ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 5

ನಮ್ಮ ಹಾಜರಿ ಕೊಡುವ ಖಾತರಿ

ನಮ್ಮ ಹಾಜರಿ ಕೊಡುವ ಖಾತರಿ

‘ಕರ್ತನ ಮರಣವನ್ನು ಅವನು ಬರುವ ತನಕ ಪ್ರಕಟಪಡಿಸುತ್ತಾ ಇರಿ.’1 ಕೊರಿಂ. 11:26.

ಗೀತೆ 149 ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ

ಕಿರುನೋಟ *

1-2. (ಎ) ಕರ್ತನ ಸಂಧ್ಯಾ ಭೋಜನಕ್ಕೆ ಲಕ್ಷಾಂತರ ಜನರು ಸೇರಿಬರುವುದನ್ನು ನೋಡುವಾಗ ಯೆಹೋವನಿಗೆ ಹೇಗನಿಸುತ್ತದೆ? (ಮುಖಪುಟ ಚಿತ್ರ ನೋಡಿ.) (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

ಕರ್ತನ ಸಂಧ್ಯಾ ಭೋಜನಕ್ಕೆ ಲಕ್ಷಾಂತರ ಜನರು ಸೇರಿಬರುವುದನ್ನು ನೋಡುವಾಗ ಯೆಹೋವನಿಗೆ ಹೇಗನಿಸುತ್ತದೆ? ಆತನು ಎಷ್ಟು ಜನರು ಬಂದಿದ್ದಾರೆ ಎಂದು ಮಾತ್ರ ನೋಡಲ್ಲ, ಯಾರೆಲ್ಲ ಬಂದಿದ್ದಾರೆ ಎಂದು ಕೂಡ ನೋಡುತ್ತಾನೆ. ಉದಾಹರಣೆಗೆ, ಕೆಲವರು ಪ್ರತಿ ವರ್ಷ ತಪ್ಪದೆ ಸ್ಮರಣೆಗೆ ಹಾಜರಾಗುತ್ತಾರೆ. ಇವರಲ್ಲಿ ಕೆಲವರು ತುಂಬ ವಿರೋಧ ಇದ್ದರೂ ಹಾಜರಾಗಿರಬಹುದು. ಇನ್ನು ಕೆಲವರು ಕೂಟಗಳಿಗೆ ಆಗೊಮ್ಮೆ ಈಗೊಮ್ಮೆ ಬರುತ್ತಾರೆ, ಆದರೆ ಸ್ಮರಣೆಗೆ ತಪ್ಪದೆ ಹಾಜರಾಗುತ್ತಾರೆ. ಇನ್ನು ಕೆಲವರು ಮೊದಲ ಸಲ ಬಂದಿರುತ್ತಾರೆ. ಏನು ನಡೆಯುತ್ತೆ ಅನ್ನುವ ಕುತೂಹಲದಿಂದ ಅವರು ಹಾಜರಾಗಿರಬಹುದು. ಇವರಲ್ಲಿ ಒಬ್ಬೊಬ್ಬರನ್ನೂ ಯೆಹೋವನು ಗಮನಿಸುತ್ತಾನೆ.

2 ಹೀಗೆ ತುಂಬ ಜನರು ಸ್ಮರಣೆಗೆ ಹಾಜರಾಗುವುದನ್ನು ನೋಡುವಾಗ ಯೆಹೋವನಿಗೆ ತುಂಬ ಸಂತೋಷ ಆಗುತ್ತದೆ. (ಲೂಕ 22:19) ಆದರೆ ಸ್ಮರಣೆಗೆ ಎಷ್ಟು ಜನ ಹಾಜರಾಗಿದ್ದಾರೆ ಅನ್ನುವುದಕ್ಕೆ ಯೆಹೋವನು ಹೆಚ್ಚು ಗಮನ ಕೊಡಲ್ಲ. ಬಂದಿರುವವರು ಯಾವ ಕಾರಣದಿಂದ, ಯಾವ ಉದ್ದೇಶದಿಂದ ಹಾಜರಾಗಿದ್ದಾರೆ ಅನ್ನುವುದಕ್ಕೆ ಹೆಚ್ಚು ಗಮನಕೊಡುತ್ತಾನೆ. ಸ್ಮರಣೆಯನ್ನು ಮತ್ತು ಪ್ರತಿ ವಾರದ ಕೂಟಗಳನ್ನು ಯೆಹೋವನು ಪ್ರೀತಿಯಿಂದ ನಮಗೆ ಏರ್ಪಾಡು ಮಾಡುತ್ತಾನೆ. ಅವುಗಳಿಗೆ ನಾವು ಯಾಕೆ ಹಾಜರಾಗುತ್ತೇವೆ ಎಂಬ ಮುಖ್ಯವಾದ ಪ್ರಶ್ನೆ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಕರ್ತನ ಸಂಧ್ಯಾ ಭೋಜನಕ್ಕೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬರುತ್ತಾರೆ(ಪ್ಯಾರ 1-2 ನೋಡಿ)

ದೀನತೆ ಇರುವುದರಿಂದ ಹಾಜರಾಗುತ್ತೇವೆ

3-4. (ಎ) ನಾವು ಯಾಕೆ ಕೂಟಗಳಿಗೆ ಹಾಜರಾಗುತ್ತೇವೆ? (ಬಿ) ಕೂಟಗಳಿಗೆ ಹಾಜರಾಗುವ ಮೂಲಕ ನಾವು ಏನು ತೋರಿಸಿಕೊಡುತ್ತೇವೆ? (ಸಿ) ಸ್ಮರಣೆಗೆ ತಪ್ಪದೆ ಹಾಜರಾಗಲು 1 ಕೊರಿಂಥ 11:23-26​ರಲ್ಲಿ ನಮಗೆ ಯಾವ ಕಾರಣವನ್ನು ಕೊಡಲಾಗಿದೆ?

