ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 4

ಒಂದು ಸರಳ ಊಟ ನಮ್ಮ ರಾಜನ ಬಗ್ಗೆ ಕಲಿಸುವ ಪಾಠ

ಒಂದು ಸರಳ ಊಟ ನಮ್ಮ ರಾಜನ ಬಗ್ಗೆ ಕಲಿಸುವ ಪಾಠ

‘ಇದು ನನ್ನ ದೇಹವನ್ನು ಸೂಚಿಸುತ್ತದೆ. ಇದು ನನ್ನ “ಒಡಂಬಡಿಕೆಯ ರಕ್ತವನ್ನು” ಸೂಚಿಸುತ್ತದೆ.’ ಮತ್ತಾ. 26:26-28.

ಗೀತೆ 108 ಯೆಹೋವನ ರಾಜ್ಯಕ್ಕಾಗಿ ಆತನನ್ನು ಸ್ತುತಿಸಿ

ಕಿರುನೋಟ *

1-2. (ಎ) ಯೇಸು ತನ್ನ ಮರಣವನ್ನು ಸ್ಮರಿಸಲು ತುಂಬ ಸರಳವಾದ ವಿಧವನ್ನು ತೋರಿಸಿಕೊಟ್ಟಿದ್ದಾನೆ ಯಾಕೆ? (ಬಿ) ಯೇಸುವಿನ ಯಾವ ಗುಣಗಳನ್ನು ನಾವು ನೋಡಲಿದ್ದೇವೆ?

ಪ್ರತಿವರ್ಷ ನಡೆಯುವ ಕ್ರಿಸ್ತನ ಮರಣದ ಸ್ಮರಣೆಯಲ್ಲಿ ಏನು ನಡೆಯುತ್ತದೆ ಎಂದು ನೀವು ವಿವರಿಸುತ್ತೀರಾ? ಕರ್ತನ ಸಂಧ್ಯಾ ಭೋಜನದಲ್ಲಿ ಮುಖ್ಯವಾಗಿ ಏನು ನಡೆಯುತ್ತದೆ ಎಂದು ನಾವೆಲ್ಲರೂ ಸುಲಭವಾಗಿ ಹೇಳಬಹುದು. ಯಾಕೆ? ಯಾಕೆಂದರೆ ಆ ಕಾರ್ಯಕ್ರಮ ತುಂಬ ಸರಳವಾಗಿರುತ್ತದೆ. ಆದರೆ ಅದು ಅಷ್ಟೇ ಪ್ರಾಮುಖ್ಯ ಕೂಡ ಆಗಿದೆ. ಹಾಗಾಗಿ ‘ಯಾಕೆ ಈ ಕಾರ್ಯಕ್ರಮ ತುಂಬ ಸರಳವಾಗಿದೆ?’ ಎಂಬ ಪ್ರಶ್ನೆ ನಮಗೆ ಬರಬಹುದು.

2 ಯೇಸು ಭೂಮಿಯಲ್ಲಿದ್ದಾಗ ಪ್ರಾಮುಖ್ಯವಾದ ಸತ್ಯಗಳನ್ನು ತುಂಬ ಸರಳವಾಗಿಯೂ ಸ್ಪಷ್ಟವಾಗಿಯೂ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿಯೂ ಬೋಧಿಸುವುದರಲ್ಲಿ ಹೆಸರುವಾಸಿಯಾಗಿದ್ದನು. (ಮತ್ತಾ. 7:28, 29) ಅದೇ ರೀತಿಯಲ್ಲಿ ತನ್ನ ಮರಣವನ್ನೂ ಸರಳವಾದ ರೀತಿಯಲ್ಲಿ ಆದರೆ ಅರ್ಥಭರಿತವಾಗಿ ಸ್ಮರಿಸುವುದು * ಹೇಗೆಂದು ಆತನು ತೋರಿಸಿಕೊಟ್ಟಿದ್ದಾನೆ. ಆ ಭೋಜನದ ಬಗ್ಗೆ ಮತ್ತು ಆ ಸಂದರ್ಭದಲ್ಲಿ ಯೇಸು ಹೇಳಿದ, ಮಾಡಿದ ವಿಷಯಗಳ ಬಗ್ಗೆ ಈಗ ಚರ್ಚೆ ಮಾಡೋಣ. ಇದರಿಂದ ಯೇಸು ಎಷ್ಟು ದೀನನಾಗಿದ್ದನು, ಧೈರ್ಯವಂತನಾಗಿದ್ದನು ಮತ್ತು ಪ್ರೀತಿ ತೋರಿಸಿದನು ಅನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ನಾವು ಆತನನ್ನು ಇನ್ನೂ ಉತ್ತಮವಾಗಿ ಹೇಗೆ ಅನುಕರಿಸಬಹುದು ಎಂದು ಸಹ ಕಲಿಯೋಣ.

ಯೇಸು ದೀನತೆ ತೋರಿಸಿದನು

ರೊಟ್ಟಿ ಮತ್ತು ದ್ರಾಕ್ಷಾಮದ್ಯ ಯೇಸು ನಮಗೋಸ್ಕರ ಜೀವ ಕೊಟ್ಟನೆಂದು ಮತ್ತು ಈಗ ನಮ್ಮ ಸ್ವರ್ಗೀಯ ರಾಜನೆಂದು ನೆನಪಿಸುತ್ತದೆ (ಪ್ಯಾರ 3-5 ನೋಡಿ)

3. (ಎ) ಮತ್ತಾಯ 26:26-28​ರಲ್ಲಿರುವ ಪ್ರಕಾರ, ಯೇಸು ಆರಂಭಿಸಿದ ಸ್ಮರಣೆಯ ಭೋಜನ ಎಷ್ಟು ಸರಳವಾಗಿತ್ತು? (ಬಿ) ಅಲ್ಲಿ ಉಪಯೋಗಿಸಿದ ಎರಡು ಮುಖ್ಯ ಪದಾರ್ಥಗಳು ಏನನ್ನು ಸೂಚಿಸಿದವು?

