ಅಧ್ಯಯನ ಲೇಖನ 3
ದೇವರನ್ನು ಮತ್ತು ಕ್ರಿಸ್ತನನ್ನು ಹಾಡಿಹೊಗಳೋ ದೊಡ್ಡ ಗುಂಪು
“ಸಿಂಹಾಸನದ ಮೇಲೆ ಕೂತಿರೋ ನಮ್ಮ ದೇವರಿಂದ, ಕುರಿಮರಿಯಿಂದ ನಮಗೆ ರಕ್ಷಣೆ ಸಿಗುತ್ತೆ.”—ಪ್ರಕ. 7:10.
ಗೀತೆ 99 ಭೂಮಿಯ ಹೊಸ ಅರಸನನ್ನು ಸ್ತುತಿಸುವುದು
ಕಿರುನೋಟ *
1. 1935 ರಲ್ಲಿ ಕೊಟ್ಟ ಒಂದು ಭಾಷಣ ಕೇಳಿಸಿಕೊಂಡ ನಂತ್ರ ಒಬ್ಬ ಯುವ ಸಹೋದರನ ಮೇಲೆ ಯಾವ ಪರಿಣಾಮ ಬೀರಿತು?
ತುಂಬಾ ಹಿಂದೆ ಒಂದು ಕುಟುಂಬ ಇತ್ತು. ಆ ಕುಟುಂಬದಲ್ಲಿದ್ದ ಅಪ್ಪ-ಅಮ್ಮ ಬೈಬಲ್ ವಿದ್ಯಾರ್ಥಿಗಳಾಗಿದ್ರು. ಆಗಿನ ಸಮಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಬೈಬಲ್ ವಿದ್ಯಾರ್ಥಿಗಳು ಅಂತ ಹೆಸರಿತ್ತು. ಆ ದಂಪತಿಗೆ ಮೂರು ಗಂಡು ಮಕ್ಕಳು, ಇಬ್ರು ಹೆಣ್ಣು ಮಕ್ಕಳು ಇದ್ದರು. ಮಕ್ಕಳಿಗೆ ಚಿಕ್ಕದ್ರಿಂದಲೇ ಯೆಹೋವನ ಸೇವೆ ಮಾಡೋಕೆ ಮತ್ತು ಯೇಸುಕ್ರಿಸ್ತನ ತರ ನಡ್ಕೊಳ್ಳೋಕೆ ಆ ಹೆತ್ತವರು ಕಲಿಸಿದ್ರು. 1926 ರಲ್ಲಿ ಅವರ ಒಬ್ಬ ಮಗ ದೀಕ್ಷಾಸ್ನಾನ ತಗೊಂಡ. ಆಗ ಅವನಿಗೆ 18 ವರ್ಷ. ಬೇರೆ ಬೈಬಲ್ ವಿದ್ಯಾರ್ಥಿಗಳ ತರಾನೇ ಈ ಯುವ ಸಹೋದರ ಸಹ ತಾನೂ ಸ್ವರ್ಗಕ್ಕೆ ಹೋಗ್ತೀನಿ ಅಂತ ನೆನಸ್ತಿದ್ದ. ಹಾಗಾಗಿ ಪ್ರತಿವರ್ಷ ಕ್ರಿಸ್ತನ ಮರಣದ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ತಿದ್ದ. ನಂತರ 1935 ರಲ್ಲಿ ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಒಂದು ಅಧಿವೇಶನ ನಡಿತು. ಅಲ್ಲಿ ಸಹೋದರ ಜೆ. ಎಫ್. ರದರ್ಫರ್ಡ್ “ಮಹಾ ಸಮೂಹ” ಅನ್ನೋ ವಿಷ್ಯದ ಬಗ್ಗೆ ಒಂದು ಐತಿಹಾಸಿಕ ಭಾಷಣ ಕೊಟ್ರು. ಈ ಭಾಷಣ ಕೇಳಿಸಿಕೊಂಡ ನಂತ್ರ ಆ ಯುವ ಸಹೋದರನಿಗೆ ತನ್ನ ಭವಿಷ್ಯದ ಬಗ್ಗೆ ಇದ್ದ ನಿರೀಕ್ಷೆನೇ ಬದಲಾಯ್ತು. ಆ ಅಧಿವೇಶನದಲ್ಲಿ ಬೈಬಲ್ ವಿದ್ಯಾರ್ಥಿಗಳಿಗೆ ಯಾವ ವಿಷಯ ಗೊತ್ತಾಯ್ತು?
2. ಸಹೋದರ ರದರ್ಫರ್ಡ್ ತಮ್ಮ ಭಾಷಣದಲ್ಲಿ ಯಾವ ಹೊಸ ವಿಷಯವನ್ನ ವಿವರಿಸಿದ್ರು?
2 ಸಹೋದರ ರದರ್ಫರ್ಡ್ ತಮ್ಮ ಭಾಷಣದಲ್ಲಿ ಪ್ರಕಟನೆ 7:9 ರಲ್ಲಿ ತಿಳಿಸಿರೋ “ಮಹಾ ಸಮೂಹ” ಅಥ್ವಾ “ದೊಡ್ಡ ಗುಂಪು” ಯಾರಾಗಿದ್ದಾರೆ ಅಂತ ವಿವರಿಸಿದ್ರು. ಮಹಾ ಸಮೂಹದ ಜನ ಸ್ವರ್ಗಕ್ಕೆ ಹೋಗ್ತಾರೆ, ಆದ್ರೆ ಅಭಿಷಿಕ್ತ ಕ್ರೈಸ್ತರಷ್ಟು ನಂಬಿಗಸ್ತರಾಗಿರಲ್ಲ ಅಂತ ಮುಂಚೆ ಬೈಬಲ್ ವಿದ್ಯಾರ್ಥಿಗಳು ಅಂದುಕೊಂಡಿದ್ದರು. ಆದ್ರೆ ಸಹೋದರ ರದರ್ಫರ್ಡ್ ಕೆಲವು ವಚನಗಳನ್ನು ತೋರಿಸಿ ಮಹಾ ಸಮೂಹದ ಜನರು ಸ್ವರ್ಗಕ್ಕೆ ಹೋಗಲ್ಲ ಬದಲಿಗೆ “ಮಹಾ ಸಂಕಟವನ್ನ” ಪಾರಾಗಿ ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸ್ತಾರೆ ಅಂತ ವಿವರಿಸಿದರು. (ಪ್ರಕ. 7:14) ಇವ್ರನ್ನು ಯೇಸು “ಬೇರೆ ಕುರಿಗಳು” * ಅಂತ ಕರೆದಿದ್ದಾನೆ. ಇವ್ರ ಬಗ್ಗೆ ಆತ ಹೀಗೆ ತಿಳಿಸಿದ: “ನನಗೆ ಬೇರೆ ಕುರಿಗಳೂ ಇವೆ. ಅವು ಈ ಹಿಂಡಿಗೆ ಸೇರಿಲ್ಲ. ಅವುಗಳನ್ನೂ ನಾನು ಸೇರಿಸಬೇಕು. ಅವು ನನ್ನ ಮಾತು ಕೇಳ್ತವೆ. ಆಗ ಎಲ್ಲ ಕುರಿಗಳು ಸೇರಿ ಒಂದೇ ಹಿಂಡು ಆಗುತ್ತೆ. ಒಬ್ಬನೇ ಕುರುಬ ಇರ್ತಾನೆ.” (ಯೋಹಾ. 10:16) ಯೇಸುವಿನ ಈ ಕುರಿಗಳು ಯೆಹೋವನಿಗೆ ನಂಬಿಗಸ್ತ ಸೇವಕರಾಗಿದ್ದಾರೆ ಮತ್ತು ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇಟ್ಟುಕೊಂಡಿದ್ದಾರೆ. (ಮತ್ತಾ. 25:31-33, 46) ಬೈಬಲಿನ ಈ ಹೊಸ ಸತ್ಯ ಆ ಯುವ ಸಹೋದರನ ಮೇಲೆ ಮತ್ತು ಬೇರೆ ದೇವಜನ್ರ ಮೇಲೆ ಯಾವ ಪ್ರಭಾವ ಬೀರಿತು?—ಕೀರ್ತ. 97:11; ಜ್ಞಾನೋ. 4:18.
