ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಡಗಾಸ್ಕರ್ನಲ್ಲಿ
“ಪಯನೀಯರರ ಹೆಚ್ಚಿನ ಅಗತ್ಯವಿದ್ದ ಪ್ರದೇಶದಲ್ಲಿ ಸೇವೆಮಾಡಿದ ನನ್ನ ಸ್ನೇಹಿತರ ಅನುಭವಗಳನ್ನು ಕೇಳಿದಾಗ ನನಗೂ ಆ ಆನಂದವನ್ನು ಸವಿಯಬೇಕು ಅಂತ ಅನಿಸಿತು” ಎಂದು 27 ವಯಸ್ಸಿನ ಪಯನೀಯರಳಾದ ಸಿಲ್ವಿಯಾನಾ ಹೇಳುತ್ತಾಳೆ. ಆಕೆ ಮುಂದುವರಿಸಿ ಹೇಳಿದ್ದು: “ಆದರೆ ಹೆಚ್ಚು ಅಗತ್ಯವಿರುವ ಪ್ರದೇಶಕ್ಕೆ ಹೋಗಿ ಸೇವೆಮಾಡುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಅಂತ ನನಗೆ ಹಿಂಜರಿಕೆಯಿತ್ತು.”
ಸಿಲ್ವಿಯಾನಾಗೆ ಅನಿಸಿದಂತೆ ನಿಮಗೂ ಅನಿಸುತ್ತದಾ? ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿರುವ ಪ್ರದೇಶದಲ್ಲಿ ಸೇವೆಮಾಡುವ ಹಂಬಲ ನಿಮಗೂ ಇದೆಯಾ? ಇದ್ದರೂ ಆ ಗುರಿ ತಲಪಲು ಆಗಲಿಕ್ಕಿಲ್ಲ ಎಂದನಿಸುತ್ತದಾ? ಹಾಗಿದ್ದರೆ, ನಿರುತ್ಸಾಹಗೊಳ್ಳಬೇಡಿ! ತಮ್ಮ ಸೇವೆಯನ್ನು ಹೆಚ್ಚಿಸಲು ಇದ್ದಂಥ ಅಡೆತಡೆಗಳನ್ನು ಸಾವಿರಾರು ಸಹೋದರ ಸಹೋದರಿಯರು ಯೆಹೋವನ ಸಹಾಯದಿಂದ ಜಯಿಸಿದ್ದಾರೆ. ಅಂಥವರಲ್ಲಿ ಕೆಲವರಿಗೆ ಯೆಹೋವನು ಹೇಗೆಲ್ಲಾ ಸಹಾಯ ಮಾಡಿದ್ದಾನೆಂದು ನೋಡೋಣ. ಅದಕ್ಕಾಗಿ ನಾವೀಗ ಪ್ರಪಂಚದಲ್ಲಿ ನಾಲ್ಕನೇ ಅತಿ ದೊಡ್ಡ ದ್ವೀಪವಾದ ಮಡಗಾಸ್ಕರ್ಗೆ ಭೇಟಿ ನೀಡೋಣವಾ?
ಕಳೆದ ಹತ್ತು ವರ್ಷಗಳಿಂದ 70ಕ್ಕೂ ಹೆಚ್ಚು ಹುರುಪಿನ ಪ್ರಚಾರಕರು ಮತ್ತು ಪಯನೀಯರರು 11 ದೇಶಗಳಿಂದ * ಬಂದು ಆಫ್ರಿಕಾದ ಈ ಪ್ರದೇಶದಲ್ಲಿ ಸೇವೆಮಾಡುತ್ತಿದ್ದಾರೆ. ಇಲ್ಲಿ ಅನೇಕ ಜನರು ಬೈಬಲನ್ನು ಗೌರವಿಸುವುದರಿಂದ ಸುವಾರ್ತೆಗೆ ಚೆನ್ನಾಗಿ ಸ್ಪಂದಿಸುತ್ತಾರೆ. ಅನೇಕ ಸ್ಥಳೀಯ ಪ್ರಚಾರಕರು ಸಹ ರಾಜ್ಯದ ಸಂದೇಶವನ್ನು ವಿಶಾಲವಾದ ಈ ದ್ವೀಪದಲ್ಲಿ ಸಾರಲು ಅಗತ್ಯವಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸಿದ್ದಾರೆ. ಅವರಲ್ಲಿ ಕೆಲವರ ಪರಿಚಯ ಮಾಡಿಕೊಳ್ಳೋಣ.
