ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 3

ನೀವು ಯೆಹೋವನಿಗೆ ಅಮೂಲ್ಯರು!

ನೀವು ಯೆಹೋವನಿಗೆ ಅಮೂಲ್ಯರು!

“ನಾವು ಕುಗ್ಗಿಹೋದಾಗ ನಮ್ಮನ್ನು ನೆನಪು ಮಾಡಿಕೊಂಡನು.”—ಕೀರ್ತ. 136:23, ನೂತನ ಲೋಕ ಭಾಷಾಂತರ.

ಗೀತೆ 38 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

ಕಿರುನೋಟ *

1-2. (ಎ) ಯೆಹೋವನ ಸೇವಕರಲ್ಲಿ ಅನೇಕರು ಯಾವ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ? (ಬಿ) ಇದರಿಂದ ಅವ್ರ ಮೇಲೆ ಯಾವ ಪರಿಣಾಮ ಆಗಿದೆ?

ಈ ಮೂರು ಸನ್ನಿವೇಶಗಳ ಬಗ್ಗೆ ಯೋಚಿಸಿ: 1) ಒಬ್ಬ ಯುವ ಸಹೋದರನಿಗೆ ಶಕ್ತಿಯೆಲ್ಲಾ ಕುಗ್ಗಿ ಹೋಗುವಂಥ ಕಾಯಿಲೆ ಬಂದಿದೆ. 2) ತುಂಬ ಕಷ್ಟಪಟ್ಟು ದುಡೀತಿರೋ ಐವತ್ತರ ಪ್ರಾಯದ ಸಹೋದರನು ಕೆಲಸ ಕಳಕೊಂಡಿದ್ದಾನೆ, ಎಷ್ಟೇ ಪ್ರಯತ್ನ ಮಾಡಿದ್ರೂ ಬೇರೆ ಕೆಲಸ ಸಿಗ್ತಿಲ್ಲ. 3) ಯೆಹೋವನಿಗೆ ನಂಬಿಗಸ್ತರಾಗಿದ್ದ ಒಬ್ಬ ವೃದ್ಧ ಸಹೋದರಿಗೆ ಹಿಂದೆ ಮಾಡಿದಷ್ಟು ಸೇವೆಯನ್ನ ಈಗ ಮಾಡಕ್ಕಾಗ್ತಿಲ್ಲ.

2 ಇವುಗಳಲ್ಲಿ ಯಾವುದಾದರೊಂದು ಸಮಸ್ಯೆಯನ್ನ ನೀವು ಎದುರಿಸುತ್ತಿರೋದಾದ್ರೆ ನಿಮಗೆ, ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಬಹುದು. ಈ ಸನ್ನಿವೇಶಗಳು ನಿಮ್ಮ ಸಂತೋಷಾನೇ ಕಸಿದುಕೊಳ್ಳಬಹುದು, ನಿಮ್ಮಲ್ಲಿ ಕೀಳರಿಮೆ ಹುಟ್ಟಿಸಬಹುದು. ಬೇರೆಯವ್ರ ಜೊತೆ ನಿಮಗಿರೋ ಒಳ್ಳೇ ಸಂಬಂಧನ ಹಾಳುಮಾಡಬಹುದು.

3. ಸೈತಾನನಾಗಲಿ ಅವನನ್ನು ಅನುಕರಿಸುವವರಾಗಲಿ ಮನುಷ್ಯರ ಜೀವಕ್ಕೆ ಬೆಲೆ ಕೊಡ್ತಾರಾ? ವಿವರಿಸಿ.

3 ಸೈತಾನನ ತರ ಈ ಲೋಕದ ಜನಾನೂ ಮನುಷ್ಯರ ಜೀವಕ್ಕೆ ಬೆಲೆ ಕೊಡಲ್ಲ. ಸೈತಾನ ಯಾವಾಗ್ಲೂ ಮನುಷ್ಯರನ್ನ ಕಾಲಿನ ಕಸದ ತರ ನೋಡಿದ್ದಾನೆ. ಹವ್ವ ಯೆಹೋವನಿಗೆ ಅವಿಧೇಯಳಾದರೆ ಸಾಯ್ತಾಳೆ ಅಂತ ಗೊತ್ತಿದ್ರೂ ಸೈತಾನ ಒಂಚೂರು ದಯೆ-ದಾಕ್ಷಿಣ್ಯ ಇಲ್ಲದೆ ಅವಳ ಹತ್ತಿರ ‘ಯೆಹೋವನ ಮಾತನ್ನು ಕೇಳಬೇಡ, ನೀನು ಸ್ವತಂತ್ರಳಾಗ್ತೀಯ’ ಅಂತ ಹೇಳಿದನು. ಈ ಲೋಕದಲ್ಲಿರೋ ವ್ಯಾಪಾರ ವ್ಯವಸ್ಥೆ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಸೈತಾನ ತನ್ನ ಕೈಯಲ್ಲಿಟ್ಟುಕೊಂಡು ಆಡಿಸುತ್ತಿದ್ದಾನೆ. ಅದಕ್ಕೇ ಅನೇಕ ವ್ಯಾಪಾರೋದ್ಯಮಿಗಳು, ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಅವನ ತರಾನೇ ಮನುಷ್ಯರ ಜೀವಕ್ಕೆ, ಭಾವನೆಗಳಿಗೆ ಯಾವುದೇ ಬೆಲೆ ಕೊಡಲ್ಲ.

4. ಈ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?

