ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 3

ನಿಮ್ಮ ಹೃದಯ ಕಾಪಾಡಿಕೊಳ್ಳಿ

ನಿಮ್ಮ ಹೃದಯ ಕಾಪಾಡಿಕೊಳ್ಳಿ

“ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ.”ಜ್ಞಾನೋ. 4:23.

ಗೀತೆ 52 ನಿನ್ನ ಹೃದಯವನ್ನು ಕಾಪಾಡಿಕೋ

ಕಿರುನೋಟ *

1-3. (ಎ) ಯೆಹೋವನು ಸೊಲೊಮೋನನನ್ನು ಯಾಕೆ ಪ್ರೀತಿಸಿದನು? (ಬಿ) ಸೊಲೊಮೋನನಿಗೆ ಯಾವ ಆಶೀರ್ವಾದಗಳು ಸಿಕ್ಕಿದವು? (ಸಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲಿದ್ದೇವೆ?

ಸೊಲೊಮೋನ ಇಸ್ರಾಯೇಲಿನ ರಾಜನಾದಾಗ ಅವನಿಗಿನ್ನೂ ಚಿಕ್ಕ ವಯಸ್ಸು. ಅವನು ಆಳ್ವಿಕೆಯನ್ನು ಆರಂಭಿಸಿದ ಹೊಸದರಲ್ಲಿ ಯೆಹೋವನು ಕನಸಿನಲ್ಲಿ ಬಂದು ಅವನಿಗೆ “ನಿನಗೆ ಯಾವ ವರ ಬೇಕು ಕೇಳಿಕೋ” ಎಂದನು. ಅದಕ್ಕೆ ಸೊಲೊಮೋನ ‘ನಾನು ಇನ್ನೂ ಚಿಕ್ಕವನು; ವ್ಯವಹಾರಜ್ಞಾನ ಇಲ್ಲದವನು. ನ್ಯಾಯ-ಅನ್ಯಾಯಗಳನ್ನು ಕಂಡುಹಿಡಿಯಲು ನನಗೆ ವಿವೇಕವನ್ನು’ ಅಥವಾ ವಿಧೇಯತೆ ತೋರಿಸುವ ಹೃದಯವನ್ನು ದಯಪಾಲಿಸು ಅಂದನು. (1 ಅರ. 3:5-10) ಎಂಥ ವಿನಯಶೀಲತೆ ಅಲ್ವಾ? ಆದ್ದರಿಂದಲೇ ಯೆಹೋವನು ಸೊಲೊಮೋನನನ್ನು ತುಂಬ ಪ್ರೀತಿಸಿದನು. (2 ಸಮು. 12:24) ಸೊಲೊಮೋನ ಕೇಳಿದ ವಿಷಯ ಯೆಹೋವನಿಗೆ ಎಷ್ಟು ಇಷ್ಟವಾಯಿತೆಂದರೆ “ಜ್ಞಾನವನ್ನೂ ವಿವೇಕ” ಅಥವಾ ತಿಳುವಳಿಕೆಯುಳ್ಳ ಹೃದಯವನ್ನೂ ಅವನಿಗೆ ಕೊಟ್ಟನು.—1 ಅರ. 3:12.

2 ಸೊಲೊಮೋನ ನಂಬಿಗಸ್ತನಾಗಿರುವ ತನಕ ಯೆಹೋವನಿಂದ ಆಶೀರ್ವಾದಗಳನ್ನು ಪಡಕೊಂಡನು. “ಇಸ್ರಾಯೇಲ್‌ದೇವರಾದ ಯೆಹೋವನ ಹೆಸರಿಗೋಸ್ಕರ” ಆಲಯವನ್ನು ಕಟ್ಟುವ ಸುಯೋಗ ಅವನಿಗೆ ಸಿಕ್ಕಿತು. (1 ಅರ. 8:20) ದೇವರಿಂದ ಸಿಕ್ಕಿದ ವಿವೇಕದಿಂದ ಜಗತ್ಪ್ರಸಿದ್ಧನಾದನು. ಅವನು ದೇವರಿಂದ ಪ್ರೇರಿತನಾಗಿ ಹೇಳಿದ ಮಾತುಗಳು ಬೈಬಲಲ್ಲಿ ಮೂರು ಪುಸ್ತಕಗಳಲ್ಲಿವೆ. ಅವುಗಳಲ್ಲಿ ಒಂದು ಪುಸ್ತಕ ಜ್ಞಾನೋಕ್ತಿ.

3 ಜ್ಞಾನೋಕ್ತಿ ಪುಸ್ತಕದಲ್ಲಿ ಹೃದಯ ಎಂಬ ಪದ ಸುಮಾರು 36 ಸಾರಿ ಇದೆ. ಉದಾಹರಣೆಗೆ ಜ್ಞಾನೋಕ್ತಿ 4:23 “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ” ಎಂದು ಹೇಳುತ್ತದೆ. ಈ ವಚನದಲ್ಲಿ, “ಹೃದಯ” ಅನ್ನುವುದು ಯಾವುದಕ್ಕೆ ಸೂಚಿಸುತ್ತದೆ? ಇದಕ್ಕೆ ಈ ಲೇಖನದಲ್ಲಿ ಉತ್ತರ ಇದೆ. ಇನ್ನೂ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲಿದ್ದೇವೆ: ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಏನೆಲ್ಲ ಮಾಡುತ್ತಾನೆ? ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು? ನಾವು ದೇವರಿಗೆ ನಂಬಿಗಸ್ತರಾಗಿ ಇರಬೇಕೆಂದರೆ ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕು.

“ಹೃದಯ” ಅನ್ನುವುದು ಯಾವುದಕ್ಕೆ ಸೂಚಿಸುತ್ತದೆ?

