ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 5

‘ಮುಖ್ಯವಾದ ವಿಷಯಗಳಿಗೆ ಸಮಯ ಕೊಡಿ’

‘ಮುಖ್ಯವಾದ ವಿಷಯಗಳಿಗೆ ಸಮಯ ಕೊಡಿ’

“ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ. . . . ಹಾಗಾಗಿ ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆ. 5:15, 16.

ಗೀತೆ 49 ಯೆಹೋವನು ನಮ್ಮ ಆಶ್ರಯ

ಕಿರುನೋಟ *

1. ಯೆಹೋವನ ಜೊತೆ ಹೇಗೆ ಸಮಯ ಕಳೆಯೋದು?

 ನಮಗೆ ತುಂಬ ಹತ್ತಿರ ಆದವರ ಜೊತೆ ಸಮಯ ಕಳೆಯೋಕೆ ಇಷ್ಟ ಆಗುತ್ತೆ. ಉದಾಹರಣೆಗೆ, ಗಂಡ-ಹೆಂಡತಿ ಜೊತೆಯಾಗಿ ಸಮಯ ಕಳೆಯೋಕೆ, ಯುವಜನರು ತಮ್ಮ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಷ್ಟ ಪಡುತ್ತಾರೆ. ನಾವೂ ನಮ್ಮ ಸಹೋದರ ಸಹೋದರಿಯರ ಜೊತೆ ಸಮಯ ಕಳೆಯೋಕೆ ಇಷ್ಟ ಪಡ್ತೀವಿ. ಆದ್ರೆ, ಎಲ್ಲಕ್ಕಿಂತ ಜಾಸ್ತಿ ಖುಷಿ ಯಾವಾಗ ಸಿಗುತ್ತೆ ಗೊತ್ತಾ? ನಮ್ಮ ಯೆಹೋವ ದೇವರ ಜೊತೆ ಸಮಯ ಕಳೆದಾಗ. ಆದ್ರೆ ಆತನ ಜೊತೆ ಹೇಗೆ ಸಮಯ ಕಳೆಯೋದು? ನಾವು ಪ್ರಾರ್ಥನೆ ಮಾಡಬೇಕು, ಬೈಬಲ್‌ ಓದಬೇಕು ಮತ್ತು ಆತನ ಗುಣಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು. ಹೀಗೆ ಮಾಡಿದ್ರೆ, ನಾವು ಯೆಹೋವನ ಜೊತೆ ಸಮಯ ಕಳೆದ ಹಾಗೆ ಆಗುತ್ತೆ. ಅಷ್ಟೇ ಅಲ್ಲ, ನಾವು ಆತನಿಗೆ ತುಂಬ ಹತ್ತಿರ ಆಗ್ತೀವಿ.—ಕೀರ್ತ. 139:17.

2. ಯೆಹೋವನ ಜೊತೆ ಸಮಯ ಕಳೆಯೋಕೆ ಯಾಕೆ ಕಷ್ಟ ಆಗಬಹುದು?

2 ನಮಗೆ ಯೆಹೋವನ ಜೊತೆ ಸಮಯ ಕಳೆಯೋಕೆ ಇಷ್ಟ ಇದ್ರೂ ಅದನ್ನ ಮಾಡೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ದುಡಿಯೋಕೆ, ಕುಟುಂಬ ನೋಡಿಕೊಳ್ಳೋಕೆ, ಮತ್ತು ಬೇರೆ ಕೆಲಸಗಳನ್ನ ಮಾಡೋಕೇ ನಮಗೆ ಸಮಯ ಸಾಕಾಗಲ್ಲ ಅನಿಸಿಬಿಡುತ್ತೆ. ಹಾಗಾಗಿ ನಾವು ಆ ಕೆಲಸಗಳಲ್ಲೇ ಮುಳುಗಿಹೋಗ್ತೀವಿ. ಆಗ ಯೆಹೋವನನ್ನು ಆರಾಧಿಸೋಕೆ, ಪ್ರಾರ್ಥನೆ ಮಾಡೋಕೆ, ಬೈಬಲ್‌ ಅಧ್ಯಯನ ಮಾಡೋಕೆ, ಧ್ಯಾನಿಸೋಕೆ ಸಮಯ ಇಲ್ಲ ಅಂತ ನಮಗೆ ಅನಿಸುತ್ತೆ.

3. ಯಾವ ಕಾರಣದಿಂದ ನಾವು ಯೆಹೋವನಿಗೆ ಸಮಯ ಕೊಡೋಕೆ ಆಗದೇ ಹೋಗಬಹುದು?

3 ಕೆಲವೊಮ್ಮೆ ನಮಗೇ ಗೊತ್ತಿಲ್ಲದೆ ಕೆಲವು ವಿಷಯಗಳಲ್ಲಿ ಜಾಸ್ತಿ ಸಮಯ ಕಳೆದುಬಿಡ್ತೀವಿ. ಆ ವಿಷಯಗಳನ್ನ ಮಾಡೋದ್ರಲ್ಲಿ ತಪ್ಪೇನಿಲ್ಲ. ಆದ್ರೆ ಯೆಹೋವನಿಗೆ ಕೊಡಬೇಕಾದ ಸಮಯವನ್ನ ನಾವು ಅದಕ್ಕೆ ಕೊಟ್ಟುಬಿಡ್ತೀವಿ. ಉದಾಹರಣೆಗೆ, ಮನರಂಜನೆ. ನಾವು ಮನರಂಜನೆಗೆ ಸಮಯ ಕೊಡೋದ್ರಲ್ಲಿ ತಪ್ಪೇನಿಲ್ಲ. ಆದ್ರೆ ಅದರಲ್ಲೇ ನಾವು ತುಂಬ ಸಮಯ ಕಳೆದುಬಿಟ್ರೆ ಯೆಹೋವನ ಆರಾಧನೆಗೆ ಸಮಯ ಕೊಡೋಕೆ ಆಗಲ್ಲ. ಹಾಗಾಗಿ ನಮ್ಮ ಜೀವನದಲ್ಲಿ ಮನರಂಜನೆನೇ ಮುಖ್ಯ ಆಗಿರಬಾರದು.—ಜ್ಞಾನೋ. 25:27; 1 ತಿಮೊ. 4:8.

4. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ?