3 ಯೇಸು ತನ್ನ ಮರಣದ ಸ್ಮರಣೆಯನ್ನು ಆರಂಭಿಸಿದಾಗ ಆತನೊಟ್ಟಿಗೆ 11 ಮಂದಿ ನಂಬಿಗಸ್ತ ಅಪೊಸ್ತಲರು ಇದ್ದರು. ಪಸ್ಕಹಬ್ಬದ ಊಟದಲ್ಲಿ ಏನು ಮಿಕ್ಕಿತ್ತೋ ಅದರಿಂದಲೇ ಈ ಸರಳವಾದ ಭೋಜನದ ಏರ್ಪಾಡನ್ನು ಆರಂಭಿಸಿದನು. (ಮತ್ತಾಯ 26:26-28 ಓದಿ.) ಈಗಾಗಲೇ ಅಲ್ಲಿದ್ದ ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಈ ಭೋಜನಕ್ಕಾಗಿ ಉಪಯೋಗಿಸಿದನು. ಈ ಎರಡು ಪದಾರ್ಥಗಳು ಇನ್ನು ಸ್ವಲ್ಪದರಲ್ಲೇ ಯಜ್ಞವಾಗಿ ಕೊಡಲಿದ್ದ ತನ್ನ ಪರಿಪೂರ್ಣ ದೇಹ ಮತ್ತು ರಕ್ತವನ್ನು ಸೂಚಿಸುತ್ತವೆ ಎಂದು ತನ್ನ ಶಿಷ್ಯರಿಗೆ ಹೇಳಿದನು. ಇಂಥ ಒಂದು ಪ್ರಾಮುಖ್ಯ ಭೋಜನ ಇಷ್ಟು ಸರಳವಾಗಿ ಯಾಕಿದೆ ಎಂದು ಅಪೊಸ್ತಲರು ಯೋಚಿಸಿರಲಿಕ್ಕಿಲ್ಲ. ಯಾಕೆ?

4. ಯೇಸು ಸ್ಮರಣೆಯ ಭೋಜನವನ್ನು ಸರಳವಾಗಿಡಲು ಕಾರಣ ಏನಿರಬಹುದು?

4 ಇದು ನಡೆಯುವ ಕೆಲವು ತಿಂಗಳುಗಳ ಹಿಂದೆ ಅಂದರೆ ಯೇಸುವಿನ ಸೇವೆಯ ಮೂರನೇ ವರ್ಷದಲ್ಲಿ ಏನಾಯಿತೆಂದು ನೋಡಿ. ಆತನು ತನ್ನ ಆಪ್ತ ಸ್ನೇಹಿತರಾದ ಲಾಜರ, ಮಾರ್ಥ ಮತ್ತು ಮರಿಯ ಮನೆಗೆ ಹೋದನು. ಎಲ್ಲರೂ ಆರಾಮವಾಗಿ ಕೂತಿರುವಾಗ ಯೇಸು ಬೋಧಿಸಲು ಆರಂಭಿಸಿದನು. ಮಾರ್ಥ ಅಲ್ಲಿದ್ದರೂ ತನ್ನ ಮನೆಗೆ ಬಂದಿದ್ದ ವಿಶೇಷ ಅತಿಥಿಗೆ ಭರ್ಜರಿ ಅಡುಗೆ ಮಾಡುವುದರಲ್ಲೇ ಮುಳುಗಿಹೋಗಿದ್ದಳು. ಇದನ್ನು ಗಮನಿಸಿದ ಯೇಸು ಊಟ ಯಾವಾಗಲೂ ಭರ್ಜರಿಯಾಗಿರಬೇಕು ಅಂತೇನಿಲ್ಲ ಎಂದು ಹೇಳಿ ಮಾರ್ಥಳನ್ನು ತಿದ್ದಿದನು. (ಲೂಕ 10:40-42) ಮಾರ್ಥಳಿಗೆ ಏನು ಸಲಹೆ ಕೊಟ್ಟಿದ್ದನೋ ಅದನ್ನೇ ತಾನು ಸಾಯಲಿದ್ದ ಕೆಲವೇ ತಾಸುಗಳ ಮುಂಚೆ ಅನ್ವಯಿಸಿಕೊಂಡನು. ಸ್ಮರಣೆಯ ಭೋಜನ ತುಂಬ ಸರಳವಾಗಿರುವಂತೆ ನೋಡಿಕೊಂಡನು. ಇದರಿಂದ ಯೇಸು ಬಗ್ಗೆ ಏನು ಕಲಿಯಬಹುದು?

5. (ಎ) ಸ್ಮರಣೆಯ ಭೋಜನವನ್ನು ಯೇಸು ಸರಳವಾಗಿ ಏರ್ಪಡಿಸಿದ್ದರಿಂದ ಆತನ ಬಗ್ಗೆ ಏನು ಕಲಿಯಬಹುದು? (ಬಿ) ಇದು ಫಿಲಿಪ್ಪಿ 2:5-8​ರಲ್ಲಿ ತಿಳಿಸಲಾಗಿರುವ ಮಾತುಗಳಿಗೆ ಹೇಗೆ ಹೊಂದಿಕೆಯಲ್ಲಿದೆ?

5 ಯೇಸು ಹೇಳುತ್ತಿದ್ದ, ಮಾಡುತ್ತಿದ್ದ ಪ್ರತಿಯೊಂದು ವಿಷಯದಲ್ಲಿ ಆತನ ದೀನತೆ ಎದ್ದುಕಾಣುತ್ತಿತ್ತು. ತನ್ನ ಭೂಜೀವಿತದ ಕೊನೆಯ ರಾತ್ರಿಯಲ್ಲಂತೂ ದೀನತೆಯನ್ನು ಇನ್ನೂ ಹೆಚ್ಚು ತೋರಿಸಿದನು. (ಮತ್ತಾ. 11:29) ಮಾನವ ಇತಿಹಾಸದಲ್ಲೇ ನಡೆದಿರದ ಒಂದು ಮಹಾನ್‌ ತ್ಯಾಗವನ್ನು ತಾನು ಮಾಡಲಿದ್ದೇನೆ ಮತ್ತು ಯೆಹೋವನು ತನ್ನನ್ನು ಪುನರುತ್ಥಾನಮಾಡಿ ಸ್ವರ್ಗದಲ್ಲಿ ರಾಜನಾಗಿ ಮಾಡುತ್ತಾನೆ ಎಂದು ಆತನಿಗೆ ಗೊತ್ತಿತ್ತು. ಆದರೂ ತನ್ನ ಮರಣದ ಸ್ಮರಣೆಯನ್ನು ತುಂಬ ಅದ್ಧೂರಿಯಾಗಿ ಮಾಡಿ ತನ್ನ ಕಡೆಗೆ ಜನರ ಗಮನ ಸೆಳೆಯಬೇಕು ಎಂದು ಆತನು ಬಯಸಲಿಲ್ಲ. ಬದಲಿಗೆ ಈ ಭೋಜನವನ್ನು ವರ್ಷಕ್ಕೆ ಒಂದು ಸಲ ಸರಳವಾಗಿ ಮಾಡಿ ತನ್ನನ್ನು ನೆನಪಿಸಿಕೊಳ್ಳಿ ಎಂದು ಶಿಷ್ಯರಿಗೆ ಹೇಳಿದನು. (ಯೋಹಾ. 13:15; 1 ಕೊರಿಂ. 11:23-25) ಈ ಸರಳವಾದ ಆದರೆ ಸೂಕ್ತವಾದ ಭೋಜನ ಯೇಸುವಿನಲ್ಲಿ ದೀನತೆ ಇತ್ತೆಂದು ತೋರಿಸಿಕೊಡುತ್ತದೆ. ನಮ್ಮ ಸ್ವರ್ಗೀಯ ರಾಜನಲ್ಲಿರುವ ಅತ್ಯದ್ಭುತ ಗುಣಗಳಲ್ಲಿ ದೀನತೆಯೂ ಒಂದು ಅನ್ನುವುದು ಎಷ್ಟು ಸಂತೋಷ ಕೊಡುತ್ತೆ ಅಲ್ವಾ?ಫಿಲಿಪ್ಪಿ 2:5-8 ಓದಿ.

