ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 2

ಸಹಾಯ, ಸಾಂತ್ವನ ನೀಡಲು ಸದಾ ಮುಂದಿರಿ

ಸಹಾಯ, ಸಾಂತ್ವನ ನೀಡಲು ಸದಾ ಮುಂದಿರಿ

“ಇವರು . . . ದೇವರ ರಾಜ್ಯಕ್ಕಾಗಿ ನನ್ನ ಜೊತೆಕೆಲಸಗಾರರಾಗಿದ್ದಾರೆ ಮತ್ತು ಇವರೇ ನನಗೆ ಬಲವರ್ಧಕ ಸಹಾಯವಾಗಿದ್ದಾರೆ [ಅಥವಾ ಸಾಂತ್ವನದ ಚಿಲುಮೆಯಾಗಿದ್ದಾರೆ].”—ಕೊಲೊ. 4:11.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

ಕಿರುನೋಟ *

1. ಯೆಹೋವನ ಅನೇಕ ನಂಬಿಗಸ್ತ ಸೇವಕರು ಯಾವೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ?

ಭೂಮಿಯಾದ್ಯಂತ ಯೆಹೋವನ ಅನೇಕ ಸೇವಕರು ಒತ್ತಡದಲ್ಲಿದ್ದಾರೆ, ಕಷ್ಟ-ನೋವನ್ನು ಅನುಭವಿಸುತ್ತಿದ್ದಾರೆ. ಇಂಥ ಸಹೋದರ-ಸಹೋದರಿಯರು ನಿಮ್ಮ ಸಭೆಯಲ್ಲಿದ್ದಾರಾ? ಕೆಲವರು ವಾಸಿಯಾಗದ ಕಾಯಿಲೆಯಿಂದ ನರಳುತ್ತಿರಬಹುದು ಅಥವಾ ಅವ್ರ ಪ್ರಿಯರು ತೀರಿಹೋಗಿರಬಹುದು. ಇನ್ನು ಕೆಲವ್ರು ತಮ್ಮ ಕುಟುಂಬದವರೋ ಆಪ್ತ ಸ್ನೇಹಿತರೋ ಸತ್ಯವನ್ನು ಬಿಟ್ಟುಹೋಗಿರುವುದರಿಂದ ತುಂಬ ನೋವನ್ನು ಅನುಭವಿಸುತ್ತಿರಬಹುದು. ಬೇರೆ ಕೆಲವ್ರು ನೈಸರ್ಗಿಕ ವಿಪತ್ತಿನಿಂದಾಗಿ ಕಷ್ಟವನ್ನು ಅನುಭವಿಸುತ್ತಿರಬಹುದು. ಇಂಥ ಎಲ್ಲಾ ಸಹೋದರ-ಸಹೋದರಿಯರಿಗೆ ಸಾಂತ್ವನ, ಸಹಾಯ ಬೇಕೇ ಬೇಕು. ನಾವು ಅವ್ರಿಗೆ ಹೇಗೆ ಸಹಾಯ ಮಾಡಬಹುದು?

2. ಅಪೊಸ್ತಲ ಪೌಲನಿಗೆ ಸಹ ಕೆಲವೊಮ್ಮೆ ಸಾಂತ್ವನ ಯಾಕೆ ಬೇಕಿತ್ತು?

2 ಅಪೊಸ್ತಲ ಪೌಲನ ಜೀವನದಲ್ಲಿ ಜೀವವೇ ಹೋಗುವಂಥ ಅನೇಕ ಸನ್ನಿವೇಶಗಳು ಎದುರಾದವು. (2 ಕೊರಿಂ. 11:23-28) ಅಷ್ಟೇ ಅಲ್ಲ, ಆತನ “ಶರೀರದಲ್ಲಿ ಒಂದು ಮುಳ್ಳು” ಇತ್ತು ಅಂದ್ರೆ ಆತನಿಗೆ ಯಾವುದೋ ಆರೋಗ್ಯ ಸಮಸ್ಯೆ ಇದ್ದಿರಬೇಕು. (2 ಕೊರಿಂ. 12:7) ಜೊತೆಕೆಲಸಗಾರನಾದ ದೇಮನು “ಸದ್ಯದ ವಿಷಯಗಳ ವ್ಯವಸ್ಥೆಯನ್ನು ಪ್ರೀತಿಸಿ” ತನ್ನನ್ನು ಬಿಟ್ಟುಹೋದಾಗ ಪೌಲನಿಗೆ ನಿರಾಸೆಯೂ ಆಯಿತು. (2 ತಿಮೊ. 4:10) ಹುರುಪಿನ ಅಭಿಷಿಕ್ತನಾಗಿದ್ದ, ಬೇರೆಯವ್ರಿಗೆ ನಿಸ್ವಾರ್ಥದಿಂದ ಸಹಾಯ ಮಾಡಿದ ಪೌಲ ಸಹ ಅನೇಕ ಸಲ ನಿರುತ್ತೇಜನ, ದುಃಖವನ್ನು ಅನುಭವಿಸಿದನು.—ರೋಮ. 9:1, 2.

3. ಪೌಲನಿಗೆ ಬೇಕಾದ ಸಹಾಯ, ಸಾಂತ್ವನವನ್ನು ಯೆಹೋವನು ಹೇಗೆ ನೀಡಿದನು?

3 ಪೌಲನು ತನಗೆ ಬೇಕಾದ ಸಹಾಯ, ಸಾಂತ್ವನ ಪಡೆದುಕೊಂಡನು. ಹೇಗೆ? ಯೆಹೋವನು ತನ್ನ ಪವಿತ್ರಾತ್ಮವನ್ನು ಕೊಟ್ಟು ಆತನನ್ನು ಬಲಪಡಿಸಿದನು. (2 ಕೊರಿಂ. 4:7; ಫಿಲಿ. 4:13) ಅಷ್ಟೇ ಅಲ್ಲ, ಜೊತೆಕ್ರೈಸ್ತರ ಮೂಲಕವೂ ಯೆಹೋವನು ಆತನನ್ನು ಸಂತೈಸಿದನು. ತನ್ನ ಜೊತೆಕೆಲಸಗಾರರು “ಬಲವರ್ಧಕ ಸಹಾಯವಾಗಿದ್ದಾರೆ” ಅಥವಾ ಸಾಂತ್ವನದ ಚಿಲುಮೆಯಾಗಿದ್ದಾರೆ ಎಂದು ಪೌಲನು ಹೇಳಿದನು. (ಕೊಲೊ. 4:11) ಆ ರೀತಿ ಸಾಂತ್ವನ ಕೊಟ್ಟವರಲ್ಲಿ ತುಖಿಕ, ಅರಿಸ್ತಾರ್ಕ, ಮಾರ್ಕ ಸೇರಿದ್ದಾರೆ. ಅವ್ರು ಪೌಲನನ್ನು ಬಲಪಡಿಸಿ, ಆತನಿಗೆ ಬೇಕಾದ ಸಹಾಯ ಮಾಡಿದರು. ಇಷ್ಟು ಸಾಂತ್ವನ ಕೊಡಲು ಈ ಮೂರು ಕ್ರೈಸ್ತರಿಗೆ ಯಾವ ಗುಣಗಳು ಸಹಾಯ ಮಾಡಿದವು? ಇವರ ಮಾದರಿಯನ್ನು ಅನುಕರಿಸುತ್ತಾ ನಾವು ಒಬ್ಬರಿಗೊಬ್ಬರು ಹೇಗೆ ಸಹಾಯ-ಸಾಂತ್ವನ ನೀಡಬಹುದು?

