ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 14

ಹಿರಿಯರು ಪೌಲನಿಂದ ಏನೆಲ್ಲ ಕಲಿಬಹುದು?

ಹಿರಿಯರು ಪೌಲನಿಂದ ಏನೆಲ್ಲ ಕಲಿಬಹುದು?

“ನನ್ನನ್ನ ಅನುಕರಿಸಿ.”1 ಕೊರಿಂ. 11:1.

ಗೀತೆ 122 ಲಕ್ಷಾಂತರ ಸೋದರರು

ಕಿರುನೋಟ *

1-2. ಅಪೊಸ್ತಲ ಪೌಲನಿಂದ ಹಿರಿಯರು ಏನು ಕಲಿಬಹುದು?

 ಅಪೊಸ್ತಲ ಪೌಲ ಸಹೋದರರನ್ನು ತುಂಬ ಪ್ರೀತಿಸುತ್ತಿದ್ದ. ಅವರಿಗೋಸ್ಕರ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. (ಅ. ಕಾ. 20:31) ಸಹೋದರ ಸಹೋದರಿಯರಿಗೂ ಪೌಲ ಅಂದ್ರೆ ತುಂಬ ಇಷ್ಟ. ಉದಾಹರಣೆಗೆ, ಎಫೆಸದಲ್ಲಿದ್ದ ಹಿರಿಯರು ಪೌಲನನ್ನು ಮತ್ತೆ ನೋಡೋಕೆ ಆಗಲ್ಲ ಅಂತ ಗೊತ್ತಾದಾಗ “ತುಂಬ ಅತ್ರು.” (ಅ. ಕಾ. 20:37) ಪೌಲನ ತರಾನೇ ಈಗಿರೋ ಹಿರಿಯರು ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಅವರಿಂದ ಆಗಿದ್ದನ್ನೆಲ್ಲ ಮಾಡ್ತಾರೆ. (ಫಿಲಿ. 2:16, 17) ಇದನ್ನೆಲ್ಲ ಮಾಡೋಕೆ ಅವರಿಗೆ ಕೆಲವೊಮ್ಮೆ ಕಷ್ಟ ಆಗಬಹುದು. ಆದ್ರೆ ಆಗ ಏನು ಮಾಡೋದು?

2 ಹಿರಿಯರಿಗೆ ಪೌಲನ ಉದಾಹರಣೆ ಸಹಾಯ ಮಾಡುತ್ತೆ. (1 ಕೊರಿಂ. 11:1) ಅವನೇನು ದೇವದೂತ ಆಗಿರಲಿಲ್ಲ. ಅವನೂ ನಮ್ಮ ತರಾನೇ ಸಾಮಾನ್ಯ ಮನುಷ್ಯ. ಅವನಲ್ಲೂ ಅಪರಿಪೂರ್ಣತೆ ಇತ್ತು. ಸರಿಯಾಗಿರೋದನ್ನ ಮಾಡೋಕೆ ಕಷ್ಟ ಆಗುತ್ತಿತ್ತು. (ರೋಮ. 7:18-20) ಅವನ ಜೀವನದಲ್ಲೂ ಸಮಸ್ಯೆಗಳಿದ್ದವು. ಆದ್ರೆ ಈ ಸಮಸ್ಯೆಗಳಿಂದ ಬೇಜಾರಾಗಿ ಸಹೋದರ ಸಹೋದರಿಯರಿಗೆ ಸಹಾಯ ಮಾಡೋದನ್ನ ಅವನು ಬಿಟ್ಟುಬಿಡಲಿಲ್ಲ. ಪೌಲನ ತರ ಹಿರಿಯರು ತಮಗಿರೋ ಸಮಸ್ಯೆಗಳಿಗೆ ಜಾಸ್ತಿ ಗಮನ ಕೊಡದೆ ಯೆಹೋವನ ಸೇವೆ ಮಾಡ್ತಾ ಖುಷಿಯಾಗಿ ಇರೋಕೆ ಆಗುತ್ತೆ. ಅದು ಹೇಗೆ ಅಂತ ಈಗ ನೋಡೋಣ.

3. ನಾವು ಈ ಲೇಖನದಲ್ಲಿ ಏನು ಕಲಿತೀವಿ?

3 ಈ ಲೇಖನದಲ್ಲಿ, ಹಿರಿಯರಿಗೆ ಬರೋ 4 ಸಮಸ್ಯೆಗಳ ಬಗ್ಗೆ ನೋಡೋಣ. ಒಂದನೇದು, ಹಿರಿಯರು ತಮಗಿರೋ ಜವಾಬ್ದಾರಿಗಳನ್ನ ಮಾಡ್ತಾ ಸಿಹಿಸುದ್ದಿ ಸಾರೋಕೆ ಸಮಯ ಮಾಡಿಕೊಳ್ಳೋದು. ಎರಡನೇದು, ಪ್ರೀತಿಯ ಕುರುಬರಾಗಿರೋದು. ಮೂರನೇದು, ತಮಗಿರೋ ಕುಂದು-ಕೊರತೆಗಳನ್ನ ಅರ್ಥಮಾಡಿಕೊಳ್ಳೋದು. ನಾಲ್ಕನೇದು, ಬೇರೆಯವರ ತಪ್ಪುಗಳಿಗೆ ಜಾಸ್ತಿ ಗಮನ ಕೊಡದೆ ಇರೋದು. ಈ ವಿಷಯಗಳ ಬಗ್ಗೆ ಅಪೊಸ್ತಲ ಪೌಲನಿಂದ ಹಿರಿಯರು ಏನು ಕಲಿಯಕ್ಕಾಗುತ್ತೆ ಅಂತ ನೋಡೋಣ.

ಹಿರಿಯರು ತಮಗಿರೋ ಜವಾಬ್ದಾರಿಗಳನ್ನ ಮಾಡ್ತಾ ಸಿಹಿಸುದ್ದಿ ಸಾರೋಕೆ ಸಮಯ ಮಾಡಿಕೊಳ್ಳೋದು

4. ಸಿಹಿಸುದ್ದಿ ಸಾರೋದರಲ್ಲಿ ಮುಂದಿರೋಕೆ ಹಿರಿಯರಿಗೆ ಯಾಕೆ ಕಷ್ಟ ಆಗಬಹುದು?