6. ನಮಗೆ ಕಷ್ಟಗಳು ಎದುರಾದಾಗ ಯೇಸುವಿನಂತೆ ನಾವು ಹೇಗೆ ದೀನತೆ ತೋರಿಸಬಹುದು?

6 ಯೇಸುವಿನಂತೆ ನಾವು ಹೇಗೆ ದೀನತೆ ತೋರಿಸಬಹುದು? ನಮ್ಮ ಇಷ್ಟಕ್ಕಿಂತ ಬೇರೆಯವರ ಇಷ್ಟಕ್ಕೆ ಆದ್ಯತೆ ಕೊಡುವ ಮೂಲಕ ಆತನಂತೆ ದೀನತೆ ತೋರಿಸಬಹುದು. (ಫಿಲಿ. 2:3, 4) ಯೇಸುವಿನ ಭೂಜೀವಿತದ ಕೊನೆಯ ರಾತ್ರಿಯನ್ನು ಪುನಃ ನೆನಪಿಗೆ ತಂದುಕೊಳ್ಳಿ. ತಾನು ತುಂಬ ನೋವು ಅನುಭವಿಸಿ ಸಾಯಲಿದ್ದೇನೆ ಎಂದು ಯೇಸುವಿಗೆ ಗೊತ್ತಿತ್ತು. ಅಂಥ ಸಮಯದಲ್ಲೂ ತನ್ನ ಬಗ್ಗೆ ಅಲ್ಲ ತಾನು ತೀರಿಕೊಂಡ ಮೇಲೆ ದುಃಖಪಡಲಿದ್ದ ನಂಬಿಗಸ್ತ ಅಪೊಸ್ತಲರ ಬಗ್ಗೆ ಯೋಚಿಸಿದನು. ಆದ್ದರಿಂದ ತನ್ನ ಕೊನೆಯ ರಾತ್ರಿಯನ್ನು ಅವರ ಜೊತೆ ಕಳೆಯುತ್ತಾ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಆಶ್ವಾಸನೆ ನೀಡಿದನು. (ಯೋಹಾ. 14:25-31) ಯೇಸು ತುಂಬ ದೀನತೆಯಿಂದ ತನ್ನ ಹಿತಕ್ಕಿಂತ ಬೇರೆಯವರ ಹಿತಕ್ಕೇ ಹೆಚ್ಚು ಗಮನ ಕೊಟ್ಟನು. ಎಂಥ ಉತ್ತಮ ಮಾದರಿ!

ಧೈರ್ಯ ತೋರಿಸಿದನು

7. ಕರ್ತನ ಸಂಧ್ಯಾ ಭೋಜನವನ್ನು ಪರಿಚಯಿಸಿದ ಸ್ವಲ್ಪ ಸಮಯದಲ್ಲೇ ಯೇಸು ಅಪಾರ ಧೈರ್ಯವನ್ನು ಹೇಗೆ ತೋರಿಸಿದನು?

7 ಕರ್ತನ ಸಂಧ್ಯಾ ಭೋಜನವನ್ನು ಪರಿಚಯಿಸಿದ ಸ್ವಲ್ಪ ಸಮಯದಲ್ಲೇ ಯೇಸು ಅಪಾರ ಧೈರ್ಯ ತೋರಿಸಿದನು. ಹೇಗೆ? ಯೇಸು ತನ್ನ ತಂದೆ ತನ್ನಿಂದ ಏನು ಬಯಸಿದನೋ ಅದನ್ನೇ ಮಾಡಲು ಸಿದ್ಧಮನಸ್ಸು ತೋರಿಸಿದನು. ಇದರಿಂದಾಗಿ ದೇವದೂಷಕ ಎಂಬ ಪಟ್ಟ ಕಟ್ಟಿ ತುಂಬ ಅವಮಾನ ಮಾಡಿ ಜನರು ತನ್ನನ್ನು ಕೊಲ್ಲುತ್ತಾರೆ ಎಂದು ಗೊತ್ತಿದ್ದರೂ ತನ್ನ ತಂದೆಯ ಇಷ್ಟವನ್ನೇ ಮಾಡಲು ಸಿದ್ಧನಿದ್ದನು. (ಮತ್ತಾ. 26:65, 66; ಲೂಕ 22:41, 42) ಯೆಹೋವನ ಹೆಸರನ್ನು ಮಹಿಮೆಪಡಿಸಲು, ಆತನ ಪರಮಾಧಿಕಾರವನ್ನು ಎತ್ತಿಹಿಡಿಯಲು, ಪಶ್ಚಾತ್ತಾಪಪಡುವ ಮನುಷ್ಯರಿಗೆ ಸಾವೇ ಇಲ್ಲದ ಜೀವನ ಸಿಗಲು ಯೇಸು ತುಂಬ ಚೆನ್ನಾಗಿ ತನ್ನ ನಿಷ್ಠೆ ಕಾಪಾಡಿಕೊಂಡನು. ಅದೇ ಸಮಯದಲ್ಲಿ ತನ್ನ ಹಿಂಬಾಲಕರು ಅನುಭವಿಸಲಿದ್ದ ಸನ್ನಿವೇಶಗಳನ್ನು ಎದುರಿಸಲು ಅವರನ್ನೂ ಸಿದ್ಧಗೊಳಿಸಿದನು.