ಭಯ ಮತ್ತು ನಿರುತ್ಸಾಹವನ್ನು ಜಯಿಸಿದರು
ಲೂಯಿ ಮತ್ತು ಪರಿನ್ ದಂಪತಿಗೆ 30 ವರ್ಷ ದಾಟಿದೆ. ಅವರು ಫ್ರಾನ್ಸ್ನಿಂದ ಮಡಗಾಸ್ಕರ್ಗೆ ಸ್ಥಳಾಂತರಿಸಿದ್ದಾರೆ. ಅವರು ಸೇವೆಯನ್ನು ಹೆಚ್ಚಿಸಲಿಕ್ಕಾಗಿ ಬೇರೆ ದೇಶಕ್ಕೆ ಹೋಗಬೇಕೆಂದು ಸುಮಾರು ವರ್ಷಗಳಿಂದ ಯೋಚನೆ ಮಾಡುತ್ತಿದ್ದರು. ಆದರೆ ಪರಿನ್ ಹಿಂಜರಿಯುತ್ತಿದ್ದರು. ಅವರು ಹೇಳುವುದು: “ನನಗೆ ಪರಿಚಯವಿಲ್ಲದ ಸ್ಥಳಕ್ಕೆ ಹೋಗುವುದರ ಬಗ್ಗೆ ಹೆದರಿಕೆಯಿತ್ತು. ನನ್ನ ಕುಟುಂಬ, ಸಭೆ, ಅಪಾರ್ಟ್ಮೆಂಟ್, ಚಿರಪರಿಚಿತ ಸ್ಥಳಗಳನ್ನು ಬಿಟ್ಟುಹೋಗಬೇಕಲ್ಲ, ನಮ್ಮ ದಿನಚರಿ ಬದಲಾಯಿಸಬೇಕಲ್ಲ ಅನ್ನೊ ಚಿಂತೆ ನನಗಿತ್ತು. ನನ್ನ ಈ ಎಲ್ಲ ಚಿಂತೆಗಳೇ ನನಗೆ ದೊಡ್ಡ ಅಡಚಣೆಯಾಗಿತ್ತು.” 2012ರಲ್ಲಿ ಪರಿನ್ ಧೈರ್ಯ ತಂದುಕೊಂಡು, ಅವರ ಪತಿ ಜೊತೆ ಮಡಗಾಸ್ಕರ್ಗೆ ಸ್ಥಳಾಂತರಿಸಿದರು. ಆ ನಿರ್ಧಾರದ ಬಗ್ಗೆ ಅವರಿಗೆ ಏನು ಅನಿಸುತ್ತದೆ? “ಹಿಂತಿರುಗಿ ನೋಡುವಾಗ ನಮ್ಮ ಜೀವನದಲ್ಲಿ ಯೆಹೋವನು ಮಾಡಿದ ಸಹಾಯ ನಮ್ಮ ನಂಬಿಕೆಯನ್ನು ಬಲಪಡಿಸಿದೆ.” ಲೂಯಿ ಅದಕ್ಕೆ ಕೂಡಿಸುವುದು: “ನಿಮಗೆ ಗೊತ್ತಾ, ಮಡಗಾಸ್ಕರ್ನಲ್ಲಿ ನಾವು ಹಾಜರಾಗಿದ್ದ ಮೊದಲ ಜ್ಞಾಪಕಾಚರಣೆಗೆ ನಮ್ಮ ಹತ್ತು ಮಂದಿ ಬೈಬಲ್ ವಿದ್ಯಾರ್ಥಿಗಳು ಬಂದಿದ್ದರು!”
ಸಮಸ್ಯೆಗಳು ಎದುರಾದಾಗ ಆ ದಂಪತಿಗೆ ತಮ್ಮ ನೇಮಕದಲ್ಲಿ ಮುಂದುವರಿಯಲು ಯಾವುದು ಸಹಾಯ ಮಾಡಿತು? ತಾಳಿಕೊಳ್ಳಲು ಫಿಲಿ. 4:13) ಲೂಯಿ ಹೇಳುವುದು: “ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟು, ‘ದೇವಶಾಂತಿ’ ನೀಡಿದನು. ನಮ್ಮ ಸೇವೆಯಿಂದ ಸಿಗುವ ಆನಂದದ ಮೇಲೆ ಗಮನವಿಡಲು ಇದರಿಂದ ಸಾಧ್ಯವಾಯಿತು. ಮಾತ್ರವಲ್ಲ ನಮ್ಮ ಸ್ನೇಹಿತರು ನಾವು ಸೇವೆಯನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುವ ಇ-ಮೇಲ್ ಮತ್ತು ಪತ್ರಗಳನ್ನು ಕಳುಹಿಸಿದರು.”—ಫಿಲಿ. 4:6, 7; 2 ಕೊರಿಂ. 4:7.
ಬೇಕಾದ ಬಲವನ್ನು ಕೊಡುವಂತೆ ಯೆಹೋವನನ್ನು ಬೇಡಿಕೊಂಡರು. (ಲೂಯಿ ಮತ್ತು ಪರಿನ್ ತೋರಿಸಿದ ತಾಳ್ಮೆಗಾಗಿ ಯೆಹೋವನು ಅವರನ್ನು ಹೇರಳವಾಗಿ ಆಶೀರ್ವದಿಸಿದನು. “ನಾವು 2014ರ ಅಕ್ಟೋಬರ್ನಲ್ಲಿ ಫ್ರಾನ್ಸ್ನಲ್ಲಿ ನಡೆದ ಕ್ರೈಸ್ತ ದಂಪತಿಗಳಿಗಾಗಿರುವ ಬೈಬಲ್ ಶಾಲೆಗೆ * ಹಾಜರಾದೆವು. ಇದು ಯೆಹೋವನಿಂದ ಸಿಕ್ಕಿದ ಒಂದು ಮರೆಯಲಾಗದ ಉಡುಗೊರೆ” ಎನ್ನುತ್ತಾರೆ ಲೂಯಿ. ಪದವಿ ಪಡೆದ ನಂತರ ಈ ದಂಪತಿಯನ್ನು ಪುನಃ ಮಡಗಾಸ್ಕರ್ಗೆ ನೇಮಿಸಲಾದಾಗ ಅವರಿಗೆ ತುಂಬ ಸಂತೋಷವಾಯಿತು.
“ನಮಗೆ ನಿಮ್ಮ ಬಗ್ಗೆ ಹೆಮ್ಮೆ ಆಗುತ್ತೆ!”
