ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ?

ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ?

“ನಮ್ಮ ದೇವರೇ, ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.”—1 ಪೂರ್ವ. 29:13.

ಗೀತೆಗಳು: 95, 58

1, 2. ಯೆಹೋವನು ಹೇಗೆ ಉದಾರತೆ ತೋರಿಸಿದ್ದಾನೆ?

ಯೆಹೋವನು ಉದಾರವಾಗಿ ಕೊಡುವ ದೇವರು. ನಮ್ಮ ಹತ್ತಿರ ಇರುವುದೆಲ್ಲ ಆತನು ಕೊಟ್ಟದ್ದೇ. ಭೂಮಿಯ ಅಮೂಲ್ಯ ನೈಸರ್ಗಿಕ ಸಂಪತ್ತೆಲ್ಲ ಆತನದ್ದೇ. ಅವುಗಳನ್ನು ಆತನು ಭೂಮಿಯ ಮೇಲಿರುವ ಜೀವಿಗಳನ್ನು ಪೋಷಿಸಲು ಬಳಸುತ್ತಾನೆ. (ಕೀರ್ತ. 104:13-15; ಹಗ್ಗಾ. 2:8) ಈ ಸಂಪತ್ತನ್ನು ಬಳಸಿ ಆತನು ತನ್ನ ಜನರನ್ನು ಕೆಲವೊಮ್ಮೆ ಅದ್ಭುತವಾಗಿ ಪೋಷಿಸಿದಂಥ ಘಟನೆಗಳು ಬೈಬಲಿನಲ್ಲಿವೆ.

2 ಉದಾಹರಣೆಗೆ, ಇಸ್ರಾಯೇಲ್‌ ಜನಾಂಗ 40 ವರ್ಷ ಅರಣ್ಯದಲ್ಲಿದ್ದಾಗ ಯೆಹೋವನು ಅವರಿಗೆ ಮನ್ನ ಮತ್ತು ನೀರು ಕೊಟ್ಟು ಪೋಷಿಸಿದನು. (ವಿಮೋ. 16:35) ಇದರಿಂದಾಗಿ “ಅವರಿಗೆ ಯಾವ ಕೊರತೆಯೂ ಇರಲಿಲ್ಲ.” (ನೆಹೆ. 9:20, 21) ನಂತರ ಪ್ರವಾದಿಯಾದ ಎಲೀಷನಿಗೆ ಯೆಹೋವನು ಶಕ್ತಿ ಕೊಟ್ಟು ನಂಬಿಗಸ್ತಳಾದ ಒಬ್ಬ ವಿಧವೆಯ ಹತ್ತಿರವಿದ್ದ ಸ್ವಲ್ಪ ಎಣ್ಣೆಯನ್ನು ಹೆಚ್ಚಿಸುವಂತೆ ಮಾಡಿದನು. ದೇವರು ಕೊಟ್ಟ ಈ ಸಹಾಯದಿಂದ ಆಕೆ ತನ್ನ ಸಾಲವನ್ನೆಲ್ಲ ತೀರಿಸಿದಳು ಮತ್ತು ತನಗೂ ತನ್ನ ಮಕ್ಕಳಿಗೂ ಜೀವನ ಮಾಡಲು ಬೇಕಾದಷ್ಟು ಹಣ ಸಂಪಾದಿಸಿದಳು. (2 ಅರ. 4:1-7) ಯೆಹೋವನ ಸಹಾಯದಿಂದ ಯೇಸು ಅದ್ಭುತ ಮಾಡಿ ಜನರಿಗೆ ಆಹಾರ ಕೊಟ್ಟನು. ತನಗೆ ಹಣ ಬೇಕಾದಾಗಲೂ ಅದ್ಭುತವಾಗಿ ಪಡೆದುಕೊಂಡನು.—ಮತ್ತಾ. 15:35-38; 17:27.

3. ಈ ಲೇಖನದಲ್ಲಿ ನಾವು ಏನು ಚರ್ಚಿಸಲಿದ್ದೇವೆ?

3 ಯೆಹೋವನಿಗೆ ತನ್ನ ಸೃಷ್ಟಿಯನ್ನು ಪೋಷಿಸಲು ಬೇಕಾದ ಸಂಪೂರ್ಣ ಸಾಮರ್ಥ್ಯವಿದೆ. ಆದರೂ ತನ್ನ ಸಂಘಟನೆಯ ಕೆಲಸವನ್ನು ಬೆಂಬಲಿಸಲು ತಮ್ಮಿಂದ ಸಾಧ್ಯವಿರುವುದನ್ನು ಕೊಡುವಂತೆ ತನ್ನ ಸೇವಕರಿಗೆ ಹೇಳುತ್ತಾನೆ. (ವಿಮೋ. 36:3-7; ಜ್ಞಾನೋಕ್ತಿ 3:9 ಓದಿ.) ನಮ್ಮ ಹತ್ತಿರ ಏನಿದೆಯೋ ಅದರಿಂದ ಯೆಹೋವನಿಗೆ ಕಾಣಿಕೆ ಕೊಡಬೇಕೆಂದು ಆತನು ಯಾಕೆ ಬಯಸುತ್ತಾನೆ? ಹಿಂದಿನ ಕಾಲದಲ್ಲಿ ಯೆಹೋವನ ಸೇವಕರು ಆತನ ಕೆಲಸಕ್ಕೆ ಹೇಗೆ ಬೆಂಬಲ ನೀಡಿದರು? ಇಂದು ನಾವು ಕಾಣಿಕೆಯಾಗಿ ಕೊಡುವ ಹಣವನ್ನು ಸಂಘಟನೆ ಹೇಗೆ ಬಳಸುತ್ತಿದೆ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ.

ನಾವು ಯೆಹೋವನಿಗೆ ಯಾಕೆ ಕಾಣಿಕೆ ಕೊಡಬೇಕು?

4. ನಾವು ಯೆಹೋವನ ಕೆಲಸವನ್ನು ಬೆಂಬಲಿಸುವಾಗ ಏನು ತೋರಿಸಿಕೊಡುತ್ತೇವೆ?