4 ಯಾಕೆ ಕಷ್ಟ ಆಗುತ್ತೆ? ಸಿಹಿಸುದ್ದಿ ಸಾರೋದರಲ್ಲಿ ಹಿರಿಯರು ಎಲ್ಲರಿಗಿಂತ ಮುಂದಾಗಿರಬೇಕು. ಆದ್ರೆ ಇದನ್ನ ಮಾಡೋಕೆ ಅವರಿಗೆ ಕೆಲವೊಮ್ಮೆ ಕಷ್ಟ ಆಗುತ್ತೆ. ಯಾಕಂದ್ರೆ ಅವರಿಗೆ ಇನ್ನೂ ಬೇರೆಬೇರೆ ಜವಾಬ್ದಾರಿಗಳು ಇರುತ್ತೆ. ಉದಾಹರಣೆಗೆ, ಮಧ್ಯವಾರದ ಕೂಟಗಳಲ್ಲಿ ಅಧ್ಯಕ್ಷತೆ ವಹಿಸೋದು, ಸಭಾ ಬೈಬಲ್‌ ಅಧ್ಯಯನ ನಡೆಸೋದು, ಭಾಷಣಗಳನ್ನ ಕೊಡೋದು, ಸಭೆಯಲ್ಲಿರೋ ಸಹಾಯಕ ಸೇವಕರಿಗೆ ತರಬೇತಿ ಕೊಡೋದು, ಬೇರೆ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಾ ಅವರಿಗೆ ಪ್ರೋತ್ಸಾಹ ಕೊಡೋದು, ಈ ರೀತಿ ತುಂಬ ಜವಾಬ್ದಾರಿಗಳು ಇರುತ್ತೆ. (1 ಪೇತ್ರ 5:2) ಇಷ್ಟೇ ಅಲ್ಲ, ಇನ್ನೂ ಕೆಲವು ಹಿರಿಯರಿಗೆ ಕಟ್ಟಡ ನಿರ್ಮಾಣ ಕೆಲಸ ಮತ್ತು ರಾಜ್ಯ ಸಭಾಗೃಹಗಳನ್ನ ನೋಡಿಕೊಳ್ಳೋ ಜವಾಬ್ದಾರಿ ಇರುತ್ತೆ. ಇಷ್ಟೆಲ್ಲಾ ಜವಾಬ್ದಾರಿಗಳು ಇದ್ದರೂ ಬೇರೆ ಪ್ರಚಾರಕರ ತರಾನೇ ಹಿರಿಯರಿಗೂ ಸಿಹಿಸುದ್ದಿ ಸಾರೋ ಜವಾಬ್ದಾರಿ ಇದೆ.—ಮತ್ತಾ. 28:19, 20.

5. ಪೌಲ ಏನು ಮಾಡಿದ?

5 ಪೌಲ ಏನು ಮಾಡಿದ? “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು” ಅಂತ ಫಿಲಿಪ್ಪಿ 1:10ರಲ್ಲಿ ಪೌಲ ಬರೆದ. ಅವನು ಹೇಳಿದ್ದಷ್ಟೇ ಅಲ್ಲ ಅದೇ ತರ ಮಾಡಿದ. ಸಿಹಿಸುದ್ದಿ ಸಾರೋದು ಅವನ ಜೀವನದಲ್ಲಿ ಮುಖ್ಯ ಆಗಿತ್ತು. ಅದಕ್ಕೆ ಅವನು ಈ ಕೆಲಸನ ಹತ್ತಾರು ವರ್ಷ ಮಾಡಿದ. ಅವನು ಸಾರ್ವಜನಿಕವಾಗಿ “ಎಲ್ರ ಮುಂದೆ” ಮತ್ತು “ಮನೆಮನೆಗೂ” ಹೋಗಿ ಸಿಹಿಸುದ್ದಿ ಸಾರಿದ. (ಅ. ಕಾ. 20:20) ಇಂಥಾ ಹೊತ್ತಲ್ಲೇ ಅಥವಾ ಇಂಥಾ ದಿನದಲ್ಲೇ ಸಿಹಿಸುದ್ದಿ ಸಾರಬೇಕು ಅಂತ ಅವನು ಅಂದುಕೊಂಡಿರಲಿಲ್ಲ. ಅವಕಾಶ ಸಿಕ್ಕಿದಾಗೆಲ್ಲ ಬೇರೆಯವರಿಗೆ ಸಾರಿದ. ಉದಾಹರಣೆಗೆ, ಅವನು ಅಥೆನ್ಸಿನಲ್ಲಿ ಸಹೋದರರಿಗೋಸ್ಕರ ಕಾಯ್ತಾ ಇದ್ದಾಗ ಅಲ್ಲಿದ್ದ ಜನರಿಗೆ ಸಿಹಿಸುದ್ದಿ ಸಾರಿದ. ಕೆಲವರು ಯೇಸುವಿನ ಶಿಷ್ಯರಾದರು. (ಅ. ಕಾ. 17:16, 17, 34) ಅಷ್ಟೇ ಅಲ್ಲ, ಅವನು ‘ಜೈಲಲ್ಲಿ’ ಇದ್ದಾಗಲೂ ಅವನನ್ನು ನೋಡೋಕೆ ಬಂದ ಜನರಿಗೆ ಸಾರಿದ.—ಫಿಲಿ. 1:13, 14; ಅ. ಕಾ. 28:16-24.

6. ಪೌಲ ಹೇಗೆ ತರಬೇತಿ ಕೊಟ್ಟ?

6 ಪೌಲ ಸಿಹಿಸುದ್ದಿ ಸಾರುವಾಗೆಲ್ಲ ತನ್ನ ಜೊತೆಗೆ ಬೇರೆಯವರನ್ನೂ ಕರೆದುಕೊಂಡು ಹೋಗುತ್ತಿದ್ದ. ಉದಾಹರಣೆಗೆ, ಒಂದನೇ ಮಿಷನೆರಿ ಪ್ರಯಾಣದಲ್ಲಿ ಯೋಹಾನ ಅನ್ನೋ ಮಾರ್ಕನನ್ನು ಕರೆದುಕೊಂಡು ಹೋದ. ಎರಡನೇದರಲ್ಲಿ ತಿಮೊಥೆಯನನ್ನು ಕರೆದುಕೊಂಡು ಹೋದ. (ಅ. ಕಾ. 12:25; 16:1-4) ಅವರಿಗೆಲ್ಲ ಸಭೆಯನ್ನ ಹೇಗೆ ನೋಡಿಕೊಳ್ಳೋದು ಅಂತ ತರಬೇತಿ ಕೊಟ್ಟ. ಅಷ್ಟೇ ಅಲ್ಲ, ಒಳ್ಳೇ ಕುರುಬರಾಗಿ ಇರೋದು ಹೇಗೆ, ಚೆನ್ನಾಗಿ ಕಲಿಸೋದು ಹೇಗೆ ಅಂತ ಹೇಳಿಕೊಟ್ಟ.—1 ಕೊರಿಂ. 4:17.

