ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 4

ಕೋಮಲ ಮಮತೆ ತೋರಿಸ್ತಾ ಇರಿ

ಕೋಮಲ ಮಮತೆ ತೋರಿಸ್ತಾ ಇರಿ

“ಒಡಹುಟ್ಟಿದವರ ತರ ಒಬ್ರಿಗೊಬ್ರು ಪ್ರೀತಿ, ಕೋಮಲ ಮಮತೆ ತೋರಿಸಿ.”—ರೋಮ. 12:10.

ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ

ಕಿರುನೋಟ *

1. ಇವತ್ತು ಕುಟುಂಬದಲ್ಲಿ ಎಂಥ ಪರಿಸ್ಥಿತಿ ಬಂದಿದೆ?

ಕೊನೇ ದಿನಗಳಲ್ಲಿ ಜನ್ರಿಗೆ ಕುಟುಂಬದವ್ರ ಮೇಲೆ ಪ್ರೀತಿ ಇರಲ್ಲ ಅಂತ ಬೈಬಲ್‌ ಮೊದಲೇ ತಿಳಿಸಿತ್ತು. (2 ತಿಮೊ. 3:1, 3) ಈ ಭವಿಷ್ಯವಾಣಿ ಇವತ್ತು ನೆರವೇರೋದನ್ನ ನಾವು ಕಣ್ಣಾರೆ ನೋಡ್ತಿದ್ದೇವೆ. ಉದಾಹರಣೆಗೆ ಅನೇಕ ಕುಟುಂಬಗಳು ಇವತ್ತು ಒಡೆದುಹೋಗಿವೆ. ಅನೇಕ ದಂಪತಿಗಳು ಒಬ್ಬರಿಗೊಬ್ರು ಹೊಂದಿಕೊಂಡು ಹೋಗೋಕಾಗದೆ ವಿಚ್ಛೇದನ ತಗೊಂಡಿದ್ದಾರೆ. ಒಬ್ರ ಮೇಲೊಬ್ರಿಗೆ ಪ್ರೀತಿ ಬದಲು ದ್ವೇಷ ಬಂದುಬಿಟ್ಟಿದೆ. ಅವ್ರ ಮಕ್ಕಳಿಗೆ ‘ನಮ್ಮನ್ನ ಯಾರೂ ಪ್ರೀತಿಸಲ್ಲ’ ಅನ್ನೋ ಭಾವನೆ ಇದೆ. ಇನ್ನು ಕೆಲವ್ರು ಒಂದೇ ಮನೆಯಲ್ಲಿದ್ರೂ ಅವ್ರ ಮಧ್ಯ ಪ್ರೀತಿ ಬಾಂಧವ್ಯ ಇಲ್ಲ. ಒಬ್ಬ ಕೌಟುಂಬಿಕ ಸಲಹೆಗಾರ ಹೀಗೆ ಹೇಳ್ತಾನೆ: “ಅಪ್ಪ ಅಮ್ಮ ಮಕ್ಕಳು ಹೀಗೆ ಎಲ್ರೂ ಒಬ್ರಿಗೊಬ್ರು ಸಮಯ ಕೊಡೋದೇ ಕಡಿಮೆ ಆಗಿದೆ. ಹೆಚ್ಚಿನ ಸಮಯ ಕಂಪ್ಯೂಟರ್‌, ಟ್ಯಾಬ್‌, ಸ್ಮಾರ್ಟ್‌ಫೋನ್‌ ನೋಡೋದ್ರಲ್ಲೇ ವಿಡಿಯೋ ಗೇಮ್‌ ಆಡೋದ್ರಲ್ಲೇ ಕಾಲ ಕಳೀತಾರೆ. ಅವ್ರು ಒಂದೇ ಸೂರಡಿಯಿದ್ರೂ ಒಬ್ಬರನ್ನೊಬ್ರು ನೋಡೋದೇ ತುಂಬ ಅಪರೂಪ.”

2-3. (ಎ) ರೋಮನ್ನರಿಗೆ 12:10 ಹೇಳೋ ಪ್ರಕಾರ ನಾವು ಯಾರಿಗೆ ಕೋಮಲ ಮಮತೆ ತೋರಿಸಬೇಕು? (ಬಿ) ಈ ಲೇಖನದಲ್ಲಿ ನಾವೇನನ್ನ ಕಲಿತೇವೆ?

2 ಪ್ರೀತಿನೇ ಇಲ್ಲದ ಈ ಲೋಕ ನಮ್ಮನ್ನ ರೂಪಿಸೋಕೆ ನಾವು ಬಿಡಬಾರದು. (ರೋಮ. 12:2) ನಾವು ಹೇಗೆ ನಮ್ಮ ಕುಟುಂಬದಲ್ಲಿ ಇರೋರಿಗೆ ಕೋಮಲ ಮಮತೆ ತೋರಿಸ್ತೀವೋ ಅದೇ ತರ ಸಭೆಯಲ್ಲಿರೋ ನಮ್ಮ ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸಬೇಕು. (ರೋಮನ್ನರಿಗೆ 12:10 ಓದಿ.) ಕೋಮಲ ಮಮತೆ ಅಂದರೇನು? ಕುಟುಂಬ ಸದಸ್ಯರ ಮಧ್ಯ ಇರೋ ಸ್ನೇಹ ಬಾಂಧವ್ಯವನ್ನ ವಿವರಿಸೋಕೆ ಈ ಪದವನ್ನ ಬಳಸಲಾಗುತ್ತೆ. ಇಂಥ ಪ್ರೀತಿಯನ್ನ ನಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ತೋರಿಸೋದಾದರೆ ಸಭೆಯಲ್ಲಿ ಶಾಂತಿ ಒಗ್ಗಟ್ಟು ಇರುತ್ತೆ. ಇಂಥ ಪ್ರೀತಿ ಸತ್ಯಾರಾಧನೆಯಲ್ಲಿ ಮುಖ್ಯ ಪಾತ್ರವಹಿಸುತ್ತೆ.—ಮೀಕ 2:12.