4 ನಮಗೆ ಯೆಹೋವನ ಮೇಲೆ ಪ್ರೀತಿ ಮತ್ತು ಕೃತಜ್ಞತಾಭಾವ ಇರುವುದರಿಂದ ಕಾಣಿಕೆ ಕೊಡುತ್ತೇವೆ. ಆತನು ನಮಗೋಸ್ಕರ ಏನೆಲ್ಲಾ ಮಾಡಿದ್ದಾನೋ ಅದರ ಬಗ್ಗೆ ಯೋಚಿಸುವಾಗ ನಮ್ಮ ಹೃದಯಾಳದಿಂದ ಕಾಣಿಕೆ ಕೊಡಲು ಪ್ರೇರಣೆ ಸಿಗುತ್ತದೆ. ರಾಜ ದಾವೀದನು ಆಲಯವನ್ನು ಕಟ್ಟಲು ಏನು ಅಗತ್ಯ ಎಂದು ವಿವರಿಸುವ ಸಮಯದಲ್ಲಿ ಆತನಿಗೂ ಹೀಗೇ ಅನಿಸಿತ್ತು. ನಮ್ಮ ಹತ್ತಿರ ಇರುವುದೆಲ್ಲವನ್ನೂ ಕೊಟ್ಟವನು ಯೆಹೋವನು ಮತ್ತು ನಾವು ಆತನಿಗೆ ಏನೇ ಕೊಟ್ಟರೂ ಅದೆಲ್ಲವೂ ಆತನು ನಮಗೆ ಈಗಾಗಲೇ ಕೊಟ್ಟಿರುವುದೇ ಎಂದು ದಾವೀದ ಹೇಳಿದನು.—1 ಪೂರ್ವಕಾಲವೃತ್ತಾಂತ 29:11-14 ಓದಿ.

5. ನಿಸ್ವಾರ್ಥಭಾವದಿಂದ ಕಾಣಿಕೆ ಕೊಡುವುದು ಸತ್ಯಾರಾಧನೆಯ ಭಾಗವಾಗಿದೆ ಎಂದು ಬೈಬಲ್‌ ಹೇಗೆ ಕಲಿಸುತ್ತದೆ?

5 ಯೆಹೋವನಿಗೆ ಕಾಣಿಕೆ ಕೊಡುವುದು ನಮ್ಮ ಆರಾಧನೆಯ ಭಾಗವೂ ಆಗಿದೆ. ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ ಸ್ವರ್ಗದಲ್ಲಿರುವ ಯೆಹೋವನ ಸೇವಕರು ಹೀಗೆ ಹೇಳುವುದನ್ನು ಕೇಳಿಸಿಕೊಂಡನು: “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.” (ಪ್ರಕ. 4:11) ಹೌದು ಯೆಹೋವನು ನಮ್ಮ ಎಲ್ಲ ಮಹಿಮೆ, ಗೌರವವನ್ನು ಪಡೆಯಲು ಅರ್ಹನಾಗಿದ್ದಾನೆ. ಆದ್ದರಿಂದ ಆತನಿಗೆ ಅತ್ಯುತ್ತಮವಾದದ್ದನ್ನು ಕೊಡಬೇಕು. ಇಸ್ರಾಯೇಲ್ಯರು ವರ್ಷಕ್ಕೆ ಮೂರು ಹಬ್ಬಗಳನ್ನು ಮಾಡುವಂತೆ ಮೋಶೆಯ ಮೂಲಕ ಯೆಹೋವನು ಹೇಳಿದನು. ಆ ಹಬ್ಬಗಳ ಸಮಯದಲ್ಲಿ ಜನರು ಯೆಹೋವನಿಗೆ ಕಾಣಿಕೆ ಕೊಡಬೇಕಿತ್ತು. ಅದು ಅವರ ಆರಾಧನೆಯ ಭಾಗವಾಗಿತ್ತು. “ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಕೂಡದು” ಎಂದು ಜನರಿಗೆ ಹೇಳಲಾಗಿತ್ತು. (ಧರ್ಮೋ. 16:16) ಇಂದು ಕೂಡ ನಾವು ನಿಸ್ವಾರ್ಥಭಾವದಿಂದ ಕಾಣಿಕೆ ಕೊಡುವಾಗ ಯೆಹೋವನ ಸಂಘಟನೆಯ ಕೆಲಸವನ್ನು ಮಾನ್ಯಮಾಡುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ.

6. ಉದಾರವಾಗಿ ಕೊಡುವುದು ಯಾಕೆ ಒಳ್ಳೇದು? (ಲೇಖನದ ಆರಂಭದ ಚಿತ್ರ ನೋಡಿ.)