ಸಿಹಿಸುದ್ದಿ ಸಾರೋಕೆ ಪೌಲನ ತರ ಯಾವಾಗಲೂ ರೆಡಿಯಾಗಿರಿ (ಪ್ಯಾರ 7 ನೋಡಿ) *

7. ಎಫೆಸ 6:14, 15ರಲ್ಲಿ ಪೌಲ ಹೇಳಿದ ಹಾಗೆ ಹಿರಿಯರು ಏನು ಮಾಡಬೇಕು?

7 ನೀವೇನು ಮಾಡಬೇಕು? ಹಿರಿಯರು ಮನೆಮನೆ ಸೇವೆ ಮಾತ್ರ ಅಲ್ಲ, ಪೌಲನ ತರ ಅವಕಾಶ ಸಿಕ್ಕಿದಾಗೆಲ್ಲ ಸಿಹಿಸುದ್ದಿ ಸಾರೋಕೆ ರೆಡಿ ಇರಬೇಕು. (ಎಫೆಸ 6:14, 15 ಓದಿ.) ಉದಾಹರಣೆಗೆ, ಅಂಗಡಿಗಳಲ್ಲಿ, ಕೆಲಸದ ಜಾಗದಲ್ಲಿ ಸಿಹಿಸುದ್ದಿ ಸಾರಬಹುದು ಅಥವಾ ಅವರು ರಾಜ್ಯ ಸಭಾಗೃಹ ಕಟ್ಟೋ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರೆ ಅಲ್ಲಿರೋ ಅಕ್ಕಪಕ್ಕದವರಿಗೆ, ವ್ಯಾಪಾರಿಗಳಿಗೆ ಸಿಹಿಸುದ್ದಿ ಸಾರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಹಿರಿಯರು ಬೇರೆಯವರ ಜೊತೆ ಸೇವೆ ಮಾಡುವಾಗ ಅದರಲ್ಲೂ ಸಹಾಯಕ ಸೇವಕರ ಜೊತೆ ಸೇವೆ ಮಾಡುವಾಗ ಅವರಿಗೆ ತರಬೇತಿ ಕೊಡಬಹುದು.

8. ಕೆಲವೊಮ್ಮೆ ಹಿರಿಯರು ಏನು ಮಾಡಬೇಕಾಗುತ್ತೆ?

8 ಹಿರಿಯರು ಸಭೆ ಕೆಲಸದಲ್ಲಿ ಅಥವಾ ಸರ್ಕಿಟ್‌ ಕೆಲಸದಲ್ಲೇ ಮುಳುಗಿ ಹೋಗಿ ಸಿಹಿಸುದ್ದಿ ಸಾರೋದನ್ನ ಬಿಟ್ಟುಬಿಡಬಾರದು. ಅವರು ಅದಕ್ಕೂ ಸಮಯ ಮಾಡಿಕೊಳ್ಳಬೇಕಂದ್ರೆ ಅವರಿಗಿರೋ ಕೆಲವು ಜವಾಬ್ದಾರಿಗಳನ್ನ ಕಡಿಮೆ ಮಾಡಿಕೊಳ್ಳಬೇಕಾಗುತ್ತೆ. ಆಗ ಅವರು ಚೆನ್ನಾಗಿ ಪ್ರಾರ್ಥನೆ ಮಾಡಿ ತೀರ್ಮಾನ ಮಾಡಬೇಕು. ಎಲ್ಲಾ ಜವಾಬ್ದಾರಿಗಳನ್ನ ತೆಗೆದುಕೊಂಡುಬಿಟ್ರೆ ಮುಖ್ಯವಾದ ವಿಷಯಗಳಿಗೆ ಸಮಯ ಇಲ್ಲದೆ ಹೋಗಬಹುದು. ಉದಾಹರಣೆಗೆ, ಪ್ರತಿವಾರ ಕುಟುಂಬ ಆರಾಧನೆ ಮಾಡೋಕೆ, ಚೆನ್ನಾಗಿ ಸೇವೆ ಮಾಡೋಕೆ, ಅವರ ಮಕ್ಕಳಿಗೂ ಸಿಹಿಸುದ್ದಿ ಸಾರೋದನ್ನ ಕಲಿಸಿಕೊಡೋಕೆ ಸಮಯ ಸಿಗದೆ ಹೋಗಬಹುದು. ಹಾಗಾಗಿ ಸಭೆ ಅಥವಾ ಸರ್ಕಿಟ್‌ ಕೆಲಸದಲ್ಲಿ ಕೆಲವು ಜವಾಬ್ದಾರಿಗಳನ್ನ ಕಡಿಮೆ ಮಾಡಿಕೊಳ್ಳಬೇಕಾಗುತ್ತೆ. ಹೀಗೆ ಮಾಡುವಾಗ ಸ್ವಲ್ಪ ನೋವಾಗಬಹುದು. ಹಾಗಂತ ಬೇಜಾರು ಮಾಡಿಕೊಳ್ಳಬೇಡಿ. ಯಾಕಂದ್ರೆ ಯೆಹೋವನಿಗೆ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತಿದೆ.

ಪ್ರೀತಿಯ ಕುರುಬರಾಗಿರೋದು

9. ಹಿರಿಯರಿಗೆ ತುಂಬ ಕೆಲಸ ಇದ್ದರೂ ಅವರು ಏನು ಮಾಡಬೇಕು?

9 ಯಾಕೆ ಕಷ್ಟ ಆಗುತ್ತೆ? ಸಹೋದರ ಸಹೋದರಿಯರಿಗೆ ಜೀವನದಲ್ಲಿ ತುಂಬ ಸಮಸ್ಯೆಗಳು ಇರುತ್ತೆ. ಅದರಲ್ಲೂ ಈ ಕೊನೇ ದಿನಗಳಲ್ಲಿ ಸಮಸ್ಯೆಗಳು ಇನ್ನೂ ಜಾಸ್ತಿ ಆಗುತ್ತಿರುವುದರಿಂದ ಅವರಿಗೆ ಯಾರಾದರೂ ಪ್ರೋತ್ಸಾಹ-ಬೆಂಬಲ ಕೊಡಬೇಕಾಗುತ್ತೆ, ಸಮಾಧಾನ ಹೇಳಬೇಕಾಗುತ್ತೆ. ತಪ್ಪು ಹೆಜ್ಜೆ ಇಡುತ್ತಿರುವವರನ್ನ ಸರಿದಾರಿಗೆ ತರೋಕೆ ಹಿರಿಯರು ಸಹಾಯ ಮಾಡಬೇಕಾಗುತ್ತೆ. (1 ಥೆಸ. 5:14) ಸಹೋದರ ಸಹೋದರಿಯರಿಗೆ ಬಂದಿರೋ ಕಷ್ಟಗಳನ್ನೆಲ್ಲ ತೆಗೆದುಹಾಕೋ ಶಕ್ತಿ ಹಿರಿಯರಿಗೆ ಇಲ್ಲ ನಿಜ. ಆದ್ರೂ ತನ್ನ ಕುರಿಗಳಿಗೆ ಹಿರಿಯರು ಪ್ರೋತ್ಸಾಹ ಕೊಡಬೇಕು, ಅವರನ್ನು ಕಾಪಾಡಬೇಕು ಅಂತ ಯೆಹೋವ ಬಯಸ್ತಾನೆ. ಹಾಗಾದ್ರೆ, ಕೈಯಲ್ಲಿ ತುಂಬ ಕೆಲಸ ಇಟ್ಕೊಂಡು ಹಿರಿಯರು ಇದನ್ನೆಲ್ಲ ಹೇಗೆ ಮಾಡೋದು?