4-5. (ಎ) ಜ್ಞಾನೋಕ್ತಿ 4:23​ರಲ್ಲಿ “ಹೃದಯ” ಅನ್ನುವುದು ಯಾವುದಕ್ಕೆ ಸೂಚಿಸುತ್ತದೆ? (ಬಿ) ನಾವು ಒಳಗೆ ಎಂಥ ವ್ಯಕ್ತಿಯಾಗಿದ್ದೇವೋ ಅದು ತುಂಬ ಪ್ರಾಮುಖ್ಯ ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

4 ಜ್ಞಾನೋಕ್ತಿ 4:23​ರಲ್ಲಿ “ಹೃದಯ” ಅನ್ನುವುದು ನಮ್ಮ ಮನದಾಳದ ಯೋಚನೆ, ಭಾವನೆ, ಉದ್ದೇಶ ಮತ್ತು ಆಸೆಗಳನ್ನು ಸೂಚಿಸುತ್ತದೆ. ಇದು ನಾವು ಹೊರಗೆ ಹೇಗೆ ಕಾಣುತ್ತೇವೋ ಅದಕ್ಕಲ್ಲ, ಒಳಗೆ ಏನಾಗಿದ್ದೇವೋ ಅದಕ್ಕೆ ಸೂಚಿಸುತ್ತದೆ.

5 ನಾವು ಒಳಗೆ ಎಂಥ ವ್ಯಕ್ತಿಯಾಗಿದ್ದೇವೋ ಅದು ತುಂಬ ಪ್ರಾಮುಖ್ಯ ಅನ್ನುವುದಕ್ಕೆ ಒಂದು ಉದಾಹರಣೆ ನೋಡೋಣ. ನಮ್ಮ ಆರೋಗ್ಯದ ವಿಷಯ ತೆಗೆದುಕೊಳ್ಳೋಣ. ಆರೋಗ್ಯ ಚೆನ್ನಾಗಿರಬೇಕೆಂದರೆ ಮೊದಲನೇದಾಗಿ, ಒಳ್ಳೇ ಆಹಾರ ತಿನ್ನಬೇಕು ಮತ್ತು ವ್ಯಾಯಾಮ ಮಾಡಬೇಕು. ಅದೇ ರೀತಿ ನಮ್ಮ ಆಧ್ಯಾತ್ಮಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ತಪ್ಪದೆ ಓದಬೇಕು ಮತ್ತು ಯೆಹೋವನ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸಬೇಕು. ನಂಬಿಕೆ ತೋರಿಸಬೇಕು ಅಂದರೆ ಬೈಬಲಿಂದ ಕಲಿತ ವಿಷಯಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು ಮತ್ತು ನಮ್ಮ ನಂಬಿಕೆ ಬಗ್ಗೆ ಬೇರೆಯವರ ಹತ್ತಿರ ಮಾತಾಡಬೇಕು. (ರೋಮ. 10:8-10; ಯಾಕೋ. 2:26) ಎರಡನೇದಾಗಿ, ‘ಹೊರಗೆ ಥಳುಕು, ಒಳಗೆ ಹುಳುಕು’ ಅನ್ನುವಂತೆ ನಾವು ಹೊರಗೆ ನೋಡುವುದಕ್ಕೆ ಆರೋಗ್ಯವಂತರಾಗಿ ಕಂಡರೂ ಒಳಗೆ ಏನಾದರೂ ಕಾಯಿಲೆ ಇರಬಹುದು. ಅದೇ ರೀತಿ ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳನ್ನು ನೋಡಿ ನಮ್ಮ ನಂಬಿಕೆ ತುಂಬ ಬಲವಾಗಿದೆ ಎಂದು ನಮಗೆ ಅನಿಸಬಹುದು. ಆದರೆ ನಮ್ಮೊಳಗೆ ಕೆಟ್ಟ ಆಸೆಗಳು ಬೆಳೆಯುತ್ತಾ ಇರಬಹುದು. (1 ಕೊರಿಂ. 10:12; ಯಾಕೋ. 1:14, 15) ಸೈತಾನ ನಮ್ಮ ಮನಸ್ಸನ್ನು, ಯೋಚನೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಾನೆ ಅನ್ನುವುದನ್ನು ನೆನಪಲ್ಲಿಡಬೇಕು. ಅವನು ಏನೆಲ್ಲ ಮಾಡುತ್ತಾನೆ? ನಾವು ಹೇಗೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು?

ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಏನೆಲ್ಲ ಮಾಡುತ್ತಾನೆ?

6. (ಎ) ಸೈತಾನನ ಗುರಿ ಏನು? (ಬಿ) ಈ ಗುರಿಯನ್ನು ಮುಟ್ಟಲು ಅವನೇನು ಮಾಡುತ್ತಾನೆ?

6 ಜನರು ತನ್ನ ಹಾಗೆ ಆಗಬೇಕು ಎಂದು ಸೈತಾನ ಬಯಸುತ್ತಾನೆ. ಅವನ ತರ ನಾವು ಯೆಹೋವನಿಗೆ ವಿರೋಧಿಗಳು ಆಗಬೇಕು, ದೇವರ ಮಟ್ಟಗಳನ್ನು ಮುರಿಯಬೇಕು, ಸ್ವಾರ್ಥಿಗಳಾಗಬೇಕು ಅನ್ನುವುದೇ ಸೈತಾನನ ಗುರಿ. ಅವನು ತನ್ನ ಯೋಚನೆಗಳನ್ನು ನಮ್ಮ ತಲೆಯಲ್ಲಿ ಒತ್ತಾಯದಿಂದ ತುಂಬಲು ಆಗಲ್ಲ. ಆದ್ದರಿಂದ ಬೇರೆ ರೀತಿಯಲ್ಲಿ ನಮ್ಮನ್ನು ಬೀಳಿಸಲು ಪ್ರಯತ್ನಿಸುತ್ತಾನೆ. ಉದಾಹರಣೆಗೆ, ಈಗಾಗಲೇ ಹಾಳಾಗಿರುವ ಜನರು ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳುತ್ತಾನೆ. (1 ಯೋಹಾ. 5:19) ನಾವು ಇಂಥ ಜನರೊಂದಿಗೆ ಸಹವಾಸ ಮಾಡಬೇಕೆಂಬುದೇ ಅವನ ಆಸೆ. ಕೆಟ್ಟ ಸಹವಾಸ ನಮ್ಮ ಯೋಚನೆ ಮತ್ತು ನಡತೆಯ ಮೇಲೆ ಪ್ರಭಾವ ಬೀರುತ್ತದೆ ಅಂತ ನಮಗೆ ಗೊತ್ತಿರುವುದರಿಂದ ನಾವು ಜಾಗ್ರತೆ ವಹಿಸಬೇಕು. (1 ಕೊರಿಂ. 15:33) ರಾಜ ಸೊಲೊಮೋನ ಸೈತಾನ ಬೀಸಿದ ಬಲೆಗೆ ಬಿದ್ದ. ಬೇರೆ ದೇವರುಗಳನ್ನು ಆರಾಧಿಸುತ್ತಿದ್ದ ಅನೇಕ ಸ್ತ್ರೀಯರನ್ನು ಮದುವೆ ಮಾಡಿಕೊಂಡ. ಈ ಸ್ತ್ರೀಯರು ಅವನ “ಮನಸ್ಸನ್ನು ಕೆಡಿಸಿ” ಯೆಹೋವನಿಂದ ದೂರಹೋಗುವಂತೆ ಮಾಡಿದರು.—1 ಅರ. 11:3.

ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಪ್ರಯತ್ನಿಸುವಾಗ ಏನು ಮಾಡಬೇಕು? (ಪ್ಯಾರ 7 ನೋಡಿ) *

7. (ಎ) ಸೈತಾನ ತನ್ನ ಯೋಚನೆಗಳನ್ನು ನಮ್ಮ ತಲೆಯಲ್ಲಿ ತುಂಬಲು ಇನ್ನೂ ಏನು ಮಾಡುತ್ತಾನೆ? (ಬಿ) ನಾವು ಹೇಗೆ ಎಚ್ಚರ ವಹಿಸಬೇಕು?

7 ಸೈತಾನ ತನ್ನ ಯೋಚನೆಗಳನ್ನು ಚಲನಚಿತ್ರ ಮತ್ತು ಟಿವಿಯಲ್ಲಿ ಬರುವ ಕಾರ್ಯಕ್ರಮಗಳ ಮೂಲಕ ನಮ್ಮ ತಲೆಯಲ್ಲಿ ತುಂಬಲು ಪ್ರಯತ್ನಿಸುತ್ತಾನೆ. ಕಥೆಗಳು ನಮ್ಮ ಮನರಂಜಿಸುವುದಷ್ಟೇ ಅಲ್ಲ ನಮ್ಮ ಯೋಚನೆ, ಭಾವನೆ ಮತ್ತು ನಾವು ನಡಕೊಳ್ಳುವ ರೀತಿಯನ್ನೂ ಪ್ರಭಾವಿಸುತ್ತದೆ ಎಂದು ಸೈತಾನನಿಗೆ ಚೆನ್ನಾಗಿ ಗೊತ್ತು. ಯೇಸು ಕೂಡ ಕಥೆಗಳನ್ನು ಹೇಳಿದ್ದಾನೆ. ಉದಾಹರಣೆಗೆ, ನೆರೆಯವನಾದ ಸಮಾರ್ಯದವನ ಕಥೆ ಮತ್ತು ಪೋಲಿಹೋದ ಮಗನ ಕಥೆಯನ್ನು ಹೇಳಿ ಒಳ್ಳೇ ಪಾಠಗಳನ್ನು ಕಲಿಸಿದ್ದಾನೆ. (ಮತ್ತಾ. 13:34; ಲೂಕ 10:29-37; 15:11-32) ಆದರೆ ಸೈತಾನ ಹೇಳುವ ಕಥೆ ಕೇಳಿ ಜನರು ಹಾಳಾಗಿದ್ದಾರೆ. ಅಂಥ ಜನರು ನಮ್ಮ ತಲೆಯನ್ನೂ ಕೆಡಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ನಾವು ಎಚ್ಚರವಾಗಿರಬೇಕು. ಇವತ್ತಿನ ಚಲನಚಿತ್ರ, ಟಿವಿ ಕಾರ್ಯಕ್ರಮಗಳನ್ನು ನೋಡಿ ನಾವು ಆನಂದಿಸಬಹುದು ಮತ್ತು ಒಳ್ಳೆ ವಿಷಯಗಳನ್ನೂ ಕಲಿಯಬಹುದು. ಆದರೂ ಮನೋರಂಜನೆಯನ್ನು ಆಯ್ಕೆ ಮಾಡುವಾಗ ‘ಈ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮ ನಾವೇನು ಬೇಕಾದರೂ ಮಾಡಬಹುದು, ಅದರಲ್ಲೇನೂ ತಪ್ಪಿಲ್ಲ ಅಂತ ಹೇಳುತ್ತಾ?’ ಎಂದು ಕೇಳಿಕೊಳ್ಳಬೇಕು. (ಗಲಾ. 5:19-21; ಎಫೆ. 2:1-3) ನೀವು ನೋಡುತ್ತಿರುವ ಒಂದು ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದಲ್ಲಿ ಸೈತಾನನ ಯೋಚನೆಗಳಿವೆ ಎಂದು ಗೊತ್ತಾದರೆ ಏನು ಮಾಡಬೇಕು? ಬೇರೆಯವರಿಂದ ಅಂಟುರೋಗ ಬರದಂತೆ ನೋಡಿಕೊಳ್ಳಲು ನಾವು ಹೇಗೆ ಅವರಿಂದ ಆದಷ್ಟು ದೂರ ಇರುತ್ತೇವೋ ಹಾಗೆ ಇಂಥ ಮನೋರಂಜನೆಯಿಂದ ದೂರ ಇರಬೇಕು!

8. ಹೆತ್ತವರು ತಮ್ಮ ಮಕ್ಕಳ ಹೃದಯವನ್ನು ಹೇಗೆ ಕಾಪಾಡಬಹುದು?

