ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವ ರೀತಿಯ ಪ್ರೀತಿ ನಿಜ ಸಂತೋಷವನ್ನು ತರುತ್ತದೆ?

ಯಾವ ರೀತಿಯ ಪ್ರೀತಿ ನಿಜ ಸಂತೋಷವನ್ನು ತರುತ್ತದೆ?

“ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು.”—ಕೀರ್ತ. 144:15.

ಗೀತೆಗಳು: 75, 73

1. ಇದುವರೆಗೂ ಈ ಲೋಕ ನೋಡಿಲ್ಲದ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಹೇಗೆ ಹೇಳಬಹುದು?

ಮಾನವ ಇತಿಹಾಸ ಇದುವರೆಗೂ ನೋಡಿಲ್ಲದ ಒಂದು ಸಮಯದಲ್ಲಿ ನಾವೀಗ ಜೀವಿಸುತ್ತಿದ್ದೇವೆ. ಬೈಬಲ್‌ ಮುಂತಿಳಿಸಿದಂತೆ ಯೆಹೋವನು “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಒಂದು ಮಹಾ ಸಮೂಹವನ್ನು ಒಟ್ಟುಗೂಡಿಸುತ್ತಿದ್ದಾನೆ. ಇವರು 80 ಲಕ್ಷಕ್ಕಿಂತ ಹೆಚ್ಚು ಜನರಿಂದ ಕೂಡಿರುವ “ಬಲವಾದ ಜನಾಂಗ” ಆಗಿದ್ದಾರೆ. ಇವರು ಸಂತೋಷದಿಂದ “ಹಗಲೂರಾತ್ರಿ [ದೇವರಿಗೆ] ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ.” (ಪ್ರಕ. 7:9, 15; ಯೆಶಾ. 60:22) ದೇವರನ್ನು ಮತ್ತು ಮಾನವರನ್ನು ಪ್ರೀತಿಸುವ ಇಷ್ಟೊಂದು ಜನರು ಈ ಲೋಕದಲ್ಲಿ ಹಿಂದೆಂದೂ ಇರಲಿಲ್ಲ.

2. ದೇವರಿಂದ ದೂರ ಆಗಿರುವ ಜನರಲ್ಲಿ ಇಂದು ಯಾವ ರೀತಿಯ ಪ್ರೀತಿ ಇದೆ? (ಲೇಖನದ ಆರಂಭದ ಚಿತ್ರ ನೋಡಿ.)

2 ನಮ್ಮ ಕಾಲದಲ್ಲಿ ದೇವರಿಂದ ದೂರ ಆಗಿರುವ ಜನರಲ್ಲಿ ತಪ್ಪಾದ ಪ್ರೀತಿ ಇರುತ್ತದೆ ಎಂದು ಸಹ ಬೈಬಲ್‌ ಮುಂತಿಳಿಸಿತ್ತು. ಈ ಪ್ರೀತಿಯಲ್ಲಿ ಸ್ವಾರ್ಥ ಇರುತ್ತದೆ. ಕಡೇ ದಿವಸಗಳಲ್ಲಿ ಜನರು “ಸ್ವಪ್ರೇಮಿಗಳೂ ಹಣಪ್ರೇಮಿಗಳೂ . . . ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿರುವರು ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊ. 3:1-4) ಈ ರೀತಿಯ ಸ್ವಾರ್ಥ ಪ್ರೀತಿ ದೇವರ ಮೇಲಿರುವ ಪ್ರೀತಿಗೆ ವಿರುದ್ಧವಾಗಿದೆ. ಸ್ವಾರ್ಥತುಂಬಿದ ಗುರಿಗಳನ್ನು ಮುಟ್ಟಲು ಪ್ರಯತ್ನಿಸುವುದರಿಂದ ಸಂತೋಷ ಸಿಗುತ್ತದೆ ಎಂದು ಕೆಲವರು ನೆನಸಬಹುದು. ಆದರೆ ಇದು ಸತ್ಯವಲ್ಲ. ಈ ರೀತಿಯ ಪ್ರೀತಿ ಎಲ್ಲರನ್ನೂ ಸ್ವಾರ್ಥಿಗಳಾಗಿ ಮಾಡಿಬಿಡುತ್ತದೆ. ಇದರಿಂದ ಜೀವನವನ್ನು ‘ನಿಭಾಯಿಸುವುದು ಕಷ್ಟವಾಗಿ’ ಬಿಡುತ್ತದೆ.

3. ಈ ಲೇಖನದಲ್ಲಿ ನಾವು ಏನನ್ನು ಪರಿಶೀಲಿಸಲಿದ್ದೇವೆ? ಏಕೆ?

3 ಈ ಲೋಕದಲ್ಲಿ ಎಲ್ಲೆಲ್ಲೂ ಸ್ವಾರ್ಥ ತುಂಬಿರುವುದರಿಂದ ಕ್ರೈಸ್ತರ ಮೇಲೂ ಅದು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಪೊಸ್ತಲ ಪೌಲನಿಗೆ ಗೊತ್ತಿತ್ತು. ಆದ್ದರಿಂದ ಸ್ವಾರ್ಥಭರಿತ ಪ್ರೀತಿಯನ್ನು ತೋರಿಸುವ ಜನರಿಂದ ‘ದೂರವಿರಿ’ ಎಂದಾತನು ಎಚ್ಚರಿಸಿದ್ದಾನೆ. (2 ತಿಮೊ. 3:5) ಆದರೆ ಇಂಥ ಜನರಿಂದ ನಾವು ಸಂಪೂರ್ಣವಾಗಿ ದೂರವಿರಲು ಸಾಧ್ಯವಿಲ್ಲ. ನಮ್ಮ ಸುತ್ತಲೂ ಇರುವ ಜನರ ಮನೋಭಾವ ನಮಗೆ ಬರದಂತೆ ನೋಡಿಕೊಂಡು ಪ್ರೀತಿಯ ದೇವರಾದ ಯೆಹೋವನನ್ನು ಮೆಚ್ಚಿಸುವುದು ಹೇಗೆ? ನಮ್ಮಲ್ಲಿರಬೇಕೆಂದು ದೇವರು ಬಯಸುವ ಪ್ರೀತಿಗೂ 2 ತಿಮೊಥೆಯ 3:2-4​ರಲ್ಲಿ ತಿಳಿಸಲಾಗಿರುವ ಪ್ರೀತಿಗೂ ಏನು ವ್ಯತ್ಯಾಸ ಎಂದು ನೋಡೋಣ. ಆಮೇಲೆ ನಮ್ಮಲ್ಲಿ ಎಂಥ ಪ್ರೀತಿ ಇದೆ ಎಂದು ಪರಿಶೀಲಿಸಿಕೊಂಡು ನಮಗೆ ನಿಜ ಸಂತೃಪ್ತಿ ಸಂತೋಷ ತರುವ ಪ್ರೀತಿಯನ್ನು ಹೇಗೆ ತೋರಿಸುವುದು ಎಂದು ನೋಡೋಣ.