ಸಾವಿರಾರು ಜನರ ಜೀವನ ಬದಲಿಸಿದ ಹೊಸ ತಿಳುವಳಿಕೆ
3-4. 1935 ರಲ್ಲಿ ನಡೆದ ಅಧಿವೇಶನದಲ್ಲಿ ಸಾವಿರಾರು ಸಹೋದರ ಸಹೋದರಿಯರು ಯಾವ ವಿಷ್ಯ ಅರ್ಥ ಮಾಡ್ಕೊಂಡ್ರು?
3 ಅಧಿವೇಶನದಲ್ಲಿ ಸಹೋದರ ರದರ್ಫರ್ಡ್ ತಮ್ಮ ಭಾಷಣದ ಕೊನೇಲಿ ಅಲ್ಲಿದ್ದ ಜನ್ರಿಗೆ ಹೀಗೆ ಕೇಳಿದ್ರು: “ನಿಮ್ಮಲ್ಲಿ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರುವವರು ಎದ್ದು ನಿಲ್ತೀರಾ?” ಅಧಿವೇಶನಕ್ಕೆ ಹಾಜರಾಗಿದ್ದ ಒಬ್ಬ ಸಹೋದರನ ಪ್ರಕಾರ, ಅಲ್ಲಿದ್ದ ಸುಮಾರು 20 ಸಾವಿರ ಜನ್ರಲ್ಲಿ ಅರ್ಧಕ್ಕರ್ಧ ಜನ ಎದ್ದುನಿಂತ್ರು. ಆಗ ಸಹೋದರ ರದರ್ಫರ್ಡ್ ಹೀಗೆ ಹೇಳಿದ್ರು: “ನೋಡಿ ಇವರೇ ಮಹಾ ಸಮೂಹ.” ಆಗ ಅಲ್ಲಿದ್ದ ಜನ ಸಂತೋಷದಿಂದ ಚಪ್ಪಾಳೆ ಹೊಡಿತಾ ಸಂಭ್ರಮಪಟ್ರು. ನಿಂತಿದ್ದವ್ರಿಗೆ ತಮ್ಮನ್ನ ಯೆಹೋವ ಸ್ವರ್ಗದಲ್ಲಿ ಜೀವಿಸೋಕೆ ಆರಿಸ್ಕೊಂಡಿಲ್ಲ, ಪವಿತ್ರಶಕ್ತಿಯಿಂದ ತಮ್ಮನ್ನ ಅಭಿಷೇಕಿಸಿಲ್ಲ ಅನ್ನೋದು ಅರ್ಥ ಆಯ್ತು. ಅಧಿವೇಶನದಲ್ಲಿ ಮಾರನೇ ದಿನ 840 ಜನ ದೀಕ್ಷಾಸ್ನಾನ ತಗೊಂಡ್ರು. ಅವ್ರಲ್ಲಿ ಹೆಚ್ಚಿನವರು ಬೇರೆ ಕುರಿಗಳಾಗಿದ್ರು.
4 ಭಾಷಣದ ನಂತ್ರ ಲೇಖನದ ಆರಂಭದಲ್ಲಿ ತಿಳಿಸಿದ ಯುವ ಸಹೋದರ ಮತ್ತು ಸಾವಿರಾರು ಜನ್ರು ಕ್ರಿಸ್ತನ ಮರಣದ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳೋದನ್ನ ನಿಲ್ಲಿಸಿಬಿಟ್ರು. ಒಬ್ಬ ಸಹೋದರ ಹೀಗೆ ಹೇಳಿದ್ರು: “ನಾನು ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ಕೊನೇದಾಗಿ ತಗೊಂಡಿದ್ದು 1935 ರಲ್ಲಿ ನಡೆದ ಸ್ಮರಣೆಯಲ್ಲೇ. ಆಮೇಲೆ ಅದನ್ನ ನಿಲ್ಲಿಸಿಬಿಟ್ಟೆ. ಯಾಕಂದ್ರೆ ನನಗಿರೋ ನಿರೀಕ್ಷೆ ಏನು ಅಂತ ಚೆನ್ನಾಗಿ ಅರ್ಥ ಆಯ್ತು. ಸ್ವರ್ಗದಲ್ಲಿ ಜೀವಿಸೋಕೆ ಯೆಹೋವ ನನ್ನನ್ನ ಆರಿಸ್ಕೊಂಡಿಲ್ಲ ಮತ್ತು ತನ್ನ ಪವಿತ್ರ ಶಕ್ತಿಯಿಂದ ನನ್ನನ್ನ ಅಭಿಷೇಕಿಸಿಲ್ಲ. ಬದಲಿಗೆ ಈ ಭೂಮಿಯಲ್ಲಿ ಜೀವಿಸೋ ನಿರೀಕ್ಷೆ ನನಗಿದೆ. ಈ ಭೂಮಿನ ಒಂದು ಸುಂದರ ಪರದೈಸ್ ಆಗಿ ಮಾಡೋ ಕೆಲಸದಲ್ಲಿ ನಾನು ಕೈಜೋಡಿಸ್ತೀನಿ.” ಆ ಸಮಯದಲ್ಲಿದ್ದ ಹೆಚ್ಚಿನ ಸಹೋದರ ಸಹೋದರಿಯರಿಗೆ ಈ ಸಹೋದರನ ತರಾನೇ ಅನಿಸ್ತು. (ರೋಮ. 8:16, 17; 2 ಕೊರಿಂ. 1:21, 22) ಅವತ್ತಿನಿಂದ ಈ ದೊಡ್ಡ ಗುಂಪಿನ ಸಂಖ್ಯೆ ಜಾಸ್ತಿ ಆಗ್ತಾ ಇದೆ ಮತ್ತು ಇದ್ರ ಸದಸ್ಯರು ಭೂಮಿ ಮೇಲಿರೋ ಅಭಿಷಿಕ್ತರಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡ್ತಾ ಇದ್ದಾರೆ.
5. ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳೋದನ್ನ ನಿಲ್ಲಿಸಿಬಿಟ್ಟ ಜನ್ರನ್ನ ಯೆಹೋವ ಹೇಗೆ ನೋಡ್ತಾನೆ?
5 1935 ರ ನಂತ್ರ ಕ್ರಿಸ್ತನ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳೋದನ್ನ ನಿಲ್ಲಿಸಿದ ಸಹೋದರ ಸಹೋದರಿಯರ ಬಗ್ಗೆ ಯೆಹೋವ ಏನು ಯೋಚಿಸ್ತಾನೆ? ದೀಕ್ಷಾಸ್ನಾನ ತಗೊಂಡಿರೋ ಒಬ್ಬ ವ್ಯಕ್ತಿ ಕ್ರಿಸ್ತನ ಮರಣದ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ತಾನೆ ಅಂತ ನೆನಸಿ. ಆದ್ರೆ ಯೆಹೋವ ತನ್ನನ್ನ ಪವಿತ್ರ ಶಕ್ತಿಯಿಂದ ಅಭಿಷೇಕಿಸಿಲ್ಲ ಅಂತ ಅವ್ನಿಗೆ ಆಮೇಲೆ ಗೊತ್ತಾಗುತ್ತೆ. ಅಂಥವ್ರನ್ನ ಯೆಹೋವ ಹೇಗೆ ನೋಡ್ತಾನೆ? (1 ಕೊರಿಂ. 11:28) ಕೆಲವು ಸಹೋದರ ಸಹೋದರಿಯರು ತಾವು ಸ್ವರ್ಗಕ್ಕೆ ಹೋಗ್ತೀವಿ ಅಂತ ನೆನಸಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ತಾರೆ. ಆದ್ರೆ ತಾವು ಮಾಡ್ತಿರೋದು ತಪ್ಪು ಅಂತ ಅರ್ಥ ಆದಾಗ ಅವರು ಅದನ್ನ ನಿಲ್ಲಿಸಿ ಬಿಡ್ತಾರೆ ಮತ್ತು ಯೆಹೋವನ ಸೇವೆ ಮಾಡೋದನ್ನ ಮುಂದುವರಿಸ್ತಾರೆ. ಅಂಥವ್ರನ್ನ ಯೆಹೋವ ಬೇರೆ ಕುರಿಗಳ ಗುಂಪಿಗೆ ಖಂಡಿತ ಸೇರಿಸಿಕೊಳ್ತಾನೆ. ಅವ್ರು ಇನ್ಮುಂದೆ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ದೇ ಇದ್ರೂ ಕ್ರಿಸ್ತನ ಸ್ಮರಣೆಗಂತೂ ಹಾಜರಾಗೇ ಆಗ್ತಾರೆ. ಯಾಕಂದ್ರೆ ಅವ್ರಿಗೆ ಯೆಹೋವ ಮತ್ತು ಯೇಸು ಮಾಡಿರೋ ವಿಷ್ಯಗಳ ಕಡೆಗೆ ತುಂಬಾ ಕೃತಜ್ಞತೆ ಇರುತ್ತೆ. ಹಾಗಾಗಿ ಅವರು ತಪ್ಪದೇ ಹಾಜರಾಗ್ತಾರೆ.
ಅಮೋಘ ನಿರೀಕ್ಷೆ
6. ದೇವದೂತರು ಏನು ಮಾಡ್ಬೇಕು ಅಂತ ಯೇಸು ಹೇಳಿದನು?
6 ಮಹಾ ಸಂಕಟ ಇನ್ನೇನು ಶುರು ಆಗುತ್ತೆ. ಹಾಗಾಗಿ ಅಭಿಷಿಕ್ತ ಕ್ರೈಸ್ತರ ಬಗ್ಗೆ ಮತ್ತು ಬೇರೆ ಕುರಿಗಳಿರೋ ದೊಡ್ಡ ಗುಂಪಿನ ಬಗ್ಗೆ ಪ್ರಕಟನೆ ಪುಸ್ತಕದ 7 ನೇ ಅಧ್ಯಾಯದಲ್ಲಿ ಇನ್ಯಾವ ವಿಷ್ಯ ಇದೆ ಅಂತ ಚರ್ಚಿಸೋದು ಒಳ್ಳೇದು. ಎಲ್ಲಾ ಅಭಿಷಿಕ್ತ ಕ್ರೈಸ್ತರಿಗೆ ಕೊನೇ ಮುದ್ರೆ ಒತ್ತೋ ತನಕ ಅಂದ್ರೆ ಅವ್ರನ್ನ ನಂಬಿಗಸ್ತರು ಅಂತ ಯೆಹೋವ ತೀರ್ಮಾನ ಮಾಡೋ ತನಕ 4 ಗಾಳಿಗಳನ್ನ ಗಟ್ಟಿಯಾಗಿ ಹಿಡ್ಕೋಬೇಕು ಅಂತ ಯೇಸು ದೇವದೂತರಿಗೆ ಹೇಳಿದ. (ಪ್ರಕ. 7:1-4) ಕ್ರಿಸ್ತನ ಸಹೋದರರಾಗಿರೋ ಅಭಿಷಿಕ್ತ ಕ್ರೈಸ್ತರು ನಂಬಿಗಸ್ತರಾಗಿ ಇರೋದ್ರಿಂದ ಅವ್ರಿಗೆ ಮುಂದೆ ಸ್ವರ್ಗದಲ್ಲಿ ಯೇಸು ಜೊತೆ ರಾಜರು ಮತ್ತು ಪುರೋಹಿತರು ಆಗೋ ಬಹುಮಾನ ಸಿಗುತ್ತೆ. (ಪ್ರಕ. 20:6) 1,44,000 ಅಭಿಷಿಕ್ತ ಕ್ರೈಸ್ತರು ಸ್ವರ್ಗದಲ್ಲಿ ಬಹುಮಾನ ಪಡ್ಕೊಂಡಾಗ ಯೆಹೋವ, ಯೇಸು ಮತ್ತು ದೇವದೂತರಿಗೆ ತುಂಬಾ ಖುಷಿಯಾಗುತ್ತೆ.
7. (ಎ) ಪ್ರಕಟನೆ 7:9, 10 ರಲ್ಲಿ ತಿಳಿಸಿರುವಂತೆ ಯೋಹಾನ ದರ್ಶನದಲ್ಲಿ ಯಾರನ್ನ ನೋಡಿದ? (ಬಿ) ಅವರೇನು ಮಾಡ್ತಿದ್ರು? (ಮುಖಪುಟ ಚಿತ್ರ ನೋಡಿ.)