8 ಹೆತ್ತವರೇ, ಸೈತಾನ ನಿಮ್ಮ ಮಕ್ಕಳ ಹೃದಯವನ್ನೂ ಹಾಳುಮಾಡಲು ಪ್ರಯತ್ನಿಸುತ್ತಾನೆ. ಹಾಗಾಗಿ ಅವರನ್ನು ಕಾಪಾಡುವ ದೊಡ್ಡ ಜವಾಬ್ದಾರಿ ನಿಮಗಿದೆ. ಕಾಯಿಲೆ ಬರದ ಹಾಗೆ ನಿಮ್ಮ ಮಕ್ಕಳನ್ನು ಕಾಪಾಡಲು ನೀವು ಏನೆಲ್ಲ ಮಾಡುತ್ತೀರಿ? ಮನೆಯನ್ನು ಶುಚಿಯಾಗಿ ಇಡುತ್ತೀರಿ ಮತ್ತು ಮನೆಯಲ್ಲಿ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಕಾಯಿಲೆ ಬರಿಸುವ ಏನೇ ಇದ್ದರೂ ಅದನ್ನು ಬಿಸಾಡುತ್ತೀರಿ. ಅದೇ ರೀತಿ ಸೈತಾನನ ಯೋಚನೆಗಳಿಂದ ತುಂಬಿರುವ ಚಲನಚಿತ್ರ, ಟಿವಿ ಕಾರ್ಯಕ್ರಮ, ವಿಡಿಯೋ ಗೇಮ್ಸ್‌ ಮತ್ತು ವೆಬ್‌ಸೈಟುಗಳಿಂದ ಮಕ್ಕಳನ್ನು ದೂರ ಇಡಿ. ಮಕ್ಕಳ ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಲು ಏನು ಬೇಕಾದರೂ ಮಾಡುವ ಅಧಿಕಾರವನ್ನು ಯೆಹೋವನು ನಿಮಗೆ ಕೊಟ್ಟಿದ್ದಾನೆ. (ಜ್ಞಾನೋ. 1:8; ಎಫೆ. 6:1, 4) ಆದ್ದರಿಂದ ಮನೆಯಲ್ಲಿ ಬೈಬಲ್‌ ಮಟ್ಟಗಳಿಗೆ ತಕ್ಕಂತೆ ನಿಯಮಗಳನ್ನು ಮಾಡಲು ಹಿಂಜರಿಯಬೇಡಿ. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂದು ಮಕ್ಕಳಿಗೆ ಹೇಳಿ. ಅದಕ್ಕೆ ಕಾರಣಗಳೇನು ಎಂದೂ ಅರ್ಥಮಾಡಿಸಿ. (ಮತ್ತಾ. 5:37) ಮಕ್ಕಳು ದೊಡ್ಡವರಾಗುತ್ತಾ ಹೋದ ಹಾಗೆ ಬೈಬಲ್‌ ಪ್ರಕಾರ ಯಾವುದು ತಪ್ಪು, ಯಾವುದು ಸರಿ ಎಂದು ಅವರಾಗಿಯೇ ಆಯ್ಕೆ ಮಾಡಲು ತರಬೇತಿ ಕೊಡಿ. (ಇಬ್ರಿ. 5:14) ನಿಮ್ಮ ಮಕ್ಕಳು ನೀವು ಹೇಳುವ ಮಾತುಗಳಿಂದ ಕಲಿಯುತ್ತಾರೆ ನಿಜ. ಆದರೆ ನೀವು ಹೇಗೆ ನಡಕೊಳ್ಳುತ್ತೀರೋ ಅದರಿಂದ ಇನ್ನೂ ಹೆಚ್ಚು ಕಲಿಯುತ್ತಾರೆ ಅನ್ನುವುದನ್ನು ಮನಸ್ಸಲ್ಲಿಡಿ.—ಧರ್ಮೋ. 6:6, 7; ರೋಮ. 2:21.

9. (ಎ) ಜನರ ತಲೆಯಲ್ಲಿ ಸೈತಾನ ಯಾವ ವಿಚಾರವನ್ನು ತುಂಬಿಸಿದ್ದಾನೆ? (ಬಿ) ಅದು ಯಾಕೆ ಅಪಾಯಕಾರಿ?

9 ನಾವು ಯೆಹೋವನ ಆಲೋಚನೆಗಳ ಬದಲಿಗೆ ಮನುಷ್ಯನ ವಿವೇಕವನ್ನು ನಂಬುವಂತೆ ಮಾಡುವ ಮೂಲಕವೂ ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಪ್ರಯತ್ನಿಸುತ್ತಾನೆ. (ಕೊಲೊ. 2:8) ಅಂಥ ಒಂದು ವಿಚಾರದ ಬಗ್ಗೆ ಸ್ವಲ್ಪ ನೋಡಿ. ಅದು ಶ್ರೀಮಂತರಾಗುವುದೇ ಜೀವನದ ಗುರಿ ಎನ್ನುವ ವಿಚಾರ. ಈ ಗುರಿ ಇಡುವವರು ಶ್ರೀಮಂತರಾಗಬಹುದು, ಆಗದೇನೂ ಇರಬಹುದು. ಆದರೆ ಅಪಾಯ ಅಂತೂ ಖಂಡಿತ. ಯಾಕೆ? ಯಾಕೆಂದರೆ ಅವರು ಹಣದ ಹಿಂದೆ ಬಿದ್ದು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ, ಕುಟುಂಬದಲ್ಲಿ ಸಮಾಧಾನ ಇರಲ್ಲ, ದೇವರ ಜೊತೆ ಇರುವ ಸ್ನೇಹವನ್ನೂ ಕಳಕೊಳ್ಳುತ್ತಾರೆ. (1 ತಿಮೊ. 6:10) ಹಣಸಂಪಾದನೆಯ ವಿಷಯದಲ್ಲಿ ಸರಿಯಾದ ನೋಟ ಇರಬೇಕು ಎಂದು ತುಂಬ ವಿವೇಕ ಇರುವ ನಮ್ಮ ಸ್ವರ್ಗೀಯ ತಂದೆ ನಮಗೆ ಹೇಳಿಕೊಟ್ಟಿದ್ದಾನೆ. ಇದಕ್ಕಾಗಿ ನಾವು ಆತನಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಕಾಗಲ್ಲ!—ಪ್ರಸಂ. 7:12; ಲೂಕ 12:15.

ನಮ್ಮ ಹೃದಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಹಿಂದಿನ ಕಾಲದ ಕಾವಲುಗಾರರಂತೆ ಮತ್ತು ದ್ವಾರಪಾಲಕರಂತೆ ಎಚ್ಚರವಾಗಿರಿ, ಹೃದಯವನ್ನು ಹಾಳುಮಾಡುವ ವಿಷಯಗಳು ಒಳಗೆ ಬರದಂತೆ ನೋಡಿಕೊಳ್ಳಿ (ಪ್ಯಾರ 10-11 ನೋಡಿ) *

10-11. (ಎ) ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬೇಕು? (ಬಿ) ಹಿಂದಿನ ಕಾಲದಲ್ಲಿ ಕಾವಲುಗಾರರು ಏನು ಮಾಡುತ್ತಿದ್ದರು? (ಸಿ) ನಮ್ಮ ಮನಸ್ಸಾಕ್ಷಿ ಹೇಗೆ ಕಾವಲುಗಾರನಂತಿದೆ?

