ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಇಸ್ರಾಯೇಲ್ಯರು ಪ್ರತಿದಿನ ನಡೆಯುವ ಕಾನೂನಿಗೆ ಸಂಬಂಧಪಟ್ಟ ವಿವಾದಗಳನ್ನು ಬಗೆಹರಿಸಲು ಧರ್ಮಶಾಸ್ತ್ರದ ತತ್ವಗಳನ್ನು ನಿಜವಾಗಿಯೂ ಉಪಯೋಗಿಸುತ್ತಿದ್ದರಾ?

ಕೆಲವೊಮ್ಮೆ ಹೌದು. ಒಂದು ಉದಾಹರಣೆ ನೋಡೋಣ. ಧರ್ಮೋಪದೇಶಕಾಂಡ 24:14, 15 ಹೇಳುವುದು: ‘ನೀವು ಸ್ವದೇಶದವರಲ್ಲಿಯಾಗಲಿ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ ಏನೂ ಅನ್ಯಾಯಮಾಡಬಾರದು. ಇಲ್ಲವಾದರೆ ಅವನು ಯೆಹೋವನಿಗೆ ಮೊರೆಯಿಟ್ಟಾನು; ಆಗ ನೀವು ದೋಷಿಗಳಾಗಿ ಕಂಡುಬಂದೀರಿ.’

ಮಣ್ಣಿನ ಪಾತ್ರೆಯ ಚೂರಿನ ಮೇಲೆ ಬರೆಯಲಾಗಿರುವ ಹೊಲದ ಕೆಲಸಗಾರನ ಮನವಿ

ಇಂಥ ಒಂದು ಪ್ರಕರಣಕ್ಕೆ ಸಂಬಂಧಪಟ್ಟ ಮನವಿಯ ದಾಖಲೆ ಅಷ್ಡೋದಿನ ಹತ್ತಿರ ಸಿಕ್ಕಿದೆ. ಈ ದಾಖಲೆ ಕ್ರಿ.ಪೂ. ಏಳನೇ ಶತಮಾನದ್ದೆಂದು ಹೇಳಲಾಗುತ್ತದೆ. ಇದನ್ನು ಹೊಲದಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಗೋಸ್ಕರ ಬರೆದಂತಿದೆ. ಮುಂಚಿತವಾಗಿ ನಿರ್ಧರಿಸಲಾಗಿದ್ದ ಧಾನ್ಯದ ಪಾಲನ್ನು ಅವನು ಕೊಡಲು ತಪ್ಪಿಹೋದನು ಎಂಬ ಆಪಾದನೆ ಇತ್ತು. ಈ ಮನವಿಯನ್ನು ಒಂದು ಪುರಾತನ ಮಣ್ಣಿನ ಪಾತ್ರೆಯ ಚೂರಿನ ಮೇಲೆ ಹೀಗೆ ಬರೆಯಲಾಗಿದೆ: “ಕೆಲವು ದಿನಗಳ ಹಿಂದೆ ನಿಮ್ಮ ಸೇವಕನು (ಮನವಿ ಮಾಡಿದವನು) ಕೊಯ್ಲಿನ ಧಾನ್ಯಗಳನ್ನು ಶೇಖರಿಸಿಟ್ಟ ನಂತರ, ಶೋಬೈಯ ಮಗನಾದ ಹೋಶಾಯಾಹು ಬಂದು ನಿಮ್ಮ ಸೇವಕನ ಮೇಲಂಗಿಯನ್ನು ತೆಗೆದುಕೊಂಡು ಹೋದನು. . . . ನಾನು ಹೇಳಿದ್ದು ನಿಜ ಎಂದು . . . ನನ್ನೊಂದಿಗೆ ಸುಡುಬಿಸಿಲಿನಲ್ಲಿ ಕೊಯ್ಲಿನ ಕೆಲಸದಲ್ಲಿ ತೊಡಗಿದ್ದ ನನ್ನ ಜೊತೆ ಕೆಲಸಗಾರರು ಸಾಕ್ಷಿಹೇಳುವರು. ನಾನೇನು ತಪ್ಪು ಮಾಡಲಿಲ್ಲ. . . . ರಾಜ್ಯಪಾಲರು ಒಂದುವೇಳೆ ತಮ್ಮ ಕರ್ತವ್ಯವನ್ನು ಪೂರೈಸಬೇಕೆಂದು ನಿಮ್ಮ ಈ ಸೇವಕನ ಮೇಲಂಗಿಯನ್ನು ಕೊಡಿಸದಿದ್ದರೂ ಅವನ ಮೇಲಿನ ಕನಿಕರದಿಂದಾರೂ ದಯಮಾಡಿ ಕೊಡಿಸಬೇಕು. ನಿಮ್ಮ ಸೇವಕ ಮೇಲಂಗಿಯಿಲ್ಲದೇ ಇರುವುದನ್ನು ನೋಡುವಾಗ ಸುಮ್ಮನಿರಬಾರದು.”

ಈ ಮನವಿಯು ನಮಗೆ “ನಿರಾಶನಾದ ಕೆಲಸಗಾರನ [ಮೇಲಂಗಿಯನ್ನು] ಅವನಿಗೆ ತಿರುಗಿ ಕೊಡಿಸುವುದರ ಬಗ್ಗೆ ತಿಳಿಸುವುದು ಮಾತ್ರವಲ್ಲ . . . ಇದು ಆ ಕೆಲಸಗಾರನಿಗೆ ಬೈಬಲಿನ ನಿಯಮಗಳ ಬಗ್ಗೆ ಸ್ವಲ್ಪವಾದರೂ ತಿಳಿದಿತ್ತು, ವಿಶೇಷವಾಗಿ ಬಡವರ ಮೇಲಾಗುವ ಶೋಷಣೆಯ ವಿರುದ್ಧ ಯಾಜಕಕಾಂಡ ಮತ್ತು ಧರ್ಮೋಪದೇಶಕಾಂಡ ಪುಸ್ತಕಗಳಲ್ಲಿ ತಿಳಿಸಲಾಗಿದ್ದ ಆಜ್ಞೆಗಳು ತಿಳಿದಿತ್ತು ಎಂದು ತೋರಿಸುತ್ತದೆ” ಎಂದು ಇತಿಹಾಸಗಾರ ಸೈಮನ್‌ ಶಾಮರವರು ಹೇಳುತ್ತಾರೆ.