ಬೇರೆಯವರನ್ನು ಹೊಗಳಿ ಮತ್ತು ಪ್ರೋತ್ಸಾಹಿಸಿ (ಪ್ಯಾರ 10, 12 ನೋಡಿ) *

10. ಒಂದನೇ ಥೆಸಲೊನೀಕ 2:7ರಲ್ಲಿ ಇರೋ ತರ ಪೌಲ ಸಹೋದರರನ್ನು ಎಷ್ಟು ಪ್ರೀತಿಸಿದ?

10 ಪೌಲ ಏನು ಮಾಡಿದ? ಪೌಲ ಸಹೋದರ ಸಹೋದರಿಯರ ಹತ್ರ ಇರೋ ಒಳ್ಳೇ ಗುಣಗಳನ್ನ ನೋಡುತ್ತಿದ್ದ ಮತ್ತು ಆಗಾಗ ಅವರನ್ನು ಹೊಗಳುತ್ತಿದ್ದ. ಈಗಿರೋ ಹಿರಿಯರು ಪೌಲನ ತರಾನೇ ಪ್ರೀತಿಯಿಂದ ನಡೆದುಕೊಳ್ಳಬೇಕು. (1 ಥೆಸಲೊನೀಕ 2:7 ಓದಿ.) ಪೌಲ ಸಹೋದರ ಸಹೋದರಿಯರು ಅಂದ್ರೆ ತನಗೆ ಎಷ್ಟು ಇಷ್ಟ ಅಂತ ಮತ್ತು ಯೆಹೋವ ದೇವರು ಅವರನ್ನು ಇಷ್ಟ ಪಡುತ್ತಾನೆ ಅಂತ ಹೇಳುತ್ತಿದ್ದ. (2 ಕೊರಿಂ. 2:4; ಎಫೆ. 2:4, 5) ಕೆಲವೊಮ್ಮೆ ತನಗಿದ್ದ ಸಮಸ್ಯೆಗಳನ್ನ ಅವರ ಹತ್ರ ಹೇಳಿಕೊಳ್ಳುತ್ತಿದ್ದ. ಯಾಕಂದ್ರೆ ಅವರನ್ನೆಲ್ಲ ಫ್ರೆಂಡ್ಸ್‌ ತರ ನೋಡುತ್ತಿದ್ದ. ಅವರ ಜೊತೆ ಸಮಯನೂ ಕಳೆಯುತ್ತಿದ್ದ. (2 ಕೊರಿಂ. 7:5; 1 ತಿಮೊ. 1:15) ಆದ್ರೆ ಅವನು ಯಾವಾಗಲೂ ತನ್ನ ಸಮಸ್ಯೆಗಳ ಬಗ್ಗೆನೇ ಯೋಚನೆ ಮಾಡುತ್ತಿರಲಿಲ್ಲ. ಬೇರೆಯವರಿಗೆ ಸಹಾಯ ಮಾಡೋದರ ಬಗ್ಗೆ ಯೋಚನೆ ಮಾಡುತ್ತಿದ್ದ.

11. ಪೌಲ ಸಹೋದರ ಸಹೋದರಿಯರಿಗೆ ಯಾಕೆ ಬುದ್ಧಿವಾದ ಕೊಟ್ಟ?

11 ಕೆಲವೊಂದು ಸಲ ಪೌಲ ಸಹೋದರ ಸಹೋದರಿಯರಿಗೆ ಬುದ್ಧಿವಾದ ಕೊಟ್ಟ. ಆದ್ರೆ ಅವರ ಮೇಲಿರೋ ಕೋಪದಿಂದಾನೋ ಬೇಜಾರಿಂದಾನೋ ಅವನು ಇದನ್ನ ಮಾಡಲಿಲ್ಲ. ಅವರ ಮೇಲಿರೋ ಪ್ರೀತಿಯಿಂದ ಮತ್ತು ಅವರನ್ನ ಕಾಪಾಡಬೇಕು ಅನ್ನೋ ಉದ್ದೇಶದಿಂದ ಇದನ್ನ ಮಾಡಿದ. ಬುದ್ಧಿವಾದ ಕೊಡುವಾಗ ಅವರು ಏನನ್ನ ಸರಿಮಾಡಿಕೊಳ್ಳಬೇಕು ಅಂತ ಸ್ಪಷ್ಟವಾಗಿ ಹೇಳುತ್ತಿದ್ದ. ಅಷ್ಟೇ ಅಲ್ಲ, ಅದು ಅವರಿಗೆ ಹೇಗೆ ಅನಿಸ್ತು ಅಂತಾನೂ ತಿಳಿದುಕೊಳ್ಳುತ್ತಿದ್ದ. ಒಂದು ಸಲ, ಅವನು ಕೊರಿಂಥ ಸಭೆಗೆ ಪತ್ರ ಬರೆದು ಅವರು ತಿದ್ದಿಕೊಳ್ಳಬೇಕಾದ ಒಂದು ವಿಷಯದ ಬಗ್ಗೆ ಹೇಳಿದ. ಅವನು ಕೊಟ್ಟ ಬುದ್ಧಿವಾದದ ಬಗ್ಗೆ ಅವರಿಗೆ ಹೇಗೆ ಅನಿಸ್ತು ಅಂತ ತಿಳಿದುಕೊಳ್ಳೋಕೆ ತೀತನನ್ನೂ ಅವರ ಸಭೆಗೆ ಕಳಿಸಿದ. ಅವರು ಪೌಲನ ಮೇಲೆ ಬೇಜಾರು ಮಾಡಿಕೊಳ್ಳಲಿಲ್ಲ, ಅವರ ತಪ್ಪನ್ನು ತಿದ್ದಿಕೊಂಡ್ರು ಅಂತ ಗೊತ್ತಾದಾಗ ಅವನಿಗೆ ತುಂಬ ಖುಷಿ ಆಯ್ತು.—2 ಕೊರಿಂ. 7:6, 7.

12. ಹಿರಿಯರು ಸಹೋದರ ಸಹೋದರಿಯರ ನಂಬಿಕೆಯನ್ನ ಹೇಗೆ ಕಟ್ಟಬಹುದು?

