ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 1

ಯೆಹೋವನಲ್ಲಿ ಭರವಸೆ ಇಟ್ಟು ಶಾಂತಿಯಿಂದ ಇರಿ

ಯೆಹೋವನಲ್ಲಿ ಭರವಸೆ ಇಟ್ಟು ಶಾಂತಿಯಿಂದ ಇರಿ

2021 ರ ನಮ್ಮ ವರ್ಷವಚನ: ‘ಶಾಂತಿಯಿಂದ ಇದ್ದು ನನ್ನ ಮೇಲೆ ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ.’—ಯೆಶಾ. 30:15.

ಗೀತೆ 152 ಯೆಹೋವ ನೀನೇ ಆಶ್ರಯ

ಕಿರುನೋಟ *

1. ರಾಜ ದಾವೀದನ ತರ ನಮ್ಮಲ್ಲೂ ಕೆಲವ್ರಿಗೆ ಯಾವ ಪ್ರಶ್ನೆ ಬರಬಹುದು?

ನಾವೆಲ್ರೂ ನೆಮ್ಮದಿಯಿಂದ ಜೀವನ ಮಾಡಬೇಕು ಅಂತ ಬಯಸ್ತೇವೆ. ಯಾರಿಗೂ ಚಿಂತೆಯಲ್ಲೇ ಮುಳುಗಬೇಕು ಅಂತ ಆಸೆ ಇರಲ್ಲ. ಆದ್ರೂ ಕೆಲವೊಮ್ಮೆ ಚಿಂತೆ ಕಾಡುತ್ತೆ. ರಾಜ ದಾವೀದನಿಗೆ ತುಂಬ ಚಿಂತೆ ಆದಾಗ ಯೆಹೋವನ ಹತ್ರ ಹೀಗೆ ಕೇಳ್ದ: “[ನಾನು] ಎಲ್ಲಿ ತನಕ ಚಿಂತೆಯಲ್ಲೇ ಮುಳುಗಿರಬೇಕು? ಪ್ರತಿದಿನ ಯಾತನೆಪಡೋ ನನ್ನ ಹೃದಯ ಎಲ್ಲಿ ತನಕ ದುಃಖದ ಭಾರನ ಸಹಿಸ್ಕೊಬೇಕು?” (ಕೀರ್ತ. 13:2) ಈ ಪ್ರಶ್ನೆ ನಮ್ಮಲ್ಲೂ ಕೆಲವ್ರಿಗೆ ಬರಬಹುದು.

2. ಈ ಲೇಖನದಲ್ಲಿ ನಾವೇನನ್ನು ಚರ್ಚಿಸ್ತೇವೆ?

2 ಚಿಂತೆನೇ ಬರದಿರೋ ತರ ತಡೆಯೋಕ್ಕಂತೂ ನಮ್ಮ ಕೈಯಲ್ಲಿ ಆಗಲ್ಲ. ಆದ್ರೆ ನಮ್ಮ ಚಿಂತೆಯನ್ನ ಕಡಿಮೆ ಮಾಡೋಕೆ ದಾರಿಗಳಿವೆ. ಈ ಲೇಖನದಲ್ಲಿ, ಮೊದ್ಲಿಗೆ ಯಾವೆಲ್ಲ ಕಾರಣದಿಂದ ನಮಗೆ ಚಿಂತೆ ಆಗುತ್ತೆ ಅಂತ ನೋಡೋಣ. ನಂತ್ರ ಸಮಸ್ಯೆ ಇದ್ದಾಗ್ಲೂ ಶಾಂತಿಯಿಂದ ಇರೋಕೆ ಸಹಾಯ ಮಾಡೋ 6 ದಾರಿಗಳ ಬಗ್ಗೆ ಚರ್ಚಿಸೋಣ.

ಚಿಂತೆಗೆ ಕಾರಣ

3. (ಎ) ಯಾವ ಕಷ್ಟ, ಸಮಸ್ಯೆ ನಮಗೆ ಬರುತ್ತೆ? (ಬಿ) ಇಂಥ ಕಷ್ಟಗಳು ಬರದೇ ಇರೋ ತರ ತಡಿಯೋಕೆ ಯಾಕೆ ಆಗಲ್ಲ?

3 ತುಂಬಾ ವಿಷ್ಯಗಳಿಂದ ನಮಗೆ ಚಿಂತೆ ಕಾಡುತ್ತೆ. ಉದಾಹರಣೆಗೆ ಬೆಲೆಯೇರಿಕೆಯಿಂದ, ಹೆಚ್ಚುತ್ತಿರೋ ಅಪರಾಧಗಳಿಂದ, ನಮ್ಮ ಜೊತೆ ಕೆಲಸ ಮಾಡೋರು ಮೋಸ ಮಾಡೋಕೆ, ಅನೈತಿಕತೆಯಲ್ಲಿ ಒಳಗೂಡೋಕೆ ಒತ್ತಾಯ ಮಾಡೋದ್ರಿಂದ ನಮ್ಗೆ ಚಿಂತೆ ಕಾಡುತ್ತೆ. ಇಂಥ ಕಷ್ಟಗಳು ಬರದಿರೋ ತರ ತಡೆಯೋಕೆ ನಮಗಾಗಲ್ಲ. ಯಾಕಂದ್ರೆ ಬೈಬಲ್‌ ನಿಯಮಗಳನ್ನ ಪಾಲಿಸದ ಜನ್ರೇ ಈ ಲೋಕದಲ್ಲಿ ತುಂಬಿದ್ದಾರೆ. ಅಷ್ಟೇ ಅಲ್ಲ ಈ ಲೋಕದ ದೇವರು ಸೈತಾನ. ನಾವು ಜೀವನದ ಚಿಂತೆಯಲ್ಲೇ ಮುಳುಗಿ ಯೆಹೋವನ ಸೇವೆಯನ್ನ ನಿಲ್ಲಿಸಬೇಕು ಅನ್ನೋದೇ ಸೈತಾನನ ಆಸೆ. (ಮತ್ತಾ. 13:22; 1 ಯೋಹಾ. 5:19) ಹಾಗಾಗಿ ಲೋಕದಲ್ಲಿ ಸಮಸ್ಯೆಗಳು ಜಾಸ್ತಿ ಆಗ್ತಾ ಹೋಗುತ್ತೆ, ನಮ್ಗೆ ಚಿಂತೆನೂ ಬಂದೇ ಬರುತ್ತೆ.

4. ಸಮಸ್ಯೆಗಳು ಹೆಚ್ಚಾದಾಗ ಸಾಮಾನ್ಯವಾಗಿ ನಮಗೇನು ಆಗಬಹುದು?