10 ಯಾವ ಯಾವ ವಿಷಯಗಳಿಂದ ಅಪಾಯ ಆಗುತ್ತದೆ ಎಂದು ಕಂಡುಹಿಡಿದು ಅದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೂಡಲೇ ಕ್ರಮ ತೆಗೆದುಕೊಂಡರೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು. ಜ್ಞಾನೋಕ್ತಿ 4:23​ರಲ್ಲಿರುವ ‘ಕಾಪಾಡು’ ಎಂಬ ಪದ ಕಾವಲುಗಾರನ ಕೆಲಸವನ್ನು ನೆನಪಿಗೆ ತರುತ್ತದೆ. ಸೊಲೊಮೋನನ ಕಾಲದಲ್ಲಿ ಕಾವಲುಗಾರರು ಪಟ್ಟಣದ ಗೋಡೆಗಳ ಮೇಲೆ ನಿಂತು ಕಾವಲು ಕಾಯುತ್ತಿದ್ದರು. ಏನಾದರೂ ಅಪಾಯ ಬರುತ್ತಿರುವುದು ಕಾಣಿಸಿದರೆ ತಕ್ಷಣ ಎಚ್ಚರಿಕೆ ಕೊಡುತ್ತಿದ್ದರು. ನಾವು ಇದನ್ನು ಮನಸ್ಸಲ್ಲಿ ಚಿತ್ರಿಸಿಕೊಂಡರೆ, ಸೈತಾನನಿಂದ ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕೆಂದು ಅರ್ಥವಾಗುತ್ತದೆ.

11 ಹಿಂದಿನ ಕಾಲದಲ್ಲಿ ಕಾವಲುಗಾರರು ಮತ್ತು ದ್ವಾರಪಾಲಕರು ಒಗ್ಗಟ್ಟಿಂದ ಕೆಲಸಮಾಡುತ್ತಿದ್ದರು. (2 ಸಮು. 18:24-26) ಇದರಿಂದಾಗಿ, ಶತ್ರುಗಳು ಬರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಬಾಗಿಲನ್ನು ಮುಚ್ಚಿ ಪಟ್ಟಣವನ್ನು ಭದ್ರಪಡಿಸಲು ಸಾಧ್ಯವಾಗುತ್ತಿತ್ತು. (ನೆಹೆ. 7:1-3) ಬೈಬಲಿಗೆ ತಕ್ಕಂತೆ ತರಬೇತಿ ಪಡೆದ ನಮ್ಮ ಮನಸ್ಸಾಕ್ಷಿ * ಕಾವಲುಗಾರನಂತಿದೆ. ನಮ್ಮ ಹೃದಯದ ಮೇಲೆ ಸೈತಾನ ದಾಳಿಮಾಡಲು ಪ್ರಯತ್ನಿಸುವಾಗ ಅಂದರೆ ನಮ್ಮ ಯೋಚನೆ, ಭಾವನೆ, ಉದ್ದೇಶ, ಆಸೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಾಗ ನಮ್ಮ ಮನಸ್ಸಾಕ್ಷಿ ನಮ್ಮನ್ನು ಎಚ್ಚರಿಸುತ್ತದೆ. ಆದ್ದರಿಂದ ಮನಸ್ಸಾಕ್ಷಿ ನಮ್ಮನ್ನು ಎಚ್ಚರಿಸಿದಾಗೆಲ್ಲ ಅಪಾಯದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೋ ಅದನ್ನೆಲ್ಲ ಮಾಡಬೇಕು.

12-13. (ಎ) ನಮಗೆ ಯಾವ ಒತ್ತಡ ಬರುತ್ತದೆ? (ಬಿ) ಆಗ ನಾವೇನು ಮಾಡಬೇಕು?

12 ಸೈತಾನನಿಂದ ನಮ್ಮ ಹೃದಯ ಹಾಳಾಗದಂತೆ ಹೇಗೆ ನೋಡಿಕೊಳ್ಳಬಹುದು ಅನ್ನುವುದಕ್ಕೆ ಒಂದು ಉದಾಹರಣೆ ನೋಡಿ. ‘ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆಯ ಪ್ರಸ್ತಾಪವನ್ನೂ ನಾವು ಮಾಡಬಾರದು’ ಎಂದು ಯೆಹೋವನು ಕಲಿಸಿದ್ದಾನೆ. (ಎಫೆ. 5:3) ಆದರೆ ನಿಮ್ಮ ಶಾಲೆಯಲ್ಲೋ ಅಥವಾ ಕೆಲಸದ ಸ್ಥಳದಲ್ಲೋ ಅನೈತಿಕ ವಿಷಯಗಳ ಬಗ್ಗೆ ಬೇರೆಯವರು ಚರ್ಚೆ ಮಾಡುತ್ತಿದ್ದರೆ ನೀವೇನು ಮಾಡುತ್ತೀರಿ? ‘ನಾವು ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಬೇಕು’ ಎಂದು ನಮಗೆ ಗೊತ್ತು. (ತೀತ 2:12) ಆದ್ದರಿಂದ ಕಾವಲುಗಾರನಂತಿರುವ ನಮ್ಮ ಮನಸ್ಸಾಕ್ಷಿ ಎಚ್ಚರಿಕೆ ಕೊಡಬಹುದು. (ರೋಮ. 2:15) ನಾವು ಅದಕ್ಕೆ ಕಿವಿಗೊಡುತ್ತೇವಾ? ಅಥವಾ ಅವರ ಜೊತೆ ಸೇರಿ ನಾವೂ ಆ ವಿಷಯವನ್ನೇ ಮಾತಾಡುತ್ತೇವಾ? ಅವರು ತೋರಿಸುತ್ತಿರುವ ಅಶ್ಲೀಲ ಚಿತ್ರಗಳನ್ನು ನೋಡುತ್ತೇವಾ? ಇಂಥ ಸಮಯದಲ್ಲಿ ನಾವು ಅಪಾಯದಿಂದ ತಪ್ಪಿಸಿಕೊಳ್ಳಬೇಕು. ಅಂದರೆ ಬೇರೆ ವಿಷಯವನ್ನು ಮಾತಾಡಬೇಕು ಅಥವಾ ಅಲ್ಲಿಂದ ಹೋಗಿಬಿಡಬೇಕು.