7 ಯೋಹಾನ 1,44,000 ರಾಜರ ಮತ್ತು ಪುರೋಹಿತರ ಬಗ್ಗೆ ಹೇಳಿದ ಮೇಲೆ ದರ್ಶನದಲ್ಲಿ ‘ಒಂದು ದೊಡ್ಡ ಗುಂಪನ್ನ’ ನೋಡಿದ. ಅವರು ಅರ್ಮಗೆದ್ದೋನ್ನಿಂದ ಪಾರಾಗಿ ಬಂದಿದ್ರು. ಮೊದಲ ಗುಂಪಿಗಿಂತ ಈ ಗುಂಪು ತುಂಬಾ ದೊಡ್ಡದಾಗಿತ್ತು. ಅದ್ರಲ್ಲಿ ಎಷ್ಟು ಜನ ಇದ್ದಾರೆ ಅಂತ ಲೆಕ್ಕ ಮಾಡಕ್ಕಾಗ್ತಿರಲಿಲ್ಲ. (ಪ್ರಕಟನೆ 7:9, 10 ಓದಿ.) ಅವರು ‘ಬಿಳಿ ಬಟ್ಟೆ ಹಾಕೊಂಡಿದ್ರು.’ ಇದು, ಅವರು ಸೈತಾನನ ಲೋಕದ ಕೆಟ್ಟತನದಿಂದ ದೂರ ಇದ್ರು ಮತ್ತು ದೇವರಿಗೆ, ಕ್ರಿಸ್ತನಿಗೆ ಕೊನೇ ತನಕ ನಿಷ್ಠಾವಂತರಾಗಿ ಇದ್ರು ಅನ್ನೋದನ್ನ ಸೂಚಿಸ್ತಿತ್ತು. (ಯಾಕೋ. 1:27) ಯೆಹೋವ ಮತ್ತು ಆತನ ಕುರಿಮರಿಯಾಗಿರೋ ಯೇಸು ತಮಗಾಗಿ ಮಾಡಿರೋ ವಿಷ್ಯಗಳಿಂದ ತಮಗೆ ರಕ್ಷಣೆ ಸಿಕ್ಕಿದೆ ಅಂತ ಅವರೆಲ್ಲರೂ ಕೂಗ್ತಿದ್ರು. ಜೊತೆಗೆ ಅವರು ಕೈಯಲ್ಲಿ ಖರ್ಜೂರದ ಗರಿಗಳನ್ನ ಹಿಡ್ಕೊಂಡಿದ್ರು. ಇದು ಅವರು ಯೇಸುವನ್ನ ರಾಜನಾಗಿ ಸಂತೋಷದಿಂದ ಸ್ವೀಕರಿಸಿದ್ದಾರೆ ಅಂತ ತೋರಿಸುತ್ತಿತ್ತು.—ಯೋಹಾನ 12:12, 13 ಹೋಲಿಸಿ.
8. ಪ್ರಕಟನೆ 7:11, 12 ಸ್ವರ್ಗದಲ್ಲಿ ಇರುವವರು ಏನು ಮಾಡ್ತಾರೆ ಅಂತ ಹೇಳುತ್ತೆ?
8 ಪ್ರಕಟನೆ 7:11, 12 ಓದಿ. ದೊಡ್ಡ ಗುಂಪನ್ನ ನೋಡಿದಾಗ ಸ್ವರ್ಗದಲ್ಲಿ ಇರುವವರು ಏನು ಮಾಡಿದ್ರು? ಅವ್ರೆಲ್ಲ ಯೆಹೋವನನ್ನ ಹಾಡಿ ಹೊಗಳೋದನ್ನ ಯೋಹಾನ ದರ್ಶನದಲ್ಲಿ ನೋಡಿದ. ಅದು ಮುಂದೆ ನಡೆದಾಗ ಅಂದ್ರೆ ದೊಡ್ಡ ಗುಂಪಿನವರು ಮಹಾ ಸಂಕಟದಿಂದ ಪಾರಾದಾಗ ಸ್ವರ್ಗದಲ್ಲಿರೋ ಎಲ್ರೂ ತುಂಬಾ ಖುಷಿ ಪಡ್ತಾರೆ.
9. ಪ್ರಕಟನೆ 7:13-15 ರಲ್ಲಿ ತಿಳಿಸಿರುವಂತೆ ದೊಡ್ಡ ಗುಂಪಿನವರು ಈಗ ಏನು ಮಾಡ್ತಿದ್ದಾರೆ?
9 ಪ್ರಕಟನೆ 7:13-15 ಓದಿ. ದೊಡ್ಡ ಗುಂಪಿನವರು ‘ತಮ್ಮ ಬಟ್ಟೆಗಳನ್ನ ಕುರಿಮರಿಯ ರಕ್ತದಲ್ಲಿ ಒಗೆದು ಬೆಳ್ಳಗೆ ಮಾಡ್ಕೊಂಡಿದ್ದಾರೆ’ ಅಂತ ಯೋಹಾನ ಬರೆದ. ಇದು ಅವ್ರಿಗಿರೋ ಶುದ್ಧ ಮನಸ್ಸಾಕ್ಷಿಯನ್ನ ಮತ್ತು ಯೆಹೋವ ಅವ್ರನ್ನ ಮೆಚ್ಚಿದ್ದಾನೆ ಅನ್ನೋದನ್ನ ಸೂಚಿಸುತ್ತೆ. (ಯೆಶಾ. 1:18) ಅವರು ತಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಂಡಿದ್ದಾರೆ. ಯೇಸು ಕೊಟ್ಟ ಬಲಿದಾನದ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಅವ್ರಿಗೆ ಯೆಹೋವನೊಟ್ಟಿಗೆ ಒಳ್ಳೆ ಸಂಬಂಧ ಇದೆ. (ಯೋಹಾ. 3:36; 1 ಪೇತ್ರ 3:21) ಹೀಗೆ ಅವರು ದೇವ್ರ ಸಿಂಹಾಸನದ ಮುಂದೆ ನಿಂತು ಭೂಮಿಯಲ್ಲಿ “ಹಗಲೂರಾತ್ರಿ ಆತನ ಪವಿತ್ರ ಸೇವೆ ಮಾಡ್ತಿದ್ದಾರೆ.” ಅಂದ್ರೆ ದೇವರ ಆಳ್ವಿಕೆ ಬಗ್ಗೆ ಸಾರ್ತಿದ್ದಾರೆ, ಜನ್ರನ್ನ ಶಿಷ್ಯರನ್ನಾಗಿ ಮಾಡ್ತಿದ್ದಾರೆ. ಈ ಕೆಲಸದಲ್ಲಿ ಅವ್ರದೇ ದೊಡ್ಡ ಪಾಲು. ಜೀವನದಲ್ಲಿ ಅವ್ರಿಗೆ ದೇವರ ಆಳ್ವಿಕೆನೇ ತುಂಬಾ ಮುಖ್ಯ.—ಮತ್ತಾ. 6:33; 24:14; 28:19, 20.
10. (ಎ) ದೊಡ್ಡ ಗುಂಪಿನವ್ರಿಗೆ ಯಾವ ಭರವಸೆ ಇರುತ್ತೆ? (ಬಿ) ಯಾವ ವಿಷ್ಯ ನಡಿಯೋದನ್ನ ಅವರು ನೋಡ್ತಾರೆ?