4 ನಮ್ಗೆ ಬರೋ ಸಮಸ್ಯೆಗಳಿಂದಾಗಿ ಹಗಲುರಾತ್ರಿ ಅದೇ ಚಿಂತೆ ಆಗ್ಬಿಡಬಹುದು. ಉದಾಹರಣೆಗೆ, ಜೀವನಕ್ಕೆ ಬೇಕಾದಷ್ಟು ಹಣ ಸಂಪಾದನೆ ಮಾಡೋಕೆ ಆಗುತ್ತೋ ಇಲ್ವೋ, ಆರೋಗ್ಯ ಕೆಟ್ಟು ಕೆಲಸ ಕಳಕೊಳ್ಳುತ್ತೀವೋ ಏನೋ, ದೇವರ ನಿಯಮವನ್ನ ಮುರಿದುಬಿಡ್ತೀವೋ ಏನೋ ಅನ್ನೋ ಚಿಂತೆ ಕಾಡಬಹುದು. ಮುಂದೆ ಸೈತಾನನ ಜನ್ರು ದೇವಜನ್ರ ಮೇಲೆ ದಾಳಿ ಮಾಡ್ವಾಗ ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸ್ತೇವೋ ಅನ್ನೋ ಭಯ, ಚಿಂತೆನೂ ಆಗಬಹುದು. ‘ಈ ರೀತಿ ಚಿಂತೆ ಕಾಡೋದು ತಪ್ಪಾ’ ಅನ್ನೋ ಪ್ರಶ್ನೆ ಕೂಡ ಮನಸ್ಸಿಗೆ ಬರಬಹುದು.

5. “ಯಾವತ್ತೂ ಚಿಂತೆಮಾಡಬೇಡಿ” ಅಂತ ಯೇಸು ಹೇಳಿದ್ರ ಅರ್ಥ ಏನು?

5 “ಯಾವತ್ತೂ ಚಿಂತೆಮಾಡಬೇಡಿ” ಅಂತ ಯೇಸು ಶಿಷ್ಯರಿಗೆ ಹೇಳಿದ್ದನು. (ಮತ್ತಾ. 6:25) ಇದ್ರರ್ಥ, ಏನೇ ಆದ್ರೂ ಚಿಂತೆನೇ ಮಾಡ್ಬಾರದು ಅಂತನಾ? ಅಲ್ಲ. ಹಿಂದೆ ಕೂಡ ಯೆಹೋವನ ನಿಷ್ಠಾವಂತ ಸೇವಕರಿಗೆ ಚಿಂತೆ ಕಾಡಿತ್ತು. ಆಗ ದೇವರು ಅವ್ರ ಮೇಲೆ ಕೋಪ ಮಾಡಿಕೊಳ್ಳಲಿಲ್ಲ. * (1 ಅರ. 19:4; ಕೀರ್ತ. 6:3) “ಯಾವತ್ತೂ ಚಿಂತೆಮಾಡಬೇಡಿ” ಅಂತ ಹೇಳಿ ಯೇಸು ನಮಗೆ ಧೈರ್ಯ ತುಂಬುತ್ತಿದ್ದಾನೆ. ಜೀವನ ಮಾಡೋದು ಹೇಗೆ ಅನ್ನೋದ್ರ ಬಗ್ಗೆ ಹೆಚ್ಚು ಚಿಂತೆ ಮಾಡಿದರೆ ದೇವರ ಸೇವೆಗೆ ಅಡ್ಡಿಯಾಗುತ್ತೆ. ಹಾಗೆ ಆಗಬಾರದು ಅನ್ನೋದು ಯೇಸು ಮಾತಿನ ಅರ್ಥ. ಹಾಗಾದ್ರೆ ಚಿಂತೆ ಕಡಿಮೆ ಮಾಡೋಕೆ ಯಾವ ದಾರಿ ಇದೆ?—“ ದಾರಿಗಳು” ಅನ್ನೋ ಚೌಕ ನೋಡಿ.

ಶಾಂತಿಯಿಂದ ಇರೋಕೆ ಸಹಾಯಮಾಡೋ 6 ದಾರಿಗಳು

ಪ್ಯಾರ 6 ನೋಡಿ *

6. ಫಿಲಿಪ್ಪಿ 4:6, 7 ರ ಪ್ರಕಾರ ಚಿಂತೆ ಕಡಿಮೆ ಮಾಡೋಕೆ ನಮ್ಗೆ ಯಾವುದು ಸಹಾಯ ಮಾಡುತ್ತೆ?

6 (1) ಪ್ರಾರ್ಥನೆ ಮಾಡ್ತಾ ಇರಿ. ನಮಗೆ ಸಮಸ್ಯೆಗಳು ಹೆಚ್ಚಾದಾಗ, ಚಿಂತೆ ಆದಾಗ ಯೆಹೋವನ ಹತ್ರ ಪ್ರಾರ್ಥನೆ ಮಾಡಿ ಸಹಾಯ ಕೇಳಬೇಕು. (1 ಪೇತ್ರ 5:7) ನಾವು ಮಾಡಿದ ಪ್ರಾರ್ಥನೆಗೆ ದೇವರು ಉತ್ತರ ಕೊಡ್ತಾನೆ, ಮನುಷ್ಯನ “ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಮ್ಗೆ ಕೊಡ್ತಾನೆ.” (ಫಿಲಿಪ್ಪಿ 4:6, 7 ಓದಿ.) ಯೆಹೋವನು ಪವಿತ್ರ ಶಕ್ತಿಯನ್ನ ಕೊಟ್ಟು ಚಿಂತೆಯನ್ನ ದೂರಮಾಡಿ, ನಮ್ಮ ಮನಸ್ಸಿಗೆ ನೆಮ್ಮದಿ ಕೊಡ್ತಾನೆ.—ಗಲಾ. 5:22.

7. ಪ್ರಾರ್ಥನೆ ಮಾಡೋ ವಿಷ್ಯದಲ್ಲಿ ನಾವು ಏನನ್ನ ಮನಸ್ಸಲ್ಲಿ ಇಡಬೇಕು?

