಇರೋದನ್ನ ಮಾಡಬಾರದು ಅಂತ ಕಲಿತ್ರಿ.—ಎಫೆ. 5:3-5.

3. (ಎ) ಕೊಲೊಸ್ಸೆ 3:9, 10ರ ಪ್ರಕಾರ ನಾವು ಏನು ಮಾಡಬೇಕು ಅಂತ ಯೆಹೋವ ಇಷ್ಟ ಪಡುತ್ತಾನೆ? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

3 ತನ್ನ ಕುಟುಂಬದವರು ಹೇಗೆ ನಡಕೊಳ್ಳಬೇಕು ಅಂತ ಹೇಳೋ ಹಕ್ಕು ನಮ್ಮ ಸೃಷ್ಟಿಕರ್ತನಾದ ಯೆಹೋವ ಅಪ್ಪಾಗೆ ಇದೆ. ದೀಕ್ಷಾಸ್ನಾನ ಪಡಕೊಳ್ಳೋಕೆ ಮುಂಚೆ “ಹಳೇ ವ್ಯಕ್ತಿತ್ವವನ್ನ ಬಟ್ಟೆ ತರ ತೆಗೆದುಹಾಕಿ, ಹಿಂದೆ ಮಾಡ್ತಿದ್ದ ವಿಷ್ಯಗಳನ್ನ ಬಿಟ್ಟುಬಿಡಿ” ಅಂತ ಹೇಳಿದ್ದಾನೆ. * (ಕೊಲೊಸ್ಸೆ 3:9, 10 ಓದಿ.) ಹಾಗಾಗಿ “ಹಳೇ ವ್ಯಕ್ತಿತ್ವ” ಅಂದ್ರೆ ಏನು? ಯೆಹೋವ ದೇವರು ಯಾಕೆ ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋಕೆ ಹೇಳುತ್ತಿದ್ದಾನೆ? ಇದನ್ನ ತೆಗೆದುಹಾಕೋದು ಹೇಗೆ? ಅಂತ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಈಗಾಗಲೇ ದೀಕ್ಷಾಸ್ನಾನ ಪಡೆದುಕೊಂಡವರು ಈ ಹಳೇ ವ್ಯಕ್ತಿತ್ವ ಅಥವಾ ಅದರ ಗುಣಗಳು ಬರದೇ ಇರೋ ತರ ಹೇಗೆ ಕಾಪಾಡಿಕೊಳ್ಳಬಹುದು ಅಂತಾನೂ ನೋಡೋಣ.

‘ಹಳೇ ವ್ಯಕ್ತಿತ್ವ’ ಅಂದ್ರೆ ಏನು?

4. “ಹಳೇ ವ್ಯಕ್ತಿತ್ವವನ್ನ” ತೆಗೆಯದೇ ಇರೋ ವ್ಯಕ್ತಿ ಹೇಗೆ ನಡೆದುಕೊಳ್ತಾನೆ?

4 “ಹಳೇ ವ್ಯಕ್ತಿತ್ವವನ್ನ” ತೆಗೆಯದೇ ಇರೋ ವ್ಯಕ್ತಿಯ ಯೋಚನೆ, ನಡಕೊಳ್ಳೋ ರೀತಿ ಎಲ್ಲಾ ತಪ್ಪಾಗಿರುತ್ತೆ. ಅವನು ಕೋಪ ಮಾಡಿಕೊಳ್ಳೋನು, ಸ್ವಾರ್ಥಿ, ಅಹಂಕಾರಿ ಆಗಿರಬಹುದು, ಬೇರೆಯವರು ಮಾಡಿದ ಉಪಕಾರವನ್ನು ಮರೆತುಬಿಡೋ ವ್ಯಕ್ತಿಯಾಗಿರಬಹುದು. ಅವನು ಅಶ್ಲೀಲ ಚಿತ್ರಗಳನ್ನ, ಅನೈತಿಕ ವಿಷಯಗಳನ್ನ ಅಥವಾ ಜನರಿಗೆ ಹಿಂಸೆ ಕೊಡೋ ಚಲನಚಿತ್ರಗಳನ್ನ ನೋಡುತ್ತಿರಬಹುದು. ಆದ್ರೂ ಅವನಲ್ಲಿ ಕೆಲವು ಒಳ್ಳೇ ಗುಣಗಳು ಇರುತ್ತೆ. ಹಾಗಾಗಿ ಅವನನ್ನ ಕೆಟ್ಟವನು ಅಂತ ಹೇಳೋಕೆ ಆಗಲ್ಲ. ಯಾಕಂದ್ರೆ ಅವನು ಮಾಡುತ್ತಿರೋದು ತಪ್ಪು ಅಂತ ಅವನ ಮನಸ್ಸು ಚುಚ್ಚುತ್ತಿರುತ್ತೆ. ಆದ್ರೆ ಇದನ್ನೆಲ್ಲ ಬದಲಾಯಿಸಿಕೊಳ್ಳೋಕೆ ಅವನಿಂದ ಆಗುತ್ತಿರಲ್ಲ.—ಗಲಾ. 5:19-21; 2 ತಿಮೊ. 3:2-5.

ನಾವು “ಹಳೇ ವ್ಯಕ್ತಿತ್ವವನ್ನ” ತೆಗೆದು ಹಾಕುವಾಗ ಕೆಟ್ಟ ಆಸೆಗಳನ್ನ ಮತ್ತು ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಡುತ್ತೀವಿ (ಪ್ಯಾರ 5 ನೋಡಿ) *

5. ಹಳೇ ವ್ಯಕ್ತಿತ್ವವನ್ನ ನಾವು ಪೂರ್ತಿಯಾಗಿ ತೆಗೆದುಹಾಕೋಕೆ ಆಗುತ್ತಾ? ವಿವರಿಸಿ. (ಅಪೊಸ್ತಲರ ಕಾರ್ಯ 3:19)

