ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ

ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ

“ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ.”—ರೋಮ. 8:16.

ಗೀತೆಗಳು: 109, 108

1-3. (ಎ) ಯಾವ ಘಟನೆಗಳು ಕ್ರಿ.ಶ. 33ರ ಪಂಚಾಶತ್ತಮ ಹಬ್ಬವನ್ನು ವಿಶೇಷ ದಿನವಾಗಿ ಮಾಡಿತು? (ಬಿ) ಇದರಿಂದ ಯಾವ ಪ್ರವಾದನೆ ನೆರವೇರಿತು? (ಲೇಖನದ ಆರಂಭದ ಚಿತ್ರ ನೋಡಿ.)

ಕ್ರಿಸ್ತ ಶಕ 33ರ ಪಂಚಾಶತ್ತಮ ಹಬ್ಬದ ದಿನ. ಭಾನುವಾರ ಬೆಳಗ್ಗಿನ ಹೊತ್ತು. ಅದೊಂದು ವಿಶೇಷ ದಿನ. ಯೆರೂಸಲೇಮಿನಲ್ಲಿ ಎಲ್ಲೆಲ್ಲೂ ಸಂಭ್ರಮ ಸಡಗರ. ಗೋದಿ ಕೊಯ್ಲಿನ ಆರಂಭದಲ್ಲಿ ಆಚರಿಸುವ ಪವಿತ್ರ ಹಬ್ಬ ಅದು. ಮಹಾ ಯಾಜಕನು ಬೆಳಬೆಳಗ್ಗೆ ದೇವಾಲಯದಲ್ಲಿ ಎಂದಿನಂತೆ ಯಜ್ಞಗಳನ್ನು ಅರ್ಪಿಸಿದನು. ಅನಂತರ ಸುಮಾರು 9 ಗಂಟೆಗೆ ಗೋದಿಯ ಪ್ರಥಮಬೆಳೆಯಿಂದ ತಯಾರಿಸಲಾದ ಹುಳಿಹಾಕಿದ ಎರಡು ರೊಟ್ಟಿಗಳನ್ನು ಅತ್ತಿಂದಿತ್ತ ಓಲಾಡಿಸಿ ಯೆಹೋವನಿಗೆ ಅರ್ಪಿಸಿದನು.—ಯಾಜ. 23:15-20.

2 ಮಹಾ ಯಾಜಕನು ಈ ರೀತಿ ಅರ್ಪಣೆಯನ್ನು ಪ್ರತಿ ವರ್ಷ ಮಾಡುತ್ತಿದ್ದನು. ನೂರಾರು ವರ್ಷಗಳಿಂದ ಮಹಾ ಯಾಜಕರು ಹಾಗೆ ಮಾಡುತ್ತಾ ಬಂದಿದ್ದರು. ಈ ಅರ್ಪಣೆಗೂ ಕ್ರಿ.ಶ. 33ರ ಪಂಚಾಶತ್ತಮ ಹಬ್ಬದಂದು ಸಂಭವಿಸಲಿದ್ದ ಒಂದು ಅತಿ ಪ್ರಮುಖ ಘಟನೆಗೂ ಹತ್ತಿರದ ಸಂಬಂಧವಿತ್ತು. ಈ ಘಟನೆ ಯೆರೂಸಲೇಮಿನ ಮೇಲಂತಸ್ತಿನ ಕೋಣೆಯಲ್ಲಿ ಯೇಸುವಿನ 120 ಶಿಷ್ಯರು ಕೂಡಿಬಂದು ಪ್ರಾರ್ಥಿಸುತ್ತಿದ್ದಾಗ ನಡೆಯಿತು. (ಅ. ಕಾ. 1:13-15) ಈ ಘಟನೆಯ ಕುರಿತು ಸುಮಾರು 800 ವರ್ಷಗಳ ಹಿಂದೆ ಪ್ರವಾದಿ ಯೋವೇಲ ಸಹ ಬರೆದಿದ್ದನು. (ಯೋವೇ. 2:28-32; ಅ. ಕಾ. 2:16-21) ಆ ವಿಶೇಷ ಘಟನೆ ಯಾವುದು?

3 ಅಪೊಸ್ತಲರ ಕಾರ್ಯಗಳು 2:2-4 ಓದಿ. ಕ್ರಿ.ಶ. 33ರ ಪಂಚಾಶತ್ತಮ ದಿನದಂದು ದೇವರು ಆ ಕ್ರೈಸ್ತರನ್ನು ತನ್ನ ಪವಿತ್ರಾತ್ಮದಿಂದ ಅಭಿಷೇಕ ಮಾಡಿದ್ದೇ ಆ ವಿಶೇಷ ಘಟನೆ. (ಅ. ಕಾ. 1:8) ಆಗ ಜನರ ಗುಂಪೊಂದು ಅಲ್ಲಿ ನೆರೆದುಬಂತು. ಶಿಷ್ಯರು ತಾವು ಆಗಷ್ಟೇ ಕಂಡುಕೇಳಿದ ಆಶ್ಚರ್ಯಕರ ವಿಷಯಗಳ ಕುರಿತು ಅವರಿಗೆ ಹೇಳತೊಡಗಿದರು. ನಡೆದದ್ದೇನು ಮತ್ತು ಅದೇಕೆ ಅಷ್ಟು ವಿಶೇಷವೆಂದು ಅಪೊಸ್ತಲ ಪೇತ್ರನು ವಿವರಿಸಿದನು. ಬಳಿಕ ಜನರ ಗುಂಪಿಗೆ ಹೀಗಂದನು: “ಪಶ್ಚಾತ್ತಾಪಪಡಿರಿ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮ ಪಾಪಗಳ ಕ್ಷಮಾಪಣೆಗಾಗಿ ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಿರಿ; ಆಗ ನೀವು ಪವಿತ್ರಾತ್ಮದ ಉಚಿತ ವರವನ್ನು ಪಡೆದುಕೊಳ್ಳುವಿರಿ.” ಇದನ್ನು ಕೇಳಿದ ಜನರಲ್ಲಿ ಸುಮಾರು 3,000 ಮಂದಿ ಅವತ್ತು ದೀಕ್ಷಾಸ್ನಾನ ಪಡೆದರು. ಇವರಿಗೂ ದೇವರು ಪವಿತ್ರಾತ್ಮ ಕೊಟ್ಟನು.—ಅ. ಕಾ. 2:37, 38, 41.

4. (ಎ) ಪಂಚಾಶತ್ತಮ ಹಬ್ಬದಂದು ನಡೆದ ಘಟನೆಯಲ್ಲಿ ನಾವೇಕೆ ಆಸಕ್ತರಾಗಿರಬೇಕು? (ಬಿ) ಅನೇಕ ವರ್ಷಗಳ ಹಿಂದೆ ಅದೇ ದಿನದಂದು ಬೇರೆ ಯಾವ ಮಹತ್ವದ ಸಂಗತಿ ನಡೆದಿರಬಹುದು? (ಕೊನೆ ಟಿಪ್ಪಣಿ ನೋಡಿ.)