4 ನಮ್ಮ ಜೀವನದಲ್ಲಿ ಯಾವುದು ಮುಖ್ಯ ಆಗಿರಬೇಕು? ಯೆಹೋವನ ಜೊತೆ ಸಮಯ ಕಳೆಯೋಕೆ ನಾವೇನು ಮಾಡಬೇಕು? ಹೀಗೆ ಮಾಡೋದ್ರಿಂದ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ? ಈ ಲೇಖನದಲ್ಲಿ ಇದಕ್ಕೆ ಉತ್ತರ ನೋಡೋಣ.

ಸರಿಯಾದ ತೀರ್ಮಾನ ಮಾಡಿ, ಮುಖ್ಯವಾದ ವಿಷಯಕ್ಕೆ ಸಮಯ ಕೊಡಿ

5. ಜೀವನದಲ್ಲಿ ಸರಿಯಾದ ತೀರ್ಮಾನ ಮಾಡೋಕೆ ಯುವಜನರಿಗೆ ಎಫೆಸ 5:15-17 ಹೇಗೆ ಸಹಾಯ ಮಾಡುತ್ತೆ?

5 ಮುಂದೆ ಜೀವನದಲ್ಲಿ ಏನು ಮಾಡಬೇಕು ಅಂತ ಸರಿಯಾದ ತೀರ್ಮಾನ ಮಾಡಿ. ಸಾಮಾನ್ಯವಾಗಿ ಯುವಜನರು ತಮ್ಮ ಜೀವನ ಚೆನ್ನಾಗಿರಬೇಕು ಅಂತ ಯೋಚನೆ ಮಾಡ್ತಾರೆ. ಒಂದು ಕಡೆ, ಯೆಹೋವನ ಆರಾಧನೆ ಮಾಡದ ಅವರ ಸಂಬಂಧಿಕರು ಮತ್ತು ಅವರ ಶಾಲೆಯ ಶಿಕ್ಷಕರು, ‘ಒಳ್ಳೇ ಕಾಲೇಜು, ಯೂನಿವರ್ಸಿಟಿಗಳಿಗೆ ಹೋಗಿ. ಚೆನ್ನಾಗಿ ಓದಿ ಒಳ್ಳೇ ಕೆಲಸಕ್ಕೆ ಸೇರಿಕೊಳ್ಳಿ. ಆಗ ಚೆನ್ನಾಗಿ ದುಡ್ಡು ಮಾಡಬಹುದು’ ಅಂತ ಅವರಿಗೆ ಹೇಳಿಕೊಡ್ತಾರೆ. ಆದ್ರೆ ಇದನ್ನೆಲ್ಲಾ ಮಾಡುವಷ್ಟರಲ್ಲಿ ಯುವಜನರಿಗೆ ವರ್ಷಗಳೇ ಹೋಗಿಬಿಡುತ್ತೆ.​ ಇನ್ನೊಂದು ಕಡೆ, ಅವರ ಅಪ್ಪ-ಅಮ್ಮ ಮತ್ತು ಸಭೆಯಲ್ಲಿರೋ ಸ್ನೇಹಿತರು ‘ನೀವು ಯೆಹೋವನ ಸೇವೆ ಮಾಡಿದ್ರೆ ಚೆನ್ನಾಗಿರುತ್ತೆ’ ಅಂತ ಹೇಳ್ತಾರೆ. ಹೀಗಾದಾಗ ಯುವಜನರಿಗೆ ಸರಿಯಾದ ತೀರ್ಮಾನ ಮಾಡೋಕೆ ಯಾವುದು ಸಹಾಯ ಮಾಡುತ್ತೆ? ಎಫೆಸ 5:15-17 ಸಹಾಯ ಮಾಡುತ್ತೆ. (ಓದಿ.) ಅವರು ಅದನ್ನ ಓದಿ ಚೆನ್ನಾಗಿ ಯೋಚನೆ ಮಾಡಬೇಕು. ಆಮೇಲೆ ‘ನಾನು ಯಾವ ತೀರ್ಮಾನ ಮಾಡಿದ್ರೆ ಯೆಹೋವನಿಗೆ ಖುಷಿಯಾಗುತ್ತೆ? ಯೆಹೋವನ “ಇಷ್ಟ” ಏನು? ನಾನು ಜೀವನದಲ್ಲಿ ಯಾವ ಆಯ್ಕೆ ಮಾಡಿದ್ರೆ ನನ್ನ ಸಮಯವನ್ನ ಒಳ್ಳೇ ರೀತಿಯಲ್ಲಿ ಉಪಯೋಗಿಸಿದ ಹಾಗಾಗುತ್ತೆ?’ ಅಂತ ತಮ್ಮನ್ನೇ ಕೇಳಿಕೊಳ್ಳಬಹುದು. ಯಾಕಂದ್ರೆ “ಕಾಲ ತುಂಬ ಕೆಟ್ಟು ಹೋಗಿದೆ” ಮತ್ತು ಸೈತಾನ ಆಳುತ್ತಿರುವ ಈ ಲೋಕ ಆದಷ್ಟು ಬೇಗ ನಾಶ ಆಗುತ್ತೆ. ಹಾಗಾಗಿ ಯೆಹೋವನಿಗೆ ಖುಷಿಯಾಗೋ ತರ ಜೀವಿಸೋದೇ ಬುದ್ಧಿವಂತಿಕೆ.

6. ಮರಿಯ ಯಾವ ಆಯ್ಕೆ ಮಾಡಿದಳು? ಅದೇಕೆ ಒಳ್ಳೇ ಆಯ್ಕೆಯಾಗಿತ್ತು?