6 ನಾವು ಉದಾರವಾಗಿ ಕೊಡುವುದರಿಂದ ನಮಗೆ ಒಳ್ಳೇದಾಗುತ್ತದೆ. ನಾವು ಪಡೆದುಕೊಳ್ಳುವುದು ಮಾತ್ರವಲ್ಲ ಕೊಡಲೂ ಸಿದ್ಧರಿರಬೇಕು. (ಜ್ಞಾನೋಕ್ತಿ 29:21 ಓದಿ.) ಒಂದು ಚಿಕ್ಕ ಮಗು ತನ್ನ ಹೆತ್ತವರು ಆಗಾಗ ಕೊಟ್ಟ ಸ್ವಲ್ಪ ಹಣವನ್ನು ಕೂಡಿಸಿಟ್ಟು ಒಂದು ಉಡುಗೊರೆಯನ್ನು ಖರೀದಿಸಿ ಅವರಿಗೆ ಕೊಡುವುದನ್ನು ಊಹಿಸಿಕೊಳ್ಳಿ. ಆ ಹೆತ್ತವರಿಗೆ ಎಷ್ಟು ಖುಷಿಯಾಗುತ್ತದೆ! ಅಥವಾ ಇದನ್ನು ಚಿತ್ರಿಸಿಕೊಳ್ಳಿ. ತನ್ನ ತಂದೆತಾಯಿ ಜೊತೆ ಇರುವ ಒಬ್ಬ ಯುವ ಪಯನೀಯರನು, ಮನೆಯ ಬಾಡಿಗೆ ಕಟ್ಟಲು ಅಥವಾ ಅಡಿಗೆ ಸಾಮಾನು ತರಲು ಸಹಾಯವಾಗಲಿ ಎಂದು ಸ್ವಲ್ಪ ಹಣ ಕೊಡುತ್ತಾನೆ. ತಮ್ಮ ಮಗ ಇದನ್ನು ಮಾಡಬೇಕು ಎಂದು ಆ ಹೆತ್ತವರು ಬಯಸಿರಲಿಕ್ಕಿಲ್ಲ. ಆದರೂ ಆ ಸಹಾಯವನ್ನು ಅವರು ಸ್ವೀಕರಿಸುತ್ತಾರೆ. ಯಾಕೆ? ಹೆತ್ತವರು ಅವನಿಗಾಗಿ ಏನೆಲ್ಲಾ ಮಾಡುತ್ತಿದ್ದಾರೋ ಅದಕ್ಕೆ ಅವನು ಈ ರೀತಿ ಕೃತಜ್ಞತೆ ತೋರಿಸುತ್ತಿದ್ದಾನೆ ಎಂದು ಅವರಿಗೆ ಗೊತ್ತು. ಅದೇ ರೀತಿ ನಮ್ಮ ಹತ್ತಿರ ಏನಿದೆಯೋ ಅದರಿಂದ ಯೆಹೋವನಿಗೆ ಕಾಣಿಕೆ ಕೊಡುವುದು ನಮಗೆ ಒಳ್ಳೇದು ಎಂದು ಆತನಿಗೆ ಗೊತ್ತು.

ಹಿಂದಿನ ಕಾಲದಲ್ಲಿ ದೇವರ ಸೇವಕರು ಕೊಟ್ಟ ಕಾಣಿಕೆ

7, 8. ಹಿಂದಿನ ಕಾಲದ ದೇವಜನರು (ಎ) ಕೆಲವು ನಿರ್ದಿಷ್ಟ ಕೆಲಸಕ್ಕೆ ಕಾಣಿಕೆ ಕೊಡುವ ವಿಷಯದಲ್ಲಿ ಯಾವ ಒಳ್ಳೇ ಮಾದರಿ ಇಟ್ಟಿದ್ದಾರೆ? (ಬಿ) ಮುಂದಾಳತ್ವ ವಹಿಸುವವರನ್ನು ಬೆಂಬಲಿಸುವ ವಿಷಯದಲ್ಲಿ ಯಾವ ಒಳ್ಳೇ ಮಾದರಿ ಇಟ್ಟಿದ್ದಾರೆ?

7 ಯೆಹೋವನ ಜನರು ಆತನ ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟು ಬೆಂಬಲಿಸಿದ್ದರ ಬಗ್ಗೆ ಬೈಬಲಲ್ಲಿದೆ. ಅವರು ಕೆಲವೊಮ್ಮೆ ನಿರ್ದಿಷ್ಟ ಕೆಲಸಗಳಿಗೋಸ್ಕರ ಕಾಣಿಕೆ ಕೊಟ್ಟರು. ಉದಾಹರಣೆಗೆ, ದೇವದರ್ಶನ ಗುಡಾರವನ್ನು ಕಟ್ಟಲು ಕಾಣಿಕೆ ಕೊಡುವಂತೆ ಮೋಶೆ ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸಿದನು. ಮುಂದೆ, ದೇವಾಲಯವನ್ನು ಕಟ್ಟಬೇಕಾದ ಸಮಯದಲ್ಲೂ ರಾಜ ದಾವೀದನು ಕಾಣಿಕೆ ಕೇಳಿದನು. (ವಿಮೋ. 35:5; 1 ಪೂರ್ವ. 29:5-9) ರಾಜ ಯೆಹೋವಾಷನ ಕಾಲದಲ್ಲಿ, ಆಲಯವನ್ನು ರಿಪೇರಿ ಮಾಡಲು ಜನರು ಕೊಟ್ಟ ಕಾಣಿಕೆಯನ್ನು ಯಾಜಕರು ಬಳಸಿದರು. (2 ಅರ. 12:4, 5) ಒಂದನೇ ಶತಮಾನದಲ್ಲಿ, ಯೂದಾಯದಲ್ಲಿ ಕ್ಷಾಮ ಬಂದಾಗ ಅಲ್ಲಿದ್ದ ಸಹೋದರರಿಗೆ ಕ್ರೈಸ್ತರು ಸಹಾಯ ಮಾಡಿದರು. ಆಗ ಪ್ರತಿಯೊಬ್ಬ ಕ್ರೈಸ್ತನು ತನ್ನಿಂದ ಏನು ಕೊಡಲು ಆಯಿತೋ ಅದನ್ನು ಕಳುಹಿಸಿಕೊಟ್ಟನು.—ಅ. ಕಾ. 11:27-30.

8 ಯೆಹೋವನ ಜನರು ಆತನ ಕೆಲಸದಲ್ಲಿ ಮುಂದಾಳತ್ವ ವಹಿಸುವವರನ್ನು ಬೆಂಬಲಿಸಲು ಸಹ ಧನಸಹಾಯ ಮಾಡಿದರು. ಉದಾಹರಣೆಗೆ, ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಬೇರೆಲ್ಲ ಕುಲಗಳಿಗೆ ಸಿಗುವ ಹಾಗೆ ಲೇವಿಯರಿಗೆ ಸ್ವಾಸ್ತ್ಯ ಸಿಗಲಿಲ್ಲ. ಆದ್ದರಿಂದ ಉಳಿದ ಇಸ್ರಾಯೇಲ್ಯರು ತಮ್ಮ ಹತ್ತಿರ ಇದ್ದದರಲ್ಲಿ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ಕೊಡಬೇಕಾಗಿತ್ತು. ಇದು ದೇವದರ್ಶನ ಗುಡಾರದಲ್ಲಿ ಲೇವಿಯರಿಗಿದ್ದ ಕೆಲಸಕ್ಕೆ ಅವರು ಸಂಪೂರ್ಣ ಗಮನಕೊಡಲು ಸಹಾಯ ಮಾಡಿತು. (ಅರ. 18:21) ಅದೇ ರೀತಿ ಯೇಸುವನ್ನು ಮತ್ತು ಅವನ ಅಪೊಸ್ತಲರನ್ನು ಬೆಂಬಲಿಸಲು ಕೆಲವು ಮಹಿಳೆಯರು ಉದಾರವಾಗಿ ಧನಸಹಾಯ ಮಾಡುತ್ತಿದ್ದರು.—ಲೂಕ 8:1-3.