5 ನಾವು ಅಪರಿಪೂರ್ಣರಾಗಿರೋದ್ರಿಂದ ತಪ್ಪು ಮಾಡಿಬಿಡ್ತೀವಿ. ಕೆಟ್ಟ ಆಸೆಗಳು ಬರೋದೇ ಇಲ್ಲ ಅಂತ ಹೇಳೋಕೆ ಆಗಲ್ಲ. ಇನ್ನೂ ಕೆಲವು ಸಲ ನಾವು ತಪ್ಪು ಮಾಡಿದ ಮೇಲೆ ‘ನಾನು ಹಾಗೆ ಮಾತಾಡಬಾರದಿತ್ತು, ಹಾಗೆ ನಡಕೊಳ್ಳಬಾರದಿತ್ತು’ ಅಂತ ಅಂದುಕೊಳ್ತೀವಿ. (ಯೆರೆ. 17:9; ಯಾಕೋ. 3:2) ಆದ್ರೂ ಹಳೇ ವ್ಯಕ್ತಿತ್ವವನ್ನ ನಾವು ಪೂರ್ತಿಯಾಗಿ ತೆಗೆದುಹಾಕೋಕೆ ಆಗುತ್ತೆ. ಅದನ್ನ ತೆಗೆದುಹಾಕಿದರೆ ಕೆಟ್ಟ ಆಸೆಗಳಿಗೆ ಬಲಿಬಿದ್ದು ಮತ್ತೆ ಆ ತಪ್ಪನ್ನ ಮಾಡಲ್ಲ, ಪೂರ್ತಿ ಬದಲಾಗ್ತೀವಿ.—ಯೆಶಾ. 55:7; ಅಪೊಸ್ತಲರ ಕಾರ್ಯ 3:19 ಓದಿ.

6. ಕೆಟ್ಟ ಅಭ್ಯಾಸಗಳನ್ನ, ಕೆಟ್ಟ ಯೋಚನೆಗಳನ್ನ ಬಿಟ್ಟುಬಿಡಿ ಅಂತ ಯೆಹೋವ ಯಾಕೆ ಹೇಳಿದ್ದಾನೆ?

6 ಯೆಹೋವ ದೇವರಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ. ನಾವು ಚೆನ್ನಾಗಿರಬೇಕು ಅಂತ ಆತನು ಆಸೆಪಡುತ್ತಾನೆ. ಅದಕ್ಕೆ ಕೆಟ್ಟ ಅಭ್ಯಾಸಗಳನ್ನ, ಕೆಟ್ಟ ಯೋಚನೆಗಳನ್ನ ಬಿಟ್ಟುಬಿಡಿ ಅಂತ ಹೇಳಿದ್ದಾನೆ. (ಯೆಶಾ. 48:17, 18) ಕೆಟ್ಟ ಅಭ್ಯಾಸಗಳನ್ನ ಬಿಟ್ಟಿಲ್ಲ ಅಂದ್ರೆ ನಮಗಷ್ಟೇ ಅಲ್ಲ, ನಮ್ಮಿಂದ ಬೇರೆಯವರಿಗೂ ನೋವಾಗುತ್ತೆ. ಇದನ್ನ ನೋಡಿದಾಗ ಯೆಹೋವ ದೇವರಿಗೂ ತುಂಬ ನೋವಾಗುತ್ತೆ.

7. ರೋಮನ್ನರಿಗೆ 12:1, 2ರಲ್ಲಿ ಹೇಳೋ ಹಾಗೆ ನಮಗೆ ಯಾವ ಆಯ್ಕೆ ಇದೆ?

7 ನಾವು ಜೀವನದಲ್ಲಿ ಬದಲಾವಣೆ ಮಾಡೋದನ್ನ ನೋಡುವಾಗ ನಮ್ಮ ಸ್ನೇಹಿತರು, ಸಂಬಂಧಿಕರು ನಮ್ಮನ್ನ ನೋಡಿ ಆಡಿಕೊಂಡು ನಗಬಹುದು. (1 ಪೇತ್ರ 4:3, 4) “ನೀನು ನಿನ್ನಿಷ್ಟ ಬಂದ ಹಾಗೆ ಇರು, ಬೇರೆಯವರ ಮಾತೆಲ್ಲಾ ಯಾಕೆ ಕೇಳ್ತೀಯಾ?” ಅಂತ ನಮಗೆ ಹೇಳಬಹುದು. ಆದ್ರೆ ನಿಜ ಏನಂದ್ರೆ ನಾವು ಯೆಹೋವನ ಮಾತು ಕೇಳದೇ ಇವರ ಮಾತನ್ನ ಕೇಳಿದ್ರೆ ನಾವೂ ಅವರ ತರಾನೇ ಸೈತಾನನ ಕೈಗೊಂಬೆಗಳಾಗಿ ಬಿಡುತ್ತೀವಿ. (ರೋಮನ್ನರಿಗೆ 12:1, 2 ಓದಿ.) ಹಾಗಾಗಿ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು, ಹಳೇ ವ್ಯಕ್ತಿತ್ವವನ್ನ ಹಾಕೊಂಡು ಸೈತಾನನಿಗೆ ಇಷ್ಟ ಆಗೋ ತರ ಇರೋದು. ಇನ್ನೊಂದು, ನಮ್ಮನ್ನ ಒಳ್ಳೇ ವ್ಯಕ್ತಿಗಳಾಗಿ ಮಾಡೋಕೆ ಯೆಹೋವನಿಗೆ ಬಿಟ್ಟುಕೊಡೋದು.—ಯೆಶಾ. 64:8.

ಹಳೇ ವ್ಯಕ್ತಿತ್ವವನ್ನ ‘ತೆಗೆದುಹಾಕೋದು’ ಹೇಗೆ?

8. ಕೆಟ್ಟ ಯೋಚನೆ ಮತ್ತು ಕೆಟ್ಟ ಅಭ್ಯಾಸಗಳನ್ನ ತೆಗೆದುಹಾಕೋಕೆ ಯೆಹೋವ ಹೇಗೆ ಸಹಾಯ ಮಾಡುತ್ತಾನೆ?