4 ಮಹಾ ಯಾಜಕನು ಯಾರನ್ನು ಪ್ರತಿನಿಧಿಸಿದನು? ಯೇಸುವನ್ನು. ಮಹಾ ಯಾಜಕನು ಪ್ರತಿ ವರ್ಷ ಪಂಚಾಶತ್ತಮ ಹಬ್ಬದಂದು ಅರ್ಪಿಸುತ್ತಿದ್ದ ರೊಟ್ಟಿಗಳು ಏನನ್ನು ಸೂಚಿಸಿದವು? ಯೇಸುವಿನ ಅಭಿಷಿಕ್ತ ಶಿಷ್ಯರನ್ನು. ಈ ಶಿಷ್ಯರನ್ನು ದೇವರು ಪಾಪಿಗಳಾದ ಮಾನವರಿಂದ ಆರಿಸಿಕೊಂಡನು. ಅವರನ್ನು “ಪ್ರಥಮಫಲ” ಎಂದು ಕರೆಯಲಾಗಿದೆ. (ಯಾಕೋ. 1:18) ದೇವರು ಇವರನ್ನು ತನ್ನ ಪುತ್ರರನ್ನಾಗಿ ಸ್ವೀಕರಿಸಿ, ಯೇಸುವಿನೊಂದಿಗೆ ಸ್ವರ್ಗದ ರಾಜ್ಯದಲ್ಲಿ ಅರಸರಾಗಿ ಆಳಲು ಆರಿಸಿಕೊಂಡನು. (1 ಪೇತ್ರ 2:9) ಈ ರಾಜ್ಯದ ಮೂಲಕ ಯೆಹೋವನು ಎಲ್ಲ ವಿಧೇಯ ಮಾನವರನ್ನು ಆಶೀರ್ವದಿಸುವನು. ಹಾಗಾಗಿ ಸ್ವರ್ಗದಲ್ಲಿ ಯೇಸುವಿನೊಂದಿಗೆ ಜೀವಿಸುವ ನಿರೀಕ್ಷೆ ಇರುವವರಿಗೆ ಮತ್ತು ಪರದೈಸ್‌ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇರುವವರಿಗೆ ಕ್ರಿ.ಶ. 33ರ ಪಂಚಾಶತ್ತಮ ದಿನ ಅತಿ ಮಹತ್ವದ್ದಾಗಿದೆ. [1]—ಕೊನೆ ಟಿಪ್ಪಣಿ ನೋಡಿ.

ಒಬ್ಬನು ಅಭಿಷಿಕ್ತನಾಗುವುದು ಹೇಗೆ?

5. ಅಭಿಷಿಕ್ತರಾಗುವ ಎಲ್ಲರೂ ಒಂದೇ ರೀತಿಯಲ್ಲಿ ಅಭಿಷೇಕವನ್ನು ಪಡೆಯುವುದಿಲ್ಲ ಎಂದು ನಮಗೆ ಹೇಗೆ ಗೊತ್ತು?

5 ಮೇಲಂತಸ್ತಿನ ಕೋಣೆಯಲ್ಲಿದ್ದ ಶಿಷ್ಯರು ಆ ಪಂಚಾಶತ್ತಮ ದಿನವನ್ನು ತಮ್ಮ ಜೀವನದಲ್ಲಿ ಎಂದೂ ಮರೆಯುವಂತಿರಲಿಲ್ಲ. ಏಕೆಂದರೆ ಅವರಲ್ಲಿ ಪ್ರತಿಯೊಬ್ಬನ ತಲೆಯ ಮೇಲೆ ಬೆಂಕಿಯ ಉರಿಯಂತಿದ್ದ ಜ್ವಾಲೆ ಕಾಣಿಸಿತ್ತು. ಮಾತ್ರವಲ್ಲ ವಿದೇಶಿ ಭಾಷೆಗಳನ್ನಾಡುವ ಸಾಮರ್ಥ್ಯವನ್ನು ಕೂಡ ಯೆಹೋವನು ಅವರಿಗೆ ಕೊಟ್ಟಿದ್ದನು. ಹಾಗಾಗಿ ಅವರಿಗೆ ತಾವು ಪವಿತ್ರಾತ್ಮದಿಂದ ಅಭಿಷಿಕ್ತರಾಗಿದ್ದೇವೆಂಬ ವಿಷಯದಲ್ಲಿ ಯಾವ ಸಂಶಯವೂ ಇರಲಿಲ್ಲ. (ಅ. ಕಾ. 2:6-12) ಆದರೆ ಅಭಿಷಿಕ್ತರಾಗುವಾಗ ಎಲ್ಲ ಕ್ರೈಸ್ತರ ತಲೆಯ ಮೇಲೆ ಬೆಂಕಿಯ ಉರಿಯಂತಿರುವ ಜ್ವಾಲೆ ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ಅದೇ ದಿನದಲ್ಲಿ ಯೆರೂಸಲೇಮಿನಲ್ಲಿ ಪವಿತ್ರಾತ್ಮದಿಂದ ಅಭಿಷಿಕ್ತರಾದ ಸಾವಿರಾರು ಶಿಷ್ಯರಿಗೆ ಆ ರೀತಿ ಅಭಿಷೇಕವಾಗಲಿಲ್ಲ. ಅವರು ದೀಕ್ಷಾಸ್ನಾನವಾದಾಗಲೇ ಪವಿತ್ರಾತ್ಮದ ಅಭಿಷೇಕವನ್ನೂ ಹೊಂದಿದರು. (ಅ. ಕಾ. 2:38) ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಎಲ್ಲಾ ಕ್ರೈಸ್ತರೂ ದೀಕ್ಷಾಸ್ನಾನ ಪಡೆಯುವಾಗಲೇ ಪವಿತ್ರಾತ್ಮದ ಅಭಿಷೇಕ ಹೊಂದುವುದಿಲ್ಲ. ಉದಾಹರಣೆಗೆ, ಸಮಾರ್ಯದವರು ಅಭಿಷಿಕ್ತರಾದದ್ದು ದೀಕ್ಷಾಸ್ನಾನವಾಗಿ ಸ್ವಲ್ಪ ಸಮಯ ದಾಟಿದ ನಂತರವೇ. (ಅ. ಕಾ. 8:14-17) ಆದರೆ ಕೊರ್ನೇಲ್ಯನ ವಿಷಯ ಬೇರೆಯಾಗಿತ್ತು. ಅವನು ಮತ್ತು ಅವನ ಮನೆಯವರು ದೀಕ್ಷಾಸ್ನಾನ ಪಡೆಯುವುದಕ್ಕೆ ಮುಂಚೆಯೇ ಪವಿತ್ರಾತ್ಮದಿಂದ ಅಭಿಷಿಕ್ತರಾದರು.—ಅ. ಕಾ. 10:44-48.