7 ಯೆಹೋವನಿಗೆ ಪ್ರಾರ್ಥನೆ ಮಾಡ್ವಾಗ ಮನಸ್ಸಲ್ಲಿ ಇರೋದನ್ನೆಲ್ಲ ಹೇಳ್ಕೊಳ್ಳಿ. ನಿಮ್ಮ ಸಮಸ್ಯೆ ಏನು, ನಿಮಗೇನು ಅನಿಸ್ತಿದೆ ಅನ್ನೋದನ್ನ ಮುಕ್ತವಾಗಿ ಹೇಳಿ. ಒಂದ್ವೇಳೆ ನಿಮ್ಮ ಸಮಸ್ಯೆಯಿಂದ ಹೊರಬರೋಕೆ ಒಂದು ದಾರಿ ಗೊತ್ತಿದ್ರೆ ಅದು ಸರಿನೋ ಇಲ್ವೋ ಅಂತ ತಿಳ್ಕೊಳ್ಳೋಕೆ ಸಹಾಯ ಕೇಳಿ. ಆಗ ಆತ ನೀವು ಸರಿಯಾದ ತೀರ್ಮಾನ ಮಾಡೋಕೆ ಬೇಕಾದ ವಿವೇಕವನ್ನ ಮತ್ತು ಅದನ್ನ ಅನ್ವಯಿಸೋಕೆ ಬೇಕಾದ ಶಕ್ತಿಯನ್ನ ಕೊಡ್ತಾನೆ. ಒಂದ್ವೇಳೆ ನಿಮಗಿರೋ ಸಮಸ್ಯೆಯಿಂದ ಹೊರಬರೋಕೆ ಏನು ಮಾಡ್ಬೇಕು ಅಂತ ಗೊತ್ತಾಗದಿದ್ರೆ ಚಿಂತೆಯಿಂದ ಹೊರಬರೋಕೆ ಯೆಹೋವನ ಸಹಾಯ ಕೇಳಿ. ನೀವು ಪ್ರಾರ್ಥನೆಯಲ್ಲಿ ನಿಮ್ಮ ಅನಿಸಿಕೆಗಳನ್ನ ಬಿಡಿಸಿ ಹೇಳಿದ್ರೆ ಯೆಹೋವ ಅದಕ್ಕೆಲ್ಲ ಹೇಗೆ ಉತ್ರ ಕೊಟ್ಟಿದ್ದಾನೆ ಅನ್ನೋದನ್ನೂ ಚೆನ್ನಾಗಿ ಗುರುತಿಸೋಕೆ ಆಗುತ್ತೆ. ಪ್ರಾರ್ಥನೆ ಮಾಡಿ ತಕ್ಷಣ ಉತ್ರ ಸಿಕ್ಕಿಲ್ಲ ಅಂದ್ರೆ ಪ್ರಾರ್ಥನೆ ಮಾಡೋದನ್ನ ನಿಲ್ಲಿಸಬೇಡಿ. ಯೆಹೋವ ನಿಮ್ಮ ಮನಸ್ಸಿನ ಮಾತನ್ನ ಬಿಡಿಸಿ ಹೇಳ್ಬೇಕು ಅಂತ ಮಾತ್ರವಲ್ಲ ಯಾವಾಗ್ಲೂ ಪ್ರಾರ್ಥನೆ ಮಾಡ್ತಾ ಇರಬೇಕು ಅಂತನೂ ಬಯಸ್ತಾನೆ.—ಲೂಕ 11:8-10.

8. ನಮ್ಮ ಪ್ರಾರ್ಥನೆಯಲ್ಲಿ ಏನು ಕೂಡ ತಿಳಿಸಬೇಕು?

8 ನಿಮ್ಮ ಚಿಂತೆಯನ್ನೆಲ್ಲ ಪ್ರಾರ್ಥನೆಯಲ್ಲಿ ಹೇಳ್ಕೊಳ್ಳುವಾಗ ಯೆಹೋವನಿಗೆ ಥ್ಯಾಂಕ್ಸ್‌ ಹೇಳೋದನ್ನ ಮರಿಬೇಡಿ. ನಮ್ಗೆ ಸಮಸ್ಯೆಗಳ ಸರಮಾಲೆ ಇದ್ದಾಗ್ಲೂ ಸಿಕ್ಕಿರೋ ಆಶೀರ್ವಾದಗಳ ಬಗ್ಗೆ ಯೋಚಿಸೋದು ತುಂಬಾನೇ ಒಳ್ಳೇದು. ಒಂದ್ವೇಳೆ ನಿಮ್ಮ ಮನಸ್ಸಿನಾಳದ ಮಾತನ್ನ ಹೇಳಿಕೊಳ್ಳೋಕೆ ಸರಿಯಾದ ಪದಗಳು ಸಿಗದಿದ್ರೆ ಯೋಚಿಸಬೇಡಿ. ‘ಯೆಹೋವನೇ, ಸಹಾಯ ಮಾಡಪ್ಪಾ’ ಅಂತ ಹೇಳೋ ಸರಳ ಮಾತಿಗೂ ಆತ ಉತ್ರ ಕೊಡ್ತಾನೆ.—2 ಪೂರ್ವ. 18:31; ರೋಮ. 8:26.

ಪ್ಯಾರ 9 ನೋಡಿ *

9. ಭಯ ಆದಾಗ ನಾವೇನು ಮಾಡಬೇಕು?

9 (2) ನಿಮ್ಮ ವಿವೇಕದ ಮೇಲಲ್ಲ ಯೆಹೋವನ ವಿವೇಕದ ಮೇಲೆ ಭರವಸೆ ಇಡಿ. ಕ್ರಿಸ್ತಪೂರ್ವ 8 ನೇ ಶತಮಾನದಲ್ಲಿ ಅರಾಮ್ಯರು ಯೆಹೂದಿ ಜನಾಂಗದ ಮೇಲೆ ದಾಳಿ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ರು. ಯೆಹೂದ್ಯರು ಅವ್ರ ಕೈಯಿಂದ ತಪ್ಪಿಸ್ಕೊಳ್ಳೋಕೆ ಈಜಿಪ್ಟಿನವ್ರ ಸಹಾಯ ಕೇಳಿದ್ರು. (ಯೆಶಾ. 30:1, 2) ಆಗ ಯೆಹೋವ ಅವ್ರಿಗೆ, ಈಜಿಪ್ಟಿನವರ ಮೇಲೆ ಭರವಸೆ ಇಟ್ರೆ ಸೋಲ್ತೀರ ಅಂತ ಎಚ್ಚರಿಕೆ ನೀಡಿದನು. (ಯೆಶಾ. 30:7, 12, 13) ಅಷ್ಟೇ ಅಲ್ಲ ಏನು ಮಾಡಿದ್ರೆ ನಿಜವಾದ ಭದ್ರತೆ ಸಿಗುತ್ತೆ ಅಂತನೂ ಅವ್ರಿಗೆ ಯೆಶಾಯನ ಮೂಲಕ ಯೆಹೋವ ಹೀಗೆ ತಿಳಿಸಿದನು: ‘ಶಾಂತಿಯಿಂದ ಇದ್ದು ನನ್ನ ಮೇಲೆ ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ.’—ಯೆಶಾ. 30:15ಬಿ.