3 ನಾವೀಗ ಯೆಹೋವನ ಮತ್ತು ಆತನ ಕೆಲವು ಸೇವಕರ ಉದಾಹರಣೆಗಳನ್ನ ನೋಡೋಣ. ಇದು ನಮ್ಗೆ ಕೋಮಲ ಮಮತೆ ಬೆಳೆಸ್ಕೊಳ್ಳೋಕೆ ಮತ್ತು ಅದನ್ನ ಬೇರೆಯವ್ರಿಗೆ ತೋರಿಸೋಕೆ ಸಹಾಯಮಾಡುತ್ತೆ.

ಯೆಹೋವ “ಕೋಮಲ ಮಮತೆ ತೋರಿಸ್ತಾನೆ”

4. ದೇವರ ಪ್ರೀತಿ ಬಗ್ಗೆ ಯಾಕೋಬ 5:11 ಏನು ಹೇಳುತ್ತೆ?

4 ಬೈಬಲ್‌ನಲ್ಲಿ ಯೆಹೋವ ದೇವರ ಗುಣಗಳ ಬಗ್ಗೆ ಇದೆ. ಉದಾಹರಣೆಗೆ “ದೇವರು ಪ್ರೀತಿಯಾಗಿದ್ದಾನೆ” ಅಂತ ಅದು ಹೇಳುತ್ತೆ. (1 ಯೋಹಾ. 4:8) ಈ ಗುಣವೇ ನಮ್ಮನ್ನ ಆತನ ಕಡೆಗೆ ಸೆಳೆದಿರೋದು. ಯೆಹೋವ “ಕೋಮಲ ಮಮತೆ ತೋರಿಸ್ತಾನೆ” ಅಂತನೂ ಬೈಬಲ್‌ ಹೇಳುತ್ತೆ. (ಯಾಕೋಬ 5:11 ಓದಿ.) ಆತನಿಗೆ ನಮ್ಮೇಲೆ ಎಷ್ಟು ಪ್ರೀತಿಯಿದೆ ಅಂತ ಇದ್ರಿಂದ ಗೊತ್ತಾಗುತ್ತೆ.

5. (ಎ) ಯೆಹೋವ ಹೇಗೆ ಕರುಣೆ ತೋರಿಸ್ತಾನೆ? (ಬಿ) ನಾವು ಹೇಗೆ ಆತನನ್ನ ಅನುಕರಿಸ್ಬಹುದು?

5 ಯಾಕೋಬ 5:11 ಯೆಹೋವ ಕರುಣಾಮಯಿ ಅಂತನೂ ಹೇಳುತ್ತೆ. (ವಿಮೋ. 34:6) ಯೆಹೋವನು ಕರುಣೆ ತೋರಿಸೋ ಒಂದು ವಿಧ ಯಾವುದಂದ್ರೆ ನಮ್ಮ ತಪ್ಪುಗಳನ್ನ ಆತ ಕ್ಷಮಿಸ್ತಾನೆ. (ಕೀರ್ತ. 51:1) ಬೈಬಲ್‌ ಪ್ರಕಾರ, ಕರುಣೆ ತೋರಿಸೋ ವ್ಯಕ್ತಿ ಬೇರೆಯವರ ತಪ್ಪನ್ನ ಕ್ಷಮಿಸೋದ್ರ ಜೊತೆಗೆ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡೋಕೆ ಮುಂದೆನೂ ಬರ್ತಾನೆ. ಸಾಮಾನ್ಯವಾಗಿ ಒಬ್ಬ ತಾಯಿಗೆ ತನ್ನ ಮಗು ಕಷ್ಟಪಡೋದನ್ನ ನೋಡ್ವಾಗ ಕರುಳು ಕಿತ್ತುಬರುತ್ತೆ. ಅದನ್ನ ಸಮಾಧಾನ ಮಾಡೋಕೆ ತನ್ನ ಕೈಲಾದದ್ದನ್ನೆಲ್ಲಾ ಮಾಡ್ತಾಳೆ. ಆದ್ರೆ ಆ ತಾಯಿಗಿರೋ ಕನಿಕರಕ್ಕಿಂತ ಯೆಹೋವ ದೇವ್ರಿಗೆ ನಮ್ಮೇಲಿರೋ ಕರುಣೆ ದೊಡ್ಡದು ಅಂತ ಸ್ವತಃ ಆತನೇ ಹೇಳ್ತಾನೆ. (ಯೆಶಾ. 49:15) ನಾವು ಕಷ್ಟಪಡುವಾಗ ಯೆಹೋವನಿಗೆ ತುಂಬ ನೋವಾಗುತ್ತೆ. ಆತ ಕರುಣೆಯಿಂದ ಸಹಾಯ ಮಾಡಲು ಮುಂದೆ ಬರ್ತಾನೆ. (ಕೀರ್ತ. 37:39; 1 ಕೊರಿಂ. 10:13) ನಾವು ಯೆಹೋವನ ತರ ಇರ್ಬೇಕು. ನಮ್ಮ ಸಹೋದರ ಸಹೋದರಿಯರು ತಪ್ಪು ಮಾಡ್ದಾಗ ನಾವು ಕ್ಷಮಿಸ್ಬೇಕು. ಅದನ್ನ ಮನಸ್ಸಲ್ಲೇ ಇಟ್ಕೊಳ್ಳಬಾರದು. (ಎಫೆ. 4:32) ಆದ್ರೆ ನಾವು ಕರುಣೆ ತೋರಿಸೋ ಮುಖ್ಯವಾದ ಒಂದು ವಿಧ ಯಾವುದಂದ್ರೆ ನಮ್ಮ ಸಹೋದರ ಸಹೋದರಿಯರು ಕಷ್ಟದಲ್ಲಿದ್ದಾಗ ಅವ್ರಿಗೆ ಸಹಾಯ ಮಾಡೋದೇ. ಹೀಗೆ ನಾವು ಪ್ರೀತಿಯಿಂದ ಬೇರೆಯವ್ರಿಗೆ ಕರುಣೆ ತೋರಿಸ್ವಾಗ ಕೋಮಲ ಮಮತೆ ತೋರಿಸೋದ್ರಲ್ಲಿ ಅತ್ಯುತ್ತಮ ಮಾದರಿಯಾಗಿರೋ ನಮ್ಮ ತಂದೆ ಯೆಹೋವನನ್ನು ಅನುಕರಿಸ್ತೇವೆ.—ಎಫೆ. 5:1.