4 ಆದ್ರೆ ಯೆಹೋವನು ಹಾಗಲ್ಲ. ನಮ್ಗೆ ಕೀಳರಿಮೆ ಇರಬಾರ್ದು, ನಮ್ಮ ಬಗ್ಗೆ ನಮಗೆ ಒಳ್ಳೇ ಭಾವನೆ ಇರಬೇಕು ಅಂತ ಬಯಸ್ತಾನೆ. ನಾವು ಯಾವುದಕ್ಕೂ ಲಾಯಕ್ಕಿಲ್ಲ ಅನ್ನುವಂಥ ಯೋಚನೆ ತರಿಸೋ ಸನ್ನಿವೇಶಗಳನ್ನು ಎದುರಿಸುವಾಗ ಯೆಹೋವನು ನಮಗೆ ಸಹಾಯ ಮಾಡ್ತಾನೆ. (ಕೀರ್ತ. 136:23; ರೋಮ. 12:3) ಅಂಥ ಮೂರು ಸನ್ನಿವೇಶಗಳಲ್ಲಿ ಯೆಹೋವನು ಹೇಗೆಲ್ಲಾ ಸಹಾಯ ಮಾಡ್ತಾನೆ ಅಂತ ಈ ಲೇಖನದಲ್ಲಿ ನೋಡಲಿಕ್ಕಿದ್ದೇವೆ. (1) ಕಾಯಿಲೆ ಬಂದಾಗ, (2) ಆರ್ಥಿಕ ಸಮಸ್ಯೆ ಬಂದಾಗ ಮತ್ತು (3) ವಯಸ್ಸಾಗಿರೋದ್ರಿಂದ ‘ಯೆಹೋವನ ಸೇವೆ ಮಾಡಕ್ಕಾಗ್ತಿಲ್ಲ, ನಾನು ಯಾವ್ದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಿದಾಗ. ಆದರೆ ಇದನ್ನು ತಿಳುಕೊಳ್ಳೋದಕ್ಕಿಂತ ಮುಂಚೆ ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನಿಗೆ ಅಮೂಲ್ಯರು ಅಂತ ನಾವ್ಯಾಕೆ ಭರವಸೆ ಇಡಬಹುದು ಅಂತ ನೋಡೋಣ.

ನಾವು ಯೆಹೋವನಿಗೆ ಅಮೂಲ್ಯರು

5. ನಾವು ಯೆಹೋವನಿಗೆ ಅಮೂಲ್ಯರು ಅಂತ ನಂಬಲಿಕ್ಕೆ ಏನೆಲ್ಲಾ ಕಾರಣಗಳಿವೆ?

5 ಯೆಹೋವನು ನಮ್ಮನ್ನು ಮಣ್ಣಿನಿಂದ ಸೃಷ್ಟಿ ಮಾಡಿದ್ರೂ ನಾವು ಮಣ್ಣಿಗೆ ಸಮಾನರಲ್ಲ, ತುಂಬ ಅಮೂಲ್ಯರಾಗಿದ್ದೇವೆ. (ಆದಿ. 2:7) ನಾವು ಯೆಹೋವನಿಗೆ ಅಮೂಲ್ಯರು ಅಂತ ನಂಬಲಿಕ್ಕೆ ಕೆಲವು ಕಾರಣಗಳನ್ನು ನೋಡೋಣ. ಯೆಹೋವನು ನಮ್ಮನ್ನು ತನ್ನ ಗುಣಗಳನ್ನು ಅನುಕರಿಸೋ ಸಾಮರ್ಥ್ಯವನ್ನಿಟ್ಟು ಸೃಷ್ಟಿ ಮಾಡಿದ್ದಾನೆ. (ಆದಿ. 1:27) ಹೀಗೆ ಮಾಡುವ ಮೂಲಕ ಆತನು ನಮ್ಮ ಕಣ್ಣಿಗೆ ಕಾಣುವ ಬೇರೆಲ್ಲಾ ಸೃಷ್ಟಿಗಳಿಗಿಂತ ನಮ್ಮನ್ನು ಉನ್ನತರನ್ನಾಗಿ ಮಾಡಿದ್ದಾನೆ. ನಮಗೆ ಭೂಮಿಯನ್ನು, ಪ್ರಾಣಿಗಳನ್ನು ನೋಡಿಕೊಳ್ಳುವ ಅಧಿಕಾರವನ್ನು ಕೊಟ್ಟಿದ್ದಾನೆ.—ಕೀರ್ತ. 8:4-8.

6. ನಾವು ಅಪರಿಪೂರ್ಣರಾಗಿದ್ರೂ ಯೆಹೋವನು ನಮ್ಮನ್ನು ಅಮೂಲ್ಯರನ್ನಾಗಿ ನೋಡ್ತಾನೆ ಅಂತ ನಂಬಲಿಕ್ಕೆ ಇನ್ನೂ ಯಾವ ಕಾರಣಗಳಿವೆ?

6 ಆದಾಮ ಪಾಪ ಮಾಡಿದ ನಂತ್ರನೂ ಯೆಹೋವನು ಮನುಷ್ಯರನ್ನ ಅಮೂಲ್ಯರನ್ನಾಗಿಯೇ ನೋಡುತ್ತಿದ್ದಾನೆ. ಆತನು ನಮ್ಮನ್ನು ಎಷ್ಟು ಅಮೂಲ್ಯರಾಗಿ ನೋಡುತ್ತಾನೆಂದರೆ ನಮ್ಮ ಪಾಪಗಳಿಗೋಸ್ಕರ ತನ್ನ ಒಬ್ಬನೇ ಮುದ್ದಿನ ಮಗನಾದ ಯೇಸುವಿನ ಪ್ರಾಣವನ್ನು ಯಜ್ಞವಾಗಿ ಕೊಟ್ಟುಬಿಟ್ಟನು. (1 ಯೋಹಾ. 4:9, 10) ಆ ಯಜ್ಞದ ಆಧಾರದ ಮೇಲೆ ಯೆಹೋವನು ಆದಾಮನ ಪಾಪದಿಂದ ಸತ್ತವರೆಲ್ಲರನ್ನು ಪುನರುತ್ಥಾನ ಮಾಡುತ್ತಾನೆ. ಅದರಲ್ಲಿ ‘ನೀತಿವಂತರೂ ಅನೀತಿವಂತರೂ’ ಸೇರಿದ್ದಾರೆ. (ಅ. ಕಾ. 24:15) ನಮಗೆ ಕಾಯಿಲೆಗಳಿದ್ರೂ, ಆರ್ಥಿಕ ಸಮಸ್ಯೆ ಇದ್ರೂ ಅಥವಾ ವಯಸ್ಸಾಗಿ ಹೋಗಿದ್ರೂ ಯೆಹೋವನು ನಮ್ಮನ್ನು ಅಮೂಲ್ಯರನ್ನಾಗಿ ನೋಡ್ತಾನೆ ಅಂತ ಆತನ ವಾಕ್ಯದಿಂದ ಗೊತ್ತಾಗುತ್ತೆ.—ಅ. ಕಾ. 10:34, 35.

7. ಯೆಹೋವನು ತನ್ನ ಸೇವಕರಾದ ನಮ್ಮನ್ನು ಅಮೂಲ್ಯರಾಗಿ ನೋಡ್ತಾನೆ ಅಂತ ನಂಬೋಕೆ ಬೇರೆ ಯಾವ ಕಾರಣಗಳಿವೆ?