6. (ಎ) ಎಲ್ಲಾ ಅಭಿಷಿಕ್ತ ಕ್ರೈಸ್ತರು ಏನನ್ನು ಖಂಡಿತ ಪಡೆಯುತ್ತಾರೆ? (ಬಿ) ಆಗ ಅವರಿಗೆ ಖಚಿತವಾಗಿ ಏನು ತಿಳಿದುಬರುತ್ತದೆ?

6 ಕ್ರೈಸ್ತರು ತಾವು ಅಭಿಷಿಕ್ತರಾಗಿದ್ದೇವೆ ಎಂಬದನ್ನೂ ಬೇರೆ ಬೇರೆ ವಿಧಗಳಲ್ಲಿ ಗ್ರಹಿಸಿಕೊಳ್ಳುತ್ತಾರೆ. ಕೆಲವರಿಗೆ ಅವರು ಅಭಿಷಿಕ್ತರಾದ ಕ್ಷಣದಲ್ಲೇ ತಾವು ಅಭಿಷಿಕ್ತರೆಂದು ಗೊತ್ತಾಗಿರಬಹುದು. ಇನ್ನೂ ಕೆಲವರಿಗೆ ಸ್ವಲ್ಪ ಸಮಯ ದಾಟಿದ ನಂತರವೇ ಗೊತ್ತಾಗಿದೆ. ಆದರೆ ಅಭಿಷಿಕ್ತರಲ್ಲಿ ಪ್ರತಿಯೊಬ್ಬರೂ ಒಂದು ವಿಷಯವನ್ನು ಮಾತ್ರ ಖಂಡಿತ ಪಡೆಯುತ್ತಾರೆ. ಅದೇನೆಂದು ಪೌಲನು ಹೇಳಿದ್ದಾನೆ: “ನೀವು ನಂಬಿಕೆಯಿಟ್ಟ ಬಳಿಕ ಅವನ ಮೂಲಕವಾಗಿಯೇ ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮದಿಂದ ಮುದ್ರೆಹೊಂದಿದಿರಿ. ಅದು ನಮಗೆ ದೊರಕಲಿರುವ ಬಾಧ್ಯತೆಯ ಮುಂಗಡ ಗುರುತಾಗಿದೆ.” (ಎಫೆ. 1:13, 14) ಹೀಗೆ ಯೆಹೋವನು ಈ ಕ್ರೈಸ್ತರನ್ನು ಸ್ವರ್ಗದ ಜೀವನಕ್ಕೆ ಆರಿಸಿಕೊಂಡಿದ್ದಾನೆಂದು ಅವರಿಗೆ ಪೂರ್ಣವಾಗಿ ಖಚಿತಪಡಿಸಲು ಪವಿತ್ರಾತ್ಮವನ್ನು ಬಳಸುತ್ತಾನೆ. ಈ ರೀತಿಯಲ್ಲಿ ಪವಿತ್ರಾತ್ಮವು ಒಂದು ಮುಂಗಡ ಗುರುತಾಗಿದೆ ಅಂದರೆ ಅವರು ಭವಿಷ್ಯದಲ್ಲಿ ಈ ಭೂಮಿಯ ಮೇಲಲ್ಲ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸುವರು ಎಂಬುದಕ್ಕೆ ಪುರಾವೆಯಾಗಿದೆ.—2 ಕೊರಿಂಥ 1:21, 22; 5:5 ಓದಿ.

7. ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನು ತನ್ನ ಸ್ವರ್ಗದ ಬಹುಮಾನ ಪಡೆಯಲು ಏನನ್ನು ಮಾಡಲೇಬೇಕು?

7 ಕ್ರೈಸ್ತನೊಬ್ಬನು ಅಭಿಷಿಕ್ತನು ಎಂದಮಾತ್ರಕ್ಕೆ ಅವನು ಸ್ವರ್ಗಕ್ಕೆ ಹೋಗೇ ಹೋಗುತ್ತಾನೆ ಎಂದರ್ಥವೇ? ಇಲ್ಲ. ಸ್ವರ್ಗದ ಜೀವನಕ್ಕೆ ತನಗೆ ಆಮಂತ್ರಣ ಸಿಕ್ಕಿದೆ ಎಂಬ ಖಾತರಿ ಅವನಿಗಿದೆ ನಿಜ. ಆದರೆ ಅವನು ಸ್ವರ್ಗಕ್ಕೆ ಹೋಗುವ ಬಹುಮಾನ ಪಡೆಯುವುದು ಕೊನೇ ತನಕ ಯೆಹೋವನಿಗೆ ನಂಬಿಗಸ್ತನಾಗಿ ಉಳಿದರೆ ಮಾತ್ರ. ಅದನ್ನು ಪೇತ್ರನು ಹೀಗೆ ವಿವರಿಸಿದ್ದಾನೆ: “ಈ ಕಾರಣದಿಂದ ಸಹೋದರರೇ, ನಿಮ್ಮ ಕರೆಯುವಿಕೆಯನ್ನು ಮತ್ತು ಆರಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ; ನೀವು ಈ ವಿಷಯಗಳನ್ನು ಮಾಡುತ್ತಾ ಇರುವುದಾದರೆ ಎಂದಿಗೂ ವಿಫಲವಾಗುವುದೇ ಇಲ್ಲ. ಹೀಗೆ, ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ನಿತ್ಯರಾಜ್ಯದೊಳಗೆ ಪ್ರವೇಶವು ನಿಮಗೆ ಧಾರಾಳವಾಗಿ ಒದಗಿಸಲ್ಪಡುವುದು.” (2 ಪೇತ್ರ 1:10, 11) ಆದ್ದರಿಂದ ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನು ಯೆಹೋವನ ಸೇವೆಯನ್ನು ಎಂದೂ ಬಿಟ್ಟುಬಿಡಬಾರದು. ಸ್ವರ್ಗಕ್ಕೆ ಹೋಗುವ ಆಮಂತ್ರಣ ಅಥವಾ ಕರೆಯು ಅವನಿಗೆ ಸಿಕ್ಕಿದೆಯಾದರೂ ಅವನು ನಂಬಿಗಸ್ತನಾಗಿ ಉಳಿಯದಿದ್ದರೆ ಅವನಿಗೆ ಬಹುಮಾನ ಸಿಗುವುದಿಲ್ಲ.—ಇಬ್ರಿ. 3:1; ಪ್ರಕ. 2:10.

ಒಬ್ಬನಿಗೆ ತಾನು ಅಭಿಷಿಕ್ತನೆಂದು ಹೇಗೆ ಗೊತ್ತಾಗುತ್ತದೆ?