“ಯೋನಾತಾನ ಮತ್ತು ದಾವೀದನ ಮಧ್ಯ ಗಾಢ ಸ್ನೇಹ ಬೆಳಿತು”

6. ಯೋನಾತಾನ ಮತ್ತು ದಾವೀದನ ಮಧ್ಯ ಇದ್ದ ಸ್ನೇಹವನ್ನ ವಿವರಿಸಿ.

6 ಅಪರಿಪೂರ್ಣರಾಗಿದ್ರೂ ಬೇರೆಯವ್ರಿಗೆ ಕೋಮಲ ಮಮತೆ ತೋರಿಸಿದವ್ರ ಉದಾಹರಣೆ ಬೈಬಲಿನಲ್ಲಿದೆ. ಯೋನಾತಾನ ಮತ್ತು ದಾವೀದನ ಉದಾಹರಣೆ ನೋಡಿ. ಅವ್ರಿಬ್ಬರ “ಮಧ್ಯ ಗಾಢ ಸ್ನೇಹ ಬೆಳಿತು. ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸೋಕೆ ಶುರು ಮಾಡಿದ” ಅಂತ ಬೈಬಲ್‌ ಹೇಳುತ್ತೆ. (1 ಸಮು. 18:1) ರಾಜ ಸೌಲನ ನಂತ್ರ ಯೆಹೋವನು ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಆರಿಸಿದ್ದನು. ಆಗ ಸೌಲನಿಗೆ ದಾವೀದನ ಮೇಲೆ ಹೊಟ್ಟೆಕಿಚ್ಚಾಯ್ತು, ಅವನನ್ನ ಕೊಲ್ಲೋಕೆ ಪ್ರಯತ್ನಿಸಿದ. ಆದ್ರೆ ಈ ಕೆಟ್ಟ ಕೆಲ್ಸದಲ್ಲಿ ಅವನ ಮಗ ಯೋನಾತಾನ ಕೈ ಜೋಡಿಸ್ಲಿಲ್ಲ. ಯೋನಾತಾನ ಮತ್ತು ದಾವೀದ ಇಬ್ರೂ ತಮ್ಮ ಸ್ನೇಹ ಹೀಗೇ ಇರಲಿ, ಒಬ್ರಿಗೊಬ್ಬರು ಸಹಾಯ ಮಾಡೋಣ ಅಂತ ಮಾತು ಕೊಟ್ರು.—1 ಸಮು. 20:42.

ಯೋನಾತಾನ ಮತ್ತು ದಾವೀದನ ಮಧ್ಯ ವಯಸ್ಸಿನ ಅಂತರ ಇದ್ರೂ ಅವರಿಬ್ಬರು ಆಪ್ತ ಸ್ನೇಹಿತರಾಗಿದ್ರು (ಪ್ಯಾರ 6-9 ನೋಡಿ)

7. ಯೋನಾತಾನ ಮತ್ತು ದಾವೀದ ಇಬ್ರೂ ಸ್ನೇಹಿತರಾಗದಂತೆ ಯಾವ ಒಂದು ವಿಷ್ಯ ತಡಿಬಹುದಿತ್ತು?

7 ಯೋನಾತಾನ ಮತ್ತು ದಾವೀದನ ಮಧ್ಯ ಆಪ್ತ ಸ್ನೇಹವಿದ್ರೂ ಅವ್ರಿಬ್ರೂ ಸ್ನೇಹಿತರಾಗದಂತೆ ತಡೆಯೋಕೆ ಹಲವಾರು ವಿಷ್ಯಗಳಿದ್ದವು. ಉದಾಹರಣೆಗೆ ಅವ್ರಿಬ್ಬರ ಮಧ್ಯ ಇದ್ದ ವಯಸ್ಸಿನ ಅಂತರ. ಯೋನಾತಾನ ದಾವೀದನಿಗಿಂತ 30 ವರ್ಷ ದೊಡ್ಡವನು. ಆದ್ರೂ ‘ದಾವೀದ ಚಿಕ್ಕ ಹುಡುಗ, ಅನುಭವನೂ ಇಲ್ಲ. ಇವ್ನ ಜೊತೆ ಏನು ಸ್ನೇಹ ಮಾಡೋದು?’ ಅಂತ ಅವನು ಯೋಚಿಸ್ಲಿಲ್ಲ. ದಾವೀದನ ಮೇಲೆ ತುಂಬ ಗೌರವ ಇತ್ತು.

8. ಯೋನಾತಾನನ ಯಾವ ಗುಣಗಳನ್ನ ನೋಡಿ ದಾವೀದ ಸ್ನೇಹಿತನಾದ?