6 ಮುಖ್ಯವಾದ ವಿಷಯಗಳಿಗೆ ಸಮಯ ಕೊಡಿ. ನೀವು ಎರಡು ಕೆಲಸ ಮಾಡಬೇಕಾಗಿದೆ ಅಂದ್ಕೊಳ್ಳಿ. ಆದ್ರೆ ಸಮಯ ತುಂಬ ಕಡಿಮೆಯಿದೆ. ಆಗ ಏನು ಮಾಡ್ತೀರಾ? ಮುಖ್ಯವಾಗಿರೋ ಕೆಲಸವನ್ನ ಮಾತ್ರ ಮಾಡ್ತೀರ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಒಂದು ಸಲ ಯೇಸು ಮರಿಯ ಮತ್ತು ಮಾರ್ಥ ಅವರ ಮನೆಗೆ ಹೋದನು. ಆಗ ಮಾರ್ಥ ಯೇಸು ಬಂದ ಖುಷಿಗೆ ತರತರದ ಅಡುಗೆ-ತಿಂಡಿಗಳನ್ನ ಮಾಡೋಕೆ ಹೋದಳು. ಆದ್ರೆ ಅವಳ ತಂಗಿ ಮರಿಯ ಯೇಸು ಹತ್ರ ಕೂತ್ಕೊಂಡು ಯೇಸು ಹೇಳೋದನ್ನ ಕೇಳಿಸಿಕೊಳ್ತಾ ಇದ್ದಳು. ಮಾರ್ಥ ಮಾಡಿದ್ದು ತಪ್ಪೇನಿಲ್ಲ, ಆದ್ರೆ ಮರಿಯ ‘ಒಳ್ಳೇ ಆಯ್ಕೆ ಮಾಡಿದಳು.’ (ಲೂಕ 10:38-42, ಪಾದಟಿಪ್ಪಣಿ) ಮರಿಯ, ಆ ದಿನ ಏನು ಊಟ ಮಾಡಿದಳು ಅನ್ನೋದನ್ನ ಮರೆತಿರಬಹುದು. ಆದ್ರೆ ಯೇಸುವಿಂದ ಕಲಿತ ವಿಷಯಗಳನ್ನ ಖಂಡಿತ ಮರೆತಿರಲ್ಲ. ಯೇಸು ಜೊತೆ ಸಮಯ ಕಳೆದಾಗ ಮರಿಯಗೆ ತುಂಬ ಖುಷಿ ಆಯ್ತು. ಅದೇ ತರ ನಾವೂ ಯೆಹೋವನ ಜೊತೆ ಸಮಯ ಕಳೆಯುವಾಗ ನಮಗೂ ಖುಷಿಯಾಗುತ್ತೆ. ಹಾಗಾದ್ರೆ ಯೆಹೋವನ ಜೊತೆ ಸಮಯ ಕಳೆಯೋಕೆ ನಾವು ಏನು ಮಾಡಬೇಕು?

ಯೆಹೋವನ ಜೊತೆ ಚೆನ್ನಾಗಿ ಸಮಯ ಕಳೆಯಿರಿ

7. ಪ್ರಾರ್ಥನೆ, ಬೈಬಲ್‌ ಅಧ್ಯಯನ ಮತ್ತು ಧ್ಯಾನ ಯಾಕೆ ಪ್ರಾಮುಖ್ಯ?

7 ಪ್ರಾರ್ಥನೆ, ಬೈಬಲ್‌ ಅಧ್ಯಯನ ಮತ್ತು ಧ್ಯಾನಿಸೋದು ನಮ್ಮ ಆರಾಧನೆಯಲ್ಲಿ ಸೇರಿದೆ. ನಾವು ಪ್ರಾರ್ಥನೆ ಮಾಡುವಾಗ ನಮ್ಮ ಪ್ರೀತಿಯ ಅಪ್ಪ ಯೆಹೋವನ ಜೊತೆ ಮಾತಾಡ್ತೀವಿ. (ಕೀರ್ತ. 5:7) ಬೈಬಲ್‌ ಅಧ್ಯಯನ ಮಾಡುವಾಗ ಎಲ್ಲರಿಗೂ ವಿವೇಕ ಕೊಡೋ ‘ದೇವರ ಬಗ್ಗೆ ಹೆಚ್ಚು ಕಲಿತೀವಿ.’ (ಜ್ಞಾನೋ. 2:1-5) ಧ್ಯಾನಿಸುವಾಗ ಯೆಹೋವನ ಸುಂದರ ಗುಣಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡ್ತೀವಿ. ಅಷ್ಟೇ ಅಲ್ಲ, ಆತನು ಮುಂದೆ ನಮಗೋಸ್ಕರ ಏನೆಲ್ಲಾ ಮಾಡ್ತಾನೆ ಅಂತ ನೆನಸಿಕೊಳ್ತೀವಿ. ಇದಕ್ಕಿಂತ ಒಳ್ಳೇ ಕೆಲಸ ಇನ್ನೇನಿದೆ ಹೇಳಿ! ಹಾಗಾಗಿ ನಮಗೆ ಸಮಯ ಸ್ವಲ್ಪನೇ ಇದ್ರೂ ಯೆಹೋವನ ಜೊತೆ ಕಳೆಯೋಕೆ ಏನು ಮಾಡಬೇಕು?

ಬೈಬಲ್‌ ಅಧ್ಯಯನ ಮಾಡೋಕೆ ಅಪಕರ್ಷಣೆ ಇಲ್ಲದ ಜಾಗ ನೋಡಿಕೊಳ್ಳಿ (ಪ್ಯಾರ 8-9 ನೋಡಿ)

8. (ಎ) ಯೇಸು ಯಾಕೆ ಕಾಡಿಗೆ ಹೋದನು? (ಬಿ) ಇದ್ರಿಂದ ನಮಗೇನು ಪಾಠ?