9. ಹಿಂದಿನ ಕಾಲದಲ್ಲಿ ದೇವಜನರು ಕೊಟ್ಟ ಕಾಣಿಕೆಗಳು ಯಾವ ಮೂಲದಿಂದ ಬಂದವು?

9 ಹಿಂದಿನ ಕಾಲದಲ್ಲಿ ದೇವಜನರು ಕೊಟ್ಟ ಕಾಣಿಕೆಗಳು ಯಾವ ಮೂಲದಿಂದ ಬಂದವು? ಇಸ್ರಾಯೇಲ್ಯರು ಬಹುಶಃ ಐಗುಪ್ತದಿಂದ ಬರುವಾಗ ತಂದ ಬೆಲೆಬಾಳುವ ವಸ್ತುಗಳನ್ನು ದೇವದರ್ಶನ ಗುಡಾರ ಕಟ್ಟಲು ಕೊಟ್ಟರು. (ವಿಮೋ. 3:21, 22; 35:22-24) ಒಂದನೇ ಶತಮಾನದಲ್ಲಿ, ಕೆಲವು ಕ್ರೈಸ್ತರು ತಮ್ಮ ಮನೆ, ಹೊಲ ಇಂಥದ್ದನ್ನು ಮಾರಿ ಬಂದ ಹಣವನ್ನು ಅಪೊಸ್ತಲರಿಗೆ ಕೊಟ್ಟರು. ಆ ಹಣವನ್ನು ಅಪೊಸ್ತಲರು ಯಾರಿಗೆ ಅಗತ್ಯವಿತ್ತೋ ಅಂಥ ಸಹೋದರ ಸಹೋದರಿಯರಿಗೆ ಸಹಾಯ ಮಾಡಲು ಬಳಸಿದರು. (ಅ. ಕಾ. 4:34, 35) ಇನ್ನು ಕೆಲವು ಕ್ರೈಸ್ತರು ಯೆಹೋವನ ಕೆಲಸಕ್ಕೆಂದು ಒಂದಿಷ್ಟು ಹಣವನ್ನು ಯಾವಾಗಲೂ ತೆಗೆದಿಡುತ್ತಿದ್ದರು. (1 ಕೊರಿಂ. 16:2) ಹೀಗೆ ಅತಿ ಶ್ರೀಮಂತರಾಗಲಿ ಕಡುಬಡವರಾಗಲಿ ಎಲ್ಲರೂ ತಮ್ಮಿಂದಾದ ಕಾಣಿಕೆಯನ್ನು ಕೊಟ್ಟರು.—ಲೂಕ 21:1-4.

ಇಂದು ನಾವು ಕೊಡುವ ಕಾಣಿಕೆ

10, 11. (ಎ) ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರ ಉದಾರತೆಯನ್ನು ನಾವು ಹೇಗೆ ಅನುಕರಿಸಬಹುದು? (ಬಿ) ರಾಜ್ಯದ ಕೆಲಸಕ್ಕೆ ಬೆಂಬಲ ನೀಡುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ?

10 ಇಂದು ನಾವು ಕೂಡ ಯಾವುದಾದರೂ ನಿರ್ದಿಷ್ಟ ಕೆಲಸಕ್ಕೆ ಕಾಣಿಕೆ ಕೊಡಬೇಕಾಗಿ ಬರಬಹುದು. ಉದಾಹರಣೆಗೆ, ನಿಮ್ಮ ಸಭೆಯವರು ರಾಜ್ಯ ಸಭಾಗೃಹವನ್ನು ನವೀಕರಿಸುವ ಅಥವಾ ಹೊಸ ರಾಜ್ಯ ಸಭಾಗೃಹವನ್ನು ಕಟ್ಟುವ ಯೋಚನೆ ಮಾಡುತ್ತಿರಬಹುದು. ಅಥವಾ ನಿಮ್ಮ ದೇಶದಲ್ಲಿರುವ ಶಾಖಾ ಕಚೇರಿಯನ್ನು ನವೀಕರಿಸಬೇಕಾಗಿರಬಹುದು. ಅಧಿವೇಶನದ ಖರ್ಚುವೆಚ್ಚವನ್ನು ನಿಭಾಯಿಸಲು ಕೂಡ ನಾವು ಸಹಾಯ ಮಾಡಬಹುದು. ನೈಸರ್ಗಿಕ ವಿಪತ್ತಿಗೆ ತುತ್ತಾಗಿರುವ ನಮ್ಮ ಸಹೋದರ ಸಹೋದರಿಯರಿಗೆ ನೆರವಿನ ಅಗತ್ಯವಿರಬಹುದು. ನಾವು ಕೊಡುವ ಕಾಣಿಕೆಗಳು ಮಿಷನರಿಗಳಿಗೆ, ವಿಶೇಷ ಪಯನೀಯರರಿಗೆ, ಸರ್ಕಿಟ್‌ ಮೇಲ್ವಿಚಾರಕರಿಗೆ, ಮುಖ್ಯ ಕಾರ್ಯಾಲಯ ಮತ್ತು ಶಾಖಾ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡಲು ಸಹ ಬಳಸಲಾಗುತ್ತದೆ. ಲೋಕದ ಬೇರೆ ಕಡೆಗಳಲ್ಲಿ ಸಮ್ಮೇಳನ ಸಭಾಂಗಣ ಮತ್ತು ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯಕ್ಕೆ ನೆರವಾಗಲು ನಿಮ್ಮ ಸಭೆ ಪ್ರತಿ ತಿಂಗಳು ಕಾಣಿಕೆ ಕಳುಹಿಸುತ್ತಿರಬಹುದು.