ಡೀಡ್ಯಾ ಮತ್ತು ನಾಡೀನಾ ದಂಪತಿ 2010ರಲ್ಲಿ ಫ್ರಾನ್ಸ್ನಿಂದ ಮಡಗಾಸ್ಕರ್ಗೆ ಸ್ಥಳಾಂತರಿಸಿದಾಗ ಅವರಿಗೆ 50 ವರ್ಷ ದಾಟಿತ್ತು. ಡೀಡ್ಯಾ ಹೇಳುವುದು: “ನಮ್ಮ ಯುವಪ್ರಾಯದಲ್ಲಿ ಪಯನೀಯರ್ ಸೇವೆ ಮಾಡಿದೆವು. ಆಮೇಲೆ ನಮಗೆ ಹುಟ್ಟಿದ ಮೂರು ಮಕ್ಕಳನ್ನು ಬೆಳೆಸಿದೆವು. ಅವರು ದೊಡ್ಡವರಾದ ನಂತರ, ಬೇರೆ ದೇಶಕ್ಕೆ ಹೋಗಿ ಸೇವೆಮಾಡುವ ಯೋಚನೆ ಮಾಡಿದೆವು.” ನಾಡೀನಾ ಒಪ್ಪಿಕೊಳ್ಳುವುದು: “ಮಕ್ಕಳಿಂದ ದೂರವಾಗಬೇಕಲ್ಲ ಎಂಬ ಯೋಚನೆಯಿಂದಾಗಿ ನಾನ್ ಸ್ವಲ್ಪ ಹಿಂದೆಮುಂದೆ ನೋಡಿದೆ. ಆದ್ರೆ ಅವರೇ ನಮಗೆ ‘ಅಗತ್ಯ ಹೆಚ್ಚಿರುವ ಕ್ಷೇತ್ರಕ್ಕೆ ಹೋಗಿ ನೀವು ಸೇವೆ ಮಾಡುವುದಾದರೆ, ನಮಗೆ ನಿಮ್ಮ ಬಗ್ಗೆ ಹೆಮ್ಮೆ ಆಗುತ್ತೆ!’ ಎಂದು ಹೇಳಿದರು. ಅವರ ಈ ಮಾತುಗಳಿಂದ ನಮಗೆ ಸ್ಥಳಾಂತರಿಸಲು ಪ್ರೋತ್ಸಾಹ ಸಿಕ್ಕಿತು. ನಾವೀಗ ನಮ್ಮ ಮಕ್ಕಳಿಂದ ಬಹಳ ದೂರದಲ್ಲಿದ್ದರೂ ಅವರೊಂದಿಗೆ ಆಗಾಗ ಮಾತಾಡಲಿಕ್ಕೆ ಆಗುತ್ತದೆ ಎಂಬ ನೆಮ್ಮದಿ ಇದೆ.”
ಡೀಡ್ಯಾ ಮತ್ತು ನಾಡೀನಾರವರಿಗೆ ಮಲಗಾಸಿ ಭಾಷೆ ಕಲಿಯುವುದು ಒಂದು ಸವಾಲಾಗಿತ್ತು. “ನಮಗೇನೂ ಚಿಕ್ಕ ವಯಸ್ಸು ಅಲ್ವಲ್ಲಾ” ಅಂತ ನಗುತ್ತಾ ಹೇಳುತ್ತಾರೆ ನಾಡೀನಾ. ಅವರು ಆ ಭಾಷೆ ಹೇಗೆ ಕಲಿತರು? ಆರಂಭದಲ್ಲಿ ಅವರು ಫ್ರೆಂಚ್ ಭಾಷೆಯ ಸಭೆಗೆ ಹೋದರು. ನಂತರ ಅವರಿಗೆ ಅಲ್ಲಿನ ಸ್ಥಳೀಯ ಭಾಷೆ ಕಲಿಯಲು ಹೆಚ್ಚು ಸಮಯ ಸಿಕ್ಕಿದಾಗ ಮಲಗಾಸಿ ಭಾಷೆಯ ಸಭೆಗೆ ಸೇರಿದರು. ನಾಡೀನಾ ಹೇಳುವುದು: “ನಾವು ಸೇವೆಯಲ್ಲಿ ಭೇಟಿ ಮಾಡುವ ಅನೇಕ ಜನರು ಬೈಬಲನ್ನು ಕಲಿಯಲು ತುಂಬ ಇಷ್ಟಪಡುತ್ತಾರೆ. ನಾವು ಅವರನ್ನು ಭೇಟಿ ಮಾಡುತ್ತಿರುವುದಕ್ಕಾಗಿ ಎಷ್ಟೋ ಸಲ ಧನ್ಯವಾದ ಹೇಳುತ್ತಾರೆ. ಮೊದಮೊದಲು ನಾನು ಕನಸು ಕಾಣುತ್ತಿದ್ದೇನೆ ಅಂತ ಅನಿಸುತ್ತಿತ್ತು. ಈ ಕ್ಷೇತ್ರದಲ್ಲಿ ಪಯನೀಯರ್ ಸೇವೆ ಮಾಡುವುದನ್ನು ತುಂಬ ಇಷ್ಟಪಡ್ತೀನಿ. ನಾನು ಬೆಳಗ್ಗೆ ಏಳುವಾಗ, ‘ಆಹಾ! ನಾನಿವತ್ತು ಸೇವೆಗೆ ಹೋಗ್ತಿದ್ದಿನಿ’ ಅಂತ ನನಗೆ ನಾನೇ ಹೇಳಿಕೊಳ್ಳುತ್ತೇನೆ.”