ದೇವರನ್ನು ಪ್ರೀತಿಸುತ್ತೀರಾ, ನಿಮ್ಮನ್ನೇ ಪ್ರೀತಿಸುತ್ತೀರಾ?

4. ನಾವು ನಮ್ಮನ್ನೇ ಸ್ವಲ್ಪ ಮಟ್ಟಿಗೆ ಪ್ರೀತಿಸುವುದು ತಪ್ಪಲ್ಲ ಯಾಕೆ?

4 ‘ಜನರು ಸ್ವಪ್ರೇಮಿಗಳು’ ಆಗಿರುತ್ತಾರೆ ಎಂದು ಪೌಲ ಬರೆದನು. ಹಾಗಾದರೆ ನಮ್ಮನ್ನು ನಾವೇ ಪ್ರೀತಿಸುವುದು ತಪ್ಪಾ? ಇಲ್ಲ. ನಮ್ಮನ್ನು ನಾವೇ ಪ್ರೀತಿಸುವುದು ಸಹಜ, ಅವಶ್ಯಕ ಕೂಡ. ಯೆಹೋವನು ನಮ್ಮನ್ನು ಹಾಗೇ ರೂಪಿಸಿದ್ದಾನೆ. ಯೇಸು ಸಹ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದಿದ್ದಾನೆ. (ಮಾರ್ಕ 12:31) ನಾವು ನಮ್ಮನ್ನೇ ಪ್ರೀತಿಸದೆ ಬೇರೆಯವರನ್ನು ಪ್ರೀತಿಸಲು ಸಾಧ್ಯವಿಲ್ಲ. “ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ; ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ” ಎಂದು ಸಹ ಬೈಬಲ್‌ ಹೇಳುತ್ತದೆ. (ಎಫೆ. 5:28, 29) ಆದ್ದರಿಂದ ನಾವು ನಮ್ಮನ್ನೇ ಸ್ವಲ್ಪ ಮಟ್ಟಿಗೆ ಪ್ರೀತಿಸಬೇಕೆಂಬುದು ಸ್ಪಷ್ಟ.

5. ತಮ್ಮನ್ನೇ ತುಂಬ ಪ್ರೀತಿಸುವ ವ್ಯಕ್ತಿಗಳ ಬಗ್ಗೆ ಏನು ಹೇಳಬಹುದು?

5 ಎರಡನೇ ತಿಮೊಥೆಯ 3:2​ರಲ್ಲಿ ತಿಳಿಸಲಾಗಿರುವ ಸ್ವಪ್ರೇಮ ಸಹಜವಾದ ಪ್ರೀತಿ ಅಲ್ಲ. ಇದರಲ್ಲಿ ಸ್ವಾರ್ಥ ಇರುತ್ತದೆ. ತಮ್ಮನ್ನೇ ತುಂಬ ಪ್ರೀತಿಸುವ ವ್ಯಕ್ತಿಗಳು ತಮ್ಮ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಯೋಚಿಸುತ್ತಾರೆ. (ರೋಮನ್ನರಿಗೆ 12:3 ಓದಿ.) ಅವರಿಗೆ ಜೀವನದಲ್ಲಿ ಅವರೇ ಮುಖ್ಯ. ಏನಾದರೂ ತಪ್ಪಾಗಿ ಬಿಟ್ಟರೆ ಅದನ್ನು ಬೇರೆಯವರ ಮೇಲೆ ಎತ್ತಿಹಾಕಿಬಿಡುತ್ತಾರೆ. ಇಂಥ ಒಬ್ಬ ವ್ಯಕ್ತಿಯನ್ನು ಒಬ್ಬ ಬೈಬಲ್‌ ವ್ಯಾಖ್ಯಾನಕಾರ ಬೇಲಿಹಂದಿಗೆ ಹೋಲಿಸುತ್ತಾರೆ. ಈ ಬೇಲಿಹಂದಿ ತನ್ನ ದೇಹವನ್ನು ಗುಂಡಗೆ ಮಾಡಿಕೊಂಡು ಮೃದುವಾದ ತನ್ನ ತುಪ್ಪಳದಲ್ಲಿ ತನ್ನನ್ನೇ ಬೆಚ್ಚಗಿಟ್ಟುಕೊಂಡು ಬೇರೆಯವರಿಗೆ ತನ್ನ ಮೈಮೇಲಿರುವ ಚೂಪಾದ ಮುಳ್ಳುಗಳನ್ನು ತೋರಿಸುತ್ತದೆ. ಈ ರೀತಿ ತಮ್ಮ ಸ್ವಾರ್ಥ ನೋಡಿಕೊಳ್ಳುವ ಜನರು ನಿಜವಾಗಿ ಸಂತೋಷವಾಗಿರುವುದಿಲ್ಲ.

