ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಆತನು ದಣಿದವನಿಗೆ ಶಕ್ತಿ ಕೊಡುತ್ತಾನೆ’

‘ಆತನು ದಣಿದವನಿಗೆ ಶಕ್ತಿ ಕೊಡುತ್ತಾನೆ’

2018​ರ ವರ್ಷವಚನ: ‘ಯೆಹೋವನನ್ನು ನಿರೀಕ್ಷಿಸುವವರು ಹೊಸ ಬಲವನ್ನು ಹೊಂದುವರು.’—ಯೆಶಾ. 40:31.

ಗೀತೆಗಳು: 152, 67

1. (ಎ) ನಾವು ಇಂದು ಯಾವ ಕಷ್ಟಗಳನ್ನು ತಾಳಿಕೊಳ್ಳಬೇಕಾಗಿದೆ? (ಬಿ) ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಯಾಕೆ ಮೆಚ್ಚುತ್ತಾನೆ? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)

ಈ ಲೋಕದಲ್ಲಿ ಜೀವನ ಮಾಡುವುದು ಅಷ್ಟು ಸುಲಭವಲ್ಲ. ನಮ್ಮ ಸಹೋದರ ಸಹೋದರಿಯರಲ್ಲಿ ಅನೇಕರು ಗಂಭೀರ ಕಾಯಿಲೆಗಳಿಂದ ಕಷ್ಟಪಡುತ್ತಿದ್ದಾರೆ. ಇನ್ನು ಕೆಲವರಿಗೆ ವಯಸ್ಸಾಗುತ್ತಾ ಇದೆ, ಅದರ ಜೊತೆಗೆ ವಯಸ್ಸಾಗಿರುವ ತಮ್ಮ ಸಂಬಂಧಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಇನ್ನು ಕೆಲವರು ಕುಟುಂಬದ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ನಿಮ್ಮಲ್ಲಿ ಹೆಚ್ಚಿನವರು ಈ ಕಷ್ಟಗಳಲ್ಲಿ ಒಂದನ್ನು ಮಾತ್ರ ಅಲ್ಲ ಒಂದರ ಮೇಲೊಂದು ಸಮಸ್ಯೆಯನ್ನು ಅನುಭವಿಸುತ್ತಿದ್ದೀರಿ ಎಂದು ಯೆಹೋವನಿಗೆ ತಿಳಿದಿದೆ. ಇದರ ಹಿಂದೆ ನಿಮ್ಮ ಸಮಯ, ಶಕ್ತಿ, ಹಣ ಎಲ್ಲ ಹೋಗುತ್ತಿದೆ. ಹೀಗಿದ್ದರೂ ಯೆಹೋವನು ನಿಮಗೆ ಸಹಾಯ ಮಾಡುತ್ತಾನೆ ಎಂದು ಪೂರ್ಣ ನಂಬಿಕೆ ಇಟ್ಟಿದ್ದೀರಿ. ಆತನು ಮಾತು ಕೊಟ್ಟಿರುವಂತೆ ಎಲ್ಲ ಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ಭರವಸೆ ಇಟ್ಟಿದ್ದೀರಿ. ಆತನ ಮೇಲೆ ಇಷ್ಟೊಂದು ನಂಬಿಕೆ ಇಟ್ಟಿರುವ ನಿಮ್ಮನ್ನು ಯೆಹೋವನು ಖಂಡಿತ ಮೆಚ್ಚುತ್ತಾನೆ.

2. (ಎ) ಯೆಶಾಯ 40:29​ರಿಂದ ನಮಗೆ ಸಿಗುವ ಆಶ್ವಾಸನೆ ಏನು? (ಬಿ) ನಾವು ಯಾವ ದೊಡ್ಡ ತಪ್ಪನ್ನು ಮಾಡುವ ಸಾಧ್ಯತೆ ಇದೆ?

2 ಜೀವನದಲ್ಲಿ ಒತ್ತಡ ಹೆಚ್ಚಾದಾಗ ‘ನನಗೆ ಇನ್ನು ಮುಂದೆ ತಾಳಿಕೊಳ್ಳಲು ಆಗಲ್ಲ’ ಎಂದು ನಿಮಗೆ ಯಾವತ್ತಾದರೂ ಅನಿಸಿದೆಯಾ? ನಿಮಗೆ ಹೀಗೆ ಅನಿಸಿದೆಯಾದರೆ, ಬೇರೆಯವರಿಗೂ ಇದೇ ರೀತಿ ಅನಿಸಿತ್ತು ಎಂದು ತಿಳಿದು ಸಮಾಧಾನ ಆಗಬಹುದು. ಹಿಂದಿನ ಕಾಲದಲ್ಲಿ ಜೀವಿಸಿದ ದೇವರ ನಂಬಿಗಸ್ತ ಸೇವಕರಲ್ಲಿ ಕೆಲವರಿಗೂ ಇದೇ ರೀತಿ ಅನಿಸಿತ್ತು. (1 ಅರ. 19:4; ಯೋಬ 7:7) ಆದರೆ ಕಷ್ಟಗಳನ್ನು ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡಿತು? ಅವರು ಬಲಕ್ಕಾಗಿ ಯೆಹೋವನ ಮೇಲೆ ಆತುಕೊಂಡರು. ದೇವರು ‘ದಣಿದವನಿಗೆ ಶಕ್ತಿ ಕೊಡುತ್ತಾನೆ’ ಎಂದು ಬೈಬಲ್‌ ಹೇಳುತ್ತದೆ. (ಯೆಶಾ. 40:29, ಪವಿತ್ರ ಗ್ರಂಥ ಭಾಷಾಂತರ) ಆದರೆ ಇಂದು ದೇವರ ಜನರಲ್ಲಿ ಕೆಲವರಿಗೆ ಜೀವನದ ಸಮಸ್ಯೆಗಳನ್ನು ತಾಳಿಕೊಳ್ಳಲು ಯೆಹೋವನ ಸೇವೆ ಮಾಡುವುದನ್ನು ಸ್ವಲ್ಪ ಸಮಯ ಬಿಟ್ಟುಬಿಡುವುದೇ ಒಳ್ಳೇದು ಎಂದು ಅನಿಸಿದೆ. ಯೆಹೋವನ ಸೇವೆ ಮಾಡುವುದನ್ನು ಅವರು ಆಶೀರ್ವಾದವಾಗಿ ಅಲ್ಲ ದೊಡ್ಡ ಹೊರೆಯಾಗಿ ನೋಡುತ್ತಾರೆ. ಹಾಗಾಗಿ ಬೈಬಲ್‌ ಓದುವುದನ್ನು, ಕೂಟಗಳಿಗೆ ಹೋಗುವುದನ್ನು, ಸುವಾರ್ತೆ ಸಾರುವುದನ್ನು ಬಿಟ್ಟುಬಿಡುತ್ತಾರೆ. ಸೈತಾನ ಬಯಸುವುದು ಇದನ್ನೇ.