8. (ಎ) ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಏನು ಹೇಳಿದನು? (ಬಿ) ಯೇಸು ತೀರಿಹೋಗಿ ಅನೇಕ ವರ್ಷಗಳಾದರೂ ಆತನ ಶಿಷ್ಯರು ಆತನಂತೆ ಹೇಗೆ ಧೈರ್ಯ ತೋರಿಸಿದರು?

8 ಆ ಸಮಯದಲ್ಲಿ ತನಗಿದ್ದ ಎಲ್ಲ ಚಿಂತೆ-ಕಳವಳವನ್ನು ಬದಿಗಿಟ್ಟು ತನ್ನ ನಂಬಿಗಸ್ತ ಅಪೊಸ್ತಲರ ಅಗತ್ಯಗಳಿಗೆ ಗಮನಕೊಡುವ ಮೂಲಕವೂ ಯೇಸು ಧೈರ್ಯ ತೋರಿಸಿದನು. ಯೂದ ಹೊರಟುಹೋದ ನಂತರ ಆರಂಭಿಸಿದ ಆ ಸರಳ ಭೋಜನ ಯೇಸುವಿನ ಅಭಿಷಿಕ್ತ ಹಿಂಬಾಲಕರಿಗೆ ಆತನು ಸುರಿಸಲಿದ್ದ ರಕ್ತದಿಂದ ಸಿಗುವ ಪ್ರಯೋಜನಗಳನ್ನು ನೆನಪಿಸಲಿತ್ತು. ಅಷ್ಟೇ ಅಲ್ಲ ಅವರು ಹೊಸ ಒಡಂಬಡಿಕೆ ಭಾಗವಾಗಿದ್ದಾರೆ ಎಂದು ಸಹ ನೆನಪಿಸಲಿತ್ತು. (1 ಕೊರಿಂ. 10:16, 17) ಯೇಸುವಿನ ಹಿಂಬಾಲಕರು ತಮಗೆ ಸಿಕ್ಕ ಸ್ವರ್ಗೀಯ ಕರೆಗೆ ಕೊನೆ ತನಕ ಅರ್ಹರಾಗಿ ಉಳಿಯಬೇಕೆಂದರೆ ತಾನು ಮತ್ತು ತನ್ನ ತಂದೆ ಏನು ಬಯಸುತ್ತೇವೆಂದು ಅವರಿಗೆ ಹೇಳಿದನು. (ಯೋಹಾ. 15:12-15) ಆ ಅಪೊಸ್ತಲರಿಗೆ ಮುಂದೆ ಬರಲಿದ್ದ ಕಷ್ಟಗಳ ಬಗ್ಗೆಯೂ ತಿಳಿಸಿದನು. ನಂತರ ‘ಧೈರ್ಯವಾಗಿದ್ದು’ ತನ್ನನ್ನು ಅನುಕರಿಸಿ ಎಂದು ಹೇಳಿ ಅವರನ್ನು ಪ್ರೋತ್ಸಾಹಿಸಿದನು. (ಯೋಹಾ. 16:1-4ಎ, 33) ಅನೇಕ ವರ್ಷಗಳಾದ ಮೇಲೂ ಯೇಸುವಿನ ಶಿಷ್ಯರು ಆತನ ಸ್ವತ್ಯಾಗದ ಉದಾಹರಣೆಯನ್ನು ಅನುಕರಿಸುತ್ತಿದ್ದರು, ಧೈರ್ಯ ತೋರಿಸುತ್ತಿದ್ದರು. ಅವರಿಗೆ ಅನೇಕ ಕಷ್ಟಗಳು ಬಂದಾಗಲೂ ಒಬ್ಬರಿಗೊಬ್ಬರು ಬೆಂಬಲ ಕೊಟ್ಟರು.—ಇಬ್ರಿ. 10:33, 34.

9. ಧೈರ್ಯ ತೋರಿಸುವುದರಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಹುದು?

9 ಇಂದು ನಾವು ಸಹ ಯೇಸುವಿನಂತೆ ಧೈರ್ಯ ತೋರಿಸಬೇಕು. ಉದಾಹರಣೆಗೆ, ದೇವರಿಗೆ ನಿಷ್ಠೆ ತೋರಿಸುವ ಕಾರಣ ನಮ್ಮ ಸಹೋದರರು ಹಿಂಸೆಯನ್ನು ಅನುಭವಿಸುವಾಗ ಅವರಿಗೆ ಧೈರ್ಯದಿಂದ ಸಹಾಯ ಮಾಡಬೇಕು. ಕೆಲವೊಂದು ಸಲ ನಮ್ಮ ಸಹೋದರರನ್ನು ಅನ್ಯಾಯವಾಗಿ ಜೈಲಿಗೆ ಹಾಕಿರುತ್ತಾರೆ. ಆಗ ನಮ್ಮಿಂದ ಏನು ಸಹಾಯ ಮಾಡಕ್ಕೆ ಸಾಧ್ಯನೋ ಅದೆಲ್ಲವನ್ನು ಮಾಡಬೇಕು. ಅವರ ಪರವಾಗಿ ಮಾತಾಡುವುದಕ್ಕೂ ನಾವು ಮುಂದೆ ಹೋಗಬೇಕು. (ಫಿಲಿ. 1:14; ಇಬ್ರಿ. 13:19) ನಾವು ಧೈರ್ಯವನ್ನು ತೋರಿಸುವ ಇನ್ನೊಂದು ವಿಧ ಭಯಪಡದೆ ಸುವಾರ್ತೆ ಸಾರುವುದೇ ಆಗಿದೆ. (ಅ. ಕಾ. 14:3) ಜನ ನಮ್ಮನ್ನ ವಿರೋಧಿಸಲಿ, ಹೊಡೀಲಿ-ಬಡೀಲಿ ಯೇಸುವಿನಂತೆ ನಾವು ಸಹ ರಾಜ್ಯದ ಸಂದೇಶವನ್ನು ಸಾರುವುದನ್ನು ಮುಂದುವರಿಸುತ್ತೇವೆ. ಆದರೆ ಕೆಲವೊಂದು ಸಲ ನಾವು ಧೈರ್ಯ ಕಳಕೊಳ್ಳುತ್ತೇವೆ. ಆಗ ಏನು ಮಾಡಬಹುದು?