8 ಯೋನಾತಾನ ದಾವೀದನ ಮೇಲೆ ಹೊಟ್ಟೆಕಿಚ್ಚು ಪಡಬಹುದಿತ್ತು. ಅವ್ನು ಸೌಲನ ಮಗನಾಗಿದ್ರಿಂದ ಮುಂದಿನ ರಾಜನಾಗೋ ಹಕ್ಕಿತ್ತು. (1 ಸಮು. 20:31) ಆದ್ರೆ ಯೋನಾತಾನ ದೀನನಾಗಿದ್ದ ಮತ್ತು ಅವ್ನು ಯೆಹೋವನಿಗೆ ನಿಷ್ಠೆ ತೋರಿಸಿದ. ದಾವೀದನನ್ನ ಯೆಹೋವ ಮುಂದಿನ ರಾಜನಾಗಿ ಆಯ್ಕೆ ಮಾಡ್ದಾಗ ಸಂಪೂರ್ಣ ಬೆಂಬಲ ಕೊಟ್ಟ. ಈ ವಿಷ್ಯದಲ್ಲಿ ತನ್ನ ತಂದೆ ಸೌಲ ದಾವೀದನ ಮೇಲೆ ಕೆರಳಿ ಕೆಂಡ ಆದ್ರೂ ಅವನು ಮಾತ್ರ ದಾವೀದನಿಗೆ ನಿಷ್ಠೆ ತೋರಿಸಿದ.—1 ಸಮು. 20:32-34.

9. ಯೋನಾತಾನ ದಾವೀದನನ್ನ ಶತ್ರು ತರ ನೋಡಿದ್ನಾ? ವಿವರಿಸಿ.

9 ಯೋನಾತಾನನಿಗೆ ದಾವೀದನ ಮೇಲೆ ಕೋಮಲ ಮಮತೆ ಇತ್ತು. ಹಾಗಾಗಿ ಅವನನ್ನ ಒಬ್ಬ ಶತ್ರು ತರ ಯಾವತ್ತೂ ನೋಡ್ಲಿಲ್ಲ. ಯೋನಾತಾನ ನಿಪುಣ ಬಿಲ್ಲುಗಾರನಾಗಿದ್ದ, ಧೀರ ಯೋಧನಾಗಿದ್ದ. ಅವನಿಗೆ, ಅವನ ತಂದೆಗೆ “ಹದ್ದುಗಳಿಗಿಂತ ಹೆಚ್ಚು ವೇಗಿಗಳು” ಮತ್ತು “ಸಿಂಹಗಳಿಗಿಂತ ಹೆಚ್ಚು ಶಕ್ತಿಶಾಲಿಗಳು” ಅನ್ನೋ ಹೆಸರಿತ್ತು. (2 ಸಮು. 1:22, 23) ಆದ್ರೂ ಯೋನಾತಾನ ತನ್ನ ಧೈರ್ಯದ ಬಗ್ಗೆ, ಮಾಡಿದ ಸಾಧನೆಗಳ ಬಗ್ಗೆ ಕೊಚ್ಚಿಕೊಳ್ಳಲಿಲ್ಲ. ದಾವೀದ ಒಳ್ಳೇದನ್ನ ಮಾಡ್ದಾಗ ಅವನ ಮೇಲೆ ಯಾವತ್ತೂ ಹೊಟ್ಟೆಕಿಚ್ಚು ಪಡ್ಲಿಲ್ಲ, ಅವನಿಗಿಂತ ಒಳ್ಳೇ ಹೆಸರು ಮಾಡ್ಬೇಕು ಅಂತ ಪ್ರಯತ್ನಿಸಲಿಲ್ಲ. ಬದ್ಲಿಗೆ ದಾವೀದನಿಗಿದ್ದ ಧೈರ್ಯ, ಅವ್ನು ಯೆಹೋವನ ಮೇಲಿಟ್ಟ ಭರವಸೆ ಯೋನಾತಾನನಿಗೆ ತುಂಬ ಇಷ್ಟವಾಗ್ತಿತ್ತು. ಗಮನಿಸಬೇಕಾದ ವಿಷ್ಯವೇನಂದ್ರೆ ದಾವೀದ ಗೊಲ್ಯಾತನನ್ನ ಕೊಂದ ಮೇಲೆನೇ ಯೋನಾತಾನ ಅವ್ನಿಗೆ ಸ್ನೇಹಿತನಾದದ್ದು. ನಿಜವಾಗ್ಲೂ ಅವನೊಬ್ಬ ಒಳ್ಳೇ ಸ್ನೇಹಿತ. ಇಂಥ ಕೋಮಲ ಮಮತೆಯನ್ನ ಇವತ್ತು ನಾವು ನಮ್ಮ ಸಹೋದರ ಸಹೋದರಿಯರಿಗೆ ಹೇಗೆ ತೋರಿಸಬಹುದು?

ಇವತ್ತು ನಾವು ಹೇಗೆ ಕೋಮಲ ಮಮತೆ ತೋರಿಸ್ಬಹುದು?

10. “ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ” ಅನ್ನೋದ್ರ ಅರ್ಥವೇನು?