6. ನಾವು ದೇವರನ್ನು ಪ್ರೀತಿಸುವಾಗ ಯಾವ ಒಳ್ಳೇ ಫಲಿತಾಂಶಗಳು ಸಿಗುತ್ತವೆ?

6 ಕೆಲವು ಬೈಬಲ್‌ ವಿದ್ವಾಂಸರು ಏನು ಹೇಳುತ್ತಾರೆಂದರೆ, ಸ್ವಪ್ರೇಮದಿಂದ ಬೇರೆ ಕೆಟ್ಟಗುಣಗಳು ಹುಟ್ಟುವ ಕಾರಣ ಪೌಲ ಅದನ್ನು ಕೆಟ್ಟಗುಣಗಳ ಪಟ್ಟಿಯಲ್ಲಿ ಮೊದಲು ಹಾಕಿದ್ದಾನೆ. ಆದರೆ ನಾವು ದೇವರನ್ನು ಪ್ರೀತಿಸುವುದಾದರೆ ನಮ್ಮಲ್ಲಿ ಒಳ್ಳೇ ಗುಣಗಳು ಹುಟ್ಟುತ್ತವೆ. ಇದು ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ ಮತ್ತು ಸ್ವನಿಯಂತ್ರಣಕ್ಕೆ ಸಂಬಂಧಿಸಿದೆ. (ಗಲಾ. 5:22, 23) ಆದ್ದರಿಂದ “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು” ಅಂದರೆ ಸಂತೋಷಿತರು ಎಂದು ಕೀರ್ತನೆಗಾರನು ಬರೆದಿದ್ದಾನೆ. (ಕೀರ್ತ. 144:15) ಯೆಹೋವನು ಸಂತೋಷದ ದೇವರು. ಹಾಗಾಗಿ ಆತನ ಜನರೂ ಸಂತೋಷವಾಗಿದ್ದಾರೆ. ತಮ್ಮನ್ನೇ ಹೆಚ್ಚಾಗಿ ಪ್ರೀತಿಸುವ ಜನರು ತಮಗೆ ಏನು ಸಿಗುತ್ತದೆ ಅನ್ನುವುದರ ಬಗ್ಗೆ ಯಾವಾಗಲೂ ಯೋಚಿಸುತ್ತಾರೆ. ಆದರೆ ಯೆಹೋವನ ಜನರು ಬೇರೆಯವರಿಗೆ ಕೊಡುವುದರ ಬಗ್ಗೆ ಯೋಚಿಸುವುದರಿಂದ ಸಂತೋಷವಾಗಿದ್ದಾರೆ.—ಅ. ಕಾ. 20:35.

ನಾವು ಸ್ವಪ್ರೇಮಿಗಳು ಆಗದೆ ಇರುವುದು ಹೇಗೆ? (ಪ್ಯಾರ 7 ನೋಡಿ)

7. ನಮಗೆ ದೇವರ ಮೇಲೆ ಎಷ್ಟು ಪ್ರೀತಿ ಇದೆ ಎಂದು ತಿಳಿದುಕೊಳ್ಳಲು ಯಾವ ಪ್ರಶ್ನೆಗಳು ಸಹಾಯ ಮಾಡುತ್ತವೆ?

7 ದೇವರ ಮೇಲಿರುವ ಪ್ರೀತಿಗಿಂತ ನಮಗೆ ನಮ್ಮ ಮೇಲಿರುವ ಪ್ರೀತಿ ಜಾಸ್ತಿ ಆಗುತ್ತಿದೆಯಾ ಎಂದು ಹೇಗೆ ತಿಳಿದುಕೊಳ್ಳಬಹುದು? ಈ ಬುದ್ಧಿವಾದದ ಬಗ್ಗೆ ಯೋಚಿಸಿ: “ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ. ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.” (ಫಿಲಿ. 2:3, 4) ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನು ಈ ಬುದ್ಧಿವಾದಕ್ಕೆ ಕಿವಿಗೊಡುತ್ತೇನಾ? ದೇವರು ನನ್ನಿಂದ ಏನು ಬಯಸುತ್ತಾನೋ ಅದನ್ನು ಮಾಡಲು ಪ್ರಯತ್ನಿಸುತ್ತೇನಾ? ಸಭೆಯಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಬೇರೆಯವರಿಗೆ ಸಹಾಯ ಮಾಡಲು ಅವಕಾಶಗಳಿಗಾಗಿ ಹುಡುಕುತ್ತೇನಾ?’ ನಮ್ಮ ಸಮಯ ಮತ್ತು ಶಕ್ತಿಯನ್ನು ಬೇರೆಯವರಿಗಾಗಿ ಕೊಡುವುದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ. ಇದಕ್ಕೆ ತುಂಬ ಶ್ರಮ ಹಾಕಬೇಕಾಗುತ್ತದೆ ಮತ್ತು ನಾವು ಆನಂದಿಸುವಂಥ ಕೆಲವು ವಿಷಯಗಳನ್ನು ತ್ಯಾಗಮಾಡಬೇಕಾಗಿ ಬರುತ್ತದೆ. ಆದರೆ ನಾವು ನಮ್ಮನ್ನೇ ಕೊಟ್ಟುಕೊಳ್ಳುವುದನ್ನು ನೋಡಿ ವಿಶ್ವದ ಪರಮಾಧಿಕಾರಿಗೆ ಸಂತೋಷವಾಗುತ್ತದೆ ಅನ್ನುವುದಕ್ಕಿಂತ ದೊಡ್ಡ ಸಂತೋಷ ಬೇರೊಂದಿಲ್ಲ.

8. ಕೆಲವು ಕ್ರೈಸ್ತರು ದೇವರ ಮೇಲೆ ಅವರಿಗಿರುವ ಪ್ರೀತಿಯಿಂದಾಗಿ ಏನು ಮಾಡಿದ್ದಾರೆ?