3 ಕೂಟಗಳು ದೇವರ ಆರಾಧನೆಯ ಒಂದು ಭಾಗ. ನಾವು ಕೂಟಗಳಿಗೆ ಹಾಜರಾಗಲು ಇದು ಮುಖ್ಯ ಕಾರಣ. ಯೆಹೋವನು ನಮಗೆ ಕೂಟಗಳಲ್ಲಿ ತುಂಬ ವಿಷಯಗಳನ್ನು ಕಲಿಸುತ್ತಾನೆ. ಇದು ಇನ್ನೊಂದು ಕಾರಣ. ಅಹಂಕಾರ ಇರುವ ಜನರು ತಮಗೆ ಯಾರೂ ಏನೂ ಹೇಳುವ ಅಗತ್ಯ ಇಲ್ಲ ಎಂದು ನೆನಸುತ್ತಾರೆ. (3 ಯೋಹಾ. 9) ಆದರೆ ನಾವು ಯೆಹೋವನಿಂದ ಮತ್ತು ಆತನ ಸಂಘಟನೆಯಿಂದ ಕಲಿಯಲು ಸಿದ್ಧರಾಗಿರುತ್ತೇವೆ.—ಯೆಶಾ. 30:20; ಯೋಹಾ. 6:45.

4 ಆದ್ದರಿಂದ ನಾವು ಕೂಟಗಳಿಗೆ ಹಾಜರಾದರೆ ನಮ್ಮಲ್ಲಿ ದೀನತೆ ಇದೆ, ಯೆಹೋವನಿಂದ ಕಲಿಯಲು ಮನಸ್ಸಿದೆ ಎಂದು ತೋರಿಸಿಕೊಡುತ್ತೇವೆ. ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗುವುದು ನಮ್ಮ ಕರ್ತವ್ಯ ಎಂದಷ್ಟೇ ನೋಡದೆ ಯೇಸುವಿನ ಆಜ್ಞೆಗೆ ವಿಧೇಯರಾಗಬೇಕು ಎಂಬ ಕಾರಣದಿಂದಲೂ ನಾವು ಅದಕ್ಕೆ ಹಾಜರಾಗುತ್ತೇವೆ. ಆತನು ಆಜ್ಞಾಪಿಸಿದ್ದು: “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.” (1 ಕೊರಿಂಥ 11:23-26 ಓದಿ.) ಸ್ಮರಣೆಗೆ ಹಾಜರಾದರೆ ಮುಂದೆ ನಮಗಿರುವ ನಿರೀಕ್ಷೆ ಬಗ್ಗೆ ನಮ್ಮ ನಂಬಿಕೆ ಬಲವಾಗುತ್ತದೆ. ಅಷ್ಟೇ ಅಲ್ಲ ಈ ಕಾರ್ಯಕ್ರಮ ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ ಅನ್ನುವುದನ್ನು ನೆನಪಿಸುತ್ತದೆ. ಆದರೆ ನಮ್ಮನ್ನು ಪ್ರೋತ್ಸಾಹಿಸಲು, ಬಲಪಡಿಸಲು ಇದೊಂದು ಕಾರ್ಯಕ್ರಮ ಸಾಕಾಗಲ್ಲ ಎಂದು ಯೆಹೋವನಿಗೆ ಗೊತ್ತು. ಹಾಗಾಗಿ ಪ್ರತಿ ವಾರ ಕೂಟಗಳನ್ನು ಏರ್ಪಡಿಸಿದ್ದಾನೆ. ಅದಕ್ಕೆ ಹಾಜರಾಗಬೇಕು ಎಂದು ನಮಗೆ ಹೇಳಿದ್ದಾನೆ. ನಾವು ದೀನರಾಗಿದ್ದರೆ ಪ್ರತಿ ವಾರ ಕೂಟಗಳಿಗೆ ತಯಾರಿ ಮಾಡುತ್ತೇವೆ ಮತ್ತು ಹಾಜರಾಗುತ್ತೇವೆ. ಇದಕ್ಕಾಗಿ ಎಷ್ಟು ಸಮಯ ಬೇಕಾದರೂ ಕೊಡುತ್ತೇವೆ.

5. ದೀನ ಜನರು ಯಾಕೆ ಕೂಟಗಳಿಗೆ ಬರುತ್ತಾರೆ?

5 ಕೂಟಗಳಿಗೆ ಬಂದು ತನ್ನಿಂದ ಕಲಿಯುವಂತೆ ಯೆಹೋವನು ಜನರನ್ನು ಆಮಂತ್ರಿಸುತ್ತಿದ್ದಾನೆ. ದೀನರಾದ ಅನೇಕ ಜನರು ಆ ಆಮಂತ್ರಣವನ್ನು ಸ್ವೀಕರಿಸುತ್ತಾರೆ. ಯಾಕೆಂದರೆ ಅವರು ಯೆಹೋವನಿಂದ ಕಲಿಯಲು ಬಯಸುತ್ತಾರೆ. (ಯೆಶಾ. 50:4) ಕ್ರಿಸ್ತನ ಮರಣದ ಸ್ಮರಣೆಗೆ ಬಂದ ಅನೇಕರು ನಂತರ ಕೂಟಗಳಿಗೂ ಹಾಜರಾಗಲು ಆರಂಭಿಸಿದ್ದಾರೆ. (ಜೆಕ. 8:20-23) ಈ ರೀತಿ ಪ್ರತಿ ವರ್ಷ ಬರುವ ಹೊಸಬರು ಮತ್ತು ಅನೇಕ ವರ್ಷಗಳಿಂದ ಸತ್ಯದಲ್ಲಿರುವ ನಾವೆಲ್ಲರೂ ಸೇರಿ ನಮ್ಮ “ಸಹಾಯಕನೂ ರಕ್ಷಕನೂ” ಆಗಿರುವ ಯೆಹೋವನು ಕಲಿಸುವ ವಿಷಯಗಳನ್ನು ತುಂಬ ಸಂತೋಷದಿಂದ ಕಲಿಯುತ್ತೇವೆ. (ಕೀರ್ತ. 40:17) ಯೆಹೋವನಿಂದ ಮತ್ತು ಆತನು ತುಂಬ ಪ್ರೀತಿಸುವ ಯೇಸು ಕ್ರಿಸ್ತನಿಂದ ಕಲಿಯುವುದಕ್ಕಿಂತ ಬೇರೆ ಯಾವ ವಿಷಯ ನಮಗೆ ಇಷ್ಟು ಸಂತೋಷ ಕೊಡುತ್ತೆ ಹೇಳಿ!—ಮತ್ತಾ. 17:5; 18:20; 28:20.