8 ಅಪಕರ್ಷಣೆ ಇಲ್ಲದ ಜಾಗ ನೋಡಿಕೊಳ್ಳಿ. ಯೇಸುವಿನ ಉದಾಹರಣೆ ನೋಡಿ. ಭೂಮಿಯಲ್ಲಿ ತನ್ನ ಸೇವೆ ಶುರು ಮಾಡೋ ಮುಂಚೆ ಆತನು 40 ದಿನ ಕಾಡಲ್ಲಿ ಸಮಯ ಕಳೆದನು. (ಲೂಕ 4:1, 2) ಆತನಿಗೆ ಅಲ್ಲಿ ಯಾವ ಅಪಕರ್ಷಣೆನೂ ಇಲ್ಲದೆ ಇದ್ದಿದ್ರಿಂದ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಆಯ್ತು, ತಾನೇನು ಮಾಡಬೇಕು ಅಂತ ಯೆಹೋವ ಬಯಸ್ತಾನೆ ಅನ್ನೋದರ ಬಗ್ಗೆ ಯೋಚನೆ ಮಾಡೋಕೆ ಆಯ್ತು. ಮುಂದೆ ಬರೋ ಕಷ್ಟಗಳಿಗೆ ತಯಾರಾಗೋಕೆ ಇದು ಯೇಸುಗೆ ಸಹಾಯ ಮಾಡ್ತು. ಇದ್ರಿಂದ ನಮಗೇನು ಪಾಠ? ನಿಮ್ಮ ಮನೆಯಲ್ಲಿ ತುಂಬ ಜನ ಇದ್ರೆ ಅಪಕರ್ಷಣೆ ಇಲ್ಲದ ಜಾಗ ಸಿಗೋದು ಕಷ್ಟ ಆಗಬಹುದು. ಹಾಗಾಗಿ ಹೊರಗಡೆ ಎಲ್ಲಾದ್ರೂ ಹೋಗಬೇಕಾಗುತ್ತೆ. ಇದನ್ನೇ ಸಹೋದರಿ ಜೂಲಿ ಮಾಡಿದ್ರು. ಅವರು ಮತ್ತು ಅವರ ಗಂಡ ಫ್ರಾನ್ಸ್‌ನಲ್ಲಿ ಒಂದು ಚಿಕ್ಕ ಮನೆಯಲ್ಲಿದ್ದಾರೆ. ಹಾಗಾಗಿ ಅಪಕರ್ಷಣೆಯಿಲ್ಲದೆ ಯೆಹೋವನ ಜೊತೆ ಮಾತಾಡೋಕೆ ಸಹೋದರಿಗೆ ಕಷ್ಟ ಆಗ್ತಿತ್ತು. ಅದಕ್ಕೆ ಜೂಲಿ ಹೇಳಿದ್ದು, “ನಾನು ದಿನಾ ಪಾರ್ಕ್‌ಗೆ ಹೋಗ್ತೀನಿ. ಅಲ್ಲಿ ಯಾರೂ ಇಲ್ಲದೇ ಇರುವಾಗ ನನ್ನ ಮನಸ್ಸಲ್ಲಿ ಇರೋದನ್ನೆಲ್ಲ ಯೆಹೋವ ಹತ್ರ ಹೇಳಿಕೊಳ್ತೀನಿ.”

9. ಯೇಸುಗೆ ತುಂಬ ಕೆಲಸಗಳಿದ್ದರೂ ಏನು ಮಾಡಿದನು?

9 ಯೇಸುಗೆ ತುಂಬ ಕೆಲಸ ಇರುತ್ತಿತ್ತು. ಆತನು ಹೋದ ಕಡೆಯೆಲ್ಲಾ ಜನರ ಗುಂಪು ಆತನ ಹಿಂದೆನೇ ಬರುತ್ತಿತ್ತು. ಅವರಿಗೂ ಆತನು ಸಮಯ ಕೊಡಬೇಕಿತ್ತು. ಒಂದಿನ “ಊರಿಗೆ ಊರೇ ಮನೆಬಾಗಿಲಲ್ಲಿ ಸೇರಿತ್ತು.” ಆಗಲೂ ಯೆಹೋವನ ಜೊತೆ ತನಗಿರೋ ಸ್ನೇಹವನ್ನ ಗಟ್ಟಿ ಮಾಡಿಕೊಳ್ಳೋಕೆ “ಬೆಳಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ” ಎದ್ದು “ದೂರದ ಒಂದು ಜಾಗಕ್ಕೆ ಹೋಗಿ” ಪ್ರಾರ್ಥನೆ ಮಾಡ್ತಾ ಆತನು ಯೆಹೋವನ ಜೊತೆ ಸಮಯ ಕಳೆದನು.—ಮಾರ್ಕ 1:32-35.

10-11. (ಎ) ಯೇಸು ತನ್ನ ಶಿಷ್ಯರಿಗೆ ಏನು ಮಾಡೋಕೆ ಹೇಳಿದನು? (ಮತ್ತಾಯ 26:40, 41) (ಬಿ) ಆದ್ರೆ ಶಿಷ್ಯರು ಏನು ಮಾಡಿದರು?

10 ಯೇಸು ತನ್ನ ಕೊನೇ ರಾತ್ರಿ ಕೂಡ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಮತ್ತು ಧ್ಯಾನಿಸೋಕೆ ಯಾರೂ ಇಲ್ಲದೆ ಇರೋ ಜಾಗಕ್ಕೆ ಹೋಗಬೇಕು ಅಂದುಕೊಂಡನು. ಅದಕ್ಕೆ ಆತನು ಗೆತ್ಸೇಮನೆ ತೋಟಕ್ಕೆ ಹೋದನು. (ಮತ್ತಾ. 26:36) ಅಲ್ಲಿ ತನ್ನ ಶಿಷ್ಯರಿಗೆ ಒಂದು ಮುಖ್ಯವಾದ ವಿಷಯ ಹೇಳಿದನು.

11 ಯೇಸು ಗೆತ್ಸೇಮನೆ ತೋಟಕ್ಕೆ ಬಂದಾಗ ಮಧ್ಯರಾತ್ರಿ ಆಗಿದ್ದಿರಬೇಕು. ಆತನು ಅಪೊಸ್ತಲರಿಗೆ “ಎಚ್ಚರವಾಗಿರಿ” ಅಂತ ಹೇಳಿ ಪ್ರಾರ್ಥನೆ ಮಾಡೋಕೆ ಹೋದನು. (ಮತ್ತಾ. 26:37-39) ಆದ್ರೆ ಅವರು ನಿದ್ದೆ ಮಾಡಿಬಿಟ್ರು. ಇದನ್ನ ನೋಡಿ ಯೇಸು ಪುನಃ ಅವರಿಗೆ ‘ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಿ’ ಅಂತ ಹೇಳಿದನು. (ಮತ್ತಾಯ 26:40, 41 ಓದಿ.) ಆದ್ರೆ, ಶಿಷ್ಯರಿಗೆ ತುಂಬ ಸುಸ್ತಾಗಿದೆ, ಆಯಾಸ ಆಗಿದೆ ಅಂತ ಯೇಸು ಅರ್ಥಮಾಡಿಕೊಂಡನು. ಹಾಗಾಗಿ ಅವರ “ದೇಹಕ್ಕೆ ಶಕ್ತಿ ಇಲ್ಲ” ಅಂತ ಯೇಸು ಹೇಳಿದನು. ಇದಾದ ಮೇಲೆ ಯೇಸು ಪುನಃ ಎರಡು ಸಲ ಪ್ರಾರ್ಥನೆ ಮಾಡಿ ಬಂದಾಗ್ಲೂ ಶಿಷ್ಯರು ನಿದ್ದೆ ಮಾಡ್ತಿರೋದನ್ನ ನೋಡಿದನು.—ಮತ್ತಾ. 26:42-45.