10. ಸ್ಮರಣೆಯ ಮುಂಚಿನ ವಾರಗಳಲ್ಲಿ ನಾವೇನು ಮಾಡಬೇಕು? ಯಾಕೆ?

10 ವಿಮೋಚನಾ ಮೌಲ್ಯದಿಂದ ಸಿಕ್ಕಿರುವ ನಿರೀಕ್ಷೆಯ ಬಗ್ಗೆ ಯೋಚಿಸುವ ಮೂಲಕ ನಾವು ಧೈರ್ಯ ತಂದುಕೊಳ್ಳಬಹುದು. (ಯೋಹಾ. 3:16; ಎಫೆ. 1:7) ಸ್ಮರಣೆಯ ಮುಂಚೆ ಇರುವ ಈ ಕೆಲವು ವಾರಗಳಲ್ಲಿ ವಿಮೋಚನಾ ಮೌಲ್ಯದ ಕಡೆಗೆ ಗಣ್ಯತೆ ಬೆಳೆಸಿಕೊಳ್ಳಲು ನಮಗೆ ವಿಶೇಷ ಅವಕಾಶವಿದೆ. ಈ ಸಮಯದಲ್ಲಿ ಸ್ಮರಣೆಯ ಬೈಬಲ್‌ ಓದುವಿಕೆಯನ್ನು ತಪ್ಪದೇ ಮಾಡಿ. ಯೇಸು ತೀರಿಹೋಗುವ ಸಮಯ ಹತ್ತಿರ ಬಂದಾಗ ಏನೆಲ್ಲ ನಡೆಯಿತೋ ಅದನ್ನು ಭಯಭಕ್ತಿಯಿಂದ ಧ್ಯಾನಿಸಿ. ಹೀಗೆ ಮಾಡಿದರೆ, ಕರ್ತನ ಸಂಧ್ಯಾ ಭೋಜನಕ್ಕೆ ನಾವು ಸೇರಿಬಂದಾಗ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ಮಹತ್ವವನ್ನು ಮತ್ತು ಅವು ಸೂಚಿಸುವಂಥ ಮಹಾತ್ಯಾಗದ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಗುತ್ತದೆ. ನಮಗಾಗಿ ಯೇಸು ಮತ್ತು ಯೆಹೋವನು ಏನು ಮಾಡಿದ್ದಾರೆ ಅನ್ನೋದನ್ನು ಅರ್ಥಮಾಡಿಕೊಂಡಾಗ ಮತ್ತು ಇದರಿಂದ ನಮಗೆ, ನಮ್ಮ ಪ್ರೀತಿಪಾತ್ರರಿಗೆ ಯಾವ ಪ್ರಯೋಜನ ಇದೆ ಎಂದು ತಿಳುಕೊಂಡಾಗ ಭವಿಷ್ಯದ ಬಗ್ಗೆ ನಮಗಿರುವ ನಿರೀಕ್ಷೆ ದೃಢವಾಗುತ್ತದೆ. ಕೊನೆ ತನಕ ಧೈರ್ಯದಿಂದ ತಾಳಿಕೊಳ್ಳಲು ಪ್ರಚೋದನೆ ಸಿಗುತ್ತದೆ.—ಇಬ್ರಿ. 12:3.

11-12. ಇಲ್ಲಿಯ ವರೆಗೂ ನಾವೇನು ಕಲಿತ್ವಿ?

11 ಇಲ್ಲಿಯ ವರೆಗೂ ನಾವೇನು ಕಲಿತ್ವಿ? ಕರ್ತನ ಸಂಧ್ಯಾ ಭೋಜನವು ವಿಮೋಚನಾ ಮೌಲ್ಯವನ್ನಷ್ಟೇ ಅಲ್ಲ ಯೇಸುವಿನ ಅದ್ಭುತ ಗುಣಗಳಾದ ದೀನತೆ ಮತ್ತು ಧೈರ್ಯವನ್ನೂ ನೆನಪಿಸುತ್ತದೆ ಎಂದು ಕಲಿತ್ವಿ. ಯೇಸು ಸ್ವರ್ಗದಲ್ಲಿ ನಮ್ಮ ಪರವಾಗಿ ದೇವರ ಹತ್ತಿರ ಬೇಡಿಕೊಳ್ಳುವ ಮಹಾ ಯಾಜಕನಾದ ಮೇಲೂ ಈ ಗುಣಗಳನ್ನು ತೋರಿಸುವುದನ್ನು ಮುಂದುವರಿಸುತ್ತಾನೆ. ಇದಕ್ಕೆ ನಾವು ಆತನಿಗೆ ತುಂಬ ಆಭಾರಿ! (ಇಬ್ರಿ. 7:24, 25) ನಾವು ಯೇಸು ಹೇಳಿದಂತೆಯೇ ಆತನ ಮರಣದ ಸ್ಮರಣೆಯನ್ನು ತಪ್ಪದೆ ಮಾಡುವ ಮೂಲಕ ಕೃತಜ್ಞತೆ ತೋರಿಸುತ್ತೇವೆ. (ಲೂಕ 22:19, 20) ಇದನ್ನು ನಾವು ನೈಸಾನ್‌ 14​ಕ್ಕೆ ಹೊಂದಿಕೆಯಲ್ಲಿರುವ ದಿನದಂದು ಮಾಡುತ್ತೇವೆ. ಈ ದಿನ ನಮಗೆ ಇಡೀ ವರ್ಷದಲ್ಲೇ ಅತ್ಯಂತ ಪ್ರಾಮುಖ್ಯ ದಿನ.

12 ಕರ್ತನ ಸಂಧ್ಯಾ ಭೋಜನವನ್ನು ಸರಳವಾಗಿ ಏರ್ಪಡಿಸುವ ಮೂಲಕ ಯೇಸು ಇನ್ನೊಂದು ಗುಣವನ್ನೂ ತೋರಿಸಿದನು. ಅದನ್ನು ಈಗ ನೋಡೋಣ. ಆ ಗುಣ ಇದ್ದದರಿಂದಲೇ ಯೇಸು ನಮಗೋಸ್ಕರ ಸತ್ತನು. ಯೇಸು ಅಂದಾಕ್ಷಣ ಜನರ ಮನಸ್ಸಿಗೆ ಬರುವುದೇ ಆ ಗುಣ. ಯಾವ ಗುಣ ಅದು?