8 ನಮ್ಮ ಕೆಟ್ಟ ಯೋಚನೆಗಳನ್ನ, ಕೆಟ್ಟ ಅಭ್ಯಾಸಗಳನ್ನ ರಾತ್ರೋರಾತ್ರಿ ಬಿಟ್ಟುಬಿಡೋಕೆ ಆಗಲ್ಲ, ಅದಕ್ಕೆ ತುಂಬ ಸಮಯ ಹಿಡಿಯುತ್ತೆ, ಜಾಸ್ತಿ ಪ್ರಯತ್ನನೂ ಬೇಕಾಗುತ್ತೆ ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. (ಕೀರ್ತ. 103:13, 14) ಅದಕ್ಕೆ ಆತನು ತನ್ನ ವಾಕ್ಯ, ಪವಿತ್ರಶಕ್ತಿ ಮತ್ತು ಸಂಘಟನೆಯಿಂದ ನಮಗೆ ವಿವೇಕ ಮತ್ತು ಬಲವನ್ನು ಕೊಡುತ್ತಾನೆ. ಈಗಾಗಲೇ ಆತನು ನಮಗೆ ಸಹಾಯ ಮಾಡಿದ್ದಾನೆ. ಹಳೇ ವ್ಯಕ್ತಿತ್ವವನ್ನ ಪೂರ್ತಿಯಾಗಿ ತೆಗೆದುಹಾಕಿ ದೀಕ್ಷಾಸ್ನಾನ ಪಡೆಯೋಕೆ ಇನ್ನೂ ಏನೆಲ್ಲಾ ಮಾಡಬಹುದು ಅಂತ ನಾವೀಗ ನೋಡೋಣ.

9. ದೇವರ ವಾಕ್ಯ ನಿಮಗೆ ಹೇಗೆ ಸಹಾಯ ಮಾಡುತ್ತೆ?

9 ಬೈಬಲನ್ನ ಓದಿ ನೀವು ಎಂಥವರು ಅಂತ ತಿಳುಕೊಳ್ಳಿ. ಬೈಬಲ್‌ ಒಂದು ಕನ್ನಡಿ ತರ. ಅದು ನೀವು ಹೇಗೆ ಮಾತಾಡುತ್ತೀರ, ಯೋಚಿಸುತ್ತೀರ, ನಡೆದುಕೊಳ್ತೀರ ಅಂತ ತಿಳುಕೊಳ್ಳೋಕೆ ಸಹಾಯ ಮಾಡುತ್ತೆ. (ಯಾಕೋ. 1:22-25) ನಿಮ್ಮ ಬೈಬಲ್‌ ಟೀಚರ್‌ ಮತ್ತು ಸಭೆಯಲ್ಲಿರೋ ಪ್ರೌಢ ಕ್ರೈಸ್ತರು ಕೂಡ ನಿಮಗೆ ಸಹಾಯ ಮಾಡುತ್ತಾರೆ. ಉದಾಹರಣೆಗೆ ನಿಮ್ಮಲ್ಲಿ ಯಾವೆಲ್ಲಾ ಒಳ್ಳೇ ಗುಣಗಳಿವೆ, ಯಾವೆಲ್ಲಾ ಗುಣಗಳನ್ನ ಬೆಳೆಸಿಕೊಳ್ಳಬೇಕು ಅಂತ ತಿಳಿಸುತ್ತಾರೆ. ನಿಮ್ಮಲ್ಲಿರೋ ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಡೋಕೆ ಏನು ಮಾಡಬೇಕು ಅಂತ ನಮ್ಮ ಪುಸ್ತಕ, ಪ್ರಕಾಶನಗಳಲ್ಲಿದೆ. ಅವನ್ನ ಹುಡುಕೋಕೆ ಅವರು ಸಹಾಯ ಮಾಡುತ್ತಾರೆ. ನೀವು ಇಷ್ಟೆಲ್ಲಾ ಪ್ರಯತ್ನ ಮಾಡುವಾಗ ಯೆಹೋವ ಖಂಡಿತ ನಿಮಗೆ ಸಹಾಯ ಮಾಡುತ್ತಾನೆ. ಯಾಕಂದ್ರೆ ನಿಮ್ಮ ಮನಸ್ಸಲ್ಲಿ ಏನಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತು. (ಜ್ಞಾನೋ. 14:10; 15:11) ಅದಕ್ಕೆ ಪ್ರತಿದಿನ ಪ್ರಾರ್ಥನೆ ಮಾಡೋ, ಬೈಬಲ್‌ ಓದೋ ರೂಢಿಯನ್ನು ಬೆಳೆಸಿಕೊಳ್ಳಿ.

10. ಈಲೀ ಅವರ ಉದಾಹರಣೆಯಿಂದ ನೀವೇನು ಕಲಿತ್ರಿ?