ತುಂಬ ಸುಸ್ತಾಗಿರದ ಸಮಯದಲ್ಲಿ ಪ್ರಾರ್ಥನೆ ಮಾಡಿ (ಪ್ಯಾರ 12 ನೋಡಿ)

12. ಪ್ರಾರ್ಥನೆ ಮಾಡೋಕೆ ಆಗ್ತಿಲ್ಲ ಅನಿಸಿದ್ರೆ ಏನು ಮಾಡಬೇಕು?

12 ಸರಿಯಾದ ಸಮಯ ಆಯ್ಕೆ ಮಾಡಿ. ನಮಗೆ ಕೆಲವೊಮ್ಮೆ ಎಷ್ಟು ಆಯಾಸ ಆಗಿರುತ್ತಂದ್ರೆ ಪ್ರಾರ್ಥನೆ ಮಾಡೋಕೆ ಶಕ್ತಿನೇ ಇರಲ್ಲ. ಆಗ ಏನು ಮಾಡೋದು? ನಾವು ಪ್ರಾರ್ಥನೆ ಮಾಡುವ ಸಮಯವನ್ನು ಬದಲಾಯಿಸಬಹುದು. ಉದಾಹರಣೆಗೆ ಕೆಲವರು ರಾತ್ರಿ ಹೊತ್ತಲ್ಲಿ ಪ್ರಾರ್ಥನೆ ಮಾಡುತ್ತಿದ್ರು. ಆದ್ರೆ ಆಗ ಅವರಿಗೆ ಸುಸ್ತಾಗಿರುತ್ತಿತ್ತು ಅದಕ್ಕೆ ಅವರು ಸಮಯವನ್ನ ಬದಲಾಯಿಸಿಕೊಂಡ್ರು. ಅವರೀಗ ಸಂಜೆ ಹೊತ್ತಲ್ಲಿ ಪ್ರಾರ್ಥಿಸ್ತಾರೆ. ಇನ್ನೂ ಕೆಲವರು ಕೂತುಕೊಂಡು ಅಥವಾ ಮೊಣಕಾಲೂರಿ ಪ್ರಾರ್ಥನೆ ಮಾಡೋದ್ರಿಂದ ಜಾಸ್ತಿ ಗಮನ ಕೊಡೋಕೆ ಆಗುತ್ತೆ ಅಂತ ಹೇಳ್ತಾರೆ. ಕೆಲವೊಮ್ಮೆ ನಿಮಗೆ ತುಂಬ ಚಿಂತೆ ಆದಾಗ ಯೆಹೋವನಿಗೆ ಪ್ರಾರ್ಥಿಸೋಕೆ ಮನಸ್ಸಾಗಲ್ಲ. ಆದ್ರೂ ನಿಮಗೆ ಏನು ಅನಿಸ್ತಿದೆ ಅಂತ ಯೆಹೋವ ಹತ್ರ ಮನಸ್ಸುಬಿಚ್ಚಿ ಹೇಳಿಕೊಳ್ಳಿ. ಯೆಹೋವ ನಿಮ್ಮನ್ನ ಅರ್ಥಮಾಡಿಕೊಳ್ತಾನೆ.—ಕೀರ್ತನೆ 139:4.

ಕೂಟಗಳು ನಡಿಯುವಾಗ ಮೆಸೆಜ್‌ ಮತ್ತು ಮೇಲ್‌ಗಳನ್ನು ಓದದೆ, ಅದಕ್ಕೆ ಉತ್ತರಿಸದೇ ಇದ್ರೆ ಒಳ್ಳೇದು! (ಪ್ಯಾರ 13-14 ನೋಡಿ)

13. ಎಲೆಕ್ಟ್ರಾನಿಕ್‌ ಸಾಧನಗಳು ಹೇಗೆ ನಮ್ಮ ಗಮನವನ್ನ ಆಕಡೆ-ಈಕಡೆ ಹೋಗೋ ತರ ಮಾಡಿಬಿಡಬಹುದು?