ನಿಷ್ಠಾವಂತ ಅರಿಸ್ತಾರ್ಕ

ಸಹೋದರ-ಸಹೋದರಿಯರಿಗೆ “ಆಪತ್ತು” ಅಥವಾ ಕಷ್ಟ ಬಂದಾಗ ನಾವು ಕೈಬಿಡದೆ ಜೊತೆಯಲ್ಲಿರುವ ಮೂಲಕ ಅರಿಸ್ತಾರ್ಕನಂತೆ ನಿಷ್ಠಾವಂತ ಸ್ನೇಹಿತರಾಗಬಹುದು (ಪ್ಯಾರ 4-5 ನೋಡಿ) *

4. ಅರಿಸ್ತಾರ್ಕನು ಹೇಗೆ ಪೌಲನಿಗೆ ನಿಷ್ಠಾವಂತ ಸ್ನೇಹಿತನಾಗಿದ್ದ?

4 ಥೆಸಲೊನೀಕದಲ್ಲಿದ್ದ ಮಕೆದೋನ್ಯದ ಅರಿಸ್ತಾರ್ಕನು ಪೌಲನ ನಿಷ್ಠಾವಂತ ಸ್ನೇಹಿತನಾಗಿದ್ದನು. ಅವನ ಬಗ್ಗೆ ನಾವು ಬೈಬಲಿನಲ್ಲಿ ಮೊದಲು ಓದುವುದು ಪೌಲನು ತನ್ನ ಮೂರನೇ ಮಿಷನರಿ ಪ್ರಯಾಣದಲ್ಲಿ ಎಫೆಸಕ್ಕೆ ಭೇಟಿನೀಡಿದಾಗಲೇ. ಅರಿಸ್ತಾರ್ಕನು ಪೌಲನ ಜೊತೆಗಿದ್ದ ಕಾರಣ ಒಮ್ಮೆ ಜನ್ರ ಗುಂಪು ಅವನನ್ನು ಹಿಡಿಯಿತು. (ಅ. ಕಾ. 19:29) ಕೊನೆಗೆ ಅವನನ್ನು ಬಿಟ್ಟುಬಿಟ್ಟಾಗ, ‘ಪೌಲನ ಸಹವಾಸ ಸಾಕಪ್ಪಾ’ ಅಂತ ಪೌಲನಿಂದ ದೂರ ಉಳಿಯಲಿಲ್ಲ. ನಿಷ್ಠೆಯಿಂದ ಆತನ ಜೊತೆನೇ ಇದ್ದ. ಕೆಲವು ತಿಂಗಳ ನಂತ್ರ ಗ್ರೀಸ್‌ನಲ್ಲಿ ಪೌಲನ ವಿರೋಧಿಗಳು ಆತನನ್ನು ಕೊಲ್ಲಲು ಒಳಸಂಚು ಮಾಡಿದಾಗಲೂ ಅರಿಸ್ತಾರ್ಕ ಪೌಲನ ಜೊತೆನೇ ಇದ್ದ. (ಅ. ಕಾ. 20:2-4) ಕ್ರಿ.ಶ. 58 ರಲ್ಲಿ ಪೌಲನನ್ನು ರೋಮ್‌ಗೆ ಸೆರೆಯಾಳಾಗಿ ಕರಕೊಂಡು ಹೋದಾಗಲೂ ಅರಿಸ್ತಾರ್ಕನು ಆತನ ಜೊತೆಗಿದ್ದ. ಈ ದೀರ್ಘ ಪ್ರಯಾಣದಲ್ಲಿ ಹಡಗೊಡೆತ ಆದಾಗಲೂ ಅವರಿಬ್ಬರೂ ಜೊತೆಯಲ್ಲೇ ಇದ್ದರು. (ಅ. ಕಾ. 27:1, 2, 41) ರೋಮ್‌ಗೆ ತಲುಪಿದ ಮೇಲೆ ಅರಿಸ್ತಾರ್ಕನು ಸ್ವಲ್ಪ ಸಮಯ ಪೌಲನ ಜೊತೆ ಜೈಲಿನಲ್ಲಿ ಉಳಿದುಕೊಂಡ. (ಕೊಲೊ. 4:10) ಇಂಥ ನಿಷ್ಠಾವಂತ ಸ್ನೇಹಿತನಿಂದ ಪೌಲನಿಗೆ ಉತ್ತೇಜನ, ಸಾಂತ್ವನ ಖಂಡಿತ ಸಿಕ್ಕಿರುತ್ತದೆ.

5. ಜ್ಞಾನೋಕ್ತಿ 17:17 ರ ಪ್ರಕಾರ ನಾವು ನಿಷ್ಠಾವಂತ ಸ್ನೇಹಿತರಾಗಿರಬೇಕೆಂದ್ರೆ ಏನು ಮಾಡಬೇಕು?

5 ನಾವು ಸಹ ಅರಿಸ್ತಾರ್ಕನಂತೆ ಇರಬೇಕು. ನಮ್ಮ ಸಹೋದರ-ಸಹೋದರಿಯರು ಚೆನ್ನಾಗಿದ್ದಾಗ ಮಾತ್ರ ಅಲ್ಲ, ಅವ್ರು “ಆಪತ್ತಿನಲ್ಲಿ” ಅಥವಾ ಕಷ್ಟದಲ್ಲಿ ಇದ್ದಾಗಲೂ ನಾವು ಅವರ ಜೊತೆ ಇರಬೇಕು. (ಜ್ಞಾನೋಕ್ತಿ 17:17 ಓದಿ.) ನಮ್ಮ ಸಹೋದರ-ಸಹೋದರಿಯರ ಕಷ್ಟ ತೀರಿದ ಮೇಲೂ ಅವ್ರಿಗೆ ಸಾಂತ್ವನ ಬೇಕಾಗಬಹುದು. ಫಲೀನ * ಎಂಬ ಸಹೋದರಿಯ ಹೆತ್ತವರಿಬ್ಬರೂ ಕ್ಯಾನ್ಸರ್‌ನಿಂದಾಗಿ ಮೂರು ತಿಂಗಳೊಳಗೆ ತೀರಿಕೊಂಡರು. ಆಕೆ ಹೀಗೆ ಹೇಳ್ತಾಳೆ: “ಕಷ್ಟಗಳು ಬಂದಾಗ ಅದರಿಂದಾಗುವ ನೋವು ತುಂಬ ಸಮಯ ಇರುತ್ತೆ ಅಂತ ನನಗನಿಸುತ್ತೆ. ನನ್ನ ಹೆತ್ತವರು ತೀರಿ ಹೋಗಿ ತುಂಬ ಸಮಯ ಆಗಿದ್ದರೂ ನಾನಿನ್ನೂ ನೋವಲ್ಲಿದ್ದೇನೆ ಅನ್ನೋದನ್ನ ನನ್ನ ಸ್ನೇಹಿತರು ನೆನಪಲ್ಲಿಟ್ಟುಕೊಂಡಿದ್ದಾರೆ. ಅದಕ್ಕೆ ನಾನು ತುಂಬ ಕೃತಜ್ಞಳಾಗಿದ್ದೇನೆ.”

