ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 2

‘ಯೇಸುವಿನ ಪ್ರಿಯ ಶಿಷ್ಯನಿಂದ’ ಕಲಿಯೋ ಪಾಠಗಳು

‘ಯೇಸುವಿನ ಪ್ರಿಯ ಶಿಷ್ಯನಿಂದ’ ಕಲಿಯೋ ಪಾಠಗಳು

“ನಾವು ಒಬ್ರನ್ನೊಬ್ರು ಪ್ರೀತಿಸ್ತಾ ಇರೋಣ. ಯಾಕಂದ್ರೆ ಪ್ರೀತಿ ದೇವರಿಂದ ಬಂದಿದೆ.”—1 ಯೋಹಾ. 4:7.

ಗೀತೆ 3 “ದೇವರು ಪ್ರೀತಿಯಾಗಿದ್ದಾನೆ

ಕಿರುನೋಟ *

1. ದೇವರ ಪ್ರೀತಿ ಬಗ್ಗೆ ನಿಮಗೆ ಹೇಗನ್ಸುತ್ತೆ?

“ದೇವರು ಪ್ರೀತಿಯಾಗಿದ್ದಾನೆ” ಅಂತ ಅಪೊಸ್ತಲ ಯೋಹಾನ ಬರೆದ. (1 ಯೋಹಾ. 4:8) ಈ ಸರಳ ಮಾತುಗಳಲ್ಲಿ ಒಂದು ಪ್ರಾಮುಖ್ಯ ಸತ್ಯಾಂಶ ಅಡಗಿದೆ. ಅದೇನಂದ್ರೆ ಜೀವದ ಉಗಮನಾಗಿರೋ ದೇವರು ಪ್ರೀತಿಯ ಉಗಮನೂ ಆಗಿದ್ದಾನೆ. ಯೆಹೋವನಿಗೆ ನಾವಂದ್ರೆ ತುಂಬಾ ಪ್ರೀತಿ! ಆತ ನಮ್ಮನ್ನು ಪ್ರೀತಿ ಮಾಡೋದ್ರಿಂದ ನಮ್ಮಲ್ಲಿ ಸುರಕ್ಷಿತ ಭಾವನೆ ಇದೆ ಮತ್ತು ನಾವು ಖುಷಿಯಾಗಿದ್ದೇವೆ.

2. (ಎ) ಮತ್ತಾಯ 22:37-40 ರ ಪ್ರಕಾರ ಯಾವ ಎರಡು ಆಜ್ಞೆಗಳು ಅತಿದೊಡ್ಡ ಆಜ್ಞೆಗಳಾಗಿವೆ? (ಬಿ) ಎರಡನೇ ಆಜ್ಞೆ ಪಾಲಿಸೋಕೆ ಕೆಲವೊಮ್ಮೆ ಯಾಕೆ ಕಷ್ಟ ಆಗುತ್ತೆ?

2 ಕ್ರೈಸ್ತರಾದ ನಾವೆಲ್ಲರೂ ಪ್ರೀತಿಸಲೇಬೇಕು. ಇದರಲ್ಲಿ ಚೌಕಾಸಿನೇ ಇಲ್ಲ. ಯಾಕಂದ್ರೆ ಇದೊಂದು ಆಜ್ಞೆ. (ಮತ್ತಾಯ 22:37-40 ಓದಿ.) ನಾವು ಯೆಹೋವನ ಬಗ್ಗೆ ಚೆನ್ನಾಗಿ ತಿಳುಕೊಳ್ತಾ ಹೋದಂತೆ ಆತನನ್ನ ಪ್ರೀತಿಸಬೇಕು ಅಂತ ಹೇಳಿರೋ ಮೊದಲನೇ ಆಜ್ಞೆ ಪಾಲಿಸೋದು ಕಷ್ಟ ಆಗಲ್ಲ. ಯಾಕಂದ್ರೆ ಯೆಹೋವ ಕುಂದುಕೊರತೆ ಇಲ್ಲದ ಪರಿಪೂರ್ಣ ದೇವರು. ಆತ ನಮ್ಮ ಕಾಳಜಿವಹಿಸ್ತಾನೆ ಮತ್ತು ನಮ್ಮ ಜೊತೆ ದಯೆಯಿಂದ ನಡಕೊಳ್ತಾನೆ. ಆದ್ರೆ ಎರಡನೇ ಆಜ್ಞೆ ಪಾಲಿಸೋಕೆ ನಮಗೆ ಕಷ್ಟ ಆಗ್ಬಹುದು. ಯಾಕಂದ್ರೆ ನಮ್ಮ ನೆರೆಯವರಾಗಿರೋ ಕ್ರೈಸ್ತ ಸಹೋದರ ಸಹೋದರಿಯರಲ್ಲಿ ಕುಂದುಕೊರತೆಗಳಿವೆ. ಅವ್ರು ಅಪರಿಪೂರ್ಣರು. ಕೆಲ್ವೊಮ್ಮೆ ಅವ್ರು ಹೇಳೋ ಮಾತಿಂದ ನಡ್ಕೊಳ್ಳೋ ರೀತಿಯಿಂದ ನಮ್ಗೆ ನೋವಾಗ್ಬಹುದು. ಎರಡನೇ ಆಜ್ಞೆ ಪಾಲಿಸೋಕೆ ನಮ್ಗೆ ಕಷ್ಟ ಆಗುತ್ತೆ ಅಂತ ಯೆಹೋವನಿಗೂ ಗೊತ್ತು. ಹಾಗಾಗಿ ಬೈಬಲಿನ ಅನೇಕ ಲೇಖಕರ ಕೈಯಲ್ಲಿ ನಾವ್ಯಾಕೆ ಒಬ್ರನ್ನೊಬ್ರು ಪ್ರೀತಿಸಬೇಕು ಮತ್ತು ಹೇಗೆ ಪ್ರೀತಿಸ್ಬೇಕು ಅಂತ ಬರೆಸಿಟ್ಟಿದ್ದಾನೆ. ಆ ಲೇಖಕರಲ್ಲೊಬ್ಬ ಯೋಹಾನ.—1 ಯೋಹಾ. 3:11, 12.

3. ಯೋಹಾನ ತಾನು ಬರೆದ ಪುಸ್ತಕಗಳಲ್ಲಿ ಯಾವುದರ ಬಗ್ಗೆ ಪದೇಪದೇ ಹೇಳಿದ್ದಾನೆ?