10 ಯೆಹೋವನ ನೀತಿ ನಿಯಮಗಳಿಂದ ಒಳ್ಳೇದಾಗುತ್ತೆ ಅಂತ ನಂಬಿ. ಯೆಹೋವ ಹೇಳೋ ಪ್ರತಿಯೊಂದು ವಿಷಯದಿಂದನೂ ನಮಗೆ ಒಳ್ಳೇದಾಗುತ್ತೆ. ಯಾರು ಆತನ ನೀತಿ-ನಿಯಮಗಳನ್ನ ಪಾಲಿಸ್ತಾರೋ ಅವರ ಜೀವನದಲ್ಲಿ ಸಂತೋಷ, ಜೀವನಕ್ಕೊಂದು ಉದ್ದೇಶ ಮತ್ತು ಸ್ವಗೌರವ ಇರುತ್ತೆ. (ಕೀರ್ತ. 19:7-11) ಆದ್ರೆ ಯಾರು ಆತನ ನೀತಿ-ನಿಯಮವನ್ನ ಪಾಲಿಸುವುದಿಲ್ಲವೋ ಅಂಥವರ ಜೀವನ ಒಂಚೂರು ಚೆನ್ನಾಗಿರಲ್ಲ. ಈಲೀ ಅನ್ನೋ ವ್ಯಕ್ತಿಯ ಉದಾಹರಣೆ ನೋಡಿ. ಚಿಕ್ಕ ವಯಸ್ಸಲ್ಲೇ ಅವರ ಅಪ್ಪ-ಅಮ್ಮ ಅವರಿಗೆ ಸತ್ಯವನ್ನ ಕಲಿಸಿದ್ರು. ಆದ್ರೆ ಬೆಳಿತಾ-ಬೆಳಿತಾ ಅವರು ಕೆಟ್ಟವರ ಜೊತೆ ಸಹವಾಸ ಮಾಡಿದ್ರು. ಇದ್ರಿಂದ ಅವರು ಕಳ್ಳತನ, ಅನೈತಿಕತೆ ಮತ್ತು ಡ್ರಗ್ಸ್‌ ತಗೊಳ್ಳೋಕೆ ಶುರುಮಾಡಿದ್ರು. ಅವರಿಗೆ ಮೂಗಿನ ತುದಿಯಲ್ಲೇ ಕೋಪ ಇರುತ್ತಿತ್ತು, ಎಲ್ಲರ ಜೊತೆ ಜಗಳ ಮಾಡುತ್ತಿದ್ದರು. “ಯಾವದನ್ನು ಕ್ರೈಸ್ತರು ಮಾಡಬಾರದು ಅಂತ ನನಗೆ ಕಲಿಸಲಾಗಿತ್ತೋ ಅದನ್ನೆಲ್ಲ ಮಾಡುತ್ತಿದ್ದೆ.” ಅಂತ ಅವರು ಹೇಳುತ್ತಾರೆ. ಇಷ್ಟೆಲ್ಲಾ ಆದ್ರೂ ಚಿಕ್ಕ ವಯಸ್ಸಲ್ಲಿ ಯೆಹೋವನ ಬಗ್ಗೆ ಕಲಿತದ್ದನ್ನ ಈಲೀ ಮರೆತಿರಲಿಲ್ಲ. ಹಾಗಾಗಿ ಮತ್ತೆ ಬೈಬಲ್‌ ಸ್ಟಡಿ ಶುರುಮಾಡಿದ್ರು. ಕೆಟ್ಟ ಅಭ್ಯಾಸಗಳನ್ನ ಬಿಡೋಕೆ ತುಂಬ ಪ್ರಯತ್ನ ಪಟ್ಟರು. ಕೊನೆಗೆ ಇಸವಿ 2000ದಲ್ಲಿ ದೀಕ್ಷಾಸ್ನಾನ ಪಡಕೊಂಡ್ರು. ಆದ್ರೆ ಯೆಹೋವನ ನೀತಿ-ನಿಯಮನ ಪಾಲಿಸಿದ್ರಿಂದ ಇನ್ನೂ ಏನು ಒಳ್ಳೇದಾಯ್ತು? “ನಾನು ದೇಹವನ್ನು ಕೆಡಿಸಿಕೊಳ್ಳುತ್ತಿಲ್ಲ ಎಂಬ ನೆಮ್ಮದಿ ನನಗಿದೆ. ಮನಸ್ಸಾಕ್ಷಿಯೂ ಕಾಡುತ್ತಿಲ್ಲ” ಅಂತ ಈಲೀ ಹೇಳ್ತಾರೆ. * ಈ ಉದಾಹರಣೆ ತೋರಿಸೋ ತರ ಯಾರು ಯೆಹೋವನ ನಿಯಮಗಳನ್ನ ಪಾಲಿಸುವುದಿಲ್ಲವೋ ಅಂಥವರ ಜೀವನ ಒಂಚೂರು ಚೆನ್ನಾಗಿರಲ್ಲ. ಆದ್ರೆ ಒಂದುವೇಳೆ ಅವರು ಬದಲಾಗೋಕೆ ಇಷ್ಟ ಪಟ್ಟರೆ ಯೆಹೋವ ಅವರಿಗೆ ಖಂಡಿತ ಸಹಾಯ ಮಾಡ್ತಾನೆ.

11. ಯೆಹೋವ ಯಾವ ವಿಷಯಗಳನ್ನ ದ್ವೇಷಿಸ್ತಾನೆ?

11 ಯೆಹೋವ ದ್ವೇಷಿಸೋ ವಿಷಯನ ನೀವೂ ದ್ವೇಷಿಸಿ. (ಕೀರ್ತ. 97:10) “ಅಹಂಕಾರ ತುಂಬಿರೋ ಕಣ್ಣು, ಸುಳ್ಳು ಹೇಳೋ ನಾಲಿಗೆ, ಅಮಾಯಕರ ರಕ್ತ ಸುರಿಸೋ ಕೈ” ಇವುಗಳನ್ನ ಯೆಹೋವ ದ್ವೇಷಿಸ್ತಾನೆ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 6:16, 17) “ಹಿಂಸೆ ಕೊಡೋರು ಮತ್ತು ಮೋಸ ಮಾಡೋರು ಯೆಹೋವನಿಗೆ ಅಸಹ್ಯ.” (ಕೀರ್ತ. 5:6) ಇದನ್ನ ಎಷ್ಟರಮಟ್ಟಿಗೆ ದ್ವೇಷಿಸ್ತಾನೆ ಅಂದ್ರೆ ನೋಹನ ದಿನಗಳಲ್ಲಿ ಜನರು ಈ ತರ ನಡೆದುಕೊಳ್ಳುತ್ತಿದ್ದರಿಂದ ಯೆಹೋವ ಅವರನ್ನ ಪೂರ್ತಿಯಾಗಿ ನಾಶಮಾಡಿಬಿಟ್ಟನು. (ಆದಿ. 6:13) ಯಾರು ಕಟ್ಟಿಕೊಂಡಿರೋ ಹೆಂಡತಿಗೆ ಮೋಸಮಾಡಿ ವಿಚ್ಛೇದನ ಕೊಡುತ್ತಾರೋ ಅಂಥವರನ್ನ ದ್ವೇಷಿಸ್ತೀನಿ, ಅವರ ಆರಾಧನೆಯನ್ನ ಒಪ್ಪಿಕೊಳ್ಳಲ್ಲ, ಅವರಿಗೆ ನ್ಯಾಯ ತೀರಿಸ್ತೀನಿ ಅಂತ ಯೆಹೋವ ಪ್ರವಾದಿ ಮಲಾಕಿಯನಿಂದ ಹೇಳಿಸಿದನು.—ಮಲಾ. 2:13-16; ಇಬ್ರಿ. 13:4.