7 ನಾವು ಯೆಹೋವನಿಗೆ ಅಮೂಲ್ಯರು ಅಂತ ನಂಬೋಕೆ ಇನ್ನೂ ಅನೇಕ ಕಾರಣಗಳಿವೆ. ಆತನು ನಮ್ಮನ್ನು ಸೆಳೆದಿದ್ದಾನೆ. ನಾವು ಸುವಾರ್ತೆಯನ್ನು ಕೇಳಿಸಿಕೊಂಡಾಗ ಹೇಗೆ ಪ್ರತಿಕ್ರಿಯಿಸಿದ್ದೇವೆ ಅಂತ ಆತನು ಗಮನಿಸಿದ್ದಾನೆ. (ಯೋಹಾ. 6:44) ನಾವು ಯೆಹೋವನಿಗೆ ಹತ್ತಿರವಾದಂತೆ ಆತನೂ ನಮಗೆ ಹತ್ತಿರವಾಗಿದ್ದಾನೆ. (ಯಾಕೋ. 4:8) ನಮಗೆ ಕಲಿಸಲಿಕ್ಕಾಗಿ ಯೆಹೋವನು ತನ್ನ ಸಮಯ-ಶಕ್ತಿ ಉಪಯೋಗಿಸುತ್ತಿದ್ದಾನೆ. ನಾವೀಗ ಎಂಥ ವ್ಯಕ್ತಿಗಳಾಗಿದ್ದೇವೆ ಮತ್ತು ಮುಂದೆ ಎಂಥ ವ್ಯಕ್ತಿಗಳಾಗೋಕೆ ಸಾಧ್ಯ ಅಂತನೂ ಯೆಹೋವನಿಗೆ ಗೊತ್ತಿದೆ. ನಮ್ಮ ಮೇಲೆ ಪ್ರೀತಿ ಇರೋದರಿಂದಲೇ ಯೆಹೋವನು ನಮಗೆ ಶಿಸ್ತನ್ನು ಸಹ ಕೊಡ್ತಾನೆ. (ಜ್ಞಾನೋ. 3:11, 12) ಯೆಹೋವನು ನಮ್ಮನ್ನು ಅಮೂಲ್ಯರಾಗಿ ನೋಡ್ತಾನೆ ಅನ್ನೋದಕ್ಕೆ ಇಷ್ಟು ಕಾರಣಗಳು ಸಾಕಲ್ವಾ?

8. ಕೀರ್ತನೆ 18:27-29 ರ ಬಗ್ಗೆ ಧ್ಯಾನಿಸಿದರೆ ಕಷ್ಟ-ಸಮಸ್ಯೆಗಳು ಬಂದಾಗ ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆ?

8 ರಾಜ ದಾವೀದನನ್ನ ಕೆಲವರು ‘ಯಾವುದಕ್ಕೂ ಲಾಯಕ್ಕಿಲ್ಲದವನು’ ಅಂತ ನೆನಸಿದ್ರು. ಆದರೆ ದಾವೀದನಿಗೆ ಯೆಹೋವನು ತನ್ನನ್ನು ಪ್ರೀತಿಸ್ತಾನೆ, ಬೆಂಬಲಿಸ್ತಾನೆ ಅಂತ ಗೊತ್ತಿತ್ತು. ಇದು ಗೊತ್ತಿದ್ರಿಂದ ದಾವೀದನಿಗೆ ಯಾವುದೇ ಸನ್ನಿವೇಶದಲ್ಲೂ ಕುಗ್ಗಿಹೋಗದೆ ಅದನ್ನು ತಾಳಿಕೊಳ್ಳೋಕೆ ಸಾಧ್ಯವಾಯಿತು. (2 ಸಮು. 16:5-7) ನಮಗೆ ಬೇಜಾರು ಅನಿಸಿದಾಗ, ಕಷ್ಟಗಳು ಬಂದಾಗ ನಾವು ಕುಗ್ಗಿಹೋಗದೆ ಇರೋದಕ್ಕೆ, ಆ ಸಮಸ್ಯೆಗಳನ್ನು ಎದುರಿಸೋಕೆ ಯೆಹೋವನು ಸಹಾಯ ಮಾಡ್ತಾನೆ. (ಕೀರ್ತನೆ 18:27-29 ಓದಿ.) ಯೆಹೋವನ ಸಹಾಯ ನಮಗಿರೋದಾದ್ರೆ ಯಾವುದೇ ಸಮಸ್ಯೆಗಳು ಬಂದ್ರೂ ಆತನ ಸೇವೆಯನ್ನ ಸಂತೋಷದಿಂದ ಮಾಡ್ತಾ ಹೋಗೋಕೆ ಸಾಧ್ಯ ಆಗುತ್ತೆ. (ರೋಮ. 8:31) ಕೆಲವು ಸನ್ನಿವೇಶಗಳಲ್ಲಿ ಯೆಹೋವನು ನಮ್ಮನ್ನ ಪ್ರೀತಿಸ್ತಾನೆ, ಅಮೂಲ್ಯರನ್ನಾಗಿ ನೋಡ್ತಾನೆ ಅನ್ನೋದನ್ನು ನೆನಪಿನಲ್ಲಿಡೋದು ತುಂಬ ಮುಖ್ಯ. ಅಂಥ ಮೂರು ಸನ್ನಿವೇಶಗಳ ಬಗ್ಗೆ ಈಗ ನೋಡೋಣ.

ಕಾಯಿಲೆ ಬಂದಾಗ

ದೇವರ ವಾಕ್ಯವನ್ನು ಓದಿದರೆ ಕಾಯಿಲೆಯಿಂದ ಬರುವಂಥ ನಕಾರಾತ್ಮಕ ಯೋಚನೆಗಳನ್ನು ತೆಗೆದುಹಾಕಲಿಕ್ಕೆ ಸಹಾಯವಾಗುತ್ತದೆ (ಪ್ಯಾರ 9-12 ನೋಡಿ)

9. ಕಾಯಿಲೆ ಬಂದಾಗ ನಮ್ಮ ಬಗ್ಗೆ ನಾವು ಯಾವ ರೀತಿ ಯೋಚಿಸಬಹುದು?