3 ಯೋಹಾನ ತಾನು ಬರೆದ ಪುಸ್ತಕಗಳಲ್ಲಿ ಕ್ರೈಸ್ತರು ಪ್ರೀತಿ ತೋರಿಸಬೇಕು ಅನ್ನೋದನ್ನ ಪದೇಪದೇ ಹೇಳಿದ್ದಾನೆ. ಅವನು ಬರೆದ ಸುವಾರ್ತಾ ಪುಸ್ತಕದಲ್ಲಿ “ಪ್ರೀತಿ” ಅನ್ನೋ ಶಬ್ದ ತುಂಬಾ ಸಲ ಇದೆ. ಈ ಪದವನ್ನ ಅವನು ಉಲ್ಲೇಖಿಸಿದಷ್ಟು ಇನ್ನು ಬೇರೆ ಮೂರು ಸುವಾರ್ತಾ ಪುಸ್ತಕಗಳನ್ನು ಬರೆದವರು ಉಲ್ಲೇಖಿಸಿಲ್ಲ. ಸುವಾರ್ತಾ ಪುಸ್ತಕವನ್ನು ಮತ್ತು ಮೂರು ಪತ್ರಗಳನ್ನು ಬರೆದಾಗ ಯೋಹಾನನಿಗೆ ಸುಮಾರು 100 ವರ್ಷವಾಗಿತ್ತು. ಕ್ರೈಸ್ತರಾದ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಪ್ರೀತಿನೇ ಪ್ರೇರಣೆ ಆಗಿರಬೇಕು ಅಂತ ಈ ಬೈಬಲ್‌ ಪುಸ್ತಕಗಳು ತೋರಿಸಿಕೊಡುತ್ತವೆ. (1 ಯೋಹಾ. 4:10, 11) ಆದರೆ ಇದನ್ನು ಬರೆದ ಯೋಹಾನನಿಗೇ ಈ ವಿಷ್ಯನಾ ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಸಮಯ ಬೇಕಾಯ್ತು.

4. ಯೋಹಾನ ಜನ್ರನ್ನ ಯಾವಾಗ್ಲೂ ಪ್ರೀತಿಸಿದ್ನಾ?

4 ಯೋಹಾನ ಯುವಕನಾಗಿದ್ದಾಗ ಕೆಲವೊಮ್ಮೆ ಜನ್ರನ್ನ ಪ್ರೀತಿಸಲಿಲ್ಲ. ಒಮ್ಮೆ ಯೇಸು ಮತ್ತು ಶಿಷ್ಯರು ಸಮಾರ್ಯ ದಾಟಿ ಯೆರೂಸಲೇಮಿಗೆ ಹೋಗಬೇಕಿತ್ತು. ಸಮಾರ್ಯಕ್ಕೆ ಬಂದಾಗ ಅಲ್ಲಿನ ಜನ್ರು ಅವ್ರಿಗೆ ಅತಿಥಿಸತ್ಕಾರ ತೋರಿಸಲಿಲ್ಲ. ಆಗ ಯೋಹಾನ ಏನು ಮಾಡ್ದ? ಆಕಾಶದಿಂದ ಬೆಂಕಿ ಸುರಿದು ಇಡೀ ಊರಿನ ಜನ್ರು ಸುಟ್ಟು ಬೂದಿ ಆಗ್ಬೇಕು ಅಂತ ಇಷ್ಟ ಪಟ್ಟ. ಅದಕ್ಕೋಸ್ಕರ ಯೇಸು ಹತ್ರ ಅನುಮತಿಯನ್ನೂ ಕೇಳ್ದ. (ಲೂಕ 9:52-56) ಇನ್ನೊಂದು ಸಂದರ್ಭದಲ್ಲಿ ಯೋಹಾನ ತನ್ನ ಜೊತೆಯಿದ್ದ ಸ್ನೇಹಿತರಿಗೇ ಪ್ರೀತಿ ತೋರಿಸೋಕೆ ತಪ್ಪಿಹೋದ. ಯೋಹಾನ ಮತ್ತು ಅವನ ಸಹೋದರನಾದ ಯಾಕೋಬ ತಮ್ಮ ತಾಯಿಯನ್ನ ಯೇಸು ಹತ್ರ ಕಳಿಸಿ ಆತನ ರಾಜ್ಯದಲ್ಲಿ ದೊಡ್ಡ ಸ್ಥಾನವನ್ನ ಕೊಡಿಸುವಂತೆ ಕೇಳಿಸಿದ್ರು. ಈ ವಿಷ್ಯ ಬೇರೆ ಶಿಷ್ಯರಿಗೆ ಗೊತ್ತಾದಾಗ ಯೋಹಾನ ಮತ್ತು ಯಾಕೋಬನ ಮೇಲೆ ತುಂಬಾ ಕೋಪ ಬಂತು. (ಮತ್ತಾ. 20:20, 21, 24) ಯೋಹಾನನಲ್ಲಿ ಇಷ್ಟೆಲ್ಲ ಕುಂದುಕೊರತೆ ಇದ್ರೂ ಯೇಸು ಅವನನ್ನ ಪ್ರೀತಿಸಿದನು.—ಯೋಹಾ. 21:7.

5. ಈ ಲೇಖನದಲ್ಲಿ ನಾವು ಏನೆಲ್ಲಾ ಕಲಿತೇವೆ?

5 ಯೋಹಾನ ಬೇರೆಯವ್ರನ್ನ ಹೇಗೆ ಪ್ರೀತಿಸಿದನು ಮತ್ತು ಆತನು ಬರೆದ ಪತ್ರಗಳಲ್ಲಿ ಪ್ರೀತಿ ಬಗ್ಗೆ ಏನು ಹೇಳಿದ್ದಾನೆ ಅಂತ ಕೆಲವು ವಿಷ್ಯಗಳನ್ನ ಈಗ ಚರ್ಚಿಸೋಣ. ಅಷ್ಟೇ ಅಲ್ಲ ನಮ್ಮ ಸಹೋದರ ಸಹೋದರಿಯರನ್ನ ಹೇಗೆ ಪ್ರೀತಿಸಬೇಕು ಮತ್ತು ಕುಟುಂಬದ ಯಜಮಾನ ತನ್ನ ಕುಟುಂಬದಲ್ಲಿ ಇರುವವ್ರ ಮೇಲೆ ಪ್ರೀತಿ ಇದೆ ಅಂತ ತೋರಿಸೋ ಒಂದು ಮುಖ್ಯವಾದ ವಿಧ ಯಾವುದು ಅಂತಾನೂ ನೋಡೋಣ.

ನಡತೆಯಲ್ಲೂ ಪ್ರೀತಿ ಎದ್ದುಕಾಣಬೇಕು

ಯೆಹೋವ ತನ್ನ ಒಬ್ಬನೇ ಮಗನ ಜೀವವನ್ನು ನಮಗೋಸ್ಕರ ಕೊಟ್ಟು ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದ್ದಾನೆ (ಪ್ಯಾರ 6-7 ನೋಡಿ)

6. ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ನಮ್ಗೆ ಹೇಗೆ ಗೊತ್ತು?