ಯೆಹೋವ ಯಾವುದನ್ನ ಕೆಟ್ಟದ್ದು ಅಂತ ಹೇಳಿದ್ದಾನೋ ಅದನ್ನ ಮಾಡಿದ್ರೆ ಕೊಳೆತು ಹೋಗಿರೋದನ್ನ ತಿಂದ ಹಾಗೆ (ಪ್ಯಾರ 11-12 ನೋಡಿ)

12. “ಕೆಟ್ಟದನ್ನ ಅಸಹ್ಯವಾಗಿ ನೋಡಿ” ಅನ್ನೋದರ ಅರ್ಥ ಏನು?

12 “ಕೆಟ್ಟದನ್ನ ಅಸಹ್ಯವಾಗಿ ನೋಡಿ” ಅಂತ ಯೆಹೋವ ಹೇಳಿದ್ದಾನೆ. (ರೋಮ. 12:9) “ಅಸಹ್ಯವಾಗಿ ನೋಡಿ” ಅಂದ್ರೆ ಒಂದು ವಿಷಯದ ಹತ್ರನೂ ಹೋಗದೇ ಇರುವಷ್ಟು ಅದನ್ನ ದ್ವೇಷಿಸೋದು ಅಂತ ಅರ್ಥ. ಉದಾಹರಣೆಗೆ ಯಾರಾದ್ರೂ ನಿಮಗೆ ಹಳಸಿ ಹೋಗಿರೋ, ವಾಸನೆ ಬರುತ್ತಿರೋ ಊಟವನ್ನ ತಿನ್ನೋಕೆ ಕೊಟ್ರೆ ಏನು ಮಾಡುತ್ತೀರಾ? ಅದನ್ನ ತಿನ್ನೋದರ ಬಗ್ಗೆ ಯೋಚನೆ ಮಾಡಿದ್ರೆನೇ ನಿಮಗೆ ವಾಕರಿಕೆ ಬರುತ್ತೆ ಅಲ್ವಾ? ಅದೇ ತರ ಯೆಹೋವ ಯಾವುದನ್ನ ತಪ್ಪು ಅಂತ ಹೇಳುತ್ತಾನೋ ಅದನ್ನ ಮಾಡೋದಿರಲಿ, ಅದನ್ನ ಮಾಡೋ ಯೋಚನೆ ಕೂಡ ಅಸಹ್ಯ ಅಂತ ಅನಿಸಬೇಕು.

13. ನಾವು ಯಾಕೆ ಕೆಟ್ಟ ಯೋಚನೆಗಳನ್ನ ಮಾಡಬಾರದು?

13 ಕೆಟ್ಟ ಯೋಚನೆಗಳನ್ನ ಮಾಡಬೇಡಿ. ನಾವು ಹೇಗೆ ಯೋಚಿಸ್ತೀವೋ ಹಾಗೇ ನಡೆದುಕೊಳ್ತೀವಿ. ಅದಕ್ಕೇ ಯೇಸು, ತಪ್ಪಾದ ವಿಷಯಗಳ ಬಗ್ಗೆ ಯೋಚನೆ ಮಾಡ್ತಾ ಇದ್ರೆ ಮುಂದೆ ದೊಡ್ಡ ತಪ್ಪು ಮಾಡಿಬಿಡ್ತೀರ ಅಂತ ಹೇಳಿದನು. (ಮತ್ತಾ. 5:21, 22, 28, 29) ನಾವು ಯಾವಾಗಲೂ ಯೆಹೋವನಿಗೆ ಇಷ್ಟ ಆಗೋ ತರಾನೇ ನಡಕೊಳ್ಳಬೇಕು ಅಂತ ಬಯಸ್ತೀವಿ ಅಲ್ವಾ? ಅದಕ್ಕೇ ಕೆಟ್ಟ ವಿಷಯಗಳು ನಮ್ಮ ಮನಸ್ಸಿಗೆ ಬಂದ ಕೂಡಲೇ ಅದನ್ನ ಕಿತ್ತು ಎಸೆಯಬೇಕು!

14. (ಎ) ನಮ್ಮ ಮಾತು ಏನನ್ನ ತೋರಿಸಿಕೊಡುತ್ತೆ? (ಬಿ) ನಾವು ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?

14 ಮಾತಿನ ಮೇಲೆ ನಿಗಾ ಇಡಿ. “ಬಾಯಿಂದ ಹೊರಗೆ ಬರೋದೆಲ್ಲ ಹೃದಯದಿಂದ ಬರುತ್ತೆ” ಅಂತ ಯೇಸು ಹೇಳಿದನು. (ಮತ್ತಾ. 15:18) ನಾವು ಏನು ಮಾತಾಡುತ್ತೀವೋ ಅದು ನಾವು ಎಂಥ ವ್ಯಕ್ತಿಗಳು ಅನ್ನೋದನ್ನ ತೋರಿಸಿಕೊಡುತ್ತೆ. ಹಾಗಾಗಿ ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ: “ನಂಗೆ ಕಷ್ಟ ಆದ್ರೂ ಸತ್ಯಾನೇ ಹೇಳ್ತೀನಾ? ಮದುವೆ ಆಗಿರೋ ನಾನು ಬೇರೆಯವರ ಜೊತೆ ಪ್ರಣಯದ ಮಾತುಗಳನ್ನ ಆಡುತ್ತೀನಾ? ನಾನು ಅನೈತಿಕ ವಿಷಯಗಳ ಬಗ್ಗೆ ಮಾತಾಡೋದನ್ನ ನಿಲ್ಲಿಸಿದ್ದೀನಾ? ಬೇರೆಯವರು ನಂಗೆ ಕೋಪ ಬರಿಸಿದಾಗಲೂ ನಾನು ಸಮಾಧಾನವಾಗಿ ಮಾತಾಡುತ್ತೀನಾ?” ನೀವು ಆಡೋ ಮಾತು ಶರ್ಟ್‌ನಲ್ಲಿ ಇರೋ ಬಟನ್‌ ತರ. ನೀವು ಕೆಟ್ಟ ಮಾತು, ಸುಳ್ಳು ಹೇಳೋದು ಮತ್ತು ಅನೈತಿಕ ವಿಷ್ಯದ ಬಗ್ಗೆ ಮಾತಾಡೋದನ್ನ ಬಿಟ್ಟಾಗ ಹಳೇ ವ್ಯಕ್ತಿತ್ವ ಅನ್ನೋ ಶರ್ಟ್‌ನಲ್ಲಿ ಇರೋ ಬಟನ್‌ಗಳನ್ನ ಬಿಚ್ಚಿದ ಹಾಗೆ ಆಗುತ್ತೆ. ಹೀಗೆ ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋಕೆ ಸುಲಭ ಆಗುತ್ತೆ.