ಪ್ರೀತಿ ತೋರಿಸಿದನು

13. (ಎ) ಯೆಹೋವ ಮತ್ತು ಯೇಸು ತೋರಿಸಿದ ಪ್ರೀತಿಯ ಬಗ್ಗೆ ಯೋಹಾನ 15:9 ಮತ್ತು 1 ಯೋಹಾನ 4:8-10 ಏನು ಹೇಳುತ್ತದೆ? (ಬಿ) ಅವರ ಪ್ರೀತಿಯಿಂದ ಯಾರಿಗೆ ಪ್ರಯೋಜನ ಸಿಗುತ್ತದೆ?

13 ಯೆಹೋವನಿಗೆ ನಾವೆಂದರೆ ತುಂಬ ಪ್ರೀತಿ. ಆ ಪ್ರೀತಿಯನ್ನು ಯೇಸು ತಾನು ಮಾಡಿದ ಎಲ್ಲ ವಿಷಯಗಳಲ್ಲಿ ತೋರಿಸಿದ್ದಾನೆ. (ಯೋಹಾನ 15:9; 1 ಯೋಹಾನ 4:8-10 ಓದಿ.) ನಮಗೋಸ್ಕರ ತನ್ನ ಪ್ರಾಣವನ್ನು ಕೊಡಕ್ಕೂ ಹಿಂದೆಮುಂದೆ ನೋಡಲಿಲ್ಲ. ಯೇಸು ಮಾಡಿದ ಈ ತ್ಯಾಗದಿಂದಲೇ ಆತನಿಗೆ ಮತ್ತು ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಎಂದು ಗೊತ್ತಾಗುತ್ತದೆ. ನಾವು ಅಭಿಷಿಕ್ತರಾಗಿರಲಿ ‘ಬೇರೆ ಕುರಿಗಳಾಗಿರಲಿ’ ಯೇಸು ಮಾಡಿರುವ ಈ ತ್ಯಾಗದಿಂದ ಪ್ರಯೋಜನ ಪಡೆಯುತ್ತೇವೆ. (ಯೋಹಾ. 10:16; 1 ಯೋಹಾ. 2:2) ಸ್ಮರಣೆಯಲ್ಲಿ ಬಳಸುವ ಪದಾರ್ಥಗಳ ಬಗ್ಗೆಯೂ ನೋಡಿ. ಇವು ಯೇಸುವಿಗೆ ತನ್ನ ಶಿಷ್ಯರ ಮೇಲಿದ್ದ ಪ್ರೀತಿ ಮತ್ತು ಪರಿಗಣನೆಯನ್ನು ತೋರಿಸಿಕೊಡುತ್ತವೆ. ಹೇಗೆ?

ಯೇಸುವಿಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದ ತನ್ನ ಮರಣದ ಸ್ಮರಣೆಯನ್ನು ಸರಳವಾಗಿ ಏರ್ಪಡಿಸಿದನು. ಇದರಿಂದಾಗಿ ಅನೇಕ ಶತಮಾನಗಳಿಂದ ಸ್ಮರಣೆಯನ್ನು ಕಷ್ಟದ ಸನ್ನಿವೇಶದಲ್ಲೂ ಮಾಡಲು ಸಾಧ್ಯವಾಗಿದೆ (ಪ್ಯಾರ 14-16 ನೋಡಿ) *

14. ಯೇಸು ತನ್ನ ಶಿಷ್ಯರ ಮೇಲಿದ್ದ ಪ್ರೀತಿಯನ್ನು ಹೇಗೆ ತೋರಿಸಿದನು?

14 ಯೇಸುವಿಗೆ ತನ್ನ ಅಭಿಷಿಕ್ತ ಶಿಷ್ಯರ ಮೇಲೆ ಪ್ರೀತಿ ಇದ್ದದರಿಂದ ತನ್ನ ಮರಣದ ಸ್ಮರಣೆಯನ್ನು ಮಾಡಲು ತುಂಬ ಕಷ್ಟಕರವಾದ ಸಂಸ್ಕಾರಗಳನ್ನು ಪರಿಚಯಿಸಲಿಲ್ಲ. ಅದರ ಬದಲಿಗೆ ಸರಳವಾದ ಭೋಜನವನ್ನು ಪರಿಚಯಿಸಿದನು. ಇದರಿಂದ ಮುಂದೆ ಆ ಅಭಿಷಿಕ್ತ ಶಿಷ್ಯರು ಯಾವುದೇ ಸನ್ನಿವೇಶದಲ್ಲಿದ್ದರೂ, ಅವರು ಜೈಲಿನಲ್ಲಿದ್ದರೂ ಸ್ಮರಣೆಯನ್ನು ಪ್ರತಿವರ್ಷ ತಪ್ಪದೇ ಮಾಡಲು ಸಾಧ್ಯವಾಯಿತು.—ಪ್ರಕ. 2:10.

15-16. ಕಷ್ಟದ ಸನ್ನಿವೇಶಗಳಲ್ಲಿಯೂ ಕೆಲವರು ಕರ್ತನ ಸಂಧ್ಯಾ ಭೋಜನವನ್ನು ಹೇಗೆ ಮಾಡಿದ್ದಾರೆ?