10 ಮಹಾ ಸಂಕಟವನ್ನ ಪಾರಾದ ಮೇಲೂ ದೇವರು ತಮ್ಮನ್ನ ನೋಡ್ಕೊಳ್ತಾನೆ ಅನ್ನೋ ಭರವಸೆ ದೊಡ್ಡ ಗುಂಪಿನವ್ರಿಗೆ ಇರುತ್ತೆ. ಯಾಕಂದ್ರೆ ‘ದೇವ್ರ ಡೇರೆ ಅವ್ರ ಮೇಲಿರುತ್ತೆ.’ ಬೇರೆ ಕುರಿಗಳು ತುಂಬ ಸಮ್ಯದಿಂದ ಕಾಯ್ತಾ ಇರೋ ವಿಷ್ಯ ನಿಜ ಆಗುತ್ತೆ. ಅದೇನಂದ್ರೆ: “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಪ್ರಕ. 21:3, 4.
ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—11-12. (ಎ) ಪ್ರಕಟನೆ 7:16, 17 ರಲ್ಲಿ ತಿಳಿಸಿರುವಂತೆ ದೊಡ್ಡ ಗುಂಪಿಗೆ ಮುಂದೆ ಯಾವ ಆಶೀರ್ವಾದಗಳು ಸಿಗುತ್ತೆ? (ಬಿ) ಕ್ರಿಸ್ತನ ಸ್ಮರಣೆಯಲ್ಲಿ ಬೇರೆ ಕುರಿಗಳು ಏನು ಮಾಡ್ತಾರೆ ಮತ್ತು ಯಾಕೆ ಮಾಡ್ತಾರೆ?
11 ಪ್ರಕಟನೆ 7:16, 17 ಓದಿ. ಇವತ್ತು ಕೆಲವು ದೇಶಗಳಲ್ಲಿ ಹಣಕಾಸಿನ ಕೊರತೆ, ಯುದ್ಧ, ದಂಗೆ ಇರೋದ್ರಿಂದ ಆಹಾರ ಖರೀದಿ ಮಾಡೋಕೆ ದುಡ್ಡಿಲ್ಲದೆ ಯೆಹೋವನ ಜನ್ರು ಹಸಿವೆಯಿಂದ ಬಳಲುತ್ತಿದ್ದಾರೆ. ಇನ್ನು ಕೆಲವು ಸಾಕ್ಷಿಗಳು ಕ್ರೈಸ್ತ ನಂಬಿಕೆಯನ್ನ ಬಿಟ್ಟುಕೊಡದೇ ಇರೋದ್ರಿಂದ ಜೈಲಲ್ಲಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ದೊಡ್ಡ ಗುಂಪಿನವರು ಸಂತೋಷದಿಂದ ಇದ್ದಾರೆ. ಯಾಕಂದ್ರೆ ಈ ಕೆಟ್ಟ ಲೋಕ ನಾಶವಾಗುತ್ತೆ, ಆಮೇಲೆ ಹೊಟ್ಟೆ ತುಂಬಾ ಊಟ ಸಿಗುತ್ತೆ ಮತ್ತು ಯೆಹೋವನ ಸಂಬಂಧವನ್ನ ಇನ್ನಷ್ಟು ಗಟ್ಟಿ ಮಾಡ್ಕೊಳ್ಳೋಕೆ ಬೇಕಾದ ಸಹಾಯನೂ ಸಿಗುತ್ತೆ ಅಂತ ಅವ್ರಿಗೆ ಗೊತ್ತು. ಯೆಹೋವನು ಸೈತಾನನ ಲೋಕವನ್ನ ನಾಶಮಾಡ್ವಾಗ ಆತನ ಕೋಪದ “ಬಿಸಿ ಗಾಳಿ” ದೊಡ್ಡ ಗುಂಪಿಗೆ ತಟ್ಟದೇ ಇರೋ ತರ ಅವ್ರನ್ನ ಕಾಪಾಡ್ತಾನೆ. ಮಹಾ ಸಂಕಟದಲ್ಲಿ ಪಾರಾದವ್ರನ್ನ ಯೇಸು ಶಾಶ್ವತ ‘ಜೀವ ಕೊಡೋ ನೀರಿನ ಬುಗ್ಗೆ’ ಹತ್ರ ಕರ್ಕೊಂಡು ಹೋಗ್ತಾನೆ. ನಿಜಕ್ಕೂ ದೊಡ್ಡ ಗುಂಪಿನವ್ರಿಗೆ ಅದ್ಭುತ ನಿರೀಕ್ಷೆ ಇದೆ. ಕೋಟ್ಯಾಂತರ ಜನ ಸಾವೇ ಇಲ್ಲದೆ ಶಾಶ್ವತವಾಗಿ ಬದುಕ್ತಾರೆ.—ಯೋಹಾ. 11:26.
12 ಈ ಅದ್ಭುತ ನಿರೀಕ್ಷೆ ಕೊಟ್ಟಿದ್ದಕ್ಕಾಗಿ ಬೇರೆ ಕುರಿಗಳು ಯೆಹೋವನಿಗೆ ಮತ್ತು ಯೇಸುಗೆ ಕೃತಜ್ಞರಾಗಿದ್ದಾರೆ. ಯೆಹೋವ ಅವ್ರನ್ನ ಸ್ವರ್ಗದಲ್ಲಿ ಜೀವಿಸೋಕೆ ಆರಿಸದೇ ಇದ್ರೂ ಅಭಿಷಿಕ್ತರನ್ನ ಎಷ್ಟು ಪ್ರೀತಿಸ್ತಾನೋ ಇವ್ರನ್ನೂ ಅಷ್ಟೇ ಪ್ರೀತಿಸ್ತಾನೆ. ಅಭಿಷಿಕ್ತ ಕ್ರೈಸ್ತರಂತೆ ದೊಡ್ಡ ಗುಂಪಿನವರು ಸಹ ದೇವರನ್ನು, ಕ್ರಿಸ್ತನನ್ನು ಹಾಡಿ ಹೊಗಳ್ತಾ ಅವ್ರಿಗೆ ಧನ್ಯವಾದ ಹೇಳ್ತಾರೆ. ಇದನ್ನ ಈಗ ಮಾಡೋ ಒಂದು ವಿಧ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗೋದೇ ಆಗಿದೆ.
ಸ್ಮರಣೆಯಲ್ಲಿ ಯೆಹೋವನನ್ನ ಯೇಸುವನ್ನ ಹೃದಯಾಳದಿಂದ ಹಾಡಿ ಹೊಗಳಿ
13-14. ಕ್ರಿಸ್ತನ ಮರಣದ ಸ್ಮರಣೆಗೆ ಯಾಕೆ ಎಲ್ರೂ ಹಾಜರಾಗಬೇಕು?