3. (ಎ) ಸೈತಾನ ನಮ್ಮನ್ನು ಬಲಹೀನಗೊಳಿಸದಿರಲು ನಾವೇನು ಮಾಡಬಹುದು? (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

3 ನಾವು ಯೆಹೋವನ ಸೇವೆಯಲ್ಲಿ ತುಂಬ ಮಗ್ನರಾದರೆ ಬಲ ಪಡೆದುಕೊಳ್ಳುತ್ತೇವೆ ಎಂದು ಸೈತಾನನಿಗೆ ಗೊತ್ತು. ಆದರೆ ನಾವು ಬಲ ಪಡೆದುಕೊಳ್ಳುವುದು ಅವನಿಗೆ ಇಷ್ಟವಿಲ್ಲ. ಆದ್ದರಿಂದ ನೀವು ದೈಹಿಕವಾಗಿ ಅಥವಾ ಮಾನಸಿಕವಾಗಿ ಬಲಹೀನರಾಗಿದ್ದೀರಿ ಎಂದು ಅನಿಸಿದಾಗ ಯೆಹೋವನಿಂದ ದೂರ ಹೋಗಬೇಡಿ, ಹತ್ತಿರ ಹೋಗಿ. ಆಗ ಆತನು “ನಿಮ್ಮನ್ನು ದೃಢಪಡಿಸುವನು, ನಿಮ್ಮನ್ನು ಬಲಪಡಿಸುವನು” ಎಂದು ಬೈಬಲ್‌ ಹೇಳುತ್ತದೆ. (1 ಪೇತ್ರ 5:10; ಯಾಕೋ. 4:8) ಈ ಲೇಖನದಲ್ಲಿ ಯೆಶಾಯ 40:26-31​ರ ವರೆಗಿನ ವಚನಗಳನ್ನು ಚರ್ಚಿಸಲಿದ್ದೇವೆ. ಈ ವಚನಗಳಿಂದ ನಮ್ಮನ್ನು ಬಲಪಡಿಸಲು ಯೆಹೋವನಿಗಿರುವ ಸಾಮರ್ಥ್ಯದ ಬಗ್ಗೆ ಕಲಿಯಲಿದ್ದೇವೆ. ನಂತರ, ಯೆಹೋವನ ಸೇವೆಯನ್ನು ನಾವು ಕಡಿಮೆಗೊಳಿಸುವಂತೆ ಮಾಡುವ ಎರಡು ಸನ್ನಿವೇಶಗಳನ್ನು ಮತ್ತು ಆ ಸನ್ನಿವೇಶಗಳಲ್ಲಿ ತಾಳಿಕೊಳ್ಳಲು ಬೈಬಲ್‌ ತತ್ವಗಳು ಹೇಗೆ ಸಹಾಯ ಮಾಡುತ್ತವೆ ಎಂದು ಚರ್ಚಿಸಲಿದ್ದೇವೆ.

ಯೆಹೋವನನ್ನು ನಿರೀಕ್ಷಿಸುವವರು ಹೊಸ ಬಲವನ್ನು ಹೊಂದುವರು

4. ಯೆಶಾಯ 40:26​ರಿಂದ ನಾವೇನು ಕಲಿಯುತ್ತೇವೆ?

4 ಯೆಶಾಯ 40:26 ಓದಿ. ವಿಶ್ವದಲ್ಲಿ ಎಷ್ಟು ನಕ್ಷತ್ರಗಳಿವೆ ಎಂದು ಯಾರಿಂದಲೂ ಹೇಳಲು ಸಾಧ್ಯವಾಗಿಲ್ಲ. ನಾವಿರುವ ಗ್ಯಾಲಕ್ಸಿಯೊಂದರಲ್ಲೇ ಸುಮಾರು 40,000 ಕೋಟಿ ನಕ್ಷತ್ರಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಷ್ಟು ನಕ್ಷತ್ರಗಳಿದ್ದರೂ ಅವುಗಳಲ್ಲಿ ಪ್ರತಿಯೊಂದಕ್ಕೂ ಯೆಹೋವನು ಹೆಸರಿಟ್ಟಿದ್ದಾನೆ. ಇದರಿಂದ ನಾವು ಯೆಹೋವನ ಬಗ್ಗೆ ಏನು ಕಲಿಯುತ್ತೇವೆ? ಜೀವ ಇಲ್ಲದಿರುವ ನಕ್ಷತ್ರಗಳ ಬಗ್ಗೆನೇ ಯೆಹೋವನು ವೈಯಕ್ತಿಕ ಆಸಕ್ತಿ ವಹಿಸುತ್ತಾನೆ ಎಂದಾದರೆ ಆತನ ಸೇವೆ ಮಾಡುವ ಜನರಾದ ನಿಮ್ಮ ಬಗ್ಗೆ ಆತನಿಗೆ ಹೇಗನಿಸುತ್ತಿರಬೇಕು ಎಂದು ಯೋಚಿಸಿ ನೋಡಿ. ಇಷ್ಟಕ್ಕೂ ಈ ಸೇವೆಯನ್ನು ನೀವು ಏನೋ ಕಾಟಾಚಾರಕ್ಕೆ ಮಾಡಲ್ಲ, ಆತನ ಮೇಲಿರುವ ಪ್ರೀತಿಯಿಂದ ಮಾಡುತ್ತೀರಿ. (ಕೀರ್ತ. 19:1, 3, 14) ನಮ್ಮ ಪ್ರೀತಿಯ ತಂದೆಯಾದ ಯೆಹೋವನಿಗೆ ನಿಮ್ಮ ಬಗ್ಗೆ ಎಲ್ಲ ಗೊತ್ತು. “ನಿಮ್ಮ ತಲೆಯ ಕೂದಲುಗಳು” ಎಷ್ಟಿವೆಯೆಂದು ಸಹ ಆತನಿಗೆ ಗೊತ್ತು ಎಂದು ಬೈಬಲ್‌ ಹೇಳುತ್ತದೆ. (ಮತ್ತಾ. 10:30) “ಯೆಹೋವನು ಸದ್ಭಕ್ತರ ಜೀವಮಾನವನ್ನು ಲಕ್ಷಿಸುತ್ತಾನೆ” ಎನ್ನುವುದು ನಮಗೆ ತಿಳಿದಿರಬೇಕು ಎಂದು ಆತನು ಬಯಸುತ್ತಾನೆ. (ಕೀರ್ತ. 37:18) ಹೌದು, ನೀವು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆ ಬಗ್ಗೆ ಯೆಹೋವನಿಗೆ ಗೊತ್ತು. ಅಷ್ಟೇ ಅಲ್ಲ, ಆ ಒಂದೊಂದು ಸಮಸ್ಯೆಯನ್ನು ತಾಳಿಕೊಳ್ಳಲು ಬೇಕಾದ ಶಕ್ತಿಯನ್ನೂ ಆತನು ನಿಮಗೆ ಕೊಡಬಲ್ಲನು.