13 ನಿಮ್ಮ ಗಮನ ಆಕಡೆ-ಈಕಡೆ ಹೋಗದೆ ಇರೋ ತರ ನೋಡಿಕೊಳ್ಳಿ. ಯೆಹೋವನ ಜೊತೆ ನಮ್ಮ ಸ್ನೇಹ ಗಟ್ಟಿ ಮಾಡಿಕೊಳ್ಳೋಕೆ ಬರೀ ಪ್ರಾರ್ಥನೆ ಮಾಡಿದ್ರೆ ಸಾಕಾಗಲ್ಲ. ಬೈಬಲ್‌ ಅಧ್ಯಯನ ಮಾಡಬೇಕು ಕೂಟಗಳಿಗೂ ಹೋಗಬೇಕು. ಆದ್ರೆ ಕೆಲವೊಮ್ಮೆ ಅಧ್ಯಯನ ಮಾಡುವಾಗ ಅಥವಾ ಕೂಟದಲ್ಲಿ ಭಾಷಣ ಕೇಳಿಸಿಕೊಳ್ಳುವಾಗ ನಮ್ಮ ಗಮನ ಆಕಡೆ-ಈಕಡೆ ಹೋಗಿಬಿಡಬಹುದು. ಅಂಥ ಸಮಯದಲ್ಲಿ ‘ನನಗೆ ಯಾಕೆ ಗಮನ ಕೊಡೋಕೆ ಆಗ್ತಿಲ್ಲ?’ ಅಂತ ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಯೆಹೋವನ ಜೊತೆ ಸಮಯ ಕಳೆಯುವಾಗ ಯಾರಾದ್ರು ಕಾಲ್‌ ಮಾಡೋದ್ರಿಂದ ಅಥವಾ ಮೆಸೇಜ್‌ ಮಾಡೋದ್ರಿಂದ ನಮಗೆ ಗಮನ ಕೊಡೋಕೆ ಆಗುತ್ತಿಲ್ವಾ ಅಂತ ಯೋಚನೆ ಮಾಡಬೇಕು. ಇವತ್ತು ಸ್ಮಾರ್ಟ್‌ಫೋನ್‌ ಅಥವಾ ಬೇರೆ ಎಲೆಕ್ಟ್ರಾನಿಕ್‌ ಸಾಧನಗಳು ತುಂಬ ಜನರ ಹತ್ರ ಇದೆ. ಕೆಲವೊಮ್ಮೆ ಫೋನ್‌ ಬರೀ ನಮ್ಮ ಪಕ್ಕದಲ್ಲಿ ಇದ್ರೂ ನಮ್ಮ ಗಮನ ಅದ್ರ ಮೇಲೆ ಹೋಗುತ್ತೆ ಅಂತ ಕೆಲವು ಸಂಶೋಧಕರು ಹೇಳ್ತಾರೆ. ಅವರಲ್ಲಿ ಒಬ್ಬರು ಹೇಳಿದ್ದು, “ಫೋನ್‌ ನಮ್ಮ ಪಕ್ಕದಲ್ಲಿ ಇದ್ರೆ ನಮ್ಮ ಗಮನ ಕೆಲಸದ ಮೇಲಿರಲ್ಲ, ಯಾರಾದ್ರು ಮೆಸೇಜ್‌ ಮಾಡಿದ್ದಾರಾ? ಯಾರಾದ್ರು ಕಾಲ್‌ ಮಾಡಿದ್ದಾರಾ? ಅಂತ ನಮ್ಮ ತಲೆಯಲ್ಲಿ ಯೋಚನೆ ಓಡ್ತಾ ಇರುತ್ತೆ.” ಸಮ್ಮೇಳನ ಅಥವಾ ಅಧಿವೇಶನ ಶುರುವಾಗೋ ಮುಂಚೆ ಫೋನ್‌, ಟ್ಯಾಬ್ಲೆಟ್‌ ಅಥವಾ ಬೇರೆ ಎಲೆಕ್ಟ್ರಾನಿಕ್‌ ಸಾಧನಗಳನ್ನ ಬೇರೆಯವರಿಗೆ ಅಡಚಣೆಯಾಗದ ಸೆಟ್ಟಿಂಗಲ್ಲಿ ಇಡೋಕೆ ಹೇಳ್ತಾರೆ. ಯೆಹೋವನ ಜೊತೆ ಸಮಯ ಕಳೆಯುವಾಗ ನಾವೂ ಇದನ್ನ ಪಾಲಿಸಿದ್ರೆ ನಮ್ಮ ಗಮನ ಬೇರೆ ಕಡೆ ಹೋಗಲ್ಲ.

14. ಫಿಲಿಪ್ಪಿ 4:6,7ರ ಪ್ರಕಾರ ಗಮನ ಕೊಡೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ?

14 ಗಮನ ಕೊಡೋಕೆ ಯೆಹೋವನ ಹತ್ರ ಸಹಾಯ ಕೇಳಿ. ಕೂಟಗಳಲ್ಲಿ ಕೇಳಿಸಿಕೊಳ್ಳುವಾಗ ಮತ್ತು ಬೈಬಲ್‌ ಅಧ್ಯಯನ ಮಾಡುವಾಗ ನಿಮ್ಮ ಗಮನ ಬೇರೆ ಕಡೆ ಹೋದ್ರೆ ಯೆಹೋವನ ಹತ್ರ ಸಹಾಯ ಕೇಳಿ. ನಿಮಗೆ ಯಾವುದಾದ್ರೂ ಚಿಂತೆ ಕಾಡುತ್ತಿದ್ರೆ ಗಮನ ಕೊಡೋಕೆ ಕಷ್ಟ ಆಗುತ್ತೆ ನಿಜ, ಆದ್ರೂ ಗಮನ ಕೊಡೋದು ತುಂಬ ಮುಖ್ಯ. ಅದಕ್ಕೆ ಪ್ರಯತ್ನ ಮಾಡಿ, ಯೆಹೋವನ ಹತ್ರ ಮನಶ್ಶಾಂತಿಗಾಗಿ ಬೇಡಿಕೊಳ್ಳಿ. ಆಗ ದೇವಶಾಂತಿ ನಿಮ್ಮ ಹೃದಯವನ್ನ ಮಾತ್ರ ಅಲ್ಲ, ನಿಮ್ಮ ‘ಯೋಚ್ನೆಯನ್ನೂ’ ಕಾಯುತ್ತೆ.— ಫಿಲಿಪ್ಪಿ 4:6,7 ಓದಿ.

ಯೆಹೋವನ ಜೊತೆ ಸಮಯ ಕಳೆಯೋದ್ರಿಂದ ಏನೆಲ್ಲಾ ಒಳ್ಳೇದಾಗುತ್ತೆ?

15. ಯೆಹೋವನ ಜೊತೆ ಸಮಯ ಕಳೆಯೋದ್ರಿಂದ ಆಗೋ ಒಂದು ಪ್ರಯೋಜನ ಏನು?

15 ನಾವು ಯೆಹೋವನ ಜೊತೆ ಮಾತಾಡೋಕೆ, ಆತನು ಹೇಳೋದನ್ನು ಕೇಳೋಕೆ ಮತ್ತು ಆತನ ಬಗ್ಗೆ ಯೋಚಿಸೋಕೆ ಸಮಯ ಕೊಟ್ರೆ ತುಂಬ ಪ್ರಯೋಜನ ಇದೆ. ಒಂದು, ನಾವು ಒಳ್ಳೇ ತೀರ್ಮಾನ ಮಾಡೋಕೆ ಆಗುತ್ತೆ. “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 13:20) ಹಾಗಾಗಿ ಎಲ್ಲರಿಗೂ ವಿವೇಕ ಕೊಡೋ ಯೆಹೋವನ ಜೊತೆ ಸಮಯ ಕಳೆದರೆ ನಾವೂ ವಿವೇಕಿಗಳಾಗ್ತೀವಿ. ಆಗ ಆತನನ್ನ ಖುಷಿಪಡಿಸೋಕೆ ಏನು ಮಾಡಬೇಕು, ಆತನಿಗೆ ನೋವಾಗದ ತರ ಹೇಗೆ ನಡ್ಕೊಬೇಕು ಅಂತ ತಿಳಿದುಕೊಳ್ತೀವಿ.

