ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 2

ಯೇಸುವಿನ ತಮ್ಮ ಯಾಕೋಬನಿಂದ ಕಲಿಯಿರಿ

ಯೇಸುವಿನ ತಮ್ಮ ಯಾಕೋಬನಿಂದ ಕಲಿಯಿರಿ

“ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ದಾಸನಾಗಿರೋ ಯಾಕೋಬ.”—ಯಾಕೋ. 1:1.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

ಕಿರುನೋಟ *

1. ಯಾಕೋಬನ ಕುಟುಂಬ ಹೇಗಿತ್ತು?

 ಯೆಹೋವನ ಜೊತೆ ಒಳ್ಳೇ ಸ್ನೇಹ ಇದ್ದ ಕುಟುಂಬದಲ್ಲಿ ಯಾಕೋಬ ಹುಟ್ಟಿ ಬೆಳೆದ. * ಅವನ ಅಪ್ಪ ಯೋಸೇಫ ಮತ್ತು ಅಮ್ಮ ಮರಿಯ ಯೆಹೋವ ದೇವರನ್ನ ತುಂಬ ಪ್ರೀತಿಸುತ್ತಿದ್ದರು ಮತ್ತು ಆತನ ಸೇವೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವನ ಅಣ್ಣ ಯೇಸು ಬರಬೇಕಾಗಿದ್ದ ಮೆಸ್ಸೀಯ ಆಗಿದ್ದ. ಇಂಥ ಕುಟುಂಬದಲ್ಲಿ ಬೆಳೆದಿದ್ದು ಯಾಕೋಬನಿಗೆ ಒಂದು ಆಶೀರ್ವಾದನೇ ಆಗಿತ್ತು!

ಯಾಕೋಬ ಯೇಸುವಿನ ಜೊತೆ ಬೆಳೆದಿದ್ದರಿಂದ ಆತನನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಆಗ್ತಿತ್ತು (ಪ್ಯಾರ 2 ನೋಡಿ)

2. ಯಾಕೋಬನಿಗೆ ತನ್ನ ಅಣ್ಣ ಯೇಸುವಿನಿಂದ ತುಂಬ ವಿಷಯಗಳನ್ನ ಕಲಿಯಬಹುದಿತ್ತು ಅಂತ ಯಾಕೆ ಹೇಳಬಹುದು?

2 ಯಾಕೋಬ ತನ್ನ ಅಣ್ಣ ಯೇಸುವಿನಿಂದ ತುಂಬ ವಿಷಯಗಳನ್ನ ಕಲಿಯಬಹುದಿತ್ತು. (ಮತ್ತಾ. 13:55) ಉದಾಹರಣೆಗೆ, ಯೇಸು 12 ವಯಸ್ಸಿನಲ್ಲೇ ವಚನಗಳನ್ನ ಚೆನ್ನಾಗಿ ತಿಳಿದುಕೊಂಡಿದ್ದನು, ಅವನಿಗೆ ತುಂಬ ಜ್ಞಾನ ಇತ್ತು. ಅವನ ಜ್ಞಾನ ನೋಡಿ ಯೆರೂಸಲೇಮಲ್ಲಿದ್ದ ಗುರುಗಳು ಆಶ್ಚರ್ಯಪಡುತ್ತಿದ್ದರು. (ಲೂಕ 2:46, 47) ಯಾಕೋಬ ತನ್ನ ಅಣ್ಣನ ಜೊತೆ ಮರಗೆಲಸ ಮಾಡಿರಬಹುದು. ಆಗೆಲ್ಲಾ ಅವನು ಯೇಸು ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದಿತ್ತು. ನೇತನ್‌ ಹೆಚ್‌. ನಾರ್‌ ಅವರು ಆಗಾಗ ಹೀಗೆ ಹೇಳುತ್ತಿದ್ದರು, “ಒಬ್ಬ ವ್ಯಕ್ತಿ ಜೊತೆ ಕೆಲಸ ಮಾಡಿದಾಗ ಅವನ ಬಗ್ಗೆ ಜಾಸ್ತಿ ತಿಳಿದುಕೊಳ್ಳಬಹುದು.” * ‘ಯೇಸು ದೊಡ್ಡವನಾಗಿ ಬೆಳಿತಾ ಇನ್ನೂ ವಿವೇಕಿಯಾಗಿದ್ದನ್ನ, ದೇವರ, ಮನುಷ್ಯರ ಮೆಚ್ಚಿಕೆ’ ಪಡೆಯುತ್ತಾ ಇದ್ದಿದ್ದನ್ನ ಯಾಕೋಬ ಕಣ್ಣಾರೆ ನೋಡಿರಬೇಕು. (ಲೂಕ 2:52) ಇದನ್ನೆಲ್ಲ ನೋಡುವಾಗ ಯಾಕೋಬನೇ ಯೇಸುವಿನ ಮೊದಲ ಶಿಷ್ಯನಾಗಿರಬೇಕು ಅಂತ ನಮಗೆ ಅನಿಸಬಹುದು. ಆದ್ರೆ ಅದು ಹಾಗೆ ಆಗಲಿಲ್ಲ.

3. ಯೇಸು ಭೂಮಿಯಲ್ಲಿದ್ದಾಗ ಯಾಕೋಬ ಆತನ ಶಿಷ್ಯನಾದನಾ? ವಿವರಿಸಿ.

3 ಯೇಸು ಭೂಮಿಯಲ್ಲಿದ್ದಾಗ ಯಾಕೋಬ ಆತನ ಶಿಷ್ಯನಾಗಲಿಲ್ಲ. (ಯೋಹಾ. 7:3-5) ಯೇಸುವಿನ ಕುಟುಂಬದವರು ‘ಯೇಸುಗೆ ಹುಚ್ಚುಹಿಡಿದಿದೆ’ ಅಂತ ಹೇಳಿದಾಗ ಯಾಕೋಬನೂ ಅವರ ಜೊತೆ ಇದ್ದಿರಬೇಕು. (ಮಾರ್ಕ 3:21) ಅಷ್ಟೇ ಅಲ್ಲ, ಯೇಸು ಕಂಬದ ಮೇಲಿದ್ದಾಗ ಆತನ ಅಮ್ಮ ಮರಿಯಳ ಜೊತೆ ಯಾಕೋಬನೂ ಇದ್ದ ಅಂತ ಬೈಬಲಲ್ಲಿ ಎಲ್ಲೂ ಇಲ್ಲ.—ಯೋಹಾ. 19:25-27.