ಮಲಗಾಸಿ ಭಾಷೆಯನ್ನು ಕಲಿಯಲು ಆರಂಭಿಸಿದ ಸಮಯವನ್ನು ನೆನಪಿಸಿಕೊಳ್ಳುವಾಗ ಡೀಡ್ಯಾಗೆ ನಗು ಬರುತ್ತದೆ. “ನಾನೊಂದು ಸಭಾ ಕೂಟವನ್ನು ನಡೆಸುತ್ತಿದ್ದಾಗ ಸಹೋದರ ಸಹೋದರಿಯರು ಕೊಡುತ್ತಿದ್ದ ಒಂದು ಉತ್ತರನೂ ನನಗೆ ಅರ್ಥವಾಗಲಿಲ್ಲ. ನನಗೆ ‘ಧನ್ಯವಾದ’ ಅಂತ ಹೇಳಲಿಕ್ಕೆ ಮಾತ್ರ ಗೊತ್ತಿತ್ತು. ಒಬ್ಬ ಸಹೋದರಿ ಕೊಟ್ಟ ಉತ್ತರಕ್ಕೆ ಧನ್ಯವಾದ ಹೇಳಿದಾಗ ಅವರ ಹಿಂದೆ ಕೂತಿದ್ದವರು ಅವರು ಕೊಟ್ಟ ಉತ್ತರ ತಪ್ಪಾಗಿತ್ತೆಂದು ಸನ್ನೆ ಮಾಡಿ ಹೇಳಿದ್ರು. ಕೂಡಲೆ ಒಬ್ಬ ಸಹೋದರನಿಗೆ ಕೇಳಿದೆ. ಅವರು ಸರಿಯಾದ ಉತ್ತರ ಕೊಟ್ಟರು - ಹಾಗನಿಸುತ್ತೆ!!”
ಅವಳು ಸಂತೋಷದಿಂದ ಆಮಂತ್ರಣವನ್ನು ಸ್ವೀಕರಿಸಿದಳು
ಟ್ಯರೀ ಮತ್ತವರ ಹೆಂಡತಿ ನಾಡ್ಯ 2005ರಲ್ಲಿ ನಡೆದ ಅಧಿವೇಶನದಲ್ಲಿ “ದೇವರಿಗೆ ಗೌರವ ತರುವಂಥ ಗುರಿಗಳನ್ನು ಬೆನ್ನಟ್ಟಿರಿ” ಎಂಬ ನಾಟಕವನ್ನು ನೋಡಿದರು. ಆ ಬೈಬಲ್ ನಾಟಕವು ತಿಮೊಥೆಯನ ಕುರಿತಾಗಿತ್ತು. ಅದು ಅವರ ಮನಸ್ಪರ್ಶಿಸಿತು ಮತ್ತು ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿದ್ದ ಸ್ಥಳಕ್ಕೆ ಹೋಗಿ ಸೇವೆ ಮಾಡಬೇಕೆನ್ನುವ ಅವರ ಆಸೆ ಇನ್ನೂ
ಹೆಚ್ಚಾಯಿತು. ಟ್ಯರೀ ಹೇಳುವುದು: “ಆ ನಾಟಕದ ಕೊನೆಯಲ್ಲಿ, ನಾವು ಚಪ್ಪಾಳೆ ಹೊಡೆಯುತ್ತಿದ್ದಾಗ ನನ್ನ ಪತ್ನಿಗೆ ‘ನಾವು ಎಲ್ಲಿಗೆ ಹೋಗೋಣ?’ ಅಂತ ಕೇಳಿದೆ. ಅವಳೂ ಅದನ್ನೇ ಯೋಚಿಸುತ್ತಿದ್ದಳು ಅಂತ ಹೇಳಿದಳು.” ಸ್ವಲ್ಪ ಸಮಯದಲ್ಲೇ ಅವರು ತಮ್ಮ ಗುರಿಯನ್ನು ಮುಟ್ಟಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಂಡರು. ನಾಡ್ಯ ಹೇಳುವುದು: “ನಾವು ನಮ್ಮಲ್ಲಿರುವ ವಸ್ತುಗಳನ್ನು ಕಡಿಮೆಮಾಡುತ್ತಾ ಹೋದೆವು. ಎಷ್ಟರವರೆಗೆ ಅಂದರೆ ಕೊನೆಗೆ ಬರೀ ನಾಲ್ಕು ಸೂಟ್ಕೇಸ್ ತುಂಬುವಷ್ಟು ವಸ್ತುಗಳು ಮಾತ್ರ ಇದ್ದವು!”ಅವರು 2006ರಲ್ಲಿ ಮಡಗಾಸ್ಕರ್ಗೆ ಬಂದರು ಮತ್ತು ಆರಂಭದಿಂದಲೇ ಸೇವೆಯನ್ನು ಆನಂದಿಸಿದರು. ನಾಡ್ಯ ಹೇಳುವುದು: “ಇಲ್ಲಿರುವ ಜನರು ಸುವಾರ್ತೆಗೆ ತೋರಿಸುವ ಪ್ರತಿಕ್ರಿಯೆಯನ್ನು ನೋಡಿ ನಮಗೆ ತುಂಬ ಸಂತೋಷವಾಗುತ್ತದೆ.”