8 ಕೆಲವು ಕ್ರೈಸ್ತರು ದೇವರ ಮೇಲಿರುವ ಪ್ರೀತಿಯಿಂದಾಗಿ ಮತ್ತು ಆತನ ಸೇವೆಯನ್ನು ಹೆಚ್ಚು ಮಾಡುವ ಬಯಕೆಯಿಂದಾಗಿ ತುಂಬ ದುಡ್ಡುಮಾಡಬಹುದಾದ ಉದ್ಯೋಗಗಳನ್ನು ಬಿಟ್ಟುಬಿಟ್ಟಿದ್ದಾರೆ. ಎರಿಕಾ ಅವರ ಉದಾಹರಣೆ ತೆಗೆದುಕೊಳ್ಳಿ. ಅವರೊಬ್ಬ ಡಾಕ್ಟರ್‌. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಬದಲು ಪಯನೀಯರ್‌ ಸೇವೆಗೆ ಗಮನಕೊಡಲು ಆಸೆಪಟ್ಟರು. ಇದರಿಂದ ಅವರು ಮತ್ತು ಅವರ ಗಂಡ ಅನೇಕ ದೇಶಗಳಲ್ಲಿ ಸೇವೆ ಮಾಡಿದ್ದಾರೆ. ಎರಿಕಾ ಹೇಳುವುದು: “ವಿದೇಶೀ ಭಾಷೆಯ ಕ್ಷೇತ್ರದಲ್ಲಿ ಸೇವೆ ಮಾಡಿ ನಮಗೆ ಸಿಕ್ಕಿರುವ ಅನುಭವಗಳಿಂದಾಗಿ ಮತ್ತು ಸ್ನೇಹಿತರಿಂದಾಗಿ ನಮ್ಮ ಜೀವನ ಸಂತೋಷ, ಸಂತೃಪ್ತಿಯಿಂದ ತುಂಬಿದೆ.” ಎರಿಕಾ ಇನ್ನೂ ಡಾಕ್ಟರಾಗಿಯೇ ಕೆಲಸ ಮಾಡುತ್ತಾರೆ. ಆದರೆ ಅವರು ತಮ್ಮ ಸಮಯ ಮತ್ತು ಶಕ್ತಿಯನ್ನು ಜನರಿಗೆ ಯೆಹೋವನ ಬಗ್ಗೆ ಕಲಿಸಲು ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡಲು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದು ಅವರಿಗೆ “ಸಂತೋಷ, ಸಂತೃಪ್ತಿ” ಕೊಡುತ್ತದೆ ಎಂದವರು ಹೇಳುತ್ತಾರೆ.

ನೀವು ಸ್ವರ್ಗದಲ್ಲಿ ಕೂಡಿಸಿಡುತ್ತಿದ್ದೀರಾ, ಭೂಮಿಯಲ್ಲಿ ಕೂಡಿಸಿಡುತ್ತಿದ್ದೀರಾ?

9. ಹಣಪ್ರೇಮಿಗಳು ಯಾಕೆ ಸಂತೋಷವಾಗಿರಲು ಸಾಧ್ಯವಿಲ್ಲ?

9 ಜನರು “ಹಣಪ್ರೇಮಿಗಳೂ” ಆಗಿರುತ್ತಾರೆ ಎಂದು ಪೌಲ ಬರೆದನು. ಕೆಲವು ವರ್ಷಗಳ ಹಿಂದೆ ಐರ್ಲೆಂಡಿನಲ್ಲಿ ಒಬ್ಬ ಪಯನೀಯರ್‌ ಸಹೋದರನು ಒಬ್ಬ ವ್ಯಕ್ತಿಯ ಹತ್ತಿರ ದೇವರ ಬಗ್ಗೆ ಮಾತಾಡಿದನು. ಆ ವ್ಯಕ್ತಿ ತನ್ನ ಪರ್ಸನ್ನು ತೆಗೆದು, ಅದರಲ್ಲಿರುವ ದುಡ್ಡನ್ನು ತೋರಿಸಿ “ಇದೇ ನನ್ನ ದೇವರು!” ಅಂದ. ಅನೇಕರು ಈ ರೀತಿ ಬಾಯಿಬಿಟ್ಟು ಹೇಳದಿದ್ದರೂ ಮನಸ್ಸಲ್ಲಿ ದುಡ್ಡನ್ನೇ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಹಣದಿಂದ ಖರೀದಿಸಬಹುದಾದ ವಸ್ತುಗಳ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಆದರೆ ಬೈಬಲ್‌ ಈ ಎಚ್ಚರಿಕೆಯನ್ನು ಕೊಡುತ್ತದೆ: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು.” (ಪ್ರಸಂ. 5:10) ಹಣಪ್ರೇಮಿಗಳಿಗೆ ಎಷ್ಟು ಹಣ ಇದ್ದರೂ ಸಾಕು ಅನಿಸುವುದಿಲ್ಲ. ಇನ್ನೂ ಬೇಕು ಬೇಕು ಅಂತ ತಮ್ಮ ಇಡೀ ಜೀವನವನ್ನು ದುಡ್ಡು ಮಾಡುವುದರಲ್ಲೇ ಸವೆಸುತ್ತಾರೆ. ಇದು ಅವರಿಗೆ ‘ಅನೇಕ ವೇದನೆಗಳನ್ನು’ ತರುತ್ತದೆ.—1 ತಿಮೊ. 6:9, 10.

10. ಐಶ್ವರ್ಯ ಮತ್ತು ಬಡತನದ ಬಗ್ಗೆ ಆಗೂರನು ಏನು ಬರೆದನು?