4. ಈ ಲೇಖನದಲ್ಲಿ ನಾವೇನು ಕಲಿತೀವಿ?

4 ಸ್ವಲ್ಪ ಸಮಯದಲ್ಲಿ ಯಾಕೋಬ ಯೇಸುವಿನ ಮೇಲೆ ನಂಬಿಕೆ ಇಟ್ಟ ಮತ್ತು ಕ್ರೈಸ್ತ ಸಭೆಯಲ್ಲಿ ಹಿರಿಯನಾದ. ನಾವು ಯಾಕೋಬನ ತರ ಹೇಗೆ ದೀನರಾಗಿರಬೇಕು ಮತ್ತು ಹೇಗೆ ಚೆನ್ನಾಗಿ ಕಲಿಸಬೇಕು ಅಂತ ಈ ಲೇಖನದಲ್ಲಿ ನೋಡೋಣ.

ಯಾಕೋಬನ ತರ ದೀನತೆ ತೋರಿಸಿ

ಯೇಸು ಪುನರುತ್ಥಾನ ಆಗಿ ಕಾಣಿಸಿಕೊಂಡ ಮೇಲೆ ಯಾಕೋಬ ಆತನೇ ಮೆಸ್ಸೀಯ ಅಂತ ದೀನತೆಯಿಂದ ಒಪ್ಪಿಕೊಂಡ, ಆತನ ಶಿಷ್ಯನಾದ (ಪ್ಯಾರ 5-7 ನೋಡಿ)

5. ಯೇಸು ಪುನರುತ್ಥಾನ ಆಗಿ ಯಾಕೋಬನಿಗೆ ಕಾಣಿಸಿಕೊಂಡ ಮೇಲೆ ಯಾಕೋಬ ಏನು ಮಾಡಿದ?

5 ಯಾಕೋಬ ಯಾವಾಗ ಯೇಸುವಿನ ಶಿಷ್ಯನಾದ? ಯೇಸು ಪುನರುತ್ಥಾನ ಆದ ಮೇಲೆ “ಯಾಕೋಬನಿಗೆ, ಎಲ್ಲ ಅಪೊಸ್ತಲರಿಗೆ ಕಾಣಿಸ್ಕೊಂಡನು.” (1 ಕೊರಿಂ. 15:7) ಆಮೇಲೆ ಯಾಕೋಬ ಶಿಷ್ಯನಾದ. ಅಪೊಸ್ತಲರು ಯೆರೂಸಲೇಮಿನ ಮೇಲಂತಸ್ತಿನ ಕೋಣೆಯಲ್ಲಿ ಪವಿತ್ರಶಕ್ತಿಗಾಗಿ ಕಾಯುತ್ತಿದ್ದಾಗ ಯಾಕೋಬನೂ ಅವರ ಜೊತೆ ಇದ್ದ. (ಅ. ಕಾ. 1:13, 14) ಅವನು ಒಂದನೇ ಶತಮಾನದಲ್ಲಿ ಆಡಳಿತ ಮಂಡಳಿಯ ಸದಸ್ಯನಾಗಿ ಸಂತೋಷದಿಂದ ಸೇವೆ ಮಾಡಿದ. (ಅ. ಕಾ. 15:6, 13-22; ಗಲಾ. 2:9) ಕ್ರಿಸ್ತಶಕ 62ಕ್ಕಿಂತ ಮುಂಚೆ ಯಾಕೋಬ ಅಭಿಷಿಕ್ತ ಕ್ರೈಸ್ತರಿಗೆ ಒಂದು ಪತ್ರ ಬರೆದ. ಆ ಪತ್ರದಿಂದ ಅಭಿಷಿಕ್ತರು ಮತ್ತು ನಾವೆಲ್ಲರೂ ತುಂಬ ವಿಷಯಗಳನ್ನ ಕಲಿಬಹುದು. (ಯಾಕೋ. 1:1) ಯಾಕೋಬ ಸಾಯೋ ತನಕ ಯೆಹೋವನಿಗೆ ನಿಯತ್ತಾಗಿದ್ದ. ಒಂದನೇ ಶತಮಾನದ ಇತಿಹಾಸಕಾರ ಜೋಸೀಫಸ್‌ನ ಪ್ರಕಾರ ಯೆಹೂದಿ ಮಹಾ ಪುರೋಹಿತನಾಗಿದ್ದ ಅನನೀಯ, ಯಾಕೋಬನಿಗೆ ಮರಣಶಿಕ್ಷೆ ವಿಧಿಸಿದ. ಈ ಅನನೀಯ, ಅನ್ನನ ಮಗನಾಗಿದ್ದ.

6. ಆಗಿನ ಕಾಲದ ಧರ್ಮಗುರುಗಳಿಗೂ ಯಾಕೋಬನಿಗೂ ಏನು ವ್ಯತ್ಯಾಸ?

6 ಯಾಕೋಬ ದೀನನಾಗಿದ್ದ. ಯೇಸು ನಿಜವಾಗಲೂ ದೇವರ ಮಗ ಅಂತ ಅವನಿಗೆ ಗೊತ್ತಾದಾಗ ಯೇಸುನ ನಂಬಿದ. ಆದ್ರೆ ಆ ಸಮಯದಲ್ಲಿದ್ದ ಧರ್ಮಗುರುಗಳಿಗೆ ಯೇಸುವೇ ದೇವರ ಮಗ ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿದ್ರೂ ಅವರು ನಂಬಲಿಲ್ಲ. ಉದಾಹರಣೆಗೆ, ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದಾಗ ಅವರು ನಂಬಲಿಲ್ಲ. ಬದಲಿಗೆ ಅವರಿಬ್ಬರನ್ನೂ ಕೊಲ್ಲೋಕೆ ನೋಡಿದರು. (ಯೋಹಾ. 11:53; 12:9-11) ಅಷ್ಟೇ ಅಲ್ಲ, ಸ್ವತಃ ಯೇಸುನೇ ಸತ್ತು ಎದ್ದು ಬಂದಿದ್ರೂ ಕುತಂತ್ರ ಮಾಡಿ ಜನರಿಂದ ಆ ವಿಷಯನ ಮುಚ್ಚಿಹಾಕೋಕೆ ನೋಡಿದ್ರು. (ಮತ್ತಾ. 28:11-15) ಧರ್ಮಗುರುಗಳಿಗೆ ದುರಹಂಕಾರ ಇದ್ದಿದ್ರಿಂದಾನೇ ಯೇಸುನ ಮೆಸ್ಸೀಯ ಅಂತ ಒಪ್ಪಿಕೊಳ್ಳಲಿಲ್ಲ.