ಆರು ವರ್ಷಗಳ ನಂತರ, ಆ ದಂಪತಿ ಒಂದು ಸಮಸ್ಯೆಯನ್ನು ಎದುರಿಸಿದರು. ಫ್ರಾನ್ಸ್ನಲ್ಲಿರುವ ನಾಡ್ಯರವರ ಅಮ್ಮ ಮೇರೀ-ಮಾಡಲೆನ್ ಬಿದ್ದು ಕೈಮುರಿದುಕೊಂಡರು, ತಲೆಗೂ ಗಾಯ ಮಾಡಿಕೊಂಡರು. ಅವರು ಅಮ್ಮನಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರನ್ನು ವಿಚಾರಿಸಿದ ನಂತರ ‘ನೀವು ನಮ್ಮ ಜೊತೆ ಇರಲು ಮಡಗಾಸ್ಕರ್ಗೆ ಬರ್ತೀರಾ’ ಅಂತ ಅವರ ಅಮ್ಮನಿಗೆ ಕೇಳಿದರು. ಅಮ್ಮನಿಗೆ 80 ವಯಸ್ಸಾಗಿದ್ದರೂ ಸಂತೋಷದಿಂದ ಒಪ್ಪಿಕೊಂಡರು. ಹೊರದೇಶದಲ್ಲಿ ಜೀವನ ಮಾಡುವುದರ ಬಗ್ಗೆ ಮೇರೀ-ಮಾಡಲೆನ್ಗೆ ಹೇಗನಿಸುತ್ತದೆ? ಅವರು ಹೇಳುವುದು: “ಕೆಲವೊಮ್ಮೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ನನಗೆ ಇತಿಮಿತಿಗಳಿದ್ದರೂ ಸಭೆಗೆ ನನ್ನಿಂದ ಪ್ರಯೋಜನವಾಗುತ್ತಿದೆ ಎಂದು ತಿಳಿದಾಗ ಸಂತೋಷವಾಗುತ್ತದೆ. ನಾನು ನನ್ನ ಮಕ್ಕಳೊಂದಿಗೆ ಇರಲು ನಿರ್ಧರಿಸಿದ್ದರಿಂದ ಅವರು ತಮಗಿಷ್ಟವಾದ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿದೆ ಎಂದು ನೆನಸುವಾಗ ನನಗೆ ತುಂಬ ಸಂತೋಷವಾಗುತ್ತದೆ.”
“ಯೆಹೋವನೇ ನನಗೆ ಸಹಾಯ ಮಾಡಿದನು”
ರೀನ್ ಎಂಬ ಸಹೋದರನಿಗೆ 22 ವರ್ಷ. ಪೂರ್ವ ಮಡಗಾಸ್ಕರ್ನ ಫಲವತ್ತಾದ ಆಲಟ್ಚಾ ಮಂಗುರುವಿನಲ್ಲಿ ಅವನು ಬೆಳೆದನು. ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದನು ಮತ್ತು ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆ ಇಟ್ಟುಕೊಂಡಿದ್ದನು. ಆದರೆ ಬೈಬಲ್ ಕಲಿತ ನಂತರ ತನ್ನ ಮನಸ್ಸನ್ನು ಬದಲಾಯಿಸಿಕೊಂಡನು. ಅವನು ಹೇಳುವುದು: “ನಾನು ಪ್ರೌಢ ಶಾಲೆಯ ಶಿಕ್ಷಣವನ್ನು ಬೇಗನೆ ಮುಗಿಸಲು ಪ್ರಯತ್ನಿಸಿದೆ ಮತ್ತು ‘ಅಂತಿಮ ಪರೀಕ್ಷೆಯಲ್ಲಿ ಪಾಸಾದರೆ ಪಯನೀಯರ್ ಸೇವೆ ಆರಂಭಿಸುತ್ತೇನೆ’ ಎಂದು ಯೆಹೋವನಿಗೆ ಮಾತು ಕೊಟ್ಟೆ.” ಅವನು ಪರೀಕ್ಷೆಯಲ್ಲಿ ಪಾಸಾದ ಮೇಲೆ ಕೊಟ್ಟ ಮಾತನ್ನು ಉಳಿಸಿಕೊಂಡನು. ಒಬ್ಬ ಪಯನೀಯರ್ ಸಹೋದರನ ಜೊತೆ ಉಳಿದುಕೊಂಡು ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಪಯನೀಯರ್ ಸೇವೆ ಮಾಡಲು ಆರಂಭಿಸಿದನು. “ನನ್ನ ಜೀವಮಾನದಲ್ಲೇ ನಾನು ಮಾಡಿರುವ ಅತ್ಯುತ್ತಮ ನಿರ್ಧಾರ ಇದಾಗಿದೆ” ಎಂದು ಅವನು ಹೇಳುತ್ತಾನೆ.