10. ಯಾವೆಲ್ಲಾ ಸಂದರ್ಭಗಳಲ್ಲಿ ಯೆಹೋವನ ಮೇಲೆ ನಮ್ಗೆ ಭರವಸೆ ಇದೆ ಅಂತ ತೋರಿಸಬೇಕಾಗುತ್ತೆ?

10 ಯಾವೆಲ್ಲಾ ಸಂದರ್ಭಗಳಲ್ಲಿ ಯೆಹೋವನ ಮೇಲೆ ನಮ್ಗೆ ಭರವಸೆ ಇದೆ ಅಂತ ತೋರಿಸಬೇಕಾಗುತ್ತೆ? ಕೆಲ್ವೊಂದು ಸನ್ನಿವೇಶ ನೋಡಿ. ನಿಮಗೆ ಹೆಚ್ಚು ಸಂಬಳ ಬರುವಂಥ ಒಂದು ಕೆಲಸ ಸಿಕ್ಕಿದೆ. ಆದ್ರೆ ಅಲ್ಲಿ ನೀವು ಓವರ್‌ಟೈಮ್‌ ಕೆಲಸ ಮಾಡಬೇಕಾಗುತ್ತೆ ಮತ್ತು ಕೂಟಕ್ಕೆ, ಸೇವೆಗೆ ಸಮ್ಯ ಕೊಡೋಕೆ ಕಷ್ಟ ಆಗುತ್ತೆ. ಅಥವಾ ನೀವು ಕೆಲಸ ಮಾಡೋ ಜಾಗದಲ್ಲಿ ಯೆಹೋವನ ಸಾಕ್ಷಿಯಲ್ಲದ ಒಬ್ರು ಬಂದು ‘ನಾನ್‌ ನಿಮ್ಮನ್ನ ಇಷ್ಟಪಡ್ತಿದ್ದೇನೆ’ ಅಂತ ಹೇಳಬಹುದು. ಅಥ್ವಾ ನೀವು ತುಂಬಾ ಪ್ರೀತಿ ಮಾಡೋ ಕುಟುಂಬ ಸದಸ್ಯರೊಬ್ರು ‘ನಾನ್‌ ಬೇಕಾ? ನಿನ್‌ ದೇವರು ಬೇಕಾ? ನೀನೇ ತೀರ್ಮಾನ ಮಾಡು’ ಅಂತ ಹೇಳಬಹುದು. ಈ ಮೂರು ಸಂದರ್ಭದಲ್ಲೂ ನಿಮಗೆ ಕಷ್ಟ ಆಗಬಹುದು. ಆದ್ರೆ ಸರಿಯಾದ ತೀರ್ಮಾನ ಮಾಡೋಕೆ ಯೆಹೋವ ನಿಮಗೆ ಸಹಾಯ ಮಾಡ್ತಾನೆ. (ಮತ್ತಾ. 6:33; 10:37; 1 ಕೊರಿಂ. 7:39) ಪ್ರಶ್ನೆ ಏನಂದ್ರೆ, ಯೆಹೋವನ ಮೇಲೆ ನೀವು ಭರವಸೆಯಿಟ್ಟು ಆತ ಹೇಳಿದ್ದನ್ನ ಪಾಲಿಸ್ತೀರಾ?

ಪ್ಯಾರ 11 ನೋಡಿ *

11. ವಿರೋಧ ಇದ್ದಾಗ ಶಾಂತಿಯಿಂದ ಇರೋಕೆ ಬೈಬಲಿನ ಯಾವ ಉದಾಹರಣೆಗಳನ್ನ ಓದಬೇಕು?

11 (3) ಒಳ್ಳೆಯವ್ರ ಮತ್ತು ಕೆಟ್ಟವ್ರ ಉದಾಹರಣೆಯಿಂದ ಕಲಿರಿ. ಶಾಂತವಾಗಿದ್ದು ಯೆಹೋವನ ಮೇಲೆ ಭರವಸೆ ಇಡೋದು ತುಂಬಾ ಮುಖ್ಯ ಅಂತ ತೋರಿಸೋ ಅನೇಕ ಉದಾಹರಣೆಗಳು ಬೈಬಲಿನಲ್ಲಿ ಇದೆ. ನೀವು ಈ ಉದಾಹರಣೆಗಳನ್ನ ಓದುವಾಗ, ತುಂಬಾ ವಿರೋಧ ಇದ್ದಾಗ್ಲೂ ದೇವ ಸೇವಕರಿಗೆ ಶಾಂತಿಯಿಂದ ಇರೋಕೆ ಯಾವುದು ಸಹಾಯ ಮಾಡ್ತು ಅಂತ ಗಮನಿಸಿ. ಉದಾಹರಣೆಗೆ ಯೆಹೂದಿ ಸರ್ವೋಚ್ಚ ನ್ಯಾಯಾಲಯವು ಅಪೊಸ್ತಲರಿಗೆ ಸಾರೋದನ್ನ ನಿಲ್ಲಿಸಬೇಕು ಅಂತ ಆಜ್ಞೆ ಕೊಟ್ಟಾಗ ಅವ್ರು ಭಯ ಪಡಲಿಲ್ಲ. ಬದ್ಲಿಗೆ “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು” ಅಂತ ಧೈರ್ಯವಾಗಿ ಹೇಳಿದ್ರು. (ಅ. ಕಾ. 5:29) ಅಪೊಸ್ತಲರು ಹೊಡೆತ ತಿಂದ ಮೇಲೂ ಧೈರ್ಯ ಕಳಕೊಳ್ಳಲಿಲ್ಲ. ಯಾಕಂದ್ರೆ ಯೆಹೋವ ತಮ್ಮ ಪಕ್ಷ ಇದ್ದಾನೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತಿತ್ತು. ಯೆಹೋವ ಅವ್ರನ್ನ ಮೆಚ್ಚಿದನು. ಹಾಗಾಗಿ ಅವ್ರು ಸುವಾರ್ತೆ ಸಾರೋದನ್ನ ಮುಂದುವರಿಸೋದಕ್ಕೆ ಆಯ್ತು. (ಅ. ಕಾ. 5:40-42) ಅಪೊಸ್ತಲ ಸ್ತೆಫನನನ್ನು ಕೊಲ್ಲುವಂಥ ಸಂದರ್ಭ ಬಂದಾಗ ಅವನು ಪ್ರಶಾಂತವಾಗಿದ್ದನು. ಅವನ ಮುಖ “ಒಬ್ಬ ದೇವದೂತನ ಮುಖದ ತರ ಕಾಣಿಸ್ತು.” (ಅ. ಕಾ. 6:12-15) ಯಾಕಂದ್ರೆ ಯೆಹೋವ ತನ್ನನ್ನ ಮೆಚ್ಚಿದ್ದಾನೆ ಅಂತ ಸ್ತೆಫನನಿಗೆ ಭರವಸೆ ಇತ್ತು.