15. ಹಳೇ ವ್ಯಕ್ತಿತ್ವವನ್ನ ‘ಮರದ ಕಂಬಕ್ಕೆ ಜಡಿಯೋದು’ ಅಂದ್ರೆ ಏನು?

15 ಬದಲಾಗೋಕೆ ದೃಢ ನಿರ್ಧಾರ ಮಾಡಿ. ನಮ್ಮ ಜೀವನವನ್ನು ಬದಲಾಯಿಸಿಕೊಳ್ಳಬೇಕು ಅಂತ ಅರ್ಥಮಾಡಿಕೊಳ್ಳೋಕೆ ಅಪೊಸ್ತಲ ಪೌಲ ಒಂದು ಉದಾಹರಣೆ ಹೇಳಿದ್ದಾನೆ. “ಹಳೇ ವ್ಯಕ್ತಿತ್ವವನ್ನ” ‘ಮರದ ಕಂಬಕ್ಕೆ ಜಡಿರಿ’ ಅಂತ ಅವನು ಬರೆದಿದ್ದಾನೆ. (ರೋಮ. 6:6) ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ಯೇಸು ಮರದ ಕಂಬದ ಮೇಲೆ ಮರಣವನ್ನೂ ಸಹಿಸಿಕೊಂಡ. ನಾವೂ ಅದೇ ತರ ಯೆಹೋವ ದ್ವೇಷಿಸೋ ಕೆಟ್ಟ ಗುಣಗಳನ್ನ, ಅಭ್ಯಾಸಗಳನ್ನ ಕಂಬಕ್ಕೆ ಜಡಿದು ಸಾಯಿಸೋ ಮೂಲಕ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳಬಹುದು. ಹೀಗೆ ಮಾಡಿದ್ರೆ ನಮಗೆ ಶುದ್ಧ ಮನಸ್ಸಾಕ್ಷಿ ಇರುತ್ತೆ, ಯೆಹೋವ ನಮಗೆ ಹೊಸಲೋಕಕ್ಕೆ ಹೋಗೋ ಅವಕಾಶನೂ ಕೊಡ್ತಾನೆ. (ಯೋಹಾ. 17:3; 1 ಪೇತ್ರ 3:21) ಯೆಹೋವ ನಮಗೋಸ್ಕರ ತನ್ನ ನೀತಿ-ನಿಯಮನ ಬದಲಾಯಿಸಲ್ಲ. ಆದ್ರೆ ನಾವು ಆತನ ನೀತಿ-ನಿಯಮಗಳಿಗೆ ತಕ್ಕ ಹಾಗೆ ಬದಲಾಗಬೇಕು ಅನ್ನೋದನ್ನ ಮನಸ್ಸಲ್ಲಿಡಿ.—ಯೆಶಾ. 1:16-18; 55:9.

16. ನಾವು ಯಾಕೆ ತಪ್ಪಾದ ಆಸೆಗಳನ್ನ ಬಿಟ್ಟುಬಿಡೋಕೆ ಪ್ರಯತ್ನ ಮಾಡ್ತಾ ಇರಬೇಕು?

16 ತಪ್ಪಾದ ಆಸೆಗಳನ್ನ ಬಿಟ್ಟುಬಿಡೋಕೆ ಪ್ರಯತ್ನ ಮಾಡ್ತಾ ಇರಿ. ದೀಕ್ಷಾಸ್ನಾನ ಆದ ಮೇಲೂ ತಪ್ಪಾದ ಆಸೆ ಬರದೇ ಇರೋ ತರ ನೋಡಿಕೊಳ್ಳಬೇಕು. ಮೌರಿಶಿಯೊ ಅನ್ನೋ ಯುವಕನ ಉದಾಹರಣೆ ನೋಡಿ. ಅವನು ಸತ್ಯ ಕಲಿಯೋಕೂ ಮುಂಚೆ ಸಲಿಂಗಕಾಮಿ ಆಗಿದ್ದ. ಆಮೇಲೆ ಯೆಹೋವನ ಸಾಕ್ಷಿಗಳು ಅವನನ್ನ ಭೇಟಿ ಆದಾಗ ಬೈಬಲ್‌ ಸ್ಟಡಿ ಶುರುಮಾಡಿದ್ರು. ಜೀವನದಲ್ಲಿ ಬೇಕಾದ ಬದಲಾವಣೆ ಮಾಡಿಕೊಂಡ ಮೇಲೆ 2002ರಲ್ಲಿ ದೀಕ್ಷಾಸ್ನಾನ ತಗೊಂಡ. ತುಂಬಾ ವರ್ಷಗಳಿಂದ ಮೌರಿಶಿಯೊ ಯೆಹೋವನ ಸೇವೆ ಮಾಡ್ತಿದ್ರೂ ‘ಈಗಲೂ ನನಗೆ ಕೆಲವೊಮ್ಮೆ ತಪ್ಪಾದ ಆಸೆ ಬರುತ್ತೆ. ಆದ್ರೆ ನಾನು ಅದಕ್ಕೆ ಬಲಿಬಿದ್ದಿಲ್ಲ. ಇದನ್ನ ನೋಡುವಾಗ ಯೆಹೋವ ದೇವರಿಗೆ ಖಂಡಿತ ಖುಷಿಯಾಗುತ್ತೆ ಅನ್ನೋ ಗ್ಯಾರಂಟಿ ನನಗಿದೆ’ ಅಂತ ಹೇಳ್ತಾನೆ. *

17. ನಬಿಹಾ ಅವರ ಉದಾಹರಣೆಯಿಂದ ನೀವೇನು ಕಲಿತ್ರಿ?