ಆದರೆ ರೀನ್ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದರ ಬಗ್ಗೆ, ಒಳ್ಳೇ ಕೆಲಸಕ್ಕೆ ಹೋಗುವುದರ ಬಗ್ಗೆ ಯಾಕೆ ಯೋಚಿಸುತ್ತಿಲ್ಲ ಎಂದು ಅವನ ಸಂಬಂಧಿಕರು ನೆನಸಿದರು. ಅವನು ಹೇಳುವುದು: “ನಾನು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕೆಂದು ನನ್ನ ತಂದೆ, ಚಿಕ್ಕಪ್ಪ, ಚಿಕ್ಕಜ್ಜಿ ಎಲ್ಲರೂ ಪ್ರೋತ್ಸಾಹಿಸಿದರು. ಆದರೆ ನಾನು ಪಯನೀಯರ್ ಸೇವೆ ನಿಲ್ಲಿಸಬಾರದು ಅಂತ ತೀರ್ಮಾನ ಮಾಡಿದ್ದೆ.” ರೀನ್ ಪ್ರಚಾರಕರ ಅಗತ್ಯ ಹೆಚ್ಚಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಬೇಕು ಎಂಬ ಆಸೆಯನ್ನು ಎಷ್ಟೋ ಸಮಯದಿಂದ ಇಟ್ಟುಕೊಂಡಿದ್ದನು. ಈ ಆಸೆಗೆ ಇಂಬುಕೊಟ್ಟದ್ದು ಯಾವುದು? ಅವನು ಹೇಳುವುದು: “ನಾವಿದ್ದ ಮನೆಗೆ ಕಳ್ಳರು ನುಗ್ಗಿ ನನ್ನ ವಸ್ತುಗಳನ್ನೆಲ್ಲಾ ಕದ್ದುಕೊಂಡು ಹೋದರು. ಈ ಘಟನೆ, ‘ಸ್ವರ್ಗದಲ್ಲಿ ಸಂಪತ್ತನ್ನು’ ಕೂಡಿಸಿಟ್ಟುಕೊಳ್ಳಿರಿ ಅಂತ ಯೇಸು ಹೇಳಿದ ಮಾತಿನ ಬಗ್ಗೆ ಯೋಚಿಸುವಂತೆ ಮಾಡಿತು. ನಾನು ಆಧ್ಯಾತ್ಮಿಕ ಸಂಪತ್ತನ್ನು ಕೂಡಿಸಿಡಲು ಸಾಕಷ್ಟು ಪ್ರಯತ್ನಮಾಡಬೇಕು ಎಂದು ನಿರ್ಧರಿಸಿದೆ.” (ಮತ್ತಾ. 6:19, 20) ಅವನು ಆ ದೇಶದ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸಿದನು. ಇದೊಂದು ಬರಪೀಡಿತ ಪ್ರದೇಶವಾಗಿತ್ತು ಮತ್ತು ಆ್ಯಂಟನ್ಡ್ರೂಯಿ ಜನಾಂಗದ ತವರೂರಾಗಿತ್ತು. ಇದು ಅವನಿದ್ದ ಸ್ಥಳದಿಂದ 1,300 ಕಿ.ಮೀ. ದೂರದಲ್ಲಿತ್ತು. ಅವನು ಯಾಕೆ ಅಲ್ಲಿಗೆ ಹೋದನು?
ಆ ಕಳ್ಳತನವಾಗುವುದಕ್ಕಿಂತ ಒಂದು ತಿಂಗಳ ಮುಂಚೆ ರೀನ್ ಇಬ್ಬರು ಆ್ಯಂಟನ್ಡ್ರೂಯಿ ಗಂಡಸರಿಗೆ ಬೈಬಲ್ ಅಧ್ಯಯನ ಆರಂಭಿಸಿದನು. ರಾಜ್ಯ ಸಂದೇಶವನ್ನು ಕೇಳಿರದ ಆ ಜನಾಂಗದ ಇನ್ನೂ ಅನೇಕ ಜನರಿಗೆ ಸುವಾರ್ತೆ ಸಾರಬೇಕೆಂಬ ಆಸೆಯಿಂದ ರೀನ್ ಆ ಭಾಷೆಯ ಕೆಲವು ಪದಗಳನ್ನು ಕಲಿತುಕೊಂಡನು. ಅವನು ಹೇಳುವುದು: “ಟಾಂಡ್ರೂಯಿ ಭಾಷೆ ಮಾತಾಡುವ ಜನರಿರುವ ಪ್ರದೇಶಕ್ಕೆ ಸ್ಥಳಾಂತರಿಸಲು ಸಹಾಯ ಮಾಡು ಎಂದು ಯೆಹೋವನಿಗೆ ಪ್ರಾರ್ಥಿಸಿದೆ.”