10 ನಮ್ಮೆಲ್ಲರಿಗೂ ದುಡ್ಡು ಬೇಕು ಅನ್ನುವುದು ನಿಜಾನೇ. ಅದರಿಂದ ನಮಗೆ ಆಶ್ರಯ ಅಥವಾ ಭದ್ರತೆ ಸಿಗುತ್ತದೆ. (ಪ್ರಸಂ. 7:12) ಆದರೆ ನಮ್ಮ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವಷ್ಟು ಮಾತ್ರ ಇದ್ದರೆ ನಾವು ಸಂತೋಷವಾಗಿರಲು ಸಾಧ್ಯನಾ? ಸಾಧ್ಯ! (ಪ್ರಸಂಗಿ 5:12 ಓದಿ.) ಯಾಕೆ ಎಂಬವನ ಮಗನಾದ ಆಗೂರನು ಬರೆದದ್ದು: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು.” ರಾಜ ಯಾಕೆ ಬಡತನ ಬೇಡ ಅನ್ನುತ್ತಿದ್ದಾನೆ ಅನ್ನುವುದು ನಮಗೆ ಅರ್ಥವಾಗುತ್ತದೆ. ಕೈಯಲ್ಲಿ ಏನೂ ಇಲ್ಲ ಅಂದರೆ ಕದಿಯಲು ಮನಸ್ಸಾಗುತ್ತದೆ. ಕದಿಯುವುದರಿಂದ ದೇವರ ಹೆಸರಿಗೆ ಕಳಂಕ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವನು ಬಡತನ ಬೇಡ ಅಂದನು. ಆದರೆ ಅವನು ಐಶ್ವರ್ಯನೂ ಬೇಡ ಅಂತಿದ್ದಾನಲ್ಲಾ? “ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು” ಎಂಬ ಭಯ ಅವನಿಗಿತ್ತು. (ಜ್ಞಾನೋ. 30:8, 9) ದೇವರಲ್ಲಿ ನಂಬಿಕೆ ಇಡುವ ಬದಲು ದುಡ್ಡನ್ನೇ ನಂಬಿಕೊಂಡಿರುವ ಜನರ ಬಗ್ಗೆ ನಿಮಗೆ ಗೊತ್ತಿರಬಹುದು.

11. ಯೇಸು ಹಣದ ಬಗ್ಗೆ ಏನು ಹೇಳಿದ್ದಾನೆ?

11 ಹಣಪ್ರೇಮಿಗಳು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಯೇಸು ಹೇಳಿದ್ದು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.” ಆತನು ಹೀಗೂ ಹೇಳಿದನು: “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; ಇಲ್ಲಿ ನುಸಿ ಮತ್ತು ಕಿಲುಬು ಅದನ್ನು ಹಾಳುಮಾಡಿಬಿಡುತ್ತದೆ; ಕಳ್ಳರು ಒಳನುಗ್ಗಿ ಕದಿಯುತ್ತಾರೆ. ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ; ಅಲ್ಲಿ ನುಸಿಯಾಗಲಿ ಕಿಲುಬಾಗಲಿ ಅದನ್ನು ಹಾಳುಮಾಡುವುದಿಲ್ಲ; ಕಳ್ಳರು ಒಳನುಗ್ಗಿ ಕದಿಯುವುದೂ ಇಲ್ಲ.”—ಮತ್ತಾ. 6:19, 20, 24.

12. ಸರಳ ಜೀವನ ನಡೆಸುವುದರಿಂದ ದೇವರ ಸೇವೆಯನ್ನು ಹೇಗೆ ಹೆಚ್ಚಾಗಿ ಮಾಡಲು ಸಹಾಯವಾಗುತ್ತದೆ? ಒಂದು ಉದಾಹರಣೆ ಕೊಡಿ.

12 ಯೆಹೋವನ ಸೇವಕರಲ್ಲಿ ಅನೇಕರು ಸರಳವಾದ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇದು ಅವರಿಗೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಸಹಾಯ ಮಾಡಿದೆ ಮತ್ತು ಇದರಿಂದ ಅವರ ಸಂತೋಷ ಹೆಚ್ಚಾಗಿದೆ ಎಂದವರು ಹೇಳುತ್ತಾರೆ. ಅಮೆರಿಕದಲ್ಲಿರುವ ಜ್ಯಾಕ್‌ ತನ್ನ ಹೆಂಡತಿಯೊಟ್ಟಿಗೆ ಪಯನೀಯರ್‌ ಸೇವೆ ಮಾಡಲಿಕ್ಕಾಗಿ ತನ್ನ ದೊಡ್ಡ ಮನೆಯನ್ನು ಮಾರಿದರು ಮತ್ತು ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಿಟ್ಟರು. ಅವರು ಹೇಳುವುದು: “ಸುಂದರವಾದ ಸ್ಥಳದಲ್ಲಿದ್ದ ನಮ್ಮ ಚಂದದ ಮನೆ ಮತ್ತು ಜಮೀನನ್ನು ಮಾರಲು ನಮಗೆ ಮನಸ್ಸೇ ಇರಲಿಲ್ಲ.” ಆದರೆ ಎಷ್ಟೋ ವರ್ಷಗಳಿಂದ ಅವರು ಕೆಲಸದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಂದಾಗಿ ತುಂಬ ಕಿರಿಕಿರಿಯಾಗಿ ಮನೆಗೆ ಬರುತ್ತಿದ್ದರು. ಅವರು ಏನು ಹೇಳುತ್ತಾರೆಂದರೆ, “ಪಯನೀಯರ್‌ ಆಗಿರುವ ನನ್ನ ಹೆಂಡತಿ ಯಾವಾಗಲೂ ಸಂತೋಷವಾಗಿ ಇರುತ್ತಿದ್ದಳು. ‘ನನ್ನ ಬಾಸ್‌ನಷ್ಟು ಒಳ್ಳೆಯವರು ಬೇರೆ ಯಾರೂ ಇಲ್ಲ!’ ಅನ್ನುತ್ತಿದ್ದಳು. ಈಗ ನಾನೂ ಪಯನೀಯರ್‌ ಸೇವೆ ಮಾಡುತ್ತಿರುವುದರಿಂದ ನಾವಿಬ್ಬರೂ ಒಂದೇ ಯಜಮಾನ ಅಂದರೆ ಯೆಹೋವನ ಸೇವೆ ಮಾಡುತ್ತಿದ್ದೇವೆ.”