13 ಸ್ಮರಣೆಯಲ್ಲಿ ಎಷ್ಟು ಜನ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ತಾರೆ? ಇತ್ತೀಚಿನ ವರ್ಷಗಳಲ್ಲಿ, ಸುಮಾರು 1,000 ಜನ್ರಲ್ಲಿ ಅಬ್ಬಬ್ಬಾ ಅಂದ್ರೆ ಒಬ್ಬ ವ್ಯಕ್ತಿ ತಗೊಳ್ತಾನೆ. ಅದರರ್ಥ ಲೋಕದಲ್ಲಿರೋ ಹೆಚ್ಚಿನ ಸಭೆಗಳಲ್ಲಿ ಯಾರೂ ಕೂಡ ಸ್ಮರಣೆ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳಲ್ಲ. ಹಾಗಂದ್ರೆ ಈಗಿರೋ ಹೆಚ್ಚಿನ ಜನ್ರಿಗೆ ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇದೆ. ಹಾಗಿದ್ರೂ ಅವರು ಯಾಕೆ ಸ್ಮರಣೆಗೆ ಹಾಜರಾಗ್ತಾರೆ? ಒಂದು ಉದಾಹರಣೆ ನೋಡಿ. ನೀವ್ಯಾಕೆ ನಿಮ್ಮ ಸ್ನೇಹಿತರ ಮದುವೆಗೆ ಹೋಗ್ತೀರಾ? ಆ ನವ ವಧು-ವರರ ಮೇಲೆ ನಿಮ್ಗೆ ಪ್ರೀತಿ ಇದೆ, ಅವ್ರು ಮದುವೆ ಆಗ್ತಿರೋದು ನಿಮ್ಗೂ ಸಂತೋಷನೇ ಅನ್ನೋದನ್ನ ತೋರಿಸಿಕೊಡೋಕೆ ಅವ್ರ ಮದುವೆಗೆ ಹೋಗ್ತೀರಿ. ಅದೇ ತರ ಬೇರೆ ಕುರಿಗಳಿಗೆ ಕ್ರಿಸ್ತನ ಮೇಲೆ ಮತ್ತು ಅಭಿಷಿಕ್ತ ಕ್ರೈಸ್ತರ ಮೇಲೆ ಪ್ರೀತಿ ಇದೆ. ಅವರಿಬ್ಬರ ಖುಷಿಯಲ್ಲಿ ಭಾಗಿಯಾಗೋಕೆ
ಬಯಸ್ತಾರೆ. ಅದಕ್ಕೆ ಸ್ಮರಣೆಗೆ ಹಾಜರಾಗ್ತಾರೆ. ಅಷ್ಟೇ ಅಲ್ಲ, ಯೇಸು ಮಾಡಿದ ತ್ಯಾಗವನ್ನ ನೆನಸಿಕೊಳ್ಳೋದಕ್ಕೂ ಬೇರೆ ಕುರಿಗಳು ಸ್ಮರಣೆಗೆ ಹಾಜರಾಗ್ತಾರೆ. ಯೇಸು ಮಾಡಿದ ತ್ಯಾಗದಿಂದ ಅವ್ರಿಗೆ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಸಿಕ್ಕಿದೆ.14 ಇನ್ನೊಂದು ಕಾರಣಕ್ಕೂ ಬೇರೆ ಕುರಿಗಳು ಸ್ಮರಣೆಗೆ ಹಾಜರಾಗ್ತಾರೆ. ಯೇಸು ಈ ಆಚರಣೆಯನ್ನ ತನ್ನ ಶಿಷ್ಯರ ಜೊತೆ ಮೊದಲ ಸಲ ಆರಂಭಿಸಿದಾಗ “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ” ಅಂತ ಆಜ್ಞೆ ಕೊಟ್ಟನು. (1 ಕೊರಿಂ. 11:23-26) ಹಾಗಾಗಿ ಭೂಮಿ ಮೇಲೆ ಎಷ್ಟರ ತನಕ ಅಭಿಷಿಕ್ತ ಕ್ರೈಸ್ತರು ಇರ್ತಾರೋ ಅಷ್ಟರ ತನಕ ಬೇರೆ ಕುರಿಗಳು ಕ್ರಿಸ್ತನ ಮರಣದ ಸ್ಮರಣೆ ಆಚರಿಸ್ತಾರೆ. ಬೇರೆಯವ್ರನ್ನೂ ಸ್ಮರಣೆಗೆ ಕರಿತಾರೆ.
15. ಸ್ಮರಣೆಯಲ್ಲಿ ದೇವರಿಗೆ ಮತ್ತು ಕ್ರಿಸ್ತನಿಗೆ ಕೃತಜ್ಞತೆ ಹೇಳಲು ನಾವೇನು ಮಾಡಬೇಕು?
15 ಸ್ಮರಣೆಯಲ್ಲಿ ನಾವು ಹಾಡು ಹಾಡುವಾಗ ಪ್ರಾರ್ಥಿಸುವಾಗ ದೇವರನ್ನ ಮತ್ತು ಕ್ರಿಸ್ತನನ್ನ ಹಾಡಿಹೊಗಳೋ ಅವಕಾಶ ನಮ್ಗೆ ಸಿಗುತ್ತೆ. ಈ ವರ್ಷ ಸ್ಮರಣೆಯಲ್ಲಿ ಕೊಡೋ ಭಾಷಣದ ಮುಖ್ಯ ವಿಷ್ಯ: “ಯೆಹೋವನು ಮತ್ತು ಯೇಸು ನಿಮಗೋಸ್ಕರ ಮಾಡಿದ ವಿಷ್ಯಗಳಿಗೆ ಕೃತಜ್ಞರಾಗಿರಿ.” ಈ ಭಾಷಣ ಯೆಹೋವನ ಮೇಲೆ ಮತ್ತು ಕ್ರಿಸ್ತನ ಮೇಲೆ ಹೆಚ್ಚು ಕೃತಜ್ಞತೆ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ. ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ದಾಟಿಸುವಾಗ ರೊಟ್ಟಿಯು ಯೇಸುವಿನ ದೇಹವನ್ನ ಮತ್ತು ದ್ರಾಕ್ಷಾಮದ್ಯ ಅವನ ರಕ್ತವನ್ನ ಸೂಚಿಸುತ್ತೆ ಅನ್ನೋದು ನಮ್ಮ ಮನಸ್ಸಿಗೆ ಬರುತ್ತೆ. ನಮ್ಮ ಜೀವ ಉಳಿಸಕ್ಕೋಸ್ಕರ ತನ್ನ ಮಗನ ಜೀವವನ್ನ ಕೊಟ್ಟ ಯೆಹೋವನ ಮೇಲೆ ಪ್ರೀತಿ ಉಕ್ಕುತ್ತೆ. (ಮತ್ತಾ. 20:28) ಯಾರಿಗೆ ಯೆಹೋವನ ಮೇಲೆ ಆತನ ಮಗನ ಮೇಲೆ ಪ್ರೀತಿ ಇದೆಯೋ ಅವರೆಲ್ಲರೂ ಸ್ಮರಣೆಗೆ ಬಂದೇ ಬರ್ತಾರೆ.