6. ನಾವು ನಿಷ್ಠಾವಂತರಾಗಿದ್ದರೆ ಏನು ಮಾಡ್ತೇವೆ?

6 ನಿಷ್ಠಾವಂತ ಸ್ನೇಹಿತರು ತಮ್ಮ ಸಹೋದರ-ಸಹೋದರಿಯರಿಗೆ ಸಹಾಯ ಮಾಡಲಿಕ್ಕಾಗಿ ತ್ಯಾಗಗಳನ್ನು ಮಾಡ್ತಾರೆ. ಇದಕ್ಕೆ ಒಂದು ಉದಾಹರಣೆ ನೋಡೋಣ. ಪೀಟರ್‌ ಎಂಬ ಸಹೋದರನಿಗೆ ತುಂಬ ಗಂಭೀರ ಕಾಯಿಲೆ ಇದೆ ಎಂದು ಗೊತ್ತಾಯಿತು. ಆಗ ಏನಾಯಿತೆಂದು ಆತನ ಹೆಂಡತಿ ಕ್ಯಾತರಿನ್‌ ಹೇಳುತ್ತಾಳೆ: “ನಾವು ಚೆಕ್‌ಅಪ್‌ಗೆ ಹೋಗಬೇಕಿದ್ದಾಗ ನಮ್ಮ ಸಭೆಯಲ್ಲಿರುವ ಒಬ್ಬ ದಂಪತಿ ನಮ್ಮನ್ನು ಅಲ್ಲಿಗೆ ಕರಕೊಂಡು ಹೋದ್ರು. ಪೀಟರ್‌ಗೆ ಕಾಯಿಲೆ ಇರೋದರ ಬಗ್ಗೆ ನಮಗೆ ಆಗಲೇ ಗೊತ್ತಾಗಿದ್ದು. ಈ ವಿಷಯ ಗೊತ್ತಾದ ತಕ್ಷಣ ಅವ್ರು ಈ ಕಷ್ಟದ ಸಮಯದಲ್ಲಿ ನಮ್ಮ ಜೊತೆ ಇರಬೇಕಂತ ನಿರ್ಣಯಿಸಿದರು. ನಮಗೆ ಅಗತ್ಯವಿದ್ದಾಗೆಲ್ಲಾ ಸಹಾಯ ಮಾಡಿದ್ರು.” ಕಷ್ಟದಲ್ಲಿ ಕೈಹಿಡಿಯೋ ಇಂಥ ಸ್ನೇಹಿತರಿದ್ರೆ ಯಾವುದೇ ಸಮಸ್ಯೆ ಬಂದ್ರೂ ಎದುರಿಸೋಕಾಗುತ್ತೆ.

ನಂಬಿಗಸ್ತ ತುಖಿಕ

ಬೇರೆಯವ್ರಿಗೆ ಸಮಸ್ಯೆಗಳು ಎದುರಾದಾಗ ನಾವು ತುಖಿಕನಂತೆ ನಂಬಿಗಸ್ತ ಸ್ನೇಹಿತರಾಗಬಹುದು (ಪ್ಯಾರ 7-9 ನೋಡಿ) *

7-8. ತುಖಿಕನು ನಂಬಿಗಸ್ತ ವ್ಯಕ್ತಿಯಾಗಿದ್ದನು ಅಂತ ಕೊಲೊಸ್ಸೆ 4:7-9 ನೇ ವಚನಗಳಿಂದ ಹೇಗೆ ಗೊತ್ತಾಗುತ್ತದೆ?

7 ರೋಮನ್ನರಿಗೆ ಸೇರಿದ ಏಷ್ಯಾ ಪ್ರಾಂತದ ಕ್ರೈಸ್ತನಾಗಿದ್ದ ತುಖಿಕನು ಪೌಲನಿಗೆ ನಂಬಿಗಸ್ತ ಸಂಗಡಿಗನಾಗಿದ್ದನು. (ಅ. ಕಾ. 20:4) ಸುಮಾರು ಕ್ರಿ.ಶ. 55 ರಲ್ಲಿ ಯೂದಾಯದ ಕ್ರೈಸ್ತರ ಪರಿಹಾರಕ್ಕಾಗಿ ಹಣ ಸಂಗ್ರಹಣೆ ಮಾಡುವ ಏರ್ಪಾಡನ್ನು ಪೌಲನು ಮಾಡಿದನು. ಈ ಪ್ರಾಮುಖ್ಯ ಕೆಲಸಕ್ಕಾಗಿ ಪೌಲನು ತುಖಿಕನ ಸಹಾಯವನ್ನು ಪಡೆದುಕೊಂಡಿರಬೇಕು. (2 ಕೊರಿಂ. 8:18-20) ನಂತರ ಪೌಲನು ರೋಮ್‌ನಲ್ಲಿ ಮೊದಲ ಬಾರಿಗೆ ಜೈಲಿಗೆ ಹೋದಾಗ ತುಖಿಕನು ಪೌಲನ ಸಂದೇಶಗಳನ್ನು ಸಹೋದರರಿಗೆ ಕಳುಹಿಸುವ ಕೆಲಸ ಮಾಡಿದನು. ಅವನು ಏಷ್ಯಾದ ಸಭೆಗಳಿಗೆ ಪೌಲನ ಪತ್ರಗಳನ್ನು ಮತ್ತು ಉತ್ತೇಜನದ ಮಾತುಗಳನ್ನು ತಲಪಿಸಿದನು.—ಕೊಲೊ. 4:7-9.