10 “ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ” ಅಂತ ಬೈಬಲ್‌ ಹೇಳುತ್ತೆ. (1 ಪೇತ್ರ 1:22) ಈ ವಿಷ್ಯದಲ್ಲಿ ಯೆಹೋವ ನಮ್ಗೆ ಒಳ್ಳೇ ಮಾದರಿ. ಆತನಿಗೆ ನಮ್ಮೇಲೆ ತುಂಬ ಪ್ರೀತಿ. ನಾವು ಆತನಿಗೆ ನಿಷ್ಠಾವಂತರಾಗಿ ಉಳಿದ್ರೆ ಯಾರಿಂದನೂ ನಮ್ಮನ್ನ ಆತನ ಪ್ರೀತಿಯಿಂದ ದೂರ ಮಾಡೋಕೆ ಆಗಲ್ಲ. (ರೋಮ. 8:38, 39) ಇಲ್ಲಿ “ಮನಸಾರೆ” ಅನ್ನೋದಕ್ಕಿರೋ ಗ್ರೀಕ್‌ ಪದದ ಅರ್ಥ “ಇನ್ನಷ್ಟು ಚಾಚುವುದು,” “ಮತ್ತಷ್ಟು ಪ್ರಯತ್ನ ಮಾಡೋದು.” ಅಂದ್ರೆ ನಮ್ಮ ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸೋಕೆ ನಮ್ಮನ್ನು ನಾವೇ ಪ್ರೇರಿಸಬೇಕು, ತುಂಬ ಪ್ರಯತ್ನ ಹಾಕಬೇಕು. ಹೀಗೆ ಮಾಡೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ಯಾರಾದ್ರೂ ನಮ್ಗೆ ಬೇಜಾರು ಮಾಡ್ದಾಗ ನಾವೇನು ಮಾಡ್ಬೇಕು? ‘ಪ್ರೀತಿಯಿಂದ ಒಬ್ರನ್ನೊಬ್ರು ಸಹಿಸಿಕೊಳ್ಬೇಕು, ಪವಿತ್ರ ಶಕ್ತಿಯಿಂದ ನಾವು ಒಂದಾಗಿರೋದ್ರಿಂದ ಒಬ್ರು ಇನ್ನೊಬ್ರ ಜೊತೆ ಶಾಂತಿಯಿಂದ ಇದ್ದು ಒಗ್ಗಟ್ಟನ್ನ ಕಾಪಾಡಿಕೊಳ್ಳೋಕೆ ಶ್ರಮಪಡಬೇಕು.’ (ಎಫೆ. 4:1-3) ನಮ್ಮ ಸಹೋದರ ಸಹೋದರಿಯರ ಜೊತೆ ಶಾಂತಿಯಿಂದ ಇರೋಕೆ ಪ್ರಯತ್ನಿಸೋದಾದರೆ ಅವ್ರ ತಪ್ಪುಗಳನ್ನ ನೋಡೋಕೆ ಹೋಗಲ್ಲ. ಅವ್ರನ್ನ ಯೆಹೋವ ಹೇಗೆ ನೋಡ್ತಾನೋ ಆ ತರ ನೋಡೋಕೆ ನಮ್ಮಿಂದಾಗೋ ಪ್ರಯತ್ನ ಮಾಡ್ತೇವೆ.—1 ಸಮು. 16:7; ಕೀರ್ತ. 130:3.

ಯುವೊದ್ಯ ಮತ್ತು ಸಂತುಕೆ ಮನಸ್ತಾಪ ಮರೆತು ಸ್ನೇಹಿತರಾಗ್ಬೇಕು ಅಂತ ಪೌಲ ಸಲಹೆ ಕೊಟ್ಟ. ಈ ಸಲಹೆ ಅನ್ವಯಿಸೋಕೆ ನಮ್ಗೂ ಕೆಲವೊಮ್ಮೆ ಕಷ್ಟ ಆಗ್ಬಹುದು (ಪ್ಯಾರ 11 ನೋಡಿ)

11. ನಮಗ್ಯಾಕೆ ಕೆಲವೊಮ್ಮೆ ಕೋಮಲ ಮಮತೆ ತೋರಿಸೋಕೆ ಕಷ್ಟ ಆಗ್ಬಹುದು?

11 ನಮ್ಮ ಸಹೋದರ ಸಹೋದರಿಯರ ಮೇಲೆ ಕೋಮಲ ಮಮತೆ ತೋರಿಸೋದು ಯಾವಾಗ್ಲೂ ಸುಲಭ ಇರಲ್ಲ. ಅದ್ರಲ್ಲೂ ಅವ್ರ ತಪ್ಪುಗಳು ನಮ್ಗೆ ಚೆನ್ನಾಗಿ ಗೊತ್ತಿದ್ರಂತೂ ಅದನ್ನ ತೋರ್ಸೋಕೆ ಇನ್ನೂ ಕಷ್ಟ. ಒಂದನೇ ಶತಮಾನದಲ್ಲೂ ಈ ಸಮಸ್ಯೆ ಇತ್ತು. ಯುವೊದ್ಯ ಮತ್ತು ಸಂತುಕೆ ಅನ್ನೋ ಅಭಿಷಿಕ್ತ ಸಹೋದರಿಯರ ಉದಾಹರಣೆ ನೋಡಿ. ಅವ್ರು ಸಿಹಿಸುದ್ದಿ ಸಾರೋ ಕೆಲ್ಸದಲ್ಲಿ ಪೌಲನಿಗೆ “ಹೆಗಲಿಗೆ ಹೆಗಲು ಕೊಟ್ಟು” ಸಹಾಯ ಮಾಡಿದ್ರು. ಆದ್ರೆ ಅವರಿಬ್ರ ಮಧ್ಯ ಏನೋ ಮನಸ್ತಾಪ ಇತ್ತು. ಅದಕ್ಕೆ ಪೌಲ ಅವ್ರಿಗೆ ‘ಒಡೆಯನ ಸೇವೆ ಮಾಡ್ವಾಗ ಒಂದೇ ಮನಸ್ಸು ಇರಬೇಕಂತ’ ಉತ್ತೇಜನ ಕೊಟ್ಟ.—ಫಿಲಿ. 4:2, 3, ಪಾದಟಿಪ್ಪಣಿ.

ಹಿರಿಯರ ಮಧ್ಯ ವಯಸ್ಸಿನ ಅಂತರ ಎಷ್ಟೇ ಇದ್ರೂ ಒಬ್ರಿಗೊಬ್ರು ಆಪ್ತರಾಗೋಕೆ ಖಂಡಿತ ಆಗುತ್ತೆ (ಪ್ಯಾರ 12 ನೋಡಿ)

12. ನಾವು ಹೇಗೆ ನಮ್ಮ ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸ್ಬಹುದು?