ಅದ್ಭುತ ನಿರೀಕ್ಷೆ ಕೊಟ್ಟಿರೋದಕ್ಕೆ ಯೆಹೋವನಿಗೆ ಥ್ಯಾಂಕ್ಸ್ ಹೇಳಿ
16. ಯೆಹೋವನು ಅಭಿಷಿಕ್ತರ ಮತ್ತು ಬೇರೆ ಕುರಿಗಳ ಮಧ್ಯ ಭೇದಭಾವ ಮಾಡ್ತಾನಾ? ವಿವರಿಸಿ.
16 ಅಭಿಷಿಕ್ತ ಕ್ರೈಸ್ತರ ನಿರೀಕ್ಷೆನೇ ಬೇರೆ, ಬೇರೆ ಕುರಿಗಳ ನಿರೀಕ್ಷೆನೇ ಬೇರೆ. ಆದ್ರೂ ಅವರಿಬ್ಬರೂ ಯೆಹೋವನಿಗೆ ಅಮೂಲ್ಯ. ಯಾಕಂದ್ರೆ ಅಭಿಷಿಕ್ತರಿಗೋಸ್ಕರನೂ ಬೇರೆ ಕುರಿಗಳಿಗೋಸ್ಕರನೂ ಆತ ಒಂದೇ ಬೆಲೆ ಕೊಟ್ಟಿದ್ದಾನೆ, ಅದೇ ತನ್ನ ಮಗನ ಜೀವ. ಆದ್ರೆ ಎರಡೂ ಗುಂಪು ಈ ಬೆಲೆಯಿಂದ ಪೂರ್ಣ ಪ್ರಯೋಜನ ಪಡ್ಕೋಬೇಕು ಅಂದ್ರೆ ಅವರು ದೇವರಿಗೆ ಮತ್ತು ಕ್ರಿಸ್ತನಿಗೆ ನಿಷ್ಠಾವಂತರು ಆಗಿರಬೇಕು. (ಕೀರ್ತ. 31:23) ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಅಭಿಷಿಕ್ತನಾಗಿರಲಿ, ಬೇರೆ ಕುರಿಯಾಗಿರಲಿ ಅವ್ನಿಗೆ ಬೇಕಾದ ಪವಿತ್ರ ಶಕ್ತಿಯನ್ನ ಯೆಹೋವ ಕೊಟ್ಟೇ ಕೊಡ್ತಾನೆ. ಒಬ್ನಿಗೆ ಜಾಸ್ತಿ ಇನ್ನೊಬ್ಬನಿಗೆ ಕಡಿಮೆ ಕೊಡಲ್ಲ.
17. ಈಗ ಭೂಮಿಯಲ್ಲಿರೋ ಅಭಿಷಿಕ್ತ ಕ್ರೈಸ್ತರು ಯಾವುದಕ್ಕಾಗಿ ಕಾತುರದಿಂದ ಕಾಯ್ತಿದ್ದಾರೆ?
17 ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಅಭಿಷಿಕ್ತ ಕ್ರೈಸ್ತರಿಗೆ ಹುಟ್ಟಿನಿಂದ್ಲೇ ಬಂದುಬಿಡಲ್ಲ. ಆ ನಿರೀಕ್ಷೆನ ದೇವರು ಅವ್ರಲ್ಲಿ ಹುಟ್ಟಿಸ್ತಾನೆ. ಅಭಿಷಿಕ್ತರು ತಮ್ಮ ನಿರೀಕ್ಷೆ ಬಗ್ಗೆ ಯೋಚಿಸ್ತಾರೆ, ಪ್ರಾರ್ಥಿಸ್ತಾರೆ ಮತ್ತು ಸ್ವರ್ಗದಲ್ಲಿ ಬಹುಮಾನ ಪಡಿಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಸ್ವರ್ಗದಲ್ಲಿ ಯಾವ ರೀತಿ ದೇಹ ಸಿಗುತ್ತೆ ಅಂತ ಅವ್ರಿಗೆ ಗೊತ್ತಿಲ್ಲ. (ಫಿಲಿ. 3:20, 21; 1 ಯೋಹಾ. 3:2) ಆದ್ರೂ ಅವರು ಯೆಹೋವ, ಯೇಸು, ದೇವದೂತರು ಮತ್ತು ಈಗಾಗ್ಲೇ ಸ್ವರ್ಗಕ್ಕೆ ಹೋಗಿರೋ ಅಭಿಷಿಕ್ತರನ್ನ ನೋಡೋಕೆ, ಸ್ವರ್ಗದಲ್ಲಿ ತಮಗೆ ಕೊಡೋ ಅಧಿಕಾರ ವಹಿಸಿಕೊಳ್ಳೋಕೆ ಕಾತುರದಿಂದ ಕಾಯ್ತಿದ್ದಾರೆ.
18. ಬೇರೆ ಕುರಿಗಳು ಯಾವುದಕ್ಕಾಗಿ ಕಾಯ್ತಾ ಇದ್ದಾರೆ?
18 ಬೇರೆ ಕುರಿಗಳು ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋಕೆ ಕಾಯ್ತಾ ಇದ್ದಾರೆ. ಈ ಆಸೆ ಸಾಮಾನ್ಯವಾಗಿ ಎಲ್ಲ ಮನುಷ್ಯರಿಗೂ ಇರುತ್ತೆ. (ಪ್ರಸಂ. 3:11) ಇಡೀ ಭೂಮಿಯನ್ನ ಪರದೈಸಾಗಿ ಮಾಡೋ ಕೆಲಸದಲ್ಲಿ ಕೈಜೋಡಿಸೋ ದಿನಕ್ಕಾಗಿ ಬೇರೆ ಕುರಿಗಳು ಕಾಯ್ತಿದ್ದಾರೆ. ಅಲ್ಲಿ ಅವ್ರು ತಮ್ಮ ಮನೆಯನ್ನ ತಾವೇ ಕಟ್ತಾರೆ, ತೋಟ ಮಾಡ್ತಾರೆ, ಅವ್ರಿಗೂ ಅವ್ರ ಮಕ್ಕಳಿಗೂ ಒಳ್ಳೆ ಆರೋಗ್ಯ ಇರುತ್ತೆ. (ಯೆಶಾ. 65:21-23) ಪರದೈಸಲ್ಲಿ ಬೆಟ್ಟ-ಗುಡ್ಡ, ಕಾಡು-ಮೇಡು, ಸಮುದ್ರ ಹೀಗೆ ತಮಗಿಷ್ಟ ಬಂದ ಕಡೆ ಸುತ್ತಾಡ್ತಾರೆ. ಯೆಹೋವ ಏನೆಲ್ಲಾ ಸೃಷ್ಟಿ ಮಾಡಿದ್ದಾನೋ ಅದ್ರ ಬಗ್ಗೆ ಕಲಿತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವನ ಜೊತೆ ಅವ್ರಿಗಿರೋ ಸ್ನೇಹ ಇನ್ನೂ ಹೆಚ್ಚಾಗ್ತಾ ಹೋಗುತ್ತೆ. ಇದು ಅವ್ರಿಗೆ ತುಂಬ ಖುಷಿ ಕೊಡುತ್ತೆ.