5. ನಮಗೆ ಬೇಕಾದ ಬಲವನ್ನು ಯೆಹೋವನಿಂದ ಕೊಡಲು ಆಗುತ್ತದೆ ಎಂದು ಹೇಗೆ ಖಂಡಿತವಾಗಿ ಹೇಳಬಹುದು?

5 ಯೆಶಾಯ 40:28 ಓದಿ. ಯೆಹೋವನೇ ಎಲ್ಲ ಶಕ್ತಿಯ ಉಗಮ. ಉದಾಹರಣೆಗೆ, ಆತನು ಸೂರ್ಯನಿಗೆ ಕೊಡುವ ಶಕ್ತಿ ಎಷ್ಟಿದೆ ಎಂದು ನೋಡಿ. ವಿಜ್ಞಾನದ ಲೇಖಕನಾದ ಡೇವಿಡ್‌ ಬೋಡಾನಸ್‌ ಹೇಳಿದ್ದೇನೆಂದರೆ, ಕೋಟಿಗಟ್ಟಲೆ ಅಣುಬಾಂಬುಗಳಿಗೆ ಇರುವಷ್ಟು ಶಕ್ತಿಯನ್ನು ಸೂರ್ಯ ಪ್ರತಿ ಕ್ಷಣ ಉತ್ಪಾದಿಸುತ್ತದೆ. ಇನ್ನೊಬ್ಬ ಸಂಶೋಧಕನ ಅಂದಾಜಿನ ಪ್ರಕಾರ, ಇಡೀ ಲೋಕದಲ್ಲಿರುವ ಜನರಿಗೆ ಎರಡು ಲಕ್ಷ ವರ್ಷಗಳಿಗೆ ಬೇಕಾದ ವಿದ್ಯುಚ್ಛಕ್ತಿಯನ್ನು ಸೂರ್ಯ ಬರೀ ಒಂದು ಕ್ಷಣದಲ್ಲಿ ಉತ್ಪಾದಿಸುತ್ತದೆ! ಸೂರ್ಯನಿಗೆ ಇಷ್ಟು ಶಕ್ತಿ ಕೊಟ್ಟಿರುವ ಯೆಹೋವನು ನಮಗೆ ನಮ್ಮ ಸಮಸ್ಯೆಗಳನ್ನು ತಾಳಿಕೊಳ್ಳಲು ಬೇಕಾದ ಬಲ ಕೊಡುವುದಿಲ್ಲವೇ?

6. (ಎ) ಯೇಸುವಿನ ನೊಗ ಯಾವ ಅರ್ಥದಲ್ಲಿ ಮೃದುವಾಗಿದೆ? (ಬಿ) ಅದು ನಿಮ್ಮ ಮೇಲೆ ಯಾವ ಪರಿಣಾಮ ಬೀರಿದೆ?

6 ಯೆಶಾಯ 40:29 ಓದಿ. ಯೆಹೋವನ ಸೇವೆ ಮಾಡುವುದರಿಂದ ನಮಗೆ ತುಂಬ ಸಂತೋಷ ಸಿಗುತ್ತದೆ. ಯೇಸು ತನ್ನ ಶಿಷ್ಯರಿಗೆ ‘ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ’ ಎಂದು ಹೇಳಿದನು. ಅದನ್ನು ತೆಗೆದುಕೊಳ್ಳುವುದರಿಂದ “ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ” ಎಂದನು. (ಮತ್ತಾ. 11:28-30) ಈ ಮಾತುಗಳಲ್ಲಿ ಯಾವುದೇ ಸಂಶಯವಿಲ್ಲ! ಕೆಲವೊಮ್ಮೆ ನಾವು ಕೂಟಗಳಿಗೆ ಹೋಗುವಾಗ ಅಥವಾ ಸಾರಲು ಹೋಗುವಾಗ ತುಂಬ ಸುಸ್ತಾಗಿರುತ್ತದೆ. ಆದರೆ ಕೂಟ ಅಥವಾ ಸೇವೆ ಮುಗಿಸಿ ಬರುವಾಗ ಹೇಗನಿಸುತ್ತದೆ? ಹೊಸ ಚೈತನ್ಯ ಪಡೆದುಕೊಂಡಿರುತ್ತೇವೆ ಮತ್ತು ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಿದ್ಧರಾಗಿರುತ್ತೇವೆ. ಇದರಿಂದ ಯೇಸುವಿನ ನೊಗ ನಿಜವಾಗಲೂ ಮೃದುವಾಗಿದೆ ಎಂದು ಹೇಳಬಹುದು.

7. ಮತ್ತಾಯ 11:28-30​ರಲ್ಲಿರುವ ಮಾತುಗಳು ಸತ್ಯ ಎಂದು ತೋರಿಸುವ ಒಂದು ಅನುಭವ ತಿಳಿಸಿ.

7 ನಮ್ಮ ಒಬ್ಬ ಸಹೋದರಿಯ ಅನುಭವ ನೋಡಿ. ವಿಪರೀತ ಸುಸ್ತು ರೋಗ, ಖಿನ್ನತೆ ಕಾಯಿಲೆ ಮತ್ತು ಮೈಗ್ರೇನ್‌ ತಲೆನೋವಿನಿಂದ ಅವರು ಬಳಲುತ್ತಿದ್ದಾರೆ. ಇದರಿಂದಾಗಿ ಕೂಟಗಳಿಗೆ ಹೋಗಲು ಅವರಿಗೆ ಕೆಲವೊಮ್ಮೆ ತುಂಬ ಕಷ್ಟವಾಗುತ್ತದೆ. ಒಮ್ಮೆ ಕಷ್ಟವಾದರೂ ಅವರು ಕೂಟಕ್ಕೆ ಹೋದರು. ಅವರು ಹೇಳುವುದು: “ಅವತ್ತಿನ ಭಾಷಣ ನಿರುತ್ಸಾಹವನ್ನು ನಿಭಾಯಿಸುವುದರ ಬಗ್ಗೆ ಇತ್ತು. ಆ ಭಾಷಣವನ್ನು ಕೊಟ್ಟ ಸಹೋದರನು ಅದನ್ನು ಎಷ್ಟು ಸಹಾನುಭೂತಿ, ಕಾಳಜಿಯಿಂದ ಕೊಟ್ಟನೆಂದರೆ ನನ್ನ ಕಣ್ಣಲ್ಲಿ ನೀರು ಬಂದುಬಿಡ್ತು. ಎಷ್ಟೇ ಕಷ್ಟವಾದರೂ ಕೂಟಕ್ಕೆ ಹಾಜರಾದರೆ ತುಂಬ ಪ್ರಯೋಜನ ಸಿಗುತ್ತದೆ ಎಂದು ಇದು ನನಗೆ ನೆನಪಿಸಿತು.” ಅಂದಿನ ಕೂಟಕ್ಕೆ ಹಾಜರಾಗಲು ತಾನು ಮಾಡಿದ ಪ್ರಯತ್ನ ಸಾರ್ಥಕವಾಯಿತು ಎಂದು ಅವರು ಸಂತೋಷಪಟ್ಟರು.