12 ನಾವು ಹೇಗೆ ನಮ್ಮ ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸ್ಬಹುದು? ಅವ್ರನ್ನು ಚೆನ್ನಾಗಿ ತಿಳ್ಕೊಳ್ಳೋಕೆ ಪ್ರಯತ್ನಿಸಬೇಕು. ಹೀಗೆ ಮಾಡಿದ್ರೆ ಅವ್ರನ್ನು ನಾವು ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ ಮತ್ತು ಅವ್ರ ಮೇಲೆ ನಮ್ಗೆ ಪ್ರೀತಿ ಬೆಳೆಯುತ್ತೆ. ಅವ್ರು ದೊಡ್ಡವರೇ ಇರಲಿ ಚಿಕ್ಕವರೇ ಇರಲಿ, ಬೆಳೆದು ಬಂದಿರೋ ಹಿನ್ನೆಲೆ ಬೇರೇನೇ ಆಗಿರ್ಲಿ ಇದ್ಯಾವುದೂ ಸ್ನೇಹಕ್ಕೆ ತಡೆಯಾಗಲ್ಲ. ಯೋನಾತಾನ ದಾವೀದನಿಗಿಂತ 30 ವರ್ಷ ದೊಡ್ಡವನಾಗಿದ್ರೂ ಅವ್ರಿಬ್ರೂ ಆಪ್ತ ಸ್ನೇಹಿತರಾದ್ರು. ನಿಮ್ಮ ಸಭೆಲಿ ನಿಮ್ಗಿಂತ ಚಿಕ್ಕವರು ಅಥ್ವಾ ದೊಡ್ಡವರು ಇದ್ದಾರಾ? ಅವ್ರನ್ನು ಸ್ನೇಹಿತರಾಗಿ ಮಾಡ್ಕೊಳ್ಳೋಕೆ ಆಗುತ್ತಾ? ನಾವು ಸಹೋದರ ಸಹೋದರಿಯರನ್ನು ಸ್ನೇಹಿತರಾಗಿ ಮಾಡ್ಕೊಂಡ್ರೆ “ಎಲ್ಲ ಕಡೆ ಇರೋ ಸಹೋದರರನ್ನ ಪ್ರೀತಿಸಿ” ಅನ್ನೋ ಸಲಹೆ ಪಾಲಿಸಿದಂತೆ ಆಗುತ್ತೆ.—1 ಪೇತ್ರ 2:17.

ಪ್ಯಾರ 12 ನೋಡಿ *

13. ಸಭೆಯಲ್ಲಿರೋ ಎಲ್ರನ್ನೂ ಆಪ್ತ ಸ್ನೇಹಿತರಾಗಿ ಮಾಡ್ಕೊಳ್ಳೋಕೆ ಯಾಕೆ ಆಗಲ್ಲ?

13 ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸ್ಬೇಕು ಅನ್ನೋದ್ರ ಅರ್ಥ ಸಭೆಯಲ್ಲಿರೋ ಎಲ್ಲರನ್ನು ನಮ್ಮ ಆಪ್ತ ಸ್ನೇಹಿತರಾಗಿ ಮಾಡ್ಕೋಬೇಕು ಅಂತನಾ? ಅಲ್ಲ. ಅದು ಆಗೋ ಮಾತೂ ಅಲ್ಲ. ಸಾಮಾನ್ಯವಾಗಿ ನಮ್ಗೆ ಇಷ್ಟ ಆಗುವಂಥ ವಿಷ್ಯಗಳನ್ನ ಇಷ್ಟ ಪಡುವವ್ರಿಗೇ ನಾವು ಆಪ್ತರಾಗ್ತೀವಿ. ಯೇಸು ತನ್ನ ಅಪೊಸ್ತಲರನ್ನು “ನನ್ನ ಸ್ನೇಹಿತರು” ಅಂತ ಕರೆದನು. ಆದ್ರೆ ಯೋಹಾನನ ಮೇಲೆ ಯೇಸುಗೆ ವಿಶೇಷ ಪ್ರೀತಿ ಅಥ್ವಾ ಮಮತೆ ಇತ್ತು. (ಯೋಹಾ. 13:23; 15:15; 20:2) ಹಾಗಂತ ಯೇಸು ಬೇರೆಯವ್ರಿಗಿಂತ ಯೋಹಾನನಿಗೆ ಹೆಚ್ಚು ಒಲವು ತೋರಿಸ್ಲಿಲ್ಲ. ಉದಾಹರಣೆಗೆ, ಯೋಹಾನ ಮತ್ತು ಅವ್ನ ಸಹೋದರ ಯಾಕೋಬ ದೇವರ ಆಳ್ವಿಕೆಯಲ್ಲಿ ವಿಶೇಷ ಸ್ಥಾನ ಬೇಕು ಅಂತ ಬೇಡ್ಕೊಂಡಾಗ ಯೇಸು “ನನ್ನ ಬಲಗಡೆಯಲ್ಲಿ ಎಡಗಡೆಯಲ್ಲಿ ಯಾರು ಕೂರಬೇಕು ಅಂತ ನಿರ್ಧಾರ ಮಾಡೋದು ನನ್ನ ಕೈಲಿಲ್ಲ” ಅಂತ ಹೇಳಿದ್ನು. (ಮಾರ್ಕ 10:35-40) ನಾವೂ ಯೇಸು ತರ ಇರ್ಬೇಕು. ನಮ್ಮ ಆಪ್ತ ಸ್ನೇಹಿತರಿಗೆ ವಿಶೇಷ ಒಲವು ತೋರಿಸಿ ಬೇರೆಯವ್ರನ್ನು ಕಡೆಗಣಿಸಬಾರದು. (ಯಾಕೋ. 2:3, 4) ಹಾಗೇನಾದ್ರೂ ನಾವು ‘ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ’ ಅನ್ನೋ ತರ ಮಾಡ್ಬಿಟ್ರೆ ಸಭೆಯಲ್ಲಿರೋ ಶಾಂತಿಯ ವಾತಾವರಣ ಹಾಳಾಗಿಬಿಡುತ್ತೆ.—ಯೂದ 17-19.

14. ನಾವು ಬೇರೆಯವ್ರ ಜೊತೆ ಪೈಪೋಟಿಗೆ ಇಳಿಯದಿರೋಕೆ ಫಿಲಿಪ್ಪಿ 2:3 ಹೇಗೆ ಸಹಾಯಮಾಡುತ್ತೆ?