7. ನಾವು ಯಾಕೆ ಅಹಂಕಾರವನ್ನ ಬಿಟ್ಟುಬಿಡಬೇಕು?

7 ಪಾಠ: ಅಹಂಕಾರ ಬಿಟ್ಟು ಯೆಹೋವನಿಂದ ಕಲಿಯೋಣ. ಯಾರಿಗಾದ್ರೂ ಹೃದಯದ ಕಾಯಿಲೆ ಇದ್ರೆ ಅವರ ಹೃದಯ ಬಡಿತ ನಿಂತುಹೋಗುತ್ತೆ ಮತ್ತು ಅದು ಕೆಲಸ ಮಾಡೋದನ್ನ ನಿಲ್ಲಿಸಿಬಿಡುತ್ತೆ. ಅದೇ ತರ, ನಮಗೆ ಅಹಂಕಾರ ಬಂದುಬಿಟ್ರೆ ನಮ್ಮ ಮನಸ್ಸು ಕಲ್ಲಾಗಿಬಿಡುತ್ತೆ. ಯೆಹೋವ ದೇವರ ಮಾತು ಕೇಳೋದನ್ನ ನಿಲ್ಲಿಸಿಬಿಡ್ತೀವಿ. ಫರಿಸಾಯರಿಗೆ ಹೀಗೇ ಆಗಿತ್ತು. ಅವರ ಮನಸ್ಸು ಎಷ್ಟು ಮರಗಟ್ಟಿ ಹೋಗಿತ್ತು ಅಂದ್ರೆ ಯೇಸು ದೇವರ ಮಗ ಮತ್ತು ಆತನಲ್ಲಿ ಪವಿತ್ರಶಕ್ತಿ ಇತ್ತು ಅನ್ನೋದಕ್ಕೆ ಅವರ ಕಣ್ಮುಂದೆ ಸಾಕ್ಷಿ ಇದ್ರೂ ಅವರು ಒಪ್ಪಿಕೊಳ್ಳಲಿಲ್ಲ. (ಯೋಹಾ. 12:37-40) ಅವರಲ್ಲಿದ್ದ ಅಹಂಕಾರದಿಂದ ಶಾಶ್ವತ ಜೀವವನ್ನೇ ಕಳೆದುಕೊಂಡರು. (ಮತ್ತಾ. 23:13, 33) ಬೈಬಲ್‌ ಮತ್ತು ಪವಿತ್ರಶಕ್ತಿ ನಮ್ಮ ಯೋಚನೆಗಳನ್ನ ಸರಿಮಾಡೋಕೆ ಬಿಟ್ಟುಕೊಡೋದು ಎಷ್ಟು ಪ್ರಾಮುಖ್ಯ ಅಂತ ಇದರಿಂದ ಗೊತ್ತಾಗುತ್ತೆ. (ಯಾಕೋ. 3:17) ಯಾಕೋಬನಿಗೆ ದೀನತೆ ಇದ್ದಿದ್ರಿಂದಾನೇ ಯೆಹೋವನಿಂದ ಕಲಿತ, ಬೇರೆಯವರಿಗೂ ಚೆನ್ನಾಗಿ ಕಲಿಸಿದ.

ಯಾಕೋಬನ ತರ ಚೆನ್ನಾಗಿ ಕಲಿಸಿ

8. ಬೇರೆಯವರಿಗೆ ಚೆನ್ನಾಗಿ ಕಲಿಸೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

8 ಯಾಕೋಬ ಜಾಸ್ತಿ ಓದಿರಲಿಲ್ಲ. ಅದಕ್ಕೆ ಧರ್ಮಗುರುಗಳು ಅವನನ್ನ ಮತ್ತು ಅಪೊಸ್ತಲ ಪೇತ್ರ, ಯೋಹಾನರನ್ನ “ಅಷ್ಟೇನೂ ಓದಿಲ್ಲದ ಸಾಮಾನ್ಯ” ಜನರ ತರ ನೋಡುತ್ತಿದ್ದರು. (ಅ. ಕಾ. 4:13) ಆದ್ರೆ ಬೈಬಲಲ್ಲಿ ನಾವು ಯಾಕೋಬ ಪುಸ್ತಕ ಓದಿದ್ರೆ ಯಾಕೋಬ ಬೇರೆಯವರಿಗೆ ತುಂಬ ಚೆನ್ನಾಗಿ ಕಲಿಸುತ್ತಿದ್ದ, ಅವನೊಬ್ಬ ಒಳ್ಳೇ ಟೀಚರ್‌ ಅಂತ ಗೊತ್ತಾಗುತ್ತೆ. ಯಾಕೋಬನ ತರ ನಾವೂ ಅಷ್ಟೇನು ಓದಿಲ್ಲದೇ ಇರಬಹುದು. ಆದ್ರೆ ಯೆಹೋವ ಕೊಡೋ ಪವಿತ್ರಶಕ್ತಿ ಸಹಾಯದಿಂದ ಮತ್ತು ಸಂಘಟನೆ ಕೊಡೋ ತರಬೇತಿಯಿಂದ ಬೇರೆಯವರಿಗೆ ಚೆನ್ನಾಗಿ ಕಲಿಸೋಕೆ ನಮ್ಮಿಂದ ಆಗುತ್ತೆ. ಯಾಕೋಬ ಹೇಗೆ ಕಲಿಸ್ತಿದ್ದ ಅಂತ ಈಗ ನೋಡೋಣ.