19. (ಎ) ಸ್ಮರಣೆಯಲ್ಲಿ ಪ್ರತಿಯೊಬ್ರಿಗೂ ಯಾವ ಅವಕಾಶ ಇದೆ? (ಬಿ) ಈ ವರ್ಷ ಸ್ಮರಣೆ ಯಾವಾಗ ನಡೆಯುತ್ತೆ?
19 ಯೆಹೋವ ತನ್ನ ಪ್ರತಿಯೊಬ್ಬ ಸಮರ್ಪಿತ ಸೇವಕನಿಗೂ ಅದ್ಭುತ ನಿರೀಕ್ಷೆ ಕೊಟ್ಟಿದ್ದಾನೆ. (ಯೆರೆ. 29:11) ನಮ್ಮೆಲ್ರಿಗೂ ಸಾವೇ ಇಲ್ಲದ ಜೀವನ ಸಿಗಬೇಕು ಅಂತ ಯೆಹೋವ ಮತ್ತು ಯೇಸು ತುಂಬಾ ತ್ಯಾಗಗಳನ್ನ ಮಾಡಿದ್ದಾರೆ. ಈ ವರ್ಷ ನಡಿಯೋ ಸ್ಮರಣೆಯಲ್ಲಿ ಎರಡು ಗುಂಪುಗಳಿಗೂ ಯೆಹೋವನನ್ನ, ಯೇಸುವನ್ನ ಹಾಡಿಹೊಗಳೋ ದೊಡ್ಡ ಅವಕಾಶ ಇದೆ. ಯೆಹೋವನ ಸಾಕ್ಷಿಗಳಿಗೆ ಸ್ಮರಣೆಯ ದಿನ ವರ್ಷದಲ್ಲೇ ತುಂಬಾ ವಿಶೇಷವಾದ ದಿನ. ಈ ವರ್ಷ ಅಂದ್ರೆ 2021 ರಲ್ಲಿ ಮಾರ್ಚ್ 27 ರ ಶನಿವಾರದಂದು ಸಂಜೆ ಸೂರ್ಯ ಮುಳುಗಿದ ಮೇಲೆ ಸ್ಮರಣೆ ನಡಿಯುತ್ತೆ. ಈ ವಿಶೇಷವಾದ ಕಾರ್ಯಕ್ರಮಕ್ಕೆ ಹಾಜರಾಗೋಕೆ ತುಂಬ ಜನ್ರಿಗೆ ಯಾವ್ದೇ ಅಡ್ಡಿತಡೆ ಇಲ್ಲ. ಆದ್ರೆ ಕೆಲವರು ವಿರೋಧ ಎದುರಿಸಿ ಇದಕ್ಕೆ ಹಾಜರಾಗಬೇಕಾಗುತ್ತೆ. ಇನ್ನು ಕೆಲವರು ಇದನ್ನ ಜೈಲಲ್ಲಿ ಆಚರಿಸಬೇಕಾಗುತ್ತೆ. ಪ್ರತಿಯೊಬ್ಬ ವ್ಯಕ್ತಿ, ಗುಂಪು, ಸಭೆ ಸ್ಮರಣೆ ಮಾಡ್ವಾಗ ಸ್ವರ್ಗದಲ್ಲಿರೋ ಯೆಹೋವ, ಯೇಸು, ದೇವದೂತರು, ಅಭಿಷಿಕ್ತರು ನೋಡ್ತಾ ಇರ್ತಾರೆ. ಹಾಗಾಗಿ ಪ್ರತಿಯೊಬ್ರು ಈ ವರ್ಷ ಸ್ಮರಣೆಯನ್ನ ಚೆನ್ನಾಗಿ ಆಚರಿಸಿ!
ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನ ಆಶ್ರಯಿಸು
^ ಪ್ಯಾರ. 5 ಮಾರ್ಚ್ 27, 2021 ಯೆಹೋವನ ಸಾಕ್ಷಿಗಳಿಗೆ ವಿಶೇಷ ದಿನ. ಆ ದಿನ ಸಂಜೆ ಕ್ರಿಸ್ತನ ಮರಣದ ಸ್ಮರಣೆಯನ್ನು ಆಚರಿಸಲಾಗುತ್ತೆ. ಅದಕ್ಕೆ ಹಾಜರಾಗುವವ್ರಲ್ಲಿ ಹೆಚ್ಚಿನ ಜನ “ಬೇರೆ ಕುರಿಗಳು” ಅಂತ ಯೇಸು ಯಾರನ್ನು ಕರೆದನೋ ಆ ಗುಂಪಿಗೆ ಸೇರಿದವರಾಗಿದ್ದಾರೆ. 1935 ರಲ್ಲಿ ಈ ಗುಂಪಿನ ಬಗ್ಗೆ ಯಾವ ಹೊಸ ಸತ್ಯ ಬೆಳಕಿಗೆ ಬಂತು? ಮಹಾ ಸಂಕಟದ ನಂತ್ರ ಈ ಗುಂಪಿಗೆ ಯಾವ ಆಶೀರ್ವಾದಗಳು ಸಿಗುತ್ತೆ? ಈ ಗುಂಪಿನ ಸದಸ್ಯರು ಸ್ಮರಣೆಗೆ ಹಾಜರಾದಾಗ ಹೇಗೆ ದೇವರನ್ನು ಸ್ತುತಿಸ್ತಾರೆ ಮತ್ತು ಕ್ರಿಸ್ತನಿಗೆ ಕೃತಜ್ಞತೆ ಹೇಳ್ತಾರೆ?
^ ಪ್ಯಾರ. 2 ಪದ ವಿವರಣೆ: ಕ್ರಿಸ್ತನನ್ನು ಹಿಂಬಾಲಿಸುತ್ತಾ, ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇಟ್ಟಿರುವಂಥ ಜನ್ರೇ ಬೇರೆ ಕುರಿಗಳು. ಇವ್ರು ಕಡೇ ದಿವಸಗಳಲ್ಲಿ ಯೆಹೋವನ ಆರಾಧನೆ ಮಾಡೋಕೆ ಶುರುಮಾಡಿದ್ದಾರೆ. ಮಹಾ ಸಂಕಟದ ಸಮಯದಲ್ಲಿ ಇಡೀ ಮಾನವಕುಲದ ಮೇಲೆ ಕ್ರಿಸ್ತನು ನ್ಯಾಯತೀರ್ಪು ಮಾಡುವಾಗ ಜೀವಂತವಾಗಿರೋ ಬೇರೆ ಕುರಿಗಳೇ ಮಹಾ ಸಮೂಹ ಅಥ್ವಾ ದೊಡ್ಡ ಗುಂಪು. ಇವರು ಮಹಾ ಸಂಕಟದಿಂದ ಪಾರಾಗ್ತಾರೆ.