12 ನೀವೇನು ಮಾಡಬೇಕು? ಹಿರಿಯರು ಪೌಲನ ತರಾನೇ ಸಹೋದರ ಸಹೋದರಿಯರ ಜೊತೆ ಸಮಯ ಕಳೆಯಬೇಕು. ಅವರು ಕೂಟಗಳಿಗೆ ಆದಷ್ಟು ಮುಂಚೆನೇ ಬಂದು ಅವರ ಜೊತೆ ಮಾತಾಡಬಹುದು. ಹಾಗಂತ ತುಂಬ ಹೊತ್ತು ಮಾತಾಡಬೇಕು ಅಂತಿಲ್ಲ, ಸ್ವಲ್ಪ ಹೊತ್ತು ಮಾತಾಡಿದ್ರೂ ಆ ಸಹೋದರ ಸಹೋದರಿಯರಿಗೆ ಬೇಕಾದ ಪ್ರೋತ್ಸಾಹ ಕೊಡೋಕೆ ಆಗುತ್ತೆ. (ರೋಮ. 1:12; ಎಫೆ. 5:16) ಅಷ್ಟೇ ಅಲ್ಲ, ಪೌಲನ ತರ ಹಿರಿಯರು ಕೂಡ ಬೈಬಲ್‌ ವಚನಗಳನ್ನ ಓದಿ ಆ ಸಹೋದರ ಸಹೋದರಿಯರ ನಂಬಿಕೆ ಕಟ್ಟಬೇಕು ಮತ್ತು ದೇವರು ಅವರನ್ನ ತುಂಬ ಪ್ರೀತಿಸ್ತಾನೆ ಅಂತ ಅವರಲ್ಲಿ ಭರವಸೆ ತುಂಬಬೇಕು. ಅಷ್ಟೇ ಅಲ್ಲ, ಹಿರಿಯರು ಅವರನ್ನ ಆಗಾಗ ಮಾತಾಡಿಸ್ತಾ ಇರಬೇಕು, ಹೊಗಳುತ್ತಾ ಇರಬೇಕು. ಆಗ ಸಹೋದರ ಸಹೋದರಿಯರಿಗೆ ಹಿರಿಯರು ಅವರನ್ನ ಪ್ರೀತಿಸ್ತಾರೆ, ಕಾಳಜಿ ವಹಿಸ್ತಾರೆ ಅಂತ ಗೊತ್ತಾಗುತ್ತೆ. ಹಿರಿಯರು ಬುದ್ಧಿವಾದ ಕೊಡಬೇಕಾಗಿ ಬಂದಾಗ ಬೈಬಲಿಂದ ಕೊಡಬೇಕು. ಪ್ರೀತಿಯಿಂದ ಬುದ್ಧಿವಾದ ಕೊಡುವಾಗ ಅದನ್ನ ಪಾಲಿಸೋಕೆ ಸಹೋದರ ಸಹೋದರಿಯರಿಗೆ ಸುಲಭ ಆಗುತ್ತೆ.—ಗಲಾ. 6:1.

ತಮಗಿರೋ ಕುಂದು-ಕೊರತೆಗಳನ್ನ ಅರ್ಥ ಮಾಡಿಕೊಳ್ಳೋದು

13. ಹಿರಿಯರಿಗೆ ತಮ್ಮ ಕುಂದು-ಕೊರತೆಗಳ ಬಗ್ಗೆ ಯಾವ ತರ ಅನಿಸುತ್ತೆ?

13 ಯಾಕೆ ಕಷ್ಟ ಆಗುತ್ತೆ? ಹಿರಿಯರು ಪರಿಪೂರ್ಣರಲ್ಲ. ಅವರೂ ಕೆಲವೊಮ್ಮೆ ತಪ್ಪುಗಳನ್ನ ಮಾಡ್ತಾರೆ. (ರೋಮ. 3:23) ಆದ್ರೆ ಕೆಲವರು, ತಮ್ಮಿಂದಾದ ತಪ್ಪುಗಳನ್ನು ನೆನೆಸಿಕೊಂಡು ತುಂಬ ಬೇಜಾರು ಮಾಡಿಕೊಂಡು ಕುಗ್ಗಿಹೋಗ್ತಾರೆ. ಇನ್ನು ಕೆಲವರು ತಪ್ಪು ಮಾಡಿದ್ರೂ ಅದು ಅಷ್ಟು ದೊಡ್ಡ ತಪ್ಪೇನಲ್ಲ ಅಂದ್ಕೊಳ್ತಾರೆ. ಹಾಗಾಗಿ ಅದನ್ನ ಸರಿಮಾಡಿಕೊಳ್ಳೋಕೂ ಹೋಗಲ್ಲ.

14. ಫಿಲಿಪ್ಪಿ 4:13ರಲ್ಲಿ ಹೇಳೋ ಹಾಗೆ ಪೌಲನಿಗೆ ದೀನತೆ ಹೇಗೆ ಸಹಾಯ ಮಾಡ್ತು?

14 ಪೌಲ ಏನು ಮಾಡಿದ? ಪೌಲನಿಗೆ ತನ್ನಲ್ಲಿದ್ದ ಕುಂದು-ಕೊರತೆಗಳನ್ನ ಸರಿಮಾಡಿಕೊಳ್ಳೋಕೆ ಅವನ ಶಕ್ತಿಯಿಂದ ಆಗಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನಿಗೆ ಯೆಹೋವ ದೇವರ ಸಹಾಯ ಬೇಕಿತ್ತು. ಮುಂಚೆ ಅವನು ತುಂಬ ಅಹಂಕಾರಿಯಾಗಿದ್ದ, ಕ್ರೈಸ್ತರಿಗೆ ತುಂಬ ಹಿಂಸೆ ಕೊಡುತ್ತಿದ್ದ. ಆದ್ರೆ ಆಮೇಲೆ ಅವನು ಮಾಡುತ್ತಿದ್ದಿದ್ದು ತಪ್ಪು ಅಂತ ಅವನಿಗೆ ಅರ್ಥ ಆಯ್ತು. ಅದನ್ನ ಅವನು ತಿದ್ದಿಕೊಂಡ. (1 ತಿಮೊ. 1:12-16) ಯೆಹೋವ ದೇವರ ಸಹಾಯದಿಂದ ಪ್ರೀತಿ, ಕರುಣೆ, ದೀನತೆ ಇರೋ ಒಬ್ಬ ಹಿರಿಯನಾದ. ಅವನ ಕುಂದು-ಕೊರತೆಗಳನ್ನ ನೆನಸಿಕೊಂಡಾಗ ಅವನಿಗೆ ಬೇಜಾರಾಯ್ತು ನಿಜ. ಆದರೆ ಅವನು ಅದರ ಬಗ್ಗೆನೇ ಯೋಚನೆ ಮಾಡ್ತಾ ಇರಲಿಲ್ಲ, ಯೆಹೋವ ಅವನನ್ನು ಕ್ಷಮಿಸ್ತಾನೆ ಅಂತ ನಂಬಿದ. (ರೋಮ. 7:21-25) ಇನ್ನೊಂದು ಕಡೆ, ತಾನು ಯಾವ ತಪ್ಪೂ ಮಾಡಬಾರದು, ಪರಿಪೂರ್ಣನಾಗಿ ಇರಬೇಕು ಅಂತಾನೂ ಅಂದುಕೊಳ್ಳಲಿಲ್ಲ. ಯೆಹೋವನಿಗೆ ಇಷ್ಟವಾದ ಗುಣಗಳನ್ನ ಬೆಳೆಸಿಕೊಳ್ಳೋಕೆ ತುಂಬ ಪ್ರಯತ್ನ ಮಾಡುತ್ತಿದ್ದ. ತನ್ನ ಜವಾಬ್ದಾರಿಗಳನ್ನ ಮಾಡೋಕೆ ಯಾವಾಗಲೂ ಯೆಹೋವನ ಹತ್ರ ಸಹಾಯ ಕೇಳುತ್ತಿದ್ದ.—1 ಕೊರಿಂ. 9:27; ಫಿಲಿಪ್ಪಿ 4:13 ಓದಿ.