6 ಪ್ರೀತಿ ಅಂದ್ರೆ ಮನಸ್ಸಲ್ಲಿ ಒಬ್ರ ಬಗ್ಗೆ ಒಳ್ಳೇ ಭಾವನೆ ಇಟ್ಕೊಳ್ಳೋದು ಮತ್ತು ಅವ್ರ ಹತ್ರ ಚೆನ್ನಾಗಿ ಮಾತಾಡೋದು ಅಂತ ಹೆಚ್ಚಿನ ಜನ್ರು ಅಂದುಕೊಳ್ತಾರೆ. ಆದ್ರೆ ಇಷ್ಟು ಮಾಡಿದ್ರೆ ಸಾಕಾಗಲ್ಲ, ನಮ್ಮ ನಡತೆಯಲ್ಲೂ ಪ್ರೀತಿ ಎದ್ದುಕಾಣಬೇಕು. (ಯಾಕೋಬ 2:17, 26 ಹೋಲಿಸಿ.) ಉದಾಹರಣೆಗೆ ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇದೆ. (1 ಯೋಹಾ. 4:19) ಆ ಪ್ರೀತಿಯನ್ನ ಆತನು ಬೈಬಲಲ್ಲಿರೋ ಮಾತುಗಳ ಮೂಲಕ ವ್ಯಕ್ತಪಡಿಸಿದ್ದಾನೆ. (ಕೀರ್ತ. 25:10; ರೋಮ. 8:38, 39) ಇದಿಷ್ಟೇ ಅಲ್ಲ ತನ್ನ ಕೆಲಸಕಾರ್ಯದಲ್ಲೂ ದೇವರು ನಮ್ಮನ್ನ ಪ್ರೀತಿಸ್ತಾನೆ ಅಂತ ತೋರಿಸಿದ್ದಾನೆ. “ನಾವು ಶಾಶ್ವತ ಜೀವ ಪಡೀಬೇಕಂತ ದೇವರು ತನ್ನ ಒಬ್ಬನೇ ಮಗನನ್ನ ಈ ಲೋಕಕ್ಕೆ ಕಳಿಸ್ಕೊಟ್ಟು ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದ್ದಾನೆ” ಅಂತ ಯೋಹಾನ ಹೇಳಿದ. (1 ಯೋಹಾ. 4:9) ನಮಗೋಸ್ಕರ ತನ್ನ ಮಗ ಕಷ್ಟಪಟ್ಟು ಸಾಯೋಕೆ ಯೆಹೋವ ಅನುಮತಿಸಿದನು. (ಯೋಹಾ. 3:16) ಈ ವಿಷ್ಯಗಳಿಂದ, ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ.

7. ಯೇಸು ನಮ್ಮನ್ನ ಪ್ರೀತಿಸ್ತಾನೆ ಅಂತ ನಮ್ಗೆ ಹೇಗೆ ಗೊತ್ತು?

7 ಯೇಸು ತನ್ನ ಶಿಷ್ಯರನ್ನ ಪ್ರೀತಿಸ್ತೀನಿ ಅಂತ ಹೇಳಿದನು. (ಯೋಹಾ. 13:1; 15:15) ಅವ್ರ ಮೇಲೆ ಎಷ್ಟು ಪ್ರೀತಿ ಇತ್ತು ಅನ್ನೋದನ್ನ ಯೇಸು ಬರೀ ಮಾತಲ್ಲಿ ಮಾತ್ರ ಅಲ್ಲ ನಡತೆಯಲ್ಲೂ ತೋರಿಸ್ಕೊಟ್ಟಿದ್ದಾನೆ. ಅದೇ ತರ ಇವತ್ತು ನಮ್ಮನ್ನೂ ಪ್ರೀತಿಸ್ತಾನೆ. ಯೇಸು ನಮಗೋಸ್ಕರ ಅಂದ್ರೆ ‘ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ.’ (ಯೋಹಾ. 15:13) ಯೆಹೋವ ಮತ್ತು ಯೇಸು ನಮ್ಮನ್ನ ತುಂಬಾ ಪ್ರೀತಿ ಮಾಡ್ತಾರೆ, ಅವ್ರನ್ನ ನಾವೂ ಪ್ರೀತಿ ಮಾಡ್ತೀವಿ ಅಂತ ಹೇಗೆ ತೋರಿಸೋಣ?

8. ನಮ್ಮ ಸಹೋದರ ಸಹೋದರಿಯರನ್ನ ಹೇಗೆ ಪ್ರೀತಿಸಬೇಕು ಅಂತ 1 ಯೋಹಾನ 3:18 ಹೇಳುತ್ತೆ?

8 ಯೆಹೋವ ಮತ್ತು ಯೇಸು ಹೇಳೋ ಮಾತಿನ ಪ್ರಕಾರ ನಡೆದ್ರೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತರ್ಥ. (ಯೋಹಾ. 14:15; 1 ಯೋಹಾ. 5:3) ನಾವು ಒಬ್ರನ್ನೊಬ್ರು ಪ್ರೀತಿಸಬೇಕು ಅಂತ ಯೇಸು ಆಜ್ಞೆ ಕೊಟ್ಟಿದ್ದಾನೆ. (ಯೋಹಾ. 13:34, 35) ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿ ಮಾಡ್ತೀವಿ ಅಂತ ಬರೀ ಮಾತಲ್ಲಿ ಹೇಳಿದ್ರೆ ಸಾಕಾಗಲ್ಲ ಮಾಡಿತೋರಿಸಬೇಕು. (1 ಯೋಹಾನ 3:18 ಓದಿ.) ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು?

ಸಹೋದರ ಸಹೋದರಿಯರನ್ನ ಪ್ರೀತಿಮಾಡಿ

9. ಪ್ರೀತಿ ಇದ್ದಿದ್ರಿಂದ ಯೋಹಾನ ಏನು ಮಾಡ್ದ?