13 ಕೆಟ್ಟ ವಿಷಯಗಳನ್ನು ಯೋಚಿಸುವಂತೆ ಅಥವಾ ಮಾಡುವಂತೆ ಬೇರೆಯವರು ಒತ್ತಡ ಹಾಕಿದಾಗ ಅದನ್ನು ಜಯಿಸಲು ನಿಮಗೆ ಧೈರ್ಯ ಬೇಕು. ಜಯಿಸಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ನೋಡುತ್ತಾನೆ ಮತ್ತು ಬೇಕಾದ ಬಲ ಮತ್ತು ವಿವೇಕ ಕೊಟ್ಟೇ ಕೊಡುತ್ತಾನೆ. (2 ಪೂರ್ವ. 16:9; ಯೆಶಾ. 40:29; ಯಾಕೋ. 1:5) ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಇನ್ನೇನು ಮಾಡಬೇಕು?

ಎಚ್ಚರವಾಗಿರಿ

14-15. (ಎ) ನಮ್ಮ ಹೃದಯವನ್ನು ಯಾವುದಕ್ಕಾಗಿ ತೆರೆಯಬೇಕು? (ಬಿ) ಅದನ್ನು ಹೇಗೆ ಮಾಡಬೇಕು? (ಸಿ) ನಾವು ಬೈಬಲ್‌ ಓದುವಾಗ ಹೆಚ್ಚು ಪ್ರಯೋಜನ ಪಡೆಯಲು ಏನು ಮಾಡಬೇಕೆಂದು ಜ್ಞಾನೋಕ್ತಿ 4:20-22 ಹೇಳುತ್ತದೆ? (“ ಧ್ಯಾನಿಸೋದು ಹೇಗೆ?” ಎಂಬ ಚೌಕ ನೋಡಿ.)

14 ನಮ್ಮ ಹೃದಯವನ್ನು ಒಂದು ಬಾಗಿಲ ತರ ಉಪಯೋಗಿಸಬೇಕು. ಕೆಟ್ಟ ವಿಷಯಗಳು ಒಳಗೆ ಬರದಂತೆ ಅದನ್ನು ಮುಚ್ಚಿಬಿಡಬೇಕು ಮತ್ತು ಒಳ್ಳೇ ವಿಷಯಗಳನ್ನು ಒಳಗೆ ಬಿಡಲು ಅದನ್ನು ತೆರೆಯಬೇಕು. ಹೀಗೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ದೊಡ್ಡ-ದೊಡ್ಡ ಗೋಡೆಗಳಿರುವ ಪಟ್ಟಣವನ್ನು ಪುನಃ ನೆನಪಿಸಿಕೊಳ್ಳಿ. ಶತ್ರುಗಳು ಒಳಗೆ ಬರದ ಹಾಗೆ ದ್ವಾರಪಾಲಕ ಅದರ ಬಾಗಿಲನ್ನು ಮುಚ್ಚುತ್ತಿದ್ದನು. ಆದರೆ ಆಹಾರ ಮತ್ತಿತರ ಸಾಮಾನುಗಳನ್ನು ಒಳಗೆ ತರಬೇಕೆಂದರೆ ಅವನು ಆ ಬಾಗಿಲನ್ನು ಕೆಲವೊಮ್ಮೆ ತೆರೆಯಬೇಕಾಗುತ್ತಿತ್ತು. ಬಾಗಿಲು ತೆರೆಯದೇ ಇದ್ದರೆ ಪಟ್ಟಣದ ಜನರೆಲ್ಲ ಊಟ ಇಲ್ಲದೆ ಸತ್ತುಹೋಗುತ್ತಿದ್ದರು. ಅದೇ ರೀತಿ ನಾವು ನಮ್ಮ ಹೃದಯವನ್ನು ಆಗಾಗ ತೆರೆದು ದೇವರ ಆಲೋಚನೆಗಳನ್ನು ತುಂಬಿಸಿಕೊಳ್ಳುತ್ತಾ ಇರಬೇಕು.

15 ಬೈಬಲಲ್ಲಿ ಯೆಹೋವನ ಆಲೋಚನೆಗಳಿವೆ. ಪ್ರತಿ ಸಾರಿ ಅದನ್ನು ಓದುವಾಗ ನಾವು ಯೋಚಿಸುವ, ನಡಕೊಳ್ಳುವ ರೀತಿಯನ್ನು ಮತ್ತು ನಮ್ಮ ಭಾವನೆಯನ್ನು ಯೆಹೋವನ ಆಲೋಚನೆಗಳು ಪ್ರಭಾವಿಸುವಂತೆ ಬಿಡಬೇಕು. ನಾವು ಬೈಬಲ್‌ ಓದುವಾಗ ಹೆಚ್ಚು ಪ್ರಯೋಜನ ಪಡೆಯಲು ಏನು ಮಾಡಬೇಕು? ಪ್ರಾರ್ಥನೆ ಮಾಡಬೇಕು. ಒಬ್ಬ ಕ್ರೈಸ್ತ ಸಹೋದರಿ ಹೀಗೆ ಹೇಳುತ್ತಾರೆ: “ನಾನು ಬೈಬಲ್‌ ಓದುವುದಕ್ಕೆ ಮುಂಚೆ ಯೆಹೋವನಿಗೆ ಪ್ರಾರ್ಥನೆ ಮಾಡಿ ಆತನ ವಾಕ್ಯದಲ್ಲಿರುವ ‘ಅದ್ಭುತ ವಿಷಯಗಳನ್ನು’ ಅರ್ಥಮಾಡಿಕೊಳ್ಳಲು ಸಹಾಯ ಮಾಡಪ್ಪಾ ಅಂತ ಬೇಡುತ್ತೇನೆ.” (ಕೀರ್ತ. 119:18) ನಾವು ಓದುವ ವಿಷಯದ ಬಗ್ಗೆ ಧ್ಯಾನಿಸುವುದು ಕೂಡ ಮುಖ್ಯ. ನಾವು ಪ್ರಾರ್ಥನೆ ಮಾಡಿ, ದೇವರ ವಾಕ್ಯವನ್ನು ಓದಿ, ಧ್ಯಾನಿಸಿದಾಗ ದೇವರ ಆಲೋಚನೆಗಳು ನಮ್ಮ “ಹೃದಯದೊಳಗೆ” ಹೋಗುತ್ತವೆ. ಅದನ್ನು ಪ್ರೀತಿಸಲು ಆರಂಭಿಸುತ್ತೇವೆ.—ಜ್ಞಾನೋಕ್ತಿ 4:20-22 ಓದಿ; ಕೀರ್ತ. 119:97.