17 ನಿಮ್ಮ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇಡೋ ಬದಲು ಪವಿತ್ರಶಕ್ತಿ ಕೊಡಿ ಅಂತ ಯೆಹೋವನನ್ನು ಬೇಡಿಕೊಳ್ಳಿ. (ಗಲಾ. 5:22; ಫಿಲಿ. 4:6) ನಾವು ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋದರ ಜೊತೆಗೆ ಅದು ಮತ್ತೆ ಬರದೇ ಇರೋ ಹಾಗೆ ನೋಡಿಕೊಳ್ಳಬೇಕು. ನಬಿಹಾ ಅವರ ಉದಾಹರಣೆ ನೋಡಿ. ಅವರಿಗೆ 6 ವರ್ಷ ಇದ್ದಾಗ ಅವರ ಅಪ್ಪ ಮನೆಬಿಟ್ಟು ಹೋದ್ರು. “ಇದ್ರಿಂದ ನಂಗೆ ತುಂಬಾ ದುಃಖ ಆಯ್ತು” ಅಂತ ಅವರು ಹೇಳ್ತಾರೆ. ಅವರು ದೊಡ್ಡವರಾಗ್ತಾ ಹೋದ ಹಾಗೆ ಚಿಕ್ಕ-ಚಿಕ್ಕ ವಿಷಯಕ್ಕೂ ಕೋಪ ಮಾಡಿಕೊಂಡು ಎಲ್ಲರ ಹತ್ರ ಜಗಳ ಆಡೋ ವ್ಯಕ್ತಿಯಾದ್ರು. ಅಷ್ಟೇ ಅಲ್ಲ, ಅವರು ಡ್ರಗ್ಸ್‌ ಮಾರಾಟ ಮಾಡೋಕೂ ಶುರುಮಾಡಿದ್ರು. ಇದ್ರಿಂದ ಅವರು ಜೈಲಿಗೆ ಹೋಗಬೇಕಾಯ್ತು. ಅವರು ಅಲ್ಲಿದ್ದಾಗ ಯೆಹೋವನ ಸಾಕ್ಷಿಗಳು ಅವರ ಜೊತೆ ಬೈಬಲ್‌ ಸ್ಟಡಿ ಶುರುಮಾಡಿದ್ರು. ನಬಿಹಾ ತುಂಬ ಬದಲಾವಣೆಗಳನ್ನ ಮಾಡಿಕೊಂಡ್ರು. “ನಾನು ಕೆಲವು ಅಭ್ಯಾಸಗಳನ್ನ ತುಂಬ ಸುಲಭವಾಗಿ ಬಿಟ್ಟುಬಿಟ್ಟೆ. ಆದ್ರೆ ಸಿಗರೇಟ್‌ ಸೇದೋದನ್ನ ಅಷ್ಟು ಸುಲಭವಾಗಿ ಬಿಡೋಕೆ ಆಗಲಿಲ್ಲ” ಅಂತ ಅವರು ಹೇಳ್ತಾರೆ. ಆ ಚಟವನ್ನ ಬಿಡೋಕೆ ತುಂಬ ವರ್ಷಗಳು ಕಷ್ಟ ಪಟ್ಟರು. ಅದನ್ನ ಬಿಡೋಕೆ ಅವರಿಗೆ ಯಾವುದು ಸಹಾಯ ಮಾಡಿತು? “ನಾನು ಯಾವಾಗಲೂ ಯೆಹೋವ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದೆ” ಅಂತ ಅವರು ಹೇಳ್ತಾರೆ. ಅಷ್ಟೇ ಅಲ್ಲ, ಅವರು ಎಲ್ಲರಿಗೂ ಹೇಳೋದು ಏನಂದ್ರೆ “ಯೆಹೋವನನ್ನು ಮೆಚ್ಚಿಸೋಕೆ ನಾನೇ ಬದಲಾಗಿದ್ದೀನಿ ಅಂದಮೇಲೆ ಎಂಥವರು ಬೇಕಾದ್ರೂ ಬದಲಾಗೋಕೆ ಆಗುತ್ತೆ!” *

ನೀವೂ ದೀಕ್ಷಾಸ್ನಾನಕ್ಕೆ ಅರ್ಹರಾಗಬಹುದು!

18. ದೇವರ ಸೇವಕರು ಏನೆಲ್ಲಾ ಬದಲಾವಣೆ ಮಾಡಿಕೊಂಡಿದ್ದಾರೆ? (1 ಕೊರಿಂಥ 6:9-11)