ನಾವು ಹಣಪ್ರೇಮಿಗಳು ಆಗದೆ ಇರುವುದು ಹೇಗೆ? (ಪ್ಯಾರ 13 ನೋಡಿ)

13. ದುಡ್ಡಿನ ಬಗ್ಗೆ ನಮ್ಮ ದೃಷ್ಟಿಕೋನ ಏನೆಂದು ಪರಿಶೀಲಿಸಲು ಯಾವುದು ಸಹಾಯ ಮಾಡುತ್ತದೆ?

13 ದುಡ್ಡಿನ ಬಗ್ಗೆ ನಮ್ಮ ದೃಷ್ಟಿಕೋನ ಏನು ಎಂದು ಪರಿಶೀಲಿಸಲು ನಾವು ಪ್ರಾಮಾಣಿಕವಾಗಿ ನಮ್ಮನ್ನೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ದುಡ್ಡಿನ ಬಗ್ಗೆ ಬೈಬಲ್‌ ಏನು ಹೇಳುತ್ತದೋ ಅದನ್ನು ನಾನು ನಿಜವಾಗಿಯೂ ನಂಬುತ್ತೇನೆ ಎಂದು ನನ್ನ ಜೀವನ ರೀತಿ ತೋರಿಸುತ್ತದಾ? ದುಡ್ಡು ಮಾಡುವುದಕ್ಕೆ ನಾನು ತುಂಬ ಪ್ರಾಮುಖ್ಯತೆ ಕೊಡುತ್ತೇನಾ? ನನಗೆ ಯೆಹೋವನೊಟ್ಟಿಗಿರುವ ಮತ್ತು ಬೇರೆ ಜನರೊಂದಿಗಿರುವ ಸಂಬಂಧಕ್ಕಿಂತ ಪ್ರಾಪಂಚಿಕ ವಿಷಯಗಳೇ ತುಂಬ ಮುಖ್ಯ ಆಗಿಬಿಟ್ಟಿದೆಯಾ? ಯೆಹೋವನು ನನ್ನ ಅಗತ್ಯಗಳನ್ನು ಪೂರೈಸುತ್ತಾನೆ ಎಂದು ನಾನು ನಿಜವಾಗಿಯೂ ನಂಬುತ್ತೇನಾ?’ ಯೆಹೋವನು ಎಂದೂ ತನ್ನನ್ನು ನಂಬಿ ಬಂದವರ ಕೈಬಿಡುವುದಿಲ್ಲ.—ಮತ್ತಾ. 6:33.

ಯೆಹೋವನನ್ನು ಪ್ರೀತಿಸುತ್ತೀರಾ, ಭೋಗವನ್ನು ಪ್ರೀತಿಸುತ್ತೀರಾ?

14. ಜೀವನವನ್ನು ಸ್ವಲ್ಪ ಆನಂದಿಸುವುದು ತಪ್ಪಲ್ಲ ಯಾಕೆ?

14 ಕಡೇ ದಿವಸಗಳಲ್ಲಿ “ಭೋಗವನ್ನು ಪ್ರೀತಿಸುವವರೂ” ಇರುತ್ತಾರೆ ಎಂದು ಬೈಬಲ್‌ ಹೇಳುತ್ತದೆ. ನಾವು ನಮ್ಮನ್ನೇ ಸ್ವಲ್ಪ ಮಟ್ಟಿಗೆ ಪ್ರೀತಿಸುವುದು ಮತ್ತು ನಮ್ಮ ಆವಶ್ಯಕತೆಗಳಿಗೆ ಬೇಕಾದಷ್ಟು ದುಡ್ಡು ಇಟ್ಟುಕೊಳ್ಳುವುದು ತಪ್ಪಲ್ಲ ಎಂದು ನೋಡಿದೆವು. ಅದೇ ರೀತಿ ಜೀವನವನ್ನು ಸ್ವಲ್ಪ ಆನಂದಿಸುವುದರಲ್ಲಿಯೂ ತಪ್ಪಿಲ್ಲ. ಕೆಲವರು ಎಲ್ಲಾ ಬಿಟ್ಟು ಸಂನ್ಯಾಸಿ ತರ ಬದುಕಬೇಕೆಂದು ಹೇಳುತ್ತಾರೆ. ಆದರೆ ಯೆಹೋವನು ಹಾಗೆ ಹೇಳಿಲ್ಲ. ಬೈಬಲು ದೇವರ ನಂಬಿಗಸ್ತ ಸೇವಕರಿಗೆ ಹೀಗೆ ಹೇಳುತ್ತದೆ: “ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು; ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ.”—ಪ್ರಸಂ. 9:7.

15. ‘ಭೋಗವನ್ನು ಪ್ರೀತಿಸುವವರ’ ಬಗ್ಗೆ 2 ತಿಮೊಥೆಯ 3:4 ಏನು ಹೇಳುತ್ತದೆ?