9. ಯಾಕೋಬ ಹೇಗೆ ಕಲಿಸುತ್ತಿದ್ದ?

9 ಯಾಕೋಬ ಕಷ್ಟವಾದ ಪದಗಳನ್ನ ಬಳಸಲಿಲ್ಲ ಮತ್ತು ಸುತ್ತಿ ಬಳಸಿ ಮಾತಾಡುತ್ತಿರಲಿಲ್ಲ. ಹಾಗಾಗಿ ಅವನು ಹೇಳೋದನ್ನ ಕೇಳಿದಾಗ ಜನರಿಗೆ ಏನು ಮಾಡಬೇಕು, ಹೇಗೆ ಮಾಡಬೇಕು ಅಂತ ಸುಲಭವಾಗಿ ಗೊತ್ತಾಗುತ್ತಿತ್ತು. ಉದಾಹರಣೆಗೆ, ಅನ್ಯಾಯ ಆದಾಗ ಕ್ರೈಸ್ತರು ಸೇಡು ತೀರಿಸಿಕೊಳ್ಳದೇ ಅದನ್ನ ಸಹಿಸಿಕೊಳ್ಳಬೇಕು ಅಂತ ಯಾಕೋಬ ಅವರಿಗೆ ಸುಲಭವಾಗಿ ಅರ್ಥಮಾಡಿಸಿದ. “ತಾಳ್ಕೊಂಡವರು ಖುಷಿಯಾಗಿ ಇರ್ತಾರೆ ಅಂತ ನಾವು ಹೇಳ್ತೀವಿ. ಯೋಬ ತೋರಿಸಿದ ತಾಳ್ಮೆ ಬಗ್ಗೆ ನೀವು ಕೇಳಿಸ್ಕೊಂಡಿದ್ದೀರ. ಯೆಹೋವ ಅವನಿಗೆ ಎಷ್ಟೆಲ್ಲ ಆಶೀರ್ವಾದ ಮಾಡಿದನು ಅಂತ ನಿಮಗೆ ಗೊತ್ತು. ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ ಅಂತ ನಿಮಗೆ ಗೊತ್ತು” ಅಂತ ಬರೆದ. (ಯಾಕೋ. 5:11) ಯಾಕೋಬ ಯಾವಾಗಲೂ ವಚನಗಳನ್ನ ಉಪಯೋಗಿಸಿ ಕಲಿಸುತ್ತಿದ್ದ. ಯೆಹೋವನಿಗೆ ನಿಯತ್ತಾಗಿ ಇರುವವರನ್ನ ಆತನು ಖಂಡಿತ ಆಶೀರ್ವದಿಸುತ್ತಾನೆ ಅಂತ ಅರ್ಥ ಮಾಡಿಸೋಕೆ ಬೈಬಲಿಂದ ಯೋಬನ ಉದಾಹರಣೆ ಕೊಟ್ಟ. ಅವನು ಜನರಿಗೆ ಹೇಳಿಕೊಡುವಾಗ ಕಷ್ಟವಾದ ಪದಗಳನ್ನ ಬಳಸುತ್ತಿರಲಿಲ್ಲ, ಸುಲಭವಾಗಿ ಅರ್ಥ ಮಾಡಿಸುತ್ತಿದ್ದ. ಹೀಗೆ ಅವನು ಜನರ ಗಮನವನ್ನ ತನ್ನ ಕಡೆ ಅಲ್ಲ, ಯೆಹೋವನ ಕಡೆ ಹೋಗುವ ಹಾಗೆ ಮಾಡುತ್ತಿದ್ದ.

10. ಯಾಕೋಬನ ತರ ನಾವು ಹೇಗೆ ಕಲಿಸಬಹುದು?

10 ಪಾಠ: ಕಷ್ಟವಾದ ಪದಗಳನ್ನ ಬಳಸಬೇಡಿ, ದೇವರ ವಾಕ್ಯದಿಂದ ಕಲಿಸಿ. ನಾವು ಬೇರೆಯವರಿಗೆ ಕಲಿಸುವಾಗ ನಮಗೆ ಎಷ್ಟು ಗೊತ್ತಿದೆ ಅಂತ ತೋರಿಸೋದಲ್ಲ, ಯೆಹೋವ ದೇವರಿಗೆ ಎಷ್ಟು ವಿವೇಕ ಇದೆ, ಆತನು ಅವರನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥ ಮಾಡಿಸಬೇಕು. (ರೋಮ. 11:33) ಅದಕ್ಕೆ ನಾವು ಅವರಿಗೆ ಹೇಳಿಕೊಡುವಾಗ ಬೈಬಲನ್ನ ಉಪಯೋಗಿಸಬೇಕು. ಉದಾಹರಣೆಗೆ, ನಮ್ಮ ಬೈಬಲ್‌ ವಿದ್ಯಾರ್ಥಿ ಏನಾದ್ರೂ ತೀರ್ಮಾನ ಮಾಡಬೇಕಿದ್ರೆ, ಅವರ ಜಾಗದಲ್ಲಿ ನಾವು ಇದ್ದಿದ್ರೆ ಏನು ಮಾಡುತ್ತಿದ್ವಿ ಅಂತ ಹೇಳೋದಲ್ಲ, ಬೈಬಲಿಂದ ಅವರಿಗೆ ಸಹಾಯ ಮಾಡಬೇಕು. ಬೈಬಲಲ್ಲಿ ಯಾವುದಾದರೂ ಉದಾಹರಣೆ ತೋರಿಸಿ ಅರ್ಥ ಮಾಡಿಸಬಹುದು ಅಥವಾ ಇದರ ಬಗ್ಗೆ ಯೆಹೋವ ಏನು ಹೇಳ್ತಾನೆ ಅಂತ ಹೇಳಿಕೊಡಬಹುದು. ಹೀಗೆ ಅವರು ತಗೊಳ್ಳುವ ನಿರ್ಧಾರ ನಮ್ಮನ್ನಲ್ಲ, ಯೆಹೋವನನ್ನು ಮೆಚ್ಚಿಸೋ ತರ, ಆತನನ್ನ ಖುಷಿಪಡಿಸೋ ತರ ಇರಬೇಕು.