16. ಯೆಹೋವನ ಜೊತೆ ಸಮಯ ಕಳೆಯೋದ್ರಿಂದ ಆಗೋ ಎರಡನೇ ಪ್ರಯೋಜನ ಏನು?

16 ಎರಡು, ನಾವು ಒಳ್ಳೇ ಶಿಕ್ಷಕರಾಗ್ತೀವಿ. ಬೈಬಲ್‌ ವಿದ್ಯಾರ್ಥಿಗಳು ಯೆಹೋವನಿಗೆ ಹತ್ರ ಆಗಬೇಕು ಅಂತಾನೇ ನಾವು ಅವರಿಗೆ ಬೈಬಲ್‌ ಕಲಿಸ್ತೀವಿ. ನಾವು ಯಾವಾಗಲೂ ನಮ್ಮ ಯೆಹೋವ ಅಪ್ಪ ಹತ್ರ ಮಾತಾಡ್ತಾ ಇದ್ರೆ, ಆತನ ಮೇಲೆ ನಮಗೆ ಪ್ರೀತಿ ಬೆಳೆಯುತ್ತೆ ಮತ್ತು ನಮ್ಮ ವಿದ್ಯಾರ್ಥಿಗಳಿಗೂ ಯೆಹೋವನನ್ನು ಪ್ರೀತಿಸೋಕೆ ಕಲಿಸ್ತೀವಿ. ಯೇಸುನೂ ಇದನ್ನೇ ಮಾಡಿದನು. ಆತನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಆತನು ಶಿಷ್ಯರಿಗೆ ಯೆಹೋವನ ಬಗ್ಗೆ ಎಷ್ಟು ಚೆನ್ನಾಗಿ ಕಲಿಸಿಕೊಟ್ಟ ಅಂದ್ರೆ ಅವರಿಗೂ ಯೆಹೋವನ ಮೇಲೆ ಪ್ರೀತಿ ಬೆಳೀತು.—ಯೋಹಾ. 17:25, 26.

17. ಯೆಹೋವನ ಜೊತೆ ಸಮಯ ಕಳೆಯೋದ್ರಿಂದ ಆಗೋ ಮೂರನೇ ಪ್ರಯೋಜನ ಏನು?

17 ಮೂರು, ನಮ್ಮ ನಂಬಿಕೆ ಬಲವಾಗುತ್ತೆ. ನಾವು ಯೆಹೋವನ ಹತ್ರ ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ಬೇಡಿಕೊಳ್ತೀವಿ. ಆಗ ಯೆಹೋವ ನಮ್ಮ ಪ್ರಾರ್ಥನೆಗೆ ಉತ್ತರಿಸೋದನ್ನ ನೋಡಿ ಆತನ ಮೇಲೆ ನಮ್ಮ ನಂಬಿಕೆ ಬಲವಾಗುತ್ತೆ. (1 ಯೋಹಾ. 5:15) ನಮ್ಮ ನಂಬಿಕೆ ಬಲವಾಗಬೇಕಂದ್ರೆ ಇದು ಮಾತ್ರ ಸಾಕಾಗಲ್ಲ, ಬೈಬಲ್‌ ಅಧ್ಯಯನವನ್ನೂ ಮಾಡಬೇಕು. ಯಾಕಂದ್ರೆ ಬೈಬಲಲ್ಲಿರೋ “ಸುದ್ದಿಯನ್ನ ಕೇಳಿಸ್ಕೊಂಡ ಮೇಲೆನೇ ನಂಬಿಕೆ ಇಡೋಕೆ” ಆಗೋದು. (ರೋಮ. 10:17) ಆದ್ರೆ ನಂಬಿಕೆ ಗಟ್ಟಿ ಮಾಡ್ಕೊಳ್ಳೋಕೆ ಬರೀ ಜ್ಞಾನ ಸಾಕಾಗಲ್ಲ ಇನ್ನೊಂದು ವಿಷಯನೂ ಮಾಡಬೇಕು.

18. ನಾವು ಯಾಕೆ ಧ್ಯಾನಿಸಬೇಕು? ಉದಾಹರಣೆ ಕೊಡಿ.

18 ನಾವು ಕಲ್ತಿದ್ದನ್ನ ಧ್ಯಾನಿಸಬೇಕು. 77ನೇ ಕೀರ್ತನೆ ಬರೆದವನ ಅನುಭವ ನೋಡಿ. ಯೆಹೋವ ದೇವರು ತನ್ನ ಮತ್ತು ಇಸ್ರಾಯೇಲ್ಯರ ಕೈಬಿಟ್ಟಿದ್ದಾನೆ ಅಂತ ಅವನು ಅಂದುಕೊಂಡಿದ್ದ. ಅವನಿಗೆ ಎಷ್ಟು ಚಿಂತೆ ಕಾಡುತ್ತಿತ್ತು ಅಂದ್ರೆ ಅವನು ರಾತ್ರಿಯೆಲ್ಲಾ ನಿದ್ದೆನೇ ಮಾಡ್ತಿರಲಿಲ್ಲ. (ವಚನ 2-8) ಅದಕ್ಕೆ ಅವನು ಏನು ಮಾಡಿದ? ಅವನು ಯೆಹೋವ ದೇವರಿಗೆ, “ನಿನ್ನ ಎಲ್ಲ ಚಟುವಟಿಕೆಗಳನ್ನ ನಾನು ಧ್ಯಾನಿಸ್ತೀನಿ, ನಿನ್ನ ಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ” ಅಂತ ಹೇಳಿದ. (ವಚನ 12) ಯೆಹೋವ ದೇವರು ತನಗೆ ಮತ್ತು ತನ್ನ ಜನರಿಗೆ ಈ ಮುಂಚೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅನ್ನೋದು ಆ ಕೀರ್ತನೆಗಾರನಿಗೆ ಚೆನ್ನಾಗಿ ಗೊತ್ತಿತ್ತು. ಆದ್ರೆ “ದೇವರು ತನ್ನ ಕೃಪೆ ತೋರಿಸೋದನ್ನ ಮರೆತುಬಿಟ್ಟಿದ್ದಾನಾ? ಅಥವಾ ಆತನು ತನ್ನ ಕೋಪದಿಂದ ಕರುಣೆ ತೋರಿಸೋದನ್ನ ನಿಲ್ಲಿಸಿಬಿಟ್ಟಿದ್ದಾನಾ?” ಅಂತ ಅಂದುಕೊಳ್ತಿದ್ದ. (ವಚನ 9) ಆಮೇಲೆ ಅವನು, ಈ ಮುಂಚೆ ಯೆಹೋವ ದೇವರು ಹೇಗೆಲ್ಲಾ ಕರುಣೆ ತೋರಿಸಿದ್ದಾನೆ ಅನ್ನೋದರ ಬಗ್ಗೆ ಧ್ಯಾನಿಸಿದ. (ವಚನ 11) ಹೀಗೆ ಮಾಡಿದ್ರಿಂದ ಯೆಹೋವ ತನ್ನ ಜನರ ಕೈ ಬಿಡಲ್ಲ ಅಂತ ಅವನಿಗೆ ಭರವಸೆ ಸಿಕ್ತು. (ವಚನ 15) ಆ ಕೀರ್ತನೆಗಾರನ ತರ ನಾವೂ ಯೆಹೋವ ಈ ಮುಂಚೆ ನಮಗೆ ಮತ್ತು ಆತನ ಜನರಿಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ಧ್ಯಾನಿಸಬೇಕು. ಆಗ ನಮ್ಮ ನಂಬಿಕೆನೂ ಬಲವಾಗುತ್ತೆ.