9 ಕಾಯಿಲೆ ಬಂದಾಗ ನಾವು ಕುಗ್ಗಿ ಹೋಗಬಹುದು, ನಾವು ಪ್ರಯೋಜನಕ್ಕೆ ಬಾರದವ್ರು ಅಂತ ಅನಿಸಬಹುದು. ಕಾಯಿಲೆಯಿಂದಾಗಿ ನಮ್ಮ ಮೇಲಾಗುವ ಅಡ್ಡ ಪರಿಣಾಮಗಳನ್ನು ಬೇರೆಯವ್ರು ಗಮನಿಸಿದಾಗ, ನಾವು ಪೂರ್ತಿ ಬೇರೆಯವ್ರ ಮೇಲೆ ಹೊಂದಿಕೋಬೇಕಾದಾಗ ನಮಗೆ ಮುಜುಗರ, ಬೇಸರ ಆಗಬಹುದು. ನಮ್ಮ ಕಾಯಿಲೆ ಬಗ್ಗೆ ಬೇರೆಯವ್ರಿಗೆ ಏನೂ ಗೊತ್ತಾಗದೇ ಇದ್ರೂ ‘ನಾನು ಹೇಗಿದ್ದವನು ಹೇಗಾಗಿಬಿಟ್ಟೆ?’ ಅಂತ ನಮ್ಮೊಳಗೆ ನಮಗೇ ನೋವಾಗಬಹುದು. ಇಂಥ ನೋವಿನ, ಕಷ್ಟದ ಸಮಯದಲ್ಲಿ ಯೆಹೋವನು ಬಲ ಕೊಡ್ತಾನೆ. ಹೇಗೆ?

10. ಜ್ಞಾನೋಕ್ತಿ 12:25 ರ ಪ್ರಕಾರ ನಮಗೆ ಕಾಯಿಲೆ ಬಂದಾಗ ಯಾವುದು ಸಹಾಯ ಮಾಡುತ್ತದೆ?

10 ನಮಗೆ ಕಾಯಿಲೆ ಬಂದಾಗ ಯಾರಾದ್ರೂ ‘ಕನಿಕರದ ಮಾತನ್ನು’ ಹೇಳಿದ್ರೆ ಬಲ ಸಿಗುತ್ತೆ. (ಜ್ಞಾನೋಕ್ತಿ 12:25 ಓದಿ.) ನಮಗೆ ಕಾಯಿಲೆ ಇದ್ರೂ ಯೆಹೋವನಿಗೆ ನಾವು ಅಮೂಲ್ಯರಾಗಿದ್ದೇವೆ ಅಂತ ನೆನಪಿಸುವಂಥ ಕನಿಕರದ ಮಾತುಗಳನ್ನು ಸ್ವತಃ ಆತನೇ ಬೈಬಲ್‌ನಲ್ಲಿ ಬರೆಸಿಟ್ಟಿದ್ದಾನೆ. (ಕೀರ್ತ. 31:19; 41:3) ಈ ಮಾತುಗಳನ್ನು ಓದಿದ್ರೆ, ಮತ್ತೆ-ಮತ್ತೆ ಓದುತ್ತಾ ಇದ್ರೆ ಕಾಯಿಲೆಯಿಂದಾಗಿ ನಮಗೆ ಬಂದಿರೋ ನಕಾರಾತ್ಮಕ ಯೋಚನೆಗಳನ್ನ ಎದುರಿಸಲಿಕ್ಕೆ ಯೆಹೋವನು ಸಹಾಯ ಮಾಡ್ತಾನೆ.

11. ಒಬ್ಬ ಸಹೋದರನಿಗೆ ಯೆಹೋವನಿಂದ ಹೇಗೆ ಸಹಾಯ ಸಿಕ್ಕಿತು?

11 ಮೂವತ್ತು ವಯಸ್ಸಿನ ಜಾರ್ಜ್‌ನ ಉದಾಹರಣೆ ನೋಡಿ. ಅವನಿಗೆ ಬಂದ ಕಾಯಿಲೆಯಿಂದಾಗಿ ದಿನದಿಂದ ದಿನಕ್ಕೆ ಅವನ ಪರಿಸ್ಥಿತಿ ಹಾಳಾಗ್ತಾ ಹೋಯಿತು. ಇದರಿಂದ ಅವನಿಗೆ ತಾನು ಪ್ರಯೋಜನಕ್ಕೆ ಬಾರದವನು ಅಂತ ಅನಿಸಿತು. “ಕಾಯಿಲೆಯಿಂದಾಗಿ ನಾನು ತುಂಬ ಕುಗ್ಗಿಹೋದೆ. ಜನ ನನ್ನನ್ನು ಒಂಥರಾ ನೋಡ್ವಾಗ ನಂಗೆ ಅವಮಾನ ಆಗ್ತಿತ್ತು. ಹೀಗೆಲ್ಲಾ ಆಗುತ್ತೆ ಅಂತ ನಾನ್ಯಾವತ್ತೂ ನೆನಸಿರಲಿಲ್ಲ. ನನ್ನ ಕಾಯಿಲೆ ಜಾಸ್ತಿ ಆಗ್ತಾ ಹೋದ ಹಾಗೆ ‘ಮುಂದೆ ನನ್ನ ಜೀವನ ಹೇಗಪ್ಪಾ’ ಅಂತ ಯೋಚನೆ ಆಯ್ತು. ನಂಗೆ ತುಂಬ ಬೇಸರ ಆಯ್ತು. ನಾನು ಯೆಹೋವನ ಹತ್ತಿರ ‘ದಯವಿಟ್ಟು ಸಹಾಯ ಮಾಡಪ್ಪಾ’ ಅಂತ ಬೇಡಿಕೊಂಡೆ” ಎಂದು ಅವನು ಹೇಳ್ತಾನೆ. ಯೆಹೋವನು ಅವನಿಗೆ ಸಹಾಯ ಮಾಡಿದ್ನಾ? ಅವನು ಹೀಗೆ ಹೇಳ್ತಾನೆ: “ಯೆಹೋವನಿಗೆ ತನ್ನ ಸೇವಕರ ಬಗ್ಗೆ ಕಾಳಜಿ ಇದೆ ಅಂತ ತೋರಿಸುವಂಥ ಕೀರ್ತನೆಗಳನ್ನು ಓದುತ್ತಿದ್ದೆ. ಆದ್ರೆ ನಾನು ಸ್ವಲ್ಪ ಸ್ವಲ್ಪನೇ ಓದುತ್ತಿದ್ದೆ. ಯಾಕೆಂದ್ರೆ ನನಗೆ ಯಾವುದೇ ವಿಷ್ಯದ ಬಗ್ಗೆ ತುಂಬ ಹೊತ್ತು ಗಮನ ಕೊಡೋಕೆ ಆಗ್ತಿರಲಿಲ್ಲ. ನಾನು ಓದಿದ ವಚನಗಳನ್ನೇ ಪ್ರತಿದಿನ ಮತ್ತೆ-ಮತ್ತೆ ಓದುತ್ತಿದ್ದೆ. ಇದ್ರಿಂದ ನನಗೆ ಸಾಂತ್ವನ ಮತ್ತು ಉತ್ತೇಜನ ಸಿಗ್ತು. ದಿನ ಹೋಗ್ತಾ ಇದ್ದ ಹಾಗೇ ನಾನು ಹೆಚ್ಚು ಖುಷಿಯಾಗಿರೋದನ್ನು ಜನ್ರು ಗಮನಿಸಿದ್ರು. ನಾನು ಈ ರೀತಿ ಖುಷಿಯಾಗಿರೋದ್ರಿಂದ ಅವರಿಗೆ ಉತ್ತೇಜನ ಸಿಗ್ತಿದೆ ಅಂತನೂ ಅವರು ಹೇಳಿದ್ರು. ಯೆಹೋವನು ನನ್ನ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟಿದ್ದನು. ನನ್ನ ಬಗ್ಗೆ ನನಗಿದ್ದ ನಕಾರಾತ್ಮಕ ಯೋಚನೆಗಳನ್ನ ಬದಲಾಯಿಸೋಕೆ ಯೆಹೋವನು ಸಹಾಯ ಮಾಡಿದನು. ಯೆಹೋವನು ನನಗೆ ಕಾಯಿಲೆ ಇದ್ರೂ ನನ್ನನ್ನು ಹೇಗೆ ನೋಡ್ತಾನೆ ಅಂತ ಬೈಬಲ್‌ ಹೇಳುತ್ತೋ ಅದಕ್ಕೆ ಗಮನ ಕೊಡೋಕೆ ನಾನು ಶುರು ಮಾಡಿದೆ.”