6. ಸ್ಮರಣೆಗೆ ಹಾಜರಾಗಲು ಒಬ್ಬ ವ್ಯಕ್ತಿಗೆ ಅವರಲ್ಲಿದ್ದ ದೀನತೆ ಹೇಗೆ ಸಹಾಯ ಮಾಡಿತು?

6 ಪ್ರತಿ ವರ್ಷ ಕ್ರಿಸ್ತನ ಮರಣದ ಸ್ಮರಣೆಗೆ ನಮ್ಮಿಂದ ಎಷ್ಟಾಗುತ್ತೋ ಅಷ್ಟು ಜನರನ್ನು ಆಮಂತ್ರಿಸುತ್ತೇವೆ. ಹೀಗೆ ನಾವು ಆಮಂತ್ರಿಸಿದಾಗ ಬಂದ ಎಷ್ಟೋ ದೀನ ಜನರು ಪ್ರಯೋಜನ ಪಡಕೊಂಡಿದ್ದಾರೆ. ಅಂಥವರಲ್ಲಿ ಒಬ್ಬರ ಉದಾಹರಣೆ ನೋಡಿ. ಇದು ತುಂಬ ವರ್ಷಗಳ ಹಿಂದೆ ನಡೆದಿದ್ದು. ಸಹೋದರರೊಬ್ಬರು ಒಬ್ಬ ವ್ಯಕ್ತಿಗೆ ಸ್ಮರಣೆಯ ಆಮಂತ್ರಣ ಪತ್ರ ಕೊಟ್ಟರು. ತನ್ನಿಂದ ಬರಕ್ಕಾಗಲ್ಲ ಎಂದು ಆ ವ್ಯಕ್ತಿ ಹೇಳಿದರು. ಆದರೆ ಸ್ಮರಣೆಯ ದಿನ ಅವರು ರಾಜ್ಯ ಸಭಾಗೃಹಕ್ಕೆ ಬಂದದ್ದನ್ನು ನೋಡಿ ಆ ಸಹೋದರನಿಗೆ ಆಶ್ಚರ್ಯ ಆಯಿತು. ಅಲ್ಲಿ ಸಹೋದರರು ಪ್ರೀತಿಯಿಂದ ಮಾತಾಡಿಸಿದ್ದನ್ನು ನೋಡಿ ಆ ವ್ಯಕ್ತಿಗೆ ತುಂಬ ಸಂತೋಷ ಆಯಿತು. ನಂತರ ಪ್ರತಿ ವಾರ ಕೂಟಗಳಿಗೆ ಹಾಜರಾಗಲು ಆರಂಭಿಸಿದರು. ಆ ಇಡೀ ವರ್ಷದಲ್ಲಿ ಅವರಿಂದ ಬರೀ ಮೂರು ಕೂಟಕ್ಕೆ ಬರಲು ಸಾಧ್ಯವಾಗಲಿಲ್ಲ. ಅವರು ಸ್ಮರಣೆಯ ನಂತರ ಕೂಟಗಳಿಗೆ ಹಾಜರಾಗಲು ಕಾರಣ ಏನು? ಅವರಲ್ಲಿದ್ದ ದೀನತೆ ಮನಸ್ಸನ್ನು ಬದಲಾಯಿಸಿಕೊಳ್ಳಲು ಸಹಾಯ ಮಾಡಿತು. ಅವರನ್ನು ಸ್ಮರಣೆಗೆ ಆಮಂತ್ರಿಸಿದ ಸಹೋದರ “ಅವರು ತುಂಬ ದೀನ ವ್ಯಕ್ತಿ” ಎಂದು ಹೇಳುತ್ತಾರೆ. ಈ ವ್ಯಕ್ತಿಯನ್ನು ಯೆಹೋವನೇ ತನ್ನ ಕಡೆ ಸೆಳೆದನು ಎನ್ನುವುದರಲ್ಲಿ ಸಂಶಯವೇ ಇಲ್ಲ. ಈಗ ಅವರು ದೀಕ್ಷಾಸ್ನಾನ ಪಡಕೊಂಡಿದ್ದಾರೆ.—2 ಸಮು. 22:28; ಯೋಹಾ. 6:44.

7. ನಾವು ಕೂಟಗಳಲ್ಲಿ ಕಲಿಯುವ ವಿಷಯಗಳು ಮತ್ತು ಬೈಬಲಲ್ಲಿ ಓದುವ ವಿಷಯಗಳು ನಮಗೆ ದೀನರಾಗಿರಲು ಹೇಗೆ ಸಹಾಯ ಮಾಡುತ್ತವೆ?