8 ತುಖಿಕನು ಪೌಲನಿಗೆ ಯಾವಾಗಲೂ ನಂಬಿಗಸ್ತನಾಗಿಯೇ ಇದ್ದನು. (ತೀತ 3:12) ಆಗ ಇದ್ದ ಕ್ರೈಸ್ತರೆಲ್ಲರೂ ತುಖಿಕನ ತರ ಇರ್ಲಿಲ್ಲ. ಸುಮಾರು ಕ್ರಿ.ಶ. 65 ರಲ್ಲಿ ಪೌಲನನ್ನು ಎರಡನೇ ಬಾರಿ ಜೈಲಿಗೆ ಹಾಕಿದಾಗ ಏಷ್ಯಾ ಸೀಮೆಯಲ್ಲಿದ್ದ ಅನೇಕ ಕ್ರೈಸ್ತರು ತನ್ನನ್ನು ಬಿಟ್ಟು ಹೋದರೆಂದು ಪೌಲನು ಬರೆದನು. ಬಹುಶಃ ಅವರೆಲ್ಲರೂ ವಿರೋಧಿಗಳಿಗೆ ಹೆದರಿ ಆತನನ್ನು ಬಿಟ್ಟುಹೋಗಿದ್ದಿರಬಹುದು. (2 ತಿಮೊ. 1:15) ಆದ್ರೆ ತುಖಿಕನು ಪೌಲನನ್ನು ಬಿಟ್ಟು ಹೋಗ್ಲಿಲ್ಲ. ಹಾಗಾಗಿ, ಅವನಿಗೆ ಪೌಲನು ಇನ್ನೊಂದು ನೇಮಕ ಕೊಟ್ನು. (2 ತಿಮೊ. 4:12) ತುಖಿಕನಂಥ ಒಳ್ಳೇ ಸ್ನೇಹಿತನು ಸಿಕ್ಕಿದ್ದಕ್ಕೆ ಪೌಲನಿಗೆ ಖಂಡಿತ ಖುಷಿಯಾಗಿರುತ್ತೆ.

9. ತುಖಿಕನನ್ನು ನಾವು ಹೇಗೆ ಅನುಕರಿಸಬಹುದು?

9 ನಾವೂ ತುಖಿಕನ ತರ ನಂಬಿಗಸ್ತರಾಗಿರಬೇಕು. ಉದಾಹರಣೆಗೆ, ಕಷ್ಟದಲ್ಲಿರೋ ನಮ್ಮ ಸಹೋದರ-ಸಹೋದರಿಯರಿಗೆ ನಾವು ಸಹಾಯ ಮಾಡ್ತೀವಂತ ಹೇಳೋದಷ್ಟೇ ಅಲ್ಲ, ಅವ್ರಿಗೆ ನಿಜವಾಗ್ಲೂ ಯಾವುದ್ರ ಅಗತ್ಯ ಇದ್ಯೋ ಆ ಸಹಾಯವನ್ನು ನಾವು ಮಾಡಬೇಕು. (ಮತ್ತಾ. 5:37; ಲೂಕ 16:10) ನಾವು ಖಂಡಿತ ಸಹಾಯ ಮಾಡ್ತೇವೆ ಅಂತ ಕಷ್ಟದಲ್ಲಿರುವವ್ರಿಗೆ ಗೊತ್ತಿದ್ದರೆ ಅವ್ರು ತುಂಬ ಸಮಾಧಾನದಿಂದ ಇರ್ತಾರೆ. ಯಾಕೆಂದು ಒಬ್ಬ ಸಹೋದರಿ ಹೀಗೆ ಹೇಳ್ತಾಳೆ: “ಸಹಾಯ ಮಾಡ್ತೀನಂತ ಹೇಳಿದವರು ಸರಿಯಾದ ಸಮಯಕ್ಕೆ ಬರ್ತಾರಾ, ಕೊಟ್ಟ ಮಾತಿನ ಪ್ರಕಾರ ನಡ್ಕೋತಾರಾ ಅನ್ನೋ ಚಿಂತೆ ನಿಮಗಿರಲ್ಲ.”

10. ಜ್ಞಾನೋಕ್ತಿ 18:24 ರ ಪ್ರಕಾರ, ಕಷ್ಟ ಮತ್ತು ನಿರುತ್ತೇಜನದಲ್ಲಿ ಇರುವವರಿಗೆ ಯಾರು ಸಹಾಯ ಮಾಡಕ್ಕಾಗುತ್ತೆ?

10 ಯಾರಿಗಾದ್ರೂ ಕಷ್ಟ, ನಿರುತ್ತೇಜನ ಇದ್ದಾಗ ಅವ್ರು ಪೂರ್ತಿ ನಂಬುವಂಥ ಸ್ನೇಹಿತನ ಹತ್ರ ಮುಚ್ಚುಮರೆ ಇಲ್ಲದೆ ತಮ್ಮ ಕಷ್ಟನೆಲ್ಲಾ ಹೇಳಿಕೊಂಡ್ರೆ ಸಾಂತ್ವನ ಸಿಗುತ್ತೆ. (ಜ್ಞಾನೋಕ್ತಿ 18:24 ಓದಿ.) ಬಿಜಯ್‌ ಎಂಬ ಸಹೋದರನಿಗೆ ತನ್ನ ಮಗ ಬಹಿಷ್ಕಾರ ಆದಾಗ ತುಂಬ ಬೇಜಾರಾಯಿತು. ಅವನು ಹೇಳಿದ್ದು: “ನಾನು ತುಂಬ ನಂಬುವಂಥ ಒಬ್ಬ ಆಪ್ತ ವ್ಯಕ್ತಿ ಹತ್ರ ನನ್ನೆಲ್ಲಾ ಭಾವನೆಗಳನ್ನು ಹೇಳ್ಕೋಬೇಕು ಅಂತ ನನಗನಿಸಿತು.” ಕಾರ್ಲೋಸ್‌ ಎಂಬ ಸಹೋದರ ಒಂದು ತಪ್ಪು ಮಾಡಿ, ಸಭೆಯಲ್ಲಿ ತನಗಿದ್ದ ಸುಯೋಗವನ್ನು ಕಳಕೊಂಡನು. ಅವ್ನು ಹೀಗೆ ಹೇಳುತ್ತಾನೆ: “ನನ್ನ ಭಾವನೆಗಳನ್ನೆಲ್ಲಾ ಮುಕ್ತವಾಗಿ ಹೇಳಿಕೊಳ್ಳುವಾಗ ಏನೂ ತಪ್ಪು ತಿಳಿದುಕೊಳ್ಳದೆ ಹೇಳಿದ್ದನ್ನೆಲ್ಲಾ ಗುಟ್ಟಾಗಿ ಇಟ್ಟುಕೊಳ್ಳುವಂಥ ಒಬ್ಬ ಸ್ನೇಹಿತನ ಅಗತ್ಯ ನನಗಿತ್ತು.” ಅಂಥ ಸ್ನೇಹಿತರು ಹಿರಿಯರೇ ಆಗಿದ್ದಾರೆ ಅಂತ ಕಾರ್ಲೋಸ್‌ಗೆ ಅರ್ಥ ಆಯಿತು. ಅವನಿಗಿದ್ದ ಸಮಸ್ಯೆಯಿಂದ ಹೊರಬರಲು ಹಿರಿಯರು ಸಹಾಯ ಮಾಡಿದ್ರು. ಅಷ್ಟೇ ಅಲ್ಲ, ಹಿರಿಯರು ತಾನು ಹೇಳಿದ್ದನ್ನೆಲ್ಲಾ ಬೇರೆ ಯಾರಿಗೂ ಹೇಳದೆ ಗುಟ್ಟಾಗಿಡುತ್ತಾರೆ ಅನ್ನೋದು ಅವನಿಗೆ ಸಮಾಧಾನ ಕೊಡ್ತು.