12. ಕಾಯಿಲೆ ಬಂದಾಗ ಯೆಹೋವನ ಸಹಾಯವನ್ನ ಪಡೆಯಬೇಕೆಂದರೆ ಏನು ಮಾಡಬೇಕು?

12 ನಿಮಗೂ ಯಾವುದಾದರೂ ಕಾಯಿಲೆ ಇದ್ಯಾ? ಹಾಗಾದರೆ ನೆನಪಿಡಿ, ನಿಮಗಾಗುತ್ತಿರೋ ನೋವು-ಸಂಕಟ ಎಲ್ಲಾ ಯೆಹೋವನಿಗೆ ಗೊತ್ತಿದೆ. ನಿಮ್ಮ ಪರಿಸ್ಥಿತಿ ಬಗ್ಗೆ ಯೋಚಿಸಿ ಕುಗ್ಗಿಹೋಗದೆ ‘ಸರಿಯಾದ ರೀತಿಯಲ್ಲಿ ಯೋಚಿಸೋಕೆ ಸಹಾಯ ಮಾಡಪ್ಪಾ’ ಅಂತ ಯೆಹೋವನ ಹತ್ತಿರ ಪ್ರಾರ್ಥಿಸಿ. ಯೆಹೋವನು ನಿಮಗೆ ಸಾಂತ್ವನ ಕೊಡಲಿಕ್ಕಂತ ಬೈಬಲಿನಲ್ಲಿ ಬರೆಸಿಟ್ಟಿರುವ ‘ಕನಿಕರದ ಮಾತುಗಳನ್ನು’ ಹುಡುಕಿ. ಯೆಹೋವನು ತನ್ನ ಸೇವಕರನ್ನ ಎಷ್ಟು ಅಮೂಲ್ಯರಾಗಿ ನೋಡ್ತಾನೆ ಅಂತ ತಿಳಿಸುವಂಥ ಬೈಬಲ್‌ ವಚನಗಳನ್ನ ಓದಿ. ಹೀಗೆ ಮಾಡಿದ್ರೆ ಯೆಹೋವನು ತನಗೆ ನಂಬಿಗಸ್ತರಾಗಿ ಸೇವೆ ಮಾಡುವ ಎಲ್ಲರನ್ನೂ ಪ್ರೀತಿಸ್ತಾನೆ ಮತ್ತು ಸಹಾಯ ಮಾಡ್ತಾನೆ ಅಂತ ನಿಮಗೆ ಅರ್ಥ ಆಗುತ್ತೆ.—ಕೀರ್ತ. 84:11.

ಆರ್ಥಿಕ ಸಮಸ್ಯೆ ಎದುರಾದಾಗ

ಎಷ್ಟೇ ಹುಡುಕಿದರೂ ಕೆಲಸ ಸಿಗದಿದ್ದಾಗ ನಮ್ಮನ್ನು ನೋಡಿಕೊಳ್ತೀನಿ ಅಂತ ಯೆಹೋವನು ಮಾತು ಕೊಟ್ಟಿದ್ದಾನೆ ಅನ್ನೋದನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು (ಪ್ಯಾರ 13-15 ನೋಡಿ)

13. ಕುಟುಂಬದ ಯಜಮಾನನಿಗೆ ಕೆಲಸ ಕಳಕೊಂಡಾಗ ಹೇಗನಿಸುತ್ತದೆ?

13 ಪ್ರತಿಯೊಂದು ಕುಟುಂಬದ ಯಜಮಾನನಿಗೂ ತನ್ನ ಕುಟುಂಬದ ಅಗತ್ಯಗಳನ್ನೆಲ್ಲಾ ಪೂರೈಸಬೇಕು ಅಂತ ಇರುತ್ತೆ. ಆದರೆ ಒಬ್ಬ ಸಹೋದರ ತಪ್ಪು ಮಾಡದೇ ಇದ್ದರೂ ಕೆಲಸ ಕಳಕೊಂಡ ಅಂತಿಟ್ಟುಕೊಳ್ಳಿ. ನಂತ್ರ ಅವನೆಷ್ಟೇ ಪ್ರಯತ್ನಿಸಿದರೂ ಬೇರೆ ಕೆಲಸ ಸಿಗೋದಿಲ್ಲ. ಅಂಥ ಸನ್ನಿವೇಶದಲ್ಲಿ ಅವನಿಗೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಬಹುದು. ಆಗ ಅವನು ಯೆಹೋವನು ಕೊಟ್ಟಿರುವ ಮಾತಿನ ಮೇಲೆ ಗಮನ ಕೊಡುವುದರಿಂದ ಹೇಗೆ ಸಹಾಯ ಸಿಗುತ್ತೆ?