14 ನಮ್ಗೆ ನಮ್ಮ ಸಹೋದರ ಸಹೋದರಿಯರ ಮೇಲೆ ಕೋಮಲ ಮಮತೆ ಇದ್ರೆ ಅವ್ರ ವಿರುದ್ಧ ನಾವು ಪೈಪೋಟಿಗೆ ಇಳಿಯಲ್ಲ. ಯೋನಾತಾನ ದಾವೀದನ ವಿರುದ್ಧ ಯಾವತ್ತೂ ಪೈಪೋಟಿಗೆ ಇಳಿಲಿಲ್ಲ, ರಾಜನಾಗೋಕೆ ಯಾವತ್ತೂ ಪ್ರಯತ್ನಿಸಲಿಲ್ಲ ಅಂತ ನೆನಪಿಸಿಕೊಳ್ಳಿ. ನಾವೂ ಯೋನಾತಾನನ ತರ ಇರ್ಬೇಕು. ಬೇರೆಯವ್ರಿಗೆ ಇರೋ ಸಾಮರ್ಥ್ಯ ನೋಡಿ ಹೊಟ್ಟೆಕಿಚ್ಚು ಪಡಬಾರದು. ಬದ್ಲಿಗೆ ‘ದೀನತೆಯಿಂದ ಅವ್ರನ್ನು ನಮ್ಗಿಂತ ಶ್ರೇಷ್ಠರಾಗಿ ನೋಡ್ಬೇಕು.’ (ಫಿಲಿಪ್ಪಿ 2:3 ಓದಿ.) ನೆನಪಿಡಿ ಸಭೆಯಲ್ಲಿರೋ ಪ್ರತಿಯೊಬ್ರೂ ಅಮೂಲ್ಯರೇ. ಅವ್ರಿಂದ ಸಭೆಗೆ ಒಂದಲ್ಲ ಒಂದು ರೀತಿಲಿ ಪ್ರಯೋಜನ ಇದೆ. ನಾವು ದೀನರಾಗಿದ್ರೆ ನಮ್ಮ ಸಹೋದರ ಸಹೋದರಿಯರಲ್ಲಿರೋ ಒಳ್ಳೇ ಗುಣಗಳನ್ನು ನೋಡೋಕಾಗುತ್ತೆ. ಅವ್ರ ನಂಬಿಕೆಯಿಂದ ಕೆಲ್ವು ವಿಷ್ಯಗಳನ್ನು ಕಲಿಯೋಕೆ ಆಗುತ್ತೆ.—1 ಕೊರಿಂ. 12:21-25.

15. ಟಾನಿಯಾ ಮತ್ತು ಅವ್ರ ಕುಟುಂಬದವರ ಅನುಭವದಿಂದ ನೀವ್ಯಾವ ಪಾಠ ಕಲಿತಿರಿ?

15 ಅನಿರೀಕ್ಷಿತವಾಗಿ ನಮ್ಮ ಜೀವನದಲ್ಲಿ ಕೆಟ್ಟ ಘಟನೆಗಳು ನಡೆದಾಗ ಯೆಹೋವನು ಸಹೋದರ ಸಹೋದರಿಯರ ಮೂಲಕ ನಮ್ಗೆ ಕೋಮಲ ಮಮತೆ ತೋರಿಸ್ತಾನೆ ಮತ್ತು ಆ ಸಂದರ್ಭಕ್ಕೆ ಬೇಕಾದ ಸಹಾಯನೂ ಮಾಡ್ತಾನೆ. ಈ ಅನುಭವ ಟಾನಿಯಾ ಮತ್ತು ಅವ್ರ ಮೂರು ಮಕ್ಕಳಿಗೆ ಆಯ್ತು. ಅವ್ರು 2019 ರ “ಪ್ರೀತಿ ಶಾಶ್ವತ” ಅಂತರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲು ಅಮೆರಿಕಕ್ಕೆ ಬಂದಿದ್ರು. ಶನಿವಾರ ಅಧಿವೇಶನ ಮುಗಿಸ್ಕೊಂಡು ಹೋಗ್ವಾಗ ಏನಾಯ್ತು ಅಂತ ಅವ್ರು ಹೀಗೆ ಹೇಳ್ತಾರೆ: “ನಾವು ವಾಪಸ್‌ ಹೋಟೆಲಿಗೆ ಹೋಗ್ತಿದ್ದಾಗ ಬೇರೆ ಟ್ರ್ಯಾಕಲ್ಲಿದ್ದ ಒಂದು ಗಾಡಿ ನಿಯಂತ್ರಣ ತಪ್ಪಿ ನಮ್ಮ ಕಾರಿಗೆ ಬಂದು ಡಿಕ್ಕಿ ಹೊಡೀತು. ನಮಗ್ಯಾರಿಗೂ ಜಾಸ್ತಿ ಏಟಾಗಲಿಲ್ಲ, ಆದ್ರೆ ಗಾಬರಿಯಾಗಿತ್ತು. ನಾವು ಕಾರಿಂದ ಇಳಿದು ರೋಡಲ್ಲಿ ನಿಂತಿದ್ವಿ. ಆಗ ರಸ್ತೆ ಬದಿಯಲ್ಲಿ ಒಬ್ರು ಗಾಡಿ ನಿಲ್ಲಿಸಿ ಕೈ ಆಡಿಸ್ತಾ ನಮ್ಮನ್ನು ಕರೀತಿದ್ರು. ಅವ್ರು ಅಧಿವೇಶನಕ್ಕೆ ಬಂದ ನಮ್ಮ ಸಹೋದರರೇ. ನಮ್ಮನ್ನು ನೋಡಿ ಇನ್ನೂ 5 ಸಹೋದರ ಸಹೋದರಿಯರು ಗಾಡಿ ನಿಲ್ಲಿಸಿದ್ರು. ಅವ್ರು ಅಧಿವೇಶನಕ್ಕೆ ಸ್ವೀಡನ್‌ನಿಂದ ಬಂದಿದ್ರು. ಸಹೋದರಿಯರು ನನ್ನನ್ನ, ನನ್ನ ಮಗಳನ್ನ ಪ್ರೀತಿಯಿಂದ ಅಪ್ಪಿಕೊಂಡ್ರು. ಆ ಕ್ಷಣಕ್ಕೆ ನಮ್ಗೆ ಅದು ಅಗತ್ಯ ಇತ್ತು. ನಾನು ಅವ್ರಿಗೆ ‘ಪರ್ವಾಗಿಲ್ಲ ನೀವು ಹೊರಡಿ’ ಅಂತ ಹೇಳ್ದೆ. ಆದ್ರೆ ಆ್ಯಂಬುಲೆನ್ಸ್‌ ಬಂದು ನಮಗೆ ಸಹಾಯ ಸಿಗೋ ತನಕ ಅಲ್ಲೇ ಇದ್ರು. ಈ ಕಷ್ಟದ ಸಮಯದಲ್ಲಿ ಯೆಹೋವನ ಪ್ರೀತಿ ನೋಡೋಕಾಯ್ತು. ಈ ಘಟನೆ ನಂತ್ರ ಯೆಹೋವನ ಮೇಲೆ ನಮ್ಮ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇನ್ನೂ ಹೆಚ್ಚಾಯ್ತು.” ನಿಮ್ಗೂ ಕಷ್ಟ ಬಂದಾಗ ಸಹೋದರ ಸಹೋದರಿಯರು ಕೋಮಲ ಮಮತೆ ತೋರಿಸಿದ್ದು ನೆನಪಿದ್ಯಾ?