18 ಯೇಸುವಿನ ಜೊತೆ ರಾಜರಾಗಿ ಆಳೋಕೆ, ಯೆಹೋವ ದೇವರು ಒಂದನೇ ಶತಮಾನದಲ್ಲಿ ಯಾರನ್ನ ಆರಿಸಿಕೊಂಡಿದ್ದನೋ ಅವರೂ ಕೆಟ್ಟ ಕೆಲಸಗಳನ್ನ ಮಾಡುತ್ತಿದ್ರು. ಉದಾಹರಣೆಗೆ, ಅವರಲ್ಲಿ ಕೆಲವರು ವ್ಯಭಿಚಾರಿಗಳು, ಸಲಿಂಗಕಾಮಿಗಳು, ಕಳ್ಳರು ಆಗಿದ್ದರು. ಆದ್ರೆ ಪವಿತ್ರಶಕ್ತಿಯ ಸಹಾಯದಿಂದ ಅವರೆಲ್ಲರೂ ತಮ್ಮ ಜೀವನವನ್ನ ಬದಲಾಯಿಸಿಕೊಂಡ್ರು. (1 ಕೊರಿಂಥ 6:9-11 ಓದಿ.) ಅದೇ ತರ ಈಗಲೂ ಲಕ್ಷಾಂತರ ಜನ ಬೈಬಲ್‌ ಸಹಾಯದಿಂದ ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. * ಅವರಿಗಿದ್ದ ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಟ್ಟಿದ್ದಾರೆ. ಇದ್ರಿಂದ ಏನು ಗೊತ್ತಾಗುತ್ತೆ? ನೀವೂ ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಜೀವನದಲ್ಲಿ ಬದಲಾವಣೆ ಮಾಡಿಕೊಂಡು ದೀಕ್ಷಾಸ್ನಾನ ತಗೊಳ್ಳಬಹುದು ಅಂತ ಗೊತ್ತಾಗುತ್ತೆ.

19. ಮುಂದಿನ ಲೇಖನದಲ್ಲಿ ನಾವೇನು ನೋಡ್ತೀವಿ?

19 ದೀಕ್ಷಾಸ್ನಾನ ಪಡಕೊಳ್ಳಬೇಕಾದರೆ ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋದರ ಜೊತೆಗೆ ಹೊಸ ವ್ಯಕ್ತಿತ್ವವನ್ನ ಬಟ್ಟೆ ತರ ಹಾಕೊಬೇಕು. ಆದ್ರೆ ಇದನ್ನ ಮಾಡೋದು ಹೇಗೆ ಮತ್ತು ಅದಕ್ಕೆ ಬೇರೆಯವರು ನಮಗೆ ಹೇಗೆ ಸಹಾಯ ಮಾಡುತ್ತಾರೆ ಅಂತ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು

^ ದೀಕ್ಷಾಸ್ನಾನ ಪಡಕೊಳ್ಳೋಕೆ ಕೆಲವೊಮ್ಮೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ. ಹಾಗಾಗಿ ಈ ಲೇಖನದಲ್ಲಿ ಹಳೇ ವ್ಯಕ್ತಿತ್ವ ಅಂದ್ರೆ ಏನು, ಅದನ್ನ ನಾವು ಯಾಕೆ ತೆಗೆದುಹಾಕಬೇಕು ಮತ್ತು ಅದನ್ನ ತೆಗೆದುಹಾಕೋದು ಹೇಗೆ ಅಂತ ನೋಡೋಣ. ಮುಂದಿನ ಲೇಖನದಲ್ಲಿ ಹೊಸ ವ್ಯಕ್ತಿತ್ವವನ್ನ ಹೇಗೆ ಹಾಕಿಕೊಳ್ಳೋದು ಮತ್ತು ದೀಕ್ಷಾಸ್ನಾನ ಆದಮೇಲೂ ಅದನ್ನ ಹಾಕೊಂಡು ಇರೋಕೆ ಏನು ಮಾಡಬೇಕು ಅಂತ ನೋಡೋಣ.

^ ಪದವಿವರಣೆ: ‘ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋದು’ ಅಂದ್ರೆ ಯೆಹೋವ ದೇವರಿಗೆ ಇಷ್ಟ ಆಗದೇ ಇರೋ ಗುಣಗಳನ್ನ, ಆಸೆಗಳನ್ನ ಬಿಟ್ಟುಬಿಡೋದು. ಇದನ್ನ ದೀಕ್ಷಾಸ್ನಾನ ತಗೊಳ್ಳೋಕೂ ಮುಂಚೆ ಮಾಡಬೇಕು.—ಎಫೆ. 4:22.

^ ಇವರ ಬಗ್ಗೆ ಇನ್ನೂ ತಿಳುಕೊಳ್ಳೋಕೆ ಜುಲೈ 1, 2012ರ ಕಾವಲಿನಬುರುಜುವಿನಲ್ಲಿರೋ “ಬದುಕನ್ನೇ ಬದಲಾಯಿಸಿತು ಬೈಬಲ್‌” ಅನ್ನೋ ಲೇಖನ ಸರಣಿಯ “ಯೆಹೋವನ ಬಳಿ ಹಿಂದಿರುಗಿ ಹೋಗಬೇಕು” ಅನ್ನೋ ಲೇಖನ ನೋಡಿ.

^ ಇವರ ಬಗ್ಗೆ ಇನ್ನೂ ತಿಳುಕೊಳ್ಳೋಕೆ ಮೇ 1, 2012ರ ಕಾವಲಿನಬುರುಜುವಿನಲ್ಲಿರೋ “ಬದುಕನ್ನೇ ಬದಲಾಯಿಸಿತು ಬೈಬಲ್‌” ಅನ್ನೋ ಲೇಖನ ಸರಣಿಯ “ನನ್ನನ್ನ ಅರ್ಥಮಾಡಿಕೊಂಡು ಪ್ರೀತಿಯಿಂದ ನಡಕೊಂಡ್ರು” (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.

^ ಇವರ ಬಗ್ಗೆ ಇನ್ನೂ ತಿಳುಕೊಳ್ಳೋಕೆ ಅಕ್ಟೋಬರ್‌ 1, 2012ರ ಕಾವಲಿನಬುರುಜುವಿನಲ್ಲಿರೋ “ಬದುಕನ್ನೇ ಬದಲಾಯಿಸಿತು ಬೈಬಲ್‌” ಅನ್ನೋ ಲೇಖನ ಸರಣಿಯ “ನಾನು ಮುಂಗೋಪಿ, ಜಗಳಗಂಟಿಯಾಗಿದ್ದೆ” (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.

^ ಚಿತ್ರ ವಿವರಣೆ ಪುಟ: ಕೆಟ್ಟ ಆಸೆಗಳನ್ನ, ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಡೋದು ಹಳೇ ಬಟ್ಟೆಯನ್ನ ತೆಗೆದು ಹಾಕಿದ ತರ ಇರುತ್ತೆ.