ಕುಂದು-ಕೊರತೆಗಳನ್ನ ಜಯಿಸೋಕೆ ಆದಷ್ಟು ಪ್ರಯತ್ನ ಮಾಡಿ (ಪ್ಯಾರ 14-15 ನೋಡಿ) *

15. ಪೌಲನ ತರ ಹಿರಿಯರು ಏನು ಮಾಡಬೇಕು?

15 ನೀವೇನು ಮಾಡಬೇಕು? ಹಿರಿಯರು ಯಾವತ್ತೂ ತಪ್ಪೇ ಮಾಡಲ್ಲ ಅಂತ ಯೆಹೋವ ಅವರಿಗೆ ಆ ಜವಾಬ್ದಾರಿಯನ್ನ ಕೊಟ್ಟಿಲ್ಲ. ಅವರು ಒಂದುವೇಳೆ ತಪ್ಪುಮಾಡಿದ್ರೆ ಅದನ್ನ ಒಪ್ಪಿಕೊಂಡು ತಿದ್ದುಕೊಳ್ಳಬೇಕು ಮತ್ತು ಯೆಹೋವನಿಗೆ ಇಷ್ಟವಾದ ಗುಣಗಳನ್ನ ಬೆಳಸಿಕೊಳ್ಳಬೇಕು ಅಂತ ಆತನು ಬಯಸ್ತಾನೆ. (ಎಫೆ. 4:23, 24) ಹಾಗಾಗಿ ಹಿರಿಯರು ಬೈಬಲನ್ನ ಓದಿ ತಮ್ಮನ್ನೇ ಪರೀಕ್ಷೆ ಮಾಡಿಕೊಳ್ಳಬೇಕು. ಒಂದುವೇಳೆ ಏನಾದರೂ ಸರಿಮಾಡಿಕೊಳ್ಳಬೇಕಿದ್ರೆ ಅದನ್ನ ಸರಿಮಾಡಿಕೊಳ್ಳಬೇಕು. ಆಗ ಅವರ ಜವಾಬ್ದಾರಿಯನ್ನ ಖುಷಿಖುಷಿಯಿಂದ ಚೆನ್ನಾಗಿ ಮಾಡೋಕೆ ಯೆಹೋವ ಅವರಿಗೆ ಸಹಾಯ ಮಾಡ್ತಾನೆ.—ಯಾಕೋ. 1:25.

ಬೇರೆಯವರ ತಪ್ಪುಗಳಿಗೆ ಜಾಸ್ತಿ ಗಮನ ಕೊಡದಿರೋದು

16. ಹಿರಿಯರು ಬೇರೆಯವರ ಕುಂದು-ಕೊರತೆಗಳನ್ನ ಜಾಸ್ತಿ ಗಮನಿಸಿದ್ರೆ ಏನಾಗುತ್ತೆ?

16 ಯಾಕೆ ಕಷ್ಟ ಆಗುತ್ತೆ? ಹಿರಿಯರು ಸಹೋದರ ಸಹೋದರಿಯರ ಜೊತೆ ಜಾಸ್ತಿ ಸಮಯ ಕಳೆದಾಗ ಅವರಲ್ಲಿರೋ ಕುಂದು-ಕೊರತೆಗಳು ಗೊತ್ತಾಗುತ್ತೆ. ಆಗ ಹಿರಿಯರಿಗೆ ಕೋಪ ಬರಬಹುದು, ಒರಟಾಗಿ ನಡೆದುಕೊಳ್ಳಬಹುದು ಅಥವಾ ಒಬ್ಬರ ಬಗ್ಗೆ ದುಡುಕಿ ತೀರ್ಮಾನ ಮಾಡಿಬಿಡಬಹುದು. ಹಿರಿಯರು ಈ ತರ ಮಾಡಬೇಕು ಅನ್ನೋದೇ ಸೈತಾನನ ಆಸೆ ಅಂತ ಪೌಲ ಎಚ್ಚರಿಕೆ ಕೊಟ್ಟ.—2 ಕೊರಿಂ. 2:10, 11.

17. ಸಹೋದರ ಸಹೋದರಿಯರಿಂದ ನೋವಾದಾಗ ಪೌಲ ಏನು ಮಾಡಿದ?

17 ಪೌಲ ಏನು ಮಾಡಿದ? ಸಹೋದರ ಸಹೋದರಿಯರ ಬಗ್ಗೆ ಪೌಲ ಯಾವಾಗಲೂ ಒಳ್ಳೇದನ್ನೇ ಯೋಚನೆ ಮಾಡುತ್ತಿದ್ದ. ಕೆಲವೊಮ್ಮೆ ಅವರು ಮಾಡಿದ ತಪ್ಪಿಂದ ಪೌಲನಿಗೂ ನೋವಾಗುತ್ತಿತ್ತು. ಹಾಗಂತ ಅವರೆಲ್ಲ ಕೆಟ್ಟವರು ಅನ್ನೋ ತೀರ್ಮಾನಕ್ಕೆ ಅವನು ಬರಲಿಲ್ಲ. ಪೌಲ ಸಭೆಯವರನ್ನ ತುಂಬ ಪ್ರೀತಿಸ್ತಿದ್ದ. ಅವರ ಒಳ್ಳೇ ಗುಣಗಳ ಬಗ್ಗೆನೇ ಜಾಸ್ತಿ ಗಮನ ಕೊಡ್ತಿದ್ದ. ಸಹೋದರ ಸಹೋದರಿಯರಿಗೆ ಒಳ್ಳೇದು ಮಾಡಬೇಕು ಅಂತ ಮನಸ್ಸಿದೆ, ಆದ್ರೆ ಅದನ್ನ ಮಾಡೋಕೆ ಅವರಿಗೆ ಕಷ್ಟ ಆಗುತ್ತಿದೆ ಅಂತ ಪೌಲ ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಿದ.