9 ಯೋಹಾನ ತನ್ನ ತಂದೆ ಜೊತೆನೇ ಇದ್ದು ಮೀನು ಮಾರೋ ಕೆಲಸ ಮಾಡಿ ತುಂಬಾ ಹಣ ಮಾಡಬಹುದಿತ್ತು. ಆದ್ರೆ ಅವನು ಹಾಗೆ ಮಾಡ್ಲಿಲ್ಲ. ಜೀವನಪೂರ್ತಿ ಯೆಹೋವ ಮತ್ತು ಯೇಸು ಬಗ್ಗೆ ಜನ್ರಿಗೆ ಕಲಿಸಿದ. ಅವ್ನು ಆರಿಸ್ಕೊಂಡ ಜೀವನ ಅಷ್ಟು ಸುಲಭ ಆಗಿರಲಿಲ್ಲ. ಅವ್ನಿಗೆ ತುಂಬಾ ಹಿಂಸೆ ಬಂತು. ಒಂದ್ನೇ ಶತಮಾನದ ಕೊನೇಲಿ ಅವ್ನಿಗೆ ತುಂಬಾ ವಯಸ್ಸಾಗಿದ್ರೂ ಪತ್ಮೋಸ್‌ ದ್ವೀಪದ ಜೈಲಿಗೆ ಹಾಕಿದ್ರು. (ಅ. ಕಾ. 3:1; 4:1-3; 5:18; ಪ್ರಕ. 1:9) ಯೇಸು ಬಗ್ಗೆ ಸುವಾರ್ತೆ ಸಾರಿದ್ದಕ್ಕೆ ಯೋಹಾನನನ್ನ ಜೈಲಿಗೆ ಹಾಕಿದಾಗ್ಲೂ ಅವನು ಸಹೋದರ ಸಹೋದರಿಯರ ಬಗ್ಗೆ ಯೋಚಿಸ್ತಿದ್ದ. ಉದಾಹರಣೆಗೆ, ಪತ್ಮೋಸ್‌ ದ್ವೀಪದಲ್ಲಿ ಜೈಲಿನಲ್ಲಿದ್ದಾಗ ಪ್ರಕಟನೆ ಪುಸ್ತಕವನ್ನ ಬರೆದ. ‘ಮುಂದೆ ಏನಾಗುತ್ತೆ ಅಂತ ಸಹೋದರ ಸಹೋದರಿಯರು ತಿಳ್ಕೊಳ್ಳೋಕೆ’ ಅದನ್ನ ಸಭೆಗಳಿಗೆ ಕಳಿಸ್ಕೊಟ್ಟ. (ಪ್ರಕ. 1:1) ಪತ್ಮೋಸ್‌ ದ್ವೀಪದಿಂದ ಬಿಡುಗಡೆ ಆದ್ಮೇಲೆ ಯೋಹಾನ ಯೇಸುವಿನ ಜೀವನ ಮತ್ತು ಸೇವೆ ಬಗ್ಗೆ ಇರೋ ಯೋಹಾನ ಅನ್ನೋ ಪುಸ್ತಕವನ್ನ ಬರೆದಿರಬೇಕು. ಅಷ್ಟೇ ಅಲ್ಲ, ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸೋಕೆ, ಬಲಪಡಿಸೋಕೆ ಮೂರು ಪತ್ರಗಳನ್ನ ಕೂಡ ಬರೆದ. ಯೋಹಾನನ ತರ ನಾವು ಹೇಗೆ ಜನ್ರಿಗೆ ಪ್ರೀತಿ ತೋರಿಸಬಹುದು?

10. ಜನ್ರ ಮೇಲೆ ಪ್ರೀತಿ ಇದೆ ಅಂತ ಹೇಗೆ ತೋರಿಸ್ತೀರಿ?

10 ಜನ್ರ ಮೇಲೆ ನಮಗೆ ಪ್ರೀತಿ ಇದ್ಯಾ ಇಲ್ವಾ ಅಂತ ಹೇಗೆ ಗೊತ್ತಾಗುತ್ತೆ? ನಾವು ಜೀವನದಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡ್ತೀವೋ ಅದ್ರಿಂದ ಗೊತ್ತಾಗುತ್ತೆ. ನೀವು ತುಂಬ ಹಣ ಮಾಡಬೇಕು, ದೊಡ್ಡ ಹೆಸರು ಮಾಡಬೇಕು, ಇದ್ರಲ್ಲೇ ನಿಮ್ಮ ಸಮಯ ಶಕ್ತಿನೆಲ್ಲಾ ಕಳೀಬೇಕು ಅಂತ ಸೈತಾನನ ಲೋಕ ಬಯಸುತ್ತೆ. ಆದ್ರೆ ಲೋಕದ ಎಲ್ಲಾ ಕಡೆ ಇರೋ ಯೆಹೋವನ ಜನ್ರು ಈ ರೀತಿ ಮಾಡ್ತಿಲ್ಲ. ಅವರು ಸಿಹಿ ಸುದ್ದಿ ಸಾರೋದ್ರಲ್ಲಿ ಮತ್ತು ಜನರು ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡೋದ್ರಲ್ಲಿ ತಮ್ಮ ಸಮಯ ಕಳಿತಿದ್ದಾರೆ. ಕೆಲವು ಕ್ರೈಸ್ತರಂತೂ ಪೂರ್ತಿ ಸಮಯ ಈ ಸೇವೆ ಮಾಡ್ತಿದ್ದಾರೆ.

ನಮ್ಮ ಸಹೋದರ ಸಹೋದರಿಯರಿಗೋಸ್ಕರ ಮತ್ತು ನಮ್ಮ ಕುಟುಂಬಕ್ಕೋಸ್ಕರ ಮಾಡೋ ವಿಷಯಗಳು ನಾವು ಅವರನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸಿಕೊಡುತ್ತೆ (ಪ್ಯಾರ 11, 17 ನೋಡಿ) *

11. ನಮ್ಮ ಸಹೋದರ ಸಹೋದರಿಯರು ಯೆಹೋವನನ್ನ ಮತ್ತು ನಮ್ಮನ್ನ ಪ್ರೀತಿಸ್ತಾರೆ ಅಂತ ನಮಗೆ ಹೇಗೆ ಗೊತ್ತು?

11 ಅನೇಕ ಸಹೋದರ ಸಹೋದರಿಯರು ತಮ್ಮ ಕುಟುಂಬವನ್ನು ನೋಡ್ಕೊಳ್ಳೋಕೆ ಇಡೀ ದಿನ ಕೆಲಸ ಮಾಡ್ತಾರೆ. ಹಾಗಿದ್ರೂ ತಮ್ಮ ಕೈಲಾಗೋ ರೀತಿಯಲ್ಲೆಲ್ಲಾ ದೇವರ ಸಂಘಟನೆಗೆ ಬೆಂಬಲ ಕೊಡ್ತಿದ್ದಾರೆ. ಉದಾಹರಣೆಗೆ, ಕೆಲವ್ರು ವಿಪತ್ತು ಪರಿಹಾರ ಕಾರ್ಯದಲ್ಲಿ ಭಾಗವಹಿಸ್ತಾರೆ, ಇನ್ನು ಕೆಲವ್ರು ಕಟ್ಟಡ ನಿರ್ಮಾಣದ ಕೆಲ್ಸದಲ್ಲಿ ಸಹಾಯ ಮಾಡ್ತಾರೆ. ಎಲ್ರೂ ಲೋಕವ್ಯಾಪಕ ಕೆಲಸಕ್ಕಾಗಿ ಹಣ ಸಹಾಯ ಮಾಡ್ತಿದ್ದಾರೆ. ಅವ್ರಿಗೆ ದೇವರ ಮೇಲೆ ಮತ್ತು ಜನರ ಮೇಲೆ ಪ್ರೀತಿ ಇದೆ ಅಂತ ಇದ್ರಿಂದ ಗೊತ್ತಾಗುತ್ತೆ. ಸುಸ್ತಾಗಿದ್ರೂ ಪ್ರತಿವಾರ ಕೂಟಗಳಿಗೆ ಹಾಜರಾಗ್ತಾರೆ, ಅದ್ರಲ್ಲಿ ಭಾಗವಹಿಸ್ತಾರೆ. ಭಯವಾದ್ರೂ ಉತ್ತರ ಕೊಡ್ತಾರೆ. ತಮಗೇ ಸಮಸ್ಯೆಗಳಿದ್ರೂ ಕೂಟದ ಮುಂಚೆ ಮತ್ತು ಕೂಟ ಆದ್ಮೇಲೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡ್ತಾರೆ. (ಇಬ್ರಿ. 10:24, 25) ಇಷ್ಟೆಲ್ಲ ಶ್ರಮ ಹಾಕ್ತಿರೋ ಸಹೋದರ ಸಹೋದರಿಯರಿಗೆ ನಾವು ಥ್ಯಾಂಕ್ಸ್‌ ಹೇಳಲೇಬೇಕು!

12. ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದೆ ಅನ್ನೋದನ್ನ ಯೋಹಾನ ಇನ್ಯಾವ ರೀತಿಯಲ್ಲೂ ತೋರಿಸಿದ?

12 ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದೆ ಅನ್ನೋದನ್ನ ಯೋಹಾನ ಇನ್ನೊಂದು ರೀತಿಯಲ್ಲೂ ತೋರಿಸಿದ. ಅವರು ಒಳ್ಳೇ ಕೆಲ್ಸಗಳನ್ನು ಮಾಡಿದಾಗ ಹೊಗಳ್ತಿದ್ದ. ಆದ್ರೆ ತಪ್ಪು ಕಂಡಾಗ ಬುದ್ಧಿ ಹೇಳಿ ಅವ್ರನ್ನು ತಿದ್ದುತ್ತಿದ್ದ. ಉದಾಹರಣೆಗೆ, ಅವನು ತನ್ನ ಪತ್ರಗಳಲ್ಲಿ ಸಹೋದರ ಸಹೋದರಿಯರಿಗೆ ಇದ್ದ ನಂಬಿಕೆ ಬಗ್ಗೆ, ಅವರ ಮಾಡ್ತಿದ್ದ ಒಳ್ಳೇ ಕೆಲ್ಸಗಳ ಬಗ್ಗೆ ಹೊಗಳಿದ್ದಾನೆ. ಅದೇ ರೀತಿ ಯಾರಾದ್ರೂ ಪಾಪ ಮಾಡಿದ್ರೆ ಅದ್ರ ಬಗ್ಗೆ ನೇರವಾಗಿ ಬುದ್ಧಿ ಮಾತು ಹೇಳಿ ತಿದ್ದಿದ್ದಾನೆ. (1 ಯೋಹಾ. 1:8-2:1, 13, 14) ಯೋಹಾನನ ತರ ನಾವು ಸಹ ಸಹೋದರ ಸಹೋದರಿಯರು ಒಳ್ಳೇ ಕೆಲ್ಸಗಳನ್ನು ಮಾಡ್ದಾಗ ಅವರನ್ನು ಹೊಗಳಬೇಕು. ಆದ್ರೆ ಯೆಹೋವನ ಜೊತೆ ಇರೋ ಸ್ನೇಹವನ್ನು ಕಳಕೊಳ್ಳುವಂಥ ಕೆಟ್ಟ ಸ್ವಭಾವ ಅಥವಾ ಅಭ್ಯಾಸ ಯಾರಲ್ಲಾದ್ರೂ ಇದ್ರೆ ಏನು ಮಾಡಬೇಕು? ಅವರಿಗೆ ನೋವಾಗದಿರೋ ತರ ತಿದ್ದಿ ಅವ್ರ ಮೇಲೆ ನಮಗೆ ಪ್ರೀತಿಯಿದೆ ಅಂತ ತೋರಿಸಬೇಕು. ಫ್ರೆಂಡನ್ನ ತಿದ್ದೋದು ಅಷ್ಟು ಸುಲಭ ಅಲ್ಲ. ಆದ್ರೂ ನಾವದನ್ನ ಮಾಡಬೇಕು. ಯಾಕಂದ್ರೆ ನಿಜವಾದ ಸ್ನೇಹಿತರು ಒಬ್ರನ್ನೊಬ್ರು ಹರಿತ ಮಾಡ್ತಾರೆ ಅಥ್ವಾ ತಿದ್ದುತ್ತಾರೆ ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋ. 27:17.

13. ನಮ್ಮ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ದರೆ ನಾವೇನು ಮಾಡಲ್ಲ?

13 ಸಹೋದರ ಸಹೋದರಿಯರನ್ನು ನಾವು ಪ್ರೀತಿ ಮಾಡೋದಾದ್ರೆ ಕೆಲ್ವೊಂದು ವಿಷ್ಯಗಳನ್ನ ಮಾಡಲ್ಲ. ಉದಾಹರಣೆಗೆ, ಅವರೇನಾದ್ರೂ ಹೇಳಿದ್ರೆ ನಾವು ತಕ್ಷಣ ಬೇಜಾರು ಮಾಡ್ಕೊಳಲ್ಲ, ಕೋಪ ಮಾಡ್ಕೊಳ್ಳಲ್ಲ. ಯೇಸು ಭೂಮಿಯಲ್ಲಿದ್ದಾಗ ಒಂದು ಘಟನೆ ನಡಿತು. ತನ್ನ ಶಿಷ್ಯರು ಶಾಶ್ವತ ಜೀವನ ಪಡ್ಕೊಳ್ಳಬೇಕಾದ್ರೆ ತನ್ನ ಮಾಂಸ ತಿನ್ನಬೇಕು ರಕ್ತ ಕುಡಿಬೇಕು ಅಂತ ಯೇಸು ಹೇಳಿದ. (ಯೋಹಾ. 6:53-57) ಈ ಮಾತು ಕೆಲವರಿಗೆ ಇಷ್ಟ ಆಗ್ಲಿಲ್ಲ, ಅವರು ಯೇಸುನ ಬಿಟ್ಟೇ ಹೋಗಿಬಿಟ್ರು. ಆದ್ರೆ ಆತನ ನಿಜವಾದ ಸ್ನೇಹಿತರು ಆತನ ಜೊತೆನೇ ಇದ್ರು. ಅವರಲ್ಲಿ ಯೋಹಾನನೂ ಇದ್ದ. ಇಷ್ಟಕ್ಕೂ ಯೇಸು ಹೇಳಿದ ಮಾತಿನ ಅರ್ಥ ಏನು ಅಂತ ಅವ್ರಿಗೂ ಗೊತ್ತಾಗ್ಲಿಲ್ಲ. ಅವ್ರಿಗೂ ಆಶ್ಚರ್ಯ ಆಗಿತ್ತು. ಆದ್ರೂ ಯೇಸು ಏನೋ ತಪ್ಪು ಹೇಳಿಬಿಟ್ಟಿದ್ದಾನೆ ಅಂತ ಕೋಪ ಮಾಡಿಕೊಳ್ಳಲಿಲ್ಲ. ಬದ್ಲಿಗೆ ಆತನ ಮಾತಲ್ಲಿ ಬೇರೇನೋ ಅರ್ಥ ಇದೆ ಅಂತ ಆತನನ್ನ ನಂಬಿದ್ರು. (ಯೋಹಾ. 6:60, 66-69) ನಮ್ಮ ಸಹೋದರ ಸಹೋದರಿಯರು ಏನಾದ್ರೂ ಹೇಳಿದ್ರೆ ನಾವು ಥಟ್ಟಂತ ಕೋಪ ಮಾಡಿಕೊಳ್ಳಬಾರದು. ಬದಲಿಗೆ ಅವರ ಹೇಳಿದ್ರ ಅರ್ಥ ಏನು ಅಂತ ತಿಳ್ಕೊಳ್ಳೋಕೆ ಪ್ರಯತ್ನಿಸಬೇಕು.—ಜ್ಞಾನೋ. 18:13; ಪ್ರಸಂ. 7:9.