12. ನಮ್ಗೆ ಕಷ್ಟ ಬಂದಾಗ್ಲೂ 1 ಪೇತ್ರ 3:14 ಮತ್ತು 4:14 ಹೇಳೋ ಪ್ರಕಾರ ನಾವು ಯಾಕೆ ಸಂತೋಷವಾಗಿರಬಹುದು?

12 ಯೆಹೋವ ತಮ್ಮ ಜೊತೇಲಿ ಇದ್ದಾನೆ ಅಂತ ಅಪೊಸ್ತಲರಿಗೆ ಸಂಪೂರ್ಣ ನಂಬಿಕೆ ಇತ್ತು. ಅದ್ಭುತಗಳನ್ನ ಮಾಡೋಕೆ ಯೆಹೋವ ಅವ್ರಿಗೆ ಶಕ್ತಿ ಕೊಟ್ಟಿದ್ದನು. (ಅ. ಕಾ. 5:12-16; 6:8) ಇವತ್ತು ಯೆಹೋವ ನಮ್ಗೆ ಆ ಶಕ್ತಿ ಕೊಟ್ಟಿಲ್ಲ. ಆದ್ರೆ ನೀತಿವಂತರಾಗಿ ಇರೋದ್ರಿಂದ ಕಷ್ಟಪಡಬೇಕಾಗಿ ಬಂದ್ರೂ ನಾವು ಸಂತೋಷವಾಗಿ ಇರಬಹುದು. ಯಾಕಂದ್ರೆ ನಮ್ಮ ಮೇಲೆ ಯೆಹೋವನ ಕೃಪೆ, ಪವಿತ್ರ ಶಕ್ತಿ ಇರುತ್ತೆ ಅಂತ ಸ್ವತಃ ಆತನೇ ತನ್ನ ವಾಕ್ಯದಲ್ಲಿ ಆಶ್ವಾಸನೆ ಕೊಟ್ಟಿದ್ದಾನೆ. (1 ಪೇತ್ರ 3:14; 4:14 ಓದಿ.) ಹಾಗಾಗಿ ಭವಿಷ್ಯದಲ್ಲಿ ನಮ್ಗೆ ಎಂಥೆಂಥ ಕಷ್ಟಗಳು ಬರುತ್ತೋ ಅಂತ ಯೋಚ್ನೆ ಮಾಡಿ ಭಯಪಡೋದು ಬೇಡ. ಬದ್ಲಿಗೆ ಯೆಹೋವ ನಮ್ಮ ಪಕ್ಷದಲ್ಲಿದ್ದು ನಮ್ಮನ್ನ ಕಾಪಾಡ್ತಾನೆ ಅನ್ನೋ ಭರವಸೆಯನ್ನ ಹೆಚ್ಚಿಸೋಕೆ ನಾವು ಈಗ ಏನು ಮಾಡಬೇಕು ಅನ್ನೋದನ್ನ ಯೋಚಿಸೋಣ. ಒಂದನೇ ಶತಮಾನದಲ್ಲಿದ್ದ ಅಪೊಸ್ತಲರಂತೆ ನಮ್ಗೂ ಯೇಸು ಕೊಟ್ಟ ಮಾತಿನ ಮೇಲೆ ಭರವಸೆ ಇರಬೇಕು. ಆತ ಹೇಳಿದ್ದು: “ನಿಮ್ಮ ಎಲ್ಲ ವಿರೋಧಿಗಳು ಒಟ್ಟಿಗೆ ಬಂದ್ರೂ ನಿಮ್ಮನ್ನ ಎದುರಿಸೋಕೆ, ಸೋಲಿಸೋಕೆ ಆಗದಷ್ಟು ಬುದ್ಧಿ ಮತ್ತು ಮಾತಾಡೋ ಶಕ್ತಿ ಕೊಡ್ತೀನಿ.” ಆತ ಹೀಗೆ ಸಹ ಹೇಳಿದನು: “ನಿಮ್ಮ ತಾಳ್ಮೆನೇ ನಿಮ್ಮ ಪ್ರಾಣ ಕಾಪಾಡುತ್ತೆ.” (ಲೂಕ 21:12-19) ನೆನಪಿಡಿ, ನಾವು ನಂಬಿಗಸ್ತರಾಗಿದ್ದು ತೀರಿಹೋದ್ರೆ ಯೆಹೋವ ನಮ್ಮ ಸಣ್ಣಪುಟ್ಟ ವಿವರಗಳನ್ನೂ ಮರೆಯಲ್ಲ. ಅದನ್ನ ಮನಸ್ಸಲ್ಲಿಟ್ಟೇ ನಮ್ಮನ್ನ ಜೀವಂತವಾಗಿ ಎಬ್ಬಿಸ್ತಾನೆ.

13. ಕಷ್ಟ ಬಂದಾಗ ಯೆಹೋವನ ಮೇಲೆ ಭರವಸೆ ಇಡದೆ ಚಿಂತೆ ಮಾಡಿದವ್ರ ಬಗ್ಗೆ ತಿಳ್ಕೊಳ್ಳೋದ್ರಿಂದ ಏನು ಪ್ರಯೋಜನ?