11. ನಾವು ಹೇಗೆ ಒಬ್ಬ ನಂಬಿಗಸ್ತ, ಆಪ್ತ ಸ್ನೇಹಿತ ಆಗಬಹುದು?

11 ನೀವೊಬ್ಬ ನಂಬಿಗಸ್ತ, ಆಪ್ತ ಸ್ನೇಹಿತ ಆಗಬೇಕಂದ್ರೆ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಜೆನ್ನಿಯ ಗಂಡ ಅವಳನ್ನು ಬಿಟ್ಟು ಹೋದಾಗ ಅವಳು ತನ್ನ ಭಾವನೆಗಳನ್ನೆಲ್ಲಾ ತನ್ನ ಆಪ್ತ ಸ್ನೇಹಿತರ ಹತ್ರ ಹೇಳಿಕೊಂಡು ಸಾಂತ್ವನ ಪಡಕೊಂಡಳು. “ನಾನು ಪದೇ-ಪದೇ ಹೇಳಿದ್ದನ್ನೇ ಹೇಳುವಾಗ ನನ್ನ ಸ್ನೇಹಿತರು ತಾಳ್ಮೆಯಿಂದ ಕೇಳಿಸಿಕೊಂಡ್ರು” ಅಂತ ಅವಳು ಹೇಳುತ್ತಾಳೆ. ನೀವೂ ನಿಮ್ಮ ಸ್ನೇಹಿತರು ಹೇಳೋದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವಾಗ ಒಬ್ಬ ಒಳ್ಳೇ ಸ್ನೇಹಿತರಾಗುತ್ತೀರಿ.

ಸಹಾಯ ಮಾಡಲು ಸದಾ ಸಿದ್ಧನಿದ್ದ ಮಾರ್ಕ

ಮಾರ್ಕನು ಮಾಡಿದ ಸಹಾಯದಿಂದ ಪೌಲನಿಗೆ ತಾಳಿಕೊಳ್ಳಲು ಸಾಧ್ಯವಾಯಿತು. ಅದೇ ರೀತಿ ನಾವು ಸಹ ಏನಾದ್ರೂ ದುರಂತ ನಡೆದಾಗ ನಮ್ಮ ಸಹೋದರರಿಗೆ ಸಹಾಯ ಮಾಡಬಹುದು (ಪ್ಯಾರ 12-14 ನೋಡಿ) *

12. (ಎ) ಮಾರ್ಕ ಯಾರು? (ಬಿ) ಅವನು ಬೇರೆಯವರಿಗೆ ಸಹಾಯ ಮಾಡಲು ತನಗೆ ಮನಸ್ಸಿದೆ ಎಂದು ಹೇಗೆ ತೋರಿಸಿಕೊಟ್ಟನು?

12 ಮಾರ್ಕ ಯೆರೂಸಲೇಮಿನ ಯೆಹೂದಿ ಕ್ರೈಸ್ತನಾಗಿದ್ದನು. ಅವನಿಗೆ ಯೋಹಾನ ಅನ್ನೋ ಹೆಸರೂ ಇತ್ತು. ಅವನ ಸಂಬಂಧಿಕನಾಗಿದ್ದ ಬಾರ್ನಬನು ಎಲ್ರಿಗೂ ಪರಿಚಯವಿದ್ದ ಮಿಷನರಿಯಾಗಿದ್ದನು. (ಕೊಲೊ. 4:10) ಬಹುಶಃ ಮಾರ್ಕನು ಶ್ರೀಮಂತ ಕುಟುಂಬದಿಂದ ಬಂದವನಾಗಿದ್ದನು. ಆದ್ರೂ ಅವನಿಗೆ ಹಣ-ಆಸ್ತಿ ಮುಖ್ಯ ಆಗಿರಲಿಲ್ಲ. ಅವನು ತನ್ನ ಜೀವನ ಪೂರ್ತಿ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಸಿದ್ಧನಿದ್ದನು ಮತ್ತು ಅದು ಅವನಿಗೆ ಖುಷಿ ಕೊಡ್ತಿತ್ತು. ಉದಾಹರಣೆಗೆ ಅಪೊಸ್ತಲ ಪೌಲ ಮತ್ತು ಪೇತ್ರ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುವುದಕ್ಕೆ ಬೇಕಾದ ಸಹಾಯವನ್ನು ಮಾರ್ಕನು ಮಾಡಿದನು. ಬಹುಶಃ ಅವ್ರಿಗಾಗಿ ಅವನು ಆಹಾರವನ್ನು ಖರೀದಿಸಿರಬೇಕು, ಅವ್ರು ಉಳುಕೊಳ್ಳೋಕೆ ಸ್ಥಳವನ್ನು ಹುಡುಕಿಕೊಟ್ಟಿರಬೇಕು ಮತ್ತು ಇನ್ನಿತರ ಸಹಾಯವನ್ನೂ ಮಾಡಿರಬೇಕು. (ಅ. ಕಾ. 13:2-5; 1 ಪೇತ್ರ 5:13) ಮಾರ್ಕನು “ದೇವರ ರಾಜ್ಯಕ್ಕಾಗಿ ನನ್ನ ಜೊತೆಕೆಲಸಗಾರ” ಮತ್ತು “ಬಲವರ್ಧಕ ಸಹಾಯ” ಆಗಿದ್ದಾನೆ ಎಂದು ಪೌಲನು ಹೇಳಿದನು.—ಕೊಲೊ. 4:10, 11.

13. ಮಾರ್ಕನು ಮಾಡಿದ ಸಹಾಯಕ್ಕಾಗಿ ಪೌಲನು ತುಂಬ ಕೃತಜ್ಞನಾಗಿದ್ದನು ಎಂದು 2 ತಿಮೊಥೆಯ 4:11 ರಿಂದ ಹೇಗೆ ಗೊತ್ತಾಗುತ್ತದೆ?