7 ನಾವು ಕೂಟಗಳಲ್ಲಿ ಕಲಿಯುವ ವಿಷಯಗಳು ಮತ್ತು ಬೈಬಲಲ್ಲಿ ಓದುವ ವಿಷಯಗಳು ನಮಗೆ ದೀನರಾಗಿರಲು ಸಹಾಯ ಮಾಡುತ್ತವೆ. ಸ್ಮರಣೆಯ ಮುಂಚೆ ನಡೆಯುವ ಕೂಟಗಳಲ್ಲಿ ನಾವು ಹೆಚ್ಚಾಗಿ ಯೇಸುವಿನ ಬಗ್ಗೆ, ಆತನು ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟು ತೋರಿಸಿರುವ ದೀನತೆ ಬಗ್ಗೆ ಕಲಿಯುತ್ತೇವೆ. ಸ್ಮರಣೆಯ ಬೈಬಲ್‌ ಓದುವಿಕೆಯಲ್ಲಿ ಯೇಸುವಿನ ಮರಣ ಮತ್ತು ಪುನರುತ್ಥಾನದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಓದುತ್ತೇವೆ. ನಾವು ಆ ಕೂಟಗಳಲ್ಲಿ ಕಲಿಯುವ ಮತ್ತು ಬೈಬಲಲ್ಲಿ ಓದುವ ವಿಷಯಗಳು ಯೇಸು ನಮಗಾಗಿ ಮಾಡಿದ ತ್ಯಾಗದ ಬಗ್ಗೆ ನಮಗಿರುವ ಕೃತಜ್ಞತಾಭಾವವನ್ನು ಹೆಚ್ಚಿಸುತ್ತವೆ. ಇದರಿಂದ ಆತನಂತೆ ನಾವು ದೀನತೆ ತೋರಿಸಲು ಮತ್ತು ಕಷ್ಟಗಳಲ್ಲಿಯೂ ಯೆಹೋವನ ಚಿತ್ತ ಮಾಡಲು ಬೇಕಾದ ಪ್ರೇರಣೆ ಸಿಗುತ್ತದೆ.—ಲೂಕ 22:41, 42.

ಧೈರ್ಯ ಇರುವುದರಿಂದ ಹಾಜರಾಗುತ್ತೇವೆ

8. ಯೇಸು ಹೇಗೆ ಧೈರ್ಯ ತೋರಿಸಿದನು?

8 ನಾವು ಯೇಸುವಿನಂತೆ ಧೈರ್ಯವನ್ನೂ ತೋರಿಸಲು ಶ್ರಮಿಸುತ್ತಿದ್ದೇವೆ. ಆತನು ಸಾಯುವುದಕ್ಕೆ ಕೆಲವೇ ದಿನಗಳಿದ್ದಾಗ ತೋರಿಸಿದ ಧೈರ್ಯದ ಬಗ್ಗೆ ನೋಡಿ. ವೈರಿಗಳು ತನಗೆ ಅವಮಾನ ಮಾಡುತ್ತಾರೆ, ಹೊಡೆಯುತ್ತಾರೆ ಮತ್ತು ಕಂಬಕ್ಕೆ ಜಡಿಯುತ್ತಾರೆ ಎಂದು ಆತನಿಗೆ ಮೊದಲೇ ಗೊತ್ತಿತ್ತು. (ಮತ್ತಾ. 20:17-19) ಅದನ್ನೆಲ್ಲ ಧೈರ್ಯವಾಗಿ ಎದುರಿಸಿದನು. ತನ್ನ ಮರಣ ಹತ್ತಿರ ಆದಾಗ ಗೆತ್ಸೇಮನೆ ತೋಟದಲ್ಲಿ ತನ್ನೊಂದಿಗಿದ್ದ ಅಪೊಸ್ತಲರಿಗೆ “ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಮಾಡುವವನು ಹತ್ತಿರಕ್ಕೆ ಬಂದಿದ್ದಾನೆ” ಎಂದು ಹೇಳಿದನು. (ಮತ್ತಾ. 26:36, 46) ಜನರ ಗುಂಪು ಆಯುಧಗಳನ್ನು ತೆಗೆದುಕೊಂಡು ಯೇಸುವನ್ನು ಹಿಡಿಯಲು ಬಂದಾಗ ಮುಂದೆ ಹೋಗಿ ತಾನೇ ಯೇಸು ಎಂದು ಹೇಳಿದನು. ತನ್ನ ಶಿಷ್ಯರನ್ನು ಬಿಟ್ಟುಬಿಡಿ ಎಂದು ಸೈನಿಕರಿಗೆ ನೇರವಾಗಿ ಹೇಳಿದನು. (ಯೋಹಾ. 18:3-8) ಎಂಥಾ ಧೈರ್ಯ ಅಲ್ಲವೇ! ಇಂದು ಅಭಿಷಿಕ್ತ ಕ್ರೈಸ್ತರು ಮತ್ತು ಬೇರೆ ಕುರಿಗಳು ಯೇಸುವಿನಂತೆ ಧೈರ್ಯ ತೋರಿಸಿದ್ದಾರೆ. ಹೇಗೆ?

ನೀವು ಧೈರ್ಯವಾಗಿ ಕೂಟಗಳಿಗೆ ಹಾಜರಾದರೆ ಬೇರೆಯವರಿಗೂ ಧೈರ್ಯ ಸಿಗುತ್ತೆ (ಪ್ಯಾರ 9 ನೋಡಿ) *

9. (ಎ) ಕೂಟಗಳಿಗೆ ತಪ್ಪದೆ ಹಾಜರಾಗಲು ನಮಗೆ ಯಾಕೆ ಧೈರ್ಯ ಬೇಕಾಗುತ್ತದೆ? (ಬಿ) ದೇವರಿಗೆ ನಿಷ್ಠೆ ತೋರಿಸಿದ್ದಕ್ಕಾಗಿ ಜೈಲಲ್ಲಿರುವ ಸಹೋದರರ ಮೇಲೆ ನಮ್ಮ ಮಾದರಿ ಯಾವ ಪ್ರಭಾವ ಬೀರುತ್ತದೆ?