11. (ಎ) ಯಾಕೋಬನ ಸಮಯದಲ್ಲಿದ್ದ ಕ್ರೈಸ್ತರಿಗೆ ಯಾವ ಸಮಸ್ಯೆಗಳಿತ್ತು? (ಬಿ) ಅದಕ್ಕೆ ಅವನು ಯಾವ ಸಲಹೆ ಕೊಟ್ಟ? (ಯಾಕೋಬ 5:13-15)

11 ಯಾಕೋಬ ಜನರನ್ನ ಚೆನ್ನಾಗಿ ಅರ್ಥಮಾಡಿಕೊಂಡಿದ್ದ. ಅವನಿಗೆ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಉದಾಹರಣೆಗೆ, ಕೆಲವು ಸಹೋದರ ಸಹೋದರಿಯರು ಬೈಬಲಿನಲ್ಲಿದ್ದ ಬುದ್ಧಿವಾದಗಳನ್ನು ಪಾಲಿಸುತ್ತಿರಲಿಲ್ಲ. (ಯಾಕೋ. 1:22) ಕೆಲವರು ಶ್ರೀಮಂತರು, ಬಡವರು ಅಂತ ಬೇಧಭಾವ ಮಾಡುತ್ತಿದ್ದರು. (ಯಾಕೋ. 2:1-3) ಇನ್ನೂ ಕೆಲವರು ಹಿಂದೆಮುಂದೆ ಯೋಚನೆ ಮಾಡದೇ ಮಾತಾಡುತ್ತಿದ್ದರು. (ಯಾಕೋ. 3:8-10) ಅವರಲ್ಲಿ ಈ ತರ ತುಂಬ ಸಮಸ್ಯೆಗಳು ಇತ್ತು. ಆದ್ರೆ ಅವರು ಬದಲಾಗಲ್ಲ ಅಂತ ಯಾಕೋಬ ನೆನಸಲಿಲ್ಲ. ಅವರು ಸರಿಮಾಡಿಕೊಳ್ಳೋಕೆ ಏನು ಮಾಡಬೇಕು ಅಂತ ಪ್ರೀತಿಯಿಂದ ಮತ್ತು ನೇರವಾಗಿ ಅವರಿಗೆ ತಿಳಿಸಿದ. ಬದಲಾವಣೆ ಮಾಡಿಕೊಳ್ಳೋಕೆ ಕಷ್ಟ ಆದ್ರೆ ಹಿರಿಯರ ಹತ್ರ ಸಹಾಯ ಪಡೆದುಕೊಳ್ಳಿ ಅಂತಾನೂ ಹೇಳಿದ.—ಯಾಕೋಬ 5:13-15 ಓದಿ.

12. ನಾವು ಬೈಬಲ್‌ ವಿದ್ಯಾರ್ಥಿಗಳ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳುವಾಗ ಏನು ಮಾಡ್ತೀವಿ?

12 ಪಾಠ: ನಿಮ್ಮ ಬೈಬಲ್‌ ವಿದ್ಯಾರ್ಥಿಯನ್ನ ಚೆನ್ನಾಗಿ ಅರ್ಥಮಾಡಿಕೊಳ್ಳಿ, ಅವರು ಯಾವತ್ತೂ ಬದಲಾಗಲ್ಲ ಅಂತ ನೆನಸಬೇಡಿ. ವಿದ್ಯಾರ್ಥಿಗಳಿಗೆ ಬೈಬಲಿನ ಬುದ್ಧಿವಾದಗಳನ್ನು ಪಾಲಿಸೋಕೆ ಕಷ್ಟ ಆಗಬಹುದು. (ಯಾಕೋ. 4:1-4) ಅವರಲ್ಲಿರೋ ಕೆಟ್ಟ ಗುಣಗಳನ್ನ ಬಿಟ್ಟು, ಒಳ್ಳೇ ಅಭ್ಯಾಸಗಳನ್ನ ಬೆಳೆಸಿಕೊಳ್ಳೋಕೆ ತುಂಬ ಸಮಯ ಹಿಡಿಯಬಹುದು. ಆಗ ಅವರು ಏನು ಬದಲಾವಣೆ ಮಾಡಿಕೊಳ್ಳಬೇಕು ಅಂತ ನಾವು ಯಾಕೋಬನ ತರ ಧೈರ್ಯವಾಗಿ ಹೇಳಬೇಕು ಮತ್ತು ಅವರು ಯಾವತ್ತೂ ಬದಲಾಗಲ್ಲ ಅಂತ ಅಂದುಕೊಳ್ಳಬಾರದು. ಯೆಹೋವ ದೇವರು ದೀನ ವ್ಯಕ್ತಿಗಳಿಗೆ ಬದಲಾಗೋಕೆ ಸಹಾಯ ಮಾಡುತ್ತಾನೆ ಅನ್ನೋದನ್ನ ಮನಸ್ಸಲ್ಲಿ ಇಡಬೇಕು.—ಯಾಕೋ. 4:10.

13. ಯಾಕೋಬ ಏನು ಹೇಳಿದ ಮತ್ತು ಅದರಿಂದ ಏನು ಗೊತ್ತಾಗುತ್ತೆ? (ಯಾಕೋಬ 3:2)

13 ತಾನೇ ಮೇಲು ಅಂತ ಯಾಕೋಬ ಅಂದುಕೊಳ್ಳಲಿಲ್ಲ. ಯಾಕೋಬ ಯಾವತ್ತೂ ತಾನು ಯೇಸುವಿನ ತಮ್ಮ, ತನಗೆ ದೊಡ್ಡದೊಡ್ಡ ನೇಮಕಗಳಿವೆ, ಹಾಗಾಗಿ ಬೇರೆಯವರಿಗಿಂತ ತಾನೇ ಮೇಲು ಅಂತ ಅಂದುಕೊಳ್ಳಲಿಲ್ಲ. ಅವನು ಎಲ್ಲರನ್ನೂ “ನನ್ನ ಪ್ರೀತಿಯ ಸಹೋದರರೇ” ಅಂತ ಕರೆದ. (ಯಾಕೋ. 1:16, 19; 2:5) ಅಷ್ಟೇ ಅಲ್ಲ, ನಾನು ಪರಿಪೂರ್ಣ ಯಾವ ತಪ್ಪೂ ಮಾಡಲ್ಲ ಅನ್ನೋ ತರ ನಡಕೊಳ್ಳಲಿಲ್ಲ. “ನಾವೆಲ್ಲ ತುಂಬ ಸಲ ತಪ್ಪು ಮಾಡ್ತೀವಿ” ಅಂತ ತನ್ನನ್ನೂ ಸೇರಿಸಿ ಹೇಳಿಕೊಂಡ.—ಯಾಕೋಬ 3:2 ಓದಿ.