8, 9. “ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ” ಎಂದು ಪೌಲನು ಹೇಳಿದ್ದರ ಅರ್ಥವೇನು?

8 ಯೆಶಾಯ 40:30 ಓದಿ. ನಮಗೆ ಅನೇಕ ಕೌಶಲಗಳು ಇರಬಹುದು. ಆದರೆ ನಮ್ಮ ಸ್ವಂತ ಶಕ್ತಿಯಿಂದ ಹೆಚ್ಚನ್ನು ಮಾಡಲು ಆಗುವುದಿಲ್ಲ. ಇದನ್ನು ನಾವೆಲ್ಲರೂ ಮನಸ್ಸಿನಲ್ಲಿಡಬೇಕು. ಅಪೊಸ್ತಲ ಪೌಲನು ಅನೇಕ ವಿಷಯಗಳನ್ನು ಮಾಡಿದನು, ಆದರೆ ಬಯಸಿದ್ದನ್ನೆಲ್ಲ ಮಾಡಲು ಅವನಿಂದ ಸಾಧ್ಯವಾಗಲಿಲ್ಲ. ಇದನ್ನು ಅವನು ಯೆಹೋವನಿಗೆ ಹೇಳಿಕೊಂಡನು. ಆಗ ಯೆಹೋವನು, “ನನ್ನ ಬಲವು ಬಲಹೀನತೆಯಲ್ಲಿ ಪರಿಪೂರ್ಣಗೊಳಿಸಲ್ಪಡುತ್ತದೆ” ಎಂದು ಹೇಳಿದನು. ಯೆಹೋವನ ಮಾತಿನ ಅರ್ಥವೇನೆಂದು ಪೌಲನಿಗೆ ಗೊತ್ತಾಯಿತು. ಆದ್ದರಿಂದಲೇ ಅವನು ಹೀಗಂದನು: “ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂ. 12:7-10) ಪೌಲನ ಮಾತಿನ ಅರ್ಥವೇನು?

9 ತನ್ನ ಸ್ವಂತ ಶಕ್ತಿಯಿಂದ ಎಲ್ಲ ವಿಷಯಗಳನ್ನು ಮಾಡಲು ಆಗಲ್ಲ, ಶಕ್ತಿಶಾಲಿಯಾದ ದೇವರಿಂದ ಬಲ ಪಡೆದುಕೊಳ್ಳಬೇಕು ಎಂದು ಪೌಲನಿಗೆ ಅರ್ಥವಾಯಿತು. ತಾನು ಬಲಹೀನವಾಗಿದ್ದೇನೆ ಎಂದು ಅನಿಸಿದಾಗ ಪವಿತ್ರಾತ್ಮ ಅವನಲ್ಲಿ ಬಲ ತುಂಬಿತು. ಅಷ್ಟೇ ಅಲ್ಲ, ಅವನಿಗೆ ತನ್ನ ಸ್ವಂತ ಶಕ್ತಿಯಿಂದ ಮಾಡಲು ಸಾಧ್ಯವಾಗದಿದ್ದ ವಿಷಯಗಳನ್ನು ಸಾಧಿಸಲು ಪವಿತ್ರಾತ್ಮ ಶಕ್ತಿ ನೀಡಿತು. ಇದು ನಮ್ಮ ವಿಷಯದಲ್ಲೂ ಸತ್ಯ. ಯೆಹೋವನ ಪವಿತ್ರಾತ್ಮ ಸಿಕ್ಕಿದಾಗ ನಮ್ಮಲ್ಲಿ ಹೊಸ ಬಲ ತುಂಬುತ್ತದೆ!

10. ಸಮಸ್ಯೆಗಳನ್ನು ತಾಳಿಕೊಳ್ಳಲು ಯೆಹೋವನು ದಾವೀದನಿಗೆ ಹೇಗೆ ಸಹಾಯ ಮಾಡಿದನು?

10 ಕೀರ್ತನೆಗಾರನಾದ ದಾವೀದನಿಗೂ ದೇವರ ಪವಿತ್ರಾತ್ಮದಿಂದ ಬಲಗೊಂಡ ಅನುಭವ ಅನೇಕ ಸಲ ಆಯಿತು. ಅವನು ಹಾಡಿದ್ದು: “ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು.” (ಕೀರ್ತ. 18:29) ನಮ್ಮ ಸಮಸ್ಯೆಗಳು ಕೆಲವೊಮ್ಮೆ ಹತ್ತಲು ಸಾಧ್ಯವಾಗದ ಎತ್ತರವಾದ ಪ್ರಾಕಾರದಂತೆ ಅಥವಾ ಗೋಡೆಯಂತೆ ದೊಡ್ಡದಾಗಿ ಇರಬಹುದು. ಅವನ್ನು ನಮ್ಮ ಸ್ವಂತ ಶಕ್ತಿಯಿಂದ ಬಗೆಹರಿಸಲು ಆಗುವುದಿಲ್ಲ. ಆಗ ನಮಗೆ ಯೆಹೋವನ ಸಹಾಯ ಬೇಕು.

11. ನಮ್ಮ ಸಮಸ್ಯೆಗಳನ್ನು ತಾಳಿಕೊಳ್ಳಲು ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತದೆ?

11 ಯೆಶಾಯ 40:31 ಓದಿ. ಹದ್ದುಗಳು ಗಾಳಿಯಲ್ಲಿ ತೇಲಾಡಲು ತಮ್ಮ ಸ್ವಂತ ಶಕ್ತಿಯನ್ನು ಮಾತ್ರ ಉಪಯೋಗಿಸುವುದಿಲ್ಲ. ಭೂಮಿಯಿಂದ ಮೇಲೇರುತ್ತಿರುವ ಬಿಸಿಗಾಳಿಯ ಸಹಾಯದಿಂದ ಅವು ಬಾನೆತ್ತರಕ್ಕೆ ಹಾರುತ್ತವೆ. ಹೀಗೆ ತಮ್ಮಲ್ಲಿರುವ ಶಕ್ತಿಯನ್ನು ಉಳಿಸಿಕೊಳ್ಳುತ್ತಾ ತುಂಬ ದೂರದವರೆಗೆ ಹಾರಾಡಲು ಸಹಾಯವಾಗುತ್ತದೆ. ನಿಮ್ಮ ಜೀವನದಲ್ಲಿ ಒಂದು ದೊಡ್ಡ ಸಮಸ್ಯೆ ಬಂದಾಗ ಈ ಹದ್ದುಗಳನ್ನು ನೆನಪಿಸಿಕೊಳ್ಳಿ. ‘ಸಹಾಯಕ, ಅಂದರೆ ಪವಿತ್ರಾತ್ಮದ’ ಶಕ್ತಿ ಕೊಡುವಂತೆ ಯೆಹೋವನ ಹತ್ತಿರ ಬೇಡಿಕೊಳ್ಳಿ. (ಯೋಹಾ. 14:26) ನಾವು ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಯೆಹೋವನ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳಬಹುದು. ಉದಾಹರಣೆಗೆ, ಸಭೆಯಲ್ಲಿ ಒಬ್ಬ ಸಹೋದರ ಅಥವಾ ಸಹೋದರಿಯ ಜೊತೆ ಮನಸ್ತಾಪ ಆದಾಗ ನಮಗೆ ಯೆಹೋವನ ಸಹಾಯ ಬೇಕು ಎಂದು ಅನಿಸಬಹುದು. ಆದರೆ ಇಂಥ ಮನಸ್ತಾಪಗಳು ಯಾಕೆ ಆಗುತ್ತವೆ?