11 ಈ ಕಡೇ ದಿವಸಗಳಲ್ಲಿ ಯೆಹೋವನ ಸಂಘಟನೆ ಮಾಡುತ್ತಿರುವ ಕೆಲಸವನ್ನು ಬೆಂಬಲಿಸಲು ನಾವೆಲ್ಲರೂ ಏನಾದರೊಂದು ಸಹಾಯ ಖಂಡಿತ ಮಾಡಬಹುದು. ಸಂಘಟನೆಗೆ ಎಷ್ಟೋ ಕಾಣಿಕೆಗಳು ಅನಾಮಧೇಯವಾಗಿ ಬರುತ್ತವೆ. ನಾವು ರಾಜ್ಯ ಸಭಾಗೃಹದಲ್ಲಿರುವ ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕುವಾಗ ಅಥವಾ jw.org ವೆಬ್‌ಸೈಟ್‌ ಮೂಲಕ ಕಳುಹಿಸುವಾಗ ಎಷ್ಟು ಕಾಣಿಕೆ ಕೊಡುತ್ತಿದ್ದೇವೆ ಎಂದು ಬೇರೆಯವರಿಗೆ ಗೊತ್ತಾಗುವುದಿಲ್ಲ. ಆದರೆ ನೀವು ಕೊಡುತ್ತಿರುವ ಕಾಣಿಕೆ ತುಂಬ ಕಡಿಮೆ ಎಂದು ನಿಮಗೆ ಅನಿಸಬಹುದು. ನಿಜವೇನೆಂದರೆ, ಸಂಘಟನೆಗೆ ಬರುವ ಕಾಣಿಕೆಗಳಲ್ಲಿ ದೊಡ್ಡ ಮೊತ್ತದ ಕಾಣಿಕೆಗಳಿಗಿಂತ ಚಿಕ್ಕ ಮೊತ್ತದ ಕಾಣಿಕೆಗಳೇ ಹೆಚ್ಚು. ತುಂಬ ಕಡಿಮೆ ಹಣ ಇರುವ ಸಹೋದರರು ಸಹ ಮಕೆದೋನ್ಯದಲ್ಲಿದ್ದ ಕ್ರೈಸ್ತರ ಮಾದರಿಯನ್ನು ಅನುಕರಿಸುತ್ತಾರೆ. ಅವರು ‘ಕಡುಬಡತನದಲ್ಲಿ’ ಇದ್ದರೂ ಕಾಣಿಕೆ ಕೊಡಲು ತಮಗೂ ಅವಕಾಶ ಕೊಡುವಂತೆ ಬೇಡಿಕೊಂಡರು ಮತ್ತು ಉದಾರವಾಗಿ ಕೊಟ್ಟರು.—2 ಕೊರಿಂ. 8:1-4.

12. ಸಂಘಟನೆ ಕಾಣಿಕೆಗಳನ್ನು ಒಳ್ಳೇ ರೀತಿಯಲ್ಲಿ ಉಪಯೋಗಿಸಲು ಏನು ಮಾಡುತ್ತದೆ?

12 ಆಡಳಿತ ಮಂಡಲಿ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಮತ್ತು ವಿವೇಚನೆಯಿಂದ ಬಳಸುತ್ತದೆ. (ಮತ್ತಾ. 24:45) ಅದರ ಸದಸ್ಯರು ಕಾಣಿಕೆಗಳ ವಿಷಯದಲ್ಲಿ ಒಳ್ಳೇ ತೀರ್ಮಾನಗಳನ್ನು ಮಾಡಲು ಪ್ರಾರ್ಥಿಸುತ್ತಾರೆ ಮತ್ತು ಬಂದ ಹಣವನ್ನು ಒಳ್ಳೇ ಯೋಜನೆ ಮಾಡಿ ಬಳಸುತ್ತಾರೆ. (ಲೂಕ 14:28) ಹಿಂದಿನ ಕಾಲದಲ್ಲಿ ಕಾಣಿಕೆಗಳ ಉಸ್ತುವಾರಿ ವಹಿಸುತ್ತಿದ್ದ ನಂಬಿಗಸ್ತ ಪುರುಷರು ಯೆಹೋವನ ಆರಾಧನೆಗೆ ಮಾತ್ರ ಅವು ಬಳಕೆಯಾಗುವಂತೆ ನೋಡಿಕೊಂಡರು. ಉದಾಹರಣೆಗೆ, ಎಜ್ರನು ಯೆರೂಸಲೇಮಿಗೆ ಹಿಂದಿರುಗಿದಾಗ ಪಾರಸೀಯ ರಾಜನು ಅವನಿಗೆ ಚಿನ್ನ, ಬೆಳ್ಳಿಯಂಥ ಬೆಲೆಬಾಳುವ ಕಾಣಿಕೆಗಳನ್ನು ಕೊಟ್ಟು ಕಳುಹಿಸಿದನು. ಆ ಕಾಣಿಕೆಯ ಮೌಲ್ಯ ಇಂದು 640 ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಯುಳ್ಳದ್ದಾಗಿತ್ತು. ಈ ಕಾಣಿಕೆಯನ್ನು ಯೆಹೋವನಿಗೆ ಕೊಟ್ಟ ಉಡುಗೊರೆ ಎಂದೇ ಎಜ್ರನು ಭಾವಿಸಿದನು. ಆದ್ದರಿಂದ ಅದನ್ನು ತೆಗೆದುಕೊಂಡು ಅಪಾಯಕಾರಿ ಊರುಗಳನ್ನು ದಾಟಿ ಹೋಗುವಾಗ ಹೇಗೆ ಸಂರಕ್ಷಿಸಬೇಕು ಎಂದು ನಿರ್ದಿಷ್ಟ ಸೂಚನೆಗಳನ್ನು ಕೊಟ್ಟನು. (ಎಜ್ರ 8:24-34) ಅಪೊಸ್ತಲ ಪೌಲನು ಯೂದಾಯದ ಸಹೋದರರಿಗೆ ಸಹಾಯದ ಅಗತ್ಯವಿದ್ದಾಗ ಹಣ ಸಂಗ್ರಹಿಸಿದನು. ಆ ಹಣವನ್ನು ಅಪೊಸ್ತಲರ ಕೈಗೆ ಕೊಡಲು ಹೋದವರು “ಯೆಹೋವನ ದೃಷ್ಟಿಯಲ್ಲಿ ಮಾತ್ರವಲ್ಲ ಮನುಷ್ಯರ ದೃಷ್ಟಿಯಲ್ಲಿಯೂ ಪ್ರಾಮಾಣಿಕ ರೀತಿಯಲ್ಲಿ” ನಡಕೊಳ್ಳುತ್ತಾರೆ ಅನ್ನುವುದನ್ನು ಪೌಲನು ಖಚಿತಪಡಿಸಿದನು. (2 ಕೊರಿಂಥ 8:18-21 ಓದಿ.) ಇಂದು ಕೂಡ ನಮ್ಮ ಸಂಘಟನೆ ಎಜ್ರ ಮತ್ತು ಪೌಲನಂತೆ ಕಾಣಿಕೆಗಳನ್ನು ತುಂಬ ಜಾಗ್ರತೆಯಿಂದ ಉಪಯೋಗಿಸುತ್ತದೆ.