14. ಸಹೋದರ ಸಹೋದರಿಯರನ್ನ ನಾವ್ಯಾಕೆ ದ್ವೇಷಿಸಬಾರ್ದು?

14 ನಮ್ಮ ಸಹೋದರ ಸಹೋದರಿಯರನ್ನ ದ್ವೇಷಿಸಬಾರ್ದು ಅಂತ ಯೋಹಾನ ಹೇಳಿದ್ದಾನೆ. ಹಾಗೇನಾದ್ರೂ ದ್ವೇಷಿಸಿದ್ರೆ ನಾವು ಸೈತಾನನ ಕೈಗೊಂಬೆ ಆಗ್ಬಿಡ್ತೀವಿ. (1 ಯೋಹಾ. 2:11; 3:15) ಒಂದನೇ ಶತಮಾನದ ಕೊನೆಯಲ್ಲಿ ಇದೇ ತರ ಆಯ್ತು. ದೇವ ಜನ್ರ ಮಧ್ಯೆ ದ್ವೇಷ-ಒಡಕು ತರೋಕೆ ಸೈತಾನ ಏನೇನೋ ಕುತಂತ್ರ ಮಾಡಿದ. ಯೋಹಾನ ಸಭೆಗಳಿಗೆ ಪತ್ರ ಬರೆಯುವಷ್ಟರಲ್ಲಿ ಸೈತಾನನ ತರ ನಡಕೊಳ್ತಿದ್ದ ಕೆಲವ್ರು ಸಭೆಯಲ್ಲಿದ್ರು. ಒಂದು ಸಭೆಯಲ್ಲಿ ದಿಯೊತ್ರೇಫ ಅನ್ನೋನು ಸಹೋದರ ಸಹೋದರಿಯರ ಮಧ್ಯೆ ಹುಳಿ ಹಿಂಡೋ ಕೆಲಸ ಮಾಡ್ತಿದ್ದ. (3 ಯೋಹಾ. 9, 10) ಆಡಳಿತ ಮಂಡಲಿ ಕಳಿಸಿದ ಪ್ರತಿನಿಧಿಗಳಿಗೆ ಅವನು ಸ್ವಲ್ಪನೂ ಗೌರವ ಕೊಡ್ತಿರಲಿಲ್ಲ. ಆ ಪ್ರತಿನಿಧಿಗಳಿಗೆ ಅತಿಥಿಸತ್ಕಾರ ಮಾಡ್ತಿದ್ದ ಜನ್ರನ್ನ ಸಭೆಯಿಂದ ಹೊರಗೆ ಹಾಕೋಕೂ ನೋಡ್ತಿದ್ದ. ಎಷ್ಟು ಅಹಂಕಾರ ಅವನಿಗೆ! ಇವತ್ತು ಕೂಡ ಸೈತಾನ ದೇವಜನ್ರ ಮಧ್ಯ ದ್ವೇಷ-ಒಡಕು ತರೋಕೆ ಕಾಯ್ತಾ ಇದ್ದಾನೆ. ನಾವದಕ್ಕೆ ಅವಕಾಶ ಕೊಡ್ಲೇಬಾರ್ದು. ನಮ್ಮ ಸಹೋದರ ಸಹೋದರಿಯರನ್ನ ಯಾವತ್ತಿಗೂ ದ್ವೇಷಿಸಬಾರ್ದು.

ನಿಮ್ಮ ಕುಟುಂಬವನ್ನ ಪ್ರೀತಿಸಿ

ಯೇಸು ತನ್ನ ತಾಯಿಯ ಸಂಪೂರ್ಣ ಜವಾಬ್ದಾರಿಯನ್ನ ಯೋಹಾನನಿಗೆ ಒಪ್ಪಿಸಿದ. ಕುಟುಂಬದ ಯಜಮಾನ ಕೂಡ ಕುಟುಂಬದವ್ರ ಅವಶ್ಯಕತೆಗಳನ್ನ ಪೂರೈಸಬೇಕು ಮತ್ತು ಅವ್ರೆಲ್ಲ ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡಬೇಕು (ಪ್ಯಾರ 15-16 ನೋಡಿ)

15. ಕುಟುಂಬದ ಯಜಮಾನ ಮುಖ್ಯವಾಗಿ ಯಾವುದನ್ನ ಮನಸ್ಸಲ್ಲಿಡಬೇಕು?