16. JW ಪ್ರಸಾರದಲ್ಲಿ ಬರುವ ವಿಡಿಯೋಗಳನ್ನು ನೋಡುವುದರಿಂದ ಸಿಗುವ ಪ್ರಯೋಜನಗಳೇನು?

16JW ಪ್ರಸಾರದಲ್ಲಿ ಇರುವ ವಿಡಿಯೋಗಳನ್ನು ನೋಡುವುದು ದೇವರ ಆಲೋಚನೆಗಳನ್ನು ನಮ್ಮ ಹೃದಯದಲ್ಲಿ ತುಂಬಿಸಿಕೊಳ್ಳುವ ಇನ್ನೊಂದು ವಿಧ. ಒಂದು ದಂಪತಿ ಹೀಗೆ ಹೇಳುತ್ತಾರೆ: “JW ಪ್ರಸಾರದಲ್ಲಿ ಪ್ರತಿ ತಿಂಗಳು ಬರೋ ಕಾರ್ಯಕ್ರಮ ನಮ್ಮ ಪ್ರಾರ್ಥನೆಗೆ ಉತ್ತರ ಅಂತಾನೇ ಹೇಳಬಹುದು! ದುಃಖ ಆದಾಗ, ನಮಗ್ಯಾರೂ ಇಲ್ಲ ಅಂತ ಅನಿಸಿದಾಗ ಈ ವಿಡಿಯೋಗಳು ನಮ್ಮನ್ನು ಬಲಪಡಿಸಿವೆ. ತಿಂಗಳ ಕಾರ್ಯಕ್ರಮದಲ್ಲಿ ಬರೋ ಹಾಡುಗಳನ್ನು ನಮ್ಮ ಮನೆಯಲ್ಲಿ ಯಾವಾಗಲೂ ಹಾಕಿರುತ್ತೇವೆ. ಅಡುಗೆ ಮಾಡುವಾಗ, ಮನೆ ಕ್ಲೀನ್‌ ಮಾಡುವಾಗ, ಟೀ ಕುಡಿಯುವಾಗ ಅದನ್ನು ಕೇಳಿಸಿಕೊಳ್ಳುತ್ತೇವೆ.” ಈ ವಿಡಿಯೋಗಳು ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಯೆಹೋವನ ತರ ಯೋಚಿಸಲು ಮತ್ತು ಸೈತಾನನ ತರ ಯೋಚಿಸದೇ ಇರಲು ಇವು ನಮಗೆ ಕಲಿಸುತ್ತವೆ.

17-18. (ಎ) ಒಂದನೇ ಅರಸುಗಳು 8:61 ಹೇಳುವಂತೆ, ಯೆಹೋವನಿಂದ ಕಲಿತ ವಿಷಯವನ್ನು ಅನ್ವಯಿಸಿಕೊಂಡಾಗ ನಾವು ಎಂಥವರೆಂದು ತೋರಿಸಿಕೊಡುತ್ತೇವೆ? (ಬಿ) ರಾಜ ಹಿಜ್ಕೀಯನಿಂದ ಏನು ಕಲಿಯುತ್ತೇವೆ? (ಸಿ) ಕೀರ್ತನೆ 139:23, 24​ರಲ್ಲಿರುವ ದಾವೀದನ ಪ್ರಾರ್ಥನೆಗೆ ಅನುಸಾರ ನಾವು ಯಾವುದಕ್ಕಾಗಿ ಪ್ರಾರ್ಥಿಸಬಹುದು?

17 ನಾವು ಪ್ರತಿ ಸಾರಿ ಸರಿಯಾದ ವಿಷಯವನ್ನು ಮಾಡಿ ಪ್ರಯೋಜನ ಪಡೆದಾಗ ನಮ್ಮ ನಂಬಿಕೆ ಹೆಚ್ಚಾಗುತ್ತದೆ. (ಯಾಕೋ. 1:2, 3) ಯೆಹೋವನು ನಮ್ಮನ್ನು ಆತನ ಮಕ್ಕಳು ಎಂದು ಕರೆಯುವ ಹಾಗೆ ನಡಕೊಂಡಿದ್ದೇವೆ ಅಂತ ಸಂತೋಷ ಕೂಡ ಆಗುತ್ತದೆ. ಇದರಿಂದಾಗಿ ಆತನನ್ನು ಮೆಚ್ಚಿಸಬೇಕು ಅನ್ನುವ ಆಸೆಯೂ ಬಲವಾಗುತ್ತದೆ. (ಜ್ಞಾನೋ. 27:11) ಪ್ರತಿಯೊಂದು ಸವಾಲು ಬಂದಾಗಲೂ, ನಮ್ಮ ಮೇಲೆ ಪ್ರೀತಿ ಇರುವ ತಂದೆಯನ್ನು ಆರಾಧಿಸುವ ವಿಷಯದಲ್ಲಿ ನಾವು ಚಪಲಚಿತ್ತರಲ್ಲ ಅಥವಾ ಅರೆಮನಸ್ಸಿನವರಲ್ಲ ಎಂದು ತೋರಿಸಿಕೊಡುತ್ತೇವೆ. (ಕೀರ್ತ. 119:113) ನಾವು ಯೆಹೋವನಲ್ಲಿ ಪೂರ್ಣಭಯಭಕ್ತಿ ಇರುವವರು ಅಂದರೆ ಪೂರ್ಣಹೃದಯದಿಂದ ಯೆಹೋವನನ್ನು ಪ್ರೀತಿಸುವವರು ಎಂದು ತೋರಿಸಿಕೊಡುತ್ತೇವೆ. ಪೂರ್ಣಹೃದಯದಿಂದ ಆತನ ನಿಯಮಗಳನ್ನು ಪಾಲಿಸಲು ಮತ್ತು ಆತನಿಗೆ ಏನಿಷ್ಟಾನೋ ಅದನ್ನು ಮಾಡಲು ಸಿದ್ಧರಾಗಿರುತ್ತೇವೆ.—1 ಅರಸುಗಳು 8:61 ಓದಿ.