ರೀನ್ ಅಲ್ಲಿಗೆ ಸ್ಥಳಾಂತರಿಸಿದ ಕೂಡಲೇ ಅವನಿಗೆ ಒಂದು ಸಮಸ್ಯೆ ಎದುರಾಯಿತು. ಅವನಿಗೆ ಕೆಲಸ ಸಿಗಲಿಲ್ಲ. ಅಲ್ಲಿನ ಒಬ್ಬ ಗಂಡಸು “ನೀನು ಇಲ್ಲಿಗೆ ಯಾಕೆ ಬಂದೆ? ಇಲ್ಲಿನ ಜನರು ಕೆಲಸ ಹುಡುಕಿಕೊಂಡು ನಿಮ್ಮೂರ ಕಡೆ ಹೋಗುತ್ತಾರೆ!” ಎಂದು ಹೇಳಿದನು. ಎರಡು ವಾರಗಳ ನಂತರ ರೀನ್ ಕೈಯಲ್ಲಿ ಬಿಡಿಗಾಸಿರಲಿಲ್ಲ. ಏನು ಮಾಡಬೇಕೆಂದು ಗೊತ್ತಾಗದಿದ್ದರೂ ಅವನು ಪ್ರಾದೇಶಿಕ ಅಧಿವೇಶನಕ್ಕೆ ಹೋದನು. ಅಧಿವೇಶನದ ಕೊನೇ ದಿನ ಒಬ್ಬ ಸಹೋದರ ಅವನ ಕೋಟಿನ ಜೇಬಿನೊಳಗೆ ಏನೋ ಹಾಕಿದರು. ಅವರು ಜೇಬಿನಲ್ಲಿ ಸ್ವಲ್ಪ ಹಣ ಹಾಕಿದ್ದರು. ಅದು ಎಷ್ಟಿತ್ತೆಂದರೆ, ಅವನಿಗೆ ಆ್ಯಂಟನ್ಡ್ರೂಯಿ ಪ್ರದೇಶಕ್ಕೆ ಮರಳಿ ಬರಲು ಮತ್ತು ಮೊಸರಿನ ಒಂದು ಚಿಕ್ಕ ವ್ಯಾಪಾರವನ್ನು ಆರಂಭಿಸಲು ಸಾಕಾಗುವಷ್ಟಿತ್ತು. ರೀನ್ ಹೇಳುವುದು: “ಸಮಯಕ್ಕೆ ಸರಿಯಾಗಿ ಯೆಹೋವನೇ ನನಗೆ ಸಹಾಯ ಮಾಡಿದನು. ಯೆಹೋವನ ಬಗ್ಗೆ ಕೇಳಿಸಿಕೊಂಡಿರದ ಜನರಿಗೆ ಸುವಾರ್ತೆ ಸಾರುವುದನ್ನು ಮುಂದುವರಿಸಲು ಈ ಕೆಲಸ ನನಗೆ ಸಹಾಯ ಮಾಡಿತು.” ಸಭೆಯಲ್ಲೂ ಮಾಡಲಿಕ್ಕೆ ಬೇಕಾದಷ್ಟಿತ್ತು. ರೀನ್ ಹೇಳುವುದು: “ಎರಡು ವಾರಕ್ಕೊಮ್ಮೆ ಸಾರ್ವಜನಿಕ ಭಾಷಣ ಕೊಡುವ ಸುಯೋಗ ನನಗೆ ಸಿಕ್ಕಿತು. ಯೆಹೋವನು ತನ್ನ ಸಂಘಟನೆಯ ಮೂಲಕ ನನಗೆ ತರಬೇತಿ ಕೊಡುತ್ತಿದ್ದನು.” ಈಗಲೂ ರೀನ್ ಯೆಹೋವನ ಬಗ್ಗೆ ಕಲಿಯಲು ಇಷ್ಟಪಡುವ ಟಾಂಡ್ರೂಯಿ ಭಾಷೆಯ ಅನೇಕ ಜನರಿಗೆ ರಾಜ್ಯ ಸಂದೇಶ ಸಾರುತ್ತಿದ್ದಾನೆ.
“ಸತ್ಯವಂತನಾದ ದೇವರಿಂದ ಆಶೀರ್ವಾದ”
“ಭೂಮಿಯಲ್ಲಿ ಆಶೀರ್ವಾದವನ್ನು ಹೊಂದಲು ಬಯಸುವವನು ಸತ್ಯವಂತನಾದ ದೇವರಿಂದ ಆಶೀರ್ವಾದ ಹೊಂದುವನು” ಎಂದು ಯೆಹೋವನು ನಮಗೆ ಆಶ್ವಾಸನೆ ನೀಡುತ್ತಾನೆ. (ಯೆಶಾ. 65:16, ನೂತನ ಲೋಕ ಭಾಷಾಂತರ) ನಾವು ಎಲ್ಲ ಅಡೆತಡೆಗಳನ್ನು ಜಯಿಸಿ ಸೇವೆಯನ್ನು ಹೆಚ್ಚಿಸಲು ಶ್ರಮಿಸುವಾಗ ಯೆಹೋವನ ಆಶೀರ್ವಾದವನ್ನು ಸ್ವತಃ ಅನುಭವಿಸುತ್ತೇವೆ. ಲೇಖನದ ಆರಂಭದಲ್ಲಿ ತಿಳಿಸಲಾದ ಸಿಲ್ವಿಯಾನಾ ಎಂಬ ಸಹೋದರಿಯನ್ನು ನೆನಪಿಸಿಕೊಳ್ಳಿ. ಮಡಗಾಸ್ಕರ್ನವಳಾದ ಈಕೆ ಆರಂಭದಲ್ಲಿ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಲು ಹಿಂಜರಿಯುತ್ತಿದ್ದಳು. ಅದು ತನ್ನಿಂದಾಗದ ಕೆಲಸ ಅಂದುಕೊಂಡಳು. ಅವಳು ಯಾಕೆ ಹಾಗೆ ಯೋಚಿಸಿದಳು? “ನನ್ನ ಎಡಗಾಲಿಗಿಂತ ಬಲಗಾಲು ಮೂರೂವರೆ ಇಂಚು ಗಿಡ್ಡವಾಗಿದೆ. ಹೀಗಿರುವುದರಿಂದ ನಾನು ಕುಂಟುತ್ತಾ ನಡೆಯುತ್ತೀನಿ, ಇದರಿಂದ ನನಗೆ ಬೇಗ ಸುಸ್ತಾಗುತ್ತದೆ” ಎನ್ನುತ್ತಾಳೆ ಅವಳು.