13. ಇತ್ತೀಚೆಗೆ ಸಂಘಟನೆ ಯಾಕೆ ಕೆಲವು ಬದಲಾವಣೆಗಳನ್ನು ಮಾಡಿದೆ?

13 ಸಾಮಾನ್ಯವಾಗಿ ಕುಟುಂಬಗಳು ಆದಾಯಕ್ಕಿಂತ ಖರ್ಚು ಜಾಸ್ತಿ ಆಗದಂತೆ ನೋಡಿಕೊಳ್ಳಲು ಕೆಲವು ಬದಲಾವಣೆಗಳನ್ನು ಮಾಡುತ್ತವೆ. ಅಥವಾ ಯೆಹೋವನ ಸೇವೆಯನ್ನು ಹೆಚ್ಚಿಸಲು ತಮ್ಮ ಜೀವನವನ್ನು ಸರಳಮಾಡಿಕೊಳ್ಳುತ್ತವೆ. ಯೆಹೋವನ ಸಂಘಟನೆ ಕೂಡ ಇದನ್ನೇ ಮಾಡುತ್ತದೆ. ಇತ್ತೀಚೆಗೆ ಸಂಘಟನೆ ಅನೇಕ ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿತು. ಕೆಲವೊಂದು ಪ್ರಾಜೆಕ್ಟ್‌ಗಳಿಗೆ ಬಂದ ಕಾಣಿಕೆಗಿಂತ ಖರ್ಚು ಹೆಚ್ಚಾಗಿತ್ತು. ಆದ್ದರಿಂದ ಸಂಘಟನೆ ಒಂದು ಕುಟುಂಬದಂತೆ ಹಣವನ್ನು ಉಳಿತಾಯ ಮಾಡಲು, ಕೆಲಸವನ್ನು ಸರಳೀಕರಿಸಲು ಪ್ರಯತ್ನಿಸುತ್ತದೆ. ಹೀಗೆ ನಾವು ಉದಾರವಾಗಿ ಕೊಡುವ ಕಾಣಿಕೆಗಳನ್ನು ಒಳ್ಳೇ ರೀತಿಯಲ್ಲಿ ಬಳಸಲು ಸಾಧ್ಯವಾಗುತ್ತಿದೆ.

ನಿಮ್ಮ ಕಾಣಿಕೆಗಳಿಂದ ಆಗುತ್ತಿರುವ ಪ್ರಯೋಜನಗಳು

ನೀವು ಕೊಡುವ ಕಾಣಿಕೆಗಳು ಲೋಕವ್ಯಾಪಕವಾಗಿ ನಡೆಯುವ ನಮ್ಮ ಕೆಲಸಕ್ಕೆ ಸಹಾಯ ಮಾಡುತ್ತವೆ (ಪ್ಯಾರ 14-16 ನೋಡಿ)

14-16. (ಎ) ನಿಮ್ಮ ಕಾಣಿಕೆಗಳನ್ನು ಯಾವುದಕ್ಕೆಲ್ಲ ಬಳಸಲಾಗುತ್ತದೆ? (ಬಿ) ಸಂಘಟನೆ ಕೊಡುತ್ತಿರುವ ಉಡುಗೊರೆಗಳಿಂದ ನೀವು ಹೇಗೆ ಪ್ರಯೋಜನ ಪಡೆದಿದ್ದೀರಿ?

14 ಸಂಘಟನೆ ನಮಗೆ ಈಗ ಹೆಚ್ಚೆಚ್ಚು ಉಡುಗೊರೆ ಕೊಡುತ್ತಿದೆ ಎಂದು ತುಂಬ ವರ್ಷಗಳಿಂದ ಸತ್ಯದಲ್ಲಿರುವವರು ಹೇಳುತ್ತಾರೆ. ಈಗ jw.org ಮತ್ತು JW ಪ್ರಸಾರ ಇದೆ. ಅನೇಕ ಭಾಷೆಗಳಲ್ಲಿ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಬೈಬಲ್‌ ಇದೆ. 2014/2015​ರಲ್ಲಿ “ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ!” ಎಂಬ ಮೂರು ದಿನದ ಅಂತಾರಾಷ್ಟ್ರೀಯ ಅಧಿವೇಶನವು ಲೋಕದ 14 ನಗರಗಳಲ್ಲಿರುವ ದೊಡ್ಡ ಸ್ಟೇಡಿಯಂಗಳಲ್ಲಿ ನಡೆಯಿತು. ಅದಕ್ಕೆ ಹಾಜರಾದವರೆಲ್ಲರೂ ತುಂಬ ಖುಷಿಪಟ್ಟರು!