9 ನಾವು ಕೂಟಗಳಿಗೆ ತಪ್ಪದೆ ಹಾಜರಾಗಲಿಕ್ಕಾಗಿ ಕೆಲವೊಮ್ಮೆ ಧೈರ್ಯ ತೋರಿಸಬೇಕಾಗುತ್ತದೆ. ಕಷ್ಟದ ಸನ್ನಿವೇಶಗಳು ಬಂದರೂ ನಮ್ಮ ಕೆಲವು ಸಹೋದರ-ಸಹೋದರಿಯರು ಕೂಟಗಳಿಗೆ ಹಾಜರಾಗುತ್ತಾರೆ. ದುಃಖ, ನಿರುತ್ಸಾಹ, ಆರೋಗ್ಯ ಸಮಸ್ಯೆಗಳು ಅವರನ್ನು ತಡೆಯುವುದಿಲ್ಲ. ಇನ್ನು ಕೆಲವರು ಕುಟುಂಬದವರಿಂದ, ಸರ್ಕಾರಿ ಅಧಿಕಾರಿಗಳಿಂದ ತೀವ್ರ ವಿರೋಧ ಬಂದರೂ ಧೈರ್ಯವಾಗಿದ್ದು ಕೂಟಗಳಿಗೆ ಹಾಜರಾಗುತ್ತಾರೆ. ತಪ್ಪದೆ ಕೂಟಗಳಿಗೆ ಹಾಜರಾಗುತ್ತಿರುವ ವಿಷಯದಲ್ಲಿ ನಾವು ಒಳ್ಳೇ ಮಾದರಿ ಇಟ್ಟಿದ್ದೇವೆ. ದೇವರಿಗೆ ನಿಷ್ಠೆ ತೋರಿಸಿದ್ದಕ್ಕಾಗಿ ಜೈಲಲ್ಲಿರುವ ಸಹೋದರರ ಮೇಲೆ ಇಂಥ ಒಳ್ಳೇ ಮಾದರಿ ಯಾವ ಪ್ರಭಾವ ಬೀರುತ್ತದೆ? (ಇಬ್ರಿ. 13:3) ಕಷ್ಟ-ತೊಂದರೆ ಇದ್ದರೂ ನಾವು ಯೆಹೋವನ ಸೇವೆಯನ್ನು ಬಿಡದೆ ಮಾಡುತ್ತಿರುವುದನ್ನು ನೋಡಿ ಅವರ ನಂಬಿಕೆ, ಧೈರ್ಯ, ನಿಷ್ಠೆ ಹೆಚ್ಚುತ್ತದೆ. ಅಪೊಸ್ತಲ ಪೌಲನಿಗೂ ಇದೇ ಅನುಭವ ಆಯಿತು. ಆತನು ರೋಮ್‌ನಲ್ಲಿ ಗೃಹಬಂಧನದಲ್ಲಿದ್ದಾಗ ತನ್ನ ಸಹೋದರರು ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡುತ್ತಿರುವುದರ ಬಗ್ಗೆ ಕೇಳಿಸಿಕೊಂಡಾಗೆಲ್ಲ ಸಂತೋಷಪಡುತ್ತಿದ್ದನು. (ಫಿಲಿ. 1:3-5, 12-14) ಆತನ ಬಿಡುಗಡೆಗೆ ಸ್ವಲ್ಪ ಮುಂಚೆ ಅಥವಾ ಆಮೇಲೆ ಇಬ್ರಿಯರಿಗೆ ಪತ್ರ ಬರೆದನು. ಅದರಲ್ಲಿ “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ,” ಕೂಟಕ್ಕೆ ಹೋಗುವುದನ್ನು ನಿಲ್ಲಿಸಲೇಬೇಡಿ ಎಂದು ಆ ನಂಬಿಗಸ್ತ ಕ್ರೈಸ್ತರನ್ನು ಪ್ರೋತ್ಸಾಹಿಸಿದನು.—ಇಬ್ರಿ. 10:24, 25; 13:1.

10-11. (ಎ) ನಾವು ಸ್ಮರಣೆಗೆ ಯಾರನ್ನು ಕರೆಯಬೇಕು? (ಬಿ) ಇವರನ್ನು ಕರೆಯಲು ಎಫೆಸ 1:7 ನಮಗೆ ಯಾವ ಕಾರಣ ಕೊಡುತ್ತದೆ?

10 ನಮ್ಮ ಸಂಬಂಧಿಕರನ್ನು, ಜೊತೆಯಲ್ಲಿ ಕೆಲಸಮಾಡುವವರನ್ನು, ನೆರೆಯವರನ್ನು ಸ್ಮರಣೆಗೆ ಬರುವಂತೆ ಧೈರ್ಯದಿಂದ ಆಮಂತ್ರಿಸುತ್ತೇವೆ. ಇವರನ್ನೆಲ್ಲ ಯಾಕೆ ಕರೆಯುತ್ತೇವೆ? ಯೆಹೋವ ಮತ್ತು ಯೇಸು ನಮಗಾಗಿ ಮಾಡಿರುವ ವಿಷಯಗಳಿಗಾಗಿ ತುಂಬ ಕೃತಜ್ಞರಾಗಿದ್ದೇವೆ. ಆ ಕೃತಜ್ಞತೆಯನ್ನು ನಾವು ಬೇರೆಯವರನ್ನು ಸ್ಮರಣೆಗೆ ಕರೆಯುವ ಮೂಲಕ ತೋರಿಸುತ್ತೇವೆ. ವಿಮೋಚನಾ ಮೌಲ್ಯದ ಮೂಲಕ ಯೆಹೋವನು ತೋರಿಸಿರುವ ‘ಅಪಾತ್ರ ದಯೆಯಿಂದ’ ಪ್ರಯೋಜನ ಪಡೆಯುವುದು ಹೇಗೆ ಅಂತ ಅವರೂ ತಿಳಿದುಕೊಳ್ಳಬೇಕೆಂದು ಬಯಸುತ್ತೇವೆ.—ಎಫೆಸ 1:7 ಓದಿ; ಪ್ರಕ. 22:17.