14. ನಮ್ಮಿಂದಾನೂ ತಪ್ಪಾಗುತ್ತೆ ಅಂತ ನಾವ್ಯಾಕೆ ಹೇಳಬೇಕು?

14 ಪಾಠ: ನಾವೆಲ್ಲರೂ ತಪ್ಪುಮಾಡ್ತೀವಿ ಅನ್ನೋದನ್ನ ಮರೆಯಬೇಡಿ. ಒಂದುವೇಳೆ ನಾವು ನಮ್ಮ ವಿದ್ಯಾರ್ಥಿಯ ಹತ್ತಿರ ನಾವೇನೂ ತಪ್ಪೇ ಮಾಡಲ್ಲ ಅನ್ನೋ ತರ ನಡೆದುಕೊಂಡ್ರೆ ಯೆಹೋವನ ಸೇವೆ ಮಾಡೋಕೆ ಹಿಂದೆಮುಂದೆ ಯೋಚನೆ ಮಾಡುತ್ತಾರೆ. ಅವರು ಮನಸ್ಸಲ್ಲಿ ‘ಅಬ್ಬಾ! ಇವರ ತರ ಬೈಬಲ್‌ ನಿಯಮನ ಚಾಚೂತಪ್ಪದೇ ಪಾಲಿಸೋಕೆ ನನ್ನಿಂದ ಆಗಲ್ಲಪ್ಪಾ!’ ಅಂತ ಯೋಚಿಸ್ತಾರೆ. ಹಾಗಾಗಿ ನಾವು ಅವರಿಗೆ ‘ನಾವೂ ಕೆಲವೊಂದು ಸಲ ತಪ್ಪು ಮಾಡಿಬಿಡ್ತೀವಿ, ಯೆಹೋವನ ಆಜ್ಞೆಗಳನ್ನ ಪಾಲಿಸೋಕೆ ನಮಗೂ ಕೆಲವೊಮ್ಮೆ ಕಷ್ಟ ಆಗುತ್ತೆ. ಆದ್ರೆ ಯೆಹೋವ ನಮಗೆ ಸಹಾಯ ಮಾಡ್ತಾನೆ’ ಅಂತ ಹೇಳಬೇಕು. ಆಗ ಅವರಿಗೆ ಧೈರ್ಯ ಬರುತ್ತೆ. ನನ್ನಿಂದಾನೂ ಯೆಹೋವನ ಸೇವೆ ಮಾಡೋಕೆ ಆಗುತ್ತೆ ಅಂತ ಅವರಿಗೆ ಅನಿಸುತ್ತೆ.

ಯಾಕೋಬ ಬಳಸಿದ ಉದಾಹರಣೆಗಳು ಸರಳವಾಗಿತ್ತು, ಮನಮುಟ್ಟುತ್ತಿತ್ತು ಮತ್ತು ಸುಲಭವಾಗಿ ಅರ್ಥ ಆಗುತ್ತಿತ್ತು (ಪ್ಯಾರ 15-16 ನೋಡಿ) *

15. ಯಾಕೋಬನ ಉದಾಹರಣೆಗಳು ಹೇಗಿದ್ದವು? (ಯಾಕೋಬ 3:2-6, 10-12)

15 ಯಾಕೋಬ ಮನಮುಟ್ಟುವ ಉದಾಹರಣೆಗಳನ್ನ ಕೊಡ್ತಿದ್ದ. ಇದಕ್ಕೆ ಪವಿತ್ರಶಕ್ತಿ ಅವನಿಗೆ ಸಹಾಯ ಮಾಡ್ತು. ಅಷ್ಟೇ ಅಲ್ಲ, ಅವನ ಅಣ್ಣ ಯೇಸು ಹೇಗೆ ಉದಾಹರಣೆಗಳನ್ನ ಕೊಡುತ್ತಿದ್ದ ಅಂತ ನೋಡಿ ಕಲಿತಿರಬಹುದು. ಅವನ ಪತ್ರದಲ್ಲಿ ಕೊಡುತ್ತಿದ್ದ ಉದಾಹರಣೆಗಳು ಜನರಿಗೆ ತುಂಬ ಚೆನ್ನಾಗಿ ಅರ್ಥ ಆಗುತ್ತಿದ್ದವು. ಓದುವವರಿಗೆ ಏನು ಮಾಡಬೇಕು ಅಂತಾನೂ ಗೊತ್ತಾಗುತ್ತಿತ್ತು.—ಯಾಕೋಬ 3:2-6, 10-12 ಓದಿ.

16. ನಾವ್ಯಾಕೆ ಮನಮುಟ್ಟುವ ಉದಾಹರಣೆಗಳನ್ನ ಕೊಡಬೇಕು?