14. ಯೆಹೋವನು ಯಾಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ?

14 ಯೆಹೋವನು ಯಾವಾಗಲೂ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ. (ಯೆಹೋ. 21:45; 23:14) ಆತನು ಆ ರೀತಿ ನಡಕೊಳ್ಳಲಿಕ್ಕೆ ಹಲವಾರು ಕಾರಣಗಳಿವೆ. ಮೊದಲನೇದಾಗಿ, ಆತನು ತನ್ನ ಮಾತನ್ನು ಉಳಿಸಿಕೊಳ್ಳದಿದ್ದರೆ ಆತನ ಹೆಸರಿಗೆ ಕಳಂಕ ಬರುತ್ತೆ. ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ನೋಡಿಕೊಳ್ಳುತ್ತೇನೆ ಅಂತ ಮಾತು ಕೊಟ್ಟಿದ್ದಾನೆ. ಈ ಮಾತಿನ ಪ್ರಕಾರ ನಡಕೊಳ್ಳುವುದು ತನ್ನ ಜವಾಬ್ದಾರಿ ಅಂತ ಆತನು ನೆನಸುತ್ತಾನೆ. (ಕೀರ್ತ. 31:1-3) ಆತನ ಕುಟುಂಬದ ಭಾಗವಾಗಿರುವ ನಮ್ಮನ್ನು ನೋಡಿಕೊಂಡಿಲ್ಲ ಅಂದ್ರೆ ನಮಗೆ ಬೇಜಾರು, ನಿರಾಸೆ ಆಗುತ್ತೆ ಅಂತ ಯೆಹೋವನಿಗೆ ಗೊತ್ತು. ನಾವು ಜೀವಿಸೋಕೆ ಮತ್ತು ಆತನಿಗೆ ನಂಬಿಗಸ್ತರಾಗಿ ಸೇವೆ ಮಾಡ್ತಾ ಇರೋಕೆ ಬೇಕಾದ ವಿಷಯಗಳನ್ನ ಯೆಹೋವನು ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಆತನು ಕೊಟ್ಟಿರೋ ಈ ಮಾತು ನೆರವೇರೋದನ್ನ ತಡೆಯೋಕೆ ಯಾರಿಂದಲೂ ಯಾವುದರಿಂದಲೂ ಆಗಲ್ಲ.—ಮತ್ತಾ. 6:30-33; 24:45.

15. (ಎ) ಒಂದನೇ ಶತಮಾನದ ಕ್ರೈಸ್ತರು ಯಾವ ಸಮಸ್ಯೆಯನ್ನು ಎದುರಿಸಿದರು? (ಬಿ) ಕೀರ್ತನೆ 37:18, 19 ನಮಗೆ ಯಾವ ಭರವಸೆ ಕೊಡುತ್ತದೆ?

15 ಯೆಹೋವನು ಯಾಕೆ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ ಅನ್ನೋದನ್ನು ನಾವು ನೆನಪಲ್ಲಿಟ್ಟರೆ ಆರ್ಥಿಕ ಸಮಸ್ಯೆ ಬಂದರೂ ಧೈರ್ಯವಾಗಿ ಇರುತ್ತೇವೆ. ಇದರ ಬಗ್ಗೆ ಒಂದನೇ ಶತಮಾನದ ಕ್ರೈಸ್ತರ ಉದಾಹರಣೆ ನೋಡಿ. ಯೆರೂಸಲೇಮಿನಲ್ಲಿದ್ದ ಸಭೆಯ ವಿರುದ್ಧ ತೀವ್ರ ಹಿಂಸೆ ಬಂದಾಗ ‘ಅಪೊಸ್ತಲರನ್ನು ಬಿಟ್ಟು ಉಳಿದವರೆಲ್ಲರೂ ಚೆದರಿಹೋದರು.’ (ಅ. ಕಾ. 8:1) ಇದರಿಂದಾಗಿ ಅವ್ರು ಆರ್ಥಿಕ ಸಮಸ್ಯೆ ಎದುರಿಸಬೇಕಾಯಿತು. ಕ್ರೈಸ್ತರು ತಮ್ಮ ಮನೆಗಳನ್ನು ಕಳಕೊಂಡರು. ಅವ್ರ ಕೆಲಸ ಹೋಯಿತು, ವ್ಯಾಪಾರನೂ ನಿಂತುಹೋಯಿತು. ಆದರೆ ಯೆಹೋವನು ಅವ್ರ ಕೈಬಿಡಲಿಲ್ಲ, ಅವ್ರು ಸಹ ಸಂತೋಷವನ್ನ ಕಳಕೊಳ್ಳಲಿಲ್ಲ. (ಅ. ಕಾ. 8:4; ಇಬ್ರಿ. 13:5, 6; ಯಾಕೋ. 1:2, 3) ಆ ನಂಬಿಗಸ್ತ ಕ್ರೈಸ್ತರಿಗೆ ಯೆಹೋವನು ಸಹಾಯ ಮಾಡಿದನು, ನಮಗೂ ಸಹಾಯ ಮಾಡೇ ಮಾಡ್ತಾನೆ.—ಕೀರ್ತನೆ 37:18, 19 ಓದಿ.

ವಯಸ್ಸಾದಾಗ

ನಮಗೆ ವಯಸ್ಸಾದ ಮೇಲೂ ನಮ್ಮಿಂದ ಏನು ಮಾಡಕ್ಕಾಗುತ್ತೋ ಅದನ್ನು ಮಾಡಿದರೆ ಯೆಹೋವನು ನಮ್ಮನ್ನು, ನಮ್ಮ ಸೇವೆಯನ್ನು ಅಮೂಲ್ಯವಾಗಿ ನೋಡುತ್ತಾನೆ ಎಂಬ ಆಶ್ವಾಸನೆ ಸಿಗುತ್ತದೆ (ಪ್ಯಾರ 16-18 ನೋಡಿ)

16. ಯೆಹೋವನು ನಿಜವಾಗಲೂ ನಮ್ಮ ಸೇವೆಯನ್ನು ಅಮೂಲ್ಯವಾಗಿ ನೆನಸುತ್ತಾನಾ ಅನ್ನುವ ಸಂದೇಹ ಯಾವಾಗ ಬರಬಹುದು?