11 ನಾವು ಕೂಟಗಳಿಗೆ ಹಾಜರಾಗುವ ಮೂಲಕ ಇನ್ನೊಂದು ಮುಖ್ಯವಾದ ಗುಣವನ್ನೂ ತೋರಿಸುತ್ತೇವೆ. ಆ ಗುಣವನ್ನು ಯೆಹೋವ ಮತ್ತು ಯೇಸು ಇಬ್ಬರೂ ತೋರಿಸಿದ್ದಾರೆ. ಅವರ ಹಾಗೆ ಯಾರೂ ಆ ಗುಣವನ್ನು ತೋರಿಸಿಲ್ಲ.

ಪ್ರೀತಿ ಇರುವುದರಿಂದ ಹಾಜರಾಗುತ್ತೇವೆ

12. (ಎ) ಕೂಟಗಳಿಂದಾಗಿ ನಮಗೆ ಯೆಹೋವನ ಮತ್ತು ಯೇಸುವಿನ ಮೇಲೆ ಇರುವ ಪ್ರೀತಿ ಹೇಗೆ ಹೆಚ್ಚಾಗುತ್ತದೆ? (ಬಿ) ಯೇಸುವನ್ನು ಅನುಕರಿಸಲು ನಾವು ಏನು ಮಾಡಬೇಕೆಂದು 2 ಕೊರಿಂಥ 5:14, 15 ಪ್ರೋತ್ಸಾಹಿಸುತ್ತದೆ?

12 ನಮಗೆ ಯೆಹೋವನ ಮತ್ತು ಯೇಸುವಿನ ಮೇಲೆ ಪ್ರೀತಿ ಇರುವುದರಿಂದ ಕೂಟಗಳಿಗೆ ಹಾಜರಾಗುತ್ತೇವೆ. ಕೂಟಗಳಿಗೆ ಹಾಜರಾದಾಗ ಅವರ ಮೇಲೆ ನಮಗಿರುವ ಪ್ರೀತಿ ಇನ್ನೂ ಹೆಚ್ಚಾಗುತ್ತದೆ. ಅವರು ನಮಗಾಗಿ ಏನು ಮಾಡಿದ್ದಾರೆ ಎಂದು ಕೂಟಗಳಲ್ಲಿ ಪದೇಪದೇ ಕಲಿಯುತ್ತಿರುತ್ತೇವೆ. (ರೋಮ. 5:8) ಅದರಲ್ಲೂ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಎಂದು ಕಲಿಯುತ್ತೇವೆ. ವಿಮೋಚನಾ ಮೌಲ್ಯದ ಬಗ್ಗೆ ಗೊತ್ತಿಲ್ಲದ ಜನರನ್ನೂ ಯೆಹೋವ ಮತ್ತು ಯೇಸು ತುಂಬ ಪ್ರೀತಿಸುತ್ತಾರೆ ಎಂದು ಕಲಿಯುತ್ತೇವೆ. ಅವರು ತೋರಿಸಿದ ಪ್ರೀತಿಗೆ ನಾವು ಧನ್ಯವಾದವನ್ನು ಹೇಗೆ ವ್ಯಕ್ತಪಡಿಸಬಹುದು? ಪ್ರತಿ ದಿನ ನಾವು ನಡಕೊಳ್ಳುವ ವಿಧದಲ್ಲಿ ಯೇಸುವನ್ನು ಅನುಕರಿಸಬೇಕು. (2 ಕೊರಿಂಥ 5:14, 15 ಓದಿ.) ಅಷ್ಟೇ ಅಲ್ಲ, ನಮಗೋಸ್ಕರ ವಿಮೋಚನಾ ಮೌಲ್ಯವನ್ನು ಕೊಟ್ಟದ್ದಕ್ಕಾಗಿ ಯೆಹೋವನನ್ನು ಸ್ತುತಿಸಬೇಕು. ಇದನ್ನು ಮಾಡುವ ಒಂದು ವಿಧ, ಕೂಟಗಳಲ್ಲಿ ಮನದಾಳದಿಂದ ಉತ್ತರ ಹೇಳುವುದೇ ಆಗಿದೆ.

13. ಯೆಹೋವನ ಮತ್ತು ಯೇಸುವಿನ ಮೇಲೆ ನಮಗಿರುವ ಅಪಾರ ಪ್ರೀತಿಯನ್ನು ಹೇಗೆ ತೋರಿಸಬಹುದು?