8, 9. (ಎ) ಒಬ್ಬನು ಅಭಿಷಿಕ್ತನಾದಾಗ ಅವನಿಗೆ ಏನಾಗುತ್ತದೆಂದು ಅರ್ಥಮಾಡಿಕೊಳ್ಳಲು ಹೆಚ್ಚಿನವರಿಗೆ ಕಷ್ಟವಾಗುತ್ತದೆ ಏಕೆ? (ಬಿ) ಸ್ವರ್ಗಕ್ಕೆ ಹೋಗಲು ತನಗೆ ಕರೆ ಸಿಕ್ಕಿದೆ ಎಂದು ಒಬ್ಬನಿಗೆ ಹೇಗೆ ಗೊತ್ತಾಗುತ್ತದೆ?

8 ದೇವರು ಒಬ್ಬನನ್ನು ಅಭಿಷೇಕಿಸುವಾಗ ಅವನಿಗೆ ಏನಾಗುತ್ತದೆಂದು ಅರ್ಥಮಾಡಿಕೊಳ್ಳಲು ಇಂದು ದೇವರ ಸೇವಕರಲ್ಲಿ ಹೆಚ್ಚಿನವರಿಗೆ ಕಷ್ಟವಾಗಬಹುದು. ಇದು ಸಹಜ. ಏಕೆಂದರೆ ಅವರು ಯಾವತ್ತೂ ಅಭಿಷಿಕ್ತರಾಗಿಲ್ಲ, ಹಾಗಾಗಿ ಆ ಅನುಭವ ಅವರಿಗಿಲ್ಲ. ಅಲ್ಲದೆ, ಯೆಹೋವನು ಮನುಷ್ಯರನ್ನು ಸೃಷ್ಟಿಸಿದ್ದು ಅವರು ಭೂಮಿಯ ಮೇಲೆ ಸದಾ ಜೀವಿಸಲಿಕ್ಕೇ ಹೊರತು ಸ್ವರ್ಗದಲ್ಲಿ ಅಲ್ಲ. (ಆದಿ. 1:28; ಕೀರ್ತ. 37:29) ಆದರೆ ಆತನು ಕೆಲವರನ್ನು ಸ್ವರ್ಗದಲ್ಲಿ ರಾಜರು ಮತ್ತು ಯಾಜಕರು ಆಗಿರಲು ಆರಿಸಿಕೊಂಡಿದ್ದಾನೆ. ಅವರನ್ನು ಅಭಿಷೇಕ ಮಾಡುವಾಗ ಅವರ ನಿರೀಕ್ಷೆ ಮತ್ತು ಯೋಚಿಸುವ ರೀತಿ ಬದಲಾಗುತ್ತದೆ. ಹಾಗಾಗಿ ಅವರು ಸ್ವರ್ಗದ ಜೀವನಕ್ಕಾಗಿ ಎದುರುನೋಡುತ್ತಾರೆ.—ಎಫೆಸ 1:18, 19 ಓದಿ.

9 ಆದರೆ ಒಬ್ಬನಿಗೆ/ಒಬ್ಬಳಿಗೆ ತನ್ನನ್ನು ಸ್ವರ್ಗಕ್ಕೆ ಕರೆಯಲಾಗಿದೆಯೆಂದು ಹೇಗೆ ಗೊತ್ತಾಗುತ್ತದೆ? ‘ಪವಿತ್ರ ಜನರಾಗಿರಲು ಕರೆಯಲ್ಪಟ್ಟ’ ರೋಮಿನ ಅಭಿಷಿಕ್ತ ಸಹೋದರರಿಗೆ ಪೌಲನು ಏನಂದನೆಂದು ಗಮನಿಸಿರಿ. ಅವನು ಹೇಳಿದ್ದು: “ದೇವರ ಪವಿತ್ರಾತ್ಮವು ನಮ್ಮನ್ನು ದಾಸತ್ವಕ್ಕೆ ನಡೆಸುವುದಿಲ್ಲ ಮತ್ತು ಅದು ಭಯವನ್ನು ಉಂಟುಮಾಡುವುದಿಲ್ಲ, ಆದರೆ ಅದು ನಮ್ಮನ್ನು ಪುತ್ರರಂತೆ ದತ್ತುತೆಗೆದುಕೊಳ್ಳುವುದಕ್ಕೆ ನಡೆಸುತ್ತದೆ. ಈ ಪವಿತ್ರಾತ್ಮದಿಂದಲೇ ನಾವು ‘ಅಪ್ಪಾ, ತಂದೆಯೇ!’ ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ.” (ರೋಮ. 1:7; 8:15, 16) ಹೀಗೆ, ಸ್ವರ್ಗದಲ್ಲಿ ರಾಜನಾಗಿ ಆಳಲು ಆಮಂತ್ರಿಸಲಾಗಿರುವ ವ್ಯಕ್ತಿಗೆ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಅದನ್ನು ಸ್ಪಷ್ಟಪಡಿಸುತ್ತಾನೆ.—1 ಥೆಸ. 2:12.

10. ಒಬ್ಬ ಅಭಿಷಿಕ್ತನಿಗೆ ಬೇರೆಯವರು ಉಪದೇಶ ಮಾಡಬೇಕಾದ ಅವಶ್ಯವಿಲ್ಲ ಎಂದು 1 ಯೋಹಾನ 2:27 ಹೇಳುವುದು ಯಾವ ಅರ್ಥದಲ್ಲಿ?

10 ದೇವರಿಂದ ಈ ಕರೆಯನ್ನು ಪಡೆದವರಿಗೆ ಅವರು ಅಭಿಷಿಕ್ತರೆಂದು ಬೇರೆಯವರು ಹೇಳಬೇಕಾಗಿಲ್ಲ. ಯೆಹೋವನೇ ಅವರಿಗೆ ಆ ಕರೆಯ ಬಗ್ಗೆ ಪೂರ್ಣ ಮನವರಿಕೆ ಮಾಡಿಸುತ್ತಾನೆ. ಅಪೊಸ್ತಲ ಯೋಹಾನನು ಅಭಿಷಿಕ್ತ ಕ್ರೈಸ್ತರಿಗೆ ಹೇಳುವುದು: “ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದ್ದೀರಿ; ನಿಮ್ಮೆಲ್ಲರಿಗೂ ಜ್ಞಾನವಿದೆ.” ಯೋಹಾನನು ಮತ್ತೂ ಹೇಳುವುದು: “ನಿಮ್ಮ ವಿಷಯದಲ್ಲಾದರೋ ನೀವು ಆತನಿಂದ ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿದೆ ಮತ್ತು ಯಾವನಾದರೂ ನಿಮಗೆ ಉಪದೇಶಮಾಡುವ ಅವಶ್ಯವಿಲ್ಲ; ಆತನಿಂದ ಹೊಂದಿದ ಅಭಿಷೇಕವೇ ಎಲ್ಲ ವಿಷಯಗಳ ಕುರಿತು ನಿಮಗೆ ಬೋಧಿಸುವಂಥದ್ದಾಗಿದ್ದು ಸತ್ಯವಾಗಿದೆ, ಸುಳ್ಳಲ್ಲ; ಅದು ನಿಮಗೆ ಕಲಿಸಿರುವ ಪ್ರಕಾರವೇ ಅವನೊಂದಿಗೆ ಐಕ್ಯದಲ್ಲಿ ಉಳಿಯಿರಿ.” (1 ಯೋಹಾ. 2:20, 27) ಬೇರೆಲ್ಲರಂತೆ ಅಭಿಷಿಕ್ತ ಕ್ರೈಸ್ತರಿಗೂ ಯೆಹೋವನಿಂದ ಉಪದೇಶ ಪಡೆಯುವ ಅಗತ್ಯವಿದೆ. ಆದರೆ ‘ನೀವು ಅಭಿಷಿಕ್ತರು’ ಎಂದು ಅವರಿಗೆ ಬೇರೆಯವರು ಹೇಳಿ ಖಚಿತಪಡಿಸುವ ಅಗತ್ಯವಿಲ್ಲ. ಏಕೆಂದರೆ ಅವರು ಅಭಿಷಿಕ್ತರೆಂದು ಸ್ವಲ್ಪವೂ ಸಂಶಯವಿಲ್ಲದೆ ಇರುವಂತೆ ಯೆಹೋವನು ತನ್ನ ಬಲಾಢ್ಯ ಶಕ್ತಿಯಾದ ಪವಿತ್ರಾತ್ಮದ ಮೂಲಕ ಸ್ಪಷ್ಟಪಡಿಸಿರುತ್ತಾನೆ.