13 ಕಷ್ಟ ಬಂದಾಗ ಕೆಲವರು ಶಾಂತಿಯಿಂದ ಇರೋ ಬದ್ಲು ಚಿಂತೆ ಮಾಡಿದ್ರು. ಯೆಹೋವನ ಮೇಲೆ ಭರವಸೆನೂ ಇಡಲಿಲ್ಲ. ಅಂಥವ್ರಿಂದ ಕೂಡ ಪಾಠ ಕಲಿಬಹುದು. ಅವರ ಉದಾಹರಣೆಗಳನ್ನ ಓದಿ ತಿಳ್ಕೊಂಡ್ರೆ ಅವ್ರು ಮಾಡಿದ ತಪ್ಪನ್ನೇ ಪುನಃ ನಾವು ಮಾಡೋಕೆ ಹೋಗಲ್ಲ. ಯೆಹೂದದ ರಾಜನಾದ ಆಸನ ಉದಾಹರಣೆ ನೋಡಿ. ಒಮ್ಮೆ ಒಂದು ದೊಡ್ಡ ಸೈನ್ಯ ಅವ್ನ ವಿರುದ್ಧ ಯುದ್ಧ ಮಾಡೋಕೆ ಬಂತು. ಆಗ ಅವನು ಯೆಹೋವನ ಮೇಲೆ ಭರವಸೆ ಇಟ್ಟ ಮತ್ತು ಯೆಹೋವನ ಸಹಾಯದಿಂದ ಆ ಸೈನ್ಯವನ್ನ ಸೋಲಿಸಿದ. (2 ಪೂರ್ವ. 14:9-12) ಆದ್ರೆ ಸ್ವಲ್ಪ ಸಮ್ಯದ ನಂತ್ರ ಇಸ್ರಾಯೇಲ್ಯರ ರಾಜನಾದ ಬಾಷನ ಚಿಕ್ಕ ಸೈನ್ಯ ಯುದ್ಧಕ್ಕೆ ಬಂದಾಗ ಮುಂಚೆ ತರ ಆಸ ಯೆಹೋವನ ಮೇಲೆ ಭರವಸೆ ಇಡಲಿಲ್ಲ. ಬದ್ಲಿಗೆ ಅರಾಮ್ಯರ ಸಹಾಯ ಕೇಳ್ಕೊಂಡ. (2 ಪೂರ್ವ. 16:1-3) ಅಷ್ಟೇ ಅಲ್ಲ ಅವನಿಗೆ ವಯಸ್ಸಾದಾಗ ಒಂದು ದೊಡ್ಡ ಕಾಯಿಲೆ ಬಂತು. ಆಗ್ಲೂ ಅವನು ಯೆಹೋವನ ಸಹಾಯ ಕೇಳಲಿಲ್ಲ.—2 ಪೂರ್ವ. 16:12.

14. ಆಸ ಮಾಡಿದ ತಪ್ಪಿಂದ ನಾವು ಯಾವ ಪಾಠ ಕಲಿಬಹುದು?

14 ಆರಂಭದಲ್ಲಿ ಕಷ್ಟ ಬಂದಾಗ ಆಸ ಯೆಹೋವನ ಸಹಾಯ ಕೇಳ್ದ ಮತ್ತು ಆತನ ಮೇಲೆ ಭರವಸೆಯಿಟ್ಟ. ಆದ್ರೆ ನಂತ್ರ ಅವನು ಯೆಹೋವನ ಸಹಾಯ ಕೇಳಲಿಲ್ಲ. ಬದ್ಲಿಗೆ ತಾನಾಗೇ ಸಮಸ್ಯೆಗಳನ್ನ ಸರಿ ಮಾಡೋಕೆ ಹೋದ. ಇಸ್ರಾಯೇಲ್ಯರನ್ನ ಸೋಲಿಸೋಕೆ ಅರಾಮ್ಯರ ಸಹಾಯ ಪಡ್ಕೊಂಡು ಅವ್ರ ಸ್ನೇಹ ಮಾಡ್ಕೊಂಡಿದ್ದು ಒಳ್ಳೆದೇ ಆಯ್ತು ಅಂತ ಆಸನಿಗೆ ಅನಿಸಿರಬಹುದು. ಆದ್ರೆ ಅವ್ರ ಜೊತೆ ಇದ್ದ ಸ್ನೇಹ ಹೆಚ್ಚು ಕಾಲ ಉಳಿಲಿಲ್ಲ. ಯಾಕಂದ್ರೆ ಒಬ್ಬ ಪ್ರವಾದಿ ಮೂಲಕ ಯೆಹೋವ ಹೀಗೆ ಹೇಳಿದನು: “ನೀನು ನಿನ್ನ ದೇವರಾದ ಯೆಹೋವನಲ್ಲಿ ಭರವಸೆ ಇಡ್ದೆ ಅರಾಮ್ಯರ ರಾಜನಲ್ಲಿ ಭರವಸೆ ಇಟ್ಟಿದ್ರಿಂದ ಅವನ ಸೈನ್ಯ ನಿನ್ನ ಕೈಯಿಂದ ತಪ್ಪಿಸಿಕೊಳ್ತು.” (2 ಪೂರ್ವ. 16:7) ಆಸ ಮಾಡಿದ ತಪ್ಪಿಂದ ನಾವು ಯಾವ ಪಾಠ ಕಲಿಬಹುದು? ನಮ್ಗೆ ಸಮಸ್ಯೆಗಳು ಬಂದಾಗ ನಾವಾಗೇ ಅದನ್ನ ಸರಿಮಾಡೋಕೆ ಹೋಗ್ಬಾರ್ದು. ಬದ್ಲಿಗೆ ಯೆಹೋವ ಏನು ಸಲಹೆ ಕೊಟ್ಟಿದ್ದಾನೆ ಅಂತ ಆತನ ವಾಕ್ಯದಲ್ಲಿ ನೋಡ್ಬೇಕು. ತಕ್ಷಣ ತೀರ್ಮಾನ ಮಾಡಬೇಕಾದ ಸಂದರ್ಭ ಬಂದಾಗ್ಲೂ ನಾವು ಶಾಂತಿಯಿಂದ ಇದ್ದು ಯೆಹೋವನ ಮೇಲೆ ಭರವಸೆ ಇಡಬೇಕು. ಆಗ ಆತ ಒಳ್ಳೆ ತೀರ್ಮಾನ ಮಾಡೋಕೆ ನಮ್ಗೆ ಸಹಾಯ ಮಾಡ್ತಾನೆ.

ಪ್ಯಾರ 15 ನೋಡಿ *

15. ಬೈಬಲ್‌ ಓದುವಾಗ ನಾವೇನು ಮಾಡಬೇಕು?