16 ನಮಗೆ ವಯಸ್ಸಾಗುತ್ತಾ ಹೋದ ಹಾಗೆ ‘ನಾನು ಯೆಹೋವನ ಸೇವೆಯನ್ನ ಅಷ್ಟೇನು ಮಾಡ್ತಾ ಇಲ್ಲ’ ಅಂತ ಅನಿಸಬಹುದು. ರಾಜ ದಾವೀದನಿಗೆ ಸಹ ವಯಸ್ಸಾಗುತ್ತಾ ಹೋದ ಹಾಗೆ ಅದೇ ರೀತಿ ಭಾವನೆಗಳು ಬಂದವು. (ಕೀರ್ತ. 71:9) ಇಂಥ ಪರಿಸ್ಥಿತಿಯಲ್ಲಿ ಯೆಹೋವನು ನಮಗೆ ಹೇಗೆ ಸಹಾಯ ಮಾಡ್ತಾನೆ?

17. ಜೆರಿ ಎಂಬ ಸಹೋದರಿಯ ಅನುಭವದಿಂದ ನಾವೇನು ಕಲಿಯಬಹುದು?

17 ಜೆರಿ ಎಂಬ ಸಹೋದರಿಯ ಉದಾಹರಣೆ ನೋಡಿ. ಯೆಹೋವನ ಸೇವೆಗಾಗಿ ಉಪಯೋಗಿಸುವ ಕಟ್ಟಡಗಳನ್ನ ಸುಸ್ಥಿತಿಯಲ್ಲಿಡುವ ತರಬೇತಿಗಾಗಿ ಆಕೆಯನ್ನು ಆಮಂತ್ರಿಸಲಾಗಿತ್ತು. ಆಗ ಆಕೆಗೆ ‘ನನಗೆ ವಯಸ್ಸಾಗಿದೆ, ನಾನು ವಿಧವೆ, ಈ ಕೆಲಸದ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನಿಂದ ಏನೂ ಪ್ರಯೋಜನ ಇಲ್ಲ’ ಅಂತ ಅನಿಸಿತು. ಅದಕ್ಕೇ ಆಕೆ, ಆ ತರಬೇತಿಗೆ ಹೋಗೋದು ಬೇಡ ಅಂತ ಅಂದುಕೊಂಡಳು. ಆ ತರಬೇತಿಗೂ ಹಿಂದಿನ ರಾತ್ರಿ ಆಕೆ ತನ್ನ ಅನಿಸಿಕೆಗಳನ್ನೆಲ್ಲಾ ಯೆಹೋವನ ಹತ್ತಿರ ಪ್ರಾರ್ಥನೆಯಲ್ಲಿ ಹೇಳಿಕೊಂಡಳು. ಮಾರನೇ ದಿನ ರಾಜ್ಯ ಸಭಾಗೃಹಕ್ಕೆ ತರಬೇತಿಗಾಗಿ ಹೋದ ನಂತ್ರನೂ ಆಕೆಗೆ ‘ನಾನು ನಿಜವಾಗಿಯೂ ಇದಕ್ಕೆ ಹಾಜರಾಗಬೇಕಾ?’ ಅಂತ ಅನಿಸ್ತಾ ಇತ್ತು. ಯೆಹೋವನಿಂದ ಕಲಿಯಬೇಕೆಂಬ ಸಿದ್ಧಮನಸ್ಸೇ ದುರಸ್ತಿ ಕೆಲಸವನ್ನು ಮಾಡುವವರಿಗೆ ಇರಬೇಕಾದ ಮುಖ್ಯ ಕೌಶಲ ಅಂತ ಆ ಕಾರ್ಯಕ್ರಮದಲ್ಲಿ ಒಬ್ಬ ಭಾಷಣಕಾರನು ಹೇಳಿದನು. ಆಗ ಆಕೆ ತನ್ನ ಮನಸ್ಸಲ್ಲಿ ‘ನನಗೆ ಆ ಕೌಶಲ ಇದೆ!’ ಅಂತ ಅಂದುಕೊಂಡಳು. ಆಕೆ ಹೇಳೋದು: “ಆಗ ನಾನು ‘ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುತ್ತಿದ್ದಾನೆ’ ಅಂತ ಅರ್ಥಮಾಡಿಕೊಂಡೆ. ನಂಗೆ ಅಳುನೇ ಬಂದುಬಿಡ್ತು. ‘ನಿನ್ನ ಹತ್ತಿರ ನಂಗೆ ಕೊಡೋಕೆ ಅಮೂಲ್ಯವಾದ ವಿಷಯವಿದೆ, ನಾನು ನಿನಗೆ ಈ ಕೆಲಸನಾ ಕಲಿಸ್ತೀನಿ’ ಅಂತ ಯೆಹೋವನೇ ನಂಗೆ ಹೇಳಿದ ಹಾಗೆ ಇತ್ತು.” ಆ ದಿನದ ಬಗ್ಗೆ ಯೋಚಿಸ್ತಾ ಆಕೆ ಹೀಗೆ ಹೇಳುತ್ತಾಳೆ: “ನಾನು ಆ ತರಬೇತಿಗೆ ಹೋಗುವಾಗ ನನಗೆ ಭಯ, ನಿರುತ್ತೇಜನ, ಕೀಳರಿಮೆ ಇತ್ತು. ಆದರೆ ಅಲ್ಲಿಂದ ವಾಪಸ್‌ ಬರುವಾಗ ಧೈರ್ಯ, ಉತ್ತೇಜನ ಸಿಗ್ತು ಮತ್ತು ‘ನನ್ನಿಂದನೂ ಪ್ರಯೋಜನ ಇದೆ’ ಅಂತ ಅನಿಸಿತು.”

18. ನಮಗೆ ವಯಸ್ಸಾದರೂ ನಮ್ಮ ಆರಾಧನೆಯನ್ನು ಯೆಹೋವನು ಅಮೂಲ್ಯವಾಗಿ ನೋಡ್ತಾನೆ ಅಂತ ಬೈಬಲ್‌ ಹೇಗೆ ತೋರಿಸಿಕೊಡುತ್ತದೆ?