15 ಕುಟುಂಬದ ಯಜಮಾನನಿಗೆ ತನ್ನ ಕುಟುಂಬ ಸದಸ್ಯರ ಮೇಲೆ ಪ್ರೀತಿ ಇದೆ ಅಂತ ತೋರಿಸೋ ಒಂದು ಮುಖ್ಯವಾದ ವಿಧ ಏನಂದ್ರೆ ಅವ್ರಿಗೆ ಜೀವನಕ್ಕೆ ಬೇಕಾಗಿರೋದನ್ನ ಕೊಡೋದೇ ಆಗಿದೆ. (1 ತಿಮೊ. 5:8) ಆದ್ರೆ ಇದಕ್ಕಿಂತ ಮುಖ್ಯವಾಗಿ ಕುಟುಂಬ ಸದಸ್ಯರು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಅವನು ಸಹಾಯ ಮಾಡ್ಬೇಕು. (ಮತ್ತಾ. 5:3) ಈ ವಿಷ್ಯದಲ್ಲಿ ಕುಟುಂಬದ ಯಜಮಾನರಿಗೆ ಯೇಸು ಒಳ್ಳೇ ಮಾದರಿ. ಯೇಸು ಹಿಂಸಾಕಂಬದಲ್ಲಿ ಕಷ್ಟಪಡುತ್ತಿದ್ದಾಗ್ಲೂ ತನ್ನ ಕುಟುಂಬ ಸದಸ್ಯರ ಬಗ್ಗೆ ಯೋಚಿಸ್ತಿದ್ದ ಅಂತ ಯೋಹಾನನ ಸುವಾರ್ತಾ ಪುಸ್ತಕದಿಂದ ಗೊತ್ತಾಗುತ್ತೆ. ಯೇಸುವನ್ನು ಕಂಬಕ್ಕೆ ಜಡಿದಿದ್ದ ಜಾಗದಲ್ಲಿ ಯೋಹಾನನ ಜೊತೆ ಯೇಸುವಿನ ತಾಯಿ ಮರಿಯ ಕೂಡ ಇದ್ಲು. ಅಷ್ಟು ಕಷ್ಟದಲ್ಲೂ ಯೇಸು ಮರಿಯಳನ್ನ ನೋಡ್ಕೊಳ್ಳೋ ಜವಾಬ್ದಾರಿಯನ್ನು ಯೋಹಾನನಿಗೆ ಒಪ್ಪಿಸಿದ. (ಯೋಹಾ. 19:26, 27) ಮರಿಯಳ ಜೀವನಕ್ಕೆ ಬೇಕಾಗಿದ್ದನ್ನ ಯೇಸುವಿನ ಒಡಹುಟ್ಟಿದವರೇನೋ ಕೊಡ್ತಿದ್ರು. ಆದ್ರೆ ಅವ್ಳು ಯೆಹೋವನ ಸೇವೆ ಮಾಡ್ಕೊಂಡು ಹೋಗೋಕೆ ಬೇಕಾದ ಸಹಾಯನಾ ಅವರಿಂದ ಕೊಡಕ್ಕಾಗ್ತಿರಲಿಲ್ಲ. ಯಾಕಂದ್ರೆ ಅವ್ರಿನ್ನೂ ಯೇಸುವಿನ ಶಿಷ್ಯರಾಗಿರಲಿಲ್ಲ ಅನ್ಸುತ್ತೆ. ಹಾಗಾಗಿ ಇದೆರಡು ಅಗತ್ಯವನ್ನೂ ಪೂರೈಸೋಕೆ ಯೇಸು ತನ್ನ ತಾಯಿಯನ್ನ ಯೋಹಾನನ ಕೈಗೆ ಒಪ್ಪಿಸಿದನು.

16. ಯೋಹಾನನಿಗೆ ಏನೆಲ್ಲಾ ಜವಾಬ್ದಾರಿ ಇತ್ತು?

16 ಯೋಹಾನನಿಗೆ ತುಂಬ ಜವಾಬ್ದಾರಿಗಳಿದ್ದವು. ಅವನೊಬ್ಬ ಅಪೊಸ್ತಲನಾಗಿದ್ದ. ಹಾಗಾಗಿ ಸಿಹಿಸುದ್ದಿ ಸಾರೋ ಕೆಲ್ಸದಲ್ಲಿ ಮುಂದಾಳತ್ವ ವಹಿಸ್ತಿದ್ದ. ಅಷ್ಟೇ ಅಲ್ಲ, ಅವನಿಗೆ ಮದುವೆ ಆಗಿದ್ದಿರಬೇಕು. ಹಾಗಾಗಿ ಕುಟುಂಬದವ್ರ ಅವಶ್ಯಕತೆಗಳನ್ನೂ ಪೂರೈಸಬೇಕಿತ್ತು ಮತ್ತು ಅವ್ರೆಲ್ಲಾ ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಸಹಾಯನೂ ಮಾಡಬೇಕಿತ್ತು. (1 ಕೊರಿಂ. 9:5) ಈ ವಿಷ್ಯದಲ್ಲಿ ಇವತ್ತಿರೋ ಕುಟುಂಬದ ಯಜಮಾನರು ಏನು ಕಲಿಬಹುದು?

17. ಕುಟುಂಬ ಸದಸ್ಯರು ಯೆಹೋವನ ಸೇವೆ ಮಾಡ್ತಾ ಇರೋಕೆ ಕುಟುಂಬದ ಯಜಮಾನ ಸಹಾಯ ಮಾಡೋದು ಯಾಕೆ ಪ್ರಾಮುಖ್ಯ?

17 ಒಬ್ಬ ಕುಟುಂಬದ ಯಜಮಾನನಿಗೂ ತುಂಬ ಜವಾಬ್ದಾರಿಗಳಿರುತ್ತೆ. ಉದಾಹರಣೆಗೆ ಅವನು ಕುಟುಂಬಕೋಸ್ಕರ ಕಷ್ಟಪಟ್ಟು ದುಡಿಬೇಕು. ಜೊತೆಗೆ, ಕೆಲಸದ ಜಾಗದಲ್ಲಿ ಯೆಹೋವನಿಗೆ ಒಳ್ಳೇ ಹೆಸ್ರು ತರೋಕೆ ಪ್ರಯತ್ನಿಸಬೇಕು. (ಎಫೆ. 6:5, 6; ತೀತ 2:9, 10) ಅಷ್ಟೇ ಅಲ್ಲ ಒಂದುವೇಳೆ ಅವನು ಹಿರಿಯ ಅಥ್ವಾ ಸಹಾಯಕ ಸೇವಕ ಆಗಿದ್ರೆ ಪರಿಪಾಲನಾ ಭೇಟಿ ಮಾಡೋದು, ಸಾರೋ ಕೆಲಸದಲ್ಲಿ ಮುಂದಾಳತ್ವ ವಹಿಸೋದು ಇಂಥ ಜವಾಬ್ದಾರಿಗಳೂ ಅವನಿಗೆ ಇರುತ್ತೆ. ಇಷ್ಟೆಲ್ಲ ಜವಾಬ್ದಾರಿಗಳು ಇದ್ರೂ ತನ್ನ ಹೆಂಡ್ತಿ-ಮಕ್ಕಳು ಜೊತೆ ಪ್ರತಿದಿನ ತಪ್ಪದೆ ಬೈಬಲ್‌ ಅಧ್ಯಯನ ಮಾಡ್ಬೇಕು. ಅವರು ಚೆನ್ನಾಗಿರಬೇಕು, ಖುಷಿಯಾಗಿ ಇರಬೇಕು, ಯೆಹೋವನಿಗೆ ಆಪ್ತರಾಗಿ ಇರಬೇಕು ಅಂತ ಕುಟುಂಬದ ಯಜಮಾನ ಮಾಡೋ ಪ್ರಯತ್ನವನ್ನ ಕುಟುಂಬ ಸದಸ್ಯರು ಖಂಡಿತ ಮಾನ್ಯ ಮಾಡ್ತಾರೆ.—ಎಫೆ. 5:28, 29; 6:4.

“ನನ್ನ ಪ್ರೀತಿಯನ್ನ ಉಳಿಸ್ಕೊಳ್ಳಿ”

18. ಯೋಹಾನನಿಗೆ ಯಾವ ವಿಷ್ಯ ಗೊತ್ತಿತ್ತು?