16. ನಮ್ಮ ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸಿದಾಗ ಯಾವ ಒಳ್ಳೇ ವಿಷ್ಯಗಳು ನಡೆಯುತ್ತೆ?

16 ನಮ್ಮ ಸಹೋದರ ಸಹೋದರಿಯರಿಗೆ ಕೋಮಲ ಮಮತೆ ತೋರಿಸ್ದಾಗ ಯಾವ ಒಳ್ಳೇ ವಿಷ್ಯಗಳು ನಡೆಯುತ್ತೆ ಸ್ವಲ್ಪ ಯೋಚಿಸಿ. ಅವ್ರ ಕಷ್ಟದಲ್ಲಿ ಸಹಾಯ ಮಾಡೋದ್ರಿಂದ ನಮ್ಮ ಸಹೋದರ ಸಹೋದರಿಯರಿಗೆ ಸಾಂತ್ವನ ಸಿಗುತ್ತೆ. ದೇವಜನ್ರ ಮಧ್ಯ ಇರೋ ಐಕ್ಯತೆಯನ್ನ ನಾವು ಇನ್ನಷ್ಟು ಬಲಪಡಿಸ್ತೇವೆ. ಒಳ್ಳೇ ಹೃದಯದ ಜನ ನಮ್ಮನ್ನ ಯೇಸುವಿನ ಶಿಷ್ಯರು ಅಂತ ಗುರುತಿಸ್ತಾರೆ ಮತ್ತು ಈ ವಿಷಯ ಅವರನ್ನ ಯೆಹೋವನ ಕಡೆಗೆ ಸೆಳೆಯುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ “ಕೋಮಲ ಕರುಣೆ ತೋರಿಸೋ ತಂದೆ, ಎಲ್ಲ ತರದ ಸಾಂತ್ವನ ಕೊಡೋ ದೇವರು” ಆದ ಯೆಹೋವನನ್ನ ನಾವು ಸಂತೋಷ ಪಡಿಸ್ತೇವೆ. (2 ಕೊರಿಂ. 1:3) ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ಪ್ರೀತಿ ಮತ್ತು ಕೋಮಲ ಮಮತೆ ತೋರಿಸ್ತಾ ಇರೋಣ.

ಗೀತೆ 77 ಕ್ಷಮಿಸುವವರಾಗಿರಿ

^ ಪ್ಯಾರ. 5 ಯೇಸು ಶಿಷ್ಯರಿಗೆ, ‘ನಿಮ್ಮ ಮಧ್ಯ ಪ್ರೀತಿ ಇದ್ರೆ ನಿಮ್ಮನ್ನ ನನ್ನ ಶಿಷ್ಯರು ಅಂತ ಜನ ಗುರುತಿಸ್ತಾರೆ’ ಅಂತ ಹೇಳಿದ. ನಾವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾವು ನಮ್ಮ ಕುಟುಂಬದವ್ರನ್ನ ಹೇಗೆ ಪ್ರೀತಿಸ್ತೇವೋ ಅದೇ ರೀತಿ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು. ಇದನ್ನೇ ಕೋಮಲ ಮಮತೆ ಅಂತ ಹೇಳ್ಬಹುದು. ಸಹೋದರ ಸಹೋದರಿಯರಿಗೆ ಈ ಕೋಮಲ ಮಮತೆಯನ್ನ ಹೇಗೆ ತೋರಿಸಬಹುದು ಅಂತ ಈ ಲೇಖನದಲ್ಲಿ ಕಲಿತೇವೆ.

^ ಪ್ಯಾರ. 55 ಚಿತ್ರ ವಿವರಣೆ: ಒಬ್ಬ ಯುವ ಹಿರಿಯ ವಯಸ್ಸಾದ ಹಿರಿಯನ ಅನುಭವದಿಂದ ತುಂಬ ಪ್ರಯೋಜನ ಪಡ್ಕೊಳ್ತಿದ್ದಾನೆ. ವಯಸ್ಸಾದ ಹಿರಿಯ ಅವನನ್ನ ಮತ್ತು ಅವನ ಪತ್ನಿಯನ್ನ ಮನೆಗೆ ಕರೆದಿದ್ದಾರೆ. ಆ ಸಹೋದರರು ಮತ್ತು ಅವ್ರ ಪತ್ನಿಯರು ಒಬ್ಬರಿಗೊಬ್ರು ಕೋಮಲ ಮಮತೆ ತೋರಿಸ್ತಿದ್ದಾರೆ.