15 (4) ಬೈಬಲ್‌ ವಚನಗಳನ್ನ ಬಾಯಿಪಾಠ ಮಾಡಿ. ಶಾಂತಿಯಿಂದ ಇದ್ದು ಯೆಹೋವನ ಮೇಲೆ ಭರವಸೆ ಇಡೋಕೆ ಸಹಾಯ ಮಾಡುವಂಥ ಬೈಬಲ್‌ ವಚನಗಳು ಸಿಕ್ಕಿದಾಗ ಅವನ್ನು ಬಾಯಿಪಾಠ ಮಾಡೋಕೆ ಪ್ರಯತ್ನಿಸಿ. ಅದಕ್ಕಾಗಿ ಆ ವಚನಗಳನ್ನ ಜೋರಾಗಿ ಓದಬೇಕು ಅಥ್ವಾ ಬರೆದಿಡಬೇಕು ಮತ್ತು ಆಗಾಗ ಓದ್ತಾ ಇರಬೇಕು. ನಿಯಮ ಪುಸ್ತಕದಲ್ಲಿರೋ ವಿಷ್ಯಗಳನ್ನ ಹಗಲು ರಾತ್ರಿ ಓದಿ ಧ್ಯಾನಿಸಿದ್ರೆ ವಿವೇಕದಿಂದ ನಡ್ಕೊಳ್ಳೋಕೆ ಆಗುತ್ತೆ ಅಂತ ಯೆಹೋವನು ಯೆಹೋಶುವನಿಗೆ ಹೇಳಿದ್ದನು. ಇದನ್ನೆಲ್ಲಾ ಯೆಹೋಶುವ ಮಾಡಿದ್ರಿಂದ ಭಯವನ್ನ ಮೆಟ್ಟಿನಿಲ್ಲೋಕೆ ಮತ್ತು ಇಸ್ರಾಯೇಲ್‌ ಜನ್ರನ್ನ ಧೈರ್ಯದಿಂದ ನಡೆಸೋಕೆ ಸಾಧ್ಯ ಆಯ್ತು. (ಯೆಹೋ. 1:8, 9) ಚಿಂತೆ ಅಥ್ವಾ ಭಯ ಪಡುವಂಥ ಸನ್ನಿವೇಶ ಬಂದಾಗ ಮನಸ್ಸು ಶಾಂತವಾಗಿರೋಕೆ ಸಹಾಯ ಮಾಡುವಂಥ ಅನೇಕ ವಚನಗಳು ಬೈಬಲಲ್ಲಿದೆ.—ಕೀರ್ತ. 27:1-3; ಜ್ಞಾನೋ. 3:25, 26.

ಪ್ಯಾರ 16 ನೋಡಿ *

16. ಶಾಂತಿಯಿಂದ ಇದ್ದು ಯೆಹೋವನಲ್ಲಿ ಭರವಸೆ ಇಡೋಕೆ ಯೆಹೋವ ನಮ್ಮ ಸಹೋದರ ಸಹೋದರಿಯರನ್ನ ಹೇಗೆ ಉಪಯೋಗಿಸ್ತಾನೆ?

16 (5) ದೇವ ಜನ್ರ ಜೊತೆ ಸಮ್ಯ ಕಳೆಯಿರಿ. ನಾವು ಶಾಂತಿಯಿಂದ ಇರೋಕೆ ಮತ್ತು ಯೆಹೋವನಲ್ಲಿ ಭರವಸೆ ಇಡೋಕೆ ಆತ ನಮ್ಗೆ ನಮ್ಮ ಸಹೋದರ ಸಹೋದರಿಯರನ್ನ ಕೊಟ್ಟಿದ್ದಾನೆ. (ಇಬ್ರಿ. 10:24, 25) ಕೂಟಗಳಲ್ಲಿ ಕೊಡೋ ಭಾಷಣಗಳಿಂದ, ಉತ್ತರಗಳಿಂದ ಮತ್ತು ನಮ್ಮ ಸಹೋದರ ಸಹೋದರಿಯರ ಮಾತಿಂದ ನಮ್ಗೆ ಪ್ರೋತ್ಸಾಹ ಸಿಗುತ್ತೆ. ಸಭೆಯಲ್ಲಿರೋ ನಂಬಿಗಸ್ತ ಸ್ನೇಹಿತರಿಗೆ ನಮ್ಮ ಚಿಂತೆಯನ್ನ ಹೇಳ್ಕೊಂಡಾಗ ಅವ್ರು ನಮ್ಮಲ್ಲಿ ಧೈರ್ಯ ತುಂಬ್ತಾರೆ. ಅವ್ರು ಹೇಳೋ ‘ಒಂದು ಒಳ್ಳೇ ಮಾತಿಂದಲೂ’ ನಮ್ಮ ಮನಸ್ಸಿನ ಭಾರ ಕಡಿಮೆ ಆಗುತ್ತೆ.—ಜ್ಞಾನೋ. 12:25.

ಪ್ಯಾರ 17 ನೋಡಿ *

17. ಇಬ್ರಿಯ 6:19 ರ ಪ್ರಕಾರ ಕಷ್ಟ ಬಂದಾಗ ಹೊಸಲೋಕದ ನಿರೀಕ್ಷೆ ಹೇಗೆ ಸಹಾಯ ಮಾಡುತ್ತೆ?

17 (6) ನಿರೀಕ್ಷೆ ಗಟ್ಟಿ ಮಾಡ್ಕೊಳ್ಳಿ. ಹೊಸ ಲೋಕದ ನಿರೀಕ್ಷೆ ‘ನಮ್ಮ ಜೀವನಕ್ಕೆ ಲಂಗರಿನಂತಿದೆ.’ ನಮ್ಗೆ ಕಷ್ಟಗಳು ಬಂದಾಗ, ಚಿಂತೆ ಇದ್ದಾಗ ಕುಸಿದು ಹೋಗದೆ ದೃಢವಾಗಿ ನಿಲ್ಲೋಕೆ ಇದು ಸಹಾಯ ಮಾಡುತ್ತೆ. (ಇಬ್ರಿಯ 6:19 ಓದಿ.) ಹೊಸಲೋಕದ ಬಗ್ಗೆ ಯೆಹೋವ ಕೊಟ್ಟಿರೋ ಮಾತಿನ ಬಗ್ಗೆ ಯೋಚಿಸಿ. ಆ ಸಮ್ಯದಲ್ಲಿ ಯಾರಿಗೂ ಯಾವುದ್ರ ಬಗ್ಗೆನೂ ಚಿಂತೆ ಇರಲ್ಲ. (ಯೆಶಾ. 65:17) ಹೊಸ ಲೋಕದಲ್ಲಿ ನೀವಿದ್ದೀರ ಅಂತ ಕಲ್ಪಿಸ್ಕೊಳ್ಳಿ. ಎಲ್ಲಾ ಕಡೆ ಶಾಂತಿಯ ವಾತಾವರಣ ಇದೆ. ನೀವು ಯಾವುದ್ರ ಬಗ್ಗೆನೂ ಹೆದರಬೇಕಾಗಿಲ್ಲ, ತಲೆಕೆಡಿಸಿಕೊಳ್ಳಬೇಕಾಗಿಲ್ಲ. (ಮೀಕ 4:4) ಹೊಸಲೋಕದ ಬಗ್ಗೆ ಬೇರೆಯವ್ರಿಗೆ ತಿಳಿಸೋದ್ರಿಂದಲೂ ನಿಮ್ಮ ನಿರೀಕ್ಷೆ ಗಟ್ಟಿಯಾಗುತ್ತೆ. ಹಾಗಾಗಿ ಹೆಚ್ಚು ಜನ್ರಿಗೆ ಸುವಾರ್ತೆ ಸಾರಿ, ಶಿಷ್ಯರನ್ನಾಗಿ ಮಾಡಿ. ಇದನ್ನ ಮಾಡಿದ್ರೆ “ನಿಮ್ಮ ನಿರೀಕ್ಷೆ ನಿಜವಾಗುತ್ತೆ ಅನ್ನೋ ಪೂರ್ಣ ಭರವಸೆ ಕೊನೆ ತನಕ ನಿಮಗಿರುತ್ತೆ.”—ಇಬ್ರಿ. 6:11.