16 ಪಾಠ: ಮನಮುಟ್ಟುವ ಉದಾಹರಣೆ ಕೊಡಿ. ನೀವು ಬೈಬಲ್‌ ವಿದ್ಯಾರ್ಥಿಗಳಿಗೆ ಮನಮುಟ್ಟುವ ಉದಾಹರಣೆಗಳನ್ನ ಕೊಟ್ಟಾಗ ಅವರು ನೀವು ಹೇಳೋ ವಿಷಯಗಳನ್ನ ಕೇಳಿಸಿಕೊಳ್ಳೋದು ಮಾತ್ರ ಅಲ್ಲ, ಅದನ್ನ ಮನಸ್ಸಲ್ಲಿ ಕಲ್ಪನೆ ಮಾಡಿಕೊಳ್ತಾರೆ. ಈ ತರ ಕಲ್ಪನೆ ಮಾಡಿಕೊಂಡಾಗ ಬೈಬಲಲ್ಲಿ ಕಲಿಯೋ ವಿಷಯಗಳು ಅವರಿಗೆ ಚೆನ್ನಾಗಿ ನೆನಪಲ್ಲಿ ಉಳಿಯುತ್ತೆ. ಮನಮುಟ್ಟುವ ಉದಾಹರಣೆ ಕೊಡೋದ್ರಲ್ಲಿ ಯೇಸು ಎತ್ತಿದ ಕೈ. ಯಾಕೋಬನೂ ಆತನ ತರಾನೇ ಉದಾಹರಣೆಗಳನ್ನ ಕೊಡುತ್ತಿದ್ದ. ಅದರಲ್ಲಿ ಕೆಲವನ್ನು ಈಗ ನೋಡೋಣ.

17. ಯಾಕೋಬ 1:22-25ರಲ್ಲಿ ಕೊಟ್ಟಿರೋ ಉದಾಹರಣೆ ಯಾಕೆ ಎಲ್ಲರ ಮನಮುಟ್ಟುತ್ತೆ?

17 ನಾವು ಬೈಬಲನ್ನ ಓದಿದ್ರೆ ಮಾತ್ರ ಸಾಕಾಗಲ್ಲ, ಅದರಲ್ಲಿ ಇರೋ ತರ ನಡಕೊಳ್ಳಬೇಕು ಅನ್ನೋದನ್ನ ಅರ್ಥಮಾಡಿಕೊಳ್ಳೋಕೆ ಯಾಕೋಬ ಕನ್ನಡಿಯ ಉದಾಹರಣೆ ಕೊಟ್ಟ. (ಯಾಕೋಬ 1:22-25 ಓದಿ.) ಕನ್ನಡಿ ಬಗ್ಗೆ ಎಲ್ಲರಿಗೂ ತುಂಬ ಚೆನ್ನಾಗಿ ಗೊತ್ತಿತ್ತು. ಒಬ್ಬ ವ್ಯಕ್ತಿ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಅವನ ಮುಖದಲ್ಲಿ ಏನಾದ್ರು ಸರಿಮಾಡಿಕೊಳ್ಳಬೇಕು ಅಂತ ಗೊತ್ತಿದ್ರೂ ಸರಿಮಾಡಿಕೊಳ್ಳದೇ ಹೋದ್ರೆ ಅವನು ಕನ್ನಡಿ ನೋಡಿದ್ದೇ ವ್ಯರ್ಥ. ಅದೇ ತರ ಒಬ್ಬ ವ್ಯಕ್ತಿ ಬೈಬಲ್‌ ಓದಿದಾಗ ಅವನಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಅಂತ ಗೊತ್ತಾದರೂ ಬದಲಾವಣೆ ಮಾಡಿಕೊಳ್ಳಲಿಲ್ಲ ಅಂದ್ರೆ ಅವನು ಬೈಬಲ್‌ ಓದೋದು ಕೂಡ ವ್ಯರ್ಥ ಅಂತ ಯಾಕೋಬ ಹೇಳಿದ.

18. ಉದಾಹರಣೆಗಳನ್ನ ಬಳಸುವಾಗ ನಾವು ಯಾವ ಮೂರು ವಿಷಯಗಳನ್ನ ಮನಸ್ಸಲ್ಲಿಡಬೇಕು?

18 ನಾವು ಉದಾಹರಣೆಗಳನ್ನ ಕೊಡುವಾಗ ಯಾಕೋಬನ ತರ ಮೂರು ವಿಷಯಗಳನ್ನ ಮನಸ್ಸಲ್ಲಿಡಬೇಕು. (1) ನಾವು ಹೇಳೋ ವಿಷಯಕ್ಕೂ ಆ ಉದಾಹರಣೆಗೂ ಸಂಬಂಧ ಇರಬೇಕು. (2) ಅದು ಜನರಿಗೆ ಸುಲಭವಾಗಿ ಅರ್ಥ ಆಗೋ ತರ ಇರಬೇಕು. (3) ಅದನ್ನ ಕೇಳಿದಾಗ ಏನು ಮಾಡಬೇಕು ಅಂತ ಅವರಿಗೆ ಗೊತ್ತಾಗಬೇಕು. ನಿಮಗೆ ಸರಿಯಾದ ಉದಾಹರಣೆಗಳು ಸಿಗುತ್ತಿಲ್ಲ ಅಂದ್ರೆ ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ (ಇಂಗ್ಲಿಷ್‌) ಅನ್ನೋ ಪುಸ್ತಕದಲ್ಲಿ “ಉದಾಹರಣೆಗಳು” (Illustrations) ಅನ್ನೋ ಭಾಗ ನೋಡಿ. ಒಬ್ಬ ವ್ಯಕ್ತಿ ದೂರದಲ್ಲಿ ಮಾತಾಡುತ್ತಾ ಇದ್ರೆ ನಮಗೆ ಕೇಳಿಸಲ್ಲ. ಅದೇ ಅವನು ಮೈಕ್‌ ಹಿಡ್ಕೊಂಡು ಮಾತಾಡುವಾಗ ಅವನು ಹೇಳೋದು ಸ್ಪಷ್ಟವಾಗಿ ಕೇಳಿಸುತ್ತೆ ಮತ್ತು ಅರ್ಥ ಆಗುತ್ತೆ. ಅದೇ ತರ ನಾವು ಏನು ಹೇಳ್ತಿದ್ದೀವೋ ಆ ವಿಷಯನ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳೋಕೆ ಉದಾಹರಣೆಗಳು ಜನರಿಗೆ ಸಹಾಯಮಾಡುತ್ತೆ. ಹಾಗಂತ ನಾವು ಎಲ್ಲದ್ದಕ್ಕೂ ಉದಾಹರಣೆಗಳನ್ನ ಹೇಳಬಾರದು. ಯಾವುದು ಮುಖ್ಯನೋ ಅದನ್ನ ಅರ್ಥಮಾಡಿಸೋಕೆ ಮಾತ್ರ ಬಳಸಬೇಕು. ಈ ತರ ಉದಾಹರಣೆಗಳಿಂದ ಕಲಿಸೋ ಕೌಶಲವನ್ನ ಬೆಳೆಸಿಕೊಳ್ಳುವಾಗ ನಮ್ಮ ಗುರಿ, ಜನರ ಗಮನವನ್ನ ನಮ್ಮ ಕಡೆ ಸೆಳೆಯೋದಲ್ಲ, ಯೆಹೋವನ ಕುಟುಂಬಕ್ಕೆ ಅವರು ಬರೋಕೆ ಸಹಾಯ ಮಾಡೋದೇ ಆಗಿರಬೇಕು.