15 ಯೆಹೋವನ ಸಂಘಟನೆ ಈ ಉಡುಗೊರೆಗಳನ್ನು ಕೊಡುತ್ತಿರುವುದಕ್ಕೆ ಅನೇಕರು ತುಂಬ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಏಷ್ಯಾದಲ್ಲಿ ಸೇವೆ ಮಾಡುತ್ತಿರುವ ಒಂದು ದಂಪತಿ ಹೀಗೆ ಹೇಳುತ್ತಾರೆ: “ನಾವು ಒಂದು ಚಿಕ್ಕ ನಗರದಲ್ಲಿ ಸೇವೆ ಮಾಡುತ್ತಾ ಇದ್ದೇವೆ. ಹಾಗಾಗಿ ಕೆಲವೊಮ್ಮೆ ಒಂಟಿತನ ಕಾಡುತ್ತೆ. ಅಲ್ಲದೆ, ಯೆಹೋವನ ಕೆಲಸ ಎಷ್ಟು ವ್ಯಾಪಕವಾಗಿ ನಡೆಯುತ್ತಿದೆ ಅನ್ನೋದನ್ನೂ ಮರೆತುಬಿಡುತ್ತೇವೆ. ಆದರೆ JW ಪ್ರಸಾರದಲ್ಲಿ ಬರುವ ಕಾರ್ಯಕ್ರಮಗಳನ್ನು ನೋಡಿದ ಕೂಡಲೆ ನಮಗೊಂದು ಅಂತಾರಾಷ್ಟ್ರೀಯ ಸಹೋದರ ಬಳಗ ಇದೆ ಅಂತ ನೆನಪಾಗುತ್ತೆ. ಇಲ್ಲಿರುವ ನಮ್ಮ ಪ್ರಿಯ ಸಹೋದರ ಸಹೋದರಿಯರು ಕೂಡ JW ಪ್ರಸಾರದ ಕಾರ್ಯಕ್ರಮಗಳನ್ನು ನೋಡೋಕೆ ಕಾಯ್ತಾ ಇರುತ್ತಾರೆ. ಪ್ರತಿ ತಿಂಗಳ ಕಾರ್ಯಕ್ರಮವನ್ನು ನೋಡಿದ ಮೇಲೆ ಆಡಳಿತ ಮಂಡಲಿಯ ಸದಸ್ಯರಿಗೆ ತಾವು ತುಂಬ ಹತ್ತಿರದಲ್ಲಿದ್ದೇವೆ ಎಂದನಿಸುತ್ತೆ ಅಂತ ನಮ್ಮ ಸಹೋದರರು ಹೇಳುವುದನ್ನು ನಾವು ಎಷ್ಟೋ ಸಾರಿ ಕೇಳಿಸಿಕೊಂಡಿದ್ದೇವೆ. ಅವರು ದೇವರ ಸಂಘಟನೆಯ ಭಾಗವಾಗಿರುವುದಕ್ಕೆ ಮುಂಚೆಗಿಂತಲೂ ಈಗ ಹೆಚ್ಚು ಹೆಮ್ಮೆಯಾಗುತ್ತೆ ಅಂತ ಹೇಳುತ್ತಾರೆ.”

16 ಲೋಕದೆಲ್ಲೆಡೆ ಸುಮಾರು 2,500 ರಾಜ್ಯ ಸಭಾಗೃಹಗಳನ್ನು ಈಗ ಕಟ್ಟಲಾಗುತ್ತಿದೆ ಅಥವಾ ನವೀಕರಿಸಲಾಗುತ್ತಿದೆ. ಒಂದು ಸ್ವಂತ ರಾಜ್ಯ ಸಭಾಗೃಹ ಇರಬೇಕು ಎನ್ನುವುದು ಹೊಂಡುರಾಸ್‌ ದೇಶದಲ್ಲಿರುವ ಒಂದು ಸಭೆಯ ಸದಸ್ಯರ ಕನಸಾಗಿತ್ತು.ಅದೀಗ ನನಸಾಗಿದೆ. ಅವರು ಬರೆದದ್ದು: “ನಾವು ಯೆಹೋವನ ವಿಶ್ವವ್ಯಾಪಿ ಕುಟುಂಬದ ಭಾಗವಾಗಿರುವುದಕ್ಕೆ ಮತ್ತು ಲೋಕವ್ಯಾಪಕ ಸಹೋದರತ್ವವನ್ನು ಆನಂದಿಸುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ.” ಇದೇ ಸಂತೋಷವನ್ನು ಅನೇಕರು ಬೈಬಲ್‌ ಮತ್ತು ಇತರ ಪ್ರಕಾಶನಗಳನ್ನು ತಮ್ಮ ಭಾಷೆಯಲ್ಲಿ ಪಡೆದುಕೊಂಡಾಗ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ನೈಸರ್ಗಿಕ ವಿಪತ್ತು ಸಂಭವಿಸಿದ ಸಮಯದಲ್ಲಿ ಸಹೋದರ ಸಹೋದರಿಯರಿಂದ ಸಹಾಯ ಪಡೆದುಕೊಂಡಾಗ ಅಥವಾ ಮಹಾನಗರ ಸಾಕ್ಷಿಕಾರ್ಯದಲ್ಲಿ ಮತ್ತು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಒಳ್ಳೇ ಫಲಿತಾಂಶಗಳು ಸಿಕ್ಕಿದಾಗ ಸಂತೋಷ ವ್ಯಕ್ತಪಡಿಸುತ್ತಾರೆ.

17. ಯೆಹೋವನು ತನ್ನ ಸಂಘಟನೆಯನ್ನು ಇಂದು ಬೆಂಬಲಿಸುತ್ತಿದ್ದಾನೆ ಎಂದು ನಮಗೆ ಹೇಗೆ ಗೊತ್ತು?