18 ಯೋಹಾನ ತುಂಬ ವರ್ಷ ಬದುಕಿದ. ಅವನ ಜೀವನದಲ್ಲಿ ಅನೇಕ ರೋಚಕ ಘಟನೆಗಳು ನಡೆದವು. ಎಲ್ಲಾ ತರದ ಸಮಸ್ಯೆಗಳನ್ನು ಅವನು ಎದುರಿಸಬೇಕಾಯ್ತು. ಆದ್ರೆ ಇದ್ಯಾವುದೂ ಅವನ ನಂಬಿಕೆಯನ್ನ ಕಡಿಮೆ ಮಾಡ್ಲಿಲ್ಲ. ಸಹೋದರ ಸಹೋದರಿಯರನ್ನು ಪ್ರೀತಿಸಬೇಕು ಅನ್ನೋ ಆಜ್ಞೆ ಜೊತೆಗೆ ಯೇಸು ಕೊಟ್ಟ ಇನ್ನುಳಿದ ಆಜ್ಞೆಗಳನ್ನೂ ಪಾಲಿಸಿದ. ಇದರಿಂದ ಯೋಹಾನನಿಗೆ ಯೆಹೋವ ಮತ್ತು ಯೇಸು ಇಬ್ಬರು ತನ್ನನ್ನ ಪ್ರೀತಿಸ್ತಾರೆ ಮತ್ತು ತನಗೆ ಕಷ್ಟ ಬಂದಾಗ ಅದನ್ನ ಜಯಿಸೋಕೆ ಬೇಕಾದ ಬಲ ಕೊಡ್ತಾರೆ ಅಂತ ಗೊತ್ತಿತ್ತು. (ಯೋಹಾ. 14:15-17; 15:10; 1 ಯೋಹಾ. 4:16) ಯೋಹಾನ ತನ್ನ ಸಹೋದರ ಸಹೋದರಿಯರನ್ನು ಪ್ರೀತಿಸೋದನ್ನ ಯಾವತ್ತಿಗೂ ನಿಲ್ಲಿಸಲಿಲ್ಲ. ಈ ಪ್ರೀತಿನಾ ಅವನು ತನ್ನ ಮಾತಲ್ಲಿ ಮತ್ತು ಕ್ರಿಯೆಯಲ್ಲಿ ತೋರಿಸಿದ. ಇದನ್ನು ತಡೆಯೋಕೆ ಸೈತಾನನಿಗಾಗಲಿ ಅವನ ಲೋಕಕ್ಕಾಗಲಿ ಆಗ್ಲಿಲ್ಲ.

19. ಒಂದನೇ ಯೋಹಾನ 4:7 ಏನು ಮಾಡೋಕೆ ನಮಗೆ ಉತ್ತೇಜನ ಕೊಡುತ್ತೆ? ಮತ್ತು ಯಾಕೆ?

19 ಯೋಹಾನನ ತರ ನಾವು ಸಹ ಸೈತಾನನ ಲೋಕದಲ್ಲಿ ಜೀವಿಸ್ತಿದ್ದೇವೆ. ಸೈತಾನನಿಗೆ ಯಾರ ಮೇಲೂ ಪ್ರೀತಿನೇ ಇಲ್ಲ. (1 ಯೋಹಾ. 3:1, 10) ನಾವು ನಮ್ಮ ಸಹೋದರ ಸಹೋದರಿಯರನ್ನು ಪ್ರೀತ್ಸೋದು ನಿಲ್ಲಿಸಬೇಕು ಅಂತ ಸೈತಾನನ ಆಸೆ. ಅದಕ್ಕಾಗಿ ಅವನು ಏನು ಮಾಡೋಕೂ ರೆಡಿ ಇರ್ತಾನೆ. ಆದರೆ ಆ ಅವಕಾಶನಾ ನಾವು ಬಿಟ್ಟು ಕೊಟ್ರೆ ಮಾತ್ರ ಅವನಿಗೆ ಏನಾದ್ರೂ ಮಾಡಕ್ಕಾಗೋದು. ಹಾಗಾಗಿ ನಮ್ಮ ಸಹೋದರ ಸಹೋದರಿಯರನ್ನು ಪ್ರೀತಿಸೋದನ್ನ ಯಾವುದೇ ಕಾರಣಕ್ಕೂ ನಿಲ್ಲಿಸೋದು ಬೇಡ. ಅವ್ರ ಮೇಲಿರೋ ಪ್ರೀತಿನಾ ನಮ್ಮ ಮಾತಲ್ಲಿ, ನಡತೆಯಲ್ಲಿ ತೋರಿಸೋಣ. ಆಗ ನಮಗೆ ಯೆಹೋವನ ಕುಟುಂಬದ ಭಾಗವಾಗಿರೋದು ಸಾರ್ಥಕ ಅನ್ಸುತ್ತೆ ಮತ್ತು ಖುಷಿಯಾಗಿ ಇರ್ತೀವಿ!—1 ಯೋಹಾನ 4:7 ಓದಿ.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

^ ಪ್ಯಾರ. 5 “ಯೇಸುವಿನ ಪ್ರಿಯ ಶಿಷ್ಯ” ಬಹುಶಃ ಅಪೊಸ್ತಲ ಯೋಹಾನ ಆಗಿರಬೇಕು. (ಯೋಹಾ. 21:7) ಹಾಗಾದ್ರೆ ಯೌವನದಲ್ಲೇ ಅವನಲ್ಲಿ ತುಂಬಾ ಒಳ್ಳೇ ಗುಣಗಳು ಇದ್ದಿರಬೇಕು. ಅವನಿಗೆ ವಯಸ್ಸಾದ ಮೇಲೆ ಪ್ರೀತಿ ಬಗ್ಗೆ ಹೆಚ್ಚು ವಿಷಯಗಳನ್ನು ಬರೆಯಲು ಯೆಹೋವನು ಅವನನ್ನು ಉಪಯೋಗಿಸಿದ್ನು. ಈ ಲೇಖನದಲ್ಲಿ ಯೋಹಾನ ಬರೆದ ಕೆಲವು ಮಾತುಗಳ ಬಗ್ಗೆ ನೋಡ್ತೇವೆ ಮತ್ತು ಅವುಗಳಿಂದ ನಾವ್ಯಾವ ಪಾಠ ಕಲಿಬಹುದು ಅಂತ ಚರ್ಚಿಸ್ತೇವೆ.

^ ಪ್ಯಾರ. 59 ಚಿತ್ರ ವಿವರಣೆ: ಒಬ್ಬ ಕುಟುಂಬದ ಯಜಮಾನ ಅನೇಕ ಕೆಲಸಗಳಲ್ಲಿ ಬಿಝಿಯಾಗಿದ್ದಾನೆ. ವಿಪತ್ತು ಪರಿಹಾರ ಕಾರ್ಯದಲ್ಲಿ ಭಾಗವಹಿಸಿದ್ದಾನೆ. ಲೋಕವ್ಯಾಪಕ ಕೆಲಸಕ್ಕಾಗಿ ಹಣ ಕಳಿಸ್ತಿದ್ದಾನೆ. ಕುಟುಂಬ ಆರಾಧನೆಗೆ ಬೇರೆ ಸಹೋದರ ಸಹೋದರಿಯರನ್ನು ಕರೆದಿದ್ದಾನೆ.