13 ಮಾರ್ಕನು ಪೌಲನ ಆಪ್ತ ಸ್ನೇಹಿತರಲ್ಲಿ ಒಬ್ಬನಾಗಿದ್ದನು. ಪೌಲನು ಕ್ರಿ.ಶ. 65 ರಲ್ಲಿ ಕೊನೆಯ ಬಾರಿ ರೋಮ್‌ನ ಜೈಲಿನಲ್ಲಿದ್ದಾಗ ತಿಮೊಥೆಯನಿಗೆ ಬರೆದ ಎರಡನೇ ಪತ್ರದಿಂದ ಇದು ಗೊತ್ತಾಗುತ್ತದೆ. ಆ ಪತ್ರದಲ್ಲಿ ಪೌಲನು ತಿಮೊಥೆಯನಿಗೆ ಮಾರ್ಕನನ್ನು ಸಹ ಜೊತೆಯಲ್ಲಿ ಕರಕೊಂಡು ಬರುವಂತೆ ಹೇಳಿದ್ದಾನೆ. (2 ತಿಮೊ. 4:11) ಮಾರ್ಕನು ಮಾಡಿದ ಸಹಾಯಕ್ಕಾಗಿ ಪೌಲನು ತುಂಬ ಕೃತಜ್ಞನಾಗಿದ್ದನು, ಅದನ್ನು ಮಾನ್ಯಮಾಡುತ್ತಿದ್ದನು. ಆದ್ದರಿಂದಲೇ, ತನ್ನ ಕೊನೆ ದಿನಗಳಲ್ಲಿ ಮಾರ್ಕನು ತನ್ನ ಜೊತೆಗಿರಬೇಕು ಅಂತ ಪೌಲ ಬಯಸಿದನು. ಈ ಸಮಯದಲ್ಲೂ ಮಾರ್ಕನು ಪೌಲನಿಗೆ ಅನೇಕ ಸಹಾಯಗಳನ್ನು ಮಾಡಿದನು. ಪೌಲನಿಗೆ ಆಹಾರವನ್ನು ಮತ್ತು ಬರೆಯಲು ಬೇಕಾದ ವಸ್ತುಗಳನ್ನು ಕೊಡುತ್ತಿದ್ದಿರಬೇಕು. ಅವನು ಕೊಟ್ಟ ಉತ್ತೇಜನ ಮತ್ತು ಬೆಂಬಲ ಪೌಲನಿಗೆ ತನ್ನ ಜೀವನದ ಕೊನೇ ದಿನಗಳಲ್ಲಿ ಅಂದ್ರೆ ಮರಣದ ವರೆಗೂ ತಾಳಿಕೊಳ್ಳಲು ಸಹಾಯ ಮಾಡಿರಬೇಕು.

14-15. ಬೇರೆಯವ್ರಿಗೆ ಸಹಾಯ ಮಾಡೋದರ ಬಗ್ಗೆ ಮತ್ತಾಯ 7:12 ರಿಂದ ನಾವೇನು ಕಲೀಬಹುದು?

14 ಮತ್ತಾಯ 7:12 ಓದಿ. ನಮಗೆ ಕಷ್ಟ ಬಂದಾಗ ಯಾರಾದ್ರೂ ಸಹಾಯ ಮಾಡಿದ್ರೆ ಅದನ್ನು ನಾವು ಯಾವತ್ತಿಗೂ ಮರೆಯಲ್ಲ. ಅಪಘಾತದಲ್ಲಿ ತನ್ನ ತಂದೆಯನ್ನು ಕಳಕೊಂಡಿರುವ ರಾಯನ್‌ ಹೀಗೆ ಹೇಳುತ್ತಾನೆ: “ಕಷ್ಟ ಬಂದಾಗ ದಿನನಿತ್ಯದ ಕೆಲಸನೂ ಸರಿಯಾಗಿ ಮಾಡೋಕಾಗಲ್ಲ. ಅಂಥ ಸಮಯದಲ್ಲಿ ನಮಗೆ ಬೇಕಾದ ಸಹಾಯವನ್ನು ಯಾರಾದ್ರೂ ಮಾಡಿದ್ರೆ, ಅದು ಚಿಕ್ಕದಾಗಿದ್ರೂ ಪರವಾಗಿಲ್ಲ, ತುಂಬನೇ ಸಾಂತ್ವನ ಸಿಗುತ್ತೆ.”

15 ಬೇರೆಯವ್ರ ಪರಿಸ್ಥಿತಿಯನ್ನು ನಾವು ಸ್ವಲ್ಪ ಗಮನಿಸಿದ್ರೆ ಅವರಿಗೆ ನಾವು ಯಾವ ಸಹಾಯ ಮಾಡಬಹುದು ಅಂತ ಗೊತ್ತಾಗುತ್ತದೆ. ಉದಾಹರಣೆಗೆ, ಮುಂಚೆ ತಿಳಿಸಲಾದ ಪೀಟರ್‌ ಮತ್ತು ಕ್ಯಾತರಿನ್‌ ಪ್ರತಿ ಬಾರಿ ಆಸ್ಪತ್ರೆಗೆ ಹೋಗಲು ಒಬ್ಬ ಸಹೋದರಿ ಸಹಾಯ ಮಾಡಿದಳು. ಪೀಟರ್‌ಗಾಗಲಿ, ಕ್ಯಾತರಿನ್‌ಗಾಗಲಿ ಡ್ರೈವಿಂಗ್‌ ಮಾಡಲು ಆಗ್ತಿರಲಿಲ್ಲ. ಆದ್ದರಿಂದ ಸಭೆಯಲ್ಲಿದ್ದ ಸಹೋದರ-ಸಹೋದರಿಯರಲ್ಲಿ ಯಾರ್ಯಾರು ಯಾವ್ಯಾವ ದಿನ ಅವರಿಬ್ಬರ ಜೊತೆ ಆಸ್ಪತ್ರೆಗೆ ಹೋಗಬೇಕೆಂದು ಆ ಸಹೋದರಿ ಶೆಡ್ಯೂಲ್‌ ಮಾಡಿದಳು. ಇದ್ರಿಂದ ಅವರಿಬ್ಬರಿಗೆ ಸಹಾಯ ಆಯ್ತಾ? ಕ್ಯಾತರಿನ್‌ ಹೀಗೆ ಹೇಳುತ್ತಾಳೆ: “ನಮ್ಮ ಹೆಗಲ ಮೇಲಿದ್ದ ದೊಡ್ಡ ಭಾರ ಇಳಿದಂತೆ ನಮಗನಿಸಿತು.” ನೀವು ಮಾಡುವ ಸಹಾಯ ಚಿಕ್ಕದಿದ್ದರೂ ಅದ್ರಿಂದ ಸಹಾಯ ಪಡಕೊಂಡವರಿಗೆ ಎಷ್ಟೋ ಸಾಂತ್ವನ ಸಿಗುತ್ತೆ ಅನ್ನೋದನ್ನು ಮರೆಯಬೇಡಿ.

16. ಸಹಾಯ, ಸಾಂತ್ವನ ನೀಡೋದರ ಬಗ್ಗೆ ಮಾರ್ಕನಿಂದ ನಾವೇನು ಕಲಿಯಬಹುದು?