18. ಯುವೊದ್ಯ ಮತ್ತು ಸಂತುಕೆಗೆ ಪೌಲ ಸಹಾಯ ಮಾಡಿದ ರೀತಿಯಿಂದ ನೀವೇನು ಕಲಿತ್ರಿ? (ಫಿಲಿಪ್ಪಿ 4:1-3)

18 ಒಂದು ಸಲ ಫಿಲಿಪ್ಪಿ ಸಭೆಯಲ್ಲಿದ್ದ ಇಬ್ಬರು ಸಹೋದರಿಯರು ಜಗಳ ಮಾಡಿಕೊಂಡಾಗ ಪೌಲ ಏನು ಮಾಡಿದ ಅಂತ ನೋಡಿ. (ಫಿಲಿಪ್ಪಿ 4:1-3 ಓದಿ.) ಯುವೊದ್ಯ ಮತ್ತು ಸಂತುಕೆ ಮನಸ್ತಾಪ ಮಾಡಿಕೊಂಡು ಅವರ ಸಂಬಂಧ ಎಣ್ಣೆ-ಸೀಗೆಕಾಯಿ ತರ ಆಗಿಹೋಗಿತ್ತು. ಆದ್ರೆ ಪೌಲ ಅವರಲ್ಲಿದ್ದ ಒಳ್ಳೇ ಗುಣಗಳನ್ನ ನೋಡಿದ. ಆ ಸಹೋದರಿಯರು ನಿಯತ್ತಿಂದ ಯೆಹೋವನ ಸೇವೆ ಮಾಡುತ್ತಿರೋದು ಅವನಿಗೆ ಗೊತ್ತಿತ್ತು. ಮತ್ತೆ ಯೆಹೋವ ಕೂಡ ಅವರನ್ನ ಪ್ರೀತಿಸ್ತಾನೆ ಅಂತ ಅವನಿಗೆ ಗೊತ್ತಿತ್ತು. ಅದಕ್ಕೇ ಪೌಲ ಅವರಿಗೆ ಪ್ರೀತಿಯಿಂದ ಸಲಹೆ ಕೊಟ್ಟಾಗ ಅವರಿಬ್ರು ತಿದ್ದಿಕೊಂಡರು, ಒಳ್ಳೇ ಫ್ರೆಂಡ್ಸ್‌ ಆದರು. ಪೌಲ ಪ್ರತಿಯೊಬ್ಬರಲ್ಲೂ ಒಳ್ಳೇದನ್ನೇ ನೋಡ್ತಾ ಇದ್ದಿದ್ದರಿಂದ ಸಂತೋಷದಿಂದ ಸೇವೆ ಮಾಡಿದ, ಎಲ್ಲರ ಜೊತೆಗೆ ಫ್ರೆಂಡಾಗಿದ್ದ.

ಬೇರೆಯವರ ಬಗ್ಗೆ ದುಡುಕಿ ತೀರ್ಮಾನ ಮಾಡಬೇಡಿ (ಪ್ಯಾರ 19 ನೋಡಿ) *

19. (ಎ) ಸಹೋದರ ಸಹೋದರಿಯರಲ್ಲಿ ಒಳ್ಳೇದನ್ನೇ ನೋಡೋಕೆ ಹಿರಿಯರು ಏನು ಮಾಡಬೇಕು? (ಬಿ) ಚಿತ್ರದಲ್ಲಿ ಸಭಾಗೃಹವನ್ನ ಶುಚಿ ಮಾಡುತ್ತಿರೋ ಹಿರಿಯನಿಂದ ನೀವೇನು ಕಲಿತೀರ?

19 ನೀವೇನು ಮಾಡಬೇಕು? ಹಿರಿಯರೇ, ನೀವು ಸಹೋದರ ಸಹೋದರಿಯರಲ್ಲಿರೋ ಒಳ್ಳೇ ಗುಣಗಳನ್ನ ನೋಡಿ. ಎಲ್ಲರು ಅಪರಿಪೂರ್ಣರೇ. ಆದ್ರೂ ಅವರಲ್ಲಿ ಒಂದಲ್ಲ ಒಂದು ಒಳ್ಳೇ ಗುಣಗಳಿದ್ದೇ ಇರುತ್ತೆ. (ಫಿಲಿ. 2:3) ಕೆಲವೊಮ್ಮೆ ಹಿರಿಯರು ಸಹೋದರ ಸಹೋದರಿಯರನ್ನ ತಿದ್ದಬೇಕಾಗುತ್ತೆ ನಿಜ. ಆದ್ರೆ ಅವರು ಪೌಲನ ತರ ಸಹೋದರ ಸಹೋದರಿಯರಲ್ಲಿರೋ ಒಳ್ಳೇ ಗುಣಗಳಿಗೆ ಜಾಸ್ತಿ ಗಮನ ಕೊಡಬೇಕು. ಅವರು ಮಾಡೋ ಚಿಕ್ಕಪುಟ್ಟ ತಪ್ಪುಗಳಿಗೆಲ್ಲಾ ಬೇಜಾರು ಮಾಡಿಕೊಳ್ಳಬೇಡಿ. ಆದ್ರೆ ಅವರಿಗೆ ಒಳ್ಳೇ ಮನಸ್ಸಿದೆ, ಕಷ್ಟಪಟ್ಟು ಯೆಹೋವನ ಸೇವೆ ಮಾಡುತ್ತಿದ್ದಾರೆ, ಅವರು ತಿದ್ದಿಕೊಳ್ತಾರೆ ಅನ್ನೋದನ್ನ ಮನಸ್ಸಲ್ಲಿಡಿ. ಹೀಗೆ ಮಾಡುವಾಗ ಸಭೆಯಲ್ಲಿರೋ ಎಲ್ಲರೂ ಅಣ್ಣ-ತಮ್ಮಂದಿರ ತರ, ಅಕ್ಕ-ತಂಗಿಯರ ತರ ಇರೋ ಹಾಗೆ ನೋಡಿಕೊಳ್ಳೋಕೆ ಆಗುತ್ತೆ.

ಪೌಲನ ತರ ನಡೆದುಕೊಳ್ಳಿ

20. ಹಿರಿಯರು ಪೌಲನ ಬಗ್ಗೆ ಹೇಗೆ ಕಲಿಬಹುದು?