‘ಪುನಃ ಹುಟ್ಟಿದವರು’

11, 12. (ಎ) ಒಬ್ಬ ಅಭಿಷಿಕ್ತ ಕ್ರೈಸ್ತನಿಗೆ ಎಂಥ ಯೋಚನೆಗಳು ಬರಬಹುದು? (ಬಿ) ಆದರೆ ಅವನು ಯಾವುದರ ಬಗ್ಗೆ ಸಂದೇಹಪಡುವುದಿಲ್ಲ?

11 ಕ್ರೈಸ್ತರು ಪವಿತ್ರಾತ್ಮದಿಂದ ಅಭಿಷೇಕ ಹೊಂದಿದಾಗ ಎಷ್ಟು ಬದಲಾಗುತ್ತಾರೆಂದರೆ ಯೇಸು ಅವರನ್ನು ‘ಪುನಃ ಹುಟ್ಟಿದವರು’ ಎಂದು ಹೇಳಿದನು. (ಯೋಹಾ. 3:3, 5) ಅದನ್ನು ಹೀಗೆ ವಿವರಿಸಿದನು: “ನೀವು ಪುನಃ ಹುಟ್ಟಲೇಬೇಕು ಎಂದು ನಾನು . . . ಹೇಳಿದ್ದರಿಂದ ಆಶ್ಚರ್ಯಪಡಬೇಡ. ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ ಮತ್ತು ನೀವು ಅದರ ಶಬ್ದವನ್ನು ಕೇಳಿಸಿಕೊಳ್ಳುತ್ತೀರಾದರೂ ಅದು ಎಲ್ಲಿಂದ ಬರುತ್ತದೆ ಹಾಗೂ ಎಲ್ಲಿಗೆ ಹೋಗುತ್ತದೆ ಎಂಬುದು ನಿಮಗೆ ತಿಳಿಯದು. ಪವಿತ್ರಾತ್ಮದಿಂದ ಹುಟ್ಟಿದ ಪ್ರತಿಯೊಬ್ಬನೂ ಹೀಗೆಯೇ ಇದ್ದಾನೆ.” (ಯೋಹಾ. 3:7, 8) ಈ ವಚನದಿಂದ ಏನು ಸ್ಪಷ್ಟವಾಗುತ್ತದೆಂದರೆ, ಒಬ್ಬನು ಅಭಿಷಿಕ್ತನಾದಾಗ ಅವನಿಗೆ ಹೇಗನಿಸುತ್ತದೆ ಎಂದು ಅಭಿಷಿಕ್ತನಲ್ಲದ ವ್ಯಕ್ತಿಗೆ ಪೂರ್ತಿಯಾಗಿ ವಿವರಿಸುವುದು ಅಸಾಧ್ಯ. [2]—ಕೊನೆ ಟಿಪ್ಪಣಿ ನೋಡಿ.

12 ಅಭಿಷಿಕ್ತನಾಗಿರುವ ಒಬ್ಬನಿಗೆ, ‘ಯೆಹೋವನು ನನ್ನನ್ನು ಯಾಕೆ ಆರಿಸಿಕೊಂಡನು? ಬೇರೆಯವರನ್ನು ಆರಿಸಿಕೊಳ್ಳಬಹುದಿತ್ತಲ್ಲ?’ ಎಂಬ ಯೋಚನೆ ಬರಬಹುದು. ‘ನಾನು ಈ ಜವಾಬ್ದಾರಿಗೆ ಅಷ್ಟು ಯೋಗ್ಯನಲ್ಲ’ ಎಂದು ಕೂಡ ಅನಿಸಬಹುದು. ಆದರೆ ಯೆಹೋವನು ಅವನನ್ನು ಆರಿಸಿಕೊಂಡಿದ್ದಾನೆಂಬ ವಿಷಯದಲ್ಲಿ ಅವನು ಸಂದೇಹಪಡುವುದಿಲ್ಲ. ಅವನು ತುಂಬ ಸಂತೋಷಪಡುತ್ತಾನೆ, ಅದಕ್ಕಾಗಿ ಕೃತಜ್ಞನೂ ಆಗಿರುತ್ತಾನೆ. ಅಭಿಷಿಕ್ತ ಕ್ರೈಸ್ತರಿಗೆ ಪೇತ್ರನಂತೆಯೇ ಅನಿಸುತ್ತದೆ. ಅವನಂದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ; ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸುವ ಮೂಲಕ ತನ್ನ ಮಹಾ ಕರುಣೆಯಿಂದ ನಮಗೆ ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನವನ್ನು ಕೊಟ್ಟನು. ಆ ಹೊಸ ಜನನವು ನಿರ್ಲಯವಾದ, ಕಳಂಕರಹಿತವಾದ ಮತ್ತು ಬಾಡಿಹೋಗದ ಬಾಧ್ಯತೆಯೇ ಆಗಿದೆ. ಆ ಬಾಧ್ಯತೆಯು ಸ್ವರ್ಗದಲ್ಲಿ ನಿಮಗೋಸ್ಕರ ಕಾದಿರಿಸಲ್ಪಟ್ಟಿದೆ.” (1 ಪೇತ್ರ 1:3, 4) ಈ ಮಾತುಗಳನ್ನು ಅಭಿಷಿಕ್ತ ಕ್ರೈಸ್ತರು ಓದುವಾಗ ಅವರ ತಂದೆಯಾದ ಯೆಹೋವನೇ ಅವರೊಂದಿಗೆ ಮಾತಾಡುತ್ತಿದ್ದಾನೆಂದು ಸಂಶಯವಿಲ್ಲದೆ ನಂಬುತ್ತಾರೆ.