15 ಮೊದಲನೇ ಶತಮಾನದಿಂದ ಹಿಡಿದು ಇಂದಿನವರೆಗೂ ನಿಜ ಕ್ರೈಸ್ತರು ಯೇಸುವಿನ ಮರಣದ ಸ್ಮರಣೆಯನ್ನು ತಪ್ಪದೇ ಮಾಡಲು ಶ್ರಮಿಸಿದ್ದಾರೆ. ಅದನ್ನು ಕಷ್ಟದ ಸನ್ನಿವೇಶಗಳಲ್ಲಿಯೂ ಮಾಡಿದ್ದಾರೆ. ಅದೂ ಯೇಸು ತೋರಿಸಿಕೊಟ್ಟ ವಿಧಾನವನ್ನೇ ಬಳಸಿ ತಮ್ಮಿಂದ ಎಷ್ಟಾಗುತ್ತೋ ಅಷ್ಟು ಉತ್ತಮವಾಗಿ ಮಾಡಿದ್ದಾರೆ. ಮುಂದಿನ ಉದಾಹರಣೆಗಳನ್ನು ಗಮನಿಸಿ. ಸಹೋದರ ಹೆರಾಲ್ಡ್‌ ಕಿಂಗ್‌ ಅವರನ್ನು ಚೀನಾದ ಜೈಲಿನ ಒಂದು ಕೋಣೆಯಲ್ಲಿ ಅವರೊಬ್ಬರನ್ನೇ ಕೂಡಿಹಾಕಿದ್ದರು. ಅಲ್ಲಿ ಸ್ಮರಣೆಯನ್ನು ಮಾಡಲು ಅವರೇ ಕೆಲವೊಂದು ಉಪಾಯಗಳನ್ನು ಮಾಡಿಕೊಳ್ಳಬೇಕಾಗಿತ್ತು. ಯಾರಿಗೂ ಗೊತ್ತಾಗದ ಹಾಗೆ ತಮ್ಮ ಹತ್ತಿರ ಏನಿತ್ತೋ ಅದರಿಂದಲೇ ಅವರು ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತಯಾರಿಸಿಕೊಂಡರು. ತಮಗೆ ಗೊತ್ತಿದ್ದಷ್ಟು ಮಾಹಿತಿಯನ್ನು ಉಪಯೋಗಿಸಿ ತುಂಬ ಜಾಗ್ರತೆಯಿಂದ ಸ್ಮರಣೆಯ ದಿನಾಂಕವನ್ನು ಕಂಡುಹಿಡಿದರು. ಸ್ಮರಣೆಯ ಸಮಯ ಬಂದಾಗ ಅವರೊಬ್ಬರೇ ಗೀತೆ ಹಾಡಿದರು, ಪ್ರಾರ್ಥನೆ ಮಾಡಿದರು ಮತ್ತು ಬೈಬಲಾಧಾರಿತ ಭಾಷಣ ಕೊಟ್ಟರು.

16 ಇನ್ನೊಂದು ಉದಾಹರಣೆ ಗಮನಿಸಿ. ಎರಡನೇ ಮಹಾಯುದ್ಧದ ಸಮಯದಲ್ಲಿ ಸಹೋದರಿಯರ ಒಂದು ಗುಂಪು ಸೆರೆಶಿಬಿರದಲ್ಲಿ ಬಂಧಿಗಳಾಗಿದ್ದರು. ಅಲ್ಲಿ ಕರ್ತನ ಸಂಧ್ಯಾ ಭೋಜನವನ್ನು ಮಾಡಿದರೆ ಆ ಸಹೋದರಿಯರ ಜೀವಕ್ಕೇ ಅಪಾಯವಿತ್ತು. ಆದರೆ ಸ್ಮರಣೆಗೆ ಬಳಸುತ್ತಿದ್ದ ಪದಾರ್ಥಗಳು ತುಂಬ ಸರಳವಾಗಿದ್ದುದರಿಂದ ಯಾರಿಗೂ ಗೊತ್ತಾಗದ ಹಾಗೆ ಸ್ಮರಣೆಯನ್ನು ಮಾಡಲು ಅವರಿಗೆ ಸಾಧ್ಯವಾಯಿತು. ಅವರು ಹೇಳಿದ್ದು: “ಒಂದು ಸ್ಟೂಲನ್ನು ನಮ್ಮ ಮಧ್ಯೆ ಇಟ್ಟು ನಾವು ಅದರ ಸುತ್ತ ನಿಂತೆವು. ಅದರ ಮೇಲೆ ಬಿಳಿ ಬಟ್ಟೆ ಹಾಕಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಇಟ್ಟೆವು. ಲೈಟನ್ನು ಹಾಕೋ ಬದಲು ಮೇಣದ ಬತ್ತಿಯನ್ನು ಹಚ್ಚಿದೆವು. ಲೈಟ್‌ ಹಾಕಿದ್ದರೆ ನಾವೇನು ಮಾಡುತ್ತಿದ್ದೇವೆಂದು ಗೊತ್ತಾಗಿ ಬಿಡುತ್ತಿತ್ತು. . . . ನಮ್ಮ ಸ್ವರ್ಗೀಯ ತಂದೆಯ ಹೆಸರನ್ನು ಪವಿತ್ರೀಕರಿಸಲಿಕ್ಕಾಗಿ ನಮ್ಮಿಂದಾಗುವ ಎಲ್ಲವನ್ನೂ ಮಾಡುತ್ತೇವೆ ಎಂದು ಕೊಟ್ಟ ಮಾತನ್ನು ನಾವು ಪುನಃ ಉಳಿಸಿಕೊಂಡೆವು.” ಎಂಥ ಅದ್ಭುತ ನಂಬಿಕೆ ಅದಾಗಿತ್ತು! ಯೇಸು ಸ್ಮರಣೆಯನ್ನು ಮಾಡಲು ನಮಗೆ ಸುಲಭ ವಿಧಾನ ತೋರಿಸಿಕೊಟ್ಟಿರುವುದರಿಂದ ಕಷ್ಟದ ಸನ್ನಿವೇಶಗಳಲ್ಲೂ ಅದನ್ನು ಮಾಡಲಿಕ್ಕಾಗುತ್ತದೆ. ಇದರಲ್ಲಿ ಯೇಸುವಿನ ಪ್ರೀತಿ ಎದ್ದುಕಾಣುತ್ತದೆ!

17. ನಮ್ಮನ್ನು ನಾವೇ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

17 ಸ್ಮರಣೆ ಹತ್ತಿರ ಇರುವ ಈ ಸಮಯದಲ್ಲಿ ನಮ್ಮನ್ನು ನಾವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ‘ಪ್ರೀತಿ ತೋರಿಸುವ ವಿಷಯದಲ್ಲಿ ನಾನು ಯೇಸುವನ್ನು ಇನ್ನೂ ಚೆನ್ನಾಗಿ ಹೇಗೆ ಅನುಕರಿಸಬಹುದು? ನನ್ನ ಅಗತ್ಯಗಳಿಗಿಂತ ನನ್ನ ಸಹೋದರ-ಸಹೋದರಿಯರ ಅಗತ್ಯಗಳಿಗೆ ಹೆಚ್ಚು ಗಮನ ಕೊಡುತ್ತೇನಾ? ನನ್ನ ಸಹೋದರ-ಸಹೋದರಿಯರ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳದೆ ಅವರಿಂದ ಹೆಚ್ಚು ನಿರೀಕ್ಷಿಸುತ್ತಿದ್ದೇನಾ?’ ನಾವು ಯೇಸುವನ್ನು ಅನುಕರಿಸೋಣ ಮತ್ತು ‘ಅನುಕಂಪ ತೋರಿಸುವವರು’ ಆಗೋಣ.—1 ಪೇತ್ರ 3:8.