15 ಭೋಗವನ್ನು ಪ್ರೀತಿಸುತ್ತಾ ತಮ್ಮ ಜೀವನದಲ್ಲಿ ದೇವರಿಗೆ ಯಾವ ಸ್ಥಾನವೂ ಕೊಡದ ಜನರ ಬಗ್ಗೆ 2 ತಿಮೊಥೆಯ 3:4 ಮಾತಾಡುತ್ತದೆ. ಇಂಥ ಜನರು ದೇವರಿಗಿಂತ ಭೋಗವನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ವಚನ ಹೇಳುವುದಿಲ್ಲ. ಹೀಗಾದರೆ ಅವರಲ್ಲಿ ದೇವರ ಮೇಲೆ ಸ್ವಲ್ಪವಾದರೂ ಪ್ರೀತಿ ಇದೆ ಎಂದು ಆಗಿಬಿಡುತ್ತದೆ. ಆ ವಚನ, ದೇವರನ್ನು ಪ್ರೀತಿಸುವ “ಬದಲು” ಎಂದು ಹೇಳುತ್ತದೆ. ಒಬ್ಬ ವಿದ್ವಾಂಸನು ಹೇಳುವ ಪ್ರಕಾರ, ಆ ವಚನ ಭೋಗವನ್ನು ಪ್ರೀತಿಸುವವರು “ದೇವರನ್ನು ಸಹ ಸ್ವಲ್ಪ ಮಟ್ಟಿಗೆ ಪ್ರೀತಿಸುತ್ತಾರೆ ಎಂದು ಖಂಡಿತ ಹೇಳುತ್ತಿಲ್ಲ. ಅವರು ದೇವರನ್ನು ಪ್ರೀತಿಸುವುದೇ ಇಲ್ಲ ಎಂದು ಹೇಳುತ್ತದೆ.” ಭೋಗವನ್ನು ಪ್ರೀತಿಸುವ ಜನರಿಗೆ ಇದರಲ್ಲಿ ಒಂದು ಗಂಭೀರವಾದ ಎಚ್ಚರಿಕೆ ಇದೆ. ಜೀವನದಲ್ಲಿ ಭೋಗಕ್ಕೆ ಪ್ರಾಮುಖ್ಯತೆ ಕೊಡುವವರು ‘ದಾರಿತಪ್ಪಿ’ ಹೋಗುತ್ತಾರೆ ಎಂದು ಬೈಬಲ್‌ ಹೇಳುತ್ತದೆ.—ಲೂಕ 8:14.

16, 17. ಜೀವನವನ್ನು ಆನಂದಿಸುವ ವಿಷಯದಲ್ಲಿ ಯೇಸು ಯಾವ ಮಾದರಿ ಇಟ್ಟಿದ್ದಾನೆ?

16 ಜೀವನವನ್ನು ಸ್ವಲ್ಪ ಆನಂದಿಸುವುದರಲ್ಲಿ ತಪ್ಪೇನಿಲ್ಲ ಎಂದು ಯೇಸು ತೋರಿಸಿಕೊಟ್ಟನು. ಅವನು “ಒಂದು ಮದುವೆಯ ಔತಣಕ್ಕೆ” ಮತ್ತು ‘ಒಂದು ದೊಡ್ಡ ಔತಣಕ್ಕೆ’ ಹೋಗಿದ್ದನು. (ಯೋಹಾ. 2:1-10; ಲೂಕ 5:29) ಅವನು ಹೋಗಿದ್ದ ಮದುವೆ ಔತಣದಲ್ಲಿ ದ್ರಾಕ್ಷಾಮದ್ಯ ಸಾಲದೇ ಹೋಯಿತು. ಆಗ ಅವನು ಒಂದು ಅದ್ಭುತ ಮಾಡಿ ನೀರನ್ನು ದ್ರಾಕ್ಷಾಮದ್ಯವಾಗಿ ಮಾಡಿದನು. ಇನ್ನೊಂದು ಸಂದರ್ಭದಲ್ಲಿ, ಯೇಸು ತಿನ್ನುತ್ತಾ ಕುಡಿಯುತ್ತಾ ಇರುವುದನ್ನು ನೋಡಿ ಕೆಲವು ಜನರು ಅವನನ್ನು ಟೀಕಿಸಿದರು. ಆ ಜನರ ದೃಷ್ಟಿಕೋನ ಸರಿಯಾಗಿರಲಿಲ್ಲ ಎಂದು ಅವನು ಸ್ಪಷ್ಟವಾಗಿ ಹೇಳಿದನು.—ಲೂಕ 7:33-36.

17 ಆದರೆ ಯೇಸು ಮಜಾ ಮಾಡುವುದನ್ನೇ ಜೀವನದ ಗುರಿಯಾಗಿ ಇಟ್ಟುಕೊಂಡಿರಲಿಲ್ಲ. ಆತನು ಯೆಹೋವನಿಗೆ ಪ್ರಾಮುಖ್ಯತೆ ಕೊಟ್ಟನು ಮತ್ತು ಬೇರೆಯವರಿಗೆ ಸಹಾಯ ಮಾಡಲು ಹಗಲುರಾತ್ರಿ ಒಂದುಮಾಡಿ ದುಡಿದನು. ಮಾನವರನ್ನು ರಕ್ಷಿಸಲಿಕ್ಕಾಗಿ ಯಾತನಾ ಕಂಬದ ಮೇಲೆ ನೋವು ತಿಂದು ಸಾಯಲು ಸಿದ್ಧನಿದ್ದನು. ತನ್ನ ಹಿಂಬಾಲಕರಾಗಲು ಬಯಸಿದವರಿಗೆ ಯೇಸು ಹೇಳಿದ್ದು: “ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸಿ ನಿಮ್ಮ ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವಾಗ ನೀವು ಸಂತೋಷಿತರು. ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು.”—ಮತ್ತಾ. 5:11, 12.

ನಾವು ಭೋಗವನ್ನು ಪ್ರೀತಿಸುವವರು ಆಗದೆ ಇರುವುದು ಹೇಗೆ? (ಪ್ಯಾರ 18 ನೋಡಿ)

18. ಜೀವನವನ್ನು ಆನಂದಿಸುವುದು ನಮಗೆ ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ಯಾವುದು ಸಹಾಯ ಮಾಡುತ್ತದೆ?