16 ಮಾರ್ಕನು ಯಾವಾಗಲೂ ಕ್ರೈಸ್ತ ಚಟುವಟಿಕೆಗಳಲ್ಲಿ ಮಗ್ನನಾಗಿದ್ದನು. ಅವನಿಗೆ ದೇವರ ಸೇವೆಯಲ್ಲಿ ಅನೇಕ ದೊಡ್ಡ ಜವಾಬ್ದಾರಿಗಳಿದ್ದವು. ಅದರಲ್ಲಿ ತನ್ನ ಹೆಸರಿನ ಸುವಾರ್ತಾ ಪುಸ್ತಕವನ್ನು ಬರೆಯುವುದೂ ಸೇರಿತ್ತು. ಆದರೂ ಅವನು ಪೌಲನಿಗೆ ಸಹಾಯ ಮಾಡಲು, ಸಾಂತ್ವನ ಕೊಡಲು ಸಮಯ ಮಾಡಿಕೊಂಡನು. ಇದರಿಂದಾಗಿ ಪೌಲನಿಗೆ, ತಾನು ಯಾವಾಗ ಬೇಕಾದರೂ ಮಾರ್ಕನ ಹತ್ತಿರ ಸಹಾಯ ಕೇಳಬಹುದು ಅನ್ನೋ ಭರವಸೆ ಸಿಕ್ಕಿತು. ಅಂಜಲಿ ಎಂಬ ಸಹೋದರಿಯ ಉದಾಹರಣೆ ನೋಡಿ. ಅವಳ ಕುಟುಂಬದಲ್ಲಿ ಒಬ್ಬರ ಕೊಲೆಯಾಯಿತು. ಆಗ ಯಾರೆಲ್ಲಾ ಅವಳಿಗೆ ಸಾಂತ್ವನ, ಸಹಾಯ ಕೊಡಲು ಮುಂದೆ ಬಂದರೋ ಅವರನ್ನೆಲ್ಲಾ ಅವಳು ತುಂಬ ಮೆಚ್ಚಿಕೊಳ್ಳುತ್ತಾಳೆ. “ಯಾರು ನಿಜವಾಗಿಯೂ ಸಹಾಯ ಮಾಡೋಕೆ ಇಷ್ಟಪಡ್ತಾರೋ ಅವ್ರ ಹತ್ರ ಏನು ಬೇಕಾದ್ರೂ ಹೇಳ್ಕೋಬಹುದು. ಅವರು ನನಗೆ ಸಹಾಯ ಮಾಡೋಕೆ ನಿಜವಾಗಿಯೂ ಇಷ್ಟಪಡ್ತಾರೆ, ಹಿಂದೆ-ಮುಂದೆ ನೋಡಲ್ಲ ಅಂತ ಅವರನ್ನು ನೋಡಿದಾಗಲೇ ಗೊತ್ತಾಗುತ್ತೆ” ಎಂದು ಅವಳು ಹೇಳುತ್ತಾಳೆ. ನಾವು ಸ್ವತಃ ಹೀಗೆ ಕೇಳಿಕೊಳ್ಳಬೇಕು: ‘ನಮ್ಮ ಸಹೋದರ-ಸಹೋದರಿಯರಿಗೆ ಸಹಾಯ ಮಾಡೋಕೆ, ಸಾಂತ್ವನ ಕೊಡೋಕೆ ನಾನು ಸಿದ್ಧನಿದ್ದೀನಿ ಅಂತ ಎಲ್ಲರಿಗೂ ಅನ್ಸುತ್ತಾ?’

ಸಹಾಯ ಮಾಡಲು ಸದಾ ಸಿದ್ಧರಾಗಿರಿ

17. ಬೇರೆಯವ್ರಿಗೆ ಸಾಂತ್ವನ ಕೊಡಲು 2 ಕೊರಿಂಥ 1:3, 4 ನಮ್ಮನ್ನು ಹೇಗೆ ಉತ್ತೇಜಿಸುತ್ತದೆ?

17 ಸಹಾಯ, ಸಾಂತ್ವನದ ಅಗತ್ಯ ಇರುವ ಸಹೋದರ-ಸಹೋದರಿಯರನ್ನು ಹುಡುಕಲು ನಾವೇನು ಕಷ್ಟಪಡಬೇಕಾಗಿಲ್ಲ, ಅವರು ನಮ್ಮ ಅಕ್ಕ-ಪಕ್ಕದಲ್ಲೇ ಇರ್ತಾರೆ. ನಮಗೆ ಸಾಂತ್ವನ ಕೊಡೋಕೆ ಬೇರೆಯವ್ರು ಏನು ಹೇಳಿದ್ದರೋ ಅದನ್ನೇ ನಾವು ಇನ್ನೊಬ್ರಿಗೆ ಸಾಂತ್ವನ ಕೊಡುವಾಗಲೂ ಹೇಳಬಹುದು. ತನ್ನ ಅಜ್ಜಿಯನ್ನು ಕಳಕೊಂಡ ನಿಶಾ ಎಂಬ ಸಹೋದರಿ ಹೀಗೆ ಹೇಳುತ್ತಾಳೆ: “ಯೆಹೋವನು ನಮ್ಮ ಮೂಲಕ ಬೇರೆಯವ್ರಿಗೆ ಸಾಂತ್ವನ ಕೊಡುತ್ತಾನೆ. ಆದರೆ ಆತನು ಆ ರೀತಿ ನಮ್ಮನ್ನು ಉಪಯೋಗಿಸಿಕೊಳ್ಳೋಕೆ ನಮ್ಮನ್ನು ನಾವೇ ಬಿಟ್ಟುಕೊಡಬೇಕು.” (2 ಕೊರಿಂಥ 1:3, 4 ಓದಿ.) ಮುಂಚೆ ತಿಳಿಸಲಾದ ಫಲೀನ ಹೀಗೆ ಹೇಳ್ತಾಳೆ: “2 ಕೊರಿಂಥ 1:4 ರಲ್ಲಿರೋ ಮಾತು ನಿಜ. ಬೇರೆಯವ್ರು ನಮ್ಮನ್ನು ಸಂತೈಸೋಕೆ ಏನು ಮಾಡಿದ್ರೋ ಅದನ್ನೇ ನಾವು ಇನ್ನೊಬ್ಬರನ್ನು ಸಂತೈಸೋಕೂ ಮಾಡಬಹುದು.”

18. (ಎ) ಸಹಾಯ, ಸಾಂತ್ವನ ಕೊಡೋಕೆ ಕೆಲವ್ರು ಯಾಕೆ ಹಿಂಜರಿಯುತ್ತಾರೆ? (ಬಿ) ನಾವು ಹೇಗೆ ಬೇರೆಯವ್ರಿಗೆ ಚೆನ್ನಾಗಿ ಸಾಂತ್ವನ ಕೊಡಬಹುದು? ಉದಾಹರಣೆ ಕೊಡಿ.