12, 13. (ಎ) ಕೆಲವೊಮ್ಮೆ ಕ್ರೈಸ್ತರ ಮಧ್ಯೆ ಯಾಕೆ ಮನಸ್ತಾಪಗಳು ಆಗುತ್ತವೆ? (ಬಿ) ಯೋಸೇಫನ ಕಥೆಯಿಂದ ಯೆಹೋವನ ಬಗ್ಗೆ ನಾವೇನು ಕಲಿಯುತ್ತೇವೆ?

12 ನಾವೆಲ್ಲರೂ ಅಪರಿಪೂರ್ಣರು ಆಗಿರುವುದರಿಂದ ಮನಸ್ತಾಪಗಳು ಆಗುತ್ತವೆ. ಕೆಲವೊಮ್ಮೆ ಬೇರೆಯವರು ಹೇಳುವ ಅಥವಾ ಮಾಡುವ ವಿಷಯದಿಂದ ನಮಗೆ ಕೋಪ ಬರಬಹುದು ಅಥವಾ ನಮ್ಮಿಂದಾಗಿ ಬೇರೆಯವರಿಗೆ ಕೋಪ ಬರಬಹುದು. ಇಂಥ ಸನ್ನಿವೇಶವನ್ನು ನಿಭಾಯಿಸಲು ತುಂಬ ಕಷ್ಟ ಆಗಬಹುದು. ಆದರೆ ಇದು ನಾವು ಯೆಹೋವನಿಗೆ ನಿಷ್ಠೆ ತೋರಿಸಲು ಸಿಕ್ಕಿರುವ ಒಂದು ಅವಕಾಶವಾಗಿದೆ. ನಮ್ಮ ಸಹೋದರ ಸಹೋದರಿಯರಲ್ಲಿ ಅಪರಿಪೂರ್ಣತೆ ಇದ್ದರೂ ಯೆಹೋವನು ಅವರನ್ನು ಪ್ರೀತಿಸುತ್ತಾನೆ. ನಾವೂ ಅದನ್ನೇ ಮಾಡಬೇಕು. ಸಹೋದರ ಸಹೋದರಿಯರ ಜೊತೆ ಐಕ್ಯವಾಗಿ ಕೆಲಸಮಾಡುವ ಮೂಲಕ ನಮ್ಮ ನಿಷ್ಠೆಯನ್ನು ತೋರಿಸಬೇಕು.

ಯೆಹೋವನು ಯೋಸೇಫನ ಕೈಬಿಡಲಿಲ್ಲ, ನಿಮ್ಮ ಕೈಯನ್ನೂ ಬಿಡುವುದಿಲ್ಲ (ಪ್ಯಾರ 13 ನೋಡಿ)

13 ಯೆಹೋವನು ತನ್ನ ಸೇವಕರ ಮೇಲೆ ಪರೀಕ್ಷೆಗಳು ಬರುವುದನ್ನು ತಡೆಯುವುದಿಲ್ಲ. ನಾವು ಇದನ್ನು ಯೋಸೇಫನ ಕಥೆಯಿಂದ ತಿಳಿದುಕೊಳ್ಳಬಹುದು. ಯೋಸೇಫ ಯುವಕನಾಗಿದ್ದಾಗ ಅವನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟು ಗುಲಾಮನಾಗಿ ಮಾರಿಬಿಟ್ಟರು. ನಂತರ ಅವನನ್ನು ಈಜಿಪ್ಟಿಗೆ ಕರೆತರಲಾಯಿತು. (ಆದಿ. 37:28) ಇದನ್ನೆಲ್ಲ ಯೆಹೋವನು ಗಮನಿಸುತ್ತಿದ್ದನು. ತನ್ನ ಸ್ನೇಹಿತನೂ ನಂಬಿಗಸ್ತ ಸೇವಕನೂ ಆದ ಯೋಸೇಫನಿಗೆ ಆಗುತ್ತಿರುವ ಕಷ್ಟಗಳನ್ನು ನೋಡಿ ದೇವರಿಗೆ ಖಂಡಿತ ನೋವಾಗಿರುತ್ತದೆ. ಆದರೂ ಅವನಿಗಾಗುತ್ತಿರುವ ಅನ್ಯಾಯವನ್ನು ಆತನು ತಡೆಯಲಿಲ್ಲ. ನಂತರ, ಪೋಟೀಫರನ ಹೆಂಡತಿಯನ್ನು ಮಾನಭಂಗ ಮಾಡಲು ಯತ್ನಿಸಿದ ಎಂಬ ಆರೋಪ ಹಾಕಿ ಅವನನ್ನು ಜೈಲಿಗೆ ತಳ್ಳಲಾಯಿತು. ಆಗಲೂ ದೇವರು ಅವನನ್ನು ಕಾಪಾಡಲಿಲ್ಲ. ಇದರರ್ಥ ದೇವರು ಯೋಸೇಫನ ಕೈಬಿಟ್ಟಿದ್ದನು ಅಂತನಾ? ಇಲ್ಲ. “ಯೆಹೋವನು ಅವನ ಸಂಗಡ ಇದ್ದು ಅವನು ನಡಿಸಿದ್ದೆಲ್ಲವನ್ನು ಕೈಗೂಡಿಸಿ”ದನು ಎಂದು ಬೈಬಲ್‌ ಹೇಳುತ್ತದೆ.—ಆದಿ. 39:21-23.

14. ಕೋಪವನ್ನು ನಿಯಂತ್ರಿಸಿಕೊಳ್ಳುವುದರಿಂದ ಆಗುವ ಪ್ರಯೋಜನವೇನು?