19. ನಮಗೆ ಸಹೋದರ ಸಹೋದರಿಯರ ಮೇಲೆ ಪ್ರೀತಿಯಿದ್ರೆ ಏನು ಮಾಡ್ತೀವಿ?

19 ಯಾಕೋಬನಿಗೆ ಅವನ ಅಣ್ಣ ಯೇಸುವಿನಿಂದ ಕಲಿಯೋಕೆ ಅವಕಾಶ ಸಿಕ್ತು. ನಮಗೆ ಆ ಅವಕಾಶ ಸಿಕ್ಕಿಲ್ಲ. ಆದರೆ ಯೆಹೋವ ನಮಗೆ ತನ್ನ ಕುಟುಂಬದವರಾಗೋ ಅವಕಾಶನ ಕೊಟ್ಟಿದ್ದಾನೆ. ಹಾಗಾಗಿ ಆ ಕುಟುಂಬದಲ್ಲಿರೋ ಎಲ್ಲರನ್ನ ನಾವು ಪ್ರೀತಿಸಬೇಕು. ಅದಕ್ಕಾಗಿ ನಾವು ಅವರ ಜೊತೆ ಸಮಯ ಕಳೆಯಬೇಕು. ಅವರಿಂದ ವಿಷಯಗಳನ್ನ ಕಲಿಬೇಕು. ಹೆಗಲಿಗೆ ಹೆಗಲು ಕೊಟ್ಟು ಸಿಹಿಸುದ್ದಿ ಸಾರಬೇಕು ಮತ್ತು ಜನರಿಗೆ ಕಲಿಸಬೇಕು. ನಾವು ಪ್ರತಿಯೊಂದು ವಿಷಯದಲ್ಲಿ ಅಂದರೆ ನಮ್ಮ ಯೋಚನೆಯಲ್ಲಿ, ನಡತೆಯಲ್ಲಿ, ಎಲ್ಲರಿಗೆ ಕಲಿಸೋದ್ರಲ್ಲಿ ಯಾಕೋಬನ ತರ ಇರೋಕೆ ಪ್ರಯತ್ನಿಸೋಣ. ಇದ್ರಿಂದ ಯೆಹೋವ ದೇವರಿಗೆ ಹೊಗಳಿಕೆ ಸಿಗುತ್ತೆ ಮತ್ತು ಒಳ್ಳೇ ಮನಸ್ಸಿನ ಜನರು ಯೆಹೋವನ ಕುಟುಂಬಕ್ಕೆ ಬರೋಕಾಗುತ್ತೆ.

ಗೀತೆ 78 ದೀರ್ಘ ಸಹನೆ

^ ಯಾಕೋಬ ಯೇಸುವಿನ ತಮ್ಮನಾಗಿದ್ದ. ಹಾಗಾಗಿ ಯೇಸು ಬಗ್ಗೆ ಎಲ್ಲರಿಗಿಂತ ಯಾಕೋಬನಿಗೆ ಚೆನ್ನಾಗಿ ಗೊತ್ತಿತ್ತು. ಒಂದನೇ ಶತಮಾನದಲ್ಲಿ ಕ್ರೈಸ್ತ ಸಭೆಯಲ್ಲಿ ಮುಂದಾಳತ್ವ ವಹಿಸುತ್ತಿದ್ದ. ಈ ಲೇಖನದಲ್ಲಿ ಯಾಕೋಬನ ಜೀವನ ಮತ್ತು ಅವನು ಕಲಿಸಿದ ವಿಷಯಗಳಿಂದ ನಾವೇನು ಕಲಿಬಹುದು ಅಂತ ನೋಡೋಣ.

^ ಯಾಕೋಬ ಯೇಸುವಿನ ತಮ್ಮನಾಗಿದ್ದ. ಆದ್ರೆ ಅವರಿಬ್ಬರ ಅಪ್ಪಂದಿರು ಬೇರೆ. ಯಾಕೋಬನ ಅಪ್ಪ ಯೋಸೇಫ, ಯೇಸುವಿನ ಅಪ್ಪ ಯೆಹೋವ. ಬೈಬಲಲ್ಲಿರೋ ಯಾಕೋಬ ಪುಸ್ತಕನ ಈ ಯಾಕೋಬನೇ ಬರೆದಿರಬೇಕು.

^ ನೇತನ್‌ ಹೆಚ್‌. ನಾರ್‌ ಅವರು ಅಭಿಷಿಕ್ತರಾಗಿದ್ದರು ಮತ್ತು ಆಡಳಿತ ಮಂಡಳಿಯ ಸದಸ್ಯರಾಗಿದ್ದರು. 1977ರಲ್ಲಿ ಅವರು ತೀರಿಕೊಂಡರು.

^ ಚಿತ್ರ ವಿವರಣೆ: ಹಿಂದೆಮುಂದೆ ಯೋಚಿಸದೇ ಮಾತಾಡೋದ್ರಿಂದ ಯಾವೆಲ್ಲಾ ತೊಂದರೆ ಆಗುತ್ತೆ ಅಂತ ಸುಲಭವಾಗಿ ಅರ್ಥಮಾಡಿಸೋಕೆ ಯಾಕೋಬ ಬೆಂಕಿಯ ಉದಾಹರಣೆ ಕೊಟ್ಟ.