18 ನಮಗೆ ಹಿಂಜರಿಕೆಯಾದರೂ ನಾವೇ ಮುಂದೆ ಹೋಗಿ ಸಹಾಯ ಮಾಡಬೇಕು. ಉದಾಹರಣೆಗೆ, ಯಾರಾದ್ರೂ ತುಂಬ ಕಷ್ಟದಲ್ಲಿರುವಾಗ ಅವ್ರಿಗೆ ಏನು ಹೇಳಬೇಕು, ಏನು ಮಾಡಬೇಕು ಅಂತ ಗೊತ್ತಾಗಲ್ಲ ಅನ್ನೋ ಭಯ ಇರಬಹುದು. ಪೌಲ್‌ ಎಂಬ ಹಿರಿಯನ ತಂದೆ ತೀರಿಹೋದಾಗ ಕೆಲವು ಸಹೋದರ-ಸಹೋದರಿಯರು ಬಂದು ಅವರಿಗೆ ಸಹಾಯ ಮಾಡಿದ್ರು. ಅದ್ರ ಬಗ್ಗೆ ಆ ಸಹೋದರ ಹೀಗೆ ಹೇಳುತ್ತಾನೆ: “ಅವ್ರಿಗೆ ನನ್ನತ್ರ ಬಂದು ಮಾತಾಡೋದು ಅಷ್ಟು ಸುಲಭ ಆಗಿರ್ಲಿಲ್ಲ. ಅವ್ರಿಗೆ ಏನು ಹೇಳ್ಬೇಕಂತ ಗೊತ್ತಾಗ್ತಿರ್ಲಿಲ್ಲ. ಆದ್ರೂ ನನಗೆ ಸಾಂತ್ವನ ಕೊಡಬೇಕು, ಬೆಂಬಲ ಕೊಡಬೇಕು ಅನ್ನೋ ಆಸೆ ಅವರಿಗಿತ್ತಲ್ಲ, ಅದು ನನಗೆ ತುಂಬ ಇಷ್ಟ ಆಯ್ತು.” ಭೂಕಂಪದಿಂದ ಪಾರಾದ ಟಾಜೋನ್‌ ಎಂಬ ಸಹೋದರ ಹೀಗೆ ಹೇಳುತ್ತಾನೆ: “ಭೂಕಂಪದ ನಂತ್ರ ಜನ್ರು ನನಗೆ ಬರೆದ ಪ್ರತಿಯೊಂದು ಮಾತು ಈಗ ನೆನಪಿಲ್ಲ. ಆದ್ರೆ ಅವ್ರು ನಾನು ಸುರಕ್ಷಿತವಾಗಿದ್ದೇನಾ ಅಂತ ವಿಚಾರಿಸುತ್ತಿದ್ದದ್ದು ನೆನಪಿದೆ.” ನಾವು ಬೇರೆಯವ್ರಿಗೆ ಚೆನ್ನಾಗಿ ಸಾಂತ್ವನ ಕೊಡಬೇಕೆಂದ್ರೆ ನಮಗೆ ಅವ್ರ ಬಗ್ಗೆ ಕಾಳಜಿ ಇದೆ ಅಂತ ತೋರಿಸಿಕೊಡಬೇಕು.

19. ಬೇರೆಯವ್ರಿಗೆ ಸಹಾಯ, ಸಾಂತ್ವನ ನೀಡಲು ನೀವು ಯಾಕೆ ದೃಢನಿರ್ಧಾರ ಮಾಡಿದ್ದೀರಿ?

19 ಈ ಲೋಕದ ಅಂತ್ಯ ಇನ್ನೂ ಹತ್ರ ಆಗ್ತಾ ಹೋದ ಹಾಗೆ ಲೋಕದ ಪರಿಸ್ಥಿತಿ ಹಾಳಾಗ್ತಾ ಹೋಗುತ್ತೆ, ನಮ್ಮ ಜೀವನನೂ ತುಂಬ ಕಷ್ಟ ಆಗ್ತಾ ಹೋಗುತ್ತೆ. (2 ತಿಮೊ. 3:13) ನಾವು ಅಪರಿಪೂರ್ಣರಾಗಿರೋದ್ರಿಂದ, ಪದೇ-ಪದೇ ತಪ್ಪು ಮಾಡೋದ್ರಿಂದ ನಮಗೆ ಯಾವಾಗಲೂ ಸಾಂತ್ವನ ಬೇಕು. ಜೀವನ ಪೂರ್ತಿ ನಂಬಿಗಸ್ತನಾಗಿದ್ದು ತಾಳಿಕೊಳ್ಳೋಕೆ ಅಪೊಸ್ತಲ ಪೌಲನಿಗೆ ಸಹಾಯ ಮಾಡಿದ ಒಂದು ವಿಷಯ ಏನಂದ್ರೆ, ಜೊತೆಕ್ರೈಸ್ತರು ಕೊಟ್ಟ ಸಹಾಯ ಮತ್ತು ಸಾಂತ್ವನ. ಹಾಗಾಗಿ ನಾವು ಅರಿಸ್ತಾರ್ಕನ ತರ ನಿಷ್ಠರಾಗಿಯೂ ತುಖಿಕನ ತರ ನಂಬಿಗಸ್ತರಾಗಿಯೂ ಮಾರ್ಕನ ತರ ಸಹಾಯ ಮಾಡೋಕೆ ಸದಾ ಸಿದ್ಧರಾಗಿಯೂ ಇರೋಣ. ಹೀಗೆ ಮಾಡಿದ್ರೆ ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡೋಕೆ ನಮ್ಮ ಸಹೋದರ-ಸಹೋದರಿಯರಿಗೆ ಸಹಾಯ ಮಾಡುತ್ತೇವೆ.—1 ಥೆಸ. 3:2, 3.

^ ಪ್ಯಾರ. 5 ಅಪೊಸ್ತಲ ಪೌಲನು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದನು. ಆ ಸಮಯದಲ್ಲಿ ಕೆಲವು ಸಹೋದರರು ಆತನಿಗೆ ತುಂಬನೇ ಸಹಾಯ ಮಾಡಿದರು, ಸಾಂತ್ವನ ಕೊಟ್ಟರು. ಇದನ್ನು ಮಾಡಲು ಅವರಿಗೆ ಯಾವ ಗುಣಗಳು ಸಹಾಯ ಮಾಡಿದವು ಮತ್ತು ಕಷ್ಟದಲ್ಲಿರುವವರಿಗೆ ನಾವು ಸಹಾಯ ಮಾಡಲು ಇವರ ಉದಾಹರಣೆಗಳು ನಮಗೆ ಹೇಗೆ ಸಹಾಯ ಮಾಡುತ್ತವೆ ಎಂದು ನೋಡೋಣ.

^ ಪ್ಯಾರ. 5 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು

^ ಪ್ಯಾರ. 56 ಚಿತ್ರ ವಿವರಣೆ: ಹಡಗೊಡೆತ ಆದಾಗ ಅರಿಸ್ತಾರ್ಕ ಮತ್ತು ಪೌಲ ಇಬ್ರೂ ಒಟ್ಟಿಗಿದ್ದರು.

^ ಪ್ಯಾರ. 58 ಚಿತ್ರ ವಿವರಣೆ: ಪೌಲನು ಬರೆದ ಪತ್ರಗಳನ್ನು ಸಭೆಗಳಿಗೆ ಕೊಡುವ ನೇಮಕವನ್ನು ತುಖಿಕನಿಗೆ ಕೊಡಲಾಗಿತ್ತು.

^ ಪ್ಯಾರ. 60 ಚಿತ್ರ ವಿವರಣೆ: ಮಾರ್ಕನು ಪೌಲನಿಗೆ ಬೇಕಾದ ಸಹಾಯವನ್ನು ಮಾಡಿದನು.