13 ಯೆಹೋವನಿಗಾಗಿ ಮತ್ತು ಯೇಸುವಿಗಾಗಿ ನಾವು ತ್ಯಾಗಗಳನ್ನು ಮಾಡಿ ಅವರ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಎಂದು ತೋರಿಸಬಹುದು. ಕೂಟಗಳಿಗೆ ಹಾಜರಾಗಲು ನಾವು ಬೇರೆ ಬೇರೆ ರೀತಿಯ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅನೇಕ ಸಭೆಗಳಲ್ಲಿ ವಾರಮಧ್ಯದ ಕೂಟ ಸಾಯಂಕಾಲ ಇರುತ್ತದೆ. ನಮ್ಮಲ್ಲಿ ಹೆಚ್ಚಿನವರು ಇಡೀ ದಿನ ಕೆಲಸ ಮಾಡಿ ಕೂಟಕ್ಕೆ ಬರುವಾಗ ಸುಸ್ತಾಗಿರುತ್ತೇವೆ. ಇನ್ನೊಂದು ಕೂಟ ವಾರಾಂತ್ಯದಲ್ಲಿ ಇರುತ್ತದೆ. ಆ ದಿನಗಳಲ್ಲಿ ಬೇರೆ ಜನರು ಆರಾಮವಾಗಿ ಇರುವಾಗ ನಾವು ಕೂಟಗಳಿಗೆ ಹಾಜರಾಗುತ್ತೇವೆ. ನಮಗೆ ಸುಸ್ತಾಗಿದ್ದರೂ ಕೂಟಗಳಿಗೆ ಹಾಜರಾಗುವುದನ್ನು ಯೆಹೋವನು ಗಮನಿಸುತ್ತಾನಾ? ಖಂಡಿತ ಗಮನಿಸುತ್ತಾನೆ. ‘ಕಷ್ಟ ಇರುವಲ್ಲಿ ಸುಖ ಇರುತ್ತೆ’ ಎಂಬಂತೆ ನಾವು ಕೂಟಕ್ಕೆ ಹೋಗಲು ಹೆಚ್ಚು ತ್ಯಾಗಮಾಡಿದಂತೆ ಯೆಹೋವನಿಗೆ ನಮ್ಮ ಮೇಲಿರುವ ಪ್ರೀತಿಯೂ ಹೆಚ್ಚಾಗುತ್ತಾ ಹೋಗುತ್ತದೆ.—ಮಾರ್ಕ 12:41-44.

14. ಯೇಸು ಸ್ವತ್ಯಾಗದ ಪ್ರೀತಿ ತೋರಿಸುವುದರಲ್ಲಿ ಯಾವ ಮಾದರಿ ಇಟ್ಟಿದ್ದಾನೆ?

14 ಯೇಸು ಸ್ವತ್ಯಾಗದ ಪ್ರೀತಿ ತೋರಿಸುವುದರಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾನೆ. ಆತನು ತನ್ನ ಶಿಷ್ಯರಿಗೋಸ್ಕರ ಸತ್ತಿದ್ದಷ್ಟೇ ಅಲ್ಲ, ತಾನು ಬದುಕಿರುವಾಗಲೂ ಅವರ ಇಷ್ಟಗಳಿಗೇ ಪ್ರಾಮುಖ್ಯತೆ ಕೊಟ್ಟನು. ಉದಾಹರಣೆಗೆ, ತಾನು ಸಾಯುವ ಹಿಂದಿನ ರಾತ್ರಿ ಯೇಸುವಿಗೆ ತುಂಬ ಸುಸ್ತಾಗಿದ್ದರೂ, ಒತ್ತಡಗಳಿದ್ದರೂ ತನ್ನ ಶಿಷ್ಯರ ಹತ್ತಿರ ಮಾತಾಡಲು, ಅವರಿಗೆ ಕಲಿಸಲು ಸಮಯ ಕೊಟ್ಟನು. (ಲೂಕ 22:39-46) ಬೇರೆಯವರಿಂದ ತನಗೇನು ಸಿಗುತ್ತೆ ಅಂತಲ್ಲ ಬೇರೆಯವರಿಗೆ ತಾನೇನು ಕೊಡಬಹುದು ಅಂತಾನೇ ಯಾವಾಗಲೂ ಯೋಚಿಸುತ್ತಿದ್ದನು. (ಮತ್ತಾ. 20:28) ಯೆಹೋವನ ಮೇಲೆ ಮತ್ತು ಸಹೋದರರ ಮೇಲೆ ನಮಗೆ ಅಂಥ ಪ್ರೀತಿ ಇದ್ದರೆ ಸ್ಮರಣೆಗೆ ಮತ್ತು ಇತರ ಎಲ್ಲ ಕೂಟಗಳಿಗೆ ಹಾಜರಾಗಲು ನಮ್ಮಿಂದ ಆಗುವುದನ್ನೆಲ್ಲ ಮಾಡುತ್ತೇವೆ.

15. ನಾವು ಯಾರಿಗೆ ಸಹಾಯ ಮಾಡುವುದಕ್ಕೆ ಹೆಚ್ಚು ಗಮನ ಕೊಡಬೇಕು?

15 ಈ ಭೂಮಿಯ ಮೇಲೆ ಒಂದೇ ಒಂದು ನಿಜವಾದ ಸಹೋದರ ಬಳಗ ಇದೆ. ಅದರಲ್ಲಿ ನಾವಿದ್ದೇವೆ. ನಮ್ಮ ಜೊತೆ ಇನ್ನೂ ಅನೇಕರು ಸೇರಿ ಸ್ಮರಣೆಯ ಕಾರ್ಯಕ್ರಮವನ್ನು ಆನಂದಿಸಬೇಕು. ಅದಕ್ಕಾಗಿ ಹೊಸಬರನ್ನು ಆಮಂತ್ರಿಸುವುದರಲ್ಲಿ ನಮ್ಮಿಂದ ಎಷ್ಟಾಗುತ್ತೋ ಅಷ್ಟು ಸಮಯ ಕಳೆಯಬೇಕು. ಆದರೆ ‘ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತೆ’ ಇದ್ದು ಈಗ ಕೂಟಕ್ಕೆ ಬರುವುದನ್ನೂ ಸಾರುವುದನ್ನೂ ನಿಲ್ಲಿಸಿರುವವರನ್ನು ಆಮಂತ್ರಿಸಲು ಇನ್ನೂ ಹೆಚ್ಚು ಗಮನ ಕೊಡಬೇಕು. (ಗಲಾ. 6:10) ಕೂಟಗಳಿಗೆ ಅದರಲ್ಲೂ ಸ್ಮರಣೆಗೆ ಹಾಜರಾಗುವಂತೆ ಅವರನ್ನು ಪ್ರೋತ್ಸಾಹಿಸುವ ಮೂಲಕ ಅವರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ. ಇಂಥವರು ಪ್ರೀತಿಯ ತಂದೆ, ಕುರುಬ ಆಗಿರುವ ಯೆಹೋವನ ಬಳಿ ಮರಳಿ ಬಂದಾಗ ಆತನಿಗೆ ಮತ್ತು ಯೇಸುವಿಗೆ ತುಂಬ ಸಂತೋಷ ಆಗುತ್ತದೆ. ನಮಗೂ ತುಂಬ ಸಂತೋಷ ಆಗುತ್ತದೆ.—ಮತ್ತಾ. 18:14.