ಹೀಗಿರುವುದಾದರೂ 2014ರಲ್ಲಿ ಸಿಲ್ವಿಯಾನಾ ಮತ್ತು ಅವಳ ಸಭೆಯ ಯುವ ಸಹೋದರಿಯಾದ ಸಿಲ್ವಿ ಆ್ಯನ್ ಇಬ್ಬರೂ ಜೊತೆಯಾಗಿ ತಮ್ಮ ಮನೆಯಿಂದ 85 ಕಿ.ಮೀ. ದೂರವಿರುವ ಒಂದು ಚಿಕ್ಕ ಹಳ್ಳಿಗೆ ಸ್ಥಳಾಂತರಿಸಿದರು. ಅವಳಿಗೆ ಅಡೆತಡೆಗಳಿದ್ದರೂ ಅವಳ ಕನಸು ನನಸಾಯಿತು. ಅವಳಿಗೆ ಯಾವ ಆಶೀರ್ವಾದ ಸಿಕ್ಕಿತು? ಅವಳು ಹೇಳುವುದು: “ನನಗೆ ನೇಮಿಸಲಾದ ಪ್ರದೇಶದಲ್ಲಿ ಸೇವೆ ಮಾಡಿದ ಬರೀ ಒಂದು ವರ್ಷದಲ್ಲಿ ನನ್ನ ಬೈಬಲ್ ವಿದ್ಯಾರ್ಥಿನಿಯಾದ ಡೊರಟಿನ್ ಎಂಬ ಯುವ ತಾಯಿ ಸರ್ಕಿಟ್ ಸಮ್ಮೇಳನವೊಂದರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು!”
“ನಿನಗೆ ಸಹಾಯಕೊಡುತ್ತೇನೆ”
ಹೆಚ್ಚಿನ ಅಗತ್ಯವಿರುವ ಪ್ರದೇಶಕ್ಕೆ ಹೋಗಿ ಸೇವೆ ಮಾಡುತ್ತಿರುವ ಇವರೆಲ್ಲರ ಮಾತುಗಳಿಂದ ನಾವೇನು ಕಲಿಯುತ್ತೇವೆ? ಅಡೆತಡೆಗಳನ್ನು ಜಯಿಸಿ ಹೆಚ್ಚು ಸೇವೆ ಮಾಡಲು ನಾವು ಪ್ರಯತ್ನಿಸುವಾಗ ತನ್ನ ಸೇವಕರಿಗೆ ಯೆಹೋವನು ಮಾಡಿರುವ ವಾಗ್ದಾನವನ್ನು ಅನುಭವಿಸುತ್ತೇವೆ. ಅದು ಹೀಗಿದೆ: “ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.” (ಯೆಶಾ. 41:10) ಇದರಿಂದ ನಮ್ಮ ಮತ್ತು ಯೆಹೋವನ ಮಧ್ಯೆ ಇರುವ ಸಂಬಂಧ ಬಲವಾಗುತ್ತದೆ. ಅಷ್ಟೇ ಅಲ್ಲ, ನಮ್ಮ ಸ್ವಂತ ಪ್ರದೇಶದಲ್ಲಿ ಆಗಲಿ ಹೊರದೇಶದಲ್ಲಿ ಆಗಲಿ ಸೇವೆ ಮಾಡಲು ನಮ್ಮನ್ನೇ ಕೊಟ್ಟುಕೊಳ್ಳುವುದು ಮುಂದೆ ಹೊಸ ಲೋಕದಲ್ಲಿ ನಮಗೆ ಸಿಗಲಿರುವ ದೇವಪ್ರಭುತ್ವಾತ್ಮಕ ಚಟುವಟಿಕೆಗಳನ್ನು ನಿರ್ವಹಿಸಲು ನಮ್ಮನ್ನು ತರಬೇತಿಗೊಳಿಸುತ್ತದೆ. ಡೀಡ್ಯಾ ಹೇಳುವುದು: “ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುವುದು ಭವಿಷ್ಯತ್ತಿಗಾಗಿ ನಮಗೆ ಸಿಗುವ ಉತ್ತಮ ತರಬೇತಿಯಾಗಿದೆ.” ಹೆಚ್ಚು ಸೇವೆ ಮಾಡಲು ಬಯಸುವವರೆಲ್ಲರೂ ಆ ತರಬೇತಿಯನ್ನು ಆದಷ್ಟು ಬೇಗನೆ ಪಡೆಯಲಿ!
^ ಪ್ಯಾರ. 4 ಅಮೆರಿಕ, ಕೆನಡ, ಗ್ವಾಡೆಲೂಪ್, ಚೆಕ್ ಗಣರಾಜ್ಯ, ಜರ್ಮನಿ, ನ್ಯೂ ಕ್ಯಾಲೆಡೋನಿಯ, ಫ್ರಾನ್ಸ್, ಬ್ರಿಟನ್, ಲಕ್ಸೆಂಬರ್ಗ್, ಸ್ವೀಡನ್, ಸ್ವಿಟ್ಜರ್ಲೆಂಡ್.
^ ಪ್ಯಾರ. 8 ಈಗ ಈ ಶಾಲೆಯನ್ನು ‘ರಾಜ್ಯ ಪ್ರಚಾರಕರ ಶಾಲೆ’ ಎಂದು ಕರೆಯಲಾಗುತ್ತದೆ. ಬೇರೆ ದೇಶದಲ್ಲಿ ಸೇವೆ ಮಾಡುತ್ತಿರುವ ಪೂರ್ಣಸಮಯದ ಸೇವಕರು ಅರ್ಹರಾಗಿರುವುದಾದರೆ, ತಮ್ಮ ಮಾತೃಭಾಷೆಯಲ್ಲಿ ನಡೆಸಲಾಗುವ ಈ ಶಾಲೆಯನ್ನು ತಮ್ಮ ಸ್ವಂತ ದೇಶದಲ್ಲಿ ಅಥವಾ ಬೇರೆ ದೇಶದಲ್ಲಿ ಹಾಜರಾಗಲು ಅರ್ಜಿ ಸಲ್ಲಿಸಬಹುದು.