20 ಹಿರಿಯರೇ, ನೀವು ಪೌಲನಿಂದ ತುಂಬ ವಿಷಯ ಕಲಿಬಹುದು. ಅದಕ್ಕೆ ಕೂಲಂಕಷ ಸಾಕ್ಷಿ ಪುಸ್ತಕದಲ್ಲಿ ಮತ್ತು ಕಾವಲಿನಬುರುಜು ಲೇಖನದಲ್ಲಿ ಹೆಚ್ಚಿನ ವಿಷಯಗಳು ಸಿಗುತ್ತೆ. * ಇವನ್ನ ಓದುವಾಗ, ‘ಹಿರಿಯನಾಗಿ ಖುಷಿಯಿಂದ ಸೇವೆ ಮಾಡೋಕೆ ಪೌಲನ ಉದಾಹರಣೆಯಿಂದ ನಾನೇನು ಕಲಿಬಹುದು’ ಅಂತ ನಿಮ್ಮನ್ನೇ ಕೇಳಿಕೊಳ್ಳಿ.

21. ಹಿರಿಯರ ಸೇವೆಯನ್ನು ಯೆಹೋವ ಹೇಗೆ ನೋಡ್ತಾನೆ?

21 ಹಿರಿಯರೇ, ನೀವು ಪರಿಪೂರ್ಣರಾಗಿರಬೇಕು ಅಂತ ಯೆಹೋವ ಹೇಳುತ್ತಿಲ್ಲ. ಆದ್ರೆ ನೀವು ಆತನಿಗೆ ನಿಯತ್ತಾಗಿ ನಡೆದುಕೊಳ್ಳಬೇಕು ಅಂತ ಆಸೆ ಪಡ್ತಾನೆ. (1 ಕೊರಿಂ. 4:2) ಪೌಲನಲ್ಲಿದ್ದ ಈ ಗುಣ ಯೆಹೋವ ದೇವರಿಗೆ ತುಂಬ ಇಷ್ಟ ಆಯ್ತು. ನೀವು ಯೆಹೋವನಿಗೋಸ್ಕರ ಮಾಡೋ ಒಂದೊಂದು ವಿಷಯವನ್ನೂ ಆತನು ಅಮೂಲ್ಯವಾಗಿ ನೋಡ್ತಾನೆ. “ನೀವು ಪವಿತ್ರ ಜನ್ರಿಗೆ ಸೇವೆ ಮಾಡಿದ್ರಿ, ಇನ್ನೂ ಮಾಡ್ತಾ ಇದ್ದೀರ. ನಿಮ್ಮ ಈ ಕೆಲಸವನ್ನ ದೇವರ ಹೆಸ್ರಿಗಾಗಿ ನೀವು ತೋರಿಸಿದ ಪ್ರೀತಿಯನ್ನ ದೇವರು ಮರಿಯಲ್ಲ.”—ಇಬ್ರಿ. 6:10.

ಗೀತೆ 119 ಬನ್ನಿ! ಚೈತನ್ಯ ಪಡೆಯಿರಿ

^ ಕಷ್ಟಪಟ್ಟು ನಮ್ಮನ್ನ ಚೆನ್ನಾಗಿ ನೋಡಿಕೊಳ್ಳುವ ಮತ್ತು ಪ್ರೀತಿಸುವ ಹಿರಿಯರು ನಮ್ಮ ಸಭೆಗಳಲ್ಲಿ ಇದ್ದಾರೆ. ಇವರು ನಮಗೆ ಯೆಹೋವನಿಂದ ಸಿಕ್ಕಿರೋ ದೊಡ್ಡ ಆಶೀರ್ವಾದ. ಅವರಿಗೆ ಸಾಮಾನ್ಯವಾಗಿ ಬರೋ 4 ಸಮಸ್ಯೆಗಳ ಬಗ್ಗೆ ಈಗ ನೋಡೋಣ. ಈ ಸಮಸ್ಯೆಗಳನ್ನ ನಿಭಾಯಿಸೋಕೆ ಅಪೊಸ್ತಲ ಪೌಲನ ಮಾದರಿಯಿಂದ ಅವರೇನು ಕಲಿತುಕೊಳ್ಳಬಹುದು ಮತ್ತು ನಾವು ಹಿರಿಯರನ್ನ ಚೆನ್ನಾಗಿ ಅರ್ಥಮಾಡಿಕೊಂಡು ಅವರಿಗೆ ಹೇಗೆಲ್ಲಾ ಬೆಂಬಲ ಕೊಡಬಹುದು ಅಂತ ಈ ಲೇಖನದಲ್ಲಿ ಕಲಿತುಕೊಳ್ಳೋಣ.

^ ಚಿತ್ರ ವಿವರಣೆ ಪುಟ: ಒಬ್ಬ ಸಹೋದರ ಕೆಲಸ ಮುಗಿಸಿ ಮನೆಗೆ ಹೋಗುವಾಗ ತನ್ನ ಜೊತೆ ಕೆಲಸ ಮಾಡೋ ವ್ಯಕ್ತಿಗೆ ಸಿಹಿಸುದ್ದಿ ಸಾರುತ್ತಿದ್ದಾನೆ.

^ ಚಿತ್ರ ವಿವರಣೆ ಪುಟ: ಸಭೆಯಲ್ಲಿ ಒಂಟಿಯಾಗಿ ಕೂತಿರೋ ಸಹೋದರನ ಹತ್ರ ಹಿರಿಯ ಹೋಗಿ ಪ್ರೀತಿಯಿಂದ ಮಾತಾಡುತ್ತಿದ್ದಾರೆ.

^ ಚಿತ್ರ ವಿವರಣೆ ಪುಟ: ನಡೆದ ವಿಷಯದ ಬಗ್ಗೆ ಬೇಜಾರು ಮಾಡಿಕೊಂಡಿರೋ ಸಹೋದರನ ಹತ್ರ ಹಿರಿಯ ಹೋಗಿ ಸಲಹೆ ಕೊಡ್ತಿದ್ದಾರೆ.

^ ಚಿತ್ರ ವಿವರಣೆ ಪುಟ: ಕೆಲಸ ಮಾಡ್ತೀನಿ ಅಂತ ಒಬ್ಬ ಸಹೋದರ ಬಂದು ಬೇರೇನೋ ಮಾಡ್ತಿದ್ದಾನೆ. ಇದನ್ನ ನೋಡುತ್ತಿರೋ ಒಬ್ಬ ಹಿರಿಯ ಅವನ ಬಗ್ಗೆ ಅಪಾರ್ಥ ಮಾಡಿಕೊಳ್ಳುತ್ತಿಲ್ಲ.