18 ನಮಗೆ ವಯಸ್ಸಾಗಿದ್ದರೂ ಯೆಹೋವನಿಗೆ ಪ್ರಯೋಜನಕ್ಕೆ ಬಾರದವರೇನಲ್ಲ, ಈಗಲೂ ಆತನು ನಮ್ಮನ್ನು ಉಪಯೋಗಿಸುತ್ತಾನೆ. (ಕೀರ್ತ. 92:12-15) ನಮಗೆ ಸಾಮರ್ಥ್ಯ ಇಲ್ಲ ಅಂತನೋ ಅಥವಾ ನಮಗೆ ಹೆಚ್ಚು ಮಾಡಕ್ಕಾಗುತ್ತಿಲ್ಲ ಅಂತನೋ ಅನಿಸಬಹುದು. ಆದರೆ ಯೆಹೋವನ ಸೇವೆಯನ್ನು ನಮ್ಮಿಂದಾದಷ್ಟು ಮಾಡಿದಾಗ ಅದನ್ನು ಆತನು ಖಂಡಿತ ಮಾನ್ಯ ಮಾಡುತ್ತಾನೆ ಎಂದು ಯೇಸು ತಿಳಿಸಿದ್ದಾನೆ. (ಲೂಕ 21:2-4) ಹಾಗಾಗಿ ನಿಮ್ಮಿಂದ ಏನು ಮಾಡಕ್ಕಾಗುತ್ತೋ ಅದ್ರ ಕಡೆಗೆ ಗಮನ ಕೊಡಿ. ಉದಾಹರಣೆಗೆ, ನೀವು ಯೆಹೋವನ ಬಗ್ಗೆ ಮಾತಾಡಕ್ಕಾಗುತ್ತೆ, ನಿಮ್ಮ ಸಹೋದರರಿಗಾಗಿ ಪ್ರಾರ್ಥನೆ ಮಾಡಕ್ಕಾಗುತ್ತೆ, ಯೆಹೋವನಿಗೆ ನಂಬಿಗಸ್ತಿಕೆಯಿಂದ ಉಳಿಯಲು ಬೇರೆಯವ್ರಿಗೆ ಉತ್ತೇಜನ ಕೊಡಕ್ಕಾಗುತ್ತೆ. ಯೆಹೋವನು ನೀವೆಷ್ಟು ಸೇವೆ ಮಾಡ್ತೀರಾ ಅನ್ನೋದನ್ನು ನೋಡಿ ತನ್ನ ಜೊತೆಕೆಲಸಗಾರರಾಗಿ ಆರಿಸಿಕೊಂಡಿಲ್ಲ. ಬದಲಿಗೆ, ಆತನಿಗೆ ನೀವು ತೋರಿಸೋ ವಿಧೇಯತೆ ನೋಡಿ ನಿಮ್ಮನ್ನು ಆರಿಸಿಕೊಂಡಿದ್ದಾನೆ.—1 ಕೊರಿಂ. 3:5-9.

19. ರೋಮನ್ನರಿಗೆ 8:38, 39 ನಮಗೆ ಯಾವ ಆಶ್ವಾಸನೆ ಕೊಡುತ್ತದೆ?

19 ಯೆಹೋವನು ತನ್ನ ಆರಾಧಕರನ್ನು ತುಂಬ ಅಮೂಲ್ಯವಾಗಿ ನೋಡ್ತಾನೆ. ನಾವು ಇಂಥ ದೇವರನ್ನು ಆರಾಧಿಸುತ್ತಿರುವುದು ನಿಜವಾಗಲೂ ಸಾರ್ಥಕ. ಯೆಹೋವನು ತನ್ನ ಉದ್ದೇಶದಂತೆ ನಾವು ಜೀವಿಸಬೇಕೆಂದು ನಮ್ಮನ್ನು ಸೃಷ್ಟಿ ಮಾಡಿದ್ದಾನೆ ಮತ್ತು ಆತನನ್ನು ಆರಾಧಿಸಿದಾಗ ಮಾತ್ರವೇ ನಮ್ಮ ಜೀವನದಲ್ಲಿ ಸಂತೋಷವಿರುತ್ತದೆ. (ಪ್ರಕ. 4:11) ಲೋಕದವರ ದೃಷ್ಟಿಯಲ್ಲಿ ನಾವು ಪ್ರಯೋಜನಕ್ಕೆ ಬಾರದಿರುವವರು ಆಗಿರಬಹುದು, ಆದರೆ ಯೆಹೋವನ ದೃಷ್ಟಿಯಲ್ಲಿ ನಾವು ಅಮೂಲ್ಯರು. (ಇಬ್ರಿ. 11:16, 38) ಕಾಯಿಲೆಯಿಂದಾಗಲಿ, ಆರ್ಥಿಕ ಸಮಸ್ಯೆಯಿಂದಾಗಲಿ, ವಯಸ್ಸಾಗಿರುವುದರಿಂದಾಗಲಿ ನಮಗೆ ಯಾವತ್ತಾದರೂ ನಿರುತ್ತೇಜನ ಕಾಡಿದರೆ ಒಂದು ವಿಷ್ಯನ ನೆನಪಿನಲ್ಲಿಟ್ಟುಕೊಳ್ಳೋಣ. ಈ ಸಮಸ್ಯೆಗಳೇ ಆಗಲಿ ಇನ್ಯಾವ ವಿಷ್ಯಗಳೇ ಆಗಲಿ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಪ್ರೀತಿಯಿಂದ ನಮ್ಮನ್ನು ಅಗಲಿಸುವುದಕ್ಕೆ ಆಗುವುದಿಲ್ಲ.—ರೋಮನ್ನರಿಗೆ 8:38, 39 ಓದಿ.

^ ಪ್ಯಾರ. 5 ನಿಮಗೆ ಯಾವತ್ತಾದರೂ ‘ನಾನು ಪ್ರಯೋಜನಕ್ಕೆ ಬಾರದವನು’ ಅಂತ ಅನಿಸಿದ್ಯಾ? ಹಾಗಿದ್ದರೆ ಯೆಹೋವನಿಗೆ ನೀವೆಷ್ಟು ಅಮೂಲ್ಯರು ಅಂತ ಈ ಲೇಖನದಿಂದ ಗೊತ್ತಾಗುತ್ತೆ. ನಿಮ್ಮ ಜೀವನದಲ್ಲಿ ಏನೇ ಆದರೂ ನಿಮ್ಮ ಬಗ್ಗೆ ನಿಮಗೇ ಕೀಳರಿಮೆ ಬಾರದೇ ಇರೋಕೆ ಏನು ಮಾಡ್ಬೇಕು ಅಂತಾನೂ ಈ ಲೇಖನದಲ್ಲಿ ತಿಳ್ಕೊಳ್ಳುತ್ತೀರಿ.

ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