ಈ ಪಾಠಗಳು ಯಾವಾಗಲೂ ನಿಮ್ಮ ಮನಸ್ಸಲ್ಲಿರಲಿ

18-19. (ಎ) ಯೆಹೋವನ ಜನರು ಯಾವುದನ್ನು ಖಂಡಿತ ನೆನಪಿಸಿಕೊಳ್ಳುತ್ತಾರೆ? (ಬಿ) ನೀವು ಯಾವ ದೃಢತೀರ್ಮಾನ ಮಾಡಿದ್ದೀರಿ?

18 ಕ್ರಿಸ್ತನ ಮರಣದ ಸ್ಮರಣೆಯನ್ನು ನಾವು ಶಾಶ್ವತವಾಗಿ ಆಚರಿಸುವುದಿಲ್ಲ. ಮಹಾಸಂಕಟದ ಸಮಯದಲ್ಲಿ ಯೇಸು ‘ಬಂದಾಗ’ ತಾನು ‘ಆಯ್ದುಕೊಂಡವರಲ್ಲಿ’ ಉಳಿದವರನ್ನು ಒಟ್ಟುಸೇರಿಸಿ ಸ್ವರ್ಗಕ್ಕೆ ಕರಕೊಂಡು ಹೋಗುತ್ತಾನೆ. ಆಗ ಆತನ ಮರಣದ ಸ್ಮರಣೆಯ ಆಚರಣೆ ನಿಂತುಹೋಗುತ್ತದೆ.—1 ಕೊರಿಂ. 11:26; ಮತ್ತಾ. 24:31.

19 ಸ್ಮರಣೆಯ ಏರ್ಪಾಡು ನಿಂತುಹೋದ ಮೇಲೂ ಯೆಹೋವನ ಜನರು ಅದನ್ನು ಖಂಡಿತ ನೆನಪಿಸಿಕೊಳ್ಳುತ್ತಾರೆ. ಈ ಒಂದು ಸರಳವಾದ ಭೋಜನ ಯೇಸುವಿನ ಅದ್ಭುತ ಗುಣಗಳಾದ ದೀನತೆ, ಧೈರ್ಯ ಮತ್ತು ಪ್ರೀತಿಯ ಬಗ್ಗೆ ಕಲಿಸಿದೆ. ಇಂಥ ಪ್ರೀತಿಯನ್ನು ಮನುಷ್ಯರಲ್ಲಿ ಬೇರೆ ಯಾರೂ ತೋರಿಸಿಲ್ಲ. ಕರ್ತನ ಸಂಧ್ಯಾ ಭೋಜನವನ್ನು ಆಚರಿಸಿದವರು ಹೊಸ ಲೋಕದಲ್ಲಿ ಅದರ ಬಗ್ಗೆ ಖಂಡಿತ ಮಾತಾಡುತ್ತಾರೆ. ಆಗ ಬದುಕಿರುವ ಎಲ್ಲರಿಗೂ ಅದರಿಂದ ಪ್ರಯೋಜನ ಆಗುತ್ತದೆ. ಆದರೆ ಈಗ ಈ ಭೋಜನದಿಂದ ಪ್ರಯೋಜನ ಪಡೆಯಲು ನಾವು ಯೇಸುವಿನಂತೆ ದೀನತೆ, ಧೈರ್ಯ ಮತ್ತು ಪ್ರೀತಿಯನ್ನು ತೋರಿಸಲೇಬೇಕು. ಈ ಗುಣಗಳನ್ನು ತೋರಿಸಿದರೆ ಯೆಹೋವನು ನಮಗೆ ಆಶೀರ್ವಾದಗಳನ್ನು ಕೊಟ್ಟೇ ಕೊಡುತ್ತಾನೆ.—2 ಪೇತ್ರ 1:10, 11.

ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

^ ಪ್ಯಾರ. 5 ಇನ್ನು ಕೆಲವೇ ದಿನಗಳಲ್ಲಿ ನಾವೆಲ್ಲರೂ ಕರ್ತನ ಸಂಧ್ಯಾ ಭೋಜನಕ್ಕೆ ಹಾಜರಾಗಲಿದ್ದೇವೆ. ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ನಾವು ಮಾಡುವ ಈ ಸರಳ ಕಾರ್ಯಕ್ರಮ ನಮಗೆ ಆತನ ದೀನತೆ, ಧೈರ್ಯ ಮತ್ತು ಪ್ರೀತಿಯ ಬಗ್ಗೆ ಕಲಿಸುತ್ತದೆ. ಯೇಸು ತೋರಿಸಿದ ಈ ಅದ್ಭುತವಾದ ಗುಣಗಳನ್ನು ನಾವು ಹೇಗೆ ಅನುಕರಿಸಬಹುದು ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 2 ಪದ ವಿವರಣೆ: ಸ್ಮರಿಸುವುದು ಅನ್ನುವುದರ ಅರ್ಥ ಒಂದು ಪ್ರಾಮುಖ್ಯ ಸಂದರ್ಭವನ್ನು ಅಥವಾ ಒಬ್ಬ ಪ್ರಾಮುಖ್ಯ ವ್ಯಕ್ತಿಯನ್ನು ನೆನಪಿಸಿಕೊಳ್ಳಲು ಮತ್ತು ಗೌರವಿಸಲು ವಿಶೇಷವಾಗಿ ಏನಾದರೂ ಮಾಡುವುದೇ ಆಗಿದೆ.

^ ಪ್ಯಾರ. 56 ಚಿತ್ರ ವಿವರಣೆ: ಒಂದನೇ ಶತಮಾನದಲ್ಲಿದ್ದ ಸಭೆಯಲ್ಲಿ, 1880​ರ ಆಸುಪಾಸಿನಲ್ಲಿ, ನಾಜಿ ಸೆರೆಶಿಬಿರದಲ್ಲಿ ಮತ್ತು ಇಂದು ದಕ್ಷಿಣ ಅಮೆರಿಕದ ಸರಳವಾದ, ಗೋಡೆಗಳಿಲ್ಲದ ಒಂದು ರಾಜ್ಯ ಸಭಾಗೃಹದಲ್ಲಿ ಸ್ಮರಣೆ ನಡೆಯುತ್ತಿರುವಂತೆ ಪುನರಭಿನಯಿಸಲಾಗಿದೆ.