14 ಇನ್ನೊಂದು ಉದಾಹರಣೆ ದಾವೀದನದ್ದು. ಅವನು ಅನುಭವಿಸಿದಷ್ಟು ಕಷ್ಟ ಹೆಚ್ಚಿನ ಜನ ಅನುಭವಿಸಿರಲಿಕ್ಕಿಲ್ಲ. ಆದರೂ ದೇವರ ಸ್ನೇಹಿತನಾಗಿದ್ದ ದಾವೀದನು ಕೋಪದಿಂದ ಕುದಿಯಲಿಲ್ಲ. ಅವನು ಬರೆದದ್ದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತ. 37:8) ನಾವು ಯಾಕೆ ಕೋಪವನ್ನು ‘ಅಣಗಿಸಿಕೊಳ್ಳಬೇಕು’ ಅಥವಾ ನಿಯಂತ್ರಿಸಬೇಕು? ಇದಕ್ಕೆ ಮುಖ್ಯವಾದ ಕಾರಣ, ನಾವು ಯೆಹೋವನಂತೆ ಇರಲು ಬಯಸುತ್ತೇವೆ. “ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ” ಬದಲಿಗೆ ನಮ್ಮನ್ನು ಕ್ಷಮಿಸಿದ್ದಾನೆ. (ಕೀರ್ತ. 103:10) ಕೋಪವನ್ನು ನಿಯಂತ್ರಿಸಿಕೊಳ್ಳುವುದರಿಂದ ಬೇರೆ ಪ್ರಯೋಜನಗಳೂ ಇವೆ. ಉದಾಹರಣೆಗೆ, ಕೋಪದಿಂದಾಗಿ ರಕ್ತದ ಒತ್ತಡ ಹೆಚ್ಚುತ್ತದೆ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಪಿತ್ತಜನಕಾಂಗ ಮತ್ತು ಮೇದೋಜೀರಕ ಗ್ರಂಥಿಗೆ ಹಾನಿಯಾಗುತ್ತದೆ, ಅಜೀರ್ಣ ಸಮಸ್ಯೆ ಆಗುತ್ತದೆ. ಅಷ್ಟೇ ಅಲ್ಲ, ನಾವು ಕೋಪದಲ್ಲಿರುವಾಗ ಯಾವಾಗಲೂ ಸರಿಯಾಗಿ ಯೋಚನೆ ಮಾಡುವುದಿಲ್ಲ. ಯೋಚಿಸದೆ ಹೇಳಿದ ಅಥವಾ ಮಾಡಿದ ವಿಷಯಗಳಿಂದ ಬೇರೆಯವರಿಗೆ ನೋವಾಗಬಹುದು. ಇದರಿಂದಾಗಿ ಖಿನ್ನತೆ ನಮ್ಮನ್ನು ತುಂಬ ಸಮಯದ ವರೆಗೆ ಕಾಡಬಹುದು. ಆದ್ದರಿಂದ ಶಾಂತವಾಗಿ ಇರುವುದೇ ಒಳ್ಳೇದು. ಬೈಬಲ್‌ ಹೇಳುವುದು: “ಶಾಂತಿಗುಣವು ದೇಹಕ್ಕೆ ಜೀವಾಧಾರ.” (ಜ್ಞಾನೋ. 14:30) ಹಾಗಾದರೆ, ಬೇರೆಯವರು ನಮ್ಮನ್ನು ನೋಯಿಸಿದರೆ ಏನು ಮಾಡಬಹುದು? ಸಹೋದರ ಸಹೋದರಿಯರ ಜೊತೆ ಆದ ಮನಸ್ತಾಪವನ್ನು ಹೇಗೆ ಬಗೆಹರಿಸಬಹುದು? ಇದಕ್ಕೆ ನಾವು ಬೈಬಲ್‌ ನೀಡುವ ಬುದ್ಧಿವಾದವನ್ನು ಪಾಲಿಸಬೇಕು.

ಸಹೋದರ ಸಹೋದರಿಯರಿಂದ ನೋವಾದಾಗ

15, 16. ಬೇರೆಯವರು ನಮಗೆ ನೋವು ಮಾಡಿದಾಗ ನಾವೇನು ಮಾಡಬೇಕು?

15 ಎಫೆಸ 4:26 ಓದಿ. ಯೆಹೋವನ ಸೇವೆ ಮಾಡದ ಜನರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಾಗ ನಮಗೆ ಆಶ್ಚರ್ಯ ಆಗುವುದಿಲ್ಲ. ಆದರೆ ಸಭೆಯಲ್ಲಿ ಅಥವಾ ಮನೆಯಲ್ಲಿ ಯಾರಾದರೂ ನಮಗೆ ನೋವಾಗುವ ರೀತಿ ಏನಾದರೂ ಹೇಳಿದರೆ, ಮಾಡಿದರೆ ನಾವು ತುಂಬ ಬೇಜಾರು ಮಾಡಿಕೊಳ್ಳುತ್ತೇವೆ. ಆ ನೋವನ್ನು ಮರೆಯಲು ನಮಗೆ ಕಷ್ಟ ಆಗುತ್ತಿರುವುದಾದರೆ ನಾವೇನು ಮಾಡಬೇಕು? ಅದನ್ನು ಹಾಗೇ ಮನಸ್ಸಲ್ಲಿ ವರ್ಷಗಟ್ಟಲೆ ಇಟ್ಟುಕೊಂಡಿರುತ್ತೇವಾ? ಅಥವಾ ಬೈಬಲ್‌ ಕೊಡುವ ಬುದ್ಧಿವಾದವನ್ನು ಪಾಲಿಸಿ ಆ ಸಮಸ್ಯೆಯನ್ನು ಬೇಗನೆ ಬಗೆಹರಿಸಿಕೊಳ್ಳುತ್ತೇವಾ? ನಮಗೆ ನೋವು ಮಾಡಿದ ವ್ಯಕ್ತಿಯ ಜೊತೆ ಮಾತಾಡಲು ತಡಮಾಡುತ್ತಾ ಹೋದಂತೆ ಅವರ ಜೊತೆ ಸಮಸ್ಯೆ ಬಗೆಹರಿಸಿಕೊಳ್ಳುವುದು ಕೂಡ ಕಷ್ಟವಾಗುತ್ತಾ ಹೋಗುತ್ತದೆ.