19. ಯೆಹೋವನ ಜೊತೆ ಸಮಯ ಕಳೆಯೋದ್ರಿಂದ ಆಗೋ ನಾಲ್ಕನೇ ಪ್ರಯೋಜನ ಏನು?

19 ನಾಲ್ಕು, ಯೆಹೋವನ ಮೇಲೆ ನಮಗಿರೋ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ. ಈ ಪ್ರೀತಿ ಯೆಹೋವನ ಮಾತು ಕೇಳೋಕೆ, ತ್ಯಾಗಗಳನ್ನ ಮಾಡೋಕೆ ಮತ್ತು ಕಷ್ಟಗಳನ್ನ ಸಹಿಸಿಕೊಳ್ಳೋಕೆ ಸಹಾಯ ಮಾಡುತ್ತೆ. (ಮತ್ತಾ. 22:37-39; 1 ಕೊರಿಂ. 13:4, 7; 1 ಯೋಹಾ. 5:3) ನಮ್ಮ ಜೀವನದಲ್ಲಿ ಯೆಹೋವನ ಸ್ನೇಹಕ್ಕಿಂತ ಯಾವುದೂ ಮುಖ್ಯ ಅಲ್ಲ!—ಕೀರ್ತ. 63:1-8.

20. ಯೆಹೋವನ ಜೊತೆ ಸಮಯ ಕಳೆಯೋಕೆ ಏನೆಲ್ಲಾ ಮಾಡ್ತೀರಾ?

20 ಪ್ರಾರ್ಥನೆ ಮಾಡೋದು, ಬೈಬಲ್‌ ಅಧ್ಯಯನ ಮಾಡೋದು, ಧ್ಯಾನಿಸೋದು ನಮ್ಮ ಆರಾಧನೆಯಲ್ಲಿ ಸೇರಿದೆ. ಯೆಹೋವನ ಜೊತೆ ಸಮಯ ಕಳೆಯೋಕೆ ಯೇಸು ತರ ಅಪಕರ್ಷಣೆ ಇಲ್ಲದಿರೋ ಜಾಗವನ್ನ ಆರಿಸಿಕೊಳ್ಳಿ. ಬೈಬಲ್‌ ಅಧ್ಯಯನ ಮಾಡುವಾಗ ಮತ್ತು ಕೂಟಗಳಲ್ಲಿ ಕೇಳಿಸಿಕೊಳ್ಳುವಾಗ ನಿಮ್ಮ ಗಮನ ಆಕಡೆ-ಈಕಡೆ ಹೋಗದಿರೋ ತರ ನೋಡಿಕೊಳ್ಳಿ. ಅದಕ್ಕೋಸ್ಕರ ಯೆಹೋವ ಹತ್ರ ಸಹಾಯ ಕೇಳಿ. ಈಗಿರೋ ಸಮಯನ ಚೆನ್ನಾಗಿ ಉಪಯೋಗಿಸಿಕೊಂಡು ಯೆಹೋವನ ಜೊತೆ ಸಮಯ ಕಳೆದ್ರೆ ಆತನು ಮುಂದೆ ನಮಗೆ ಶಾಶ್ವತ ಜೀವ ಕೊಡ್ತಾನೆ.—ಮಾರ್ಕ 4:24.

ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು

^ ಸಾಮಾನ್ಯವಾಗಿ ಒಬ್ಬರನ್ನ ಫ್ರೆಂಡ್‌ ಮಾಡಿಕೊಳ್ಳಬೇಕಂದ್ರೆ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕಾಗುತ್ತೆ. ಅದಕ್ಕೆ ತುಂಬಾ ಸಮಯ ಹಿಡಿಯುತ್ತೆ. ಯೆಹೋವ ದೇವರನ್ನ ನಾವು ಫ್ರೆಂಡ್‌ ಮಾಡಿಕೊಳ್ಳಬೇಕಾದ್ರೆ ಅವರ ಬಗ್ಗೆನೂ ಚೆನ್ನಾಗಿ ತಿಳಿದುಕೊಳ್ಳಬೇಕು. ಅದಕ್ಕೂ ಸಮಯ ಬೇಕಾಗುತ್ತೆ. ಆದ್ರೆ ನಾವು ಈಗ ತುಂಬಾ ಬಿಜಿ಼ ಆಗಿಬಿಟ್ಟಿದ್ದೀವಿ ಅಂತ ಅನಿಸಬಹುದು. ಹಾಗಿದ್ರೂ ಯೆಹೋವ ದೇವರಿಗೆ ಹತ್ತಿರ ಆಗೋಕೆ ನಾವು ಹೇಗೆ ಸಮಯ ಮಾಡಿಕೊಳ್ಳಬಹುದು, ಇದರಿಂದ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಈ ಲೇಖನದಲ್ಲಿ ನೋಡೋಣ.