18. (ಎ) ಮುಂದೆ ಏನಾಗುತ್ತೆ? (ಬಿ) ಈಗ ನಾವೇನು ಮಾಡಬೇಕು?

18 ಈ ಲೋಕಕ್ಕೆ ಇನ್ನು ಸ್ವಲ್ಪ ಸಮ್ಯದಲ್ಲೇ ಅಂತ್ಯ ಬರುತ್ತೆ. ಹಾಗಾಗಿ ಕಷ್ಟಗಳು, ಚಿಂತೆಗಳು ಜಾಸ್ತಿ ಆಗ್ತಾ ಹೋಗುತ್ತೆ. ಆಗ ಶಾಂತಿಯಿಂದ ಇದ್ದು ನಮ್ಮ ಸ್ವಂತ ಬಲದ ಮೇಲಲ್ಲ ಯೆಹೋವನ ಮೇಲೆ ಪೂರ್ಣ ಭರವಸೆ ಇಡೋಕೆ 2021 ರ ವರ್ಷವಚನ ಸಹಾಯ ಮಾಡುತ್ತೆ. ‘ಶಾಂತಿಯಿಂದ ಇದ್ದು ನನ್ನ ಮೇಲೆ ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ’ ಅಂತ ಯೆಹೋವ ಮಾತುಕೊಟ್ಟಿದ್ದಾನೆ. ಈ ಮಾತು ನಿಜ ಅಂತ ಈ ವರ್ಷ ನಾವು ನಡ್ಕೊಳ್ಳೋ ರೀತಿಯಿಂದ ತೋರಿಸೋಣ.—ಯೆಶಾ. 30:15.

ಗೀತೆ 49 ಯೆಹೋವನು ನಮ್ಮ ಆಶ್ರಯ

^ ಪ್ಯಾರ. 5 ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತೆ. ಹಾಗಾಗಿ ನಮ್ಗೆ ಚಿಂತೆ ಆಗುತ್ತೆ. ಇಂಥ ಸಮಯದಲ್ಲಿ ನಾವು ಯೆಹೋವನ ಮೇಲೆ ಭರವಸೆ ಇಡಬೇಕಂತ 2021 ರ ವರ್ಷವಚನ ಪ್ರೋತ್ಸಾಹಿಸುತ್ತೆ. ಈ ವರ್ಷವಚನದಲ್ಲಿರೋ ಸಲಹೆಯನ್ನ ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು ಅಂತ ಈ ಲೇಖನ ತಿಳಿಸುತ್ತೆ.

^ ಪ್ಯಾರ. 5 ಕೆಲವು ಸಹೋದರ-ಸಹೋದರಿಯರು ಚಿಕ್ಕಪುಟ್ಟ ವಿಷ್ಯಗಳಿಗೂ ತುಂಬಾ ಭಯ ಪಟ್ಟುಕೊಳ್ತಾರೆ, ತುಂಬಾ ಚಿಂತೆ ಮಾಡ್ತಾರೆ. ಇದು ಸಾಮಾನ್ಯವಾದ ಚಿಂತೆ ತರ ಇರಲ್ಲ, ಇದು ಒಂದು ರೀತಿಯ ಮಾನಸಿಕ ಕಾಯಿಲೆ. ಈ ತರ ಚಿಂತೆ ಮಾಡೋದ್ರ ಬಗ್ಗೆ ಯೇಸು ಇಲ್ಲಿ ಹೇಳಿಲ್ಲ.

^ ಪ್ಯಾರ. 63 ಚಿತ್ರ ವಿವರಣೆ: (1) ಒಬ್ಬ ಸಹೋದರಿ ದಿನದಲ್ಲಿ ಪದೇಪದೇ ಪ್ರಾರ್ಥನೆ ಮಾಡ್ತಾ ತನ್ನ ಚಿಂತೆ ಹೇಳ್ಕೊಳ್ತಿದ್ದಾಳೆ.

^ ಪ್ಯಾರ. 65 ಚಿತ್ರ ವಿವರಣೆ: (2) ಕೆಲಸದಲ್ಲಿ ಊಟಕ್ಕೆ ಬ್ರೇಕ್‌ ಸಿಕ್ಕಿದಾಗ ಸಹೋದರಿ ಬೈಬಲಲ್ಲಿರೋ ವಿವೇಕವನ್ನ ಓದಿ ತಿಳ್ಕೊಳ್ತಿದ್ದಾಳೆ.

^ ಪ್ಯಾರ. 67 ಚಿತ್ರ ವಿವರಣೆ: (3) ಬೈಬಲಿನಲ್ಲಿರೋ ಒಳ್ಳೆಯವ್ರ ಮತ್ತು ಕೆಟ್ಟವ್ರ ಉದಾಹರಣೆಗಳ ಬಗ್ಗೆ ಯೋಚಿಸ್ತಿದ್ದಾಳೆ.

^ ಪ್ಯಾರ. 69 ಚಿತ್ರ ವಿವರಣೆ: (4) ತನಗೆ ಉತ್ತೇಜನ ಕೊಟ್ಟಂಥ ವಚನವನ್ನ ಬಾಯಿಪಾಠ ಮಾಡೋಕೆ ಅದನ್ನ ಒಂದು ಚೀಟಿಯಲ್ಲಿ ಬರೆದು ಫ್ರಿಜ್‌ ಮೇಲೆ ಅಂಟಿಸ್ತಿದ್ದಾಳೆ.

^ ಪ್ಯಾರ. 71 ಚಿತ್ರ ವಿವರಣೆ: (5) ಸ್ನೇಹಿತೆ ಜೊತೆ ಸೇವೆ ಮಾಡ್ತಾ ಖುಷಿಯಾಗಿ ಇದ್ದಾಳೆ.

^ ಪ್ಯಾರ. 73 ಚಿತ್ರ ವಿವರಣೆ: (6) ನಿರೀಕ್ಷೆಯನ್ನ ಗಟ್ಟಿ ಮಾಡ್ಕೊಳ್ಳೋಕೆ ಹೊಸಲೋಕದ ಬಗ್ಗೆ ಯೋಚಿಸ್ತಿದ್ದಾಳೆ.