16 ಒಬ್ಬ ಸಹೋದರನಿಂದ ನಿಮಗಾದ ನೋವು ಆಗಾಗ ನಿಮ್ಮ ಮನಸ್ಸಿಗೆ ಬರುತ್ತಿರುವುದಾದರೆ ಏನು ಮಾಡಬೇಕು? ಅವರ ಜೊತೆ ಶಾಂತಿ ಸಂಬಂಧ ಕಾಪಾಡಿಕೊಳ್ಳಲು ನೀವೇನು ಮಾಡಬಹುದು? ನೀವು ಮಾಡಬೇಕಾದ ಮೊದಲನೇ ವಿಷಯ ಪ್ರಾರ್ಥನೆ. ಆ ಸಹೋದರನ ಹತ್ತಿರ ಒಳ್ಳೇ ಮಾತುಕತೆ ನಡೆಸಲು ನಿಮಗೆ ಸಹಾಯ ಮಾಡುವಂತೆ ಯೆಹೋವನನ್ನು ಬೇಡಿಕೊಳ್ಳಿ. ಆ ಸಹೋದರ ಕೂಡ ಯೆಹೋವನ ಒಬ್ಬ ಸ್ನೇಹಿತ ಎನ್ನುವುದನ್ನು ನೆನಪಿನಲ್ಲಿಡಿ. (ಕೀರ್ತ. 25:14) ಅವರನ್ನು ದೇವರು ಪ್ರೀತಿಸುತ್ತಾನೆ ಮತ್ತು ತನ್ನ ಸ್ನೇಹಿತರ ಜೊತೆ ಆತನು ದಯೆಯಿಂದ ನಡೆದುಕೊಳ್ಳುತ್ತಾನೆ. ನಾವೂ ಅದನ್ನೇ ಮಾಡುವಂತೆ ದೇವರು ಬಯಸುತ್ತಾನೆ. (ಜ್ಞಾನೋ. 15:23; ಮತ್ತಾ. 7:12; ಕೊಲೊ. 4:6) ಎರಡನೇ ವಿಷಯ, ಆ ಸಹೋದರನ ಹತ್ತಿರ ನೀವು ಏನು ಮಾತಾಡಬೇಕು ಎಂದಿದ್ದೀರೋ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿ. ನಿಮ್ಮನ್ನು ಬೇಕುಬೇಕೆಂದೇ ನೋಯಿಸಿದ್ದಾರೆಂದು ನೀವೇ ಅಂದುಕೊಳ್ಳಬೇಡಿ. ಬಹುಶಃ ನಿಮ್ಮಿಂದಲೇ ಏನಾದರೂ ತಪ್ಪಾಗಿರಬಹುದು ಅಥವಾ ನೀವೇ ತಪ್ಪಾಗಿ ಅರ್ಥಮಾಡಿಕೊಂಡಿರಬಹುದು. ನಿಮ್ಮಿಂದ ಸ್ವಲ್ಪ ತಪ್ಪಾಗಿದ್ದರೂ ಅದನ್ನು ಒಪ್ಪಿಕೊಳ್ಳಿ. ನೀವು ಹೀಗೇನಾದರೂ ಹೇಳಿ ನಿಮ್ಮ ಮಾತನ್ನು ಆರಂಭಿಸಬಹುದು: “ನಾನು ಸ್ವಲ್ಪ ಜಾಸ್ತಿನೇ ಬೇಜಾರು ಮಾಡಿಕೊಂಡೆ ಅನಿಸುತ್ತೆ. ನೀವು ನಿನ್ನೆ ಮಾತಾಡಿದಾಗ ನನಗೆ . . . ಅನಿಸಿತು.” ಈ ರೀತಿ ಮಾತಾಡಿದ ಮೇಲೂ ಮನಸ್ತಾಪ ಬಗೆಹರಿಯದಿದ್ದರೆ, ಪ್ರಯತ್ನಿಸುತ್ತಾ ಇರಿ. ಆ ಸಹೋದರನಿಗಾಗಿ ಪ್ರಾರ್ಥಿಸಿ. ಅವರನ್ನು ಆಶೀರ್ವದಿಸುವಂತೆ ಮತ್ತು ಅವರ ಒಳ್ಳೇ ಗುಣಗಳ ಮೇಲೆ ಗಮನವಿಡಲು ನಿಮಗೆ ಸಹಾಯ ಮಾಡುವಂತೆ ದೇವರನ್ನು ಕೇಳಿಕೊಳ್ಳಿ. ಯೆಹೋವನ ಸ್ನೇಹಿತನಾದ ನಿಮ್ಮ ಸಹೋದರನ ಜೊತೆ ಒಳ್ಳೇ ಸಂಬಂಧ ಉಳಿಸಿಕೊಳ್ಳಲು ನೀವು ಪ್ರಮಾಣಿಕವಾಗಿ ಪ್ರಯತ್ನಿಸುವಾಗ ಅದನ್ನು ನೋಡಿ ಯೆಹೋವನಿಗೆ ಖುಷಿಯಾಗುತ್ತದೆ ಎಂದು ನೀವು ಪೂರ್ಣ ಭರವಸೆಯಿಂದ ಇರಬಹುದು.

ಮಾಡಿದ ಪಾಪದ ಬಗ್ಗೆ ಮನಸ್ಸು ಚುಚ್ಚುತ್ತಿದ್ದರೆ

17. (ಎ) ಪಾಪಮಾಡಿ ಯೆಹೋವನೊಂದಿಗಿನ ನಮ್ಮ ಸಂಬಂಧ ಹಾಳಾದಾಗ ಅದನ್ನು ಸರಿಪಡಿಸಲು ಆತನು ಹೇಗೆ ಸಹಾಯ ಮಾಡುತ್ತಾನೆ? (ಬಿ) ಆತನು ಕೊಡುವ ಸಹಾಯವನ್ನು ನಾವು ಯಾಕೆ ಸ್ವೀಕರಿಸಬೇಕು?