18 ನಾವು ಅಪರಿಪೂರ್ಣರು ಆಗಿರುವುದರಿಂದ ಕೆಲವೊಮ್ಮೆ ತಪ್ಪು ಮಾಡಿಬಿಡುತ್ತೇವೆ. ಆಗ ರಾಜ ಹಿಜ್ಕೀಯನಂತೆ ನಾವಿರಬೇಕು. ಆತನೂ ತಪ್ಪುಗಳನ್ನು ಮಾಡಿದನು. ಆದರೆ ಪಶ್ಚಾತ್ತಾಪಪಟ್ಟನು ಮತ್ತು “ಯಥಾರ್ಥಚಿತ್ತನಾಗಿ” ಅಥವಾ ಪೂರ್ಣಹೃದಯದಿಂದ ಯೆಹೋವನನ್ನು ಆರಾಧಿಸಿದನು. (ಯೆಶಾ. 38:3-6; 2 ಪೂರ್ವ. 29:1, 2; 32:25, 26) ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಪ್ರಯತ್ನಿಸುವಾಗ ಬಿಟ್ಟುಕೊಡದಿರೋಣ. ‘ವಿಧೇಯತೆ ತೋರಿಸುವ ಹೃದಯವನ್ನು’ ಕೊಡುವಂತೆ ಪ್ರಾರ್ಥಿಸೋಣ. (1 ಅರ. 3:9; ಕೀರ್ತನೆ 139:23, 24 ಓದಿ.) ನಂಬಿಗಸ್ತರಾಗಿರಲು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಮ್ಮ ಎಲ್ಲ ಪ್ರಯತ್ನ ಮಾಡೋಣ.

ಗೀತೆ 65 “ಇದೇ ಮಾರ್ಗ”

^ ಪ್ಯಾರ. 5 ನಾವು ಯೆಹೋವನಿಗೆ ನಂಬಿಗಸ್ತರಾಗಿ ಇರುತ್ತೇವಾ ಅಥವಾ ಸೈತಾನನ ಕುತಂತ್ರಕ್ಕೆ ಬಲಿಯಾಗಿ ನಮ್ಮ ದೇವರಿಂದ ದೂರ ಹೋಗುತ್ತೇವಾ? ಇದಕ್ಕೆ ಉತ್ತರ ನಮಗೆ ಎಷ್ಟು ದೊಡ್ಡ ಕಷ್ಟ ಬರುತ್ತದೆ ಅನ್ನುವುದರ ಮೇಲಲ್ಲ, ನಮ್ಮ ಹೃದಯವನ್ನು ಎಷ್ಟು ಚೆನ್ನಾಗಿ ಕಾಪಾಡಿಕೊಳ್ಳುತ್ತೇವೆ ಅನ್ನುವುದರ ಮೇಲೆ ಹೊಂದಿಕೊಂಡಿದೆ. “ಹೃದಯ” ಅನ್ನುವುದು ಯಾವುದಕ್ಕೆ ಸೂಚಿಸುತ್ತದೆ? ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಏನೆಲ್ಲ ಮಾಡುತ್ತಾನೆ? ನಮ್ಮ ಹೃದಯವನ್ನು ಹೇಗೆ ಕಾಪಾಡಿಕೊಳ್ಳಬಹುದು? ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ.

^ ಪ್ಯಾರ. 11 ಪದ ವಿವರಣೆ: ನಮ್ಮ ಯೋಚನೆ, ಭಾವನೆ, ಕ್ರಿಯೆಗಳನ್ನು ನಾವೇ ಪರೀಕ್ಷಿಸಿಕೊಂಡು ಅದು ಸರಿನಾ ತಪ್ಪಾ ಎಂದು ತೀರ್ಮಾನಿಸುವಂಥ ಸಾಮರ್ಥ್ಯವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಬೈಬಲ್‌ ಈ ಸಾಮರ್ಥ್ಯವನ್ನು ಮನಸ್ಸಾಕ್ಷಿ ಎನ್ನುತ್ತದೆ. (ರೋಮ. 2:15; 9:1) ಬೈಬಲಿಗೆ ತಕ್ಕಂತೆ ತರಬೇತಿ ಪಡೆದ ಮನಸ್ಸಾಕ್ಷಿ ನಮ್ಮ ಯೋಚನೆ ಮತ್ತು ನಡೆನುಡಿ ಯೆಹೋವನ ಮಟ್ಟಗಳಿಗೆ ಅನುಸಾರ ಇದೆಯಾ ಇಲ್ಲವಾ ಎಂದು ತೋರಿಸಿಕೊಡುತ್ತದೆ.

^ ಪ್ಯಾರ. 56 ಚಿತ್ರ ವಿವರಣೆ: ದೀಕ್ಷಾಸ್ನಾನ ಪಡೆದಿರುವ ಸಹೋದರ ಟಿವಿ ನೋಡುತ್ತಿರುವಾಗ ಅಶ್ಲೀಲ ದೃಶ್ಯ ಪರದೆಯ ಮೇಲೆ ಬರುತ್ತದೆ. ಏನು ಮಾಡಬೇಕು ಎಂದು ಅವನು ತೀರ್ಮಾನಿಸಬೇಕು.

^ ಪ್ಯಾರ. 58 ಚಿತ್ರ ವಿವರಣೆ: ಹಿಂದಿನ ಕಾಲದ ಕಾವಲುಗಾರನು ಶತ್ರುಗಳು ಬರುತ್ತಿರುವುದನ್ನು ನೋಡಿ ಕೆಳಗಿರುವ ದ್ವಾರಪಾಲಕರನ್ನು ಎಚ್ಚರಿಸುತ್ತಾನೆ. ಆಗ ಅವರು ತಕ್ಷಣ ಬಾಗಿಲನ್ನು ಮುಚ್ಚಿ ಒಳಗಿಂದ ಭದ್ರಪಡಿಸುತ್ತಾರೆ.