17 ಯೆಹೋವನ ಸಾಕ್ಷಿಗಳು ಕೇವಲ ಸ್ವಯಂಪ್ರೇರಿತ ಕಾಣಿಕೆಗಳಿಂದ ಇಷ್ಟೆಲ್ಲ ಹೇಗೆ ಸಾಧಿಸುತ್ತಾರೆ ಎಂದು ಅನೇಕರು ಆಶ್ಚರ್ಯಪಡುತ್ತಾರೆ. ನಮ್ಮ ಒಂದು ಮುದ್ರಣಾಲಯವನ್ನು ಒಂದು ದೊಡ್ಡ ಕಂಪನಿಯ ಅಧಿಕಾರಿಯೊಬ್ಬರು ಬಂದು ನೋಡಿದರು. ಅಲ್ಲಿ ಎಲ್ಲ ಕೆಲಸವನ್ನು ಸ್ವಯಂಪ್ರೇರಿತ ದಾನಗಳ ಸಹಾಯದಿಂದ ಸ್ವಯಂಸೇವಕರು ಮಾಡುತ್ತಾರೆ ಮತ್ತು ಈ ಕೆಲಸಕ್ಕಾಗಿ ಯಾವುದೇ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಣ ಸಂಗ್ರಹಿಸುವುದಿಲ್ಲ ಎಂದು ತಿಳಿದಾಗ ಅವರಿಗೆ ಆಶ್ಚರ್ಯವಾಯಿತು. ನಾವು ಮಾಡುತ್ತಿರುವುದು ಅಸಾಧ್ಯವಾದ ವಿಷಯ ಎಂದವರು ಹೇಳಿದರು. ಅವರು ಹೇಳಿದ್ದು ಸತ್ಯಾನೇ. ನಮ್ಮಿಂದ ಇದನ್ನು ಸಾಧಿಸಲು ಸಾಧ್ಯವಿಲ್ಲ! ಯೆಹೋವನ ಸಹಾಯದಿಂದ ಮಾತ್ರ ಇದು ಸಾಧ್ಯ ಎಂದು ನಮಗೆ ಗೊತ್ತು.—ಯೋಬ 42:2.

ಯೆಹೋವನಿಗೆ ಕಾಣಿಕೆ ಕೊಡುವುದರಿಂದ ಸಿಗುವ ಆಶೀರ್ವಾದಗಳು

18. (ಎ) ರಾಜ್ಯವನ್ನು ಬೆಂಬಲಿಸುವುದರಿಂದ ನಮಗೆ ಯಾವ ಆಶೀರ್ವಾದಗಳು ಸಿಗುತ್ತವೆ? (ಬಿ) ನಮ್ಮ ಮಕ್ಕಳು ಮತ್ತು ಹೊಸಬರು ಇದನ್ನೇ ಮಾಡುವಂತೆ ನಾವು ಹೇಗೆ ಕಲಿಸಬಹುದು?

18 ಮಹತ್ತರವಾದ ರಾಜ್ಯ ಕೆಲಸವನ್ನು ಬೆಂಬಲಿಸುವ ಸುಯೋಗ ಮತ್ತು ಅವಕಾಶವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ನಾವು ಬೆಂಬಲಿಸಿದರೆ ನಮ್ಮನ್ನು ಖಂಡಿತ ಆಶೀರ್ವದಿಸುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. (ಮಲಾ. 3:10) ನಾವು ಉದಾರವಾಗಿ ಕಾಣಿಕೆ ಕೊಟ್ಟರೆ ನಮಗೇ ಒಳ್ಳೇದಾಗುತ್ತದೆ ಎಂದೂ ಹೇಳಿದ್ದಾನೆ. (ಜ್ಞಾನೋಕ್ತಿ 11:24, 25 ಓದಿ.) ಉದಾರವಾಗಿ ಕೊಡುವುದರಿಂದ ನಮಗೆ ಸಂತೋಷ ಸಿಗುತ್ತದೆ. ಯಾಕೆಂದರೆ “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕಾ. 20:35) ನಮ್ಮ ಮಕ್ಕಳು ಹಾಗೂ ಹೊಸಬರು ಕೂಡ ಯೆಹೋವನಿಗೆ ಕಾಣಿಕೆ ಕೊಟ್ಟು ಅನೇಕ ಆಶೀರ್ವಾದಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ನಮ್ಮ ಮಾತು ಮತ್ತು ಕ್ರಿಯೆಯ ಮೂಲಕ ಕಲಿಸಬಹುದು.

19. ಈ ಲೇಖನದಿಂದ ನಿಮಗೆ ಯಾವ ಪ್ರೋತ್ಸಾಹ ಸಿಕ್ಕಿದೆ?

19 ನಮ್ಮ ಹತ್ತಿರ ಏನಿದೆಯೋ ಅದೆಲ್ಲವನ್ನೂ ಕೊಟ್ಟಿರುವುದು ಯೆಹೋವನೇ. ಆತನಿಗೆ ನಾವು ಕಾಣಿಕೆ ಕೊಡುವ ಮೂಲಕ ನಮಗೆ ಆತನ ಮೇಲೆ ಪ್ರೀತಿ ಇದೆ ಮತ್ತು ಆತನು ನಮಗೆ ಏನೆಲ್ಲಾ ಮಾಡಿದ್ದಾನೋ ಅದಕ್ಕೆಲ್ಲ ಗಣ್ಯತೆ ಇದೆ ಎಂದು ತೋರಿಸುತ್ತೇವೆ. (1 ಪೂರ್ವ. 29:17) ಇಸ್ರಾಯೇಲ್ಯರು ಆಲಯವನ್ನು ಕಟ್ಟಲು “ಪೂರ್ಣಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ಕೊಟ್ಟದ್ದಕ್ಕಾಗಿ . . . ಸಂತೋಷಪಟ್ಟರು.” (1 ಪೂರ್ವ. 29:9) ಇದೇ ರೀತಿ ನಾವೂ ಯೆಹೋವನು ನಮಗೆ ಈಗಾಗಲೇ ಏನು ಕೊಟ್ಟಿದ್ದಾನೋ ಅದರಿಂದ ಆತನಿಗೆ ಕಾಣಿಕೆ ಕೊಡುವ ಮೂಲಕ ಆನಂದ ಮತ್ತು ತೃಪ್ತಿಯನ್ನು ಸದಾ ಪಡೆಯೋಣ.