18 ಜೀವನವನ್ನು ಆನಂದಿಸುವುದಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎಂದು ತಿಳಿದುಕೊಳ್ಳಲು ಯಾವುದು ಸಹಾಯ ಮಾಡುತ್ತದೆ? ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: ‘ನನಗೆ ಕೂಟಗಳಿಗಿಂತ, ಕ್ಷೇತ್ರ ಸೇವೆಗಿಂತ ಮನೋರಂಜನೆ ತುಂಬ ಮುಖ್ಯನಾ? ನಾನು ದೇವರ ಸೇವೆ ಮಾಡಲಿಕ್ಕಾಗಿ ನನಗೆ ಇಷ್ಟವಾದ ಕೆಲವು ವಿಷಯಗಳನ್ನು ತ್ಯಾಗಮಾಡಲು ಸಿದ್ಧನಿದ್ದೇನಾ? ಮನೋರಂಜನೆಯನ್ನು ಆರಿಸಿಕೊಳ್ಳುವಾಗ, ಇದು ಯೆಹೋವನಿಗೆ ಇಷ್ಟವಾಗುತ್ತದಾ ಎಂದು ಯೋಚಿಸುತ್ತೇನಾ?’ ನಾವು ದೇವರನ್ನು ಪ್ರೀತಿಸುವುದರಿಂದ ಮತ್ತು ಆತನನ್ನು ಸಂತೋಷಪಡಿಸಲು ಬಯಸುವುದರಿಂದ ನಮಗೆ ತಪ್ಪು ಎಂದು ಗೊತ್ತಿರುವ ವಿಷಯಗಳನ್ನು ಮಾತ್ರವಲ್ಲ ಆತನಿಗೆ ಇಷ್ಟವಾಗಲ್ಲ ಎಂದು ಅನಿಸುವ ವಿಷಯಗಳನ್ನೂ ದೂರ ಇಡುತ್ತೇವೆ.—ಮತ್ತಾಯ 22:37, 38 ಓದಿ.

ಸಂತೋಷವಾಗಿರಲು ಏನು ಮಾಡಬೇಕು?

19. ಯಾರು ನಿಜವಾಗಲೂ ಸಂತೋಷವಾಗಿರಲು ಸಾಧ್ಯವಿಲ್ಲ?

19 ಸೈತಾನನ ಲೋಕ ಸುಮಾರು 6,000 ವರ್ಷಗಳಿಂದ ಮಾನವರಿಗೆ ಹೇಳಲಿಕ್ಕಾಗದಷ್ಟು ನೋವು ಕೊಟ್ಟಿದೆ. ಈ ಲೋಕದ ಅಂತ್ಯ ಹತ್ತಿರವಾಗಿರುವ ಈ ಸಮಯದಲ್ಲಿ ಈ ಲೋಕ ಸ್ವಪ್ರೇಮಿಗಳಿಂದ, ಹಣಪ್ರೇಮಿಗಳಿಂದ, ಭೋಗವನ್ನು ಪ್ರೀತಿಸುವವರಿಂದ ತುಂಬಿಕೊಂಡಿದೆ. ಜೀವನದಲ್ಲಿ ಏನೇ ಮಾಡಿದರೂ ಅದರಿಂದ ತಮಗೇನು ಲಾಭ ಸಿಗುತ್ತದೆ ಎಂದು ಯೋಚಿಸುತ್ತಾರೆ. ತಮ್ಮ ಆಸೆ-ಆಕಾಂಕ್ಷೆಗಳೇ ಅವರಿಗೆ ಜೀವನದಲ್ಲಿ ಮುಖ್ಯ ಆಗಿಬಿಟ್ಟಿದೆ. ಇಂಥ ಜನ ನಿಜವಾಗಲೂ ಸಂತೋಷವಾಗಿರಲು ಸಾಧ್ಯವಿಲ್ಲ! ಆದರೆ “ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು” ಅಥವಾ ಸಂತೋಷವಾಗಿರುವನು ಎಂದು ಬೈಬಲ್‌ ಹೇಳುತ್ತದೆ.—ಕೀರ್ತ. 146:5.

20. ದೇವರ ಮೇಲಿರುವ ಪ್ರೀತಿ ನಿಮಗೆ ಹೇಗೆ ಸಂತೋಷ ತಂದಿದೆ?

20 ಯೆಹೋವನ ಸೇವಕರು ಆತನನ್ನು ನಿಜವಾಗಲೂ ಪ್ರೀತಿಸುತ್ತಾರೆ. ಪ್ರತಿ ವರ್ಷ ಇನ್ನು ಎಷ್ಟೋ ಮಂದಿ ಆತನ ಕುರಿತು ತಿಳಿದುಕೊಂಡು ಆತನನ್ನು ಪ್ರೀತಿಸುತ್ತಾರೆ. ಇದು ದೇವರ ರಾಜ್ಯ ಆಳುತ್ತಿದೆ ಎಂಬುದಕ್ಕೆ ರುಜುವಾತಾಗಿದೆ. ಈ ರಾಜ್ಯ ತುಂಬ ಬೇಗನೆ ನಾವು ಊಹಿಸಲಿಕ್ಕೂ ಆಗದಂಥ ಆಶೀರ್ವಾದಗಳನ್ನು ತರಲಿದೆ. ನಾವು ಯೆಹೋವನು ಬಯಸುವಂಥದ್ದನ್ನು ಮಾಡುವಾಗ ಆತನನ್ನು ಸಂತೋಷಪಡಿಸುತ್ತೇವೆ. ಇದು ನಮಗೆ ಸಂತೋಷ ತರುತ್ತದೆ. ಯೆಹೋವನನ್ನು ಪ್ರೀತಿಸುವವರು ಎಂದೆಂದಿಗೂ ಸಂತೋಷವಾಗಿರುವರು! ಮುಂದಿನ ಲೇಖನದಲ್ಲಿ, ಸ್ವಾರ್ಥ ಪ್ರೀತಿಯಿಂದ ಹುಟ್ಟಿಕೊಳ್ಳುವ ಕೆಲವು ಕೆಟ್ಟ ಗುಣಗಳ ಬಗ್ಗೆ ನೋಡೋಣ. ಇದು ಯೆಹೋವನ ಸೇವಕರಲ್ಲಿರುವ ಒಳ್ಳೇ ಗುಣಗಳಿಗೆ ಹೇಗೆ ವಿರುದ್ಧವಾಗಿದೆ ಎಂದು ನೋಡೋಣ.