13. (ಎ) ಒಬ್ಬ ಕ್ರೈಸ್ತನು ಪವಿತ್ರಾತ್ಮದಿಂದ ಅಭಿಷಿಕ್ತನಾದಾಗ ಅವನ ಯೋಚನಾರೀತಿ ಹೇಗೆ ಬದಲಾಗುತ್ತದೆ? (ಬಿ) ಈ ಬದಲಾವಣೆಗೆ ಕಾರಣವೇನು?

13 ಈ ಕ್ರೈಸ್ತರಿಗೆ ಸ್ವರ್ಗಕ್ಕೆ ಹೋಗುವ ಕರೆಯು ಯೆಹೋವನಿಂದ ಸಿಗುವ ಮುಂಚೆ ಅವರಿಗೆ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯಿತ್ತು. ಯೆಹೋವನು ಈ ಭೂಮಿಯನ್ನು ಪರದೈಸಾಗಿ ಮಾಡುವ ಹಾಗೂ ದುಷ್ಟತನವನ್ನೆಲ್ಲ ತೆಗೆದುಹಾಕುವ ಸಮಯಕ್ಕಾಗಿ ಅವರು ಎದುರುನೋಡಿರಬಹುದು. ಬಂಧುಮಿತ್ರರಲ್ಲಿ ತೀರಿಹೋಗಿರುವ ಒಬ್ಬರನ್ನು ಪುನರುತ್ಥಾನದಲ್ಲಿ ಸ್ವಾಗತಿಸುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡಿರಲೂಬಹುದು. ತಮ್ಮದೇ ಆದ ಒಂದು ಮನೆಕಟ್ಟಿ ಅದರಲ್ಲಿ ವಾಸಿಸಬೇಕು, ತಮಗಿಷ್ಟವಾದ ಮರಗಿಡಗಳನ್ನು ಬೆಳೆಸಬೇಕು, ಅದರ ಹಣ್ಣುಗಳನ್ನು ಸವಿದು ನೋಡಬೇಕೆಂಬ ಆಶೆ ಅವರಲ್ಲಿ ಇದ್ದಿರಬಹುದು. (ಯೆಶಾ. 65:21-23) ಆದರೆ ಈಗ ತಟ್ಟನೆ ಅವರ ಯೋಚನಾರೀತಿಯಲ್ಲಿ ಯಾಕೆ ಬದಲಾವಣೆ? ಅವರು ಮನಸ್ಸು ತುಂಬ ಕುಗ್ಗಿ ಹೋಗಿರುವುದರಿಂದಲಾ? ಅಥವಾ ತುಂಬ ಕಷ್ಟ ಅನುಭವಿಸಿ ಸಾಕಾಗಿ ಹೋಗಿದೆಯಾ? ಭೂಮಿಯಲ್ಲಿ ಸದಾ ಜೀವಿಸಿ ಜೀವಿಸಿ ಬೇಜಾರಾಗಿ ಸಂತೋಷ ಕಳಕೊಳ್ಳಬಹುದು ಎಂಬ ಯೋಚನೆ ಬಂದಿರುವುದರಿಂದನಾ? ಅಥವಾ ಸ್ವರ್ಗದ ಜೀವನ ಹೇಗಿರುತ್ತದೆ ನೋಡೋಣ ಎಂಬ ತವಕದಿಂದನಾ? ಇಲ್ಲ. ಏಕೆಂದರೆ ಅವರು ಸ್ವರ್ಗದಲ್ಲಿ ಜೀವಿಸಬೇಕೆಂದು ನಿರ್ಣಯಿಸಿದಾತನು ದೇವರೇ. ಆತನು ಅವರಿಗೆ ಸ್ವರ್ಗದ ಜೀವನಕ್ಕೆ ಕರೆ ಕೊಟ್ಟಾಗ ತನ್ನ ಪವಿತ್ರಾತ್ಮವನ್ನು ಉಪಯೋಗಿಸಿ ಅವರ ಯೋಚನಾರೀತಿ ಹಾಗೂ ನಿರೀಕ್ಷೆಯನ್ನು ಬದಲಾಯಿಸಿದನು.

14. ಭೂಮಿಯ ಮೇಲಿನ ತಮ್ಮ ಸದ್ಯದ ಜೀವನದ ಕುರಿತು ಅಭಿಷಿಕ್ತರಿಗೆ ಹೇಗನಿಸುತ್ತದೆ?

14 ಹಾಗಾದರೆ ಇದರರ್ಥ ಅಭಿಷಿಕ್ತರು ಸಾಯಲು ಬಯಸುತ್ತಾರೆಂದಾ? ಅಭಿಷಿಕ್ತರ ಅನಿಸಿಕೆ ಏನೆಂದು ಪೌಲನು ವರ್ಣಿಸಿದ್ದಾನೆ. ಅವರ ಮನುಷ್ಯ ದೇಹವನ್ನು ಒಂದು ‘ಗುಡಾರಕ್ಕೆ’ ಹೋಲಿಸುತ್ತಾ ಪೌಲನು ಅಂದದ್ದು: “ವಾಸ್ತವದಲ್ಲಿ ಈ ಗುಡಾರದಲ್ಲಿರುವವರಾದ ನಾವು ಭಾರದಿಂದ ಕುಗ್ಗಿದವರಾಗಿ ನರಳುತ್ತಿದ್ದೇವೆ; ನಾವು ಇದನ್ನು ಕಳಚಿಹಾಕಲು ಬಯಸುವುದಿಲ್ಲ, ಬದಲಾಗಿ ನಶ್ವರವಾದದ್ದು ಜೀವದಿಂದ ನುಂಗಲ್ಪಡುವಂತೆ ಇನ್ನೊಂದನ್ನು ಧರಿಸಿಕೊಳ್ಳಲು ಬಯಸುತ್ತೇವೆ.” (2 ಕೊರಿಂ. 5:4) ಇಲ್ಲಿ ತಿಳಿಸಿದಂತೆ ಅಭಿಷಿಕ್ತ ಕ್ರೈಸ್ತರು ಸಾಯಲು ಬಯಸುವುದಿಲ್ಲ. ಅವರು ಭೂಮಿಯಲ್ಲಿ ತಮ್ಮ ಜೀವನವನ್ನು ಆನಂದಿಸುತ್ತಾರೆ. ಕುಟುಂಬ, ಸ್ನೇಹಿತರೊಂದಿಗೆ ಪ್ರತಿದಿನವನ್ನು ಯೆಹೋವನ ಸೇವೆಯಲ್ಲಿ ಕಳೆಯಲು ಬಯಸುತ್ತಾರೆ. ಹೀಗಿದ್ದರೂ ಭವಿಷ್ಯಕ್ಕಾಗಿ ಯೆಹೋವನು ಅವರಿಗೆ ಕೊಟ್ಟ ನಿರೀಕ್ಷೆಯನ್ನು ಅವರು ಯಾವಾಗಲೂ ಮನಸ್ಸಿನಲ್ಲಿಡುತ್ತಾರೆ.—1 ಕೊರಿಂ. 15:53; 2 ಪೇತ್ರ 1:4; 1 ಯೋಹಾ. 3:2, 3; ಪ್ರಕ. 20:6.