16. (ಎ) ನಾವು ಒಬ್ಬರನ್ನೊಬ್ಬರು ಹೇಗೆ ಪ್ರೋತ್ಸಾಹಿಸಬಹುದು? (ಬಿ) ಕೂಟಗಳು ನಮಗೆ ಹೇಗೆ ಸಹಾಯ ಮಾಡುತ್ತವೆ? (ಸಿ) ಯೋಹಾನ 3:16​ರಲ್ಲಿರುವ ಯೇಸುವಿನ ಮಾತನ್ನು ನೆನಪಿಸಿಕೊಳ್ಳಲು ಇದು ಯಾಕೆ ಸೂಕ್ತ ಸಮಯವಾಗಿದೆ?

16 2019, ಏಪ್ರಿಲ್‌ 19​ರ ಶುಕ್ರವಾರದಂದು ನಡೆಯಲಿರುವ ಸ್ಮರಣೆಗೆ ಕೆಲವೇ ವಾರಗಳಿವೆ. ಈ ದಿನಗಳಲ್ಲಿ ನಮ್ಮಿಂದ ಆದಷ್ಟು ಜನರನ್ನು ಆ ಕಾರ್ಯಕ್ರಮಕ್ಕೆ ಆಮಂತ್ರಿಸೋಣ. (“ ಇದಕ್ಕೂ ಕರೆಯಿರಿ . . .” ಎಂಬ ಚೌಕ ನೋಡಿ.) ಇಡೀ ವರ್ಷ ಎಲ್ಲ ಕೂಟಗಳಿಗೆ ತಪ್ಪದೆ ಹಾಜರಾಗುತ್ತಾ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ. ಈ ದುಷ್ಟಲೋಕದ ಅಂತ್ಯ ಹತ್ತಿರ ಆಗುತ್ತಾ ಇರುವಾಗ ದೀನತೆ, ಧೈರ್ಯ, ಪ್ರೀತಿ ತೋರಿಸಲು ನಮಗೆ ಕೂಟಗಳು ಸಹಾಯ ಮಾಡುತ್ತವೆ. (1 ಥೆಸ. 5:8-11) ನಮ್ಮನ್ನು ಇಷ್ಟು ಪ್ರೀತಿಸುವ ಯೆಹೋವನ ಮತ್ತು ಯೇಸುವಿನ ಬಗ್ಗೆ ನಮಗೆ ಹೇಗನಿಸುತ್ತದೆ ಎಂದು ತೋರಿಸೋಣ.—ಯೋಹಾನ 3:16 ಓದಿ.

ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ

^ ಪ್ಯಾರ. 5 2019, ಏಪ್ರಿಲ್‌ 19​ರ ಶುಕ್ರವಾರ ಸಾಯಂಕಾಲ ಕ್ರಿಸ್ತನ ಮರಣದ ಸ್ಮರಣೆ ನಡೆಯಲಿದೆ. ಇದು ಇಡೀ ವರ್ಷದಲ್ಲೇ ಅತಿ ಪ್ರಾಮುಖ್ಯವಾದ ಕೂಟ. ನಾವು ಆ ಕೂಟಕ್ಕೆ ಹಾಜರಾಗಲು ಕಾರಣವೇನು? ಕಾರಣ ಏನೆಂದರೆ, ನಾವು ಯೆಹೋವನನ್ನು ಸಂತೋಷಪಡಿಸಲು ಬಯಸುತ್ತೇವೆ. ಸ್ಮರಣೆಗೆ ಮತ್ತು ಪ್ರತಿ ವಾರ ನಡೆಯುವ ಕೂಟಗಳಿಗೆ ಹೋಗುವುದು ನಮ್ಮ ಬಗ್ಗೆ ಏನು ತೋರಿಸಿಕೊಡುತ್ತೆ ಅನ್ನುವುದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 52 ಚಿತ್ರ ವಿವರಣೆ: ದೇವರಿಗೆ ನಿಷ್ಠೆ ತೋರಿಸಿದ್ದಕ್ಕಾಗಿ ಜೈಲಲ್ಲಿರುವ ಸಹೋದರನಿಗೆ ತನ್ನ ಕುಟುಂಬದಿಂದ ಬಂದಿರುವ ಪತ್ರ ನೋಡಿ ಖುಷಿ ಆಗುತ್ತದೆ. ತನ್ನ ಹೆಂಡತಿ-ಮಗ ತನ್ನನ್ನು ಮರೆತಿಲ್ಲ, ರಾಜಕೀಯ ಗಲಭೆಗಳು ಇದ್ದರೂ ಅವರು ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡುತ್ತಿದ್ದಾರೆ ಎಂದು ತಿಳಿದು ಸಂತೋಷ ಆಗುತ್ತದೆ.