17 ಗಂಭೀರ ಪಾಪ ಮಾಡಿದ ಕೆಲವರು ತಾವಿನ್ನು ಯೆಹೋವನ ಸೇವೆ ಮಾಡಲು ಯೋಗ್ಯರಲ್ಲ ಎಂದು ಕೊರಗುತ್ತಾರೆ. ಇಂಥ ಅಪರಾಧಿಭಾವ ಮನಸ್ಸಲ್ಲಿ ಮನೆ ಮಾಡಿಕೊಂಡರೆ ಅದು ನಮ್ಮ ನೆಮ್ಮದಿ, ಸಂತೋಷ, ಶಕ್ತಿಯನ್ನೆಲ್ಲ ಬತ್ತಿಸಿಬಿಡುತ್ತದೆ. ಇಂಥ ಅಪರಾಧಿಭಾವ ದಾವೀದನನ್ನು ಕಾಡಿತ್ತು. ಅವನು ಹೇಳಿದ್ದು: “ನಾನು [ನನ್ನ ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು. ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.” ಸಂತೋಷದ ವಿಷಯ ಏನೆಂದರೆ, ಯೆಹೋವನು ತನ್ನ ಸೇವಕರು ಏನು ಮಾಡಬೇಕೆಂದು ಬಯಸುತ್ತಾನೋ ಅದನ್ನು ದಾವೀದನು ಧೈರ್ಯದಿಂದ ಮಾಡಿದನು. ಅವನು ಬರೆದದ್ದು: “ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” (ಕೀರ್ತ. 32:3-5) ನೀವು ಗಂಭೀರ ಪಾಪಮಾಡಿರುವಲ್ಲಿ ಅದನ್ನು ಯೆಹೋವನು ಕ್ಷಮಿಸಲು ಸಿದ್ಧನಾಗಿದ್ದಾನೆ. ಆತನೊಂದಿಗಿರುವ ನಿಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಬೇಕಾದ ಸಹಾಯವನ್ನು ನಿಮಗೆ ಕೊಡಲು ಸಿದ್ಧನಿದ್ದಾನೆ. ಆದರೆ ನೀವು ಹಿರಿಯರ ಮೂಲಕ ಆತನು ಕೊಡುವ ಸಹಾಯವನ್ನು ಸ್ವೀಕರಿಸಬೇಕು. (ಜ್ಞಾನೋ. 24:16; ಯಾಕೋ. 5:13-15) ಹೀಗಿರುವಾಗ ಯಾಕೆ ತಡಮಾಡುತ್ತೀರಿ? ಯೆಹೋವನು ಕೊಡುವ ಸಹಾಯವನ್ನು ಸ್ವೀಕರಿಸುವುದರ ಮೇಲೆ ನಿಮ್ಮ ನಿತ್ಯಜೀವ ಹೊಂದಿಕೊಂಡಿದೆ. ಆದರೆ ನಿಮ್ಮ ಪಾಪಕ್ಕೆ ಕ್ಷಮೆ ಸಿಕ್ಕಿ ತುಂಬ ಸಮಯ ಆದ ಮೇಲೂ ನಿಮ್ಮ ಮನಸ್ಸು ಚುಚ್ಚುತ್ತಾ ಇದ್ದರೆ ಏನು ಮಾಡಬೇಕು?

18. ಯೆಹೋವನ ಸೇವೆ ಮಾಡಲು ತಮಗೆ ಯೋಗ್ಯತೆ ಇಲ್ಲ ಎಂದು ನೆನಸುವವರಿಗೆ ಪೌಲನ ಉದಾಹರಣೆ ಹೇಗೆ ಸಹಾಯ ಮಾಡುತ್ತದೆ?

18 ಪೌಲನನ್ನೂ ಅಪರಾಧಿಭಾವ ಕಾಡಿತ್ತು. ಹಿಂದೆ ಮಾಡಿದ ಪಾಪಗಳ ಬಗ್ಗೆ ಅವನ ಮನಸ್ಸು ಚುಚ್ಚುತ್ತಿದ್ದದರಿಂದ ನಿರುತ್ಸಾಹಗೊಂಡನು. “ನಾನು ಅಪೊಸ್ತಲರಲ್ಲಿ ಅತಿ ಕನಿಷ್ಠನು; ನಾನು ದೇವರ ಸಭೆಯವರನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳಲು ಯೋಗ್ಯನಲ್ಲ” ಎಂದನು. ಆದರೂ “ನಾನು ಎಂಥವನಾಗಿದ್ದೇನೋ ಅದು ದೇವರ ಅಪಾತ್ರ ದಯೆಯಿಂದಲೇ ಆಗಿದೆ” ಎಂದೂ ಹೇಳಿದನು. (1 ಕೊರಿಂ. 15:9, 10) ಪೌಲನು ಅಪರಿಪೂರ್ಣನು ಎಂದು ಯೆಹೋವನಿಗೆ ಗೊತ್ತಿತ್ತು. ಅವನು ನಿಜಕ್ಕೂ ಎಂಥ ವ್ಯಕ್ತಿಯಾಗಿದ್ದಾನೋ ಅದಕ್ಕಾಗಿ ಯೆಹೋವನು ಅವನನ್ನು ಸ್ವೀಕರಿಸಿದನು ಮತ್ತು ಇದು ಅವನಿಗೆ ಅರ್ಥ ಆಗಬೇಕೆಂದು ಬಯಸಿದನು. ನೀವು ಹಿಂದೆ ಮಾಡಿದ ತಪ್ಪಿಗೆ ನಿಜವಾಗಲೂ ಪಶ್ಚಾತ್ತಾಪಪಟ್ಟಿದ್ದರೆ, ಯೆಹೋವನಿಗೆ ಅದನ್ನು ಹೇಳಿಕೊಂಡಿದ್ದರೆ ಮತ್ತು ಅಗತ್ಯವಿದ್ದಲ್ಲಿ ಹಿರಿಯರ ಹತ್ತಿರನೂ ಮಾತಾಡಿದ್ದರೆ ಯೆಹೋವನು ಖಂಡಿತ ನಿಮ್ಮನ್ನು ಕ್ಷಮಿಸುತ್ತಾನೆ. ಯೆಹೋವನು ನಿಮ್ಮನ್ನು ಕ್ಷಮಿಸುತ್ತೇನೆ ಅಂತ ಮಾತು ಕೊಟ್ಟ ಮೇಲೆ ಇನ್ನು ಕೊರಗುವುದು ಯಾಕೆ?—ಯೆಶಾ. 55:6, 7.

19. (ಎ) 2018​ರ ವರ್ಷವಚನ ಏನು? (ಬಿ) ಇದು ಸೂಕ್ತವಾಗಿದೆ ಯಾಕೆ?

19 ಈ ಲೋಕದ ಅಂತ್ಯ ಹತ್ತಿರತ್ತಿರ ಬರುತ್ತಿರುವಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ “ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ” ಕೊಡುವ ಯೆಹೋವನಿದ್ದಾನೆ ಅನ್ನುವುದನ್ನು ಮರೆಯಬೇಡಿ. (ಯೆಶಾ. 40:29, ಪವಿತ್ರ ಗ್ರಂಥ ಭಾಷಾಂತರ) ನೀವು ನಂಬಿಗಸ್ತರಾಗಿ ಸೇವೆ ಮಾಡುತ್ತಾ ಇರಲು ಬೇಕಾದ ಬಲವನ್ನು ಆತನು ಖಂಡಿತ ಕೊಡುತ್ತಾನೆ. (ಕೀರ್ತ. 55:22; 68:19) ಈ ಪ್ರಾಮುಖ್ಯ ಸತ್ಯವು 2018ರಾದ್ಯಂತ ನಾವು ರಾಜ್ಯ ಸಭಾಗೃಹದಲ್ಲಿ ವರ್ಷವಚನವನ್ನು ನೋಡುವಾಗ ನಮ್ಮ ನೆನಪಿಗೆ ಬರುವುದು. 2018​ರ ನಮ್ಮ ವರ್ಷವಚನ, ‘ಯೆಹೋವನನ್ನು ನಿರೀಕ್ಷಿಸುವವರು ಹೊಸ ಬಲವನ್ನು ಹೊಂದುವರು’ ಎಂದಾಗಿದೆ.—ಯೆಶಾ. 40:31.