ಯೆಹೋವನು ನಿಮ್ಮನ್ನು ಆಮಂತ್ರಿಸಿದ್ದಾನಾ?

15. ಒಬ್ಬನು ಪವಿತ್ರಾತ್ಮದಿಂದ ಅಭಿಷಿಕ್ತನಾಗಿದ್ದಾನೆಂದು ಯಾವುದು ರುಜುಪಡಿಸುವುದಿಲ್ಲ?

15 ‘ಯೆಹೋವನು ನನ್ನನ್ನು ಸ್ವರ್ಗಕ್ಕೆ ಆಮಂತ್ರಿಸಿರಬಹುದಾ?’ ಎಂದು ನೀವು ಯೋಚಿಸುತ್ತಿರಬಹುದು. ನಿಮಗೆ ಹಾಗನಿಸಿದರೆ ಮುಂದಿನ ಪ್ರಾಮುಖ್ಯ ಪ್ರಶ್ನೆಗಳಿಗೆ ಗಮನ ಕೊಡಿ: ಸಾರುವ ಕೆಲಸದಲ್ಲಿ ತುಂಬ ಉತ್ಸಾಹ ನಿಮಗಿದೆಯೆಂದು ಅನಿಸುತ್ತದಾ? ಬೈಬಲಿನ ಅಧ್ಯಯನ ಮಾಡಲು ಮತ್ತು ‘ದೇವರ ಅಗಾಧವಾದ ವಿಷಯಗಳನ್ನು’ ಕಲಿಯಲು ತುಂಬ ಆನಂದಿಸುತ್ತೀರಾ? (1 ಕೊರಿಂ. 2:10) ಸಾರುವ ಕೆಲಸದಲ್ಲಿ ಯೆಹೋವನು ನಿಮ್ಮನ್ನು ವಿಶೇಷವಾಗಿ ಆಶೀರ್ವದಿಸಿ ಉತ್ತಮ ಫಲ ಸಿಗುವಂತೆ ಮಾಡಿದ್ದಾನೆಂದು ಅನಿಸುತ್ತದಾ? ಯೆಹೋವನಿಗೆ ಏನು ಇಷ್ಟವೋ ಅದನ್ನೇ ಎಲ್ಲದಕ್ಕಿಂತಲೂ ಹೆಚ್ಚಾಗಿ ಮಾಡಲು ಬಯಸುತ್ತೀರಾ? ಸಹೋದರರನ್ನು ನೀವು ಗಾಢವಾಗಿ ಪ್ರೀತಿಸುತ್ತೀರಾ? ಅವರು ಯೆಹೋವನ ಸೇವೆ ಮಾಡುವಂತೆ ನೆರವಾಗುವ ದೊಡ್ಡ ಜವಾಬ್ದಾರಿ ನಿಮಗಿದೆಯೆಂದು ಅನಿಸುತ್ತದಾ? ನಿಮ್ಮ ಜೀವನದಲ್ಲಿ ಯೆಹೋವನು ನಿಮಗೆ ವಿಶೇಷ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾನೆ ಎಂಬ ಪುರಾವೆ ನಿಮಗಿದೆಯಾ? “ಹೌದು” ಎಂಬುದು ನಿಮ್ಮ ಉತ್ತರವಾಗಿದ್ದರೆ ಸ್ವರ್ಗಕ್ಕೆ ನಿಮಗೆ ಆಮಂತ್ರಣ ಸಿಕ್ಕಿದೆ ಎಂದರ್ಥವೇ? ಇಲ್ಲ ಹಾಗಲ್ಲ. ಏಕೆ? ಏಕೆಂದರೆ ದೇವರ ಸೇವಕರೆಲ್ಲರಿಗೆ ಅವರು ಅಭಿಷಿಕ್ತರಾಗಿರಲಿ ಇಲ್ಲದಿರಲಿ ಈ ರೀತಿಯ ಅನುಭವ ಆಗುತ್ತಾ ಇರುತ್ತದೆ. ಅಲ್ಲದೆ ಯೆಹೋವನು ಪವಿತ್ರಾತ್ಮದ ಶಕ್ತಿಯನ್ನು ತನ್ನ ಸೇವಕರಲ್ಲಿ ಯಾರಿಗೆ ಬೇಕಾದರೂ ಕೊಡಬಲ್ಲನು. ನಿಜ ಸಂಗತಿಯೇನೆಂದರೆ ಸ್ವರ್ಗಕ್ಕೆ ಹೋಗುತ್ತೇನಾ ಇಲ್ಲವಾ ಎಂದು ನೀವು ಯೋಚಿಸುತ್ತಿರುವುದೇ ನಿಮಗೆ ಆ ಆಮಂತ್ರಣ ಸಿಕ್ಕಿಲ್ಲ ಎಂದರ್ಥ. ಏಕೆಂದರೆ ಯೆಹೋವನು ಆರಿಸಿಕೊಂಡವರಿಗೆ ತಾವು ಅಭಿಷಿಕ್ತರಾ ಇಲ್ಲವಾ ಎಂಬ ಸಂಶಯವೇ ಇರುವುದಿಲ್ಲ. ಅವರಿಗೆ ಪೂರ್ಣ ಖಾತ್ರಿ ಇರುತ್ತದೆ.

16. ಪವಿತ್ರಾತ್ಮವನ್ನು ಪಡೆದಿರುವವರೆಲ್ಲರೂ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ನಮಗೆ ಹೇಗೆ ಗೊತ್ತು?

16 ಯೆಹೋವನ ಪವಿತ್ರಾತ್ಮವನ್ನು ಪಡೆದ ನಂಬಿಗಸ್ತ ಜನರ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ. ಆದರೆ ಅವರೆಲ್ಲರೂ ಸ್ವರ್ಗಕ್ಕೆ ಹೋಗಲಿಲ್ಲ. ಒಂದು ಉದಾಹರಣೆ ಸ್ನಾನಿಕನಾದ ಯೋಹಾನನದ್ದು. ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ ಎಂದು ಯೇಸು ಹೇಳಿದನು. ಆದರೆ ಯೋಹಾನನು ಸ್ವರ್ಗದಲ್ಲಿ ರಾಜನಾಗಿ ಆಳುವುದಿಲ್ಲ ಎಂದು ನಂತರ ಸ್ಪಷ್ಟಪಡಿಸಿದನು. (ಮತ್ತಾ. 11:10, 11) ದಾವೀದನನ್ನು ಕೂಡ ಪವಿತ್ರಾತ್ಮವು ಮಾರ್ಗದರ್ಶಿಸಿತು. (1 ಸಮು. 16:13) ಯೆಹೋವನ ಕುರಿತು ಆಳವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬೈಬಲಿನ ಕೆಲವು ಭಾಗಗಳನ್ನು ಬರೆಯಲು ಸಹ ಅದು ದಾವೀದನಿಗೆ ಸಹಾಯಮಾಡಿತು. (ಮಾರ್ಕ 12:36) ಹಾಗಿದ್ದರೂ “ದಾವೀದನು ನಿಜಕ್ಕೂ ಸ್ವರ್ಗಕ್ಕೆ ಏರಿಹೋಗಲಿಲ್ಲ” ಎಂದು ಅಪೊಸ್ತಲ ಪೇತ್ರ ಹೇಳಿದನು. (ಅ. ಕಾ. 2:34) ಇವರು ಮಹತ್ಕಾರ್ಯಗಳನ್ನು ಮಾಡುವಂತೆ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಅವರಿಗೆ ಶಕ್ತಿ ಕೊಟ್ಟನು. ಆದರೆ ಅವರನ್ನು ಸ್ವರ್ಗಕ್ಕೆ ಆಮಂತ್ರಿಸಲಿಲ್ಲ. ಹಾಗಾದರೆ ಸ್ವರ್ಗದಲ್ಲಿ ಆಳಲು ಅವರು ಸಾಕಷ್ಟು ನಂಬಿಗಸ್ತರೂ ಅರ್ಹರೂ ಆಗಿರಲಿಲ್ಲ ಎಂದಿದರ ಅರ್ಥವೋ? ಖಂಡಿತ ಹಾಗಲ್ಲ. ಅವರನ್ನು ಯೆಹೋವನು ಪರದೈಸ್‌ ಭೂಮಿಯಲ್ಲಿ ಪುನರುತ್ಥಾನ ಮಾಡುವನು.—ಯೋಹಾ. 5:28, 29; ಅ. ಕಾ. 24:15.

17, 18. (ಎ) ದೇವರ ಸೇವಕರಲ್ಲಿ ಹೆಚ್ಚಿನವರು ಯಾವ ಬಹುಮಾನಕ್ಕಾಗಿ ಇಂದು ಎದುರುನೋಡುತ್ತಾರೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ?

17 ಇಂದು ದೇವರ ಸೇವಕರಲ್ಲಿ ಹೆಚ್ಚಿನವರು ಸ್ವರ್ಗಕ್ಕೆ ಹೋಗುವುದಿಲ್ಲ. ಅಬ್ರಹಾಮ, ದಾವೀದ, ಸ್ನಾನಿಕನಾದ ಯೋಹಾನ ಮತ್ತು ಬೈಬಲಿನಲ್ಲಿ ತಿಳಿಸಲಾದ ಇತರ ಅನೇಕ ಸ್ತ್ರೀಪುರುಷರಂತೆ ಅವರು ದೇವರ ಸರ್ಕಾರವು ಆಡಳಿತ ನಡೆಸುವಾಗ ಈ ಭೂಮಿಯಲ್ಲಿ ಜೀವಿಸಲು ಎದುರುನೋಡುತ್ತಾರೆ. (ಇಬ್ರಿ. 11:10) ದೇವರ ಸರ್ಕಾರದಲ್ಲಿ ಯೇಸುವಿನೊಂದಿಗೆ ಆಳುವವರು 1,44,000 ಮಂದಿ ಮಾತ್ರ. ಈ ಅಭಿಷಿಕ್ತರಲ್ಲಿ ‘ಉಳಿದವರು’ ಈ ಅಂತ್ಯಕಾಲದಲ್ಲಿ ಇನ್ನೂ ಭೂಮಿಯ ಮೇಲಿರುತ್ತಾರೆ ಎಂದು ಬೈಬಲ್‌ ಹೇಳುತ್ತದೆ. (ಪ್ರಕ. 12:17) ಇದರರ್ಥ 1,44,000 ಮಂದಿಯಲ್ಲಿ ಹೆಚ್ಚಿನವರು ಈಗಾಗಲೇ ಸತ್ತಿದ್ದಾರೆ ಮತ್ತು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಇದ್ದಾರೆ.

18 ಆದರೆ ಒಬ್ಬನು ತಾನು ಅಭಿಷಿಕ್ತನೆಂದು ಹೇಳಿಕೊಂಡರೆ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇರುವವರು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ನಿಮ್ಮ ಸಭೆಯಲ್ಲಿ ಯಾರಾದರೂ ಕ್ರಿಸ್ತನ ಸ್ಮರಣೆಯಲ್ಲಿ ರೊಟ್ಟಿ, ದ್ರಾಕ್ಷಾಮದ್ಯವನ್ನು ಸೇವಿಸಲು ಆರಂಭಿಸಿದರೆ ನೀವು ಅವರನ್ನು ಹೇಗೆ ಕಾಣಬೇಕು? ಅಭಿಷಿಕ್ತರೆಂದು ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ನಿಮಗೆ ಚಿಂತೆಯಾಗಬೇಕಾ? ಉತ್ತರ ಮುಂದಿನ ಲೇಖನದಲ್ಲಿದೆ.

^ [1] (ಪ್ಯಾರ 4) ಪಂಚಾಶತ್ತಮ ಹಬ್ಬವನ್ನು ಆಚರಿಸಲಾಗುತ್ತಿದ್ದ ತಿಂಗಳು ಮತ್ತು ದಿನ ಮತ್ತು ಹಿಂದೆ ಮೋಶೆ ಸೀನಾಯಿ ಬೆಟ್ಟದಲ್ಲಿ ಧರ್ಮಶಾಸ್ತ್ರವನ್ನು ಪಡೆದ ತಿಂಗಳು ಮತ್ತು ದಿನ ಬಹುಶಃ ಒಂದೇ ಆಗಿತ್ತು. (ವಿಮೋ. 19:1) ಹಾಗಾಗಿ ಹಿಂದೆ ಮೋಶೆಯು ಇಸ್ರಾಯೇಲ್ಯರನ್ನು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ ತಂದ ದಿನ ಮತ್ತು ನಂತರ ಯೇಸು ಅಭಿಷಿಕ್ತರನ್ನು ಹೊಸ ಒಡಂಬಡಿಕೆಯ ಕೆಳಗೆ ತಂದ ದಿನ ಬಹುಶಃ ಒಂದೇ ಆಗಿತ್ತೆಂದು ಹೇಳಬಹುದು.

^ [2] (ಪ್ಯಾರ 11) ಪುನಃ ಹುಟ್ಟುವುದರ ಅರ್ಥವೇನು ಎಂಬ ವಿವರಣೆಗಾಗಿ ಏಪ್ರಿಲ್‌ 1, 2009, ಕಾವಲಿನಬುರುಜು (ಇಂಗ್ಲಿಷ್‌) ಪುಟ 3-11 ನೋಡಿ.